ಒಮ್ಮೊಮ್ಮೆ ಹೀಗೆ ನಮ್ಮದೇ ಮಕ್ಕಳ ವಿಚಾರಗಳಿಗೆ ನಗಬೇಕೋ ಅಳಬೇಕೋ ಅರಿವಾಗದೆ ತೆಪ್ಪಗೆ ಕೂತು ಯೋಚಿಸಬೇಕಾದ ಸಂದರ್ಭಗಳಿವೆ. ನನ್ನ ಅನುಭವಗಳ ಸ್ಯಾಂಪಲ್ ಒಂದೆರಡು ನಿಮ್ಮ ಮುಂದೆ.
*ಇಂಗ್ಲೀಷ್ ತಿಂಗಳುಗಳ ಹೆಸರುಗಳನ್ನೆಲ್ಲ ಸಲೀಸಾಗಿ ಹೇಳಿ ಮುಗಿಸಿ ತಣ್ಣಗೆ ಕೂತ ಮಗನಿಗೆ ಅಡುಗೆ ಮಾಡುತ್ತ 'ಮಗನೇ..ಚೈತ್ರ ವೈಶಾಖ ಹೇಳು ಶಣಾ...' ಅಂದೆ.
ಅವನು ಕೂತಲ್ಲಿಂದ ಎದ್ದು ಬಂದು ನನ್ನ ಮುಖವನ್ನೊಮ್ಮೆ ದೀನನಾಗಿ ದಿಟ್ಟಿಸಿದ. ಅಡುಗೆ ಮಾಡುತ್ತಿದ್ದುದರಿಂದಿರಬೇಕು, ನನ್ನ ಮುಖ ಗಂಟಾಗಿತ್ತು ಅನಿಸುತ್ತೆ. ನನ್ನ ಮುಖ ನೋಡುತ್ತ ನಿಧಾನಕ್ಕೆ ಕೇಳಿದ ‘ಎಂತ ಹೇಳವಮ್ಮ?' ಅಂತ. ಮತ್ತೆ ಯಾವುದೋ ಗುಂಗಿನಲ್ಲಿ ‘ಚೈತ್ರ ವೈಶಾಖ ಹೇಳು' ಅಂದೆ. ಅವನು ಬೆದರಿದ ಜಿಂಕೆಮರಿಯಂತೆ ನನ್ನನ್ನೇ ದಿಟ್ಟಿಸುತ್ತ ‘ಚೈತ್ರಾ...ಪ್ರಜ್ವಲ್...ನಂದೀಶ್ ಅಂಕಲ್....'ಅಂದಾಗ ನನ್ನ ಲೋಕದಿಂದ ಮರಳಿ ಅವನತ್ತ ನೋಡಿದೆ. ನಗು ತಡೆಯುವುದು ಅಸಾಧ್ಯವಾಗಿತ್ತು, ಆದರೆ ಅನಿವಾರ್ಯವಾಗಿತ್ತು. ಅವನ ಮುಂದೆ ನಗಲಾರದೇ ಯಾವುದೋ ಕೆಲಸದ ನಿಮಿತ್ತ ಬೇರೆ ಕಡೆ ಹೊರಳಿದವಳಂತೆ ಅವನ ಮುಂದಿಂದ ಬೇರೆಡೆ ಹೋಗಿ ಕುಳಿತು ಮನದಣಿಯೆ ನಕ್ಕೆ. ತಪ್ಪು ನನ್ನದಿತ್ತು. ವರ್ಷಾನುಗಟ್ಟಲೆ ಹಿಂದೂ ಮಾಸಗಳ ಹೆಸರಾದ ಚೈತ್ರ, ವೈಶಾಖ ಹೇಳಿಸಿರಲಿಲ್ಲ. ಅವನು ಸಂಪೂರ್ಣ ಮರೆತಿದ್ದ. ಅಮ್ಮನಿಗೆ ಕೋಪ ಬಂದರೆ ಎನ್ನುವ ಭಯದಿಂದ ಅವನ ಫ್ರೆಂಡ್ ಪ್ರಜ್ವಲ್ ಅಮ್ಮನ ಹೆಸರಾದ ಚೈತ್ರಾದಿಂದ ಶುರುಮಾಡಿ ಅವರ ಕುಟುಂಬದವರೆಲ್ಲರ ಹೆಸರು ಹೇಳಿ ಮುಗಿಸಿದ್ದ. ನಾನೇ ಮಾಡಿದ ತಪ್ಪಿಗೆ ಮರುಗುವ ಸರದಿ ನನ್ನದಾಗಿತ್ತು ನಕ್ಕಾದ ಮೇಲೂ.
*ಭಾರತದ ಪ್ರಮುಖ ನಗರಗಳ ಹೆಸರು ಹೇಳಿಸುತ್ತಿದ್ದರೆ 'ನಾರ್ಥ್ ಅಲ್ಲಿ ಡೆಲ್ಲಿ, ಈಸ್ಟ್ ಅಲ್ಲಿ ಕೊಲ್ಕೋತಾ, ವೆಸ್ಟ್ ಅಲ್ಲಿ ಮುಂಬೈ, ಸೌತ್ ಅಲ್ಲಿ ಚೈನಾ!!!....
ಎಲ್ಲಾ ಸರಿಯಾಗಿ ಹೇಳುತ್ತಾನಾದರೂ ಚೆನ್ನೈ ಸದಾ ನನ್ನೀ ಕುಲಪುತ್ರನ ಬಾಯಲಿ ಚೈನಾ!!!
(ಹುಡುಗಾಟಿಕೆಯೊಂದಿಗೆ ಮಕ್ಕಳ ಜವಾಬ್ಧಾರಿ ನಿಭಾಯಿಸುವುದಿದೆಯಲ್ಲ! ಬಲು ಕಷ್ಟಕರವಾದ ಸುಖ. ನನಗೆ ಇಂತವನ್ನೆಲ್ಲ ಕೇಳ್ಕೊಂಡು ಸುಮ್ನಿರೋಕಾಗಲ್ಲ, ಜೋರಾಗಿ ನಗು ಬರುತ್ತೆ. ನಗುವಿನ ಜೊತೆಯಲ್ಲಿ ಅವನ ತಪ್ಪುಗಳನ್ನ ತಿದ್ದುವುದರಲ್ಲೊಂಥರಾ(?) ಖುಷಿಯಿದೆ. ಅಮ್ಮ ಎಂಬ ಜವಾಬ್ಧಾರಿಯ ಜತೆಗಿನ ಹೆಮ್ಮೆಯ ನೆಮ್ಮದಿಯಿದೆ.)
*ಭಾರತದ ನೆರೆಯ ದೇಶಗಳ ಬಗ್ಗೆ ಕೇಳಿದ್ರೆ ತಟ್ಟಂಥ ಉತ್ತರ ಬರುತ್ತೆ. ಶ್ರೀಲಂಕಾ ಅಂತ. ರಾವಣ ಹಾಗೂ ಹನುಮಂತ ಸದಾ ನೆನಪಲ್ಲಿದ್ದೇ ಇರುತ್ತಾರೆ. `ಇನ್ನೊಂದು ನೆರೆಯದೇಶ ಯಾವ್ದು?' ಅಂತ ಕೇಳಿದ್ರೆ ನೆಟ್ವರ್ಕ್ ಡಿಸ್ ಕನೆಕ್ಟ್ ಆದಂಗೆ ನಿಲ್ಲುವ ಅವನನ್ನ ನೋಡಿ ಒಮ್ಮೊಮ್ಮೆ ನಗೂನು ಬರುತ್ತೆ. ನೇಪಾಳದಲ್ಲಿಯೂ ಒಬ್ಬ ರಾವಣನೋ ಹನುಮಂತನೋ ಇರ್ಬಾರ್ದಾಗಿತ್ತಾ ಅನ್ನಿಸಿಬಿಡುತ್ತೆ.
*ತಿಂಗಳುಗಟ್ಟಲೆ ದಿನಕ್ಕೊಂದು ಬಾರಿಯಂತೆ ‘ರಾಮಾಯಣ'(ಆನಿಮೇಟೆಡ್ ಮೂವಿ) ವೀಡಿಯೋ ನೋಡಿದ ಮಗ ಒಂದಿನ ಕೇಳಿದ. ‘ಅಮ್ಮಾ..ರಾವಣಂಗೆ ತಲೆಸ್ನಾನ ಮಾಡೋದು ತುಂಬ ಕಷ್ಟವಾಗ್ತಿತ್ತೇನೋ ಅಲ್ವಾ, ಅವರ ಬಾಥ್ ರೂಮಿನಲ್ಲಿ ಹತ್ತು ಮಗ್ ಇಟ್ಟಿದ್ರಾ ಹಾಗಾದ್ರೆ? ಇಪ್ಪತ್ತು ಕೈ ಇದೆಯಲ್ಲ ಅವನಿಗೆ! ಹತ್ತು ಮಗ್ ಎತ್ತೋದು ಕಷ್ಟವೇನಲ್ಲ.' ಅಂತೆಲ್ಲ ವಿಚಾರಗಳ ಸುರುಳಿಯನ್ನೇ ನನ್ನ ಮುಂದಿಟ್ಟ.
ರಾಮಾಯಣದ ರಾಮನನ್ನ ನೋಡಿ ಒಳ್ಳೊಳ್ಳೆಯದ ಕಲೀಲಿ ಅಂತ ಮಗನಿಗೆ ರಾಮಾಯಣ ತೋರಿಸಿದ್ರೆ ನನ್ನೀ ಸುಪುತ್ರನಿಗೆ ಹನುಮಂತ ರಾವಣರೇ ಸಖತ್ ಇಷ್ಟವಾಗಿ ಸದಾ ಅವನು ಹನುಮಂತನ ಕೀಟಲೆಯದ್ದೋ, ರಾವಣನದ್ದೊ ವಿಚಾರ ಮಾತಾಡತೊಡಗಿದುದರ ಬಗೆಗಿನ ಅಸಮಾಧಾನ ನನ್ನ ಮುಖದಲ್ಲಿ ಮತ್ತೆ ಮೂಡಿ ‘ನೀನು ಬರೀ ಹನುಮಂತನ ಬಗ್ಗೆ, ರಾವಣನ ಬಗ್ಗೆಯೇ ಯೋಚಿಸ್ಬಾರ್ದು, ರಾಮನ ಕುರಿತೂ ಸ್ವಲ್ಪ ಯೋಚಿಸಬೇಕು' ಅಂತ ಹೇಳಿದೆ. ನಾನು ಹೇಳುತ್ತಿದ್ದರೂ ಅವನ ವಿಚಾರ ಬೇರೆಯೇ ಇತ್ತು. ಅಸಮಧಾನಗೊಂಡಿದ್ದ ನನ್ನನ್ನ ಸಮಾಧಾನ ಮಾಡತೊಡಗಿದ್ದ ‘ಹೋಗ್ಲಿ ಬಿಡಮ್ಮ..ರಾವಣನಂಗೆ ಹತ್ತು ಮಗ್ ಎತ್ತೋದು ಕಷ್ಟವಾದ್ರೆ ಇನ್ನೊಂದು ಐಡಿಯಾ!!! ಹತ್ತು ಶವರ್ ಹಾಕಿಸ್ಬಿಟ್ರೆ ಹೇಗೆ ಬಾಥ್ ರೂಮಲ್ಲಿ..!! ಅಲ್ವಾಮ್ಮಾ?' ಅಂತ ಕೇಳಿದ. ಅವನ ಐಡಿಯಾ ಏನೋ ಚೆನ್ನಾಗಿತ್ತು. ನನ್ನ ಮೂಡ್ ಸರಿಯಿರದುದರಿಂದ ನಾನು ಉತ್ತರಿಸ್ಲಿಲ್ಲ. (ಖಂಡಿತ ಬೇಜವಾಬ್ಧಾರಿಯಿಂದಲ್ಲ)
*ನ್ಯಾಶನಲ್ ಸಿಂಬಲ್ಸ್ ಹೇಳೋಣ ಬಾ ಅಂತ ಕೂರಿಸಿಕೊಂಡರೆ
- ರಾಷ್ಟ್ರಧ್ವಜದ ಮೂರುಬಣ್ಣಗಳು- ಕೇಸರಿ, ಬಿಳಿ, ಹಸಿರು, ಬಿಳಿಯ ಬಣ್ಣದ ನಡುವೆ ಅಶೋಕಚಕ್ರ.
-ರಾಷ್ಟ್ರೀಯ ಪ್ರಾಣಿ-ಹುಲಿ
-ರಾಷ್ಟ್ರಪುಷ್ಪ-ಕಮಲ
-ರಾಷ್ಟ್ರೀಯ ಲಾಂಛನ-ಅಶೋಕ ಸ್ತಂಭ
-ರಾಷ್ಟ್ರಪಕ್ಷಿ-ನವಿಲು
-ರಾಷ್ಟ್ರಗೀತೆ-ಜನ ಗಣ ಮನ
‘ಅಮ್ಮಾ..ನವಿಲಿಗೆ ಡಾನ್ಸ್ ಮಾಡೊಕೆ ಬರುತ್ತೆ ಅಲ್ವಾ?' ಅಂತ ಖಾಯಂ ಪ್ರಶ್ನೆ. ನಾನು ಹೂಂ ಅನ್ನುವುದು ಕಾಮನ್ ಉತ್ತರ. ಒಂದಿನ ಹೀಗೂ ಕೇಳಿದ. ‘ಜನಗಣಮನ'' ಹಾಡಿಗೆ ಡಾನ್ಸ್ ಮಾಡಿದ್ರೆ ಚೆನ್ನಾಗಿರತ್ತಲ್ವಾ?' ಅಂತ ಹೇಳುತ್ತಲೆ ಡಾನ್ಸ್ ಶುರುವಾಗಿಬಿಟ್ಟಿತ್ತು. ನಾನು ನಗ್ಲಿಲ್ಲಪ್ಪಾ....ನಿಧಾನಕ್ಕೆ ಹೇಳ್ದೆ ‘ಇಲ್ಲ ಪುಟ್ಟ, ಡಾನ್ಸ್ ಮಾಡಬಾರ್ದು... ಅದು ತಪ್ಪಾಗತ್ತೆ, ನಮ್ಮ ದೇಶಕ್ಕೆ ನಾವು ಗೌರವ ಕೊಡಬೇಕಲ್ಲ? ಹಾಗೆಲ್ಲ ಡಾನ್ಸ್ ಮಾಡ್ಬಾರದು' ಅಂತ ಹೇಳಿದೆ. ಅದಕ್ಕವನು ಮುಖ ಚಿಕ್ಕದು ಮಾಡ್ಕೊಂಡು ‘ಹಾಗಾದ್ರೆ ಇನ್ಮೇಲಿಂದ ಡಾನ್ಸ್ ಮಾಡಲ್ಲ ಬಿಡಮ್ಮ' ಅಂದಾಗ ಥಟ್ಟನೆ ಉತ್ತರಿಸಿದೆ ‘ಅದು ಹಾಗಲ್ಲ, ಬೇರೆ ಹಾಡಿಗೆಲ್ಲ ಡಾನ್ಸ್ ಮಾಡು ಪರವಾಗಿಲ್ಲ, ರಾಷ್ಟ್ರಗೀತೆಗೆ ಮಾತ್ರ ಬೇಡ. ‘ಜನಗಣಮನ' ಹಾಡುವಾಗ ನಾವು ಸಾವಧಾನ್ ಸ್ಥಿತಿಯಲ್ಲೇ ನಿಂತಿರಬೇಕು.' ಅಂತ ತಿಳಿಹೇಳಿದ ಮೇಲೆ ಸ್ವಲ್ಪ ಹೊತ್ತು ಸಾವಧಾನವಾಗಿದ್ದ. ನಂತರ ‘ಜನಗಣಮನ'ಕ್ಕೆ ಡಾನ್ಸ್ ಅಲ್ಲದಿದ್ದರೂ ಮಾಡಲು ಅವನದೇ ಆದ ಘನಕಾರ್ಯಗಳಿವೆಯಲ್ಲ, ಶುರುಹಚ್ಚಿಕೊಂಡ. ನಡೆದವುಗಳನ್ನೆಲ್ಲ ಮೆಲುಕು ಹಾಕುತ್ತ ಮತ್ತೆಲ್ಲ ಹಾಡುವ ಸರದಿ ನನ್ನದು ‘ನಗುವುದೋ ಅಳುವುದೋ...'

ಮಕ್ಕಳೊಂದಿಗೆ ಕಳೆವ ಗಳಿಗೆಗಳಿವೆಯಲ್ಲ, ನಿಜವಾಗಿಯೂ ಅಮೂಲ್ಯವಾದವು. ಮಕ್ಕಳಿಗೆ ಕಲಿಸುವುದಕ್ಕಿಂತ ಹೆಚ್ಚು ಪಾಠಗಳನ್ನ ಮಕ್ಕಳಿಂದ ನಾವು ಕಲೀಬಹುದು ಅನ್ನುವ ಮಾತು ಹಳೆಯದಾದರೂ ಅದರೊಳಗಿನ ತಿರುಳು ನಿರತನವೀನ. ಅವರಾಳಕ್ಕಿಳಿದು ಅವರೊಡನೆ ಮಾತಿಗಿಳಿವ ಹಿತ ಇನ್ನೆಲ್ಲೂ ಸಿಗದು. ನಾವೂ ಮಕ್ಕಳಾಗಿಯೇ ಇರಬೇಕಿತ್ತು ಅನ್ನಿಸಿದರೂ ಅದು ಅಸಾಧ್ಯದ ಮಾತೇ. ಅವಕಾಶ ಸಿಕ್ಕರೆ ಸಾಧ್ಯವಾದಷ್ಟು ಹೊತ್ತು ಮಕ್ಕಳೊಂದಿಗಿದ್ದುಬಿಡೋಣ. ಮಕ್ಕಳ ಮುಗ್ಧಯೋಚನೆಗಳೆಲ್ಲ ನಮ್ಮೊಳಗೂ ಹರಿದು ನಮ್ಮನ್ನಿಷ್ಟು ತಿಳಿಗೊಳಿಸಲಿ. ಮೈಮೇಲಣ ಭಾರಗಳನಿಳಿಸಿ ಮುಕ್ತಮುಗ್ಧತೆಯೊಳಗಿಳಿದು ಹಗುರಾಗೋಣ ಒಂದಿಷ್ಟು ಕ್ಷಣ.