ಹಾಸನದ ಚಿತ್ಕಲಾ ಫೌಂಡೇಶನ್‌ನಲ್ಲಿ ಚಿತ್ರಕಲೆಯಲ್ಲಿ ಸೀನಿಯರ್ ಗ್ರೇಡ್ ಮುಗಿಸಿರುವ ಕಿರಣ್ ಎಚ್.ಜಿ ಈ ವಾರದ ಮಕ್ಕಳ ಸಂಪಿಗೆಯ ಅತಿಥಿ. ಪ್ರಾಣಿ ಮತ್ತು ಪರಿಸರದ ಚಿತ್ರವನ್ನು ಇಷ್ಟು ಪಟ್ಟು ಬಿಡಿಸುವ ಕಿರಣ್ ಇಲ್ಲಿನ ಅರವಿಂದ ಹೈಸ್ಕೂಲ್‌ನಲ್ಲಿ ಹತ್ತನೆಯ ತರಗತಿಯಲ್ಲಿದ್ದಾನೆ. ತಂದೆ ಕಾಲೇಜು ಉಪನ್ಯಾಸಕರಾದ ಜೀವನ್ ಎಚ್.ಬಿ ಹಾಗೂ ತಾಯಿ ಚಂದ್ರಕಲಾ. ಕಳೆದ ವರ್ಷ ಕನ್ನಡ ಸಂಸ್ಕೃತಿ ಇಲಾಖೆ ಕೋಲಾರದಲ್ಲಿ ಆಯೋಜಿಸಿದ್ದ ಮಕ್ಕಳ ಚಿತ್ರಕಲೆ ಸ್ಪರ್ಧೆಯಲ್ಲೂ ಕಿರಣ್ ಭಾಗವಹಿಸಿದ್ದಾನೆ. ಶಾಲಾ ಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಬಹುಮಾನವನ್ನೂ ಗಳಿಸಿದ್ದಾನೆ.
ಪ್ರಾಣಿಗಳು ಮತ್ತು ನಿಸರ್ಗದ ಚಿತ್ರವನ್ನು ಆಸ್ಥೆಯಿಂದ ಚಿತ್ರಿಸುವ ಕಿರಣ್, ಇಂತಹ ಚಿತ್ರಗಳೆಂದರೆ ನನಗೆ ಇಷ್ಟ ಎನ್ನುತ್ತಾನೆ. ಆ ರೀತಿಯ ಚಿತ್ರಗಳನ್ನು ಬಿಡಿಸಲು ಸ್ವಲ್ಪ ಕಷ್ಟ ಎನಿಸಿದರೂ ಬಿಡಿಸುವುದು ತುಂಬಾ ಖುಷಿಯ ವಿಚಾರ ಎನ್ನುತ್ತಾನೆ. ಮುಂದೆ ನಿನಗೆ ಏನಾಗಲು ಇಷ್ಟ ಎಂದರೆ ಸ್ವಲ್ಪ ಗಲಿಬಿಲಿಗೊಳಗಾಗುವ ಈ ಪುಟಾಣಿ ಕಲಾವಿದ, ಡಾಕ್ಟರ್, ಇಂಜಿನೀಯರ್ ಏನೇ ಆದರೂ ಚಿತ್ರಕಲೆಯನ್ನೂ ಜೊತೆಗೆ ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾನೆ. ಮಗನ ಆಸಕ್ತಿಯನ್ನು ಪ್ರೋತ್ಸಾಹಿಸುತ್ತೇವೆ ಎನ್ನುವ ತಂದೆ ಜೀವನ್, ಕಿರಣ್ ತರಗತಿಯಲ್ಲೂ ಉತ್ತಮ ಅಂಕಗಳನ್ನು ಪಡೆದಿರುವುದಕ್ಕೆ ಹಮ್ಮೆ ಪಡುತ್ತಾರೆ.


ಇಂತಹ ಚೆಂದದ ಚಿತ್ರಗಳನ್ನು ಬಿಡಿಸುವ ಈ ಪುಟಾಣಿ ಕಲಾವಿದ ಸಮಯ ಸಿಕ್ಕಿದಾಗ ಪುಸ್ತಕ ಓದುವ ಹವ್ಯಾಸವನ್ನೂ ಬೆಳೆಸಿಕೊಂಡಿದ್ದಾನೆ. ಕಿರಣನ ಚಿತ್ರಗಳು ನಿಮಗೆ ಇಷ್ಟವಾಯಿತೇ? ನಮಗೆ ಬರೆಯಿರಿ. ಜೊತೆಗೆ ನಿಮಗೆ ತಿಳಿದಿರುವ ಇಂತಹ ಪುಟಾಣಿ ಮಕ್ಕಳ ಚಿಗುರು ಪ್ರತಿಭೆಗಳ ಕುರಿತು ಬರೆದು ಕಳುಹಿಸಿ. ಮಕ್ಕಳ ಸಂಪಿಗೆಯ ಮೂಲಕ ಅವರನ್ನು ಪ್ರೋತ್ಸಾಹಿಸೋಣ.