ನನ್ನ ಲೈಬ್ರರಿಗೆ ತೊತ್ತೊ-ಚಾನ್ ಸೇರಿಕೊಂಡಿದ್ದು ಆರು ವರ್ಷಗಳ ಹಿಂದೆ. ತುಮಕೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅಪ್ಪನ ಕೈ ಹಿಡಿದು ಪುಸ್ತಕ ಮಳಿಗೆಗಳಲ್ಲಿ ಅಡ್ಡಾಡುತ್ತಿದ್ದಾಗ ಕಣ್ಣಿಗೆ ಬಿದ್ದಿತ್ತು. ಕಂಡ ಕೂಡಲೇ ಎತ್ತಿಕೊಳ್ಳುವಂತೆ ಮಾಡಿದ್ದು ಇದರ ಮುಖ ಪುಟ. ಎರಡೂ ಜಡೆಗೆ ರಿಬ್ಬನ್ ಕಟ್ಟಿಕೊಂಡು,ತುಂಡು ಲಂಗ ತೊಟ್ಟುಕೊಂಡು, ಕೈಯಲ್ಲಿ ಹೂ ಹಿಡಿದು ನಿಂತಿದ್ದ ತುಂಟ ಹುಡುಗಿ... ಆಗ ಸಂಜೆಯಾಗಿದ್ದುದರಿಂದ ಪುಸ್ತಕದ ಹೆಸರನ್ನು ಕೂಡಾ ಸರಿಯಾಗಿ ನೋಡಿರಲಿಲ್ಲ. ಹೀಗೆ ತಂದ ಈ ಪುಸ್ತಕವನ್ನು ಸುಮಾರು ದಿನಗಳ ನಂತರ ಅದೂ ಬಿಡುವಿನ ವೇಳೆಯಲ್ಲಿ ಓದ ತೊಡಗಿದೆ.
ಓದುತ್ತಾ ಹೋದಂತೆ, ನಾನು ಊಹಿಸಿಕೊಳ್ಳಲೂ ಆಗದಂಥ ಹೊಸ ಸ್ಕೂಲಿನ ಲೋಕ! ನನಗಾಗ ಆದ ಖುಷಿ ಅಷ್ಟಿಷ್ಟಲ್ಲ. ಒಂದೆರಡು ದಿನ ನನಗೆ ಇದನ್ನು ಬಿಟ್ಟು ಮತ್ತೇನನ್ನೂ ಓದಲು ಆಗಲೇ ಇಲ್ಲ. ಇದಕ್ಕಾಗಿ ಅಮ್ಮನಿಂದ ಬೈಸಿಕೊಂಡರೂ ಬೇಸರವಾಗಲಿಲ್ಲ. ಓದಿ ಮುಗಿದ ಮೇಲೆ ಬೇಸರವಾಗತೊಡಗಿತು. ಕೊಬಾಯಾಶಿಯಂತ ಮೇಷ್ಟರು, ತೊಮೊಯೊದಂತ ಸ್ಕೂಲು, ಯಾಕೆ ನನಗೆ ಸಿಗಲಿಲ್ಲ, ಅನಿಸತೊಡಗಿತು. ನಾನು ಓದುತ್ತಿದ್ದ ಸ್ಕೂಲು ಡಲ್ಲಾಗಿ ಕಾಣತೊಡಗಿತು. ಅಪ್ಪನನ್ನು ಒಂದೆರಡು ಬಾರಿ ಈ ಬಗ್ಗೆ ಕೇಳಿದೆ. ಆವರೆಗೆ ಅಪ್ಪನೂ ಈ ಪುಸ್ತಕವನ್ನು ಓದಿರಲಿಲ್ಲ. ತೊತ್ತೊ-ಚಾನ್ ತಾನು ಓದಿದ್ದ ಶಾಲೆಯನ್ನು ಕುರಿತು ಬರೆದ ಪುಸ್ತಕವಿದು. ಚಿಕ್ಕವಳಿದ್ದಾಗ ತೊತ್ತೊ-ಚಾನ್ ತುಂಬಾ ತುಂಟ ಹುಡುಗಿ. ಇವಳ ಇಂಥ ತುಂಟುತನವನ್ನು ಸಹಿಸಿಕೊಳ್ಳದ ಶಾಲೆಯವರು, ಸೇರಿಕೊಂಡ ಕೆಲವೇ ದಿನಗಳಿಗೆ ತೊತ್ತೊ-ಚಾನ್‌ಳನ್ನು ಶಾಲೆಯಿಂದ ಹೊರ ಹಾಕುತ್ತಿದ್ದರು. ಇದರಿಂದ ತೊತ್ತೊ-ಚಾನ್‌ಳ ತಾಯಿ ಚಿಂತೆಗೊಳಗಾಗುತ್ತಾಳೆ. ತರಗತಿಗಳ ಮಕ್ಕಳೆಲ್ಲಾ ಪಾಠ ಕೇಳುತ್ತಿದ್ದರೆ, ತೊತ್ತೊ-ಚಾನ್ ಚಾವಣಿಯ ಗುಬ್ಬಚ್ಚಿಗಳ ಹತ್ತಿರ ಮಾತನಾಡುತ್ತಿದ್ದಳು, ಕಿಟಕಿ ಹತ್ತಿ ನಿಂತು ಬೀದಿ ಸಂಗೀತಗಾರರನ್ನು ಕೂಗಿ ಕರೆಯುತ್ತಿದ್ದಳು. ಇವಳನ್ನು ಅರ್ಥಮಾಡಿಕೊಂಡು, ಇವಳು ಇತರರೊಡನೆ ಹೊಂದಿಕೊಂಡು ಹೋಗುವುದನ್ನು ಕಲಿಸುವಂಥ ಶಾಲೆ ಬೇಕಾಗಿತ್ತು. ಹಾಗಾಗಿ ತಾಯಿ ಮಗುವನ್ನು ಹೊಸ ಶಾಲೆಗೆ ಸೇರಿಸಲು ನಿರ್ಧರಿಸುತ್ತಾಳೆ. ಆಗ ತೊತ್ತೊ-ಚಾನ್, "ಹೊಸ ಶಾಲೆ ಹತ್ರಾನೂ ಬೀದಿ ಸಂಗೀತಗಾರರು ಬರುತ್ತಾರೇನಮ್ಮ?" ಅಂತ ಕೇಳುತ್ತಾಳೆ.
ತೊಮೊಯೆ ಶಾಲೆಯಲ್ಲಿ ಎಲ್ಲದೂ ವಿಶೇಷ. ಹಳೆಯ ರೈಲು ಬಂಡಿಗಳೇ ತರಗತಿಗಳು. ಗೋಡೆಗಳ ಬದಲಿಗೆ ನಾಲ್ಕೂ ಕಡೆಗೆ ಗಿಡ ಮರಗಳು. ಮಧ್ಯೆ ಮಧ್ಯೆ ಹೂ ಗಿಡಗಳು, ಹೂ ಬಳ್ಳಿಗಳು. ಹಿಂದಿನ ಶಾಲೆಯ ಗೇಟಿಗಿದ್ದಂತೆ ಎರಡು ದೊಡ್ಡ ಸಿಮೆಂಟಿನ ಕಂಬಗಳ ಬದಲಿಗೆ, ಸಣ್ಣ ರೆಂಬೆಗಳನ್ನು, ಎಲೆಗಳನ್ನು ಹೊಂದಿದ್ದ ಕುಳ್ಳಗಿದ್ದ ಎರಡು ಮರದ ತುಂಡುಗಳು.ಶಾಲೆಯ ಒಟ್ಟು ಪರಿಸರ ತೊತ್ತೊ-ಚಾನ್ ಳಿಗೆ ಹಿಡಿಸಿಬಿಡುತ್ತೆ. ಇಲ್ಲಿ ಅಡ್ಮಿಷನ್‌ಗೆ ಮುಂಚೆಯೇ ಯಾವ ಸಂದರ್ಶನಗಳಿರಲಿಲ್ಲ. ಎ ಅಕ್ಷರ ಗೊತ್ತಾ, ಡಿ ಅಕ್ಷರ ಗೊತ್ತಾ, ಡಾಗ್, ಕ್ಯಾಟ್ ಸ್ಪೆಲ್ಲಿಂಗ್ ಹೇಳು ಅನ್ನಲಿಲ್ಲ. ಬದಲಿಗೆ, ಮಗೂನ ಕೂರಿಸಿಕೊಂಡು, ನಿನ್ನ ಬಗ್ಗೆ ಹೇಳು ಅಂತ ಶಾಲೆಯ ಹೆಡ್ ಮೇಷ್ಟರು ಕೊಬಾಯಾಶಿ ಕೇಳುತ್ತಾರೆ. ಇಂತ ಮಾತುಗಳಿಂದ ಹೆಡ್ ಮೇಷ್ಟರು ಇವಳಿಗೆ ಇಷ್ಟವಾಗಿಬಿಡುತ್ತಾರೆ. ಆಗ ತೊತ್ತೊ-ಚಾನ್ ಬೇರೆಯವರ ತೋಟದ ಬೇಲಿಗಳನ್ನು ನುಸುಳುವಾಗ ತನ್ನ ಬಟ್ಟೆ ಹೇಗೆ ಹರಿಯುತ್ತವೆಂದು ವಿವರಿಸುತ್ತಾಳೆ.
ಅದೇ ರೀತಿ ಶಾಲೆಯಲ್ಲಿ ಮಕ್ಕಳನ್ನು ವಾಕಿಂಗ್ ಕರೆದುಕೊಂಡು ಹೋಗುವುದು, ಅಡುಗೆ ಕ್ಯಾಂಪ್ ಮಾಡೋದು, ಬೇಸಾಯ ಹೇಳಿ ಕೊಡೋಕೆ ರೈತನೇ ಮೇಷ್ಟರು. ಅಂತೆಯೇ ಇಲ್ಲಿನ ಆಟಗಳೂ ಭಿನ್ನವಾದವುಗಳು. ಕಾರ್ಪ್‌ಮೀನಿನ ಓಟ, ಅಮ್ಮನನ್ನು ಹುಡುಕುವ ಆಟ, ಹಗ್ಗ ಸೆಳೆದಾಟ, ಮರಕೋತಿಯಾಟ ಮುಂತಾದವುಗಳು. ಸಂಗೀತ ವ್ಯಾಯಾಮವೆಂಬ ಆಟವೂ ಇತ್ತು. ಇಂಥ ಆಟಗಳಲ್ಲಿ ಗೆದ್ದವರಿಗೆ ಕೊಡುವ ಬಹುಮಾನಗಳೂ ವಿಶೇಷವಾದವುಗಳು. ಮೊದಲ ಬಹುಮಾನ ದೊಡ್ಡ ಮೂಲಂಗಿಯಾದರೆ, ಎರಡನೆಯದಕ್ಕೆ ಎರಡು ಬೀಟ್‌ರೂಟ್‌ಗಳು, ಮೂರನೆಯ ಬಹುಮಾನ ಸೊಪ್ಪಿನ ಕಂತೆ. "ಈ ದಿನ ರಾತ್ರಿ ನಿಮಗೆ ಇವುಗಳಿಂದ ಅಡುಗೆ ಮಾಡಿ ಬಡಿಸಲು ಅಮ್ಮನಿಗೆ ಹೇಳಿ..."ಅಂತ ಹೇಳಿ ಕಳಿಸುತ್ತಿದ್ದರು. ಸ್ವಚ್ಚಂದವಾಗಿ ಆನಂದಪಡುವ ತಿರುಗಾಟದ ಮೂಲಕವೇ ಇಲ್ಲಿ ಮಕ್ಕಳಿಗೆ ವಿಜ್ಞಾನ, ಚರಿತ್ರೆ, ಜೀವಶಾಸ್ತ್ರ ಮುಂತಾದ ಪಾಠಗಳನ್ನು ಕಲಿಸಲಾಗುತ್ತಿತ್ತು. ಇಲ್ಲಿ ಯಾವ ಮಗುವೂ ಕೀಳರಿಮೆಯಿಂದ ನರಳುವಂತಿರಲಿಲ್ಲ.
ಕೊಬಾಯಾಶಿಯವರು ಇಂಥದ್ದೊಂದು ಶಾಲೆಯನ್ನು ಪ್ರಾರಂಭಿಸಲು ಜಪಾನಿನಲ್ಲಿದ್ದ ಸ್ಕೂಲುಗಳನ್ನು ಅಧ್ಯಯನ ಮಾಡಿದ್ದರು."ಮಕ್ಕಳನ್ನು ಪೂರ್ವ ಸಿದ್ಧ ಚೌಕಟ್ಟಿಗೆ ಒಳಪಡಿಸಲು ಪ್ರಯತ್ನಿಸ ಬೇಡಿ, ಅವರನ್ನು ನಿಸರ್ಗದ ಮಡಿಲಿಗೆ ಬಿಟ್ಟು ಬಿಡಿ, ಅವರ ಆಕಾಂಕ್ಷೆಗಳನ್ನು ಹತ್ತಿಕ್ಕಬೇಡಿ, ಅವರ ಕನಸುಗಳು ನಿಮ್ಮವಕ್ಕಿಂಥ ದೊಡ್ಡವು" ಅನ್ನುತ್ತಾ ಕಟ್ಟಿದ್ದ ಕೊಬಾಯಾಶಿರವರ ತೊಮೊಯೊ ಶಾಲೆ ಎರಡನೆಯ ಮಹಾಯುದ್ಧದ ಸಮಯದಲ್ಲಿ ಬಾಂಬಿನ ದಾಳಿಗೆ ಸಿಕ್ಕಿ ನಾಶವಾಗಿ ಹೋಗುತ್ತದೆ.
ನನಗೆ ತುಂಬಾ ಇಷ್ಟವಾದ ತೊತ್ತೊ-ಚಾನ್ ಆಗಾಗ ಓದುತ್ತಲೇ ಇರುತ್ತೇನೆ. ಹೀಗೆ ಓದುವಾಗಲೆಲ್ಲಾ, ತೊಮೊಯೆ ಥರದ ಶಾಲೆಗಳು, ಕೊಬಾಯಾಶಿ ಅವರಂತಹ ಟೀಚರುಗಳು ಸಿಕ್ಕಿದರೆ ಎಷ್ಟು ಚೆಂದ ಅನಿಸುತ್ತಿರುತ್ತದೆ.
-ಸ್ಮಿತಾ ಮಾಕಳ್ಳಿ.

ಸ್ಮಿತಾ ಮಾಕಳ್ಳಿ, ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾರೆ. ತೇಜಸ್ವಿ, ಫುಕವೊಕ ಎಂದರೆ ತುಂಬಾ ಇಷ್ಟ. ಅವರ ಬರೆದ ಕೊಬಾಯಾಶಿರವರ ತೊಮೊಯೆ ಶಾಲೆಯ ಕಥೆ ನಿಮಗೂ ಇಷ್ಟವಾಗಿರಬೇಕಲ್ವಾ? ಕನ್ನಡದಲ್ಲಿ ಬರೆಯುವ ಖುಷಿಯಿದ್ದರೆ ನೀವೂ ಕಾಲೇಜು ಸಂಪಿಗೆಗೆ ಬರೆಯಬಹುದು. ನಿಮ್ಮ ಲೇಖನಗಳನ್ನು editor@kendasampige.com ಗೆ ಇಮೇಲ್ ಮಾಡಿ.