ಪ್ರೀತಿಯ ಮಕ್ಕಳೇ,
ಚಿತ್ರಕಲೆ ಯಾರಿಗೆ ಇಷ್ಟವಿಲ್ಲ ಹೇಳಿ? ಹಾಸನದ ಚಿತ್ಕಲಾ ಪೌಂಡೇಶನ್‌ನಲ್ಲಿ ಹಲವು ಪುಟಾಣಿ ಕಲಾವಿದರು ಚಿತ್ರಕಲೆಯನ್ನು ಶ್ರದ್ಧೆಯಿಂದಲೂ, ಪ್ರೀತಿಯಿಂದಲೂ ಕಲಿಯುತ್ತಿದ್ದಾರೆ. ಅವರಲ್ಲಿ ಕೆಲವರನ್ನು ನಾವು ಈಗಾಗಲೇ ಪರಿಚಯಿಸಿದ್ದೇವೆ. ಈ ವಾರದ ಅತಿಥಿ ಪೂಜಾಶ್ರೀ ಕೆ.ಎಸ್. ಪೂಜಾಶ್ರೀ ಇಲ್ಲಿನ ಕೇಂದ್ರಿಯ ವಿದ್ಯಾಲಯದಲ್ಲಿ ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದಾಳೆ. ತಂದೆ ಕೆನರಾ ಬ್ಯಾಂಕ್ ಉದ್ಯೋಗಿ ಕೆ.ಎಸ್.ಎನ್.ಭಟ್ ಹಾಗೂ ತಾಯಿ ವೀಣಾ ಶಂಕರ್.
ಪೂರ್ಟ್‌ರೇಟ್ ಚಿತ್ರಗಳನ್ನು ಬಿಡಿಸುವ ಆಸಕ್ತಿ ಇರುವ ಪೂಜಾಶ್ರೀಗೆ ಪ್ರಾಣಿಗಳ ಚಿತ್ರಗಳನ್ನು ಬಿಡಿಸುವುದೂ ತುಂಬಾ ಇಷ್ಟ. ಚಿತ್ರ ನೋಡಲೂ ಸುಂದರವಾಗಿರಬೇಕಲ್ವಾ? ಎನ್ನುವುದು ಈ ಚಿಗುರು ಕಲಾವಿದೆಯ ಪ್ರಶ್ನೆ? ಇಲ್ಲಿರುವ ಚಿತ್ರಗಳನ್ನು ನೋಡಿ ಬಿಡಿಸಿದ್ದಾ? ನೋಡದೆ ಬಿಡಿಸಿದ್ದಾ? ಎಂದರೆ, ಅರ್ಧ ನೋಡಿ, ಇನ್ನರ್ಧ ನೋಡದೆ ಎನ್ನುವ ಉತ್ತರ ಕೊಡುತ್ತಾಳೆ. ಯಾವುದೇ ಚಿತ್ರ ಬಿಡಿಸಿದರೂ ಅದರಲ್ಲಿ ನನ್ನ ಕಲ್ಪನೆಯ ಭಾಗವೂ ಸ್ವಲ್ಪ ಇರುತ್ತದೆ ಎನ್ನುವ ಪೂಜಾಶ್ರೀಯ ಸಮಜಾಯಿಸಿ. ಪೂಜಾಶ್ರೀಗೆ ಡಾಕ್ಟರ್ ಆಗುವ ಆಸೆ. ಹಾಗೆ ಡಾಕ್ಟರ್ ಆಗಿ ಸಮಾಜ ಸೇವೆ ಮಾಡುವ ಕನಸು.


`ಚಿತ್ರಕಲೆಗೆ ಮನೆಯಲ್ಲಿ ಅಪ್ಪ, ಅಮ್ಮ ಪ್ರೋತ್ಸಾಹ ನೀಡುತ್ತಾರೆ. ದೇಸಾಯಿ ಸರ್ ಚೆನ್ನಾಗಿ ಚಿತ್ರ ಬಿಡಿಸಲು ಕಲಿಸಿಕೊಡುತ್ತಾರೆ, ಈ ಬಾರಿ ಚಿತ್ರಕಲೆ ಪರೀಕ್ಷೆಗೆ ಕುಳಿತುಕೊಳ್ಳಬೇಕೆಂದಿದ್ದೇನೆ` ಎನ್ನುವ ಪೂಜಾಶ್ರೀಗೆ ಅನೇಕ ಬಹುಮಾನಗಳೂ ಬಂದಿವೆ. ಕನ್ನಡ ಸಂಸ್ಕೃತಿ ಇಲಾಖೆ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಳೆ. ಎರಡು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಚಿನ್ನದ ಪದಕ ಗಳಿಸಿದ್ದಾಳೆ. ಮುಂದೆ ಯಾವುದೇ ವೃತ್ತಿಯನ್ನು ಆಯ್ದುಕೊಳ್ಳಬೇಕಾಗಿ ಬಂದರೂ ಚಿತ್ರಕಲೆಯೂ ನನ್ನ ಜೊತೆಗೆ ಇರುತ್ತದೆ ಎನ್ನುತ್ತಾಳೆ.
ಪೂಜಾಶ್ರೀಯ ಚಿತ್ರಗಳು ನಿಮಗೂ ಇಷ್ಟವಾಗಿರಬೇಕಲ್ವಾ? ನಿಮಗೆ ತಿಳಿದಿರುವ ಇಂತಹ ಚಿಗುರು ಪ್ರತಿಭೆಗಳ ಕುರಿತು ನಮಗೆ ಬರೆದು ತಿಳಿಸಿ. ಮಕ್ಕಳು ಬರೆದ ಕಥೆ, ಕವಿತೆ, ಚಿತ್ರಗಳನ್ನು editor@kendasampige.com ಗೆ ಇಮೇಲ್ ಮಾಡಿ. ಮಕ್ಕಳ ಸಂಪಿಗೆಯ ಮೂಲಕ ಅವರನ್ನು ಪ್ರೋತ್ಸಾಹಿಸೋಣ.