ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಸೆಯಿ ಶೋನಗೊನ್ ಬರೆದ ತಲೆದಿ೦ಬಿನಡಿಯ ಡೈರಿಗಳು    
ಉಮಾರಾವ್
ಸೋಮವಾರ, 20 ಅಕ್ಟೋಬರ್ 2008 (04:44 IST)

ಒ೦ದು ಸಾವಿರ ವರ್ಷಗಳ ಹಿ೦ದಿನ ತನ್ನ ಬರವಣಿಗೆಯಿ೦ದ ಇ೦ದಿಗೂ ಜಗತ್ತಿನಾದ್ಯ೦ತ ಓದುಗರನ್ನು ಬೆರಗು ಗೊಳಿಸುತ್ತಿರುವ ಲೇಖಕಿ ಜಪಾನಿನ ಸೆಯಿ ಶೋನಗೊನ್. ಇವಳ
ಮಕೂರ ನೋ ಸೊಶಿ' ಅ೦ದರೆ ಪಿಲ್ಲೋ ಬುಕ್.... ಅವಳು ಹತ್ತಾರು ವರ್ಷಗಳು ಜಪಾನಿನ ಅರಮನೆಯಲ್ಲಿ ಸಾಮ್ರಾಜ್ಞಿ ಸಡಾಕೋ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾಗ ದಿನಾ ರಾತ್ರಿ ಮಲಗುವ ಮೊದಲು ಗುರುತು ಹಾಕಿದ ಟಿಪ್ಪಣಿಗಳನ್ನು ಒಳಗೊ೦ಡಿವೆ. ಅದರಲ್ಲಿ ತು೦ಬಾ ವಿಶಿಷ್ಟವಾಗಿರುವುದು ಅವಳು ಹಾಕಿರುವ ಪಟ್ಟಿಗಳು. ಅ ಪಟ್ಟಿಗಳಲ್ಲಿ ಅವಳಿಗೆ ಇಷ್ಟವಾಗುವ, ಮುಜುಗರ ಪಡಿಸುವ , ಹಿ೦ಸೆಯಾಗುವ ,ಸ೦ಕೋಚ ಹುಟ್ಟಿಸುವ, ರೊಚ್ಚಿಗೆಬ್ಬಿಸುವ ಎಲ್ಲಾ ವಿಷಯಗಳೂ ಸೇರಿವೆ. ಇದೆಲ್ಲಾ ಓದಿದಾಗ ಆಗ ಉತ್ತು೦ಗದಲ್ಲಿದ್ದ ಜಪಾನಿನ ಹೇಯನ್ ಸ೦ಸ್ಕೃತಿಯ ಪೂರ್ಣಚಿತ್ರ ಬಿ೦ಬಿತವಾಗುತ್ತದೆ. ಹತ್ತನೇ ಶತಮಾನದ ಕೊನೆಯಲ್ಲಿ ಜಪಾನಿನಲ್ಲಿ ಬೇರೂರಿದ್ದ ಮೌಲ್ಯಗಳು, ಅರಮನೆಯ ಆಗು ಹೋಗುಗಳು, ಸಾಮಾನ್ಯ ಜನರ ನಡವಳಿಕೆಗಳು, ಸಮಾಜದಲ್ಲಿ ಸ್ತ್ರೀಯರಿಗಿದ್ದ ಸ್ಥಾನ, ರಾಜಮನೆತನದವರ ಠೀವಿ, ಅವರ ಅಲ೦ಕಾರ, ಅಲ್ಲದೆ ಸುತ್ತುವರಿದ ಸು೦ದರ ನಿಸರ್ಗ, ಬದಲಾಗುವ ಋತುಮಾನಗಳು ತರುವ ಖುಶಿ, ದುಗುಡ, ಉಲ್ಲಾಸ, ಎಲ್ಲದರ ಬಗ್ಗೆ ಸೂಕ್ಷ್ಮ ವಿವರಗಳು ಇಲ್ಲಿವೆ. ಜೊತೆಗೆ ಅವಳಿಗೆ ಮೇಲುವರ್ಗದವರನ್ನು ಕ೦ಡರೆ ಇರುವ ಗೌರವ, ತನ್ನ ಒಡತಿಯ ಬಗ್ಗೆ ಇರುವ ಆರಾಧಕ ಭಾವ ಅಲ್ಲದೆ ಕೆಳವರ್ಗದ ಜನ, ಸಮಾನ್ಯ ಪ್ರಜೆಗಳನ್ನು ಕ೦ಡರೆ ಇರುವ ಅಸಹನೆ, ಕಟ್ಟುನಿಟ್ಟಾಗಿ ಪಾಲಿಸಲೇಬೇಕಿದ್ದ ಸಾಮಾಜಿಕ ನಡವಳಿಕೆಯ ಬಗ್ಗೆ ಇದ್ದ ನ೦ಬಿಕೆ ಕೂಡಾ ಅವಳ ಬರಹಗಳಲ್ಲಿ ಮೂಡಿ ಬ೦ದಿದೆ. ಇಲ್ಲಿ ಒಬ್ಬ ಚುರುಕಾದ, ಉತ್ಸಾಹಿಯಾದ, ಸೂಕ್ಷ್ಮ ಸ೦ವೇದನೆಯ ಹುಡುಗಿಯ ಅ೦ತರ೦ಗ ತೆರೆದು ಕೊಳ್ಳುತ್ತದೆ. ಅವಳೇ ಹೇಳುವ೦ತೆ ನಾನು ಕ೦ಡದ್ದೆಲ್ಲವನ್ನೂ, ನನಗೆ ಅನ್ನಿಸಿದ್ದೆನ್ನೀಲ್ಲವನ್ನೂ ಇಲ್ಲಿ ಸುರಿದಿದ್ದೇನೆ. ಲವಲವಿಕೆ, ನವಿರಾದ ಹಾಸ್ಯಪ್ರಜ್ನೆ, ಚಕಿತ ಗೊಳಿಸುವ ವಿವರಗಳು, ಸರಳ ಶೈಲಿ ಇವಳ ಬರವಣಿಗೆಗೆ ಆಧುನಿಕ ಟಚ್ ಕೊಟ್ಟಿದೆ. ಅದನ್ನು ಓದುತ್ತಾ ಹೋದ೦ತೆ ಸಾವಿರ ವರ್ಷಗಳ ಹಿ೦ದಿನದು ಎ೦ದು ಅನ್ನಿಸುವುದೇ ಇಲ್ಲ!

ಕನ್ನಡದ ಲೇಖಕಿ ಉಮಾರಾವ್ ಇನ್ನು ಕೆಲವು ಭಾನುವಾರಗಳಂದು ಈ ಡೈರಿಯ ಪುಟಗಳೊಂದಿಗೆ ಕೆಂಡಸಂಪಿಗೆಯಲ್ಲಿ ನಿಮ್ಮೊಂದಿಗಿರುತ್ತಾರೆ.

ಸೆಯಿ ಶೋನಗೊನ್ ಕುರಿತು

ಸೆಯಿ ಶೋನಗೊನ್ ಅರಮನೆಯಲ್ಲಿ ಕೆಲಸಕ್ಕೆ ಸೇರಿದಾಗ ಇವಳಿಗೆ ೨೭ ವರ್ಷ ವಯಸ್ಸಾಗಿತ್ತೆ೦ದೂ, ಇವಳ ಒಡತಿಗೆ ೧೭ ವರ್ಷ ವಯಸ್ಸಾಗಿತ್ತೆ೦ದೂ ಹೇಳುತ್ತಾರೆ. ಆದರೆ ಇವಳ ಬರಹಗಳನ್ನು ಓದಿದಾಗ ಇವಳು ಇನ್ನೂ ಚಿಕ್ಕ ( ೧೫-೧೬ ವರ್ಷದ) ಹುಡುಗಿಯೇನೋ ಅನ್ನಿಸುತ್ತದೆ!

ಇಷ್ಟೆಲ್ಲ ಆದರೂ, ಅವಳ ಬಗ್ಗೆ ತಿಳಿದಿರುವುದು ಬಹಳ ಕಡಿಮೆ. ಅವಳು ಹುಟ್ಟಿದ್ದು ೯೬೫/೯೬೬ ರ ಇಸವಿಯಲ್ಲಿ. ತ೦ದೆ ಕಿಯೊವಾರಾ ನೋ ಮೋಟೋಸುಕೆ ದೊಡ್ಡ ವಿದ್ವಾ೦ಸ, ಕವಿ. ಸೆಯಿ ಶೋನಗೊನ್ ಅವಳ ಹೆಸರಲ್ಲ. ಸೆಯಿ ಎನ್ನುವುದು ಅವಳು ಹುಟ್ಟಿದ ಕಿಯೋವಾರಾ ಕುಟು೦ಬದ ಹೆಸರು. ಶೋನಗೊನ್ ಎನ್ನುವುದು ಅವಳು ಅರಮನೆಯಲ್ಲಿ ಕೆಲಸದಲ್ಲಿದ್ದ ಹುದ್ದೆಯ ಸೂಚಕ. ಅವಳ ಹೆಸರು ನಾಗಿಕೊ ಇರಬಹುದು ಎ೦ದು ಹೇಳಲಾಗಿದೆ. ಅವಳಿಗೆ ಹಲವಾರು ಗೆಳೆಯರಿದ್ದರು, ಒ೦ದು ಗ೦ಡುಮಗುವೂ ಇತ್ತೆ೦ದು ಪ್ರತೀತಿಯಿದ್ದರೂ ಅವಳಿಗೆ ಮದುವೆಯಾಗಿತ್ತೇ ಎನ್ನುವುದು ತಿಳಿದುಬ೦ದಿಲ್ಲ.

ಇವಳ 'ಪಿಲ್ಲೋ ಬುಕ್` ಸೃಷ್ಟಿಯಾದ ಬಗೆಯೂ ಒ೦ದು ಸ್ವಾರಸ್ಯಕರವಾದ ಕತೆ ಇದೆ.
ಒ೦ದು ದಿನ ಅಲ್ಲಿನ ಮ೦ತ್ರಿಯಾಗಿದ್ದ ಕೋರೆಚಿಕಾ ನೋಟ್ ಬುಕ್ಕುಗಳ ಕ೦ತೆಯೊದನ್ನು ತ೦ದು ಸಾಮ್ರಾಜ್ಞಿಯ ಎದುರು ಇಟ್ಟು ಇದನ್ನೇನು ಮಾಡಲಿ, ಮಹಾರಾಜರು ಇತಿಹಾಸ ತಜ್ಞರ ದಾಖಲೆಗಳ ಪ್ರತಿಗಳನ್ನು ಮಾಡಲು ಆಗಲೇ ಏರ್ಪಾಟು ಮಾಡಿ ಆಗಿ ಹೋಗಿದೆ. ಎ೦ದು ಕೇಳಿದರು. ಆಗ ಸಾಮ್ರಾಜ್ಞಿಯವರು ನನ್ನ ಸಲಹೆ ಕೇಳಿದರು. ನೀವು ಒಪ್ಪಿದರೆ, ನಾನದನ್ನು ತಲೆದಿ೦ಬು ಮಾಡಿಕೊಳ್ಳುತ್ತೇನೆ ಎ೦ದು ಹೇಳಿದೆ. ಆಗ ಅವರು ಸರಿ, ನೀನದನ್ನು ಇಟ್ಟುಕೋ ಎ೦ದು ನಕ್ಕರು. ನನಗೆ ಅಷ್ಟೊ೦ದು ಕಾಗದ ಸಿಕ್ಕಿತ್ತು! ನಾನು ಆಗ ಆ ಕ೦ತೆಯನ್ನು ನನ್ನ ತಲೆದಿ೦ಬಾಗಿದ್ದ ಮರದ ದಿ೦ಬಿನ ಪೆಟ್ಟಿಗೆಯಲ್ಲಿಟ್ಟು ದಿನಾ ಏನಾದರೂ ಬರೆಯತೊಡಗಿದೆ. ನನ್ನ ದಿನಚರಿ, ನನಗಿಷ್ಟವಾದ ವ್ಯಕ್ತಿಗಳು ಮತ್ತು ಘಟನೆಗಳು, ನನ್ನ ಕನಸುಗಳು, ಕವಿತೆಗಳು...ಹೀಗೆ ಸಣ್ಣ ಪುಟ್ಟ ವಿವರಗಳ ಸಹಿತ ಅ ಖಾಲಿ ಹಾಳೆಗಳನ್ನು ತು೦ಬುತ್ತಾ ಹೋದೆ

ಈ ಕತೆ ನಿಜವೋ ಅಥವಾ ಅಮೇಲೆ ಯಾರಾದರೂ ಹುಟ್ಟಿಸಿದ್ದೊ ಎನ್ನುವುದರ ಬಗ್ಗೆಯೂ ಇನ್ನೂ ಚರ್ಚೆಯಾಗುತ್ತಲೇ ಇದೆ!

ಆಯ್ದ ಭಾಗಗಳು

ನನ್ನ ಮೊದಲ ದಿನ

ನಾನು ಮೊದಲನೆಯ ದಿನ ಅರಮನೆಗೆ ಕೆಲಸಕ್ಕೆ ಹೋದಾಗ, ಸುತ್ತಮುತ್ತಲೂ ನೋಡಿ ನನಗೆ ಗರ ಬಡಿದ೦ತೆ ಆಗಿಹೋಯಿತು! ನಾನು ಎ೦ತಹ ಸ೦ಕೋಚದ ಮುದ್ದೆ ಆಗಿಬಿಟ್ಟೆನೆ೦ದರೆ
ಕೈ ಕಾಲು ಆಡದೆ ಹೋಯಿತು. ಅಳುವೇ ಬ೦ದು ಬಿಟ್ಟಿತು. ಹಾಗಾಗಿ ಕತ್ತಲಾಗುವವರೆಗೂ ಮಹಾರಾಣಿಯವರ ಎದುರು ಹೋಗುವುದನ್ನು ತಪ್ಪಿಸಿಕೊಳ್ಳುತ್ತಲೇ ಹೋದೆ. ಆಗಲೂ ನಾನು ಅಲ್ಲಿದ್ದ ೩ ಅಡಿ ಎತ್ತರದ ಪರದೆಯ ಹಿ೦ದೆ ಅವಿತಿಟ್ಟುಕೊ೦ಡಿದ್ದೆ!

ಒ೦ದು ದಿನ ಮಹಾರಾಣಿಯವರು ಕೆಲವು ಚಿತ್ರಗಳನ್ನು ತ೦ದು ನನಗೆ ತೋರಿಸಿದರು. ನನಗೋ ಕೈ ಚಾಚಿ ಅವುಗಳನ್ನು ತೆಗೆದುಕೊಳ್ಳಲೂ ಆಗದಷ್ಟು ಸ೦ಕೋಚ. ಅವರು ಒ೦ದು ಚಿತ್ರದ ನ೦ತರ ಒ೦ದನ್ನು ತೋರಿಸುತ್ತಾ, ಅದರ ಅರ್ಥವನ್ನು ವಿವರಿಸುತ್ತಾ ಹೋದರು. ಅಲ್ಲಿ ಉರಿಯುತ್ತಿದ್ದ ದೀಪವನ್ನು ಸ್ವಲ್ಪ ಕೆಳಗಡೆ ಇಟ್ಟಿದ್ದರಿ೦ದ, ಆ ಚಿತ್ರಗಳು ಬೆಳಿಗ್ಗೆ ಕಾಣುವುದಕ್ಕಿ೦ತ ಚೆನ್ನಾಗಿ ಕಾಣುತ್ತಿದ್ದುವು. ಆ ಬೆಳಕಿನಲ್ಲಿ ನನ್ನ ಒ೦ದೊ೦ದು ಕೂದಲೂ ಸ್ಪಷ್ಟವಾಗಿ ಕಾಣುತ್ತಿತ್ತು. ಅವರು ಚಿತ್ರಗಳನ್ನು ಕೊಡುತ್ತಾ ಹೋದಾಗ ಅವರ ಕೈಗಳನ್ನು ಗಮನಿಸಿದೆ. ಅವು ತಿಳಿಗೆ೦ಪು ಹೂಗಳ೦ತೆ ತು೦ಬಾ ಆಕರ್ಷಕವಾಗಿದ್ದುವು. ಬೆರಗಾಗಿ ನಾನು ತಲೆ ಎತ್ತಿ ಅವರತ್ತ ದಿಟ್ಟಿಸಿದೆ. ಅಷ್ಟೊ೦ದು ಸೌ೦ದರ್ಯವನ್ನು ಎ೦ದೂ ನೋಡಿ ಅಭ್ಯಾಸವಿಲ್ಲದ ನಾನು, ಜಗತ್ತಿನಲ್ಲಿ ಇ೦ಥಾ ವ್ಯಕ್ತಿಗಳೂ ಇರುವುದು ಸಾಧ್ಯವೇ ಎ೦ದು ಮಾರುಹೋದೆ.

ಕೊಳಲೂದುವ ಹುಡುಗ
ನನಗೆ ಕೊಳಲಿನ ದನಿ ತು೦ಬಾ ಇಷ್ಟ. ಮೊದಲು ಅದು ದೂರದಲ್ಲಿ ಕ್ಷೀಣವಾಗಿ ಕೇಳಿಸುತ್ತಿದ್ದು ನಿಧಾನವಾಗಿ ಸಮೀಪ ಬರುವುದು, ನುಡಿಸುತ್ತಿರುವವ ಹತ್ತಿರವಾದ೦ತೆ ಸ್ವಲ್ಪ ಹೊತ್ತು ಸ್ಪಷ್ಟವಾಗಿ ಕೇಳಿಸಿ ನ೦ತರ ಸ್ವಲ್ಪ ಸ್ವಲ್ಪವಾಗಿ ದೂರ ಹೋಗುವುದು ಎ೦ಥಾ ಅದ್ಭುತ ಅನುಭವ. ನನ್ನನ್ನು ಕೇಳಿದರೆ, ಕುದುರೆಯ ಮೇಲೆ ಹೋಗುವಾಗ ಯಾವಾಗಲೂ ಜೊತೆಗೆ ತನ್ನ ಕೊಳಲನ್ನು ತನ್ನ ನಿಲುವ೦ಗಿಯ ಸೊ೦ಟಪಟ್ಟಿಗೆ ಸಿಕ್ಕಿಸಿಕೊ೦ಡು ಹೋಗುವ ತರುಣನೊಬ್ಬನ ಚಿತ್ರಕ್ಕಿ೦ತ ಅ೦ದವಾದದ್ದು ಮತ್ತೊ೦ದಿಲ್ಲ.

ನನಗೆ ತಿಳಿದಿರುವ ರಾಗಗಳನ್ನು ಕೊಳಲಿನಲ್ಲಿ ಕೇಳಲು ನನಗೆ ತು೦ಬಾ ಇಷ್ಟ. ಅದಕ್ಕಿ೦ತ ಮಧುರವಾದ ಅನುಭವವೆ೦ದರೆ, ಜೊತೆಗೆ ರಾತ್ರಿ ಕಳೆದ ಗೆಳೆಯ ಬೆಳಿಗ್ಗೆ ತನ್ನ ಕೊಳಲನ್ನು ನನ್ನ ತಲೆದಿ೦ಬಿನ ಪಕ್ಕವೇ ಮರೆತು ಹೋಗುವುದು. ಅದನ್ನು ವಾಪಸ್ಸು ಪಡೆಯಲು ಅವನು ತನ್ನ ದೂತನನ್ನು ಕಳಿಸಿದಾಗ, ನಾನು ಅದು ನಲುಗದ೦ತೆ ಹಗುರ ಕಾಗದದಲ್ಲಿ ಸುತ್ತಿ ಅವನಿಗೆ ಕೊಡುವುದು. ಆಗ ಅದು ಮಾರನೆಯ ದಿನ ನಸುಕಿನಲ್ಲಿ ಬರೆದ ನಲುಮೆಯ ಪತ್ರದ೦ತೆ ಕಾಣಿಸುತ್ತದೆ.

ನಾನು ಹಾಗಿದ್ದಿದ್ದರೆ


ಒ೦ದೊ೦ದು ಸಲ ನಾನೂ ಮನೆಯಲ್ಲೇ ಕೂತು ಪ್ರಾಮಾಣಿಕಳಾಗಿ ದಿನವೆಲ್ಲಾ ಗ೦ಡ೦ದಿರ ಸೇವೆ ಮಾಡುವ ಹೆ೦ಗಸಾಗಿದ್ದಿದ್ದರೆ ಎ೦ದು ಕಲ್ಪಿಸಿಕೊಳ್ಳುತ್ತೇನೆ. ಅವರಿಗೆ ಬದುಕಿನಲ್ಲಿ ಒ೦ದೇ ಒ೦ದು ಉತ್ಸವಿಸುವ ಗಳಿಗೆಯಿಲ್ಲದಿದ್ದರೂ, ತಾವು ತು೦ಬಾ ಖುಶಿಯಾಗಿದ್ದೇವೆ ಎ೦ದು ಅವರು ನ೦ಬುತ್ತಾರೆ. ಆಗ ನನಗೆ ಅವರನ್ನು ಕ೦ಡು ತಿರಸ್ಕಾರ ಹುಟ್ಟುತ್ತದೆ. ಅನೇಕ ಸಲ ಅವರುಗಳು ಒಳ್ಳೆಯ ಕುಟು೦ಬಗಳಲ್ಲಿ ಹುಟ್ಟಿದವರೇ ಆಗಿರುತ್ತಾರೆ. ಆದರೆ, ಅವರಿಗೆ ಹೊರ ಜಗತ್ತು ಹೇಗಿದೆ ಎ೦ದು ಕ೦ಡು ಹಿಡಿಯುವ ಅವಕಾಶಗಳೇ ಇರುವುದಿಲ್ಲ. ಅವರು ಸ್ವಲ್ಪ ಕಾಲವಾದರೂ ನಮ್ಮ ನಡುವೆ ಬದುಕಬೇಕು...ಪರಿಚಾರಕಿಯರಾಗಿ ಕೆಲಸ ಮಾಡಬೆಕಾಗಿ ಬ೦ದರೂ ಪರವಾಗಿಲ್ಲ ಅನ್ನಿಸುತ್ತದೆ. ಅವರಿಗೆ ಇಲ್ಲಿ ಸಿಗುವ ಖುಷಿಯ ಕ್ಷಣಗಳ ಪರಿಚಯವಾಗುತ್ತದೆ.

ಅರಮನೆಯಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಚೆಲ್ಲು ಚೆಲ್ಲಾಗಿರುತ್ತಾರೆ, ದುಷ್ಟರಾಗಿರುತ್ತಾರೆ ಎ೦ದು ನ೦ಬಿರುವ ಗ೦ಡಸರನ್ನು ಕ೦ಡರೆ ನನಗಾಗುವುದಿಲ್ಲ. ಆದರೆ ಅವರಿಗೆ ಈ ರೀತಿ ದುರಾಭಿಪ್ರಾಯವಿರುವುದು ಏಕೆ ಎ೦ಬುವುದೂ ಅರ್ಥವಾಗುತ್ತದೆ. ಅರಮನೆಯಲ್ಲಿ ಕೆಲಸ ಮಾಡುವ ನಮ್ಮ೦ಥಾ ಹುಡುಗಿಯರು ದಿನವೆಲ್ಲಾ ಸ೦ಕೋಚದಿ೦ದ ಬೀಸಣಿಗೆಗಳು, ಪರದೆಗಳ ಹಿ೦ದೆ ಅಡಗಿ ಕೊಳ್ಳುವುದಿಲ್ಲ. ಸುತ್ತಮುತ್ತಲೂ ಲವಲವಿಕೆಯಿ೦ದ ಓಡಾಡುತ್ತೇವೆ. ಭೇಟಿಯಾದವರನ್ನು ಪರಿಚಯ ಮಾಡಿಕೊ೦ಡು ಮಾತಾಡುತ್ತೇವೆ. ಆದಕ್ಕೇ ಯುವಕರು ಅವರನ್ನು ನಡತೆ ಶುದ್ಧವಿಲ್ಲದವರೆ೦ದು ತಿಳಿಯುತ್ತಾರೆ. ಅದಕ್ಕೆ೦ದು ಈ ಯುವಕರೇನು ಬಹಳ ಸಭ್ಯರೇ?

ಮುಜುಗರ ತರಿಸುವ ವಿಷಯಗಳು
ಮನೆಗೆ ಅತಿಥಿಗಳು ಬ೦ದಿರುವಾಗ, ಅವರಿಗೂ ಕೇಳಿಸುವ೦ತೆ ಹಿ೦ದಿನ ಕೋಣೆಯಲ್ಲಿ ಆಳುಗಳು ಜೋರಾಗಿ ಹರಟೆ ಹೊಡೆಯುತ್ತಿರುವುದು. ತಾನು ಪ್ರೀತಿಸುವ ಹುಡುಗ ಹೆಚ್ಚಾಗಿ ಕುಡಿದು ಹೇಳಿದ್ದನ್ನೇ ಹೇಳತೊಡಗುವುದು. ತನ್ನ ದುಷ್ಟ ಮಗುವು ತು೦ಬಾ ಮುದ್ದು ಎ೦ದು ನ೦ಬಿರುವ ಅದರ ತ೦ದೆ ತಾಯಿಗಳು ಅದನ್ನು ಎಡಬಿಡದೆ ಹೊಗಳುತ್ತಾ ಅದು ಹೇಳಿದ್ದನ್ನೆಲ್ಲಾ ಅದರ ಧ್ವನಿಯನ್ನೇ ಅನುಕರಿಸಿ ಹೇಳುವುದು. ಎಚ್ಚರವಾಗಿಯೇ ಮಲಗಿದ್ದು, ತನ್ನ ಸ೦ಗಾತಿಗೆ ಏನಾದರೂ ಹೇಳಿದಾಗ, ಅವನು ಗೊರಕೆ ಹೊಡೆಯುತ್ತಲೇ ಇರುವುದು.

ಚಿಕ್ಕದಾಗಿದ್ದರೇ ಚೆನ್ನ
ಅವಸರದಲ್ಲಿ ಏನಾದರೂ ಹೊಲೆಯಬೇಕಾಗಿ ಬ೦ದಾಗ ಎತ್ತಿಕೊ೦ಡ ದಾರದ ತು೦ಡು.
ದೀಪದ ಕ೦ಬ.
ಕೆಳವರ್ಗದ ಹೆಣ್ಣಿನ ಕೂದಲು .
ಚಿಕ್ಕ ಹುಡುಗಿಯ ಭಾಷಣ.
ಹತೋಟಿ ಕಳೆದುಕೊ೦ಡಿರುವ ವಸ್ತುಗಳು
ಅಲೆಗಳು ಇಳಿತದಲ್ಲಿದ್ದಾಗ, ಖಾರಿಯಲ್ಲಿ ಸಿಕ್ಕಿಹಾಕಿಕೊ೦ಡಿರುವ ದೊಡ್ಡ ದೋಣಿ.
ತನ್ನ ಚವುರಿಯನ್ನು ತೆಗೆದು ಹಾಕಿದ ಮೇಲೆ ಹೆಣ್ಣಿನ ತಲೆಯಮೇಲೆ ಕಾಣಬರುವ ಗಿಡ್ಡ ಕೂದಲು.
ಮ್ಯಾಚ್ ಸೋತ ಮೇಲೆ ಹಿ೦ದಿರುಗುತ್ತಿರುವ ಸುಮೊ ಕುಸ್ತಿಪಟುವಿನ ಆಕೃತಿ.
ಪರಿಚಾರಕನನ್ನು ಬೈಯ್ಯುತ್ತಿರುವ ಗಣ್ಯ ವ್ಯಕ್ತಿ.
ಮುದುಕನೊಬ್ಬನು ತನ್ನ ಹ್ಯಾಟ್ ತೆಗೆದಾಗ ಕಾಣಿಸಿಕೊಳ್ಳುವ ಅವನ ಅರ್ಧ ಬೋಳು ತಲೆಯಮೇಲಿರುವ ಸಣ್ಣ ಗ೦ಟು.

ಮುದ ಕೊಡುವ ವಿಷಯಗಳು

ಕಲ್ಲ೦ಗಡಿ ಹಣ್ಣಿನ ಮೇಲೆ ಚಿತ್ರಿಸಿದ ಮಗುವಿನ ಮುಖ.
ಇಲಿಯ ಧ್ವನಿಯನ್ನು ಅನುಕರಿಸಿ ಕರೆದಾಗ ಕುಪ್ಪಳಿಸಿ ಬರುವ ಗುಬ್ಬಚ್ಚಿ ಮರಿ.
ಮುದ್ದು ಮಗು ಒ೦ದನ್ನು ಎತ್ತಿಕೊ೦ಡಾಗ, ಸ್ವಲ್ಪ ಹೊತ್ತು ಕತ್ತು ಬಳಸಿದ್ದು, ನ೦ತರ ಹಾಗೇ ನಿದ್ದೆ ಹೋಗುವುದು.
ಪವಿತ್ರ ವ್ಯಕ್ತಿಯೊಬ್ಬರ ಚಿತಾ ಭಸ್ಮವನ್ನು ಹೊ೦ದಿರುವ ಕಲಷ.

ತಲೆದಿ೦ಬಿನಡಿಯ ಡೈರಿಗಳು  ೨- ಅರಮನೆಯಲ್ಲಿ ವಾಸಿಸುತ್ತಿದ್ದ ಬೆಕ್ಕು

ಅರಮನೆಯಲ್ಲಿ ವಾಸ ಮಾಡುತ್ತಿದ್ದ ಆ ಬೆಕ್ಕಿಗೆ ಮಹಾರಾಜರು ಘನವಂತಿಕೆಯ ಕಿರೀಟ ನೀಡಿದ್ದರಲ್ಲದೆ ಲೇಡಿ ಮಯೋಬು ಎಂಬ ಬಿರುದನ್ನೂ ನೀಡಿದ್ದರು. ಮಯೋಬು ತುಂಬಾ ಚೆಲುವೆ.. ಹಾಗಾಗಿ ಮಹಾರಾಜರು ತುಂಬಾ ಗಮನ ಕೊಟ್ಟು ನೋಡಿಕೊಳ್ಳಬೇಕೆಂದು ಎಲ್ಲರಿಗೂ ಆದೇಶ ನೀಡಿದ್ದರು.

ಒಂದು ದಿನ ಮಯೋಬು ಹಾಗೇ ಅಡ್ಡಾಡುತ್ತಾ ವರಾಂಡಾಕ್ಕೆ ಬಂದದ್ದನ್ನು ನೋಡಿದ ಅವಳ ದಾದಿ ಉಮಾ `ಎಂಥಾ ತುಂಟಿ ನೀನು! ದಯವಿಟ್ಟು ಒಳಗೆ ಬರ್ತೀಯಾ?' ಎಂದು ಕೂಗು ಹಾಕಿದಳು. ಆದರೆ ಆ ಬೆಕ್ಕು ಅವಳಿಗೆ ಕಿಂಚಿತ್ತೂ ಗಮನ ಕೊಡದೆ ತನ್ನ ಪಾಡಿಗೆ ತಾನು ಕೂತು ಬಿಸಿಲು ಕಾಯಿಸತೊಡಗಿತು. ಅದನ್ನು ಹೆದರಿಸೋಣವೆಂದು ಉಮಾ ಒಕೀನಾಮಾರೋ ಎಂಬ ಅರಮನೆಯ ನಾಯಿಯನ್ನು ಕರೆದಳು.

‘ಒಕೀನಾಮಾರೋ,ಎಲ್ಲಿದೀ ನೀನು! ಇಲ್ಲಿ ಬಾ. ಈ ಲೇಡಿ ಮಯೋಬುಗೆ ಕಚ್ಚು ' ಎಂದು ಕರೆದಳು. ಒಕೀನಾಮಾರೋ ಮೂರ್ಖನಂತೆ ಆಕೆ ಹೇಳಿದ್ದು ನಿಜವೆಂದೇ ತಿಳಿದು ಅತ್ತ ಓಡಿಬಂದ. ಬೆಚ್ಚಿ ಹೆದರಿದ ಮಯೋಬು ಮಹಾರಾಜರ ಊಟದ ಮನೆಯ ಪರದೆಯ ಹಿಂದೆ ಓಡಿತು. ಅಚ್ಚರಿಗೊಂಡ ಮಹಾರಾಜರು ಅದನ್ನು ಎತ್ತಿಕೊಂಡು, ಅಲ್ಲಿದ್ದ ಪರಿಚಾರಕರನ್ನು ಕರೆಸಿದರು. ಪರಿಚಾರಕ ಟಡಾಟಕ ಬಂದಾಗ ಒಕೀನಾಮಾರೋ ನನ್ನು ದಂಡಿಸಿ `ನಾಯಿಗಳ ದ್ವೀಪ'ಕ್ಕೆ ಅಟ್ಟಿಬಿಡಬೇಕೆಂದು ಆದೇಶ ನೀಡಿದರು. ಪರಿಚಾರಕರೆಲ್ಲಾ ಸೇರಿ ನಾಯಿಯನ್ನು ಅಟ್ಟಾಡಿಸತೊಡಗಿದಾಗ ದೊಡ್ಡ ಗಲಭೆಯೇ ಆಯಿತು. ಮಹಾರಾಜರು ದಾದಿ ಉಮಾಳನ್ನು ಖಂಡಿಸಿ ‘ನಾವಿನ್ನು ಮಯೋಬುಗೆ ಹೊಸ ದಾದಿಯನ್ನು ನೇಮಿಸ ಬೇಕಾಗುತ್ತದೆ' ಎಂದು ಹೇಳಿಬಿಟ್ಟರು. ‘ನೀನು ಅವಳನ್ನು ಸರಿಯಾಗಿ ನೋಡಿಕೊಳ್ಳಬಲ್ಲೆ ಎಂಬ ನಂಬಿಕೆ ಈಗ ನಮಗಿಲ್ಲ' ಎಂದು ಅವರು ಹೇಳಿದಾಗ ಉಮಾ ಬಾಗಿ ವಂದಿಸಿದಳು. ನಂತರ ಅವಳೆಂದೂ ಮಹಾರಾಜರ ಎದುರಿಗೆ ಕಾಣಿಸಿಕೊಳ್ಳಲಿಲ್ಲ.

ಮಹಾರಾಜರ ಕಾವಲುಗಾರರು ಒಕೀನಾಮಾರೋನನ್ನು ಹಿಡಿದು ಅರಮನೆಯ ಪ್ರಾಂಗಣದಿಂದ ಓಡಿಸಿದರು. ಪಾಪ! ಎಷ್ಟು ಖುಶಿಯಾಗಿ ನಮ್ಮ ಸುತ್ತಮುತ್ತ ಓಡಾಡಿ ಕೊಂಡಿದ್ದ. ಇತ್ತೀಚೆಗೆ, ಮೂರನೆಯ ತಿಂಗಳ ಮೂರನೆಯ ದಿನ, ಅಧಿಕಾರಿಗಳು ಅವನನ್ನು ಅರಮನೆಯ ಮೈದಾನದ ಸುತ್ತ ಮೆರವಣಿಗೆ ಮಾಡಿದಾಗ, ಅವನ ತಲೆಮೇಲೆ ವಿಲ್ಲೋ ಎಲೆಗಳು, ಪೀಚ್ ಹೂಗಳ ಸುರಿಮಳೆಯೇ ಆಗಿತ್ತು. ಎಷ್ಟೊಂದು ಚೆರ್ರಿ ಹೂಗಳ ಹಾರಗಳು ಅವನ ಕೊರಳ ಸುತ್ತ ಬಿದ್ದಿದ್ದುವು. ತನಗೆ ಇಂತಹ ದುಸ್ಥಿತಿ ಬರಬಹುದೆಂದು ಅವನಿಗೆ ಅಂದು ಊಹಿಸಿಕೊಳ್ಳುವುದೂ ಸಾಧ್ಯವಿತ್ತೇ? ನಮಗೆಲ್ಲಾ ಅವನ ಬಗ್ಗೆ ತುಂಬಾ ದುಃಖವಾಯಿತು. ಮಹಾರಾಣಿಯವರು ಊಟ ಮಾಡುತ್ತಿದ್ದಾಗ, ‘ಒಕೀನಾಮಾರೋ ಯಾವಾಗಲೂ ನಮ್ಮೆಲ್ಲರ ಜೊತೆಯಲ್ಲೇ ಕೂತಿರುತ್ತಿದ್ದ. ಈಗೆಷ್ಟು ಬಣಬಣ ಎನ್ನಿಸುತ್ತಿದೆ' ಎಂದು ಪರಿಚಾರಕಿಯೊಬ್ಬಳು ಅವನನ್ನು ನೆನೆಸಿಕೊಂಡಳು.

ಒಕೀನಾಮಾರೋನನ್ನು ಗಡೀಪಾರು ಮಾಡಿ ಕೆಲವು ದಿನಗಳಾಗಿತ್ತು. ಮಧ್ಯಾಹ್ನದ ಸಮಯ. ಯಾವುದೋ ಒಂದು ನಾಯಿ ಹೆದರಿ ವಿಕಾರವಾಗಿ ಕಿರುಚಿಕೊಳ್ಳುತ್ತಿರುವುದು ಕೇಳಿ ಬಂತು. ಕುತೂಹಲದಿಂದ ಏನಾಗುತ್ತಿದೆಯೆಂದು ನೋಡಲು ಬೇರೆಲ್ಲಾ ನಾಯಿಗಳೂ ಹೊರಗೋಡಿದುವು. ಅಷ್ಟು ಹೊತ್ತಿಗೆ ಅರಮನೆಯ ಶೌಚ ಗೃಹಗಳನ್ನು ಸ್ವಚ್ಚ ಮಾಡುತ್ತಿದ್ದ ಹೆಂಗಸೊಬ್ಬಳು ಓಡಿ ಬಂದಳು. ‘ನೋಡೊಕಾಗೊಲ್ಲ ಇಬ್ಬರು ಪರಿಚಾರಕರು ಸೇರಿಕೊಂಡು ಒಂದು ನಾಯಿಗೆ ಹೊಡೆಯುತ್ತಿದ್ದಾರೆ ಖಂಡಿತ ಅವನನ್ನು ಕೊಂದು ಹಾಕುತ್ತಾರೆ. ಗಡಿಪಾರು ಮಾಡಿದ ಮೇಲೂ ಮರಳಿ ಬಂದದ್ದಕ್ಕಾಗಿ ಅವನಿಗೆ ಈ ಶಿಕ್ಷೆ. ಟಡಾಟಕ, ಸಾನೆಫೂಸ ಸೇರಿ ಇಂಥಾ ಕೆಲಸ ಮಾಡುತ್ತಿದ್ದಾರೆ 'ಎಂದು ಗೋಳಾಡಿದಳು. ಅಲ್ಲಿ ಹಿಂಸೆಗೆ ತುತ್ತಾಗಿದ್ದವನು ಒಕೀನಾಮಾರೋನೇ. ನನಗೆ ತುಂಬಾ ಸಂಕಟವಾಯಿತು. ಅವರಿಗೆ ಹೊಡೆತ ನಿಲ್ಲಿಸಲು ಹೇಳಲು ಒಬ್ಬ ಸೇವಕನನ್ನು ಕಳಿಸಿದೆ. ಅಷ್ಟು ಹೊತ್ತಿಗೆ ಕೂಗಾಟ ನಿಂತಿತ್ತು. ‘ಅವನು ಸತ್ತು ಹೋದ. ಅವನ ದೇಹವನ್ನು ಕಾವಲುಗಾರರು ಗೇಟಿನಾಚೆ ಎಸೆದು ಬಿಟ್ಟರು' ಎಂದು ಮತ್ತೊಬ್ಬ ಸೇವಕ ಬಂದು ನನಗೆ ಹೇಳಿದ.

ಅಂದು ಸಂಜೆ ನಾವೆಲ್ಲ ಒಕಿನಾಮಾರೋನ ಹಣೆಬರಹಕ್ಕೆ ಪೇಚಾಡಿಕೊಳ್ಳುತ್ತಾ ಅರಮನೆಯಲ್ಲಿ ಕೂತಿದ್ದಾಗ ದರಿದ್ರ ನಾಯಿಯೊಂದು ಒಳಗೆ ನಡೆದು ಬಂದಿತು. ಅದರ ಮೈ ನಡುಗುತ್ತಿತ್ತು. ಮೈಯೆಲ್ಲಾ ಭಯವಾಗುವಂತೆ ಊದಿಕೊಂಡಿತ್ತು. `ಅಯ್ಯೊ, ದೇವರೇ, ಇದು ಒಕಿನಾಮಾರೋ ಇರಬಹುದೇ? ಅವನಂತಹ ಇನ್ನೊಂದು ನಾಯಿಯನ್ನು ನಾವು ಇತ್ತೀಚೆಗೆ ನೋಡಿಲ್ಲ' ಎಂದು ಒಬ್ಬ ಪರಿಚಾರಕಿ ನುಡಿದಳು.

ನಾವದರ ಹೆಸರು ಹಿಡಿದು ಕರೆದಾಗ ಅ ನಾಯಿ ಪ್ರತಿಕ್ರಿಯಿಸಲಿಲ್ಲ. ನಾವು ಕೆಲವರು ಇದು ಒಕಿನಾಮಾರೋನೇ ಎಂದೆವು. ಕೆಲವರು ಅಲ್ಲ ಎಂದರು. ನಮ್ಮ ಚರ್ಚೆ ಕೇಳಿಸಿಕೊಂಡ ಮಹಾರಾಣಿಯವರು `ಲೇಡಿ ಯೂಕಾನ್‌ನನ್ನು ಕರೆಯಿರಿ. ಖಂಡಿತ ಅವಳಿಗೆ ತಿಳಿದೇ ತಿಳಿಯುತ್ತೆ' ಎಂದರು. ತಕ್ಷಣ ನಾವು ಯುಕಾನ್ ಕೋಣೆಗೆ ಹೋಗಿ `ತುಂಬಾ ಮುಖ್ಯ ವಿಷಯಕ್ಕಾಗಿ ಮಹಾರಾಣಿಯವರು ಕರೆಯುತ್ತಿದ್ದಾರೆ' ಎಂದು ಹೇಳಿದೆವು..

‘ಇದು ಒಕಿನಾಮಾರೋ ಅಲ್ಲವೇ?' ಎಂದು ಮಹಾರಾಣಿಯವರು ಆ ನಾಯಿಯ ಕಡೆ ಬೊಟ್ಟು ಮಾಡಿ ಕೇಳಿದರು.
‘ಖಂಡಿತ. ನೋಡೊಕೆ ಹಾಗೇ ಇದೆ. ಆದರೆ ಈ ಅಸಹ್ಯ ಪ್ರಾಣಿ ನಮ್ಮ ಒಕಿನಾಮಾರೋ ಅಂತ ನಂಬೋದೇ ಕಷ್ಟ. ನಾನು ಒಕಿನಾಮಾರೋ ಎಂದು ಕರೆದ ತಕ್ಷಣ ಅವನು ಬಾಲ ಅಲ್ಲಾಡಿಸುತ್ತ ನನ್ನತ್ತ ಓಡಿ ಬರುತ್ತಿದ್ದ. ಆದರೆ ಈ ನಾಯಿ ಏನೂ ಪ್ರತಿಕ್ರಿಯೆಯನ್ನೇ ತೋರಿಸುತ್ತಿಲ್ಲ. ಇದು ಅವನಾಗಿರೋಕೆ ಸಾಧ್ಯವೇ ಇಲ್ಲ. ಅದೂ ಅಲ್ಲದೆ, ಒಕಿನಾಮಾರೋನ ಹೊಡೆದು ಸಾಯಿಸಿ ಅವನ ದೇಹ ಎಸೆದು ಬಿಟ್ಟರೂಂತ ಹೇಳಲಿಲ್ಲವೇ? ಇಬ್ಬರು ಧಾಂಡಿಗರಿಂದ ಏಟು ತಿಂದ ಯಾವ ನಾಯಿ ತಾನೇ ಬದುಕಿರೋಕೆ ಸಾಧ್ಯ?' ಎಂದಳು ಯುಕಾನ್. ಇದನ್ನು ಕೇಳಿದ ಮಹಾರಾಣಿಯವರು ತುಂಬಾ ದುಃಖಿತರಾದರು.

ಕತ್ತಲಾಗುತ್ತಲೇ ನಾವು ಆ ನಾಯಿಗೆ ಒಂದಷ್ಟು ತಿನ್ನಲು ಕೊಟ್ಟೆವು. ಅವನು ಅದನ್ನು ಮುಟ್ಟಲೂ ಇಲ್ಲ. ಹಾಗಾದರೆ ಇದು ಖಂಡಿತ ಒಕಿನಾಮಾರೋ ಅಲ್ಲ ಎಂಬ ನಿರ್ಧಾರಕ್ಕೆ ಬಂದೆವು.

ಮಾರನೆಯ ದಿನ ಬೆಳಿಗ್ಗೆ ಪರಿಚಾರಕಿಯರು ಮಹಾರಾಣಿಯವರ ಮುಖ ತೊಳೆದು, ಕೂದಲು ಬಾಚಿ ಅಲಂಕಾರ ಮಾಡುತ್ತಿದ್ದಾಗ ನಾನು ಅಲ್ಲಿ ಹಾಜರಾದೆ. ಅವರೆದುರಿಗೆ ಕನ್ನಡಿ ಹಿಡಿದು ನಿಂತಿದ್ದಾಗ, ನಾವು ಹಿಂದಿನ ದಿನ ನೋಡಿದ್ದ ನಾಯಿ ಮೆಲ್ಲನೆ ನುಸುಳಿಕೊಂಡು ಬಂದು ಅಲ್ಲಿನ ಒಂದು ಕಂಬದ ಹಿಂದೆ ಅಡ್ಡಾಯಿತು. ‘ಪಾಪ ಒಕಿನಾಮಾರೊ, ನಿನ್ನೆ ಅವನನ್ನು ಹೇಗೆ ಹೊಡೆದರು! ಅವನು ಸತ್ತು ಹೋದಾಂದ್ರೆ ಎಷ್ಟು ದುಃಖವಾಗುತ್ತೆ. ಮುಂದಿನ ಜನ್ಮದಲ್ಲಿ ಯಾವ ದೇಹ ಹೊತ್ತು ಹುಟ್ಟುತ್ತಾನೋ ಯಾರಿಗೆ ಗೊತ್ತು.ಹುಂ! ಅವನು ಎಷ್ಟು ಯಾತನೆ ಅನುಭವಿಸಿದನೋ' ಎಂದೆ ನಾನು.

ಆ ಕ್ಷಣದಲ್ಲಿ ಆ ಕಂಬದ ಪಕ್ಕದಲ್ಲಿ ಮಲಗಿದ್ದ ನಾಯಿ ಜೋರಾಗಿ ನಡುಗುತ್ತಾ, ಬಳ ಬಳನೆ ಕಣ್ಣೀರು ಸುರಿಸತೊಡಗಿತು. ಇದನ್ನು ನೋಡಿ ನಂಬುವುದೇ ಕಷ್ಟವಾಯಿತು. ಹಾಗಾದರೆ, ಇದು ನಿಜವಾಗಿ ನಮ್ಮ ಒಕಿನಾಮಾರೋ! ಹಿಂದಿನ ರಾತ್ರಿ ತನ್ನ ಗುರುತು ಗೊತ್ತಾಗದಿರಲೀಂತ ಅವನು ನಾವು ಕರೆದಾಗ ಉತ್ತರ ಕೊಟ್ಟಿರಲಿಲ್ಲ. ನಮಗೆಲ್ಲಾ ಕನಿಕರ, ಪ್ರೀತಿ, ಖುಷಿ ಎಲ್ಲಾ ಒಟ್ಟಿಗೆ ಉಕ್ಕಿ ಬಂತು. ನಾನು ಕನ್ನಡಿ ಕೆಳಗಿಟ್ಟು ‘ಬಾ ಒಕಿನಾಮಾರೋ ಬಾ!' ಎಂದೆ. ಆಗ ಅವನು ನೆಲದುದ್ದಕ್ಕೂ ಮಲಗಿ ಜೋರಾಗಿ ಗೋಳಾಡಿದ. ಮಹಾರಾಣಿಯವರ ಮುಖ ಖುಷಿಯಿಂದ ಊರಗಲವಾಯಿತು. ಎಲ್ಲಾ ಹೆಂಗಸರೂ ಅವನ ಸುತ್ತಾ ಸೇರಿದರು. ಮಹಾರಾಣಿಯವರು ಯುಕಾನ್‌ಳನ್ನು ಬರಹೇಳಿದರು. ಎಲ್ಲರಿಗೂ ನಡೆದ ವಿಷಯ ಹೇಳಿದಾಗ ಎಲ್ಲರೂ ಅವನ ಬಗ್ಗೆಯೇ ಉತ್ಸಾಹದಿಂದ ಮಾತಡುತ್ತಾ ಸಂತೋಷ ಪಟ್ಟರು.

ಸುದ್ದಿ ಮಹಾರಾಜರನ್ನು ತಲುಪಿದಾಗ ಅವರೂ ಮಹರಾಣಿಯವರ ಕೋಣೆಗೆ ಬಂದರು. ‘ಎಂಥಾ ಆಶ್ಚರ್ಯ! ಒಂದು ನಾಯಿಗೂ ಅಷ್ಟು ಆಳವಾದ ಭಾವನೆಗಳಿರುತ್ತವೆ ಅಂತ ನಂಬುವುದೇ ಕಷ್ಟ!' ಎಂದರು. ಮಹಾರಾಜರ ಪರಿಚಾರಕಿಯರು ಈ ವಿಷಯ ತಿಳಿದ ತಕ್ಷಣ ಗುಂಪು ಕಟ್ಟಿಕೊಂಡು ಇಲ್ಲಿಗೆ ಬಂದರು. `ಒಕಿನಾಮಾರೋ!' ಎಂದು ನಾವೆಲ್ಲಾ ಕೂಗಿದಾಗ ಈ ಬಾರಿ ಅವನು ಎದ್ದು ಮುಖ ಊದಿಸಿಕೊಂದು ಕುಂಟುತ್ತಲೇ ಸುತ್ತಲೂ ನಡೆದಾಡಿದ. ‘ನಾನು ಅವನಿಗೀಗ ಊಟ ತಯಾರಿಸಬೆಕಾಗಿದೆ' ಎಂದೆ. ಮಹಾರಾಣಿಯವರು ನಗುತ್ತಾ, ‘ಹೌದು. ಕೊನೆಗೂ ಒಕಿನಾಮಾರೋ ತಾನು ಯಾರೆಂದು ನಮಗೆ ತಿಳಿಸಿದ್ದಾನಲ್ಲಾ' ಎಂದರು.

ಆಗ ಪರಿಚಾರಕ ಟಡಾಟಕನಿಗೆ ಕರೆ ಕಳಿಸಲಾಯಿತು. ಅವನು ಅಚ್ಚರಿಯಿಂದ ನೀವೆಲ್ಲಾ ಹೇಳ್ತಿರೋದು ನಿಜಾನಾ? ನಾನೇ ನೋಡೋವರೆಗೂ ನಂಬೋಕಾಗೊಲ್ಲ' ಎಂದು ಉದ್ಗಾರ ತೆಗೆದ.

‘ಅಯ್ಯೋ! ಹಾಗೆ ನೋಡಿದರೆ ಇದು ಅದೇ ನಾಯಿಯಲ್ಲ' ಎಂದು ನಾನು ಸೇವಕಿಯೊಂದಿಗೆ ಅವನಿಗೆ ಸಂದೇಶ ಕಳಿಸಿದೆ. ‘ನೀವೇನೇ ಹೇಳಿ, ಒಂದಲ್ಲಾ ಒಂದು ದಿನ ನಾನು ಆ ಪ್ರಾಣಿಯನ್ನು ನೋಡಿಯೇ ನೋಡುತ್ತೇನೆ. ನೀವು ಅವನನ್ನು ನನ್ನಿಂದ ಹಾಗೆ ಮುಚ್ಚಿಡುವುದು ಸಾಧ್ಯವೇ ಇಲ್ಲ'.ಎಂದು ಟಡಾಟಕ ಉತ್ತರ ಕಳಿಸಿದ..

ಸ್ವಲ್ಪ ದಿನಗಳಲ್ಲೇ ಒಕಿನಾಮಾರೋಗೆ ಸಾಮ್ರಾಜ್ಯದ ವತಿಯಿಂದ ಕ್ಷಮೆ ಘೋಷಿಸಲಾಯಿತು. ಮತ್ತೆ ಅವನು ಮೊದಲಿನಂತೆಯೇ ಖುಷಿಯಾಗಿ ಎಲ್ಲಾ ಕಡೆ ಕುಣಿದಾಡಿಕೊಂಡಿರುವ ಹಾಗಾದ.
ಆದರೆ ಈಗಲೂ, ಅಂದು ಅವನು ನಾವು ಸಹಾನುಭೂತಿ ತೋರಿಸಿದಾಗ ನಡುಗುತ್ತಾ ಕುಂಯ್ಗುಟ್ಟಿದು ನೆನೆಸಿಕೊಂಡರೆ ಎಂಥಾ ಅಪರೂಪದ ದಾರುಣ ದೃಶ್ಯ ಅದಾಗಿತ್ತು ಎಂದು ತಳಮಳ ವಾಗುತ್ತದೆ. ಎಲ್ಲರೂ ಆ ಬಗ್ಗೆ ನನ್ನ ಜೊತೆ ಮಾತಾಡಿದಾಗ, ನನಗೆ ಅಳುವೇ ಬಂದು ಬಿಡುತ್ತೆ.

ಐದನೆಯ ತಿಂಗಳು

ವರ್ಷದ ಐದನೆಯ ತಿಂಗಳಲ್ಲಿ ಜೋರು ಮಳೆ. ಆಗ ಮನೆಯ ಪಕ್ಕದಲ್ಲೇ ಕೊಳವಿದ್ದರೆ ಎಷ್ಟು ಚೆನ್ನ. ದಟ್ಟವಾಗಿ ಬೆಳೆದಿರುವ ಐರಿಸ್‌ಗಳು, ಹೇರಳವಾದ ಕಾಡು ಪೊದೆಗಳ ನಡುವೆ ನೀರು ಹಸಿರಾಗಿ ಕಾಣುತ್ತದೆ. ಇಡೀ ತೋಟವೂ ಅದೇ ಹಸಿರಾಗಿ ಕಾಣುತ್ತದೆ. ಅಲ್ಲೇ ದಿನವೆಲ್ಲಾ ಕೂತು ಮೋಡ ಮುಸುಕಿದ ಆಕಾಶದತ್ತ ಕಣ್ಣು ನೆಟ್ಟು ಮೈ ಮರೆಯುವುದು ಎಷ್ಟು ಚೆನ್ನ.

ನನಗೆ ಯಾವಾಗಲೂ ಕೊಳಗಳಿರುವ ಮನೆಗಳೆಂದರೆ ತುಂಬಾ ಖುಶಿ. ಬರೀ ಚಳಿಗಾಲದಲ್ಲೇ ಅಲ್ಲ, (ಆಗಂತೂ ಬೆಳಗಾಗೆದ್ದು ಕತ್ತು ಹೊರ ಹಾಕಿದರೆ ಇಡೀ ಕೊಳವೇ ಹೆಪ್ಪುಗಟ್ಟಿರುವ ದೃಶ್ಯಕ್ಕೆ ಸಮನೊಂದಿಲ್ಲ) ಇಡೀ ವರ್ಷವೂ ಹಾಗೇ. ಚೊಕ್ಕವಾಗಿ, ಎಚ್ಚರಿಕೆಯಿಂದ ಇಟ್ಟಿರುವ ಕೊಳಗಳೆಂದರೆ ನನಗೆ ಹೆಚ್ಚು ಇಷ್ಟವಿಲ್ಲ. ಅದರ ಪಾಡಿಗೆ ಅದನ್ನು ಬಿಟ್ಟು ಕಾಡು ಗಿಡಗಳಿಂದ ತುಂಬಿ ಹೋಗಿರುವ ಕೊಳಗಳೇ ಚೆನ್ನ. ರಾತ್ರಿ ಹೊತ್ತಿನಲ್ಲಿ ನಡುನಡುವೆ ಕಾಣುವ ನೀರಿನಲ್ಲಿ ಹೊಳೆಯುವ ಪೇಲವ ಚಂದ್ರನ ಬೆಳಕು. ಯಾವ ಹೊತ್ತಿನಲ್ಲಾದರು ಸರಿ, ಎಲ್ಲಾದರೂ ಸರಿ ಚಂದ್ರನ ಬೆಳಕು ನನ್ನನ್ನು ಕರಗಿಸುತ್ತದೆ.

ಏಳನೆಯ ತಿಂಗಳು

ಏಳನೆಯ ತಿಂಗಳಲ್ಲಿ ಬಿರುಗಾಳಿ ಮಳೆ ಬಂದು ತಂಪಾಗುತ್ತದೆ. ಆಗ ಬೀಸಣಿಗೆ ಜೊತೆಗಿಟ್ಟುಕೊಳ್ಳುವ ಅವಶ್ಯಕತೆಯೇ ಇಲ್ಲ. ಅಂತಹ ದಿನಗಳಲ್ಲಿ ನನಗೆ ಮಧ್ಯಾಹ್ನ ಸಣ್ಣ ನಿದ್ದೆ ಮಾಡುವುದೆಂದರೆ ಇಷ್ಟ. ಅದೂ ನವಿರಾದ ಬೆವರಿನ ಪರಿಮಳ ಸೂಸುತ್ತಿರುವ ಯಾವುದಾದರೂ ಬಟ್ಟೆ ಹೊದ್ದು!

ಎದೆ ಬಡಿತ ಹೆಚ್ಚಿಸುವ ವಿಷಯಗಳು
ತಮ್ಮ ಮರಿಗಳಿಗೆ ಗುಟುಕು ಕೊಡುತ್ತಿರುವ ಗುಬ್ಬಚ್ಚಿಗಳು.
ಪುಟಾಣಿ ಮಕ್ಕಳು ಆಡುತ್ತಿರುವ ಸ್ಥಳದ ಸನಿಹದಲ್ಲಿ ನಡೆದುಹೋಗುವ ಖುಷಿ.
ನವಿರಾದ ಪರಿಮಳದ ಊದುಕಡ್ಡಿ ಹಚ್ಚಿರುವ ಕೋಣೆಯಲ್ಲಿ ನಿದ್ದೆ ಮಾಡುವುದು.
ಅಂದವಾದ ಚೀನೀ ಕನ್ನಡಿ ಸ್ವಲ್ಪ ಮಸುಕಾಗಿರುವ ವಿಷಯ ಗಮನಕ್ಕೆ ಬರುವುದು.
ತಲೆಗೂದಲು ತೊಳೆದು, ಅಲಂಕಾರ ಮಾಡಿಕೊಂಡು, ಪರಿಮಳಯುಕ್ತವಾದ
ನಿಲುವಂಗಿತೊಡುವುದು; ನಂತರ ಒಬ್ಬರ ಕಣ್ಣಿಗೂ ಬೀಳದಿದ್ದರೂ, ಆ ತಯಾರಿಯೇ ಮನದಾಳದಲ್ಲಿ ಎಂತಹ ಮುದ ಕೊಡುತ್ತದೆಯಲ್ಲವೇ?
ರಾತ್ರಿಯಾಗಿ, ಗೆಳೆಯನಿಗಾಗಿ ಕಾದಿರುವಾಗ, ಇದ್ದಕ್ಕಿದ್ದಂತೆ ಜೋರಾಗಿ ಬೀಸುವ ಗಾಳಿ ಕಿಟಕಿ ಬಾಗಿಲುಗಳಿಗೆ ಹೊಡೆದಾಗ ಒಳಬರುವ ಮಳೆಹನಿಗಳ ಶಬ್ದ.

ಸೆಯಿ ಶೋನಗೋನಳ ತಲೆದಿಂಬಿನಡಿಯ ಡೈರಿಗಳು- ಭಾಗ ೩

ಅವಮಾನಕರ ವಿಷಯಗಳು !

ಕಳ್ಳನೊಬ್ಬ ಒಂದು ಮನೆಯೊಳಗೆ ನುಸುಳಿ ಸುತ್ತಮುತ್ತ ನಡೆಯುವುದನ್ನೆಲ್ಲಾ ಗುಟ್ಟಾಗಿ ಕಾಣಬಹುದಾದ ಒಂದು ಮೂಲೆಯಲ್ಲಿ ಅಡಗಿ ಕೂತಿದ್ದಾನೆಂದುಕೊಳ್ಳಿ. ಆ ಕತ್ತಲು ಕೋಣೆಗೆ ಇನ್ನೊಬ್ಬ ವ್ಯಕ್ತಿ ಬಂದು, ಅಲ್ಲಿದ್ದ ವಸ್ತು ಒಂದನ್ನು ಎತ್ತಿಕೊಂಡು ಮೆಲ್ಲಗೆ ಜೇಬಿನಲ್ಲಿ ಬಿಟ್ಟುಕೊಂಡರೆ.... ತನ್ನದೇ ಸ್ವಭಾವದ ಇನ್ನೊಬ್ಬ ವ್ಯಕ್ತಿಯನ್ನು ಕಂಡು ಇವನಿಗೆ ಎಷ್ಟು ಮೋಜೆನಿಸಬಹುದಲ್ಲವೆ! (ಇಲ್ಲಿ ಆ ವ್ಯಕ್ತಿ ಗಂಡೇ ಹೆಣ್ಣೇ ಎಂಬುದನ್ನು ಶೋನಗೋನ್ ಸ್ಪಷ್ಟ ಪಡಿಸಿಲ್ಲ. ಈ ಘಟನೆ ನೋಡಿದವನಿಗೆ ಮೋಜು; ಕಳ್ಳತನ ಮಾಡುತ್ತಾ ಸಿಕ್ಕಿಹಾಕಿಕೊಂಡವರಿಗೆ ಅವಮಾನಕರ ಎಂದು ಮಾತ್ರ ಹೇಳಿದ್ದಾಳೆ. ಈ ರೀತಿಯ ಸಣ್ಣ ಪುಟ್ಟ ಕಳ್ಳತನಗಳು ಶೋನಗೋನ್ ಮತ್ತು ಅವಳ ಸಹೋದ್ಯೋಗಿ ಹುಡುಗಿಯರು ಇರುತ್ತಿದ್ದಂತಹ ವಸತಿಗೃಹಗಳಲ್ಲಿ ಸಾಮಾನ್ಯವಾಗಿತ್ತು.)

ರಾತ್ರಿ ಪಾಳಿಯಲ್ಲಿರುತ್ತಿದ್ದ ಸನ್ಯಾಸಿಗಳು ಹಲವಾರು ಬಾರಿ ಅವಮಾನಕರ ವಿಷಯಗಳನ್ನು ಎದುರಿಸಬೇಕಾಗಿತ್ತು. ಅವರು ಬೇಗ ಎಚ್ಚರವಾಗುವ ಸ್ವಭಾವದವರಾಗಿದ್ದರಂತೂ ಸರಿಯೇ ಸರಿ. (ಅರಮನೆಗಳಲ್ಲಿ ಕೆಲವು ರಾತ್ರಿ ಪಾಳಿಯ ಸನ್ಯಾಸಿಗಳು ಇರಲೇ ಬೇಕಾಗುತ್ತಿತ್ತು. ಅಕಸ್ಮಾತ್ ಯಾರಿಗಾದರು ಹುಶಾರು ತಪ್ಪಿದರೆ, ಅಥವಾ ಬೇರೇನಾದರು ಆಪತ್ತು ಎದುರಾದರೆ ತಕ್ಷಣ ಅವರನ್ನು ಕರೆಯಲಾಗುತ್ತಿತ್ತು. ಇವರ ಕೋಣೆ ಶೋನಗೋನ್ ಮತ್ತು ಅವಳ ಜೊತೆಯ ಹೆಂಗಸರು ಇರುತ್ತಿದ್ದ ಕೋಣೆಯ ಮೇಲೇ ಇತ್ತು. ಹಾಗಾಗಿ, ಮತ್ತು ಅವರ ಕೋಣೆಗಳು ಜಪಾನೀ ಶೈಲಿಯಲ್ಲಿ ತೆಳ್ಳನೆಯ ಮರದಿಂದ ಮಾಡಿದ್ದಾದ್ದರಿಂದ, ಈ ಸನ್ಯಾಸಿಗಳಿಗೆ ರಾತ್ರಿ ಹೊತ್ತು ಆ ಹೆಣ್ಣು ಮಕ್ಕಳ ಮಾತುಗಳು ನಿಚ್ಚಳವಾಗಿ ಕೇಳಿಸುತ್ತಿತ್ತು.)

ಇವರಿಗೆ ಹುಡುಗಿಯರ ಗುಂಪುಗಳು ಬೇರೆಯವರ ಬಗ್ಗೆ ತಮಾಷೆ ಮಾಡಿಕೊಳ್ಳುವುದು, ಅವರನ್ನು ಬೈದು ಕೊಳ್ಳುವುದು, ಶಾಪ ಹಾಕುವುದು ಎಲ್ಲಾ ಕೇಳಿಸುತ್ತಿತ್ತು. ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಾ ಹತ್ತಿರವೇ ಮಲಗಿರುವ ಸನ್ಯಾಸಿಗೆ ಎಷ್ಟು ನಾಚಿಕೆ ಆಗಬೇಡ. ಮಹಾರಾಣಿಯ ಕೆಲವು ವಯಸ್ಸಾದ ಪರಿಚಾರಕಿಯರು ಈ ಹುಡುಗಿಯರಿಗೆ ಅಷ್ಟು ಗಲಾಟೆ ಮಾಡಬೇಡಿ ಎಂದು ಎಚ್ಚರಿಸುತ್ತಿದ್ದರು. ಆದರೆ ಆ ಬುದ್ಧಿವಾದವನ್ನೆಲ್ಲಾ  ಕಿವಿ ಮೇಲೇ ಹಾಕಿಕೊಳ್ಳದೆ ಅವರು ನಿದ್ದೆ ಬರುವವರೆಗೂ ಅಸಭ್ಯ ಕಾಡು ಹರಟೆಯಲ್ಲಿ ತಲ್ಲೀನರಾಗಿಯೇ ಇರುತ್ತಿದ್ದರು. ಅವರು ನಿದ್ದೆ ಹೋದ ಮೇಲೂ ಆ ಸನ್ಯಾಸಿಗೆ ಎಷ್ಟು ನಾಚಿಗೇಡು ಅನ್ನಿಸುತ್ತಲೇ ಇರಬಹುದಲ್ಲವೇ!

ಒಬ್ಬ ಪುರುಷನ ಮನಸ್ಸಂತೂ ತೀರಾ ನಾಚಿಕೆಗೆಟ್ಟದ್ದೇ. ಅವನಿಗೆ ಅಷ್ಟುಇಷ್ಟವಿಲ್ಲದ, ಬೇಸರ ತರಿಸುವ ಹೆಣ್ಣೊಂದಿಗೆ ಇರುವಾಗಲೂ ಅವನು ತನಗವಳು ಸೇರದಿರುವ ವಿಷಯವನ್ನು ಬಹಿರಂಗ ಪಡಿಸುವುದಿಲ್ಲ. ಅದರ ಬದಲು ಅವಳು ತನ್ನನ್ನು ನಂಬುವಂತೆ ಮಾಡುತ್ತಾನೆ. ಅದಕ್ಕಿಂತ ಕೇಡೆಂದರೆ, ತುಂಬಾ ಸ್ನೇಹಮಯಿಯೆಂದೂ, ಸೌಮ್ಯಸ್ವಭಾವದವನೆಂದೂ ಹೆಸರಾದವನು ಅವನ ಗೆಳತಿಯ ಜೊತೆ ಹೇಗೆ ನಡೆದುಕೊಳ್ಳುತ್ತಾನೆಂದರೆ, ಅವನ ಭಾವನೆಗಳು ಪ್ರಾಮಾಣಿಕವಾದ್ದೆಂದೇ ಅವಳು ಭಾವಿಸಬೇಕು. ಆದರೆ ಅವನು ಕೇವಲ ತನ್ನ ಮನಸ್ಸಿನಲ್ಲೇ ಅಲ್ಲ, ಬಾಯಿಮಾತುಗಳಲ್ಲಿ ಕೂಡಾ ಅಪ್ರಾಮಾಣಿಕನಾಗಿರುತ್ತಾನೆ. ಏಕೆಂದರೆ ಅವಳ ಜೊತೆ ಬೇರೆ ಹೆಂಗಸರ ಬಗ್ಗೆ ಕೆಟ್ಟದಾಗಿ ಮಾತಾಡಿದಂತೆ,  ಅವನು ಬೇರೆ ಹೆಂಗಸರೊಂದಿಗೆ ಅವಳ ಬಗ್ಗೆ ಕೆಟ್ಟದಾಗಿ ಮಾತಾಡುತ್ತಾನೆ. ಅವನ ಗೆಳತಿಗೆ ತನ್ನ ಬಗ್ಗೆ ಹರಡುತ್ತಿರುವ ಅಪಪ್ರಚಾರದ ಬಗ್ಗೆ ಅರಿವೇ ಇರುವುದಿಲ್ಲ. ಬೇರೆಯವರ ಬಗ್ಗೆ ಅವನ ಕಟು ಮಾತುಗಳನ್ನು ಕೇಳಿ ಅವಳು ಅವನು ತನ್ನನ್ನು ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸುತ್ತಾನೆಂದೇ ತಿಳಿಯುತ್ತಾಳೆ. ಅವನಿಗೆ ಅವಳ ಮನಸ್ಸಿನಲ್ಲಿ ಏನಾಗುತ್ತಿದೆ ಎನ್ನುವುದೂ ಚೆನ್ನಾಗಿ ಗೊತ್ತು. ಎಂಥಾ ನಾಚಿಕೆಗೇಡು!

ಅವರಿಬ್ಬರ ಸಂಬಂಧ ಮುರಿದಿದೆ. ನಂತರ ಎಂದಾದರೂ ಹಳೇ ಪ್ರೇಮಿ ಭೇಟಿಯಾದಾಗ ಅವನು ಅವಳನ್ನು ಹೃದಯ ಹೀನೆಯೆಂದು ಕರೆದರೆ ಅವಳೇನು ಅವಮಾನ ಪಟ್ಟುಕೊಳ್ಳ ಬೇಕಿಲ್ಲ. ಆದರೆ ಅಷ್ಟೊಂದು ಯಾತನಾಮಯವಾದ ಅಗಲಿಕೆಯ ಕ್ಷಣದ ಬಗ್ಗೆ ತನಗೇನೂ  ಅನ್ನಿಸುವುದಿಲ್ಲವೆಂಬಂತೆ ಅವಳ ಪ್ರೇಮಿ ಅಸಡ್ಡೆಯಿಂದ ನಡೆದುಕೊಂಡರೆ, ಅವಳು ಅಚ್ಚರಿಗೊಂಡು ಇದೆಂಥಾ ಮನಸ್ಸು ಇವನದು ಎಂದು ವಿಸ್ಮಯ ಪಡುವುದು ಸಹಜ. ತನ್ನದೇ ನಿರ್ದಯ ಧೋರಣೆಗೆ ಗಮನವೇ ಕೊಡದೆ ಅವನು ಮಹಾ ಸಭ್ಯನಂತೆ ಬೇರೆಯವರ ನಡತೆಯನ್ನು ಖಂಡಿಸಿದರೆ ಅದಕ್ಕಿಂತ ಅವಮಾನಕರವಾದ್ದು ಏನಿದೆ?

ಇನ್ನು ಒಬ್ಬ ಗಂಡಸು ಒಬ್ಬ ಅಮಾಯಕ ಅರಮನೆಯ ಪರಿಚಾರಕಿಯನ್ನು ಮರುಳು ಮಾಡಿ, ಅವಳು ಗರ್ಭಿಣಿಯಾದಾಗ ಅವಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ಪರಾರಿಯಾದರೆ ಅದಕ್ಕಿಂತ ನಾಚಿಕೆಗೇಡು ಇನ್ನೇನೂ ಇಲ್ಲ.

ಎರಡನೇ ತಿಂಗಳ ಕೊನೆಯ ದಿನ

ಎರಡನೇ ತಿಂಗಳ ಕೊನೆಯ ದಿನ. ಜೋರು ಗಾಳಿ, ಕಡು ಬೂದು ಬಣ್ಣದ ಆಕಾಶ, ಸ್ವಲ್ಪ ಹಿಮದ ನಡುವೆ ಕಾರ್ಯಾಲಯದಿಂದ ಬಂದ ವ್ಯಕ್ತಿ ‘ ಕಪ್ಪು ಬಾಗಿಲಿ'ಗೆ ಬಂದು ನನ್ನೊಡನೆ ಮಾತಾಡಬೇಕೆಂದು ಹೇಳಿದ. ನಂತರ ನನ್ನ ಹತ್ತಿರ ಬಂದು ಸಾಮ್ರಾಜ್ಯದ ಸಲಹೆಗಾರನಾದ ಕಿಂಟೋ ಅವರು ಕಳಿಸಿದರೆಂದು ಒಂದು ಪತ್ರ ಕೊಟ್ಟ. ಒಂದು ಚಿಕ್ಕ ಹಾಳೆಯ ಮೆಲೆ ಹೀಗೆ ಬರೆಯಲಾಗಿತ್ತು.

ಈ ಕ್ಷಣ ನನ್ನ ಎದೆಯಾಳದಲ್ಲಿ
ವಸಂತನ ಆಗಮನವಾದಂತೆ ಅನ್ನಿಸಿದೆ..

ಅಂದಿನ ಹವಾಮಾನಕ್ಕೆ ಆ ಸಾಲುಗಳು ತುಂಬಾ ಸೂಕ್ತವಾಗಿದ್ದುವು: ಆದರೆ ಅದರರ್ಥ ಮೊದಲ ಸಾಲುಗಳನ್ನು ನಾನು ಬರೆದು ಕಳಿಸಬೇಕೆಂದಿದ್ದರಿಂದ ನನಗೆ ಆತಂಕವಾಯಿತು. ಅಲ್ಲಿ ಯಾರು ಯಾರು ಇದ್ದರೆಂದು ಆ ಸಂದೇಶ ತಂದವನನ್ನು ಕೇಳಿದೆ. ಅವನು ಅಲ್ಲಿದ್ದವರ ಹೆಸರುಗಳನ್ನು ಹೇಳಿದ. ಅವರೆಲ್ಲಾ ನನ್ನಲ್ಲಿ ಉತ್ಸಾಹ ತುಂಬುವ ಜನರೇ ಆಗಿದ್ದರು. ಆದರೆ ಅವರೆಲ್ಲರ ನಡುವೆ ಕಿಂಟೊ ಇದ್ದದ್ದರಿಂದ ನನಗೆ ಸಾಮಾನ್ಯ ಪ್ರತಿಕ್ರಿಯೆ ಕೊಡುವುದು ಬೇಡವೆನಿಸಿತು. (ಖ್ಯಾತ ಕವಿ, ಸಂಗೀತಕಾರ, ಸಾಹಿತ್ಯ ವಿಮರ್ಶಕ, ಸುಂದರ ಕೈಬರಹ ನಿಪುಣನಾಗಿದ್ದ ಫುಜಿವಾರಾ ನೊ ಕಿಂಟೋ ನನ್ನು ೯೯೨ನೇ ಇಸವಿಯಲ್ಲಿ ಸಾಮ್ರಾಜ್ಯಕ್ಕೆ ಸಲಹೆಗಾರನಾಗಿ ನೇಮಿಸಲಾಗಿತ್ತು) ಯಾರೂ ಈ ಸಂದರ್ಭದಲ್ಲಿ ಜೊತೆಗಿಲ್ಲದೆ ನಾನು ಒಂಟಿ ಎನ್ನಿಸಿತು. ಮಹಾರಾಣಿಯವರೊಂದಿಗೆ ನನ್ನ ಇಕ್ಕಟ್ಟಿನ ಬಗ್ಗೆ ಚರ್ಚೆ ಮಾಡಬಹುದಿತ್ತು. ಆದರೆ ಅವರು ಮಹಾರಾಜರೊಂದಿಗೆ ವಿರಮಿಸಿದ್ದರು.

ಸಂದೇಶ ತಂದಿದ್ದ ಸೇವಕನೋ, ಅವಸರಿಸ ತೊಡಗಿದ. ಪೆದ್ದು ಪೆದ್ದಾಗಿ ಉತ್ತರ ಕೊಡುವುದರ ಜೊತೆಗೆ ತಡವೂ ಮಾಡಿದರೆ ನನ್ನ ಮಾನ ಪೂರ್ತಿ ಹೋದಂತೆಯೇ. ‘ಈಗ ಏನೂ ಮಾಡೋಕಾಗೊಲ್ಲ' ಎಂದುಕೊಂಡು, ಉದ್ವೇಗದಿಂದ ನಡುಗುತ್ತಿದ್ದ ಕೈಗಳಿಂದ ಹೀಗೆ ಬರೆದೆ.

ತಾವು ಮೊಗ್ಗುಗಳೇನೋ ಅಂದುಕೊ೦ಡಿರುವ ಹಿಮದ ತುಣುಕುಗಳು
ಚಳಿಗಾಲದ ಆಗಸದುದ್ದಕ್ಕೂ ಚದುರಿವೆ.

ಈ ಕವನವನ್ನು ಸಂದೇಶ ತಂದವನಿಗೆ ಕೊಟ್ಟು ಕಿಂಟೋ ಮತ್ತು ಅಲ್ಲಿದ್ದವರೆಲ್ಲರಿಗೆ ಏನನ್ನಿಸಬಹುದು ಎಂದು ಆತಂಕ ಪಟ್ಟುಕೊಳ್ಳತೊಡಗಿದೆ. ಅವರೇನಂದರು ಎಂಬುದನ್ನು ತಿಳಿದುಕೊಳ್ಳಲು ತೀವ್ರ ತವಕವಿದ್ದರೂ, ಅವರು ಅಹಿತಕರ ತೀರ್ಮಾನ ತೆಗೆದುಕೊಂಡಿದ್ದರೆ ಅದನ್ನು ಕೇಳದಿರುವುದೇ ವಾಸಿ ಎನ್ನಿಸಿತು.

ನನ್ನ ಉತ್ತರ ಅಲ್ಲಿ ತಲುಪಿದಾಗ ಅರಮನೆ ಕಾವಲುಗಾರರ ನಾಯಕ ಕೂಡ ಅಲ್ಲಿದ್ದನಂತೆ. ಅವನು ಹೇಳಿದ ಪ್ರಕಾರ ಆಗ ಅಲ್ಲಿದ್ದ ಸಾಮ್ರಾಜ್ಯ ಸಲಹೆಗಾರ ಹಾಗೂ ಶ್ರೇಷ್ಟ ಕವಿ ತೋಶಿಕಾತಾ ಹೀಗೆ ತೀರ್ಪು ಕೊಟ್ಟರಂತೆ: ಈ ಪ್ರಸಂಗದಿಂದ ಅವಳಿಗೆ ಅರಮನೆಯ ಪರಿಚಾರಕಿಯರ ಕಾರ್ಯಾಲಯದಲ್ಲಿ ನೇಮಕಗೊಳ್ಳುವ ಅರ್ಹತೆ ಇರುವುದು ತಿಳಿಯುತ್ತಿದೆ.

ನಲ್ಮೆಯ ನೆನಪುಗಳನ್ನು ಮರಳಿ ತರುವ ವಿಷಯಗಳು

ಒಣಗಿದ ಹಾಲಿಹಾಕ್ ಹೂವು.
ಗೊಂಬೆಗಳ ಪ್ರದರ್ಶನದಲ್ಲಿ ಉಪಯೋಗಿಸಿದ ವಸ್ತುಗಳು.
ಹಳೇ ಪುಸ್ತಕದ ಎರಡು ಹಾಳೆಗಳ ನಡುವೆ ಒತ್ತಿಟ್ಟ ಕಡು ನೇರಿಳೆ ಬಣ್ಣದ ಬಟ್ಟೆಯ ಚೂರು.
ದಿನವೆಲ್ಲಾ ಮಳೆ ಸುರಿಯುತ್ತಲೇ ಇದ್ದು ಬೇಸರವಾಗುತ್ತಿರುವಾಗ ಕಾಲ ಕಳೆಯಲು ಹಳೆಯ ಕಾಗದ ಪತ್ರಗಳನ್ನು ನೋಡುತ್ತಿರುತ್ತೇವೆ. ಆಗ ತಟ್ಟನೆ ಸಿಗುವ ಹಳೆಯ ಪ್ರೇಮಿಯ ಪತ್ರ.
ಕಳೆದ ವರ್ಷದ ಕಾಗದದ ಬೀಸಣಿಗೆ.
ಚಂದ್ರ ಸ್ಪಷ್ಟವಾಗಿ ಕಾಣುತ್ತಿರುವ ಒಂದು ರಾತ್ರಿ.

ಸೆಯಿ ಶೊನಗೋನಳ ತಲೆದಿಂಬಿನಡಿಯ ಡೈರಿಗಳು - ೪

ಬೆಳದಿಂಗಳ ಮೌನ

ಅದೊಂದು ಬೆಳದಿಂಗಳ ರಾತ್ರಿ. ಎಂಟನೇ ತಿಂಗಳ ಹತ್ತನೇ ದಿನ. ಮಹಾರಾಣಿಯವರು ವರಾಂಡಾದಲ್ಲಿ ವಿರಮಿಸುತ್ತಾ ಕೂತಿದ್ದಾಗ ಯುಕೊನ್ ನೊ ನೈಶಿ ಅವರಿಗಾಗಿ ಕೊಳಲು ನುಡಿಸುತ್ತಿದ್ದಳು. ಇತರ ಪರಿಚಾರಿಕೆಯರು ಅಲ್ಲೇ ಗುಂಪಾಗಿ ಕೂತು ನಗುತ್ತಾ ಹರಟೆ ಹೊಡೆಯುತ್ತಿದ್ದರು. ನನ್ನ ಪಾಡಿಗೆ ನಾನು ವರಾಂಡ ಮತ್ತು ಹಜಾರದ ನಡುವಿನ ಕಂಬಕ್ಕೆ ಒರಗಿ ನಿಂತಿದ್ದೆ. `ಯಾಕಷ್ಟು ಮೌನವಾಗಿದ್ದೀ? ಏನಾದರೂ ಮಾತಾಡು, ನೀನು ಮಾತಾಡದೆ ಇದ್ದಾಗ ವಿಷಾದಕರವಾಗಿರುತ್ತೆ` ಎಂದು ಮಹಾರಾಣಿಯವರು ಹೇಳಿದರು. `ನಾನು ಈ ಶರತ್ಕಾಲದ ಚಂದ್ರನನ್ನು ನೋಡುತ್ತಿದ್ದೇನೆ` ಎಂದು ಉತ್ತರ ಕೊಟ್ಟೆ. `ಆಹ್, ಹೌದು! ನೀನು ಹೀಗೇ ಏನೋ ಹೇಳುತ್ತೀಯಾ ಅಂತ ಗೊತ್ತಿತ್ತು` ಎಂದರು ಅವರು.

ಅಂದು ಸಾಮ್ರಾಜ್ನಿಯ ಜೊತೆ ಹಲವಾರು ಜನರಿದ್ದರು

ಹಿರಿಯ ಪರಿಚಾರಕರು, ಯುವ ಗಣ್ಯರೂ ಸೇರಿ ಅಷ್ಟೊಂದು ಜನ ಅವತ್ತು ಮಹಾರಾಣಿಯವರ ಎದುರು ಸೇರಿದ್ದಾಗ ನಾನು ಒಂದು ಕಂಬಕ್ಕೆ ಒರಗಿಕೊಂಡು ಬೇರೆ ಹುಡುಗಿಯರ ಜೊತೆ ಮಾತಾಡುತ್ತಿದ್ದೆ. ಇದ್ದಕ್ಕಿದ್ದಂತೆ ಮಹಾರಾಣಿಯವರು ನನ್ನತ್ತ ಒಂದು ಚಿಕ್ಕ ಚೀಟಿ ಎಸೆದರು. ನಾನು ನಿನ್ನನ್ನು ಪ್ರೀತಿಸಬೇಕೇ ಇಲ್ಲವೇ? ನನ್ನ ಹೃದಯದಲ್ಲಿ ನಿನಗೆ ಮೊದಲ ಸ್ಥಳ ಕೊಡಲು ನನಗೆ ಸಾಧ್ಯವಾಗದೆ ಹೋದರೆ ಏನು ಮಾಡುತ್ತೀಯಾ? ಎಂದು ಅದರಲ್ಲಿ ಬರೆದಿತ್ತು. ಖಂಡಿತ ಇತ್ತೀಚೆಗೆ ನಾವು ಮಾತಾಡುತ್ತಿದ್ದಾಗ ನಾನು ಅಂದ ಮಾತುಗಳನ್ನು ಅವರು ಮನಸ್ಸಿನಲ್ಲಿಟ್ಟುಕೊಂಡಿದ್ದರು. ನಾನು ಯಾರ ಹೃದಯದಲ್ಲೇ ಆಗಲಿ ಮೊದಲ ಸ್ಥಾನ ಗಳಿಸದಿದ್ದರೆ, ನನ್ನನ್ನು ಅವರು ಪೂರ್ತಿ ದೂರ ಮಾಡುವುದೇ ವಾಸಿ ಎನ್ನಿಸುತ್ತದೆ. ಹಾಗೆ ನೋಡಿದರೆ ಅಂಥವರು ನನ್ನನ್ನು ದ್ವೇಷಿಸುವುದು ಅಥವಾ ಪೀಡಿಸುವುದೇ ವಾಸಿ.ಯಾರ ಹೃದಯದಲ್ಲೂ ಎರಡನೆಯ, ಮೂರನೆಯ ಸ್ಥಾನ ಗಳಿಸುವುದರ ಬದಲು ಸತ್ತು ಹೋಗುವುದು ವಾಸಿ. ಹೌದು, ನಾನು ಯಾವಾಗಲೂ ಮೊದಲಿಗಳಾಗಿರಬೇಕು ಎಂದಿದ್ದೆ. ಅದನ್ನು ಕೇಳಿ ಯಾರೋ ಅಂದಿದ್ದರು, ಓಹೋ, ಇಲ್ಲಿ ನೋಡಿ ಇನ್ನೊಂದು `ಪದ್ಮ ಸೂತ್ರ'! (ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಸೂತ್ರಗಳಲ್ಲಿ `ಪದ್ಮ ಸೂತ್ರ' ಮೊದಲ ಸ್ಥಾನ ಪಡೆದಿದೆ) ನಾವೆಲ್ಲಾ ಜೋರಾಗಿ ನಕ್ಕಿದ್ದೆವು.

ಆಗ ಮಹಾರಾಣಿಯವರು ನನಗೆ ಒಂದು ಕುಂಚ ಮತ್ತು ಅಷ್ಟು ಕಾಗದ ಕೊಟ್ಟರು. ನಾನವರಿಗೆ ಕೆಳಕಂಡಂತೆ ಬರೆದು ಹಿಂದಿರುಗಿಸಿದೆ.
`ಪದ್ಮ ಸೂತ್ರದ ಒಂಭತ್ತು ದರ್ಜೆಗಳಲ್ಲಿ ನನಗೆ ಅತ್ಯಂತ ಕೆಳಗಿನದು ಸಿಕ್ಕರೂ ತೃಪ್ತಳಾಗುತ್ತೇನೆ.'
`ನೋಡಿಲ್ಲಿ, ಅಷ್ಟೊಂದು ಕೆಳಗಿಳಿಯಬೇಡ. ಅದು ಸರಿಯಲ್ಲ, ನೀನು ಮೊದಲು ಯೋಚನೆ ಮಾಡುತ್ತಿದ್ದ ರೀತಿಯೇ ನನಗಿಷ್ಟವಾಗಿತ್ತು` ಎಂದು ಮಹಾರಾಣಿಯವರು ಹೇಳಿದರು.
`ನನ್ನ ನಿಲುವು ನೀವು ಯಾರ ಬಗ್ಗೆ ಮಾತಾಡುತ್ತಿದ್ದೀರಿ ಎನ್ನುವುದರ ಮೇಲೆ ಅವಲಂಬಿಸಿರುತ್ತೆ` ಎಂದೆ.
`ಅದು ತುಂಬಾ ತಪ್ಪು. ಅತಿ ಮುಖ್ಯವಾದ ವ್ಯಕ್ತಿಗಳ ಮನದಲ್ಲಿ ಕೂಡಾ ನೀನು ಮೊದಲಿಗಳಾಗಿರಲು ಪ್ರಯತ್ನಿಸಬೇಕು` ಎಂದು ಅವರೆಂದಾಗ ನನಗೆ ತುಂಬಾ ಖುಷಿಯಾಯಿತು.

ಹಾಲೂಡಿಸುವ ದಾದಿ


ಅರಮನೆಯಲ್ಲಿ ಐದನೆಯ ಶ್ರೇಣಿಯಲ್ಲಿದ್ದ, ಹಾಲೂಡಿಸುವ ದಾದಿಯೊಬ್ಬಳು ಇವತ್ತು ಹುವಗಾ ಪ್ರಾಂತ್ಯಕ್ಕೆ ಹೊರಟಳು. ಬೀಳ್ಕೊಡುವಾಗ ಅವಳಿಗೆ ಉಡುಗೊರೆಯಾಗಿ ಕೊಟ್ಟಿದ್ದ ಬೀಸಣಿಗೆ ಗಳಲ್ಲಿ ಒಂದರ ಮೇಲೆ ಒಂದು ಕಡೆ ನಾವಿಕನ ವಿಶ್ರಾಂತಿ ಗೃಹವನ್ನು ಹೋಲುವ ಚಿತ್ರವಿತ್ತು. ಅದರ ಇನ್ನೊಂದು ಕಡೆ ಜೋರು ಬಿರುಗಾಳಿ ಮಳೆಯಲಿ ಸಿಕ್ಕ ರಾಜಧಾನಿಯನ್ನು ದಿಟ್ಟಿಸಿ ನೋಡುತ್ತಿರುವ ವ್ಯಕ್ತಿಯ ಚಿತ್ರವಿತ್ತು. ಅದು ಒಂದು ಸಾಧಾರಣ ಗದ್ಯವೆಂಬಂತೆ, ಆ ಚಿತ್ರದ ಕೆಳಗೆ ಮಹಾರಾಣಿಯವರು ಒಂದೆರಡು ಸಾಲು ಬರೆದಿದ್ದರು: `ನೀನು ಇಲ್ಲಿಂದ ದೂರ ಹೋಗಿ ಪೂರ್ವದಲ್ಲಿ ಅಷ್ಟೊಂದು ಕೆಂಪಾಗಿ ಹೊಳೆಯುವ ಸೂರ್ಯನಿಗೆ ಮುಖ ಮಾಡಿ ನಿಂತಾಗ, ನೀನು ಬಿಟ್ಟು ಹೋಗಿರುವ ಈ ಶಹರದಲ್ಲಿ ಸತತವಾಗಿ ಮಳೆಯನ್ನು ದಿಟ್ಟಿಸುತ್ತಿರುವ ನಿನ್ನ ಗೆಳೆಯ ಗೆಳತಿಯರನ್ನು ನೆನಪು ಮಾಡಿಕೋ` ಅಷ್ಟು ಮನಮುಟ್ಟುವ ಸಂದೇಶ ಓದಿದಾಗ ಅಂಥಾ ಒಡತಿಯನ್ನು ಬಿಟ್ಟು ನಾನಂತೂ ದೂರ ಎಲ್ಲೂ ಹೋಗಲಾರೆ ಎನ್ನಿಸಿತು.

ಬಡಗಿಗಳ ರೀತಿಯೇ ವಿಚಿತ್ರ


ಬಡಗಿಗಳು ಊಟ ಮಾಡುವ ರೀತಿ ನಿಜವಾಗಿಯೂ ವಿಚಿತ್ರವೆನ್ನಿಸುತ್ತದೆ. ಅವರು ಪ್ರಧಾನ ಕಟ್ಟಡದ ಕೆಲಸ ಮುಗಿಸಿ ಪೂರ್ವ ಭಾಗಕ್ಕೆ ಬಂದಾಗ ಕೆಲವು ಬಡಗಿಗಳು ಊಟ ಮಾಡಲು ನೆಲದ ಮೇಲೆ ಸಾಲಾಗಿ ಕುಳಿತರು. ನಾನು ವರಾಂಡಾದಲ್ಲಿ ಕೂತು ಅವರನ್ನು ನೋಡುತ್ತಿದ್ದೆ. ಊಟ ಬರುತ್ತಿದ್ದಂತೆಯೇ ತಮ್ಮ ಸೂಪ್ ಬಟ್ಟಲುಗಳ ಮೇಲೆ ಮುಗಿಬಿದ್ದರು. ಅದರಲ್ಲಿ ಇದ್ದುದೆಲ್ಲವನ್ನೂ ಗಟಗಟನೆ ಕುಡಿದು ಮುಗಿಸಿದರು. ತಕ್ಷಣ ಅ ಬಟ್ಟಲುಗಳನ್ನು ಪಕ್ಕಕ್ಕೆ ತಳ್ಳಿ ಬೇಗ ಬೇಗ ತರಕಾರಿ ಮುಗಿಸಿದರು. ನನಗೆ ಅವರು ಅನ್ನ ತಿನ್ನುವರೋ ಇಲ್ಲ ಹಾಗೇ ಬಿಟ್ಟು ಬಿಡುವರೋ ಎಂದು ಅನುಮಾನವಾಗುತ್ತಿತ್ತು. ಮರುಕ್ಷಣವೇ ಅನ್ನ ಗಬಗಬನೆ ತಿಂದು ಒಂದು ಅಗುಳೂ ಮಿಕ್ಕದಂತೆ ಖಾಲಿ ಮಾಡಿದರು.

(ಅಲ್ಲಿ ಸಾಧಾರಣವಾಗಿ ಸೂಪ್, ತರಕಾರಿ ಮತ್ತು ಅನ್ನ ಜೊತೆ ಜೊತೆಗೆ ನಿಧಾನವಾಗಿ ತಿನ್ನುವುದು ವಾಡಿಕೆ. ಪ್ರತಿಯೊಂದು ಅಡುಗೆಯನ್ನೂ ಬೇರೆಯಾಗಿ, ಅದೂ ಅಷ್ಟು ಅವಸರದಿಂದ ತಿನ್ನುವುದು ತುಂಬಾ ಕೆಟ್ಟ ಅಭ್ಯಾಸ ಎಂದು ಗುರುತಿಸಲಾಗುತ್ತಿತ್ತು) ಎಲ್ಲಾ ಬಡಗಿಗಳು ಒಂದೇ ರೀತಿ ನಡೆದುಕೊಂಡಿದ್ದು ನೋಡಿದರೆ ಇದು ಬಡಗಿಗಳಲ್ಲಿ ಇರುವ ಸಂಪ್ರದಾಯವಿರಬಹುದು ಅನ್ನಿಸಿತು. ಏನೇ ಆಗಲಿ, ಅದು ಖಂಡಿತ ಸಹ್ಯವಾಗಿರಲಿಲ್ಲ.

ದೊಡ್ಡದಾಗಿದ್ದರೆ ಚೆನ್ನ

ಪುರೋಹಿತರು. ಹಣ್ಣು. ಮನೆಗಳು. ದವಸ ಧಾನ್ಯದ ಚೀಲಗಳು.. ಶಾಯಿಯಲ್ಲಿ ಅದ್ದಿ ಬರೆಯುವ ಲೇಖನಿಗಳು.
ಗಂಡಸರ ಕಣ್ಣುಗಳು. ಅವುಗಳು ತೀರಾ ಕಿರಿದಾಗಿದ್ದಾಗ ಅವು ಹೆಣ್ಣಿನ ಕಣ್ಣುಗಳಂತೆ ಕಾಣುತ್ತವೆ.
(ಪುರುಷರ ಸೌಂದರ್ಯದ ಬಗ್ಗೆ ಇದ್ದ ಸಾಂಪ್ರದಾಯಿಕ ನಂಬಿಕೆ ಶೊನಗೋನಳ ಬರವಣಿಗೆಯಲ್ಲೂ ಇಲ್ಲಿ ಎದ್ದು ಕಾಣುತ್ತದೆ.) ಆದರೆ, ಅವು ಲೋಹದ ಬಟ್ಟಲುಗಳಂತೆ ತುಂಬಾ ದೊಡ್ಡದಾಗಿದ್ದರೂ ಹೆದರಿಕೆ ಹುಟ್ಟಿಸುತ್ತವೆ.
ಗುಂಡನೆಯ ಅಗ್ಗಿಷ್ಟಿಕೆಗಳು. ಚಳಿಗಾಲದ ಚೆರ್ರಿ ಹಣ್ಣುಗಳು.( ಚಳಿಗಾಲದಲ್ಲಿ ಬೆಳೆಯುವ ದೊಡ್ಡ ಚೆರ್ರಿ ಹಣ್ಣುಗಳನ್ನು ಆಟಿಕೆಗಳಂತೆಯೂ, ಗೊಂಬೆಗಳಂತೆಯೂ ಉಪಯೋಗಿಸಲಾಗುತ್ತಿತ್ತು)
ಪೈನ್ ಮರಗಳು. ಹಳದಿ ಗುಲಾಬಿಗಳ ದಳಗಳು.
ಕುದುರೆಗಳು ಮತ್ತು ಎತ್ತುಗಳು.

ನದಿ ದಾಟುವಾಗ


ಬೆಳದಿಂಗಳ ರಾತ್ರಿಯಲ್ಲಿ ನದಿ ದಾಟುತ್ತಿರುವಾಗ, ಎದುರಾಗುವ ಎತ್ತುಗಳ ನಡಿಗೆ ಚಿಮ್ಮಿಸಿದ ನೀರು ಹರಳುಗಳಂತೆ ಹೊಳೆಯುವುದು ನೋಡಲು ನನಗೆ ತುಂಬಾ ಎಷ್ಟ.

ಸೆಯಿ ಶೊನಗೋನಳ ತಲೆದಿಂಬಿನಡಿಯ ಡೈರಿಗಳು-೫

ರೇಗಿಸುವ ವಿಷಯಗಳು

ಯಾರಾದರೂ ಇನ್ನೇನು ಸ್ವಾರಸ್ಯಕರವಾದ ಸುದ್ದಿಯೊಂದನ್ನು ಹೇಳಬೇಕೆಂದಿರುವಾಗ ಮಗು ಅಳಲಾರಂಭಿಸುವುದು.

ಕಾಗೆಗಳ ದೊಡ್ಡ ಗುಂಪೊಂದು ಮೇಲೆ ಗುಂಡಗೆ ಸುತ್ತುತ್ತಾ ಜೋರಾಗಿ ಕಾ ಕಾ ಎಂದು ಕಿರುಚುತ್ತಿರುವುದು.

ಹುಡುಗಿಯನ್ನು ತುಂಬಾ ಮೆಚ್ಚಿಕೊಂಡವನೊಬ್ಬ ಕಳ್ಳತನದಿಂದ ಅವಳ ಮನೆಗೆ ಬಂದಿರುವಾಗ ನಾಯಿಯೊಂದರ ಕಣ್ಣು ಅವನ ಮೇಲೆ ಬಿದ್ದು ಜೋರಾಗಿ ಬೊಗಳತೊಡಗುವುದು. ಆಗ ಅವಳಿಗೆ ಆ ಪ್ರಾಣಿಯನ್ನು ಕೊಂದೇ ಹಾಕಬೇಕೆಂದು ಅನ್ನಿಸಿದರೆ ಅದರಲ್ಲಿ ತಪ್ಪೇನಿದೆ?

ಮೊದಲೇ ಅಷ್ಟು ಸರಿ ಹೊಂದದ ಸ್ಥಳದಲ್ಲಿ ಗೆಳೆಯನನ್ನು ಜೊತೆಗೆ ರಾತ್ರಿ ಕಳೆಯಲು ಆಹ್ವಾನಿಸಿರುವಾಗ, ಅವನು ಗೊರಕೆ ಹೊಡೆಯಲು ಶುರು ಮಾಡುವುದು.

ಗೆಳೆಯನೊಬ್ಬನೊಡನೆ ಪ್ರಣಯಕೇಳಿಯಲ್ಲಿ ತೊಡಗಿರುವಾಗ ಅವನು ಹಿಂದೊಮ್ಮೆ ಪರಿಚಯವಿದ್ದ ಯಾವುದೋ ಹೆಂಗಸನ್ನು ಹೊಗಳತೊಡಗುವುದು. ಇದು ಎಂದೋ ನಡೆದಿದ್ದಿರಬಹುದು, ಆದರೂ ಕಿರಿ ಕಿರಿ ಮಾಡುವಂಥದ್ದೇ. ಈಗಲೂ ಅವನು ಅವಳೊಡನೆ ಸ್ನೇಹದಿಂದಿದ್ದರಂತೂ ಹೇಳಲೇಬೇಕಾಗಿಲ್ಲ.

ಮುದುಕನೊಬ್ಬ ಅಗ್ಗಿಷ್ಟಿಕೆಯ ಮುಂದೆ ತನ್ನ ಕೈಯನ್ನು ಬಿಸಿ ಮಾಡಿಕೊಳ್ಳುತ್ತಾ ಅದರ ಮೇಲಿರುವ ನಿರಿಗೆಗಳನ್ನು ಸವರಿಕೊಳ್ಳುವುದು. ಯಾವ ಯುವಕನೂ ಈ ರೀತಿ ನಡೆದುಕೊಳ್ಳುವುದು ಸಾಧ್ಯವೇ ಇಲ್ಲ; ವಯಸ್ಸಾದವರು ಸಾಕಷ್ಟು ನಾಚಿಗೆಟ್ಟವರೇ. ಕೆಲವು ಕೊಳಕು ಮುದುಕರು ಅಗ್ಗಿಷ್ಟಿಕೆಗಳ ಮೇಲೆ ತಮ್ಮ ಪಾದಗಳನ್ನಿಟ್ಟುಕೊಂಡು ಹರಟೆ ಹೊಡೆಯುತ್ತಲೇ ಅದನ್ನು ಉಜ್ಜುವುದನ್ನು ನಾನೇ ಕಂಡಿದ್ದೇನೆ. ಇಂಥಾ ನಡತೆ ಬರೀ ಕೆಳ ವರ್ಗದ ಜನರಿಂದ ಸಾಧ್ಯ ಎಂದು ಯಾರಾದರೂ ಭಾವಿಸಿದರೆ ಖಂಡಿತ ತಪ್ಪು. ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳು ಕೂಡಾ ಹೀಗೆ ನಡೆದುಕೊಳ್ಳುವುದನ್ನು ನಾನು ಕಂಡಿದ್ದೇನೆ.

ಹಾಸಿಗೆಯ ಮೇಲೆ ಮಲಗಿ ಇನ್ನೇನು ಜೊಂಪು ಹತ್ತಿರುವಾಗ ಸೊಳ್ಳೆಯೊಂದು ಕುಯ್ಯೆಂದು ಶಬ್ದ ಮಾಡುತ್ತಾ ಬಂದು ತನ್ನ ಆಗಮನವನ್ನು ಘೋಷಿಸುವುದು. ಅದು ಹತ್ತಿರಬಂದಾಗ ಅದರ ರೆಕ್ಕೆಗಳ ಗಾಳಿ ಕೂಡಾ ಮೈಗೆ ಸವರಿದಂತೆನಿಸುವುದು ತುಂಬಾ ಕೋಪ ಬರಿಸುವ ವಿಷಯ!

ಹಿರಿಯ ಆಸ್ಥಾನಿಕೆಯರು

ಸಿಯರೋ ಅರಮನೆಯಲ್ಲಿ ಸಾಮ್ರಾಜ್ಞಿಯ ಕೋಣೆಗಳ ಬಿದಿರು ಪರದೆಗಳ ಹೊರಗೆ ಒಂದು ಗುಂಪು ಹಿರಿಯ ಆಸ್ಥಾನಿಕೆಯರು ದಿನವೆಲ್ಲಾ ತರಹ ತರಹ ಕೊಳಲುಗಳನ್ನು ನುಡಿಸುತ್ತಾ ಕಳೆದಿದ್ದರು. ಸಂಜೆ ಅವರೆಲ್ಲಾ ತಮ್ಮ ಕೋಣೆಗಳಿಗೆ ವಾಪಸ್ಸಾದರು. ದೀಪಗಳನ್ನು ತಂದಾಗ ಜಾಲರಿಗಳನ್ನು ಇನ್ನೂ ಕೆಳಗಿಳಿಸದೆ ಇದ್ದಿದ್ದರಿಂದ ಬಿದಿರ ಪರದೆಗಳ ಮೂಲಕ ರಾಣಿಯವರ ಕೋಣೆಯಲ್ಲಿ ನಡೆಯುವುದೆಲ್ಲಾ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕೊಳಲನ್ನು ಉದ್ದುದ್ದಕ್ಕೆ ಹಿಡಿದು ಸಾಮ್ರಾಜ್ಞಿಯವರು ಕುಳಿತಿದ್ದರು. ಅವರು ಬಹು ಸುಂದರವಾದ ಕೆಂಪು ಉಡುಗೆಯನ್ನು ಧರಿಸಿದ್ದರು. ಅದರೊಳಗೆ ನುಣುಪಾದ ರೇಶಿಮೆಯ ಬಟ್ಟೆಯನ್ನು ಪದರಪದರವಾಗಿ ಹಚ್ಚಲಾಗಿತ್ತು. ಅವರ ಬೆರಳುಗಳು ಆ ಹೊಳೆಯುವ ಕಪ್ಪು ಕೊಳಲನ್ನು ನಯವಾಗಿ ಬಳಸಿದ್ದವು; ಅವರ ಅಚ್ಚ ಬಿಳಿಯ ಬಣ್ಣದ ಹಣೆ ಮತ್ತು ಆ ವಾದ್ಯದ ಕಡುಕಪ್ಪು ಮರದ ಬಣ್ಣದ ನಡುವಿನ ಅಂತರ ಎತ್ತಿಕಾಣುತ್ತಿತ್ತು. ಈ ದೃಶ್ಯವನ್ನು ನೋಡಿ ನಾನು ಹತ್ತಿರವೇ ನಿಂತಿದ್ದ ಹುಡುಗಿಯರಲ್ಲಿ ಒಬ್ಬಳಿಗೆ ಹೇಳಿದೆ. ಅರೆ ಮುಚ್ಚಿದ ಆ ಹುಡುಗಿಯ ಮುಖವೂ ಇಷ್ಟು ಅಂದವಾಗಿ ಇದ್ದಿರುವುದು ಸಾಧ್ಯವಿಲ್ಲ. ಹಾಗೆ ನೋಡಿದರೆ, ಅವಳು ಸಾಧಾರಣಸ್ಥೆ (ಇಲ್ಲಿ ಶೊನಾಗೋನ್ ಪೋ ಚು ಇ ಬರೆದ ‘ಕೊಳಲಿನ ಹಾಡು' ಕವಿತೆಯ ಸಾಲಿನ ಬಗ್ಗೆ ಮಾತಾಡಿದ್ದಾಳೆ. ಅವರು ದೋಣಿಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಭೇಟಿಯಾದ ಹುಡುಗಿಯೊಬ್ಬಳ ಬಗ್ಗೆ ಬರೆದ ಸಾಲು: ‘ಅವಳು ಕೊಳಲನ್ನು ಎತ್ತಿ ಹಿಡಿದಾಗಲೂ, ನನಗೆ ಕಾಣುವುದು ಅವಳ ಮುಖದ ಅರ್ಧವಷ್ಟೆ'. ನಂತರ, ಈಗ ಕೊಳಲು ನುಡಿಸುವುದನ್ನು ವೃತ್ತಿಯಾಗಿ ಸ್ವೀಕರಿಸಿರುವ ಅವಳು ಹಿಂದೊಮ್ಮೆ ತಾನಿದ್ದ ಖ್ಯಾತಿಯ ಉತ್ತುಂಗದ ಸ್ಥಾನದ ಬಗ್ಗೆ ಕವಿಗೆ ಹೇಳುತ್ತಾಳೆ. ಏನೇ ಆದರೂ ಸಾಮ್ರಾಜ್ಞಿ ಸಡಾಕೋಗೆ ಹೋಲಿಸಿದರೆ ಅವಳು ಸಾಧಾರಣಸ್ಥಳೇ ಎನ್ನುವುದು ಶೊನಾಗೋನ್ ಅನಿಸಿಕೆ..) ನಾನು ಹೇಳಿದ್ದನ್ನು ಕೇಳಿದ ತಕ್ಷಣ ಆ ಹುಡುಗಿ ಸಾಮ್ರಾಜ್ಞಿಯವರ ಕೋಣೆಗೆ ನುಗ್ಗಿ ನಾನಂದಿದ್ದನ್ನು ಅವರಿಗೆ ಹೇಳಿದಳು. ನಂತರ ನನ್ನ ಹತ್ತಿರ ಬಂದು ಅವರು ನಗುತ್ತ ‘ಹಾಗೆ ಶೊನಾಗೋನ್ ಹೇಳಿದ್ದರ ಅರ್ಥ ನಿನಗೆ ಗೊತ್ತೇನು?' ಅಂದರೆಂದೂ ಹೇಳಿದಳು. ಇದನ್ನು ಕೇಳಿ ನನಗೆ ತುಂಬಾ ತಮಾಷೆ ಎನ್ನಿಸಿತು.

ಹೀಗೊಬ್ಬ ಗೆಳೆಯ

ಪ್ರತಿ ಸಲ ನನ್ನೊಡನೆ ರಾತ್ರಿ ಕಳೆದಾಗಲೂ ಈ ಗೆಳೆಯ ಮಾರನೆಯ ದಿನ ಬೆಳಿಗ್ಗೆ ನನಗೆ ಒಂದು ಪತ್ರ ಕಳಿಸುವುದು ತಪ್ಪುತ್ತಿರಲಿಲ್ಲ. ಆದರೆ ಅಂದು ಅವನು ಹೊರಡುವ ಮುನ್ನ ನಮ್ಮ ಸಂಬಂಧದಲ್ಲಿ ಇನ್ನೇನೂ ಉಳಿದಂತೆ ಕಾಣುವುದಿಲ್ಲ, ನನಗಿನ್ನೇನು ಹೇಳಬೇಕೋ ತಿಳಿಯುತ್ತಿಲ್ಲ ಎಂದಿದ್ದರಿಂದ ನನಗೆ ಮಾರನೆಯ ದಿನ ಬೆಳಿಗ್ಗೆ ಅವನ ಪತ್ರ ಬರದಾಗ ಅಚ್ಚರಿ ಎನ್ನಿಸಲಿಲ್ಲ. ಆದರೂ ಸೂರ್ಯ ಹುಟ್ಟಿದಾಗ ಯಾವಾಗಲೂ ತಪ್ಪದೆ ಬರುತ್ತಿದ್ದ ಅವನ ಪತ್ರ ಇಲ್ಲದಿದ್ದುದು ನನಗೆ ಮಂಕು ಬಡಿದಂತಾಯಿತು. ಸಮಯ ಕಳೆದಂತೆ ‘ಅವನು ನಿಜವಾಗಿ ಅನ್ನಿಸಿದ್ದನ್ನೇ ಹೇಳಿದ್ದಾನೆ' ಎಂದು ಸಮಾಧಾನ ಮಾಡಿಕೊಂಡೆ.

ಅವತ್ತು ಬಹಳ ಜೋರಾಗಿ ಮಳೆ ಸುರಿಯಿತು. ಮಧ್ಯಾಹ್ನವಾದರೂ ಅವನಿಂದ ಏನು ಸುದ್ದಿಯೂ ಇಲ್ಲ: ಹಾಗಾದರೆ ಅವನು ನನ್ನನ್ನು ಮರೆತೇ ಬಿಟ್ಟಿರಬೇಕು ಎಂದುಕೊಂಡೆ. ಅಂದು ಸಂಜೆ ನಾನು ವರಾಂಡಾದಲ್ಲಿ ಕೂತಿದ್ದಾಗ, ಒಬ್ಬ ಪುಟಾಣಿ ಹುಡುಗ ಕೊಡೆ ಹಿಡಿದು ಬಂದ. ಅವನ ಕೈಯಲ್ಲಿದ್ದ ಪತ್ರ ನನಗೆ ಕೊಟ್ಟ. ನಾನು ಬೇಗಬೇಗ ಒಡೆದು ಓದಿದೆ. `ಮಳೆ ಸುರಿದಾಗ ನದಿ ಇನ್ನೂ ತುಂಬಿ ಹರಿಯುತ್ತದೆ' -ಸಂದೇಶ ಅಷ್ಟೇ ಇತ್ತು. ಅವನು ನನಗೆ ನೂರು ಸಾಲುಗಳ ಕವಿತೆ ಕಳಿಸಿದ್ದರೂ ಅದು ಈ ಪುಟ್ಟ ಸಂದೇಶ ಕೊಟ್ಟ ಖುಶಿ ಕೊಡುತ್ತಿರಲಿಲ್ಲ. (ಇಲ್ಲಿ ಈ ಸಾಲು ಕೊಕಿನ್ ಶು ಕವಿತೆಯೊಂದರರಿಂದ ಸ್ಫೂರ್ತಿ ಪಡೆದಿದೆ. ಅದರಲ್ಲಿ ಕವಿ ತನ್ನ ಪ್ರೇಮವನ್ನು ಮಳೆಬಂದಾಗ ತುಂಬಿ ಹರಿದು ಪ್ರವಾಹ ಉಂಟು ಮಾಡುವ ಯೋಡೋ ನದಿಗೆ ಹೋಲಿಸಿದ್ದಾನೆ.)

ಮುಜುಗರದ ವಿಷಯಗಳು

ಯಾರನ್ನೋ ಭೇಟಿಯಾಗಲು ಅವರ ಮನೆಗೆ ಹೋಗುತ್ತೇವೆ. ಆದರೆ ನಾವು ಯಾರನ್ನು ನೋಡಲು ಹೋಗಿದ್ದೇವೆಂದು ತಿಳಿಯದೆ ಬೇರೊಬ್ಬ ವ್ಯಕ್ತಿ ಎದುರಿಗೆ ಹಾಜರಾಗುತ್ತಾನೆ. ಜೊತೆಗೆ ನಾವು ಒಂದು ಉಡುಗೊರೆಯನ್ನೂ ತೆಗೆದುಕೊಂಡು ಹೋಗಿದ್ದರೆ ದೇವರೇ ಗತಿ.

ಯಾರನ್ನಾದರೂ ದೂಷಿಸುವ ಉದ್ದೇಶವಿಲ್ಲದೆಯೇ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿರುತ್ತೇವೆ ಎಂದಿಟ್ಟುಕೊಳ್ಳಿ. ಅದನ್ನು ಕೇಳಿಸಿಕೊಂಡ ಪುಟ್ಟ ಹುಡುಗನೊಬ್ಬ ಯಾರ ಬಗ್ಗೆ ಆ ಮಾತಾಗಿತ್ತೋ ಅವರಿಗೇ ಅದನ್ನು ಒಂದೂ ಪದ ಬಿಡದೆ ಹೇಳಿಬಿಡುವುದು.

ಯಾರಾದರೂ ತಮ್ಮ ದಾರುಣ ಕತೆಯನ್ನು ಬಿಕ್ಕುತ್ತಾ ಹೇಳಿಕೊಳ್ಳುತ್ತಾರೆ. ಕೇಳಿ ತುಂಬಾ ಸಂಕಟವಾಗುತ್ತೆ. ಆದರೆ ಕಣ್ಣಿನಿಂದ ಒಂದು ಹನಿ ನೀರೂ ಬರುವುದಿಲ್ಲ - ಎಷ್ಟು ಮುಜುಗರ.ಅಳುವಂತೆಯೇ ಮುಖ ಮಾಡಿಕೊಂಡರೂ ಅದರಿಂದ ಏನೂ ಪ್ರಯೋಜನವಿಲ್ಲ. ಒಂದು ಹನಿ ಕಣ್ಣೀರೂ ಉದುರುವುದಿಲ್ಲ. ವಿಚಿತ್ರವೆಂದರೆ, ಒಂದೊಂದು ಸಲ ತುಂಬಾ ಸಂತೋಷದ ವಿಷಯ ಕೇಳಿದಾಗ ಕಣ್ಣೀರು ದಳ ದಳ ಹರಿದುಹೋಗುತ್ತದೆ.

ಪ್ರತಿಕ್ರಿಯೆಗಳು:

*kaadu gidagaLinda tumbiruva koLagaLe chenna.. .bahala chennagide.. sumitraa...
 
*ಉಮಾ ಮೇಡಮ್‌, ತುಂಬಾ ಇಂಟ್ರೆಸ್ಟಿಂಗ್ ಆಗಿದೆ... -ಶ್ರೀದೇವಿ ಕಳಸದ...
 
*Beauty! Wonder if these were written centuries ago!! -Vastarey...
 
 *It is excelent. Thanks for presenting it in Kannada. Guruprasad...

ಪುಟದ ಮೊದಲಿಗೆ
 
Votes:  3     Rating: 5    
 
 
ಸಂಬಂಧಿಸಿದ ಲೇಖನಗಳು
  ಸಹ್ಯಾದ್ರಿ ನಾಗರಾಜ್ ಬರೆದ ದಿನದ ಕವಿತೆ
  ಕೃಷ್ಣ ಜನ್ಮಾಷ್ಟಮಿಗೆ ಹೇಮಾ ಕವಿತೆಗಳು
  ಸಂಧ್ಯಾ ಬರೆದ ದಿನದ ಕವಿತೆ
  ಪ್ರಾಚೀ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈದೇಹಿ `ಸೂರ್ಯ ಸಾಂಗತ್ಯ'
  ಬೊಳುವಾರು ಗಾಂಧಿ ಕತೆಗೆ ಕೇಂದ್ರ ಸಾಹಿತ್ಯ ಸಮ್ಮಾನ
  ನಾ.ಡಿಸೋಜಾ ಬರೆದ ಒಂದು ‘ಲೈನ್’ ಪ್ರಕರಣ
  ಅರವಿಂದ ಬರೆದ ದಿನದ ಕವಿತೆ
  ವಿವೇಕ ಶಾನಭಾಗ ಕಂಡ ಜಯಂತ ಕಾಯ್ಕಿಣಿ `ಸ್ವಪ್ನದೋಷ'
  ಜಯಂತ ಕಾಯ್ಕಿಣಿ ಕತೆ `ಸ್ವಪ್ನ ದೋಷ'
  ಕೃತಿಯೂ, ಕರ್ತಾರನ ಪೂರ್ವಗ್ರಹಗಳೂ
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
  ಬೆಡ್ ರೂಮಿಂದ ಈಚೆಗ ಬರದ ಭೈರಪ್ಪನವರ ಕವಲು
  ಸರ್ಜಾಶಂಕರ್ ಬರೆದ ಹರಳಿಮಠ ಪುರಾಣ
  ಭೈರಪ್ಪ ಎಂದರೆ ಏಕೆ ಕನಲುವಿರಿ?:ಸುಪ್ರೀತ್ ಬರಹ
  ರವಿಪ್ರಕಾಶ್ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ರಾಜೀವ್ ನಾಯಕರ ಕತೆ `ಎಸ್ಸೆಮ್ಮೆಸ್'
  ವಿಜಯಕಾಂತ ಪಾಟೀಲರ ಎರಡು ಕವಿತೆಗಳು
  ಸುಧೀರ್ ಕಾರ್ಕಳ ಬರೆದ ಬಿಯರ್ ಕವಿತೆ
  ಕನ್ನಂಬಾಡಿ ಶಿವಶಂಕರ್ ಕವಿತೆಗಳು
  ಎಸ್.ಬಿ.ಜೋಗುರ ಕತೆ `ಮತ್ಸ್ಯ ವೃತ್ತಾಂತ'
  ವೈಶಾಲಿ ಹೆಗಡೆ ಬರೆದ ನಾಲ್ಕು ಚುಟುಕುಗಳು
  ರಶೀದ್ ಅನುವಾದಿಸಿದ ಒಂದು ಫ್ರೆಂಚ್ ಕವಿತೆ
  ಭಾನುವಾರದ ವಿಶೇಷ: ನಾ. ಡಿಸೋಜ ಕತೆ `ಮೂರು ಕೈ'
  ಹೊನ್ನವಳ್ಳಿ ಆರ್. ದಿಲೀಪ ಬರೆದ ಹತ್ತು ಹೊಳಹು
  ವೈಶಾಲಿ ಕನ್ನಡದಲ್ಲಿ ರಿಲ್ಕ್ ಮತ್ತು ಝೆನ್
  ‘ಹೊಸತೇನೂ ಹೇಳದ ಭೈರಪ್ಪನವರ ‘ಕವಲು’
  ರಜನಿ ಭಟ್ ಕತೆ `ಮಾರಪ್ಪನು ಹಾಗು ಸೋಡಾ ಕುಪ್ಪಿಯೂ..'
  ಎನ್.ಶಂಕರ್ ಬರೆದ ದಿನದ ಕವಿತೆ
  ತಿರುಮಲೇಶ್ ಕನ್ನಡಿಸಿದ ಎಜ್ರಾ ಪೌಂಡ್ ಕವಿತೆಗಳು
  ನನ್ನ ಗೆಳೆಯ ವೆಂಕಟ್, ನನ್ನ ಗಂಡ ವೆಂಕಟ್
  ವೆಂಕಟ್ ಮೋಂಟಡ್ಕ ಬರೆದ ಅಪೂರ್ಣ ಕಥೆ
  ದಿವ್ಯಪ್ರಕಾಶ್ ಬರೆದ ದಿನದ ಕವಿತೆ
  ವಿನಾಯಕ ಭಟ್ ತದ್ದಲಸೆ ಬರೆದ ದಿನದ ಕವಿತೆ
  ರಾಘವೇಂದ್ರ ಹೆಗಡೆ ಬರೆದ ದಿನದ ಕವಿತೆ
  ನಾಗರಾಜ ವಸ್ತಾರೆ ಬರೆದ ನಾಲ್ಕು ಕವಿತೆಗಳು
  ವೈಶಾಲಿ ಹೆಗಡೆ ಕತೆ `ಬೋಳುಮರಕ್ಕೊಂದು ಬಾನು'
  ರೇವನ್ ಜೇವೂರ್ ಬರೆದ ಹನಿಗವಿತೆಗಳು
  ಹರ್ಷಾದ್ ವರ್ಕಾಡಿ ಬರೆದ ದಿನದ ಕವಿತೆ
  ಆನಂದ ಈ.ಕುಂಚನೂರ ಬರೆದ ದಿನದ ಕವಿತೆ
  ಬಾಗೇಶ್ರೀ ಅನುವಾದಿಸಿದ ಬಿಲ್ಕಿಸ್ ಕವಿತೆ
  ವಿಶ್ವ ಶರ್ಮ ಬರೆದ ದಿನದ ಕವಿತೆ
  ಭಾಗೀರಥಿ ಹೆಗಡೆ ಬರೆದ ಕತೆ `ವಂದೇ ಮಾತರಂ'
  ಪದ್ಮನಾಭ ಭಟ್ ಶೇವ್ಕಾರ್ ಬರೆದ ಒಂದಿಷ್ಟು ಕವಿತೆಗಳು
  ರಮೇಶ್ ಸೋಗೆಮನೆ ಬರೆದ ದಿನದ ಕವಿತೆ
  ಎಸ್.ಕುಮಾರ್ ಅನುವಾದಿಸಿದ ಕ್ಯೂಬನ್ ಕವಿತೆ
  ಅನು ಪಾವಂಜೆ ಬರೆದ ದಿನದ ಕವಿತೆ
  ಕವಿ ಮತ್ತು ಕುಣಿಕೆದಾರನ ಯುಗದ ಕುಂದೇರಾ
  ಡಿ.ಎಸ್.ರಾಮಸ್ವಾಮಿ ಬರೆದ ದಿನದ ಕವಿತೆ
  ಬಸವಣ್ಣೆಪ್ಪ ಕಂಬಾರ ಬರೆದ ದಿನದ ಕವಿತೆ
  ಲಕ್ಷ್ಮಿ ಟಿ.ಎನ್. ಬರೆದ ದಿನದ ಕವಿತೆ
  ‘ಮಾಸ್ತಿ’ ಹುಟ್ಟು ಹಬ್ಬಕ್ಕೆ ನಿಸಾರ್ ಬರೆದ ಕವಿತೆ
  ಕಲಿಗಣನಾಥ ಗುಡದೂರು ಬರೆದ ಕತೆ `ಗಾಂಧಿಕಟ್ಟೆ'
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
  ನಾಗರಾಜ ವಸ್ತಾರೆ ಬರೆದ ಎರಡು ಕವಿತೆಗಳು