ಪುಸ್ತಕದ ಪ್ರಚಾರಕ್ಕೆ ಪ್ರಕಾಶಕರು ಮಾಡೋ ತಂತ್ರಗಳು ಅಷ್ಟಿಷ್ಟಲ್ಲ. ಆದರೆ ಗಿನ್ನಿಸ್ ಪುಸ್ತಕದ ಪ್ರಕಾಶಕರು ಮಾಡಿರೋ ಈ ತಂತ್ರದ ಮುಂದೆ ಅದೆಲ್ಲು ನಿಲ್ಲು ಬಿಡಿ. ಚೋಟುದ್ದ ಹುಡುಗ ಮತ್ತು ಏಣಿಯಂಥ ಹೆಂಗಸು ಇಬ್ಬರನ್ನು ಒಟ್ಟಿಗೆ ನಿಲ್ಲಿಸಿ, ಅವರೊಟ್ಟಿಗೆ ಪುಸ್ತಕ ಇಟ್ಟು ಕ್ಯಾಮರಾಕ್ಕೆ ಫೋಸು ಕೊಡಿಸಿದ್ದು ಸಾಮಾನ್ಯ ಮಾತಲ್ಲ.
ಇದೊಂಥರ ತೀರ ಅಪರೂಪದ ದೃಶ್ಯ. ಬೇಕಿದ್ರೆ ಪ್ರಪಂಚದ ಇನ್ನೊಂದು ಅದ್ಭುತ ಅಂತ ಕೂಡ ಅನ್ನಬಹುದು. ಹೇ ಪಿಂಗ್ ಪಿಂಗ್ ಅನ್ನುವ ೩೦ ಇಂಚು ಉದ್ದದ ವಿಶ್ವದ ಅತ್ಯಂತ ಗಿಡ್ಡ ವ್ಯಕ್ತಿ ಮತ್ತು ವಿಶ್ವದ ಅತಿ ಉದ್ದದ ಕಾಲುಗಳ ಓಡತಿ ಸ್ವೆಟ್ಲಾನಾ ಪಾಂಕ್ರಟೋವಾ ಇಬ್ಬರು ಒಂದಾಗಿ ನಿಂತು ವಿವಿಧ ಭಂಗಿಯಲ್ಲಿ ಕ್ಯಾಮರಾಕ್ಕೆ ಫೋಸು ಕೊಟ್ಟಿದ್ದಾರೆ. ‘ಗಿನ್ನಿಸ್ ವರ್ಡ್ ರೆಕಾರ್ಡ್-೨೦೦೯' ಆವೃತ್ತಿ ಪ್ರಚಾರಕ್ಕೆ ಬಂದ ಈ ಜೋಡಿಯನ್ನ ನೋಡೋಕೆ ಅಂತ ಅಪಾರ ಜನಸ್ತೋಮ ಹರಿದು ಬಂದು, ಟ್ರಾಫಿಕ್ ಕಂಟ್ರೋಲ್ ಮಾಡ್ರೋದ್ರಲ್ಲಿ ಪೊಲೀಸರಿಗೆ ಸುಸ್ತಾಗಿ ಹೋಗಿದೆ.
ಸ್ವೆಟ್ಲಾನಾ ಕಾಲುಗಳ ಮಧ್ಯೆ ನಿಂತು ಫೋಸು ಕೊಟ್ಟ ಪಿಂಗ್ ಇದೇನು ಕಾಲೋ ಇಲ್ಲ ಕಂಭವೋ ಅನಿಸಿತಂತೆ. ಒಂದೇ ಸಮನೆ ಕಣ್ಣಲ್ಲೇ ಆಕೆಯ ಕಾಲುಗಳ ಉದ್ದ ಅಳೆಯುತ್ತಿದ್ದಾನೆ. ಅವಳ ಕಾಲು ಎಷ್ಟು ಚೆನ್ನಾಗಿವೆ ಅಂತ ಆತ ಫರಾಕು ಹಾಕೋಕೆ ಶುರುಮಾಡಿದ್ದಾನೆ. ಇನ್ನಾದರೂ ಉದ್ದ ಬೆಳೆಯಬೇಕು ಅಂತ ನಿರ್ಧರಿಸಿ ಜಿಮ್ ಗೆ ಹೊರಡಲು ಅಣಿಯಾಗುತ್ತಿದ್ದಾನೆ. ಇನ್ನೊಂದೆಡೆ ೫೨ ಇಂಚು ಉದ್ದದ ಕಾಲುಗಳನ್ನು ಹೊಂದಿರುವ ಸ್ವೆಟ್ಲಾನಾ ತನ್ನೀ ಕಾಲುಗಳಿಗೆ ತಕ್ಕಂತೆ ಪ್ಯಾಂಟು, ಚಪ್ಪಲಿ ಸಿಗದಿರುವುದೇ ಚಿಂತೆ ಅಂತೆ.
ಪಿಂಗ್ ಮತ್ತು ಸ್ವೆಟ್ಲಾನಾ ಇಬ್ಬರ ಹೆಸರುಗಳೂ ಈ ದಾಖಲೆ ಪುಸ್ತಕದಲ್ಲಿ ದಾಖಲಾಗಿವೆ. ಅಂತೆಯೇ ಉದ್ದದ ಮೀಸೆ ಬೆಳೆಸೋದು, ಭಾರ ಎತ್ತೋದರಿಂದ ಹಿಡಿದು ನ್ಯಾನೋ ಕಾರಿನವರೆಗೆ ಅನೇಕ ಭಾರತೀಯರ ಹೆಸರುಗಳೂ ಈ ಪಟ್ಟಿಯಲ್ಲಿ ದಾಖಲಾಗಿವೆ.
ಪುಸ್ತಕಕ್ಕೆ ಪ್ರಚಾರ ಸಿಕ್ಕಿತೋ ಬಿಟ್ಟಿತೋ ಗೊತ್ತಿಲ್ಲ. ಕ್ಯಾಮರಾ ಕಣ್ಣುಗಳಂತೂ ಹಬ್ಬ ಆಚರಿಸಿದ್ದು ನಿಜ.