ಸೆಪ್ಟೆಂಬರ್ ೨೦, ೨೦೧೪
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಭಾನುವಾರದ ಸ್ಪೆಷಲ್- ಶಾಂತಲ ಭಂಡಿ ಬರೆದ ಸಣ್ಣಕಥೆ ‘ಚಂದಮಾಮ ಮಲಗಿದ್ದಾನೆ’    
ಶಾಂತಲಾ ಭಂಡಿ
ಶನಿವಾರ, 27 ಸೆಪ್ಟೆಂಬರ್ 2008 (10:18 IST)

ಅದೆಷ್ಟೋ ದಿನಗಳ ಮೇಲೆ ಬರೆಯಬೇಕೆನಿಸಿತು. ಮತ್ತೆ ಬರೆಯುತ್ತಿದ್ದೇನೆ. ಬರೆದು ಬಿಸಾಕಿದ ಅದೆಷ್ಟೋ ಕಾಗದದ ಚೂರುಗಳು ಚೂರಿಯಾಗಿ ನನ್ನ ಚುಚ್ಚಿದಾಗಲೂ ಮತ್ತೆ ಬರೆಯಬೇಕೆನಿಸಲಿಲ್ಲ. ಕಲ್ಪನೆಗಳ ಪೂರದಲ್ಲಿಯೇ ಅನುಭವಿಸಿ ಅನುಭವಿಸಿ ಬರೆದ ಕಥೆ-ಕವನಗಳಷ್ಟು ಸುಂದರವೆನಿಸಿದ ದಿನಗಳ ಕಳೆದುಕೊಂಡಾದ ಮೇಲೆ ಮತ್ತೆ ಬರೆಯಬೇಕಿನಿಸಿದೆ. ನನ್ನೊಳಗೆ ಇದೀಗ ಕಲ್ಪನೆಗಳಿಲ್ಲ, ಭಾವಗಳೂ ಇಲ್ಲ. ಬರೆದರೆ ಈ ವಾಸ್ತವವನ್ನೇ ಬರೆಯಬೇಕು. ಭಾವನೆಗಳು ಸತ್ತು ಮುರುಟಿಕೊಂಡಾದ ಮೇಲಿನ ಕಂತೆಯ ನೆನಪುಗಳು ನನ್ನನ್ನ ಮುಳುಗಿಸುವ ಮುನ್ನ ಖಾಸಗಿ ಬದುಕಿನ ಪುಟವೊಂದನ್ನು ನಿಮ್ಮ ಮುಂದೆ ತೆರೆದಿಡುವೆ. ಕಣ್ಣುಗುಳುವ ಬಿಸಿನೀರ ಬುಗ್ಗೆಗಳ ಆರಿಸಿಕೊಳ್ಳಲೋಸುಗ ಕತೆಯೊಂದ ಹೇಳುವೆ ಕೇಳಿ. ‘ಕಥೆ ಹೇಳುವೇ ನನ್ನ ಕಥೆ ಹೇಳುವೆ'.

ಮೂಡಲ ಮನೆಯ ಮುತ್ತಿನ ನೀರಿನೊಂದಿಗೆ ಎಂದಿನಂತೆ ಬೆಳಕಾಗುತ್ತದೆ, ಆದರೂ ಹೊಸ ದಿನಕೊಂದು ಹೊಸ ರೀತಿ, ಹೊಸ ವೈಶಿಷ್ಟ್ಯ ಇರುವಂತೆ...ಒಂದು ಬೆಳಗಿಗೆ ಮಳೆ ಮುತ್ತಾದರೆ ಇನ್ನೊಂದು ಬೆಳಗು ಇಬ್ಬನಿಯ ಮತ್ತೇ ಇದು ಎನುವಂತೆ. ಮಗದೊಂದು ಕತ್ತಲು ಕಳೆವ ಬಿಸಿಲ ಹೊಳಪಿನ ವಜ್ರದ ಹಾಗೆ. ಹೀಗೆ ಅವರವರ ಭಾವಕ್ಕೆ ಬದುಕಿಗೆ ತಕ್ಕ ಬೆಳಗು ಬೆಳಕ ಮೂಡಿಸುವ ಕಾಯಕ ಮರೆಯದು. ಭಾವಗಳು ಬೇರೆಯಾದರೂ ಬೆಳಗು ಮಾತ್ರ ಅದೇ ಆಗಿರುತ್ತದೆ.

ಅದೂ ಎಂದಿನಂತೆಯೇ ಬೆಳಗು. ಗಡಗುಡುವ ಗುಡುಗಿಲ್ಲ. ಭಾವನಾತ್ಮಕ ಬೆಡಗಿನ ಬೆಳಗು. ಚುಮು ಚುಮು ಚಳಿ. ಮನ ತುಂಬಿದ ಸಿಂಗಾರ. ಮೈ ತುಂಬ ಬಂಗಾರ. ಬನದ ಹೂಗಳೆಲ್ಲ ಮುಡಿಯನೇರಿ ನಗುತ್ತಲಿವೆ. ನಾ ನಕ್ಕಿದ್ದನ್ನೇ ಸೆರೆಹಿಡಿಯುತ್ತಿದ್ದ ಕ್ಯಾಮೆರಾ. ಕೈ ತೋರಿ, ಕೈ ಹಿಡಿದು ಮನವನಾವರಿಸಿಕೊಂಡು ನನ್ನೊಳಗೇ ಬೆಳೆದ ಸುಧಿಯೆಂಬ ಚಂದಮಾಮನು ಅಂದು ನನ್ನ ಕೈಹಿಡಿದು ಬಾಳನ್ನು ಬೆಳದಿಂಗಳಾಗಿಸಿದ. ತಿಂಗಳು ಕಳೆಯುವುದರೊಳಗೆ ಪುಷ್ಪಕವಿಮಾನವೊಂದು ನನ್ನನ್ನು ಬೆಳದಿಂಗಳರಮನೆಗೆ ಹಾರಿಸಿಕೊಂಡು ತಂದು ಬಿಟ್ಟಿತು. ಬಯಲಂಥ ಊರಿನಲ್ಲಿ ಬೆಳದಿಂಗಳು! ಜೊತೆಯಲ್ಲಿ ನನ್ನಿಷ್ಟದ ಚಂದಮಾಮ. ಅವನು ಬೆಳದಿಂಗಳು, ಆ ಬೆಳದಿಂಗಳಡಿಯಲ್ಲಿ ನಾನೊಂದು ಬೊಂಬೆ. ಅವಗೆ ಮರುಳಾಗಿ ಅವ ಆಡಿಸಿದಂತೆ ಆಡುವ ಗೊಂಬೆ. ಬಿಸಿಗಾಳಿಯೂ ಸಹ ಆ ಬೆಳದಿಂಗಳಿನಡಿಯಲ್ಲಿ ನನ್ನ ತಾಕಲಿಲ್ಲ, ಅಂಥ ಬೆಳದಿಂಗಳದು. ಇನ್ನೇನು ಬೇಕಿತ್ತು ಬದುಕಿಗೆ!

ಅಂಕುಡೊಂಕಿಲ್ಲದ ರಸ್ತೆಗಳು, ಬೆಳಕಿನ ವೇಗದಲ್ಲಿ ಚಲಿಸುವ ನನ್ನಿಯನ ಚಕ್ಕಡಿಗಾಡಿ.  ನನ್ನಿನಿಯ ಚಂದ್ರಮನಿಗೆ ಎತ್ತುಗಳೇ ಬೇಕಿರಲಿಲ್ಲ ಚಕ್ಕಡಿಯನ್ನು ಓಡಿಸಲು. ಸ್ಟೀಯರಿಂಗ್ ಹಿಡಿತದಲ್ಲಿತ್ತು. ಈಗ ಗೊತ್ತಾಯ್ತಲ್ಲ ನಾನ್ಯಾರ ಕಥೆ ಹೇಳ ಹೊರಟೆನೆಂದು? ಸಂದೇಹವೇ ಇಲ್ಲ, ಅವನು ನನ್ನ ಸುಧಿಯೇ. ಹೌದು ಆ ಚಂದಮಾಮ ಬೇರ್ಯಾರೂ ಅಲ್ಲ, ನನ್ನ ಸುಧಿ. ನನ್ನೆಲ್ಲ ಕಥೆ ಕವನಗಳಲ್ಲಿ ಬಂದು ನನ್ನನ್ನು ಗೋಳು ಹುಯಿದ ಸುಧಿಯದೇ ಕಥೆಯಿದು. ಪೂರ್ತಿ ಬೆಳದಿಂಗಳಿರುಳಿನಲಿ ನನ್ನನ್ನ ,ಅವನ  ಮಗುವೆಂಬ ಮೊಗ್ಗಿನೊಂದಿಗೆ ಒಂಟಿಯಾಗಿ ಬದುಕಲು ಬಿಟ್ಟು ಹೋದವನ ಕಥೆ. ಕಥೆ ಕೇಳಿ ಅಳಕೂಡದು ನೀವುಗಳು. ಅಳುವೆಲ್ಲ ನನ್ನ ಪಾಲಿಗೆ ಬಿಟ್ಟುಬಿಡಿ. ಅಳುವುದಕ್ಕಾಗಿಯೇ ನಾನು ಬದುಕುತ್ತಿದ್ದೇನೆ. ಕಣ್ಣೀರೂ ಬತ್ತುವ ತನಕ ಅತ್ತರೂ ಕಳೆದು ಹೋದವನು ಮತ್ತೆ ಬರಲಾರ ಅಂತ ನಂಗೂ ಗೊತ್ತಿದೆ. ಅಳದೆ ಬದುಕಿದರೆ ಸುಧಿ ಬರುವನೆ ಮತ್ತೆ?  ಮತ್ತೆ ನಾನ್ಯಾಕೆ ನನ್ನ ಅಳುವ ಕಟ್ಟಿ ಕಟ್ಟೆ ಹಾಕಲಿ? ಅಳುತ್ತಲೇ ಬದುಕುವ ತೀರ್ಮಾನವೊಂದನ್ನು ಅವನು ಬಿಟ್ಟು ಹೋದ ಆ ಬೆಳದಿಂಗಳಿನಲ್ಲೇ ತೀರ್ಮಾನಿಸಿದೆ.

ನಿಮಗೆಲ್ಲ ಗೊತ್ತಲ್ಲ, ಚಂದಮಾಮನು ಬರುವ ವೇಳೆ! ಹೌದು, ಸರಿಯಾಗಿ ಆರು ಗಂಟೆಯ ಆಗಮನದೊಂದಿಗೆ ಸಂಜೆ ಇವನೂ ಆಫೀಸಿನಿಂದ ಅರಮನೆ ಸೇರಿಬಿಡುತ್ತಿದ್ದ. ಕಣ್ಣುಗಳಲ್ಲಿ ಸದಾ ತೆಳುವಾದ ನಗು, ಹೇಗೆ ಗೊತ್ತಾ? ಅವನ ವಯಸ್ಸಿಗೆ ಸರಿಯಾದ ತುಂಟ ನಗುವಲ್ಲವದು. ದೈವವೊಂದು ನಗುವ ಹಾಗೆ ‘ಮಂದಸ್ಮಿತ' ಅಂತ ಹೇಳಬಹುದು. ಹಾಗಿದ್ದ ಅವನು. ವಯಸ್ಸಿಗೆ ಮೀರಿದ ಜವಾಬ್ಧಾರಿಯುತ ಯೋಚನೆಗಳು. ಮಗುವಿನಂತಹ ಮನಸ್ಸು. ಅಮ್ಮನಂಥ ಪ್ರೀತಿ. ಅಪ್ಪನಂಥಹ ಗಟ್ಟಿತನ. ನಡೆ-ನುಡಿ ಎಲ್ಲವೂ ನನ್ನ ಸೌಭಾಗ್ಯಕ್ಕೆ ದೊರಕಿದವುಗಳೇ. ಈ ಮಾತುಗಳಲ್ಲಿ ಉತ್ಪ್ರೇಕ್ಷೆಯಿಲ್ಲ. ಅವನ ಕಂಡವರೆಲ್ಲ ನುಡಿವ ಮಾತಿದು. ನಿಜವಾಗಿಯೂ ಹೀಗೆ ಇದ್ದ  ನನ್ನ ಚಂದಮಾಮ. ನನ್ನನ್ನು ಬಿಟ್ಟು ದೂರಕ್ಕೆ ಹಾರಿ ಹೋದ ಚಂದಮಾಮ.

ನಾ ನೆಟ್ಟ ಬಳ್ಳಿಗಿಡದಲ್ಲಿ ಅರಳಿ ನಿಂತ ಹೂವಿನ ಹಾಗೆಯೇ ಇವನೂ ಸಹ. ದಿನಾಲೂ ಆಫೀಸಿಂದ ಬಂದವನಿಗೆ ಅರ್ಧಗಂಟೆಯಾದರೂ ಅಕ್ಕ ಪಕ್ಕದ ಮಕ್ಕಳೊಡನೆ ಆಡದೇ ಹೋದರೆ ಖುಷಿಯೇ ಬಾರದು. ಆಡಿ ಆಡಿ ದಣಿದು ಬಂದು ಮಡಿಲೊಳಗೆ ಸೇರಿಕೊಳ್ಳುವ ಅವನ ಮುಖದ ಬೆಳದಿಂಗಳಿಗೆ ಬೇರೆ ಬೆಳಕು ಬೇಕಿರಲಿಲ್ಲ. ಮಾಸಾರ್ಧ ಪೂರ್ತಿ ತನ್ನಡುಗೆಯ ರುಚಿಯನ್ನೇ ಉಣಿಸುವ ಅವನ ಕೈ, ಮನೆಗೆಲಸದ ಅರಿವಿಲ್ಲದೆ ಹೆಣಗುವ ಈ ಮನಸ್ಸಿಗೆ ಅದೇ ತುತ್ತು ಸಂಜೀವಿನಿಯಾಗಿಬಿಟ್ಟಿತು ಅನಿಸುತ್ತೆ, ಅದಕ್ಕೆ ಅವನೊಡನೆ ಹೋಗಲಾರದೇ ಇನ್ನೂ ಬಾಳುತ್ತಿದ್ದೇನೆ. ಅವನೊಡನೆ ಹೋಗಬೇಕೆಂದುಕೊಂಡೆ. ಹೇಗೆ ಹೋಗಲಿ! ಚಂದಮಾಮನು ತನ್ನ ಮೊಗ್ಗನ್ನು ನನ್ನ ಮಡಿಲೊಳಗಿಟ್ಟು ಬೆಳದಿಂಗಳ ಅರಳಿಸುವ ಭಾರವ ನನ್ನೆದೆಯೊಳಗೆ ಬಿತ್ತಿ ನಡೆದಿದ್ದ.

ಬರೆಯುತ್ತ, ಓದುತ್ತ ಕಾಲನೂಕುವ ನನಗೇನು ಗೊತ್ತಿತ್ತು? ಬರಸಿಡಿಲೊಂದು ನನ್ನರಮನೆಗೆ ಬಡಿಯಬಹುದೆಂದು! ಸದಾ ಬರೆಯುತ್ತಲೋ ಓದುತ್ತಲೋ ಇರುವವಳನ್ನು ಅವನೆಷ್ಟು ಸಾರಿ ಎಚ್ಚರಿಸಿರಲಿಲ್ಲ! ‘ನಾಳೆ ದಿಢೀರ್ ಅಂತ ನಾನಿಲ್ಲ ಅಂತಾದ್ರೆ ಏನು ಮಾಡ್ತೀಯ ನೀನು? ಸ್ವಲ್ಪ ವ್ಯವಹಾರ ಜ್ಞಾನ ಕಲಿತ್ಕೋ, ಯಾವಾಗ್ಲೂ ಭ್ರಮಾಲೋಕದಲ್ಲಿ ಇರಬಾರ್ದು' ಅಂತ. ಆವತ್ತು ಅವನು ಹೇಳಿದಾಗ ಬರೆಯೋದನ್ನೇ ನಿಲ್ಲಿಸಿಬಿಡಬೇಕು ಅನ್ನೋವಷ್ಟು ಕೋಪ ಬಂದಿದ್ದು ಯಾಕೆ ಗೊತ್ತಾ? ಅವನಿಲ್ಲ ಅನ್ನೋದನ್ನ ನನಗೆ ಕಲ್ಪಿಸಿಕೊಳ್ಳೋದು ಎಷ್ಟು ಹಿಂಸೆ ಗೊತ್ತಾ? ಅದಿಕ್ಕೆ ನಂಗೆ ಆವತ್ತು ಕೋಪ ಬಂದಿದ್ದು. ಇವತ್ತು ಕಲ್ಪನೆಯಲ್ಲ, ನಿಜವಾಗಿಯೂ ಅವನಿಲ್ಲ. ನಾನು ನಾನಾಗಿಲ್ಲ. ಇವತ್ತೇನೂ ಬರೆಯುತ್ತಿಲ್ಲ, ಓದುತ್ತಿಲ್ಲ, ಭ್ರಮೆ-ಭಾವಗಳೂ ಯಾವುವೂ ಇಲ್ಲ. ಅವನಿದ್ದರೆ ತಾನೆ ಅವೆಲ್ಲ? ಕೋಪ? ಊಂಹುಂ...ನನ್ನ ಕೋಪ ಕೇಳೋಕೆ ಯಾರಿದ್ದಾರೆ ಇಲ್ಲಿ?

ಗೂಡಲ್ಲಿನ ಗುಬ್ಬಚ್ಚಿಮರಿಯೊಂದಕ್ಕೆ ಗುಟುಕು ಕೊಡಲು ಹೆಣಗಾಡುತ್ತಿದ್ದೇನೆ. ಇವತ್ತಿನ ಕಾಲಮಾನಕ್ಕೆ ಮರಿಗೆ ಗುಟುಕು ಕೊಟ್ಟುಬಿಟ್ಟರೆ ಮುಗಿಯುತ್ತಾ? ಅದು ಗೂಡುಕಟ್ಟಿಕೊಂಡುಹೋಗುವಷ್ಟು ಸಾಮರ್ಥ್ಯ ಸುಮ್ಮನೆ ಬರುತ್ತಾ? ಆ ಶಕ್ತಿಯನ್ನು ಕೊಡಬೇಕು ಮರಿಗೆ. ಹೆಣಗಾಡುತ್ತಿದ್ದೇನೆ ಹೆಣವೂ ಆಗಲಾರದೆ, ಬದುಕಲೂ ಆಗದೆ. ಬೆಳದಿಂಗಳ ಖುಷಿಯಲ್ಲಿ ಬಂದ ಬೆಳದಿಂಗಳ ಮರಿಯಿದು, ಬೆಳೆಸಿದರೆ ಬೆಳದಿಂಗಳಾದೀತು. ಚಂದಮಾಮನ ಮರಿಯಲ್ಲವೇ? ಚಂದವೇ ಆದೀತು ಎಂಬೊಂದು ಮಹದಾಸೆಯಿದೆ. ಬೆನ್ನಿಗೇ  ‘ಚಂದಮಾಮನಿಲ್ಲದೆ ಬೆಳದಿಂಗಳಾಗೋದು ಹೇಗೆ?' ಎಂಬ ಕರಾಳ ಪ್ರಶ್ನೆಯೊಂದು ಬಂದು ಬಂದು ಪ್ರಶ್ನಿಸುತ್ತದೆ. ಅವನಿದ್ದರೆ ಬೆಳದಿಂಗಳಿಗಾಗುವಷ್ಟು ಬೆಳಕ ತಾನೇ ಚೆಲ್ಲಿಬಿಡುತ್ತಿದ್ದ. ಬೆಳದಿಂಗಳ ಮರಿಯೊಂದು ಕತ್ತಲಿನಲ್ಲಿ ಬೆಳೆಯುತ್ತಿದೆ. ‘ಅಪ್ಪ' ಎಂಬ ಸಂಬಂಧವನ್ನು ಪದವಾಗಿ ಬಳಸುತ್ತಾ ಬೆಳೆಯುತ್ತಲಿದೆ ಚಂದಮಾಮನ ಮರಿ. ‘ಅಪ್ಪನ್ನ ತಂದು ಕೊಡು' ಎಂಬ ಮುಸ್ಸಂಜೆಯ ರಾಗಕ್ಕೆ ನಾನ್ಯಾವ ಅಂತ್ಯ ಸ್ವರ ಹಾಡಲಿ? ಅರ್ಧಗೊಂಡ ರಾಗವನ್ನು ಮುಗಿಸುವುದನ್ನು ನಾನೂ ಕಲಿಯುತ್ತಲಿರುವಾಗ? ಬಾರದ ಹಾಡೊಂದನ್ನು ಇಲ್ಲದ ಕಂಠದೊಳಗಿಟ್ಟು ಹಾಡುವ ಸ್ಥಿತಿ ನನ್ನದಾಗಿರುವಾಗ! ಒಂದಿಷ್ಟು ಪುಸ್ತಕಗಳ ರಾಶಿಯೇ ಬಿದ್ದಿದೆ ಬೆಡ್ ರೂಮಿನಲ್ಲಿ, ಅವ ಮಲಗುವ ಜಾಗದ ಮಂಚದಡಿಯಲ್ಲಿ. ರಾತ್ರಿಯ ಕನಸುವ ಹೊತ್ತುಗಳಲ್ಲಿ ‘ತಂದೆಯಿಲ್ಲದೇ ಬೆಳೆಯುವ ಮಗು ‘ತಾಯಿಯೇ ನೀ ತಂದೆಯಾಗು ‘ತಂದೆಯನ್ನು ತುಂಬುವ ಬಗೆ' ಹೀಗೆ ಇಂತದೇ ನೂರಾರು ಪುಸ್ತಕಗಳಲ್ಲೊಂದು ಮಂಚದಡಿಯಿಂದ ಮಂಚದ ಮೆಲೇರಿ, ಕೈಗಳಲ್ಲಿ ಪವಡಿಸಿ, ಕಣ್ಣೊಳಗೆ ಇಳಿದು ನನ್ನತನಕ್ಕಿಷ್ಟು, ಸ್ಥಿತಿಗಷ್ಟು ಮರುಕಪಟ್ಟು ಆಸರೆಯಾಗುತ್ತದೆ. ನನ್ನ ತಲೆ ನೇವರಿಸಿ ಭರವಸೆ ತುಂಬುವ ಪುಸ್ತಕ ಚಂದಮಾಮನ ಮರಿಯ ಬದುಕಿನಲ್ಲಿ ಪ್ರಭಾವ ಬೀರಬಹುದೇ? ಎಂದು ಕೊರಗುವ ಸ್ಥಿತಿ. ನಿದ್ರೆ ಆವರಿಸುವ ಮುನ್ನ ಪುಸ್ತಕವೇ ಅವನಾಗುತ್ತದೆ ಇರುಳು ಕರಗುವಾಗೆಲ್ಲ. ಒಮ್ಮೊಮ್ಮೆ ಅದೇ ಪುಸ್ತಕವೇ ಅವನ ಹೆಗಲಾಗುತ್ತದೆ, ಸಂತೈಸಿ ನನ್ನ ನಿದ್ರೆಗಿಳಿಸುತ್ತದೆ.

ಚಂದಮಾಮನ ಮರಿಗೆ ಒಂದಿನ ಅವನಪ್ಪ ಹೇಳ್ತಿದ್ದ  ‘ನಂಗೆ ಅಮ್ಮಂಗೆ ಇಬ್ರಿಗೂ ತುಂಬಾ ಹುಷಾರಿಲ್ಲ ಅಂದ್ರೆ..ನೀನೇನು ಮಾಡ್ಬೇಕು ಗೊತ್ತಾ? 911ಗೆ ಕಾಲ್ ಮಾಡ್ಬೇಕು, ಅವರು ಬಂದು ಹೆಲ್ಪ್ ಮಾಡ್ತಾರೆ ಅಪ್ಪ-ಅಮ್ಮಂಗೆ' ಅಂತ. ನಾಳೆ ಬೆಳಿಗ್ಗೆ ನಾನೂ ಅದನ್ನೇ ಆ ಮರಿಗೆ ಹೇಳ್ಬೇಕಾಗಿದೆ  ‘ಅಮ್ಮಂಗೆ ಹುಷಾರಿಲ್ಲ ಅಂದ್ರೆ ಏನ್ಮಾಡ್ಬೇಕು ಹೇಳು...? 911ಗೆ ಕಾಲ್ ಮಾಡ್ಬೇಕು. ಅವರು  ಬಂದು ನಿಂಗೆ ಹೆಲ್ಪ್ ಮಾಡ್ತಾರೆ.' ಅಂತ.

‘ಕನಸು ಕಾಣೋದು ಕಡಿಮೆ' ಅಂತ ಯಾಕೆ ಹೇಳ್ಕೋತೀನಿ ಅಂತ ಗೊತ್ತಾಗಿರಬಹುದಲ್ಲ? ನಾನೀಗ ಕನಸು ಕಾಣೋದೇ ಇಲ್ಲ. ದಿನದ ನಾಳಿನ ಕೂಳಿನ ಬಗ್ಗೆ ಯೋಚಿಸುತ್ತಾ, ತಿಂಗಳಿಗೊಂದಿಂಚು ಎತ್ತರ ಬೆಳೆಯುತ್ತಲಿರುವ ಬೆಳದಿಂಗಳ ಮರಿಗೆ ಬಟ್ಟೆ ಬರೆ ಬಗ್ಗೆ ಯೋಚಿಸುತ್ತಾ ಕೀಲಿ ಮಣೆ ಕುಟ್ಟುತ್ತೇನೆ. ನಾನಿಲ್ಲದೆಯೂ ನಾಳೆ ಬದುಕುವ ಬಗ್ಗೆ ಅವನಿಗೆ ತಿಳಿ ಹೇಳುತ್ತಾ, ಮಡಿಲಲ್ಲಿ ಬೆಳೆಯುತ್ತಿರುವ ಈ ಬೆಳದಿಂಗಳಿನ ಮರಿಯ ಬಗ್ಗೆಯೇ ಯೋಚಿಸುತ್ತಾ ಇವತ್ತಿನ ಬದುಕು ಸಾಗಿಸಲಿಕ್ಕೇ ಸಮಯ ಸಾಕಾಗದೇ ಸಮಯದೊಂದಿಗೆ ‘ಇನ್ನೊಂಚೂರು ಸಮಯ ಕೊಡು' ಅಂತ ಅಂಗಲಾಚಿ ಬೇಡಿಕೊಳ್ಳುವ ನನ್ನೀ ಪರಿಸ್ಥಿತಿಯಲ್ಲಿ ನಾಳಿನ ಕನಸು ಕಾಣಲು ಪುರುಸೊತ್ತಿಲ್ಲ.

ಕನಸುಗಳ ಕದ್ದ ಕಳ್ಳನೂ ಇಲ್ಲ, ಕನಸುಗಳ ಕಾಯ್ದ ಕಾವಲುಗಾರನೂ ಇಲ್ಲ. ಮನ ಮರುಳಾಗಿಸಿದವನು ಮರಳಲಾರದ ಹಾಗೆ ಮರೆಯಾಗಿದ್ದಾನೆ. ಕಾರ್ಮೋಡಗಳ ಹಿಂದೆ ಅವಿತುಕುಳಿತಿದ್ದಾನೆ. ಹುಡುಕ ಹೋದವಳ ಕಣ್ಣೊಳಗೆ ಹನಿಯಾಗಿ ಹನಿಯುತ್ತಾನೆ. ಕಳ್ಳ ಚಂದಮಾಮನು ಹೀಗೆ ಅವಿತುಕುಳ್ಳುತ್ತಾನೆ. ದೂರ ಸರಿಯುತ್ತಾನೆ. ಕನಸಲ್ಲಿ ಕನವರಿಸಿದವಳಿಗೆ ಕೈಯ್ಯಾಡಿಸುತ್ತಾ ಕಣ್ಮನಸೆಳೆದವನು ಕಣ್ಮರೆಯಾಗುತ್ತಾನೆ. ಕಣ್ಣೀರ ಕೊಡುವುದನ್ನು ಮರೆಯುವುದಿಲ್ಲ. ಅವ ಹೋದಾಗಿಂದ ಅವನ ಕನವರಿಸುತ್ತಾ ಬೊಗಸೆಯೊಡ್ಡಿ ಬೇಡಿ ‘ಬಾ ಮರಳಿ' ಎಂದವಳ ಬೊಗಸೆಗೆ ಕಣ್ಣೀರನಿಷ್ಟು ಸುರಿದು ಮಾಯವಾಗುತ್ತಾನೆ. ಬದುಕಲ್ಲೀಗ ಆಸರಿಗೂ ಕಣ್ಣೀರು, ಆಸರೆಯೂ ಕಣ್ಣೀರು. ಕಣ್ಣೀರಿನಲ್ಲೇ ತೋಯುವ ನನ್ನ ಒಂಟಿತನವಿನ್ನಷ್ಟು ಭಾರವಾಗುತ್ತದೆ. ಮನಸ್ಸು ಕಣ್ಣೀರಿನಲ್ಲಿ ತೊಳೆದಷ್ಟೂ, ಶುಭ್ರವಾದಷ್ಟೂ ಅವನ ನೆನಪು ಹೊಳಪಾಗುತ್ತದೆ.

ಇದಲ್ಲೆದರ ನಡುವೆ ಸೋನೆ ಸುರಿದು ಹನಿಗಳುದುರುವುದು ನಿಂತ ಮೇಲೂ ನೆಲ ಹಸಿಯಾಗಿಯೇ ಇರುವಂತೆ ಮನದಂಗಳ ಆರ್ದ್ರವಾಗೇ ಇರುತ್ತದೆ. ಕೊಂಚವೇ ಬಿರಿಯುವ ಮನದ ಯಾತನೆ ಯಾವ ಬಿಸಿಲಿನ ಕಿರಣಕ್ಕೂ ಕಾಣದ ಹಾಗೆ ನೋಡಿಕೊಳ್ಳಲು ಹೆಣಗಾಡುತ್ತೇನೆ. ನನ್ನ ಮನದ ನೋವಿನ ಹಸಿಯನ್ನು ಆರಿಸಲು ಅನುಕಂಪದಿಂದ ಅಲ್ಲಿ ನೋವಿನ ಬೀಜಗಳು ಮೊಳಕೆಯೊಡೆಯುವಾಗ ಬಿಸಿಲ ಕಿರಣಗಳು ಧಾವಿಸಿ ಬರಬಹುದು. ಅದಕ್ಕೆ ಅವಕಾಶ ಕೊಡದೇ ನನ್ನನ್ನು ನಾನು ಕಾಯ್ದುಕೋಬೇಕು ಒಂಟಿಯಾಗಿ ನಿಂತು. ಬಿಸಿಲಕಿರಣವೊಂದು ಮನದಾಳದ ಯಾತನೆಯ ಹಸಿಯನ್ನು ಆರಿಸುವ ಸಲುವಾಗಿ ಬಂದರೂ ಮಡಿಲಿನ ಬೆಳದಿಂಗಳ ಮರಿ ಬೆಳದಿಂಗಳಾಗಿ ಉಳಿಯೋದಿಲ್ಲವೇನೋ ಅಂತ ಆತಂಕ. ಬಿಸಿಲ ಕಿರಣದ ಝಳಪಿಗೆ ಕರಗಿಹೋದೀತೆಂಬ ಭಯ. ಮತ್ತಷ್ಟು ಬಿಗಿಯಾಗಿ ಮಡಿಲಿನ ಮರಿಯನ್ನ ಅದುಮಿಟ್ಟುಕೊಳ್ಳುತ್ತೇನೆ. ಗಿಡುಗನ ಕಣ್ಣಿಂದ ಮರಿಯನ್ನು ಕಾಯ್ದುಕೊಳ್ಳುವ ಗುಬ್ಬಚ್ಚಿಯ ಹಾಗೇ ಒಮ್ಮೊಮ್ಮೇ ನಲುಗಿ ಮುದುಡಿ ಹೋಗುತ್ತೇನೆ. ಮುದುಡಿದರೂ ರೆಕ್ಕೆ ಬಿಚ್ಚಿ ಹಾರಲೇಬೇಕು ನಾಳಿನ ಕಾಳು ಹೆಕ್ಕಲು. ಈ ಸಲ ವಸಂತಾಗಮನವಾಗುವುದಕ್ಕೆ ಮೊದಲು ಗೂಡೊಂದನ್ನು ಕಟ್ಟಬೇಕು, ಮರಿಯನ್ನ ಜೋಪಾನ ಮಾಡಬೇಕು ಅಂದುಕೊಳ್ಳುತ್ತಾ ಯೋಚನೆಗಳಲ್ಲಿ ನೆನೆದು ಭಾರವಾದ ರೆಕ್ಕೆಗಳನ್ನ ಕಷ್ಟಪಟ್ಟು ಬೀಸುತ್ತಾ ಹಾರಲಾರದೇ ಹಾರುತ್ತೇನೆ.

ಈ ನೆನಪು ಬೆಳಕು ಕತ್ತಲಾಗುವ ಮೊದಲಿನದು. ಇಷ್ಟೆಲ್ಲ ಹೇಳಿ ಇದನ್ನು ಮುಚ್ಚಿಡಲಿ ಹೇಗೆ? ಬೆಳದಿಂಗಳ ಬನವದು. ಹುಣ್ಣಿಮೆಯ ಅಂಗಳದಲ್ಲಿ ನಾನೂ ಅವನು. ರಾತ್ರಿಯೂಟ ಮುಗಿಸಿ ಬೆಳದಿಂಗಳ ಮರಿ ನಿದ್ರೆಬಯಲೊಳಗಿಳಿದು ಮೈಮರೆತು ಆಡತೊಡಗಿದ ಮೇಲೆ ನಾವೂ ಬೆಳದಿಂಗಳ ಅಂಗಳದಲ್ಲಿ ಎದುರು ಬದುರಾಗಿ ಆಸೀನರಾಗಿದ್ದು ಹಸಿ ಹಸಿ ನೆನಪು. ಅಂತಹ ಬೆಳದಿಂಗಳು ಮತ್ತೆ ಬರಲೇ ಇಲ್ಲ. ನನಗೂ ಮರುಳು ನೋಡಿ! ಚಂದಮಾಮನೇ ಇಲ್ಲದ ಮೇಲೆ ಬೆಳದಿಂಗಳಿನ್ನೆಲ್ಲಿ? ಅಲ್ಲವಾ? ಅವನು ಹೇಳುತ್ತಿದ್ದ. ಅವ ಭಾವುಕನಾಗಿ ಮಾತಾಡಲಾರ. ವಾಸ್ತವವನ್ನೆ ಭಾವನಾಮಯವಾಗಿ ವಿವರಿಸೋ ರೀತಿ ಅವನದು. ಆವತ್ತು ಬೇರೆ ರೀತಿಯಲ್ಲೆ ಮಾತಾಡಿದ ‘ಇನ್ಮೇಲೆ ಇಷ್ಟು ಜವಾಬ್ದಾರಿ ಹೊತ್ತುಕೊಳ್ಳೋದನ್ನು ಬಿಟ್ಟು ಬಿಡಬೇಕು ಅಂದುಕೊಳ್ಳುತ್ತಿದೀನಿ, ಭಾರವೆನಿಸ್ತಿದೆ ನಂಗೆ.' ಅಷ್ಟೆ. ಮತ್ತೆ ಯಾವತ್ತಿನಂತೆ ಸಕಾರಾತ್ಮಕ ನಿಲುವು, ಅದೇ ನಗು. ಯಾರನ್ನೇ ಆದರೂ ಕೊಲ್ಲುವ ಶಕ್ತಿ ಆ ತಿಳಿ ನಗಿವಿನಲ್ಲಿ. ಅವನ ಆ ತಿಳಿನಗು ಬೆಳದಿಂಗಳಿನಲ್ಲಿ ಹೊಂದಿಕೊಂಡು ವ್ಯತ್ಯಾಸವೇ ತಿಳಿಯುತ್ತಿರಲಿಲ್ಲ ಅದೆಷ್ಟೋ ಸಾರಿ.

ಹೀಗೆಯೇ ನಗುವಿನಲ್ಲೇ ಒಳ ನಡೆದು, ಅದೇ ನಗುವಿನಾಳದಲ್ಲಿ ಒಂದಿಷ್ಟು ಭರವಸೆಯ ಪಡೆದವಳು ನಿದ್ರೆಗಿಳಿದಿದ್ದೆ. ಮಧ್ಯರಾತ್ರಿಯ ಕನಸೊಂದು ಕರಾಳವಾಗಿಸಿತು ನನ್ನ ನಿದ್ರೆಯನ್ನ. ಕನಸಲ್ಲಿ  ನಾನಾರಾಧಿಸುತ್ತಲಿದ್ದ ದೇವರ ಮುಂದಿನ ದೀಪವೊಂದು ಬೆಳಗುತ್ತಾ ಬೆಳಗುತ್ತಾ ಬೆಳೆಯುತ್ತ ಹೋಗಿ ಉರಿಯಾಗಿ ಬೃಹದ್ ಕಿಚ್ಚಾಗಿ ಪರಿಣಮಿಸಿ ನನ್ನ ಬೆಳದಿಂಗಳರಮನೆಯನ್ನು ಅರೆಕ್ಷಣದಲ್ಲಿ ಸುಟ್ಟು ಭಸ್ಮ ಮಾಡಿತ್ತು. ಬೆವರಿಳಿದು ಎಚ್ಚರಗೊಂಡು ಅವನನ್ನು ಏಳಿಸುವ ಯತ್ನ ಮಾಡಿದೆ. ‘ಚಂದಮಾಮ...ಚಂದಮಾಮ...ನಂಗೆ ಭಯವಾಗ್ತಿದೆ ಏಳು ಚಂದಮಾಮ'
ಇಲ್ಲ, ಇಲ್ಲ ನನ್ನ ಚಂದಮಾಮ ಏಳಲೇ ಇಲ್ಲ. ಏಳಲೇ ಇಲ್ಲ. ಏಳಲೇ ಇಲ್ಲ ಗೊತ್ತಾ...? ಏಳಲೇ ಇಲ್ಲ. ಮೈಯೆಲ್ಲ ತಣ್ಣಗಾಗಿತ್ತು. ಅವನು ಮತ್ತೆ ಏಳಲೇ ಇಲ್ಲ. ನನ್ನ ಚಂದಮಾಮ ಬೆಳಕರಿಯುವ ಮುನ್ನವೇ ಬೆಳದಿಂಗಳನಾರಿಸಿ ಹೊರಟು ಹೋದ. ಕಾರ್ಯಭಾರದ ನೂಕುನುಗ್ಗಲಿನ ಕತ್ತಲೆಯೊಳಗೆ ಅವನ ಹೃದಯ ಒಡೆದು ಹೋಗಿತ್ತು. ಭಾವಗಳ ಭ್ರಮೆಯಲ್ಲಿದ್ದವಳನ್ನೆಬ್ಬಿಸಿ ಹೊರಟು ಹೋಗಿದ್ದ.

ನಿಮ್ಮನೆ ಹತ್ರ ಈಗ ಚಂದಮಾಮ ಬರೋದೆ ಇಲ್ಲಾ ಅಲ್ವಾ? ಯಾಕೇಂದ್ರೆ ಅವನು ನಿದ್ರೆ ಮಾಡ್ಬಿಟ್ಟಿದ್ದಾನೆ. ಅವನೂ ಬರೋದಿಲ್ಲ ಇನ್ಮೇಲೆ. ‘ಶ್....ಗಲಾಟೆ ಮಾಡ್ಬೇಡಿ, ನನ್ನ ಚಂದಮಾಮ ಮಲಗಿದಾನೆ...'

ನಂಗೆ ಒಂಟಿತನ ಇಷ್ಟ, ಯಾಕೇಂತ ಗೊತ್ತಾಯ್ತಲ್ಲ, ಜೊತೆಗಾರ ಹೋದಮೇಲೆ ಒಂಟಿತನ ಇಷ್ಟ ಅಂತ ಹೇಳ್ಕೋಬೇಕಾಗತ್ತೆ. ಅದಕ್ಕೆ ಹಾಗೆ ಹೇಳ್ತೀನಿ. ನಂಗೆ ಮುಂದೇನೂ ಹೇಳೋಕ್ಕಾಗ್ತಿಲ್ಲ. ಹೇಳೋವಷ್ಟು ಟೈಮಿಲ್ಲ. ನಾನು ಚಂದಮಾಮನ್ನ ನಿದ್ರೆಯಿಂದ ಏಳಿಸ್ಬೇಕು, ಆವತ್ತು ಮಲಗಿದವನು ಇನ್ನೂ ಎದ್ದಿಲ್ಲ, ಇವತ್ತಿಗೆ ಐದು ವರ್ಷವಾಯ್ತು ಅವನು ಮಲಗಿ, ನಾನವನ ಏಳಿಸ್ಬೇಕು...ಹೌದು ನಾನವನ ಏಳಿಸ್ಬೇಕು. ‘ಏಳು ಚಂದಮಾಮಾ...ಏಳು ಚಂದಮಾಮ, ನಿನ್ನ ಮರಿಗೂ ನೀನು ಬೇಕಂತೆ..ನನ್ನ ಬಿಟ್ಟು ಹೋಗ್ಬೇಡ ಏಳು ಚಂದಮಾಮಾ...'

ನಿದ್ರೆಯ ಗುಂಗಿನಲ್ಲೂ ಎದ್ದು ಅವನ ಫೋಟೊದೆದುರು ಕೂತು ಅವನನ್ನು ಏಳಿಸುತ್ತಾ ಬಿಕ್ಕುತ್ತೇನೆ. ಅದೆಷ್ಟೋ ಸಲ ಏಳಿಸಿ ಏಳಿಸಿ ಸೋತು ಅಲ್ಲೇ ನಿದ್ರೆ ಹೋಗುತ್ತೇನೆ. ನನಗಿಂದು ಅವನ ಹಾಗಲ್ಲ. ಬೆಳಗಾದರೆ ಏಳಲೇ ಬೇಕಾದ ಅನಿವಾರ್ಯತೆ ನನಗಿದೆ. ಎಚ್ಚರವಾಗೇ ಇದ್ದು ಬದುಕನ್ನ ಎಳೆದುಕೊಂಡು ಹೋಗಿ ಆ ದಡಕ್ಕೆ ಸಾಗಿಸಬೇಕಿದೆಯಲ್ಲ! ಅದಕ್ಕಾಗಿ ಎಂದೆಂದೂ ನಿದ್ರಿಸದೆ ಕಾಲೆಳೆಯುತ್ತ ನಡೆಯುತ್ತಲೆ ಇದ್ದೇನೆ, ಇರುತ್ತೇನೆ.

ಪುಟದ ಮೊದಲಿಗೆ
 
Votes:  15     Rating: 4.27    
 
 
ಸಂಬಂಧಿಸಿದ ಲೇಖನಗಳು
  ವಿಕಾಸ್ ನೇಗಿಲೋಣಿ ಮಾಡಿರುವ ಜಪಾನಿ ಕವಿ ಪರಿಚಯ
  ತಿರುಮಲೇಶರು ಅನುವಾದಿಸಿದ ಹರ್ಮನ್ ಮೆಲ್ವಿಲ್ ನೀಳ್ಗತೆ
  ಭಾನುವಾರದ ವಿಶೇಷ: ಮನೋಜ್ ಪಿ. ಎಂ. ಬರೆದ ಕತೆ ‘ಕನಸು’
  ಎಂಬತ್ತೈದರ ಚಿತ್ತಾಲರ ಹನೇಹಳ್ಳಿ ಮತ್ತು ದೇವರು
  ಭಾನುವಾರದ ವಿಶೇಷ:ಕಾಮರೂಪಿ ಬರೆದ ಕಥೆ ‘ಉಪಪತ್ತಿಯೋಗ’
  ಬೆಳಗನುಟ್ಟವಳು:ನಟಿ ಭವಾನಿ ಪ್ರಕಾಶ್ ಬರೆದ ಹೊಸ ಕವಿತೆ
  ಮಿತ್ರಾ ವೆಂಕಟ್ರಾಜ ಬರೆದ ಸಣ್ಣಕಥೆ ‘ಬಾಬಿಯಕ್ಕ’
  ಜ. ನಾ. ತೇಜಶ್ರೀ ಅನುವಾದಿಸಿದ ಟಾಗೋರ್ ಕವಿತೆಗಳು
  ವಾರದ ವಿಶೇಷ: ರೇಣುಕಾ ಕತೆ ‘ಎರಡು ದಡಗಳ ಒಳದನಿಗಳು’
  ಭಾನುವಾರದ ವಿಶೇಷ: ಕೆ.ವಿ.ತಿರುಮಲೇಶ್ ಬರೆದ ಕತೆ ‘ಐತ’
  ಭಾನುವಾರದ ವಿಶೇಷ: ಗಣೇಶ್ ನೆಂಪೆ ಕತೆ ‘ಗಿರಿಯಮ್ಮನ ಚೌಡಿ’
  ತಿರುಮಲೇಶ್ ಅನುವಾದಿಸಿದ ವಾಲೆಸ್ ಸ್ಟೀವನ್ಸ್ ಕವಿತೆಗಳು
  ರಶೀದ್ ಅನುವಾದಿಸಿದ ರಿಲ್ಕ್ ಕವಿತೆ
  ಶಾಂತಿ ಅಪ್ಪಣ್ಣ ಬರೆದ ಕತೆ ‘ನನ್ನ ಹಾಡು ನನ್ನದು’
  ತೇಜಶ್ರೀ ಅನುವಾದಿಸಿದ ಒತೈನೊ ಅಮಿಸಿ ಕವಿತೆ
  ರಶೀದ್ ಅನುವಾದಿಸಿದ ಹಾಫಿಝನ ಕವಿತೆ
  ಶ್ರೀಕಾಂತ್ ಪ್ರಭು ಅನುವಾದಿಸಿದ ಕಾಫ್ಕಾ ಕತೆ
  ಮದರಿಯವರ ಗೊಂದಲಿಗ್ಯಾ:ಸಿದ್ಧರಾಮ ಪುಸ್ತಕ ಪರಿಚಯ
  ರಶೀದ್ ಅನುವಾದಿಸಿದ ಒಂದು ಪುಷ್ಕಿನ್ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಬೆಳಗು’
  ವೈಶಾಲಿ ಹೆಗಡೆ ಅನುವಾದಿಸಿದ ಡರೋತಿ ಪಾರ್ಕರ್ ಕವಿತೆಗಳು
  ತೇಜಶ್ರೀ ಅನುವಾದಿಸಿದ ಮೂರು ಯೇಟ್ಸ್ ಕವಿತೆಗಳು
  ಅಬ್ದುಲ್ ರಶೀದ್ ಅನುವಾದಿಸಿದ ಎಜ್ರಾ ಪೌಂಡ್ ಕವಿತೆ
  ವೇಂಪಲ್ಲಿ ಶರೀಫ್ ತೆಲುಗು ಕತೆ ‘ಪಚ್ಚೆ ರಂಗೋಲಿ’
  ಅನಸೂಯಾದೇವಿ ಬರೆದ ದಿನದ ಕವಿತೆ
  ಸುಧಾ ಚಿದಾನಂದ ಗೌಡ ಬರೆದ ದಿನದ ಕವಿತೆ
  ವಿನಾಯಕ ಭಟ್ ಬರೆದ ಕಥೆ ‘ದೂರತೀರ ಯಾನ’
  ನಕ್ಷತ್ರ ಬರೆದ ಆತ್ಮಕ್ಕೆ ಕೊಡಿಸಿಕೊಂಡ ಮುತ್ತುಗಳ ಕವಿತೆ
  ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು