ಅನಂತಮೂರ್ತಿಯವರು ತಮ್ಮ ಬಾಲ್ಯದ ನೆನಪುಗಳ ಕೆಲವು ಭಾಗಗಳನ್ನು ತಾವೇ ಬರೆಯಲು ನಿರ್ಧರಿಸಿದ್ದಾರೆ. ಸದ್ಯ ಅವರು ಹೆಗ್ಗೋಡಿನ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಭಾಗವಹಿಸುತ್ತಿರುವುದರಿಂದ ಬರಹವನ್ನು ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗಿಲ್ಲ. ಎರಡು ವಾರಗಳ ಬಿಡುವಿನ ನಂತರ ಅವರ ನೆನಪುಗಳು ಮತ್ತೆ ಕೆಂಡಸಂಪಿಗೆಯಲ್ಲಿ ಕಾಣಿಸಿಕೊಳ್ಳಲಿದೆ. ಅಲ್ಲಿಯವರಿಗೆ ನಮ್ಮ ಓದಿಗಾಗಿ ತಮ್ಮ ಇತ್ತೀಚಿನ ಎರಡು ಅಪ್ರಕಟಿತ ಕವಿತೆಗಳನ್ನು ಕಳುಹಿಸಿದ್ದಾರೆ. ನಿಮಗೆ ಗೊತ್ತಿರಬಹುದು, ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ನೀವು ಬರೆದ, ಅನುವಾದಿಸಿದ ಕವಿತೆಗಳನ್ನು ನಮಗೆ ಕಳುಹಿಸಿ ಕೊಡಬಹುದು.
ಏನೋ ಸಾವೆನ್ನುವ
‘ಅದು’ ನಿರೀಕ್ಷಿಸುತ್ತ ಇರೋದು
ಎಲ್ಲೋ,ಮುಂದೆಂದೋ
ಈಗಂತೂ ಅಲ್ಲ ;
(ಎನ್ನಿಸುವಂತೆ) ಆಪ್ತರ ಲೋಕಾಭಿರಾಮದ ಮಾತು.
ನೋವಾಗದಂತೆ ಸೂಜಿಯಲ್ಲಿ ರಕ್ತ ಸೆಳೆಯುವ ನರ್ಸಿನ ಮುಗುಳ್ನಗೆ
ಹಾಸಿಗೆ ಪಕ್ಕದಲ್ಲೊಂದು ಇನ್ನಷ್ಟು ಅರಳುವ ಭರವಸೆಯ ಗುಲಾಬಿ
ಒಣಗುವ ನಾಲಗೆಗೆ ಹಿತವಾಗಲೆಂದು ಗೆಳೆಯ ತಂದ ಕಿತ್ತಳೆ ಬುಟ್ಟಿ
’ಅದು’ ನಿರೀಕ್ಷಿಸುತ್ತ ಇದೆ ಎಂದು ತಿಳಿಯೋದೂ
ಅಹಮಿನ ಭ್ರಮೆ
’ಅದು’ ಇದೆ,
ಸುಮ್ಮನೇ, ಬಯಸದೆ, ಬೇಡದೆ,
ಅದರ ಉದಾಸೀನಕ್ಕೆ ತಾನು ಸಲ್ಲುವ ಕ್ಷಣ
ಈಗಾದರೇನು, ನಾಳೆಯಾದರೇನು,
ನಿನ್ನೆಯೂ ಅದು ಹೀಗೇ ನಿರ್ಲಕ್ಷ್ಯದಲ್ಲಿ ಇತ್ತಲ್ಲ
ಎಂದು ತನ್ನ ಪಾಡಿಗೆ ಗುಲಾಬಿಯಂತೆ ಇವನೂ
ಇನ್ನೂ ಕೊಂಚ ಅರಳುತ್ತ ಇರುವಾಗ
ಕಿಟಕಿಯಾಚೆ ಕಾಮರೂಪಿ ಮೋಡಗಳ ಆಕಾಶ,
ಹುಳ ಕುಕ್ಕಿ ಹುಡುಕುವ ಆತುರದ ಹಸಿರು ಕೊಕ್ಕಿನ ಪುಟಾಣಿ ಹಕ್ಕಿ,
ರೋಮಾಂಚಿತ ಕಚಕುಳಿಯ ಗುಬ್ಬಿ,
ಸೋರುವ ಸಿಂಬಳದ ಎಗ್ಗಿಲ್ಲದೆ ಚೆಂಡಾಡುವ ಚಡ್ಡಿಯ ಹುಡುಗ
ಕೂದಲನ್ನು ಕಟ್ಟುತ್ತ ಬಿಚ್ಚುತ್ತ ಗಂಡನಿಗೆ ಕಾಯುತ್ತ ಹೊಸಿಲನ ಮೇಲೆ ನಿಂತ ಸೇಳೆಯ ಸೊಸೆ
ತನ್ನದೆನ್ನಿಸಿದ್ದ ಈ ಎಲ್ಲವುದಕ್ಕೂ
ಸಾವಕಾಶದ ಕಾಲದಲ್ಲಿ ತಾನು ಅನಗತ್ಯ ಎನ್ನುವುದು ಹೊಳೆದು
ತೊಟ್ಟುಕಳಚಿ
ಹೋದ.
ಸಂಸಾರಿ
ಎಗ್ಗಿಲ್ಲದ ಪ್ರಣಯಿ
ಯಾಕೆ?
ದಿಕ್ಕು ದಿವಾಣಿ ಇಲ್ಲದ ಅವಧೂತ ಕೂಡ –
ದಿಟ್ಟರು, ಮೊಂಡರು,
ಮೋಟುಮರ ಗಾಳಿಮಿಂಡ ಅಂತಾರಲ್ಲ
ಹಾಗೆ ಜಗಭಂಡರು
ಸೊಂಪಾಗಿ ಸುಮ್ಮನೇ
ಗಾಳಿಗೂ ಬಿಸಿಲಿಗೂ ಚಳಿಗೂ ಸಲ್ಲುವ ಉಪಾಯದ ಅವಕಾಶಗಳನ್ನು ರೆಂಬೆಕೊಂಬೆಗಳಲ್ಲಿ
ರೂಢಿಸಿಕೊಂಡು
ತನ್ನ ಅಪಾರ ತೂಕವೂ ಹಗುರವೆಂಬಂತೆ ಸದ್ಯದ ಗಾಳಿಗೆ ತೂಗುತ್ತ
ಬಾಳಿ ತಾಳುವ ಅಶ್ವತ್ಥದ ಕೆಳಗೆ
ನೆರಳಿಗೆ ಸುಖಿಸಿ, ಅಪರೂಪಕ್ಕೆ
ಉದಾಸೀನದಲ್ಲಿ ಹಾಯಾಗಿ ಕಾಲುಚಾಚಿ ಕೂತವ
ಸಂಸಾರಿ.
ತೊಟ್ಟುತಾನೇ ಕಳಚಿ ಉದುರುವ ಎಲೆಯೊಂದನ್ನು ಹೀಗೇ ಗಮನಿಸಿ
ಹೀಗೇ ನಿರ್ಗಮಿಸುವ ಆಸೆಯ
ಮೊಮ್ಮಗನಿಗೆ ಬುಗುರಿ ಆಟ ಕಲಿಸುವ
ವ್ಯಾಮೋಹಿ ಕೂಡ
- ಅನಂತಮೂರ್ತಿ
[ಚಿತ್ರ - ರಶೀದ್]