ಸೆಪ್ಟೆಂಬರ್ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಕಾಲೇಜು ಸಂಪಿಗೆ: ಮಲೆಯಾಳ ನೆಲದಲ್ಲಿ ಕಾಡು ಮಕ್ಕಳ ಕನಸು    
ಸ್ಮಿತಾ ಮಾಕಳ್ಳಿ
ಮಂಗಳವಾರ, 3 ಮಾರ್ಚ್ 2009 (06:30 IST)

ಇದರ ಹೆಸರು ಕನವು. ಕನವು ಅಂದರೆ ಮಲೆಯಾಳಂನಲ್ಲಿ ಕನಸು ಎಂದು ಅರ್ಥವಂತೆ. ಇಂಥದ್ದೊಂದು ಕನಸನ್ನು ಕಾಡಿನ ನಡುವೆ ನೆಟ್ಟವರು ಬೇಬಿ ಎಂಬ ಮಲೆಯಾಳಿ ಲೇಖಕ. ಇವರು ಮುಂಚೆ ನಕ್ಸಲಿಸಂ ಚಳುವಳಿಯಲ್ಲಿ ಇದ್ದವರಂತೆ. ವೈನಾಡಿನ ಮಾನಂದವಾಡಿಯ ಹತ್ತಿರದಲ್ಲಿರುವ ಈ ಕನವು ವಾಸ್ತವವಾಗಿ ಒಂದು ಶಾಲೆ. ಕಾಡಿನ ಮಕ್ಕಳಿಗಾಗಿ ಇದರ ಕನಸನ್ನು ಕಂಡು ಸಾಕಾರಗೊಳಿಸಿರುವ ರೀತಿ ಮಾತ್ರ ಬೇಬಿಯವರಿಗೆ ಈ ಮಕ್ಕಳ ಬಗ್ಗೆ ಇರುವ ಕಾಳಜಿಯನ್ನು ಎದೆಗಿಳಿಯುವಂತೆ ಮಾಡುವುದಲ್ಲದೆ, ನಿಜವಾದ ಸ್ಕೂಲು, ಶಿಕ್ಷಣ ಹೇಗಿರಬೇಕೆಂಬುದರ ಬಗ್ಗೆ ದೇಶಕ್ಕೇ ಮಾದರಿಯಾಗಿರುವಂತೆ ಅಚ್ಚರಿ ಮೂಡಿಸುತ್ತದೆ.

ತೊತ್ತೋ ಚಾನಳನ್ನು ಓದಿದ ನಂತರ ಅವಳ ಶಾಲೆಯಂಥದ್ದನ್ನು ನಿಜಕ್ಕೂ ನೋಡಬಹುದೇ ಅಂದುಕೊಂಡಿದ್ದ ನನಗೆ ಕನವು ತೊತ್ತೋಚಾನಳಿಗಿಂತ ವಿಭಿನ್ನವಾದ ಲೋಕವೊಂದನ್ನು ಪರಿಚಯಿಸಿತು. ಸುತ್ತಲೂ ಕಾಡು. ಕಾಡಿನ ಬದಿಗೆ ಬತ್ತದ ಗದ್ದೆ, ಕಾಫಿ ತೋಟಗಳು. ಕೊಂಚ ದೂರದಲ್ಲಿ ಹರಿವ ನದಿಯ ಸದ್ದು. ಇವುಗಳ ನಡುವೆ ಕೂತಿರುವ ಕನವನ್ನು ಶಾಲೆ ಅನ್ನುವುದಕ್ಕಿಂತ ಮನೆ ಅಂತ ಕರೆದರೇ ಚೆನ್ನ. ಅದರಲ್ಲೂ ಮಕ್ಕಳ ಮನೆ ಅಂತ ಕರೆದರೆ ಇನ್ನೂ ಚೆನ್ನ. ಏಕೆಂದರೆ ಇದು ಪುಟಾಣಿ ಮಕ್ಕಳಿಂದ ಗಿಜಿಬಿಜಿಗುಡುತ್ತಿರುತ್ತದೆ. ವಿಶೇಷವೆಂದರೆ ಇಲ್ಲಿರುವ ಅಷ್ಟೂ ಮಕ್ಕಳು ಕಾಡಿನ ಮಕ್ಕಳು. ಬುಡಕಟ್ಟು ಜನಾಂಗಕ್ಕೆ ಸೇರಿದವುಗಳು. ಇವರ ಅಪ್ಪ ಅಮ್ಮಂದಿರು ಇಂದಿಗೂ ಕಾಡಿನಲ್ಲೇ ವಾಸಿಸುತ್ತಿದ್ದಾರೆ.

ಇಲ್ಲಿ ಕಲಿಸುತ್ತಿರುವುದು ಬದುಕಿನ ಪಾಠ. ಹಾಗಂತ ಇಲ್ಲಿ ಮೇಷ್ಟ್ರು ಅಂತ ಯಾರೂ ಇಲ್ಲ. ಒಂದು ಅರ್ಥದಲ್ಲಿ ಇಲ್ಲಿ ಎಲ್ಲರೂ ಮೇಷ್ಟ್ರುಗಳೇ, ಎಲ್ಲರೂ ವಿದ್ಯಾರ್ಥಿಗಳೇ. ಏಕೆಂದರೆ ಒಬ್ಬನು ಒಂದನ್ನು ಕಲಿಯುತ್ತಾ ಹೋದಂತೆ ತನಗಿಂತ ಕಿರಿಯರಿಗೆ ಅದರಲ್ಲಿ ಆಸಕ್ತಿ ಇದ್ದರೆ ಅದನ್ನು ಅವರಿಗೆ ಹೇಳಿಕೊಡುತ್ತಾ ಹೋಗುತ್ತಾರೆ. ಇಲ್ಲಿ ಯಾರಿಗೆ ಯಾವುದರಲ್ಲಿ ಆಸಕ್ತಿಯೋ ಅದನ್ನೇ ಗಮನಿಸುತ್ತಾ ಹೋಗುತ್ತಾರೆ. ನಂತರ ಅದನ್ನೇ ಕಲಿಯ ತೊಡಗುತ್ತಾರೆ. ಒಂದಷ್ಟು ದಿನ ಹೀಗೆ ಕಲಿತ ಮಕ್ಕಳಿಗೆ ಆಯಾ ಮಕ್ಕಳ ಆಸಕ್ತಿಗೆ ತಕ್ಕಂತೆ ಪರಿಣತಿಗಾಗಿ ದೂರದ ಊರುಗಳಿಗೂ ಕಳುಹಿಸಲಾಗುತ್ತದೆ. ಹೀಗೆ pottery, tailoring, sculpture ಮುಂತಾದವುಗಳನ್ನು ಕಲಿಯಲು ಬೆಂಗಳೂರು,ದಿಲ್ಲಿ,ಗುಜರಾತ್ ಮುಂತಾದ ಊರುಳಿಗೆ ಹೋಗಿ ಕಲಿತು ಬಂದವರು ಇಲ್ಲಿದ್ದಾರೆ. ಇವರುಗಳೇ ಇಲ್ಲಿನ ಮಕ್ಕಳಿಗೆ ಮೇಷ್ಟ್ರೂ ಹೌದು,ಅಂತೆಯೇ ಸಹೋದರ ಸಹೋದರಿಯೂ ಹೌದು. ಇಂಥವುಗಳಲ್ಲಿ ಹೆಚ್ಚು ಪರಿಣಿತರಾದವರುಗಳು ವಿದೇಶಗಳಿಗೂ ಹೋಗಿದ್ದಾರೆ. ಅದೇ ರೀತಿ ಇಂಥವುಗಳಿಂದ ಬರುವ ಸಂಪಾದನೆಯನ್ನು ತಿರುಗಿ ತಮ್ಮ ಮನೆ ಕನುವಿಗೇ ಕೊಡುತ್ತಾರೆ. ಹಾಗಾಗಿ ಇಲ್ಲಿನ ದುಡಿಮೆಯಲ್ಲಿ,ಕಲಿಕೆಯಲ್ಲಿ,ನಾವೆಲ್ಲಾ ಒಂದೇ ಎಂಬ ಭಾವವಿದೆ. ಇಲ್ಲಿನ ಕೆಲವರಿಗೆ ಇಂಗ್ಲಿಷ್ ,ಹಿಂದಿ ಬರುತ್ತದೆ. ಇವರದ್ದೊಂದು ಹಾಡು,ಕುಣಿತಗಳ ತಂಡವಿದೆ. ಈ ತಂಡವೂ ಆಗಾಗ ಅಲ್ಲಿ ಇಲ್ಲಿ ಪ್ರದರ್ಶನಗಳನ್ನು ಕೊಡುತ್ತಾ ಸಂಸಾರ ನಿಭಾಯಿಸಲು ಒಂದಷ್ಟನ್ನು ದುಡಿಯುತ್ತದೆ. ಇಂಥ ಗಳಿಕೆಯ ಜೊತೆಗೆ ಇವರುಗಳು ತಮಗೆ ನಿತ್ಯದ ಊಟಕ್ಕೆ ಬೇಕಾದ ಬತ್ತ, ಮರಗೆಣಸು ಮುಂತಾದವುಗಳನ್ನು ಮನೆಯ ಮುಂದಿನ ಗದ್ದೆಯಲ್ಲಿ ಬೆಳೆದುಕೊಳ್ಳುತ್ತಾರೆ. ಇದಕ್ಕಾಗಿಯೇ ಕನವಿನ ಹೆಸರಿನಲ್ಲಿ ಒಂದಷ್ಟು ಜಮೀನನ್ನೂ ಖರೀದಿಸಿದ್ದಾರೆ.

ಅಲ್ಲದೆ ಕಾಡಿನ ನಡುವಿನಲ್ಲಿದ್ದರೂ ಕನವಿನ ಮನೆಯಲ್ಲಿ ಮಕ್ಕಳಿಗೆ ಸ್ವಚ್ಛತೆಯ ಅರಿವು ಮೂಡಿಸಲು ಕೆಲವು ಆಧುನಿಕ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಇಲ್ಲಿ ಕಂಪ್ಯೂಟರ್ ವ್ಯವಸ್ಠೆ ಇದೆ. ಬೇಕಾದವ್ರು ಇದನ್ನು ಕಲಿಯಬಹುದು. ಹಾರ್ಮೋನಿಯಂನಿಂದ ಹಿಡಿದು ಇನ್ನಿತರ ಸಂಗೀತದ ಸಾಧನಗಳಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಅತ್ಯಂತ ಆಧುನಿಕ ಪುಸ್ತಕಗಳನ್ನೊಳಗೊಂಡ ಲೈಬ್ರರಿ ಇದೆ. ಇದರಲ್ಲಿ ಮಲೆಯಾಳಂನ ಮುಖ್ಯ ಲೇಖಕರುಗಳ ಪುಸ್ತಕಗಳಲ್ಲದೆ, ಜಗತ್ತಿನ ಕೆಲವು ಮುಖ್ಯ ಲೇಖಕರುಗಳ ಪುಸ್ತಕಗಳೂ ಇವೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ ಮಕ್ಕಳಿಗಾಗಿಯೇ ಒಂದು ವಿಶೇಷ ಲೈಬ್ರರಿ ಇದ್ದು, ಇಲ್ಲಿ ಪುಸ್ತಕಗಳಲ್ಲದೆ ಪೇಂಟಿಂಗ್ ಗೆ ಸಂಬಂಧಿಸಿದ ಸಲಕರಣೆಗಳೂ ಇವೆ.

ನಾವು ಕನವು ತಲುಪಿದಾಗ ಆಗಲೇ ಸಂಜೆಯಾಗಿತ್ತು. ಕಾಫಿ ತೋಟಗಳ ನಡುವಲ್ಲಿ ಹರಿದು ಹೋಗಿದ್ದ ಗಾಡಿ ಜಾಡಿನಂಥ ರಸ್ತೆಯಲ್ಲಿ ಅಲ್ಲಿಗೆ ಹೋಗುವ ಹೊತ್ತಿಗೆ ಮಳೆಯೂ ಶುರುವಾಗಿತ್ತು. ಕಲಾತ್ಮಕವಾಗಿ ಕಟ್ಟಿರುವ ಕನವಿನ ಮನೆ ಮೊದಲ ನೋಟಕ್ಕೇ ಆತ್ಮೀಯ ಅನಿಸಿಬಿಟ್ಟಿತು. ನನಗೆ ಅಲ್ಲಿ ಹೋದ ಕೂಡಲೇ ಸೂರ್ಯ ಅನ್ನುವ ಹುಡುಗಿ ಪರಿಚಯವಾದಳು. ನಮ್ಮಿಬ್ಬರ ಮಧ್ಯೆ ಭಾಷೆ ಸಮಸ್ಯೆ ಅಡ್ಡ ಬಂತು. ನನಗೆ ಮಲೆಯಾಳಂ ತಿಳಿಯುತ್ತಿರಲಿಲ್ಲ. ಅವಳಿಗೆ ಕನ್ನಡ ಇಂಗ್ಲಿಷ್ ಬರುತ್ತಿರಲಿಲ್ಲ. ಆದರೆ ಅವಳಿಗೆ ಹಿಂದಿ ಗೊತ್ತಿದ್ದುದರಿಂದ ನನ್ನ ಹರುಕು ಮುರುಕು ಹಿಂದಿಯಲ್ಲೇ ಮಾತನಾಡಿದೆ. ಅವಳು ಮಾತನಾಡಿದರೆ ಸಂಗೀತ ಕೇಳಿದಂತಾಗುತ್ತಿತ್ತು. ಇವಳು ಮಾತನಾಡುವುದೇ ಹೀಗೆ ಅಂದುಕೊಂಡ ಕೊಂಚ ಹೊತ್ತಿಗೆ ನನಗೆ ತಿಳಿಯಿತು- ಮಲೆಯಾಳ ಭಾಷೆಯೇ ಒಂದು ರೀತಿಯ ಸಂಗೀತವಿದ್ದಂತೆ ಅಂತ. ಆಗಿನಿಂದ ಯಾಕೋ ನನಗೂ ಮಲೆಯಾಳಂ ಕಲಿಯಬೇಕು ಅನಿಸತೊಡಗಿತು. ಇವಳು ಗುಜಾರತ್ ನ ಕಸ್ತೂರಬಾ ಶಾಲೆಯಲ್ಲಿ ಟೈಲರಿಂಗ್ ಕಲಿತು ಬಂದು ಇಲ್ಲಿನ ಮಕ್ಕಳಿಗೆ ಕಲಿಸುತ್ತಿದ್ದಾಳೆ.

ಇಂಥ ಕನುವಿನ ಮನೆ ನನಗೆ ತುಂಬಾ ಬೇಗ ಹೊಂದಿಕೊಂಡು ಬಿಟ್ಟಿತು. ನಾವು ಹೋದ ಕೊಂಚ ಹೊತ್ತಿಗೆಲ್ಲಾ ಮಳೆ ನಿಂತು, ಆಕಾಶದಲ್ಲಿ ಬೆಳದಿಂಗಳು ಬಂತು. ನನ್ನ ಜೀವನದಲ್ಲಿ ಎಂದೂ ಕಾಡಿನ ನಡುವೆ ಕಳೆದಿರದಿದ್ದ ನನಗೆ ಕಾಡಿನ ಬಗ್ಗೆ ಭಯವೆಲ್ಲಾ ಮಾಯವಾಗಿ ಖುಷಿಯಾಗತೊಡಗಿತು. ಇನ್ನೇನು ಊಟಕ್ಕೆ ಸ್ವಲ್ಪ ಹೊತ್ತು ಇದೆ ಅನ್ನುವಾಗ ಛಾತಿ ಅನ್ನುವವರು ಮನೆಯ ಮಕ್ಕಳನ್ನೆಲ್ಲಾ ಎದುರು ಕೂಡಿಸಿಕೊಂಡು, ಕೈಯಲ್ಲಿ ಹಾರ್ಮೋನಿಯಂ ಹಿಡಿದು ವೈನಾಡಿನ ಬಗ್ಗೆ ಕಾಡು ಜನರು ಕಟ್ಟಿದ ಹಾಡೊಂದನ್ನು ಹಾಡಿದರು. ಆ ಹಾಡು ನಮಗೆ ಎಷ್ಟು ಇಷ್ಟವಾಯಿತೆಂದರೆ, ಮುಂದಿನ ಕೆಲವು ಹಾಡುಗಳಿಗೆ ನಾವೂ ದನಿ ಕೂಡಿಸಿದ್ದಲ್ಲದೆ, ಹಾಡುಗಳೆಲ್ಲಾ ಮುಗಿದು, ಅವರು ಕುಣಿಯಲು ಶುರು ಮಾಡಿದಾಗ ನಾವುಗಳು ಅವರೊಂದಿಗೆ ಕುಣಿಯ ತೊಡಗಿದೆವು. ಇದು ಇವರುಗಳ ಪ್ರತಿ ದಿನದ ಕಾರ್ಯಕ್ರಮ. ಹಾಡಿ ಕುಣಿದು ದಣಿದ ಮೇಲೆ ಊಟ. ನನಗೆ ಬೆಳಗಿನಿಂದಲೂ ಕೇರಳದ ಕುಚುವಲಕ್ಕಿ ಯಾಕೋ ಇಷ್ಟವಾಗದೆ ಏನನ್ನೂ ತಿನ್ನಬೇಕು ಅನಿಸುತ್ತಿರಲಿಲ್ಲ. ಆದರೆ ಅವ್ರು ಕೊಟ್ಟ ಅನ್ನ ಗಂಜಿ ನನಗೆ ತುಂಬಾ ಹಿಡಿಸಿ ಹೊಟ್ಟೆ ತುಂಬಾ ಊಟ ಮಾಡಿದೆ.

ಇಲ್ಲಿ ನನ್ನನ್ನು ಕಾಡಿದ ಮತ್ತೊಂದು ಸಂಗತಿ ಒಬ್ಬ ಸಾಫ್ಟ್‌ವೇರ್ ಇಂಜಿನಿಯರನ ಕಥೆ. ಇವನ ಹೆಸರು ಜಾಯ್ ಅಂತ. ಇವನು ಸುಮಾರು ನಾಲ್ಕು ವರ್ಷ ಅಮೇರಿಕಾದಲ್ಲಿದ್ದು, ಇದ್ದ ಕೆಲಸವನ್ನು ಬಿಟ್ಟು ಇಲ್ಲಿಗೆ ಬಂದು ಈ ಮಕ್ಕಳ ಜೊತೆ ಹಾಡುತ್ತಾ ಕುಣಿಯುತ್ತಾ ಬದುಕುತ್ತಿದ್ದಾನೆ. ವಯಸ್ಸು ಮೂವತ್ತು ದಾಟಿದ್ದರೂ ಇನ್ನೂ ಮದುವೆಯಾಗಿಲ್ಲ. ಮತ್ತೆ ಅಮೇರಿಕಾಕ್ಕೆ ಹೋಗುವ ಮನಸಿಲ್ಲದೆ ಇಲ್ಲೇ ಒಂದು ತೋಟವನ್ನು ಹುಡುಕುತ್ತಿದ್ದಾನೆ. ತೋಟ ಮಾಡಿಕೊಂಡು ಕನವಿನಂಥ ಶಾಲೆಯೊಂದನ್ನು ಪ್ರಾರಂಭಿಸುತ್ತೇನೆಂದು ಹೇಳುತ್ತಾನೆ. ಅವನ ಅಪ್ಪ ಅಮ್ಮ ಅಕ್ಕಂದಿರು ಅಮೇರಿಕಾದಲ್ಲೇ ನೆಲಸಿದ್ದಾರೆ. ನಾವು ಹೋದಾಗ ಅಪ್ಪ ಅಮ್ಮ ಬಂದಿದ್ದರು. ಮಗನನ್ನು ಒಪ್ಪಿಸಿ ಮತ್ತೆ ಅಮೇರಿಕಾಕ್ಕೆ ಕರೆದುಕೊಂಡು ಹೋಗಲು. ಇವನು ಮಾತ್ರ ಹೋಗುವುದೇ ಇಲ್ಲ ಅನ್ನುತ್ತಾನೆ. ಹಾಗಾದರೆ ಬೇಗ ಯಾರನ್ನಾದರೂ ಮದುವೆ ಮಾಡಿಕೊಂಡು ಬಿಡು ಅಂತ ಅಪ್ಪ ತಮಾಷೆ ಮಾಡಿದ್ದಕ್ಕೆ, ತಲೆಯ ಬಿಳಿ ಕೂದಲುಗಳನ್ನು ತೋರಿಸಿ ಇಂಥವನನ್ನು ಯಾರು ಮದುವೆಯಾಗುತ್ತಾರೆ ಅಂತ ನಗುತ್ತಿದ್ದ.

ಊಟ ಮಾಡಿ ಆಚೆ ಬಂದರೆ, ಆಕಾಶದಲ್ಲಿ ಚಂದ್ರನ ಬೆಳಕು ಮತ್ತಷ್ಟು ಜಾಸ್ತಿಯಾಗಿತ್ತು. ನಮಗೆ ಮಲಗಲೆಂದು ಬಿಟ್ಟು ಕೊಟ್ಟಿದ್ದ ಸ್ವಲ್ಪ ದೂರದಲ್ಲಿದ್ದ ಲೈಬ್ರರಿ ಮನೆ, ಅದರ ಪಕ್ಕದ ಗದ್ದೆ ಬಯಲು, ಅದರಾಚೆಗಿನ ಕಾಡು, ಅದರೊಳಗಿನ ಹಕ್ಕಿಗಳ ಕೂಗಿನಂಥ ಎಂಥೆಂತದೋ ಸದ್ದುಗಳು- ನನಗೆ ನನ್ನ ಜೀವನದ ಅತ್ಯಂತ ಖುಷಿಯ ದಿನವಾಗಿ ನೆನಪಿನಲ್ಲಿ ಉಳಿಯುವಂತಾಯ್ತು.

ಬೆಳಿಗ್ಗೆ ಎದ್ದಾಗ ಇಡೀ ವಾತಾವರಣ ರಾತ್ರಿ ನೋಡಿದ್ದಕ್ಕಿಂತ ಮತ್ತೂ ಸುಂದರವಾಗಿ ಕಾಣತೊಡಗಿತು. ಮನೆಯ ಮುಂದಿನ ಗದ್ದೆಗೆ ಮುತ್ತಿಕೊಂಡಿದ್ದ ಹಕ್ಕಿಗಳ ಕಲರವದೊಂದಿಗೆ ನಾವು ಅಲ್ಲಿಂದ ಹೊರಟೆವು. ಹೊರಟಾಗ ಯಾಕೋ ನನಗೆ ಬೇಸರವಾಗತೊಡಗಿತು.

ಅಪ್ಪ ಕನುವಿನ ನೆನಪಿಗಾಗಿ ಕೊಳಲನ್ನು ಕೊಂಡುಕೊಂಡರು. ನಾನು ಸೂರ್ಯಳಿಂದ ನನ್ನ ಹೆಸರನ್ನು ಮಲೆಯಾಳಂನಲ್ಲಿ ಬರೆಸಿಕೊಂಡೆ.

(ಚಿತ್ರಗಳು- ಡಾ.ರಘುಪತಿ)

ಪುಟದ ಮೊದಲಿಗೆ
 
Votes:  4     Rating: 4.5    
 
 
ಸಂಬಂಧಿಸಿದ ಲೇಖನಗಳು
  ಸಚಿನ್ ದೇವರಾದರೂ ಕ್ರಿಕೆಟ್ ಧರ್ಮವಲ್ಲ
  ಬಿ ಎ ಬಿ ಎ ಎಂದೇಕೆ ಬೀಳುಗಳೆಯುವಿರಿ? ಸೀಮಾ ಸಮತಲ ಬರಹ
  ಧಾರವಾಡದ ಮೊದಲ ದಿನಗಳು : ಸ್ಮಿತಾ ಮಾಕಳ್ಳಿ ಬರಹ
  ಬಂಗಾರದಂತ ಎನ್ನ ಚಾದರ: ಸೀಮಾ ಸಮತಲ ಬರಹ
  ಮಕ್ಕಳ ಸಂಪಿಗೆಯಲ್ಲಿ ಮುದ್ದು ಬರೆದ ಕವಿತೆ
  ಕಾಲೇಜು ಸಂಪಿಗೆ: ಗುರುವಿನ ಗುಲಾಮನಾಗದ ತನಕ...
  ನನ್ನ ಶತ್ರುವೂ ಅಕ್ಕ, ನನ್ನ ಗೆಳತಿಯೂ ಅಕ್ಕ
  ಕಾಲೇಜು ಸಂಪಿಗೆ : ಲಾರಾಳ ಲೌವ್ಲಿ ಲೋಕ
  ಕಾಲೇಜು ಸಂಪಿಗೆ : ಸೀಮಾ ಸಮತಲ ಬರೆದ ಹಿಮಾಲಯ ಕಥನ
  ಕಾಲೇಜು ಸಂಪಿಗೆಯಲ್ಲಿ ಕಾವ್ಯ ಬರೆದ ಕವಿತೆಗಳು
  ಮಕ್ಕಳ ಸಂಪಿಗೆಯಲ್ಲಿ ಸಂಕೇತನ ಬಣ್ಣಗಳು
  ಕಾಲೇಜು ಸಂಪಿಗೆಯಲ್ಲಿ ಲಕ್ಷ್ಮಿ ವಾರಣಾಶಿ ಬರೆದ ಕವಿತೆ
  ಮಕ್ಕಳ ಸಂಪಿಗೆ: ಭಗವತಿ ಹೇಳುವ ಮೂರು ಕಥೆಗಳು
  ‘ಅಜ್ಜಿಮನೆಯಲ್ಲಿ’ ೬ : ದೇವಸ್ಥಾನದಲ್ಲೊಂದು ಪ್ರಶ್ನೆ
  ಕಾಲೇಜು ಸಂಪಿಗೆ: ಜಾತಿರಗಳೆಯಿಲ್ಲದ ಬಾಲ್ಯ
  ಮಕ್ಕಳ ಸಂಪಿಗೆಯಲ್ಲಿ ಜೀವನ್ ಜೋಸ್ ಬಣ್ಣಗಳು
  ಮಕ್ಕಳ ಸಂಪಿಗೆ: 'ಅಜ್ಜಿಮನೆಯಲ್ಲಿ' ಧಾರಾವಾಹಿ
  ಕಾಲೇಜು ಸಂಪಿಗೆ: ಸ್ಕೂಟಿ ಏರಿ ರಾಜಕುಮಾರಿ
  ಕಾಲೇಜು ಸ೦ಪಿಗೆಯಲ್ಲಿ ಕಾರ್ತಿಕ್ ಬರೆದ ಕವಿತೆ
  ಮಕ್ಕಳ ಸಂಪಿಗೆ: ತೋಪಿನಲ್ಲಿ ಮರಕೋತಿ ಆಡುವಾಗ
  ಕಾಲೇಜು ಸಂಪಿಗೆ: ಈಜುಕೊಳದಲ್ಲೇ ತೀರಿಹೋದಳು ಪುಟ್ಟಿ
  ನವೋದಯದ ದಿನಗಳು ೩- ಫಸ್ಟ್ ಸಂಡೆ ಮತ್ತು ಪರೀಕ್ಷೆ ಭಯ
  ಅಜ್ಜಿಮನೆಯಲ್ಲಿ ೩: ಟಂಗ್ ಟ್ವಿಸ್ಟರ್ಸು-ಹೇಳಿ ನೋಡೋಣ?
  ಅಜ್ಜಿಮನೆಯಲ್ಲಿ ೨- ಮೋಡದ ಹಾಡು
  ಕಾಲೇಜು ಸಂಪಿಗೆ: ಅಪ್ಪ ಅಮ್ಮನ ಜಗಳದ ನಡುವೆ ಗುಲ್ಮೊಹರ್
  ಮಕ್ಕಳ ದಿನ ವಿಶೇಷ : ಅಜ್ಜಿ ಮನೆಯಲ್ಲಿ ಅಳು ಬಂದಿದ್ದು
  ಕಾಲೇಜು ಸಂಪಿಗೆಯಲ್ಲಿ ವೇದಾ ನೂಪುರ ಬರೆದ ಕವಿತೆಗಳು
  ಕಾಲೇಜು ಸಂಪಿಗೆಯಲ್ಲಿ ಚರಿತ ಬರೆದ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಗ್ರೀಷ್ಮಾಳ ಚಿತ್ರಗಳು
  ಮಕ್ಕಳ ಸಂಪಿಗೆಯಲ್ಲಿ ವರುಣ ಚೆಲ್ಲಿದ ಬಣ್ಣಗಳು
  ನವೋದಯದ ದಿನಗಳು ೨ - ಅಲ್ಲೇನು ಕೋತಿ ಕುಣಿತೈತಾ..?
  ಕಾಲೇಜು ಸಂಪಿಗೆ: ಪರೀಕ್ಷೆ, ಫೇಲು, ಅಮ್ಮ, ಅಪ್ಪ ಇತ್ಯಾದಿ
  ಕಾಲೇಜು ಸಂಪಿಗೆಯಲ್ಲಿ ನವೋದಯದ ದಿನಗಳು
  ಕಾಲೇಜು ಸಂಪಿಗೆ : ಇಲ್ಲಿ ನೀರು ಮಾರಾಟಕ್ಕಿದೆ!
  ಮಕ್ಕಳ ಸಂಪಿಗೆಯಲ್ಲಿ ಅಮ್ಮ ಹೇಳಿದ ಕತೆ
  ಮಕ್ಕಳ ಸಂಪಿಗೆಯಲ್ಲಿ ವಿವೇಕನ ಫ್ಯಾಂಟಸಿಗಳು
  ಕಾಲೇಜುಸಂಪಿಗೆಯಲ್ಲಿ ರಂಗನತಿಟ್ಟು
  ಮಕ್ಕಳ ಸಂಪಿಗೆಯಲ್ಲಿ ಪೂಜಾಶ್ರೀ ಬರೆದ ಬಣ್ಣಗಳು
  ಕಾಲೇಜು ಸಂಪಿಗೆ: ತೊತ್ತೊ ಚಾನಳ ಸ್ವಚ್ಛಂದ ಲೋಕ
  ಮಕ್ಕಳ ಸಂಪಿಗೆ: ಸತ್ತೇನೇ ಎಲೇ ಗಿಡ್ಡಕ್ಕಿ!?
  ಕಾಲೇಜು ಸಂಪಿಗೆ: ರಕ್ಷಾಬಂಧನದ ಬಂಧ
  ಮಕ್ಕಳ ಸಂಪಿಗೆಯಲ್ಲಿ ಕಿರಣನ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಮಗನ ಭಾಷಾ ಸಾಹಸಗಳು
  ಮಕ್ಕಳ ಸಂಪಿಗೆಯಲ್ಲಿ ಭಗವತಿ ಹೇಳಿದ ಕಥೆ
  ಕಾಲೇಜು ಸಂಪಿಗೆಯಲ್ಲಿ ದಿಲೀಪ ಬರೆದ ಕವಿತೆ
  ಕಾಲೇಜು ಸಂಪಿಗೆಯಲ್ಲಿ ಗೌತಮ ಬರೆದ ಕಥೆ
  ಮಕ್ಕಳ ಸಂಪಿಗೆಯಲ್ಲಿ ಸಿತಾರಾ ಮಾಡಿದ ಭಾಷಣ
  ಕಾಲೇಜು ಸಂಪಿಗೆಯ ಮೊದಲ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಲಕ್ಕಿ ಸನ್
  ಮಕ್ಕಳ ಸಂಪಿಗೆಯಲ್ಲಿ ಉಲ್ಲಾಸದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಂಬರ್ ನೀಲ್ ಬರೆದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಪ್ರಮೇಯ
  ಮಕ್ಕಳ ಸಂಪಿಗೆಯಲ್ಲಿ ಆಶಿತ್ ಭಟ್
  ಮಕ್ಕಳಸಂಪಿಗೆಯಲ್ಲಿ ಹಾಸನದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ‘ಚುಪ್ರಿ'ಯ ಕವಿತೆಗಳು