ಮಕ್ಕಳ ಸಂಪಿಗೆಯಲ್ಲಿ ಹಾಸನದ ಮಕ್ಕಳ ಚಿತ್ರ ಸರಣಿ ಮುಂದುವರೆದಿದೆ. ಈ ವಾರದ ಪುಟಾಣಿ ಅತಿಥಿ ಗ್ರೀಷ್ಮ ಎಂ.ಜಿ. ಹಾಸನದ ವಿಜಯಾ ಕಾನ್ವೆಂಟ್‌ನಲ್ಲಿ ಎಂಟನೆಯ ತರಗತಿ ಓದುತ್ತಿರುವ ಗ್ರೀಷ್ಮ ಪ್ರತಿಭಾನ್ವಿತ ವಿದ್ಯಾರ್ಥಿನಿ. ಚಿತ್ರ ಬಿಡಿಸುವುದು, ರಂಗೋಲಿ ಹಾಕುವುದು, ತರಕಾರಿಗಳಿಂದ ವಿವಿಧ ಕಲಾಕೃತಿಗಳನ್ನು ರಚಿಸುವುದು, ಹೂವಿನಲಂಕಾರ ಹೀಗೆ ಹಲವು ಸೃಜನಶೀಲ ಆಸಕ್ತಿಗಳನ್ನು ಹೊಂದಿರುವ ಈಕೆ ಚಿತ್ರ ಕಲೆ ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ.
`ರವಿವರ್ಮ` ಚಿತ್ರಕಲೆ ಪ್ರಶಸ್ತಿ, `ಚಿನ್ನರ ಚಿನ್ನ` ಪ್ರಶಸ್ತಿ, `ಬಾಲ ಚಿತ್ರ ರತ್ನ` ಪ್ರಶಸ್ತಿ, `ಚಿಣ್ಣ -ಬಣ್ಣ` ಪ್ರಶಸ್ತಿ, `ಅರಳು ಮಲ್ಲಿಗೆ` ಪ್ರಶಸ್ತಿ ಹೀಗೆ ನೂರಾ ಎಂಭತ್ತಕ್ಕೂ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುವ ಗ್ರೀಷ್ಮ, ಹಾಸನದ ಗಿರೀಶ್ ಎಂವಿ ಮತ್ತು ಸವಿತಾ ದಂಪತಿಗಳ ಪುತ್ರಿ. ಇಲ್ಲಿನ ದೇಸಾಯಿ ಹವ್ಯಾಸಿ ಚಿತ್ರಕಲಾ ಶಾಲೆಯಲ್ಲಿ ದೇಸಾಯಿ ಗುರುಗಳ ಬಳಿ ಚಿತ್ರಕಲೆ ತರಬೇತಿ ಪಡೆಯುತ್ತಿದ್ದಾಳೆ. ಆಕಾಶವಾಣಿ ಹಾಗೂ ಕನ್ನಡ ವಾಹಿನಿಗಳಲ್ಲಿ ಈ ಅರಳು ಪ್ರತಿಭೆಯ ಕುರಿತು ಸಂದರ್ಶನಗಳು ಪ್ರಸಾರವಾಗಿವೆ.
ಚಿತ್ರ ಬಿಡಿಸುವುದು ಮಾತ್ರವಲ್ಲ, ಗ್ರೀಷ್ಮ ಕಲಿಕೆಯಲ್ಲಿಯೂ ಮುಂದು. ರಾಷ್ಟ್ರೀಯ ವಿಜ್ಞಾನ ಪ್ರತಿಭಾ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದಿದ್ದಾಳೆ. ತನ್ನ ಚಿತ್ರಗಳ ಪುಟಾಣಿ ಪ್ರದರ್ಶನವನ್ನು ಕೂಡ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.
ಗೀಷ್ಮಾಳ ಚಿತ್ರಗಳು ನಿಮಗೆ ಇಷ್ಟವಾಗಿರಬೇಕಲ್ಲಾ? ನಿಮಗೆ ತಿಳಿದಿರುವ, ಇಂತಹ ಪುಟಾಣಿ ಪ್ರತಿಭೆಗಳ ಕುರಿತು ಮಕ್ಕಳ ಸಂಪಿಗೆಗೆ ಬರೆಯಿರಿ. ಅವರ ಕಥೆ, ಕವಿತೆ, ಲೇಖನ, ಚಿತ್ರಗಳನ್ನು editor@kendasampige.com ಗೆ ಕಳುಹಿಸಿ ಕೊಡಿ. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸೋಣ.