ಇಲ್ಲಿ ಈಗ ಹಗಲು ಚಿಕ್ಕದಾಗುತ್ತಾ, ರಾತ್ರಿಗಳು ಅಕ್ಷರಷಃ ದೀರ್ಘವಾಗುತ್ತಾ, ರಾತ್ರಿಯಲ್ಲಿ ಮಾತ್ರ ಮೈ ಕೊರೆಯುತ್ತಿದ್ದ ಚಳಿ ಹಗಲಲ್ಲೂ ಜೊತೆಯಾಗುತ್ತಿದೆ. ಪ್ರಪಂಚದ ಉಳಿದೆಡೆಗಳಲ್ಲಿ ಗ್ರೀಷ್ಮ, Autumn ಅಂತೆಲ್ಲ ಘನ ಗಂಭೀರ ಹೆಸರುಗಳಿಂದ ಕರೆಸಿಕೊಳ್ಳುವ, ಬೇಸಿಗೆಗೂ ಚಳಿಗಾಲಕ್ಕೂ ನಡುವೆ ಬರುವ ಈ ಕಾಲಕ್ಕೆ ಅಮೆರಿಕದಲ್ಲಿ ಮಾತ್ರ Fall ಎನ್ನುವ ಸರಳಾತಿ ಸರಳ ಹೆಸರು. ಎಲೆಗಳು ಉದುರೋ ಈ ಕಾಲಕ್ಕೆ ಉದುರೋ ಕಾಲವೆಂಬ ಅನ್ವರ್ಥ ನಾಮ! ಹಾಗೆ ಎಲೆಗಳನ್ನೆಲ್ಲ ಉದುರಿಸಿಕೊಂಡು ಚಳಿಗಾಲಕ್ಕೆ ಪೂರಾ ಬೋಳಾಗಿ ನಿಲ್ಲುವ ಮರಗಳಲ್ಲಿ ಎಲೆ ಉದುರುವುದಕ್ಕೆ ಮುನ್ನ ಸಂಭವಿಸುವ ವರ್ಣವೈಭವ ಮಾತ್ರ ಈ ಲೋಕದ್ದೇ ಅಲ್ಲವೇನೋ ಅನ್ನಿಸುವಷ್ಟು ಮೋಹಕ.
ಸೆಪ್ಟೆಂಬರ್ ನಲ್ಲಿ ಅಧಿಕೃತವಾಗಿ fall season ಶುರುವಾದಂದಿನಿಂದ, ಇಲ್ಲಿಯವರೆಗೂ ಹಸಿರಾಗಿದ್ದ ಎಲೆಗಳೆಲ್ಲ ಈಗ ಹಳದಿ, ಕೇಸರಿ, ಕೆಂಪು, ಕಂದು, ಕೆಲವು ನೇರಳೆ ಬಣ್ಣಕ್ಕೂ ತಿರುಗಿ......ಇಷ್ಟು ನಾಟಕೀಯವಾಗಿ ಕಾಲ ಬದಲಾಗುವುದನ್ನು ನಾನು ಇಲ್ಲಿ ಬರುವವರೆಗೂ ಕಂಡೇ ಇರಲಿಲ್ಲ. ಚಳಿಗಾಲದಲ್ಲಿ ಈ ನ್ಯೂ ಇಂಗ್ಲೆಂಡ್ ಪ್ರದೇಶದ ಬಣ್ಣ ಬಿಳಿ. ಕಾಡು, ರೋಡು, ಮನೆ, ಮರ, ಕಾರು ಎಲ್ಲದರ ಮೇಲೂ ಬೆಳ್ಳನೆ ಹತ್ತಿಯಂಥಾ, ಒಮ್ಮೊಮ್ಮೆ ಹೊಳೆಯುವ ಸಕ್ಕರೆ ಪುಡಿಯಂಥಾ ಹಿಮ ಕೂತು ಕಣ್ಣು ದಣಿಸುವಷ್ಟು ಬಿಳಿಯಾಗಿ, ಮತ್ತೆ ಒಂದೆರಡು ದಿನಕ್ಕೆ ಆ ಬಿಳಿ ಬಿಳಿ ಹಿಮವೆಲ್ಲಾ ಕರಗಿ ನೀರಾಗಿ ಹರಿಯುತ್ತಾ ಕೊಳೆಯಾಗಿ, ಕೊಚ್ಚೆಯಾಗಿ, ಹಿಮ ಕೆಸರಾಗಿ....ಹಿಮ ಬೀಳದೆ ಇದ್ದಾಗ ಎಲೆಯೇ ಇಲ್ಲದ ಕಪ್ಪು, ಕಂದು ಮರಗಳು. ಎಲ್ಲೋ ಒಂದೊಂದು ಮಾತ್ರ ನಿತ್ಯ ಹಸುರಿನ ಮರಗಳು. ಚಳಿಗಾಲದ ಈ ವರ್ಣರಾಹಿತ್ಯಕ್ಕೆ ಮುನ್ನ ಬರುವ ಈ ಎಲೆ ಉದುರುವ ಕಾಲದ ವರ್ಣವೈಭವದಲ್ಲಿ ಕಣ್ಣು ತುಂಬುವಷ್ಟು ಬಣ್ಣ. ಈ ಕಣ್ಣು ತುಂಬುವ ಬಣ್ಣದ ಎಲೆಗಳನೆಲ್ಲ ಹಾರಿಸಿಕೊಂಡು ಹೋಗುವ ಗಾಳಿ.
ವರ್ಷ ಪೂರ್ತಿ ಹಸಿರಾಗೇ ಇರುವ ನಿತ್ಯ ಹಸುರಿನ ಮರಗಳಲ್ಲಿ ಬಣ್ಣ ಬದಲಾಯಿಸುವ ನಾಟಕೀಯತೆಯೂ ಇಲ್ಲ, ಉದುರಿ ಬೋಳಾಗಿ ಮತ್ತೆ ಚಿಗುರಬೇಕಾಗುವ ಅನಿವಾರ್ಯತೆಯೂ ಇಲ್ಲ. ವರ್ಷಪೂರ್ತಿ ಪ್ರತಿ ಋತುವಿನಲ್ಲೂ ಒಂದೊಂದು ವೇಷ ಕಟ್ಟುವ ಮೇಪಲ್, ಬರ್ಚ್, ಎಲ್ಮ್, ಕೆಲಬಗೆಯ ಓಕ್ ಮುಂತಾದ ಮರಗಳಿಗಷ್ಟೇ ವರುಷಕೊಂದು ಹೊಸತು ಜನ್ಮ, ವರುಷಕೊಂದು ಹೊಸತು ಮರಣದ ಸಂಭ್ರಮ ಮತ್ತು ಯಾತನೆ ಎಲ್ಲವೂ. ಇಂತಹ ಮರಗಳಲ್ಲಿ ವಸಂತದಲ್ಲೂ, ಬೇಸಿಗೆಯಲ್ಲೂ ಎಲೆಯಲ್ಲಿನ ಹಸಿರಿಗೆ ಕಾರಣವಾಗುವ ಕ್ಲೋರೋಫಿಲ್ ಎಂಬ ಹಸಿರು ಪಿಗ್ಮೆಂಟಿನ ಉತ್ಪಾದನೆಗೆ ತಡೆಯಾಗಿ, ಅಲ್ಲಿಯವರೆಗೂ ಈ ಹಸಿರಿನ ಹಿಂದೆಯೇ ಬಚ್ಚಿಟ್ಟು ಕೊಂಡಿದ್ದ ಬೇರೆ ಬೇರೆ ಬಣ್ಣಗಳು ಎಲೆಗಳಲ್ಲಿ ಕಾಣತೊಡಗುವುದೇ ಈ ವರ್ಣವೈಭವಕ್ಕೆ ಮುಖ್ಯ ಕಾರಣವಂತೆ(ಬೇರೆ ಕಾರಣಗಳೂ ಇವೆ). ಇದುವರೆಗೆ ಎಷ್ಟು ಚೆಂದವಾಗಿ, ಮುಗ್ಧವಾಗಿ ಕಾಣುತ್ತಾ ಇದ್ದ ಹಸಿರು, ತನ್ನ ಹಿಂದೆ ಎಷ್ಟೊಂದು ಬಣ್ಣಗಳನ್ನ ಬಚ್ಚಿಟ್ಟುಕೊಂಡು ತಾನೊಂದೇ ಢಾಳಾಗಿ ಮುಂದೆ ತೋರುತ್ತಿತ್ತಲ್ಲ ಅನ್ನಿಸುತ್ತಿದೆ. ಹಾಗೆ ಬೇರೆ ಬಣ್ಣಗಳೆಲ್ಲ ಮೇಲೆದ್ದು ಬಂದು ತಮ್ಮ ಮುಖ ತೋರಿಸಬಹುದಾದ ಕಾರಣಕ್ಕೇ Fall ಮೇಲೆ ಪ್ರೀತಿ ಮೂಡುತ್ತ, ಹಾಗೇ ಮನುಷ್ಯರಲ್ಲೂ ಎಲ್ಲ ನಿಜಬಣ್ಣಗಳೂ ಪ್ರಕಟವಾಗಿಬಿಡಲಿಕ್ಕೆ ಕಾಲವೊಂದಿದ್ದಿದ್ದರೆ ಅನ್ನಿಸಿ ಗಾಬರಿಯಾಗುತ್ತಿದೆ. ಹಾಗಿಲ್ಲದಿರುವುದಕ್ಕೆ ಸಮಾಧಾನ ಪಡಬೇಕಾ ಇಲ್ಲವಾ ತಿಳಿಯುತ್ತಿಲ್ಲ.
ಎಲ್ಲೆಲ್ಲೂ ಉದುರಿಬಿದ್ದ ಈ ಬಣ್ಣ ಬಣ್ಣದ ಎಲೆಗಳನ್ನೆಲ್ಲ ಒಟ್ಟು ಸೇರಿಸಿ, ಗುಡ್ಡೆ ಮಾಡಿ, ಓಡಿ ಬಂದು ಈ ರಾಶಿಗಳ ಮೇಲೆ ನೆಗೆದು ಎಲೆ ಹಾರಿಸುತ್ತಾ ಕೇಕೆ ಹಾಕಿ ನಗುತ್ತಿರುವ ಮಕ್ಕಳಿಗೆ ಮಾತ್ರ, ಸಂತೋಷವೇ ಸ್ಥಾಯಿ ಭಾವವೇನೋ ಎಲ್ಲಾ ಕಾಲದಲ್ಲೂ ಅನ್ನಿಸುತ್ತಿದೆ.
ಎಲೆಗಳೆಲ್ಲ ಉದುರಿ ಮರಗಳು ಬೋಳಾಗುವ ಮುನ್ನವೇ, ಸಾಧ್ಯವಾದಷ್ಟೂ ಈ ಬಣ್ಣಗಳನೆಲ್ಲ ತುಂಬಿಸಿಕೊಂಡುಬಿಡಬೇಕು, ಕಣ್ಣೊಳಗೆ.
(ಚಿತ್ರಗಳು-ಲೇಖಕಿಯದು)