ನೆಮ್ಮದಿ ಮಾರಾಟಕ್ಕಿದೆ...!
ತಂಪು-ತಾಜಾ ನೆಮ್ಮದಿ ಈ ಲೇಖನದಲ್ಲಿ ಮಾರಾಟಕ್ಕಿದೆ. ಆದರೆ `ಬೆಲೆ’-ರೂಪಾಯಿಗಳಲ್ಲ; ಒಂದು ಹನಿ ಮುಗ್ಧತೆ ಹಾಗೂ ಅರಿವು ಮಾತ್ರ.
ಒಂದು ತಾಸು ಆಲೋಚಿಸಿ ನೋಡಿ; ಮಾನವ, ಸಾಹಿತ್ಯದ ಮೂಲಕ ಹುಡುಕುವುದು ಏನನ್ನ? ತನಗೆ ಹೊಂದುವ ಸನ್ನಿವೇಶ-ಭಾವನೆ, ರಸಾನುಭವ ಮುಂತಾದವುಗಳನ್ನು ಅಂದರೆ ತನ್ನನ್ನು ತಾನೇ ಹುಡುಕುತ್ತಾನೆ. ಇದರಿಂದೇನು ಲಭಿಸುವುದು? - ನೆಮ್ಮದಿ.
ದೇಶಗಳು, ಧರ್ಮಗಳು, ಸಹೋದರರು - ಇವರೆಲ್ಲಾ ಏಕೆ ಪರಸ್ಪರ ಕದನದಲ್ಲಿ ತೊಡಗುತ್ತಾರೆ? ಅಧಿಕಾರಕ್ಕಾಗಿರಬಹುದು, ಆಸ್ತಿ-ಆಮಿಷಗಳಿಗಾಗಿರಬಹುದು. ಈ ವಸ್ತುಗಳಿಂದೇನು ದೊರಕುತ್ತದೆ. ಅವರ ಪ್ರಕಾರ ಸಂತಸ, ನೆಮ್ಮದಿ, ಶಾಂತಿ. ಅಂದರೆ ಯುದ್ಧಗಳ ಗುರಿ `ಶಾಂತಿ’ ಎಂದಾಯ್ತು. ಹಾಗಾದರೆ, ತಾನು `ಚತುರ ಜೀವಿ’ ಎಂದು ಗರ್ವದಿಂದ ಹೇಳಿಕೊಳ್ಳುವ ಮಾನವ ಯುದ್ಧದಲ್ಲೇಕೆ ತೊಡಗಬೇಕು? ಯುದ್ಧವಿಲ್ಲದೆಯೇ `ಶಾಂತಿ’ ನೆಲೆಸಿರುವಾಗ, ಯುದ್ಧಮಾಡಿ ಅದನ್ನು ಗಿಟ್ಟಿಸಿಕೊಳ್ಳುವ ಗೀಳೇಕೆ? ಇನ್ನೂ ಕೆಲವರು ವಾದ-ವಿವಾದಗಳಲ್ಲಿ ಮೇಲುಗೈ ಸಾಧಿಸಿ ನೆಮ್ಮದಿ ಪಡೆಯಲು ಪ್ರಯತ್ನಿಸುವರು. ಇವೆಲ್ಲಾ ಬುದ್ಧಿವಂತ ಮನುಷ್ಯ `ನೆಮ್ಮದಿ’ ಅರಸುವ ಮೂರ್ಖ ವಿಧಾನಗಳು.
ನಿಖರವಾಗಿ ಹೇಳಬೇಕಾದರೆ, `ನೆಮ್ಮದಿ’ ನಿಮ್ಮೊಳಗೇ ಇದೆ. ಆಸೆ ಮಾನವನ ಸಹಜ ಗುಣವಾದರೂ, ಅದನ್ನು ಸ್ವಲ್ಪ ಮಟ್ಟಿಗೆ ಪಕ್ಕಕ್ಕಿಟ್ಟು; ನಿಮ್ಮ ಮಗು ಅಥವಾ ಮಡದಿ, ಗೆಳೆಯ-ಗೆಳತಿ, ತಂದೆ-ತಾಯಿಯರ ಪ್ರೀತಿಯ ನಗುವಿನಲ್ಲಿ ನೆಮ್ಮದಿಯನ್ನು ಹುಡುಕಬಹುದು. ನಿಸರ್ಗದ ಪ್ರಶಾಂತತೆಯಲ್ಲಿ, ಸಂಗೀತ-ಸಾಹಿತ್ಯದಲ್ಲೂ ಇದು ಲಭ್ಯ. ನೆಮ್ಮದಿ ಪಡೆಯಲು ಸನ್ಯಾಸಿಗಳಾಗಬೇಕೆಂಬ ನಿಯಮವೂ ಇಲ್ಲ. ಗೀತೆಯಲ್ಲಿ ಶ್ರೀ ಕೃಷ್ಣಪರಮಾತ್ಮ, `ಧರ್ಮಕ್ಕೆ ವಿರುದ್ಧವಲ್ಲದ ಕಾಮವೂ ನಾನೇ’ ಅನ್ನಲಿಲ್ಲವೇ?
ಪರಮಾತ್ಮ ಕಷ್ಟಗಳನ್ನೇಕೆ ಸೃಷ್ಟಿಸಿದನು ಗೊತ್ತೇ? ಸುಖ ಇನ್ನೂ ರುಚಿಯಾಗಲೆಂದು! ಮೃಷ್ಟಾನ್ನ ಭೋಜನದ ನಂತರ ನಿದ್ರೆ ಆವರಿಸುವ ಸಹಜ ಪ್ರಕ್ರಿಯೆಯಂತೆ, ದುಃಖಗಳ ನಂತರ ಸುಖ ಬರುವುದು, ಜೀವನದ ಪ್ರಕ್ರಿಯೆ. ಅತಿಯಾದರೆ ಅಮೃತವೂ ವಿಷವಂತೆ. ಅದಕ್ಕೆ ಪರಮಾತ್ಮ ಈ ರೀತಿಯ ಯೊಜನೆ ರೂಪಿಸಿರಬಹುದು.
ಸ್ವರ್ಗವಾಸಿ ಶ್ರೀ ಕೃಷ್ಣದೇವರಾಯರೊಮ್ಮೆ, ಸ್ವರ್ಗವಾಸದ ಕುರಿತು ಬಳಿಯಲ್ಲಿದ್ದ ತೆನಾಲಿರಾಮನೊಡನೆ ಈ ರೀತಿ ಅಂದರು `ರಾಮ ಈ ಸ್ವರ್ಗದಲ್ಲಿ ಎಲ್ಲವೂ ಇದೆ, ಆದರೂ ನನಗೊಂದು ರೀತಿ ನೆಮ್ಮದಿಯೇ ಇಲ್ಲ`. ರಾಮ ಸ್ವಲ್ಪ ಯೋಚಿಸಿ ಉತ್ತರಿಸಿದನು `ಭೂಲೋಕದಲ್ಲಿ ನಿಮ್ಮ ಸಾಮ್ರಾಜ್ಯ ಹೇಗಿದೆಯೆಂದು ನೋಡಿಕೊಂಡು ಬರೋಣವೇ` ಮಹಾರಾಜರು ಅಂತೆಯೇ ತೆನಾಲಿರಾಮನೊಡನೆ ದೇವೆಂದ್ರನ ಅಪ್ಪಣೆ ಪಡೆದು ಭೂಲೋಕಕ್ಕೆ ಧಾವಿಸಿದರು.
ಮಹಾರಾಜರು ಭೂಲೋಕಕ್ಕೆ ಪಾದಾರ್ಪಣೇ ಮಾಡಿ ವಿಸ್ಮಯ ನೋಡುತ್ತಾ ನಿಂತದ್ದೇ ತಡ ಸುತ್ತಲೂ `ಕೀಂ ಕೀಂ’ ಎಂಬ ಶಬ್ಧ ಮೂಡಿ ಬಂತು. `ಟ್ರಾಫಿಕ್ ಜಾಂ’ ಆಗಿತ್ತು. ಅದನ್ನರಿತ ತೆನಾಲಿರಾಮ ಅವರನ್ನು ಬದಿಗೆ ಕರೆದೊಯ್ದ. ನಿಮಿಷ ಮಾತ್ರದಲ್ಲಿ ಇವರೀರ್ವರ ಸುತ್ತು ಜನ ಸೇರಿದರು-ನಾಟಕದ ಕಂಪೆನಿಯವರೆಂದು ತಿಳಿದು ಮಹಾರಾಜರಿಗೆ ಸಂತಸ ಉಕ್ಕಿ ಬಂತು-ಪ್ರಜೆಗಳಿಗೆ ನಾನೆಂದರೆ ಎಷ್ಟೊಂದು ಪ್ರೀತಿ ಎಂದುಕೊಂಡು ದಣಿವಾದ್ದರಿಂದ, ರಾಮ, ವಿಶ್ರಮಿಸಿಕೊಳ್ಳಲು ವಸತಿಗೃಹಕ್ಕೆ ತೆರಳೋಣವೇ ಎಂದರು. `ಲಾಡ್ಜ್’ ಒಂದಕ್ಕೆ ತೆರಳಿದರು. ಅಲ್ಲಿ, ವಿಶ್ವಾಸ-ಹೆಸರು-ಹಣ ಎಲ್ಲಾ ಕೇಳಿದರು. ಇವರೀರ್ವರ ನೈಜ-ವಕ್ರ ಉತ್ತರಗಳನ್ನು ಕೇಳಿ, `ಗಾರ್ಡ್ಸ್’ಗಳಿಗೆ ಹೇಳಿ ಹೊರ ದಬ್ಬಿಸಿದರು.
ಇವರ ವಿಚಿತ್ರ ವೇಷಭೂಷಣ ನೋಡಿದ ಬೀದಿನಾಯಿ ಇವರಿಬ್ಬರನ್ನು ಬೆನ್ನಟ್ಟಿತು. ಪಾಪ! ಮಹಾರಾಜರೆಂದು ತಿಳಿದರೆ ನಿಧಾನವಾಗಿ ಓಡಿಸುತ್ತಿತ್ತೇನೋ!! `ಬುಸುಬುಸು’ ಎಂದು ಉಸಿರೆಳೆಯುತ್ತಾ ಮಹಾರಾಜರು ಒಂದು ಪಾಳುಮನೆಗೆ ನುಗ್ಗಿದರು. ಎನೂ ತಿಳಿಯದ ವಿನಮ್ರ ಸೇವಕನಂತೆ ತೆನಾಲಿರಾಮ, ಎಲ್ಲಿಂದಲೋ ಒಂದು ಲೋಟ ನೀರು ತಂದು ಕೊಟ್ಟನು.
ತಣ್ಣನೆ ನೀರು ಕುಡಿದು, ಮಹಾರಾಜರು ಅಬ್ಬ! ಈಗ ನೆಮ್ಮದಿಯಾಯ್ತು ಎಂದು ನೀಳವಾಗಿ ಉಸಿರೆಳೆದರು.
ಚರಿತಾ. ಎಂ.ಆರ್, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಮ್. ಕಾರ್ಯಪ್ಪ ಕಾಲೇಜಿನ ಪ್ರಥಮ ವರ್ಷದ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿನಿ. ಕನ್ನಡದಲ್ಲಿ ಬರೆಯುವ ಖುಷಿಯಿದ್ದರೆ ನೀವೂ ಕಾಲೇಜು ಸಂಪಿಗೆಗೆ ಬರೆಯಬಹುದು. ಕತೆ, ಕವಿತೆ, ವಿಮರ್ಶೆ, ಸಿನೆಮಾ, ಲಘು ಹರಟೆ, ಪ್ರವಾಸ, ಕ್ಯಾಂಪಸ್ ಸಮಾಚಾರಗಳ ಕುರಿತು ನಮಗೆ ಬರೆಯಿರಿ. ಬರಹದ ಜೊತೆಗೆ ನಿಮ್ಮ ಪುಟ್ಟ ಪರಿಚಯವೂ ಇರಲಿ. ಲೇಖನಗಳನ್ನು ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಟೈಪಿಸಿ editor@kendasampige.com ಗೆ ಇಮೇಲ್ ಮಾಡಿ. ]