ಸೆಪ್ಟೆಂಬರ್ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಕಾಲೇಜು ಸಂಪಿಗೆ: ಅಪ್ಪ ಅಮ್ಮನ ಜಗಳದ ನಡುವೆ ಗುಲ್ಮೊಹರ್    
ಸ್ಮಿತಾ ಮಾಕಳ್ಳಿ
ಮಂಗಳವಾರ, 3 ಮಾರ್ಚ್ 2009 (06:25 IST)

‘ದಿನಾ ಕಾಂಪೌಂಡ್ ತುಂಬಾ ಕಸ, ಮೂರು ಹೊತ್ತೂ ಇದನ್ನು ಗುಡಿಸೋದೇ ಕೆಲಸ ಆಗಿಹೋಯ್ತು, ಇದರ ಜೊತೆಗೆ ಚರಂಡಿ ಬೇರೆ ಕಟ್ಟಿಕೊಳ್ಳುತ್ತೆ, ಇದರ ಬದಲು ಯಾವುದಾದರೂ ಬೇರೆ ಗಿಡನಾದ್ರೂ ಬೆಳೆಸಿದ್ರೆ ಏನಾಗಿಬಿಡುತ್ತಿತ್ತೋ....’ ಇತ್ತೀಚೆಗೆ ಬೆಳಗಿನ ಹೊತ್ತು ಅಮ್ಮ ಕಸ ಗುಡಿಸುವಾಗಲೆಲ್ಲಾ ದಿನಾ ಗೊಣಗಿಕೊಳ್ಳುವಂತೆ ನಿನ್ನೆ ದಿನವೂ ಗುಲ್ಮೊಹರ್ ಮರ ನಮ್ಮ ಮನೆಯ ಅಂಗಳದಲ್ಲಿ ಸುರಿಸಿದ್ದ ಎಲೆಗಳ, ಅದರ ಕಡ್ಡಿಗಳ ಕಸವನ್ನು ಗುಡಿಸುತ್ತಾ ಗೊಣಗಿಕೊಳ್ಳುತ್ತಿದ್ದರು. `ಅಯ್ಯೋ ಅದ್ಯಾಕಮ್ಮ ಹಾಗೆ ಆಡ್ತೀಯ, ಅದು ನಿನಗೆ ಎಷ್ಟು ಒಳ್ಳೆಯ ಗಾಳಿ ಕೊಡ್ತಾ ಇದೆ, ಮನೆಗೆ ಎಂಥ ನೆರಳು, ಎಂಥ ಚೆಂದ ಕೊಟ್ಟಿದೆ, ಕಸ ಗುಡಿಸೋದೇ ದೊಡ್ಡ ಕೆಲಸ ಅನ್ನೋ ಹಾಗೆ ಆಡ್ತಿದೀಯಲ್ಲಾ, ಆ ಕೆಲಸಾನ ನಾನೇ ಮಾಡ್ತೀನಿ ಅಂತ ಎಷ್ಟು ದಿನ ಹೇಳಿಲ್ಲಾ.’ ಅಂತ ಬೆಳಿಗ್ಗೆ ಬೆಳಿಗ್ಗೇನೇ ಕೈ ತೋಟದ ಗಿಡಗಳಿಗೆ ನೀರು ಹಾಕುತ್ತಿದ್ದ ಅಪ್ಪ ಅಮ್ಮನಿಗೆ ಒಂದು ರೀತಿಯಲ್ಲಿ ಜಗಳಗಂಟನ ದನಿಯಲ್ಲಿ ಹೇಳಿದರು. ಅಮ್ಮ ಗುಲ್ಮೊಹರ್ ಗಿಡದ ಬಗ್ಗೆ ತಕರಾರು ತೆಗೆದಾಗಲೆಲ್ಲಾ ಅಪ್ಪ ಇದೇ ರಾಗವನ್ನು ನುಡಿಸುತ್ತಿದ್ದುದರಿಂದ ಹಾಗೂ ಅಪ್ಪ ಇದನ್ನು ಎಂದೂ ಕಾರ್ಯರೂಪಕ್ಕೆ ತರದೇ ಇದ್ದುದರಿಂದ ಆ ಮಾತುಗಳಿಗೆ ಅಮ್ಮ ಅಷ್ಟು ಕಿಮ್ಮತ್ತು ಕೊಡದೆ, ಮತ್ತೆ ಮಾತು ಸೇರಿಸಿದರೆ ಜಗಳ ಖಾಯಂ ಅಂತ ಗೊತ್ತಿದ್ದುರಿಂದ, ಅಪ್ಪನ ಮೇಲಿನ ಸಿಟ್ಟನ್ನು ನೆಲದ ಮೇಲೆ ತೀರಿಸಿಕೊಳ್ಳುತ್ತಿರುವಂತೆ ಮೋಟು ಪೊರಕೆಯೊಂದರಿಂದ ಪರ ಪರ ಸದ್ದು ಮಾಡಿಕೊಂಡು ಕಸ ಗುಡಿಸುತ್ತಿದ್ದರು. ಅದೇ ತಾನೆ ಹುಟ್ಟಿದ್ದ ಸೂರ್ಯನ ಬೆಳಕು ಗುಲ್ಮೊಹರ್ ಮರದ ಮೇಲೆ ಬಿದ್ದು ಆಗಲೇ ಹಣ್ಣಾಗಿದ್ದ ಅದರ ಹಳದಿ ಎಲೆಗಳು ಮತ್ತೂ ಹೊಳೆಯುತ್ತಿದ್ದವು. ಈ ಲೋಕದಲ್ಲಿ ಇದೆಲ್ಲಾ ಇದ್ದದ್ದೇ ಅನ್ನುವಂತೆ, ಯಾರು ಏನೇ ಅಂದರೂ ನನಗೇನು ಅನ್ನುವಂತೆ, ತಣ್ಣಗಿನ ಗಾಳಿಗೆ ಗುಲ್ಮೊಹರ್ ಮರ ಮೆಲ್ಲಗೆ ಅಲುಗಾಡುತ್ತಿತ್ತು. ಇದರ ನೆರಳು ಮನೆಯ ಮುಂದಲ್ಲದೆ, ಮೊದಲ ಮಹಡಿಯ ಮೇಲೂ ಆಡತೊಡಗಿತ್ತು.

ಈ ಮರದ ವಿಚಾರದಲ್ಲಿ ಅಪ್ಪ ಅಮ್ಮನ ನಡುವೆ ಆಗಾಗ ಜಗಳ ಆಗುವುದುಂಟು. ಕೆಲವೊಮ್ಮೆ ಇವರ ನಡುವಿನ ಯಾವುದ್ಯಾವುದೋ ಸಿಟ್ಟಿಗೆ ಜಗಳ ತೆಗೆಯಲು ಇದು ಒಂದು ನೆಪವಾಗುವುದೂ ಉಂಟು. ಹೀಗೆ ಇವರಿಬ್ಬರೂ ಕಾಲು ಕೆರೆದು ಜಗಳಕ್ಕೆ ನಿಂತಾಗಲೆಲ್ಲಾ ವಿನಾ ಕಾರಣ ಮರವನ್ನು ಮಧ್ಯೆ ಎಳೆದು ತರೋದು ನನಗೆ ಎಷ್ಟೋ ಸಲ ಕಿರಿಕಿರಿ ಅನಿಸುವುದರ ಜೊತೆಗೆ ಮರದ ಮೇಲೆ ಮತ್ತಷ್ಟು ಮಮಕಾರ ಬರುವಂತೆಯೂ ಮಾಡಿಬಿಡುತ್ತೆ. ಅಂತೆಯೇ ಒಂಥರಾ ಮಜಾನೂ ಕೊಡುತ್ತೆ. ಎಂದಾದರೊಂದು ದಿನ ಜಗಳ ವಿಕೋಪಕ್ಕೆ ಹೋದಾಗ ಅಮ್ಮ `ನೀನೇ ಯಾರನ್ನಾದರೂ ಕರಕೊಂಡು ಬಂದು ಮರವನ್ನು ಕಡಿಸಿದರೆ ಸರಿ, ಇಲ್ಲದಿದ್ದರೆ ನಾನೇ ಕಡಿಸಿ ಹಾಕುತ್ತೇನೆ’, ಅಂತ ಅಮ್ಮ ಆ ಕ್ಷಣಕ್ಕೆ ಗುಡುಗಿದರೆ, ಅಪ್ಪ ಮಾತ್ರ ಕಡಿಸಿ ನೋಡು ಅನ್ನುವ ನೋಟವನ್ನಷ್ಟೇ ಅಮ್ಮನತ್ತ ರವಾನಿಸಿ ಜಾಣ ಕುರುಡಿಗೆ ಜಾರಿ ಬಿಡುತ್ತಾನೆ. ಇದನ್ನೆಲ್ಲಾ ಈ ಮರ ಕೇಳಿಸಿಕೊಳ್ಳುವಂತಿದ್ದರೆ ಹೇಗಿರುತ್ತಿತ್ತು ಅಂತ ಆಗಾಗ ನನಗೆ ಅನಿಸುತ್ತಿರುತ್ತದೆ.

ಅದು ಯಾಕೆ ಅಂತ ಗೊತ್ತಿಲ್ಲ ಅಪ್ಪನಿಗೆ ನಮ್ಮ ಕೈ ತೊಟದಲ್ಲಿರುವ ಗಿಡಗಳಿಗಿಂತ, ಮನೆಯ ಮುಂದೆ ಬೆಳೆಸಿರುವ ಬೇರೆಲ್ಲಾ ಮರಗಳಿಗಿಂತ ಗುಲ್ಮೊಹರ್ ಗಿಡದ ಮೇಲೆ ಹೆಚ್ಚು ಪ್ರೀತಿ. ನಾವು ನಮ್ಮ ಹೊಸ ಮನೆಗೆ ಬಂದ ಒಂದು ವರ್ಷದ ನಂತರ, ಅಂದರೆ ಮೂರು ವರ್ಷದ ಕೆಳಗೆ ಅಪ್ಪ ಈ ಗುಲ್ಮೊಹರ್ ಗಿಡ ಮತ್ತು ಹಳದಿ ಹೂವಿನ ಟೆಕೋಮ ಗಿಡವನ್ನು ತಂದು ನೆಟ್ಟಿದ್ದರು. ಟೆಕೋಮ ಎಷ್ಟು ಹಾರೈಕೆ ಮಾಡಿದರೂ ಬದುಕಲೇ ಇಲ್ಲ. ಗುಲ್ಮೊಹರ್ ಗಿಡ ಮಾತ್ರ ನಾವಂದುಕೊಂಡಿದ್ದಕ್ಕಿಂತ ಬೇಗ ಕೇವಲ ಮೂರು ವರ್ಷಕ್ಕೇ ದೊಡ್ಡ ಮರವಾಗಿ, ಹಚ್ಚ ಹಸಿರು ತುಂಬಿಕೊಂಡು ಅಚ್ಚರಿ ಪಡುವಂತೆ ಮನೆಯ ಎತ್ತರಕ್ಕೂ ಬೆಳೆದು ನಿಂತಿತು. ಹಗಲಿನಲ್ಲಿ ಇದರ ನೆರಳು ಮನೆಯ ಮೊದಲ ಮಹಡಿಯ ಮೇಲೆಲ್ಲಾ ಹರಡಿಕೊಳ್ಳುವುದರ ಜೊತೆಗೆ ಅಷ್ಟೇ ಎಲೆಗಳನ್ನೂ ಉದುರಿಸಿ ಮಳೆ ಬಂದಾಗ ಮಳೆಯ ನೀರಿನ ಜೊತೆಗೆ ಇದರ ಎಲೆಗಳೂ ಕೂಡಿ ಹರಿದು ಮಳೆ ನೀರ ಕೊಯ್ಲಿನ ತೊಟ್ಟಿಯನ್ನು ಸೇರಿಕೊಂಡು ಬಿಡುತ್ತವೆ. ಹಾಗಾಗಿ ಮಳೆಗಾಲದಲ್ಲಿ ಅಪ್ಪ ಅಮ್ಮನ ಜಗಳಕ್ಕೆ ಇದೂ ಒಂದು ಕಾರಣವಾಗಿ ಬಿಡುತ್ತದೆ.

ಆದರೂ ದಾರೀಲಿ ತಿರುಗಾಡುವವರಿಗೆಲ್ಲಾ ಈ ಮರದ ಬಗ್ಗೆ ಒಂಥರಾ ಮಮಕಾರ. ಇದರ ಹಸಿರು, ಕೈಗೇ ಎಟಕುವ ಇದರ ಕೊಂಬೆಗಳಿಂದಾಗಿ ದಾರಿಯಲ್ಲಿ ಅಡ್ಡಾಡುವ ಪ್ರತಿ ಮಗುವೂ ಮರದ ಎಲೆಗಳನ್ನು ಮುಟ್ಟಿಯೋ, ನಾವ್ಯಾರೂ ಕಾಣದಿದ್ದರೆ ಒಂದೆರಡು ಎಲೆಗಳನ್ನು ಕಿತ್ತುಕೊಂಡು ಖುಷಿ ಪಡುತ್ತದೆ. ಇದರ ಜೊತೆಗೆ ಮನೆಗೆ ಬರುವವರನ್ನೆಲ್ಲಾ ಈ ಮರ ಮಾತನಾಡಿಸಿಯೇ ಒಳಗೆ ಬಿಡುವುದರಿಂದ ಅವರು ಯಾರೂ ಇದರ ಬಗ್ಗೆ ಒಳ್ಳೆಯ ಮಾತುಗಳನ್ನಾಡದೇ ಹೋಗುವುದೇ ಇಲ್ಲ. ಕೆಲವರಂತೂ ಇದಕ್ಕಿರುವ ಬಟಾನಿಕಲ್ ಹೆಸರು, ಇದು ದಿನಕ್ಕೆ ಎಷ್ಟು ಆಕ್ಸಿಜನ್ ಕೊಡುತ್ತದೆ ಎಂಬುದರಿಂದ ಹಿಡಿದು ಪರಿಸರದ ಕಾಳಜಿಯವರೆಗೂ ದೊಡ್ಡದೊಂದು ಭಾಷಣವನ್ನೇ ಮಾಡಿಹೋಗುತ್ತಾರೆ. ಆಗ ಅಪ್ಪ ಇದೇ ಸಮಯವೆಂಬಂತೆ `ಅಯ್ಯೋ ನೀವು ಇದರ ಬಗ್ಗೆ ಇಷ್ಟು ಹೇಳ್ತೀರಿ ನಮ್ಮ ಮನೇಲಿ ನೋಡಿದ್ರೆ ಇದಕ್ಕಾಗೆ ಜಗಳ ಆಗುತ್ತೆ` ಅಂತ ವಿವರಿಸುತ್ತಾ ಅಮ್ಮನ ಮೇಲೆ ಗೂಬೆ ಕೂರಿಸಲು ನೋಡುತ್ತಾರೆ. ಆಗ ಮಾತ್ರ ನನಗೆ ಅಮ್ಮನ ವಿಶೇಷ ಹಾರೈಕೆಯಲ್ಲಿ ಬೆಳೆಯುತ್ತಿರುವ ಕೈತೋಟದ ಅಷ್ಟೂ ಗಿಡಗಳು ಅಪ್ಪನನ್ನು ಅಣಕಿಸಿಕೊಳ್ಳುತ್ತಿರುವಂತೆ ಕಾಣುತ್ತವೆ.

ಆದರೆ ಅವತ್ತೊಂದು ದಿನ, ಯಾರೋ ಅಪ್ಪನ ಪರಿಚಯದವರು ಅಂತ ಕಾಣುತ್ತೆ `ಇಂಥ ದೆವ್ವದಂಗೆ ಬೆಳೆಯೋ ಮರಾನ ಮನೆ ಮುಂದುಗಡೆ ಹಾಕಿಕೊಂಡಿರೋದ್ರಿಂದ್ರ ಮನೆಯ ಅಡಿಪಾಯಕ್ಕೇ ಅಪಾಯ’ ಅಂತ ಅಪ್ಪನಿಗೆ ಗಾಬರಿ ಹುಟ್ಟಿಸಲು ನೋಡಿದರು. `ಅಯ್ಯೋ ಹಂಗೇನಿಲ್ಲಾ ಬಿಡಿ ಇದರ ಬೇರು ಅಕ್ಕ ಪಕ್ಕ ಹೋಗದೆ ಸೀದಾ ತಳಕ್ಕೆ ಹೋಗ್ತಾವಂತೆ’ ಅಂತ ಅವರ ಬಾಯಿ ಮುಚ್ಚಿಸಿದ. ಅಪ್ಪನನ್ನು ನಿಜವಾ ಅಂತ ಕೇಳಿದ್ರೆ, `ಯಾರಿಗೆ ಗೊತ್ತು ಇದ್ದರೂ ಇರಬಹುದು’ ಅಂತ ನಕ್ಕರು.

ಇಂಥ ಪ್ರೀತಿಯ ಮರ ಮೂರು ವರ್ಷಕ್ಕೇ ಭರ್ಜರಿ ಬೆಳೆದರೂ, ಕಣ್ಣು ಕುಕ್ಕುವಂತೆ ಹಸಿರು ತುಂಬಿಕೊಂಡಿದ್ದರೂ ಒಂದೇ ಒಂದು ಹೂವನ್ನು ಬಿಡದಿದ್ದು ಅಪ್ಪನಿಗೆ ಈ ಮರ ಬಂಜೆ ಮರ ಇರಬಹುದಾ ಅಂತ ಅನುಮಾನ ಶುರುವಾಗಿ ಬಿಟ್ಟಿತ್ತು. ಇಂತ ಅನುಮಾನವನ್ನು ಅಳಿಸುವ ಸಲುವಾಗಿ ಇಗೋ ಹೂ ಬಿಟ್ಟಿದ್ದೇನೆ ನೋಡು ಅನ್ನುವಂತೆ ತುದಿಯಲ್ಲಿ ಒಂದೆರಡು ಗೊಂಚಲು ಕೆಂಪು ಹೂಗಳು ಕಾಣಿಸಿಕೊಂಡಿದ್ದೇ ತಡ ನಮಗಿರಲಿ, ಬಂದ ಬಂದವರಿಗೆಲ್ಲಾ ಆ ಹೂಗಳನ್ನು ತೋರಿಸುತ್ತಾ, ಅವುಗಳಲ್ಲಿ ಅದೇನು ಅಂತ ವಿಶೇಷವಿದೆ ಅನ್ನುವ ಅವರ ಭಾವದಿಂದ ಸಪ್ಪಗಾಗಿ ಬಿಟ್ಟು ನಮ್ಮ ನಡುವೆ ನಗೆಪಾಟಲಿಗೊಳಗಾಗಿ ಬಿಡುತ್ತಿದ್ದರು.

ಅಪ್ಪ ಮನೆಯಲ್ಲಿದ್ದರೆ ಇದರ ಒಂದು ಎಲೆಯನ್ನು ಕೀಳಲು ಬಿಡುತ್ತಿರಲಿಲ್ಲ. ಹೀಗಿರುವಾಗ ಕಳೆದ ಸಲ ಗಣಪತಿ ಹಬ್ಬದ ದಿನ ಒಂದು ಘಟನೆ ನಡೆಯಿತು. ನಮ್ಮ ಮನೆಯ ಹಿಂದಿನ ಯಾವುದೋ ರೋಡಿನವರು ಗಣಪತಿಯನ್ನು ಇಟ್ಟಿದ್ದರು. ಆ ದಿನ ರಾತ್ರಿ ಬೆಳಗಿನ ಜಾವದಲ್ಲೆಲ್ಲೋ ಉತ್ಸವ ಮಾಡಿಕೊಂಡು ನಮ್ಮ ರೋಡಿಗೂ ಬಂದಿದ್ದಾರೆ. ಹಾಗೆ ಬಂದಾಗ ನಮ್ಮ ಗುಲ್ಮೊಹರ್ ಮರದ ಕೆಲವು ಕೊಂಬೆಗಳು ನೆಲದಲ್ಲೇ ಇದ್ದದರಿಂದ ಗಣಪತಿಗೆ ತಡೆಯುತ್ತೆ ಅಂತ ಕೈಗೆ ಸಿಕ್ಕ ಸಿಕ್ಕ ಕೊಂಬೆಗಳನ್ನೇಲ್ಲಾ ಕಿತ್ತು ಬಿಸಾಡಿ ಹೋಗಿದ್ದರು. ಬೆಳಿಗ್ಗೆ ಎದ್ದು ನೋಡಿದರೆ ಮರ ಪೂರಾ ಬೋಳು ಬೋಳಾಗಿ ಕಾಣುವುದರ ಜೊತೆಗೆ ಹಸಿರು ಕೊಂಬೆಗಳು ರೋಡಿನಗಲಕ್ಕೂ ಅನಾಥವಾಗಿ ಬಿದ್ದಿದ್ದವು. ಅವತ್ತು ಅಪ್ಪನಿಗೆ ವಿಪರೀತ ಸಿಟ್ಟು ಬಂದು ಗಣಪತಿಯಿಂದ ಹಿಡಿದು, ಅದನ್ನು ಹೊತ್ತು ಮೆರವಣಿಗೆ ಮಾಡುತ್ತಿದ್ದವರನ್ನೆಲ್ಲಾ ಬಾಯಿಗೆ ಬಂದಂತೆ ಇಡೀ ದಿನ ಬೈದುಕೊಂಡು ಓಡಾಡಿದ್ದರು. ಈ ವರ್ಷವೂ ಗಣಪತಿಯ ಮೆರವಣಿಗೆ ಬಂದೇ ಬರುತ್ತೆ ಅಂತ ಹಬ್ಬದ ರಾತ್ರಿ ಕಾದದ್ದೇ ಕಾದದ್ದು. ಅಪ್ಪ ನಿದ್ದೆಗೆಟ್ಟಿದ್ದೇ ಬಂತು ಗಣಪತಿ ಮೆರವಣಿಗೆ ಮಾತ್ರ ಬರಲೇ ಇಲ್ಲ.

ನಮ್ಮ ಗುಲ್ಮೊಹರ್‌ಗೆ ಈಗ ಎಲೆ ಉದುರಿಸುವ ಕಾಲ. ಎಲೆಗಳೆಲ್ಲಾ ಉದುರಿ ಮತ್ತೆ ಹಸಿರು ತುಂಬಿಕೊಳ್ಳಲು ಮತ್ತೆ ಕೆಲವು ತಿಂಗಳುಗಳು ಬೇಕಾಗಬಹುದು. ಹಾಗೆ ಹಸಿರು ತುಂಬಿಕೊಂಡು ಚಿಗುರು ಎಲೆಗಳು ಬಲಿಯುವವರೆಗೂ ನಮ್ಮ ಮನೆಯಲ್ಲಿ ಗಿಡಗಳ ವಿಷಯಕ್ಕಾಗಿ ಜಗಳ ನಡೆಯೋದಿಲ್ಲ ಅಂತ ನೀವೇನಾದರೂ ಅಂದುಕೊಂಡರೆ ನಿಮ್ಮ ಊಹೆ ಖಂಡಿತಾ ತಪ್ಪಾಗಿ ಬಿಡುತ್ತೆ. ಏಕೆಂದರೆ, ಬೆಳೆಯುತ್ತಾ ಹೋದಂತೆ ತುಂಬಾ ಚೆನ್ನಾಗಿ ಕಾಣುತ್ತೆ ಅಂತ ಅದೆಲ್ಲಿಂದಲೋ ತಂದು ಕೈ ತೋಟದ ಮೂಲೆಯೊಂದರಲ್ಲಿ ಹಾಕಿರುವ ಹಳದಿ ಮೈಯಿನ, ಹಸಿರು ಗೆರೆಗಳ ಬಿದಿರು ಮೆಳೆ ನಮ್ಮ ನಿರೀಕ್ಷೆಗೂ ಮೀರಿ ದಿನ ಕಳೆದಂತೆ ತನ್ನ ಸುತ್ತೆಲ್ಲಾ ಮೊಳಕೆ ಮರಿಗಳನ್ನು ಮಾಡಿಕೊಳ್ಳುತ್ತಾ, ಅಷ್ಟಗಲಕ್ಕೂ ಹರಡಿಕೊಳ್ಳುತ್ತಾ ಪಕ್ಕದ ಮನೆಯವರ ಮಹಡಿಯನ್ನು ಇಣುಕುತ್ತಿದೆ.

***

[ಕನ್ನಡದಲ್ಲಿ ಬರೆಯುವ ಖುಷಿಯಿದ್ದರೆ ನೀವೂ ಕಾಲೇಜು ಸಂಪಿಗೆಗೆ ಬರೆಯಬಹುದು. ಕತೆ, ಕವಿತೆ, ವಿಮರ್ಶೆ, ಸಿನೆಮಾ, ಲಘು ಹರಟೆ, ಪ್ರವಾಸ, ಕ್ಯಾಂಪಸ್ ಸಮಾಚಾರಗಳ ಕುರಿತು ನಮಗೆ ಬರೆಯಿರಿ. ಬರಹದ ಜೊತೆಗೆ ನಿಮ್ಮ ಪುಟ್ಟ ಪರಿಚಯವೂ ಇರಲಿ. ಲೇಖನಗಳನ್ನು ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಟೈಪಿಸಿ editor@kendasampige.com ಗೆ ಇಮೇಲ್ ಮಾಡಿ. ]

ಪುಟದ ಮೊದಲಿಗೆ
 
Votes:  3     Rating: 5    
 
 
ಸಂಬಂಧಿಸಿದ ಲೇಖನಗಳು
  ಸಚಿನ್ ದೇವರಾದರೂ ಕ್ರಿಕೆಟ್ ಧರ್ಮವಲ್ಲ
  ಬಿ ಎ ಬಿ ಎ ಎಂದೇಕೆ ಬೀಳುಗಳೆಯುವಿರಿ? ಸೀಮಾ ಸಮತಲ ಬರಹ
  ಧಾರವಾಡದ ಮೊದಲ ದಿನಗಳು : ಸ್ಮಿತಾ ಮಾಕಳ್ಳಿ ಬರಹ
  ಬಂಗಾರದಂತ ಎನ್ನ ಚಾದರ: ಸೀಮಾ ಸಮತಲ ಬರಹ
  ಮಕ್ಕಳ ಸಂಪಿಗೆಯಲ್ಲಿ ಮುದ್ದು ಬರೆದ ಕವಿತೆ
  ಕಾಲೇಜು ಸಂಪಿಗೆ: ಗುರುವಿನ ಗುಲಾಮನಾಗದ ತನಕ...
  ನನ್ನ ಶತ್ರುವೂ ಅಕ್ಕ, ನನ್ನ ಗೆಳತಿಯೂ ಅಕ್ಕ
  ಕಾಲೇಜು ಸಂಪಿಗೆ : ಲಾರಾಳ ಲೌವ್ಲಿ ಲೋಕ
  ಕಾಲೇಜು ಸಂಪಿಗೆ : ಸೀಮಾ ಸಮತಲ ಬರೆದ ಹಿಮಾಲಯ ಕಥನ
  ಕಾಲೇಜು ಸಂಪಿಗೆಯಲ್ಲಿ ಕಾವ್ಯ ಬರೆದ ಕವಿತೆಗಳು
  ಮಕ್ಕಳ ಸಂಪಿಗೆಯಲ್ಲಿ ಸಂಕೇತನ ಬಣ್ಣಗಳು
  ಕಾಲೇಜು ಸಂಪಿಗೆಯಲ್ಲಿ ಲಕ್ಷ್ಮಿ ವಾರಣಾಶಿ ಬರೆದ ಕವಿತೆ
  ಮಕ್ಕಳ ಸಂಪಿಗೆ: ಭಗವತಿ ಹೇಳುವ ಮೂರು ಕಥೆಗಳು
  ‘ಅಜ್ಜಿಮನೆಯಲ್ಲಿ’ ೬ : ದೇವಸ್ಥಾನದಲ್ಲೊಂದು ಪ್ರಶ್ನೆ
  ಕಾಲೇಜು ಸಂಪಿಗೆ: ಜಾತಿರಗಳೆಯಿಲ್ಲದ ಬಾಲ್ಯ
  ಮಕ್ಕಳ ಸಂಪಿಗೆಯಲ್ಲಿ ಜೀವನ್ ಜೋಸ್ ಬಣ್ಣಗಳು
  ಮಕ್ಕಳ ಸಂಪಿಗೆ: 'ಅಜ್ಜಿಮನೆಯಲ್ಲಿ' ಧಾರಾವಾಹಿ
  ಕಾಲೇಜು ಸಂಪಿಗೆ: ಸ್ಕೂಟಿ ಏರಿ ರಾಜಕುಮಾರಿ
  ಕಾಲೇಜು ಸ೦ಪಿಗೆಯಲ್ಲಿ ಕಾರ್ತಿಕ್ ಬರೆದ ಕವಿತೆ
  ಮಕ್ಕಳ ಸಂಪಿಗೆ: ತೋಪಿನಲ್ಲಿ ಮರಕೋತಿ ಆಡುವಾಗ
  ಕಾಲೇಜು ಸಂಪಿಗೆ: ಈಜುಕೊಳದಲ್ಲೇ ತೀರಿಹೋದಳು ಪುಟ್ಟಿ
  ನವೋದಯದ ದಿನಗಳು ೩- ಫಸ್ಟ್ ಸಂಡೆ ಮತ್ತು ಪರೀಕ್ಷೆ ಭಯ
  ಅಜ್ಜಿಮನೆಯಲ್ಲಿ ೩: ಟಂಗ್ ಟ್ವಿಸ್ಟರ್ಸು-ಹೇಳಿ ನೋಡೋಣ?
  ಅಜ್ಜಿಮನೆಯಲ್ಲಿ ೨- ಮೋಡದ ಹಾಡು
  ಮಕ್ಕಳ ದಿನ ವಿಶೇಷ : ಅಜ್ಜಿ ಮನೆಯಲ್ಲಿ ಅಳು ಬಂದಿದ್ದು
  ಕಾಲೇಜು ಸಂಪಿಗೆಯಲ್ಲಿ ವೇದಾ ನೂಪುರ ಬರೆದ ಕವಿತೆಗಳು
  ಕಾಲೇಜು ಸಂಪಿಗೆಯಲ್ಲಿ ಚರಿತ ಬರೆದ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಗ್ರೀಷ್ಮಾಳ ಚಿತ್ರಗಳು
  ಕಾಲೇಜು ಸಂಪಿಗೆ: ಮಲೆಯಾಳ ನೆಲದಲ್ಲಿ ಕಾಡು ಮಕ್ಕಳ ಕನಸು
  ಮಕ್ಕಳ ಸಂಪಿಗೆಯಲ್ಲಿ ವರುಣ ಚೆಲ್ಲಿದ ಬಣ್ಣಗಳು
  ನವೋದಯದ ದಿನಗಳು ೨ - ಅಲ್ಲೇನು ಕೋತಿ ಕುಣಿತೈತಾ..?
  ಕಾಲೇಜು ಸಂಪಿಗೆ: ಪರೀಕ್ಷೆ, ಫೇಲು, ಅಮ್ಮ, ಅಪ್ಪ ಇತ್ಯಾದಿ
  ಕಾಲೇಜು ಸಂಪಿಗೆಯಲ್ಲಿ ನವೋದಯದ ದಿನಗಳು
  ಕಾಲೇಜು ಸಂಪಿಗೆ : ಇಲ್ಲಿ ನೀರು ಮಾರಾಟಕ್ಕಿದೆ!
  ಮಕ್ಕಳ ಸಂಪಿಗೆಯಲ್ಲಿ ಅಮ್ಮ ಹೇಳಿದ ಕತೆ
  ಮಕ್ಕಳ ಸಂಪಿಗೆಯಲ್ಲಿ ವಿವೇಕನ ಫ್ಯಾಂಟಸಿಗಳು
  ಕಾಲೇಜುಸಂಪಿಗೆಯಲ್ಲಿ ರಂಗನತಿಟ್ಟು
  ಮಕ್ಕಳ ಸಂಪಿಗೆಯಲ್ಲಿ ಪೂಜಾಶ್ರೀ ಬರೆದ ಬಣ್ಣಗಳು
  ಕಾಲೇಜು ಸಂಪಿಗೆ: ತೊತ್ತೊ ಚಾನಳ ಸ್ವಚ್ಛಂದ ಲೋಕ
  ಮಕ್ಕಳ ಸಂಪಿಗೆ: ಸತ್ತೇನೇ ಎಲೇ ಗಿಡ್ಡಕ್ಕಿ!?
  ಕಾಲೇಜು ಸಂಪಿಗೆ: ರಕ್ಷಾಬಂಧನದ ಬಂಧ
  ಮಕ್ಕಳ ಸಂಪಿಗೆಯಲ್ಲಿ ಕಿರಣನ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಮಗನ ಭಾಷಾ ಸಾಹಸಗಳು
  ಮಕ್ಕಳ ಸಂಪಿಗೆಯಲ್ಲಿ ಭಗವತಿ ಹೇಳಿದ ಕಥೆ
  ಕಾಲೇಜು ಸಂಪಿಗೆಯಲ್ಲಿ ದಿಲೀಪ ಬರೆದ ಕವಿತೆ
  ಕಾಲೇಜು ಸಂಪಿಗೆಯಲ್ಲಿ ಗೌತಮ ಬರೆದ ಕಥೆ
  ಮಕ್ಕಳ ಸಂಪಿಗೆಯಲ್ಲಿ ಸಿತಾರಾ ಮಾಡಿದ ಭಾಷಣ
  ಕಾಲೇಜು ಸಂಪಿಗೆಯ ಮೊದಲ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಲಕ್ಕಿ ಸನ್
  ಮಕ್ಕಳ ಸಂಪಿಗೆಯಲ್ಲಿ ಉಲ್ಲಾಸದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಂಬರ್ ನೀಲ್ ಬರೆದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಪ್ರಮೇಯ
  ಮಕ್ಕಳ ಸಂಪಿಗೆಯಲ್ಲಿ ಆಶಿತ್ ಭಟ್
  ಮಕ್ಕಳಸಂಪಿಗೆಯಲ್ಲಿ ಹಾಸನದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ‘ಚುಪ್ರಿ'ಯ ಕವಿತೆಗಳು