ಮೋಡದ ಮೇಲೆ ಹಾಡು ಕಟ್ಟೋದು ಅಂತ ನಿರ್ಧರಿಸಿದ್ದೇನೋ ಆಯ್ತು. ಆದ್ರೆ ಈ ಹಾಡು ಕಟ್ಟೋದು ಹ್ಯಾಗೆ? ನಿಧಿ ಹೇಳಿದ್ದು, ಹಾಡಿನ ಮೊದಲ ಸಾಲು ಬಂದು ಬಿಟ್ರೆ, ಆಮೇಲೆ ಸುಲಭ ಅಂತ. ಆದ್ರೆ ಈ ಮೊದಲ ಸಾಲು ಶುರು ಮಾಡೋದು ಹ್ಯಾಗಪ್ಪ?
ಸಿರಿಗೆ, ಸ್ಕೂಲಿನಲ್ಲಿ ಬಿಂದು ಟೀಚರ್ ಹೇಳಿಕೊಟ್ಟ ರಾಜರತ್ನಂ ಹಾಡು ‘ಝಣ ಝಣ ಝಣ' ನೆನಪಾಯ್ತು. ಹಾಗೇ ಅದೇ ರಾಗದಲ್ಲೇ ಹೇಳಿದಳು,
‘ಮೋಡ ಮೋಡ ಮೋಡ....'
ತಕ್ಷಣ ನಿಧಿ ಅದಕ್ಕೆ ಎರಡನೇ ಸಾಲು ಸೇರಿಸಿದಳು, ‘ನೋಡ ನೋಡ ನೋಡ......'
ಸಿರಿಗೆ ಆ ಸಾಲು ಇಷ್ಟ ಆಗ್ಲಿಲ್ಲ. ‘ನೋಡ' ಅಂದ್ರೆ?
‘ನೋಡ ಅಂದ್ರೆ ನೋಡು ಅಂತ........ಅಮ್ಮ ಒಂದು ಬೇಂದ್ರೆ ಹಾಡು ಹೇಳಲ್ವಾ "ಬೆಳದಿಂಗಳ ನೋಡಾ" ಅಂತ?'
ಈಗ ಸಿರಿಗೆ ಎರಡನೆ ಸಾಲು ಇಷ್ಟ ಆಯ್ತು. ಸರಿ ಇಬ್ಬರೂ ಆ ಎರಡೂ ಸಾಲನ್ನ ಒಮ್ಮೆ ಹಾಡಿದರು,
‘ಮೋಡ ಮೋಡ ಮೋಡ........
ನೋಡ ನೋಡ ನೋಡ........'
ಇಬ್ಬರಿಗೂ ತುಂಬಾ ಖುಷಿಯಾಯ್ತು. ಒಂದು ಸಲ ಇಬ್ರೂ ‘ಹೋ.....' ಅಂತ ಖುಷಿಯಿಂದ ಕಿರುಚಿ ಹಾಡು ಶುರುವಾದ ಸಂಭ್ರಮ ಅನುಭವಿಸಿದ್ದಾಯ್ತು. ಹಾಡಿಗೆ ಮೂರನೇ ಸಾಲು ಏನಂತ ಬರೆಯೋದು ಅಂತ ಇಬ್ಬರೂ ತಲೆ ಕೆಡಿಸಿಕೊಳ್ಳುತ್ತಿದ್ದಾಗ, ಇಬ್ಬರನ್ನೂ ಹುಡುಕುತ್ತಾ ಹಿತ್ತಲಿಗೆ ಅಜ್ಜಿ ಬಂದ್ರು. ಅಜ್ಜಿಗೆ ಇವರಿಬ್ರೂ ಹಾಡು ಬರೆಯೋಕೆ ಕುಳಿತಿರೋದು ನೋಡಿ ತುಂಬಾ ಖುಷಿಯಾಯ್ತು. ಹಾಡು ಮುಂದುವರಿಸೋದು ಹ್ಯಾಗೆ ಅಂತ ಗೊತ್ತಾಗ್ತಿಲ್ಲ ಅಂದಿದ್ದಕ್ಕೆ ಅಜ್ಜಿ ಹೇಳಿದ್ರು, ‘ಮೋಡ ಎಷ್ಟೆಲ್ಲ ಬೇರೆ ಬೇರೆ ಆಕಾರದಲ್ಲಿರತ್ತೆ, ಬಣ್ಣಗಳಲ್ಲಿರತ್ತೆ, ಹ್ಯಾಗೆ ತೇಲತ್ತೆ, ಹ್ಯಾಗೆ ಮಳೆ ಸುರಿಯತ್ತೆ....ಎಲ್ಲಾನೂ ಸೇರಿಸ್ಕೊಂಡು ಹಾಡು ಕಟ್ಟಿ.' ಅಜ್ಜಿ ಇಷ್ಟು ಹೇಳಿದ್ದೇ ಸಾಕಾಯ್ತು. ಇಬ್ಬರೂ ಮತ್ತೆ ಉತ್ಸಾಹದಿಂದ ಹಾಡು ಮಾಡೋದು ಮುಂದುವರಿಸಿದರು.
ಗದ್ಯದಲ್ಲಾದ್ರೆ ಅಜ್ಜಿ ಹೇಳಿದ್ದೆಲ್ಲ ಬರೆದು ಬಿಡಬಹುದು, ಆದ್ರೆ ಅದನ್ನ ಪದ್ಯದಲ್ಲಿ ಬರೆಯೋದು ಹ್ಯಾಗೆ? ಅದು ಪದ್ಯ ಆಗ್ಬೇಕಾದ್ರೆ ಪ್ರಾಸ ಇರಬೇಕು, ಹಾಡಿನ ತರಹ ತಾಳಕ್ಕೆ ಸಿಗಬೇಕು.... ‘ಹಾಗೇನೂ ರೂಲ್ಸ್ ಇಲ್ಲ, ನಿಮ್ಗೆ ಇಷ್ಟ ಆದ ಹಾಗೆ ಬರೆದು, ಇಷ್ಟ ಬಂದ ಹಾಗೆ ಹಾಡಿ' ಅಂತ ನಡುವೆ ಬಂದು ಮಾವ ಒಮ್ಮೆ ಪುಕ್ಕಟೆ ಸಲಹೆ ಕೊಟ್ಟರೂ ಇವರಿಬ್ಬರಿಗೂ ಅದು ಇಷ್ಟ ಆಗ್ಲಿಲ್ಲ. ಕಡೆಗೊಮ್ಮೆ ಸಿರಿ ಹೇಳಿದಳು,
‘ಅಕ್ಕಾ ಸ್ವಲ್ಪ ಹೊತ್ತು ನಾವಿಬ್ರೂ ಮೋಡ ನೋಡೋಣ, ಆಮೇಲೆ ಏನಾದ್ರೂ ಬರೆಯೋಕೆ ಆಗ್ಬೋದು.'
ನಿಧಿಗೂ ಈ ಐಡಿಯಾ ಇಷ್ಟ ಆಯ್ತು. ಸರಿ, ಇಬ್ಬರೂ ಅರ್ಧ ಕುಳಿತು, ಅರ್ಧ ಮಲಗಿ ಕತ್ತೆತ್ತಿ ಮೋಡ ನೋಡತೊಡಗಿದರು.
ಮೇಲೆ ನೋಡಿದರೆ, ನೀಲಿ ಆಕಾಶದ ತುಂಬಾ ಬಿಳಿ ಬಿಳಿ ಮುಗಿಲಿನ ರಾಶಿ!
‘ಹೂಬತ್ತಿ ಮಾಡೋಕೆ ಅಂತ ಅಜ್ಜಿ ಹತ್ತಿ ಹಿಂಜಿ ಇಟ್ಟಿರುವಾಗ ಹೀಗೇ ಕಾಣತ್ತೆ ಅಲ್ವ?' ನಿಧಿ ಕೇಳಿದಳು.
‘ನಂಗೇನೋ ಈ ಮೋಡ ನೋಡ್ತಾ ಇದ್ರೆ, ಕಡ್ಡಿಗೆ ಸಕ್ಕರೆ ನೂಲು ಸುತ್ತಿ ಕೊಡ್ತಾರಲ್ಲ, ಕಾಟನ್ ಕ್ಯಾಂಡಿ........ ಹಾಗೆ ಕಾಣ್ತಿದೆ' ಸಿರಿ ಹೇಳಿದಳು.
‘ಅಲ್ನೋಡು ಅದು ಆನೆಮರಿ ತರಾ ಕಾಣ್ತಿದೆ....ಆನೆ ಬಂತೊಂದಾನೆ, ಮೋಡ ಮಾಡಿರೋ ಆನೆ.'
‘ಅಯ್ಯಯ್ಯೋ ಆ ಆನೆ ಈಗ ಬೇರೆ ತರಾ ಆಗ್ತಿದೆ.....ಅದೀಗ ನಾಯಿಮರಿ ತರಾ ಆಗಿಬಿಡ್ತಿದೆ..'
ಇಬ್ಬರೂ ಬಿದ್ದು ಬಿದ್ದು ನಕ್ಕರು.
ಆಗ ಅಲ್ಲಿಗೆ ಬಂದ ತಾತ ಇವರಿಬ್ಬರಿಗೂ ಒಂದು ಮ್ಯಾಜಿಕ್ ಹೇಳಿಕೊಟ್ಟರು. ಅದೇನಪ್ಪಾ ಅಂದ್ರೆ, ಮೋಡದ ಕಡೆ ನೋಡ್ತಾ, ಉಫ್.....ಅಂತ ಬಾಯಿಂದ ಗಾಳಿ ಊದಿ ಮೋಡಗಳನ್ನ ನಮಗೆ ಬೇಕಾದ ಆಕಾರಕ್ಕೆ ಬದಲಾಯಿಸೋದು! ಹಾಗೆ ಗಾಳೀ ಊದುವ ಮೊದಲು ಜೋರಾಗಿ ಮೂರು ಸಲ ‘ಅಬ್ರಕದಬ್ರಾ...' ಅಂತ ಕಿರುಚಬೇಕು ಅಷ್ಟೆ! ಹಾಗೆ ‘ಅಬ್ರಕದಬ್ರಾ' ಅನ್ನೋ ಮಂತ್ರ ಹೇಳದೆ ಇದ್ದರೆ ಈ ಮ್ಯಾಜಿಕ್ ಮಾಡೊಕ್ಕೆ ಆಗೋದೇ ಇಲ್ಲ.
ಸರಿ ಈಗ ಇಬ್ರೂ ತಾತ ಹೇಳಿಕೊಟ್ಟ ಹಾಗೆ ಮಂತ್ರ ಹೇಳಿ, ಬಾಯಿಂದ ಗಾಳಿ ಊದಿ ಮೋಡಗಳಿಗೆ ತಮಗಿಷ್ಟ ಬಂದ ಆಕಾರ ಕೊಡಲು ಪ್ರಾರಂಭಿಸಿದರು.
ಇಬ್ಬರಿಗೂ ಆಶ್ಚರ್ಯ, ಜೊತೆಗೆ ಖುಷಿ.... ತಾತ ಹೇಳಿದ ಹಾಗೆ ಮೋಡಗಳೆಲ್ಲ ಇವರಿಗೆ ಬೇಕಾದ ಆಕಾರಕ್ಕೆ ಬದಲಾಗಲು ಪ್ರಾರಂಭಿಸಿದವು. ಹಾಗೆ ಸರಿಯಾದ ಆಕಾರ ಬರದಿದ್ದಾಗ, ತಾತ ಹೇಳಿದರು, ‘ಮಂತ್ರ ಸರಿಯಾಗಿ ಹೇಳಲಿಲ್ಲ ನೀವು'.
ತಾತನ ಮೇಲೂ, ಅವರು ಹೇಳಿಕೊಟ್ಟ ಮಂತ್ರದ ಮೇಲೂ ಅನುಮಾನ ಬಂದರೂ ಈ ಹೊಸ ಆಟ ಇಬ್ಬರಿಗೂ ತುಂಬಾ ಇಷ್ಟ ಆಗಿಬಿಡ್ತು.
ಹಾಗೆ ಆಟ ಆಡ್ತಾ ಆಡ್ತಾ ಊಟದ ಹೊತ್ತಾಗಿ ಅಜ್ಜಿ ಊಟಕ್ಕೆ ಕರೆದಾಗಲೇ, ಇವರಿಬ್ರಿಗೂ ನೆನಪಾಗಿದ್ದು ತಾವಿನ್ನೂ ಹಾಡು ಮುಗಿಸಲೇ ಇಲ್ಲ ಅಂತ. ಸರಿ ಊಟ ಆದ ಮೇಲೆ ಮತ್ತೆ ಕುಳಿತು ಹಾಡು ಹೊಸೆಯೋದಕ್ಕೆ ಶುರು ಮಾಡಿದರು. ಇವರಿಬ್ರೂ ಹೀಗೆ ಹಾಡು ಮಾಡೋಕೆ ಕುಳಿತಿರೋ ವಿಷಯ ಮನೆಯಲ್ಲಿ ಎಲ್ಲರಿಗೂ ಗೊತ್ತಾಗಿ ಎಲ್ರೂ ‘ಹಾಡು ಎಲ್ಲಿಗೆ ಬಂತೂ?' ಅಂತ ಇಬ್ಬರನ್ನೂ ವಿಚಾರಿಸಲು ಶುರು ಮಾಡಿದರು. ಅಷ್ಟೇ ಅಲ್ಲ, ಅತ್ತೆ ಒಂದು ಚಂದದ ನೋಟ್‍ಬುಕ್ಕನ್ನೂ, ನೀಲಿ ಬಣ್ಣದ ಹೊಸಾ ಪೆನ್ನನ್ನೂ ಕೊಟ್ಟು ಆ ಪುಸ್ತಕದಲ್ಲಿ ಹಾಡು, ಕಥೆ ಏನು ಬೇಕಾದ್ರೂ ಬರೀಬಹುದು ಅಂತ ಹೇಳಿದರು. ಇವರಿಬ್ಬರೂ ಪುಸ್ತಕದಲ್ಲಿ ಏನಾದ್ರೂ ಬರೆಯೋಕೆ ಮುಂಚೇನೇ ಅತ್ತೆಯ ಮಗ ಉಲ್ಲಾಸ ಆ ಪುಸ್ತಕದ ಮೊದಲ ಪುಟದ ತುಂಬಾ ಅಡ್ಡ, ಉದ್ದ ಗೆರೆಗಳನ್ನ ಗೀಚಿ, ಇಷ್ಟ ಬಂದಹಾಗೆಲ್ಲ ಚಿತ್ರ ಬಿಡಿಸಿದ್ದಾಗಿತ್ತು. ಅವನು ಮಲಗಿದ ಮೇಲೆ ಮತ್ತೆ ಪುಸ್ತಕ ಕೈಗೆತ್ತಿಕೊಂಡು ಇಬ್ಬರೂ ಹಾಡು ಬರೆಯೋಕೆ ಕುಳಿತರು.
ಸಂಜೆ ದೊಡ್ಡವರೆಲ್ಲ ಕಾಫಿ ಕುಡಿದು, ಮಕ್ಕಳೆಲ್ಲ ಹಾಲು ಕುಡಿದು, ದೊಡ್ಡವರು-ಚಿಕ್ಕವರು ಅನ್ನದೆ ಎಲ್ಲರೂ ಅಜ್ಜಿ ಮಾಡಿದ ಕೋಡುಬಳೆಯನ್ನ ಮತ್ತೆ ಮತ್ತೆ ಕೇಳಿ ತಿಂದಾದ ಮೇಲೆ ನಿಧಿ, ಸಿರಿ ಇಬ್ಬರೂ ತಾವು ಬರೆದ ಹಾಡನ್ನು ಎಲ್ಲರ ಮುಂದೆ ಹಾಡಿ ತೋರಿಸಿದರು. ಆ ಹಾಡು ಹೀಗಿತ್ತು:
ಮೋಡ ಮೋಡ ಮೋಡಾ....
ನೋಡ ನೋಡ ನೋಡಾ....
ಹತ್ತಿಯಂತಿರುವ ಮೋಡ
ಸುತ್ತಿ ಸುಳಿದಿರುವ ಮೋಡ
ಎತ್ತಿ ಕತ್ತನು ಮೇಲೆ ನೋಡಲು
ಮುತ್ತಿಕೊಂಡಿದೆ ನೋಡಾ.....
ಬಿಳಿ ಬಿಳಿ ಬಣ್ಣದ ಮೋಡ
ಸುಳಿದಿದೆ ಬಾನಲಿ ನೋಡಾ
ಥಳ ಥಳ ಎನ್ನುವ ಬೆಳ್ಳಿಯ ಅಂಚದು
ಹೊಳೆಯುವ ಚಂದವ ನೋಡಾ.......
ಹಕ್ಕಿಯ ಹಾಗೆ ನನಗೂ
ರೆಕ್ಕೆ ಇರಬೇಕೆಂದು
ಆಸೆ ಹುಟ್ಟಿಸೊ ಮೋಡ
ಬಾನಲಿ ತೇಲಿದೆ ನೋಡಾ.....
ಮೋಡ ಮೋಡ ಮೋಡಾ.....
ನೋಡ ನೋಡ ನೋಡಾ.....
ಹಾಡು ಮುಗಿದಾದ ಮೇಲೆ ಎಲ್ಲರೂ ಚಪ್ಪಾಳೆ ತಟ್ಟಿದ್ದೇ ತಟ್ಟಿದ್ದು! ಚಪ್ಪಾಳೆ ತಟ್ಟುತ್ತಾ ‘ಇನ್ನೊಂದ್‍ಚಲ, ಇನ್ನೊಂದ್‍ಚಲ' ಅಂತ ಕೇಳಿದ ಉಲ್ಲಾಸನಿಗಾಗಿ ಇವರಿಬ್ಬರೂ ಮತ್ತೆ ಹಾಡಬೇಕಾಯ್ತು. ಸಂತೋಷದಿಂದ ಮತ್ತೆ ಮತ್ತೆ ಎಲ್ಲರೂ ಹಾಡಿ, ಕುಣಿದರು.
ಆ ರಾತ್ರಿ ಮಲಗುವಾಗ ಸಿರಿಗೆ ಅಮ್ಮ ಬೇಕು ಎಂದು ಅಳುವೇ ಬರಲಿಲ್ಲ!
[ಮುಂದಿನ ಭಾಗ: `ಟಂಗ್ ಟ್ವಿಸ್ಟರ್ಸು' - ಹೇಳಿ ನೋಡೋಣ?]
[ಹಿಂದಿನ ಅಧ್ಯಾಯ-ಅಜ್ಜಿಮನೆಯಲ್ಲಿ ಅಳು ಬಂದದ್ದು]