ಮಕ್ಕಳೆಲ್ಲ ಸೇರಿ ಪುಟ್ಟ ಕರುವನ್ನು ಮುದ್ದು ಮಾಡಿದ್ದೇ ಮಾಡಿದ್ದು. ದಿನೂ, ರಂಜು ಮನೆಯವರೇ ಆದ್ದರಿಂದ ಧೈರ್ಯವಾಗಿ ಹಸುವಿನ ಬಳಿ ಹೋಗಿ, ಅದರ ಬೆನ್ನು ಕತ್ತು ನೇವರಿಸಿ ಸಮಾಧಾನ ಮಾಡಿದರು. ನಿಧಿ ಕೂಡ ಹಸು ಮುಟ್ಟಲು ಹೋದಾಗ ಅದು ಜೋರಾಗಿ ಉಸಿರುಬಿಡುತ್ತಾ ಕೋಡು ತೋರಿಸಿ ಹೆದರಿಸಿದ್ದಕ್ಕೆ ಭಯಗೊಂಡು ದೂರವೇ ನಿಂತಳು. ಗೌರಿ ಹಸು ತುಂಬಾ ಸಾಧುವೆಂದೂ, ಒಂದೆರಡು ದಿನ ಅಭ್ಯಾಸವಾದರೆ ಸಿರಿ, ನಿಧಿ ಇಬ್ಬರ ಕೈಲೂ ಅದು ಮುಟ್ಟಿಸಿಕೊಳ್ಳುತ್ತದೆಂದೂ ರಂಜು ಹೇಳಿದ ಮೇಲೆ ಇಬ್ಬರಿಗೂ ಸಮಾಧಾನವಾಯ್ತು. ಅಷ್ಟರಲ್ಲಿ ದೊಡ್ಡಪ್ಪ ಒಂದು ಕೈಯಲ್ಲಿ ಫಳಫಳನೆ ಹೊಳೆಯುತ್ತಿದ್ದ ಹಿತ್ತಾಳೆಯ ತಂಬಿಗೆಯನ್ನೂ, ಇನ್ನೊಂದು ಕೈಯಲ್ಲಿ ಹರಳೆಣ್ಣೆಯ ಬಟ್ಟಲನ್ನೂ ಹಿಡಿದುಕೊಂಡು ಕೊಟ್ಟಿಗೆಯೊಳಗೆ ಬರುತ್ತಾ, ‘ನೀವೆಲ್ಲ ಈಗ ಮರೆಯಲ್ಲಿ ನಿಂತುಕೊಳ್ಳಿ.. ಇಲ್ಲ ಅಂದ್ರೆ, ಹಸು ಹಾಲು ಕರೆಸಿಕೊಳ್ಳಲ್ಲ’ ಎಂದರು. ಸೊಂಟದ ಸುತ್ತ ದೊಡ್ಡಮ್ಮನ ಸೀರೆಯೊಂದನ್ನ ಲುಂಗಿಯ ಹಾಗೆ ಕಟ್ಟಿಕೊಂಡು ಮುಖ ಮುಚ್ಚುವ ಹಾಗೆ ತಲೆಯ ಮೇಲೆ ಸೆರಗು ಎಳೆದುಕೊಂಡು ಬಂದ ದೊಡ್ಡಪ್ಪನನ್ನು ಕಂಡು ನಿಧಿ, ಸಿರಿ ಇಬ್ಬರಿಗೂ ಒಂದು ಕ್ಷಣ ದಿಗ್ಭ್ರಮೆಯಾಯಿತು. ಮರುಕ್ಷಣ ಜೋರಾಗಿ ನಗು ಬಂತು. ದೊಡ್ಡಪ್ಪನನ್ನು ಈವರೆಗೆ ಇವರಿಬ್ಬರೂ ಇಂಥ ವಿಚಿತ್ರ ವೇಷದಲ್ಲಿ ಯಾವತ್ತೂ ನೋಡಿರಲಿಲ್ಲ. ಮುಸಿ ಮುಸಿ ನಗುತ್ತಲೇ ಅವರೆಲ್ಲಾ ಕೊಟ್ಟಿಗೆಯಿಂದ ಆಚೆ ಬಂದು ಮರೆಯಾಗಿ ನಿಂತು ಕೊಟ್ಟಿಗೆಯೊಳಗೆ ಇಣುಕಿ ನೋಡುತ್ತಿರುವಾಗ ದೊಡ್ಡಪ್ಪನ ಈ ಛದ್ಮವೇಷಕ್ಕೆ ಏನು ಕಾರಣ ಅಂತ ದಿನೂ ಹೇಳತೊಡಗಿದ.
ಗೌರಿ ಹಸು, ದೊಡ್ಡಮ್ಮನಲ್ಲದೆ ಬೇರೆ ಯಾರು ಹಾಲು ಕರೆಯಲು ಬಂದರೂ ತುಂಬಾ ಸಿಟ್ಟಾಗುತ್ತಿತ್ತು. ಹಾಗೆ ಹಾಲು ಕರೆಯಲು ಬಂದವರನ್ನು, ಕಾಲೆತ್ತಿ ಝಾಡಿಸುವಂತೆ, ಕೊಂಬಲ್ಲಿ ತಿವಿದೇ ಬಿಡುವಂತೆ ಆಡುತ್ತಾ, ನಿಂತಲ್ಲಿ ನಿಲ್ಲದೆ ಚಡಪಡಿಸುತ್ತಿತ್ತು. ಆದರೆ ಬೇರೆ ಯಾರಾದರೂ ದೊಡ್ಡಮ್ಮನ್ನ ಹಾಗೆ ಅವರ ಸೀರೆಯುಟ್ಟು, ತಮ್ಮ ಮುಖ ಮರೆಸಿಕೊಂಡು ಹಾಲು ಕರೆಯಬಹುದಿತ್ತು. ಸಿರಿ, ನಿಧಿ ಇಬ್ಬರಿಗೂ ಅದನ್ನ ಕೇಳಿ ತುಂಬಾ ಆಶ್ಚರ್ಯವಾಯಿತು. ಹಾಗಾದರೆ ಈ ಹಸುವಿಗೆ ಹಾಲು ಕರೆಯಲು ಬಂದವರು ಬೇರೆಯವರು ಎಂದು ಗೊತ್ತಾಗುವುದೇ ಇಲ್ಲವಾ, ಅಥವಾ ಗೊತ್ತಾದರೂ ದೊಡ್ಡಮ್ಮನ ಸೀರೆ ಉಟ್ಟಿದ್ದಾರಲ್ಲ, ಪರವಾಗಿಲ್ಲ ಅಂದುಕೊಂಡು ಸುಮ್ಮನಾಗಿಬಿಡುತ್ತದಾ ತಿಳಿಯಲಿಲ್ಲ. ಹಸುವಿಗೆ ನಿಜವಾಗಿಯೂ ಸಮಾಧಾನ ಅನ್ನಿಸುವುದು, ದೊಡ್ಡಮ್ಮನಿಂದಲೋ ಅಥವಾ ಅವರ ಸೀರೆಯಿಂದಲೋ ಅಂತೆಲ್ಲಾ ಇವರಿಬ್ಬರ ತಲೆಯೊಳಗೂ ಹತ್ತಾರು ಪ್ರಶ್ನೆಗಳು ಮೂಡಿದವು. ‘ಹಸುವಿನ ಮನಸ್ಸಲ್ಲಿ ಏನಿದೆ ಅಂತ ನಮಗೆ ಗೊತ್ತಾಗೋ ಹಾಗಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅಥವಾ ಹಸುವಿಗೆ ನಮ್ಮ ಭಾಷೆ ಬಂದಿದ್ದರೆ, ನಮಗೆ ಅದರ ಭಾಷೆ ಗೊತ್ತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ?’ ಅಂತ ಸಿರಿ ಪಿಸಿಗುಡುತ್ತಾ ಕೇಳಿದಾಗ ಉಳಿದವರೆಲ್ಲಾ ‘ಹೌದು, ಹೌದು’ ಎನ್ನುತ್ತಾ ತಲೆಯಾಡಿಸಿದರು.
ಮೊದಲಿಗೆ ಕರುವಿನ ಕೊರಳಿಂದ ಕುಣಿಕೆ ಬಿಚ್ಚಿ ಸ್ವಲ್ಪ ಹೊತ್ತು ಅದು ಹಾಲು ಕುಡಿಯಲು ಬಿಟ್ಟ ದೊಡ್ಡಪ್ಪ, ಹಸುವಿನ ಮುಂದೆ ತಿನ್ನಲು ತರಿದ ಜೋಳದ ಕಡ್ಡಿ ಹಾಕಿದರು. ನಂತರ ಕರುವನ್ನು ಅಲ್ಲೇ ಸ್ವಲ್ಪ ದೂರದಲ್ಲಿ ಕಟ್ಟಿ, ಅದರ ಮುಂದೆಯೂ ತಿನ್ನಲು ಹುಲ್ಲು ಹಾಕಿ ಮತ್ತೆ ಹಸುವಿನ ಬಳಿ ಬಂದು ಹಾಲು ಕರೆಯಲು ಕೂತರು. ಇಷ್ಟೆಲ್ಲ ಮಾಡುವಾಗ ಹಸುವಿಗೆ ತಮ್ಮ ಮುಖ ಕಾಣಿಸದಂತೆ, ಆಗಾಗ ಸೆರಗನ್ನು ತಮ್ಮ ತಲೆಯ ಮೇಲೆ ಸರಿಯಾಗಿ ಎಳೆದು ಕೂರಿಸಿಕೊಳ್ಳುತ್ತಿದ್ದರು. ಕೊಟ್ಟಿಗೆ ಬಾಗಿಲಲ್ಲಿ ಇದನ್ನು ನೋಡುತ್ತಾ ನಿಂತ ಮಕ್ಕಳು ನಗು ತಡೆಯಲಾಗದೆ ನಕ್ಕಾಗ, ಬಾಯಿಯ ಮೇಲೆ ಬೆರಳಿಟ್ಟು ಸದ್ದು ಮಾಡದೆ ಇರುವಂತೆ ಸೂಚಿಸಿದರು. ಹಸು-ಕರುಗಳೆರಡೂ ಸಮಾಧಾನವಾಗಿ ಹುಲ್ಲು ತಿನ್ನುತ್ತಾ ನಿಂತ ಮೇಲೆ ಅಲ್ಲಿಯವರೆಗೂ ಹಸುವಿನ ಬೆನ್ನು ಸವರುತ್ತಾ ನಿಂತಿದ್ದ ದೊಡ್ಡಪ್ಪ, ಅಲ್ಲೇ ಇದ್ದ ಪುಟ್ಟ ಮಣೆಯೊಂದನ್ನು ತೆಗೆದು ಹಸುವಿನ ಪಕ್ಕದಲ್ಲಿ ಕುಳಿತು, ಕೆಚ್ಚಲಿಗೆ ಹರಳೆಣ್ಣೆ ಹಾಕಿ ನೀವಿ, ನಂತರ ತಂದಿದ್ದ ಹಿತ್ತಾಳೆ ತಂಬಿಗೆಯನ್ನು ಎರಡೂ ಮಂಡಿಯ ಮಧ್ಯೆ ಹಿಡಿದು, ಎರಡೂ ಕೈಯಿಂದ ಹಾಲು ಕರೆಯಲಾರಂಭಿಸಿದರು. ಕರು ಮೆಲ್ಲುತ್ತಿದ್ದ ಹುಲ್ಲಿನ ಪರಿಮಳ, ಹಸುವಿನ ಬಾಯಲ್ಲಿ ತುಂಡಾಗುತ್ತಿದ್ದ ಜೋಳದ ಕಡ್ಡಿಯ ಕಂಪು, ಸರ್ಭರ್ ಎಂದು ಶಬ್ದ ಮಾಡುತ್ತಾ ನೊರೆನೊರೆಯಾಗಿ ತಂಬಿಗೆ ತುಂಬಿಕೊಳ್ಳುತ್ತಿದ್ದ ಹಸಿಹಾಲಿನ ಜೊತೆಜೊತೆಗೇ ಮೂಲೆಯಲ್ಲಿದ್ದ ಕಲಗುಚ್ಚಿನ ಬಾನಿ, ಕೊಟ್ಟಿಗೆಯಲ್ಲಿ ಯಾವಾಗಲೂ ಇರುತ್ತಿದ್ದ ಹಸುವಿನ ಗಂಜಲ, ಸಗಣಿಯ ಪರಿಮಳವೂ ಸೇರಿ ಕೊಟ್ಟಿಗೆಯೊಳಗೆ ಬೇರೆಯದೇ ಒಂದು ಪುಟ್ಟ ಲೋಕ ಹುಟ್ಟಿಕೊಳ್ಳುತ್ತಿತ್ತು. ದೊಡ್ಡಪ್ಪ ತಂಬಿಗೆಯ ತುಂಬಾ ಹಾಲು ಕರೆದು ಮುಗಿಸಿ, ಮತ್ತೆ ಕರುವಿನ ಕುಣಿಕೆ ಬಿಚ್ಚಿ ಅದರ ಅಮ್ಮನ ಬಳಿ ಹಾಲು ಕುಡಿಯಲು ಬಿಟ್ಟು, ಕರೆದ ಹಾಲು ಕೈಯಲ್ಲಿ ಹಿಡಿದು ಕೊಟ್ಟಿಗೆಯಿಂದ ಆಚೆ ಬರುವವರೆಗೂ ಮಕ್ಕಳೆಲ್ಲ ಮೈಮರೆತು ನಿಂತಿದ್ದರು. ನಂತರ ಕೈಕಾಲು ತೊಳೆದು ಊಟ ಮಾಡಲು ಮನೆಯೊಳಗೆ ನಡೆದರು.
ಹುಣ್ಣಿಮೆ ಕಳೆದು ಎರಡು ದಿನವಷ್ಟೇ ಆಗಿದ್ದರಿಂದ, ಆ ತೊಟ್ಟಿ ಮನೆಯ ಅಂಗಳದ ತುಂಬಾ ಚಂದ್ರನ ಬೆಳಕು ತುಂಬಿತ್ತು. ಮಕ್ಕಳನ್ನೆಲ್ಲಾ ಅಂಗಳದಲ್ಲೇ ಊಟಕ್ಕೆ ಕೂರಿಸಿ, ಅಜ್ಜಿ ಕೈತುತ್ತು ಹಾಕಿದರು. ಅಜ್ಜಿಯ ಕಥೆ ಕೇಳುತ್ತಾ ಪೈಪೋಟಿಯ ಮೇಲೆ ಕೈ ಒಡ್ಡಿ ತುತ್ತು ಹಾಕಿಸಿಕೊಳ್ಳುತ್ತಾ ಮಕ್ಕಳೆಲ್ಲ ಊಟ ಮುಗಿಸಿದರು. ಊಟ ಮುಗಿಸಿದವರೇ ಎಲ್ಲರೂ ಮಹಡಿಯ ಮೇಲಿದ್ದ ಲೈಬ್ರರಿಗೆ ಓಡಿ ಹೋದರು.
ದೊಡ್ಡಮ್ಮನ ಮನೆಯ ಮಹಡಿಯಲ್ಲಿ ಮೂರು ದೊಡ್ಡ ದೊಡ್ಡ ಕಪಾಟುಗಳ ತುಂಬಾ ತುಂಬಿ ಕುಳಿತಿದ್ದ ಪುಸ್ತಕಗಳಿದ್ದ ಆ ಕೋಣೆಯನ್ನು ಅವರೆಲ್ಲ ಲೈಬ್ರರಿ ಅಂತಲೇ ಕರೆಯುತ್ತಿದ್ದಿದ್ದು. ಪುಸ್ತಕಗಳಲ್ಲದೆ, ಅಲ್ಲಿದ್ದ ಸುತ್ತಿ, ತಿರುಗಿಸಬಹುದಾದ ದೊಡ್ಡ ಗ್ಲೋಬು, ನಕ್ಷತ್ರ ವೀಕ್ಷಣೆಯ ಟೆಲಿಸ್ಕೋಪು ಎಲ್ಲದರ ಮೇಲೂ ಮಕ್ಕಳಿಗೆ ಆಕರ್ಷಣೆ. ಕಳೆದ ವರ್ಷ ಈ ನಾಲ್ಕು ಮಕ್ಕಳೂ ಬೆಂಗಳೂರಿನ ಪ್ಲಾನಿಟೋರಿಯಂಗೆ ಹೋಗಿ ಬಂದಾಗಿನಿಂದ, ಆಕಾಶ ಕಾಯಗಳು, ನಕ್ಷತ್ರ ವೀಕ್ಷಣೆ ಎಲ್ಲದರಲ್ಲೂ ವಿಪರೀತ ಆಸಕ್ತಿ ಹುಟ್ಟಿಬಿಟ್ಟಿತ್ತು. ಇವರ ಆಸಕ್ತಿಗೆ ನೀರೆರಯಲಿಕ್ಕೆಂದೇ ಇವರ ಅಪ್ಪ, ಅಮ್ಮಂದಿರು ಈ ಕುರಿತ ಪುಸ್ತಕಗಳನ್ನೂ ಟೆಲಿಸ್ಕೋಪುಗಳನ್ನೂ ತಂದುಕೊಟ್ಟಿದ್ದರು. ಬೆಂಗಳೂರು, ಮೈಸೂರುಗಳ ಹಾಗಲ್ಲದೆ ಈ ಪುಟ್ಟ ಊರಿನಲ್ಲಿ ಪ್ರಕಾಶಮಾನವಾದ ದೀಪಗಳ ಬಳಕೆ ಕಡಿಮೆ ಇದ್ದಿದ್ದರಿಂದ, ದೊಡ್ಡಮ್ಮನ ಮನೆಯ ತಾರಸಿ ನಕ್ಷತ್ರ ವೀಕ್ಷಣೆಗೆ ಹೇಳಿಮಾಡಿಸಿದ ಹಾಗಿತ್ತು. ಹುಣ್ಣಿಯ ಆಚೆ ಈಚಿನ ದಿನಗಳಲ್ಲಿ ಚಂದ್ರನ ಬೆಳಕಿನಿಂದಾಗಿ ನಕ್ಷತ್ರಗಳನ್ನಾಗಲಿ, ಬೇರೆ ಆಕಾಶಕಾಯಗಳನ್ನಾಗಲಿ ನೋಡುವುದು ಕಷ್ಟವಾಗುತ್ತಿದ್ದರಿಂದ, ಈ ದಿನ ಟೆಲಿಸ್ಕೋಪನ್ನು ಎತ್ತಿಕೊಂಡು ತಾರಸಿಗೆ ಹೋಗುವ ಹಾಗಿರಲಿಲ್ಲ. ಇನ್ನೊಂದು ವಾರದ ನಂತರ ಅಮಾವಾಸ್ಯೆ ಹತ್ತಿರವಾಗುವ ದಿನಗಳಲ್ಲಿ, ಮೋಡಗಳಿಲ್ಲದೆ ಶುಭ್ರವಾದ ಆಕಾಶ ಇರುವ ದಿನ ಎಲ್ಲರೂ ನಕ್ಷತ್ರ ವೀಕ್ಷಣೆ ಮಾಡುವುದು ಅಂತ ನಿರ್ಧರಿಸಿದರು. ಎಲ್ಲ ಮಕ್ಕಳಿಗೂ ಹಾಗೆ ಆಕಾಶ ನೋಡುತ್ತಾ ತಮಗೆ ಗೊತ್ತಿರುವ ನಕ್ಷತ್ರಗಳ, ನಕ್ಷತ್ರ ಪುಂಜಗಳ, ಕಾನ್ಸ್ಟಲೇಶನ್‍ಗಳ, ಗ್ರಹಗಳ ಸರಿಯಾದ ಹೆಸರು ಹೇಳುವುದು, ತಿಳಿದುಕೊಳ್ಳುವುದು ಇನ್ನಿಲ್ಲದಷ್ಟು ಖುಶಿ ಕೊಡುವ ವಿಷಯವಾಗಿತ್ತು.
ಸಮಯದ ಪರಿವೆ ಇಲ್ಲದೆ ಮಾತಾಡುತ್ತಾ ಕುಳಿತ ಮಕ್ಕಳನ್ನೆಲ್ಲ ತಾತ ಕೆಳಗಿನಿಂದಲೇ ಮಲಗಲು ಕರೆದರು. ಅಂಗಳದ ಹತ್ತಿರವೇ ಜಗಲಿಯಲ್ಲಿ ಇವತ್ತು ಮಕ್ಕಳೆಲ್ಲ ತಾತನ ಜೊತೆಗೆ ಮಲಗುವ ವಿಶೇಷ ವ್ಯವಸ್ಥೆ ಆಗಿತ್ತು. ತಾತನ ಪಕ್ಕ ಮಲಗಿ ಕಥೆ ಕೇಳುತ್ತಲೇ ಜಿರ್ ಅನ್ನುವ ಜೀರುಂಡೆ ದನಿಯನ್ನು ಕೇಳುತ್ತ ನಿದ್ದೆ ಹೋಗುವ ಅಪೂರ್ವ ಅವಕಾಶ ಇದ್ದಿದ್ದರಿಂದ ಮಕ್ಕಳೆಲ್ಲ ತಾತನ ಬಳಿಗೆ ಓಡಿ ಬಂದರು.
[ಮುಂದಿನ ವಾರ : ದೇವಸ್ಥಾನದಲ್ಲೊಂದು ಪ್ರಶ್ನೆ ]
[ ಅಜ್ಜಿಮನೆಯಲ್ಲಿ ೪ :ತೋಪಿನಲ್ಲಿ ಮರಕೋತಿ ಆಡುವಾಗ]