ಬಾಕ್ಸ್ ತೆಗೆದುಕೊಂಡು ಎಲ್ಲರೂ ಒಟ್ಟಿಗೆ ಕೂತು ಎಲ್ಲರ ಮನೆಯ ತಿಂಡಿಗಳನ್ನ ಹಂಚಿಕೊಂಡು ಚೌಚೌಬಾತ್ ಮಾಡಿಕೊಂಡು ಕಿಚಡಿಯಂತೆ ಒಟ್ಟಿಗೆ ಸವಿಯುವ, ಎಲ್ಲರ ಎಸ್ಸೆಮ್ಮೆಸ್ ಹಂಚಿಕೊಳ್ಳುವ, ನಗೆಚಟಾಕಿ ಹರಿಸುವ, ತಮ್ಮ- ತಮ್ಮ ಬಾಯ್‌ಫ್ರೆಂಡ್‌ಗಳ ಬಗೆಗೊಂದಿಷ್ಟು ಗುಯ್‌ಗುಡುವ ಘಳಿಗೆಯೆಂದರೆ ಅದು ಊಟದ ಸಮಯ...ಅರರೆ...! ಹೀಗೆ ಹಂಚಿಕೊಂಡು ತಿನ್ನುವಾಗ ಎಲ್ಲ ಲೆಕ್ಕಚಾರ ನಮ್ಮಿಂದ ದೂರವಾಗಿರಬೇಕಲ್ವ...?ಊಹುಂ....ಹಾಗೆ ಆಗಿರುವುದೇ ಇಲ್ಲ ನೋಡಿ...!
ಈಚೆಗೆ ಪರೀಕ್ಷೆ ನಡೆಯುವ ಮುಂಚೆ, ಎಲ್ಲರೂ ಒಟ್ಟಿಗೆ ಸೇರಿಕೊಂಡು ಓದಿ ಆಯ್ತಾ...? ಈ ಅಸೈನ್ಮೆಂಟ್ ಮುಗೀತಾ...? ರೆಕಾರ್ಡ್‌ಗೆ ಸೈನ್ ಆಯ್ತಾ...? ಎಂದು ಕಾಡುಹರಟೆಗೆಂದು ಕ್ಯಾಂಟೀನ್ ತುದಿಯಲ್ಲಿ ಕುಳಿತಿದ್ದೆವು. ಎಲ್ಲರೂ ಬಾಕ್ಸ್ ತೆಗೆದು ತಿನ್ನುತ್ತಿದ್ದರೆ ನಮ್ಮೊಟ್ಟಿಗಿದ್ದ ಶ್ರಾವ್ಯ ಬಾಕ್ಸ್‌ಗೆ ಸ್ವತಃ ಕೈಹಾಕಲೇ ಇಲ್ಲ...! ಹೋಗಲಿ...ಈ ಸ್ವೀಟಾದರೂ ತಿನ್ನಮ್ಮ ಎಂದು ಕೊಡಲಿಕ್ಕೆ ಹೋದರೆ, ‘ನೋ...ಥ್ಯಾಂಕ್ಸ್...!’ ಅಂದು ಬಿಡಬೇಕೆ...?
ಅಯ್ಯೋ...! ಮೊದಲೇ ಅವು ಪೂರ್ವಭಾವಿ ಪರೀಕ್ಷಾ ದಿನಗಳು, ಸೆಮಿಸ್ಟರ್ ಪದ್ದತಿಯೊಳಗೆ ಅತ್ಯಂತ ಒತ್ತಡಕ್ಕೆ ಸಿಲುಕಿಸುವ ಘಳಿಗೆಗಳು ಅವೇ ಇರಬಹುದು. ಅದು ಸಬ್‌ಮಿಶನ್...ಇದಕ್ಕೆ ಸೈನ್ ಎಂದು ಡಿಪಾರ್ಟ್‌ಮೆಂಟಿಂದ ಡಿಪಾರ್ಟ್‌ಮೆಂಟಿಗೆ ಓಡಾಡಿಯೇ ಅರ್ಧ ಹೈರಾಣಾಗಿರುತ್ತೇವೆ...ಈ ಹುಡುಗಿ ತಿನ್ನುವುದಿಲ್ಲ ಎನ್ನುತ್ತಾಳಲ್ಲ ಎಂದು ಸುಮ್ಮನಾದೆವು.
ಆನಂತರ ತಿಳಿಯಿತು ..., ಅವಳೇಕೆ ನಮ್ಮೊಟ್ಟಿಗೆ ತಿನ್ನುವುದಿಲ್ಲವೆಂದು...! ಅವಳಿಗೆ ಹಸಿವಿದ್ದರೂ ತಿನ್ನುವ ಮನಸ್ಸಿಲ್ಲ...! ಮನಸ್ಸಿದ್ದರೂ ಆ ಘಳಿಗೆಗಳನ್ನ ಅನುಭವಿಸುವ ಅದೃಷ್ಟವೂ ಇಲ್ಲದೇ ಇರಬಹುದು...!
ಅವಳಿಗೆ ‘ಜಾತಿ’ಯ ಸಮಸ್ಯೆ ಕಾಡುತ್ತಿತ್ತು. ಮೇಲ್ಜಾತಿಯವಳಾದ ತಾನೂ ಯಾರ ಬಾಕ್ಸ್‌ನಲ್ಲಿಯೂ ತಿನ್ನಬಾರದು ಎನ್ನುವ ಪ್ರಜ್ಞೆ ಪೂರ್ತಿಯಾಗಿ ಆವರಿಸಿಕೊಂಡಿತ್ತು. ಹಾಗಾಗಿಯೇ ಅವಳು ಇಂತಹ ಆಧುನಿಕ ಜಗತ್ತಿನೊಳಗೂ ಜಾತಿಯ ಲೆಕ್ಕಚಾರದೊಳಗೆ ಮುಳುಗಿ ಹೋಗಿದ್ದಳು.
ಈ ಘಟನೆಯಾದ ನಂತರ ಅನೇಹ ಆಲೋಚನೆಗಳು ಮನಸ್ಸಿನೊಳಗೆ ಇಣುಕುತ್ತಿದ್ದವು, ಹಳೆಯ ನೆನಪುಗಳು ಕೂಡ ಬೆಂಬಿಡದೆ ಕಾಡುತ್ತಿದ್ದವು. ಇದ್ದಕ್ಕಿದ್ದ ಹಾಗೆ ಶಾಲೆಯ ದಿನಗಳು ಕಣ್ಮುಂದೆ ತೆರೆದುಕೊಂಡವು. ಇಂಥವೆಲ್ಲದರ ಗೋಳಿಲ್ಲದೆ ಕಳೆದುಹೋದ ಅದ್ಭುತ ದಿನಗಳವು...!
ಸಣ್ಣ ಚಾಕಲೆಟ್‌ನಿಂದಿಡಿದೂ ಹಬ್ಬದ ಎಲ್ಲ ತಿನಿಸುಗಳನ್ನ ಕ್ಲಾಸಿನ ಪೂರ್ತಿ ಹಂಚಿಕೊಂಡು ತಿನ್ನುತ್ತಿದ್ದ ಕ್ಷಣಗಳು...! ಅದೆಷ್ಟೇ ಜಗಳವಾಡಿ ಮುನಿಸಿಕೊಂಡಿದ್ದರೂ ಚೈನಾಪಿಲೆ ಆಟವಾಡುವಷ್ಟರಲ್ಲಿ ಕೈ-ಕೈ ಹಿಡಿದು ಒಂದಾಗಿ ಓಡುತ್ತಿದ್ದ ಓಟಗಳು, ಗೆಳತಿಗೆ ಹುಷಾರಿಲ್ಲದೇ ಹೋದರೆ ಅವಳ ನೋಟ್ಸ್/ಹೋಮ್‌ವರ್ಕ್ ಎಲ್ಲವನ್ನ ಬರೆದುಕೊಟ್ಟು ಅವಳನ್ನ ಬಚಾವ್ ಮಾಡುತ್ತಿದ್ದ ಫ್ರೆಂಡ್‌ಶಿಪ್...! ಪರೀಕ್ಷೆಯಲ್ಲಿ ಮ್ಯಾಪ್ ಬರೆಯುವಾಗ ಇಂಡಿಯಾದ ಭೂಪಟ ಹಿಡಿದು ಟ್ರೇಸ್ ಮಾಡಿ ಒಬ್ಬರಿಂದೊಬ್ಬರಿಗೆ ಪಾಸ್‌ಮಾಡಿ ಎಲ್ಲರದೂ ಒಂದೇ ಉತ್ತರ ಕಾಣುವ ಹಾಗೆ ಮಾಡುತ್ತಿದ್ದ ಚಾಲಾಕಿತನ...!ವಾರ್ಷಿಕೋತ್ಸವದ ತಯಾರಿಯಲ್ಲಿ ಒಟ್ಟೊಟ್ಟಿಗೆ ಡ್ಯಾನ್ಸ್ ಕಲಿಯುವ ನೆಪದಲ್ಲಿ ಕುಣಿದಾಡುತ್ತಿದ್ದ ಸಂಭ್ರಮ...! ಹೀಗೆ ಇಂಥವುಗಳ ಎಳೆ ತೆಗೆದರೆ ಅದೆಷ್ಟು ರಸಭರಿತ ಗೊಂಚಲುಗಳ ಬಾಲ್ಯದ ದಿನಗಳು ಕಣ್ಮುಂದೆ ಬರಬಹುದು.
ಇಷ್ಟೆಲ್ಲ ಒಟ್ಟೊಟ್ಟಿಗೆ ನಡೆಯುವಾಗ ಬಾಲ್ಯದಲ್ಲಿ ಯಾವ ಸಾಮಾಜಿಕ ಪಿಡುಗುಗಳ ಸೋಂಕು ಕಿಂಚಿತ್ ತಾಕಿರಲೇ ಇಲ್ಲ, ಆದರೆ ಇದಕ್ಕಿದ್ದ ಹಾಗೆ ಕಾಲೇಜಿಗೆ ಬರುತ್ತಿದ್ದಂತೆಯೇ ಇಂಥವುಗಳ ತೊಳಲಾಟದಲ್ಲಿ ಸಿಕ್ಕುವುದೇಕೆ...? ಹೌದಲ್ಲವೇ...! ಇವತ್ತು ಯಾವುದನ್ನು ಮುಗ್ದವಾಗಿ ನೋಡಲಿಕ್ಕೆ ಸಾಧ್ಯವಾಗುತ್ತಿಲ್ಲ. ತೂಗಿ ಅಳೆದ ಲೆಕ್ಕಚಾರದ ಮಾತುಗಳು, ಪ್ರತಿಯೊಂದರ ಬಗೆಗೂ ತಾರ್ಕಿಕ ನಿಲುವು, ಭಾವಗಳಿಲ್ಲದ ದೂಕಲೆಬೇಕಿರುವ ಒತ್ತಡದ ಬದುಕು...ಹಾಗಾಗಿಯೇ ಅಸ್ವಾಭಾವಿಕ ನಡವಳಿಕೆಗಳು.
ಮುಕ್ತವಾಗಿ ಹಂಚಿಕೊಳ್ಳದೆ ಎಲ್ಲವೂ ಕಣ್ಣಾಮುಚ್ಚಾಲೆಯಾಟ...! ಸಣ್ಣಗೆ ಭಿನ್ನ ಅಭಿಪ್ರಾಯಗಳು ಬರುತ್ತಿದ್ದಂತೆ ಮಾತನ್ನ ನಿಲ್ಲಿಸಿಬಿಡುವ ಮೂಕಮನಸುಗಳು...! ಡೆಸ್ಕ್ ಮುಂದೆಯೇ ಇದ್ದ ಗೆಳತಿ ಹುಷಾರಿಲ್ಲದೆ ನರಳುತ್ತಿದ್ದರೂ ಯಾವ ಪ್ರತಿಕ್ರಿಯೆಯೂ ಇಲ್ಲದ ಬಂಜರು ಹೃದಯಗಳು...! ಇಬ್ಬರು ಒಳ್ಳೆಯ ಫ್ರೆಂಡ್ಸ್ ಇದ್ದರೆ ಇಬ್ಬರ ಮಧ್ಯೆ ಬತ್ತಿ ಇಡುವ ಕಿತಾಪತಿಗಳು...!ಹುಡುಗ-ಹುಡುಗಿ ಒಟ್ಟಿಗೆ ಓಡಾಡಿಕೊಂಡಿದ್ದರೆ ಗ್ಯಾಸ್ಟ್ರಿಕ್ ಬರುವಷ್ಟು ಹೊಟ್ಟೆಹುರಿ ಪಟ್ಟುಕೊಂಡು ಕೊನೆಗೆ ಉಳಿಸುವ ಗಾಸಿಪ್ ಕಲೆಗಳು...!
ಕಾಲೇಜು ಹಂತಕ್ಕೆ ಬರುತ್ತಿದ್ದಂತೆ ಪ್ರಬುದ್ಧರಾಗುವ ದಿಸೆಯಲ್ಲಿಯೋ ಅಥವಾ ಎಲ್ಲವನ್ನ ಯೋಚನಾ ಲಹರಿಗೆ ಬಿಟ್ಟುಬಿಡುವುದರಿಂದಲೋ ಇಂಥಹ ಮುಖವಾಡಗಳನ್ನ ಧರಿಸಬೇಕಾಗುತ್ತಿದೆ. ವಯಸ್ಸು ಬದಲಾದಂತೆ ದೈಹಿಕ-ಮಾನಸಿಕ ಬದಲಾವಣೆಗಳು ಸಹಜವೇ ಆದರೂ ಅಸಹಜ ವರ್ತನೆ-ಪ್ರವೃತ್ತಿಗಳಿಂದ ದೂರ ಉಳಿಯುವುದು ಒಳಿತು.
ಆದರೆ, ನಿರ್ಮಲ ಮನಸ್ಸಿಗೆ, ಸಾಮೂಹಿಕ ಬದುಕಿಗೆ, ಪ್ರಶಾಂತತೆಯ ಭಾವಗಳಿಗೆ, ಸಹಭೋಜನಕೆ, ನೋವು-ನಲಿವುಗಳ ಮುಕ್ತ ಹಂಚಿಕೆಗೆ, ಬತ್ತದ ಪ್ರೀತಿಯ ರಸದೌತಣದ ಅನುಭೂತಿಗೆ ಬಾಲ್ಯವೊಂದೆ ಉತ್ತರ...! ಅಂಥಹ ಬಾಲ್ಯ ಮತ್ತೆ-ಮತ್ತೆ ಬರಬಾರದೇ....?
- ದಿವ್ಯ ರಂಗೇನಹಳ್ಳಿ.
ದಿವ್ಯ ರಂಗೇನಹಳ್ಳಿ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿನಿ, ಸಾಹಿತ್ಯದಲ್ಲಿ ಆಸಕ್ತಿ, ಬರವಣಿಗೆಯ ಅಭ್ಯಾಸ...ಕವಿತೆ, ಲೇಖನಗಳೆಡೆಗೆ ಹೆಚ್ಚು ಒಲವು. ಪ್ರಜಾವಾಣಿ, ಮಯೂರ, ಡೆಕನ್ ಹೆರಾಲ್ಡ್, ಹಾಯ್ ಬೆಂಗಳೂರು, ಓ ಮನಸೆ ಪತ್ರಿಕೆಗಳಲ್ಲಿ ಬರಹಗಳು ಪ್ರಕಟಗೊಂಡಿವೆ.