ಸೆಪ್ಟೆಂಬರ್ ೭, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಮಕ್ಕಳ ಸಂಪಿಗೆ: ಅಜ್ಜಿಮನೆಯಲ್ಲಿ ಧಾರಾವಾಹಿ -೬    
ಮೀರಾ ಪಿ.ಆರ್
ಶನಿವಾರ, 21 ಫೆಬ್ರವರಿ 2009 (02:32 IST)

ದೇವಸ್ಥಾನದಲ್ಲೊಂದು ಪ್ರಶ್ನೆ

ಒಂದೇ ಬಾರಿಗೆ ಎರಡೆರಡು ಮೆಟ್ಟಿಲು ಕುಪ್ಪಳಿಸಿ ಹತ್ತುತ್ತಾ ಮಕ್ಕಳು ಗುಡ್ಡವನ್ನೇರತೊಡಗಿದರು. ಉಲ್ಲಾಸನ ಕೈಹಿಡಿದು ನಿಧಾನಕ್ಕೆ ಅವನನ್ನು ಮೆಟ್ಟಲು ಹತ್ತಿಸಿಕೊಂಡು ಬರುತ್ತಿದ್ದ ತಾತ, ‘ನಿಧಾನ ಮಕ್ಳೆ, ಜೋಪಾನ’ ಎಂದು ಹೇಳುತ್ತಿರುವಾಗಲೇ, ಆ ಸಣ್ಣ ಗುಡ್ಡವನ್ನ ಮಕ್ಕಳೆಲ್ಲ ಹತ್ತಿ, ದೇವಸ್ಥಾನಕ್ಕೆ ಬಂದಾಗಿತ್ತು. ಊರಿನ  ತುದಿಯಲ್ಲಿದ್ದ ಆ ಗುಡ್ಡ, ಗುಡ್ಡದ ತುದಿಯಲ್ಲಿದ್ದ ಆ ದೇವಸ್ಥಾನ ಎರಡೂ ಮಕ್ಕಳಿಗೆ ತುಂಬಾ ಪ್ರಿಯವಾದ ಜಾಗವಾಗಿತ್ತು. ಹಬ್ಬ, ಹರಿದನ ಅಂತಲ್ಲದೆ ಉಳಿದ ದಿನಗಳಲ್ಲಿ ಅಲ್ಲಿಗೆ ದೇವರ ಪೂಜೆಗೆ ಬರುತ್ತಿದ್ದವರು ಕಡಿಮೆ. ಹೀಗಾಗಿ ಸಾಮಾನ್ಯವಾಗಿ ಅಲ್ಲಿ ಹೆಚ್ಚು ಜನರೂ ಇರುತ್ತಿರಲಿಲ್ಲ. ದೇವರ ಪೂಜೆ ಮಾಡುತ್ತಿದ್ದ ಅರ್ಚಕ ಶ್ಯಾಮ ಭಟ್ಟರು ತಾತನ ಸ್ನೇಹಿತರಾಗಿದ್ದರಿಂದ, ಅವರನ್ನು ಮಾತನಾಡಿಸಲೆಂದೇ ಪ್ರತಿ ಸಂಜೆ ತಾತ ಈ ದೇವಸ್ಥಾನಕ್ಕೆ ಬರುತ್ತಿದ್ದರು. ಹಾಗೆ ಬರುವಾಗ ಒಮ್ಮೊಮ್ಮೆ ಮಕ್ಕಳನ್ನೂ ಜೊತೆಗೆ ಕರೆದುಕೊಂಡು ಬರುತ್ತಿದ್ದರು.
 
ದೇವಸ್ಥಾನ ತಲುಪಿ, ಗರ್ಭಗುಡಿಗೆ ಮೂರುಬಾರಿ ಪ್ರದಕ್ಷಿಣೆ ಬಂದು, ಸುಲಭಕ್ಕೆ ಕೈಗೆ ಎಟುಕಿಸದ ಘಂಟೆಯನ್ನು ಹಾರುತ್ತಾ, ಎಗರುತ್ತಾ ‘ಢಣ್’ ಎನ್ನಿಸುತ್ತಿರುವಾಗಲೇ ಈ ಮಕ್ಕಳ ಪ್ರೀತಿಯ ಶ್ಯಾಮಣ್ಣ ತಾತ ಇವರಿಗೆಲ್ಲ ಮಂಗಳಾರತಿ ಕೊಟ್ಟು, ತೀರ್ಥ-ಪ್ರಸಾದ ನೀಡಿದರು. ಕೇಸರಿ, ಪಚ್ಚಕರ್ಪೂರ ಸೇರಿಸಿ ‘ಘಮ್’ ಅನ್ನುತ್ತಿದ್ದ ತೀರ್ಥ, ಪ್ರಸಾದ ಎಂಬ ಕಾರಣಕ್ಕೆ ಪಿಡಿಚೆಯಷ್ಟೇ ಸಿಗುವ ಸಿಹಿ ಶಾಲ್ಯಾನ್ನವೆಂದರೆ ಮಕ್ಕಳಿಗೆ ಪಂಚಪ್ರಾಣ. ಈ ಕಾರಣಕ್ಕೇ ದೇವಸ್ಥಾನಕ್ಕೆ ಯಾವಾಗ ಬೇಕಾದರೂ ಕುಣಿಯುತ್ತಾ ಹೊರಟುಬಿಡುತ್ತಿದ್ದರು. ಪುಟ್ಟ ಉಲ್ಲಾಸ, ತಾತ ಹೇಳಿಕೊಟ್ಟ ಹಾಗೆ ‘ನಮಚ್ಚೂಯಾಯ ಚಂದ್ಲಾಯ’ ಅಂತ ಮುದ್ದಾಗಿ ತೊದಲುತ್ತಾ ಶ್ಲೋಕ ಹೇಳುತ್ತಾ ನವಗ್ರಹಕ್ಕೆ ಸುತ್ತುಹಾಕುವುದನ್ನು ನೋಡುತ್ತಿದ್ದ ಉಳಿದವರಿಗೆ ನಗು ತಡೆಯುವುದೇ ಕಷ್ಟವಾಯಿತು. ಪೂಜೆ, ನಮಸ್ಕಾರ,ಶ್ಲೋಕ, ದೇವರನಾಮ ಎಲ್ಲ ಮುಗಿದ ಮೇಲೆ, ‘ದೇವಸ್ಥಾನಕ್ಕೆ ಬಂದವರು ಹಾಗೆ ಥಟ್ ಅಂತ ಹೋಗಿ ಬಿಡಬಾರದು, ಸ್ವಲ್ಪ ಹೊತ್ತು ದೇವರ ಮುಂದೆ ಕುಳಿತು ಆಮೇಲೆ ಹೊರಗೆ ಹೋಗಬೇಕು’ ಅಂತ ಅಜ್ಜಿ, ತಾತ ಹೇಳಿಕೊಟ್ಟಿದ್ದು ನೆನಪಿಸಿಕೊಳ್ಳುತ್ತಾ ಮಕ್ಕಳೆಲ್ಲಾ ಚಕ್ಕಳಮಕ್ಕಳ ಹಾಕಿಕೊಂಡು ಅಲ್ಲೇ ಒಂದು ಕಡೆ ಕುಳಿತುಕೊಂಡರು. ರಂಜು, ನಿಧಿ ಇಬ್ಬರೂ ದೇವರಿಗೆ ಮಾಡಿದ್ದ ಮಲ್ಲಿಗೆ, ಕನಕಾಂಬರದ ಅಂದ, ಚಂದ ನೋಡುತ್ತಾ ಕುಳಿತರೆ, ಸಿರಿ, ದಿನೂ ಇಬ್ಬರೂ ಗರ್ಭಗುಡಿಯ ಎದುರು ಗೋಡೆಯ ಮೇಲೆ ಹಾಕಿದ್ದ ಕನ್ನಡಿಯೊಳಗೆ ತೂಗುತ್ತಿದ್ದ ಗರ್ಭಗುಡಿಯೊಳಗಿನ ತೂಗುದೀಪವನ್ನೂ, ಅದರ ಬೆಳಕಿನಲ್ಲಿ ಮಬ್ಬಾಗಿ ಹೊಯ್ದಾಡುತ್ತಾ ನಿಂತಂತೆ ಕಾಣುತ್ತಿರುವ ದೇವರ ಮೂರ್ತಿಯನ್ನೂ ನೋಡುತ್ತಾ ಮೂರ್ತಿಗೆ ಬೆನ್ನು ತಿರುಗಿಸಿ ಕುಳಿತಿದ್ದರು. ಉಲ್ಲಾಸನನ್ನು ತೊಡೆಯ ಮೇಲೆ ಕೂರಿಸಿಕೊಂಡು ದೂರಿಯಾಡಿಸುತ್ತಿದ್ದ ತಾತ, ‘ಮಕ್ಳೇ, ದೇವರಿಗೆ ಬೆನ್ನು ಹಾಕಿ ಕೂರಬಾರದು, ನೀವಿಬ್ಬರೂ ದೇವರಿಗೆ ಮುಖ ಮಾಡಿ ಕುಳಿತುಕೊಳ್ಳಿ’ ಅಂತ ಹೇಳಿದರು.

ತಾತ ಹೇಳಿದ ದಿಕ್ಕಿಗೇ ತಿರುಗಿ ಕೂರುತ್ತಾ ದಿನೂ ಕೇಳಿದ, ‘ಯಾಕೆ ತಾತ, ದೇವರಿಗೆ ಬೆನ್ನು ತೋರಿಸಬಾರ್ದು?’
'ಅದು ಹಾಗೇ ಪುಟ್ಟ... ದೇವರಿಗೆ ಬೆನ್ನು ತೋರಿಸೋದು ಅಗೌರವ ಸೂಚಿಸಿದ ಹಾಗೆ’
‘ಆದ್ರೆ ತಾತ...’ ಏನನ್ನೋ ಕೇಳಲು ಹೋದ ಸಿರಿ ಯಾಕೋ ಸುಮ್ಮನಾದಳು.
‘ಏನು ಹೇಳು ಮಗೂ’ ತಾತ ಕೇಳಿದ ಮೇಲೆ ಮತ್ತೆ ಹೇಳಿದಳು,
‘ದೇವರಿಗೆ ಬೆನ್ನು ತೋರಿಸದೆ ಇರೋಕ್ಕೆ ಹ್ಯಾಗೆ ಆಗತ್ತೆ?’
‘ಅಂದ್ರೆ’ ಸಿರಿ ಕೇಳಿದ ಪ್ರಶ್ನೆ ತಾತನಿಗೆ ತಿಳಿಯಲಿಲ್ಲ.
‘ನೀನೇ ಹೇಳಿದ್ದೆ ಮತ್ತೆ, ದೇವರು ಎಲ್ಲ ಕಡೆಯೂ ಇದ್ದಾನೆ ಅಂತ.....ಹಾಗಿದ್ರೆ, ನಾವು ಹ್ಯಾಗೆ ತಿರುಗಿ ಕೂತರೂ ದೇವರಿಗೆ ನಮ್ಮ ಬೆನ್ನು ಕಾಣ್ತಾನೆ ಇರತ್ತೆ ಅಲ್ವ?’

ಒಂದು ಕ್ಷಣ ತಾತ ಏನೂ ಮಾತಾಡದೆ ಧಿಗ್ಮೂಡರಾದಂತೆ ಕೂತರು. ನಂತರ ಮುಖದ ತುಂಬಾ ನಗು ತುಂಬಿಕೊಂಡು ‘ಇಲ್ಲಿ ಬಾ ಕಂದ’ ಎಂದು ಸಿರಿಯನ್ನ ಹತ್ತಿರ ಕರೆದು ಕೂರಿಸಿಕೊಂಡರು. ತಾತನ ಬಳಿ ಬಂದು ಒರಗಿ ಕುಳಿತ ಸಿರಿಯನ್ನು ಒಂದು ಕೈಲಿ ಬಳಸಿ ಹಿಡಿದು ತಾತ ಹೇಳಿದರು, ‘ನೀನು ಹೇಳಿದ್ದು ಸರಿ ಮಗೂ....ದೇವರ ವಿಷಯ ನಿನಗೆ ತಿಳಿದಿರುವಷ್ಟು ನನಗೆ ತಿಳಿದೇ ಇಲ್ಲ ನೋಡು’. ತಾತ ಹೇಳಿದ್ದು ಏನೆಂದು ಸಿರಿಗೆ ಅಷ್ಟು ತಿಳಿಯದೇ ಇದ್ದರೂ, ಹಾಗೆ ಹೊಗಳಿಸಿಕೊಂಡು ಮುದ್ದು ಮಾಡಿಸಿಕೊಂಡಿದ್ದಕ್ಕೆ ಖುಶಿಯಾಯಿತು.
 
ಗರ್ಭಗುಡಿಯೊಳಗೆ ಮಂಗಳಾರತಿಯ ತಟ್ಟೆ, ತೀರ್ಥದ ಬಟ್ಟಲು ಎಲ್ಲವನ್ನೂ ಚೊಕ್ಕವಾಗಿಸುತ್ತಾ ದೇವಸ್ಥಾನಕ್ಕೆ ಬೀಗ ಹಾಕಿ ಹೊರಡಲು ಸಿದ್ಧವಾಗುತ್ತಿದ್ದ ಶ್ಯಾಮ ಭಟ್ಟರನ್ನು ತಾತ ‘ಏ ಶ್ಯಾಮಣ್ಣ ಬಾ ಇಲ್ಲಿ ಮಾರಾಯ’ ಎಂದು ಕೂಗಿ ಕರೆದು, ಸಿರಿ ಹೇಳಿದ್ದೆಲ್ಲವನ್ನೂ ಹೇಳಿದರು.

‘ಅಲ್ವೇ ಮತ್ತೆ! ಅದಕ್ಕೆ ಹೇಳೋದು, ಮಕ್ಕಳ ಮನಸ್ಸಲ್ಲೇ ದೇವರಿರ್ತಾನೆ ಅಂತ’. ಹೀಗೆಂದ ಶ್ಯಾಮಣ್ಣ ತಾತ ತನ್ನ ಮುಂದೆ ಬಾಗಿ ಕಣ್ಣರಳಿಸಿ, ‘ನೀನಿಷ್ಟು ಜಾಣೆ ಅಂತ ನನಗೆ ಗೊತ್ತೇ ಇರಲಿಲ್ವಲ್ಲೇ ಮಗೂ’ ಎಂದು ಬೊಚ್ಚು ಬಾಯಿ ಅರಳಿಸಿ ನಕ್ಕಾಗ ಸಿರಿಗೆ ಸಂತೋಷವಾದರೂ ಜೊತೆಗೇ ನಾಚಿಕೆಯೂ ಆಗಿ, ಇನ್ನಷ್ಟು ತಾತನಿಗೆ ಒರಗಿ ಅವರ ಭುಜದ ಹಿಂದೆ ಮುಖ ಹುದುಗಿಸಿದಳು. ‘ಅಯ್ಯಯ್ಯೋ ಇಷ್ಟು ಜಾಣೆಗೆ ಇಷ್ಟೊಂದು ಸಂಕೋಚವೆ? ಇದ್ರೂ ಏನಂತೆ, ನಿನಗೊಂದು ಮಂತ್ರ ಹೇಳಿಕೊಡ್ತೀನಿ..ಅದನ್ನ ಮೂರು ಸಲ ಹೇಳಿಬಿಟ್ರೆ ನಿನ್ನ ಸಂಕೋಚವೆಲ್ಲ ಹಾಗೇ ಥಟ್ ಅಂತ ಮಾಯವಾಗಿಬಿಡತ್ತೆ...ಹೇಳಿಕೊಡಲೇನು?’ ಅಂತ ಕೇಳಿದರು. ಇವರೇನೋ ಕೀಟಲೆ ಮಾಡುತ್ತಿದ್ದಾರೆ ಅನ್ನಿಸಿದರೂ ‘ಆಯ್ತು ಹೇಳ್ಕೊಡಿ’ ಅಂತ ಸಿರಿ ಕೇಳಿದಳು. ಉಳಿದ ಮಕ್ಕಳು ಕೂಡ ನಮ್ಗೂ ಹೇಳ್ಕೊಡಿ ಅಂತ ದಂಬಾಲು ಬಿದ್ದರು. ‘ನೀವೆಲ್ಲ ಗುಡಿ ಹೊರಗೆ ಆಡಿಕೊಳ್ತಿರಿ, ನಾನು ಸಾಮಾನೆಲ್ಲ ಎತ್ತಿಟ್ಟು, ಗುಡಿಗೆ ಬೀಗ ಹಾಕಿ ಬಂದು, ನಿಮ್ಗೆಲ್ಲ ಮಂತ್ರೋಪದೇಶ ಮಾಡ್ತೀನಿ’ ಎಂದು ಶ್ಯಾಮಣ್ಣ ಹೇಳಿದರು.
 
ದೇವಸ್ಥಾನದ ಹೊರಗಿನ ಜಗಲಿಯ ಮೇಲೆ ಮಕ್ಕಳೆಲ್ಲ ಕಂಬ ಸುತ್ತುವ ಆಟ ಆಡುತ್ತಾ ಇರುವಾಗ ತಮ್ಮ ಕೆಲಸ ಮುಗಿಸಿ ಬಂದ ಶ್ಯಾಮ ಭಟ್ಟರು, ತಾತನ ಜೊತೆಗೆ ಕುಳಿತು ಅದೇನೋ ಗಹನವಾದ ಚರ್ಚೆಯಲ್ಲಿ ನಿರತರಾಗಿದ್ದರು. ಇವರಿಬ್ಬರೂ ಹೀಗೆ ಗುಡಿಯ ಮೇಲೆ ಕುಳಿತು ದೇಶದ ರಾಜಕೀಯ, ಕತೆ, ಕವಿತೆ, ತಮ್ಮ ಬಾಲ್ಯದ ದಿನಗಳು ಅಂತೆಲ್ಲ ದಿನವೂ ಮಾತನಾಡಿಕೊಳ್ಳುವುದು ಮಕ್ಕಳಿಗೂ ಗೊತ್ತಿದ್ದ ವಿಷಯವೇ. ಇವತ್ತಿನ ಮಾತು, ಸಿರಿ ಕೇಳಿದ ಪ್ರಶ್ನೆಯಿಂದಲೇ ಶುರುವಾಗಿ ದೇವರು, ಧರ್ಮ, ಉಪನಿಷತ್ತು, ಚಾರ್ವಾಕ ಪಂಥ, ಕೋವೂರು ಅಂತೆಲ್ಲ ಸುತ್ತು ಹೊಡೆಯುತ್ತಿದ್ದಿದ್ದು ಆಟವಾಡುತ್ತಿದ್ದ ಮಕ್ಕಳಿಗೆ ಅಷ್ಟು ಇಷ್ಟು ಕೇಳಿಸುತ್ತಿತ್ತು.
 
ಸ್ವಲ್ಪ ಹೊತ್ತಿನ ನಂತರ ಆಡುತ್ತಿದ್ದ ಮಕ್ಕಳನ್ನು ಕರೆದು ತಾತ ಹೇಳಿದರು, ‘ಮಕ್ಕಳೇ, ಇಷ್ಟು ಹೊತ್ತೂ ನಾನೂ, ಶ್ಯಾಮಣ್ಣನೂ ಇವತ್ತು ಗುಡಿಯೊಳಗೆ ನಮ್ಮ ಸಿರಿಗೌರಿ(ಸಿರಿಯ ಮೇಲೆ ತುಂಬಾ ಪ್ರೀತಿ ಬಂದಾಗ ತಾತ ಅವಳನ್ನು ಹಾಗೇ ಕರೆಯುತ್ತಿದ್ದಿದ್ದು) ಕೇಳಿದ ಪ್ರಶ್ನೆಯನ್ನೇ ಕುರಿತು ಮಾತಾಡುತ್ತಿದ್ದೆವು. ನೀವೆಲ್ಲ ಹೀಗೆ ಯಾವಾಗಲೂ ಪ್ರಶ್ನೆ ಕೇಳುತ್ತಾ ಉತ್ತರ ಹುಡುಕುತ್ತಾ ಇರಬೇಕು. ಉತ್ತರ ಸಿಗದಿದ್ದರೆ ಏನೂ ನಷ್ಟವಿಲ್ಲ, ಆದರೆ ಪ್ರಶ್ನಿಸೋದನ್ನ ನಿಲ್ಲಿಸಿಬಿಟ್ಟರೆ, ಉತ್ತರ ಸಿಗುವ ಸಾಧ್ಯತೆಯೇ ಇರುವುದಿಲ್ಲ.....ಪ್ರಶ್ನೆ ಕೇಳದೆ ನೀವು ಯಾವುದನ್ನೂ ಹಾಗೇ ಒಪ್ಪಿಕೊಂಡು ಬಿಡಬಾರದು...ದೇವರಿದ್ದಾನ, ಇಲ್ಲವಾ ಎಂಬುದನ್ನೂ ಸಹ’. ‘ನಿಮ್ಮ ಹಾಗೇ ಇದ್ದ ನಚಿಕೇತ ಅನ್ನುವ ಒಬ್ಬ ಪುಟ್ಟ ಹುಡುಗ, ಪ್ರಶ್ನೆ ಕೇಳುತ್ತಲೇ ಬ್ರಹ್ಮತ್ವ ಪಡೆದ ಕತೆಯೊಂದಿದೆ, ಶ್ಯಾಮಣ್ಣ ಈಗ ನಿಮಗದನ್ನ ಹೇಳ್ತಾನೆ, ಕೇಳಿಸಿಕೊಳ್ಳಿ’ ಎಂದರು. ಶ್ಯಾಮಣ್ಣ ತಾತ ಕತೆ ಹೇಳುವ ರೀತಿ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಕೇಳಬೇಕೆನ್ನಿಸುವ ಹಾಗಿರುತ್ತಿತ್ತು. ಈಗ ಮೈಯೆಲ್ಲ ಕಿವಿಯಾಗಿ ಕೂತ ಮಕ್ಕಳಿಗೆ ಶ್ಯಾಮ ಭಟ್ಟರು ನಚಿಕೇತನ ಕಥೆ ಹೇಳಿದರು. ಅದಾಗಲೇ ಕಪ್ಪಾಗತೊಡಗಿದ್ದ ಆಕಾಶದಲ್ಲಿ ಅಲ್ಲೊಂದು ಇಲ್ಲೊಂದು ಮೂಡತೊಡಗಿದ ನಕ್ಷತ್ರಗಳು, ಕಥೆ ಮುಗಿಯುವಷ್ಟರಲ್ಲಿ ಆಕಾಶದ ತುಂಬಾ ಫಳಫಳ ಹೊಳೆಯತೊಡಗಿದವು. ಕತೆ ಮುಗಿದ ಮೇಲೆ ಮಕ್ಕಳೆಲ್ಲ ಏನೂ ಮಾತಾಡದೆ, ರಾತ್ರಿ ಆಕಾಶದ ಚೆಲುವನ್ನು ನೋಡುತ್ತಾ ಗುಡ್ದದ ಮೇಲೆ ಹಿತವಾಗಿ ಬೀಸುತ್ತಿದ್ದ ಗಾಳಿಯ ಶಬ್ದ ಕೇಳುತ್ತಾ ಕತೆಯ ಗುಂಗಿನಲ್ಲೇ ಇನ್ನೂ ಮುಳುಗಿರುವಾಗ ನಿಧಿಗೆ, ಶ್ಯಾಮಣ್ಣ ತಾತ ಹೇಳಿದ್ದ ಮಂತ್ರದ ನೆನಪು ಬಂತು. ‘ಅಯ್ಯೋ, ಮಂತ್ರ ಹೇಳಿಕೊಡುವುದನ್ನೇ ಮರೆತು ಬಿಟ್ಟಿದ್ದೆನಲ್ಲ’ ಎಂದು ಪೇಚಾಡಿಕೊಂಡವರಂತೆ ನಟಿಸುತ್ತಾ ಭಟ್ಟರು ಹೇಳಿದರು, ‘ಸರಿ ಈಗ ಎಲ್ಲರೂ ಬೆನ್ನು ಬಾಗಿಸದೆ, ಪದ್ಮಾಸನ ಹಾಕಿ ನೆಟ್ಟಗೆ ಕುಳಿಕೊಳ್ಳಿ.....ಆ..ಹಾಗೆ! ಈಗ ಕೈಯೆರಡೂ ಜೋಡಿಸಿಕೊಳ್ಳಿ...’

‘ತಾತ ಕಣ್ಣೂ ಮುಚ್ಚಿಕೊಳ್ಳಬೇಕಾ’ ಮುಸಿಮುಸಿ ನಗುತ್ತಾ ದಿನೂ ಕೇಳಿದಾಗ ಶ್ಯಾಮಣ್ಣ , ‘ಅಯ್ಯೋ ಮರೆತೇ ಬಿಟ್ಟಿದ್ದೆ ನೋಡು, ಹೌದು ಹೌದು ಕಣ್ಣೂ ಮುಚ್ಚಿಕೊಳ್ಳಬೇಕು. ಆಗಲೇ ಈ ಮಂತ್ರಶಕ್ತಿಯಿಂದ ನಿಮ್ಮ ಸಂಕೋಚವೆಲ್ಲ ಮಾಯವಾಗೋದು’ ಎಂದರು. ಈಗ ಪದ್ಮಾಸನದಲ್ಲಿ ಕುಳಿತು, ಕೈ ಜೋಡಿಸಿ, ಕಣ್ಣು ಮುಚ್ಚಿ ಕುಳಿತ ಮಕ್ಕಳಿಗೆ, ಮಂತ್ರ ಹೇಳಿಕೊಡುವಾಗಾಗಲಿ, ನಂತರ ಅದನ್ನು ಮೂರು ಬಾರಿ ಹೇಳುವಾಗಲೇ ಆಗಲಿ ಒಂದಿಷ್ಟೂ ನಗಬಾರದು ಎಂದು ತಾಕೀತು ಮಾಡಿ, ಗಂಭೀರ ಧ್ವನಿಯಲ್ಲಿ ಶ್ಯಾಮಣ್ಣ ತಾತ ಮಂತ್ರ ಹೇಳಲು ಪ್ರಾರಂಭಿಸಿದರು.
 
‘ಓಂ.......ನಾಚ್ಕೆ ಗೀಚ್ಕೆ ಊರಿಂದಾಚ್ಗೆ’.......‘ಎಲ್ಲಿ ಇದನ್ನೇ ಮೂರು ಬಾರಿ ಹೇಳಿ ನೋಡೋಣ?’
 
ಅಷ್ಟು ಹೊತ್ತೂ ತಡೆದುಕೊಂಡಿದ್ದ ಮಕ್ಕಳ ನಗು ಕಟ್ಟೆಯೊಡೆದು ಹೊರಗೆ ಬಂತು. ಎಲ್ಲರೂ ಕಷ್ಟ ಪಟ್ಟು ನಗು ತಡೆದುಕೊಳ್ಳುತ್ತಾ ಮಂತ್ರ ಹೇಳಲು ಶುರು ಮಾಡಿದರು. ನಗದೆ ಮಂತ್ರ ಹೇಳಲು ಯಾರಿಗೂ ಸಾಧ್ಯವೇ ಆಗದೆ ಹೋದಾಗ, ಶ್ಯಾಮಣ್ಣ ತಾತ ಹೇಳಿದರು, ‘ಏನೂ ತೊಂದರೆ ಇಲ್ಲ. ನಾನು ಮಂತ್ರ ಉಪದೇಶಿಸಿದ್ದಾಗಿದೆ, ಇನ್ನು ನೀವದನ್ನ ಸರಿಯಾಗಿ ಹೇಳಿ ಸಿದ್ಧಿಸಿಕೋಬೇಕು ಅಷ್ಟೆ. ಹಾಗೆ ಸಿದ್ಧಿಸಿಕೊಂಡ ದಿನ, ನಿಮ್ಮ ಸಂಕೋಚವೆಲ್ಲ ಥಟ್ ಅಂತ ಮಾಯವಾಗಿಬಿಡತ್ತೆ’.
 
ಮಕ್ಕಳೆಲ್ಲ ಜೋರಾಗಿ ಮಂತ್ರ ಹೇಳುತ್ತಾ ನಗುತ್ತಾ ಈ ಇಬ್ಬರು ತಾತಂದಿರ ಜೊತೆಗೆ ಗುಡ್ಡವನ್ನಿಳಿಯತೊಡಗಿದರು.   
 
[ಮುಂದಿನ ವಾರ : ಮೊಗ್ಗಿನ ಜಡೆಯ ಸಂಭ್ರಮ]

[ಅಜ್ಜಿಮನೆಯಲ್ಲಿ ಧಾರಾವಾಹಿ ೫: ದೊಡ್ಡಮ್ಮನ ಮನೆಯಲ್ಲಿ ]

ಪುಟದ ಮೊದಲಿಗೆ
 
Votes:  5     Rating: 3.4    
 
 
ಸಂಬಂಧಿಸಿದ ಲೇಖನಗಳು
  ಸಚಿನ್ ದೇವರಾದರೂ ಕ್ರಿಕೆಟ್ ಧರ್ಮವಲ್ಲ
  ಬಿ ಎ ಬಿ ಎ ಎಂದೇಕೆ ಬೀಳುಗಳೆಯುವಿರಿ? ಸೀಮಾ ಸಮತಲ ಬರಹ
  ಧಾರವಾಡದ ಮೊದಲ ದಿನಗಳು : ಸ್ಮಿತಾ ಮಾಕಳ್ಳಿ ಬರಹ
  ಬಂಗಾರದಂತ ಎನ್ನ ಚಾದರ: ಸೀಮಾ ಸಮತಲ ಬರಹ
  ಮಕ್ಕಳ ಸಂಪಿಗೆಯಲ್ಲಿ ಮುದ್ದು ಬರೆದ ಕವಿತೆ
  ಕಾಲೇಜು ಸಂಪಿಗೆ: ಗುರುವಿನ ಗುಲಾಮನಾಗದ ತನಕ...
  ನನ್ನ ಶತ್ರುವೂ ಅಕ್ಕ, ನನ್ನ ಗೆಳತಿಯೂ ಅಕ್ಕ
  ಕಾಲೇಜು ಸಂಪಿಗೆ : ಲಾರಾಳ ಲೌವ್ಲಿ ಲೋಕ
  ಕಾಲೇಜು ಸಂಪಿಗೆ : ಸೀಮಾ ಸಮತಲ ಬರೆದ ಹಿಮಾಲಯ ಕಥನ
  ಕಾಲೇಜು ಸಂಪಿಗೆಯಲ್ಲಿ ಕಾವ್ಯ ಬರೆದ ಕವಿತೆಗಳು
  ಮಕ್ಕಳ ಸಂಪಿಗೆಯಲ್ಲಿ ಸಂಕೇತನ ಬಣ್ಣಗಳು
  ಕಾಲೇಜು ಸಂಪಿಗೆಯಲ್ಲಿ ಲಕ್ಷ್ಮಿ ವಾರಣಾಶಿ ಬರೆದ ಕವಿತೆ
  ಮಕ್ಕಳ ಸಂಪಿಗೆ: ಭಗವತಿ ಹೇಳುವ ಮೂರು ಕಥೆಗಳು
  ಕಾಲೇಜು ಸಂಪಿಗೆ: ಜಾತಿರಗಳೆಯಿಲ್ಲದ ಬಾಲ್ಯ
  ಮಕ್ಕಳ ಸಂಪಿಗೆಯಲ್ಲಿ ಜೀವನ್ ಜೋಸ್ ಬಣ್ಣಗಳು
  ಮಕ್ಕಳ ಸಂಪಿಗೆ: 'ಅಜ್ಜಿಮನೆಯಲ್ಲಿ' ಧಾರಾವಾಹಿ
  ಕಾಲೇಜು ಸಂಪಿಗೆ: ಸ್ಕೂಟಿ ಏರಿ ರಾಜಕುಮಾರಿ
  ಕಾಲೇಜು ಸ೦ಪಿಗೆಯಲ್ಲಿ ಕಾರ್ತಿಕ್ ಬರೆದ ಕವಿತೆ
  ಮಕ್ಕಳ ಸಂಪಿಗೆ: ತೋಪಿನಲ್ಲಿ ಮರಕೋತಿ ಆಡುವಾಗ
  ಕಾಲೇಜು ಸಂಪಿಗೆ: ಈಜುಕೊಳದಲ್ಲೇ ತೀರಿಹೋದಳು ಪುಟ್ಟಿ
  ನವೋದಯದ ದಿನಗಳು ೩- ಫಸ್ಟ್ ಸಂಡೆ ಮತ್ತು ಪರೀಕ್ಷೆ ಭಯ
  ಅಜ್ಜಿಮನೆಯಲ್ಲಿ ೩: ಟಂಗ್ ಟ್ವಿಸ್ಟರ್ಸು-ಹೇಳಿ ನೋಡೋಣ?
  ಅಜ್ಜಿಮನೆಯಲ್ಲಿ ೨- ಮೋಡದ ಹಾಡು
  ಕಾಲೇಜು ಸಂಪಿಗೆ: ಅಪ್ಪ ಅಮ್ಮನ ಜಗಳದ ನಡುವೆ ಗುಲ್ಮೊಹರ್
  ಮಕ್ಕಳ ದಿನ ವಿಶೇಷ : ಅಜ್ಜಿ ಮನೆಯಲ್ಲಿ ಅಳು ಬಂದಿದ್ದು
  ಕಾಲೇಜು ಸಂಪಿಗೆಯಲ್ಲಿ ವೇದಾ ನೂಪುರ ಬರೆದ ಕವಿತೆಗಳು
  ಕಾಲೇಜು ಸಂಪಿಗೆಯಲ್ಲಿ ಚರಿತ ಬರೆದ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಗ್ರೀಷ್ಮಾಳ ಚಿತ್ರಗಳು
  ಕಾಲೇಜು ಸಂಪಿಗೆ: ಮಲೆಯಾಳ ನೆಲದಲ್ಲಿ ಕಾಡು ಮಕ್ಕಳ ಕನಸು
  ಮಕ್ಕಳ ಸಂಪಿಗೆಯಲ್ಲಿ ವರುಣ ಚೆಲ್ಲಿದ ಬಣ್ಣಗಳು
  ನವೋದಯದ ದಿನಗಳು ೨ - ಅಲ್ಲೇನು ಕೋತಿ ಕುಣಿತೈತಾ..?
  ಕಾಲೇಜು ಸಂಪಿಗೆ: ಪರೀಕ್ಷೆ, ಫೇಲು, ಅಮ್ಮ, ಅಪ್ಪ ಇತ್ಯಾದಿ
  ಕಾಲೇಜು ಸಂಪಿಗೆಯಲ್ಲಿ ನವೋದಯದ ದಿನಗಳು
  ಕಾಲೇಜು ಸಂಪಿಗೆ : ಇಲ್ಲಿ ನೀರು ಮಾರಾಟಕ್ಕಿದೆ!
  ಮಕ್ಕಳ ಸಂಪಿಗೆಯಲ್ಲಿ ಅಮ್ಮ ಹೇಳಿದ ಕತೆ
  ಮಕ್ಕಳ ಸಂಪಿಗೆಯಲ್ಲಿ ವಿವೇಕನ ಫ್ಯಾಂಟಸಿಗಳು
  ಕಾಲೇಜುಸಂಪಿಗೆಯಲ್ಲಿ ರಂಗನತಿಟ್ಟು
  ಮಕ್ಕಳ ಸಂಪಿಗೆಯಲ್ಲಿ ಪೂಜಾಶ್ರೀ ಬರೆದ ಬಣ್ಣಗಳು
  ಕಾಲೇಜು ಸಂಪಿಗೆ: ತೊತ್ತೊ ಚಾನಳ ಸ್ವಚ್ಛಂದ ಲೋಕ
  ಮಕ್ಕಳ ಸಂಪಿಗೆ: ಸತ್ತೇನೇ ಎಲೇ ಗಿಡ್ಡಕ್ಕಿ!?
  ಕಾಲೇಜು ಸಂಪಿಗೆ: ರಕ್ಷಾಬಂಧನದ ಬಂಧ
  ಮಕ್ಕಳ ಸಂಪಿಗೆಯಲ್ಲಿ ಕಿರಣನ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಮಗನ ಭಾಷಾ ಸಾಹಸಗಳು
  ಮಕ್ಕಳ ಸಂಪಿಗೆಯಲ್ಲಿ ಭಗವತಿ ಹೇಳಿದ ಕಥೆ
  ಕಾಲೇಜು ಸಂಪಿಗೆಯಲ್ಲಿ ದಿಲೀಪ ಬರೆದ ಕವಿತೆ
  ಕಾಲೇಜು ಸಂಪಿಗೆಯಲ್ಲಿ ಗೌತಮ ಬರೆದ ಕಥೆ
  ಮಕ್ಕಳ ಸಂಪಿಗೆಯಲ್ಲಿ ಸಿತಾರಾ ಮಾಡಿದ ಭಾಷಣ
  ಕಾಲೇಜು ಸಂಪಿಗೆಯ ಮೊದಲ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಲಕ್ಕಿ ಸನ್
  ಮಕ್ಕಳ ಸಂಪಿಗೆಯಲ್ಲಿ ಉಲ್ಲಾಸದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಂಬರ್ ನೀಲ್ ಬರೆದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಪ್ರಮೇಯ
  ಮಕ್ಕಳ ಸಂಪಿಗೆಯಲ್ಲಿ ಆಶಿತ್ ಭಟ್
  ಮಕ್ಕಳಸಂಪಿಗೆಯಲ್ಲಿ ಹಾಸನದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ‘ಚುಪ್ರಿ'ಯ ಕವಿತೆಗಳು