ಕೆಂಡಸಂಪಿಗೆಯ ಕಾಲೇಜು ಸಂಪಿಗೆ ಅಂಗಳದಲ್ಲಿ ಈ ದಿನ ಕೆ.ಪಿ ಕಾವ್ಯ ಬರೆದ ಕವಿತೆ ಇದೆ. ಹುಬ್ಬಳ್ಳಿಯ ಪಿ ಸಿ ಜಾಬಿನ್ಸ್ ಕಾಲೇಜಿನಲ್ಲಿ ಬಿಎಸ್ಸಿ ಕೊನೆಯ ಸೆಮಿಸ್ಟರಿನಲ್ಲಿರುವ ಕಾವ್ಯ ಕತೆಗಾರ್ತಿ ಸುನಂದಾ ಪ್ರಕಾಶ ಕಡಮೆಯವರ ಮಗಳು. ಪದಗಳೊಟ್ಟಿಗಿನ ಒಡನಾಟ ಅವಳಿಗೆ ಎಳವೆಯಿಂದಲೇ ಇದ್ದಂತಿದೆ. ತಂದೆ ಪ್ರಕಾಶ ಕಡಮೆಯವರೂ ಕೂಡ ಲೇಖಕರು. ಕ್ರೈಸ್ಟ್ ಕಾಲೇಜಿನ ಕನ್ನಡಸಂಘ ನಡೆಸುವ ಕವನಸ್ಪರ್ಧೆಗಳಲ್ಲಿ ೨೦೦೭ರಿಂದ ಈ ತನಕ ಸತತ ಮೂರು ಸಲ ಮೊದಲ ಬಹುಮಾನ ಗಳಿಸಿರುವ ಕೆ. ಪಿ. ಕಾವ್ಯಳ ಆ ಮೂರೂ ಕವಿತೆಗಳು ಇಲ್ಲಿವೆ.
೧. ವಸಂತಕ್ಕೊಂದು ಹುಲಿ
ಹುಲಿ ಅಬ್ಬರಿಸುತ್ತದೆ
ಕಾಡು ಸುಮ್ಮನಾಗುತ್ತದೆ
ಹುಲಿಗೆ ರಾಜ ಗರ್ವ
ಕಾಡಿಗೆ ಮೈತುಂಬ ಹುಲಿಗಳು
ಹುಲಿಗೆ ಬುದ್ಧಿ ಕಮ್ಮಿ
ಕಾಡಿನ ಸಹನೆ ಅಪಾರ
ಪ್ರತಿ ಹುಲಿಯೂ ಕಾಡಿಗೆ
ಒಂದೊಂದು ಕಾರಣಕ್ಕೆ ಇಷ್ಟ
ಅದರ ಪಟ್ಟೆ ಇಷ್ಟ-ಇದರ ಗರ್ಜನೆ ಇಷ್ಟ
ಆ ನೋಟ ಇಷ್ಟ-ಈ ನಡಿಗೆ ಇಷ್ಟ
ಒಮ್ಮೆ ಎಲ್ಲ ಹುಲಿಗಳೂ
ಒಂದಾಗಿ ಕಾಡನ್ನು ಅಳೆಯುವ
ಸಾಧನದ ಹುಡುಕಾಟ
ನಡೆಸಿದವು
ಸಾಕಿನ್ನು ಈ ಹುಲಿಯ ಅಬ್ಬರ
ಸಹನೆ-ನೆರಳ ಈ ಕಣ್ಣು
ಮುಚ್ಚಾಲೆಯಾಟ
ಎಂದು ಕಣ್ಣು ಮುಚ್ಚಿತು ಕಾಡು
ನಿಧಾನ ಎದ್ದು ವಸಂತಕ್ಕೆ
ಮೈಯೊಡ್ಡುವ ಹೊತ್ತಿಗೆ
ತನ್ನೊಳಗೆ ಮತ್ತೊಂದು
ಹುಲಿಯ ಸೇರ್ಪಡೆ.
******
೨. ವೃಕ್ಷದ ಮಕ್ಕಳು
ಬೀದಿಯಲಿ ಹಸಿದ ಬಾಲ್ಯ
ಕಳೆಯುತಿರುವ
ಮಗುವಿಗೆ ಅನ್ನ ನೀಡು
ಹಗಲೇ
ರಾತ್ರಿ ಚುಕ್ಕು ತಟ್ಟಸಿಕೊಳ್ಳದೇ
ನಿದ್ದೆ ಹೋದ ನೆನಪ ಮರೆಸು
ಪಕ್ಕದಲ್ಲಿ ಅಮ್ಮನಿರದ
ರಾತ್ರಿಗಳಿಗೆ ಮೂಡುವ
ಚಂದ್ರನ ಕಾವಲು ಹಾಕು
ಖಾಲಿಯಾಗುತ್ತ ನಡೆವ ದಿನಗಳಲಿ
ಪೂರ್ಣ ಬಾಲ್ಯ ಸಮಾಧಿಯಾಗಿ
ಬರಿಗಾಲಲ್ಲಿ ನಡೆವ ಪುಟ್ಟ
ಹೆಜ್ಜೆ ಗುರುತುಗಳ ಎಣಿಸುತ್ತ
ನಿಂತರೆ: ಅರೆ!
ಮಗು ಈಗ ನಿಂತಲ್ಲೇ ಬೇರು ಬಿಟ್ಟಿದೆ
ವೃಕ್ಷಗಳು ಬೇಕಾಬಿಟ್ಟಿ ನಡೆದಾಡುತ್ತಿವೆ
ಅದರ ರೆಂಬೆ ಕೊಂಬೆ
ಎಲೆ ಹೂ ತುಂಬ ಆ
ಮಗುವಿನದೇ ನೆರಳು
ಹಗಲೇ ನಗು ಬಾಡಿಸದಿರು
ವೃಕ್ಷಗಳನ್ನು ಅದರದರ ಬೇರಿಗೇ
ಉಳಿಸು.
******
೩. ಸರೀ ತಾರೀಖು ಬರೆದುಕೋ
ಈ ಸಂಜೆಗಾಳಿಗೆ
ಎಂಥ ನೋವುಗಳನ್ನೂ
ಕೆದಕಬಲ್ಲ ಕೆಟ್ಟ ಶಕ್ತಿಯಿದೆ
ಸರಿಯಾಗಿ ಬರೆದಿಟ್ಟುಕೋ
ಆ ದಿನದ ವಿಳಾಸವನ್ನು
ನಿನ್ನ ಕುರುತಾದ
ಯಾವ ಪ್ರೇಮ ಪತ್ರಕ್ಕೂ
ಆಸ್ಪದವಿರಲಿಲ್ಲ
ಅರ್ಥಗಳಿರಲಿಲ್ಲ
ಆ ಅರ್ಥಗಳಿಗೊಂದು
ಸಂಬಂಧವನ್ನಾದರೂ ಕಲ್ಪಿಸಿದ್ದರೆ
ನಮ್ಮ ಕಣ್ಣಾಚೆಗಿನ ಲೋಕದಲ್ಲಾದರೂ
ನಾವು ಒಂದಾಗಬಹುದಿತ್ತು
ಇಬ್ಬರಲ್ಲಿ ಒಬ್ಬರಾದರೂ
ಮೌನ ಮುರಿದಿದ್ದರೆ
ಅರ್ಥಗಳು ನಮಗರಿವಿಲ್ಲದೇ
ಸಂಬಂಧಗಳಾಗಿ
ಮಾರ್ಪಡುತ್ತಿದ್ದವು
ನನಗೆ ನಾಲಿಗೆಯಿಲ್ಲ
ನಿನಗೆ ಹೃದಯವಿಲ್ಲ
ಆದ್ದರಿಂದ ಹೋಗು ಮನೆಗೆ
ಸುಮ್ಮನೇ
ಈ ಧ್ಯಾನಕೆ
ತಾರೀಕುಗಳ ಹಂಗಿಲ್ಲ.
-ಕಾವ್ಯ.ಕೆ.ಪಿ