ಸಾವು ಹೇಗಿರುತ್ತದೆಯೋ ಗೊತ್ತಿಲ್ಲ. ಆದರೆ ಸಾವು ಎಂಬ ಸುಳಿಗೆ ಸಿಕ್ಕಿಹಾಕಿಕೊಂಡು ನಂತರ ಬದುಕಿ ಉಳಿಯುವುದು ಬಹಳ ಅಪರೂಪ. ಇಂತಹ ಒಂದು ಸುಳಿಗೆ ನಾನು ಕೂಡ ಒಮ್ಮೆ ಸಿಕ್ಕಿಹಾಕಿಕೊಂಡಿದ್ದೆ. ಹೇಗೆ ಎನ್ನುವಿರಾ?
೨೦೦೭ ರ ಮೇ ತಿಂಗಳಲ್ಲಿ ನಾನು ಮತ್ತು ಇನ್ನೂ ಎಂಟು ಜನ ನಮ್ಮ ಮನೆಯವರು ಹಿಮಾಲಯ ಟ್ರೆಕಿಂಗ್ ಅಂತ ಹೋಗಿದ್ದೆವು. ಹಿಮಾಲಯ ಅಂದರೆ ಉತ್ತರಾಖಂಡದಲ್ಲಿರುವ ಕೇದಾರಕಂಠ ಪರ್ವತ. ಮೊದಲು ದೂರದಿಂದ ಹಿಮವನ್ನು ನೋಡಿದಾಗ ಖುಷಿಯೋ ಖುಷಿ. ಆದರೆ ಇದೇ ಹಿಮ ಮುಂದೆ ಸ್ವಲ್ಪ ತೊಂದರೆಯನ್ನು ಕೊಡುತ್ತದೆ ಅಂತ ನಾನಂತು ಎಂದೂ ಅಂದುಕೊಂಡಿರಲಿಲ್ಲ.
ಟ್ರೆಕಿಂಗ್‌ನಲ್ಲಿ ಸುಮಾರು ೪ ರಿಂದ ೫ ಕಿ.ಮೀ. ವರೆಗೆ ಹಿಮದ ಮೇಲೆ ನಡೆಯಬೇಕೆಂದು ಕೇಳಿದಾಗ ಎಲ್ಲಿಲ್ಲದ ಉತ್ಸಾಹ. ಆದರೆ ೭೦ ಡಿಗ್ರಿ ಇಳಿಜಾರಿನಲ್ಲಿದ್ದ ಪರ್ವತದ ಮೇಲೆ ನಡೆಯಬೇಕು ಎಂದು ನೋಡಿದಾಗ ಮೈಯೆಲ್ಲಾ ನಡುಗತೊಡಗಿತು. ನಮಗಿಂತ ಮುಂಚೆ ಹೋಗಿದ್ದ ಒಂದು ತಂಡದವರು ಯಾವ ಕಷ್ಟವೂ ಬರದೇ ಸುಲಭವಾಗಿ ಹೋಗಿಬಂದರು. ಆದರೂ ಹಿಮದಲ್ಲಿ ನಡೆಯುವಾಗ ಜಾರುವುದು, ಈ ತರಹದ ತಮ್ಮಿಂದಲೇ ಆಗಬಹುದಾದ ತೊಂದರೆಗಳು ಉಂಟಾಗಬಹುದು. ಇದೇ ವಿಶ್ವಾಸದಿಂದ ಇದ್ದಾಗ ನಮಗೂ ಆ ದಿನ ಬಂದೇ ಬಿಟ್ಟಿತು. ಆ ದಿನವಂತೂ ಪ್ರಚಂಡ ಬಿರುಗಾಳಿ. ಹಿಂದಿನ ದಿನದಂದು ಬಿದ್ದಿದ್ದ ಆಲಿಕಲ್ಲಿನ ಮಳೆ ಈ ದಿನವೂ ಶುರುವಾಗಿತ್ತು. ವಿಶೇಷವೆಂದರೆ, ಪರ್ವತ ಬಹಳಷ್ಟು ಎತ್ತರ ಇದ್ದುದ್ದರಿಂದ ಮಳೆ ನೀರಿನ ರೂಪದಲ್ಲಿ ಬರುತ್ತಿರಲಿಲ್ಲ. ಅದೇ ಮಳೆ ಬರೀ ಅಲಿಕಲ್ಲಿನ ರೂಪದಲ್ಲಿ ಬರುತ್ತಿತ್ತು. ಇದರಿಂದ ನಮಗೆಲ್ಲಾ ಭಯ, ಮಾರ್ಗದರ್ಶಕರೇನೋ ಇದ್ದರು, ಆದರೆ ಪ್ರಕೃತಿಯ ನಿಯಮಕ್ಕೆ ವಿರುದ್ಧ ಹೋಗಬಹುದೇ?
ಆಗ ನಮಗೆ ಮೂರು ಜನ ಮಾರ್ಗದರ್ಶಕರಿದ್ದರು. ಇನ್ನೇನು ಹೊರಡಬೇಕು ಎಂದಾಗ ಬಿರುಗಾಳಿ ಬರುವ ಸಂಭವವಿದೆ ಎಂದು ಅರಿತುಕೊಂಡ ಒಬ್ಬ ನಮ್ಮನ್ನು ಬಿಟ್ಟು ಹೋಗಿಬಿಟ್ಟ. ಇನ್ನು ಉಳಿದವರು ಇಬ್ಬರು. ನಮ್ಮ ತಂಡದಲ್ಲಿ ಕೇವಲ ಹನ್ನೊಂದೇ ಜನ. ಸದ್ಯ ನಮ್ಮ ಅದೃಷ್ಟ. ಮೂವರು ಹೆಂಗಸರು. ಹಾಗಾಗಿ ಇಬ್ಬರು ಮಾರ್ಗದರ್ಶಕರು ಇಬ್ಬರು ಹೆಂಗಸರ ಕೈ ಹಿಡಿದುಕೊಂಡು ಹೋಗತೊಡಗಿದರು. ನಮ್ಮನ್ನು ಬೀಳಿಸಬೇಕೆಂದು ಪಣತೊಟ್ಟಿದ್ದ ಬಿರುಗಾಳಿ ಬರುಬರುತ್ತಾ ರಭಸವಾಗತೊಡಗಿತು. ನಾನಂತು ಒಂದು ಕಡೆ ಕಾಲುಜಾರಿ ಬೀಳುವವಳಿದ್ದೆ. ಅದೃಷ್ಟಕ್ಕೆ ಹಿಂದೆಮುಂದೆ ಇದ್ದವರು ಕೈ ಹಿಡಿದುಬಿಟ್ಟರು. ನಂತರ ಹೇಗೋ ನಡೆದುಕೊಂಡು ಬಂದು ಬಿಟ್ಟೆವು. ಆಗಂತೂ ಆನಂದಕ್ಕಿಂತ ಸದ್ಯ ಬದುಕಿದೆವೆಲ್ಲಾ ಅಂತ ಸಮಾಧಾನಗೊಂಡೆವು. ಮತ್ತೆ ಅದರ ಜೊತೆಗೆ ಸ್ನೋಫಾಲ್ ಕೂಡ ಆಗುತ್ತಿತ್ತು. ಆದರೆ ಆ ಖುಶಿಯನ್ನು ಸವಿಯಲು ನಮಗೆ ವಿಪರೀತ ಚಳಿ ಬೇರೆ ಅಡ್ಡ ಬರುತ್ತಿತ್ತು. ನಾವು ಎಷ್ಟು ಒದ್ದೆಯಾಗಿಬಿಟ್ಟಿದೆವು ಅಂದರೆ ಬಟ್ಟೆಯಲ್ಲಾ ಮೈಗೆ ಅಂಟಿಕೊಂಡು, ನಾವು ಹಾಕಿಕೊಂಡಿದ್ದ ಬ್ಯಾಗ್ ಕೂಡ ಭಾರವೆನಿಸತೊಡಗಿತು. ನಾನು ಹಾಕಿಕೊಂಡಿದ್ದ ರೈನ್‌ಕೋಟಿನ ಗುಂಡಿಯನ್ನೂ ತೆಗೆಯಲು ಆಗುತ್ತಿರಲಿಲ್ಲ. ಆ ದಿನವಂತು ನಾನು ಸತ್ತೇ ಹೋಗುತ್ತೇನೆಂದು ಅನಿಸಿಬಿಟ್ಟಿತ್ತು.
ಅಲ್ಲಿ ಎಷ್ಟು ಚಳಿ ಎಂದರೆ ಹಗಲಲ್ಲಿ ಏನೂ ಅನುಭವ ಆಗುತ್ತಿರಲಿಲ್ಲ. ರಾತ್ರಿ ಆಗುತ್ತಿದ್ದಂತೆ ಚಳಿ ವಿಪರೀತ ಆಗುತ್ತಿತ್ತು. ಸುಮಾರು ೫ ಡಿಗ್ರಿ ವರೆಗೆ ಹವಾಮಾನ ಇಳಿಯುತ್ತಿತ್ತು. ನಮಗೆ ಕ್ಯಾಂಪ್‌ನವರು ಗೋಣಿಚೀಲದಂತಹ ರಚನೆಯನ್ನು ಹೊಂದಿದ ದಪ್ಪನಾದ ಹೊದಿಕೆ ಚೀಲ ಕೊಡುತ್ತಿದ್ದರು. ಅದರ ಒಳಗೆ ತೂರಿಕೊಂಡು ನಂತರ ಮೇಲೆ ಒಂದೆರಡು ಕಂಬಳಿಗಳನ್ನು ಹಾಕಿಕೊಂಡರೂ ಫ್ರೀಜರ್‌ನಲ್ಲಿ ಕೂತಹಾಗೆ ಆಗುತ್ತಿತ್ತು. ನಾವು ಇಲ್ಲಿನ ಚಳಿಗೇ ಒದ್ದಾಡುತ್ತೇವೆ. ಇನ್ನೂ ಅಲ್ಲಿನ ಚಳಿ ನೆನಪಿಸಿಕೊಂಡರೆ ಈಗಲೂ ಮೈ ಜುಂ ಎನ್ನುತ್ತದೆ.
ಅಂತೂ ಏಳುದಿನದ ಟ್ರೆಕಿಂಗ್ ಮುಗಿಸಿಕೊಂಡು ಹೊರಲಾರದಷ್ಟು ಭಾರವಾದ ನೆನಪುಗಳನ್ನು ಹೊತ್ತುಕೊಂಡು ಹೋಗಬೇಕಾದ ದಿನ ಬಂತು. ಮಸ್ಸೂರಿ ಎಂಬ ಊರಿನಿಂದ ಸಂಕ್ರಿ ಎಂಬ ಬೇಸ್ ಕ್ಯಾಂಪ್ ನವರೆಗೆ ಬರಲು ನಮ್ಮದಂತು ಜೀವ ಹಾರಿಹೋಗಲು ತುದಿಗಾಲಿನಲ್ಲಿ ನಿಂತಿತ್ತು. ಬೆಟ್ಟಗಳ ಅಂಚಿನಲ್ಲಿ ಮಾಡಲಾಗಿದ್ದ ಒಂದೇ ಬಸ್ಸು ಹೋಗುವಷ್ಟು ರಸ್ತೆ, ಪಕ್ಕದಲ್ಲಿ ಆಳವಾದ ಕಣಿವೆಯಲ್ಲಿ ಭೋರ್ಗರೆಯುತ್ತಿದ್ದ ನದಿ, ಎಲ್ಲಿ ನೋಡಿದರೂ ‘ನಾ ದೊಡ್ಡವ, ನಾ ದೊಡ್ಡವ’ ಎನ್ನುತ್ತಾ ತಲೆ ಎತ್ತಿ ನಿಂತ ದೊಡ್ಡ ಪರ್ವತಗಳು. ನಮಗೆ ಸರಿಯಾಗಿ ಕರೆದುಕೊಂಡು ಬಂದ ಬಸ್ಸಿನ ಚಾಲಕನಿಗಂತೂ ನಿಜಕ್ಕೂ ಥ್ಯಾಂಕ್ಸ್ ಹೇಳಲೇ ಬೇಕು. ಏಕೆಂದರೆ ತಿರುವುಗಳಲ್ಲಿ ಬಸ್ಸು ಎಲ್ಲಿ ಬಿದ್ದು ಹೋಗುವುದೋ ಅಂತ ಭಯದಿಂದಲೇ ಪ್ರಯಾಣ ನಡೆಸಿದೆವು. ಬೆಟ್ಟಗಳಲ್ಲಿ ತಿರುವು ಜಾಸ್ತಿ ಇದ್ದದ್ದರಿಂದ ವಾಂತಿ ಬರುವುದು, ತಲೆಸುತ್ತು ಬರುವುದು ಎಲ್ಲರಿಗೂ ಜಾಸ್ತಿಯಾಗಿತ್ತು. ಅದಕ್ಕೆ ನಾನು ಮೊದಲೆ ಮಾತ್ರೆ ನುಂಗಿ ಹೆಣದಂತೆ ಬಸ್ಸಿನಲ್ಲಿ ಮಲಗಿಬಿಟ್ಟಿದ್ದೆ. ಹೀಗೆ ಮಲಗಿದ್ದಾಗ ಅಚಾನಕ್ ಆಗಿ ಬ್ರೇಕ್ ಹಾಕಿದಾಗ, ನಾನಂತು ಸೀಟಿನಿಂದ ಕೆಳಗೆ ಬಿದ್ದುಬಿಟ್ಟೆ. ಆದರೆ ಪ್ರಯಾಣ ಮಾಡುತ್ತಿದ್ದಾಗ ನಾವು ನೋಡಿದ ಪ್ರಕೃತಿ ಸೌಂದರ್ಯದ ದೃಶ್ಯಗಳು ನಮ್ಮ ಭಯವನ್ನು ಓಡಿಸಿಬಿಟ್ಟವು. ಆಗ ಮಜಾ ಏನಿತ್ತು ಅಂದರೆ ನಾನು ಮುಂಗಾರು ಮಳೆ ಫಿಲ್ಮ್‌ನ ಹಾಡುಗಳನ್ನು ಈ ಬಸ್ಸಿನಲ್ಲಿ ಕಲಿತಿದ್ದು. ಆ ಕ್ಯಾಸೆಟನ್ನು ಎಷ್ಟು ಸಲ ಕೇಳಿದ್ದೇನೆ ಅಂದರೆ ಅದರ ರೀಲ್ ಕೂಡ ಹರಿದು ಹೋಗಬೇಕಿತ್ತು, ಅಷ್ಟು ಕೇಳಿದ್ದೆ.
ಈ ಮೊದಲು ನಾನು ಈ ತರಹದ ಟೂರ್‌ಗಳಿಗೆ ಹೋಗಿರಲಿಲ್ಲ. ಅದೂ ಉತ್ತರಭಾರತದಲ್ಲಿ ಉತ್ತರಾಖಂಡ ರಾಜ್ಯಕ್ಕೆ ಹೋಗಿ ಅಲ್ಲಿನ ಬೆಟ್ಟಗಳಲ್ಲಿ ಟ್ರೆಕಿಂಗ್ ಮಾಡುತ್ತೇನೆಂದು ಯೋಚಿಸಿರಲಿಲ್ಲ. ಯಾವಗಾದರೂ ಟಿ.ವಿಯಲ್ಲಿ ಹಿಮಾಲಯದ ಬಗ್ಗೆ ಬಂದರೆ ನಾನಂತೂ ಆ ಕ್ಷಣವೇ ಎಲ್ಲಾ ಫ್ಲಾಶ್‌ಬ್ಯಾಕ್ ಮಾಡಿಕೊಳ್ಳುತ್ತೇನೆ. ಟ್ರೆಕಿಂಗ್ ಆದಮೇಲೆ ನಾನು ಇನ್ನು ಮುಂದೆ ಅಲ್ಲಿಗೆ ಹೋಗುವುದಿಲ್ಲ ಅಂತ ಯೋಚಿಸಿದ್ದೆ. ಆದರೆ ಈಗ ನಾನು ಒಮ್ಮೆಯಾದರೂ ಮತ್ತೊಮ್ಮೆ ಅಲ್ಲಿಗೆ ಹೋಗೆ ಇರುತ್ತೇನೆಂದು ನಿಶ್ಚಯಿಸಿದ್ದೇನೆ. ನಿಜಕ್ಕೂ ಆ ತಾಣ ಸ್ವರ್ಗವೇ ಸರಿ. ಸಾವಿನ ನಂತರ ಸ್ವರ್ಗಕ್ಕೆ ಹೋಗುತ್ತೇವೋ ಇಲ್ಲವೋ ಆದರೆ ಬದುಕಿರುವಾಗಲೆ ಒಮ್ಮೆ ಅಲ್ಲಿಗೆ ಹೋಗಲೇಬೇಕು.
ಸೀಮಾ ಸಮತಲ
ಸೀಮಾ ಸಮತಲ ಧಾರವಾಡದ ವಿದ್ಯಾಗಿರಿಯ ಜೆ ಎಸ್ ಎಸ್ ಕಾಲೇಜಿನಲ್ಲಿ ಪ್ರಥಮ ಬಿ.ಎ. ಓದುತ್ತಿದ್ದಾರೆ. ಇತಿಹಾಸ, ಇಂಗ್ಲಿಷ್, ಐಚ್ಛಿಕ ಕನ್ನಡ ಅವರ ಆಯ್ಕೆಯ ವಿಷಯಗಳು. ಬರವಣಿಗೆ ಅವರ ಆಸಕ್ತಿಯ ಕ್ಷೇತ್ರ.