ಸಿಡ್ನಿಯ ಬ್ಯಾಂಕೊಂದರಲ್ಲಿ ಕಂಪ್ಯೂಟರ್ ಮೇಯಿಸುವ ಹೊಸಗಾಲದ ಗೊಲ್ಲನಾಗಿದ್ದುಕೊಂಡು, ಬಿಡುವಿನಲ್ಲಿ ಓದಿಕೊಂಡು, ಬರಕೊಂಡು, ಸಿನೆಮಾ ನೋಡಿಕೊಂಡು, ಹಾಡು ಕೇಳಿಕೊಂಡು, ನಾಟಕ ಮಾಡಿಕೊಂಡು ಇರುವ ನನ್ನಂತವನಿಗೆ ಜಗತ್ತಿನ ಆಗುಹೋಗನ್ನು ಸಂಬಂಧವಿಲ್ಲದ ಹೊರಗಿನವನಂತೆ ನೋಡುವುದು ಕಷ್ಟ. ಇರಾನಿನ ಚುನಾವಣೆಯ ನಂತರದ ಗಲಭೆ, ಚೈನಾದ ಊಘರ್ ಪ್ರಾಂತ್ಯದಲ್ಲಿ ನೂರಾರು ಜನರ ಸಾವು ಎಲ್ಲಾ ತಲೆ ಕೆಡಿಸುತ್ತವೆ. ಇರಾಕಿನ ಹಾಗು ಆಫ್ಗಾನಿಸ್ತಾನದ ನಿತ್ಯಸಾವಿಗೆ ಈಗ ಯಾರೂ ಅಳುತ್ತಿಲ್ಲ. ಹಾಗೆಂದು ಅದನ್ನೆಲ್ಲಾ ನಾನು ಒಳಗಿನವನಾಗಿ ನೋಡುತ್ತೇನೆ ಎಂದು ಹೇಳಿದರೆ ಅಪ್ರಮಾಣಿಕತೆ ಆಗುತ್ತದೆ. ಆ ವಿದ್ಯಮಾನಗಳಿಗೆ ನಾನು ಒಳಗಿನವನಾಗುವುದಕ್ಕಿಂತ, ಆ ವಿದ್ಯಮಾನಗಳು ನನ್ನೊಳಗೆ ಏನು ಮಾಡುತ್ತವೆ ಎಂದು ನೋಡಿಕೊಳ್ಳುವುದು ಹೆಚ್ಚು ಪ್ರಾಮಾಣಿಕವಾಗುತ್ತದೆ.
"ವಾರ್ ಆನ್ ಟೆರರ್" ಎಂದು ಘೋಷಿಸಿದಾಗಲೇ ಹಲವರಿಗೆ ಆ ಮಾತಿನ ಹಿಂದೆ ಅಡಗಿರುವ ಕುಟಿಲತೆ ಎಚ್ಚರ ಮೂಡಿಸಿತ್ತು. ಟೆರರ್ ಪರವಾಗಿ ಸಜ್ಜನರಾರೂ ಮಾತಾಡಲಾರರು. ಕಳ್ಳತನದ ವಿರುದ್ಧ ಸಮರ ಅಂದಾಗ ಯಾರೂ ಅದನ್ನು ವಿರೋಧಿಸದೇ ಇರುವಂತೆ ಇದು ಕೂಡ. ಆದರೆ ಯಾವುದು ಕಳ್ಳತನ, ಯಾವುದು ಟೆರರಿಸಂ ಎಂದು ಸ್ಪಷ್ಟೀಕರಿಸದೆ ಕೊಟ್ಟ ಘೋಷಣೆಗಳು ಗೆದ್ದಲು ಹಿಡಿದ ದಂಡವಾಗಿರುತ್ತದೆ. ಆದರೆ ಆ ಮಾತಿನ ಅರ್ಥವೇ ಬೇರೆಯಾಗಿರುವುದರಿಂದ, ತಾವು ಗುರುತಿಸಿದ್ದೇ ‘ಟೆರರಿಸಂ’ ಎಂದು ನಾವು ಒಪ್ಪಿಕೊಳ್ಳಬೇಕಾದಾಗ ಆ ಮಾತಿನ ಹಿಂದಿನ ಟೆರರಿಸಂ ನಿಮಗೆ ಸ್ಪಷ್ಟವಾಗುತ್ತದೆ. ಯಾವುದು ನಿಜವಾದ ಟೆರರಿಸಂ ಎಂದು ನೀವೇ ಹೊಸದಾಗಿ ಕಂಡುಕೊಳ್ಳಬೇಕಾಗುತ್ತದೆ.
ಯಾಕೆ ಹೇಳಿದೆನೆಂದರೆ ಇಲ್ಲೊಂದು ಸುದ್ದಿ ವಿಮರ್ಶೆಯಲ್ಲಿ ಚೈನಾದ ಹಲವು ಪ್ರಾಂತ್ಯಗಳು "ಇಲ್ಲಿಯವರೆಗೂ ಹಾರ್ಮೋನಿಯಸ್" ಆಗಿದ್ದವು ಎಂದು ಉಲ್ಲೇಖಿಸಲಾಗಿತ್ತು. ಇದೆಂತಾ ವಿಪರ್ಯಾಸ ಎಂದು ತುಂಬಾ ಹೊತ್ತು ಯೋಚಿಸುವಂತೆ ಮಾಡಿತು. ಒಳಗಿನ ಗದ್ದಲ ಗೊತ್ತಾಗದಿದ್ದರೆ, ಕೂಗಾಟದ ಬಾಯಿಗೆ ಬಿರಟೆ ಬಡಿದರೆ ಕಾಣುವುದು "ಹಾರ್ಮನಿ"ಯೇ. ಈ "ಹಾರ್ಮನಿ"ಯಾಗಲಿ, "ಶಾಂತಿ"ಯಾಗಲೀ ಇದೆ ಎನ್ನುವುದಕ್ಕಿಂತ ಹೇಗೆ ಇದೆ ಎಂದು ಕೇಳುವುದು ಮುಖ್ಯವಾದ ಪ್ರಶ್ನೆ. ಏಕೆಂದರೆ, ಸದ್ದಾಂನ ಅಡಿಯಲ್ಲಿ, ಇರಾನಿನ ವ್ಯವಸ್ಥೆಯಲ್ಲಿ, ಚೈನಾದ ಉಕ್ಕಿನ ಹಿಡಿತದಲ್ಲಿ, ಅಷ್ಟೇ ಯಾಕೆ ಹಿಟ್ಲರಿನ ಜರ್ಮನಿಯಲ್ಲೂ ಶಾಂತತೆ ಇತ್ತು. ಆದರೆ ಮುಖ್ಯವಾಗಿ ಆ ಶಾಂತತೆಯ ಇನ್ನೊಂದು ಮಗ್ಗುಲು ಕಾಣೆಯಾಗಿತ್ತು. ಸ್ವಾತಂತ್ರ್ಯವಿಲ್ಲದ ಶಾಂತಿ ಎಂಬುದು ಮನುಷ್ಯನ ಮೂಲಗುಣಕ್ಕೆ ಪಥ್ಯವಲ್ಲ. ಚರಿತ್ರೆ ಇದನ್ನು ನಮಗೆ ಮತ್ತೆ ಮತ್ತೆ ಹೇಳಿಕೊಟ್ಟಿದೆ. ಸ್ವಾತಂತ್ರ್ಯ ಹಾಗು ಸಮಾನತೆ ಇದ್ದಾಗಲಷ್ಟೇ ನಿಜವಾದ ಶಾಂತಿ ಇರಲು ಸಾಧ್ಯ. ಅಲ್ಲದೆ ಶಾಂತಿ ಇದ್ದ ಮಾತ್ರಕ್ಕೆ ಸಮಾನತೆ, ಸ್ವಾತಂತ್ರ್ಯ ಇದೆ ಎಂದು ಹೇಳಲಾಗದು. ಹಾಗಾಗಿಯೇ ಯಾವುದೇ ಪೊಳ್ಳು ಶಾಂತಿಯನ್ನು ಧಿಕ್ಕರಿಸುವ ಹೋರಾಟದ ಅಗತ್ಯವಿರುತ್ತದೆ.
ಚೈನಾದ ಊಘರ್ ಪ್ರಾಂತ್ಯದ ಊಘರ್ ಜನರ ಗಲಾಟೆ ನೆನ್ನೆ ಮೊನ್ನೆಯದಲ್ಲ. ಅಥವಾ ಇದ್ದಕ್ಕಿದ್ದಂತೆ ಭುಗಿಲೆದ್ದುದಲ್ಲ. ಆದರೂ ಜಾಗತಿಕವಾಗಿ ಈ ಹಿಂದೆ ಅವರು ಸುದ್ದಿ ಮಾಡಿಲ್ಲ. ಚೈನಾದ ಮಾಧ್ಯಮ ಹಾಗು ಇಂಟರ್ನೆಟ್ ಮೇಲಿನ ಕಠೋರ ನೀತಿಯ ನಡುವೆಯೂ, ಈ ಸಲ ಅಲ್ಲಿನ ಸುದ್ದಿ ಹೊರಗೆ ಬಂದಿದೆ. ಚೈನಾ ಸರ್ಕಾರವೇ ೧೫೦ ಜನ ಸತ್ತಿದ್ದಾರೆ ಎಂದು ಹೇಳಿದೆ. ಆದರೆ ೮೦೦ಕ್ಕೂ ಹೆಚ್ಚಿನ ಸಾವಾಗಿದೆ, ಹತ್ತಾರು ಸಾವಿರ ಜನ ಸೆರೆಗೆ ಸೇರಿದ್ದಾರೆ ಎಂದು ಬೇರೆಬೇರೆ ಮೂಲಗಳು ಹೇಳುತ್ತಿವೆ.
ಊಘರ್ ಜನರ ಹೋರಾಟದ ಸೆಕ್ಯುಲರ್ ಮುಂದಾಳು ಒಬ್ಬ ಹೆಂಗಸು. ರೆಬೀಯ ಕದೀರ್ ಬಡತನದಲ್ಲಿ ಹುಟ್ಟಿಯೂ ಮಿಲಿಯಗಟ್ಟಲೆ ವ್ಯವಹಾರ ನಡೆಸುತ್ತಿದ್ದ ಬಂಡವಾಳಗಿತ್ತಿ. ರೆಬೀಯಾಳನ್ನು ಚೈನಾ ಸರ್ಕಾರ ಊಘರ್ ಜನಕ್ಕೆ ತಾನು ಕೊಟ್ಟಿರುವ ಅವಕಾಶಗಳ ದ್ಯೋತಕವೆಂದು ೧೯೯೮ರವರೆಗೂ ಲೋಕದ ಎದುರು ಮೆರೆಸುತ್ತಿತ್ತು. ಆದರೆ ೧೯೯೭ರ ಗುಜ್ಲಾ ಹತ್ಯಾಕಾಂಡದ ನಂತರ, ಈಕೆ ತನ್ನ ಜನರ ಪರವಾಗಿ ಸಮಾನತೆ, ಸ್ವಾತಂತ್ಯ್ರದ ದನಿ ಎತ್ತಿದ ಕೂಡಲೆ ಸೆರೆಮನೆಗೆ ತಳ್ಳಿತು. ಆರು ವರ್ಷಗಳ ಕಾಲ ಸೆರೆಯಲ್ಲಿದ್ದು ಹಿಂಸೆ ಅನುಭವಿಸಿ ಹೊರಗೆ ಬಂದೊಡನೆ ದೇಶದಿಂದ ಹೊರಹಾಕಿತು. ಈಗ ಅಮೇರಿಕಾದಲ್ಲಿದ್ದು ತನ್ನ ಜನರಿಗಾಗಿ ಕೆಲಸ ಮುಂದುವರೆಸಿದ್ದಾಳೆ. ಹೋದ ವರ್ಷ ಸಿಡ್ನಿಗೆ ಬಂದಿದ್ದಾಕೆ, ಚೈನಾದ ದಬ್ಬಾಳಿಕೆಯಡಿ ಹತ್ತಾರು ಸಾವಿರ ಮಂದಿ ಸತ್ತಿರುವ ಬಗ್ಗೆ ಲೋಕವನ್ನು ಎಚ್ಚರಿಸಲು ಪ್ರಯತ್ನಿಸುತ್ತಿದ್ದಳು. ಆದರೆ ಕೇಳುವವರೇ ಇರಲಿಲ್ಲ. "ಸಾವಿರ ಅಮ್ಮಂದಿರ ಚಳವಳಿ" ಹುಟ್ಟುಹಾಕಿ ಮಹಿಳೆಯರೂ ವ್ಯವಹಾರ ನಡೆಸುವಂತೆ ಹುರಿದುಂಬಿಸಿದಳು. ಈಗ ರೆಬೀಯಳ ಇಬ್ಬರು ಮಕ್ಕಳು ಸೆರೆಯಲ್ಲಿದ್ದಾರೆ. ಹನ್ನೊಂದು ಮಕ್ಕಳ ತಾಯಾಗಿರುವ ಈಕೆ "ನಾನು ಎಷ್ಟು ಬೇಕಾದರೂ ಹಿಂಸೆ ಸಹಿಸುತ್ತೇನೆ. ಆದರೆ ನನ್ನ ಮಕ್ಕಳು ಹಿಂಸೆ ಸಹಿಸುವುದನ್ನು ನೋಡಲಾರೆ. ಅದು ಎಂತಹ ಅಮ್ಮನ ಕೈಯಲ್ಲೂ ಆಗದ ಮಾತು" ಎಂದು ಕಂಬನಿ ಮಿಡಿದಿದ್ದಳು.
ಒಲಂಪಿಕ್ಸಿನ ಸಮಯದಲ್ಲಿ ತಮ್ಮತ್ತ ಜಗತ್ತಿನ ಗಮನ ಸೆಳೆಯಲು ಊಘರ್ ಜನರು ಪ್ರಯತ್ನಪಟ್ಟಿದ್ದು ನಿಮಗೆ ನೆನಪಿರಬಹುದು. ಈಗ ಇರಾನಿನ ವಿದ್ಯಮಾನಗಳು ಅವರನ್ನು ಪ್ರಭಾವಿಸಿರಬಹುದು. ಆದರೆ, ಆಗಲೂ ಈಗಲೂ ಇವರ ಚಳವಳಿಗೆ ಹೊರಗಿರುವವರ ಕುಮ್ಮಕ್ಕಿದೆ ಎಂದು ಚೈನಾ ಹೇಳುತ್ತಿರುವುದು ರೆಬೀಯಳನ್ನು ಉದ್ದೇಶಿಸಿಯೇ. ದಲಾಯಿಲಾಮನಿಗಿಂತ ನೇರವಾಗಿ, ಶಾಂತವಾಗಿ ಮಾತಾಡಬಲ್ಲ ಈಕೆಯ ಮಾತು ಹಾಗು ನುಡಿಗಳು ನಿಜವಾದ ಹೋರಾಟಗಾರನ ನುಡಿಗಳು. ಟಿಬೆಟ್‌ನ ಹೋರಾಟದ ಕತೆ ಲೋಕಪ್ರಿಯವಾದಷ್ಟು ಊಘರ್ ಹೋರಾಟ ಏಕೆ ಸುದ್ದಿ ಮಾಡಿಲ್ಲ? ಭೌಗೋಳಿಕ ಕಾರಣ ಅರ್ಧ ಉತ್ತರ ಅಷ್ಟೆ. ಪಾಶ್ಚಿಮಾತ್ಯರ ಬೌದ್ಧಧರ್ಮದ ಫ್ಯಾಷನ್ ಧರ್ಮಗುರು ದಲಾಯಿಲಾಮನಿಗೆ ಎಷ್ಟು ಸಹಾಯ ಮಾಡಿದೆ? ಊಘರ್ ಜನರು ಇಸ್ಲಾಂ ಅನುಯಾಯಿಗಳು. ಆ ಸಂಗತಿ ಅವರಿಗೆ ಸಹಾಯ ಮಾಡುವುದಕ್ಕಿಂತ ತೊಂದರೆಯನ್ನೇ ಮಾಡಿದೆಯೆ? ಊಘರ್‌ರು ಮುಸ್ಲಿಮ್ ಜಗತ್ತಿನಲ್ಲೇ ಬಹಳ ಭಿನ್ನವಾದ ಚರಿತ್ರೆ, ಸಂಪ್ರದಾಯದ ಕಸ್ಟೋಡಿಯನ್ನರು. ತಮ್ಮದೇ ಭಾಷೆ, ಸಾಹಿತ್ಯ ಸಂಸ್ಕೃತಿಯನ್ನು ಹೊಂದಿದವರು. ಮಧ್ಯ ಏಷ್ಯಾ ಹಾಗು ಚೈನಾಕ್ಕೆ ಸೇತುವೆಯಾಗಿದ್ದವರು. ಅಂತಹ ಜನಾಂಗದ ಕುರುಹೇ ಈಗ ಅಳಿಸಿ ಹೋಗಬಹುದಾದ ಕಾಲ ಬಂದಿದೆ.
ಊಘರ್ ಜನರ ನೋವು, ಸಂಕಟಕ್ಕೆ ಲೋಕ ಈಗಷ್ಟೆ ಕಣ್ಣುಬಿಡುತ್ತಿದೆ. ಅವರ ನೆಲದಲ್ಲೇ ಅವರನ್ನೀಗ ಟೆರರಿಸ್ಟರೆಂದು ಚೈನಾ ಕರೆಯುತ್ತಿದೆ. ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಲು ನಮ್ಮ ಕಿವಿಯನ್ನು ಹದಮಾಡಲಾಗಿದೆ. ಚೈನಾದ ಧೂರ್ತ ನಡವಳಿಕೆಯಡಿ ಅವರ ಆಶೆಗಳೆಲ್ಲ ಮತ್ತೆ ಮುಚ್ಚಿಹೋಗುವುದು ನಮ್ಮೆಲ್ಲರ ಸೋಲನ್ನು ತೋರಿಸುತ್ತದೆ. ಬರ್ಮಾದ ವಿರುದ್ಧ ಪರಿಣಾಮಕಾರಿಯಾದ ಯಾವುದೇ ನಿಲುವು ತೆಕ್ಕೊಳದೆ ಸುಮ್ಮನಿರುವ ಜಗತ್ತಿನ "ಮುಂದಾಳು"ಗಳು ಈಗ ಚೈನಾದ ಬಗ್ಗೆ ಏನು ಹೇಳಿಯಾರು ಎಂಬ ಕುತೂಹಲ ಕೂಡ ಉಳಿದಿಲ್ಲ. ಅದು ನಿಜವಾಗಿಯೂ ವಿಷಾದದ ಸಂಗತಿ.
[ಚಿತ್ರಗಳು-ಸಂಗ್ರಹದಿಂದ]