ಇವಳು ನನ್ನ ಅಕ್ಕರೆಯ ಗೆಳತಿ. ಹೆಸರು ಲಾರಾ ಇಂಗಲ್ಸ್.
ನನ್ನ ಬಳಿಗೆ ಲಾರಾ ಬಂದು ಸುಮಾರು ಏಳು ವರ್ಷಗಳೇ ಆಗಿವೆ. ನಾನು ಏಳನೆಯ ಕ್ಲಾಸ್ ಮುಗಿಸಿದ ಖುಷಿಗೆ ನನಗೆ ಉಡುಗೊರೆಯ ನೆಪದಲ್ಲಿ ಮನೆಯಲ್ಲಿ ಕೊಡಿಸಿದ ಪುಸ್ತಕದ ರೂಪದಲ್ಲಿ ನನ್ನ ಮನೆಗೆ ಬಂದವಳು. ಆಪ್ತವಾದ ಹೊಸದೊಂದು ಲೋಕವನ್ನೇ ತಂದವಳು. ಹೀಗೆ ಬಂದ ಇವಳು ಇನ್ನೆಂದೂ ತಿರುಗಿ ಹೋಗದಂತೆ ನನ್ನಲ್ಲೇ ಉಳಿದು ಬಿಟ್ಟವಳು. ಇವಳು ಹೇಳುವ ಬಾಲ್ಯ, ಇವಳು ತೋರಿಸುವ ಕಾಡು, ಇವುಗಳೊಳಗಿನ ಪ್ರಾಣಿಗಳು, ಇಲ್ಲಿನ ಬೇಟೆ, ಮಂಜಿನ ಚಳಿಗಾಲ, ಇವಳು ಬದುಕಿದ ಮನೆ ಎಲ್ಲದರಲ್ಲೂ ನನಗೆ ಅಚ್ಚರಿಯ ಲೋಕವನ್ನೇ ಕೊಟ್ಟವಳು. ಅಂತೆಯೇ ಇವಳ ಬಗ್ಗೆ ಹೇಳದೇ ಸುಮ್ಮನಿರಲೂ ಬಿಡದವಳು.
ಇವಳ ಮೊದಲ ಹೆಸರು ಲಾರಾ ಎಲಿಸಬೆತ್ ಇಂಗಲ್. ಅಮೆರಿಕಾದ ವಿಸ್ಕಾನ್‌ಸಿನ್‌ನ ದೊಡ್ಡ ಕಾಡಿನ ಪುಟ್ಟ ಮರದ ದಿಮ್ಮಿಯ ಮನೆಯಲ್ಲಿ ತನ್ನ ಪಾ(ಅಪ್ಪ) ,ಮಾ(ಅಮ್ಮ), ಅಕ್ಕ ಮೇರಿ ಮತ್ತು ತಂಗಿ ಕ್ಯಾರಿಯೊಂದಿಗೆ ವಾಸವಾಗಿದ್ದಳು. ಆ ಬೆಚ್ಚಗಿನ ಮನೆಯಲ್ಲಿ ಚಳಿಗಾಲಕ್ಕೆಂದು ತರಕಾರಿ, ಮಾಂಸಗಳನ್ನು ಕೂಡಿಡುತ್ತಿದ್ದ ಮಹಡಿಯಲ್ಲಿ ಲಾರಾ ಮೇರಿ ಜೊತೆಗೂಡಿ ತನ್ನ ಗೊಂಬೆ ಚಾರ್ಲೆಟ್ ಜೊತೆ ಆಟವಾಡುತ್ತಿದ್ದಳು. ಪಾ ಗೆ ಕರಡಿ ಮಾಂಸವನ್ನು ಶೇಖರಿಸಲು, ಬೇಟೆಯಾಡಲು ಬಂದೂಕಿಗೆ ಮದ್ದು ತುಂಬಿಸಲು, ಅದೇ ರೀತಿ ಮಾ ಗೆ ಮೊಸರು ಕಡೆಯುವಂಥ ಮನೆಗೆಲಸದಲ್ಲಿ ನೆರವಾಗುತ್ತಿದ್ದಳು. ಪ್ರತಿದಿನ ರಾತ್ರಿ ಪಾ ಹಾಡಿನ ಜೊತೆ ಪಿಟೀಲು ನುಡಿಸುವುದನ್ನು ಕೇಳಿ ಮಲಗುವುದು ಲಾರಾಳ ಅಭ್ಯಾಸವಾಗಿತ್ತು. ಲಾರಾಳಿಗೆ ಪಾ ಹೇಳುವ ಕಥೆಗಳೆಂದರೆ ತುಂಬಾ ಇಷ್ಟ. ಅವಳ ಮಾ ಅವಳಿಗೆ ಮನೆಯಲ್ಲಿಯೇ ಪಾಠ ಹೇಳಿಕೊಡುತ್ತಿದ್ದಳು. ಅವಳಿಗೆ ಭಾನುವಾರಗಳು ಬಂತೆಂದರೆ ತುಂಬಾ ಅಂದರೆ, ಅವುಗಳನ್ನು ದ್ವೇಷಿಸುವಷ್ಟು ಬೇಸರವಾಗುತ್ತಿತ್ತು. ಏಕೆಂದರೆ ಆ ದಿನವೆಲ್ಲಾ ಮಾತಿಲ್ಲದೆ, ಕಥೆಯಿಲ್ಲದೆ, ಕೊನೆಯ ಪಕ್ಷ ಹಾಡುಗಳೂ ಇಲ್ಲದೆ ಬರೀ ಬೈಬಲ್ಲಿನ ಚಿತ್ರಗಳನ್ನು ನೋಡಿಕೊಂಡು ಸುಮ್ಮನಿರಬೇಕಾಗುತ್ತಿತ್ತು. ಲಾರಾಳ ತಾತನ ಮನೆಯು ಇವರು ಇದ್ದ ಕಾಡಿನ ಇನ್ನೊಂದು ತುದಿಯಲ್ಲಿ ಇತ್ತು. ಅಲ್ಲಿ ಅಜ್ಜಿ, ತಾತರ ಜೊತೆಗೆ ಅತ್ತೆಯರು, ಚಿಕ್ಕಪ್ಪ ಇದ್ದರು. ಲಾರಾಳ ಪಾ, ಮಾ, ಆಗಾಗ ತಾತನಿಗೆ ಸಕ್ಕರೆ ಮಂಜು ತಯಾರಿಸಲು ಸಹಾಯಕ್ಕೆ ಹೋಗುತ್ತಿದ್ದರು. ಹಾಗೆ ಹೋದಾಗ ತಾತನ ಮನೆಯಲ್ಲಿ ನೃತ್ಯ ನಡೆಯುತ್ತಿತ್ತು. ಆಗ ಲಾರಾ ತನ್ನ ಚಿಕ್ಕಪ್ಪನೊಂದಿಗೆ ನರ್ತಿಸಿದ್ದಳು. ಹಾಗಾಗಿ ಅವಳಿಗೆ ಚಿಕ್ಕಪ್ಪನೆಂದರೆ ತುಂಬಾ ಇಷ್ಟವಾಗುತ್ತಿತ್ತು. ಅದೇ ರೀತಿ ಚಿಕ್ಕಪ್ಪನ ಮಕ್ಕಳಾದ ಏಲಾ, ಆಲಿಸ್, ಪೀಟರ್ ರೊಂದಿಗೆ ಆಟವಾಡುತ್ತಿದ್ದಳು. ಅವರೆಲ್ಲಾ ಕೂಡಿ ಮಂಜಿನಲ್ಲಿ ತಮ್ಮ ತಮ್ಮ ಚಿತ್ರ ಮಾಡಿಕೊಂಡು ಖುಷಿ ಪಡುತ್ತಿದ್ದರು. ಲಾರಾಳಿಗೆ ಕ್ರಿಸ್ ಮಸ್ ಕೂಡಾ ತುಂಬಾ ಇಷ್ಟವಾಗುತ್ತಿತ್ತು. ಏಕೆಂದರೆ ಆ ದಿನ ರಾತ್ರಿ ಅವಳು ಮಲಗಿರುವಾಗ ಸಂತಕ್ಲೋಸ್ ಅವಳಿಗೆ ಏನಾದರೊಂದು ಬಹುಮಾನವನ್ನು ಇಟ್ಟು ಹೋಗುತ್ತಿದ್ದ.
ಲಾರಾಳಿಗೆ ಜಾಕ್ ಎಂಬ ಪ್ರೀತಿಯ ನಾಯಿಯೊಂದಿತ್ತು. ಅದಕ್ಕೆ ಈ ಮನೆಯವರನ್ನು ಕಂಡರೆ ಎಲ್ಲಿಲ್ಲದ ಮಮಕಾರ. ಅದು ಕೊಟ್ಟಿಗೆಯಲ್ಲಿರುತ್ತಿದ್ದ ಹಸು, ಹಂದಿಗಳನ್ನೆಲ್ಲಾ ತೋಳ, ಕರಡಿಗಳಿಂದ ಕಾಪಾಡುತ್ತಿತ್ತು. ಪಾ ತೋಟದಲ್ಲಿ ಬೆಳಸಿದ ತರಕಾರಿಗಳನ್ನು ತಿನ್ನಲು ಬರುತ್ತಿದ್ದ ಕಾಡು ಪ್ರಾಣಿಗಳನ್ನು ಹೆದರಿಸಿ ಓಡಿಸುತ್ತಿತ್ತು. ಲಾರಾಳದು ಕಾಡಿನಲ್ಲಿ ಏಕಾಂಗಿ ಮನೆಯಾಗಿತ್ತು. ಸುಮಾರು ಮೈಲಿಗಳವರೆಗೆ ಕಾಡನ್ನು ಬಿಟ್ಟರೆ ಮತ್ತೇನೂ ಇರಲಿಲ್ಲ.
ದಿನ ಕಳೆದಂತೆ ಅಲ್ಲಿ ಪಾ ನ ಬಂದೂಕಿನ ಸದ್ದಲ್ಲದೆ ಯಾರ್‍ಯಾರದೋ ಸದ್ದು ಕೇಳಲು ಶುರುವಾಯಿತು. ಅವಳ ಮನೆಯ ಮುಂದೆ ಗಾಡಿಯ ಜಾಡೊಂದು ಆಯಿತು. ಈ ಎಲ್ಲಾ ಗಜಿ ಬಿಜಿ ಲಾರಾಳ ಪಾ ಗೆ ಬೇಡವಾಗಿತ್ತು. ಅಲ್ಲದೆ ಜನ ಜಾಸ್ತಿಯಾದಷ್ಟೂ ಬೇಟೆ ಕಡಿಮೆ ಆಗುತ್ತದೆ ಎಂಬ ಕಾರಣದಿಂದ ಅಲ್ಲಿಂದ ಬೇರೊಂದು ಪ್ರದೇಶಕ್ಕೆ ಹೋಗಬೇಕೆಂದು ನಿರ್ಧರಿಸುತ್ತಾನೆ. ತೋಟ, ಹಸುಗಳನ್ನೆಲ್ಲಾ ಮಾರಿ, ತನ್ನ ಅಪ್ಪ ಅವ್ವಂದಿರುಗಳಿಗೆಲ್ಲಾ ವಿದಾಯ ಹೇಳಿ, ಕ್ಯಾನ್ವಾಸ್ ಬಟ್ಟೆ ಕಟ್ಟಿದ ತನ್ನ ಗಾಡಿಯಲ್ಲಿ ಮನೆಯ ಸಾಮಾನುಗಳನ್ನೆಲ್ಲಾ ತುಂಬಿಕೊಂಡು ಇಂಡಿಯನ್ ಪ್ರದೇಶಕ್ಕೆ ಹೊರಡುತ್ತಾನೆ. ಹಾಗೆ ಹೊರಟಾಗ ಲಾರಾ ತನ್ನ ಕರಿ ಸೂರ್ಸಾ ಬೆಕ್ಕನ್ನು ಆ ಕಾಡಿನ ಮನೆಯಲ್ಲಿಯೇ ಬಿಟ್ಟು ಹೋಗುತ್ತಾಳೆ.
ಪೆರ್ಪಿ ಪಟ್ಟಣ ದಾಟಿ ಬಹುದೂರ ಸಾಗಿ ಇಂಡಿಯನ್ ಪ್ರದೇಶದಲ್ಲಿ ಮೂರು ವರ್ಷಗಳನ್ನು ಕಳೆಯುವುದರೊಳಗೆ ಅಲ್ಲಿ ಅಮೆರಿಕಾ ಸರ್ಕಾರ ಮತ್ತು ಇಂಡಿಯನ್ನರ ನಡುವಿನ ಕಾಳಗಕ್ಕೆ ಬೇಸತ್ತು ಅವರು ಅಲ್ಲಿಂದಲೂ ಜಾಗ ಖಾಲಿ ಮಾಡ ಬೇಕಾಗುತ್ತದೆ. ಮುಂದೆ ಅವರು ಪ್ಲಮ್ ನದಿಯ ತೀರಕ್ಕೆ ವಲಸೆ ಹೋಗಿ, ಅಲ್ಲಿ ಗೋಧಿ ಬೆಳೆಯತೊಡಗುತ್ತಾರೆ. ಅಲ್ಲಿ ಅವಳು ತನ್ನ ಅಕ್ಕ ಮೇರಿಯೊಂದಿಗೆ ಸ್ಕೂಲಿಗೆ ಸೇರಿಕೊಳ್ಳುತ್ತಾಳೆ. ಆದರೆ ಮಿಡತೆಯ ಹಾವಳಿಯಿಂದಾಗಿ ಗೋಧಿಯ ಹೊಲ ಪೂರಾ ಹಾಳಾಗಿಬಿಡುತ್ತದೆ. ಜೊತೆಗೆ ಎಲ್ಲರಿಗೂ ಖಾಯಿಲೆಯಾಗಿ ಬಿಡುತ್ತದೆ. ಜ್ವರದ ತಾಪದಿಂದಾಗಿ ಲಾರಾಳ ಅಕ್ಕ ಮೇರಿಯ ಕಣ್ಣುಗಳೇ ಹೋಗಿಬಿಡುತ್ತವೆ. ಲಾರಾಳ ಪ್ರೀತಿಯ ನಾಯಿ ಜಾಕ್ ತೀರಿ ಹೋಗುತ್ತದೆ. ಅಲ್ಲಿಂದ ಅವರು ಒಂದಷ್ಟು ದಿನ ಸಿಲ್ವರ್ ಲೇಕ್ ನಲ್ಲಿದ್ದು, ನಂತರ ಡಿಸ್ಮೆಟ್ ಎಂಬ ಹೊಸ ಪಟ್ಟಣದಲ್ಲಿ ನೆಲಸುತ್ತಾರೆ. ಅಲ್ಲಿ ಅವರು ಭೀಕರ ಚಳಿಗಾಲವನ್ನು ಎದುರಿಸುತ್ತಾರೆ.
ಲಾರಾಳಿಗಿನ್ನೂ ಹದಿನಾರೇ ತುಂಬಿರುವುದಿಲ್ಲ. ಆಗಲೇ ಅವಳು ತನ್ನ ಮನೆಯಿಂದ ಹದಿನೈದು ಮೈಲಿ ದೂರದಲ್ಲಿದ್ದ ಬ್ರೂಸ್ಟರ್ ಎಂಬ ಶಾಲೆಯಲ್ಲಿ ಶಿಕ್ಷಕಿಯಾಗುತ್ತಾಳೆ. ಆ ವೇಳೆಗೆ ಅವಳ ಅಕ್ಕ ಮೇರಿ ಅಂಧರ ಶಾಲೆ ಸೇರಿಕೊಂಡಿದ್ದರಿಂದ, ಅದಕ್ಕೆ ತಗಲುತ್ತಿದ್ದ ವೆಚ್ಚದಲ್ಲಿ ಪಾ ಗೆ ಸಹಾಯ ಮಾಡುವುದು ಅವಳ ಉದ್ದೇಶವಾಗಿರುತ್ತದೆ. ಆಗ ಪ್ರತೀ ವಾರ ಲಾರಾಳನ್ನು ಆಲ್ಮಾಂಜೋ ಜೇಮ್ಸ್ ವೈಲ್ಡರ್ ತನ್ನ ಗಾಡಿಯಲ್ಲಿ ಕರೆದೊಯ್ಯುತ್ತಿದ್ದ. ಇಂಥ ಹೊತ್ತಲ್ಲಿ ಇವರಿಬ್ಬರ ನಡುವೆ ಪ್ರೇಮ ಹುಟ್ಟಿ ಮದುವೆಯಾಗುತ್ತಾರೆ. ಅಲ್ಲಿಗೆ ಲಾರಾ ಎಲಿಸಬೆತ್ ಇಂಗಲ್ಸ್ ಲಾರಾ ಇಂಗಲ್ಸ್ ವೈಲ್ಡರ್ ಆಗುತ್ತಾಳೆ. ಈ ಸಮಯದಲ್ಲಿ ಡಿಸ್ಮೆಟ್ ನಿರಂತರ ಏಳು ವರ್ಷಗಳ ಬರಗಾಲಕ್ಕೆ ತುತ್ತಾಗಿ ಬಿಡುತ್ತದೆ. ಅನಿವಾರ್ಯವಾಗಿ ಲಾರಾ, ತನ್ನ ಗಂಡ ಆಲ್ಮಾಂಜೋ ಹಾಗೂ ರೋಸ್‌ಳೊಂದಿಗೆ ಸಮೃದ್ಧ ಸೇಬಿನ ನಾಡಾದ ಮಿಸ್ಸೌರಿ ಮ್ಯಾನ್ಸ್‌ಫೀಲ್ಡ್ ಗೆ ವಲಸೆ ಹೋಗುತ್ತಾಳೆ. ಅಲ್ಲಿ ತೋಟವೊಂದನ್ನು ಕೊಂಡುಕೊಂಡು ತನ್ನ ಉಳಿದ ಜೀವನವನ್ನು ಅಲ್ಲಿಯೇ ಕಳೆಯುತ್ತಾಳೆ.
 ಮೊನ್ನೆ ಮೊನ್ನೆ ಇಂಟರ್ ನೆಟ್ಟಿನಲ್ಲಿ ಲಾರಾಳ ಫೋಟೋ ನೋಡಿದೆ. ಅವಳ ಫೋಟೋದ ಜೊತೆಗೆ ಆಕೆಯ ಕೊನೆಯ ದಿನಗಳ ಬಗ್ಗೆಯೂ ಕೊಂಚ ಮಾಹಿತಿ ಇತ್ತು. ಲಾರಾ ತನ್ನ ಆತ್ಮ ಚರಿತ್ರೆಯ ರೂಪದ ಪುಸ್ತಕಗಳನ್ನು ಬರೆದದ್ದು, ಮುಂದಿನ ಪೀಳಿಗೆಗಾಗಿ ಅವಳ ಕಾಲದ ಬದುಕನ್ನು ತಿಳಿಸುವ ಉದ್ದೇಶದಿಂದಲಂತೆ. ಪುಸ್ತಕಗಳು ಬಂದ ಮೇಲೆ ಲಾರಾ ತುಂಬಾ ಪ್ರಖ್ಯಾತಳಾಗಿ ಅವಳನ್ನು ನೋಡಲು, ಮಾತಾಡಲು ದಿನವೂ ಜನರು ಬರುತ್ತಿದ್ದರಂತೆ. ಲಾರಾಳಿಗೆ ಕನಿಷ್ಟ ತೊಂಭತ್ತು ವರ್ಷ ಬದುಕಬೇಕೆನ್ನುವ ಆಸೆಯಿತ್ತಂತೆ. ಏಕೆಂದರೆ ಇವಳಿಗೆ ಎಂಭತ್ತೆರಡು ವರ್ಷಗಳಾಗಿದ್ದಾಗ ಗಂಡ ಆಲ್ಮಾಂಜೋ ತನ್ನ ತೊಂಭತ್ತೆರಡನೇ ವಯಸ್ಸಿನಲ್ಲಿ ತೀರಿಕೊಂಡಿದ್ದನಂತೆ. ತನ್ನ ತೊಂಭತ್ತನೆಯ ಹುಟ್ಟು ಹಬ್ಬ ಆದ ಮೂರನೆಯ ದಿನ ಲಾರಾ ಮಲಗಿದವಳು ಮತ್ತೆ ಮೇಲೇಳುವುದಿಲ್ಲ. ಲಾರಾಳ ಮನೆ ಈಗ ಮ್ಯೂಸಿಯಂ ಆಗಿದೆ. ಲಾರಾ ತೀರಿ ಹೋಗಿ ನೂರು ವರ್ಷ ಆಗುತ್ತಾ ಬಂದಿದೆ. ಆದರೆ ಒಮ್ಮೆ ದೊಡ್ಡ ಕಾಡಿನ ಪುಟ್ಟ ಹುಡುಗಿಯಾಗಿಯೋ, ಪ್ಲಮ್ ಕ್ರೀಕ್‌ನ ದೊಡ್ಡ ಹುಡುಗಿಯಾಗಿಯೋ, ಡಿಸ್ಮೆಟ್‌ನ ಯುವತಿಯಾಗಿಯೋ, ದಿನವೂ ನನ್ನ ಜೊತೆಯಿರುವ ಲಾರಾ ನೀವು ಕರೆದರೆ ನಿಮ್ಮೆಡೆಗೂ ಓಡಿ ಬರುವಳು. ನಿಮ್ಮ ಕೈ ಹಿಡಿದು ತನ್ನ ಲೋಕದೊಳಗೆ ತಿರುಗಾಡಿಸುವಳು. [ಚಿತ್ರಗಳು-ಸಂಗ್ರಹದಿಂದ]
|