ಬದುಕು ಪ್ರವೃತ್ತಿಗಳ ಸಾಹಸ ಕಥನ
‘ನಮ್ಮ ಸ್ವಾರ್ಥ ನಮ್ಮಲ್ಲಿ ನಾಶವಾಯಿತೆಂದರೆ, ಭವಿಷ್ಯ ಏನೇ ಆದರೂ ನಮಗದರಲ್ಲಿ ಸಂತೋಷವಿದೆ’ ಎಂದು ಭಾವಿಸಿದ್ದ, ಕೇವಲ ೨೯ ವರ್ಷ ಬಾಳಿದ ಪೈಲೂರು ಶಿವರಾಮಯ್ಯನವರನ್ನು ಕುರಿತು ಅವರ ಕುಟುಂಬದವರು ಅವರ ನಿಧನದ ಆರು ದಶಕಗಳ ನಂತರ ಹೊರತಂದಿರುವ ಸಂಸ್ಮರಣ ಪುಸ್ತಕ ಇದು. ನಿಧನದ ನಂತರ ಹೊಸ ಕಾಲದ ನಿರೀಕ್ಷೆಗಳಿಗೆ ಸ್ಪಂದಿಸುತ್ತಲೇ ಬೆಳೆದಂತಿರುವ ಅವರ ವ್ಯಕ್ತಿತ್ವ ಈ ಪ್ರಯತ್ನದ ಮೂಲ ಪ್ರೇರಣೆ. ಕೃತಿಗೆ ಶೀರ್ಷಿಕೆಯಾಗಿರುವ ‘ಕಲ್ಲುಬಾಜಿ’ ಎಂದರೆ ಕಲ್ಲಿನಂತೆ ಗಟ್ಟಿಮುಟ್ಟಾಗಿರುವ ಒಂದು ಜಾತಿಯ ಕಾಡುಮರ. ಶಿವರಾಮಯ್ಯನವರ ವ್ಯಕ್ತಿತ್ವಕ್ಕೂ ಈ ಮರದ ಗುಣವಿಶೇಷಗಳಿಗೂ ಸಂಬಂಧವಿದೆಯಾಗಿ ಈ ಹೆಸರು, ಎಂಬುದಾಗಿ ಸಂಪಾದಕರ ವಿವರಣೆ. ಪುಸ್ತಕ ತರಲು ಕಾರಣವಾದ ಅವರ ಸಾಹಸಯಾತ್ರೆಯನ್ನು ಸಂಕ್ಷಿಪ್ತಗೊಳಿಸಿ ಹೇಳುವುದಾದರೆ - ೧೯೧೪ ರಲ್ಲಿ ಹುಟ್ಟಿದ ಶಿವರಾಮಯ್ಯನವರು ಸೃಜನಶೀಲ ಕೃಷಿಕ, ಜೇನು ಕೃಷಿಕರಿಗಾಗಿ ಸಹಕಾರ ಸಂಘ ಹುಟ್ಟು ಹಾಕಿದವರು, ಕೃಷಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಿದವರು, ಪ್ರಾಯೋಗಿಕ ಕೃಷಿ ನಡೆಸಿ ಹಣ್ಣು ತರಕಾರಿ ಬೆಳೆದವರು, ತಮ್ಮ ಆಸ್ತಿಯಲ್ಲಿ ಹರಿಯುತ್ತಿದ್ದ ಚಾಮಡ್ಕ ಹೊಳೆಯ ಜಲಪಾತದಿಂದ ಟರ್ಬೈನ್ ಬಳಸಿ ವಿದ್ಯುತ್ ಉತ್ಪಾದಿಸಿದವರು, ವಿದ್ಯುತ್ ಸ್ಥಾವರದಿಂದ ನೀರು ಹಾಯಿಸಿ, ತಂತಿ ಬೇಲಿಗೆ ವಿದ್ಯುತ್ ಹಾಯಿಸಿ ಜೊತೆಗೊಂದು ಹಿಟ್ಟಿನ ಗಿರಣಿ ನಡೆಸುತ್ತಿದ್ದ ಸ್ವಾವಲಂಬಿ ಕನಸುಗಾರ, ಹುಲಿ ಬೇಟೆಯಾಡುತ್ತಿದ್ದ ಸಾಹಸಿಗ, ಮಣ್ಣಿನಿಂದ ಮೂರ್ತಿ, ಹಣ್ಣಿನಿಂದ ಮುರಬ್ಬಾ, ಗಂಧದ ಚೆಕ್ಕೆಗಳಿಂದ ಔಷಧೀಯ ಪುಡಿ ತಯಾರಿಸುತ್ತಿದ್ದ ಇವರು ದೀರ್ಘಕಾಲ ಬದುಕಿದ್ದಲ್ಲಿ ಮತ್ತೇನು ಸಾಧಿಸುತ್ತಿದ್ದರೋ. ಶಿವರಾಮ ಕಾರಂತರ ‘ಚಿಗುರಿದ ಕನಸು’ ಕಾದಂಬರಿಗೆ ಇವರ ವ್ಯಕ್ತಿತ್ವವೇ ಸ್ಫೂರ್ತಿಯಂತೆ.
ನಮ್ಮ ನಡುವೆಯೇ ನಮ್ಮ ಮನೆಗಳಲ್ಲಿಯೇ ಆಗಿ ಹೋಗುವ ಇಂಥ ಹಿರಿಯರಿಗೆ ಇಷ್ಟು ಚೆಂದವಾಗಿ ಗೌರವ ಸಮರ್ಪಿಸುವ ಮೂಲಕ, ಇರಬಹುದಾದ ಇಂಥವರಿಗೆ ಸ್ಫೂರ್ತಿಯಾಗುವುದು ಈ ರೀತಿಯ ಪ್ರಕಟಣೆಗಳಿಂದ ಸಾಧ್ಯ. ಕೃತಿಯು ಒಳಗೊಂಡಿರುವ ನಲವತ್ತರ ದಶಕದ ಪತ್ರವ್ಯವಹಾರ, ನೆನಪುಗಳ ಮೂಲಕ ಒಂದು ಕಾಲಘಟ್ಟದ ಜೀವನ ಶೈಲಿಗೂ ಕನ್ನಡಿ ಹಿಡಿದಂತಾಗಿದೆ. ಪ್ರತಿ ಸಾಮಾನ್ಯನ ಒಳಗೂ ಚರಿತ್ರೆಯೊಂದಿರುತ್ತದೆ ಎಂಬುದು ಈ ರೀತಿಯ ದಾಖಲೀಕರಣದಿಂದ ಸ್ಪಷ್ಟವಾಗುತ್ತದೆ. ಒಂದು ಊರಿನ ಸಾವಿರ ನೆನಪುಗಳಲ್ಲಿ ಕೆಲವಾದರೂ ಹೀಗೆ ಉಳಿದಲ್ಲಿ ಪರಂಪರೆಯ ಅರ್ಥಪೂರ್ಣ ಮುಂದುವರಿಕೆಗೆ ಕಾರಣವಾಗುವುದಲ್ಲದೆ ಸಾಮಾಜಿಕ ಸ್ತರ ವಿನ್ಯಾಸದ ವಾಸ್ತವಿಕ ಅಧ್ಯಯನಕ್ಕೆ ನೆರವಾಗುತ್ತದೆ. ಈ ಕೃತಿಯಲ್ಲಿ ಗಮನ ಸೆಳೆಯುವ ಅಂಶ ಸಂಪಾದಕರ ಅಭಿರುಚಿ. ಅದು ಪ್ರತಿ ಪುಟದಲ್ಲೂ ಕಳೆಗಟ್ಟಿದೆ. ಒಮ್ಮೆ ನಮ್ಮ ನಮ್ಮ ಹಿರಿಯರನ್ನೂ ಪ್ರೀತಿಯಿಂದ ನೆನಪಿಸಿಕೊಳ್ಳುವಂತೆ ಈ ಕೃತಿ ಒತ್ತಾಯಿಸುತ್ತದೆ.
‘ಕಲ್ಲುಬಾಜಿ’ ಸಂ. ಜಿ. ಎಸ್. ಉಬರಡ್ಕ, ಶಿವರಾಂ ಪೈಲೂರು, ಅನಿತಾ ಪೈಲೂರು ಪ್ರ. ಶ್ರೀರಂಗ ಕಟ್ಟಡ ಮಜಲು, ಸುಳ್ಯ ತಾಲೂಕು, ದಕ್ಷಿಣ ಕನ್ನಡ (೨೦೦೯, ಪುಟ XIV -೧೦೩, ಬೆಲೆ - ನಮೂದಿಸಿಲ್ಲ)
********
ಬಾಳುವ ಮಾತುಕತೆಯ ಕಾವ್ಯಮಿಡಿತ
ಹಿರಿಯ ಕವಯಿತ್ರಿ ಮಾಲತಿ ಪಟ್ಟಣಶೆಟ್ಟಿಯವರ ಆರನೇ ಸಂಕಲನವಾಗಿ ‘ಎಷ್ಟೊಂದು ನಾವೆಗಳು’ ಹೊರಬಂದಿದೆ. ಪ್ರೀತಿ ಮತ್ತು ನೋವಿನ ಹಾಳೆಗಳಲ್ಲಿ ಕಾವ್ಯ ಸಾಂತ್ವನ ಪಡೆಯುವಂತೆ ತೋರುತ್ತಿದ್ದ ಅವರು ಇದೀಗ ಅದರ ದಾಟುವಿಕೆಯ ತಾತ್ವಿಕ ಗಾಳಿಪಟವೊಂದರತ್ತ ಧೈರ್ಯದಿಂದ ಮುಖಮಾಡಿದ್ದಾರೆ. ವರ್ತಮಾನದ ತಲ್ಲಣಗಳಿಗೆ ನಿರುತ್ತರರಾಗಬೇಕಾದ ಅವರ ಆತಂಕವೇ ಗಾಳಿಪಟದಂತೆ ನನಗೆ ಕಂಡಿದೆ. ಪ್ರಕೃತಿಯ ಸತ್ಯಮಿಥ್ಯಗಳನ್ನು ಅರ್ಥಮಾಡಿಕೊಳ್ಳುತ್ತ ಅದರ ಜೀವ ಸರಪಳಿಯಲ್ಲೇ ಎಲ್ಲವನ್ನೂ ಕಾಣುವ, ಸಮಾಧಾನಿಸುವ ಮತ್ತು ವಿಶ್ವಾಸಹೊಂದುವ ಔಚಿತ್ಯದತ್ತ ಅವರು ದೃಷ್ಟಿ ಹರಿಸಿದ್ದಾರೆ. ಅದಕ್ಕೆ ಅನುಗುಣವಾಗಿಯೋ ಏನೋ ತಮ್ಮ ತಮ್ಮ ಮುಖ್ಯವೆನಿಸುವ ಕವನಗಳನ್ನು ಸರಪಳಿಯ ಕೊಂಡಿಗಳ ಹೆಣಿಗೆ ಮರುಹೆಣಿಗೆಯಂತೆ ಜೋಡಿಸಿದ್ದಾರೆ. ಉದಾಹರಣೆಗೆ
ಸಾವಿರ ಸಾವಿರ ಕೈಗಳಿರುತ್ತವೆ ಗೆಲುವಿಗೆ ಲಕ್ಷೋಪಲಕ್ಷ ಜನರನ್ನು ಮುಟ್ಟಲು ನಾಲ್ಕೇ ನಾಲ್ಕು ಕಂಬನಿಗಳಿರುತ್ತವೆ ಸೋಲಿಗೆ ಒಂದೇ ಒಂದು ಮನವ ಸಂತೈಸಲು (ಒಂದೇ ಒಂದು)
‘ಎಷ್ಟೊಂದು ನಾವೆಗಳಲ್ಲಿ ಎಷ್ಟೊಂದು ಪಯಣ’ ಎಂಬ ಯಶಸ್ವಿ ಕವನ ಇದಕ್ಕೆ ಇನ್ನೊಂದು ಉದಾಹರಣೆ. ನಿರ್ಗಮನವಾಗಲಿ , ವರ್ಣರಾಹಿತ್ಯವಾಗಲಿ, ತಾರೆಯ ಪತನವಾಗಲಿ, ಸಾಯುವ ಪ್ರೀತಿಯಾಗಲಿ ಅವುಗಳ ಅನುಪಸ್ಥಿತಿಯು ಎದೆಯನ್ನು ಮೀಟಬೇಕು ಎಂಬುದನ್ನು ಪುಟ್ಟ ಪುಟ್ಟ ಚಿತ್ರಗಳ ಹೆಣಿಕೆಯಂತೆ ಕೊಟ್ಟಿದ್ದಾರೆ. ಬದುಕಿನ ಘನತೆಯನ್ನು ಎತ್ತಿ ಹಿಡಿಯುವುದು ಮಾಲತಿಯವರ ಮುಖ್ಯ ಆಶಯ. ಅದಕ್ಕಾಗಿ ಆರದಂಥ ದೀಪವೊಂದನ್ನು ಹೊತ್ತಿಸಿಟ್ಟು ಆ ಊರನ್ನು ಕಂಡುಕೊಳ್ಳುವ’ ಕಾವ್ಯ ಯತ್ನ ನಡೆಸಿದ್ದಾರೆ. ಊರು ಅವರು ಕಾಣಬೇಕಿರುವ ಲೋಕ. ವೈಯಕ್ತಿಕ ನೆಲೆಯಲ್ಲಿಯೇ ಅದಕ್ಕೆ ತಕ್ಕುದಾದ ಅನಾವರಣಗೊಳ್ಳುವ ಪ್ರಕ್ರಿಯೆಗೆ ಅವರು ತೊಡಗುತ್ತಾರೆ. ‘ಹುಡುಕಾಟ’ ಎಂಬ ಕವನ ಇದಕ್ಕೆ ಸಹಕರಿಸುತ್ತದೆ. ‘ಬಾಳುವ ಮಾತುಕತೆ’ ಎಂಬ ಕವನ ಇದನ್ನು ಮಿಡಿಯುತ್ತದೆ.
ಈ ಕೊಳೆತ ಮನದ ದುರ್ಬೀಜ ನೀನೇ ಎಂಬರಿವು ಮೊಳೆತು ಬೆಳೆದ ಬೋಧಿವೃಕ್ಷವಾಯ್ತು ಕತ್ತಲೆ ಕಳಚಿ ಮೇಲೆದ್ದೆ ಕಣ್ಣಲ್ಲಿ ಬುದ್ಧ ಸರೋವರವಿತ್ತು ಮಣ್ಣಲ್ಲಿ ಬದುಕದ ಬಾಳಿತ್ತು (ಬಾಳುವ ಮಾತುಕತೆ)
ಹೀಗೆ ಬಾಳಿನ ಲಯ ಕಂಡುಕೊಳ್ಳುವ ಹೊತ್ತಿನಲ್ಲಿ ಎರಡು ಅರಿವಿನ ಹೊದಿಕೆಯನ್ನು ಮಾಲತಿ ಹೊದಿಸುತ್ತಾರೆ. ‘ಬಿಂಬ ವೇದಾಂತ’ ಕವನವು ತಾನು ಮತ್ತು ತನ್ನ ಬಿಂಬದ ಕಾರ್ಯಕಾರಣ, ಸತ್ಯ ಅಸತ್ಯದ ಮೂಲಕ ಪಡೆಯುವ ಅರಿಯುವಿಕೆಯಾದರೆ, ‘ನದಿಯಾಗಲಾರೆ’ ಎಂಬ ಕವಿತೆಯು ನದಿಯ ಕುರಿತ ನಮ್ಮ ನಂಬಿಕೆಗೆ ಹೊಸ ಭಾಷ್ಯ ಬರೆಯುತ್ತದೆ. ನದಿಯ ಜಂಗಮತ್ವ, ಸಮುದ್ರವೆಂಬ ಅದರ ಐಕ್ಯಸ್ಥಳವೆಲ್ಲವೂ ಇಲ್ಲಿ ವಿಮರ್ಶೆಗೊಳಗಾಗಿದೆ. ಕೌಮಾರ್ಯದ ಕನಸಲ್ಲದ, ಬಂಧುಗಳಿಲ್ಲದ, ಸಂಬಂಧಗಳ ಸವಿಯಿಲ್ಲದ ನದಿ ನಾನೆಂಬುದಿಲ್ಲದ ಬರಿ ನೀರಾಗುತ್ತದೆ. ನದಿ ಎಂಬ ನೀರು ಕವಯತ್ರಿ ಎಂಬ ನೀರೆಗೆ ಹೇಳುವ ಮಾತು
‘ನಿನ್ನನ್ನು ತುಳಿವ ಅಳಿವ ನುಂಗಿ ನೊಣೆವ ಸಮುದ್ರ ಶಕ್ತಿಗಳಿವೆ.. ..ಕಟ್ಟಿಕೋ ಭದ್ರಕೋಟೆ ಮನದ ದಂಡೆಗೆ ಆದರೆ ನದಿಯಾಗಬೇಡ ಎಂದಿಗೂ’
ಔಚಿತ್ಯ ಅನೌಚಿತ್ಯದ ಎಲ್ಲೆಗಳನ್ನು ಮೀರಿ ಇಲ್ಲೆಲ್ಲಾ ಕಾವ್ಯದ ಉತ್ತಮ ಕ್ಷಣಗಳು ನಿರ್ಮಾಣವಾಗುತ್ತವೆ ಎಂಬುದು ಮುಖ್ಯ.
ಮಾಲತಿ ಪಟ್ಟಣಶೆಟ್ಟಿಯವರ ಸಮಸ್ಯೆಯಿರುವುದು ಕವಿತೆಯು ಸಾಮಾಜಿಕವಾದಂತೆ ವಾಚ್ಯಗೊಳ್ಳುವುದು ಮತ್ತು ಕಾವ್ಯದ ಆಕೃತಿಯ ಬಗ್ಗೆ ನಿರಾಸಕ್ತಿ ತಳೆಯುವುದರಲ್ಲಿ. ಇದರ ಕಾರಣಗಳು ತಿಳಿಯುವುದಿಲ್ಲ. ಹೊಸ ಕಾವ್ಯದ ಶಕ್ತಿ ಅದರ ತೋರುಗಾಣಿಕೆಯಲ್ಲಿ ವ್ಯಕ್ತವಾಗುತ್ತಿದ್ದು ಅದು ಕಟ್ಟಿ ಮುರಿಯುವ ಶಿಲ್ಪದ ಸಂಭ್ರಮದಲ್ಲಿ ನಿರತವಾಗಿದೆ. ಮಾಲತಿಯವರ ಕಾವ್ಯದ ಹುಮ್ಮಸ್ಸು ಇದನ್ನು ಎದುರಿಸಲೇಬೇಕಾದ ಕಾಲ ಬಂದಿದೆ. ಎಲ್ಲ ಹಿರಿಯ ಕವಿಗಳಿಗೂ ಇದು ಹೊಸ ಕಾಲದ ಆಹ್ವಾನ.
‘ಎಷ್ಟೊಂದು ನಾವೆಗಳು’ (ಕವನ ಸಂಕಲನ) ಲೇ. - ಮಾಲತಿ ಪಟ್ಟಣಶೆಟ್ಟಿ (೨೦೦೯, ಸಾಹಿತ್ಯ ಪ್ರಕಾಶನ, ಕೂಪ್ಳಿಕರ್ ಬೀದಿ, ಹುಬ್ಬಳ್ಳಿ - ೫೮೦೦೨೦. ಪುಟ - ೧೦೪, ಬೆಲೆ ರೂ.೬೦)
******
ಲವಲವಿಕೆಯಿಂದ ಹೇಳಿದ ಕಥೆಗಳು
ಕಥೆಗಾರ್ತಿಯ ಈ ಮೊದಲ ಸಂಕಲನ ಗಮನ ಸೆಳೆಯುವುದು ತನ್ನ ಲವಲವಿಕೆಯ ನಿರೂಪಣೆಯಿಂದ ಮತ್ತು ಕಥೆಯಿರುವುದೇ ಹೇಳುವುದಕ್ಕೆ ಎಂಬ ಮಾತಿನಲ್ಲಿರುವ ನಂಬಿಕೆಯಿಂದ. ಎಲ್ಲವನ್ನೂ ಹೇಳಿಬಿಡುವ ಆತುರ, ಹೇಳಬಲ್ಲೆನೆಂಬ ವಿಶ್ವಾಸ ಈ ಕಥೆಗಳನ್ನು ಆಳಿದೆ. ಅದಕ್ಕೆ ತಕ್ಕಂತೆ ಹುಡುಕಿಕೊಂಡ ಪಾತ್ರಗಳು, ಬಳಸಿಕೊಂಡ ಬಾಲ್ಯ, ಬರಮಾಡಿಕೊಂಡ ಪ್ರಯೋಗಾತ್ಮಕತೆ ಎಲ್ಲವೂ ಇಲ್ಲಿ ಒಂದರೊಡನೊಂದು ಬೆರೆತಿದೆ. ಆವಾಹಿಸಿಕೊಳ್ಳದ ಸ್ತ್ರೀಪರ ಸಂವೇದನೆ, ಸಾಮಾಜಿಕ ಕ್ರೌರ್ಯವನ್ನು ದೂರವಿಟ್ಟು ಮೆರೆಯುವ ಮಾನವೀಯತೆ, ಆದರ್ಶದ ಕುರಿತ ಒಲವು, ವೈವಿಧ್ಯದ ಮೂಲಕ ಯಾವುದೇ ಇಮೇಜಿಗೆ ಕಟ್ಟುಬೀಳದ ಧೈರ್ಯ ಇವೆಲ್ಲ ಇಲ್ಲಿಯ ಕಥನಗಾರಿಕೆಯ ಮುಖ್ಯ ಅಂಶಗಳು. ಇಷ್ಟವಾಗುತ್ತಲೇ ಈ ಕಥೆಗಳ ಕುರಿತು ಪ್ರಶ್ನೆಯಿರುವುದು ಈ ಎಲ್ಲವುಗಳ ಸಂಯೋಜಿತ ಯಶಸ್ಸು ಇಲ್ಲವೇ ಅಯಶಸ್ಸಿನ ಬಗ್ಗೆ.
ಸಂಕಲನದ ಪಟ್ಟೆಹುಲಿ, ಬುದ್ಧಿಯಿಲ್ಲದ ಹುಡುಗನ ತಲೆಯೊಳಗೆ ಹಾಗು ಕೋವಿಮನೆ ಎಂಬ ಕಥೆಗಳು ತಮ್ಮ ಕ್ಯಾನ್ವಾಸ್, ಪಾತ್ರ ಪ್ರೌಡಿಮೆ ಮತ್ತು ಒಳಸುಳಿಯ ಸುಳುಹುಗಳ ಮೂಲಕ ಗಮನ ಸೆಳೆಯುತ್ತವೆ. ‘ಪಟ್ಟೆಹುಲಿ’ ಕಥೆಯು ಹಿಂದೂ ಹುಡುಗಿ ಮತ್ತು ಮುಸ್ಲೀಂ ಹುಡುಗನ ಮದುವೆಯ ಜೊತೆಜೊತೆಗೆ ಮಕ್ಕಳಿಗೆ ಪಟ್ಟೆಹುಲಿ ವೇಷ ಹಾಕಿಸಿ ವ್ಯವಹಾರಿಕ ಲಾಭ ಪಡೆಯುವ ಯಂಕಮ್ಮನ ಕುಟುಂಬದ ಮೂಲಕ ಕುತೂಹಲಕರವಾಗಿ ಬೆಳೆಯುತ್ತದೆ. ಆದರೆ ಕೋಮು ಸಂಘರ್ಷ ಮತ್ತು ಹಿಂಸೆಯ ಹಾದಿ ಹಿಡಿಯುತ್ತಲೇ ಕಥೆ ಎರಡು ಪಾತ್ರಗಳ ಮೂಲಕ ಸಾಮರಸ್ಯದ ಪಾಠ ಹೇಳಿ ಮುಗಿಯುತ್ತದೆ. ಪ್ರತಿ ಘಟನೆಯು ಸಮಾಜದ ವ್ಯವಹಾರದ ಒಂದು ಭಾಗ ಎಂಬುದನ್ನು ನಿರೂಪಿಸಿಯೂ ಕಥೆಗೆ ಕೇಂದ್ರವೊಂದು ದಕ್ಕದೆ ಅತಾರ್ಕಿಕವೆಂಬಂತೆ ನಿಲ್ಲುತ್ತದೆ. ಕಥೆಯೊಳಗಿನ ಸಮಸ್ಯೆಯು ಸಮುದಾಯವನ್ನು ಪ್ರವೇಶಿಸಿದ ಮೇಲೆ ಉಂಟಾಗುವ ಸಾಮುದಾಯಕ ಸಂಘರ್ಷಗಳಿಗೆ ಅದು ತಲೆಯೊಡ್ಡಲೇಬೇಕಾಗುತ್ತದೆ. ಇಂತಲ್ಲಿ ಕಥೆ ಮೌನವಾಗಿದೆ.
ತಾಲ್ಲೂಕು ಆಫೀಸಿನ ಲಂಚದ ಮೂಲಕವೇ ರಾಜಕೀಯದ ಆಳ ಅಗಲಗಳನ್ನು ಅಳೆಯುವ ‘ಯಾದವ’ ಎಂಬ ಯುವಕನ ಮೂಲಕ ರಾಜಕೀಯ ಆಗುಹೋಗುಗಳ ಬಗ್ಗೆ ಚುರುಕಾಗಿ ಪ್ರತಿಕ್ರಿಯಿಸುವ ‘ಬುದ್ಧಿಯಿಲ್ಲದ ಹುಡುಗನ ತಲೆಯೊಳಗೆ’ ಎಂಬ ಕಥೆಯಲ್ಲಿ ಗ್ರಾಮ ದೇವಸ್ಥಾನದ ಜೀರ್ಣೋದ್ಧಾರದ ಕೆಲಸವು ಪ್ರತಿ ಕಥಾನಕದಂತೆ ಬೆಳೆದಿದೆ. ಇದರ ಮೂಲಕ ಪ್ರಗತಿಯ ಪಾಠವನ್ನು ಸರಳವಾಗಿ ಹೇಳುವ ಲೇಖಕಿ ಪೆಟ್ರೋಲ್ ಪಂಪ್ ಪರವಾನಿಗಿಯ ಮೂಲಕ ಯಾದವನ ರಾಜಕೀಯ ತಿಳಿವಳಿಕೆ ಅರ್ಥಹೀನಗೊಳ್ಳುವುದನ್ನು ಸೂಚಿಸುತ್ತಾರೆ. ಆದರೆ ಪೆಟ್ರೋಲ್ ಪಂಪ್ ಎಂಬುದು ಈ ಕಥೆಯ ವ್ಯಾಪ್ತಿ ಮೀರಿದ ರಾಜಕೀಯವಾಗಿದ್ದು ಅದು ಇಲ್ಲಿ ಕೇವಲ ತೊಡಿಕೆಯಂತಾಗಿದೆ. ಇನ್ನು ದಾಯಾದಿ ವೈಮನಸ್ಯ, ಮಾಟ, ದೈವನಂಬಿಕೆಗಳ ಸುತ್ತ ಸುತ್ತುವ ‘ಕೋವಿಮನೆ’ ಯು ಪಡೆಯುವ ಅಂತ್ಯ ಪ್ರಶ್ನೆಗಳನ್ನಷ್ಟೇ ಉಳಿಸುತ್ತದೆ. ನಿರೂಪಣೆಯ ಪರಿಶ್ರಮವಿದ್ದೂ ಕೇಂದ್ರಹೀನ ನಿರ್ವಹಣೆ ಮತ್ತು ಸಂಘರ್ಷರಹಿತ ಒಳಿತು ಕೆಡುಕಿನ ತೀರ್ಮಾನಗಳಿಂದ ಕಥೆಗಳು ಬೀರಬೇಕಾದ ಪರಿಣಾಮ ಬೀರುವುದಿಲ್ಲ. ಒಳಿತು ಕೆಡುಕಿನ ಜಿಜ್ಞಾಸೆಯನ್ನೇ ಮುಂದುವರಿಸುವ ‘ಹಸನೆಬ್ಯಾರಿ’ ಎಂಬ ಕಥೆಯಲ್ಲಿ ಆ ಪಾತ್ರ ಮನದಲ್ಲಿ ಉಳಿಯುತ್ತದೆ.
ಸಂಕಲನದ ಇನ್ನೆರಡು ಕಥೆಗಳು ಕಥೆ ಮತ್ತು ಪ್ರಬಂಧದ ನಡುವಿನ ತೆಳು ರೇಖೆಯಲ್ಲಿ ಚಿತ್ರಿತವಾಗಿದ್ದು ಮನಸ್ಸಿಗೆ ನಾಟುತ್ತದೆ. ‘ಪೋಕ್ರಿಕಿಟ್ಟಪ್ಪ’ ಎಂಬ ಹುಡುಗ ತನ್ನ ಬೆಳವಣಿಗೆಯ ಬೇರೆ ಬೇರೆ ಹಂತಗಳಲ್ಲಿ ಮಳೆಯ ಜೊತೆಗಿನ ಒಡನಾಟದ ಮೂಲಕ ವ್ಯಕ್ತಗೊಳ್ಳುವ ಪರಿ ಆಕರ್ಷಕವಾಗಿದೆ. ‘ಕಂಪಾಸುಬಾಕ್ಸು’ ತೆಗೆದುಕೊಳ್ಳಲು ಯಾರಿಂದ ಯಾರಿಗೋ ಕೂಲಿಯಾಗಿ ಲಾಭ ಮಾಡಿಕೊಳ್ಳುವ ಇರಾದೆಯ ಮುಗ್ಧ ಬಾಲಕಿಯ ಕಥೆಯೂ ಅಷ್ಟೇ ಆಕರ್ಷಕವಾಗಿದೆ. ಕೇಂದ್ರ ಮತ್ತು ಚೌಕಟ್ಟು ಎರಡೂ ಇರುವ ಈ ನಿರೂಪಣೆಗೆ ಕಥನ ಸಾಂದ್ರತೆಯ ಅಪೇಕ್ಷೆಯೂ ಇದ್ದಿದ್ದಲ್ಲಿ ಎಂದು ಆಸೆಯಾಗುತ್ತದೆ.
‘ಸಾವಿನ ಮನೆ’ ಕಥೆ ವಾಸ್ತವ ಅವಾಸ್ತವದ ಅನೂಹ್ಯ ವಿವರ ಒಳಗೊಂಡು ಒಗಟಿನಂತಿದೆ. ಅತ್ತ ಫ್ಯಾಂಟಸಿಯೂ ಎನಿಸದೆ ಓದುಗನಿಗೆ ದಕ್ಕದೆ ಹೋಗುತ್ತದೆ. ಸ್ವಾರಸ್ಯವೆಂದರೆ ಸಾವಿನ ಮನೆಯನ್ನು ಕವಿತೆಯೆಂದು ಭಾವಿಸಿ ಗಪದ್ಯದಂತೆ ಓದಿಕೊಂಡರೆ ಸಾವಿನ ಆಕರಣೆ ನಿರಾಕರಣೆಯ ಬಿಕ್ಕಟ್ಟು ಒಂದು ಸಂವೇದನೆಯಾಗುತ್ತದೆ. ಪೌರಾಣಿಕ, ರೂಪಕಾತ್ಮಕ ಪ್ರಯೋಗದ ಕಥೆಗಳೂ ಸಂಕಲನದಲ್ಲಿ ಇವೆ.
ಕಥೆ ಹೇಳುವ ಕಲೆ ಗೊತ್ತಿರುವ ರಾಜಲಕ್ಷ್ಮಿ ಯವರು ಕೆಲ ವೈವಿಧ್ಯಮಯ ಹೊಡೆತಗಳ ಮೂಲಕ ಆರಂಭದಲ್ಲಿ ಪಿಚ್ ಅರಿಯುವ ಬ್ಯಾಟ್ಸ್ ಮನ್‌ನಂತೆ ತಮ್ಮ ಚೊಚ್ಚಲ ಸಂಕಲನದ ಎಲ್ಲ ಹೊಡೆತಗಳಲ್ಲೂ ಪ್ರಯತ್ನಿಸಿದ್ದಾರೆ. ಪೋಕ್ರಿ ಕಿಟ್ಟಪ್ಪ ಮತ್ತು ಕಂಪಾಸು ಹುಡುಗಿಯ ಜೊತೆಗಿನ ಅವರ ಜೊತೆಯಾಟ ಹೆಚ್ಚು ನಿರೀಕ್ಷೆ ಹುಟ್ಟಿಸಿದೆ.
ಮುಷ್ಠಿಯೊಳಗಿನ ನಕ್ಷತ್ರ (ಕಥಾ ಸಂಕಲನ) ಲೇ.- ಕೋಡಿಬೆಟ್ಟು ರಾಜಲಕ್ಷ್ಮಿ (೨೦೦೯, ಅಭಿನವ, ಬೆಂಗಳೂರು - ೪೦, ಪುಟ - ೧೦೦. ಬೆಲೆ ರೂ.೫೦)
|