ನಾನು ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದೆ. ಹೈಸ್ಕೂಲನ್ನೂ ಕನ್ನಡ ಮಾಧ್ಯಮದಲ್ಲಿ ಮುಗಿಸಬೇಕೆಂಬ ಆಸೆಯಿತ್ತು. ನನ್ನ ಅಕ್ಕ ಶಮಾ ಓದಿದ್ದ ಹೈಸ್ಕೂಲಿನಲ್ಲೇ ನನಗೂ ಸೇರಿಸುವುದು ಎಂದು ಮನೆಯಲ್ಲಿ ನಿರ್ಧಾರವಾಯಿತು. ನನಗೆ ಮೊದಲು ಅಲ್ಲಿ ಸೇರಲು ಇಷ್ಟವೇ ಇರಲಿಲ್ಲ. ಏಕೆಂದರೆ ಅಕ್ಕ ಪ್ರೈಮರಿ ಶಾಲೆಯಲ್ಲೇ ಶಾಲಾ ನಾಯಕಿಯಾಗಿ, ಒಳ್ಳೆಯ ವಿದ್ಯಾರ್ಥಿನಿಯಾಗಿ ಹೆಸರನ್ನು ಪಡೆದಿದ್ದಳು. ನನ್ನನ್ನು ಎಲ್ಲರೂ ನನ್ನ ಹೆಸರಿಗಿಂತ ಹೆಚ್ಚಾಗಿ ‘ಶಮಾನ ತಂಗಿ’ ಎಂದೇ ಗುರುತಿಸುತ್ತಿದ್ದರು. ಆಗೆಲ್ಲ ನನಗೆ ಒಂದು ರೀತಿಯ ಹಿಂಸೆಯಾಗುತ್ತಿತ್ತು. ಈ ಕಾರಣದಿಂದ ನಾನು ಆಕೆಯ ಶಾಲೆಗೆ ಸೇರುವ ಮೊದಲು ಒಂದು ಶರತ್ತು ಹಾಕಿದೆ- ಅಲ್ಲಿನ ಶಿಕ್ಷಕರು ನನ್ನನ್ನು ಅಕ್ಕನ ಜತೆ ಹೋಲಿಸಬಾರದು. ನನಗೆ ಶಮಾನ ತಂಗಿ ಎಂದು ಗುರುತಿಸಬಾರದು ಎಂದು. ‘ಆಗಲಿ’ ಎಂದು ಅಪ್ಪಅಮ್ಮ ಒಪ್ಪಿಕೊಂಡರು. ಇದನ್ನು ಅಲ್ಲಿನ ಟೀಚರುಗಳಿಗೂ ಹೇಳಿದರು. ಆದರೆ ಹೈಸ್ಕೂಲು ಸೇರಿದ ನಂತರ ಟೀಚರುಗಳು ನನ್ನನ್ನು ಅಕ್ಕನ ಜತೆ ಹೋಲಿಕೆ ಮಾಡಲು ಆರಂಭಿಸಿದರು. ಇದನ್ನು ತಪ್ಪಿಸಲು ಆಗುವುದಿಲ್ಲ ಎಂದು ತಿಳಿಯಿತು.
ನಮ್ಮ ಸ್ಮಯೋರ್ ಹೈಸ್ಕೂಲು ಹೊಸಪೇಟೆಯಿಂದ ೧೫ ಕಿ.ಮೀ ದೂರದ ಒಂದು ಹಳ್ಳಿಯಲ್ಲಿದೆ. ಅಲ್ಲಿಗೆ ಮುಖ್ಯವಾಗಿ ಮರಿಯಮ್ಮನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಯ ವಿದ್ಯಾರ್ಥಿಗಳು ಬರುತ್ತಾರೆ. ನಮ್ಮದು ಹಳ್ಳಿಯ ಮಕ್ಕಳಿಗಾಗಿಯೇ ತೆರೆದ ಶಾಲೆಯಾಗಿತ್ತು. ಆದರೆ ಸ್ಮಯೋರ್ ಪಿಯು ಕಾಲೇಜು ವಿಭಾಗಕ್ಕೆ ಹೊಸಪೇಟೆಯಿಂದ ಬಹಳ ವಿದ್ಯಾರ್ಥಿಗಳು ಬರುತ್ತಾರೆ. ಕಾರಣ, ಸ್ಮಯೋರ್ ಪ್ರತಿಷ್ಠಿತ ಕಾಲೇಜಾಗಿತ್ತು.
ಸ್ಕೂಲಿಗೆ ಹೋಗಲು ಸ್ಕೂಲ್ ಬಸ್ಸುಗಳು ಬರುತ್ತಿದ್ದವು. ನಮ್ಮ ಮನೆ ಬಸ್‌ಸ್ಟಾಪ್‌ಗಿಂತ ಬಹಳ ದೂರ. ನಮ್ಮ ಏರಿಯಾದಿಂದ ಹಲವಾರು ವಿದ್ಯಾರ್ಥಿಗಳು ಸೈಕಲ್ ಸೈನ್ಯ ಕಟ್ಟಿಕೊಂಡು ಎರಡು ಕಿ.ಮೀ. ದೂರದ ಬಜಾರಿಗೆ ಹೋಗುತ್ತಿದ್ದೆವು. ಅಲ್ಲಿ ಪೊಲೀಸ್ ಸ್ಟೇಷನ್‌ನಲ್ಲಿ ಸೈಕಲ್ ನಿಲ್ಲಿಸುತ್ತಿದ್ದೆವು. ಆದರೆ ಪೊಲೀಸರ ಮಕ್ಕಳು ಸೈಕಲ್ ಪಂಚರ್ ಮಾಡುವುದು, ಕಲ್ ಬುಟ್ಟಿಯಲ್ಲಿ ಮಣ್ಣು ಹಾಕುವುದು ಮಾಡುತ್ತಿದ್ದರು. ದಿನಕ್ಕೆ ಒಬ್ಬರದಂತೂ ಸೈಕಲ್ ಪಂಚರ್ ಆಗಿರುತ್ತಿತ್ತು. ಆಗ ಬೈದುಕೊಂಡು ಮನೆಗೆ ಸೈಕಲ್ ತಳ್ಳಿಕೊಂಡು ಬರುತ್ತಿದ್ದೆವು.
ಆದರೆ ನಾವು ಹೈಸ್ಕೂಲಿಗೆ ಹೋಗುವ ದಾರಿ ಬಹಳ ಸುಂದರವಾಗಿದೆ. ಬೆಟ್ಟಗಳ ಸಾಲು ತುಂಗಭದ್ರಾ ಡ್ಯಾಮಿಗೆ ಅಡ್ಡಗೋಡೆಯಂತಿದೆ. ಆ ಬೆಟ್ಟವನ್ನು ಹತ್ತಿದ ಮೇಲೆ ತಟ್ಟನೆ ಡ್ಯಾಂ ನೀರು ಕಾಣಿಸುವುದು. ಬೆಟ್ಟ ಇಳಿದ ನಂತರ ನಮ್ಮ ಕಾಲೇಜು ಬರುವವರೆಗೂ ಒಂದು ಕಡೆ ಕಾಡು, ಬೆಟ್ಟಗಳ ಸಾಲು. ಮತ್ತೊಂದು ಕಡೆ ಡ್ಯಾಮಿನ ನೀರು. ಬೆಟ್ಟ ಹತ್ತಿದ ಮೇಲೆ ಒಂದು ಕಣಿವೆ ಸಿಗುತ್ತದೆ. ಅಲ್ಲಿ ವೀರಭದ್ರೇಶ್ವರ ದೇವಸ್ಥಾನ ಇದೆ. ಆ ದೇವರನ್ನು ‘ಕಣಿವೆ ವೀರಭದ್ರೇಶ್ವರ’ ಎಂದು ಕರೆಯಲಾಗುತ್ತದೆ. ಆ ಕಣಿವೆಯಲ್ಲಿ ಟ್ರಾಫಿಕ್ ಜಾಮ್ ಆಗುವುದು ಸಾಮಾನ್ಯ. ಇದಕ್ಕೆ ಎರಡು ಕಾರಣ. ಒಂದು -ಅಲ್ಲಿರುವ ರೈಲ್ವೇ ಹಳಿ. ಆ ಹಳಿಗಳ ಮೇಲೆ ಕೇವಲ ಮೈನ್ಸ್ ತುಂಬಿದ ಗೂಡ್ಸ್‌ಗಾಡಿ ಮಾತ್ರ ಹೋಗುತ್ತದೆ, ತೀರ ನಿಧಾನವಾಗಿ. ಆಗ ವಾಹನಗಳು ತಮ್ಮ ಮನಸ್ಸಿಗೆ ಬಂದಂತೆ ಹಳಿಗಳ ಎರಡೂ ಬದಿಗಳಲ್ಲಿ ನಿಂತುಬಿಡುತ್ತವೆ. ಎರಡನೇ ಕಾರಣ- ಭಾರಿ ಗಾತ್ರದ ವಾಹನಗಳು ಬ್ಯಾಲೆನ್ಸ್ ತಪ್ಪಿ ಕಣಿವೆಯ ಘಾಟಿಯಲ್ಲಿ ಬಿದ್ದುಬಿಡುತ್ತಿದ್ದವು-ನಡಿಗೆ ಕಲಿಯುವಾಗ ಸಣ್ಣಮಕ್ಕಳು ದಢಾರ್ ಅಂತ ಬೀಳುವಂತೆ...!
ಈ ಟ್ರಾಫಿಕ್ ಜಾಮ್ ಎನ್ನುವುದು ಸ್ಮಯೋರ್ ಹೈಸ್ಕೂಲು, ಕಾಲೇಜಿನಲ್ಲಿ ಓದುವ ಎಲ್ಲರಿಗೂ ಬಹಳ ಅಚ್ಚುಮೆಚ್ಚಾದ ಪದವಾಗಿತ್ತು. ಮನೆಯಲ್ಲಿದ್ದಾಗಲೇ ಟ್ರಾಫಿಕ್ ಜಾಮಿನ ವಿಷಯ ತಿಳಿದರೆ ಸ್ಕೂಲಿಗೇ ಹೋಗುತ್ತಿರಲಿಲ್ಲ. ಬಸ್ಸಿನಲ್ಲಿದ್ದಾಗ ಜಾಮ್ ಆಗಿದೆ ಎಂದು ತಿಳಿದಾಗ ‘ಹೋ’ ಎಂದು ಖುಷಿಯಿಂದ ಚೀರಾಡುತ್ತಿದ್ದೆವು. ಬಸ್ಸು ಕಣಿವೆ ದಾಟಿದರೆ ಶಾಲೆಗೆ ಹೋಗುವುದು ನಿಶ್ಚಯ. ಕಣಿವೆ ದಾಟಿಲ್ಲವೆಂದರೆ ಮನೆಗೆ ವಾಪಸ್ ಬರುವ ಚಾನ್ಸ್ ಇರುತ್ತಿತ್ತು. ನಾವೆಲ್ಲ ಮನಸ್ಸಿನಲ್ಲಿ ಟ್ರಾಫಿಕ್ ಜಾಮ್ ಕ್ಲಿಯರ್ ಆಗದಿರಲಿ, ಬಸ್ಸು ಕಣಿವೆ ದಾಟದಿರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದೆವು. ಆದರೆ ನಮ್ಮ ಟೀಚರುಗಳು ನಮಗಿಂತ ಒಂದು ಹೆಜ್ಜೆ ಮುಂದಿದ್ದರು. ೧೨ ಗಂಟೆಯಾದರೂ ಪರವಾಗಿಲ್ಲ ಕಾಲೇಜಿಗೆ ಹೋಗಲೇಬೇಕೆಂದು ಅವರ ಪಟ್ಟು. ನಾವು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಕೊಂಡಾಗ ಅಂತ್ಯಾಕ್ಷರಿ ಆಡುವುದು, ಬೇರೆಯವರಿಗೆ ರೇಗಿಸುವುದು..... ಹೀಗೆ ಗೊತ್ತಿದ್ದ ಎಲ್ಲಾ ಮನೋರಂಜನೆಯನ್ನು ಮುಗಿಸಿ, ಕೊನೆಗೆ ಬೇಸತ್ತು ಯಾವಾಗ ಟ್ರಾಫಿಕ್ ಜಾಮ್ ಕ್ಲಿಯರ್ ಆಗುವುದೋ ಎಂದು ಕಾಯುತ್ತಿದ್ದೆವು.
ನಾನು ಹೈಸ್ಕೂಲಿನಲ್ಲಿದ್ದಾಗ ಬಸ್ಸಿನಲ್ಲಿ ಒಳ್ಳೆಯ ವಿದ್ಯಾರ್ಥಿಯಂತೆ ಕುಳಿತುಕೊಳ್ಳುತ್ತಿದ್ದೆ. ಏಕೆಂದರೆ ಶಾಲೆ ಸೇರಿದ ಎರಡು ವರ್ಷವೂ ಅಕ್ಕ ನನ್ನ ಜೊತೆಯಲ್ಲೇ ಇರುತ್ತಿದ್ದಳು. ಆಗ ಅವಳು ಪಿಯು ಓದುತ್ತಿದ್ದಳು. ಏನೂ ಮಾಡುವ ಹಾಗಿರಲಿಲ್ಲ. ಕಾಲೇಜಿನವರು ಸೀಟಿನ ವಿಷಯ ಬಂದಾಗ ಹೈಸ್ಕೂಲಿನವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. ಆದರೆ ನಾವು ಹೈಸ್ಕೂಲಿನವರು ಕಮ್ಮಿಯಿಲ್ಲ ಅಂತ ತೋರಿಸುತ್ತಿದ್ದೆವು.
ಅಕ್ಕ ಹೈಸ್ಕೂಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಎರಡನೆಯದೊ ಮೂರನೆಯದೊ ಸ್ಥಾನ ಪಡೆದಳು. ಅವಳ ಹಾಗೆ ಹೈಸ್ಕೂಲಿನಲ್ಲಿ ನಾನೂ ಒಳ್ಳೆಯ ಅಂಕ ಪಡೆದು ಅದೇ ಕಾಲೇಜಿಗೆ ಸೇರಿಕೊಂಡೆ. ಅಕ್ಕ ಕಾಲೇಜಿನಲ್ಲಿಯೂ ಒಳ್ಳೆಯ ಹೆಸರನ್ನು ಪಡೆದು, ವೈದ್ಯಕೀಯ ಕೋರ್ಸಿಗೆ ಸೇರಿಕೊಂಡಳು. ಎರಡು ವರ್ಷ ನಾನು ಏನು ಮಾಡಿದರೂ ಕೆಲವು ಲೆಕ್ಚರರ್‌ಗಳು "ನಿನ್ನ ಅಕ್ಕ! ಅವಳೇ ಬೇರೆ. ನಿನ್ನ ಹಾಗೆ ಇರಲಿಲ್ಲ" ಅಂತ ಹೇಳಲು ಶುರುಮಾಡಿದರು- ಅದೂ ತುಂಬಿದ ಕ್ಲಾಸಿನಲ್ಲಿ! ಆಗ ನನಗೆ ಅಕ್ಕನ ಮೇಲೆ ಸಿಟ್ಟು ಬರುತ್ತಿತ್ತು. ಎರಡು ವರ್ಷ ಇದನ್ನು ಕೇಳಿಕೇಳಿ ಸಾಕಾಗಿಬಿಟ್ಟಿತು. ಆದರೆ ಕಾಲೇಜು ಮುಗಿಯುವವರೆಗೆ ಏನೂ ಮಾಡುವಂತಿರಲಿಲ್ಲ.
ಮೊನ್ನೆ ಕಾಲೇಜಿಗೆ ಕೊನೆಯ ಭೇಟಿ ಎಂಬಂತೆ ಟಿ.ಸಿ ತರಲು ಹೋಗಿದ್ದೆ. ಒಬ್ಬ ಲೆಕ್ಚರರ್ ಅವರು ಸಿಕ್ಕು ಚೆನ್ನಾಗಿಯೇ ಮಾತನಾಡಿಸಿದರು. ಕೊನೆಗೆ "ಅರೆ! ನೀನು ಶಮಾನ ತಂಗಿ ಅಲ್ವಾ?" ಎಂದು ಕೇಳಿಬಿಟ್ಟರು. ನನಗೆ ಆಗ ಏನೂ ಹೇಳಬೇಕೋ ಗೊತ್ತಾಗಲಿಲ್ಲ. ಇದು ಎಂದೂ ಮುಗಿಯದ ಕಥೆ ಎಂದುಕೊಂಡು ನಗುತ್ತಾ ಹೌದೆಂದು ತಲೆ ಅಲ್ಲಾಡಿಸಿದೆ.
ಈಗ ನಾನು ಧಾರವಾಡದ ಕಾಲೇಜಿಗೆ ಸೇರಿಕೊಂಡಿದ್ದೇನೆ. ಇಲ್ಲಿ ಯಾರೂ ಶಮಾನ ತಂಗಿ ಎಂದು ಕರೆಯುವುದಿಲ್ಲ. ಅಕ್ಕನ ಹೆಸರಿನ ಯಾವ ಕಾಟವೂ ನನಗಿಲ್ಲ. ಹೊಸ ಕಾಲೇಜು. ಹೊಸ ಜಾಗ. ಇಲ್ಲಿ ನನ್ನದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿಕೊಳ್ಳಬೇಕು. ಆದರೆ ಇಲ್ಲಿ ಹಾಸ್ಟೆಲ್‌ನಲ್ಲಿ ಇರುವುದರಿಂದ ಟ್ರಾಫಿಕ್‌ಜಾಮಿನಿಂದ ತರಗತಿ ತಪ್ಪಿಸಿಕೊಳ್ಳುವಂತೆಯೂ ಇಲ್ಲ. ಹೇಗೆ ಇರುತ್ತೇನೊ ನೋಡಬೇಕು; ಅಕ್ಕನ ಹೆಸರಿನಿಂದ ಗುರುತಿಸಿಕೊಳ್ಳುವ ಅಭ್ಯಾಸವಾಗಿರುವ ನಾನು ಅಕ್ಕನಿಲ್ಲದೆ ಹೇಗೆ ಇರುತ್ತೇನೋ.
[ಚಿತ್ರಗಳು-ಲೇಖಕಿಯವು]