ಮನಮುಟ್ಟುವ ಪ್ರತಿಮೆಗಳು ತುಂಬಿದ ಈ ಪ್ರಬುದ್ಧ ಕವಿತೆಯನ್ನು ಬರೆದಿರುವಳು ಪುಟಾಣಿ ಹುಡುಗಿ ಮುದ್ದು ತೀರ್ಥಹಳ್ಳಿ. ಹನ್ನೊಂದು ವರ್ಷದ ಈ ಹುಡುಗಿ ಆರನೇ ಕ್ಲಾಸಿನಲ್ಲಿ ಓದುತ್ತಿದ್ದಾಳೆ. ಇತ್ತೀಚೆಗೆ ತಾನೇ ಹಠ ಮಾಡಿ ಇಂಗ್ಲಿಶ್ ಮೀಡಿಯಮ್ ಶಾಲೆ ಬಿಟ್ಟು ಕನ್ನಡ ಮೀಡಿಯಮ್ ಶಾಲೆ ಸೇರಿದ್ದಾಳೆ. ಕವಿತೆಗಳೇ ಅಲ್ಲದೆ ಕತೆ, ಲೇಖನಗಳನ್ನೂ ಬರೆಯುವ ಈ ಅಪಾರ ಪ್ರತಿಭೆಯ ಹುಡುಗಿ ತನ್ನದೇ ಕೈಬರಹದಲ್ಲಿ ‘ಮಂದಾನಿಲ’ ಎಂಬ ದ್ವೈಮಾಸಿಕ ಪತ್ರಿಕೆ ತಂದು ಅದನ್ನು ಆಸಕ್ತರಿಗೆ ಕಳಿಸುತ್ತಾಳೆ.
ಮತ್ತೆ ಬಂತಲ್ಲ ಮಳೆ
ಮುಂಗಾರಿನ ಆರಂಭದ ದಿನಗಳಲಿ
ಆರಂಭ ಶೂರನಂತೆ ಅಬ್ಬರಿಸಿ
ಬತ್ತಿ ಬರಡಾದ ಹೊಲ ಬಾವಿ
ನದಿ ಝರಿ ಕೆರೆಗಳ ಹಲ್ಕಿರಿದು ಅಣಕಿಸಿ
ಬರುವುದೇ ಇಲ್ಲವೆಂಬಂತೆ ಹೋದದ್ದು
ಮತ್ತೆ ಬಂತಲ್ಲ ಮಳೆ
ಹೋಗಿಯೇ ಇರಲಿಲ್ಲವೆಂಬಂತೆ
ಬಂದು ಹನಿದು ಸುರಿದು ಸುರಿದು
ದಿನ ರಾತ್ರಿಗಳ ಲೆಖ್ಖವಿಡದ ಹಠಮಾರಿ
ಅಪವಾದವೆಂಬಂತೆ ಹಳು ಕೊಟ್ಟು
ಮಕ್ಕಳು ಶಾಲೆಗೆ ಹೊರಟಾಗಲೇ
ಬಾಣಂತಿ ಕೂಸಿನ ಬಟ್ಟೆ
ಒಣಗಿಸುವಾಗಲೇ
ಮತ್ತೆ ಬಂತಲ್ಲ ಮಳೆ
ಬಂದದ್ದು ಮತ್ತೆ ನಿಲ್ಲಲಿಲ್ಲ
ದಿಕ್ಕು ತಪ್ಪಿ ಹರಿದವು ನದಿ ತೊರೆ ಎಲ್ಲ
ಈ ಪರಿಯ ಹಪಹಪಿ
ಭೂಮಿಗೂ ಇರಲಿಲ್ಲ
ಭೂಮಿಯ ಮೇಲಿನ ಯಾವ
ರೈತನಿಗೂ ಇರಲಿಲ್ಲ.
ಮನೆ ಮಠಗಳಿಗೆಲ್ಲಾ ನೀರು ನುಗ್ಗಿ
ವನರಾಶಿ ಬುಡ ಮುರಿದು ನೆಲ ಅಪ್ಪಿ
ಜನದನಗಳು ನೀರಿಗೆ ಹಾರವಾದದ್ದೇ
ಮನತಣಿದು ಪ್ರಸನ್ನವಾದದ್ದು
ರೈತ ನಾಟಿಗೆ ಗದ್ದೆಗಳಲಿ ನೀರಿಗಿಳಿಯುವುದ
ಕಾಯುವ ಹೊತ್ತು
ಬಾಲಕನ ಶವವ ನೀರಿಂದ
ಮೇಲೆಳೆಯುವ ಹೊತ್ತು
ನೀರು ತುಂಬಿದ ಮನೆಗಳಲಿ
ಬಟ್ಟೆ ಪಾತ್ರೆ ತಡಕಾಡುವ ಹೊತ್ತು
ಸೊಂಟಮಟ್ಟ ನೀರಿನಲ್ಲಿ ನಿಂತು
ಬೀಳುವ ಮಾಡಿಗೆ
ಊರುಗೋಲು ನೆಡುವ ಹೊತ್ತು
ಹೊತ್ತು ನೋಡಿಯೇ
ಮತ್ತೆ ಬಂತಲ್ಲ ಮಳೆ!
-ಮುದ್ದು ತೀರ್ಥಹಳ್ಳಿ