ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಮಣ್ಣ ಇಟ್ಟಿಗೆ ಕೊಳ್ಳಿರೋ: ವಸ್ತಾರೆ ಬರೆಯುವ ಪಟ್ಟಣಪುರಾಣ    
ನಾಗರಾಜ ವಸ್ತಾರೆ
ಮಂಗಳವಾರ, 9 ಫೆಬ್ರವರಿ 2010 (04:48 IST)
ನಾವು ಗೋಡೆಯ ಇಟ್ಟಿಗೆ....

ನಾವು ಗೋಡೆಯ ಇಟ್ಟಿಗೆ
ನಮ್ಮನಿಡಿ ನಿಮ್ಮೊಟ್ಟಿಗೆ...
 
ಎಂದೋ ಏನೋ, ಪದ್ಯವೆಂದು ಸುರು ಹಚ್ಚಿದ ಈ ಸಾಲುಗಳು ನನ್ನ ಹಳೆಯ ನೋಟ್ಬುಕ್ನಲ್ಲಿ ಈಚೆಗೆ ಸಿಕ್ಕಿದವು. ಯಾವಾಗ ಬರೆದೆನೋ ನೆನಪಿಲ್ಲ. ಏಕೆ ಮುಂದುವರೆಸಲಿಲ್ಲವೆಂಬುದೂ ಗೊತ್ತಿಲ್ಲ. ಆದರೆ ಹುಟ್ಟಿದಾಗಿನಿಂದ ಈವರೆಗೆ ನೋಡಿ ಗೊತ್ತಿರುವ- ಒಂಭತ್ತಿಂಚು ಉದ್ದ, ನಾಕೂವರೆಯಿಂಚು ಅಗಲ, ಮೂರಿಂಚು ಎತ್ತರದ ಈ ಕೆಂಗಪ್ಪು ಘನವನ್ನು ಸಮಕಾಲೀನ ನಾಗರಿಕತೆ ಈ ಮುಂದೆ ಮರೆತುಬಿಡಬಹುದೇನೋ ಎನ್ನುವ ಸಣ್ಣ ಕಳವಳ ನನ್ನನ್ನು ಈಗೀಗ ಕಾಡುತ್ತಿದೆ. ಕಡೆಗೋಲು, ರುಬ್ಬುಗಲ್ಲು, ಮಣ್ಣೊಲೆಗಳಿಗೆ ಈಗಾಗಲೇ ಗತಿ ಕಾಣಿಸಿರುವ ನಾವು ಈ ಸುಟ್ಟ ಮಣ್ಣಂಗಟ್ಟಿಗೂ ಮೋಕ್ಷ ಕಾಣಿಸಲಿಕ್ಕಿರುವುದು ಬಹುದೂರದ ಮಾತೇನಲ್ಲ. ನಮ್ಮ ಕಾಲದ ಎಲ್ಲ ಕುಟಿಲ ಕುಮ್ಮಕ್ಕುಗಳಿಗೆ ಅನಿವಾರ್ಯ ಶರಣು ಎನ್ನುತ್ತ ಈ ಕುರಿತು ಕೆಲವು ಮಾತು.
 
ತನ್ನೊಳಗೆ ಸುರುವಿಕೊಳ್ಳುತ್ತಿರುವ ಕಾಂಕ್ರೀಟುದ್ರವ್ಯದಿಂದಲಷ್ಟೇ ದಿನೇದಿನೇ ಘನವೆನಿಸಿಕೊಳ್ಳುತ್ತಿರುವ ಊರು ಈಚೆಗೆ ಇಟ್ಟಿಗೆಯನ್ನೇ ಮರೆತಂತಿದೆ. ಕೆರೆಗಳನ್ನು ಸ್ವಾಹಾಗೈದು ಬೆಳೆಯುತ್ತಿರುವ ಈ `ನಾಗರಿಕ'ತೆಗೆ ಮಣ್ಣಿನ ನೇರ ಹಂಗೀಗ ಕಡಿದುಹೋದಂತಿದೆ. ಇಲ್ಲಿನ ಕೆರೆದಂಡೆಗಳ ಜಿಗುಟು ಮೆಕ್ಕಲು ಎಲ್ಲಿದೆ? ಸುಡುವ ಇಟ್ಟಿಗೆಗೂಡುಗಳು ಎಲ್ಲಿವೆ? ಈ ಊರಿನ ಒಟ್ಟು ವಸ್ತುವಿನಲ್ಲಿ ಬೆಂದ ಮಣ್ಣಿನ ಕೆಂಪು ಮೆಲ್ಲಗೆ ಕಂದುಕೊಂಡಿದೆ. ಸಿಮೆಂಟಿನ ಬರಡು ಬೂದಿಗೆಡೆಗೊಟ್ಟು ಸುಮ್ಮಗೆ ಸೊರಗಿದೆ.   ಮಣ್ಣ ಇಟ್ಟಿಗೆಯ ಮಹಾಗೋಡೆ
 
ಇಟ್ಟಿಗೆಯ ಒಟ್ಟು ರಾಶಿ ನೋಡಿ, ಸುರುವಿದರೆ ರಾಶಿ. ಜೋಡಣೆಯಿಟ್ಟರೆ ಘಟ್ಟದ ಮೇಲೆ ಘಟ್ಟ. ಒಂದು ನೇರದಲ್ಲಿ, ತಾಟು ಪಾಟೆನ್ನುತ್ತ- ಒಂದು ಉದ್ದಕ್ಕೆ ಎರಡು ಅಗಲ, ಒಂದು ತಾಟಿನ ನಡೂ ಮೇಲೆ ಎರಡು ಪಾಟುಗಳಂತೆ ಇಟ್ಟರೆ ಒಂಭತ್ತು ಅಂಗುಲದ ಗೋಡೆ. ಅದೇ ನೇರಕ್ಕೆ ಭೂಮಿಯನ್ನೇ ಸುತ್ತುವರೆದರೆ ಒಂದು ಸಮಭಾಜಕ ವೃತ್ತ. ಒಟ್ಟಿನಲ್ಲಿ ಇಟ್ಟಿಗೆಯೆಂದರೆ ಕಟ್ಟಡ. ಮನಸ್ಸಿದ್ದಲ್ಲಿ ಕಟ್ಟಬಹುದು ಮನೆ, ಹಲವು ಮನಸು. ಮನಸ್ತಾಪವಿದ್ದಲ್ಲಿ ಮನಸುಗಳ ನಡುವೆ ಗೋಡೆ. ಚಂದ್ರದಿಂದ ಕಾಣಿಸುವ ಒಂದೇ ಒಂದು ಮನುಷ್ಯಕೃತಿ ಚೀನಾದ ಮಹಾಭಿತ್ತಿ- ದಿ ಗ್ರೇಟ್ ವಾಲ್ ಆಫ್ ಚೈನಾ ಸಹ ಮಣ್ಣು, ಇಟ್ಟಿಗೆಯದೆ. ಈಜಿಪ್ಟಿನ ಪಿರಮಿಡ್ಡುಗಳೂ ಇಟ್ಟಿಗೆಯ ಗೋಪುರಗಳೆ. ಜರ್ಮನಿಯನ್ನು ಪೂರ್ವ ಪಶ್ಚಿಮಗಳಲ್ಲಿ ಎರಡಾಗಿ ಬಗೆದಿದ್ದ ಗೋಡೆಯೂ ಇಂತದೇ ಒಂದು. ಹರಪ್ಪ, ಮೊಹೆಂಜೋದಾರೋಗಳಲ್ಲಿ ಸಿಕ್ಕಿರುವ ನೆಲಗಟ್ಟಿನಲ್ಲಿ ಇಟ್ಟಿಗೆಯಿದೆಯಂತೆ. ಒಟ್ಟಿನಲ್ಲಿದು ನಮ್ಮ ಇರುವಿಕೆಗೆ ಸಾಟಿಯಾಗುವ `ಕಟ್ಟು'ಗತೆ, ನಾಗರಿಕತೆಗಳನ್ನು ಕಟ್ಟಿದ ಗಾಥೆ. 
 
ಒಮ್ಮೊಮ್ಮೆ ನಾನೊಂದು ಇಟ್ಟಿಗೆಯಾಗಿದ್ದಿದ್ದರೆ ಅಂತ ಕನಸುತ್ತೇನೆ. `ನಾನು ಇಟ್ಟಿಗೆ. ನೀನೂ ಇಟ್ಟಿಗೆ. ಅವನೂ, ಅವಳೂ, ಅವರೂ... ಸಹ ಅಂತೊಂದು ಊಹೆ. ಈಗ ನಾವೆಲ್ಲ ಸೇರಿ ಒಂದು ಗೋಡೆಯಾಗಬಹುದು. ಈ ಬದಿ, ಆ ಬದಿಯೆಂದು ಎರಡು ಮಗ್ಗುಲು ತಳೆಯಬಹುದು. ಹಾಗೆಯೆ ಸುತ್ತುವರೆದು ಒಂದು ಆವರಣವನ್ನು ಕಟ್ಟಬಹುದು. ಆಗ ಒಳಗೆ, ಹೊರಗೆ ಅಂತೆರಡು ನಿಖರ ದ್ವೈತ. ಗೋಡೆಯಲ್ಲಿ ಕಿಂಡಿ ಕೊರೆದರೆ ಮೇಲೊಂದು ಕಮಾನು. ಒಮ್ಮೊಮ್ಮೆ ಅಲ್ಲಲ್ಲಿ ಕಂಭಗಳಂತೆ ಕಟ್ಟಿಕೊಂಡರೆ ಭವಂತಿಗೆ. ಕಂಭ ಕಂಭಗಳ ನಡುವೆ ಮತ್ತೆ ಮತ್ತೆ ಕಮಾನು. ಇನ್ನು ತಲೆಯ ಮೇಲೊಂದು ಸೂರಿನ ಕನಸೆ? ಕೂಡಲೇ ಕೂಡಿ ನಾವಾದೇವು ಗುಂಭ! ನೋಡಿ, ಹುಲು ಇಟ್ಟಿಗೆಗಳು ನಾವು- ಹೀಗೆ ಆದೇವು ಏನೂ!! ಅದೂ ಕಾಂಕ್ರೀಟಿನ ಹಂಗಿಲ್ಲದೆ. ಏನೂ ಆಗದಿದ್ದಲ್ಲಿ ಕೊನೆಗೆ ಅನಾರ್ಕಲಿಯನ್ನು ಸುತ್ತುವರೆಯುವ ಹಾಗೊಂದು ಸಜೀವ ಗೋರಿ. ಇಲ್ಲವೆ ಪುಣ್ಯಪುರುಷರ ಬಳಿಕ ಅವರ ಪಾರ್ಥಿವದ ಸುತ್ತಲೊಂದು ಗದ್ದುಗೆ... ನಮಗೆ ಗೊತ್ತಿದೆ, ಬಿಡಿ ಬಿಡಿಗಳು ನಾವು ಸೇರಿದರೊಂದು ಇಡಿ. ಪದ ಪದಗ್ ಸೇರಿ ಮಹಾಕಾವ್ಯವಾಗುವ ಹಾಗೆ.
 
`ಅಲ್ಲವೆ ಮತ್ತೆ? ರೋಂ ನಗರದ ಕೊಲೊಸಿಯಂ ಆದ್ದದ್ದೇ ಹೀಗೆ. ಈಜಿಪ್ಟಿನ ಪಿರಮಿಡ್ಡುಗಳು ಆದದ್ದೂ ಹೀಗೆಯೆ. ಇವುಗಳಾದ ಮೂರು ಸಾವಿರ ಸುಮಾರು ಕಾಲದ ಬಳಿಕ ಬಿಜಾಪುರದ ಗೋಳಗುಮ್ಮಟವಾಗಿದ್ದು ಕೂಡ ಹೀಗೆಯೆ. ಗುಂಬಜಿನ ನೇರ ಕೆಳಗೆ ಒಂದು ಚಿಟಿಕೆಯ ಸದ್ದೂ ಮರುಕಳಿಸಿ ಪಿಸುಮಾತಿನ ಮೊಗಸಾಲೆಯನ್ನು ಕಟ್ಟಿದ್ದೂ ಹೀಗೆಯೇ. ಇನ್ನು ಗುಡಿ ಗೋಪುರಗಳ ಮೇಲಿನ ಶಿಖರಗಳು, ವಿಮಾನಗಳು? ಗಾರೆಯೊಟ್ಟಿಗೆ ಬೆರೆತು ಎಷ್ಟು ಎತ್ತರವನ್ನು ಕಟ್ಟಿಲ್ಲ ನಾವು?! ನಮಗೆ ಏನಾದರೂ ಆಗುವ ವಾಂಛೆ. ನಮ್ಮದು ನಿರಂತರ ಇರವಿನ ದುರಾಸೆಯಲ್ಲ. ಇರುವಷ್ಟೂ ದಿವಸ ಮಹತ್ತಾಗಿರುವ ಒತ್ತಾಸೆ. ಕೆಡಹಿಕೊಂಡರೆ, ಮಳೆಗಾಳಿಗೆ ಸಿಲುಕಿ ಶಿಥಿಲಗೊಂಡರೆ, ಹಾಗೇ ಮುಂದೊಮ್ಮೆ ಉರುಳಿಬಿದ್ದರೆ- ಮಣ್ಣಲ್ಲಿ ಮಣ್ಣಾಗಿ ಹೋಗುವ ಸಣ್ಣತನ. ನಾವು ಅಮರರಾಗಬೇಕಿಲ್ಲ. ನಿಮ್ಮಷ್ಟೇ ಜೈವಿಕ ನಾವು... ನಾವು ಗೋಡೆಯ ಇಟ್ಟಿಗೆ; ನಮ್ಮನಿಡಿ ನಿಮ್ಮೊಟ್ಟಿಗೆ...'
 
ನನ್ನದೊಂದು ಸಣ್ಣ ಮೌನ ಸ್ವಗತವನ್ನು ಸದ್ದುಗದ್ದಲದ ಕಾಂಕ್ರೀಟು ಗಟ್ಟಿ ಎಷ್ಟು ನಿರ್ದಾಕ್ಷಿಣ್ಯ ಸೀಳಿಬಿಟ್ಟಿತು ನೋಡಿ. ಇಟ್ಟಿಗೆಯ ಉಗಮವಾದ ಎಷ್ಟೋ ಸಾವಿರ ವರ್ಷಗಳ ಬಳಿಕ ನಾವು ಇವೊತ್ತು ಸಿಮೆಂಟು ಅಂತನ್ನುವ ಕಳಪೆ ಅಂಟೊಂದು ಹುಟ್ಟಿಕೊಂಡಿತು. ಈಗ್ಗೆ ನೂರು ವರ್ಷಗಳ ಹಿಂದೆ. ಆಧುನಿಕ ಆವಿಷ್ಕಾರಗಳ ಹೊಸಗಾಳಿ ಸಿಮೆಂಟಿನ ಎಷ್ಟೆಲ್ಲ ಸಾಧ್ಯತೆಗಳನ್ನು ಮೆರೆದರೂ ಅದೊಂದು ದುಂದೇ ದುಂದಿನ ಅಗ್ಗದ ಗೋಂದು ಅಷ್ಟೆ. ನಮ್ಮ ನಮ್ಮ ಜೀವಿತಗಳನ್ನೂ ಮೀರಿದ ಅಮರತ್ವವನ್ನು ಬಡಬಡಿಸುವ ಬಡಾಯಿ ಅದರದ್ದು. ಕಲ್ಲು ಚೂರು, ಮರಳಿನ ಬೆರಕೆಯೊಟ್ಟಿಗೆ ಕಾಂಕ್ರೀಟೆಂದು ಕರೆಸಿಕೊಳ್ಳುವ ಈ ಸಿಮೆಂಟಿಗೊ- ಹಸಿರು, ಒಸರನ್ನು ನುಂಗುವ ಬೆಂಕಿಬಾಯಿ. ಕೆಡಹಿದರೆ ಕಟ್ಟುವೆವು ನಾವುಅವಶೇಷ. ಅದರ ಶೇಷವೂ ಅಮರ. ಅದು ಬಿದ್ದಿದ್ದಲ್ಲಿ ಹಸಿರು ಚಿಗುರುವುದಿರಲಿ,  ನೆಲದೊಳಗಿನ ನೀರೂ ಇಂಗಿಹೋದೀತು.
 
ಸುಮಾರು ಮೂವತ್ತು ವರ್ಷಗಳಿಂದೀಚೆಗೆ ಸಿಮೆಂಟು ಇಂಜಿನಿಯರಿಕೆ ಇನ್ನೊಂದು ಹುನ್ನಾರ ನಡೆಸಿದೆ. ಸಿಮೆಂಟನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಕಲ್ಲಿನ ಹುಡಿ ಮತ್ತು ನೀರಿನೊಟ್ಟಿಗೆ ಬೆರೆಸಿ ಇಟ್ಟಿಗೆಗಿಂತ ಐದು ಪಟ್ಟು ದೊಡ್ಡದಾದ ಅಚ್ಚು ತೆಗೆಯುತ್ತಿದೆ ಮತ್ತು ಅದನ್ನು ಕಾಂಕ್ರೀಟು ಬ್ಲಾಕೆಂದು ಹೆಸರಿಸಿ, ಇಟ್ಟಿಗೆಗಿಂತ ಹೆಚ್ಚು ಸಬಲವೆಂದು ಮಾರಲಾಗುತ್ತಿದೆ. ಕಟ್ಟಡದ ದ್ರವ್ಯದಲ್ಲಿ ಗೋಡೆಯ ವಸ್ತುವನ್ನು ಕಡಿಮೆಗೊಳಿಸುವುದು ಈ ಕಾಂಕ್ರೀಟು ತಂತ್ರಜ್ಞಾನದ ಮಾರಾಟ ಸೂತ್ರ. ಜೊತೆಗೆ ಇಟ್ಟಿಗೆಗಿಂತ ಹೆಚ್ಚು ಬಾಳಿಕೆ ಅಂತ ಬೀಗುವುದು ಬೇರೆ. ಹೊಸ ಊರು ಎಗ್ಗಿಲ್ಲದೆ ತನ್ನೊಳಗೆಲ್ಲೆಲ್ಲೂ ಇದನ್ನೇ ಅಳವಡಿಸಿಕೊಳ್ಳುತ್ತಿದೆ. ಮುಗಿಲು ಮುಟ್ಟಿ ಹಬ್ಬುತ್ತಿರುವ ಹೊಸ ಊರಿಗೆ ಮಾತ್ರ, ಯಾಕೋ, ಈ ಕಾಂಕ್ರೀಟಿನ ಬಗ್ಗೆ ಉದಾಸವಿದ್ದಂತಿಲ್ಲ. ಗೋಡೆಯ ದಪ್ಪಕ್ಕೀಗ ಆರೇ ಅಂಗುಲಗಳ ತೆಳುಮೆ. ಒಂದು ಕಾಲದಲ್ಲಿ ಗೋಡೆ ಕಡಿಮೆಯೆಂದರೆ ಎರಡು ಅಡಿಗಳ ದಪ್ಪವಿರುತ್ತಿತ್ತು. ಕಾಂಕ್ರೀಟು ತಾರಸಿ ಬಂದಾಗ ಅದು ದಪ್ಪದಲ್ಲಿ ಕುಗ್ಗಿ ಹದಿನೈದು ಇಂಚಾಯಿತು. ಈಚೀಚೆಗೆ ಇನ್ನಷ್ಟು ತೆಳುಗೊಂಡು ಒಂಭತ್ತಿಂಚಾಗಿತ್ತು. ಈಗಲೋ ಕಾಂಕ್ರೀಟಿನ ಬ್ಲಾಕುಗಳು ಕಟ್ಟುವ ಬರೇ ಆರು, ಇಲ್ಲವೇ, ನಾಲ್ಕು ಇಂಚುಗಳ ಭರಾಟೆ. ಒಮ್ಮೊಮ್ಮೆ ಗೋಡೆಯೇ ಇಲ್ಲದೆ ಮುಚ್ಚಿಗೆಗೆ ಬರೇ ಗಾಜು ಹಾಳೆಯ ಹರಹು!
 
ಹೀಗೆ ಬೊಜ್ಜು ಕಳೆದುಕೊಂಡ ನಮ್ಮನ್ನು ಸದಾ ಸುತ್ತುವರೆಯುವ ಗೋಡೆಗಳು ಗಳಿಸಿದ್ದು ಕೆಲವು, ಕಳೆದುಕೊಂಡಿದ್ದು ಸಾಕಷ್ಟು...
 
ಇವೊತ್ತು ಗೋಡೆಗಳನ್ನು ಕಟ್ಟುವುದು ಬರೇ ಮುಚ್ಚುಮರೆಗಷ್ಟೇ. ಅವು ತಂತಾವೇ ಬಲಶಾಲಿಯಲ್ಲ. ಸೂರಿನ ಭಾರವನ್ನವು ಹೊರುವುದಿಲ್ಲ. ಇನ್ನು ನಮ್ಮ ಸೂರು, ಮಹಡಿಗಳು ಇಟ್ಟಲ್ಲಿ ಇದ್ದುಬಿಡಲಿಕ್ಕೆ ಗೋಡೆಗಳ ಹಂಗು ಕಡಿದುಕೊಂಡು ಸಾಕಷ್ಟು ವರ್ಷಗಳೇ ಆಗಿವೆ. ಹಾಗಾದರೆ ಇಟ್ಟಿಗೆಯ ಗೋಡೆ? ಇವೊತ್ತಿನ ಕಟ್ಟಡದಲ್ಲಿ ಅದು ಅನವಶ್ಯ ದುಂದು ಅಷ್ಟೆ. ಅಲ್ಲದೆ ಅದು ತೂಗುವ ವಜ್ಜೆಯೂ ಹೆಚ್ಚು. ಎಂತಲೇ ಇಟ್ಟಿಗೆ ಸಲ್ಲ, ಕಾಂಕ್ರೀಟು ಬ್ಲಾಕುಗಳೇ ಸರಿ ಅಂತ ವ್ಯಾಪಾರದ ವರಸೆ. ಧಾವಂತದ ಊರಿಗೆ ವ್ಯವಧಾನವೆಲ್ಲಿ? ನಾಟಿಯೋ, ಬೀಟಿಯೋ- ತ್ವರೆಯಿದ್ದರೆ ಯಾವುದೂ ಸೈ ಅದರೊಳಗಿನ ಅವಸರಕ್ಕೆ. 
 
ಕೊಂಚ ಯೋಚಿಸಿ. ಮಣ್ಣಿನಿಂದ ಮಾಡಿದ ಇಟ್ಟಿಗೆಯ ಗೋಡೆ ಪೂರ್ತ ನೆಲದ ಹಿಸ್ಸೆಯೇ ಸರಿ. ನೆಲವೇ ಮೇಲೊದಗಿ ಬಂದು ಗೂಡಾದ ಹಾಗೆ ಮನೆ. ತಾನು ನಿಂತ ನೆಲದ ಮಣ್ಣಿಗೆ ಹೆಚ್ಚು ಹೆಚ್ಚು ಸಲ್ಲುವ ಹಾಗೆ. ಇಂತಹ ಗೋಡೆಯ ದಪ್ಪಕ್ಕೂ ತನ್ನದೇ ಒಂದು ಅರ್ಥವಿರುತ್ತಿತ್ತು. ತಾನು ಕಟ್ಟಿದ ಆವರಣವನ್ನು ಚಳಿಯಲ್ಲಿ ಬೆಚ್ಚಗೆ, ಧಗೆಯಲ್ಲಿ ತಣ್ಣಗೆ ಕಾಯುತ್ತಿತ್ತು. ಒಳಗಿನ ಕಾವನ್ನು ಕಾಯ್ದುಕೊಳ್ಳುವ ಥರ್ಮಾಸಿನ ಹಾಗೆ.
 
ಒಮ್ಮೆ ದಪ್ಪನೆ ಗೋಡೆಯಿರುವ ನಿಮ್ಮ ಹಳೆಯ ಮನೆಯನ್ನು ಹೊಕ್ಕು ನೋಡಿ. ಅದರೊಳಗಿನ ತಂಪನ್ನೂ- ಮಂದವಿದ್ದರೂ ಕಡಿಮೆಯೆನಿಸದ, ಸಾಕಷ್ಟು ಒಳಬಂದರೂ ತೀಕ್ಷ್ಣವೆನಿಸದ ಬೆಳಕನ್ನೂ- ಸುಣ್ಣವರೆದು ಮಾಡಿದ ಗಾರೆಯ ನುಣುಪನ್ನೂ- ಸಾವಕಾಶ ಗಮನಿಸಿ. ನಿಂತು ಮನ ತುಂಬಿ ಅನುಭವಿಸಿ. ಹಾಗೇ ಮಿಸುಕಿ ಮೆಲ್ಲಗೆ ಬಾಗಿಲಿನ ಪಡಿಯಲ್ಲಿ ಕೊಂಚ ನಿಲ್ಲಿ. ಈ ದ್ವಾರದ ಚೌಕಕ್ಕೂ ತನ್ನದೆ ಆಯಾಮವಿದೆಯಲ್ಲವೆ? ಬಾಗಿಲಿನ ಸುತ್ತಲಿನ ಗೋಡೆಯ ಟೊಳ್ಳಿನಲ್ಲಿ ನೀವು ಹುದುಗಿಬಿಡಬಹುದಷ್ಟೆ? ಈಗ ಕಿಟಕಿಯ ಪಡಿಗೆ ಬನ್ನಿ. ಅಲ್ಲಿ ನೀವು ಆರಾಮ ಕೂರಬಹುದಲ್ಲವೆ? ಬೇಸರದ ಸಂಜೆಯಲ್ಲಿ ಒಮ್ಮೊಮ್ಮೆ ಕೊಲೋಸಿಯಂ ಮತ್ತು ಚಂದ್ರದುಗುಡ ಬಿಕ್ಕಬಹುದು. ಹಗಲು ಮರೆಯಾಗುವುದನ್ನೂ, ಸಂಜೆ ಕಪ್ಪಾಗುವುದನ್ನೂ ಕಾಲದ ಬೊಗಸೆಯೊಳಕ್ಕಿಳಿದು ಆಸ್ವಾದಿಸಬಹುದು. ಓ ಅದೋ! ಅಲ್ಲಿ ತಾನೇ ನೀವು ಚಿಕ್ಕಂದಿನಲ್ಲಿ ಬೆಕ್ಕಿನ ಮರಿ ಹಿಡಿದು ಮಡಿಲಿಗೆ ಕಟ್ಟಿಕೊಂಡು ಅದರ ಕಣ್ಣು ದಿಟ್ಟಿಸುತ್ತ ಕಳೆದುಹೋದದ್ದು? ಕಣ್ಣಾಮುಚ್ಚಾಲೆಯ ನಡುವೆ ಈ ಕದದ ಹಿಂದಷ್ಟೇ ನಿಮ್ಮ ತಂಗಚ್ಚಿ ಅಡಗಿ ನಿಲ್ಲುತ್ತಿದ್ದುದು? ಅದೋ! ಆ ಗವಾಕ್ಷಿಯ ಮೇಲೆ ಅವೆಷ್ಟು ಪಾರಿವಾಳಗಳು ಗುಟುರಿನ ಕತೆ ಹೇಳಿದ್ದವು? ಒಮ್ಮೆ ಅಣ್ಣಯ್ಯ ಅಲ್ಲಿದ್ದ ಹಕ್ಕಿ ಹಿಡಿಯಲು ಹೋಗಿ ಆಯ ತಪ್ಪಿ ಇದೇ ಬಡುವಿಗೆ ತಾನೇ- ನೀವು ಅಪ್ಪಯ್ಯನನ್ನು ಕೂಗುವಷ್ಟು ಹೊತ್ತು ಜೋತುಕೊಂಡಿದ್ದು? ಈ ಮನೆಯಲ್ಲಿನ ಗೋಡೆಗಳೊಟ್ಟಿಗೆ ನೀವು ಅದೆಷ್ಟು ಮುಖಾಮುಖಿ ನಡೆಸಿದ್ದಿರಿ... ಗೋಡೆಗೆ ಮುಖವೊಡ್ಡಿ, ಕಣ್ಣುಗಳ ಬದಿ ಮುಚ್ಚಿ ಗುಟ್ಟು ಹೇಳಿದ್ದಿರಿ. ಇಲ್ಲಿ ಗೋಡೆಯ ಒಂದೊಂದು ತೆರಹೂ ಸಹ ಜಾಗ. ಆಪ್ತತೆಯ ಅನುಸಂಧಾನವನ್ನು ನಿಮ್ಮೊಟ್ಟಿಗೆ ಕಟ್ಟುತ್ತಿದ್ದ ಮುಕ್ತ ಕೋಶ. ಕಿಟಕಿ, ಬಾಗಿಲುಗಳು ಗೋಡೆಯೊಳಗೆ ಕೊರೆದ ಕಿಂಡಿಗಳೊಳಗೊಂದು ಮುಚ್ಚಿಗೆ. ಕತೆಯೊಳಗಿನ ಕತೆಯಿದ್ದ ಹಾಗೆ. ಒಂದು ಬಾಗಿಲಿನಿಂದ ಮತ್ತೊಂದನ್ನು ದಾಟುವುದೆಂದರೆ ಕತೆಯಿಂದ ಕತೆಗೆ ಸರಿದ ಲೆಕ್ಕ. ಹೊರಗಿನಿಂದ ನಡುಮನೆಗೆ ಬರುವಲ್ಲಿ ಎಷ್ಟು ಗೋಡೆಗಳನ್ನು ದಾಟಿ ಅಷ್ಟೇ ಜಾಗಗಳನ್ನು ಕ್ರಮಿಸಿ ಬರಬೇಕಷ್ಟೆ. ಇದು ಅನುದ್ದೇಶಿತವಾದರೂ ಆ ವಿಳಂಬಕ್ಕೊಂದು ಅರ್ಥವಿತ್ತು. ಒಂದೊಂದು ತಡೆಯಲ್ಲೂ ಕಾಲ ಹೆಪ್ಪಿ ನಿಲ್ಲುತ್ತಿತ್ತು.  
 
ಇಂತ ನವಿರು ಮೆಮೋರಬಿಲಿಯಾವನ್ನು ನೀವು ಈಗಷ್ಟೆ ಖರೀದಿಸಿದ ಹೊಸ ಫ್ಲ್ಯಾಟಿನ ಸಪೂರ ಗೋಡೆಗಳು ಕಟ್ಟುತ್ತವೆಯೆ? ಇದನ್ನು ನಿಮ್ಮ ಮಕ್ಕಳು ಮುಂದೆ ಹೇಳಬೇಕಷ್ಟೆ. ಏಕೆಂದರೆ ಇಲ್ಲಿ ಹಾಲಿನಿಂದ ರೂಮಿಗೆ ಹೋಗುವುದೆಂದರೆ ಬರೇ ಆರಿಂಚಿನಷ್ಟು ಕ್ರಮಣ. ಇಲ್ಲಿ ಎಡವಿದರೆ ಅಲ್ಲಿ. ಒಳಗೆ ಮತ್ತು ಹೊರಗೆ ಅನ್ನುವುದರ ನಡುವೆ ಕೆಲವು ಹೆಜ್ಜೆಗಳ ತ್ವರೆಯ ನಡಿಗೆ.
 
ಈ ನಾಗರಿಕತೆಯ ಕಾಂಕ್ರೀಟು ಗೂಡುಗಳಲ್ಲಿ ಜೀವ ಬಸಿದುಕೊಳ್ಳುತ್ತಿರುವವರೆ, ಇದೋ ಕೊಳ್ಳಿ- ಇದು ಮಣ್ಣಿನ ಇಟ್ಟಿಗೆ. ಇಟ್ಟುಕೊಳ್ಳಿ ನಿಮ್ಮೊಟ್ಟಿಗೆ. ನಿಮ್ಮ ಹಜಾರದ ಷೋಕೇಸಿನಲ್ಲಾದರೂ ಸರಿ. ಮುಂದೆ ಇದೊಂದು ಪುರಾತತ್ತ್ವ ವಸ್ತುವಾಗಲಿಕ್ಕಿದೆ. ಯಾತಕ್ಕೂ ಇದರ ಬಗ್ಗೆ ಒಂದಿಷ್ಟು ಭಕ್ತಿಯಾದರೂ ಇರಲಿ. ಹೇಳುತ್ತಾರೆ, ಇದು ಪಾಂಡುರಂಗ ಪೀಠವಂತೆ. ಪಂಢರಾಪುರದಲ್ಲಿ ಸೊಂಟಕ್ಕೆ ಕೈಯಿಟ್ಟುಕೊಂಡು ಪರಮಾತ್ಮ ನಿಂತಿರುವುದೇ ಇದರ ಮೇಲಂತೆ!!

[ ಚಿತ್ರಗಳು: ಸಂಗ್ರಹದಿಂದ]

 

ಪುಟದ ಮೊದಲಿಗೆ
 
Votes:  11     Rating: 3.91    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು