ಈ ಇಪ್ಪತ್ತನೇ ತಾರೀಖು ಶನಿವಾರ ಬಂತೆಂದರೆ ಯಾವ ಕಾರಣಕ್ಕೂ ತಪ್ಪಿಸದೇ ಅಂದೆಂದೋ ನನಗೆ ಸಾಲ ಕೊಟ್ಟಿದ್ದ ಬ್ಯಾಂಕಿನ ಬಾಗಿಲು ತಲುಪಬೇಕು. ಸಾಲ ರಹಿತ ಸಂಬಂಧವೊಂದನ್ನು ಮುಂದುವರೆಸಬೇಕು, ಅದಕ್ಕಾಗಿ ನೀನು ಬರಲೇಬೇಕು ಎಂಬ ಸುದ್ದಿ ಒಳಪೆಟ್ಟಿಗೆಯಲ್ಲಿ ಬಿದ್ದಿದೆ. ಸುದ್ದಿ ನೋಡಿದ್ದೇ ಆದ ಒಳಪೆಟ್ಟಿನ ಫಲವಾಗಿ ಈ ಸಮಾಚಾರ. ಒಪ್ಪಿಸಿಕೊಳ್ಳಿ:
ವಾರದ ದಿನಗಳು ಹಾಗೂ ವಾರಾಂತ್ಯದ ದಿನಗಳೆಂದು ನಾವು ನಾವೇ ಬೇರೆ ಮಾಡಿಕೊಂಡಿರುವ ಒಂದೇ ವಾರದ ಎಲ್ಲಾ ದಿನಗಳ ಮೇಲೆ ಆಣೆಯಿಟ್ಟು ಹೇಳಬಹುದು- ವಯಕ್ತಿಕವಾಗಿ ಕೊನೆಯ ಎರಡು ದಿನಗಳು ನಮಗೆ ಹೆಚ್ಚು ಇಷ್ಟ- ಆ ಒಂದು ಒಂದೂವರೆ ಎರಡು ದಿನಗಳಲ್ಲಿ ಮಾಡಬೇಕಾದದ್ದು ಮಾಡಿದರೂ, ಮಾಡದಿದ್ದರೂ, ಮಾಡಬಾರದ್ದು ಮಾಡಿದರೂ, ಅಥವಾ ಏನೆಂದರೇನೂ ಮಾಡದಿದ್ದರೂ. ಅವರವರ ಅವಶ್ಯಕತೆ, ಅನವಶ್ಯಕತೆಗಳಿಗನುಗುಣವಾಗಿ ಅವೆರಡು ದಿನಗಳನ್ನು 'ಸ್ವತಂತ್ರ' ಎಂದು ಘೋಷಿಸಲಾಗಿದೆ. ಹಾಗೂ ಅವುಗಳ ಪಾಡಿಗೆ ಅವನ್ನು ಬಿಡಲಾಗಿದೆ!!!
ಬಾಕಿ ಐದು ದಿನಗಳು ಮಾತ್ರ ಪರತಂತ್ರ. ಆ ಐದು ದಿನಗಳಲ್ಲಿ ಪರವಿದೆ. ವಿರೋಧವಿದೆ. ತಂತ್ರವಿದೆ, ತಂತ್ರಾಂಶವಿದೆ. ತಂತ್ರಕ್ಕೊಂದು ಪ್ರತಿಮಂತ್ರವಿದೆ. 'ಇದೆ' ಹಾಗೂ 'ಇಲ್ಲ'ಗಳ ನಡುವಿನ ಈ ಐದು ದಿನಗಳಲ್ಲಿ ಚಿಂತೆಯಿದೆ, ಚಿಂತನೆಯಿದೆ. ಮನಸುಗಳ ಹೊಯ್ದಾಟವಿದೆ. ಅದರಾಚೆ ಈಚೆ ಎಲ್ಲೋ ಹೊದೆದಾಟವಿದೆ. ನಡುವಲ್ಲೆಲ್ಲೋ ಹಣಿದುಹಾಕುವ ಸೋಲಿದೆ. ಅದರಾಚೆಗೇ ಕೈಹಿಡಿಯುವ ಗೆಲುವಿದೆ. ಹತ್ತಿದಷ್ಟೂ ಮುಗಿಯದ ಏಣಿಯಿದೆ. ತಲೆಕೊಟ್ಟರೆ ಆವರಿಸಿಕೊಳ್ಳುವ ನಿದ್ದೆಯಿದೆ. ಹಾಗೂ ಒಮ್ಮೊಮ್ಮೆ ಅದೂ ಇಲ್ಲ...
ಒಟ್ಟಿನಲ್ಲಿ ವಾರ-ವಾರವಾಗಿ ಆಗುವ ತಿಂಗಳಿನಲ್ಲಿ ಎಲ್ಲ ಇದೆ ಆದರೂ ಏನೂ ಇಲ್ಲ ಎಂಬ ಸ್ಥಿತಿ. ಹಾಗಾಗಿ ವಾರಂತ್ಯವನ್ನು ಕಾಣುವ ಗತಿ!!
ಅಲ್ಲಿಗೆ ವಾರಾಂತ್ಯ ವೀಕೆಂಡ್ ಆಗುತ್ತದೆ....
ಆದೇಶ ಸಂಧಿಯಾಗುವ ಸಿಮೆಂಟ್ಕಾಡಿನಲ್ಲಿ (ಸಿಮೆಂಟು + ಕಾಡು >> ಸಿಮೆಂಟ್ಕಾಡು) ಬೆಳೆದವನಿಗೆ ಮುಳ್ಳುಹಿಂಡು, ಕಾಂಗ್ರೆಸ್ (ಪಾರ್ಥೇನಿಯಂ) ತುಂಬಿದ ಬೋಳು ಬೆಟ್ಟವೂ 'ವ್ಹಾ..', ಬಿಸಿಲ ನಾಡಿನವನಿಗೆ ಸಮುದ್ರ ಅದೆಷ್ಟು 'ನೀಲಿ ನೀಲಿ', ಹಸಿರು ಹಸಿರು ಗದ್ದೆ 'How Nice..' ನಿಜ, ಆ ಜಾಗಗಳೆಲ್ಲ ಹಾಗೇ 'Naturally Beautiful'.
ಇಲ್ಲಿದ್ದು ಏನು ಮಾಡುವುದಿದೆ? ಅಲ್ಲಿಗಾದರೂ ಹೋಗೋಣವೆಂಬ ಯೋಚನೆ ಬರುತ್ತದೆ. ಜನರಿಂದ ದೂರ ಹೋಗುವ ದಾರಿ ಕಾಣಿಸುತ್ತದೆ. ದಾರಿಯ ಕೊನೆಯಲ್ಲೊಂದು ಸುಂದರ ಊರು. ಅಲ್ಲೇ ಉಳಿದುಬಿಡೋಣ ಎಂಬ ವಿಚಾರ ಸುಳಿಯುತ್ತದೆ. ಅದರಾಚೆಯೇ ಸೋಮವಾರ ಬರುವುದರಿಂದ, ಖಾಯಂ ಯೋಚನೆ ಬಿಟ್ಟು ತಾತ್ಕಾಲಿಕವಾದ ಯೋಚನೆಗೆ ಮಹತ್ವ ಸಿಗುತ್ತದೆ. ವಾರಾಂತ್ಯದ ಸುಖ ಕಣ್ಣಿಗೆ ಕಟ್ಟುತ್ತದೆ. ದೂರದ ಬೆಟ್ಟ ಹತ್ತಿರಕ್ಕೆ ಹೋದರೂ ಸುಂದರ ಹೌದು. ಆದರೆ ಅಲ್ಲಿರಲಾಗುವುದಿಲ್ಲ. ಹೊರಟವನು ಹೊರಟಲ್ಲಿಗೇ ಬರಬೇಕೆಂಬ ವಿಷಯಕ್ಕೆ ಬಹಳಷ್ಟು ಮಹತ್ವವಿದೆ. ಹಾಗೆ ಹೋಗೋಣವೆಂಬ ಯೋಚನೆಯ ಫಲ ಪ್ರವಾಸೋದ್ಯಮದ ಬೆಳವಣಿಗೆ. ಬರುವವರ ಗಮನದಲ್ಲಿಟ್ಟುಕೊಂಡು ಅಲ್ಲಿಷ್ಟು ವ್ಯವಸ್ಥೆ. ಅಭಿವೃದ್ಧಿ. Economic Growth.... ಹೇಳಿಕೊಂಡು ಹೋದರೆ ವಾರವೇನು? ವಾರಾಂತ್ಯವೂ ಮುಗಿಯುವ ಸಾಧ್ಯತೆಯಿದೆ.
***
ಅದೊಂದು ಊರು. ಊರು ಅನ್ನುವುದಕ್ಕಿಂತ ಕಾಡು. ಆ ಕಾಡ ನಡುವಲ್ಲೊಂದು ಮನೆ. ದೊಡ್ಡ ಅಂಗಳ, ತಂಪು ಗಾಳಿ, ಎಳೆ ಎಳೆ ಬಿಸಿಲು.. ಬೆಳಗಿನ ಚಾ ಕಾಫಿ ಕುಡಿಯುತ್ತ, ಹರಟೆ ಹೊಡೆಯುತ್ತ ಒಂದೈವತ್ತು ಜನ ನಿಂತಿದ್ದಾರೆ. ಒಬ್ಬೊಬ್ಬರದೂ ಒಂದೊಂದು ಶೈಲಿ. It is Heaven man, I should have come long back... ಅದೂ ಇದು ಎಂಬ ಡೈಲಾಗುಗಳು ಕೇಳಿಸುತ್ತವೆ.
ವಾರಾಂತ್ಯದ ಆರಂಭವೆಂದು ಹೇಳಬೇಕಾದ ಅವಶ್ಯಕತೆಯಿಲ್ಲ ಅಲ್ಲವಾ?
ಬಂದವರಿಗೆ ವಾರಾಂತ್ಯವಾಗಬೇಕು. ಕರೆಸಿಕೊಂಡವರಿಗೆ ಸಾರ್ಥಕ ಭಾವ ದೊರೆಯಬೆಕು. ಬೆಳಗಿನ ತಿಂಡಿ, ಮಧ್ಯಾನ್ಹದ ಊಟ, ಮತ್ತೆ ಬೇಕಾದಾಗೆಲ್ಲ ಬೇಕಾದ ವ್ಯವಸ್ಥೆ, ಮತ್ತೆ ರಾತ್ರಿ ಊಟ.. ಹೀಗೆ ಸಕಲ ವ್ಯವಸ್ಥೆಯೂ ಮಾಡಿಕೊಂಡಿದ್ದಾರೆ. ವ್ಯವಸ್ಥೆಯನ್ನು ಮೀರಿದ ಊರಿದೆ. ಕಾಡಿದೆ.
ಊರು ಕಾಣಿಸಿಕೊಳ್ಳುತ್ತ, ಕಾಡು ಕರೆಸಿಕೊಳ್ಳುತ್ತ, ನೀರು ಮೀಯಿಸಿಕೊಳ್ಳುತ್ತ... ಎರಡು ದಿನ ಯಾವ ಮಹಾ? ಆದರೂ ಅವೆಲ್ಲವುಗಳ ನಡುವೆ ವಿಶೇಷವಿರಬೇಕು. ಆ ವಿಶೇಷವಾಗಿ ಅಲ್ಲೊಂದು ಸಣ್ಣ ಥಿಯೇಟರ್ ವ್ಯವಸ್ಥೆಯಿದೆ. ಬಂದವರಿಗಾಗಿ ಆಯ್ದ ಸಿನೆಮಾ ತೋರಿಸಲಾಗುತ್ತದೆ. ಅವರಿಗಾಗಿಯೇ ಆಯ್ಕೆಮಾಡಿದ ಚಿತ್ರಗಳು.
ಸಿನೆಮಾ ನೋಡುವವರಿಗೆ ಇದ್ದಲ್ಲಿ ವ್ಯವಸ್ಥೆಯಿರಲಿಲ್ಲವಾ ಎಂಬ ಪ್ರಶ್ನೆ ಪ್ರಸ್ತುತವಲ್ಲ ಇಲ್ಲಿ. ಇದು ವಾರಾಂತ್ಯದ ಉತ್ತರ. 
***
ಬಂದವರೆಲ್ಲ ಊರು, ಕಾಡು, ನೀರು, ನಿಶ್ಯಬ್ಧಗಳ ನಡುವೆ ಮಾತು, ಮೌನ, ಚಿತ್ರ, ವೈಚಿತ್ರ್ಯ, ಸಂಗೀತ, ಸಾಹಿತ್ಯ, ನಿರ್ದೇಶನ, ನಿರ್ಮಾಣ... ಹತ್ತು ಹಲವುಗಳ 'ಸಿನೆಮಾ' ನೋಡಿದ್ದಾರೆ. ತೋರಿಸಿದವರಿಗೂ, ನೋಡಿದವರಿಗೂ ಖುಷಿ.
ಕೊನೆಯಲ್ಲೊಂದು ಚರ್ಚೆ.
ಒಂದೇ ವಿಷಯಾಧಾರಿತ ಎರಡು ಸಿನೆಮಾಗಳ ಕುರಿತು ಅಭಿಪ್ರಾಯಗಳು ವಿನಿಮಯವಾಗುತ್ತಿವೆ. ತೌಲನಿಕ ಅಧ್ಯಯನ ನಡೆಯುತ್ತಿದೆ. ಪಾಂಡಿತ್ಯ ಪ್ರದರ್ಶನವಾಗುತ್ತಿದೆ. ಅಹಹಾ, ಹೋ, Yes Yes..ಗಳು ಹರಿದಾಡುತ್ತವೆ. ಚರ್ಚೆಗೀಗ ಕಾವು ಬರಬೇಕು.
ಶೇಕ್ಸ್ ಪಿಯರ್ ನಡುವೆ ಕಾಲಿಡುತ್ತಾನೆ. ಆತನ ಹಿಂದೆ ಕುರಾಸೋವಾ, ಪೊಲಾನ್ ಸ್ಕಿ.. ಜಗತ್ತಿನ ಎಲ್ಲಾ ಶ್ರೇಷ್ಠ ನಿರ್ದೇಶಕರುಗಳನ್ನು ಕಾಡಿದ್ದು ಸಾವು ಹಾಗೂ ಕಾಮ ಎಂಬ ಭಯಂಕರ ಮಾತು ಬೀಳುತ್ತದೆ. ಅಲ್ಲೆ ಪಕ್ಕದಲ್ಲಿದ್ದವ ಪಿಸುಗುಡುತ್ತಾನೆ; ಈ ಸಿನೆಮಾ ಯುದ್ಧಕ್ಕೆ ಸಂಬಂಧಪಟ್ಟಿದ್ದು ನಿಜ ಸರ್ ಆದ್ರೆ ಕಾಮ ಇಲ್ಲ ಇಲ್ಲಿ...
ಘಟಾನುಘಟಿಗಳ ನಡುವಿನ ಚರ್ಚೆ ಹಳಿಹತ್ತಿ, ಹಳಿತಪ್ಪಿ ಮತ್ತೆ ಹಳಿಹತ್ತಿ ಓಡತೊಡಗುತ್ತದೆ. ಸಿನೆಮಾದಲ್ಲಿ ಬಂದ ಯುದ್ಧದ ಸನ್ನಿವೇಶದಂತೆ. ಆದರೆ ಯುದ್ಧಕ್ಯಾವ ಹಳಿ? ಅಲ್ಲಿ ಸಿನೆಮಾ ಯುದ್ಧವಾದರೆ, ಇಲ್ಲಿ ಮಾತಿನ ಯುದ್ಧ. ನಡುವಿನಲ್ಲೊಂದು ಪ್ರಶ್ನೆ ಹೊರಡಬೇಕು ಈಗ. ಚಿತ್ರದಲ್ಲಿ ಬರುವ ಘೋರ ಯುದ್ಧದಲ್ಲೂ ಸಹ ನಿರ್ದೇಶಕ ಸಾವಿರಾರು ಜನರ ನಡುವೆ ಅತಿಯಾದ ವೇಗದಲ್ಲಿ ಓಡುವ ಕಪ್ಪು ಕುದುರೆಯೊಂದನ್ನು ತೋರಿಸುತ್ತಾನೆ ಹಾಗೂ ಯುದ್ಧದಲ್ಲಿ ನಿರತವಾಗಿದ್ದ ಆ ಕುದುರೆ ಲದ್ದಿ ಹಾಕುವುದನ್ನೂ ಸಹ ನೇರವಾಗಿ ತೋರಿಸುತ್ತಾನೆ. ಯಾಕಿರಬಹುದು? ಸೋಲಿನ ಭೀತಿ? ಸಾವಿನ ಹೆದರಿಕೆ? ಮುಂದಾಗುವುದರ ಸೂಚನೆ? ಅಪಶಕುನ?.... 
ಪ್ರಶ್ನೆಗೊಂದು ಪ್ರಶ್ನೆ ಹಾಗೂ ಹಲವು ಉತರಗಳೊಡನೆ ಚರ್ಚೆಗೆ ಬರುತ್ತದೆ ವಿಷಯ. ಐವತ್ತರಲ್ಲಿ ಹತ್ತು ಜನ ಹತ್ತು ಕಾರಣಗಳನ್ನು ನೀಡುತ್ತಾರೆ. ನಿರ್ದೇಶಕನ್ನು ಹೊಗಳುತ್ತಾರೆ. ಕೆಲವರು ತೆಗಳುತ್ತಾರೆ. ಅವರ ನಡುವೆ ಆ ಸನ್ನಿವೇಶವನ್ನು ತಪ್ಪಿಸಿಕೊಂಡ ಕೆಲವರು ಮರುಗುತ್ತಾರೆ. ತಮ್ಮ ಗಮನಕ್ಕೆ ಬಾರದೇ ಹೋಯಿತಲ್ಲ ಎಂದು ಅಚ್ಚರಿಪಡುತ್ತಾರೆ. ಕಣ್ಣು ಕೀಲಿಸಿಕೊಂಡು ನೋಡಿದ ಎಲ್ಲರನ್ನೂ ಮೆಚ್ಚಿ ಹೊಗಳುತ್ತಾರೆ... ಚರ್ಚೆ ಮುಗಿಯುತ್ತದೆ.
ಕೈಕುಲುಕಿ, ಒಬ್ಬರಿಗೊಬ್ಬರು ಪರಸ್ಪರ ಆಲಂಗಿಸಿಕೊಂಡು, ಮಾತೆಂಬ ವರದ ಸಂಪೂರ್ಣ ಪ್ರಯೋಜನ ಪಡೆಯುತ್ತ ತಂತಮ್ಮ ದಾರಿ ಹಿಡಿಯುತ್ತಾರೆ. ಕಣ್ಣಂಚಿನಲ್ಲಿ ಖುಷಿಯ ಹೊಳಪು. ಬೆನ್ನಿಗೇರಿದ ಗಾಳಿಚೀಲದಲ್ಲಿ ವಾರಾಂತ್ಯ ತುಂಬಿಕೊಂಡು, ವಾರದ ದಿನಗಳತ್ತ ಮುಖ ಮಾಡಿದವರ ದಂಡು ಗಮ್ಯದೆಡೆಗೆ ಹೊರಡುತ್ತದೆ. ಅಲ್ಲೂ ಅದೇ ಮಾತು - ಅದೊಂದು ಭಾಗ ತಪ್ಪಿಹೋಯಿತಲ್ಲ.
ಪಕ್ಕದಲ್ಯಾರೋ ಉಸುರುತ್ತಾರೆ - ಬೆಳಗಾದರೆ ಮತ್ತೆ ಅದೇ ಹಾಡು ಅದೇ ರಾಗ.