ಸೆಪ್ಟೆಂಬರ್ ೨೦, ೨೦೧೪
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಕನ್ನಡದ ಜಗನ್ಮೋಹಿನೀ ಹರಿಣೀ: ಬಸವರಾಜು ಬರಹ    
ಬಸವರಾಜು
ಶುಕ್ರವಾರ, 20 ಆಗಸ್ಟ್ 2010 (03:35 IST)
ಹರಿಣಿ

`ನಾನು ಕನ್ನಡ ಚಿತ್ರರಂಗವನ್ನು ಬಿಟ್ಟು ಸುಮಾರು ನಲವತ್ತು ವರ್ಷಗಳ ಮೇಲಾಯಿತು. ಆದರೆ ಈ ಕನ್ನಡ ಜನತೆ ನನ್ನನ್ನು ಇಂದಿಗೂ ನೆನಯುವುದು, ಅಭಿಮಾನ ತೋರುವುದು ಕಂಡಾಗ ಮನಸ್ಸು ತುಂಬಿ ಬರುತ್ತೆ. ನನಗೊಂದೇ ಒಂದು ಆಸೆ- ಈ ನಾಡಿನಲ್ಲಿ, ಈ ಜನಗಳ ನಡುವೆಯೇ ಮತ್ತೆ ಕಲಾವಿದೆಯಾಗಿ ಹುಟ್ಟಬೇಕು, ಬೆಳೀಬೇಕು. ನಿಮ್ಮಿಂದ ಗಳಿಸಿದ ಈ ಅಭಿಮಾನವನ್ನು ಮತ್ತೆ ಗಳಿಸಬೇಕು...'

ಹೀಗೆ ಹೇಳುತ್ತಿದ್ದ ಹಾಗೆ ಹಿರಿಯ ನಟಿ ಹರಿಣಿಯವರ ಗಂಟಲು ಗುಕ್ಕು ಹಿಡಿಯಿತು. ಕಣ್ಣುಗಳು ತುಂಬಿದ ಕೆರೆಗಳಂತೆ ಕಾಣತೊಡಗಿದವು. ಮಾತುಗಳನ್ನು ಕೇಳುತ್ತಿದ್ದ ಜನ ತಮಗರಿವಿಲ್ಲದಂತೆ ಚಪ್ಪಾಳೆ ತಟ್ಟಿದರು. ಚಪ್ಪಾಳೆಯ ಸದ್ದು ಹರಿಣಿಯವರನ್ನು ಭಾವನಾಲೋಕದಿಂದ ಬೇರ್ಪಡಿಸಿ ಸಹಜಸ್ಥಿತಿಗೆ ತಂದಿತ್ತು. 

1951ರಲ್ಲಿ ಶಂಕರ್ ಸಿಂಗ್ ನಿರ್ಮಿಸಿದ `ಜಗನ್ಮೋಹಿನಿ' ಚಿತ್ರದಲ್ಲಿ ಈಜುಡುಗೆ ತೊಟ್ಟು, ಕನ್ನಡ ಚಲನಚಿತ್ರರಂಗದಲ್ಲಿ ಸಂಚಲನವುಂಟು ಮಾಡಿದ, ಅವತ್ತಿನ ಹದಿವಯದವರೆದೆಯ ಡವಗುಟ್ಟಿಸಿದ ಹರಿಣಿಯವರಿಗೆ, ಇಂಥ ಉಡುಗೆ ತೊಟ್ಟು ಮೈ ಮಾಟ ಪ್ರದರ್ಶಿಸಿ ಚಿತ್ರರಂಗದಲ್ಲಿ ಉಳಿಯಬೇಕು, ಬೆಳೆಯಬೇಕು ಎಂಬ ಆಸೆಯೇನೂ ಇರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಸಿನಿಮಾ ತಾರೆಯಾಗಲು ಬೇಕಾದ ತರಬೇತಿಯನ್ನೂ ಪಡೆದಿರಲಿಲ್ಲ. ರಂಗಭೂಮಿಯ ಹಿನ್ನೆಲೆಯೂ ಇರಲಿಲ್ಲ. ಅಚಾನಕ್ಕಾಗಿ ಬಾಲನಟಿಯಾಗಿ ಬಣ್ಣ ಹಚ್ಚಿ ಬಣ್ಣದ ಬದುಕಿಗೆ ಬೆಸೆದುಕೊಂಡಿದ್ದರು. ಹಾಗೆಯೇ ಮಹಾತ್ಮ ಪಿಕ್ಚರ್ಸ್ ರವರ `ಜಗನ್ಮೋಹಿನಿ' ಚಿತ್ರಕ್ಕಾಗಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ಹಿರಿಯರೊಬ್ಬರ ಶಿಫಾರಸ್ಸಿನ ಮೇರೆಗೆ ಶಂಕರ್ ಸಿಂಗ್ ರನ್ನು ಕಂಡಿದ್ದರು. ಹಿರಿಯರು ಹೇಳಿದ್ದಾರಲ್ಲ ಯಾವುದಾದರು ಒಂದು ಸಣ್ಣ ಪಾತ್ರ ಕೊಡೋಣ ಎಂದು, ಹರಿಣಿಯವರನ್ನು ಸ್ಕ್ರೀನ್ ಟೆಸ್ಟ್ ಗೆ ಕರೆದ ಶಂಕರ್ ಸಿಂಗ್, `ನೀನೇ ಯಾಕೆ ಜಗನ್ಮೋಹಿನಿಯಾಗಬಾರದು' ಎಂದರು. ಅಷ್ಟೇ, ಆ ಕ್ಷಣವೇ ಹರಿಣಿ ಹೀರೋಯಿನ್ ಆಗಿದ್ದರು.

`ಹೀರೋಯಿನ್ ಎಂಬ ಪದ ಗೊತ್ತಿತ್ತು, ಅದರ ಅರ್ಥ ಗೊತ್ತಿರಲಿಲ್ಲ. ಮೊದಲ ಚಿತ್ರದಲ್ಲೇ ನಾನು ಹೀರೋಯಿನ್ ಆದೆ. ಖುಷಿಯೋ ಖುಷಿ. ಯಾವ ಡ್ರೆಸ್ ಹಾಕಿಕೊಳ್ಳಲಿಕ್ಕೇಳಿದ್ರೂ ಹೂಂ, ಎಲ್ಲೋಗಿ ಹ್ಯಾಗ್ ಕುಣೀಬೇಕೋ ಹೂಂ, ಅಷ್ಟೊಂದು... ಹೀರೋಯಿನ್ ಎಂಬ ಜಂಭ ಮತ್ತು ಸಂತೋಷ ಎಲ್ಲ ನನಗಿತ್ತು...' ಎಂದ ಹರಿಣಿಯವರು ಅವತ್ತಿನ ಜೋಷನ್ನು, ಅಪ್ರಾಪ್ತ ವಯಸ್ಸಿನ ಅನನುಭವಿ ವರ್ತನೆಯನ್ನು ಈ ಮುಸ್ಸಂಜೆಯ ಹೊತ್ತಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ `ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಕೂತು ಕನವರಿಸುತ್ತಿದ್ದರು.

ಕನ್ನಡ ಚಿತ್ರರಂಗಕ್ಕೆ ಈ ಎಪ್ಪತ್ತೈದು ವರ್ಷಗಳಲ್ಲಿ ಅದೆಷ್ಟೋ ನಟ ನಟಿಯರು ಬಂದುಹೋಗಿದ್ದಾರೆ. ಒಬ್ಬೊಬ್ಬರದು ಒಂದೊಂದು ವಿಭಿನ್ನ ವಿಶಿಷ್ಟ ವ್ಯಕ್ತಿತ್ವವೇ. ಎಲ್ಲರಿಂದಲೂ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೇವೆ ಸಂದಾಯವಾಗಿದೆ. ಚಿತ್ರರಸಿಕರ ಅಭಿಮಾನವನ್ನು ಅವರೂ ಪಡೆದು ಪುನೀತರಾಗಿದ್ದಾರೆ. ಹಾಗೆಯೇ ಹರಿಣಿಯವರೂ ಕೂಡ. ಮೊದಲ ಚಿತ್ರದಲ್ಲಿ ಮೈ ಚಳಿ ಬಿಟ್ಟು ಈಜುಡುಗೆ ತೊಟ್ಟು ಬಿಂದಾಸ್ ಎನ್ನಿಸಿಕೊಂಡರೂ, ಅನುಭವ ಬಂದ ಮೇಲೆ ಅವರು ಹೊರಳಿದ್ದು ಸದಭಿರುಚಿಯ ಚಿತ್ರಗಳತ್ತ. ಎಲ್ಲರೂ ಮೆಚ್ಚುವ ಪಾತ್ರಗಳತ್ತ. ಅದಕ್ಕೆ ಕಾರಣ ಹರಿಣಿಯವರ ಕಲಿಯಬೇಕೆನ್ನಿಸುವ ಅದಮ್ಯ ಉತ್ಸಾಹ. ಉದ್ಯಮದವರೊಂದಿಗೆ ಬೆರೆತು ಅವರಿಂದ ಕಲಿತು, ಅನ್ಯ ದೇಶಗಳ ಸಿನಿಮಾಗಳನ್ನು ನೋಡಿ ಅರಿತು ತಮ್ಮ ನಟನೆಯನ್ನು ರೂಢಿಸಿಕೊಂಡರು. ಅವರ ಸೌಮ್ಯ ಸ್ವಭಾವ ಅದಕ್ಕೆಲ್ಲ ಅನುವು ಮಾಡಿಕೊಟ್ಟಿತ್ತು. ಅದರಲ್ಲೂ ನಾಯಕಿಯಾದ ನಂತರವೂ ಕಲಿಯಬೇಕೆಂಬ ಕುತೂಹಲವನ್ನಿಟ್ಟುಕೊಂಡಿದ್ದು ಮೆಚ್ಚಬೇಕಾದ್ದೆ. 

ಹರಿಣಿಯವರು ನಟಿಯಾಗಿ, ನಿರ್ಮಾಪಕಿಯಾಗಿ ನಲವತ್ತಕ್ಕೂ ಹೆಚ್ಚು ಸದಭಿರುಚಿಯ ಚಿತ್ರಗಳಲ್ಲಿ ನಟಿಸಿ ನಿರ್ಮಿಸಿ ಕನ್ನಡ ಚಿತ್ರರಂಗಕ್ಕೆ ಹೆಸರು ತಂದವರು. ಇವರ `ನಮ್ಮ ಮಕ್ಕಳು' ಚಿತ್ರ ಮೊದಲ ಫಿಲಂಫೇರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದರೆ, ಇವರು ನಿರ್ಮಿಸಿದ `ನಂದಾದೀಪ'ಕ್ಕೆ ರಾಷ್ಟ್ರೀಯ ಪುರಸ್ಕಾರ ದೊರೆಯಿತು. `ನಾಂದಿ' ಚಿತ್ರವಂತೂ ಕನ್ನಡ ಚಿತ್ರರಂಗದ ದಿಕ್ಕು ದೆಸೆಯನ್ನೇ ಬದಲಿಸಿತು.

ಇಂತಹ ಹರಿಣಿಯವರು ನಾಯಕನಟಿಯಾಗಿ ಬೇಡಿಕೆಯಲ್ಲಿರುವಾಗಲೇ ಚಿತ್ರರಂಗವನ್ನು ತೊರೆದು ಗಂಡ, ಮನೆ, ಮಕ್ಕಳೆಂಬ ಮತ್ತೊಂದು ಲೋಕದತ್ತ ಮುಖ ಮಾಡಿದರು, ಬಣ್ಣದ ಬದುಕಿಗೆ ವಿದಾಯ ಹೇಳಿದರು. ಸಾಮಾನ್ಯವಾಗಿ ಯಾವ ನಟ-ನಟಿಯರೇ ಆಗಲಿ, ಹೀಗೆ ಬೇಡಿಕೆಯಲ್ಲಿದ್ದಾಗ, ಕೈಯಲ್ಲಿ ಚಿತ್ರಗಳಿದ್ದು ಚಾಲ್ತಿಯಲ್ಲಿರುವಾಗ ಚಿತ್ರರಂಗವನ್ನು ತೊರೆಯುವುದಿಲ್ಲ. ಕೊನೆಪಕ್ಷ ಸುದ್ದಿಯನ್ನಾದರೂ ಸೃಷ್ಟಿಸಿ ಸಣ್ಣ ಕೋಲಾಹಲವನ್ನಾದರೂ ಎಬ್ಬಿಸಿ ಸದ್ದು ಮಾಡುತ್ತಾರೆ. ಹಾಗೇನೂ ಮಾಡದೆ ಸುಮ್ಮನೆ ಹೋದವರು ಈ ಮಾಯಾಲೋಕದಲ್ಲಿ ಇಲ್ಲವೆನ್ನಬಹುದು. ಅಂಥಾದ್ದರಲ್ಲಿ ಹರಿಣಿಯವರು ಹೀಗೆ ಏಕಾಏಕಿ ಚಿತ್ರಬದುಕನ್ನು ಬಿಟ್ಟು ಹೋಗಿದ್ದೇಕೆ, ಅಂತಹ ಮಹತ್ತರವಾದ ಕಾರಣಗಳಿವೆಯೇ ಎಂದರೆ...

`ಚಿತ್ರರಂಗ ನಿಧಾನವಾಗಿ ಪರಿಚಯವಾಗ್ತಾಯಿತ್ತು, ಎಲ್ಲರೂ ಸಹಕರಿಸ್ತಿದ್ರು, ಸಿನಿಮಾಗಳೂ ಸಿಕ್ಕಿ ಬೇಡಿಕೆಯಲ್ಲೂ ಇದ್ದೆ. ಯಾಕೋ ಒಂದು ದಿನ... ಎಲ್ಲಾ ಥರದ ಪಾತ್ರ ಮಾಡ್ಲಿಕ್ಕೆ ನಾನು ಫಿಟ್ಟಲ್ಲ ಅನ್ನಿಸಿತು. ಮರ ಸುತ್ತೋ ಪಾತ್ರಕ್ಕೆ ನಾನು ಲಾಯಕ್ಕಲ್ಲ, ಸುತ್ತೋಕೂ ಈಗ ಆಗಲ್ಲ, ಸುತ್ತಿದರೂ ಜನ ನೋಡಲ್ಲ ಅನ್ನಿಸಿತು... ಇದೇ ಸರಿಯಾದ ಸಮಯ ಅನ್ನಿಸಿ `ಸತಿಸುಕನ್ಯಾ' ಚಿತ್ರದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಿದೆ...' ಎಂದು ಎಲ್ಲರ ಕುತೂಹಲಕ್ಕೆ ಬ್ರೇಕ್ ಹಾಕಿದರು. ಆದರೂ ಬಿಡದ ಪ್ರೇಕ್ಷಕರೊಬ್ಬರು ಚಿತ್ರರಂಗದಲ್ಲಿ ನಿಮಗಾದ ಕಹಿ, ಸಿಹಿ ಘಟನೆಗಳೇನಾದರೂ... ಎಂದು ಮಾತು ಮುಂದುವರೆಸಲು, ಅವರಿಂದ ಇನ್ನೂ ಹೆಚ್ಚಿನದನ್ನು ಹೊರ ತೆಗೆಯಲು ಯತ್ನಿಸಿದರು.

ಹರಿಣಿಯವರ ಕಡೆಯಿಂದ ಕಡ್ಡಿ ಮುರಿದಂತೆ, `ಸಿನಿಮಾ ಜಗತ್ತಿನಲ್ಲಿ... ಸಿಹಿ ಘಟನೆಗಳು... ಹೂಂ ಹುಂ ಇಲ್ಲ, ಕಹಿ ಘಟನೆಗಳ್ಯಾಕೆ ಬಿಡಿ...' ಎಂದರು.   
 
ಇತ್ತ ಹರಿಣಿಯವರು ನಾಯಕಿಯಾಗಿ ನಟಿಸಿದ್ದ `ಜಗನ್ಮೋಹಿನಿ' ಚಿತ್ರ ಬಿಡುಗಡೆಯಾಗಿತ್ತು. ಅತ್ತ ಅವರು ಕಲ್ಕತ್ತಾಗೆ ಹೋಗಿ, ಅಲ್ಲಿನ ಫೇಮಸ್ ಡೈರೆಕ್ಟರ್ ದೇವಕಿಕುಮಾರ್ ಬೋಸ್ ರ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಲು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಇಲ್ಲಿ, ಕರ್ನಾಟಕದಲ್ಲಿ `ಜಗನ್ಮೋಹಿನಿ' ಚಿತ್ರ ನೋಡಿದ ಪ್ರೇಕ್ಷಕರು ಮೋಹಿನಿ ಮೇಲೆ ಮೋಹಗೊಂಡಿದ್ದರು. ದಿನಕ್ಕೆ ನೂರಾರು ಫ್ಯಾನ್ಸ್ ಲೆಟರ್ಗಳು, ಅಲ್ಲಿದ್ದವರಿಗೆಲ್ಲ ಶಾಕ್! ನಿಮಗ್ಯಾಕೆ ಇಷ್ಟೊಂದು ಲೆಟರ್ಸ್ ಬರ್ತಿವೆ ಎಂದು ಕೇಳೋರೆ. ಹರಿಣಿಯವರ ತಂದೆ, `ನನ್ನ ಮಗಳು ಕನ್ನಡದ ಚಿತ್ರದಲ್ಲಿ ಹೀರೋಯಿನ್ ಆಗಿ ಆಕ್ಟ್ ಮಾಡಿದಾಳೆ, ಅದಕ್ಕಾಗಿ ಬರ್ತಿರೋ ಫ್ಯಾನ್ಸ್ ಲೆಟರ್ಸ್...' ಎಂದರೆ ನಂಬಲು ಯಾರೂ ಸಿದ್ಧರಿಲ್ಲ. ಈ ಹುಡುಗಿ... ಹೀರೋಯಿನ್ನ ಎಂದು ಹೀಗಳೆಯುವವರೆ.

ಕನ್ನಡ ಚಿತ್ರರಂಗದ ಸ್ಥಿತಿಯೂ ಅವತ್ತು ಹಾಗೇ ಇತ್ತು. ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದ ನಟಿಯರು ಮಂಕಾಗಿ ಕಾಣಲಾರಂಭಿಸಿದ್ದರು. ಪ್ರೇಕ್ಷಕರ ಒಲವು ಗ್ಲ್ಯಾಮರ್ ನತ್ತ ವಾಲತೊಡಗಿತ್ತು. ಆಕರ್ಷಣೆಯತ್ತ ನಿರ್ಮಾಪಕರೂ ಗಮನ ಹರಿಸಿದಾಗ ನಾಯಕಿಯರ ಅಭಿನಯದ ಜೊತೆಗೆ ಮಾದಕ ಮೈಮಾಟ, ಸೊಗಸು, ಸೌಂದರ್ಯ ಪ್ರದರ್ಶನ ಅನಿವಾರ್ಯವೆನ್ನಿಸತೊಡಗಿತು. ನಾಗಕನ್ನಿಕಾ ಮೂಲಕ ಬಿ.ಜಯಶ್ರೀ, ಜಗನ್ಮೋಹಿನಿ ಮೂಲಕ ಹರಿಣಿಯವರು ಆ ಕೊರತೆಯನ್ನು ತುಂಬಿದರು. ಅಭಿನಯಕ್ಕಿಂತ ಮೈಮಾಟವೇ ಮುಖ್ಯವಾಗಿದ್ದ ಈ ಚಿತ್ರಗಳು ಹಣ ಗಳಿಕೆಯಲ್ಲಿ ಮುಂದಾದವು. ಚಿತ್ರರಂಗದ ಟ್ರೆಂಡ್ ಬದಲಾಗತೊಡಗಿತು.

ಮೂಲತಃ ಉಡುಪಿಯವರಾದ ಹರಿಣಿಯವರ ತಂದೆ ಬದುಕಿಗಾಗಿ ಅರಸಿ ಹೋದದ್ದು ಮಧುರೈಗೆ. ಅಲ್ಲಿ
ಮೂರು ಗಂಡು ಮಕ್ಕಳಾದ ಮೇಲೆ ಮುದ್ದಿನ ಮಗಳಾಗಿ ಹರಿಣಿ ಹುಟ್ಟಿದರು. ಮಧುರೈನ ಪರಿಸರವೋ ಅಥವಾ ಮಗಳ ಆಸಕ್ತಿಯೋ ಸಂಗೀತ, ನೃತ್ಯ ಕಲಿಕೆ ಶುರುವಾಯಿತು. ಪುಟ್ಟ ಹುಡುಗಿ ಪುಟು ಪುಟು ಓಡಾಡುವುದು ಎಲ್ಲರ ಕಣ್ಣಿಗೆ ಬಿತ್ತು. ಇದು ಮನೆಮುಂದಿದ್ದ ತಮಿಳಿನ ದೊಡ್ಡ ಪ್ರೊಡ್ಯೂಸರ್ ಕಿವಿಗೆ, ಕಣ್ಣಿಗೆ ಬೀಳುವುದು ತಡವಾಗಲಿಲ್ಲ. ಅವರೊಂದು ದಿನ ನೇರವಾಗಿ ಬಂದು ಹರಿಣಿಯವರ ತಂದೆಗೆ, `ನಿಮ್ಮ ಮಗಳು ನಮ್ಮ ಚಿತ್ರದಲ್ಲಿ ಅಭಿನಯಿಸಬಹುದೆ' ಎಂದು ಕೇಳಿದರು. ಇವರು ಒಪ್ಪಿದರು. ಮೂರ್ನಾಲ್ಕು ತಮಿಳು ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದೂ ಆಯಿತು. ಮುಂದೆ ಮಧುರೈ ಬಿಟ್ಟು ಮದ್ರಾಸಿಗೆ ಹೋದಾಗ, ಅಲ್ಲಿ ಎಂ.ಆರ್. ವಿಠಲ್, ಶಂಕರ್ ಸಿಂಗ್, ಲಕ್ಷ್ಮಿನಾರಾಯಣ... ಕನ್ನಡ ಚಿತ್ರರಂಗದ ಅಂದಿನ ಅದ್ಭುತಗಳೆಲ್ಲ ಪರಿಚಯವಾದರು. ನಾಂದಿ, ನಂದಾದೀಪ, ನವಜೀವನ, ನಮ್ಮ ಮಕ್ಕಳು, ದಳ್ಳಾಳಿ, ಆಶಾ ಸುಂದರಿ, ಮಂಗಳಗೌರಿ, ವಿಧಿವಿಲಾಸ, ವಿಚಿತ್ರ ಪ್ರಪಂಚಗಳಂತಹ ಚಿತ್ರಗಳು ಬಂದವು.

ಅಷ್ಟೇ ಅಲ್ಲ, ಆಗಿನವರ ಪ್ರೋತ್ಸಾಹ, ಬೆಂಬಲದ ಫಲವಾಗಿ ಹರಿಣಿಯವರ ಅಣ್ಣ-ತಮ್ಮಂದಿರಾದ ವಾದಿರಾಜ್-ಜವಾಹರ್ ಜೊತೆಗೂಡಿ `ನಂದಾದೀಪ' ಚಿತ್ರವನ್ನು ನಿರ್ಮಿಸಿದರು. `ಇಷ್ಟೊಳ್ಳೆ ಜನರ ಸಹಕಾರವಿರುವಾಗ ನಾವ್ಯಾಕೆ ಚಿತ್ರ ಪ್ರೊಡ್ಯೂಸ್ ಮಾಡಬಾರದು ಅನ್ನಿಸಿತು. ವಾದಿರಾಜ್ ಬರೆದ ಕತೆಯನ್ನು ಆಧರಿಸಿ `ನಂದಾದೀಪ'ವನ್ನು ಪಿಕ್ಚರೈಸ್ ಮಾಡಿದೋ. ನಾವು ಅಂದುಕೊಂಡಂತೆ ಎಲ್ಲರೂ ಸಹಕರಿಸಿದರು. ಚಿತ್ರ ಚೆನ್ನಾಗಿ ಬಂತು. ಜನ ಮೆಚ್ಚಿಕೊಂಡರು. ಅದಕ್ಕೆ ಪ್ರೆಸಿಡೆಂಟ್ ಅವಾರ್ಡ್ ಬಂತು. ಅದರ ಮರುವರ್ಷವೇ `ಮಂಗಳ ಮುಹೂರ್ತ' ಚಿತ್ರದ ಅಭಿನಯಕ್ಕಾಗಿ ಮತ್ತೆ ಪ್ರೆಸಿಡೆಂಟ್ ಅವಾರ್ಡ್! ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದಕ್ಕಿಂತ ಭಿನ್ನವಾದ ಅನುಭವ ಎನ್.ಲಕ್ಷ್ಮೀನಾರಾಯಣರ `ನಾಂದಿ' ಚಿತ್ರದಲ್ಲಾಯಿತು. ಮೂಕ-ಕಿವುಡರ ಕಥಾವಸ್ತುವುಳ್ಳ ಚಿತ್ರ ಅದು. ಅದರಿಂದ ನಾನು ಕಲಿತದ್ದು ಅಪಾರ. ಚಿತ್ರದಲ್ಲಿ ಪಾತ್ರ ಮಾಡುವ ಮುಂಚೆ ಮದ್ರಾಸಿನಲ್ಲಿದ್ದ ಹಲವಾರು ಮೂಕ-ಕಿವುಡು ಮಕ್ಕಳ ಶಾಲೆಗೆ ನಮ್ಮನ್ನು ಕರೆದುಕೊಂಡು ಹೋದ ಎನ್ನೆಲ್, ಅವರನ್ನು ನೀಟಾಗಿ ಅಬ್ಸರ್ವ್ ಮಾಡಿ ಎಂದರು. ನಮ್ಮ ಜೊತೆಯಲ್ಲಿ ರಾಜ್ ಕುಮಾರ್ ಕೂಡ ಬರೋರು. ಚಿತ್ರದಲ್ಲಿ ಅವರದು ಮೂಗ ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕನ ಪಾತ್ರ. ಎನ್ನೆಲ್ ಕನ್ನಡದ ಸತ್ಯಜಿತ್ ರೇ ಇದ್ದಂಗೆ. ಅವರಷ್ಟು ಪ್ರತಿಭಾವಂತ ನಿರ್ದೇಶಕರ ಕೈ ಕೆಳಗೆ ಕೆಲಸ ಮಾಡಿದ ಪುಣ್ಯ ನನ್ನದು. ಆದರೆ ಅವರದು ಹಠದ ಸ್ವಭಾವ. ನಾಂದಿಯಲ್ಲಿ ಹಾಡುಗಳೇ ಬೇಡ ಅಂದುಬಿಟ್ಟಿದ್ದರು. ಆಮೇಲೆ ಸೊರಟ್ ಅಶ್ವಥ್, ಜವಾಹರ್, ವಾದಿರಾಜ್ ಎಲ್ಲ ಏನೇನೋ ಸರ್ಕಸ್ ಮಾಡಿದಮೇಲೆ, ಅದಕ್ಕೆ ಸೀಕ್ವೆನ್ಸ್ ಹುಡುಕಿಕೊಡಿ ಅಂದ್ರು, ಅದಕ್ಕೂ ಚಿತ್ರಕತೆ ರೆಡಿ ಮಾಡಿ ಹಾಡುಗಳು ಇರುವ ಹಾಗೆ ನೋಡಿಕೊಂಡೆವು...'

ಆದರೆ ಚಿತ್ರ ಅಷ್ಟೆಲ್ಲ ಜನಪ್ರಿಯವಾಗಿದ್ದರೂ ಪ್ರಶಂಸೆಗೆ ಪಾತ್ರವಾಗಿದ್ದರೂ ಆ ವರ್ಷ ಆ ಚಿತ್ರಕ್ಕೆ ಪ್ರಶಸ್ತಿ ಸಿಗಲಿಲ್ಲ. ಆಗ ಜನರೆ ನಾಂದಿಯ ಪರ ಕೂಗೆಬ್ಬಿಸಿ, ಬೀದಿಗಿಳಿದು ಪ್ರತಿಭಟಿಸಿ, ಅಂದಿನ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ಇಂದಿರಾ ಗಾಂಧಿಯವರಿಗೆ ನೂರಾರು ಫ್ಯಾಕ್ಸ್ ಸಂದೇಶ ಕಳಿಸಿದ್ದರು. ಇದು ನಿಜವೇ ಎಂದಾಗ ಹರಿಣಿಯವರು, `ಹೌದು, ನಾಂದಿ ಚಿತ್ರಕ್ಕೆ ಅವಾರ್ಡ್ ಬರಲಿಲ್ಲ, ಬದಲು ಯಾವುದೋ ರೀಮೇಕ್ ಚಿತ್ರಕ್ಕೆ ಬಂತು ಎಂದು ಜನಕ್ಕೆ ಬೇಸರವಾಗಿತ್ತು, ಕನ್ನಡಿಗರ ಪ್ರೀತಿ, ಅಭಿಮಾನ ದೊಡ್ಡದು, ಅದಕ್ಕೆ ನಾನು ಋಣಿ...' ಎಂದರು.

ವಿಜ್ಞಾನಿಯನ್ನು ಮದುವೆಯಾಗಿ, ಪತಿಯ ಕೆಲಸ ಕಾರ್ಯಗಳ ನಿಮಿತ್ತ ಜಿನೀವಾಕ್ಕೆ ಒಂದು ಸಲ ಅವರ ಜೊತೆ ಹೋಗಿದ್ದಾಗ, ಅಲ್ಲಿ ನಿಮಗೆ ವಿದೇಶಿ ಪ್ರಜೆಯೊಬ್ಬರು ಡಾ.ರಾಜ್ ಬಗ್ಗೆ ಕೇಳಿದ್ದರಂತೆ ನಿಜವೇ ಎಂದಾಗ... `ಅಯ್ಯೋ ಅದನ್ನು ಎಷ್ಟು ಬಾರಿ ಹೇಳೋದು... ಹೋಗ್ಲಿ ಬಿಡಿ ಒಳ್ಳೆದನ್ನು ಎಷ್ಟು ಬಾರಿ ಹೇಳಿದರೂ ತೊಂದರೆಯಿಲ್ಲ...' ಎಂದು

`ಅದೊಂದು ಪಾರ್ಟಿ, ಕೆಲವೇ ಕೆಲವರಿದ್ದರು. ನನ್ನ ಪತಿ, ಈಕೆ ನನ್ನೆಂಡ್ತಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸ್ತಿದ್ದಳು ಎಂದು ಎಲ್ಲರಿಗೂ ಪರಿಚಯಿಸಿದರು. ಸ್ವಲ್ಪ ಹೊತ್ತಾಯಿತು. ಒಂದು ವಿದೇಶಿ ಜೋಡಿ ಬಂದು ನನ್ನ ಪಕ್ಕ ಕುಳಿತುಕೊಂಡಿತು. ಇಲ್ಲಿಂದ ಹೋಗಿ ಸೆಟ್ಲ್ ಆದವರಲ್ಲ, ಅಲ್ಲಿಯವರೇ. ಅವರು ನೀವೆಂಥ ಪಾತ್ರ ಮಾಡ್ತಿದ್ರಿ ಎಂದರು. ಹೀರೋಯಿನ್ ಆಗಿ ಮಾಡ್ತಿದ್ದೆ ಅಂದೆ. ಅದಕ್ಕವರು ಯಾವ ಭಾಷೆಯಲ್ಲಿ ಅಂದರು. ಇವರಿಗೇನು ಗೊತ್ತಿರುತ್ತೆ ಅಂತ ಒನ್ ಆಫ್ ದಿ ಸೌತ್ ಇಂಡಿಯನ್ ಲಾಗ್ವೇಜ್... ಅಂದೆ. ತಕ್ಷಣ ಅವರು ವಿ ನೋ ಸೌತ್ ಇಂಡಿಯನ್ ಮೇಜರ್ ಫೋರ್ ಲಾಂಗ್ವೇಜಸ್ ಎನ್ನುತ್ತಿದ್ದಂತೆ ನನಗೆ ದಿಗಿಲಾಯಿತು. ಇವರತ್ರ ಏನೋ ಒಂದು ಹೇಳಿ ನುಣುಚಿಕೊಳ್ಳಲಾಗುವುದಿಲ್ಲ, ಗೊತ್ತಿದ್ದವರೇ ಇರಬೇಕೆಂದು ಕನ್ನಡ ಅಂದೆ. ತಕ್ಷಣ ಅವರು ಕೇಳಿದ ಪ್ರಶ್ನೆಯನ್ನು ಇವತ್ತು ಜ್ಞಾಪಿಸಿಕೊಂಡರೂ ಮೈ ಜುಂ ಅನ್ನುತ್ತೆ. ಅದೇನೆಂದರೆ- ನೀವು ರಾಜ್ ಕುಮಾರ್ ಜೊತೆ ನಟಿಸಿದ್ದೀರಾ ಎಂಬುದು! ನನಗೆ ಶಾಕ್. ರಾಜ್ ಎಲ್ಲಿ ಈ ಫಾರಿನ್ ಕಪಲ್ಸ್ ಎಲ್ಲಿ?

`ಆ ವಿದೇಶಿ ವ್ಯಕ್ತಿ ನನ್ನ ಪತಿಯಂತೆಯೇ ಆಗಾಗ ಇಂಡಿಯಾಕ್ಕೂ ಬರ್ತಿದ್ರು- ಅವರ ಕೆಲಸದ ಮೇಲೆ. ಹಾಗೆಯೇ ಬೆಂಗಳೂರಿಗೂ ಬರ್ತಿದ್ರು. ಬಂದಾಗಲೆಲ್ಲ ಬೆಂಗಳೂರಿನ ಗೋಡೆಗಳ ಮೇಲೆ ರಾಜ್ ಕುಮಾರ್ ವಿವಿಧ ವೇಷಗಳಲ್ಲಿ, ಭಂಗಿಗಳಲ್ಲಿ ಕಾಣುತ್ತಿದ್ದ ಪೋಸ್ಟರ್ ಗಳನ್ನು ನೋಡ್ತಿದ್ದರಂತೆ. ತಾವು ಕೂತ ಆಟೋರಿಕ್ಷಾ, ಕಾರಿನ ಡ್ರೈವರ್ ಗಳನ್ನು ವಿಚಾರಿಸಿದರೆ, ಅವರು ರಾಜ್ಕಮಾರ್ ಅಂತ ತುಂಬಾ ಒಳ್ಳೆ ಆಕ್ಟರ್, ಫೇಮಸ್ಸು ಅಂತೆಲ್ಲ ಹೇಳಿದ್ದರಂತೆ. ಅಷ್ಟೇ ಅಲ್ಲ ಈ ದಂಪತಿ, ರಾಜ್ ರ ಒಂದು ಚಿತ್ರ... ಕನಕದಾಸನೋ ಗೋರಕುಂಬಾರನೋ ಇರಬೇಕು ಅಂತ ಕಾಣ್ತದೆ... ಅದನ್ನು ನೋಡಿದ್ದರಂತೆ. ಹಾಗೆ ರಾಜ್ ಕುಮಾರ್ ಬಗ್ಗೆ ಹೇಳ್ತಾನೆ ಹೋಗಬಹುದು...'

ಹರಿಣಿಯವರು ಮತ್ತವರ ಸಹೋದರರು ನಿರ್ಮಿಸಿದ `ನಂದಾದೀಪ' ಆ ಕಾಲಕ್ಕೇ ಗುಜರಾತಿ ಭಾಷೆಗೆ ರೀಮೇಕ್ ಆಗಿತ್ತು. ಇವತ್ತು ಕನ್ನಡ ಚಿತ್ರರಂಗದ ಸ್ಥಿತಿ ಹೇಗಿದೆಯಪ್ಪ ಅಂದ್ರೆ, ಬೇರೆ ಭಾಷೆಯ ಚಿತ್ರಗಳನ್ನು ನೋಡಿ ಮಾಡಬೇಕಾಗಿದೆ. ಇಂತಹ ಸ್ಥಿತಿ ಕಂಡು ನಿಮಗೇನನ್ನಿಸುತ್ತದೆ ಎಂದರೆ...

`ಅಯ್ಯೋ ದೇವ್ರೆ ಅನ್ಸುತ್ತೆ, ಎಷ್ಟು ಕತೆಗಾರರಿದ್ದಾರೆ, ಎಷ್ಟು ಒಳ್ಳೊಳ್ಳೆಯ ಕತೆಗಳು ಬರ್ತಿವೆ, ಕನ್ನಡತನ, ನಮ್ಮತನ ಇರುವ ಕತೆಗಳನ್ನು ತೆಗೆದುಕೊಂಡು ಕಡಿಮೆ ಖರ್ಚಿನಲ್ಲಿ ಬೇಕಾದಷ್ಟು ಚಿತ್ರಗಳನ್ನು ಮಾಡಬಹುದು. ಜನ ನಿಜಕ್ಕೂ ನಮ್ಮ ಚಿತ್ರಗಳು ಅಂತ ನೋಡ್ತರೆ, ಪ್ರೋತ್ಸಾಹಿಸ್ತರೆ. ಕನ್ನಡ ಚಿತ್ರಗಳಿಗೆ ವಿದೇಶಿ ತಾಣ, ನೃತ್ಯ ಬೇಕಾಗಿಲ್ಲ. ಅದು ಕನ್ನಡದ ಜಾಯಮಾನಕ್ಕೆ ಒಗ್ಗುವುದಿಲ್ಲ. ಇವತ್ತು ಇಡೀ ಕುಟುಂಬ ಕೂತು ನೋಡುವ ಚಿತ್ರ ಬರ್ತಿಲ್ಲ ಅಂತ ಎಲ್ಲರೂ ಹೇಳಬಹುದು. ಅದೇಕೆ ನಾಂದಿ, ನಂದಾದೀಪಗಳಂಥ ಚಿತ್ರಗಳನ್ನು ಜನ ಇಷ್ಟಪಟ್ಟರು ಅಂತ ನಮ್ಮ ಚಿತ್ರರಂಗದವರು ಒಮ್ಮೆ ಕೂತು ಯೋಚಿಸಿದರೆ, ಇಂಥ ಪರಿಸ್ಥಿತಿ ಎದುರಾಗುವುದಿಲ್ಲ ಅನ್ನಿಸುತ್ತೆ...'

ಕನ್ನಡ ಚಿತ್ರರಂಗ ಸದ್ಯದ ದೈನೇಸಿ ಸ್ಥಿತಿಯಿಂದ ಹೊರಬರಲು ಇದಕ್ಕಿಂತ ಉತ್ತಮ ಸಲಹೆ ಇನ್ನೊಂದಿರಲಾರದು ಎನ್ನುವುದು ಅಲ್ಲಿ ನೆರೆದಿದ್ದ ಪ್ರೇಕ್ಷಕರ ಗಮನಕ್ಕೆ ಬಂದಿತ್ತು. ಆದರೆ ನಮ್ಮ ಕನ್ನಡ ಚಿತ್ರೋದ್ಯಮದವರಿಗೆ...?

(ಚಿತ್ರಗಳು ಕೃಪೆ: ಕರ್ನಾಟಕ ಚಲನಚಿತ್ರ ಅಕಾಡೆಮಿ)
 

ಪುಟದ ಮೊದಲಿಗೆ
 
Votes:  10     Rating: 4.5    
 
 
ಸಂಬಂಧಿಸಿದ ಲೇಖನಗಳು
  ವೈದ್ಯರನ್ನು ಉಳಿಸಲು ಮಿಂಚುಳ್ಳಿ ಮಾಡಿರುವ ಮೊರೆ
  ಮುರುಗೇಶ ಮತ್ತು ಕಿವುಡು ಕಾಮಧೇನು:ಗುರು ಕುಲಕರ್ಣಿ ಬರಹ
  ಸಿ.ಪಿ.ನಾಗರಾಜ ಬರೆದ ಮೂರು ಮಾಡರ್ನ್ ಕಥಾಪ್ರಸಂಗಗಳು
  ಚೆನ್ನಾಗಿದ್ಯಾ ಟೋನಿ? ಚೆನ್ನಾಗಿಲ್ವಾ ಟೋನಿ?:ವಿಕಾಸ್ ಬರಹ
  ನಳಿನಿ ಮಯ್ಯ ಬರೆದ ಅಪೂರ್ವ ದಾಂಪತ್ಯ ಜೀವನ ಚಿತ್ರಗಳು
  ಪುಟಗಳಿಗೆ ಕಿಟಕಿಗಳಿಲ್ಲ:ಚರಿತಾ ಬರೆದ ಮೌನಲಹರಿ
  ನರಸಿಂಹ ರಾಯಚೂರ್ ವಿರಚಿತ ವಾರಾಂತ್ಯ ರಾಜಕೀಯ ಕಾಲಕ್ಷೇಪ
  ಜಲಪ್ರಳಯ: ನಾವು ಕಲಿಯಬೇಕಾದ ಪಾಠಗಳು:ಡಿ.ಎಸ್.ನಾಗಭೂಷಣ ಬರಹ
  ಚಿತ್ತಾಲರ ಶಿಕಾರಿ ಓದಿ ಸಚಿನ್ ಕೊಳಿಗೆ ಬರೆದದ್ದು
  ಸೀನಿಯರ್ ಬಹದ್ದೂರ ದೇಸಾಯಿ ಬರೆಯುವ ಪುಗಸಟ್ಟೆ ಸಲಹೆಗಳು
  ಪ್ರಶಸ್ತಿ ಪಿ.ಸಾಗರ ವಿರಚಿತ ಪೀಜಿ ಪುರಾಣವು
  ಜೇನಲ್ಲಿ ಮೂನಿಲ್ಲದ ಕಾಲ:ಮಿಂಚುಳ್ಳಿ ಸ್ವಗತ
  ಕೇದಾರದ ಹರೀಶ ಬದುಕಿರಲಿ ಶಿವನೇ:ರಾಜೀವ ಮೊರೆ
  ಅಪ್ಪ ಮತ್ತು ಟೆಲಿಗ್ರಾಂ:ನವೀನ ಹಣಮಂತಗಡ ಬರಹ
  ನಿನ್ನೆ ಅಪ್ಪಂದಿರ ದಿನ ಇಂದು ಪ್ರಶಸ್ತಿ ಮಾಡುವ ಅಪ್ಪನ ನಮನ
  ಗಡಸಿನ ಅಪ್ಪ, ಮಮತೆಯ ಅಪ್ಪ:ಸುಧೀಂದ್ರ ಬುಧ್ಯ ಬರಹ
  ಧಾರ್ಮಿಕ ಅನುಭವವೆಂದರೇನು? ಯು.ಜಿ. ಕೃಷ್ಣಮೂರ್ತಿ ಚಿಂತನೆ
  ಕಾಮರೂಪಿಯ ಅನಿಸಿಕೆಗಳೆಂಬ ಬ್ಲಾಗು
  ಸೂರಿಯ ಕಡ್ಡಿಪುಡಿಯ ಕುರಿತು ದತ್ತರಾಜ್ ವ್ಯಾಖ್ಯಾನ
  ಸೀನಿಯರ್ ದೇಸಾಯಿ ಬರೆಯುವ ಲಘು ಕಾಮೆಂಟರಿ ಶುರುವಾಯಿತು
  ಡೈರೆಕ್ಟರ್ಸ್ ಸ್ಪೆಷಲ್ ಕುರಿತು ಅಜೇಯ ಸಿಂಹಾವಲೋಕನ
  ನೆನಪುಗಳ ನೆರಳುಗಳನ್ನು ಅರಸಿ:ಕಾಮರೂಪಿ ಬ್ಲಾಗಿನಿಂದ
  ಅಮೇರಿಕಾದಲ್ಲಿರುವ ನಾಗ ಐತಾಳ ವಿರಚಿತ ಶ್ವಾನ ಪಾರಾಯಣ
  ಶ್ಯಾಮಲಾ ಗುರುಪ್ರಸಾದ ಬರೆದ ಫ್ರೀದಾ ಕಾಹ್ಲೋ ಕಲಾ ಕಥನ
  ಮಲೆಗಳಲ್ಲಿ ಮದುಮಗಳು ಎಂಬ ಭ್ರಮ ನಿರಸನ:ಅಶೋಕವರ್ಧನ ಬ್ಲಾಗ್
  ಕನ್ನಡಕ್ಕೆ ಇದಕ್ಕಿಂತ ಖುಷಿಯ ವಿಷಯವೇನಿದೆ:ಶ್ರೀರಾಂ ಆಶಯ
  ಏಳುಸುತ್ತಿನ ಹಿತ್ತಲ ಮಲ್ಲಿಗೆ:ವೆಂಕಟೇಶ್ ಮುಂಬೈ ಬರಹ
  ಜೀತಕ್ಕಿರುವವರ ಜೀವಿತ ಕಥೆಗಳು:ನಾಗರಾಜ ಹೆತ್ತೂರ್ ಬರಹ
  ಅಕ್ಕ ಎಂಬ ಅಕ್ಕರೆ ಅಕ್ಕ ಎಂಬ ಅಚ್ಚರಿ!:ಮಧುಸೂದನ ಬರಹ
  ಆಪಲ್ ಎಂಬ ಮೊಬೈಲ್ ಮಾಯಾವಿ:ಸುದರ್ಶನ ಗುರುರಾಜ ಬರಹ
  ಕೈಗಂಟಿದ ಮಸಿಯನ್ನು ಮುಖಕ್ಕೆ ಬಳಿದುಕೊಂಡರೆ? ಸುಧೀಂದ್ರ ಬರಹ
  ಕಮಲ ತನ್ನನ್ನು ತಾನೇ ಹೊಸಕಿತೇ?:ನರಸಿಂಹ ರಾಯಚೂರ್ ಪ್ರಶ್ನೆ
  ಎಸ್.ಮಂಜುನಾಥ್ ಮಾಡಿರುವ ಖಡ್ಗ ಮೀಮಾಂಸೆ
  ಓಟೇ ಹಾಕದ ಒಂಟಿ ಓಲೆಯ ಬೀರಯ್ಯ:ಗಂಗಾಧರಯ್ಯ ಬರಹ
  ಮಲೆಗಳಲ್ಲಿ ಮದುಮಗಳು ಎಲ್ಲಿ? ದಿಲಾವರ್ ರಾಮದುರ್ಗ ಬ್ಲಾಗ್
  ಅಮ್ಮನ ಕೂಡೆ ವೋಟ್ ಮಾಡಿದ್ದು:ಸ್ಮಿತಾ ಮಾಕಳ್ಳಿ ಬರಹ
  ವೋಟು ಹಾಕಿ ಸೋತ ಮುಖಗಳು:ಉಮಾರಾವ್ ಬರಹ
  ಸಚಿನ್ ಕೊಳಿಗೆ ಕಂಡ ಮಲೆಗಳಲ್ಲಿ ಮದುಮಗಳು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್’:ಮತ್ತೊಂದು ಕಥಾಪ್ರಸಂಗ
  ದೆವ್ವವಾದ ನರಭಕ್ಷಕ:ಕಾರ್ಲೋ ಅನುವಾದಿಸಿದ ಕಾರ್ಬೆಟ್ ಕಥನ
  ಪೈ ಎಂಬ ಮಾಯೆಯ ಸಿನೆಮಾ ಗಣಿತ:ದಿಲಾವರ್ ರಾಮದುರ್ಗ ಬರಹ
  ಆನ್ ಲೈನ್ ಆರಂಭಶೂರರ ಕುರಿತು ದತ್ತರಾಜ್ ಅನಿಸಿಕೆಗಳು
  ಮಲೆಗಳಲ್ಲಿ ಮದುಮಗಳಿಗೆ ರೂಪಲಕ್ಷ್ಮಿ ಮರುಳಾಗಿ ಬರೆದದ್ದು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್:ಒಂದು ಕಥಾಪ್ರಸಂಗ
  ಎವರೆಸ್ಟ್ ಏರಿದ್ದು ಮೊದಲು ಯಾರು?:ಎಂ.ವೆಂಕಟಸ್ವಾಮಿ ಬರಹ
  ಮಾಂಕ್ಷಾವಲಿ ನಾಮಾಂಕಿತ ಮಂಟೇಸ್ವಾಮಿ:ಬಾಬು ಕೌದೇನಹಳ್ಳಿ ಬರಹ
  ಕರ್ನಾಟಕ ಜನಸಾಹಿತ್ಯ ಸಮಾವೇಶ:ಅರುಣ ಜೋಳದ ಸಮೀಕ್ಷೆ
  ಚಾರ್ಲ್ಸ್ ಡಾರ್ವಿನರ ಆಮೆಗಳು:ಪಾಲಹಳ್ಳಿ ವಿಶ್ವನಾಥ್ ಬರಹ
  ತಗಾದೆಯಿಲ್ಲದ ಯುಗಾದಿ ಇರಲಿ:ಅನಸೂಯಾದೇವಿ ಹಾರೈಕೆ
  ಯುಗಾದಿಯ ಬಿಸಿಲಲ್ಲಿ ರತ್ನಪಕ್ಷಿಯ ಅರಸುತ್ತಾ:ಗೊರವರ ಬರಹ
  ಮುದುಕಿಯೊಬ್ಬಳ ಒಳ್ಳೆಯ ಶಾಪ:ಪ್ರೀತಂ ರಾವ್ ಲಂಡನ್ ಡೈರಿ
  ಜಗತ್ತಿನೆದುರು ನಿರುತ್ತರ ಕೊರಿಯ:ರೋಹಿತ ಬರಹ
  ಪರಿಮಳ ಹೊತ್ತು ಬರುತ್ತಿದ್ದವರು:ಎಲ್.ಸಿ.ಸುಮಿತ್ರ ನೆನಪುಗಳು
  ದೇವದೂತರಂತೆ ಬಂದಿದ್ದವರು:ಮಿಂಚುಳ್ಳಿ ಲಹರಿ
  ಬಿಗ್ ಬಾಸ್ ಎಂಬ ಮನೆ ಮುರುಕ ಆಟದ ಕುರಿತು ಭಾವನಾ ರಾವ್ ಮರುಕ