ಸೆಪ್ಟೆಂಬರ್ ೧೭, ೨೦೧೪
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆರರಿಂದ ಅರವತ್ತು:ಅಪ್ಪಾಜಿರಾಯರ ಸರಣಿ ಆರಂಭ    
ಎಚ್. ಶೇಷಗಿರಿರಾವ್
ಶನಿವಾರ, 22 ಅಕ್ಟೋಬರ್ 2011 (10:01 IST)

ಅಪ್ಪಾಜಿರಾಯರು ಇಂದಿನಿಂದ ಆರಂಭಿಸುತ್ತಿರುವ `ಆರರಿಂದ  ಅರವತ್ತು’ ಎಂಬ ಈ ಸರಣಿ ನಮ್ಮ ನಾಡಿನಲ್ಲಿ ಐದೂವರೆ ದಶಕದಲ್ಲಿ ಸಾಗಿ ಬಂದ ಶಿಕ್ಷಣಯಾನದ ಒಂದು ಚಿತ್ರಣ. ಅದೂ ಸಾಧಾರಣ ಹಳ್ಳಿ ಹುಡುಗನ ಕಣ್ಣಿಗೆ ಕಂಡಂತೆ. ಮೊದಲು ಹದಿನೆಂಟು ವರ್ಷ ವಿದ್ಯಾರ್ಥಿಯಾಗಿ, ನಂತರ ಮೂರುವರೆ ದಶಕಗಳ ಮೇಲುಪಟ್ಟು ಬೋಧಕನಾಗಿ, ಕೊನೆಯವರೆಗೂ  ಕಲಿಯುವ ಕುತೂಹಲವಿರುವ ಆಸಕ್ತನಿಗೆ ಕಂಡಂತೆ ಅಥವಾ ಅರ್ಥವಾದಂತೆ. ಕಲಿಕೆ ನಾಲಕ್ಕು ಗೋಡೆಗಳ ಮಧ್ಯ ಮಾತ್ರ ನಡೆಯುವ ಕ್ರಿಯೆ ಅಲ್ಲ.  ಶಾಲೆ, ಮನೆ, ಸಮಾಜ ಎಲ್ಲ ಕಡೆ ಕಲಿಕೆ ನಡೆಯುವುದು.ಬಾಲ್ಯದ ಕಲಿಕೆಯಲ್ಲಿ ಕುಟುಂಬ ಮತ್ತು ಪರಿಸರ ಬಹಳ ಪರಿಣಾಮ ಬೀರುವವು. ಅದರಿಂದಾಗಿ ಕಲಿಕೆಗೆ ಕಾರಣವಾಗಿರುವ ವ್ಯಕ್ತಿಗಳ, ಘಟನೆಗಳ, ಸಂದರ್ಭ, ಸನ್ನಿವೇಶಗಳ  ಸಾಮಾಜಿಕ ಆಚರಣೆಗಳ ವಿವರಣೆ ಬಂದಿದೆ. ಜತೆಜತೆಗೆ ಅಂದಿನ ರೂಢಿ, ಆಚರಣೆ, ಆಚಾರ ವಿಚಾರಗಳ, ಸಾಮಾಜಿಕ ಮತ್ತು  ಸಾಂಸ್ಕೃತಿಕ  ಪರಿಸರದ ಪರಿಚಯ ಇದೆ. ಕ್ರಮೇಣ ಬದಲಾಗುತ್ತಿರುವ ಮೌಲ್ಯಗಳೂ, ಆದ್ಯತೆಗಳು, ಸಮಾಜದ ಕಿರು ಪರಿಚಯವೂ ಅಲ್ಲಲ್ಲಿ ಕಾಣುವುದು.  ಅದು ಸರಿ, ಇದು ತಪ್ಪು ಎಂಬ ಭಾವನೆ ಎಲ್ಲೂ ನುಸುಳಿಲ್ಲ. ಅಂದಿಗೆ ಅದು ಅಂದ, ಇಂದಿಗೆ ಇದು ಚೆಂದ.

ಸಾಲಿ ಗುಡಿ

ನಾನು ಮೊದಲು ಅಕ್ಷರ ಕಲಿತದ್ದು ನಮ್ಮೂರಿನ ದುರುಗಮ್ಮನ ಗುಡಿಯಲ್ಲಿ.  ಅದಕ್ಕೆ ಕಾರಣ ಸ್ಕೂಲು ನಡೆಯುತ್ತಿದುದೇ ಗುಡಿಯಲ್ಲಿ. ಅದನ್ನು ನಾವು ಸಾಲಿಗುಡಿ ಎನ್ನುತ್ತಿದ್ದೆವು. ಅಲ್ಲಿ ಒಬ್ಬ ಅಯ್ಯನವರು ನಮಗೆ ಗುರುಗಳು. ಅಯ್ಯ ಎನ್ನುವುದು ವೃತ್ತಿ ವಾಚಕವೋ, ಜಾತಿ ಸೂಚಕವೋ ಎಂದು ಯೋಚಿಸುವ ವಯಸ್ಸು ಅದಲ್ಲ. ಎಲ್ಲರೂ ಅವರನ್ನು ಗೌರವಪೂರ್ವಕವಾಗಿ `ಅಯ್ಯನೋರೆ’ ಎನ್ನುತ್ತಿದ್ದರು. ಅದೇನೂ ಸರಕಾರದಿಂದ ಮಂಜೂರಾತಿ ಪಡೆದ ಶಾಲೆಯಲ್ಲ. ಅಲ್ಲಿ ಇಂದಿನ ಹಾಗೆ ಹಲವು ಹತ್ತು ವಿಷಯಗಳಿರಲಿಲ್ಲ. ಭಾಷೆ ಮತ್ತು ಲೆಕ್ಕ. ಎರಡನ್ನು ಮಾತ್ರ  ಖಚಿತವಾಗಿ ಕಲಿಸುತಿದ್ದರು. ಭಾಷೆ ಎಂದರೆ ಕನ್ನಡ. ಅಕ್ಷರ ಕಲಿಯುವ ಮೊದಲು ಅಲ್ಲಿ ಪ್ರಭವ, ವಿಭವ ಇತ್ಯಾದಿ ಅರವತ್ತು ಸಂವತ್ಸರಗಳು, ಆರು  ಋತುಗಳು, ಚೈತ್ರದಿಂದ ಶುರುವಾಗುವ ಹನ್ನೆರಡು ಮಾಸಗಳ ಹೆಸರುಗಳು, ಇಪ್ಪತ್ತನಾಲಕ್ಕು ಪಕ್ಷ, ಹದಿನೈದು ತಿಥಿ  ಮತ್ತು  ಅಶ್ವಿನಿ ಭರಣಿ ಮೊದಲಾದ ಇಪ್ಪತ್ತೇಳು ನಕ್ಷತ್ರಗಳು ಬಾಯಿ ಪಾಠವಾಗಬೇಕಿತ್ತು. ಅದರಲ್ಲೂ ಚೈತ್ರ ಶುದ್ಧ ದವನದ ಹುಣ್ಣಿಮೆ, ವೈಶಾಖ ಶುದ್ಧ ಆಗಿ ಹುಣ್ಣಿಮೆಯಿಂದ ಹಿಡಿದು ಪಾಲ್ಗುಣ ಶುದ್ಧ  ಹೋಳಿ ಹುಣಿಮೆಯವರೆಗೆ, ಅದೇ ರೀತಿ ಚೈತ್ರ ಬಹುಳ ಯುಗಾದಿ ಅಮವಾಸ್ಯೆಯಿಂದ ಹಿಡಿದು  ಆಶ್ವೀಜದ ಬಹುಳದ ದೀಪಾವಳಿ  ಅಮವಾಸ್ಯೆಯ ವರೆಗಿನ ಹನ್ನೆರಡು ಅಮವಾಸ್ಯೆಗಳ ಹೆಸರನ್ನು ಕೇಳಿದಲ್ಲಿ ಪಟ್ಟನೆ ಹೇಳದಿದ್ದರೆ ಛಡಿ ಏಟು ಬೀಳುತಿತ್ತು. ಅಲ್ಲಿ ಹೆಚ್ಚು ಕಲಿತವರು ಎಂದರೆ ಅಮರಕೋಶ ಹೇಳುವವರು. ರಾಜ, ಭುಪ, ಅವನಿಪ, ಒಡೆಯ, ಅರಸ, ಭೂಪಾಲ ಹೀಗೆ ಒಂದು ಪದಕ್ಕೆ ಹತ್ತು ಹಲವಾರು ಪರ್ಯಾಯ ಪದಗಳು. ಪದ ಭಂಡಾರವೇ ಕಂಠಸ್ಥವಾಗಿರುತಿತ್ತು. ನಾಲಿಗೆಯ ಮೇಲೆ ಸರಸತಿಯ ನರ್ತನ.  ಅಮರವನ್ನು ಅರಿತವರಿಗೆ ಶಬ್ದ ದಾರಿದ್ರ್ಯವಿರುತ್ತಿರಲಿಲ್ಲ. ಗದುಗಿನ ಭಾರತ ವಾಚನ ಮಾಡುವ ಹಂತಕ್ಕೆ ಬಂದರೆ ಪರವಾ ಇಲ್ಲ ಎಂದೂ, ಜೈಮಿನಿ ಭಾರತ ಓದಿ ಅರ್ಥ ವಿವರಣೆ ಕೊಡಬಲ್ಲವರಾದರೆ ಕಲಿತವರೆಂದೂ ಕರೆಯುತ್ತಿದ್ದರು. ಅಂಥವರು ವಿರಳಾತಿ ವಿರಳ.ದುರುಗಮ್ಮನ ಗುಡಿ (ಸಾಲಿ ಗುಡಿ)

ಇನ್ನು ಲೆಕ್ಕ ಎಂದರೆ ಮಗ್ಗಿ ಕಲಿಯುವುದು. ಕನಿಷ್ಟ 20 ರವರೆಗೆ ಮಗ್ಗಿ  ಕಡ್ಡಾಯ. ಅದರ ಮೇಲೆ ಚುರುಕಾದವರು ಎರಡ ಹತ್ತಲೆ ಇಪ್ಪತ್ತು ಎಂದು ಮುಗಿಸುತ್ತಿರಲಿಲ್ಲ. ಎರಡ ಹನ್ನೊಂದಲೆ ಇಪ್ಪತ್ತೆರಡು ಎಂದು ಶುರುಮಾಡಿ ಎರಡ ಇಪ್ಪತ್ತಲೆ ನಲವತ್ತು ಎಂದು ಹೇಳುವಷ್ಟು ಕಲಿತರೆ ಅಯ್ಯನವರು ಹುಡುಗ ಪರವಾಯಿಲ್ಲ ಎನ್ನುತ್ತಿದ್ದರು. ಇನ್ನೂ ಜಾಣರು ಮಗ್ಗಿಯನ್ನು ಬುಡದಿಂದ ಪ್ರಾರಂಭಿಸಿ ಮೊದಲವರೆಗೂ ಹೇಳುತ್ತಲಿದ್ದರು. ನನಗಂತೂ ಮೊದಲಿಂದ ಕೊನೆಯವರೆಗ ಹೇಳುವಾಗಲೇ ಸಾಕು ಬೇಕಾಗುತ್ತಿತ್ತು. ಮಧ್ಯಾಹ್ನ ಮೂರು ಗಂಟೆಯ ಮೇಲೆ ಗುಡಿಯು ಮಕ್ಕಳ ಮಗ್ಗಿಯ ಉದ್ಘೋಷದಿಂದ  ಗದ್ಘಲಿಸುತಿತ್ತು. ಮೊದಲು ಸಾಮೂಹಿಕವಾಗಿ ಹೇಳಿ ನಂತರ ಒಬ್ಬೊಬ್ಬರಾಗಿ ಒಪ್ಪಿಸಬೇಕಿತ್ತು. ತಪ್ಪಿದರೆ ಪಕ್ಕದವನಿಗೆ ತಿದ್ದಲು ಅವಕಾಶ. ಅವನು ಸರಿಯಾಗಿ ಹೇಳಿ ತಪ್ಪಿದವನ ಕೆನ್ನೆಗೆ ಎರಡು ಬಾರಿಸಬೇಕಿತ್ತು. ಅದೂ ಮುಟ್ಟಿದಂತೆ ಮಾಡಿದರೆ ಸಾಕಾಗುತ್ತಿರಲಿಲ್ಲ. `ಚಟೀರ್‌...’ ಎಂದು ಶಬ್ದ ಕೇಳಿ ಬರುವಂತೆ ಹೊಡೆತ ಇರಬೇಕು. ಎಷ್ಟೋ ಸಲ ಸದಾ ಏಟು ತಿನ್ನುವ ಹುಡಗ ಹೊಂದಾಣಿಕೆ ಮಾಡಿಕೊಳ್ಳುವದೂ, ಶಾಲೆ ಮುಗಿದ ಮೇಲೆ ಬಾರಿ ಬೆಲ್ಲ, ಕಡಲೆ, ಬಾರಿ ಹಣ್ಣು, ಬಕ್ಕಿ ಹಣ್ಣು, ಹುಣಿಸೆ ಕಾಯಿ, ಮಾವಿನ ಕಾಯಿ ಲಂಚದ ಆಮಿಷ ಒಡ್ಡಿ ಹೊಡೆತದ ಜೋರು ತುಸು ಕಡಿಮೆಯಾಗುವಂತೆ ಮಾಡಿಕೊಳ್ಳುತ್ತಿದ್ದವರೂ ಇದ್ದರು. ಆದರೆ ಅದು ಅಯ್ಯನವರ ಗಮನಕ್ಕೆ ಬಂದರೆ ಇಬ್ಬರಿಗೂ ಲತ್ತೆಯ ಮೇಲೆ ಲತ್ತೆ.

ಇನ್ನು ಬರಹಕ್ಕೆ ಪೆನ್ನು ಪೆನ್ಸಿಲ್‌ ಬಳಕೆ ಬಹಳ ಇರಲಿಲ್ಲ. ಮೊದಲಲ್ಲಿ ಸ್ಲೇಟೂ ಬಳಸುವ ಹಾಗಿಲ್ಲ. ಹೊಸದಾಗಿ ಸೇರಿದ ಪ್ರತಿ ಹುಡುಗರ ಮುಂದೂ ಮೂರು ಬೊಗಸೆ ನುಣ್ಣನೆ ಮರಳು. ಅದನ್ನು ಅವರೆ ತಂದುಕೊಳ್ಳಬೇಕಿತ್ತು. ಮುಗಿದ ಮೇಲೆ ಗುಡಿಯ ಮೂಲೆಯಲ್ಲಿ ಗುಡ್ಡೆ ಹಾಕಬೇಕಿತ್ತು. ಆ ಮರಳನ್ನು ಹರಡಿ ಅದರಲ್ಲಿ ತೀಡಬೇಕು. ಅದೂ ಒಂದು ಎರಡು ದಿನವಲ್ಲ. ತಿಂಗಳುಗಟ್ಟಲೆ. ಅ ನಿಂದ ಕ್ಷ  ವರೆಗೆ ಸ್ಪುಟವಾಗ ಬರೆಯುವವರೆಗೆ ತೀಡಲೇಬೇಕು. ಕೊಕ್ಕೆ ಕೋರೆ ಬರೆಯುವ ಹಾಗಿಲ್ಲ. ಅಯ್ಯನವರು ಒಪ್ಪುವ ತನಕ ಅದು ಮುಂದುವರೆಯುತಿತ್ತು. ಎಷ್ಟೋ ಸಲ ಬೆರಳಿಗೆ ಪೋಟು ಬೀಳುತಿತ್ತು. ತುಸು ಸುಧಾರಿಸಿದ ಮೇಲೆ ಕಡ್ಡಿ ಹಿಡಿದು ಬರೆಯಬಹುದು. ಅಂತೂ ಬರವಣಿಗೆಯ ಬುನಾದಿ ಬಹು ಭದ್ರವಾಗಿ ಬೀಳುತಿತ್ತು. ಆ ನಂತರವೆ ಹಲಗೆ ಬಳಪದ ಬಳಕೆ.

 ಮಲಪನಗುಡಿ ಮೊದಲ ನೋಟ

ಶಾಲೆ ಪ್ರಾರಂಭವಾಗುತ್ತಿದ್ದುದು ರೈತರೆಲ್ಲ ಬದುಕಿಗೆ ಹೊಂಟ ಮೇಲೆ. ಬದುಕು ಎಂದರೆ ಹೊಲದ ಕೆಲಸ. ಸಾಲಿಯಲ್ಲಿಯ ಹಿರಿಯ ಹುಡುಗರಿಗೆ ಆಗ ಬಹು ಹುರುಪು. ಅವರು ಸಾಲಿ ತಪ್ಪಿಸುತ್ತಿದ್ದ ಹುಡುಗರನ್ನು ಹುಡುಕಿ ತರಬೇಕು. ಎಷ್ಟೋ ಹುಡುಗರು ಇಲ್ಲಿನ ಹೊಡೆತ ತಾಳದೆ ಹುಲ್ಲಿನ ಮೆದೆಯಲ್ಲೋ, ಅಟ್ಟದ ಮೇಲೋ, ಅಡಕಲ ಕೋಣೆಯಲ್ಲೋ, ದನದ ಕೊಟ್ಟಿಗೆಯಲ್ಲೋ, ಅಜ್ಜಿಯ ಹಿಂದೋ ಅಡಗಿರುತ್ತಿದ್ದರು. ಅವರನ್ನು ಹುಡುಕಿ ಅಲ್ಲಿಯೇ ನಾಲಕ್ಕು ತದುಕಿ ಕರೆತರುತ್ತಿದ್ದರು. ಅದಕ್ಕೂ ಬಗ್ಗದಿದರೆ ಹೊತ್ತು ತಂದು ಗುಡಿಯಲ್ಲಿ ಕೆಡವುತ್ತಿದ್ದರು. ಅದಕ್ಕೆ ಪೋಷಕರ ಸಹಕಾರವೂ ಪೂರ್ತಿ ಇರುತ್ತಿತ್ತು. `ನಮ್ಮ ಹೈವಾನ,  ಅನ್ನ ಉಂಡು ಅಕ್ಷರ ಕಲಿಯೋ ಅಂದರೆ, ನವಣೆ ಬಾನ ಉಂಡು ನೇಗಿಲ ಹಿಡಿತಿನಿ ಅಂತಾನಲ್ಲ ಅಯ್ಯನೋರೆ, ನೀವೆ ಎಂಗಾನ ಮಾಡಿ ನಾಲಕಕ್ಷರ ಕಲಿಸಿ. ಕೊನೆಗೆ ಹೆಬ್ಬೆಟ್ಟು ಒತ್ತೋದು ಬಿಟ್ಟು ರುಜು ಹಾಕೋದು ಕಲಿತರೂ ಸಾಕು’ ಎಂದು ಹಲುಬುತ್ತಿದ್ದರು. ಇನ್ನು ಆಗಿನ ಶಿಕ್ಷಾ ವಿಧಾನವು ಬಹು ವೈವಿಧ್ಯಮಯವಾಗಿತ್ತು. ಆಗ ಗುರುಗಳು ಹೆಚ್ಚು ದಂಡಿಸಿದರೆ ಮಕ್ಕಳು ಹೆಚ್ಚು ಕಲಿಯುವರು ಎಂಬ ನಂಬಿಕೆ ಬಲವಾಗಿತ್ತು. ತಂದೆ ತಾಯಿಯರೆ ಬಂದು `ಅವನಿಗೆ ನಾಲಕ್ಕು ಬಿಗಿದು, ಬುದ್ಧಿ ಕಲಿಸಿ’ ಎಂದು ಗೋಗರೆಯುತ್ತಿದ್ದರು.  ಒಂಟಿಕಾಲಲ್ಲಿ ನಿಲ್ಲಿಸುವುದು, ಇನ್ನೊಬ್ಬನನ್ನು ಹೊತ್ತು ನಿಲ್ಲುವುದು, ಮೊಣಕೈ ಸಂದಿಯಲ್ಲಿ ಕೈ ತೂರಿಸಿಕೊಂಡು ಎರಡೂ ಕಿವಿಯನ್ನು ಹಿಡಿದು ಕುಕ್ಕರಗಾಲಿನಲ್ಲಿ ಕೂಡುವುದೂ, ಹಲ್ಲು ಹಚ್ಚಿ ಕಿವಿ ಹಿಂಡುವುದು, ಆಗ ಚಾಲ್ತಿಯಲ್ಲಿದ್ದ ದಂಡನೆಯ ವಿಧಾನಗಳು. ಅತಿ ಮೊಂಡರಿಗೆ ಕೈ ಕಾಲು ಕಟ್ಟಿ ಕೆಡವುತ್ತಿದ್ದರು. ಅದನ್ನು ಕೋದಂಡ ಹಾಕುವುದು ಎನ್ನುವ ವಾಡಿಕೆ ಇತ್ತು. ಅದು ಹೇಗೆ ಆ ರೀತಿ ಬಳಕೆಯಾಯಿತೋ ನನಗಂತೂ ಹೊಳೆದಿಲ್ಲ. ಬಹುಶಃ ಕೈ ಕಾಲು ಒಟ್ಟಿಗೆ ಕಟ್ಟಿದಾಗ ಬಿಲ್ಲಿನಂತೆ ಬಾಗುವುದರಿಂದ ಆ ಹೆಸರು ಬಂದಿರಬಹುದು.  ಆದರೆ ಅದು ಬಹು ವಿರಳ. ಒಂದೆ ಹುಡುಗ ಹಾದಿಗೆ ಬರುತ್ತಿದ್ದ. ಇಲ್ಲವೆ ಸಾಲಿ ಬಿಡುತ್ತಿದ್ದ.ಗ್ರಾಮದೇವತೆ

ಅಯ್ಯನವರಿಗೆ ಶಾಲಾ ಶುಲ್ಕವನ್ನು ಇಷ್ಟೇ ನೀಡಬೇಂಬ ನಿಗದಿಯಾದ ಕಟ್ಟು ಪಾಡು ಇರಲಿಲ್ಲ. ಅವರು ದೂರದ ಯಾವುದೋ ಗ್ರಾಮದವರು. ಅವರಿಗೆ ನಮ್ಮೂರ ಹಿರಿಯ ರೈತನ ಹನ್ನೊಂದಂಕಣದ ಮನೆಯಲ್ಲಿ ಒಂದು ಕೋಣೆಯಲ್ಲಿ ಉಚಿತ ವಸತಿ. ಇನ್ನು ಊಟ, ಕರೆದವರ ಮನೆಯಲ್ಲಿ. ಅದಕ್ಕೆ ಬಿನ್ನ ಎನ್ನುತ್ತಿದ್ದರು. ಹೀಗಾಗಿ ಅವರು ಮನೆಗೆ ಊಟಕ್ಕೆ ಬರುವುದೆಂದರೆ ದೇವರೆ ಬಂದಂತೆ. ಆದರೆ ಅವರು ಬಹುತೇಕ ಜಂಗಮರಿರಬೇಕು. ಹಾಗಾಗಿ ಲಿಂಗಾಯಿತರೊಬ್ಬರ ಮನೆಯಲ್ಲಿ ಬಿನ್ನವಾಗುತಿತ್ತು. ಅವರ ಊಟದ ಪರಿಯೆ ಬಹು ಚಂದ. ಅವರನ್ನು ಅಟವಾಳಿಗೆಯಲ್ಲಿ ಚಾಪೆ ಇಲ್ಲವೆ ಕಂಬಳಿಯ ಗದ್ದುಗೆಯ ಮೇಲೆ ಕೂಡಿಸುತ್ತಿದ್ದರು. ಅವರ ಎದುರಲ್ಲಿ ಒಂದೂವರೆ ಅಡಿ ಎತ್ತರ ಹಿತ್ತಾಳೆಯ ಮೂರು ಕಾಲಿನ ಸ್ಟೂಲು. ಅದನ್ನು ಅಡ್ಡಣಿಗೆ ಎನ್ನುವರು. ಅದರ ಮೇಲೆ ಕಂಚಿನ ಗಂಗಾಳ. ಪಕ್ಕದಲ್ಲೆ ಥಳ ಥಳ ಹೊಳೆಯುವ ಕಂಚಿನ ಚೊಂಬು ಮತ್ತು ವಾಟಗ. ಕುಳಿತ ಕೂಡಲೆ ವಿಭೂತಿ ಉಂಡೆ ಎದುರು ಬರುತಿತ್ತು. ಅದನ್ನು ಕೈನ ಮೂರೂ ಬೆರಳಿಗೆ ಗಾಢವಾಗಿ ಬಳಿದುಕೊಂಡು ಹಣೆಗೆ ಲೇಪಿಸಿಕೊಂಡರೆ ಬಡಿಸಲು ಸಂಕೇತ. ರೊಟ್ಟಿಯೋ, ಅನ್ನವೋ, ಹೋಳಿಗೆಯೋ, ಮಾದಲಿಯೋ ಏನು ಹಾಕಿದರೂ ಶಿವಾರ್ಪಣ ಎಂದು ಮೊದಲ ತುತ್ತು ಎತ್ತುತಿದ್ದರು. ಊಟ ಮಾಡುವಾಗ ಒಂದೆ ಒಂದು ಅಗಳೂ ಚೆಲ್ಲುತ್ತಿಲಿಲ್ಲ. ಊಟವಾದ ಮೇಲೆ ಗಂಗಾಳದೊಳೊಗೆ ಕೈ ತೊಳೆದು ಆ ನೀರನ್ನೂ ಒಂದು ತೊಟ್ಟು ಬಿಡದೆ ಕುಡಿಯುತ್ತಿದ್ದರು. ಶಿವಾಯನಮಃ ಎಂದು ಎದ್ದರೆ ಊಟ ಮುಗಿದಂತೆ. ದಿನಕ್ಕೆ ಅವರದು ಎರಡೆ ಊಟವಾದರೆ ಮುಗಿಯಿತು. ನಂತರ ಏನನ್ನು ತಿನ್ನುತ್ತಿರಲಿಲ್ಲ.

ಹಗಲಿನ ಶಾಲೆ ರಾತ್ರಿ ಭಜನಾ ಮಂದಿರ. ಯಾರೂ ಸಂಗೀತಗಾರರು ಇರಲಿಲ್ಲ. ಬಹುತೇಕ ಹಾಡುತಿದ್ದುದು ತತ್ವ ಪದಗಳು. ವಾದ್ಯ ಎಂದರೆ  ಒಂದು ಏಕತಾರಿ. ಅಂದರೆ ಒಂದು ತರಹದ ತಂಬೂರಿ. ಎರಡು ಮೂರು ಜತೆ ತಾಳಗಳು. ಕೈ ತಮಟೆಗಳು. ನೇಕಾರ ಭರಮಪ್ಪ. ಕೆಲಸೇರ ಉದ್ದಾನಪ್ಪ. ಕುರುಬರ ಗೌಡಜ್ಜ, ಮಜ್ಜಿಗೆ ಬಸಪ್ಪ ಖಾಯಂ ಸದಸ್ಯರು. ಅಯ್ಯನವರದು ಮುಮ್ಮೇಳವಾದರೆ ಇವರೆಲ್ಲರದು ಹಿಮ್ಮೇಳ. ಅವರು ಹಾಡಿದ ಸಾಲನ್ನೆ ಮತ್ತೆ ಮತ್ತೆ ಒಟ್ಟಾಗಿ ಹಾಡುವರು. ವಿಶೇಷ ಎಂದರೆ ಆಗ ಹೊತ್ತು ಕಂತುತಿದ್ದಂತೆ ಊಟ ಮುಗಿಯುತಿತ್ತು. ಭಜನೆ ಮಾಡಲು  ಊಟವಾಗಿರಬಾರದೆಂದು ಕಡ್ಡಾಯವಿರಲಿಲ್ಲ. ಎಲ್ಲರೂ ಊಟ ಮುಗಿಸಿ ದೇವರ ಬಾಗಿಲ ಆಚೆ ಈಚೆ ಸಾಲಾಗಿ ಕುಳಿತು ಸುಮಾರು ಒಂದು ಗಂಟೆಯವರೆಗೆ ಭಜನೆ ಮಾಡುವರು. ಸುಮಾರು ಹತ್ತಿಪ್ಪತ್ತು ಜನ ಸೇರಿರುತಿದ್ದರು. ಕೆಲವರು ತಮ್ಮ ಕಟ್ಟೆಯ ಮೇಲೆ ಕುಳಿತೆ ಕಿವಿಗೊಡುತಿದ್ದರು. ನೀರವ ರಾತ್ರಿಯ ಮೌನದಲ್ಲಿ ಇವರ ಭಜನೆಯ ಸದ್ದು ದೂರದ ವರೆಗೆ ಕೇಳಿಸುತಿತ್ತು. ಮಂಗಳವಾರ ಶುಕ್ರವಾರ ದೇವಿಗೆ ಊದು ಬತ್ತಿ ಬೆಳಗುತಿದ್ದರು. ಕಾರ್ತಿಕ ಮಾಸದಲ್ಲಿ ಮಾತ್ರ ಕೊಬ್ಬರಿ ಮಂಡಾಳಿನ ಚರಪು ಇರುತಿತ್ತು. ಆಗ ನಾವು ಹುಡುಗರೂ ಮುಕುರುತಿದ್ದೆವು.

ಏನಾದರೂ ಊರ ಪಂಚಾಯತಿ ಆಗಬೇಕೆಂದರೆ ಅಲ್ಲಿಯೇ ಆಗಬೇಕು. ನಮ್ಮ ಊರಲ್ಲಿ ಬಹುತೇಕ ಕುರುಬರೆ ಜಾಸ್ತಿ. ಅವರ ವಿಳೇವು, ಮದುವೆ ಮಾತುಕತೆ, ಉಡಿಕೆ, ಬಿಡುಗಡೆ, ಗಂಡ ಹೆಂಡಿರ ಜಗಳ, ಅಣ್ಣ ತಂದಿರ ಪಾಲು ಎಲ್ಲವನ್ನೂ ಕುಲಸ್ಥರು ಸೇರಿ ತಿರ್ಮಾನ ಮಾಡುವರು. ಮತ್ತು ಬಹುತೇಕ ಅವರದೇ ಅಂತಿಮ ಮಾತು. ತಪ್ಪು ಮಾಡಿದವರಿಗೆ ದಂಡ ಹಾಕುವುದು, ನೊಂದವರಿಗೆ ಪರಿಹಾರ ನೀಡುವದು. ಕಿತ್ತಾಡಿದವರನ್ನು ರಾಜಿ ಮಾಡಿಸುವುದು ಹಿರಿಯರಾದ ಪಂಚಾಯತಿದಾರರ ಹೊಣೆ. ಅವರ ಕಟ್ಟಳೆ ಮೀರಿ ಯಾರೂ ನಡೆಯುವಂತಿಲ್ಲ. ಅಷ್ಟು ಅದಕ್ಕೆ ಗೌರವ, ಕೋರ್ಟು ಕಚೇರಿ ಪೊಲೀಸು ಊರಿಗೆ ಬಹುದೂರ. ಎಲ್ಲ ದೇವರ ಎದುರಲ್ಲೆ ಇತ್ಯರ್ಥವಾಗುವವು. ಗುಡಿ ಸಾಮಾಜಿಕ ನೆಮ್ಮದಿಯ ಕೇಂದ್ರವೂ ಆಗಿತ್ತು. ಅಯ್ಯನವರು ಗುಡಿಯಲ್ಲೆ ಇದ್ದರೂ ಊರ ಪಂಚಾಯತಿಯಲ್ಲಿ ಅವರು ಭಾಗವಹಿಸುವಂತಿರಲಿಲ್ಲ.

ಲೇಖಕರುಅಯ್ಯನವರು ಬಾಯಿಬಿಟ್ಟು ಕೇಳದಿದ್ದರೂ ಅವರಿಂದ ಯಾರೂ ಬಿಟ್ಟಿ ಪಾಠ ಹೇಳಿಸಿಕೊಳ್ಳುತ್ತಿಲಿಲ್ಲ. ಕೆಲವರು ವರ್ಷಕ್ಕೆ ಇಷ್ಟು ಎಂದು ಹಣ ನೀಡಿದರೆ ಇನ್ನುಳಿದವರು ದವಸ ಧಾನ್ಯ, ಕಾಳು ಕಡಿ ಕೊಡುತ್ತಿದ್ದರು. ಅದೂ ಈಗಿನಂತೆ ತಿಂಗಳು ತಿಂಗಳಿಗೆ ಅಲ್ಲ. ಸುಗ್ಗಿಯ ಹಂಗಾಮದಲ್ಲಿ ಜೋಳ ಭತ್ತ ಸೆಂಗಾ ಅದು ಇದು ಸಂಗ್ರಹವಾಗುತಿತ್ತು. ಅದನ್ನು ಅವರು ಯಾರದಾದರೂ ಹಗೇವಲ್ಲಿ ಇಡುತ್ತಿದ್ದರು. ಉಳಿದವು ಊರ ಗೌಡರ ಕಣಜದಲ್ಲಿ, ಅವರ ಹೆಸರಲ್ಲಿ ಇರುತಿತ್ತು. ವರ್ಷಕ್ಕೋ ಆರು ತಿಂಗಳಿಗೋ ಒಂದು ಸಾರಿ ಅವರು ಊರಿಗೆ ಹೋಗುವಾಗ ಬಂಡಿ ಕಟ್ಟಿಕೊಡುತ್ತಿದ್ದರು. ಅದರಲ್ಲಿ ಅವರನ್ನು, ಅವರ ದವಸ ಧಾನ್ಯವನ್ನು ಅವರ ಊರಿಗೆ ತಲುಪಿಸುತಿದ್ದರು.

ಆರರಿಂದ ಅರವತ್ತು-೨:ರೂಪಾಯಿಗೆ ತೊಂಬತ್ತಾರು ಪೈಸೆಗಳು!

``ಮಕ್ಕಳನ್ನು ಮಾರಿಯಾದರೂ ಮಾರ್ನವಮಿ ಮಾಡು" ಎಂಬುದು ಒಂದು ಕಾಲದಲ್ಲಿ ಹಳ್ಳಿಗಳಲ್ಲಿ ಇದ್ದ ರೂಢಿಯ ಮಾತು. ಮಾರ್ನವಮಿ ದೊಡ್ಡ ಹಬ್ಬ. ಅದೂ ಹತ್ತು ದಿನದ್ದು. ಅದಕ್ಕೆ ಮಾರ್ನವಮಿಗೆ ಹೊಸ ಬಟ್ಟೆ ಬೇಕೆ ಬೇಕು. ಆಗಿನ್ನೂ ರಾಜಾಸ್ತಾನದ ಮಾರವಾಡಿಗಳು ಬಟ್ಟೆ ಅಂಗಡಿಗಳನ್ನು ಎಲ್ಲೆಂದರೆ ಅಲ್ಲಿ ತೆರದಿರಲಿಲ್ಲ. ಆಗ ವ್ಯಾಪಾರ ಏನಿದ್ದರೂ ಸೆಟ್ಟರ ಸ್ವತ್ತು. ಹೊಸಪೇಟೆಯಲ್ಲಿ ಕಾಕುಬಾಳ ಸೆಟ್ಟರು ಮತ್ತು ಪೆಂಡಕೂರು ಸೆಟ್ಟರ ಅಂಗಡಿ ಬಹು ಹೆಸರುವಾಸಿ. ಆದರೆ ಅವರ ವ್ಯಾಪಾರ ಪಟ್ಟಣಕ್ಕೆ ಸೀಮಿತ. ಅದಕ್ಕೆ ನಮ್ಮ ಹಳ್ಳಿಯಲ್ಲಿ ಯಾರೋ ಆಂಧ್ರದ ಕಡೆಯವರು ರಾಮಯ್ಯ ಅಂತ ಅವರ ಹೆಸರು. ಅವರು ಬಟ್ಟೆ ತಂದು ಉದ್ದರಿಯಲ್ಲಿ ಕೊಡುತ್ತಿದ್ದರು. ಆಗ ಅವರ ಅಂಗಡಿ ದುರುಗಮ್ಮನ ಗುಡಿ.  ಆಗ ನಮ್ಮ ಶಾಲೆಗೆ ರಜೆ. ಅದಕ್ಕೆ ನಮಗೆ ದಸರೆಗೆ ಮುಂಚೆ ಹತ್ತು ದಿನದಿಂದ ದೀಪಾವಳಿವರೆಗೆ ರಜೆ. ಕಾರಣ ಆಗ ಗುಡಿಯಲ್ಲಿ ಬಟ್ಟೆ ಅಂಗಡಿ ಬಿಡಾರ ಹೂಡುತಿತ್ತು. ಆದರೆ ನಮ್ಮ ಅಯ್ಯನವರು ನಮ್ಮನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಆಯ್ದ ಮತ್ತು ಆಸಕ್ತಿ ಇದ್ದವರಿಗೆ ದಸರೆ ಹಾಡುಗಳನ್ನು ಕೋಲಾಟವನ್ನು ಕಲಿಸಿ, ತಾವು ಜತೆಯಲ್ಲಿದ್ದು ಮನೆ ಮನೆಗೆ ಕೋಲು ಹಾಕಲು ಕರೆದೊಯ್ಯುವುದು ವಾಡಿಕೆ. ನಾವೂ ಉತ್ಸಾಹದಿಂದಲೆ ಹೋಗುತ್ತಿದ್ದೆವು.

ರೈತರು ತಮ್ಮ ಅಗತ್ಯಕ್ಕೆ, ಯೋಗ್ಯತಾನುಸಾರವಾಗಿ ನೂರು ಇನ್ನೂರು ರೂಪಾಯಿಯ ಬಟ್ಟೆಯನ್ನು ಹಬ್ಬಕ್ಕೆ ಕೊಳ್ಳುತ್ತಿದ್ದರು. ಅವರ ಜೊತೆಯಲ್ಲಿಯೇ ಒಬ್ಬ ಸಿಂಪಿಗನೂ ಬರುತ್ತಿದ್ದ. ಅವನು ಅಲ್ಲಿಯೇ ಹುಡುಗರಿಗೆ ಅಂಗಿ, ಚೊಣ್ಣ; ಹುಡುಗಿಯರಿಗೆ ಪರಕಾರ, ಜಂಪರ್‌, ಪೋಲಕ;  ಹೆಂಗಸರಿಗೆ ಕುಬುಸ ಹೊಲಿದು ಕೊಡುತಿದ್ದ. ಆಗ ರೈತ ಮಹಿಳೆಯರಲ್ಲಿ ಏಕ ಬಗಲಿನ ಕುಬಸ ಸಾರ್ವತ್ರಿಕವಾಗಿತ್ತು. ಅದು ಫ್ಯಾಷನ್‌ ಅಂತ ಅಲ್ಲ. ಹೊಲದಲ್ಲಿ ದುಡಿಯುವ, ಮನೆಯಲ್ಲಿ ಕುಟ್ಟಿ ಬೀಸಿ ಮಾಡುವ ಹೆಂಗಸರು ರಟ್ಟೆ ಮುರಿಯುವ ಹಾಗೆ ಕೆಲಸ ಮಾಡುತ್ತಿದ್ದರು. ಅದರಿಂದ ಬೆವರೂ ಜಾಸ್ತಿ. ಹಾಗಾಗಿ ಅದು ಬೇಗ ಹರಿಯದೆ ಬಾಳಿಕೆ ಬರಲೆಂದು ಆ ಉಪಾಯ.  

ರೈತರು ಕೊಳ್ಳುವಾಗ ಬಟ್ಟೆಯ ಬೆಲೆಯಲ್ಲಿ ಆಗ ಅಷ್ಟೋ ಇಷ್ಟೋ ಕೊಟ್ಟು ಉಳಿದುದನ್ನು ಸುಗ್ಗಿಯಾದ ಮೇಲೆ ಕೊಡುತ್ತಿದ್ದರು. ದಸರೆಗೆ ಕೊಂಡವರ ಬಾಕಿಯನ್ನು ವಸೂಲಿ ಮಾಡಲು ಉಗಾದಿ ಹೊತ್ತಿಗೆ ಬರುತ್ತಿದ್ದರು. ಅದಕ್ಕೆ ಉಗಾದಿ ಉದ್ದರಿ ಎಂಬ ಮಾತು ಚಾಲ್ತಿಯಲ್ಲಿ ಬಂದಿರುವುದು. ಅಷ್ಟು ಹೊತ್ತಿಗೆ ಕಾಳು ಕಡಿ ಹೊಲದಿಂದ ಮನೆಗೆ ಬಂದು ಚೀಲಗಟ್ಟಲೆ ಬಿದ್ದಿರುತಿತ್ತು. ಗಿದ್ನ ಧಾನ್ಯವನ್ನು ಹೊರಗೆ ಹಾಗೆ ಅಟ್ಟಣಿಗೆಯ ಮೇಲೆ ಇಡುತ್ತಿದ್ದರು. ಗಿದ್ನ ಅಂದರೆ ಮೂವತ್ತೆರಡು ಸೇರು, ಗೂಡಿ ಎಂದರೆ ೬೪ ಸೇರು, ಪಲ್ಲ ಎಂದರೆ ೧೦೦ ಸೇರು. ಆಗ ಧಾನ್ಯಗಳನ್ನು ಚಿಟಿಕೆ, ಮುಷ್ಟಿ, ಬೊಗಸೆ, ಅರಪಾವು, ಪಾವು, ಅಚ್ಚೇರು, ಸೇರು, ಗಿದ್ನ, ಗೂಡಿ, ಪಲ್ಲ ಮತ್ತು ಖಂಡುಗ ಎಂಬ ಅಳತೆಗಳಲ್ಲಿ ಕೊಟ್ಟು-ತಗಂಡು ಮಾಡುತ್ತಿದ್ದರು. ಗಿದ್ನ ಎಂಬ ಪದ ಚಿಕ್ಕಪುಟ್ಟ ವ್ಯವಹಾರಕ್ಕೆ ಬಳಕೆಯಾಗುತಿತ್ತು. "ಗಿದ್ನ ಜೋಳ ಕೊಟ್ಟು ಗೌಡನ ಗೆಣಕಾತಿ ಅನಿಸಿಕೊಳ್ಳುತ್ತಾಳೆ" ಎಂದು ಹೆಸರಿನ ಹಪಹಪಿ ಇರುವ ಹೆಂಗಸನ್ನು ಹಂಗಿಸುವರು. ಗೂಡಿಗಟ್ಟಲೆ ಜೋಳ ಇದ್ದರೆ ಹಗೇವು ಬೇಕು. ಜೋಳವನ್ನು ಹಗೇವಿನಲ್ಲಿ ಹಾಕಿದ್ದರೆ, ಉಳಿದ ಧಾನ್ಯಗಳನ್ನು ಪಲ್ಲಗಟ್ಟಲೆ ನೆಲ್ಲನ್ನು ಗುಮ್ಮಿ, ಕೆರಸಿಯಲ್ಲಿ, ಖಂಡುಗಗಟ್ಟಲೆ ಭತ್ತವನ್ನು ಕಣಜದಲ್ಲಿ ಸಂಗ್ರಹಿಸುವುದು ವಾಡಿಕೆ. ಪ್ರತಿ ದೊಡ್ಡ ರೈತನದೂ ಅಂಗಳದಲ್ಲೆ ಒಂದು ಹಗೇವು ಇದ್ದೆ ಇರುತ್ತಿತ್ತು. ನಾಲಕ್ಕು ಅಡಿ ಆಳ ಅಗೆದ ನಂತರ  ಕಲ್ಲಿನಲ್ಲಿ ಒಬ್ಬರು ಇಳಿಯುವಷ್ಟು ಬಾಯಿ, ನಂತರ ಅಗಲವಾದ ಭಾವಿಯಂತಹ ಟೊಳ್ಳು ಪ್ರದೇಶ. ಅದರಲ್ಲಿ ನೂರರಿಂದ ನೂರೈವತ್ತು ಚೀಲ ಜೋಳ ಸಂಗ್ರಹಿಸಬಹುದು. ಅದರಲ್ಲಿ ಜೋಳ ಹಾಕಿ ಬಾಯಿಯ ಮೇಲೆ ಭದ್ರವಾದ ಬಂಡೆ ಇಟ್ಟು ಮೇಲೆ ಮಣ್ಣು ಹಾಕಿದರೆ ಮುಗಿಯಿತು. ಅದರ ಮೇಲೆ ಹತ್ತು ಚೀಲ ಹೊತ್ತ ಬಂಡಿ ಓಡಿಸಿದರೂ ಜಪ್ಪಯ್ಯ ಅನ್ನುತ್ತಿರಲಿಲ್ಲ. ಜಡಿ ಮಳೆ ಬಂದು ಮೂರಡಿ ನೀರು ಹರಿದರೂ ಒಂದು ಹನಿಯೂ ಒಳ ಹೋಗುತ್ತಿರಲಿಲ್ಲ. ಮೂರು ತಿಂಗಳಿಗೋ ಆರು ತಿಂಗಳಿಗೋ ಒಮ್ಮೆ ಹಗೇವು ತೆಗೆದು ಮೂರುನಾಲಕ್ಕು ಚೀಲ ಒಟ್ಟಿಗೆ ಜೋಳ ಹೊರತೆಗೆಯುತ್ತಿದ್ದರು. ಎಲ್ಲರಿಗೂ ಹಗೇವೂ ಇರುತ್ತಿರಲಿಲ್ಲ. ಆಗ ಈಗಿನಂತೆ ಹೊಲದಿಂದ ಮಾರುಕಟ್ಟೆಗೆ ಧಾನ್ಯವನ್ನು ಸಾಗಹಾಕಿ ಮಾರುವ  ಪದ್ಧತಿಯಿರಲಿಲ್ಲ. ಒಂದು ವರ್ಷ ಒಳ್ಳೆಯ ಮಳೆಯಾಗಿ ಸಮೃದ್ಧಿಯಾಗಿ ಬೆಳೆ ಬೆಳೆದರೆ ಮುಂದಿನ ಮೂರು ವರ್ಷಕ್ಕಾದರೂ ಅದೆ ಧಾನ್ಯವನ್ನು ಬಳಸುತಿದ್ದರು. ಧಾನ್ಯವನ್ನು ಸಂಗ್ರಹಿಸಲು ಹಗೇವು ಅತ್ಯುತ್ತಮ ಗೋಡೌನ್‌ ಆಗಿರುತ್ತಿತ್ತು. ಅದಕ್ಕೆ ಇಲಿಗಳ, ಕ್ರಿಮಿಕೀಟಗಳ ಬಾಧೆ ಇಲ್ಲ. ಕಳ್ಳಕಾಕರ ಭಯ ಇಲ್ಲ. ನೆಲದೊಳಗಣ ನಿಧಾನ ಅದು. ಹಾಕುವ ಮುಂಚೆ ಬೇವಿನ ಎಲೆಯ ಹೊಗೆ ಹಾಕಿ ತಳದಲ್ಲಿ ಹುಲ್ಲು ಹರವಿ ಈಚಲ ಚಾಪೆ ಹಾಕಿ ಗೋಡೆಗೆ ಜೋಳದ ಸಿವಿಡಿನಿಂದ ಮಾಡಿದ ಆವರಣವಿದ್ದರೆ ತೀರಿತು. ಜೋಳ ಸುರಕ್ಷಿತ. ಬಹಳ ಎಂದರೆ ಮೂರು ನಾಲಕ್ಕು ವರ್ಷವಾದ ಮೇಲೆ ತುಸು ಮುಗ್ಗಲು ವಾಸನೆ ಬರಬಹುದೆ ಹೊರತು ತಿನ್ನಲು ಏನೂ ತೊಂದರೆ ಇರುತ್ತಿರಲಿಲ್ಲ. ಜಡಿ ಮಳೆ ಬಂದು ಹಗೇವಿನ ಮೇಲೆ ಮೊಳಕಾಲಮಟ ನೀರು ಹರಿದರೂ ಹಗೇವಿನಲ್ಲಿ ಒಂದು ಹನಿ ನೀರು ಸೋರುತ್ತಿರಲಿಲ್ಲ. ಹಾಗೆ ಕಟ್ಟಿರುತ್ತಿದ್ದರು ಅವುಗಳನ್ನು. ಇನ್ನು ಕೆರಸಿ, ಕಣಜ ಭತ್ತದ ಸಂಗ್ರಹಕ್ಕೆ ಹತ್ತು ಇಪ್ಪತ್ತು ಗೂಡಿ ಭತ್ತವಿದ್ದರೆ ಬಿದಿರಿನ ಚಾಪೆಯಿಂದ ಕೆರಸಿ ಕಟ್ಟುತ್ತಿದ್ದರು. ಇನ್ನೂ ಹೆಚ್ಚಿನ ಸ್ಥಿತಿವಂತರಾದರೆ ಗಚ್ಚು ಗಾರೆಯಿಂದ ಗಾಳಿ, ತೇವ, ಇಲಿ, ಹೆಗ್ಗಣ ಹೋಗದಂತಹ ಬಂದೋಬಸ್ತು ಕೋಣೆಯ ತರಹ ಮೇಲಿನಿಂದ ಇಳಿಯಬಹುದಾದ ರಚನೆ ಹೊಂದಿರುತ್ತಿತ್ತು. ಅದರಲ್ಲಿ ಭತ್ತ ಸುರಿದರೆ ಬೇಕಾದಾಗ ಒಬ್ಬರು ಇಳಿದು ಪುಟ್ಟಿಯಲ್ಲಿ ತುಂಬಿಕೊಡಬೇಕು. ಇನ್ನು ನವಣೆ, ಸಾವೆ, ಹೆಸರು ಅಲಸಂದಿ, ಎಳ್ಳು, ಕುಸುಬಿ, ಗುರೆಳ್ಳುಗಳನ್ನು ಅಡಕಲ ಗಡಿಗೆಗಳಲ್ಲಿ ಸಂಗ್ರಹಿಸಿಡುತ್ತಿದ್ದರು. ಆ ಕೋಣೆಗೆ ಅಡಕಲ ಕೋಣೆಯೆಂದೆ ಹೆಸರಿತ್ತು. ಐವತ್ತು ಅರವತ್ತು ಸೇರು ಹಿಡಿಯಬಹುದಾದ ದೊಡ್ಡ ಗಡಿಗೆಯ ಮೇಲೆ ಕ್ರಮವಾಗಿ ಕಿರಿದಾಗುತ್ತಾ ಹೋಗುವ ಆರೇಳು ಗಡಿಗೆಗಳನ್ನು ಒಂದರ ಮೇಲೆ ಒಂದು ಜೋಡಿಸಿರುವುದನ್ನು ನೋಡುವುದೆ ಒಂದು ಚಂದ. ಪೂರ್ತಿ ಮೇಲಿರುವುದನ್ನು ಮಗಿ ಎಂದು ಕರೆಯುತಿದ್ದರು. ಅಡಕಲ ಗಡಿಗೆಯು ಅನೇಕ ಸಲ ಹಣ ಬಚ್ಚಿಡುವ ಸುರಕ್ಷಿತ ಜಾಗವಾಗಿತ್ತು. ಯಾವುದೋ ಗಡಿಗೆಯಲ್ಲಿನ ಧಾನ್ಯದಲ್ಲಿ ಬಟ್ಟೆಯಲ್ಲಿ ಕಟ್ಟಿ ಇಟ್ಟ ಗಂಟನ್ನು ಹುಡುಕುವುದು ಸರಳವಾಗಿರಲಿಲ್ಲ. ಇಟ್ಟವರಿಗೆ ಮಾತ್ರ ಗೊತ್ತಿರುತಿತ್ತು. ಮಗಿ ಅದು ಸಾಧಾರಣ ಒಂದು ತಂಬಿಗೆಯ ಗಾತ್ರದ್ದಾಗಿರುತ್ತಿತ್ತು. ಶುಭ ಕಾರ್ಯದಲ್ಲಿ ಅದನ್ನು ಬಹುವಾಗಿ ಬಳಸುತ್ತಿದ್ದರು. ಸಾಧಾರಣ ಅವುಗಳಿಗೆ ಸುಣ್ಣ ಹಚ್ಚಿರುತ್ತಿದ್ದರು. ಕಾರಣ ಅವು ಕತ್ತಲಲ್ಲಿ ಕಾಣಲಿ ಎಂದಿರಬೇಕು. ಮೇಲೆ ಕೆಮ್ಮಣ್ಣಿನ ಸಿಂಗಾರ ಬೇರೆ. ಅದು ಅಂದ ಚಂದ ಹೆಚ್ಚಿಸಿದರೂ, ಸುಣ್ಣಕ್ಕೆ ಕ್ರಿಮಿನಾಶಕ ಗುಣವಿರುವುದೂ ಒಂದು ಮುಖ್ಯ ಕಾರಣ.  ಚೀಲಗಳನ್ನು ಅಟ್ಟಣಿಕೆಯ ಮೇಲೆ ಒಟ್ಟಿರುತ್ತಿದ್ದರು. ಅದು ಒಂದು ರೀತಿಯಲ್ಲಿ ಮಂಚ ಮತ್ತು ಬೆಂಚುಗಳ ಹೈಬ್ರೀಡ್‌ ನಂತಿರುತಿತ್ತು.ಬನ್ನು ಮುಡಿಯುವ ಮೆರವಣಿಗೆಯಲ್ಲಿ ಕೋಲಾಟ

ಬಟ್ಟೆ ರಾಮಯ್ಯ ಉಗಾದಿಗೆ ಬಂದವನು ತಿಂಗಳೆರಡು ತಿಂಗಳು ಬಾಕಿ ವಸೂಲಿಗೆ ಗ್ರಾಮದಲ್ಲೆ ತಂಗುತಿದ್ದ. ಪ್ರತಿ ದಿನ ಬಾಕಿದಾರರ ಬಾಗಿಲಿಗೆ ಹೋಗಿ ನಮಸ್ಕಾರ ಮಂಡಿ ಎಂದು ಅಟವಾಳಿಗೆಯಲ್ಲಿ ಕುಳಿತುಕೊಳ್ಳುತ್ತಿದ್ದ. ಅವರು ಹಾಲನ್ನೋ ಮಜ್ಜಿಗೆಯನ್ನೋ ಕುಡಿಯಲು ಕೊಟ್ಟರೆ ನೆಮ್ಮದಿಯಿಂದ ಕುಡಿದು ಅವರು ಕೊಟ್ಟಷ್ಟು ಹಣ ಪಡೆದು ಹೋಗುತ್ತಿದ್ದ. ಸಾಧಾರಣವಾಗಿ ಯಾರೂ ಒಟ್ಟಿಗೆ ಬಾಕಿ ಚುಕ್ತಾ ಮಾಡುತ್ತಿರಲಿಲ್ಲ. ವಾರಕ್ಕೆ ಇಷ್ಟು ಕೊಟ್ಟು ತಿಂಗಳುಗಟ್ಟಲೆ ಸತಾಯಿಸುತ್ತಿದ್ದರು. ಆದರೆ ಆ ಮುದುಕ ಬೇಸರಿಸದೆ ನಗುನಗುತ್ತಾ ವಸೂಲಿ ಮಾಡಿಕೊಳ್ಳುತ್ತಿದ್ದ. ನಮ್ಮ ಹಳ್ಳಿಯ ಕಡೆ ಉಗಾದಿ ಉದ್ರಿ ಎಂಬ ಮಾತು ಚಾಲ್ತಿಯಲ್ಲಿದೆ. ಬಹುಶಃ ಅದಕ್ಕೆ ಮೂಲ ಈ ರಾಮಯ್ಯನೇ ಇರಬಹುದೇನೋ ಎಂಬ ಗುಮಾನಿ ನನಗೆ. ಯಾರು ಎಷ್ಟೆ ಸತಾಯಿಸಿದರೂ ಮತ್ತೆ ದಸರೆಗೆ ಬಂದಾಗ ಆತನೇ ಕರೆದು ಏನಪ್ಪಾ, ಮಗಳಿಗೆ ಹೊಸ ಸೀರೆ ದಿವಿನಾದದ್ದು ಬಂದಿದೆ ತೆಗೆಸಿಕೊಡು ಎಂದು ಬಣ್ಣಾ ಬಣ್ಣಿಸಿ ಮಾರಾಟ ಮಾಡುತ್ತಿದ್ದ. ನನಗೆ ನೆನಪಿದ್ದಂತೆ ನಾನು ಹೈಸ್ಕೂಲಿಗೆ ಬರುವ ಹೊತ್ತಿಗೆ ಈ ರೀತಿಯ ವ್ಯಾಪಾರ ಕೊನೆಗೊಂಡಿತ್ತು. ಆತನಿಗೆ ವಯಸ್ಸಾದ್ದರಿಂದ ಬರಲಿಲ್ಲವೋ ಅಥವ ಅವನ ಮಕ್ಕಳು ಬೇರೆ ವ್ಯವಹಾರ ಶುರು ಮಾಡಿದರೋ ತಿಳಿಯದು. ಇಲ್ಲವೆ ಹತ್ತಿರದ ಹೊಸಪೇಟೆಯ ಸ್ಪರ್ಧೆ ಹೆಚ್ಚಾಯಿತೋ ಗೊತ್ತಿಲ್ಲ. ಆದರೆ ಪ್ರತಿವರ್ಷ ಕಾಣುತಿದ್ದ ಆ ನಗು ಮೊಗದ ಮುದುಕ ವ್ಯಾಪಾರಿ ಮಾತ್ರ ಕಾಣೆಯಾಗಿದ್ದ.

ದಸರೆ ಸಮಯದ ಇನ್ನೊಂದು ವಿಶೇಷವೆಂದರೆ ಮಕ್ಕಳ ಕೋಲಾಟ. ನಮಗೆ ಈಗಾಗಲೆ ತರಬೇತಿಯಾಗಿರುತಿತ್ತು. ಹೊಸ ಬಟ್ಟೆ ಉಡಿಸಿ ಕಾಲಿಗೆ ಗೆಜ್ಜೆ ಕಟ್ಟಿಸಿ ಕೈಗೆ ಬಣ್ಣ ಬಳಿದ ಕೋಲುಗಳನ್ನು ಕೊಟ್ಟು ನಮ್ಮ ಅಯ್ಯ ಮನೆ ಮನೆಗೆ ದಸರಾ ಕೋಲು ಹಾಕಲು ಕರೆದೊಯ್ಯುತ್ತಿದ್ದರು. ಅದೂ ಎಲ್ಲರ ಮನೆಗಳಿಗಲ್ಲ, ಸ್ಥಿತಿವಂತರ ಮನೆಗೆ ಮಾತ್ರ. ಆದರೆ ಸಾಧಾರಣ ಜನರು ಮಕ್ಕಳು ತಮ್ಮ ಮನೆಗೆ ಬಂದು ಕೋಲು ಹಾಕಿ ಹಾಡು ಹಾಡುವುದು ಶುಭಸೂಚಕ ಎಂದು ಕರೆದು ಕೋಲು ಹಾಕಲು ಹಾಡು ಹೇಳಲು ಉತ್ತೇಜನ ನೀಡುತ್ತಿದ್ದರು ಎಂದು ನಾವು ಎಳೆಯರು ಅಲ್ಲಿ ಹೋಗಿ ಕೋಲು ಕುಟ್ಟುತ್ತಾ ಕುಣಿಕುಣಿದು ಹಾಡುತ್ತಿದ್ದೆವು. ನಮಗೆ ಹಿಮ್ಮೇಳವಾಗಿ ವಾದ್ಯ ಇರುತ್ತಿತ್ತು.

ಆಶ್ವೀಜ ಶುದ್ಧ ಮಾರ್ನವಮಿ ಬರಲೆಂದು
ಧನ ಧಾನ್ಯ ಸಮೃದ್ಧಿ ನಿಮಗೆ ತರಲೆಂದು
 ಹಾರೈಸುವೆವು ನಾವು ಬಾಲಕರು ಬಂದು...

ಎಂದು ಮೊದಲಾಗಿ ಹಾಡುತ್ತಾ ಕೋಲು ಹೊಯ್ಯುತ್ತಿದ್ದೆವು. 

ಅದಕ್ಕೆ ಜೊತೆಯಾಗಿ ಒಂದು ಕೊರಳಿಗೆ ಜೋತು ಹಾಕಿದ ಹಾರ್ಮೊನಿಯಂ. ಕಿವಿಗೆ ಒತ್ತುತ್ತಿದ್ದ ಪಿಟೀಲು ಕುಯ್ಯುತ್ತಾ ಇದ್ದ ಬಗ್ಗುರಪ್ಪ, ದೊಡ್ಡದನಿಯಲ್ಲಿ ದಸರೆ ಹಾಡುವ ನಮ್ಮ ಅಯ್ಯನವರೂ ಇರುತ್ತಿದ್ದರು.

ಮಾರ್ನವಮಿ ದಿಬ್ಬ (ಹಂಪೆ)ಮನೆ ಮನೆಯಲ್ಲು ಕಾಳು ಕಡಿ, ಜತೆಗೆ ಎಂಟಾಣೆ, ರೂಪಾಯಿ ದಕ್ಷಿಣೆ ಸಿಗುತಿತ್ತು. ನಮಗೂ ಆಗೀಗ ಮಜ್ಜಿಗೆ, ಕಡಲೆ, ಮಂಡಾಳಿನ ಸಮಾರಾಧನೆಯಾಗುತ್ತಿತ್ತು. ಒಮ್ಮೊಮ್ಮೆ ಬೆಂಡು ಬತ್ತಾಸು. ಕೆಲವರ ಮನೆಯಲ್ಲಿ ಮಾದಲಿ, ಕಡಬು, ಸಿಗುತ್ತಾ ಇತ್ತು. ಎಗ್ಗಿಲ್ಲದೆ ಎಲ್ಲರೂ ತಿನ್ನುತಿದ್ದರು. ಒಬ್ಬಿಬ್ಬರು ಮಾತ್ರ ಬಿಂಕ ಮಾಡಬೇಡ ಎಂದು ಬಾಯಲ್ಲಿ ನೀರು ಸುರಿಸುತ್ತಾ ಸುಮ್ಮನೆ ನೋಡುತ್ತಿದ್ದರು.

ದಸರೆಯ ಹತ್ತು ದಿನ ಬೆಳಗಿನ ಹೊತ್ತು ಸಾಲಿ ಹುಡುಗರ ಗಡಿಬಿಡಿಯಾದರೆ ರಾತ್ರಿ ಏಳಕ್ಕೆ ಪ್ರಾರಂಭವಾಗುತಿತ್ತು ಹದಿ ಹರೆಯದವರ ಹುಡುದಿ. ಬೆಳದಿಂಗಳ ರಾತ್ರಿಯಲ್ಲಿ ಉಪ್ಪಿನಾಟ, ಅಕ್ಕಿ ಆಟ, ಗುಂಡು ಎತ್ತುವುದು, ಅದಕ್ಕೂ ಮಿಗಿಲಾಗಿ ಕೋಲಾಟದ ಅಭ್ಯಾಸ. ಸುಮಾರು ೨-೩ ತಾಸು ಓಣಿಯಲ್ಲಿ ಅವರ ಕಂಚಿನ ಕಂಠದ ಹಾಡು ಮತ್ತು ಕೋಲಿನ ಕಟಕಟ ಶಬ್ದ ಮಾರ್ದನಿಸುತ್ತಿದ್ದವು. ಅವು ಮುಗಿಯುತ್ತಿದ್ದದ್ದೂ ದೇವರ ಬನ್ನಿ ದಿನ. ಅಂದು ಸುಮಾರು ಆರು ಮೈಲು ದೂರದ ಗುಡ್ಡದಲ್ಲಿನ ದೇವರ ದರ್ಶನಕ್ಕೆ ಸುತ್ತಲ ಹತ್ತು ಹಳ್ಳಿಯವರು ಹೋಗುವರು. ಆಗ ಹಾದಿಯುದ್ದಕ್ಕೂ ಕೋಲು ಹಾಕುತ್ತಾ ಹೋಗುವ ಅವರ ಸಂಭ್ರಮ ಮತ್ತು ಶಾರೀರಿಕ ಶಕ್ತಿಯನ್ನು ಇಂದು ನೋಡಲು ಸಾಧ್ಯವೇ ಇಲ್ಲ. ಒಬ್ಬರಿಗಿಂತ ಒಬ್ಬರು ಪೈಪೋಟಿಯಲ್ಲಿ ಕೋಲು ಹಾಕುತ್ತಿದ್ದರೆ ನಿಂತು ನೋಡುವ ಹೆಂಗಳೆಯರಿಗೆ ಅದೇನು ಗಮ್ಮತ್ತು. ಅವರ ನಗೆ, ಉದ್ಗಾರಗಳಿಂದ ಯುವಕರು ನೆಲದ ಮೇಲೆ ಕಾಲೆ ಇಡುವುದಿಲ್ಲವೇನೋ ಎನ್ನುವಂತೆ ಕುಣಿಯುತ್ತಾ ಕೋಲಾಟವಾಡುತ್ತಿದ್ದರು. ಅವರ ವೇಗ, ಕೋಲು ಬೀಸುವ ರಭಸ, ವಿವಿಧ ವಿನ್ಯಾಸದಲ್ಲಿ ನಿಂತು, ಕುಂತು ಕೋಲೂ ತಾಗಿಸುವ ವರಸೆ ಕಣ್ಣಿಗೆ ಒಂದು ಹಬ್ಬ. ಇದು ಕೊನೆಗೊಂಡಾಗ ಎಲ್ಲರಿಗೂ ಅಯ್ಯೋ ಮುಗಿಯಿತಲ್ಲಾ ಎನ್ನುವ ಕೊರಗು. ಮತ್ತೆ ಮುಂದಿನ ದಸರೆಗೆ ಬರುವುದಲ್ಲಾ ಎಂಬ ಭರವಸೆ.
ಹಬ್ಬದ ಬನ್ನಿಯಾದ ಮಾರನೆ ದಿನ ಊರ ಬನ್ನಿ. ಅಂದು ಊರೆಲ್ಲ ಸಡಗರ. ಸಂಜೆಯ ಹೊತ್ತಿಗೆ ಗಂಡಸರು ಮಕ್ಕಳೂ ಹೊಸ ಬಟ್ಟೆ ಉಟ್ಟು  ಗುಡಿಯಿಂದ ಗೌಡರ ನೇತೃತ್ವದಲ್ಲಿ ಮೆರವಣಿಗೆ ಹೊರಡುತ್ತಿದ್ದರು. ಆಗ ಕೈನಲ್ಲಿ ಕತ್ತಿ ಕಠಾರಿ, ಭರ್ಚಿ ಹಿಡಿದಿರುತ್ತಿದ್ದರು. ಅವು ಇದ್ದವರ ಮನೆಯಲ್ಲಿ  ಬೇರೆ ದಿನಗಳಲ್ಲಿ ಅವನ್ನು ಮಾಳಿಗೆಯ ಚಾಪೆ ಕೆಳಗೆ ಸಿಕ್ಕಿಸಿರುತಿದ್ದರು. ಆಯುಧ ಪೂಜೆಯ ದಿನ ಅವನ್ನು ಹೊರತೆಗೆದು ತೊಳೆದು ವಿಭೂತಿ ಹಚ್ಚಿ ಭರ್ಜರಿ ಪೂಜೆ ಮಾಡುವರು. ಬನ್ನಿ ಮುಡಿಯುವಾಗ ಅವನ್ನು ಹಿಡಿದು ಹೊರಡುತ್ತಿದ್ದರು. ಆಗ ಗೌಡರ ಮನೆಯಲ್ಲಿದ್ದ ಕೋವಿಯೊಂದು ತಳವಾರನ ಹೆಗಲಮೇಲೆ ರಾರಾಜಿಸುತಿತ್ತು. ಚಿಕ್ಕ ಮಕ್ಕಳಿಗೆಲ್ಲ ಅದು ಒಂದು ಕೌತುಕದ ವಸ್ತು. ಹೀಗೆ ಡೊಳ್ಳು ತಮಟೆ, ಶಹನಾಯಿಯೊಡನೆ ಮೆರವಣಿಗೆ ಮೊದಲಾಗುತಿತ್ತು. ಆ ದಿನ ವಿಜಯದಶಮಿ. ಅಂದರೆ ಸೀಮೋಲ್ಲಂಘನೆ ಮಾಡುವ ದಿನ. ಮೈಸೂರ ಅರಸರ ವಿಜೃಂಭಣೆಯ ದಸರಾ ಮೆರವಣಿಗೆಗೆ ಇದೆ ಮೂಲ. ಕಾರಣ ವಿಜಯನಗರದ ಅರಸರ ದಸರಾ ಆಚರಣೆ ಜಗತ್‌ ಪ್ರಸಿದ್ದ. ಈಗಲೂ ಹಾಳು ಪಟ್ಟಣದಲ್ಲಿ ಮಾರ್ನವಮಿ ದಿಬ್ಬ ಅದಕ್ಕೆ ಸಾಕ್ಷಿ. ಅದೂ ಅಲ್ಲದೆ ಇದಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಅಂದು ಪಾಂಡವರು ಅಜ್ಞಾತವಾಸ ಮುಗಿಸಿ ವಿರಾಟ ನಗರದಿಂದ ಹೊರಟು ಶಮೀ ವೃಕ್ಷದಲ್ಲಿ ಅಡಗಿಸಿದ್ದ ಆಯುಧಗಳನ್ನು ಪಡೆದು ಯುದ್ಧಕ್ಕೆ ಹೊರಟರೆಂದು ನಂಬಿಕೆ. ಅದರ ಸಂಕೇತವಾಗಿ ಊರವರೆಲ್ಲ ಹಿರಿಯರೊಡನೆ ಸೇರಿ ಊರ ಹೊರಗಿನ ಹೊಲದಲ್ಲಿನ ಒಂದು ಬನ್ನಿಗಿಡಕ್ಕೆ ಹೋಗಿ ಆಯುಧಗಳನ್ನು ಅಲ್ಲಿ ಇಟ್ಟು ಪೂಜೆ ಮಾಡಿ ನಂತರ ಬನ್ನಿ ಸೊಪ್ಪನ್ನು ಹರಿದುಕೊಂಡು ಊರ ಕಡೆ ಹೊರಡುವರು. ಊರಿನಲ್ಲಿ ಮೊದಲು ಹನುಮಂತರಾಯನಿಗೆ ಬನ್ನಿ ನೀಡಿ ನಂತರ ಹಿರಿಯರಿಗೆಲ್ಲ ಬನ್ನಿ ನೀಡಿ ನಮಸ್ಕರಿಸುವುದು ವಾಡಿಕೆ. ಎಲ್ಲರ ಬಾಯಲ್ಲೂ "ಬನ್ನಿ ತೊಗಂಡು ಬಂಗಾರದ ಹಾಗಿರಿ" ಎನ್ನುವ ಮಾತು. ಎಷ್ಟೆ ಹಳೆಯ ಜಗಳ ಇರಲಿ ರಾಜಿಯಾಗಲು ಅಂದು ಒಳ್ಳೆಯ ಸಂದರ್ಭ. ಮನಸ್ತಾಪ ಮರೆಯಲು ಉತ್ತಮ ಅವಕಾಶ. ದಸರೆಯ ದಿನ ಮನೆ ಮನೆಗೆ ಹೋಗಿ ಬನ್ನಿ ಕೊಡುವುದರೊಂದಿಗೆ ಹಬ್ಬದ ಹುರುಪು ಇಳಿಯುತಿತ್ತು. ಅಂದು ಸಂಜೆ ನಾವು ಹುಡುಗರಿಗೆ ಖುಷಿಯೋ ಖುಷಿ. ಅದರಲ್ಲೂ ಅಂಗಡಿಯವರು, ಕೆಲ ಯಜಮಾನರು ಬನ್ನಿ ತೆಗೆದುಕೊಂಡು ನಮಗೆ ವಾಪಸ್ಸು ಬನ್ನಿಯ ಜೊತೆಗೆ ಕಾಸು ಕೊಡುತ್ತಿದ್ದರು. ಅದೂ ಬಟ್ಟು ಅರ್ಧಾಣೆ ಕೊಡುವರು. ಯಾರಿಗೆ ಎಷ್ಟು ಹಣ ಬಂದಿದೆ ಎಂದು ಲೆಕ್ಕ ಹಾಕುವುದರಲ್ಲೆ ಮುಂದಿನ ಎರಡು ದಿನ ಕಳೆದುಹೋಗುತ್ತಿತ್ತು. ನಾವು ಪೈಪೋಟಿಯಲ್ಲಿ ಎಲ್ಲರ ಮನೆಗೆ ಹೋಗಿ ಬನ್ನಿ ಕೊಡುತ್ತಿದ್ದೆವು. ರಾತ್ರಿ ಊಟದ ಮುಂಚೆ ನಮ್ಮನ್ನೆಲ್ಲ ಕೂಡಿಸಿಕೊಂಡು ನಮ್ಮ ಅಜ್ಜಿ, `ಶಮೇ ಶಮಯತೆ ಪಾಪಂ ಶಮೆ ಶತ್ರು ನಿವಾರಣಂ ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶನಂ' ಎಂಬ ಶ್ಲೋಕ ಹೇಳಿಸುತಿದ್ದರು. ನಮಗೋ ಸಂಗ್ರಹವಾದ ಕಾಸನ್ನು ಎಣಿಸುವ ಆತುರ. ಆದರೂ ಅವರು ಬಿಡುತ್ತಿರಲಿಲ್ಲ. ಅದರಿಂದ ಒಳ್ಳೆಯದಾಗುವುದು ಎನ್ನುತ್ತಿದ್ದರು. ನಮಗಂತೂ ಆಗಲೆ ದಸರೆಯಿಂದ ಒಳ್ಳೆಯದಾಗಿತ್ತು. ಯಾರಿಗೆ ಎಷ್ಟು ಬಂದಿದೆ ಎಂದು ಎಣಿಸುವುದು ಬಾಕಿ ಇತ್ತು. ಅಬ್ಬಬ್ಬಾ ಎಂದರೆ ಐದಾರು ಆಣೆ ಬಂದರೆ ಹೆಚ್ಚು. ಅಂದ ಹಾಗೆ ಆಗ ರೊಕ್ಕದ ಲೆಕ್ಕವೆ ಬೇರೆ. ಒಂದು ರೂಪಾಯಿಗೆ 16 ಆಣೆ. ಒಂದು ಆಣೆಗೆ 12 ಪೈಸೆ. ಒಂದು ರೂಪಾಯಿಗೆ 192 ಪೈಸೆ.  ಅದನ್ನು ಕಾಸು ಎಂದೂ ಎನ್ನುವರು. ಮೂರು ಪೈಸೆಗೆ ಒಂದು ಬಟ್ಟು ಅಥವ ಬಿಲ್ಲಿ ಎಂದು ಕರೆಯತಿದ್ದರು. ಕಾಸಿಗೆ ದಮ್ಮಡಿ ದುಗ್ಗಾಣಿ ಎಂದೂ ಹೆಸರಿತ್ತು. ಯಾರಾದರೂ ಬಹಳ ಜಿಪುಣನಿದ್ದರೆ ಅವನು ಕಿಲುಬು ದುಗ್ಗಾಣಿಯನ್ನೂ ಬಿಡುವವನಲ್ಲ ಎಂದು ಹಾಸ್ಯ ಮಾಡುತಿದ್ದರು. ಅದೆ ಅತಿ ಕನಿಷ್ಠ ಬೆಲೆಯ ನಾಣ್ಯ. ಆಗ ಹಣಕ್ಕೆ ಬೆಲೆ ಬಹಳ. ಪುರಂದರದಾಸರ ಪದವೆ ಇದೆ, "ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೆ ಬಿಂದಿಗೆ, ಬಿಂದಿಗೆ ಒಡೆದರೆ ಒಂದೆ ಕಾಸು ತಾರೆ ಬಿಂದಿಗೆಯ" ಐವತ್ತರ ದಶಕದಲ್ಲಿ ನಯಾ ಪೈಸೆ ಬಂದವು. ಆಣೆ, ಎರಡಾಣೆ, ಪಾವಲಿಗಳ ಬಳಕೆ ಬಂದಾಯಿತು.ಮೈಸೂರು ದಸರಾ ಮೆರವಣಿಗೆ (ಸಂಗ್ರಹ)

ಬಹುಶಃ ಸಾಲಿಗುಡಿಯ ನಂತರ ಹೊಸ ಪೈಸೆಗಳು ಬಂದವು ಎಂದು ಕಾಣುತ್ತದೆ. ಆಗಿನಿಂದ ರುಪಾಯಿಗಳಿಗೆ ನೂರು ಪೈಸೆಗಳು. ನಮಗೆ ರೊಕ್ಕದ ಲೆಕ್ಕಾಚಾರ ಸರಳವಾಯಿತು. ರೂಪಾಯಿ, ಆಣೆ, ಪೈಗಳ ಬದಲಾಗಿ ಸರಳವಾಗಿ ರುಪಾಯಿ ಮತ್ತು ಪೈ ಲೆಕ್ಕ ಮಾಡುವುದು ಸುಲಭ. ಆದರೆ ಹೊಸ ವಿಧಾನಕ್ಕೆ ಒಗ್ಗಲು ಹಳ್ಳಿಗರಿಗೆ ಕೆಲ ವರ್ಷಗಳೆ ಬೇಕಾದವು. ಒಂದು ಆಣೆಗೆ ಎಷ್ಟು ಪೈ ಎಂದು ಕೇಳಿದರೆ ಆರು ಎಂದಾಗ ರೂಪಾಯಿಗೆ 96 ಆಗುವುದಲ್ಲ ಎಂದು ತಲೆ ಕೆರೆದುಕೊಳ್ಳುವರು.

ನನಗೆ ಸಾಲಿಗುಡಿ ಅನುಭವ ಬಹಳ ದಿನ ದೊರಕಲಿಲ್ಲ. ಅದು ಬೇಗ ಮುಗಿದುಹೋಯಿತು. ನಮ್ಮ ಊರಲ್ಲಿ ಬೋರ್ಡು ಸ್ಕೂಲು ಪ್ರಾರಂಭವಾಯಿತು. ಐದನೆ ತರಗತಿಯ ತನಕ ಕಲಿಸುವ ಸರಕಾರಿ ಶಾಲೆ ಶುರುವಾಯಿತು. ನನ್ನನ್ನು ಅಲ್ಲಿ ಸೇರಿಸಿದರು.

ಆರರಿಂದ ಅರವತ್ತು- ೩:ಪ್ರತಿಯೊಬ್ಬರ ನಡುವಿಗೂ ಉಡುದಾರ

ನಮ್ಮ ಊರಲ್ಲಿ ಗೌಡಿಕೆ ಮತ್ತು ಶಾನುಭೋಗಿಕೆ ಎರಡೂ ಒಂದೆ ಮನೆತನದವರದ್ದು. ಅಣ್ಣ ಶಾನುಭೋಗ. ತಮ್ಮ ಊರ ಗೌಡ. ಒಳ್ಳೆ ಆಸ್ತಿವಂತರು. ಆದರೆ ಬಹು ಸಭ್ಯರು. ಒಣ ಗತ್ತುಗಾರಿಕೆ ಇಲ್ಲ. ಹೀಗಾಗಿ ಊರು ನೆಮ್ಮದಿಯಿಂದ ಇತ್ತು. ನಮ್ಮ ಊರಿಗೆ ಶಾಲೆ ಬಂದಾಗ ಅವರದೇ ಒಂದು ಮನೆಯಲ್ಲಿ ಶಾಲೆ ಪ್ರಾರಂಭವಾಯಿತು. ಐದು ತರಗತಿಗಳು. ಇಬ್ಬರು ಮೇಷ್ಟ್ರು. ವಯಸ್ಸಾದ ಗುರುಬಸಯ್ಯನವರು ದೂರದ ಏಳಬಿಂಚೆ ಗ್ರಾಮದವರಂತೆ. ಆಗ ಶೈಕ್ಷಣಿಕ ಅರ್ಹತೆಯ ಬಗ್ಗೆ ಈಗಿನ ಹಾಗೆ ನಿಗದಿಯಾದ ಮಾನದಂಡವಿರಲಿಲ್ಲ. ಅಕ್ಷರ ಬಲ್ಲವರು ನಾಲಕ್ಕನೇ  ತರಗತಿಯವರೆಗೆ ಮೇಷ್ಟ್ರಾಗಬಹುದು. ಓದು ಬರಹ ಬಂದರೆ ಸಾಕು ಮೇಷ್ಟ್ರ ಕೆಲಸ ಸಿಗುತಿತ್ತು. ಅವರಿಗಾಗಿ ಒಂದು ಕಿರಿಯ ಶ್ರೇಣಿಯ ತರಬೇತಿಯೂ ಇತ್ತೆಂದು ಕಾಣುತ್ತದೆ. ಇನ್ನು ಎಸ್‌ಎಸ್‌ಎಲ್‌ಸಿ ಆದವರು ಹಿರಿಯ ಶಿಕ್ಷಕರು. ನಮ್ಮಲ್ಲಿ ಮುಖ್ಯ ಗುರುಗಳು ಸಿಂಗ್‌ ಮಾಸ್ಟರ್‌ ಎಂದು. ಅವರು ಹತ್ತಿರದ ಹೊಸಪೇಟೆಯವರು. ಅವರು ತೆಳ್ಳನೆಯ ಉದ್ದನೆಯ ವ್ಯಕ್ತಿ. ಅವರು ಬರುತ್ತಿದ್ದದು ಸೈಕಲ್ ಮೇಲೆ. ಆಗ ಸೈಕಲ್ಲು ಬಹು ವಿರಳವಾದ ವಾಹನ. ಅವರು ಬರುತ್ತಿರುವುದನ್ನು ನೋಡಲೆಂದೇ ಜನ ಕಾದು ನಿಂತಿರುತ್ತಿದ್ದರು. ಅವರು ಟ್ರಣ್‌... ಟ್ರಿಣ್‌... ಎಂದು ಬೆಲ್‌ ಬಾರಿಸುತ್ತಾ ಸಾಲಿಯ ಠಾಕೊ ಠೀಕ್ ಸಮಯಕ್ಕೆ ಸರಿಯಾಗಿ ಶಾಲೆಯ ಮುಂದಿಳಿದಾಗ ಎಲ್ಲರೂ ಗಪ್‌ ಚುಪ್‌. ಅಷ್ಟು ಶಿಸ್ತಿನ ವ್ಯಕ್ತಿ ಅವರು. ಆ ಸಾಲೆಗೆ ಸೇರಿದ ಹೊಸದರಲ್ಲಿ ನಮಗೆ ಅಲ್ಲಿ ಹಾಜರಿ ಹಾಕುವುದು ಹೊಸದಾಗಿತ್ತು. ಬೆಳಗ್ಗೆ ಹೆಸರನ್ನು ಕೂಗಿದಾಗ ಮೊದ ಮೊದಲು ಎದ್ದು ನಿಂತು `ಏನು ಸಾ...' ಎಂದು ಕೇಳುತ್ತಿದ್ದರು. ನಂತರ `ಬಂದಿವ್ನಿ...' ಎನ್ನುವರು. ಅವರು ಹೇಳಿಕೊಟ್ಟ `ಎಸ್ಸಾ..., ಪೆಜಂ ಸಾ...' ಎಂದು ಹೇಳುವುದನ್ನು ಕಲಿಯಲು ತಿಂಗಳುಗಳೇ ಬೇಕಾದವು.

ಹೊಸ ಶಾಲೆಯಲ್ಲಿ ಹೆಚ್ಚಿನ ಮಕ್ಕಳಿಗೆ ಗುರುಗಳಿಂದ ಕಿರಿಕಿರಿಯಾಗುತಿದ್ದುದು ಮಕ್ಕಳು ಹಾಕುತಿದ್ದ ಅಂಗಿ ಚಣ್ಣಗಳ ಕಡೆಗೆ ಕೊಡುತಿದ್ದ ಅತಿ ಗಮನದಿಂದ. ಬಹುತೇಕ ಹುಡುಗರು ಹಳ್ಳಿಯಲ್ಲಿ ಹಬ್ಬಕ್ಕೆ ಹೊಸ ಅಂಗಿ ಹಾಕಿಕೊಂಡರೆ ಅದನ್ನು ಬೇಗ ಬಿಚ್ಚುವ ಹಾಗೆ ಇಲ್ಲ. ಕೆಲವರಂತೂ ಅದು ಹರಿಯುವ ತನಕ ಇನ್ನೊಂದರ ಯೋಚನೆ ಮಾಡುತ್ತಿಲಿಲ್ಲ. ಕಾರಣ ಕಿತ್ತು ತಿನ್ನುವ ಬಡತನವಾದರೆ, ಬಹುತೇಕ ಮಕ್ಕಳದು ಹೊಸ ಅಂಗಿಯ ಮೇಲಿನ ಮೋಹ. ಉಗಾದಿ, ಮಾರ್ನವಮಿಗೆ ಹೇಗಿದ್ದರೂ ಹೊಸ ಅಂಗಿ ಬರುತ್ತವಲ್ಲ ಆಗ ಬದಲಾಯಿಸುವರು ಮತ್ತು ಶುಚಿತ್ವದ ಕಡೆಗಿನ ನಿಷ್ಕಾಳಜಿ. ವಾರಕ್ಕೆ ಒಮ್ಮೆ ಒಗೆಯಲು ಅಗಸರಿಗೆ ಒಗೆಯಲು ಬಟ್ಟೆ ಹಾಕುವಾಗ ಅವನ್ನು ಬಿಚ್ಚಿಸಲು ತಾಯಂದಿರಿಗೆ ಕುರಿಕೋಣ ಬೀಳುತಿತ್ತು.  ಕೆಲವರಂತೂ ಹೊಸದು ಹಾಕಿಕೊಂಡರೆ ತಿಂಗಳುಗಟ್ಟಲೆ ಅದನ್ನೇ ಹಾಕುತಿದ್ದರು. ಸಿಂಗ್‌ ಮಾಷ್ಟ್ರು `ಜಳ ಜಳ ಒಗೆದ ಬಟ್ಟೆ ಹಾಕಿಕೊಂಡು ಬನ್ನಿ...' ಎಂದು ಕಡ್ಡಾಯ ಮಾಡುತಿದ್ದುದು ಅನೇಕರಿಗೆ ನುಂಗಲಾರದ ತುತ್ತಾಗಿತ್ತು. ಅದಕ್ಕೂ ಹೆಚ್ಚಿನ ಕಸಿವಿಸಿ ಎಂದರೆ ಎಲ್ಲರೂ ಅಂಗಿ ಗುಂಡಿ ಹಾಕಿಕೊಂಡು ಬರಬೇಕು, ಚಣ್ಣಕ್ಕೂ ಗುಂಡಿ ಇರಬೇಕು ಎನ್ನುವ ಅವರ ನಿಯಮ. ಪ್ರತಿನಿತ್ಯ ಮೊದಮೊದಲಲ್ಲಿ ಶಾಲೆಗೆ ಹೋದರೆ ಅವರು ಮೊದಲು ಮಾಡುತ್ತಿದ್ದ ಕೆಲಸ ನಮ್ಮ ಬಟ್ಟೆ ಬಗ್ಗೆ ಪರಿಶೀಲನೆ.  ಅಂಗಿಗೆ ಗುಂಡಿ ಇರಬೇಕೆಂದೇನೂ ಇರಲಿಲ್ಲ. ದೊಡ್ಡವರು ಬಗಲ ಗಸಿ ಅಂಗಿ ಹಾಕುತಿದ್ದರು. ಗುಂಡಿ ಹಚ್ಚಿದರೂ ಬಟ್ಟೆಗುಂಡಿ, ಇಲ್ಲವೆ ಮರದ ಗುಂಡಿ. ಅಗಸರ ಒಗೆತಕ್ಕೆ ಮರದ ಗುಂಡಿ ಛಿನ್ನಾಛಿದ್ರವಾಗುತ್ತಿದ್ದವು. ಹೆಣ್ಣು ಮಕ್ಕಳ ಕುಬುಸಕ್ಕೆ ಹುಕ್ಕುಹಾಕುವದು ಹಾಗಿರಲಿ, ಗುಂಡಿ ಹಚ್ಚುವದೂ ವಿರಳ. ಎಲ್ಲರೂ ಮೇಲೆ ಪಿನ್ನುಹಾಕಿ ಕೆಳಗೆ ಗಂಟುಹಾಕುತಿದ್ದರು.  ಹೆಂಗಸರ ಕೊರಳಲ್ಲಿ ತಾಳಿಯಲ್ಲಿ ಸದಾ ಪಿನ್ನುಗಳು ಇರುತಿದ್ದವು. ಇನ್ನು ಕೆಲವರು ಬಳೆಯಲ್ಲಿ ನಾಲಕ್ಕಾರು ಪಿನ್ನುಗಳನ್ನು ಸದಾ ಹಾಕಿಕೊಂಡಿರುವುರು. 

ನಾವು ಹುಡುಗರೂ ಕೂಡಾ ಗಂಡಿ ಹಾಕಲೇಬೇಕು ಎನ್ನುವ ಒತ್ತಾಯದಿಂದ ಅಮ್ಮನ ಹತ್ತಿರದ ಪಿನ್ನಿಗೆ ಬೇಡಿಕೆ ಬಹಳವಾಯಿತು.  ಗುಂಡಿ ಇಲ್ಲದಿದ್ದರೂ ಪರವಿಲ್ಲ ಪಿನ್ನಾದರೂ ಕಾಕಿಕೊಂಡು ಬನ್ನಿ ಎಂದು ಮಾಷ್ಟ್ರು ಒಪ್ಪಿಸಿದರು. ಜಾರುತ್ತಿರುವ ಚಣ್ಣಕ್ಕೆ ಉಡುದಾರ ಆಸರೆಗೆ ಬಂದಿತು. ಪ್ರತಿಯೊಬ್ಬರ ನಡುವಿಗೆ ಉಡುದಾರ ಇದ್ದೆ ಇರುತಿತ್ತು. ಹುಡುಗರಿಗೆ ತೊಟ್ಟಿಲ ದಿನ ಉಡುದಾರ ಕಟ್ಟುತಿದ್ದರು. ಬೆಳ್ಳಿಯ ಉಡುದಾರ ಸೊಂಟದಲ್ಲಿ ಬಹುದಿನ ಇರುತಿತ್ತು. ಮಗುವಿದ್ದಾಗ ಬಂಗಾರದ ಉಡುದಾರದ ಭಾಗ್ಯವೂ ಕೆಲವರಿಗೆ ಬರುತಿತ್ತು. ಏನೆ ಆದರೂ ರೇಷ್ಮೆಯ ಕೆಂಪು ಉಡುದಾರ ಸೊಂಟಕ್ಕೆ ಇರಲೇಬೇಕು. ಅದಿಲ್ಲದಿದ್ದರೆ ಉಡುದಾರವಿಲ್ಲದ ಮುಡುದಾರ ಎಂದು ಹಾಸ್ಯ ಮಾಡುತಿದ್ದರು. ಅದು ನಮಗೆ ನಡುಪಟ್ಟಿಯಾಗಿ ಉಪಯೋಗಕ್ಕೆ ಬಂತು.

ನಿತ್ಯ ಒಗೆದು ಇಸ್ತ್ರಿ ಮಾಡಿದ ಬಟ್ಟೆ ಹಾಕಿಕೊಂಡು ಬರುವ ಅವರು ನಮ್ಮ ಹಳ್ಳಿಗರಿಗೆ ವಿಶೇಷವಾಗಿ ಕಾಣುತ್ತಿದ್ದರು. ಅವರು ನಿತ್ಯ ಸ್ನಾನ ಮಾಡಿ ಒಗೆದ ಬಟ್ಟೆ ಹಾಕಿಕೊಂಡು ಬರಲು ಒತ್ತಾಯ ಮಾಡುತಿದ್ದರು. ಆಗ ನಮ್ಮಲ್ಲಿ ಊರಲ್ಲಿ ನಿತ್ಯ ಮೈ ತೊಳಕೊಂಬ ಅಭ್ಯಾಸ ಬಹಳ ಜನಕ್ಕೆ ಇರಲಿಲ್ಲ. ಬಟ್ಟೆ ಒಗೆಯುವುದಂತೂ ಯೋಚಿಸುವ ಹಾಗಿಲ್ಲ. ವಾರಕ್ಕೆ ಒಂದು ದಿನ ಅಗಸರು ಬಂದು ಬಟ್ಟೆ ಒಗೆದು ತರುತ್ತಿದ್ದರು. ಊರಿಗೆ ಇದ್ದದ್ದೆ ಎರಡು ಅಗಸರ ಮನೆಗಳು --ಅವರೂ ದಾಯಾದಿಗಳು. ತಲೆತಲಾಂತರದಿಂದಲೂ ಅದೇ ಕಸಬು. ಅವರನ್ನೇ ಊರೆಲ್ಲ ನಚ್ಚಿಕೊಂಡಿದ್ದರು. ಅವರು ಯಗಾರರು. ಅವರ ಗಿರಾಕಿಗಳ ಬಟ್ಟೆಗಳನ್ನು ಇನ್ನೊಬ್ಬರು ಮುಟ್ಟುವ ಹಾಗಿರಲಿಲ್ಲ. ಅವರು ಪ್ರತಿದಿನ ಹತ್ತಿಪ್ಪತ್ತು ಮನೆಗಳ ಬಟ್ಟೆಗಳನ್ನು ಬೆಳಗ್ಗೆಯೇ ಬಂದು ಕೂಡಿಸಿಕೊಂಡು ಹೋಗುತ್ತಿದ್ದರು. ನಂತರ ಅವನ್ನು ಮೂಟೆಕಟ್ಟಿ ಕತ್ತೆಯ ಮೇಲೆ ಹೇರಿಕೊಂಡು ಸಂಸಾರ ಸಮೇತ ಕಾಲುವೆ ಕಡೆ ಸಾಗುತ್ತಿದ್ದರು. ಅಂದಹಾಗೆ ನಮ್ಮೂರ ಒಂದು ಗಡಿ ಐತಿಹಾಸಿಕ ಬಸವಣ್ಣನ ಕಾಲುವೆ. ಅದನ್ನು ಸಣ್ಣ ಕಾಲುವೆ ಎಂದು ಕರೆಯುವರು. 50ರ ದಶಕದಿಂದೀಚೆಗೆ, ಆಂಧ್ರಕ್ಕೆ ನೀರು ಸಾಗಿಸಲು ಹೈಲೆವೆಲ್ ಕೆನಾಲ್ ಹಾಗೂ ವಿದ್ಯುತ್ ಉತ್ಪಾದಿಸಲು ಪವರ್ ಕೆನಾಲುಗಳು ನಮ್ಮೂರ ಸುತ್ತಮುತ್ತಲೇ ಹರಿಯುತ್ತವೆ. ಅವುಗಳ ಮುಂದೆ ಸಣ್ಣ ಕಾಲುವೆಯೇ ಸರಿ. ಆದರೆ, ಇತಿಹಾಸದಲ್ಲಿ ಇದರ ಮುಂದೆ ಅವೇನೂ ಅಲ್ಲ. ಈ ಕಾಲುವೆಯ ಆಯಸ್ಸು ಸರಿಸುಮಾರು ಐದಾರು ನೂರು ವರ್ಷಗಳಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಇದು ವಿಜಯನಗರ ಸಾಮ್ರಾಜ್ಯದ (ಅಥವಾ ಅದಕ್ಕೂ ಮುಂಚಿನದಿದ್ದರೂ ಇರಬಹುದು, ಇತರ ಕಾಲುವೆ ಎಂದರೆ, ರಾಯ ಕಾಲುವೆ, ತುರ್ತು ಕಾಲುವೆ) ನೀರಾವರಿ ಕಾಲುವೆಗಳ ಪೈಕಿ ಒಂದು. ಇಡೀ ವಿಶ್ವದಲ್ಲಿಯೇ ಅತ್ಯಂತ ಹಳೆಯ ಜೀವಂತ ಕಾಲುವೆ ಎಂದು ಹೇಳಲಾಗುತ್ತದೆ. ಆದರೆ, ಜನ, ಸರ್ಕಾರಗಳಿಗೇನೂ ಈಗ ಅಭಿಮಾನ ಉಳಿದಂತೆ ಕಾಣಲಿಲ್ಲ.
 ಅಗಸರ ಬಟ್ಟೆ ಗಂಟುಗಳ ಜೊತೆ ದೊಡ್ಡ ತಾಮ್ರದ ಪಾತೇಲಿ ಇರುತಿತ್ತು. ಅದನ್ನು ಕಾಲುವೆ ದಂಡೆಯಲ್ಲಿ ಮೂರು ದೊಡ್ಡ ಕಲ್ಲು ಹೂಡಿ ಮಾಡಿದ ಒಲೆಯ ಮೇಲೆ ಇಟ್ಟು ಅಲ್ಲಿಲ್ಲಿ ಆರಿಸಿದ ಪುರುಳೆಗಳಿಂದ ನೀರು ಕಾಯಿಸುತ್ತಿದ್ದರು. ಅದಕ್ಕೆ ಸವಳು ಹಾಕಿ ನಂತರ ತೋಯಿಸಿದ ಬಟ್ಟೆಗಳನ್ನು ಹಾಕಿ ಬೇಯಿಸುತ್ತಿದ್ದರು. ಅದನ್ನು ಉಬ್ಬೆ ಹಾಕುವುದು ಎನ್ನುತ್ತಾರೆ. ಎಂತಹ ಕೊಳೆಯೇ ಆಗಲಿ ಇದರಿಂದ ಕಿತ್ತುಕೊಂಡು ಹೋಗುತಿತ್ತು.  ಸೀರೆಗಳನ್ನು, ದೋತರಗಳನ್ನು, ಚಾದರಗಳನ್ನು ಒಗೆಯುವುದು ಮನೆಯ ಗಂಡಸರ ಕೆಲಸ. ಪುಡಿ ಬಟ್ಟೆಗಳನ್ನು ಹೆಂಗಸರು ಹಿಂಡುವರು ನಂತರ ಮಕ್ಕಳ ಜೊತೆಯಲ್ಲಿ ಎಲ್ಲ  ಬಟ್ಟೆಗಳನ್ನು ಒಣಗಲು ಹಾಕುವರು. ಸಾಧಾರಣ ಬಣ್ಣದ ಬಟ್ಟೆಗಳನ್ನು ಉಬ್ಬೆಗೆ ಹಾಕುತ್ತಿರಲಿಲ್ಲ. ಕೆಲವು ಸಲ ಕಣ್ತಪ್ಪಿನಿಂದ ಬಣ್ಣದ ಬಟ್ಟೆ ಅಥವ ಸೀರೆ ಅದರೊಂದಿಗೆ ಸೇರಿದರೆ ಅದರ ಬಣ್ಣ ಎಲ್ಲವಕ್ಕೂ ಅಷ್ಟಿಷ್ಟು ತಾಗಿರುತಿತ್ತು. ಯಾರಾದರೂ ಸ್ವಲ್ಪ ಬಾಯಿ ಮಾಡಿದರೆ ಅವರ ಪ್ರತಿಕ್ರಿಯೆ ಮಜವಾಗಿರುತಿತ್ತು.

`ಹೋದ ಉಗಾದಿ ಹಬ್ಬಕ್ಕೆ ನೀವು ಹೊಸ ಸೀರೆ ಹಾಕಿದಾಗ ಎಷ್ಟೊಂದು ಬಟ್ಟೆಗೆ ಬಣ್ಣ ಹತ್ತಿತ್ತು. ನಾವು ಎಲ್ಲರ ಕೈನಲ್ಲಿ ಮಾತು ಕೇಳಬೇಕಾತು. ಇದರಲ್ಲಿ ಯಾರದೂ ತಪ್ಪಿಲ್ಲ. ನೇಕಾರರದೇ ಮೋಸ. ಗಟ್ಟಿ ಬಣ್ಣ ಹಾಕುವುದಿಲ್ಲ. ಕಾಲಕೆಟ್ಟು ಹೋಗಿದೆ' ಎಂದು ಜವಾಬ್ದಾರಿಯನ್ನು ಮತ್ಯಾರದೊ ಮೇಲೆ ವಗಾಯಿಸಿ, ಸಮಾಧಾನ ಹೇಳುತ್ತಿದ್ದರು. ಅವರು ಸಂಜೆಗೆ ಬಟ್ಟೆ ತಂದು ಕೊಡುತಿದ್ದರು. ಎಣಿಸಿ ಕೊಟ್ಟರೂ ವ್ಯತ್ಯಾಸವಂತೂ ಇದ್ದೇ  ಇರುತಿತ್ತು. ಎಣಿಸದೆ ಇದ್ದರೆ ದೇವರೇ ಗತಿ. ಏಕೆ ಕಡಿಮೆ ಬಂದಿದೆ ಎಂದು ತಕ್ಷಣ ಕೇಳಿದರೆ ಎಲ್ಲೋ ಪೊರಪಾಟು ಆಗಿರಬಹುದು ತಂದು ಕೊಡುವೆವು ಎಂದು ಸಮಜಾಯಿಷಿ ಕೊಡುತಿದ್ದರು. ಬಟ್ಟೆಗಳಿಗೆ ಕೇರಿನಿಂದ ವಿಶೇಷ ಗುರುತು ಮಾಡಲಾಗಿರುತ್ತಿತ್ತು. (ಗೋಡಂಬಿ ಜಾತಿಗೆ ಸೇರಿದ ಒಂದು ಬಗೆಯ ಹಣ್ಣು. ಇದರ ಕಪ್ಪು ಬೀಜವನ್ನು ಸ್ವಲ್ಪ ಜಜ್ಜಿ, ಬಿಸಿ ಮಾಡಿದಾಗ, ವಿಶಿಷ್ಟ ವಾಸನೆ ಸೂಸುತ್ತ ದ್ರವ ಒಸರುತ್ತದೆ.  ಇದರಿಂದ ಬಟ್ಟೆಯ ಮೇಲೆ ಗುರುತು ಮಾಡಿದರೆ, ಅದನ್ನು ಅಳಿಸಲಾಗದು.) ಸಾಧಾರಣವಾಗಿ ಹೊಸ ಬಟ್ಟೆಗಳಂತೂ ಮೊದಲ ಇಲ್ಲವೇ  ಎರಡನೆ ಒಗೆತಕ್ಕೆ ಹಾಕಿದಾಗ ಬೇಗ ವಾಪಸ್ಸು ಬರುತ್ತಿರಲಿಲ್ಲ. ಅವನ್ನು ಒಂದು ಸಾರಿ ಅವರು ಉಟ್ಟುಕೊಂಡು ವಾರದ ನಂತರ ಒಗೆದು ಹಿಂತಿರುಗಿಸುವರು ಎಂಬುದು ಎಲ್ಲರ ಸಾಮಾನ್ಯ ತಿಳುವಳಿಕೆ. `ಮೊನ್ನೆ ಸಿಕ್ಕಿತು ಬೇರೆಯವರ ಬಟ್ಟೆ ಜತೆ  ಹೋಗಿತ್ತು' ಎನ್ನುವುದು ಅವರ ಸಮಜಾಯಿಷಿ. ಅದಕ್ಕೇ ಇರಬೇಕು `ಅರಸನ ಬಟ್ಟೆಯೂ ಅಗಸನ ಮೈಮೇಲೆ' ಎಂಬ ಗಾದೆ ನಮ್ಮ ಕಡೆ ಚಾಲ್ತಿಯಲ್ಲಿದ್ದದ್ದು. ಆದರೆ ಅವರಿಗೆ  ಬಟ್ಟೆ ಒಗೆದುದಕ್ಕೆ ದಿನದ ವಾರದ ಇಲ್ಲವೆ ತಿಂಗಳ ಕೂಲಿ ಕೊಡುತ್ತಿರಲಿಲ್ಲ. ವರ್ಷಕೊಮ್ಮೆ ಮಾಮೂಲು ನೀಡಬೇಕಿತ್ತು. ಅದನ್ನು ಆಯ ಎನ್ನುವರು. ಸಾಧಾರಣವಾಗಿ ಅಗಸರು, ಕುಂಬಾರರು, ಬಡಗಿ, ಕಮ್ಮಾರ ಮತ್ತು ಪೂಜಾರಿ -ಬಹುತೇಕ ಎಲ್ಲ ಕೃಷಿ ವೃತ್ತಿಪರರು, ರೈತರ ಆಯಗಾರರು. ಅವರಿಗೆ ಕೊಡುವ ಪ್ರಮಾಣ ಬೇರೆ ಬೇರೆ ಬೇರೆಯಾಗಿರಬಹುದು. ಅದೂ ಧಾನ್ಯದ ರೂಪದಲ್ಲಿ, ಗಂಡ ಹೆಂಡಿರು ಇಬ್ಬರಿದ್ದರೆ ಒಂದು ಗೂಡಿ ನೆಲ್ಲು. ಜನ ಹೆಚ್ಚಾದಂತೆ ಕೊಡುವ ಪ್ರಮಾಣವೂ ಏರುತಿತ್ತು. ಆದರೆ ಅಗಸರಿಗೆ ಮಾತ್ರ ವರ್ಷಕ್ಕೊಮ್ಮೆ ಕೊಟ್ಟರೆ ಅಲ್ಲಿಗೆ ಮುಗಿಯುತ್ತಿರಲಿಲ್ಲ. ಪ್ರತಿ ಹಬ್ಬಕ್ಕೂ ಸಂಜೆಗೆ ಬಿದಿರಪುಟ್ಟಿ ಹಿಡಿದು ತಮ್ಮ ಮಾಮೂಲು ಮನೆಗಳಿಗೆ ಬರುತ್ತಿದ್ದರು. ಆಗ ಅವರಿಗೆ ಮನೆಯಲ್ಲಿ ಮಾಡಿದ ಸಿಹಿ ನೀಡಲಾಗುತಿತ್ತು. ಸಿಹಿ ಎಂದರೆ ಕಡಬು, ಹೋಳಿಗೆ ಮಾತ್ರ. ನಾಗರ ಪಂಚಮಿಯಲ್ಲಿ ಮಾತ್ರ ಉಂಡಿಗಳು. ಮನೆಯಲ್ಲಿ ಶುಭ ಅಶುಭವಾದರೆ ಬಂದು ಹೋದವರ ಎಲ್ಲ ಬಟ್ಟೆಗಳ ಶುಚಿಯ ಹೊಣೆ ಅವರದೆ. ಆದರೆ ಅದಕ್ಕೆ ಅವರಿಗೆ ವಿಶೇಷ ಖುಷಿ ಕೊಡಬೇಕು. ಶುಭ ಕಾರ್ಯವಾದರೆ ಮನೆಯಲ್ಲಿನವರಿಗೆ ತಂದಂತೆ ಅವರಿಗೂ ಬಟ್ಟೆ ಬರೆ ತರಬೇಕು. ಅಶುಭ ಕಾರ್ಯವಾದರೆ ಅವರಿಗೆ ತಾಮ್ರದ ಕೊಡ, ಇಲ್ಲವೆ ಹಿತ್ತಾಳೆಯ ಪಾತ್ರೆ ಕೊಡಬೇಕಿತ್ತು. ಅವರು ಒಂದು ರೀತಿಯಲ್ಲಿ ವಾರ್ತಾವಾಹಿನಿಗಳಿದ್ದಂತೆ. ಯಾರ ಮನೆಗೆ ಯಾರು ಬಂದರು. ಯಾರ ಮಗಳು ದೊಡ್ಡವಳಾದಳು, ಯಾರ ಸೊಸೆ ಹೇಗಿದ್ದಾಳೆ ಎಂಬ ಎಲ್ಲ ಮಾಹಿತಿಯೂ ಅವರಲ್ಲಿ ಇರುತಿತ್ತು. ಎಷ್ಟೋ ಸಲ ಅವರು ಮದುವೆಗಳಿಗೂ ಕಾರಣರಾಗುತ್ತಿದ್ದರು. ಅವರಿಗೆ ತಮ್ಮ ಗಿರಾಕಿಗಳ ಕುಲ, ಗೋತ್ರ, ಹಣಕಾಸು, ಗುಣ ಸ್ವಭಾವ ಎಲ್ಲ ಗೊತ್ತಿರುತಿತ್ತು. ಹಾಗಾಗಿ ತಮ್ಮ ನೆಂಟರ ಊರಲ್ಲಿ ಸೂಕ್ತ ಗಂಡು, ಹೆಣ್ಣು ಇದ್ದರೆ ಅವರಿಗೆ ಸುದ್ದಿ ತಿಳಿಸುತ್ತಿದ್ದರು. ಹೀಗೆ ಅವರು ಗ್ರಾಮದ ಅವಿಭಾಜ್ಯ ಅಂಗವಾಗಿದ್ದರು. ಸಾಧಾರಣವಾಗಿ ಅವರು ಗಂಡಸರ ಅಂಗಿ ಪಂಚೆಗಳನ್ನು ಮಾತ್ರ ಇಸ್ತ್ರಿ ಮಾಡುತ್ತಿದ್ದರು. ಅದಿನ್ನೂ ಪ್ಯಾಂಟು ಕಾಣದ ಕಾಲ.

ಈಚೆಗೆ ಊರಿಗೆ ಹೋದಾಗ ಅಗಸರ ಆರ್ಭಟ ಅಷ್ಟಿರಲಿಲ್ಲ. ಕಾಲುವೆಯಲ್ಲಿ ಒಬ್ಬಿಬ್ಬ ಹೆಂಗಸರು ಇದ್ದರು. ಕತ್ತೆಯ ಸುಳಿವಿಲ್ಲ. ಅದರ ಜಾಗಕ್ಕೆ ಸೈಕಲ್ಲು ಬಂದಿತ್ತು. ಬಟ್ಟೆ ಕುಚ್ಚುವ ಮಾತೇ ಇಲ್ಲ. ಎಲ್ಲ ಟೆರಿಲಿನ್‌, ನೈಲಾನ್ ಬಟ್ಟೆಗಳು. ಸೋಪು ಹಚ್ಚಿ ಒಗೆಯಬೇಕು. ಎಷ್ಟೋ ಜನರ ಮನೆ ಮುಂದೆ ನಲ್ಲಿಯಲ್ಲೆ ಬಟ್ಟೆ ಒಗೆದುಕೊಡಬೇಕು. ಈಗ ವರ್ಷಕ್ಕೊಮ್ಮೆ ಆಯ ಕೊಡುವ ಪದ್ಧತಿ  ಇಲ್ಲ. ತಿಂಗಳಿಗೆ ೩೦೦ ರಿಂದ ೫೦೦ ರುಪಾಯಿ ಕೊಡುವರು. ಕೆಲವರಂತೂ ಕಾಲುವೆಯಲ್ಲಿ ಒಗೆದರೆ ಜಲಮಾಲಿನ್ಯದಿಂದಾಗಿ ಬಟ್ಟೆಗಳನ್ನು ಹಾಕಿಕೊಂಡರೆ ಮೈಕೈ ತಿಂಡಿ ಬರುವುದು. ಆದ್ದರಿಂದ ಬಿಲ್ ಕುಲ್‌ ಅಲ್ಲಿ ಕಾಲುವೆಯಲ್ಲಿ ಬಟ್ಟೆ ತೊಳೆಯುವುದು ಬೇಡ ಎಂದು ನಿಷೇಧಿಸಿದ್ದರು. ಜನ ಅತಿ ಸೂಕ್ಷ್ಮವಾದರೋ, ನಮ್ಮೂರ ನೀರು ಅಷ್ಟು ಕೆಟ್ಟಿತೋ ತಿಳಿಯದು. ತೀರಾ ಊರಲ್ಲಿ ನೀರಿಗೆ ತತ್ವಾರ ಬಂದಾಗ ಅಂದರೆ ಕರೆಂಟು ದಿನಗಟ್ಟಲೆ ಹೋದಾಗ ಮಾತ್ರ ಇಲ್ಲಿಗೆ ಬರುವ ಅನಿವಾರ್ಯತೆಯಂತೂ ಉಳಿದಿದೆ. ದೂರದೂರಿನಿಂದ ಬರುವ ತುಂಗಭದ್ರೆಯ ದಾರಿಯುದ್ದಕ್ಕೂ ಕಾರ್ಖಾನೆಗಳ ತ್ಯಾಜ್ಯ, ನಗರಗಳ ಮಾಲಿನ್ಯ ಹೊತ್ತು ತರುತ್ತಾಳೆ ಎಂಬುದು ನಿಜ. ಅದೇ ನೀರು ಬಸವಣ್ಣನ ಕಾಲುವೆಗೆ ಬರುತ್ತದೆ ಎಂಬುದೂ ಅಷ್ಟೇ ನಿಜ. ಈ ದೇಶದ ಅತಿ ಹಳೆಯ ಜೀವಂತ ಕಾಲುವೆ ಬಸವಣ್ಣನ ಕಾಲುವೆಯೇ ಬಹಿಷ್ಕಾರಕ್ಕೆ ಒಳಗಾಗುವ ಸ್ಥಿತಿ ಬಂದೀತೆಂದು ಕನಸಲ್ಲಿಯೂ ಯೋಚಿಸಿರಲಿಲ್ಲ. 

ಹಾಗೆ ಅಗಸರಿಂದ ಒಗೆದ ಬಟ್ಟೆ ಉಡುತಿದ್ದ ಜನರಿಗೆ ಸಿಂಗ್‌ ಮಾಸ್ಟರ್ ಅವರ ಗರಿ ಗರಿ ಇಸ್ತ್ರಿಮಡಿದ ಬಟ್ಟೆ ಕಣ್ಣು ಕುಕ್ಕಿಸುತಿತ್ತು. ಇನ್ನು ಅವರು ಸೈಕಲ್ಲೇರಿ ಬಂದನಂತರ ಬಿಡುವಿನ ವೇಳೆಯಲ್ಲಿ ಅವರ ಸೈಕಲ್ಲನ್ನು ಒರೆಸುವ ಸೌಭಾಗ್ಯ ಕೇವಲ ಒಬ್ಬಿಬ್ಬರಿಗೆ. ಅವರಂತೂ ಸ್ಟ್ಯಾಂಡ್‌  ಹಾಕಿ ನಿಲ್ಲಿಸಿದ ಸೈಕಲ್ಲಿನ ಗಾಲಿ ಗಿರ್ರನೆ ತಿರುಗಿಸಿ, ಅದನ್ನು ಒರಸುವಾಗ ಅವರು ಪ್ರಪಂಚ ಪ್ರದಕ್ಷಿಣೆ ಮಾಡಿದವರ ತರಹ ಬೀಗುತ್ತಿದ್ದರು. ಸಿಂಗ್‌ ಅವರು ಗಣಿತ ಮತ್ತು ವಿಜ್ಞಾನವನ್ನು ಬೋಧಿಸುತ್ತಿದ್ದರು. ಅದೂ ನಾಲಕ್ಕು ಮತ್ತು ಐದನೇ ತರಗತಿಗಳಿಗೆ. ಹಾಗಾಗಿ ಅವರಿಗೆ ವಿಶೇಷ ಗೌರವ. ಅವರು ಲೆಕ್ಕ ಎಂದರೆ ಬರಿ ಮಗ್ಗಿ ಮಾತ್ರ ಅಲ್ಲ. ಕೂಡುವುದು, ಕಳೆಯುವುದು, ಗುಣಾಕಾರ ಮತ್ತು  ಭಾಗಾಕಾರವೆಂಬ ನಾಲಕ್ಕು ವಿಧಗಳಿವೆ  ಎಂದು ಕಲಿಸಿದರು. ಅಂಕಗಣಿತ ಎಂಬ ಪದದ ಪರಿಚಯ ಮೊದಲು ಅವರಿಂದಲೇ ಆಗಿದ್ದು. ಅಲ್ಲದೇ ಇಂಗ್ಲಿಷ್‌ ಕಲಿಕೆಗೂ -ಆ ಮೂಲಕ ನಮ್ಮ ಭವಿಷ್ಯಗಳಿಗೆ, ಬುನಾದಿ ಹಾಕಿದ್ದು ಅವರೇ. ಶಾಲೆಗೆ ಪಠ್ಯಪುಸ್ತಕದ ಪ್ರವೇಶವು ಆ ಕಾಲದಲ್ಲೇ ಆಯಿತು. ತರಗತಿಯಲ್ಲಿ ಕಪ್ಪುಹಲಗೆ ನೋಡಿದ್ದು ಆಗಲೇ. ಸರಿಯಾಗಿ ಉತ್ತರಕೊಟ್ಟರೆ `ಗುಡ್‌...' ಎಂದಾಗ ನಮಗೆ ಸಂತೋಷವಾದಷ್ಟೇ ಅವರು `ಫೂಲ್‌..., ಈಡಿಯಟ್‌...' ಎಂದು ಬೈದಾಗಲು ಏನೋ ಒಂದು ಬಗೆಯ ಆನಂದ. ಅದುವರೆಗೆ ನಾವು ಕೇಳಿದ ಬೈಗಳು `ಕತ್ತೆ ಭಡವಾ, ಕಡವ, ಕೋತಿ, ಕೋಣ, ಕುಂಭಕರ್ಣ' ಎಂಬ ಮಾತುಗಳನ್ನು ಮಾತ್ರ. ಅವು ನಮಗೆ ರಾಟಿ ಬಿದ್ದಿದ್ದವು.

ಅವರು ನಂತರ ಕೆಲವು ವರ್ಷವಾದ ಮೇಲೆ ನಮ್ಮ ಊರಿಗೆ ಬಂದು ನೆಲೆನಿಂತರು. ಅವರಿಗೆ ಇಬ್ಬರು ಗಂಡುಮಕ್ಕಳು ಮತ್ತು ಅವರ ಹೆಂಡತಿ ಲಕ್ಷಣವಾದ ಲವಲವಿಕೆಯ ಹೆಣ್ಣುಮಗಳು. ಬಂದ ಹೊಸತರಲ್ಲಿ ಎಲ್ಲರೂ ಅವರ ಸಂಸಾರ ನೋಡಿ ಮುಸುಮುಸು ನಗುವವರೆ. ಕಾರಣ ಅವರ ಹೆಂಡತಿ ಅಡುಗೆ ಮಾಡುತ್ತಲೇ ಇರಲಿಲ್ಲ. ಶಿಸ್ತಿನ ಸಿಪಾಯಿಯಾದ ಮಾಷ್ಟ್ರೆ ಅಡುಗೆ ಮಾಡಿಟ್ಟು ಶಾಲೆಗೆ ಬರುತ್ತಿದ್ದರು. ಯಾವುದೇ ಕಾರಣಕ್ಕೂ ಅವರ ಮನೆಯವರು ಒಲೆಯ ಹತ್ತಿರ ಹೋಗುತ್ತಿರಲಿಲ್ಲ. ಸದಾ ಶುಭ್ರವಾದ ಸೀರೆ ಉಟ್ಟು ಹೂ ಮುಡಿದು, ಮೇಲುಗೆಲಸ ಮಾಡುತ್ತಾ, ನೆರೆ ಹೊರೆಯರ ಜತೆ ನಗುನಗುತ್ತಾ ಬೆರೆಯುತ್ತಿದ್ದರು. ನಂತರ ನಮಗೆ ಗೊತ್ತಾಯಿತು. ಅವರಿಗೆ ಮಲರೋಗವಿದೆ ಎಂದು. ಅದಕ್ಕೇ ಮಾಷ್ಟ್ರೆ, ಯಾರೆ ಏನೆ ಅಂದರೂ ತಾವೆ ಅಡುಗೆ ಮಾಡುವರು, ಬೆಂಕಿಯ ಹತ್ತಿರ ಹೆಂಡತಿಯನ್ನು ಬಿಡುತ್ತಿರಲಿಲ್ಲ. ಅಲ್ಲದೆ ಅಡುಗೆಗೆ ಬಳಸುವುದು ಕಟ್ಟಿಗೆ ಒಲೆ. ನೆಲದ ಮೇಲೆ ಕುಳಿತು ಅಡುಗೆ ಮಾಡಬೇಕು. ಅಕಸ್ಮಾತ್‌ ಆ ಸಮಯದಲ್ಲಿ ಅವರಿಗೆ ರೋಗ ಕಾಣಿಸಿಕೊಂಡರೆ ಅಪಾಯ. ಅದಕ್ಕೆ ಅವರ ಮುನ್ನೆಚ್ಚರಿಕೆಯ ಕ್ರಮವಾಗಿ ಹೆಂಡತಿಯನ್ನು ಅಡುಗೆ ಮಾಡಲು ಬಿಡುತ್ತಿರಲಿಲ್ಲ. ನೀರು ತರುವಲ್ಲಿ ಗಂಡುಮಕ್ಕಳು ತಾಯಿಗೆ ಸಹಾಯ ಮಾಡುತ್ತಿದ್ದರು. ಆದರೆ ಅವರು ಒಂದು ದಿನವೂ ಗೊಣಗಿದ್ದು ಕಾಣಲಿಲ್ಲ. ಸದಾ ಹೆಂಡತಿ ಮಕ್ಕಳ ಜತೆ ನಗುನಗುತ್ತಲೇ ಇರುತ್ತಿದ್ದರು. ಶಾಲೆಯಲ್ಲಿನ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಿದರು.

ಮೊನ್ನೆ, ರಾಜಕುಮಾರ ವಿಲಿಯಂ ಮದುವೆ ಸಂದರ್ಭದಲ್ಲಿ ವೆಸ್ಟ್ ಮಿನಿಸ್ಟರ್ ಅಬೆಯ ಧರ್ಮಗುರುಗಳು ವಧೂವರರಿಗೆ `ನಾನು ಎಂಥ ಸಂದರ್ಭದಲ್ಲಿಯೂ --ಅನಾರೋಗ್ಯ, ಆರೋಗ್ಯ, ಸಿರಿತನ ಬಡತನ, ಸಂಗಾತಿಯ ಕೈ ಬಿಡುವುದಿಲ್ಲ...' (ಆರೋಗ್ಯ ಹಾಗೂ ಅನಾರೋಗ್ಯ ಎಂಬ ಪದಗಳಿಗೆ ಒತ್ತು ನೀಡಿ) ಎಂದು ವಿವಾಹ ಪ್ರತಿಜ್ಞಾವಿಧಿ ಬೋಧಿಸುವಾಗ, ನನಗೆ ಕಣ್ಣು ತುಂಬಿ ಬಂತು. ನಮ್ಮಲ್ಲೂ ಮದುವೆಯಲ್ಲಿ  ನಾಲಕ್ಕು ಪುರುಷಾರ್ಥಗಳಲ್ಲಿ ಸಹಭಾಗಿಯಾಗಿರುವೆ ಎಂಬ ಮಂತ್ರವನ್ನು ಹೇಳಿಸುವರು. ಅದರ ಅರ್ಥ ಅರಿತವರೆಷ್ಟೊ ಗೊತ್ತಿಲ್ಲ. ಮಾಷ್ಟ್ರು ಅದರ ಸಾರವನ್ನು ಜೀವನದುದ್ದಕ್ಕೂ ಪಾಲಿಸಿದರು. ಅದಿನ್ನೂ ಮತ್ತೊಂದು ಮದುವೆಯಾಗುವ ಅಥವಾ ಇನ್ನೊಂದು ಸಂಬಂಧವನ್ನು  ರಾಜಾರೋಷವಾಗಿ ಕುದುರಿಸಿಕೊಳ್ಳುವುದು ಸಾಮಾನ್ಯವಾದ ಕಾಲ- ಸಿಂಗ್ ಮಾಷ್ಟ್ರು ದಾಂಪತ್ಯದ ಸ್ವಯಂಶಿಸ್ತಿಗೆ ಬದ್ಧರಾಗಿದ್ದರು. ಎಲ್ಲರಿಗೂ ಅವರು ಸಿಂಗ್ ಮಾಷ್ಟ್ರು ಎಂದೆ ಪರಿಚಿತರು. ಅವರ ಪೂರ್ಣ ಹೆಸರು ರಾಮಚಂದ್ರ ಸಿಂಗ್!

ಆರರಿಂದ ಅರವತ್ತು ೪:ಗುರುಬಸಯ್ಯನವರ ಒಬ್ಬನೇ ಮಗ!

ಗುರುಬಸಯ್ಯನವರು ನಮ್ಮ ಹೊಸ ಸಾಲಿಯಲ್ಲಿನ ಸಹಾಯಕ ಶಿಕ್ಷಕರು. ಅವರಿಗೆ ಆಗಲೆ ಐವತ್ತರ ಮೇಲೆ ವಯಸ್ಸಾಗಿತ್ತು. ಕೆಂಪು ಬಣ್ಣ, ಸಾಧಾರಣ ಮೈಕಟ್ಟು, ಬಿಳಿ ಮಲ್ಲಿನ ಅಂಗಿ ದೋತರ, ತಲೆಯಲ್ಲಿ ದಟ್ಟ ಬಿಳಿ ಕೂದಲು. ಹಣೆ ತುಂಬ ವಿಭೂತಿಪಟ್ಟಿ. ಅವರು ಕನ್ನಡ ಮತ್ತು ಕೆಳ ತರಗತಿಗಳಿಗೆ ಲೆಕ್ಕ ಹೇಳಿ ಕೊಡುತ್ತಿದ್ದರು. ಅವರು ಮೃದು ಸ್ವಭಾವದವರು. ಮಾತೆತ್ತಿದರೆ ಶಿವ ಶಿವಾ ಎನ್ನುವರು. ಸಾಲಿ ಗುಡಿಯಲ್ಲಿ ಕಲಿತವರಿಗೆ ಅಂತೂ ಅವರು ದೇವರ ಸಮಾನ. ಹೊಡೆತ ಬಡಿತ ಇಲ್ಲ, ಬೈಗುಳೂ ಇಲ್ಲ. ಅವರ ಬಾಯಲ್ಲಿ ಕೆಟ್ಟ ಮಾತೆ ಇಲ್ಲ. ಯಾವಾಗಲೂ ಅಪ್ಪಾ, ಅಣ್ಣಾ, ಮರಿ ಎಂದೆ ಸಂಬೋಧನೆ. ಅದರ ಲಾಭ ಪಡೆದ ಕೆಲವು ಮಕ್ಕಳು ಗಲಾಟೆ ಮಾಡುತ್ತಿದ್ದರು. ಅದು ಹೆಡ್‌ ಮಾಸ್ತರ್‌ ಗಮನಕ್ಕೆ ಬಂದಾಗ ಅವರಿಗೆ ಸರಿಯಾದ ಶಾಸ್ತಿಯಾಗುತ್ತಿತ್ತು. ಇಲ್ಲಿ ಮರಳ ಮೇಲೆ ಬೆರಳು ತೂತು ಬೀಳುವವರೆಗೆ ಬರೆವ ಪದ್ಧತಿ ಇರಲಿಲ್ಲ. ಆಗಲೆ ಸ್ಲೇಟು ಬಳಪ ಬಳಕೆಗೆ ಬಂದವು. ಅಕ್ಷರ ಕಲಿಕೆಯ ಆ ಕಠಿಣ ಪದ್ಧತಿ ಕೊನೆ ಕಂಡಿತು. ಇನ್ನು ಮಗ್ಗಿ ಕಂಠ ಪಾಠಕ್ಕೂ ಮೊದಲಿನ ತರಹದ ಅತಿ ಒತ್ತು ಇರಲಿಲ್ಲ. ಅದರ ಜತೆಗೆ ಶಿಕ್ಷೆಯ ಸ್ಥಾನಮಾನ ಬಹಳ ಬದಲಾದವು. ನಾವು ಹಿಂದೆ ಓದಿದ ಸಾಲಿ ಗುಡಿಯಲ್ಲಿ ಕ್ರಮೇಣ ಮಕ್ಕಳ ಸಂಖ್ಯೆ ಕಡಿಮೆಯಾಗಿ ಆ ಅಯ್ಯನವರು ಊರು ಬಿಟ್ಟರು.

ಗುರು ಬಸಯ್ಯನವರು ಕಾಯಕ ಶಾಲೆಯ ಪ್ರಾರಂಭದ ಸಮಯದಿಂದಲೆ ಶುರುವಾಗುತಿತ್ತು. ಅದಕ್ಕೆ ಕಾರಣ ಅವರು ಶಾಲೆ ಇದ್ದ ಊರಲ್ಲೆ ಮನೆ ಮಾಡಿರುವುದು. ಅವರು ಮುಂಚೆಯೆ ಶಾಲೆಗೆ ಬಂದು ದೊಡ್ಡ ಹುಡುಗರನ್ನು ಹಿಡಿದು ಕಸ ಗುಡಿಸಿ ಶಾಲೆಯನ್ನು ನೀಟು ಮಾಡುತಿದ್ದರು. ನಂತರ ಗಂಟೆ ಹೊಡೆಸುವರು. ಪ್ರಾರ್ಥನೆಯಿಂದ ಕೆಲಸ ಮೊದಲಾಗುತಿತ್ತು. ಅದಕ್ಕೆ ಎಲ್ಲ ಮಕ್ಕಳು ಸಾಲೆಯ ಹೊರಗಿನ ಅಂಗಳದಲ್ಲಿ ಸಾಲಾಗಿ ನಿಲ್ಲಬೇಕು. ನಾವೆಲ್ಲ ಕೈಮುಗಿದು ನಿಲ್ಲುತಿದ್ದೆವು ಎಂದು ನೆನಪು. ಅವರು ರಾಗವಾಗಿ ಪ್ರಾರ್ಥನಾ ಪದ ಹೇಳುವರು, ನಾವೆಲ್ಲ ಅವರನ್ನು ಅನುಸರಿಸಿ ಹಾಡಬೇಕು.

ಸ್ವಾಮಿದೇವನೆ ಲೋಕ ಪಾಲನೆ ತೇ ನಮೋಸ್ತುತೆ ನಮೋಸ್ತುತೆ
ಪ್ರೇಮದಿಂದಲಿ ಪಾಲಿಸೆಮ್ಮನು ತೇ ನಮೋಸ್ತುತೆ ನಮೋಸ್ತುತೆ
ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡುವ ಪಾಪವೆಲ್ಲವ ಹೋಗಲಾಡಿಸು ದೇವನೆ..

ಪದ ಇನ್ನೂ ದೊಡ್ಡದಿತ್ತು ಎಂದುಕೊಂಡಿರುವೆ. ಆದರೆ ಸದ್ಯಕ್ಕೆ ನನ್ನ ನೆನಪಲ್ಲಿರುವುದು ಇಷ್ಟು ಮಾತ್ರ

ಇದರ ಜತೆ ಜನಗಣ ಮನವನ್ನೂ ಹೇಳಬೇಕಿತ್ತು. ಸಿಂಗ್‌ ಮಾಷ್ಟ್ರು ಪ್ರಾರ್ಥನೆ ಸಮಯಕ್ಕೆ ಸರಿಯಾಗಿ ಟಕ್‌ ಅಂತ ಹಾಜರಾಗುವರು. ಅವರು ವಾರಕ್ಕೆಕೊಮ್ಮೆ ಸಂಜೆ ಎಲ್ಲರನ್ನೂ ಹೊರಗೆ ಬಯಲಿನಲ್ಲಿ ನಿಲ್ಲಿಸಿ ಕೈ ಕಾಲು ತಿರುಗಿಸುವುದನ್ನು ಹೇಳಿ ಕೊಡುವರು.  ಗುರಬಸಯ್ಯನವರು ನಮಗೆಲ್ಲ ಹೆಚ್ಚು ಹತ್ತಿರವಾದ್ದು ಅವರು ಹೇಳಿಕೊಡುತಿದ್ದ ಪದ್ಯಗಳಿಂದ. ಅವರು ತಮ್ಮ ಸುಮಧುರ ಕಂಠದಲ್ಲಿ ಹಾಡುತಿದ್ದ ಶಿಶುಗೀತೆಗಳು ಇನ್ನೂ ಕಿವಿಯಲ್ಲಿ ಗಂಯ್ ಗುಡುತ್ತಲಿವೆ. ``ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ", "ನಾಗರ ಹಾವೆ ಹಾವೊಳು ಹೂವೆ'', ``ಅಜ್ಜನ ಕೋಲಿದು ನನ್ನಯ ಕುದುರೆ'' ಮೊದಲಾದುವನ್ನು ಅವರು ಅಭಿನಯಿಸಿ ಹೇಳುತಿದ್ದದು ಕಣ್ಣಿಗೆ ಕಟ್ಟಿದಂತೆ ಇದೆ.

ಆಗ ಒಂದು ಅನುಕೂಲವಿತ್ತು, ಪ್ರತಿ ತರಗತಿಗೂ ಬೇರೆ ಬೇರೆ ಕೊಠಡಿ ಇರಲಿಲ್ಲ. ಇರುವುದು ಮೂರು ಕೋಣೆಗಳು. ಇಬ್ಬರು ಶಿಕ್ಷಕರು. ಹಾಗಾಗಿ ಯಾರಿಗೆ ಪಾಠ ಮಾಡಿದರೂ ಆಸಕ್ತಿ ಇದ್ದ ಎಲ್ಲರೂ ಕೇಳಬಹುದಿತ್ತು. ಆಗ ಕಿವಿಗೆ ಬಿದ್ದ ಎರಡು ಕಥನ ಕವನಗಳು ಇಂದಿಗೂ ನನಗೆ ನೆನಪಿವೆ..

ತುಂಗಾತೀರದ ಬಲಗಡೆಯಲ್ಲಿ
ಹಿಂದಲ್ಲಿದ್ದಿತು ಬೊಮ್ಮನಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ
ಅಲ್ಲಿಯ ಜನರಿಗೆ ಅತಿ ಗೋಳಾಟ 

ಎಂದು ಪ್ರಾರಂಭವಾಗುವ  ಕವನ ಕೊನೆಯ ತನಕ ಗಮನ ಸೆಳೆಯುತಿತ್ತು. ಇದು ಕುವೆಂಪು ಅವರ ಕಿಂದರಿಜೋಗಿಯ ಪದ್ಯ ಎಂದು ಗೊತ್ತಿರಲಿಲ್ಲ. ಆದರೂ ಅದು ನಮ್ಮ ಮನ ಮುಟ್ಟಿತ್ತು.

ಇನ್ನೊಂದು ನಮಗೆಲ್ಲರಿಗೂ ಹಿಡಿಸಿದ ಪದ್ಯವೆಂದರೆ: ಪುಣ್ಯ ಕೋಟಿಯ ಕಥೆ.

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳು
ಇರುವ ಕಾಳಿಂಗನೆಂಬ ಗೊಲ್ಲನ
ಪರಿಯನಾನೆಂತು ಪೇಳ್ವೆನು

ಎಂದು ಪ್ರಾರಂಭವಾಗುವ ಸರಿಸುಮಾರು ಉದ್ದವಿದ್ದ ಈ ಪದ್ಯದ ಕೆಲವು ಭಾಗವನ್ನು ಅವರು ಅಭಿನಯಿಸಿ ತಿಳಿಸುವಾಗ ಕಣ್ಣಲ್ಲಿ ನೀರು ಬರುವುದು.

ಅಮ್ಮ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲು ಎಂದು
ಅಮ್ಮನಿಗೆ ಕರು ಹೇಳಿತು

ಎಂಬ ಕರುವಿನ ನುಡಿಯು ನಮ್ಮೆಲ್ಲರ ಭಾವನೆಯೆ ಆಗಿತ್ತು. ನಮಗಂತೂ ಹೇಗೋ ತಪ್ಪಿಸಿಕೊಂಡು ಬಂದ ಹಸು ಮತ್ತೆ ತಾನಾಗಿಯೆ ಹುಲಿಯ ಬಾಯಿಗೆ ಬೀಳಲು ಏಕೆ ಹೋಗುವುದು ಎಂದು ಅರ್ಥವೆ ಆಗಿರಲಿಲ್ಲ.

ಮುಂದೆ ಬಂದರೆ ಹಾಯಬೇಡಿ,
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಎಂಬ ಹಸುವಿನ ಮನವಿಯನ್ನು ಕೇಳುವಾಗ ನಾವೆ ತಬ್ಬಲಿಗಲಾದಂತೆ ಅನಿಸುತಿತ್ತು. ಈ ಪದ್ಯವು ನಮಗೆ ಗೊತ್ತಿಲ್ಲದಂತೆ ಬಾಯಿ ಪಾಠವಾಗಿತ್ತು.
ಇಂದಿಗೂ ಸುಮ್ಮನೆ ಕುಳಿತು ನೆನಸಿಕೊಂಡರೆ ತನ್ನಿಂದ ತಾನೆ ಬಾಯಿಗೆ ಬರುವುದು.

ಮಕ್ಕಳಿಗೆ ಕಲಿಸಲು ಹಾಡು ಅಭಿನಯ ಬಹು ಉತ್ತಮ ಮಾಧ್ಯಮ ಎಂದು ಹೊಸ ಶೈಕ್ಷಣಿಕ ಸಂಶೋಧನೆಗಳು ಒತ್ತಿ ಹೇಳುತ್ತವೆ. ಆದರೆ ಏಳನೆ ತರಗತಿಯ ವರೆಗೆ ಮಾತ್ರ ಓದಿರಬಹುದಾದ ನಮ್ಮ ಗುರುಗಳು ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರು.

ಗುರು ಬಸಯ್ಯನವರು ಮಕ್ಕಳಂತೆಯೆ ಅವರ ಹೆತ್ತವರಿಗೂ ಬಹು ಪ್ರಿಯರಾಗಿದ್ದರು. ಅವರು ಸಣ್ಣ ಪುಟ್ಟ ಕಾಯಿಲೆಗೆ ನಾಟಿ ಔಷಧಿ ಕೊಡುತಿದ್ದರು. ಅದೂ ಅಲ್ಲದೆ ಹಟ ಮಾಡಿ ಅಳುವ ಮಕ್ಕಳಿಗೆ ಮಂತ್ರ ಹಾಕಿದರೆ ಅವು ಅಳು ನಿಲ್ಲಿಸುವವು ಎಂಬ ನಂಬಿಕೆ ಇತ್ತು. ಜಾನುವಾರಗಳು ಕಳೆದರೆ ಅವರು ಮಂತ್ರವನ್ನು ಒಂದು ಚೀಟಿಯನ್ನು ಬರೆದುಕೊಡುವರು. ಅದನ್ನು ಆ ರಾಸನ್ನು ಕಟ್ಟುವ ಗೂಟಕ್ಕೆ ಕಟ್ಟಿದರೆ ಜಾನುವಾರು ಎಲ್ಲಿದ್ದರೂ ಬರುವುದು ಎಂಬ ನಂಬಿಕೆ ವ್ಯಾಪಕವಾಗಿತ್ತು. ನಮ್ಮಮನೆಯಲ್ಲಿ ಕರುವೊಂದು ತಪ್ಪಿಸಿಕೊಂಡಿತ್ತು. ನಮ್ಮ ಅಜ್ಜಿ ಅವರಿಂದ ಚೀಟಿ ಬರೆಸಿಕೊಂಡು ಬಂದಳು. ಅದನ್ನು ಗೂಟಕ್ಕೆ ಕಟ್ಟು ಎಂದು ತಿಳಿಸಿದಳು. ನನಗೆ ಕುತೂಹಲ ನಾನು ಚೀಟಿಯನ್ನು ಬಿಚ್ಚಿ ನೋಡಿದೆ. ಅದರಲ್ಲಿ "ಶ್ರೀ ಕಾರ್ತವೀರ್ಯಾರ್ಜುನ ನಮಃ" ಎಂದು ಬರೆದಿದ್ದರು. ಜಮದಗ್ನಿ ಋಷಿಯ ಆಶ್ರಮದಲ್ಲಿದ್ದ ದೇವ ಧೇನುವನ್ನು ಕದ್ದು ನಂತರ ಪರಶುರಾಮನಿಂದ ಹತನಾದ ಆ ರಾಜನಿಗೂ ಕಳೆದುಹೋದ ದನಕ್ಕೂ ಏನು ಸಂಬಂಧ ಎಂದು ನನಗೆ ಗೊತ್ತಾಗಲೆ ಇಲ್ಲ. ಬಹುಶಃ ಅವನು ನಿನ್ನನ್ನೂ  ಕದ್ದೊಯ್ಯುವನು ಎಂದು ದನಕ್ಕೆ ಹಾಕುವ ಬೆದರಿಕೆ ಇದಾಗಿರಬೇಕು.
ಇದಲ್ಲದೆ ಅವರು ಮನೆಯ ಪಕ್ಕದಲ್ಲೆ ಒಂದು ಚಿಕ್ಕ ಕಿರಾಣಿ ಅಂಗಡಿ ಇಟ್ಟಿದ್ದರು. ಅವರ ಮಗನಿಗೆ ವಿದ್ಯೆ ಹತ್ತಿರಲಿಲ್ಲ. ಅವನನ್ನು ಹಾದಿ ಹತ್ತಿಸಲು  ಮಾಡಿದ ಪ್ರಯತ್ನ ಅದಾಗಿತ್ತು. ಶಾಲೆಯ ನಂತರ ಅವರೆ ಕುಳಿತು ವ್ಯಾಪಾರ ಮಾಡುವರು. ಶಾಲೆಯ ಸಮಯದಲ್ಲಿ ಅವರ ಹೆಂಡತಿ ಗಲ್ಲೆಯ ಮೇಲೆ ಕೂಡುವರು. ಅಲ್ಲಿ ಸಿಗುವ ಕಮ್ಮಾರಗಟ್ಟಿ ಮಕ್ಕಳಿಗೆ ಅತಿ ಪ್ರಿಯ. ಅವರದು ಇನ್ನೊಂದು ಹೆಗ್ಗಳಿಕೆ ಎಂದರೆ ಶಾಲೆ ನಡೆಯುವ ಹೊತ್ತಿನಲ್ಲಿ ಯಾವ ಮಕ್ಕಳೂ ಅಂಗಡಿಗೆ ಬರುವಂತಿಲ್ಲ. ಹಾಗೇನಾದರೂ ಬಂದರೆ ತನಿಖೆ ಪ್ರಾರಂಭಿಸಿ ತಂದೆ ತಾಯಿಯರಿಗೆ ಸುದ್ದಿ ಮುಟ್ಟಿಸುತ್ತಿದ್ದರು. ಮಕ್ಕಳಿದ್ದ ತಾಯಿ ತಂದೆಯರಿಗೂ ಅಂಗಡಿಗೆ ಬಂದಾಗ ತಮ್ಮ ಮಕ್ಕಳನ್ನು ಸಾಲಿಗೆ ಹಚ್ಚಲು ತಿಳಿ ಹೇಳುವರು. ಆಗಲೆ ಅವರು ಸರ್ವ ಶಿಕ್ಷಣ ಅಭಿಯಾನದ ಕೆಲಸ ಮಾಡುತಿದ್ದರು. ಇದರಿಂದ ಶಾಲೆಯ ಹಾಜರಾತಿಯೂ ಹೆಚ್ಚಿತು. ಈ ಸರಕಾರಿ ಶಾಲೆ ಶುರುವಾದ ಒಂದೆರಡು ವರ್ಷದ ವರೆಗೆ ಸಾಲಿಗುಡಿ ಕುಟುಕು ಜೀವ ಹಿಡಿದಿತ್ತು. ಬರುಬರುತ್ತಾ ಹುಡುಗರ ಸಂಖ್ಯೆ ಕಡಿಮೆಯಾಗಿ ಒಂದು ದಿನ ಮುಚ್ಚಿಯೂ ಹೋಯಿತು. ಊರಿಗೆ ಹೋಗಿದ್ದ ಅಲ್ಲಿನ ಅಯ್ಯನವರು ಮತ್ತೆ ನಮ್ಮೂರಿಗೆ ಬರಲೇ ಇಲ್ಲ.
ಗುರುಬಸಯ್ಯನವರಿಗೆ ಒಬ್ಬನೆ ಮಗ. ಶಿವಲಿಂಗ ಅವನ ಹೆಸರು. ಅವನನ್ನು ಮುದ್ದಿನಿಂದ ಶಿವಯ್ಯ ಎಂದು ಕರೆಯುತಿದ್ದರು. ಅವರು ಊರಿನ ಮಕ್ಕಳಿಗೆಲ್ಲ ಕಲಿಸುವ ಮೇಷ್ಟ್ರಾದರೂ ಅವನು ಮಾತ್ರ ಪಂಡಿತ ಪುತ್ರ. ಅವನಿಗೆ ಮಾತ್ರ ಓದು ಬರಹ ತಲೆಗೆ ಹತ್ತಲೇಇಲ್ಲ. ಅವನಿಗಾಗಿಯೇ ಅವರು ಅಂಗಡಿ ತೆರದದ್ದು. ದುಡ್ಡು ಬೇಕಾದಾಗ ಅಂಗಡಿಗೆ ಬರುತಿದ್ದ, ಎರಡೋ ಮೂರೊ ರೂಪಾಯಿ ವ್ಯಾಪಾರವಾದೊಡನೆ ಜಾಗ ಖಾಲಿ ಮಾಡುತಿದ್ದ. ಅವನೋ ಗುಂಡ್ರ ಗೂಳಿ. ಎಲ್ಲಿಯೂ ಕಾಲೂರಿ ಕುಳಿತವನಲ್ಲ. ಅವನು ಅಲ್ಲಿ ಇಲ್ಲಿ ಮೋಟಾರು ರಿಪೇರಿ ಕಲಿಯುವೆನೆಂದು  ಓಡಾಡಿದ. ಹೊಸಪೇಟೆಯಲ್ಲಿ ವಾಹನ ದುರಸ್ತಿ ಕೆಲಸ ಮಾಡುತ್ತಿರುವೆ ಎಂದು ಹೇಳಿಕೊಳ್ಳುತ್ತಿದ್ದ. ಒಳ್ಳೆ ಕಟ್ಟುಮಸ್ತಾದ ಆಳು. ತಂದೆಯಂತೆಯೆ ಆಕರ್ಷಕ ಬಣ್ಣ. ಜತೆಗೆ ಬಹು ಜರ್ಬಾಗಿ ಉಡುಪು ಹಾಕುತಿದ್ದ. ಅವನೆಂದರೆ ಊರಿನ ಪಡ್ಡೆಗಳಿಗೆ ಅತೀವ ಆಕರ್ಷಣೆ. ಅವನು ಒಂದು ಸೈಕಲ್‌ ಇಟ್ಟಿದ್ದ. ಸೈಕಲ್‌ನ ಹ್ಯಾಂಡಲ್‌ ತೆಗೆದು ಅದಕ್ಕೆ ಮೋಟಾರಿನ ಸ್ಟೀರಿಂಗ್‌ ಜೋಡಿಸಿದ್ದ. ಅವನು ಸೈಕಲ್ಲು ಹತ್ತಿ ಬರುವ ಮೋಡಿಗೆ ಮರುಳಾಗದವರೆ ಇರಲಿಲ್ಲ. ಅದನ್ನು ನೋಡಿದವರೆಲ್ಲ ಕಣ್ಣರಳಿಸುತಿದ್ದರು. ಆದರೆ ಬಸಯ್ಯನವರು ಮಾತ್ರ ಸದಾ ಅವನನ್ನು ಯಾವುದೆ ಉಪಯೋಗಕ್ಕೆ ಬಾರದವನು, ಕೆಲಸಗೇಡಿ ಎಂದೆ ಬಯ್ಯುತಿದ್ದರು. ಅವನು ಅವರಿಗೆ ಒಬ್ಬನೆ ಮಗ. ತಾಯಿಯ ಪ್ರೀತಿಯ ಮಗ. ಹಾಗಾಗಿ ಮಾತು ನಡತೆ ಎಲ್ಲದರಲ್ಲೂ ಉಡಾಫೆ. ಮಜಾ ಉಡಾಯಿಸಿಕೊಂಡು ಓಡಾಡುತಿದ್ದ. ಎಲ್ಲಕ್ಕೂ ಕಳಶವಿಟ್ಟಂತೆ ಅವನು ಊರಲ್ಲಿ ಒಂದು ಘನಂದಾರಿ ಕೆಲಸ ಮಾಡಿದ. ಹೇಗೆ ಹಣ ಹೊಂಚಿದನೋ ತಿಳಿಯದು, ಆದರೆ ಗ್ರಾಮದ ದೇವದಾಸಿಯೊಬ್ಬಳ ಮಗಳನ್ನು ಹೆಣ್ಣು ಮಾಡಿದ. ಆಗ ಇನ್ನೂ ದೇವದಾಸಿ ಪದ್ಧತಿ ಪ್ರಚಲಿತವಿದ್ದಿತು. ಊರಿನ ಹಣವಂತರು, ಕುರುಬಗೌಡರು ಈ ಕೆಲಸದಲ್ಲಿ ನಾಮುಂದು ತಾಮುಂದು ಎಂದು ಬರುತ್ತಿದ್ದರು. ಅದು ಅವರ ಘನತೆಯ ಕುರುಹು. ಹೆಣ್ಣು ಮಾಡುವುದು ಅಂದರೆ ವಿಶೇಷ ಗೌರವ. ಹುಡುಗಿ ದೊಡ್ಡವಳಾದ ಮೇಲೆ ಯಾರು ಹೆಚ್ಚು ಹಣ ಕೊಡುವರೋ ಅವರ ಜತೆ ಅವಳಿಗೆ ಆ ಸಮಾರಂಭ. ಅದೂ ಒಂದು ಸಣ್ಣ ಮದುವೆಯಂತೆ. ಆದರೆ ಬೀಗರು ಬಿಜ್ಜರು ಮಾತ್ರ ಇಲ್ಲ. ಮೊದಲು ದೇವರ ಹೆಸರಲ್ಲಿ ತಾಳಿ ಕಟ್ಟಿಸುವರು. ನಂತರ ಆರತಿ, ಮೆರವಣಿಗೆ ಇತ್ಯಾದಿ ಸಂಭ್ರಮಗಳು. ಒಂದು ವರ್ಷ ಅವಳು ಅವನ ಜತೆ ಮಾಡಿಕೊಂಡ ಹೆಂಡತಿಯಂತೆ ನಿಯತ್ತಿನಿಂದ ಬಾಳಬೇಕು. ಮೊದಲೆ ನಿಗದಿಯಾದಂತೆ ಹಣ, ವಡವೆ, ವಸ್ತ್ರ ಕೊಟ್ಟು ಅವಳ ಎಲ್ಲ ಖರ್ಚನ್ನು ಒಂದು ವರ್ಷ ಅವನು ನಿಭಾಯಿಸಬೇಕು. ಶಿವಲಿಂಗಯ್ಯ ಅದೆಲ್ಲಿ ಹಣ ಹೊಂಚಿದನೋ ಯಾರಿಗೂ ತಿಳಿಯದು. ಪರ ಊರಿನಿಂದ  ಬಂದವನಾದರೂ, ಸ್ಥಳೀಯರಾದ ಪ್ರಬಲರ ಮೀಸೆ ಮಣ್ಣಾಗುವಂತೆ ಮಾಡಿದ. ನಿವೃತ್ತಿಯ ಅಂಚಿನಲ್ಲಿದ್ದ ಬಸಯ್ಯನವರಿಗೆ ಇದನ್ನು ಸಹಿಸುವುದು ಆಗಲಿಲ್ಲ.

ಸಮಾಜದಲ್ಲಿ ಶಿಕ್ಷಕರು ಆದರ್ಶವಾಗಿರಬೇಕು ಎಂಬುದು ಅಂದಿನ ನಂಬಿಕೆ. ಬೇರೆ ಯಾರು ಏನು ಮಾಡಿದರೂ ಪರವಾ ಇಲ್ಲ, ಅಕ್ಷರ ಕಲಿಸುವರು ಮಾದರಿಯಾಗಿರಬೇಕು. ಅದೆ ಅಳತೆಗೋಲು ಅವರ ಮನೆಯಲ್ಲಿನ ಜನರಿಗೂ ಇರುತಿತ್ತು. ಶಿವಲಿಂಗುವಿನ ಧಾಡಸಿತನ ಅನೇಕರಿಗೆ ನುಂಗಲಾರದ ತುತ್ತಾಯಿತು. ಏನು ಅಯ್ಯನವರೆ ನಿಮ್ಮಮಗ ಹೀಗೆ ಮಾಡಿದ, ಎಂದು ಎಲ್ಲರೂ ಕೇಳುವವರೆ. ಅದರಲ್ಲಿ ಕಾಳಜಿಗಿಂತಲೂ  ಕಟಕಿಯೇ ಜಾಸ್ತಿ. ಅವರ ಅನುಕಂಪಕ್ಕಿಂತಲೂ ತಮಗೆ ದಕ್ಕಬೇಕಿದ್ದ ಗೌರವ, ಸುಖ ಅವನಿಗೆ ಸಿಕ್ಕಿತಲ್ಲ ಎಂಬ ಅಸೂಯೆ ಹೆಚ್ಚಾಗಿರುತಿತ್ತು. ಅವನ ದುಂದುವೆಚ್ಚಕ್ಕೆ ಹಣ ಹೊಂದಿಸಲಾರದೆ ಅವರು ಅಂಗಡಿ ಮುಚ್ಚಿದರು. ಅವರಿಗೂ ಮಾತು ಕೇಳಿ ಕೇಳಿ ಸಾಕು ಬೇಕಾಗಿತ್ತು. ಊರೂ ಸಾಕಾಗಿತ್ತು, ಗೌಡನೂ ಬೇಡ ಎಂದ, ಎಂಬ ಮಾತಿನಂತೆ, ಅವರು ವರ್ಗ ಪಡೆದು ತಮ್ಮೂರಿನ ಕಡೆ ನಡೆದರು. ನಮಗೆ ಬಹು ಒಳ್ಳೆಯ ಮೇಷ್ಟ್ರನ್ನು ಕಳೆದುಕೊಂಡು ದುಃಖವಾಯಿತು. ಊರ ಜನರೂ ಅವರು ಅವರು ಹೋಗುವುದನ್ನು ತಡೆಯಲು ಬಹಳ ಹೇಳಿದರು. ಆದರೆ ಅವರು ಕೊನೆಗಾಲದಲ್ಲಿ ಊರ ಹತ್ತಿರ ಹೋಗಿ ಇದ್ದ ಸ್ವಲ್ಪ ಜಮೀನು ನೋಡಿಕೊಂಡು ಕಾಲ ಕಳೆಯುವ ನಿರ್ಧಾರಕ್ಕೆ ಅಂಟಿಕೊಂಡರು. ಆಗ ಊರ ಜನ ಮಾತ್ರ ಎಂತಹ ತಂದೆಗೆ ಎಂತಹ ಮಗ! ಎಂದು ಮಮ್ಮಲ ಮರುಗಿದರು. ಅವರು ಕೊಡುತಿದ್ದ  ಔಷಧಿ, ಹಾಕುತಿದ್ದ ಮಂತ್ರ ಅನೇಕರನ್ನು ಮೋಡಿ ಮಾಡಿತ್ತು.

ಅವರು ಹೋದ ಸರಿ ಸುಮಾರಿಗೆ ನಾನು ಹತ್ತಿರದ ಪಟ್ಟಣದ ಶಾಲೆಗೆ ದಾಖಲಾಗಿದ್ದೆ. ನನ್ನ ಹಳ್ಳಿ ಶಾಲೆಯ ಓದು ಅಲ್ಲಿಗೆ ಮುಗಿಯಿತು.

ಆರರಿಂದ ಅರವತ್ತು-5: ಗುಂಪಿನಲ್ಲಿ ಗೋವಿಂದ

ಹೊಸಪೇಟೆಯ ಶಾಲೆಗೆ ಸೇರಿದನಂತರ ಮೂರು ವರ್ಷ ಅಲ್ಲಿ ನಮ್ಮ ಸೋದರ ಅತ್ತೆಯ ಮನೆಯಲ್ಲಿ ವಾಸ. ನಮ್ಮ ತಂದೆಗೆ ಒಬ್ಬಳೆ ತಂಗಿ. ಅವರ ವಾಸ ಚಿತ್ತವಾಡಿಗೆಯಲ್ಲಿ. ಅದು ಹೊಸಪೇಟೆಯ ಭಾಗವೆ ಆದರೂ ಪೇಟೆಯಂತೂ ಅಲ್ಲ. ಆದರೆ ಅಲ್ಲಿ ಏಳನೆ ತರಗತಿಯವರೆಗ ಓದಬಹುದಿತ್ತು. ಅಲ್ಲಿನ ಶಾಲೆಯಲ್ಲಿ ಐದನೆ ತರಗತಿಗೆ ಸೇರಿದೆ. ನಮ್ಮ ಅತ್ತೆಯ ಗಂಡ ಪ್ರಾಥಮಿಕ ಶಾಲಾ ಶಿಕ್ಷಕರು, ಅವರೂ ಅಲ್ಲಿಯೇ ಕೆಲಸ ಮಾಡುತಿದ್ದರು. ಕಟ್ಟುಮಸ್ತಾದ ಆಳು. ಹುಡುಗರಾಗಿದ್ದಾಗ ವ್ಯಾಯಾಮ ಪಟು. ಅದರಿಂದ ಹುರಿಗಟ್ಟಿದ ಮೈ. ಎದೆಯ ಮೇಲೆ ಬಂಡೆ ಇರಿಸಿಕೊಂಡು ಅದನ್ನು ಸುತ್ತಿಗೆಯಿಂದ ಒಡೆಯುವ ತನಕ ಉಸಿರು ಹಿಡಿದು ಜಯಸಿದವರು. ಮರಳು ತುಂಬಿದ ದೊಡ್ಡ ಕೊಡವನ್ನು ಹಲ್ಲಿನಲ್ಲಿ ಕಚ್ಚಿ ಎತ್ತುತ್ತಿದ್ದ ತಾಕತ್ತು ಅವರದು. ಆದರೆ ತುಂಬಾ ಸಾಧು ಪ್ರಾಣಿ. ಹೆಂಡತಿ ಕಂಡರೆ ಅವರಿಗೆ ಕಡು ಮಮತೆ. ಅವರ ಮದುವೆಯಾದ ಹೊಸದರಲ್ಲಿ ಇನ್ನೂ ಕೆಲಸಕ್ಕೆ ಸೇರಿರಲಿಲ್ಲ. ಹಗರಿಬೊಮ್ಮನಹಳ್ಳಿ ಹತ್ತಿರದ ಗ್ರಾಮದಲ್ಲಿ ಅವರ ವಾಸ ಹೊಸದಾಗಿ ಮದುವೆಯಾಗಿದೆ.  ಹೆಂಡತಿ ಕೊಪ್ಪಳದ ಹತ್ತಿರದ ಹ್ಯಾಟಿ ಎಂಬ ಊರಲ್ಲಿ ತಾಯಿಯ ತವರುಮನೆಯಲ್ಲಿ ಇರುತಿದ್ದರಂತೆ. ಅದು ಈಗ ತುಂಗಭದ್ರ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿಹೋಗಿದೆ. ಹೆಂಡತಿಯ ನೆನಪದಾಗ ನಡೆದು ಹೋಗುವರು. ವಾಹನ ಸೌಕರ್ಯ ಇರಲಿಲ್ಲ. ಸುಮಾರು ಅರವತ್ತು ಎಪ್ಪತ್ತು ಮೈಲು ದೂರ. ಹೆಂಡತಿಯ ಊರು ಸೇರುವ ಹೊತ್ತಿಗೆ ಸುಸ್ತೋ ಸುಸ್ತು. ಜತೆಗೆ ಸಣ್ಣಗೆ ಮೈ ಬಿಸಿಯಾಗುತಿತ್ತು. ಇದ್ದ ಮೂರು ದಿನ ಕಷಾಯ ಕುಡಿದು ಪಥ್ಯದ ಊಟ ಮಾಡಬೇಕು. ಬಲು ಸಂಕೋಚದ ಪ್ರಾಣಿ, ಬಹಳ ಸ್ವಾಭಿಮಾನ. ಅತ್ತೆಯ ಮನೆಯಲ್ಲಿ ಹೆಚ್ಚುದಿನ ಇರಬಾರದು ಎಂಬ ಬಿಗುಮಾನ ಬೇರೆ. ಆಗ ಅಳಿಯತನದ ಉಪಚಾರ ಬಹಳ ಸಂಭ್ರಮ. ಆದರೆ ಇವರು ಮೊದಲು ಹಾಕು ಮಣೆ. ಎರಡನೆ ದಿನ ನೂಕು ಮಣೆ ಇನ್ನೂ ಹೆಚ್ಚುದಿನ ಇದ್ದರೆ ಯಾಕೆ ಮಣೆ ಎನ್ನುವರೇನೊ ಎಂಬ ಹಿಂಜರಿಕೆಯಿಂದ ಎಷ್ಟು ಒತ್ತಾಯ ಮಾಡಿದರೂ ಕೇಳದೆ ಬಂದ ಮೂರನೆ ದಿನವೆ ಹೊರಟೆ ಬಿಡುವರು. ತಿಂಗಳಿಗೆ ಒಂದೋ ಎರಡೋ ಸಾರಿ ಬರುವರು. ಪ್ರತಿಬಾರಿಯೂ ಇದೆ ಅನುಭವ. ಅದರಿಂದ ವಿಶೇಷ ಅಡುಗೆ ಇಲ್ಲದ ಸಪ್ಪೆ ಅನ್ನಸಾರಿನ ಉಪಚಾರ. ಅದು   ಶಕ್ಕಮ್ಮನ ಗಂಡನ ಅಳಿಯತನ ಎಂದೆ ಹೆಸರುವಾಸಿಯಾಗಿತ್ತಂತೆ. ನೌಕರಿ ದೊರೆತ ಕೂಡಲೆ ಮಾಡಿದ ಮೊದಲ ಕೆಲಸ ಮನೆ ಮಾಡಿದ್ದು. ನಂತರ ಹೆಂಡತಿಯನ್ನು ಬಿಟ್ಟು ಇದ್ದವರೆ ಅಲ್ಲ.

ಇವರು ಶಾಲಾ ಶಿಕ್ಷಕರು. ಮೂರು ಮಕ್ಕಳು. ಹಳ್ಳಿಯಲ್ಲಿ ಆಸ್ತಿ ಇತ್ತು. ತುಂಬು ಕುಟುಂಬ.  ಅವರ ತಂದೆಗೆ ಆರು ಜನ ಮಕ್ಕಳು. ಅವಿಭಕ್ತ  ಕುಟುಂಬ. ಅವರ ತಂದೆ ಮತ್ತು ದೊಡ್ಡಪ್ಪನ ಎರಡೂ ಕುಟುಂಬಗಳು ಜತೆಯಲ್ಲಿಯೇ ಇದ್ದವು. ಅವರು ಹತ್ತು ಹಳ್ಳಿಯ ಶಾನುಭೋಗರಾಗಿ ಇದ್ದರು. ಬಲು ಜೋರಿನ ವ್ಯಕ್ತಿ. ಆ ಕುಟುಂಬದಲ್ಲಿ ಓದಿ ಸರಕಾರಿ ಕೆಲಸ ಹಿಡಿದವರು ಇಬ್ಬರು ಮಾತ್ರ. ಅದಕ್ಕೆ ಇವರ ಮೇಲೆ ಹೆಚ್ಚಿನ ಮಮಕಾರ. ಮನೆಗೆ ಬೇಕಾದ ಜೋಳ ಕಾಳುಗಳನ್ನು ವರ್ಷಕ್ಕಾಗುವಷ್ಟು ಮಗನಿಗೆ ಕಳುಹಿಸುತ್ತಿದ್ದರು. ರಜೆಯಲ್ಲಿ ಎಲ್ಲರೂ ಹಳ್ಳಿಗೆ ಹೋಗುತಿದ್ದರು. ಹೀಗಾಗಿ ನೆಮ್ಮದಿಯಿಂದ ಸಂಸಾರದ ರಥ ಸಾಗುತಿತ್ತು.

ನಾನು ಅಲ್ಲಿದ್ದಾಗ ಅವರ ಮಕ್ಕಳಲ್ಲಿ ಒಬ್ಬ ನನ್ನ ವಾರಗೆಯವ. ಆಟದಲ್ಲಿ ಮುಂದು. ಮಹಾ ಗಟ್ಟಿಗ. ಹುಡುಗನಿದ್ದಾಗ ಹರಿಯುವ ಚೇಳನ್ನೆ ಹಿಡಿದವ. ಇನ್ನೊಬ್ಬ ನನಗಿಂತ ಒಂದೂದುವರೆ ವರ್ಷ ದೊಡ್ಡವನು. ಓದಿನಲ್ಲಿ ಚುರುಕು. ಆಟ ನಾಟಕಗಳಲ್ಲಿ ಮುಂದು. ಮತ್ತೊಬ್ಬನು ಮೂರು ವರ್ಷ ಚಿಕ್ಕವನು ಅವನಿಗೆ ಚಿತ್ರ ಬಿಡಿಸುವ ಖಯಾಲಿ. ನಮ್ಮ ಅಜ್ಜಿ ಸದಾ ಅಲ್ಲಿ ಇರಲೇಬೇಕಿತ್ತು. ನಮ್ಮ ಅತ್ತೆಯದು ಆರು ತಿಂಗಳ ಕೂಸು ಮೂರು ತಿಂಗಳ ಬಸಿರು ಎಂಬ ಲೆಕ್ಕಾಚಾರ. ನಾನು ಅಲ್ಲಿದ್ದ ಮೂರು ವರ್ಷದಲ್ಲಿ ಅವರಿಗೆ ಎರಡು ಹೆರಿಗೆಯಾದ ನೆನಪು. ಹೀಗಾಗಿ ಸದಾ ಮಗಳ ಯೋಗ ಕ್ಷೇಮ ನೋಡಿಕೊಳ್ಳಲು ನಮ್ಮಜ್ಜಿ ಅಲ್ಲೆ ಇರುತ್ತಿದ್ದರು. ಮನೆ ಒಂದು ಛತ್ರದಂತೆ. ಸಾಲಾಗಿ ಊಟಕ್ಕೆ ಕುಳಿತರೆ ಜಿದ್ದಿನ ಮೇಲೆ ಊಟ ಮಾಡುವರು. ಮಲಗಲಂತೂ ಹಜಾರದಲ್ಲಿ ಹಾಸಿದ ಗುಡಾರ ಇರುವುದು. ಎಲ್ಲರೂ ಒಟ್ಟಿಗೆ ಮಲಗುವುದು. ದೀಪ ಅರಿಸಿದರೂ ಗುನುಗುಟ್ಟುವದು ನಡೆದೆ ಇರುತಿತ್ತು. ಒಳಗಿನಿಂದ ಗದರಿಕೆ ದನಿ ಬಂದಾಗಲೆ ಎಲ್ಲ ಸುಮ್ಮನಾಗುವರು.

ಅವರ ಮೂರು ಗಂಡುಮಕ್ಕಳ ಜತೆ ನಾನು ನಾಲ್ಕನೆಯವನು. ಜತೆಗೆ ನಮ್ಮ ಮಾವನ ಅಣ್ಣನ ಮಗನೂ ಸಹಾ ಹಳ್ಳಿಯಿಂದ ಓದಿನ ಸಲುವಾಗಿ ಅಲ್ಲಿಗೆ ಬಂದಿದ್ದ. ಅದರ ಜತೆ ಶಾಸ್ತ್ರಿ ಎಂಬ ವಾರನ್ನದ ಹುಡುಗ. ವಾರದಲ್ಲಿ ಒಂದು ದಿನ ಇಲ್ಲಿಯೆ ಊಟ. ಬಡ ವಿದ್ಯಾರ್ಥಿಗಳು ವಾರಕ್ಕೆ ಒಂದು ದಿನ ಒಬೊಬ್ಬರ ಮನೆಯಲ್ಲಿ ಊಟ ಮಾಡಿ ಶಾಲೆ ಕಲಿಯುತಿದ್ದರು. ಅವರು ಊಟ ಹಾಕುವವರ ಮನೆಯಲ್ಲಿ ಚಿಕ್ಕಪುಟ್ಟ ಕೆಲಸ ಮಾಡಬೇಕಿತ್ತು. ಒಂದು ಮನೆಯಲ್ಲಿ ಅನಾನುಕೂಲವಾದರೆ ಅಥವ ಯಾವುದಾದರೂ  ಮನೆಯವರು ಊರಿಗೆ ಹೋದರೆ ಆ ದಿನದ ಊಟ ನಮ್ಮ ಮನೆಯಲ್ಲೆ ಆಗುತಿತ್ತು. ಕಾರಣ ಅವನು ಮನೆಯ ಹಿರಿಯ ಮಗನ ಸಹಪಾಠಿ. ನಮ್ಮ ಮನೆಯಲ್ಲಿಯೆ ಅವನ ವಾಸ. ಹೀಗೆ ಓದಿ ಮುಂದೆ ಬಂದವರು ಬಹಳ ಜನ. ಹೀಗಾಗಿ ಹೊತ್ತಿಗೆ ಎರಡು ಸೇರು ಹಿಟ್ಟಿನ ರೊಟ್ಟಿ ಚಟ್‌ ಫೈಸಲ್‌. ಶನಿವಾರ, ಭಾನುವಾರ, ಬೇರೆ ಯಾವುದೆ ಹಬ್ಬ ಹರಿದಿನ ಎಂದು ರಜೆ ಬಂದರೆ ಎಲ್ಲ ಟೋಳಿಯು ನಮ್ಮ ಊರಿಗೆ ಹಾಜರು. ಹೇಳಿ ಕೇಳಿ ಎರಡು ಊರುಗಳ ನಡುವಿನ ಅಂತರ ನಾಲಕ್ಕು ಮೈಲು. ಅಲ್ಲಿ ತಿಂಡಿ ತಿಂದು ಬಿಟ್ಟರೆ ಆಟ ಆಡುತ್ತಾ ನಡೆದುಕೊಂಡು ಊಟದ ಹೊತ್ತಿಗೆ ನಮ್ಮೂರಿನಲ್ಲಿ  ಹಾಜರು.

ಸುಗ್ಗಿಯ ಕಾಲವಾದರೆ ಯಾರದಾದರೂ ಹೊಲಕ್ಕೆ ಹೋಗುವದು. ಅಲ್ಲಿ ಹೆಸರು ಅಲಸಂದಿಕಾಯಿಯ ರುಚಿ. ಜೋಳ ಮತ್ತು ಸೆಜ್ಜೆಯ ತೆನೆಯ ಹಾಲುಗಾಳುಗಳ ಬೆಳಸಿ ತಿನ್ನುವದು. ನಮ್ಮ ಗದ್ದೆಗೆ ಹೋದಾಗಲಂತೂ ಕಬ್ಬಿನ ಸಮಾರಾಧನೆ. ಹತ್ತಿರ ಕಬ್ಬಿನ ಗಾಣ ಆಡುತಿದ್ದರೆ ಅಲ್ಲಿಗೂ ಭೇಟಿ. ಜಿನ್ನಿನ ಸೋಮೇರ ಮನೆ ಹುಡುಗರು. ಹಾಗಾಗಿ ನಿರಾಳವಾಗಿ ಓಡಾಟ ಸಾಗುತಿತ್ತು. ಕೆಲವುಸಲ ಮನೆಗೆ ಅನುಕೂಲವಾಗುವ ಕೆಲಸವೂ ಆಗುತಿತ್ತು. ಜೋಳದ ಬೆಳೆ ಕಟಾವು ಆಗಿದ್ದರೆ ಎಲ್ಲರೂ ಸೇರಿ ಎರಡು ಮೂರು ಹೊರೆ ಕೋಲಿಯನ್ನು ತರುವುದಿತ್ತು. ಕೋಲಿ ಎಂದರೆ  ಜೋಳದ ದಂಟನ್ನು ತೆನೆ ಸಮೇತ ಕತ್ತರಿಸಿದ ಮೇಲೆ ಭೂಮಿಯಿಂದ ಮೇಲೆ ಒಂದೆರಡಡಿ ಉಳಿದಿರುವ ದಂಟಿನ ಭಾಗ. ಅದನ್ನು ಬೇರು ಸಮೇತ ಕಿತ್ತು ತಂದರೆ ಅದರಿಂದ ಹೊಲದವರಿಗೂ ಭೂಮಿ ಹಸನಾಗುವುದು. ಅದಕ್ಕೆ ಯಾರು ಬೇಕಾದರೂ ಅವನ್ನು ತೆಗೆದುಕೊಂಡು ಹೋಗಬಹುದಿತ್ತು. ಅದು ನೀರೊಲೆಗೆ ತಿಂಗಳುಗಟ್ಟಲೆ ಉರುವಲಾಗುತಿತ್ತು.

ವರ್ಷಕೊಮ್ಮೆ ಮುತ್ತುಗದ ಎಲೆ ತರಲು ಹೋಗುವುದಿತ್ತು. ಮುತ್ತುಗದ ಮರಗಳು ವರ್ಷದಲ್ಲಿ ಕೆಲವುಕಾಲ ಅಗಲವಾದ ಎಲೆಗಳಿಂದ ಸೊಂಪಾಗಿ ಇರುತಿದ್ದವು. ಗೋಣಿ ಚೀಲ ತೆಗೆದುಕೊಂಡು ಹೋಗಿ ಗದ್ದೆ ಬದುವಿನಲ್ಲಿದ್ದ ಮುತ್ತುಗದ ಮರವನ್ನು ಒಬ್ಬರು ಹತ್ತಿ ಬಲಿತ, ಅಗಲವಾದ ಎಲ್ಲೆಗಳನ್ನು ಕಿತ್ತು ಕಿತ್ತು ಕೆಳಗೆ ಹಾಕಿದರೆ ಉಳಿದವರು ಅವುಗಳನ್ನು ಜೋಡಿಸಿ ಚೀಲದಲ್ಲಿ ತುಂಬುವರು. ಮನೆಗೆ ಹೋದ ಮೇಲೆ ಅವುಗಳನ್ನು ನೀರಿನಲ್ಲಿ ತೋಯಿಸಿ ಒಟ್ಟಾಗಿ ಜೋಡಿಸಿ ಬೀಸುವ ಕಲ್ಲಿನ ಕೆಳಗೆ ಇಟ್ಟು ಅವು ಸಪಾಟಾದ ಮೇಲೆ ಎಲೆ ಸರ ಮಾಡಿ ನೇತು ಹಾಕುತಿದ್ದರು. ಪುರುಸೊತ್ತಾಗಿದ್ದಾಗ ಅಮ್ಮ ಅಜ್ಜಿ ಜೋಳದ ದಂಟಿನ ಸಿಬರು ಮಾಡಿ ಅವುಗಳಿಂದ ಎಲೆ ಹಚ್ಚುತಿದ್ದರು. ಅದರಿಂದ ವರ್ಷಾವಧಿ ಊಟಕ್ಕೆ ಹಬ್ಬ ಹುಣ್ಣಿಮೆ ದಿನ, ಹೆಚ್ಚು ಜನ ಬಂದಾಗ ಅನುಕೂಲವಾಗುತಿತ್ತು. ಮನೆಯಲ್ಲಿ ಸದಾ ಹಚ್ಚಿದ ಪತ್ರೊಳಿ ಎಲೆಗಳ ಪೆಂಡಿ, ದೊನ್ನೆಗಳ ಕಟ್ಟು ಇರುತಿತ್ತು.

ಹಂಪೆ ಹತ್ತಿರವಿದ್ದುದರಿಂದ ಬುತ್ತಿ ಕಟ್ಟಿಕೊಂಡು ಬೆಳಗ್ಗೆ ಹಂಪೆಗೆ ನಡೆದು ಹೊರಟರೆ ಹಾಳು ಪಟ್ಟಣ ಸುತ್ತಾಡಿ, ಚಕ್ರತೀರ್ಥ, ಪುರಂದರ ಮಂಟಪದಲ್ಲಿ ಬುತ್ತಿ ತಿಂದು ರಾತ್ರಿಯ ವೇಳೆಗೆ ಮನೆಗೆ ಬರುವುದೂ ಇತ್ತು. ಈ ಪಟಾಲಂ ಇದ್ದಾಗಲೆ ವರ್ಷಕ್ಕೆ ಬೇಕಾಗುವ ಹಪ್ಪಳ ಸಂಡಿಗೆ ತಯಾರಿಯಾಗುತಿತ್ತು. ಆಗ ಮಾಳಿಗೆಯ ಮೇಲೆ ಒಣ ಹಾಕಿದ ಅವನ್ನು ಕಾಯುವ ಕೆಲಸ ನಮ್ಮದು. ಕೋತಿ ಮತ್ತು ಕಾಗೆಗಳಿಂದ ಅವನ್ನು ತಡೆಯಲು ಕೋಲು ಹಿಡಿದು ಕಾಯುತಿದ್ದೆವು. ನಮ್ಮನ್ನು ಕಾಯಲು ಆಗೀಗ ದೊಡ್ಡವರು ಬರುತಿದ್ದರೂ. ಅವರ ಕಣ್ಣು ತಪ್ಪಿಸಿ ನಾವು ಹಸಿಯಸಂಡಿಗೆ ತಿನ್ನುತಿದ್ದೆವು ನಮ್ಮಲ್ಲಿನ ಮೀರ್‌ ಸಾಧಕ್‌ ಚಾಡಿ ಹೇಳಿದರೆ ಬೈಗಳು ಬೀಳುತಿದ್ದವು. ಮಾಳಿಗೆಯ ಮೇಲೆ ಗುಡಾರ ಹೊದಿಕೆಗಳಿಂದ ತಾತ್ಕಾಲಿಕ ತಂಬೂ ಮಾಡಿಕೊಂಡು ಅದರ ನೆರಳಲ್ಲೆ ಅದು ಇದು ಆಡುತ್ತಾ ಕಾಲ ಹಾಕುತಿದ್ದೆವು. ಜತೆಗೆ ಅತ್ತೆ ಬಂದರಂತೂ ಮುಗಿಯಿತು. ಅವರು ಬ್ಯಾಳಿಯಲ್ಲಿ ಬೆಲ್ಲ ಬಿದ್ದರೂ ಬಂದೆ ಬರುತಿದ್ದರು. ಆಗ ಅವಲಕ್ಕಿ, ಅರಳಿಟ್ಟು, ಸ್ಯಾವಗಿ ತಯಾರಿಗೆ ತೊಡಗುತಿದ್ದರು.

ನಮಗಂತೂ ಲಂಗಿಲ್ಲ ಲಗಾಮಿಲ್ಲ. ತೋಟ ತುಡುಗೆ ಎಂದು ತಿರುಗಿದ್ದೆ ಬಂತು. ಹೇಗೆ ಇದ್ದರೂ ಹಂಪಿ ನಮಗೆ ನಾಲಕ್ಕೆ ಮೈಲು. ಪ್ರತಿ ಸಲವೂ ಹಂಪಿಯಲ್ಲಿನ ಒಂದೊಂದು ಜಾಗಕ್ಕೆ ದಾಳಿ ಇಡುತಿದ್ದೆವು. ಅಲ್ಲದೆ ಯಾವುದಾದರೂ ಆರಾಧನೆ ಇದ್ದರೆ ಅದಕ್ಕೆ ನಮ್ಮ ಹಾಜರಿ ಹಾಕುತಿದ್ದೆವು. ಒಪ್ಪತ್ತಿನ ಊಟಕ್ಕೆ ಇಪ್ಪತ್ತು ಮೈಲಿ ನಡೆವ ಕಾಲ ಅದು. ನಿತ್ಯ ಸ್ನಾನಕ್ಕೆ ಪವರ್ ಕೆನಾಲ್‌ಗೆ ಭೇಟಿ. ನಮ್ಮ ಊರಲ್ಲಿ ಕುಡಿಯುವ ನೀರಿನ ಕೊರತೆಯಿದ್ದರೂ ಹತ್ತಿರದಲ್ಲೆ ಇರುವ ಕಾಲುವೆಗಳು ಮೂರು. ಆದರೆ ಇದ್ದದು ಮಾತ್ರ ಮೈಲು ದೂರದಲ್ಲಿ. ಅಲ್ಲಿ ನೀರಿನ ವಿಷಯದಲ್ಲಿ ನಮಗೆ ಬಹು ಸಮೃದ್ಧಿ. ಊರ ಮುಂದೆ ಬಸವನ ಕಾಲುವೆ ಒಂದು ಮೈಲು ಹೋದರೆ ದೊಡ್ಡ ಕಾಲುವೆ. ಅಲ್ಲಿ ಸದಾ ರಭಸದಿಂದ ಹರಿವ ಎಂಟು ಅಡಿ ಆಳದ ನೀರು. ಅದರಲ್ಲಿ ಈಜುವುದೆಂದರೆ ಸಾಹಸದ ಕೆಲಸ. ಅಷ್ಟು ಸೆಳವು. ಕೈ ಸೋತು ಸೆಳವಿಗೆ ಸಿಕ್ಕರೆ ಗೋವಿಂದನೆ ಗತಿ. ಅಲ್ಲದೆ ಅದರಲ್ಲಿ ತಿಂಗಳಿಗೊಮ್ಮೆಯಾದರು ಒಂದು ಹೆಣ ಬಂದೆ ಬರುವುದು. ಅದಕ್ಕೆ ಒಬ್ಬೊಬ್ಬರೆ ಈಜುವುದೆಂದರೆ ಭಯ.

ಆದರೆ ಕಲಿತ ಮೇಲೆ ಅದರ ಮಜವೆ ಬೇರೆ. ಪಣುವಿನ ಮೇಲೆ ನಿಂತು ಹಾರುವ ವೈವಿಧ್ಯ ಹೇಳತೀರದು. ಅದರಲ್ಲೂ ಅಲ್ಲಿಯೆ ಬಟ್ಟೆ ಒಗೆಯಲು ಹರೆಯದ ಹುಡುಗಿಯರು ಕೂತಿದ್ದರಂತೂ ಎಲ್ಲರೂ ಸಾಹಸ ಭೀಮರೆ. ವಯಸ್ಸಿನ ಮಹಿಮೆ. ಬೇಡ ಬೇಡ ಎಂದರೂ ಹುರುಪಿನಿಂದ ಹಾರುವುದು. ನೀರಲ್ಲಿ ಮುಳುಗಿ ಮತ್ತೆಲ್ಲೋ ತೇಲುವುದು ಮೊದಲಾದ ಚೇಷ್ಟೆ ಮಾಡುವರು.

ಒಂದು ರೀತಿಯಲ್ಲಿ ಬಾವಿಯಲ್ಲಿ ಈಜುವುದು ಬಹು ಕ್ಷೇಮ. ಅಲ್ಲಿ ಕೊಚ್ಚಿಕೊಂಡು ಹೋಗುವ ಭಯ ಇಲ್ಲ. ಈಗಿನ ಈಜುಕೊಳದ ತರಹ ಆದ್ದರಿಂದ ಈಜು ಕಲಿಯುವುದಕ್ಕೆ ಬಾವಿಯೆ ಬಲು ಉತ್ತಮ. ಅದಕ್ಕಾಗಿ ವಿಶೇಷ ಶ್ರಮ ಬೇಕಿರಲಿಲ್ಲ. ನುಗ್ಗೆಗಿಡ ಕಡಿದು ಅದರ ಟೊಂಗೆಗಳನ್ನು ಎರಡು ಅಡಿ ಉದ್ದ ವಿರುವಂತೆ ಕತ್ತರಿಸಿ ಆರೆಂಟು ತುಂಡುಗಳನ್ನುಸೇರಿಸಿ ಕಟ್ಟಿದರೆ ಮುಗಿಯಿತು. ನಮ್ಮನ್ನು ತೇಲಿಸುವ ಸಾಧನ ಸಿದ್ಧ. ಅದನ್ನು ನಡಕ್ಕೆಕಟ್ಟಿಕೊಂಡು ನೀರಿಗೆ ಇಳಿದರೆ ಮುಳುಗುವ ಮಾತೆ ಇಲ್ಲ. ಭಯದಿಂದ ಕೈಕಾಲು ಬಡಿದರೂ ಸಾಕುದಂಡೆಗ ಬಂದು ಬಿಡುವೆವು. ಹೀಗೆ ಒಂದು ವಾರ ಮಾಡಿದರೆ ಆಯಿತು, ಈಜು ಬಂದಂತೆ. ಕೆಲವರು ಒಣಗಿದ ಸೋರೆ ಬುರಡೆಗಳನ್ನು ಬಳಸಿ ಈಜು ಬುರುಡೆ ತಯಾರಿಸುವರು. ಇನ್ನು ಹಲವರು ಖಾಲಿ ಸೀಮೆಎಣ್ಣೆ ಡಬ್ಬಿ ಬಳಸುವರು. ಅದರಲ್ಲಿನ ರೂಪಾಯಿಗಿಂತ ಅಗಲವಾದ ಚಿಕ್ಕಬಾಯಿಗೆ ದಪ್ಪನೆಯ ಈರುಳ್ಳಿ ಸಿಕ್ಕಿಸಿದರೆ ಅಯಿತು. ಅದನ್ನು ಕಟ್ಟಿಕೊಂಡರೆ ಆನೆ ಮರಿಯಂತಹವನು ಸಹ ಮುಳುಗಲಾರ. ಹೀಗಾಗಿ ನಮಗೆ ನಿಂತ ನೀರಾಗಲಿ ಹರಿವ ನೀರಾಗಲಿ ಈಜುವುದು ಸಲೀಸಾದ ಕೆಲಸ.

ಹರಿವ ನೀರಲ್ಲಿ ಸೆಳವಿಗೆ ಸಿಲುಕಿ ಅಪಾಯ ಆದದ್ದು ಉಂಟು. ಬಾವಿಯಲ್ಲಿ ಅಸಂಭವ ಬಹುತೇಕ ವಿರಳ. ಆದರೆ ಬಾವಿಯಲ್ಲಿ ಕೆಸರು ಅಥವ ಕಲ್ಲು ಇದ್ದಾಗ ಸುರಂಗ ಹೊಡೆದರೆ ಮಾತ್ರ ಅಪಾಯ. ಸುರಂಗ ಹೊಡೆಯುವುದು ಎಂದರೆ ಬಾವಿಯ ದಡದ ಮೇಲೆ ನಿಂತು ತಲೆ ಕೆಳಗಾಗಿ ಹಾರುವುದು. ಅಪರಿಚಿತ ನೀರಾದರೆ ಆ ಸಾಹಸ ಸಲ್ಲ. ಕಬ್ಬೇರ ಬರಮ ಒಳ್ಳೆ ಈಜುಗಾರ. ನೀರಿನಲ್ಲಿ ಅವನು ಮೀನಿನ ಮರಿಗಿಂತಲು ಚುರುಕು. ಇನ್ನು ಅವನು ಹಾರುವ ವಿಧಾನವಂತೂ ಎಲ್ಲರ ಬೆರಗಿಗೆಕ ಕಾರಣ. ನೀರಿನಲ್ಲಿ ಹಾರುವಾಗ ಪಲ್ಟಿ ಹೊಡೆಯುವುದು, ಬಿಟ್ಟಬಾಣದಂತೆ ನೀರನ್ನು ಸೀಳಿಕೊಂಡು ಹೋಗುವುದು ನಮಗೆಲ್ಲ ಬೆರಗು ಮೂಡಿಸುತಿತ್ತು. ಆದರೆ ಅವನು ನೀರಲ್ಲೆ ಸಾವನ್ನಪ್ಪಿದ. ಒಂದು ಸಲ ಬೇರೆ ಯಾವುದೋ ಬಾವಿಗೆ ಹೋದಾಗ ಅಲ್ಲಿನ ನೀರನ್ನು ನೋಡಿ ಖುಷಿಯಾಗಿ ಮೇಲಿನಿಂದ ತಲೆಕೆಳಗಾಗಿ ಹಾರಿದ್ದೆ ಬಂತು. ನೀರೊಳಗಿಂದ ಗುಳ್ಳೆಗಳು ಬಂದಿವೆ. ಅವನು ಮೇಲೆ ಏಳಲೆ ಇಲ್ಲ. ಜತೆಗಿದ್ದವರು ಗಾಬರಿಯಾಗಿ ನೀರಿಗಿಳಿದು ನೋಡಿದಾಗ ಅವನ ಕಾಲುಗಳು ಅಲ್ಲಾಡುವುದು ಕಾಣಿಸಿವೆ. ಹಾಗೂ ಹೀಗೂ ಅವನ ಕಾಲು ಹಿಡಿದು ಎಳೆದಿದ್ದಾರೆ. ಅಂಥ ಒಳ್ಳೆಯ ಈಜುಗಾರನೂ ಅಕಾಲ ಮರಣಕ್ಕೆ ತುತ್ತಾಗಿದ್ದ, ಆಗಲೆ ಅವನು ನೀರು ಕುಡಿದು ಉಸಿರಾಟ ನಿಂತಿದೆ. ಅವನು ಮೇಲಿನಿಂದ ಹಾರಿದಾಗ ತಳದಲ್ಲಿದ್ದ ಕೆಸರಿನಲ್ಲಿ ಅವನ ತಲೆ ಸಿಕ್ಕಿಹಾಕಿಕೊಂಡು ಹೊರಗೆ ಬರಲು ಆಗಿಲ್ಲ.

ಇರುವ ಮೂರು ವರ್ಷ ಆಡಾಡುತ್ತಾ ಕಳೆದೆ. ಅಲ್ಲಿನ ಒಂದೆ ತೊಡಕು ಎಂದರೆ ಅಭ್ಯಾಸಕ್ಕೆ ಅಲ್ಲಿ ಆದ್ಯತೆ ಇಲ್ಲ. ನಮ್ಮ ಮಾವ ಉತ್ತಮ ಶಿಕ್ಷಕರು. ಪಾಠ ಏನಿದ್ದರೂ ಶಾಲೆಯಲ್ಲಿ ಮಾತ್ರ. ಒತ್ತಾಯದ ಮೇರೆಗೆ ಆ ಊರಿನ ಅತಿ ದೊಡ್ಡ ಶ್ರೀಮಂತರಾದ ಉಳ್ಳಾಗಡ್ಡೇರ ಮನೆಗೆ ಹೋಗಿ ಪಾಠ ಹೇಳುತಿದ್ದರು. ಅವರದು ಅವಿಭಕ್ತ ಕುಟುಂಬ. ಆ ಒಂದು ಮನೆಯಲ್ಲಿಯೆ ಆರೆಂಟು ಮಕ್ಕಳು. ಸಂಜೆ ಆರಕ್ಕ ಹೋದರೆ ರಾತ್ರಿ ಎಂಟಕ್ಕೆ ಬರುವರು ಅಷ್ಟುಹೊತ್ತಿಗೆ ನಮ್ಮ ತಲೆಗಳು ತಕ್ಕಡಿ ತೂಗುತ್ತಿದ್ದವು. ಮನೆಯಲ್ಲಿ ಮಕ್ಕಳಿಗೂ ಅಷ್ಟು ಆಸಕ್ತಿ ಇರಲಿಲ್ಲ. ಅವರಿಗೂ ಪುರುಸೊತ್ತಿರಲಿಲ್ಲ. ಹಾಗಾಗಿ ನಮಗೆ ಮನೆಯಲ್ಲಿ ಓದಲು ಒತ್ತಾಯವಿರಲಿಲ್ಲ. ನಾನೋ ಆಗಲೆ ಓದು ಗುಳಿ. ಆದ್ದರಿಂದ ನಾನು ನಾನು ತರಗತಿಗೆ ಮೊದಲಿಗನಾಗುತ್ತಿದ್ದೆ. ಅದು ತುಸು ದುಸುಮುಸಿಗೆ ಕಾರಣ ಮೇಷ್ಟ್ರ ಮಕ್ಕಳಾದ ಅವರಿಗಿಂತ ಮೇಸ್ತ್ರಿ ಮಗ ನಾನು ಹೆಚ್ಚು ಅಂಕ ಗಳಿಸುವುದು ಎಂದರೆ ಕಣ್ಣು  ಕೆಂಪಾಗಿಸಿತು. ನಮ್ಮ ಅತ್ತೆಗೆ ಬಹಳ ಖುಷಿ. ನನ್ನ ಅಣ್ಣನ ಮಗ ಜಾಣ ಎಂದು. ನಮ್ಮ  ಮಾವ ನಿರ್ಲಿಪ್ತ. ತಾನಾಯಿತು ತನ್ನ ಶಾಲೆಯಾಯಿತು. ಹೊತ್ತಿಗೆ ಸರಿಯಾಗಿ ಊಟವಾದರೆ ಮುಗಿಯಿತು. ಮಕ್ಕಳು ತಾವೆ ಓದಿಕೊಳ್ಳುತ್ತಾರೆ ಎಂಬ ನಂಬಿಕೆ. ಆದರೆ ಸದಾ ಆಟಗುಳಿಯಾಗಿದ್ದ ನನ್ನ ಓರಗೆಯವರೆ ತುಸು ಕಿರಿ ಕಿರಿ ಮಾಡಿಕೊಳ್ಳುತಿದ್ದರು. ಅದೂ ಪರೀಕ್ಷೆ ಮುಗಿದು ಉತ್ತರ ಪತ್ರಿಕೆ ಕೊಟ್ಟಾಗ ಮಾತ್ರ. ನಂತರ ಮತ್ತೆ ಮಾಮೂಲಿನಂತೆ ಆಟ.

ಆರರಿಂದ ಅರವತ್ತು ೬: ಊರಿಗೆ ಅಪ್ಪ ಉಪಕಾರಿ

ಅಪ್ಪ ಪೇಟೆಯ ಸಕ್ಕರೆ ಜಿನ್ನಿನಲ್ಲೆ ಫೀಲ್ಡ್‌ ಮೇಸ್ತ್ರಿ. ಅವರಿಗೆ ಜಿನ್ನಿಗೆ ಕಬ್ಬು ಒದಗಿಸುತಿದ್ದ ಸುತ್ತಲ ಹಳ್ಳಿಗಳ ರೈತರ ಗದ್ದೆಯಲ್ಲಿನ ಬೆಳೆಯ ಉಸ್ತುವಾರಿ ಕೆಲಸ. ಕಬ್ಬು ನಾಟಿ  ಮಾಡಿದಾಗ, ಕಟಾವಿಗೆ ಚೀಟಿ ಕೊಡುವಾಗ ಅವರ ಮಾತೆ ವೇದವಾಕ್ಯ. ಅವರಿಗೆ ಕಬ್ಬಿನ  ಚೀಟಿ ಕೊಡೋ ಸಾಮಿ ಎಂದೆ ಅಡ್ಡ ಹೆಸರು. ನಮ್ಮ ಮನೆ ಇದ್ದದ್ದು ಜಿನ್ನಿನಿಂದ ಮೂರು ಮೈಲು ದೂರದ ಹಳ್ಳಿಯಲ್ಲಿ. ಅಲ್ಲಿಂದ ಬೆಳ್ಳಂಬೆಳಗ್ಗೆ ಸೈಕಲ್‌ ಏರಿ ತಮ್ಮ ವ್ಯಾಪ್ತಿಯ ಗದ್ದೆಗಳಿಗೆ ಸುತ್ತು ಹಾಕುತ್ತಿದ್ದರು. ಯಾವ ಗದ್ದೆಯಲ್ಲಿ ಎಷ್ಟು ಪ್ರಮಾಣದಲ್ಲಿ ನಾಟಿಯಾಗಿದೆ ಎಂದು ದಾಖಲು ಮಾಡುವುದು ಅವರ ಕೆಲಸ. ಅವರ ವರದಿಯ ಮೇಲೆ ರೈತರಿಗೂ ಸಕ್ಕರೆ ಜಿನ್ನಿನವರಿಗೂ ಒಪ್ಪಂದವಾಗುತ್ತಿತ್ತು. ಕಬ್ಬು ತುಳಿದ ಮೇಲೆ ಆ ರೈತರಿಗೆ ಉಪ್ಪು, ಹಿಂಡಿ ಕೊಡುತ್ತಿದ್ದರು. ರಸಗೊಬ್ಬರಕ್ಕೆ ಉಪ್ಪು ಎನ್ನವರು. ಎಣ್ಣೆ ತೆಗೆದ ಕಾಳಿನ ಚರಟ ಹಿಂಡಿ. ಅಪ್ಪ ಪ್ರತಿ ರೈತರಿಗೆ ಸಣ್ಣ ಪುಸ್ತಕ ಕೊಡುತ್ತಿದ್ದ. ಅದರಲ್ಲೇ ಅವರ ಕಬ್ಬು ತುಳಿದ ದಿನ, ಭೂಮಿಯ ಅಳತೆ, ಸರ್ವೇ ನಂ., ಗೊಬ್ಬರ ಕೊಟ್ಟ ದಿನಾಂಕವನ್ನು ದಾಖಲಿಸಿ,  ಜಿನ್ನಿನವರ ಸಿಕ್ಕೆ ಹಾಕಿ ಕೊಡುತ್ತಿದ್ದರು. ಕಬ್ಬು ತುಳಿಯುವ ಕೆಲಸ ಮೂರು ನಾಲ್ಕು ದಿನ ನಡೆದರೂ, ಒಂದೆರಡು ದಿನ ಮುಂಚೆ ಮಾಡಿದ್ದಾರೆ ಎಂದರೆ ರೈತರಿಗೆ ಕಬ್ಬು ಒದಗಿಸುವ ಅವಕಾಶ ಸ್ವಲ್ಪ ಬೇಗನೇ ಸಿಗುತ್ತಿತ್ತು. ಅಪ್ಪ ಆ ವಿಷಯದಲ್ಲಿ ಬಹು ಉದಾರಿ ರೈತರಿಗೆ ಅನುಕೂಲವಾಗಲಿ ಎಂದು ಹಿಂದಿನ ದಿನಾಂಕವನ್ನೇ ಹಾಕುತ್ತಿದ್ದರಿಂದ ರೈತರಿಗೆ ಅಪ್ಪನ ಬಗ್ಗೆ ತುಂಬಾ ವಿಶ್ವಾಸ. ಅನೇಕ ರೈತರು ಈ ನಾಲ್ಕಾಣೆ ಪುಸ್ತಕಕ್ಕೆ ರೈತರು ಎಂಟಾಣೆ, ರುಪಾಯಿ ಕೊಡುತ್ತಿದ್ದರು. ದುಡ್ಡಿಲ್ಲ ಸಾಮಿ ಅಂದ್ರೆ ಅಪ್ಪನೇ ಕೈಯಿಂದ ದುಡ್ಡು ಹಾಕಿ ಅವರಿಗೆ ದಾಖಲೆ ಪುಸ್ತಕ ಕೊಡುತ್ತಿದ್ದರು. ಈ ಪುಸ್ತಕವನ್ನು ರೈತರು ಜೋಪಾನವಾಗಿ ಇಟ್ಟುಕೊಳ್ಳಬೇಕಿತ್ತು. ಈ ಪುಸ್ತಕ ನೋಡಿಯೇ ಅವರಿಗೆ ಕಬ್ಬಿನ ಚೀಟಿ ಕೊಡುತ್ತಿದ್ದರು. ಹಾಗಾಗಿ ರೈತರು ಚೀಟಿ ಸಾಮಿ ದೇವ್ರಂತ ಮನಸ್ಯಾ ಅಂತಿದ್ರು. ಅವರು ತಾವು ಮನೆಗಂತ ಹೊಲದಲ್ಲಿ ಬೆಳೆದ ಪಟ್ಲಕಾಯಿ, ತುಪ್ಪೀರಿ ಕಾಯಿ, ಹೆಸರುಕಾಯಿ, ಪುಂಡಿಪಲ್ಯ, ಹಕ್ರಿಕಿ, ಕೋಳಿ ಜುಟ್ಟು, ಅಣ್ಣಿ ಸೊಪ್ಪು, ಚಪ್ಪರ ಬದನೆ ಮೊದಲು ಸ್ವಾಮೇರ ಮನಿಗೆ ತಂದು ಕೊಡುತ್ತಿದ್ದರು. ಅವರು ಮನೆಗೆಂದು ತಂದಾಗ ನಮ್ಮ ಮನೆಗೂ ಕಾಯಿಪಲ್ಲೆ  ಬರುತ್ತಿದ್ದವು. ರಾಶಿಯಾದ ಮೇಲೆ ಆಯಗಾರರಿಗೆ ಕೊಡುವಂತೆ ಪುಟ್ಟಿ ಎರಡು ಪುಟ್ಟಿ ಜೋಳ ನೆಲ್ಲು, ಬೆಲ್ಲ ಮನೆಗೆ ತಂದು ಕೊಡುತ್ತಿದ್ದದು ವಾಡಿಕೆಯಾಗಿತ್ತು. ಅಪ್ಪ ದಿಲ್ದಾರಾಗಿ ಎಲ್ಲರಿಗೂ ಖರ್ಚು ಮಾಡುತ್ತಿದ್ದರು.

ಕಬ್ಬು ಬೆಳೆದ ಮೇಲೆ ಬೆಲ್ಲಕ್ಕೇನಾದರೂ ರೇಟು ಬಂದಿದೆ ಅಂತ ಕೆಲ ರೈತರು ಕಬ್ಬು ಕಡಿದು ಗಾಣ ಆಡದಂತೆ ನಿಗಾ ಇಡಬೇಕು. ಸೀಜನ್ನು ಸುರು ಆದಾಗ ಸರತಿ ಮೇಲೆ ಕಬ್ಬು ಒದಗಿಸಲು ಪರ್ಮಿಟ್‌ ಕೊಡುತ್ತಿದ್ದರು. ಅದನ್ನು ಕಬ್ಬಿನ ಚೀಟಿ ಅಂತಿದ್ರು. ಗದ್ದೆಗೆ ಕೊಟ್ಟ ಚೀಟಿಯಷ್ಟೆ ಬಂಡಿ ಕಬ್ಬು ಕಡಿಯಬೇಕು. ಗದ್ದೆಯ ಎಳೆವರಿ ಕಬ್ಬು ಕಡಿದು ಈ ಚೀಟಿಯಲ್ಲಿ ಸಾಗಿಸುವ ಹಾಗಿಲ್ಲ. ಬೆಳಗ್ಗೆ ಇದರ ಉಸ್ತುವಾರಿ ಮಧ್ಯಾಹ್ನ ೨ ಗಂಟೆಯಿಂದ ೫ ರ ವರೆಗೆ ಕಚೇರಿಯಲ್ಲಿ ವರದಿ. ಮತ್ತು ಮರುದಿನದ ಚೀಟಿ ಪಡೆಯುವುದು ರೈತರಿಗೆ ವಿತರಿಸುವರು. ಅಪ್ಪಗೂ, ರೈತರಿಗೂ ಗಳಸ್ಯ ಕಂಠಸ್ಯ, ಮನೆಯಲ್ಲಿ ಚಾ ಮಾಡುವಾಗ ಬಂದವರಿಗೂ ಒಂದು ಕಪ್ಪು. ಕುಡಿಯುತ್ತಿದ್ದರೆ ಅದರಲ್ಲೆ ಅರ್ಧ ಕಪ್ಪು. ಅವರೂ ಎಂಜಲು ಎಂಬ ಎಗ್ಗಿಲ್ಲದೆ ಕುಡಿಯುವರು. ಅಕ್ಕಪಕ್ಕದವರು ಮಳೆ ಬಂದಾಗ ನಮಗೆ ಗವಾಕ್ಷಿ ಮುಚ್ಚಲೂ ಅವಕಾಶ ಕೊಡದೆ ತಾವೆ ಮುಚ್ಚುತಿದ್ದರು. ವರ್ಷಕೊಮ್ಮೆ ಮಾಳಿಗೆಗೆ ಕರಲು ಹಾಕುವಾಗ ನಾಲ್ಕಾರು ಜನ ಬಂದು ಹಾಕುವರು. ಚಾ ವಗ್ಗಣ್ಣಿ ಮಂಡಾಳು ಕೊಟ್ಟರೆ ಸಾಕು. ಅವರಿಗೆ ಖುಷಿ. ಸ್ವಾಮೇರ ಮನೆಯವರು ಹಿಟ್ಟಿನ ಗಿರಣಿಗೂ ಹೋಗಲೂ ಅವರು ಬಿಡುತ್ತಿರಲಿಲ್ಲ. ಯಾರ ಮನೆಯಲ್ಲಿ ದನ ಈದರೂ ಮೊದಲ ಗಿಣ್ಣದ ಹಾಲು ಬರುತಿತ್ತು. ಆ ಪಾತ್ರೆಯಲ್ಲಿ ಜೋಳ ಹಾಕಿ ಕಳುಹಿಸುವರು. ಹೀಗೆ ಎಲ್ಲರೊಡನೆ ಒಂದಾಗಿದ್ದೆವು.

ತಂಗಿಯ ಮನೆಗೆ ಮೊದಲಿನಿಂದಲೂ ಆಗಾಗ ಹೋಗುವರು. ಮಗನನ್ನು ಬಿಟ್ಟ ಮೇಲೆಸಂಜೆಯ ದಿನಾ ಸಂಜೆಗೆ ತಪ್ಪದೆ ಭೇಟಿ. ಅಲ್ಲಿ ಒಂದು ಕಪ್ಪು ಚಹಾ. ಆಗೀಗ  ಮಂಡಾಳು, ವಡೆ ಮೆಣಸಿನ ಕಾಯಿ ತರಸಿ ತಾನೂ ತಿಂದು ಎಲ್ಲರಿಗೂ ಹಂಚಿದಾಗಲೆ ತೃಪ್ತಿ. ಒಂದು ದಿನ ತಂಗಿಯನ್ನು ನೋಡದಿದ್ದರೆ ಮನಸ್ಸಿಗೆ ನೆಮ್ಮದಿ ಇಲ್ಲ. ಕಾರಣ ಇರುವವರು ಅವರಿಬ್ಬರೆ. ನಮ್ಮ ತಾತ ಹೆಣ್ಣು ಮಗು ಹುಟ್ಟಿದಾಗಲೆ ತೀರಿ ಹೋದರು. ಹಾಗಾಗಿ ಅನಾಥ ಮಕ್ಕಳು ಸೋದರ ಮಾವನ ಮನೆಯಲ್ಲಿ ಬೆಳೆದವು. ಬಡತನವಿದ್ದರೂ ಕಡು ಪ್ರೀತಿ. ಅದಕ್ಕೆಂದೆ ನಾನೂ ಅಲ್ಲಿಯೇ ಓದಲು ಇದ್ದದ್ದು. ತಂಗಿಗೆ ತೊಂದರೆಯಾಗಬಾರದೆಂದು ಅಲ್ಲಿಯೆ ಒಂದು ಅಂಗಡಿಯಲ್ಲಿ ಉದ್ದರಿ ಲೆಕ್ಕ ಇತ್ತು. ತಾನು ಬಂದಾಗ ನಗದು ಇದ್ದರೆ ಪರವಾ ಇಲ್ಲ. ಇಲ್ಲದಿದ್ದರೆ ಉದ್ದರಿ ಅಂಗಡಿಯಿಂದ ಸಾಮಾನು ತರಸಿ ತಿಂಡಿ ಮಾಡಿಸುತ್ತಿದ್ದರು. ಅದಕ್ಕೆ ಎಲ್ಲ ಅಳಿಯಂದಿರಿಗೂ ಮಾವ ಎಂದರೆ ಜೀವ.

ಅಪ್ಪ ಬಹು ಧಾರಾಳಿ. ಸಾಲಮಾಡಿ ತುಪ್ಪತಿನ್ನು ಎಂಬ ಮಾತಿಗೆ ಮನ್ನಣೆ ಕೊಟ್ಟವರು. ಹಾಸಿಗೆ ಇದ್ದಷ್ಟು ಕಾಲುಚಾಚು ಎಂಬ ಮಾತಿಗೆ ಅವರಲ್ಲಿ ಕಿಮ್ಮತ್ತಿಲ್ಲ. ಕೊಡುಗೈ ದಾನಿ.  ಬೇಕು ಅಂತ ಬಂದವರಿಗೆ ಇಲ್ಲ ಎಂದು ಹೇಳಿದ್ದೆ ವಿರಳ. ಕೈಯಲ್ಲಿದ್ದರೆ ಕೊಟ್ಟು ಬಿಡುವುದು. ಇಲ್ಲವಾದರೆ ಸಾಲ ಮಾಡಿಯಾದರೂ ಕೊಡುವರು. ಕಾರಣ ಕೇಳಿದರೆ ನನಗಾದರೆ ಸಾಲಹುಟ್ಟುವುದು. ಪಾಪ ಅವರಿಗೆ ಅದೂ ಇಲ್ಲ. ಅಷ್ಟು ಸಹಾಯ ಮಾಡದಿದ್ದರೆ ಹೇಗೆ? ಅವರೇನು ಓಡಿ ಹೋಗುವರೆ? ಕೊಟ್ಟೆಕೊಡುವರು ಎಂಬುದು ಅವರ ಸಮಜಾಯಿಷಿ. ಹಾಗಾಗಿ ಬಂಧು ಬಳಗದಲ್ಲಿ ನೆಂಟರಿಷ್ಟರಲ್ಲಿ ಬಹು ಜನಪ್ರಿಯ. ಅಲ್ಲದೆ ಅವರು ಸಾಲದ ಮರು ಪಾವತಿ ಮಾಡದಿದ್ದರೆ ಸಾಲ ವಸೂಲಿಗೆ ದಣಿಯ ಆಳು ಬರುತಿದ್ದುದು ನಮ್ಮ ಮನೆಗೆ. ಸದಾ ಬಡ್ಡಿ ವಸೂಲಿಗೆ ಬರಿತಿದ್ದವರನ್ನು ನೋಡಿ ನೋಡಿ. ನನಗೆ "ಹೊರ ಬೇಡ ಅಂಗಡಿ ಸಾಲ ಊರ ಹೊಣೆಯ" ಎಂಬ ಮಾತು ಮನದಲ್ಲಿ ನಾಟಿಬಿಟ್ಟಿತ್ತು. ಯಾವುದೆ ಸಮಾರಂಭ ಆದರೂ ಭೀಮಣ್ಣ ಇರಲೇಬೇಕು. ಮದುವೆ ಮುಂಜಿಗೆ ಹೊದಾಗಲಂತೂ ಹೆಂಗಸರ ಕಣ್ಮಣಿ. ಅಲ್ಲಿ ಮಕ್ಕಳು ಹಸಿವೆ ಎಂದು ಆಳುತ್ತಿದ್ದರೆ, ನೋಡು ಭೀಮಣ್ಣ, ಮಗು ಹಟಮಾಡುತ್ತಿದೆ ಎನ್ನುವರು. ಇವರು ಆ ಮಗುನ್ನು ಮಾತ್ರವಲ್ಲ ಅಲ್ಲಿರುವ ಹುಡುಗರನ್ನೆಲ್ಲ ಹೋಟಲಿಗೆ ಕರೆದೊಯ್ಯುವರು. ತಿಂಡಿ ತಿನಿಸಿ ಬರುವರು. ಜೊತೆಗೆ ಬಿಸ್ಕತ್ತೂ ಸಿಗುವುದು.ಆಗಿನ ತಿಂಡಿ ಮೆಣಸಿಕಾಯಿ, ಒಗ್ಗಣ್ಣಿ ಮಾತ್ರ.

ಅವರ ಇನ್ನೊಂದು ಗುಣ ವೆಂದರೆ ತಾವು ಕೊಂಡುತಂದ ಯಾವುದೇ ವಸ್ತುವಿನ ಬೆಲೆ ಎಷ್ಟು ಎಂದರೆ ಸದಾ ಕಡಿಮೆ ಮಾಡಿ ಹೇಳುವರು. ಕೇಳಿದವರು ಪರವಾ ಇಲ್ಲ ನೀನು  ಬಿಡಪ್ಪಾ ಭಾಳ ಸೋವಿಗೆ ಸಿಕ್ಕದೆ, ನಮಗೆ ಒಂದು ತಂದು ಕೊಡು ಎಂದರೆ. ಕಮಕ್‌ ಕಿಮಕ್‌ ಎನ್ನದೆ ತಂದು ಕೊಡುವರು. ಹೆಚ್ಚುವರಿ ದುಡ್ಡು ಕೈಯಿಂದ ಕೊಟ್ಟರೂ ಇದ್ದ ವಿಷಯ ಹೇಳುತ್ತಿರಲಿಲ್ಲ.

ವೇಷ ಭೂಷಣದಲ್ಲಿ ಅವರದೆ ಆದ ಛಾಪು. ಯಾವಾಗಲು ತುಂಬುತೋಳಿನ ಅಂಗಿ. ಉಡಲು ಮಲ್ಲು ಧೋತರ. ವಾಚು, ಉಂಗುರ, ಬಂಗಾರದ ಸರ ಯಾವು ಇಲ್ಲ. ಅವರಿಗೆ ಗಂಧೆಣ್ಣಿ ಮಾತ್ರ ಇರಲೆಬೇಕು. ಆಗ ಗಂಧದ ಎಣ್ಣಿಯನ್ನು ಚಿಕ್ಕ ಬಾಟಲಿಯಲ್ಲಿ ಮಾರುತಿದ್ದರು ಅದನ್ನು ಹತ್ತಿಯ ಚೂರಲ್ಲಿ ಅದ್ದಿ ಅಂಗಿಗೆ ಅಂಟಿಸಿಕೊಂಡು ಕಿವಿಯ ಮೇಲ್ಭಾಗದಲ್ಲಿ ಇಡುವುದು ವಾಡಿಕೆ. ಮಗ್ಗುಲಲ್ಲಿ ಬಂದವರಿಗೆ ಘಮ್ ಅಂಬ ವಾಸನೆ ಹೊಡಿಯಬೇಕು. ಎತ್ತರದ ಆಳು. ತಿಳಿ ಕೆಂಪು ಬಣ್ಣ. ಅರ್ಧ ಬಕ್ಕ ತಲೆ. ಕಾಲಿಗೆ ಚಪ್ಪಲಿಯೂ ಇಲ್ಲ. ಎಂಥ ಬಿರು ಬಿಸಿಲು ಇದ್ದರೂ ಬರಿ ತಲೆ, ಬರಿ ಗಾಲು. ಆದರೆ ಸದಾ ಸೈಕಲ್‌ ಮಾತ್ರ ಇರಲೇಬೇಕು. ಕಾರಣ ಅದು ಅವರ ಕೆಲಸದ ಅವಿಭಾಜ್ಯ ಅಂಗ. ಸಿಟ್ಟು, ಸಿಡಿಮಿಡಿ ಗೊತ್ತೆ ಇಲ್ಲ. ಇದ್ದಾಗ ಹಿಂದೆ ಮುಂದೆ ನೋಡದೆ ಕೊಡುವುದು. ಇಲ್ಲದಾಗ ಸಾಲ ಮಾಡವುದು. ಬಡ್ಡಿಯ ಬಗ್ಗೆ ಚೌಕಾಸಿ ಇಲ್ಲ. 

ಆಗಾಗ ನಮ್ಮ ಅಮ್ಮ ಅವರ ಜತೆ  ಮಾತಿಗೆ ಇಳಿಯುತ್ತಿದ್ದರು. ಕಚ್ಚೆ ಹಾಕಿದಾಗ ನವಾಬ ಸಾಬ, ಕಚ್ಚೆ ಬಿಚ್ಚಿದಾಗ ಫಕೀರ ಸಾಬರಂತೆ ಆಡುವುದು ಬೇಡ, ಕೈ ತುಸು ಹಿಡಿತವಿರಲಿ ಎಂಬುದು ಅವರ ವಾದ. ಆದರೆ ಅದನ್ನು ನಮ್ಮ ಅಪ್ಪ ಈ ಕಿವಿಯಿಂದ ಕೇಳಿ ಆ ಕಿವಿಯಲ್ಲಿ ಬಿಡುತ್ತಿದ್ದರು. ಆದರೆ ಅವರಿಬ್ಬರ ಅನ್ಯೋನ್ಯತೆ ಬಹಳ. ಏನೇ ಮಾಡಿದರು ಗಂಡನನ್ನು ಬಿಟ್ಟು ಕೊಡುತ್ತಿರಲಿಲ್ಲ. ಗಂಡನಿಗೆ ಹಲವು ಹೆಂಗಸರ ಗೆಳೆತನ ಇರುವುದು ಅವರು ಬಲ್ಲರು. ಆಳುವ ಗಂಡಸಿಗೆ ಅರವತ್ತು ಮಂದಿ ಎಂಬ ಮಾತಿನಲ್ಲಿ ನಂಬಿಕೆ. ಆ ಬಗ್ಗೆ ಮನೆಯಲ್ಲಿ ಕರಿಕಿರಿಯಾದ ನೆನೆಪೆ ಇಲ್ಲ. ಅಗತ್ಯ ಬಿದ್ದಾಗ ಕಿವಿಯಲ್ಲಿನ ಬೆಂಡಾಲೆಯನ್ನೂ   ತುಟಿಪಿಟಕ್‌ ಎನ್ನದೆ ಬಿಚ್ಚಿ ಕೊಡುವರು ಅದರ ಜಾಗದಲ್ಲಿ ತಿಂಗಳುಗಟ್ಟಲೆ ಕಿವಿಯಲ್ಲಿ ಒಣ ಬೇವಿನ ಕಡ್ಡಿ ಇರುತಿತ್ತು.

ಹಳ್ಳಿಯಿಂದ ನಾನು ಪಟ್ಟಣಕ್ಕೆ ಹೋದಾಗ, ಚಿತ್ತವಾಡಿಗೆಯ ಶಾಲೆಯಲ್ಲಿ ಐದನೆ ತರಗತಿಗೆ ಸೇರಿದೆ. ಅಲ್ಲಿನ ಓದು ಅಷ್ಟೇನು ಕಷ್ಟವೆನಿಸಲಿಲ್ಲ. ಸಾಧಾರಣವಾಗಿ ನನಗೆ ಅಲ್ಲಿ ಹತ್ತಕ್ಕೆ ಹತ್ತು ಅಂಕಗಳು ಬರುತಿದ್ದವು.  ಶಾಲೆಗಿಂತ ಮನೆಯಲ್ಲಿ ಮತ್ತು ಹೊರಗೆ ಮಾತ್ರ ನಾನು ಕಲಿತದ್ದು ಬಹಳ ನಮ್ಮ ಊರಿನಲ್ಲಿದ್ದಾಗ ಮನೆಯಲ್ಲಿ ನಾನೊಬ್ಬನೆ. ನಮ್ಮಕ್ಕ ಅಮ್ಮನ ತವರು ಮನೆಯಲ್ಲಿದ್ದಳು ಹಾಗಾಗಿ ನಾನು ಒಂಟಿ ಬಡಕ. ಇಲ್ಲಿ ಹಾಗಲ್ಲ. ಮನೆಯಲ್ಲಿ ಸದಾ ಜನ. ನಾನು ಗುಂಪಿನಲ್ಲಿ ಗೋವಿಂದ. ಅಲ್ಲದೆ ಊಟ ಸ್ನಾನ ಎಲ್ಲ ಸಾಮೂಹಿಕ. ರಜಾದಿನಗಳಲ್ಲಿನಮ್ಮ ಜಳಕದ ಮನೆ ಕಾಲುವೆ. ಗಂಟೆಗಟ್ಟಲೆ ನೀರಾಟ. ಅಲ್ಲಿಯೆ ನಾನು ಈಜು ಕಲಿತದ್ದು. ಹಳ್ಳಿಯಿಂದ ನಾನು ಪಟ್ಟಣಕ್ಕೆ ಹೋದಾಗ. ಚಿತ್ತವಾಡಿಗೆಯ ಶಾಲೆಯಲ್ಲಿ ಐದನೆ ತರಗತಿಗೆ ಸೇರಿದೆ. ಅಲ್ಲಿ ನಾವು ಬೆಳಗ್ಗೆ ಖುಷಿಯಿಂದ ಮಾಡುತಿದ್ದ ಕೆಲಸ ಒಂದಿತ್ತು. ಮನೆಯಲ್ಲಿ ಇಷ್ಟೊಂದು ಜನರಿಗೆ ನೀರು ಕಾಸಬೇಕು. ಜತೆಗೆ ಅತ್ತೆಯ ಬಾಣಂತನದಲ್ಲಿ ಮೂರುತಿಂಗಳು ದಿನವೂ ಅಗ್ಗಿಷ್ಟಿಕೆಗೆ ಕಾಯಿಸಬೇಕು. ಅದಕ್ಕೆ ಬಳಸುತಿದ್ದದು ಕುಳ್ಳು. ಸೆಗಣಿಯನ್ನು ಭತ್ತದ ಹೊಟ್ಟು ಬೆರಸಿ ಉಂಡೆ ಮಾಡಿಕೊಂಡು ಬಿಸಿಲು ಬೀಳುವ ಜಾಗದಲ್ಲಿ ಗೋಡೆಗೆ ತಟ್ಟುವರು. ಮುಖ್ಯವಾಗಿ ನೀರೊಲೆಗೆ ಅದೆ ಉರುವಲು. ಅದಕ್ಕೆ ಸೆಗಣಿ ಬೇಕು. ಮನೆಯಲ್ಲಿ ದನ ಇದ್ದವರಿಗೆ ಸಮಸ್ಯೆ ಇಲ್ಲ. ದಿನವೂ ಅವರಿಗೆ ಸೆಗಣಿ ಸಿಗುವುದು. ಇಲ್ಲದವರು ಸೆಗಣಿ ಸಂಗ್ರಹಿಸಬೇಕು. ನಮ್ಮ ಮನೆ ಮುಂದೆಯೆ ರಸ್ತೆ. ಮತ್ತು ದೊಡ್ಡ ಆಲದ ಮರ. ರಸ್ತೆಯಲ್ಲಿ ಹೋಗುವ ಕಬ್ಬಿನ ಬಂಡಿಯನ್ನು ಎಳೆಯುವ ಎತ್ತುಗಳ ಸೆಗಣಿ ಸಂಗ್ರಹಿಸಲು ನಾ ಮುಂದು ತಾಮುಂದು ಎಂದು ಓಡುತಿದ್ದೆವು. ಅಲ್ಲದೆ ಬೆಳಗು ಮುಂಜಾನೆ ಮನೆ ಮುಂದಿನ ಬಯಲಲ್ಲಿ ಮಲಗಿದ್ದ  ಬೀಡಾಡಿ ದನಗಳು ಹಾಕುವ ಸೆಗಣಿಯನ್ನೂ ಸಂಗ್ರಹಿಸುವೆವು. ಅದಕ್ಕೆ ನಾವು ಕಾದು ನಿಂತಿರುವೆವು. ದನ ಬಾಲ ಎತ್ತಿದರೆ ಸಾಕು ಅದರ ಹಿಂದೆ ಹೋಗಿ ಹಳೆಯ ಮೊರ ಹಿಡಿದು ಸೆಗಣಿ ಕೆಳಗೆ ಬೀಳುವ ಮೊದಲೆ ಸಂಗ್ರಹಿಸುವೆವು. ಆ ಕೆಲಸದಲ್ಲಿ ಅಕ್ಕಪಕ್ಕದ ಹಲವು ಮನೆಯ ಮಕ್ಕಳು ಕೂಡಾ ಜತೆಯಾಗುತಿದ್ದರು.

ಅದರಿಂದ ತಟ್ಟಿದ ಕುಳ್ಳು ಬಾಣಂತಿಗೆ ಮಗುವಿಗೆ ಎರೆಯಲು ಮತ್ತು ಎರಡೂ ಹೊತ್ತು ಬೆಂಕಿ ಕಾಯಿಸಿಕೊಳ್ಳುವ ಅಗ್ಗಿಷ್ಟಿಕೆಗೆ ಆಗುತಿತ್ತು. ಯಾರ ಮನೆಯ ಮುಂದಾದಾರೂ ಬೆಳಗ್ಗೆ ಮತ್ತು ಸಂಜೆ ಅಗ್ಗಿಷ್ಟಿಕೆ ಅಂಗಳದಲ್ಲಿ ಹೊಗೆಯಾಡುತಿದ್ದರೆ ಅಲ್ಲಿ ಹಸಿ ಬಾಣಂತಿ ಇರುವಳು ಎಂದು ಲೆಕ್ಕ. ಅಗ್ಗಿಷ್ಟಿಕೆಯನ್ನು ಹೊತ್ತಿಸಲು ಅರ್ಧ ಗಂಟೆಯಾದರೂ ಹೊರಗೆ ಗಾಳಿಗೆ ಇಡಬೇಕಾಗುವುದು. ಮೊದಲಲ್ಲಿ ಹೊಗೆ ಬಂದರೂ ನಂತರ ನಿಗಿ ನಿಗಿ ಕೆಂಡ. ಬಾಣಂತಿ ಎರೆದುಕೊಂಡ ಕೂಡಲೆ ಮೇಲೆ ಕಾಯಿಸಿಕೊಳ್ಳುವುದು ನಂತರ ಹೊರಸಿನ ಕೆಳಗೆ ಇಟ್ಟರೆ ಬೆಚ್ಚಗೆ ಇರುತಿತ್ತು. ಬಾಣಂತಿಗೆ ಬಿಸಿ ನೀರು, ಕೆಂಡ ಹೆಚ್ಚಾದದ್ದಷ್ಟೂ ಒಳ್ಳೆಯದು ಎಂಬ ಭಾವನೆ ಇತ್ತು.

ನಮ್ಮ ಅತ್ತೆಯ ಮಕ್ಕಳಲ್ಲಿ ಎರಡನೆಯವನು ಆಟಗುಳಿ. ಚಿಣ್ಣಿ ದಾಂಡು, ಬುಗುರಿ, ಲಗೋರಿ, ವಟ್ಟೆಪ್ಪ ಆಟದಲ್ಲಿ ಪರಿಣಿತ. ಮರಕೋತಿ ಆಟದಲ್ಲಿ ಮಂಗನೆ ನಾಚಬೇಕು ಅವನು ಮರ ಏರುವುದನ್ನು. ಕೊಂಬೆಯಿಂದ ಕೊಂಬೆಗೆ ಜಿಗಿಯುವ ಪರಿಕಂಡು. ಅವನ ಚೀಲದಲ್ಲಿ ಪುಸ್ತಕಗಳಿಗಿಂತ ಅನೇಕ ರೀತಿಯ ಗೋಲಿಗಳೆ ಜಾಸ್ತಿ ಇರುತಿದ್ದವು. ಹಿಟ್ಟಿನ ಗೋಲಿ, ಗಾಜಿನ ಗೋಲಿ, ಕಬ್ಬಿಣದ ಗೋಲಿ, ಅದನ್ನು ಚೆರ್ರ ಎನ್ನುತಿದ್ದೆವು. ಕಲ್ಲಿನ ಗೋಲಿಯನ್ನು ಗೇಟಿ ಎನ್ನುವರು. ಅದರಿಂದ ಹೊಡೆದರೆ ಸಾಧಾರಣ ಗೋಲಿಗಳು ಪುಡಿ ಪುಡಿ. ನಾನೂ ಎಲ್ಲ ಆಟದಲ್ಲಿ ಅವನ ಅನುಯಾಯಿ. ಆದರೆ ಗೋಲಿಯಾಟ ಮಾತ್ರ ನನಗೆ ಒಲಿಯಲೆ ಇಲ್ಲ. ಬೆರಳತುದಿಗೆ ಗೋಲಿ ಇಟ್ಟು ಇನ್ನೊಂದು ಕೈನಿಂದ ಮೀಟಿ ಹೊಡೆಯವ ಕಲೆ ನನಗೆ ಸಿದ್ದಿಸಲೇಇಲ್ಲ. ಮಾರು ದೂರವಿರುವ ಗೋಲಿಯನ್ನು ಚಟ್ಟನೆ ಹೊಡೆವ ಅವನ ಪರಿಯನ್ನು ನೋಡಿ ಬೆಕ್ಕಸ ಬೆರಗಾಗುತಿದ್ದೆ. ಇನ್ನು ಬುಗುರಿಯಂತು ಕಲಾತ್ಮಕ ಆಟ. ಅಂಗಡಿಯಲ್ಲಿ ಸಿಗುವ ಬಣ್ಣದ ಬುಗರಿಯನ್ನು ತಂದು ಅದಕ್ಕೆ ತಲೆ ಕತ್ತರಿಸಿದ ಮೊಳೆಯನ್ನು ಹೊಡೆದು ಚಾಟಿಯನ್ನ ಹೊಸೆದು ಅಡಿಸುವುದೆಂದರೆ ಸಣ್ಣ ಮಾತೆ. ಅದರಲ್ಲೂ ಚಾಟಿಯನ್ನು ಸುತ್ತಿ ಅಂತರಿಕ್ಷದಲ್ಲೆ ಅದನ್ನು ರೊಯ್ಯನೆ ಬೀಸಿ ಅಂಗೈ ಮೇಲೆ ಆಡಿಸುವ ನಿಪುಣತೆ ಬಹಳ ಹುಡುಗರಿಗೆ ಇಲ್ಲ. ಬುಗುರಿಯಾಟದಲ್ಲಿ ಎದುರಾಳಿಯ ಬುಗರಿಗೆ ಗಿಚ್ಚ ಕೊಡುವುದೆಂದರೆ ಹೆಮ್ಮೆಯ ವಿಷಯ. ಅದಕ್ಕಾಗಿ ಬುಗುರಿ ತಿರುಗುವ ಕಬ್ಬಿಣದ ಮೊಳೆಯನ್ನು ಬಂಡೆಗೆ ಮಸೆದು ಮಸೆದು ಚೂಪಾಗಿಸಬೇಕಿತ್ತು. ಬುಗುರಿಯಲ್ಲಿ ಪರಿಣಿತರು ಒಂದೆ ಏಟಿಗೆ ತಮ್ಮ ಎದುರಾಳಿಯ ಬುಗರಿಯನ್ನು ಎರಡು ಹೋಳು ಮಾಡುವರು. ಆಗ ನೋಡಬೇಕು ಸೋತವರ ಮುಖ.

ನನಗೆ ಈ ಎಲ್ಲ ಆಟಗಳ ದೀಕ್ಷೆ ಸಿಕ್ಕಿದ್ದು ಅಲ್ಲಿಯೆ. ಚಿಣ್ಣಿ ದಾಂಡು ಇನ್ನೊಂದು ಜನಪ್ರಿಯ ಆಟ. ಒಂದ ಮೊಳದುದ್ದ ಕೋಲು ಅದನ್ನೆ ದಾಂಡು ಎನ್ನವರು. ಗೇಣದ್ದದ  ಚಿಣ್ಣಿ. ದಾಂಡಿನಿಂದ ಚಿಣ್ಣಿಯನ್ನು ಮೊದಲು ಚಿಮ್ಮಬೇಕು. ಅದನ್ನು ಬುತ್ತಿ ಹಿಡಿದರೆ ಆಟಗಾರನು ಸೋತಂತೆ. ಇಲ್ಲದಿದ್ದರೆ ಅಲ್ಲಿಂದ ಅದನ್ನು ಹೊಡೆಯಬೇಕು. ಅದು ಎಷ್ಡು ದೂರ ಹೋಗುವುದೋ ಅಲ್ಲಿಂದ ಎದುರಾಳಿ ಕುಂಟಬೇಕು. ಆ ಅಟವೆ ಇಂದಿನ ಕ್ರಿಕೆಟ್ಟಿನ ಅಪ್ಪ ಎಂದರೂ ಅಡ್ಡಿ ಇಲ್ಲ. ನನಗೆ ಅವುಗಳ ಪರಿಚಯವಾಯಿತೆ ವಿನಃ ಪರಿಣಿತಿ ಬರಲಿಲ್ಲ ಆದರೆ ಒಂದು ರೀತಿಯಲ್ಲಿ ಅದು ಒಳ್ಳೆಯದೆ ಆಯಿತು. ಓದಿನಲ್ಲಿ ನಾನು ಎಷ್ಟೆ ಮುಂದಿದ್ದರೂ ಆಟಗಳಲ್ಲಿ ಅವರೆ ಗೆಲ್ಲುವರು. ನನಗೆ ಸದಾ ಸೋಲು. ಆಗ ಅವರಿಗೆ  ನೆಮ್ಮದಿ. ಶಾಲೆಯಲ್ಲಿ ಹೆಚ್ಚು ಅಂಕ ಪಡೆವ ನನ್ನನ್ನು ಆಟದಲ್ಲಿ ಸೋಲಿಸಿದೆ ಎಂದು  ಅವರು ಹಿಗ್ಗಿ ಹೀರೆ ಕಾಯಿ ಆಗುತಿದ್ದರು. ಸೋಲಿನಲ್ಲೂ ಸುಖವಿದೆ ಎಂದು ಆಗ ನನಗೆ ಗೊತ್ತಾಯಿತು. ಎಲ್ಲದರಲ್ಲೂ ಗೆಲ್ಲಬೇಕೆಂಬ ಹುಚ್ಚು ಹಂಬಲಕ್ಕೆ ಆಗಲೆ ಕಡಿವಾಣ ಬಿದ್ದಿತು.

ಆರರಿಂದ ಅರವತ್ತು-೭:ನಮ್ಮ ಶಾಲೆಯು ಎಮ್ಮದು

ಶಾಲೆ ಎಂದರೆ ನಮಗೆ ಮನೆ ಇದ್ದಂತೆ. ಅದರ ಶುಚಿತ್ವ ನಮ್ಮ ಕೆಲಸ.  ಜವಾನರು ಇರಲಿಲ್ಲ. ಕೂಲಿ ಕೊಟ್ಟು ಕೆಲಸ ಮಾಡಿಸಲು ಹಣ ಇರಲಿಲ್ಲ.  ತರಗತಿವಾರು ತಂಡ ರಚಿಸುತಿದ್ದರು, ಅದಕ್ಕಾಗಿ ಸರತಿಯ ಮೇಲೆ ಹೊಣೆ ವಹಿಸಬೇಕಿತ್ತು. ದಿನವೂ ಕಸವನ್ನೂ ಖುಷಿಯಿಂದ ಗುಡಿಸುತಿದ್ದೆವು. ವಾರಕೊಮ್ಮೆ ಕಡಪ ಬಂಡೆಗಳನ್ನು ಒರೆಸಬೇಕಿತ್ತು. ಆ ಶಾಲೆಯಲ್ಲಿಯೇ ನಮಗೆ ಕಪ್ಪುಹಲಗೆಯ ಹೆಚ್ಚಿನ ಬಳಕೆಯ ಬಗ್ಗೆ ಅರಿವಾದದ್ದು. ಅಲ್ಲಿನ ಲೆಕ್ಕದ ಮೇಷ್ಟರು ತಾವು ಲೆಕ್ಕ ಮಾಡಿ ತೋರಿಸುವುದಲ್ಲದೆ ವಿದ್ಯಾರ್ಥಿಗಳನ್ನು ಬೋಡಿರ್ನ ಮುಂದೆ ಬಂದು ಮಾಡಲು ಹೇಳುತ್ತಿದ್ದರು. ಅದರಿಂದ ಕಪ್ಪು ಹಲಗೆಯ ಬಳಕೆ ಬಹುವಾಗಿರುತ್ತಿತ್ತು. ಆದರೆ ಅದರ ಹೆಚ್ಚಾದ ಬಳಕೆಯಿಂದ ಬಣ್ಣ ಕಳೆದುಕೊಂಡು ಬರೆದಾಗ ಏನೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಆಗ ಶಾಲೆಗೆ ಬರುವ ಅನುದಾನವೂ ಕಡಿಮೆ. ಬರುವ ಹಣ ಸೀಮೆಸುಣ್ಣಕ್ಕೆ ಸಾಕುಗುತ್ತಿರಲಿಲ್ಲ. ಅಂದಮೇಲೆ ಅದಕ್ಕೆ ಕರಿ ಪೇಂಟು ಹಚ್ಚುವರು ಯಾರು. ಅಲ್ಲದೆ ಪೇಂಟು ಅಷ್ಟು ಚಾಲತಿಯಲ್ಲೂ ಇರಲಿಲ್ಲ. ಕಪ್ಪುಹಲಗೆಯನ್ನು ನಿರ್ವಹಿಸುವ ಹೊಣೆ ನಮ್ಮದೆ ಆಗಿರುತಿತ್ತು. ಅದಕ್ಕೆ ನಮ್ಮದೆ ಆದ ಪರಿಹಾರವನ್ನು ನಾವು ಕಂಡುಕೊಂಡಿದ್ದೆವು. ಇದ್ದಲನ್ನು ಸಣ್ಣಗೆ ಪುಡಿ ಮಾಡಿ ಸೋಸಿ, ನಂತರ ತೊಂಡೆ ತೊಪ್ಪಲನ್ನು ತಂದು ಅದರ ರಸ ತೆಗದು ಅದಕ್ಕೆ ಇದ್ದಲ ಪುಡಿಯನ್ನು ಸೇರಿಸಿ ಮಿಶ್ರಣ ತಯಾರಿಸುತ್ತಿದ್ದೆವು. ಹರಕು ಬಟ್ಟೆಯೆ ನಮ್ಮ ಬ್ರಷ್‌. ಅದನ್ನು  ಮಿಶ್ರಣದಲ್ಲಿ ಅದ್ದಿ ಬೋರ್ಡಿಗೆ ಹಚ್ಚುತಿದ್ದೆವು. ಸಾಧಾರಣವಾಗಿ ಬೋರ್ಡಿಗೆ ಬಣ್ಣ ಬಳಿಯುವ ಈ ಕೆಲಸವನ್ನು ಶನಿವಾರದಂದು ಶಾಲೆ ಬಿಡುವ ಮುನ್ನವೆ ಮಾಡುವುದು. ಮಾರನೆ ದಿನ ಭಾನುವಾರ ರಜೆ. ಅದರ ಮೇಲೆ ಏನೂ ಬರೆಯಬೇಕಾಗಿರಲಿಲ್ಲ. ಸೋಮವಾರ ಶಾಲೆ ಶುರುವಾಗುವ ಹೊತ್ತಿಗೆ ಅದು ಕಪ್ಪಗೆ ಮಿರಿ ಮಿರಿ ಮಿಂಚುತಿತ್ತು. ಅದರ ಮೇಲೆ ಬರೆದ ಅಕ್ಷರಗಳು ಸುಸ್ಪಷ್ಟವಾಗಿರುತಿದ್ದವು. ಈ ಹೊಳಪು ಕನಿಷ್ಠ ಮೂರು ತಿಂಗಳವರೆಗೆ ಇರುತಿತ್ತು. ನಂತರ ಮತ್ತೆ ಹೊಸದಾಗಿ ತೊಂಡಿ ತೊಪ್ಪಲ ಹರಿಯ ಹೊರಡುತಿದ್ದೆವು. ಇದು ತರಗತಿಯ  ಮಾನಿಟರ್‌ನ ಕೆಲಸ. ಅವನ ಜತೆಯಲ್ಲಿ ನಾಲ್ಕಾರು ಜನ ಈ ಕೆಲಸದ ತಂಡದಲ್ಲಿರುವರು. ಕಪ್ಪು ಹಲಗೆಯ ಮುಂದೆ ಬಹಳ ಸಲ ಹೋಗುವ  ನಾನು ಈ ಕೆಲಸವನ್ನು ಉತ್ಸಾಹದಿಂದ ಮಾಡುತಿದ್ದೆ. ಈಗ ಅತ್ಯಾಧುನಿಕ ಬೋರ್ಡುಗಳು ಬಂದಿವೆ. ಮೈಕೈಗೆ ಸುಣ್ಣದ ಧೂಳು ಆಗುವುದಿಲ್ಲ. ಡಸ್ಟರ್‌ ಗೊಡವೆ ಇಲ್ಲ. ಆದರೆ ಶಾಲೆ ನಮ್ಮದು, ಬೋರ್ಡು ನಮ್ಮ ಶ್ರಮದಿಂದ ಬರೆಯುವಂತಾಗಿದೆ ಎಂಬ ಸಾರ್ಥಕ ಭಾವನೆ ಈಗಿನ ಮಕ್ಕಳಲ್ಲಿ ಕಾಣುವುದು ಕಷ್ಟ.

ಅಲ್ಲಿದ್ದಾಗ ನಾನು ಕಲಿತ ಇನ್ನೊಂದು ವಿದ್ಯೆಯೆಂದರೆ ಇಂಕು ತಯಾರಿಕೆ. ಅದೆ ತಾನೆ ಫೌಂಟೇನ್‌ ಪೆನ್ನು ಯುಗಕ್ಕೆ ಕಾಲಟ್ಟಿದ್ದವು. ಅದುವರೆಗೂ ಶಾಲೆಯಲ್ಲಿ ಮಸಿ ಕುಡಿಕೆ ಲೆಕ್ಕಣಿಕೆ ಬಳಕೆಯಲ್ಲಿತ್ತಂತೆ. ನಮ್ಮ ಶಾಲೆಯಲ್ಲಿ ಆರು, ಏಳನೆ ತರಗತಿಗೆ ಮಾತ್ರ ಪೀಠೋಪಕರಣ. ಉಳಿದವಕ್ಕೆ ಹಲಗೆಗಳು. ಆಗ ಉದ್ದನೆಯ ಬೆಂಚುಗಳು. ಮಡಚುವ ಬೆಂಚುಗಳು ಬಳಕೆಯಲ್ಲಿರಲಿಲ್ಲ. ಇಬ್ಬರು ಕೂಡಬಹುದಾದ ಡೆಸ್ಕಗಳಿದ್ದವು. ಅಲ್ಲಿ ನಮ್ಮ ಪುಸ್ತಕದ ಚೀಲಗಳನ್ನು ಇಟ್ಟುಕೊಳ್ಳಲು ಅವಕಾಶವೂ ಇತ್ತು. ಆದರೆ ಇಬ್ಬರು ಕೂಡುವಲ್ಲಿ ಮೂವರೂ ಕೂಡುತಿದ್ದೆವು. ಬರೆಯಲು ಅನುಕೂಲವಾಗಲೆಂದು ಮುಂದಿರುವ ಜಾರು ಮೇಜಿನ ಎರಡು ಕೊನೆಯಲ್ಲಿ ಮಸಿ ಕುಡಿಕೆ ಬೀಳದಂತೆ ಇಡಲು ದಂಡನೆಯ ಗುಳಿಗಳಿದ್ದವು. ಅಲ್ಲದೆ ಜಾರಿ ಬೀಳದಂತೆ  ಲೇಖನಿಯನ್ನಿಡಲು ಜಾಗವನ್ನು ಮಾಡಿರುತಿದ್ದರು. ಹುಡುಗ ಎಂಥ ವಿದ್ಯಾರ್ಥಿ ಎಂದು ಅವನ ಕೈ ನೋಡಿಯೆ ಹೇಳಬಹುದಿತ್ತು. ಅದೇನು ಹಸ್ತ ಸಾಮುದ್ರಿಕೆಯಲ್ಲ. ಹೆಚ್ಚು ಬರೆವ ಹುಡುಗರ ಕೈಗೆ ಮಸಿ ಅಂಟಿರುತಿತ್ತು. ಕಾರಣ ಫೌಂಟೆನ್ ಪೆನ್‌. ಆದರೆ ಅವು ಹೆಸರಿಗೆ ತಕ್ಕಂತೆ ಮಸಿಯ ಕಾರಂಜಿಗಳೆ. ಇಂಕು ಸೋರದ ಪೆನ್ನು ಅಪರೂಪ. ಎಂಟಾಣೆಗೆ, ರೂಪಾಯಿಗೆ ಪೆನ್ನು ಬರುತಿತ್ತು. ಫೈಲಟ್‌, ಪ್ಲೇಟೊ, ಹಿರೋ... ಅದು ಇದು ಎಂದು ಹತ್ತು ಹಲವು ಕಂಪನಿಯ ಪೆನ್ನು ಇದ್ದವು. ಪಾರ್ಕರ್‌ ಪೆನ್ನು ಮಾತ್ರ ವೈಭೋಗದ ವಸ್ತು. ಇನ್ನೆಲ್ಲವೂ ನಮ್ಮ ಕೈಗೆ ಬಂದರೆ ಅಳಲು ಶುರು ಮಾಡುತ್ತಿದ್ದವು. ಒಂದೊಂದು ಬಾರಿ ಅವು ಹುಡುಗಿಯರಿಗೂ ಮೀಸೆ ಮೂಡಿಸಿ ನೋಡುವವರ ಮೊಗದಲ್ಲಿ ನಗೆ ಅರಳಿಸುತಿದ್ದವು.

ಹಲವು ಸಾರಿ ಪುಸ್ತಕಕ್ಕಿಂತ ಇಂಕಿಗೆ ಹೆಚ್ಚು ಹಣ ಖರ್ಚು ಮಾಡಬೇಕಾಗುತಿತ್ತು. ಕಾರಣ ಪೆನ್ನಿಗೆ ಹಾಕುವಾಗ ಇಂಕು ಚೆಲ್ಲುವುದು  ಸಾಮಾನ್ಯ. ಹಾಕಿದ ಮೇಲೆ ಇಂಕು ಬುಡ್ಡಿಯೇ ಉರುಳಿ ಬೀಳುವುಗು ಸಾಮಾನ್ಯವಾಗಿತ್ತು. ಅನೇಕ ರೀತಿಯ ಮಸಿ ಸಿಗುತ್ತಿದ್ದವು. ಕಪ್ಪು, ನೀಲಿ, ಕೆಂಪು ಹಸಿರು ಇತ್ಯಾದಿ ಬಣ್ಣಗಳಲ್ಲಿ ದೊರೆಯುತಿದ್ದವು. ನಾವು ಸಾಧಾರಣ ನೀಲಿ ಮತ್ತು ಕೆಂಪು ಇಂಕನ್ನು ಮಾತ್ರ ಬಳಸುತಿದ್ದೆವು.  ಕೆಲವು ಸಲ ಸಿದ್ಧವಾದ ಇಂಕು ದುಬಾರಿಯೆಂದು ಮಸಿ ಗುಳಿಗೆ ತಂದು ಬಳಸುತಿದ್ದೆವು. ಆಗ ಇನ್ನೊಂದು ಸಮಸ್ಯೆ ಎದುರಾಗುವುದು. ಒಂದೋ ನೀರು ಹೆಚ್ಚಾಗಿ ಬರೆದರೂ ಕಾಣದಷ್ಟು ತಿಳಿ. ಇಲ್ಲವೆ ನಿಬ್ಬಿನಲ್ಲಿ ಇಳಿಯದಷ್ಟು ಗಟ್ಟಿ. ಆದರೂ ಹೆದರದೆ ಪ್ರಯೋಗ ಮಾಡುತಿದ್ದೆವು. ಒಂದೊಂದು ಸಲ ನಮ್ಮ ಟೋಳಿ ನಮ್ಮ ಹಳ್ಳಿಗೆ ಹೋದಾಗ ಹೊಸ ಯೋಜನೆ ಹೂಡಿದೆವು. ನಮ್ಮ ಹಳ್ಳಿಯಲ್ಲಿ ಈಜಾಡಲು ಬಾವಿಗೆ ಹೋದಾಗ ಗೊಂಡೆ ಹೂವಿನಗಿಡ ಬೇಲಿಯಲ್ಲಿ ಬೆಳೆಯುವುದು. ಅದರ ಹೂವು ರುದ್ರಾಕ್ಷಿಯಂತೆ ಇರುತ್ತವೆ. ಅದರ ಹಣ್ಣು ಕವಳಿ ಹಣ್ಣಿನ ತರಹ  ಕಪ್ಪಗೆ ಚಿಕ್ಕವು. ಅವು ಗೊಂಚಲು ಗೊಂಚಲಾಗಿ ಹರಡಿರುವುದು  ಕಂಡಿತು. ಗಿಡದ ಹಣ್ಣಿನ ರಸದಿಂದ ಮಸಿ ಮಾಡಬಹುದೆಂದು ಯಾರೋ ಹೇಳಿದರು. ಸರಿ ಪ್ರಯೋಗಕ್ಕೆ ತಯಾರಾದೆವು. ನಾವು ಇಂಕು ಉಪಯೋಗಿಸಿ ಬರೆಯುವವರು ನಾಲಕ್ಕು ಜನ. ನಾವೆ ತಯಾರು ಮಾಡಿದರೆ ಬಹಳ ದುಡ್ಡು ಉಳಿಯುವುದು ಎಂಬ ಯೋಚನೆ ಬಂತು. ಸರಿ ನಮ್ಮ ಬೇಟೆ ಶುರುವಾಯಿತು. ಖುಷಿಯಿಂದ ರಾಶಿ ಹಣ್ಣು ಕಿತ್ತು ತಂದೆವು. ಅದರ ರಸ ತೆಗೆದೆವು. ಮುಕ್ಕಾಲು ಪಾಲುಬೀಜ ಮತ್ತು ಸಿಪ್ಪೆಯೆ ಬಂದವು. ಅನಂತರ ಅದನ್ನು ಬಿಳಿ ಬಟ್ಟೆಯಲ್ಲಿ ಸೋಸಿದೆವು. ಅದು ನೀಲಿಯಾಗೇನೋ ಇತ್ತು. ಆದರೆ ತುಂಬ ತಿಳಿಯಾಯಿತು. ಅದಕ್ಕೆ ಯಥಾರೀತಿ ನುಣುಪಾದ ಇದ್ದಲು ಪುಡಿ ಸೇರಿಸಿದೆವು. ನಮ್ಮ ಮನೆಯಲ್ಲಿ ಮಾಡಿದ ಇಂಕು ಸಿದ್ಧವಾಯಿತು. ಒಂದು ಚಿಮಣಿ ಎಣ್ಣೆ ಬಾಟಲಿಯಲ್ಲಿ ಅದನ್ನು ತುಂಬಿದೆವು. ಆದರೆ ಅದಕ್ಕೆ ಮುಚ್ಚಳ ಇಲ್ಲ. ಸರಿ ಕಾಗದವನ್ನೆ ಸುರುಳಿ ಸುತ್ತಿ ಬಿರಟೆ ಮಾಡಿದೆವು. ಹೇಗೂ ನಾವು ನಾಲಕ್ಕು ಜನರಿಗೆ ಒಂದು ವರ್ಷವಾದರೂ ಬರುವುದು ಎಂದುಕೊಂಡೆವು. ಒಂದು ವರ್ಷ ಬಳಸಿದರೂ ಎಷ್ಟೆ ಬರೆದರೂ ಮುಗಿಯದು ಎಂದು ಸಂಭ್ರಮಿಸಿದೆವು. ಅದನ್ನು ಬಳಸಿ ನಾವು ಪುಸ್ತಕದಲ್ಲಿ ಬರೆಯಬೇಕಿತ್ತು. ನಮ್ಮ ಖುಷಿ ವಾರದಲ್ಲೆ ಹುಸಿಯಾಯಿತು. ನಮ್ಮ ಪುಸ್ತಕಗಳೆಲ್ಲ ಮಸಿಮಯವಾದವು. ನಾವು ಅದನ್ನು ಪುಸ್ತಕಗಳ ಜತೆ ಗೂಡಿನಲ್ಲಿ ಇಟ್ಟಿದ್ದೆವು. ನಾವು ನಾಲಕು ಜನರೂ ಆಗಾಗ ಅದನ್ನು ಪೆನ್ನಿಗೆ ತುಂಬಿಕೊಳ್ಳುತ್ತಿದ್ದವು. ಅದರ ಕಾಗದದ ಬಿರಟೆಯು ನೆನೆದು ಸಡಿಲವಾಗಿ ಎಲ್ಲ ಮಸಿ ಚೆಲ್ಲಿ ಹೋಗಿತ್ತು. ಮಸಿಯ ಹಣ ಉಳಿಸಲು ಮಾಡಿದ ಸಾಹಸ ಪುಸ್ತಕಕ್ಕೆ ಹೆಚ್ಚಿನ ಹಣ ನೀಡುವಂತೆ ಮಾಡಿತು.

ಏಳನೆ ತರಗತಿಯಲ್ಲಿನ ಗೆಳೆಯನೊಬ್ಬನನ್ನು ನೋಡಿದ ಕೂಡಲೆ ಅಂದಿನ ಘಟನೆ ನೆನಪು ಮರುಕಳಿಸುವುದು. ನಮಗೆ ಸತ್ಯ ಎನ್ನುವ ಸಹಪಾಠಿ ಇದ್ದ. ಅವನು ಸೆಟ್ಟರ ಹುಡುಗ. ದಪ್ಪಗೆ ಕಪ್ಪಗೆ ಇದ್ದ. ಬಹು ಮುಗ್ಧ.  ಜತೆಗೆ ಪೆದ್ದನಂತಿದ್ದ. ಒಂದು ಸಲ ಶಾಲೆಯಲ್ಲಿ ಆಟ ಆಡುತ್ತಿರುವಾಗ ಅವನ ಹಣೆಯಲ್ಲಿ ನಾಮ ಹಾಕಿದಂಥೆ ನರ ಉಬ್ಬಿರುವುದು ಕಂಡಿತು. ಎಲ್ಲರೂ ಅದೇನು ಎಂದು ಅವನನ್ನು ಕೇಳುವವರೆ. ಮಾರನೆ ದಿನವೂ ಅದು ಇತ್ತು. ನಮ್ಮಲ್ಲಿ ಒಬ್ಬನು ಅದು ಅದೃಷ್ಟ ರೇಖೆಯನ್ನು ಅಳಿಸಿ ಬಿಡುವ ನರ. ಅದನ್ನು ಹಾಗೆಯೇ ಬಿಟ್ಟರೆ ದುರದೃಷ್ಟ ಉಂಟಾಗುವುದು ಎಂದು ಅಪರ ಪಂಡಿತನಂತೆ ಹೇಳಿದ. ಸತ್ಯನಿಗೆ ಪುಕ್ಕಲು ಶುರುವಾಯಿತು. ಅವನು ಓದಿನಲ್ಲಿ ಅಷ್ಟು ಮುಂದಿಲ್ಲ. ಬಹಳ ಕಷ್ಟಪಡುತಿದ್ದ. ಆದರೆ ನೆನಪು ಉಳಿಯುತ್ತಿರಲಿಲ್ಲ. ನಮ್ಮ ಗೆಳೆಯನೊಬ್ಬ ಅವನ ಹಣೆಯಲ್ಲಿನ ಈ ನರವೆ ದೇವರು ಬರೆದ ವಿದ್ಯೆಯನ್ನು ಮಸುಕಾಗುವಂತೆ ಮಾಡಿದೆ ಎಂದು ವಿವರಣೆ ನೀಡಿದ. ಏನಾದರೂ ಮಾಡಿ ಸರಿ ಮಾಡಿ ಎಂದು ಸತ್ಯ ದುಂಬಾಲು ಬಿದ್ದ. ಅಂದು ಮಧ್ಯಾಹ್ನ ಅವನ ಹಣೆಬರಹ ತಿದ್ದುವ ಕೆಲಸ ಶುರುವಾಯಿತು. ಇಬ್ಬರು ಬಲವಾದ ಹುಡುಗರು ಮರಳು ಮತ್ತು ಸೀಮೆಸುಣ್ಣದ ಪುಡಿ ಸೇರಿಸಿ ಅವನ ಹಣೆಯ ಮೇಲಿದ್ದ ಆ ನರವನ್ನು ತೀಡತೊಡಗಿದರು. ಅದು ಬಡ ಪೆಟ್ಟಿಗೆ ಹೋಗಲಿಲ್ಲ. ಇವರು ಬಿಡಲಿಲ್ಲ. ಇನ್ನೂ ಬಲವಾಗಿ ಉಜ್ಜಿದರು. ಹಣೆಯ ಆ ಭಾಗ ಕೆತ್ತಿದಂತಾಗಿ ರಕ್ತ ಬಂದಿತು. ಆದರೆ ಆ ನರ ಗಾಯದಲ್ಲಿ ಮರೆಯಾಯಿತು. ಅವನು ನೋವನ್ನು ನುಂಗಿಕೊಂಡು ಅದು ಹೋಯಿತಾ ಎಂದು ಕೇಳಿದ. ನಾವು  ಪೂರ್ತಿ ಹೋಗಿಲ್ಲ, ಆದರೆ ಕೆಲವೆ ದಿನಗಳಲ್ಲಿ ಹೋಗುವುದು ಎಂದು ಸಮಾಧಾನ ಮಾಡಿದೆವು. ಗಾಯ ಒಂದು ವಾರದಲ್ಲೆ ಹಕ್ಕಳಿಕೆ ಗಟ್ಟಿ ನಂತರ ಉದುರಿ ಹೋಯಿತು. ಆದರೆ ನಾಮದಾಕಾರದ ಗಾಯದ ಗುರುತು ಅವನ ಹಣೆಯ ಮೇಲೆ ಶಾಶ್ವತವಾಗಿ ಉಳಿಯಿತು. ಅವನು ವೈಶ್ಯ. ತಿರುಪತಿ ವೆಂಕಟೇಶನ ಒಕ್ಕಲು. ಆಗೀಗ ಕೆಂಪನೆಯ ನಾಮ ಹಾಕಿಕೊಳ್ಳುತಿದ್ದ. ಹಿನ್ನೆಲೆ ಗೊತ್ತಿಲ್ಲದವರು ಅವನು ಅದೃಷ್ಟವಂತ, ಹುಟ್ಟುವಾಗಲೆ ದೇವರನಾಮ ಅವನ ಹಣೆಯ ಮೇಲಿದೆ ಎಂದು ಅನ್ನಲು ಶುರು ಮಾಡಿದರು. ಅವನು ಅಲ್ಲಗಳೆಯಲು ಹೋಗಲಿಲ್ಲ. ಹಾಗೂ ಹೀಗೂ ಆರನೆ ತರಗತಿ ಮುಗಿಸಿದ. ಕುಲ ವೃತ್ತಿಯಾದ ವ್ಯಾಪಾರ ಮಾಡಿಕೊಂಡು ನೆಮ್ಮದಿಯಾಗಿದ್ದಾನೆ. ಯಾವಾಗಲಾದರೂ ಕಂಡಾಗ ಬದಲಾದ ಅವನ ಅದೃಷ್ಟರೇಖೆಯನ್ನು ಕಂಡು ನಾವು ಮುಗುಳ್ನಗುತ್ತೇವೆ.

ಅಲ್ಲಿ ನೋಡಿದುದು ಬಡವರು ಬಲ್ಲಿದರು ಎನ್ನುವ ಭೇದವಿಲ್ಲದೆ ಶ್ರಾವಣ ಶನಿವಾರ. ತಿರುಪತಿ ಒಕ್ಕಲು ಅದ ಮನೆಯವರ ಮಕ್ಕಳು ಪಾತ್ರೆ ಹಿಡಿದು ಗೋಪಾಳ ಭಿಕ್ಷೆಗೆ ಬರುವರು. ಸಾಧಾರಣವಾಗಿ ಚಿಕ್ಕಮಕ್ಕಳು  ಬಡವರ ಮನೆಯವರಾದರೆ ಹತ್ತಿಯ ಸಾದಾ ಪಂಚೆ ಉಟ್ಟುಕೊಂಡು ಕಂಚಿನ ತಂಬಿಗೆ ಹಿಡಿದು, ಸಿರಿವಂತರಾದರೆ ರೇಷ್ಮೆ ಮಡಿ ಉಟ್ಟುಕೊಂಡು ಬೆಳ್ಳಿಯ ತಂಬಿಗೆ ಕೈನಲ್ಲಿ ಹಿಡಿದು ನಾಮ ಹಾಕಿಕೊಂಡು ವೆಂಕಟರಮಣ ಗೋವಿಂದ ಗೋವಿಂದಾ ಎಂದು ಬರುವರು. ಸಾಧಾರಣ ಐದು ಮನೆಗೆ ಹೋಗುವುದು ವಾಡಿಕೆ. ಅವರಿಗೆ ಭಕ್ತಿಯಿಂದ ಅಕ್ಕಿ ಹಾಕುವರು. ಗೊತ್ತಿದ್ದವರ ಮನೆಯ ಹುಡುಗ ಬಾರದಿದ್ದರೆ, ಯಾಕೋ ಶನಿವಾರ ನಮ್ಮ ಮನೆಗೆ ಗೋಪಾಳಕ್ಕೆ ನಮ್ಮ ಮನೆಗೆ ಬರಲಿಲ್ಲ ಎಂದು ವಿಚಾರಿಸುತಿದ್ದರು. ಗೋಪಾಳ ಭಿಕ್ಷೆ ಬೇಡುವುದು ಮತ್ತು ಹಾಕುವುದು  ಹೆಮ್ಮೆಯ ವಿಷಯವಾಗಿತ್ತು.

ಅಲ್ಲಿನ ವಿಶೇಷ ಆಕರ್ಷಣೆ ಎಂದರೆ ನವರಾತ್ರಿಯಲ್ಲಿ ನಡೆವ ಹರಿಕಥೆ. ಕುಕುನೂರಿನ ದಾಸರೊಬ್ಬರು ಪ್ರತಿವರ್ಷ ಅಲ್ಲಿ ಬಂದು ಹರಿಕಥೆ ಮಾಡುವರು. ಅವರಿಗೆ ಬಡಗೇರ ಮಾನಪ್ಪ ಹಾರ್ಮೋನೀಯಂ ಮತ್ತು ಕೆಲಸಿಗರ ವೀರಭದ್ರಪ್ಪ ತಬಲದಲ್ಲಿ ಜೊತೆ ನೀಡುವರು. ಅವರ ಉಡುಪು ಎದ್ದುಕಾಣುವಂತೆ ಇರುತಿತ್ತು. ತೀಲಿ ಹಳದಿ ಬಣ್ಣದ ರೇಶಿಮೆ ಜುಬ್ಬ, ಕೆಂಪು ಅಗಲದಂಚಿನ ಕಚ್ಚೆ ಪಂಚೆ, ಕೊರಳ ಸುತ್ತ ಶಲ್ಯ, ತಲೆಯ ಮೇಲೆ ಮರಾಠಿ ಶೈಲಿಯ ಪಾಗು, ಜತೆಗೆ ದಿನವೂ ಭಕ್ತರು ಹೆಣೆದು ಹಾಕುತಿದ್ದ ಹೂವಿನ ಹಾರ, ಕಾಲಿಗೆ ಕಿರು ಗೆಜ್ಜೆ ಮತ್ತು ಬಲಗೈನಲ್ಲಿ ಚಿಟಿಕೆ ಸಂಗೀತ ಸಾಹಿತ್ಯ ಸೇರಿದ ಕಥೆ ಮಧ್ಯ ಮಧ್ಯ ಹಾಸ್ಯ ಪ್ರಸಂಗಗಳು ಇರುತಿದ್ದವು. ಅವರು ಹೇಳುವ  ಕಥೆಗಳಿಗಿಂತ ಉಪ ಕಥೆಗಳೇ ನಮಗಂತೂ ಬಹಳ ಮಜಾ ಕೊಡುತ್ತಿದ್ದವು. ಆ ದಿನಗಳಲ್ಲಿ ನಗರೇಶ್ವರನ ಗುಡಿಯಲ್ಲಿ ಅರ್ಧ ಊರೆ ಸಂಜೆಗೆ  ನೆರೆದಿರುತಿತ್ತು. ಅವರನ್ನು ದಿನಕ್ಕೊಬ್ಬರು ಊಟಕ್ಕೆ ಕರೆಯುತ್ತಿದ್ದರು. ಅದರಲ್ಲೂ ಮೇಲಾಟ. ದಿನನಿತ್ಯದ ಮಂಗಳಾರತಿ ತಟ್ಟೆಯಲ್ಲಿ ಬರುವ ದಕ್ಷಿಣೆಯ ಜೊತೆ ಕೊನೆಯ ದಿನ ಪಟ್ಟಿಹಾಕಿ ಸಂಭಾವನೆ ಕೊಡುತಿದ್ದರು. ಅವರಿಗೆ ಅದು ಆದಾಯದ ಮೂಲವಾಗಿರದೆ ಜೀವನದ ಆಚರಣೆಯ ಭಾಗವಾಗಿತ್ತು.

ಆರರಿಂದ ಅರವತ್ತು-೯ : ಹೊಯ್ಯಕೊಂಡ ಬಾಯಿಗೆ ಹೋಳಿಗೆತುಪ್ಪ

ಹೋಳಿ ಹುಣ್ಣಿಮೆ ಬಂದರೆ ಅಗಸರಿಗೆ ಆ ಹದಿನೈದು ದಿನ ಅರೆ ನಿದ್ದೆಯ ಸಮಯ. ಹುಡುಗರು ಬರಿ ಕತ್ತೆಯ ಮೇಲೆ ಹತ್ತಿ ಸವಾರಿ ಮಾಡಿದರೆ ಅವರು ಚಿಂತೆ ಮಾಡುತ್ತಿರಲಿಲ್ಲ. ಆದರೆ ಅವರ ತುಂಟಾಟ ಜಾಸ್ತಿ. ಅದರ ಬಾಲಕ್ಕೆ ಖಾಲಿಡಬ್ಬ ಕಟ್ಟಿ ಅದರಲ್ಲಿ ಕಲ್ಲುಗಳನ್ನು ಹಾಕಿ ಓಡಿಸುತ್ತಿದ್ದರು. ಅದು ಓಡಿದಾಗ ಡಬ್ಬ ಕಾಲಿಗೆ ಬಡಿದು ಅದು ಗಡಗಡ ಶಬ್ದ ಮಾಡುತ್ತಿತ್ತು. ಅದು ಗಾಬರಿಯಾಗಿ ದಿಕ್ಕೆಟ್ಟು ಓಡುತ್ತಿತ್ತು. ಅದರ ಜೊತೆ ಬಾಯಿ ಬಡಿದುಕೊಳ್ಳುತ್ತಾ ಹುಡುಗರ ಪಡೆ ಸಾಗುತಿತ್ತು. ಕೆಲವು ಕಿಡಿಗೇಡಿಗಳು ಆ ಡಬ್ಬದಲ್ಲಿ ಪಟಾಕಿ ಹಚ್ಚಿ ಹಾಕಿದರಂತೂ ಅದರ ಸ್ಥಿತಿ ದೇವರೆ ಗತಿ.  ಹಾಗಾದಾಗ ಓಡಿ ಹೋದ ಕತ್ತೆಯನ್ನು ಹುಡುಕುವುದಕ್ಕೆ ಅಗಸರು ಕೆಲಸ ಬಿಟ್ಟು ದಿನವೆಲ್ಲ ಅಲೆಯಬೇಕಿತ್ತು. ಸಾಧಾರಣವಾಗಿ ಅವರು ಕೆಲಸದ ದಣಿವನ್ನು ಮರೆಯಲು ಸೇಂದಿ ಕುಡಿದು ಮಲಗುವರು. ಅವರು ಕತ್ತೆ ಕಾಯುತ್ತಾ ರಾತ್ರಿಯೆಲ್ಲ ಜಾಗರಣೆ ಮಾಡಲಾಗುವುದೆ. ಮೇಲಾಗಿ ರಾತ್ರಿ ಮೇಯಲು ಬಿಡಲೇಬೇಕಲ್ಲ. ಆಗ ನಮಗೆಲ್ಲ ಚಿನ್ನಾಟ.

ಕಾಮದಹನ ಇನ್ನೂ ಆರೆಂಟು ದಿನ ಇರುವ ಮುನ್ನವೆ ಪ್ರತಿಸಂಜೆ ಮನೆ ಮನೆಗೆ ಕುಳ್ಳು ಕಟ್ಟಿಗೆ ಬೇಡಲು ಗುಂಪಿಗೆ ಗುಂಪೆ ಹೊರಡುವುದು. ಪ್ರತಿ ಮನೆಯ ಮುಂದೆ ನಿಂತು ಕಾಮನ ಮಕ್ಕಳು ಬಂದಿದ್ದೇವೆ. ಕುಳ್ಳು, ಕಟ್ಟಿಗೆ ಕೊಡಿ ಎಂದು ಬಾಯಿ ಬಡಿದುಕೊಳ್ಳುವುದು. ಈ ಗದ್ದಲ ತಾಳಲಾರದೆ ಅವರು ಕೊಟ್ಟು ಕಳುಹಿಸುವರು. ಸಾಧಾರಣವಾಗಿ ಎಲ್ಲರ ಮನೆಯಲ್ಲಿ ಕಟ್ಟಿಗೆ ಕುಳ್ಳನ್ನೆ ಮುಖ್ಯ ಉರುವಲಾಗಿ ಬಳಸುತಿದ್ದರು. ಸೀಮೆ ಎಣ್ಣೆಯನ್ನು ದೀಪಕ್ಕೆ ಬಳಸುವರು. ಹೀಗಾಗಿ ಉರುವಲು ಸಾಕಷ್ಟು ಸಂಗ್ರಹವಾಗುತಿತ್ತು. ಈಗ  ಕಾಮದಹನ ಬಹು ವಿರಳವಾಗುತ್ತಿದೆ. ಎಲ್ಲರ ಮನೆಯಲ್ಲೂ ಗ್ಯಾಸ್‌. ಸ್ಟೋವ್ಗಳು. ಇನ್ನು ಕಟ್ಟಿಗೆ ಒಲೆ ಎಲ್ಲಿ. ಅದರಿಂದ ಕಾಮದಹನದ ಖದರು ಕಡಿಮೆಯಾಗಿದೆ.
ನಾವು ಸಂಜೆ ಕುಳ್ಳು ಕಟ್ಟಿಗೆ ಬೇಡಲು ಹೋದಾಗ ಕಿರಿ ಕಿರಿ ಮಾಡಿದ ಮನೆಯ ಗುರುತು ಮಾಡಿಕೊಂಡು ಸರಿ ರಾತ್ರಿ ದಾಳಿ ಮಾಡುತಿದ್ದೆವು. ಅವರ ಮನೆಯ ಮುಂದೆ ಇದ್ದ ಕೊರಡು, ಕುಂಟೆಗಳನ್ನು, ಹಿತ್ತಲಲ್ಲಿನ ಆವರಣದ ಬಾಗಿಲು ಕದ್ದು ಸಾಗಿಸಲಾಗುವುದು. ಬೆಳಗ್ಗೆ ನೋಡಿದಾಗಲೆ ಅದರ ಸುಳಿವು ದೊರೆಯುತಿತ್ತು. ಅನ್ನುವ ಹಾಗಿಲ್ಲ. ಅನುಭವಿಸುವ ಹಾಗಿಲ್ಲ. ಬಾಯ್ತುಂಬ  ಬೈದು ಸಮಾಧಾನ ಮಾಡಿಕೊಳ್ಳುತಿದ್ದರು.

ಆ ಸಮಯದಲ್ಲಿ ಇನ್ನೊಂದು ಮೋಜು ಜರುಗುತಿತ್ತು. ಅಷ್ಟೇನು ಆಧುನಿಕವಲ್ಲದ ಊರಿನಲ್ಲಿ ಎರಡೋ ಮೂರೋ ಬೋರ್ಡುಗಳು. ಅವೂ ಹಜಾಮತಿ ಅಂಗಡಿಗಳವು ಮತ್ತು ವೈದ್ಯರವು. ಬೆಳಗಾಗುವದರೊಳಗೆ ಡಾಕ್ಟರ ಷಾಪು ಮಾಡರ್ನ್ ಸೆಲೂನ.. ಸೆಲೂನಿನ ಹೆಸರು ಧನ್ವಂತರಿ ಚಿಕಿತ್ಸಾಲಯ. ಮಧ್ಯಾಹ್ನ ಅವನ್ನು ಬದಲಾಯಿಸುವವರೆಗೆ ನೋಡುಗರಿಗೆ ಮೋಜೆ ಮೋಜು.

ಹೋಳಿ ಹುಣ್ಣಿಮೆ ಬಂದರೆ ಪುಸ್ತಕ ಪರೀಕ್ಷೆ ಪರಿಗಣನೆಗೆ ಬರಿತ್ತಲಿರಲಿಲ್ಲ. ಕಾಮನನ್ನುಕೂಡಿಸಿದ ಮೇಲೆ ನಿತ್ಯ ರಾತ್ರಿ ಅದರ ಮುಂದೆ ಹದಿ ಹರೆಯದವರ, ಗಂಡುಮಕ್ಕಳ ಜಂಗುಳಿ. ಹಿರಿಕಿರಿಯರೆನ್ನದೆ  ಹಾಸ್ಯಮಾಡುವ ಹಾಡುಗಳು, ತಪ್ಪಡಿ ಬಡಿತ. ಹಾರವಯ್ಯ, ಜಂಗಮಯ್ಯ, ಶಾನುಭೋಗ, ಊರ ಶೆಟ್ಟಿ ಯಾರಿಗೂ ಉಳಿಗಾಲವಿಲ್ಲ. ಆ ಹಾಡುಗಳೋ ಶೀಲ, ಅಶ್ಲೀಲದ ಅಂಚು ದಾಟಿದವು. ಕುಣಿಯುವುದು ಕೇಕೆ ಹಾಕುವುದು ಮಾತು ಮಾತಿಗೆ ಅಯ್ಯೋ! ಈಗ ಇದ್ದ, ಸತ್ನಲ್ಲಪ್ಪೋ ಎಂದು ಬಾಯಿ ಬಡಿದುಕೊಳ್ಳುವುದು. ಸಂಬಂಧಪಟ್ಟವರು ಸುಮ್ಮನಿದ್ದರೆ ಸರಿ. ಅವರೇನಾದರೂ ಗದರಿದರೆ ಒಂದಕ್ಕೆ ನಾಲಕ್ಕುಪಟ್ಟು ಹೆಚ್ಚು ಮಾಡಿ  ಹಾಡಾಡಿಕೊಂಡು ಅಳುವುದು, ಬಾಯಿ ಬಡಿದುಕೊಳ್ಳುವುದು. ಅದೂ ಸಾಮೂಹಿಕವಾಗಿ. ಬೇಸಿಗೆ ಎಂದು ಅಂಗಳದಲ್ಲಿ ಹೊರಸುಹಾಕಿ ಮಲಗಿದವರನ್ನು ಅನಾಮತ್ತು ಹೊರಸಿನ ಸಮೇತ ಎತ್ತಿ ಕಾಲುವೆ ದಂಡೆಯಲ್ಲಿ ಇಡುವುದು ಬಹು ಮೋಜಿನ ವಿಷಯ.. ಅವರು ಬೆಳಗ್ಗೆ  ಎದ್ದು ಕಣ್ಣು ಬಿಟ್ಟಾಗ ಎಲ್ಲಿರುವೆ ಎಂದು ತಿಳಿಯದೆ ಕಕ್ಕಾಬಿಕ್ಕಿ. ಮುಂಜಾನೆ ಎದ್ದು ಹೊರಸು ಹೊತ್ತುಕೊಂಡು ಮನೆಗೆ ಬರುತ್ತಿರುವ ಅವರನ್ನು ನೋಡಿ ಎಲ್ಲ ಗೊತ್ತಿದ್ದರೂ ಎಲ್ಲಿಗೆ ಹೋಗಿದ್ದಿರಿ? ಎಂದು ಕುವಾಡ ಮಾಡುತಿದ್ದರು.

ವರ್ಷದಲ್ಲಿ ಮುನ್ನೂರು ಐವತ್ತು ದಿನ ತಗ್ಗಿ ಬಗ್ಗಿ ಹೆದರಿ ನಡೆಯುತಿದ್ದವರು, ಆಚಾರ ವಿಚಾರಕ್ಕೆ ಹೆಸರಾದವರ ಮನೆಯ ಹರೆಯದ ಹುಡುಗರು, ಪಡ್ಡೆಗಳು ಯಾವುದೆ ಎಗ್ಗಿಲ್ಲದೆ ಎಲ್ಲರಲ್ಲಿ ಒಂದಾಗುತಿದ್ದರು. ಹಿರಿಯರು ಹುರಿದುಂಬಿಸಲು ಮುಗಳ್ನಗುತ್ತಾ ಕಟ್ಟೆಯ ಮೇಲೆ ಕೂತಿರುತಿದ್ದರು. ಹೆಂಗಸರಿಗೆ ಇಲ್ಲಿ ಪ್ರವೇಶ ಇಲ್ಲ. ಹಿರಿಯ ಹೆಂಗಸರು ಧೈರ್ಯವಾಗಿ ಬಾಗಿಲಿಗೆ ಬಂದರೆ, ಹರೆಯದವರು ಬಾಗಿಲ ಸಂದಿಯಿಂದ ಕಿಟಕಿಯ  ಮರೆಯಲ್ಲಿ ನಿಂತು ಕಿಸಿ ಕಿಸಿ ನಗುತ್ತಾ ಸ್ವಾರಸ್ಯವನ್ನು ಸವಿಯುತಿದ್ದರು.  ವರ್ಷ ಪೂರ್ತಿ ಅದುಮಿಟ್ಟಿದ್ದ ಭಾವನೆಗಳು ಮಹಾಪೂರದಂತೆ ಆ ಸಮಯದಲ್ಲಿ ಮಾತಿನ ಮೂಲಕ, ಹಾಡಿನ ಮೂಲಕ ಹರಿದು ಬರುತಿದ್ದವು. ಒಂದು ರೀತಿಯಲ್ಲಿ ಈಗಿನ ವಾರಾಂತ್ಯದ ಪಾರ್ಟಿಗಳಲ್ಲಿ ಗಂಡು ಹೆಣ್ಣು  ಎಗ್ಗಿಲ್ಲದೆ ಕುಣಿದು ಕುಪ್ಪಳಿಸುವಂತೆ. ಆಗ ವರ್ಷಕೊಮ್ಮೆ ಗಂಡಸರು ಮಾತ್ರ ಸರ್ವ ಸ್ವಾತಂತ್ರ್ಯ ಅನುಭವಿಸುತ್ತಿದ್ದರು ಅದು ಮಾತಿನಲ್ಲಿ ಮಾತ್ರ.. ಕಾಮ ದಹನವಾದ ಮೇಲೆ ಎಲ್ಲ ಕಡೆ ಶಾಂತಿ. ಎಲ್ಲರೂ ಎಂದಿನಂತೆ ಸಾಮಾಜಿಕ  ಕಟ್ಟು ಕಟ್ಟಳೆಗಳಿಗೆ ತಲೆ ಬಾಗಿ ನಡೆಯುತ್ತಿದ್ದರು.

ಅರ್ಧ ರಾತ್ರಿಯ ನಂತರ ಕಾಮದಹನವಾಗುತಿತ್ತು. ಆಗಿನ ಸಂಭ್ರಮ ಮುಗಿಲು ಮುಟ್ಟುತಿತ್ತು. ಎಲ್ಲರೂ ಸತ್ತನಲ್ಲೋ ಎಂದು ಬಾಯಿ ಬಡಿದುಕೊಳ್ಳುವುದು. ಆದರೆ ಅದರ ಅಡಿಯಲ್ಲಿ ಖುಷಿಯ ಕೇಕೆ. ಇದು  ನಿಜಕ್ಕೂ ಸಾಮಾಜಿಕ ಅಧ್ಯಯನಕ್ಕೆ ಇದು ಒಂದು ಅತಿ ಮುಖ್ಯವಾದ ವಿಷಯವಾಗಬಹುದು. ಎಲ್ಲ ವಿಡಂಬನೆ. ಎಲ್ಲ ಕುಚೋದ್ಯ. ಒಬ್ಬನನ್ನು ಸತ್ತವನಂತೆ ಚಟ್ಟದ ಮೇಲೆ ಮಲಗಿಸಿ ಅದನ್ನು ನಾಲಕ್ಕು ಮಂದಿ ಹೊತ್ತು ಉಳಿದವರು ಜತೆಗೂಡಿ ಊರಲ್ಲಿ ಬಾಯಿ ಬಡಿದುಕೊಳ್ಳತ್ತಾ ಮೆರವಣಿಗೆ ಮಾಡುವುದು. ಅದರಲ್ಲೆ ಒಬ್ಬನಿಗೆ ಸೀರೆ ಉಡಿಸಿ ವಿಧವೆ ವೇಷದ ಅನುಕರಣೆ  ಬೇರೆ. ದುಃಖದ ನಟನೆಯಿಂದ ಸುಖಿಸುವುದು ವಿಪರ್ಯಾಸ ಎನಿಸಿದರೂ  ಸುಖ ದುಃಖಗಳು ಒಂದೆ ನಾಣ್ಯದ ಎರಡು ಮುಖಗಳು ಎಂಬುದರ    ಸಂಕೇತ ಈ ಆಚರಣೆಯಲ್ಲಿ ಇರಬಹುದೇನೋ ಎನಿಸುವುದು. ಅಲ್ಲದೆ ಎಲ್ಲರ ಜೀವನದಲ್ಲಿ ಬರಬಹುದಾದ ಸಾವಿಗೆ ಮಾನಸಿಕವಾಗಿ ಸಿದ್ಧ ಮಾಡುವ ಅಪರೋಕ್ಷ  ಪ್ರಯತ್ನ ಎಂದರೂ ತಪ್ಪಲ್ಲ.

ಕಾಮನನ್ನು ಸುಟ್ಟ ಮೇಲೆ ಅದರ ಬಿಸಿ ಬೂದಿಯಲ್ಲಿ ಉಳ್ಳಾಗಡ್ಡಿ, ನೆನಗಡಲೆ ಕೊಬ್ಬರಿ ಸುಟ್ಟುಕೊಂಡು ತಿನ್ನುವುದ ರೂಢಿ. ಅದು ಆರೋಗ್ಯಕ್ಕೆ ಒಳ್ಳೆಯದು ಎಂಬ ನಡೆಯು ಬಹು ಅರ್ಥಪೂರ್ಣ. ಮಾನವನ ಮನಸ್ಸುನ ಒಳಿತು ಕೆಡುಕಗಳ ಮಿಶ್ರಣದ ಮೂಟೆ. ನೋವು ನಲಿವುಗಳ ಆಗರ, ನಿಸರ್ಗದತ್ತ ಬಾಳಿನಲ್ಲಿ ಕೆಟ್ಟದ್ದು, ಆಡಬಾರದ್ದು, ಮಾಡಬಾರದು ಎಂದು ಯಾವುದು ಇಲ್ಲ. ಅದೆಲ್ಲ ಸುಗಮ ಸಾಮಾಜಿಕ ವ್ಯವಸ್ಥೆಗಾಗಿ ನಾವೆ ಹಾಕಿಕೊಂಡ ಕಟ್ಟುಪಾಡು. ಒತ್ತಿಟ್ಟ ಭಾವನೆ ಒಂದಲ್ಲ ಒಂದು ಸಲ ಕಿತ್ತು ಬರುವುದು ಸಹಜ. ಅದಕೆಂದೆ ಹಬ್ಬದ ಹೆಸರಲ್ಲಿ ಆ ಹತ್ತು ದಿವಸ, ಕಟ್ಟಿಗೆ ಕುಳ್ಳುಗಳ ಕಳ್ಳತನ, ಕೆಟ್ಟ ಕೊಳಕು ಮಾತುಗಳಿಂದ  ಮನದಲ್ಲಿದ್ದ ದುರ್ಭಾವನೆಗಳು ಮೊಳಕೆಯಲ್ಲೆ ನಾಶ ಮಾಡುವ ಯತ್ನ.

ಮಾರನೆ ಬೆಳಗ್ಗೆ ಓಕುಳಿ ಆಟ. ಅದೂ ಸಾಮೂಹಿಕವಾಗಿ. ಎಲ್ಲರೂ ಪಟ್ಟಿ ಹಾಕಿಕೊಂಡು ಬಣ್ಣವನ್ನು ತರುತಿದ್ದರು. ಆಗ ಇನ್ನೂ ಪೇಂಟುಗಳ ಹಾವಳಿ ಇರಲಿಲಿಲ್ಲ. ಚಿಕ್ಕಮಕ್ಕಳು ಮನೆಯಲ್ಲೆ ಬಣ್ಣದ ಪುಡಿತಂದು ನೀರಲ್ಲಿ ಕಲಸಿ ಒಬ್ಬರ ಮೇಲೆ ಒಬ್ಬರು ಹಾಕಿ ಖುಷಿಪಡುವರು. ಅದು ಮುಗಿದರೆ ಸುಣ್ಣ ಮತ್ತು ಅರಿಸಿನ ಸೇರಿಸಿದರೂ ಕಂಪು ಬಣ್ಣ ಬರುವುದು. ಅದನ್ನೆ ಬಳಸುವವರು.  ಯಾರಲ್ಲಾದರೂ ಪಿಚಕಾರಿ ಇದ್ದರೆ ಅವನೆ ನಾಯಕ. ಉಳಿದವರು ಸಾಮೂಹಿಕ ಓಕಳಿಯಲ್ಲಿ ಭಾಗಿಗಳಾಗುವರು. ಎತ್ತಿನ ಗಾಡಿಯಲ್ಲಿ ಡ್ರಮ್ಮುಗಳನ್ನು ಹಂಡೆಗಳನ್ನು ಓಕಳಿಯಿಂದ ತುಂಬಿರುವರು. ಸಾಧಾರಣ ಕೆಂಪು ಮತ್ತು  ಹಸಿರುಬಣ್ಣಗಳೆ ಜಾಸ್ತಿ. ಹಾದಿಯುದ್ದಕ್ಕೂ ಬರುವವರ ಹೋಗುವವರ ಮೇಲೆ ಬಣ್ಣ ಎರಚುವರು. ಸುಮ್ಮನೆ ಇದ್ದರೆ ಸರಿ. ಸ್ವಲ್ಲ ಪ್ರತಿರೋಧ ತೋರಿದರೆ ಬಟ್ಟೆ ಪೂರ್ತಿ ಬಣ್ಣ. ವಿಶೇಷವಾಗಿ ಯಾರಾದರೂ ತಾವು ಗಣ್ಯರು, ಬೇರೆಯವರಿಗಿಂತ ಭಿನ್ನರು ಎಂದು ಬಿಂಕದಿಂದ ಮನೆಯಲ್ಲೆ ಇದ್ದರೆ, ಹುಡುಕಿಕೊಂಡು ಹೋಗಿ ಅವರಿಗೆ ಬಣ್ಣದ ಸ್ನಾನ ಮಾಡಿಸುವರು. ಆಗ ಹೆಂಗಸರು ಭಾಗವಹಿಸುತಿರಲಿಲ್ಲ. ರೈತಾಪಿ ಜನರು ಹೆಚ್ಚಾಗಿ ಬರುತಿರಲಿಲ್ಲ. ಅವರು ಯುಗಾದಿ ಮಾರನೆ ದಿನ ಬಣ್ಣ ದಾಟ ಆಡುತಿದ್ದರು ಅವರ ವಿಶೇಷವೆಂದರೆ ಅದರಲ್ಲಿ ಗಂಡು ಹೆಣ್ಣು ಭೇದವಿಲ್ಲದೆ ಭಾಗವಹಿಸುತಿದ್ದರು. ಅದರಲ್ಲೂ ಮದುವೆಯಾಗದವರು ಮಾಮ, ಸೊಸೆ ಎಂದು ಹುಡುಕಿ ಹುಡುಕಿ ಬಣ್ಣ ಹಾಕುತಿದ್ದರು. ಈಗ ಹಿನ್ನೋಟದಲ್ಲಿ ನನಗೆ ಅನಿಸುತ್ತಿದೆ. ದಿನನಿತ್ಯದ ಜಂಜಡದಲ್ಲಿ ನೀರಸ ಬದುಕಿಗೆ ಬಣ್ಣ ತರಲು, ಆನಂದ ಮೂಡಿಸಲೆಂದೆ ಇರುವುದು ಈ ಹಬ್ಬ. ಭೇದ ಭಾವ ಮರೆಸಿ ಎಲ್ಲರು ನಗುನಗುತ್ತಾ ಇರಲಿ ಎಂಬುದೆ ಆಚರಣೆಯ ಹಿಂದಿನ ಉದ್ದೇಶ ಎನಿಸುವುದು.. ಅದು ಸಾಸಿರ ಸಾಸಿರ ವರ್ಷದಿಂದ ಬಂದಿದೆ. ಜನ ಜೀವನದಲ್ಲಿ ಹಾಸು ಹೊಕ್ಕಾಗಿದೆ ಎಂದರೆ ನಮ್ಮ ಸಂಸ್ಕೃತಿಯ ಹಿರಿಮೆಯ ಬಗ್ಗೆ ಹೆಮ್ಮೆಯಾಗುವುದು. ಆದರೆ ಈಗ ಅದರ ಜೋರು ಕಡಿಮೆಯಾಗಿದೆ.

ಬಣ್ಣ ಆಡಿದವರೆಲ್ಲ ಮಧ್ಯಾಹ್ನದ ಹೊತ್ತಿಗೆ ಕಾಲುವೆ, ಬಾವಿಗೆ ಹೋಗಿ ಮನದಣಿಯೆ ಬಣ್ಣ ಹೋಗುವಂತೆ ನೀರಾಟ ಆಡುವರು. ಅಂದು ಎಲ್ಲರ ಮನೆಯಲ್ಲೂ ಸಿಹಿ ಊಟ. ಹೊಯ್ಯಕೊಂಡ ಬಾಯಿಗೆ ಹೋಳಿಗೆ ತುಪ್ಪ ಎಂದೆ ಅದರ  ಆಚರಣೆ. ಅಂದು ರಾತ್ರಿ ಸಾಮೂಹಿಕ ಭೋಜನ. ಅಲ್ಲಿಗೆ ಮುಗಿಯುತಿತ್ತು ಹೋಳಿಯ ಹಾವಳಿ. ಮತ್ತೆ ಅದಕ್ಕೆ ಒಂದು ವರ್ಷ ಚಾತಕಪಕ್ಷಿಯಂತೆ ಕಾಯುತ್ತಿದ್ದೆವು.

ಏಳನೆ ತರಗತಿಯವರೆಗೆ ನಾನು ನಮ್ಮ ಅತ್ತೆಯ ಮನೆಯಲ್ಲಿಯೇ ಇದ್ದು ಅಲ್ಲಿನ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದೆ. ಆಗಲೆ ಸಲೀಸಾಗಿ ನಾಲ್ಕಾರು ಮೈಲು ನಡೆವಷ್ಟು ದೊಡ್ಡವನಾಗಿದ್ದೆ. ಯಥಾರೀತಿ ಒಳ್ಳೆಯ ಅಂಕಗಳೊಂದಿಗೆ ಪಾಸಾಗಿದ್ದೆ. ಹೈಸ್ಕೂಲಿಗೆ ನಮ್ಮ ಊರಿನಿಂದಲೆ ಓಡಾಡಬಹುದು ಎಂದು ಹಳ್ಳಿಗೆ ಹಿಂತಿರುಗಿದೆ.

ಅಪ್ಪಾಜಿರಾಯರ ಸರಣಿ:ಹೀಗಿತ್ತು ನಮ್ಮೂರು

ಹಂಪೆಯ ಹಾದಿಯಲ್ಲಿರುವ ನಮ್ಮ ಊರು ಹರಿಹರ ಕವಿ ಬರೆದ ರಗಳೆಯ ನಾಯಕ ನಾಯಕಿಯರಾದ ಮಲುಹಣ ಮಲುಹಣಿ ಎಂಬ ಯುವಪ್ರೇಮಿಗಳ  ತಾಣ ಎನ್ನುವರು. ಮಲುಹಣ ಎನ್ನುವುದು ಮಲಪನ ಗುಡಿ ಎಂದಾಗಿದೆ  ಎನ್ನುವರು. ಐತಿಹಾಸಿಕವಾಗಿ ಮಲ್ಲಯ್ಯನಾಯಕನ ಊರು ನಮ್ಮದು  ಎನ್ನಲಾಗಿದೆ. ನಮ್ಮಲ್ಲಿರುವ ನಾಲಕ್ಕು ಶತಮಾನ ಹಳೆಯದಾದ ಮಲ್ಲಿಕಾರ್ಜುನ ಗುಡಿಯೂ ಅಷ್ಟೇನು ಕಲಾಪೂರ್ಣವಾಗಿರದಿದರೂ ಬೃಹತ್ತ ಕಲ್ಲಿನ ವಿಜಯನಗರದ ಕಾಲದ ರಚನೆ. ಅದರ ಸುತ್ತಲೂ ಇರುವ ಕೋಟೆಯನ್ನು ಹೋಲುವ ಪ್ರಾಕಾರ ಇಂದಿಗೂ ಸುಭದ್ರ. ಊರ ಬರುವ ಮೊದಲೆ ಕಲ್ಲಿನಲ್ಲಿ ವಿಶಾಲವಾದ ಜಲಗರವಿದೆ. ಅದು ಬಹು ಕಲಾತ್ಮಕವಾಗಿದ್ದು ಅದನ್ನು ಸೂಳೆಬಾವಿ ಎನ್ನುವರು. ಊರ ಎರಡೂ  ಕೊನೆಯಲ್ಲಿ ಕಡೆ ಅಗಸಿ. ಅಂದರೆ ಕಲ್ಲಿನ ಬೃಹತ್‌ ಮಂಟಪಗಳು. ಈಗ ಹೆದ್ದಾರಿಯಲ್ಲಿ ವಾಹನ ಶುಲ್ಕಸಂಗ್ರಹಿಸುವ ಮಾದರಿಯ ಪುರಾತನ ರಚನೆಗಳು. ಅವುಗಳ ಮೂಲಕ ಹಿಂದೆ ರಥ ಆನೆ ಕುದುರೆ ಹೋಗುತಿದ್ದರೆ ಈಗ ಬಸ್‌ ಕಾರು ಚಲಿಸುವವು. ಊರ ಮಲ್ಲಿಕಾರ್ಜನನ ಸೇವೆಗೆ ಸಾಕಷ್ಟು ಭೂಮಿಯ ಕೊಡುಗೆ ಹಿಂದಿನಿಂದಲೂ ಇದೆ. ಅದರಿಂದ ಪೂಜೆ ಪ್ರವಚನ ಸಾಂಗವಾಗಿ ಸಾಗತಿದ್ದವು. ಆದರೆ ದೇವರಾಜ ಅರಸರ ಭೂ ಸುಧಾರಣೆ ನಮ್ಮಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬಂದಿತು. ಉಳುವವನೆ  ಹೊಲದೊಡೆಯನಾದ. ಮಲ್ಲಿಕಾರ್ಜುನನು ತನ್ನ ವಾಹನ ನಂದಿಯನ್ನು ನೇಗಿಲಿಗೆ ಹೂಡುವ ಹಾಗಿಲ್ಲವಲ್ಲ. ಹಾಗಾಗಿ ದೇವರ ಗದ್ದೆಯನ್ನು  ಸಾಗುಮಾಡುವವರೆ ಫಾರ್ಮ ನಂಬರ್‌ ಏಳು ಹಾಕಿ ಉಳುವವರೆ ನೆಲದೊಡೆಯರಾದರು. ನಂತರ ಹೇಳುವುದೇನು ದೇವರು ಅನಾಥನಾದ. ದೀಪಕ್ಕೆ ದಿಕ್ಕಿಲ್ಲದಾಗಿದೆ.

ಬಹಳ ಕಾಲದವರೆಗೆ ಊರಲ್ಲಿ ಮದುವೆ, ಮೊದಲಾದ ಸಾರ್ವಜನಿಕ ಸಮಾರಂಭಗಳಾದರೆ ಅಲ್ಲಿಯೆ ಅಡುಗೆ ಊಟ. ನಾಟಕಗಳು ಗುಡಿಯ ಪಕ್ಕದಲ್ಲಿನ ಜಾಗವನ್ನೆ ಥೇಟರ ಆಗಿ ಬಳಸಿಕೊಳ್ಳುತ್ತಿದ್ದವು. ವೃತ್ತಿ ನಾಟಕ ಕಂಪನಿಗಳು ಅದರ ಉಪಯೋಗ ಪಡೆಯುತಿದ್ದವು. ದೇಗುಲದ ಹಿಂಭಾಗದಲ್ಲಿದ್ದ ಮಂಟಪವೆ ರಂಗಮಂದಿರ. ಆಗ ಬಳಸುತ್ತಿದ್ದ ರಂಗ ಸಜ್ಜಿಕೆಗಳು ಬಹು ಮಿತ. ಒಂದು ಪರೆದೆ ರಸ್ತೆ ದೃಶ್ಯವಾಗಿದ್ದರೆ ಇನ್ನೊಂದು ಕಾಡು, ತೋಟ. ಕುರ್ಚಿಗಳ ಕಾಟ ಇಲ್ಲ. ಗಣ್ಯರಿಗೆ ಜಮಕಾನ ಉಳಿದವರಿಗೆ ಚಾಪೆ. ಇಲ್ಲದಿದ್ರೆ ಹಾಸು ಬಂಡೆಗಳಂತೂ ಇದ್ದೆ ಇದ್ದವು. ಊರ ಗೌಡರಿಗೆ  ಮಾತ್ರ ಅವರು ಬರುವಾಗ ಮನೆಯಿಂದ ಮರದ ಕುರ್ಚಿಯನ್ನು ಅವರ ತಳವಾರನೆ ತಂದು ಹಾಕಿ ಪುನಃ ವಾಪಸ್ಸು ಒಯ್ಯುತಿದ್ದ.
ಅಲ್ಲಿ ಆಡಿದ್ದ ಉತ್ತರಭೂಪ ಮತ್ತು ಶಿವ ಜಲಂಧರ, ಕಡ್ಲಿಮಟ್ಟಿ ಸ್ಟೇಷನ್‌ ಮಾಸ್ತರ್‌ ಮತ್ತು ಹೇಮರೆಡ್ಡಿ ಮಲ್ಲಮ್ಮ ಇನ್ನೂ ಮನದಲ್ಲಿ ಹಸಿರಾಗಿದೆ.

ನಮ್ಮ ಊರಿನಲ್ಲಿ ಹಾಲು ಮತದವರೆ ಬಹಳ. ದಲಿತರನ್ನ ಬಿಟ್ಟರೆ ಉಳಿದ ಜನಾಂಗದವರದು ಬೆರಳೆಣಿಕೆಯ ಮನೆಗಳು. ಅದರಿಂದ ನನ್ನ ಬಾಲ್ಯವೆಲ್ಲ ಅವರ ಒಡನಾಟದಲ್ಲೆ ಆಯಿತು. ನನ್ನ ಮಾತು ಬಹುಕಾಲ ಗ್ರಾಮ್ಯ ಛಾಯೆಯಿಂದ ಹೊರಬಂದಿರಲಿಲ್ಲ. ಅದರಿಂದ ಅಂದಿನ ಸಮಾಜದ ಪರಿಚಯ ಬಹು ಹತ್ತಿರದಿಂದ ಆಯಿತು. ಕುರುಬ ಗಡ್ಡಿಯಲ್ಲಿ ಉಣ್ಣೆ ಕಂಕಣ ಮತ್ತು ಹತ್ತಿ ಕಂಕಣ ಎಂಬ ಎರಡು ಪಂಗಡಗಳಿದ್ದರೂ ಸಾರ್ವಜನಿಕ ಕಾರ್ಯಕ್ಕೆ ಎಲ್ಲರೂ  ಒಂದಾಗುತಿದ್ದರು. ಊರಿನಲ್ಲಿ ಯಾವುದೆ ಸಮಸ್ಯೆ ಬರಲಿ ಅದನ್ನು ಕುಲಸ್ಥರೆಲ್ಲ ಕೂಡಿ ಬಗೆಹರಿಸುವರು. ಪಂಚರ ಮಾತೆ ಪ್ರಮಾಣ. ಅದನ್ನು ಎಲ್ಲರೂ ಪಾಲಿಸಲೆಬೇಕಿತ್ತು. ಕುರುಬಗೌಡನ ಮಾತು ಎಂದರೆ ಅದಕ್ಕೆ ಎದುರೆ ಇಲ್ಲ.  ಅದರ ತೂಕ ಹಾಗಿರುತಿತ್ತು. ಮದುವೆಯಾಗಬೇಕೆಂದರೆ ಅದು ಹಿರಿಯರ ಸಮ್ಮುಖದಲ್ಲೆ ಆಗಬೇಕು. ಸಂಬಂಧ ಕುದುರಿದರೆ ವೀಳ್ಯ ಶಾಸ್ತ್ರ ಮಾಡುವರು. ಹುಡುಗಿಯ ಮತ್ತು ಹುಡುಗನ ಊರಿನ ಹಿರಿಯರು ಎಲೆ ಅಡಿಕೆ ಬದಲಾಯಿಸಿಕೊಂಡರೆ ಅದುವೆ ಮದುವೆಗೆ ರಹದಾರಿ.

ಲಗ್ನದ ಕೆಲಸಕ್ಕೂ ಕುಲಸ್ಥರೆ ಮುಂದು. ಮದುವೆ ಇನ್ನೂ ಒಂದು ವಾರವಿದೆ  ಎನ್ನುವಾಗಲೆ ಐದಾರು ಜನರಿಗೆ ಕಂಕಣ ಕಟ್ಟುವರು. ಅದಕ್ಕೂ ಒಂದು ಅರ್ಹತೆ ಇರವುದು. ಅವರು ಯಾರೂ ಒಂಟಿಗಳಾಗಿರಬಾರದು. ಹೆಂಡತಿ ಸತ್ತವರು, ಬಿಟ್ಟವರು, ಮರು ಮದುವೆಯಾದವರು ಮತ್ತು ಎರಡು ಮದುವೆಯಾದವರು ಈ  ಕೆಲಸಕ್ಕೆ ಬರುವುದಿಲ್ಲ. ಮದುವೆ ಚಪ್ಪರ ಹಾಕುವುದರಿಂದ ಹಿಡಿದು ನೀರು ಹೊರುವುದು, ಅಡುಗೆ ಮಾಡಿ ಬಡಿಸುವವರೆಗೆ ಅವರದೆ ಹೊಣೆ. ಜತೆಗೆ ಇತರರೂ ಇರುವರು. ಅಡುಗೆಯೂ ಹೆಚ್ಚೇನಿಲ್ಲ. ಅನ್ನ, ಸಾರು, ಬದನೆಕಾಯಿ ಪಲ್ಯ ಮತ್ತು ಹುಗ್ಗಿ. ಬಂದವರೆಲ್ಲ ಉಂಡು ಹೋಗುವರು. ಬಡಿಸಲು ಬೇರೆ ಜಾಗ ಬೇಕಿರಲಿಲ್ಲ. ಅಕ್ಕಪಕ್ಕದ ಮನೆಗಳು ಮತ್ತು ಒಂದಕ್ಕೊಂದು ಹೊಂದಿಕೊಂಡಿರುವ ಮಾಳಿಗೆಯ ಮಾಲೆ ಕೂಡ್ರಿಸಿ ಬಡಿಸುವರು. ಒಬ್ಬೊಬ್ಬರಿಗೆ ಒಂದು ಎಲೆ ಎಂಬ ಕಡ್ಡಾಯವಿಲ್ಲ. ಒಂದೆ ಎಲೆಯಲ್ಲಿ ಇಬ್ಬರು ಮೂವರು ಕೂತು ಒಟ್ಟಾಗಿ ಉಣ್ಣುವುದೂ ಇತ್ತು.

ಸಾಧಾರಣವಾಗಿ ಗಂಡಿನ ಮನೆಯಲ್ಲೆ ಮದುವೆ. ವರದಕ್ಷಿಣೆ ಮಾತೆ ಇಲ್ಲ. ಒಂದೊಂದು ಸಲ ತೆರ ಕೊಟ್ಟು  ಹೆಣ್ಣು ಪಡೆಯುತಿದ್ದರು. ಹೆಣ್ಣಿನ ಕಡೆಯವರು ಮದುವೆ ಸಮಯಕ್ಕೆ ಗಾಡಿ ಕಟ್ಟಿಕೊಂಡು ತಮ್ಮವರ ಸಮೇತ ಬಂದರೆ ಸಾಕಿತ್ತು. ಹೆಣ್ಣಿಗೆ ವಾಲೆ, ಮುಗಬಟ್ಟು, ಬುಗುಡಿ, ಬೆಳ್ಳಿ ಕಾಲುಕಡಗ, ನಡುಪಟ್ಟಿ ಮತ್ತು ತಾಳಿ ಬೊಟ್ಟು ಮದುವೆ ಸೀರೆ ಹಾಕುವರು. ಹುಡುಗನಿಗೆ ಪಂಚೆ, ವಲ್ಲಿ ಅಂಗಿ ಎಲೆವಸ್ತ್ರ. ಅಂದರೆ ಕೆಂಪು ಮುಂಡಾಸು. ಮದುವೆ ಕಾರ್ಯಕ್ಕೆ ಕಂಬಳಿ ಮತ್ತು ಹಾಲಿನ ಧಾರೆಯದೆ ಪ್ರಮುಖ ಪಾತ್ರ. ಮದುವೆಯಾದ ದಿನವೆ ಹುಡುಗಿಯನ್ನು ತವರಿಗೆ ಕರೆದುಕೊಂಡು ಹೋಗುವರು. ಅವಳು ವಯಸ್ಸಿಗೆ ಬರುವವರೆಗೆ ಬೇರೆ ಬೇರೆ ಇರುವರು. ಕಾರಣ ಸಾಮಾನ್ಯವಾಗಿ ಬಾಲ್ಯವಿವಾಹಗಳೆ ಹೆಚ್ಚು.
ಉಡುಕೆಯಾಗಲಿ, ಬಿಡಕೆಯಾಗಲಿ ಪಂಚರ ಸಮಕ್ಷಮ ಆಗುವುದು. ಗಂಡ ಸತ್ತವರನ್ನು ಇಲ್ಲವೆ ಗಂಡ ಬಿಟ್ವವರನ್ನು ಮದುವೆಯಾಗುವುದಕ್ಕೆ ಸೀರೆ  ಉಡಿಸುವುದು ಎನ್ನುವರು. ಅನೈತಿಕತೆ ಆರೋಪ ಬಂದರೆ ಅದನ್ನು ಅಷ್ಟೇನೂ    ತೀವ್ರವಾಗಿ ಪರಿಗಣಿಸುತ್ತಿರಲಿಲ್ಲ. ಮಣ್ಣುತಿನ್ನದ ಬಾಯಿ ಯಾವುದು, ಎಂದು  ಸಮಾಧಾನ ಹೇಳಿ ದಂಡ ಹಾಕಿ ಒಂದು ಮಾಡುವರು. ಆಸ್ತಿ ಹಂಚಿಕೆ, ಭೂವ್ಯಾಜ್ಯ, ಸಾಲ ತಿರುವಳಿ ಎಲ್ಲ ಇಲ್ಲಿಯೆ ಫೈಸಲ್.

ಸಾವಿನ ಸಮಯದಲ್ಲಂತೂ ಸುದ್ದಿ ತಿಳಿದರೆ ಸಾಕು ಬಂದು ಸೇರುವರು.  ದೇಹವನ್ನು ಒಪ್ಪ ಮಾಡುವವರೆಗೆ ಅಲ್ಲಿಂದ ಕದಲುತ್ತಿರಲಿಲ್ಲ. ಸಾವಿಗೆ ಮಾತ್ರ  ಹಿರಿಯರು ತಪ್ಪಿಸುತ್ತಿರಲಿಲ್ಲ. ಅದನ್ನು ಶಿವನ ಬಿಟ್ಟಿ ಎಂದು  ಕರೆಯುತಿದ್ದರು.

ಕುರುಬರೆ ಆದರೂ ಕುರಿ ಕಡಿಯುವುದು ಕಡಿಮೆ. ಕೋಳಿ ಸಾರು ಆಗೀಗ ಮಾಡಿದರೂ ಬ್ಯಾಟಿ ಕಡಿಯುವುದು ಹಬ್ಬದ ದಿನಗಳಲ್ಲೆ. ಉಗಾದಿ, ಮಾರ್ನವಮಿ, ಜಾತ್ರೆ, ಮದುವೆ ದಿನ ಸಿಹಿ ಊಟ. ಆದರ ಮಾರನೆದಿನ  ಬಾಡೂಟ.. ಅಂದು ಕುರಿ ಕಡಿದು ಹಂಚಿಕೊಳ್ಳುವರು. ಮಾಂಸವನ್ನು  ಸಮಪಾಲು ಮಾಡುವರು. ಅದಕ್ಕೆ ತಕ್ಕಂತೆ ದುಡ್ಡು ಕೊಡುವರು. ಅದರೆ  ಯಾರ ಮಂದೆಯಿಂದ ಕುರಿ ಬಂದಿರುವುದೋ ಅವರಿಗೆ ತಲೆಯ ಮಾಂಸ ಮತ್ತು ಕುರಿ ಕಡಿದು ಚರ್ಮ ಸುಲಿದು ಒಪ್ಪಮಾಡಿದವರಿಗೆ ಅದರ ಚರ್ಮ ಕೊಡಲಾಗುತಿತ್ತು. ಕಾರಣ ಆ ಕೆಲಸ ಮಾಡಲು ಎಲ್ಲರಿಗೂ ಬರುತ್ತಿರಲಿಲ್ಲ.

ಊರಿನಲ್ಲಿ ಗದ್ದಲ ಇದ್ದೆ ಇರುತಿತ್ತು. ಅವರ ದನ ಇವರ ಹೊಲ ನುಗ್ಗಿತು, ಬದುವನ್ನು ಒತ್ತುವರಿ ಮಾಡಿದ, ನೆಲ್ಲು ಉಜ್ಜಿಕೊಂಡು ಹೋದ, ರಾಶಿ ತುಡುಗು ಮಾಡಿದ, ತೆನೆ ಕೊಯ್ದುಕೊಂಡ ಹೋದ, ಬಣವೆಗೆ ಬೆಂಕಿ ಬಿತ್ತು, ಹುಲ್ಲು ಕದ್ದ ಹೀಗೆ ದೂರುಗಳು ಬಂದಾಗ ಅವನ್ನು ಬಗೆಹರಿಸುವದು ಪಂಚರ ಕೆಲಸ. ಅವರು ದೂರು ಕೇಳಿ ವಿಚಾರಣೆ ನಡೆಸಿ ತಪ್ಪು ದಂಡ ಹಾಕಿ ಎಚ್ಚರಿಕೆ ನೀಡುವರು. ಅದು ಎಷ್ಟು ಸಾಮಾನ್ಯವಾಗಿತ್ತೆಂದರೆ "ಹಾರವ ಮಾಡೋದು ಪಿಂಡಕ್ಕೆ, ಕುರುಬ ದುಡಿಯೋದು ದಂಡಕ್ಕೆ, ಸಾಬ ದುಡಿಯೋದು ಖಂಡಕ್ಕೆ" ಎಂಬ ಮಾತು  ಚಾಲ್ತಿಯಲ್ಲಿತ್ತು.

ದಿನನಿತ್ಯದ  ಜೀವನದಲ್ಲಿ ಸೌಮ್ಯರು ಯಾರ ಗೊಡವೆಗೂ ಹೋಗರು.    ಉದಾರಿಗಳು ಊಟಕ್ಕೆ ಕುಳಿತಾಗ ಮನೆ ಮುಂದೆ ಹಾದು ಹೋಗುವವರನ್ನು ಯಕ್ಕಾ ಬಾರಬೆ, ಎಣ್ಣಾ ಬಾ ಎಂದು ಕರೆಕರೆದು ಜತೆಗೆ ತಾವು ಊಟ ಮಾಡುತ್ತಿರುವ ಗಂಗಾಳದಲ್ಲೆ ಹಂಚಿಕೊಂಡು ಉಣ್ಣುವವರು. ಎಂಜಲು ಮುಸುರೆ ಎಂಬ ಎಗ್ಗಿಲ್ಲ. ಎಲ್ಲರೂ ನಮ್ಮವರೆ ಎಂಬ ಏಕೋ ಭಾವ.

ಆದರೆ ಅವರಿಗೆ ಅನ್ಯಾಯ ಆಗಿದೆ ಅನಿಸಿದರೆ ಸಾಕು ಹಿಂದು ಮುಂದೆ  ಯೋಚಿಸದೆ ಕಣಗ ಹಿಡದು ಹೊಡೆದದ್ದೆ ಬಂತು. ಅದೂ ಜಗಳ ದಾಯಾದಿಗಳಲ್ಲೆ ಹೆಚ್ಚು. ಯಣ್ಣಾ, ಮಾವ ಎಂದು ಕರೆದು ಊಟ ಮಾಡಿಸುತಿದ್ದವರೂ ಕೌರವ ಪಾಂಡವರಂತೆ ಹೊಡೆದಾಡುವರು.

ಅದೇಕೋ ನಮ್ಮ ಊರಿನವರಲ್ಲಿ ದುಡುಕಿನ ಈ ಗುಣ ಮೈಗೂಡಿಹೋಗಿತ್ತು. ಅದು ತನಗೆ ಸಂಬಂಧಿಸಿರಲಿ, ಬಿಡಲಿ ಗಲಾಟೆ ಆಗುತಿದ್ದರೆ ನುಗ್ಗಿದ್ದೆ  ಬಂತು. ಅಕ್ಕಪಕ್ಕದ ಊರುಗಳಲ್ಲಿ ನಮ್ಮವರ ಈ ದುಡುಕುತನಕ್ಕೆ ಬಹಳ ಭಯ ಬೀಳುತಿದ್ದರು. ಯಾವುದಾದರೂ ಗಾಡಿಯಡಿಯಲ್ಲಿ ಕೋಳಿ ಸಿಕ್ಕು ಸತ್ತರೂ ಎಲ್ಲರೂ ಸೇರಿ ಅವರನ್ನು ಹಣಿಯುವವರೆ. ನಮ್ಮ ಊರಿನ ಮಧ್ಯವೆ ಹಂಪೆಗೆ  ಹೋಗುವ ರಸ್ತೆ ಹಾದು ಹೋಗಿದೆ. ಹಾಗಾಗಿ ವಾಹನ ಸಂಚಾರ ಹೆಚ್ಚು. ಆಗ ನಡೆದ ಒಂದು ಘಟನೆ ಇನ್ನೂ ನನಗೆ ನೆನಪಿದೆ. ಹಂಪೆಗೆ ಯಾರೋ ಒಬ್ಬ ನ್ಯಾಯಾಂಗದ ದೊಡ್ಡ ಹುದ್ದೆಯಲ್ಲಿದ್ದ  ವ್ಯಕ್ತಿ ಕಾರಿನಲ್ಲಿ ಹೋಗುವಾಗ ಅಕಸ್ಮಾತ್ತಾಗಿ ಚಿಕ್ಕ ಅಪಘಾತವಾಗಿದೆ, ಯಾರಿಗೂ  ಏನೂ ಆಗಿಲ್ಲ. ಯಥಾರೀತಿ ನಮ್ಮ ಊರ ಜನ ಮುಕುರಿಕೊಂಡು ಕಾರಿನಲ್ಲಿದ್ದವರನ್ನು  ಹೊರಗೆ ಎಳೆದು ಹೊಡೆದಿದ್ದಾರೆ. ಅವರು ಏನೆ ಹೇಳಿದರೂ ಕೇಳಿಸಿಕೊಂಡಿಲ್ಲ. ಆಗಲೆ ಮುರುಸಂಜೆ ಹೊತ್ತು. ಅವರು ವಾಪಸ್ಸು  ಹೋಗಿ ದೂರು ಸಲ್ಲಿಸಿದ್ದಾರೆ. ಪೋಲಿಸರಿಗೆ ಮೊದಲೆ ನಮ್ಮೂರಿನ ಮೇಲೆ ಒಂದು ಕಣ್ಣು. ಈಗ ದೂರು ಸಲ್ಲಿಸಿದವರು ತೊಂದರೆಗೊಳಗಾದ ಅತ್ಯುನ್ನತ ಹುದ್ದೆಯಲ್ಲಿನ ವ್ಯಕ್ತಿ. ಸುದ್ದಿ ತಿಳಿದೊಡನೆ ರಾತ್ರಿಯಲ್ಲೆ ಪೋಲಿಸರು ವ್ಯಾನಿನಲ್ಲಿ ಬಂದು ಕೈಗೆ   ಸಿಕ್ಕವರನ್ನೆಲ್ಲ ವ್ಯಾನಿನಲ್ಲಿ ಹಾಕಿಕೊಂಡು ರಾತ್ರಿ ಎಲ್ಲ ಆತಿಥ್ಯ ನೀಡಿದ್ದಾರೆ. ನಂತರ ಬಿಡುಗಡೆಯಾದರೂ ಅವರೆಲ್ಲ ಬಹುಕಾಲ ಕೋರ್ಟಿಗೆ ಅಲೆದಾಡಿ ಹೈರಾಣವಾದರು. ಈಗ ಆ ರೋಷಾವೇಶ ತುಸು ಕಡಿಮೆಯಾಗಿದೆ. ಚಿಕ್ಕಂದಿನಲ್ಲಿ ನನಗೆ ಕಣ್ಣಿಗೆ ಕಟ್ಟಿದಂತಿರುವ ನೋಟ ಎಂದರೆ ಹನ್ನೆರಡು ಗಂಟೆಯ ಹೊತ್ತಿಗೆ ಹೊಲದಲ್ಲಿ ಕೆಲಸ ಮಾಡುವವರು ಊಟ ಮಾಡುತಿದ್ದ ನೋಟ. ಬೆಳಗಿನ ಜಾವವೆ ಎದ್ದು  ರೊಟ್ಟಿ ಬಡಿದು ಎರಡು ರೊಟ್ಟಿ ಹುಣಚಿ ಚಟ್ನಿ ತಿಂದು ಬುತ್ತಿ ಕಟ್ಟಿಕೊಂಡು ಬದುಕಿಗೆ ಹೊರಡುವರು. ಬುತ್ತಿ ಎಂದರೆ, ಇದೆ  ಬೇಕು ಅಂತ ಇಲ್ಲ, ರೊಟ್ಟಿ, ಮುದ್ದೆ, ನವಣಕ್ಕಿ ಬಾನ, ಬಿಳಿಅಕ್ಕಿ ಅನ್ನ, ಸಂಗಟಿ, ನುಚ್ಚಕ್ಕಿ ಬಾನ ಯಾವುದಾದರೂ ಸರಿ. ಅದನ್ನೂ ಉಳ್ಳವರು ಸಿಲವರ ಟಿಫನಿಯಲ್ಲಿ ಒಯ್ಯುವವರು. ಸಿಲವರ ಎಂದರೆ ಬೆಳ್ಳಿ ಅಲ್ಲ, ಅಲ್ಯಮಿನಿಯಂ. ಉಳಿದವರು ಬಿಳಿ ಬಟ್ಟೆಯಲ್ಲೆ ಕಟ್ಟಿಕೊಂಡು ಹೋಗುವರು. ಸಾರು ಸಾಂಬಾರು ಇಲ್ಲವೆ ಇಲ್ಲ. ಮಧ್ಯಾಹ್ನ ಹೊತ್ತು ತಿರುಗಿದ ಮೇಲೆ ಎಲ್ಲರೂ ಒಟ್ಟಿಗೆ ಮರದಡಿಯಲ್ಲಿ, ಇಲ್ಲವೆ ಕಾಲವೆ ಬದಿಯಲ್ಲ ಕುಳಿತುಕೊಳ್ಳುವರು. ಒಂದು ದೊಡ್ಡ ಒಲ್ಲಿ ಹರಡಿ ಅದರಲ್ಲಿ ಎಲ್ಲರ ಬುತ್ತಿಯನ್ನೂ ಹಾಕುವರು. ಯಾವುದೆ ಭಿನ್ನ ಭೇದವಿಲ್ಲದೆ ಸುತ್ತಲೂ ಕುಳಿತು ಎಲ್ಲರೂ ನಗುತ್ತಾ ಕಲೆಯುತ್ತಾ ಕೈ ಹಾಕುವರು, ನಂತರ ಕುವಾಡ ಮಾಡುತ್ತಾ ಹೆಂಗಸರ ಹತ್ತಿರವಿರುವ ಎಲೆ ಅಡಿಕೆ ಸಂಚಿಯಿಂದ ಅಡಕೆ ಕೇಳಿ ಪಡೆದು ಹರಟುವರು. ಕೆಲವು ಹೆಂಗಸರು ನಶಿ ಪುಡಿಯಿಂದ ಹಲ್ಲನ್ನು ತಿಕ್ಕವವರೂ ಇದ್ದರು. ಹೀಗೆ ಖುಷಿ ಖುಷಿಯಾಗಿ ಅರ್ಧ ಮುಕ್ಕಾಲು ತಾಸು ಕಾಲ ಕಳೆದು ಮತ್ತೆ ಕೆಲಸ ಶುರುಮಾಡುವರು. ನಾಟಿ ಮಾಡುವ ಸಮಯದಲ್ಲಂತೂ ಬಗ್ಗಿಸಿದ ನಡು ಎತ್ತದೆ ಇದ್ದರೂ ಹಾಡಿನ ಸೊಲ್ಲಿಗೆ ದನಿಗೂಡಿಸುತ್ತಾ ಕೆಲಸ ಮಾಡುತಿದ್ದರೆ ಹೊತ್ತು ಕಂತಿದ್ದೆ ಗೊತ್ತಾಗುತ್ತಿರಲಿಲ್ಲ.

ಈಗ ಹೊಲಗಳೆಲ್ಲ ಸೈಟುಗಳಾಗಿವೆ, ಇಲ್ಲವೆ ಕಬ್ಬಿಣದ ಅದಿರು ತೆಗೆದು ಕುಳಿಗಳಾಗಿವೆ. ಗದ್ದೆಯ ಕೆಲಸಕ್ಕೆ ಬರುವವರೆ ಇಲ್ಲ. ಎಲ್ಲ ಪಟ್ಟಣದತ್ತ ಕಾಲು ಹಾಕುತಿದ್ದಾರೆ. ಎಲ್ಲ ಹೋಟೆಲಿನ ತಿಂಡಿಗೆ ಹಲ್ಲು ಹತ್ತಿದ್ದಾರೆ. ರೊಟ್ಟಿ ಮುದ್ದೆ ತಿನ್ನುವುದನ್ನೂ ಮರೆತೆ ಬಿಟ್ಟಿದ್ದಾರೆ. ಊರಿಗೆ ಊರೆ ಬದಲಾಗಿದೆ. ಊರಿನ ಪ್ರವೇಶ ಮಾಡುವಾಗ ಹಾದಿಯ ಮಧ್ಯದಲ್ಲಿನ ಲಿಂಗಾಕಾರದ ಇಷ್ಟೆತ್ತರದ  ಗುಡ್ಡೆಕಲ್ಲು ಈಗ ನೆಲಮಟ್ಟಕ್ಕಿಂತ ಕೆಳಗಿಳಿದು ಗೋಕರ್ಣದ ಪಾತಾಳ ಲಿಂಗದಂತಾಗಿದೆ. ಇದು ಬದಲಾದ ಮೌಲ್ಯಗಳ ಸಂಕೇತವೆನಿಸುವದು. ಗುಡ್ಡೆ ಕಲ್ಲಿನ ಆಚೆಯೂ ಊರು ಮೂರು ಪಟ್ಟು ಬೆಳೆದಿದೆ.

ನಾಗರಿಕತೆಯ ಗಾಳಿ ಸೋಂಕಿದರೂ ಈಗಲೂ ಮಾತಿಗೆ ತಪ್ಪದವರು ಎಂದು ಹೆಸರಾಗಿದ್ದಾರೆ. ಹಳೆಯ ತಲೆಗಳಿಗೆ ನಿಯತ್ತು  ತುಸು ಮಟ್ಟಿಗೆ ಇದೆ. ಚುನಾವಣಾ ಸಮಯದಲ್ಲಿ ಕಂಬಳಿಯ ಮೇಲೆ ಕುಳಿತು ಹಾಲು ಮುಟ್ಟಿ ಪ್ರಮಾಣ ಮಾಡಿದರೆ ಬೇರೆ ಅಭ್ಯರ್ಥಿ ವೋಟು ಒಂದಕ್ಕೆ ಸಾವಿರದ ನೋಟು ಕೊಟ್ಟರೂ ಮಾತು ತಪ್ಪದವರು ಎಂಬ ಹೆಸರು ಉಳಿಸಿಕೊಂಡಿದ್ದಾರೆ.

ಅರರಿಂದ ಅರವತ್ತು-11: ಮನೆ ಮನುಷ್ಯರದು ಮಾತ್ರವಲ್ಲ

ಮುನ್ನೂರು ಮನೆಗಳಿರುವ ನಮ್ಮ ಹಳ್ಳಿಯ ಬಹುತೇಕ ಮನೆಗಳಿಗೆ ಮಣ್ಣಿನ ಮಾಳಿಗೆ. ಮನೆಯ ಮುಂದೆ ಕಟ್ಟೆ. ಅದಕ್ಕೆ ಹುಲ್ಲಿನ ಚಪ್ಪರ. ನಾಲಕೈದು ಗಾರೆ ಮನೆಗಳು. ಬಡಜನರ ಬಾಳೆಲ್ಲ ಗುಡಿಸಲಲ್ಲೇ. ಮನೆ ಎಂದರೆ ಅದು ಮನುಷ್ಯರ ವಾಸಕ್ಕೆ ಮಾತ್ರವೇ ಎಂದು ಭಾವಿಸಿದರೆ, ಅದು ತಪ್ಪು ಕಲ್ಪನೆ. ಪಶು, ಪಕ್ಷಿ , ಕ್ರಿಮಿ, ಕೀಟಗಳೊಂದಿಗಿನ ದೂರಲಾಗದ ಸಹಬಾಳ್ವೆ. ಮನೆಯೊಳಗೆ  ಹೋಗುವ ಮೊದಲೇ ಹೊಸ್ತಿಲ ಹೊರಗೆ ಇರುವ ಕಟ್ಟೆಯ ಕೆಳಗೆ ಕೋಳಿ ಗೂಡು. ಅಲ್ಲಿ ಏನಿಲ್ಲ ಎಂದರೂ ಒಂದು ಹುಂಜ, ಮೂರೋ ನಾಕೋ ಹೇಟೆಗಳ ವಸತಿ. ಮೊಟ್ಟೆ ಇಡುವ ಕಾಲ ಬಂದಾಗ, ಮೆತ್ತನೆಯ ಹುಲ್ಲು ಬಣವಿ ಇಲ್ಲವೇ ಸುರಕ್ಷಿತ ತಾಣವನ್ನು ಹುಡುಕಿಕೊಳ್ಳುವಷ್ಟು ಬುದ್ಧಿಮತ್ತೆ ಹಾಗೂ ಸ್ವಾತಂತ್ರ್ಯ ಅವಕ್ಕುಂಟು. ವಿದ್ಯುಚ್ಚಕ್ತಿ ಕಾಣದ, ಬಿಸಿ ಬಸಿಯುವ ಊರುಗಳಲ್ಲಿ, ರಾತ್ರಿಗಳು ಉರುಳುವುದು ಕಟ್ಟೆಯ ಮೇಲೆ. ಮಲಗಿದವರಿಗೆ ಹೇಟೆಯ ಗುಟುರ್‌ ಗುಟುರ್‌ ಜೋಗುಳದಂತೆ. ಬೆಳಗಿನ ಜಾವ ಬೇಗ ಏಳಲು ಗಡಿಯಾರದ ಗೊಡವೆ ಇಲ್ಲ.  ಅಲಾರಂ ಅನಾವಶ್ಯಕ. ಬೆಳಗಿನ ನಾಲಕ್ಕು ಗಂಟೆಯ ಹೊತ್ತಿಗೆ ಮುಂಗೋಳಿಯ ಕೂಗು. ಐದರ ಹೊತ್ತಿಗೆ ಹೀಂಗೋಳೀಯ ಕೂಗು. ಹೀಗೆ ಕೂಗುವುದು ಹುಂಜದ ಕೆಲಸ. ಅವು ಯಾವಾಗಲೂ ಕ್ರಮ ತಪ್ಪುವುದಿಲ್ಲ. ಸರಿಯಾಗಿ ಸ್ವರ ಹೊರಡಿಸುವವು. ಅಪ್ಪಿತಪ್ಪಿ ಅಡ್ಡ ಹೊತ್ತಿನಲ್ಲಿ ಸ್ವರವೆತ್ತಿದರೆ ಅದಕ್ಕೆ ಕೊನೆಗಾಲ ಬಂದಂತೆ. ಅಡ್ನಾಡಿ ಕೋಳಿಯನ್ನು ಅಪಶಕುನದ್ದು ಎಂದು ಪರಿಗಣಿಸಿ, ಯಾರಾದರೂ ನಂಟರು ಬರುವುದೆ ತಡ, ಬಂದವರ ಗಂಗಾಳದಲ್ಲಿ ಕೋಳಿ  ಸಾರಾಗಿರುತ್ತಿತ್ತು.
ಮನೆ ಹೊಸ್ತಿಲು ದಾಟಲಿಕ್ಕೆ ತಡವಿಲ್ಲ ಘಮ್ಮನೆ ಸೆಗಣಿ ವಾಸನೆ. ಅಲ್ಲಿರುವ  ಗೋದಲಿಯಲ್ಲಿ ಬಾಯಾಡಿಸುವ ನಾಲಕ್ಕಾರು ರಾಸುಗಳು. ಎತ್ತು, ಎಮ್ಮೆ,  ಹಸುಗಳಿಗೆ ಬೇರೆ ಬೇರೆ ಜಾಗ. ಕರೆಯುವ ಹಸುವಿಗೆ ವಿಶೇಷ ಗಮನ.  ಅವುಗಳ ತಲೆಯ ಮೇಲೆ ಇರುವ ಅಟ್ಟದಲ್ಲಿ ಹುಲ್ಲು, ಸೊಪ್ಪೆ, ದಂಟುಗಳ ಸಂಗ್ರಹ. ಅನುಕೂಲಸ್ಥ ರೈತರ ಮನೆಯ ರಾಸುಗಳಿಗೆ ಬೇರೆ ದನದ ಮನೆಯಲ್ಲಿರುವ ಭಾಗ್ಯ. ಆದರೆ ಸರ್ವೆ ಸಾಮಾನ್ಯವಾಗಿ ಕಣ್ಣೆದುರೇ ತಮ್ಮ ಪಶು ಸಂಪತ್ತು ಇರಲಿ ಎಂಬುದು ಅನೇಕರ ಆಶಯ. ಮೆಟ್ಟಿಲ ಪಕ್ಕವೇ ಕಲಗಚ್ಚು. ಅದರಲ್ಲಿ ಅಕ್ಕಿ ಬಸಿದ ನೀರಿನ ಜೊತೆ ಅಳಿದುಳಿದ ಆಹಾರ ಪದಾರ್ಥಗಳನ್ನೂ ಹಾಕುವರು. ಕೊನೆಗೆ ಹೆಚ್ಚಾದ ಮಜ್ಜಿಗೆ ಕೂಡಾ ಅದರಲ್ಲೇ. ದನಗಳು ಅವುಗಳನ್ನು ಕುಡಿಯುವುದನ್ನು ನೋಡುವುದು ಮಾತ್ರವಲ್ಲ ಅದರ ಸೊರ್‌ ಎಂದು ಹೀರುವ ಸದ್ದನ್ನೂ ಕೇಳಬಹುದಾಗಿತ್ತು. ಅವು ಕಲಗಚ್ಚು ಕುಡಿಯುವ ಪ್ರಮಾಣ ಹಾಗೂ ಸದ್ದಿನಿಂದಲೇ, ಅವುಗಳ ಆರೋಗ್ಯ ಸ್ಥಿತಿಯನ್ನು ಪತ್ತೆ ಹಚ್ಚಲಾಗುತ್ತಿತ್ತು. ಯಾರಾದರೂ ಸಶಬ್ದವಾಗಿ ಕುಡಿದರೆ ಕಲಗಚ್ಚು ಕುಡಿದಂತೆ  ಹೀರುತ್ತಾನೆ ಎಂದು ಹಾಸ್ಯ ಮಾಡುವರು.

ದನಗಳು ಮನೆಯಲ್ಲೆ ಇದ್ದರೆ ಅವುಗಳ ಕಾಳಜಿ ಮಾಡಲು ಅನುಕೂಲ. ಮತ್ತು ಮಧ್ಯರಾತ್ರಿ ಎದ್ದು ಇನ್ನೂ ಒಂದು ಒಬ್ಬೆ ಮೇವು ಹಾಕಲು ಅನುಕೂಲ. ಬೇರೆ  ಕಡೆ ಇದ್ದರೆ ಎದ್ದು ಹೋಗಿ ಹುಲ್ಲು ಹಾಕಲು ನಿದ್ದೆಗೇಡು. ಇಲ್ಲವೇ ಅದಕ್ಕೆ ಒಬ್ಬ ಆಳನ್ನೇ ಇಡಬೇಕು. ಅಲ್ಲಿಯೇ ಒಂದೋ ಎರಡೋ ಮೇಕೆಗಳು. ಕುರಿಗಳು ಸಾಮಾನ್ಯವಾಗಿ ಮನೆಯಲ್ಲಿ ಇರುವುದಿಲ್ಲ, ಕಾರಣ ಅವುಗಳನ್ನು ಹೆಚ್ಚು ಜತನದಿಂದ ಕಾಯಬೇಕು. ಜೊತೆಗೆ, ಮನೆತುಂಬ ಕೂದಲ ರಾಶಿ, ರಾಶಿ.  ಅವಕ್ಕೆ ಬೇರೆಯೇ ಆದ ವ್ಯವಸ್ಥೆ. ಕುರಿ ಹಟ್ಟಿಗಳಲ್ಲಿ ನೂರಾರು ಕುರಿಗಳನ್ನು ಒಟ್ಟಿಗೆ ತರಬುವರು. ಒಂದೋ ಎರಡೊ ಕುರಿ ಇದ್ದವರು ಯಾರದಾದರೂ  ಮಂದೆಯಲ್ಲಿ ಬಿಡುವರು. ಅದಕ್ಕೆ ಪ್ರತಿಫಲವಾಗಿ ಅವುಗಳ ಉಣ್ಣೆ ನೀಡಿದರೆ  ಸಾಕು. ಅವರೇ ಅವನ್ನು ಮೇಯಿಸುವರು. ಅವನ್ನು ಕಾಯಲು ನಾಯಿಗಳು.  ಕುರಿ ಕಾಯುವ ನಾಯಿಗಳು ಬಹು ಚುರುಕು. ತೋಳ, ನರಿಗಳ ಸುಳಿವು ಸಿಕ್ಕಿದರೂ ಸಾಕು ಹುಲಿಯಂತೆ ಮೇಲೆ ಬಿದ್ದು ಓಡಿಸುವವು. ಸದಾ ಮಂದೆಯ ಸುತ್ತು ತಿರುಗುತ್ತಾ ಯಾವುದೇ ಕುರಿಯೂ, ಮಂದೆಯಿಂದ ಅಗಲದಂತೆ ಅಜ್ಜಗಾವಲು ಇರುವವು. ಆದರೆ ಮನೆ ಕಾಯುವ ನಾಯಿಗಳೆ ಬೇರೆ. ಅವುಗಳು ಮನುಷ್ಯರನ್ನು ವಾಸನೆಯಿಂದಲೇ ಗುರುತಿಸಬಲ್ಲವು. ಹೊಸಬರು ಬಂದರೆ  ಒಳ ಬರದಂತೆ ತಡೆ ಹಾಕುವವು. ರಾತ್ರಿ ಹೊರಗೆ ಕಟ್ಟೆಯ ಮೇಲೆ ಮಲಗಿದಾಗ ಯಾವ ಮಾಯದಲ್ಲೋ ಬಂದು ಹೊದಿಕೆಯಲ್ಲಿ ಸೇರಿಕೊಂಡು  ಬಿಡುವುದು. ಪಾಪ ಅದಕ್ಕೂ ಬೆಳಗಿನ ಚಳಿಯಲ್ಲಿ ಬೆಚ್ಚಗೆ  ಮಲಗಬೇಕೆನಿಸುವುದು ಸಹಜ.   

ದನದಕ್ಕಿಯಿಂದ ಮುಂದೆ ಹೋದರೆ ತುಸು ಎತ್ತರದಲ್ಲಿ ಐದು ಅಂಕಣದ ಇಲ್ಲವೆ ಏಳು ಅಂಕಣಗಳ ಅಟವಾಳಿಗೆ. ಅಲ್ಲಿ ಎರಡು ಬದಿಯಲ್ಲಿ ನೆಲಗೊಣಿಗಳು.  ಅದಕ್ಕೆ ತೂಗುಹಾಕಿದ ಬಾರುಕೋಲು, ಕಣ್ಣಿ, ಹಗ್ಗ ಇತ್ಯಾದಿ ಕೃಷಿ ಉಪಕರಣಗಳು. ಮೊಳ ಅಗಲದ ಗೋಡೆಗಳಲ್ಲಿ ಗುಣೇವುಗಳು, ಅವುಗಳಲ್ಲಿಯೇ ಬಟ್ಟೆ ಬರೆ ಇಡುವುದು. ಅಂಕಣಕ್ಕೆ ಅನುಗುಣವಾಗಿ ಕಂಬಗಳು ಈಗಿನ ಬಹುಮಹಡಿ ಕಟ್ಟಡದ ವಿನ್ಯಾಸಕ್ಕೆ ಇವೇ ಮಾದರಿಯಾಗಿರಬಹುದು.  ಆದರೆ ಅಲ್ಲಿ ಗೋಡೆ ತೆಳು ಇಲ್ಲಿ ಬಹು ದಪ್ಪ. ಹೊರ ಗೋಡೆಗಳಂತೂ ಮಾರು ಅಗಲದವು. ಎಂತಹ ಘನಂದಾರಿ ಕಳ್ಳನು ಕೂಡಾ ಕನ್ನ ಹಾಕಲಾರ. ಇನ್ನು  ಕಂಬಗಳ ಮೇಲೆ ಬೋದಿಗೆ. ಅದು ಅವರಿವರ ಕೈಗೆ ಎಟುಕಬಾರದ ವಸ್ತುಗಳನ್ನು ಇಡಲು ಬಹು ಪ್ರಶಸ್ತ ಜಾಗ. ಎತ್ತರದ ಆಳಾದರೆ ಸರಿ, ಇಲ್ಲವಾದರೆ ಸ್ಟೂಲು ಹತ್ತಿ ನೋಡಬೇಕು. ಅಂದು ಹೆಣ್ಣು ಗಂಡು ಕೊಡುವ ಮುಂಚೆ ಮನೆತನ ನೋಡಲು ಬರುವ ಪದ್ಧತಿ. ಆಗ ಮನೆತನ ಪರವಾ ಇಲ್ಲ ಏಳು ಅಂಕಣದ ಮನೆ ಇದೆ ಎಂದು ಸಮಾಧಾನ ಪಡುವರು. ಬಡವರಾದರೆ ಅವನಿಗೆ ಏನಿದೆ ಅಂತ ಹೆಣ್ಣು ಕೊಡುವುದು, ಅಡವಿಯಲ್ಲಿ ಹೊಲವಿಲ್ಲ, ಊರಲ್ಲಿ ಮನೆ ಇಲ್ಲ, ಹುಡುಗಿ ಯಾವ ಸುಖ ಸುರಿದುಕೊಳ್ಳುವಳು ಎಂದು ನಿರಾಕರಿಸುವರು. ಮನೆಯೊಂದಿದ್ದರೆ ಸರಿ, ತಲೆಯ ಮೇಲೆ ನೆರಳಿದೆ, ರಟ್ಟೆ ಗಟ್ಟಿ ಇದೆ, ದುಡಿದು ತಿನ್ನುವರು ಎಂಬ ಧೈರ್ಯ ಅವರಿಗೆ.  ನಂತರ ಅಡುಗೆಮನೆ ಹಾಗೂ ಅಡಕಲ ಕೋಣೆ. ಕೆಲವು ಕಡೆಯಲ್ಲಿ ಅದೇ ದೇವರ ಮನೆಯೂ ಆಗಬಹುದು. ಹೊಸದಾಗಿ ಮದುವೆಯಾದವರ ಮಲುಗುವ ಮನೆಯೂ ಆಗುವುದು. ಅಟವಾಳಿಗೆ ಮಧ್ಯದಲ್ಲಿ ಕೆರಸಿ ಕಟ್ಟಲು, ಗುಮ್ಮಿ ಇಡಲು, ಕಾಳಿನಚೀಲ ಇಡಲು ಜಾಗ. ಆಗ ಮಲಗಲು ಸಾಧಾರಣವಾಗಿ ಕವದಿ. ಗುಡಾರ ಮತ್ತು ಚಳಿಗಾಲದಲ್ಲಿ ಕಂಬಳಿ. ಬೇಸಗೆಯಲ್ಲಂತೂ ಎಲ್ಲರ ನಿದ್ದೆ ಮನೆಯ ಹೊರಗೆ. ಕಟ್ಟೆಯ ಮೇಲೆ. ಇಲ್ಲವೆ ಅಂಗಳದಲ್ಲಿ ಹೊರಸು ಹಾಕಿಕೊಂಡು ಮಲಗುವುದು. ಮಾಳಿಗೆಯ ಮೇಲೆ ಮಲಗುವವರು  ಸಾಧಾರಣ ಈಚಲು ಚಾಪೆ ಹಾಸಿಕೊಂಡು ಕಂಬಳಿ ಮುಸುಗಿಟ್ಟು ಮಲಗಿದರೆ ಬಿಸಿಲು ಬೀಳುವ ತನಕ ಗಡದ್ದು ನಿದ್ದೆ. ಮಧ್ಯರಾತ್ರಿಯಲ್ಲಿ  ಜಡಿ ಮಳೆ ಬಂದರೂ ಗೊತ್ತಾಗದು. ಅಷ್ಟು ಗಟ್ಟಿಯಾದ ಕಂಬಳಿಗಳು. ಅವುಗಳ ಮುಂದೆ ಈಗಿನ  ಪ್ಲಾಸ್ಟಿಕ್‌ ಮಳೆ ಅಂಗಿ ಏನೇನೂ ಅಲ್ಲ.

ಮನೆಯಲ್ಲಿನ ಜನದ ಜತೆ ಇರುವ  ಸಹ ಜೀವಿಗಳು ಎಂದರೆ ದನ, ಮೇಕೆ,  ಸೊಳ್ಳೆ, ತಗಣಿ, ಹೇನು, ಕೂರೆ, ಉಣ್ಣಿ, ಇಲಿ, ಹೆಗ್ಗಣ, ಬೆಕ್ಕು ಮತ್ತು ನಾಯಿ.  ಸೆಗಣಿ ಇಲ್ಲದ ತಿಪ್ಪೆ ಇಲ್ಲ, ತಗಣಿ ಇಲ್ಲದ ಮನೆ ಇಲ್ಲ, ಎಂಬ ಮಾತು ಜನ ಜನಿತ. ಬಹುತೇಕ ಮನೆಗಳು  ಮಣ್ಣಿನ ಮಾಳಿಗೆಯವು. ಗೋಡೆಗಳಿಗೆ ಮಣ್ಣಿನ ಮಲ್ಲ. ಅವುಗಳಿಗೆ ವರ್ಷಕೊಮ್ಮೆ ಸುಣ್ಣ ಕೆಮ್ಮಣ್ಣುಗಳ ಸಾರಣೆ. ಇನ್ನು ಕಂಬ, ತೊಲೆ, ಕಿಟಕಿ, ಮಂಚ ಎಲ್ಲವೂ ಕಟ್ಟಿಗೆಯವು. ಅವುಗಳ ಸಂದಿಯಲ್ಲಿ ತಗಣಿಗಳ ವಾಸ. ಕತ್ತಲಾಯಿತೆಂದರೆ ಸಾಕು ತಗಣಿಗಳ ಹಿಂಡು ದಾಳಿ ಇಡುತಿದ್ದವು.  ಸೀಮೆ ಎಣ್ಣೆ ದೀಪದ ಮಸಕು ಬೆಳಕಿನಲ್ಲಿ ಅವುಗಳದೇ ಕಾರುಬಾರು. ಹಾಸಿಗೆ ಹೊದಿಕೆಗಳನ್ನು ಮಾಳಿಗೆಯ ಮೇಲೆ ಒಣ ಹಾಕುವುದರಿಂದ ಬಿಸಿಲಿನಲ್ಲಿ ಅವು ಇರುತ್ತಿರಲಿಲ್ಲ. ಆದರೆ ರಾತ್ರಿ ಹಾಸಿಗೆಗೆ ತಲೆ ಹಚ್ಚಿದ ಅರ್ಧಗಂಟೆಯಲ್ಲಿ ಬಂದು ಮುತ್ತಿಕ್ಕುತಿದ್ದವು. ಒಂದು ಜಂಪು ನಿದ್ರೆ ಆದ ನಂತರ ಶುರುವಾಗುವುದು ಮೈ ಕೆರೆತ. ಮಕ್ಕಳು, ಹರೆಯದವರಿಗೆ ಅದು ಗೊತ್ತೇ ಆಗದಷ್ಟು ಮರನಿದ್ರೆ. ಅವರಿಂದ ನಿತ್ಯ ರಕ್ತದಾನ. ಹುಡುಗರು ಹುಪ್ಪಡಿ  ಹೆಚ್ಚು ಇದ್ದ ಮನೆಯಲ್ಲಿ ತಗಣಿಗಳಿಗೆ ನಿತ್ಯ ಸಂತರ್ಪಣೆ. ಆದರೆ ಮಧ್ಯ ವಯಸ್ಕರು ಮತ್ತು, ವಯಸ್ಸಾದವರದೆ ಫಜೀತಿ. ಮನೆಯ ಹೆಂಗಸರು ಅರ್ಧರಾತ್ರಿ ಎದ್ದು ಚಿಮಣೀ ಬುಡ್ಡಿ ಹಿಡಿದು ತಗಣಿಯ ಬೇಟೆಗೆ ತೊಡಗುವರು. ದೀಪ ಹತ್ತಿತೆಂದರೆ ಸಾಕು ಅವು ಸಾಲುಗಟ್ಟಿ ಬರುವವು. ಅವನ್ನು ಹಿಡಿದು ಒರೆಯುವದೇ ಒಂದು ಕೆಲಸ. ತಾಳ್ಮೆ ಇದ್ದವರು ಅವನ್ನು ನೆಲಕ್ಕೆಹಾಕಿ ಕಾಲಿನಿಂದ ಒರೆಯುವರು. ಅವುಗಳ ಸಂಖ್ಯೆ ಹೆಚ್ಚಾಗಿದ್ದರೆ. ಕಂಡದ್ದನ್ನು ಕಂಡಲ್ಲೆ ಕೈನಿಂದ ಒರೆಯುವರು. ಅನೇಕರ ಮನೆಯ ಸುಣ್ಣದ ಗೋಡೆಗಳು ರಕ್ತಸಿಕ್ತ. ಎಲ್ಲೆಲ್ಲು ಕೆಂಪು ಕಲೆಗಳು... ನನ್ನ ಅಮ್ಮನಂತೂ ಒಂದು ನಿದ್ರೆಯಾದ ಮೇಲೆ ಎದ್ದು ತಗಣಿ ಸಂಹಾರಕ್ಕೆ ಸಿದ್ಧರಾಗುತ್ತಿದ್ದರು. ಅವರು ಒಂದು ಬಟ್ಟಲಲ್ಲಿ ಚಿಮಣಿ ಎಣ್ಣೆ ಹಾಕಿಕೊಂಡು  ತಗಣಿಗಳನ್ನು ಹಿಡಿದು ಹಿಡಿದು ಅದರಲ್ಲಿ ಮುಳುಗಿಸುವರು. ಅವು ರಕ್ತ ಬೀಜಾಸುರನ ವಂಶದವು. ಒಂದನ್ನು ವರೆದರೆ ಅದರ ರಕ್ತದಿಂದ ಹತ್ತು ಹುಟ್ಟತ್ತವೆ ಎಂದು ಹೇಳುವುದು ವಾಡಿಕೆ. ಅದಕ್ಕೆ ಅವುಗಳ ರಕ್ತ ಹೊರ ಬರದಂತೆ ಚಿಮಣಿ ಎಣ್ಣೆಯಲ್ಲಿ ಮುಳಗಿಸಿ ಕೊಲ್ಲುವರು. ತಗಣಿ ಬೇಟೆಯಲ್ಲಿ ಎಷ್ಟು ತಲ್ಲೀನರಾಗಿರುತ್ತಿದ್ದರೆಂದರೆ ಗಂಟೆಗಳು ಕಳೆದದ್ದೆ ಗೊತ್ತಾಗುತ್ತಲೇ ಇರಲಿಲ್ಲ. ಯಾರಾದರೂ ಹೊಸಬರು ಬಂದರೆ ಅವರ ಪಾಡು ದೇವರಿಗೇ ಪ್ರೀತಿ.  ಬೆಳಗಾಗುವುದರಲ್ಲಿ ಮೈ ಎಲ್ಲ ಗಾದರಿ.. ಪಟ್ಟಣದವರೊಬ್ಬರು ನಮ್ಮಲ್ಲಿಗೆ ಬಂದಾಗ  ಸೊಳ್ಳೆ ಪದರೆ ತಂದು  ಕಟ್ಟಿಕೊಂಡು ಮಲಗಿದರೆ  ಬೆಳಗಾಗುವುದರಲ್ಲಿ ಪರದೆಯ ಮೇಲುಭಾಗದ ನಾಲಕ್ಕು ಮೂಲೆಗಳಲ್ಲಿ ಕುಪ್ಪೆ ಕುಪ್ಪೆ ತಗಣಿಗಳು. ವಾರವಿರಬೇಕೆಂದು ಬಂದವರು ಮಾರನೆ ದಿನವೇ  ಪರಾರಿ. ಆ ನಮ್ಮ ಮಣ್ಣಿನ ಮನೆಯಲ್ಲಿ ನೇತು ಹಾಕಿದ್ದ ಭೂಪಟ, ಕ್ಯಾಲೆಂಡರುಗಳೆಲ್ಲವೂ, ಕಡುಗೆಂಪು ಬಣ್ಣದ ಸಾಲು ಸಾಲು. ಇರುವೆ ಸಾಲುಗಳಂತೆ, ತಗಣಿಯ ಕಾಲೋನಿ. ಅವುಗಳನ್ನು ನಾಶ ಮಾಡಲು ಸಾಧ್ಯವಾಗದೇ, ಅವುಗಳೊಂದಿಗೆ ಸಹಬಾಳ್ವೆ ಘೋಷಿಸಲಾಗಿತ್ತು.  ಹಾಸಿಗೆಯಲ್ಲಿ ಹಾಗೂ ಕಂಬದಲ್ಲಿ ಇರದಿದ್ದರೆ ಆಯಿತು ಎಂದು ಅಘೋಷಿತ ಒಪ್ಪಂದ ಜಾರಿಯಾಗಿತ್ತು.. ಅವುಗಳ ಸರ್ವನಾಶ ಆಗಲಂತೂ ಸಾಧ್ಯವೇ ಇರಲಿಲ್ಲ. ಏಕೆಂದರೆ, ಇಡೀ ಮನೆಯೇ ಮರ ಹಾಗೂ ಮಣ್ಣಿನಿಂದ ಮಾಡಿದ್ದಾಗಿತ್ತು. ಹಾಗಾಗಿ, ಎಲ್ಲಕ್ಕೂ ಔಷಧಿ ಹೊಡೆಯುವುದು ಸಾಧ್ಯವೇ ಇರಲಿಲ್ಲ.  
ನಮ್ಮಲ್ಲಿ ಆ ಸಮಯದಲ್ಲಿ ಕಳ್ಳರ ಕಾಟ ಹೆಚ್ಚು. ಅದೂ  ಕಳ್ಳತನ ಎಂದರೆ ಒಂದೆ ರೀತಿಯಲ್ಲಿ ಅಲ್ಲ. ಗೋಡೆಗೆ ಕನ್ನಹಾಕಿ ಒಳ ಬಂದು, ಕಳ್ಳತನ ಮಾಡುವವರು ಕೆಲವರಾದರೆ, ಮಣ್ಣಿನ ಮಾಳಿಗೆಯಾದ್ದರಿಂದ ಮೇಲಿನ ಮಣ್ಣು ತೆಗೆದು ಮನೆಯೊಳಗೆ ಇಳಿಯುವದು ಇನ್ನೊಂದು ರೀತಿ. ಕಿಟಕಿ ಇದ್ದರೆ ಅದರ ಸರಳನ್ನು ಕಿತ್ತು ಒಳಬಂದು ಕಳ್ಳತನ ಮಾಡುವವರೂ ಇದ್ದರು. ನಮ್ಮಅಜ್ಜಿ ಹೇಳುತಿದ್ದ  ಪಂಜುಗಳ್ಳರು ಮಾತ್ರ ಕಾಣೆಯಾಗಿದ್ದರು. ಅವರು ಮೊದಲೆ ಎಚ್ಚರಿಕೆ ನೀಡಿ ಬರುತಿದ್ದರಂತೆ. ಅದೂ ತಲೆಬಾಗಿಲನ್ನು ಚಪ್ಪ ಕೊಡಲಿಯಿಂದ ಕೊಚ್ಚಿ ಹಾಕಿ ಒಳಗೆ ಬರುವುರು. ಅವರು ಪಂಜು ಹಿಡಿದು ಬರುವರು. ಆಗ ಬ್ಯಾಂಕು ಇರಲಿಲ್ಲ. ಕಾಗದದ ನೋಟುಗಳೂ ಕಡಿಮೆ. ಎಲ್ಲ ಬರಿ ಬೆಳ್ಳಿ, ಬಂಗಾರ. ಅವರು ಮನೆ ನುಗ್ಗಿ ಎಲ್ಲರನ್ನೂ ಕಟ್ಟಿ ಹಾಕಿ ಪಂಜಿನಿಂದ ಮನೆಯ ಯಜಮಾನನ ಮುಖ ಸುಟ್ಟು, ಅಡಗಿಸಿ ಇಟ್ಟ ಬೆಳ್ಳಿ ಬಂಗಾರ ಹೊತ್ತು ಕೊಂಡು ಹೋಗುವರಂತೆ. ಅದಕ್ಕಾಗಿ ಅವರ ಕಾಲದಲ್ಲಿ ಗೋಡೆಯಲ್ಲಿ ನೆಲದಲ್ಲಿ ಬೆಳ್ಳ್ಳಿರೂಪಾಯಿ ಮತ್ತು ಬಂಗಾರವನ್ನು ಗಡಿಗೆಯಲ್ಲಿಟ್ಟು ನೆಲದಲ್ಲಿ ಹೂತಿಡಲು ಕಾರಣವಂತೆ. ಅವು ಮನೆ ಸುಟ್ಟರೂ ಬೆಳ್ಳಿ ಗಟ್ಟಿಯಾಗಿ ಬೆಲೆ ಹೆಚ್ಚಾಗುತಿದ್ದವು.

ಬಂಗಾರದ ಮಾತು ಹೇಳುವ ಹಾಗೆ ಇಲ್ಲ. ನೂರಾರು ವರ್ಷವಿಟ್ಟರೂ ಕಂದುವುದಿಲ್ಲ, ಕುಂದುವುದಿಲ್ಲ. ದೊಡ್ಡ ಮನೆತನದವರು ಹಳೆಯಮನೆ ಕೆಡವಿ ಹೊಸಮನೆ ಕಟ್ಟಿಸುವಾಗ ಸದಾ ಎದುರಲ್ಲೇ ಇರುವರು. ಹಿರಿಯರ ಹೂತಿದ್ದ ಹೊನ್ನು ಸಿಗಬಹುದು ಎಂಬ ಆಶೆ. ನಮ್ಮದು ವಿಜಯನಗರದ ಸಾಮ್ರಾಜ್ಯದ ಭಾಗ. ಹಾಗಾಗಿ ಗಾರೆಯ ಮನೆಗಳಲ್ಲಿ ಅನೇಕರಿಗೆ ಚಿನ್ನದ ವರಹ ತುಂಬಿದ ತಂಬಿಗೆ, ಬೆಳ್ಳಿನಾಣ್ಯ ತುಂಬಿದ ಕೊಡ ಸಿಕ್ಕಿದ ಇತಿಹಾಸವಿದೆ. ಅದಕ್ಕಾಗಿ ಹಳೆಯ ತಲೆಮಾರಿನ ಮನೆಯವರು ಹೆಬ್ಬಾಗಿಲನ್ನು ಹಲಸಿನಮರದಿಂದ ಮಾಡಿಸುತಿದ್ದರು,  ಅದೂ ದೈತ್ಯ ಗಾತ್ರದವು. ಅದರ ವೈಶಿಷ್ಟ್ಯವೆಂದರೆ ಹೊರಭಾಗದಲ್ಲಿ ಕೊಡಲಿಯಿಂದ ಹೊಡೆಯಲು ಮೊದಲು ಮಾಡಿದಾಗ ಒಳಭಾಗದಲ್ಲಿ ಬಾಗಿಲಿಗೆ ನೀರು ಎರಚುತ್ತಾ ನಿಲ್ಲುತಿದ್ದರಂತೆ. ಹಲಸು ಹಸಿಯಾದಾಗ ಅದನ್ನು ಕತ್ತರಿಸುವುದು  ಬಹು ಕಷ್ಟ ಸಾಧ್ಯ. ಹೀಗಾಗಿ ಬೆಳ ತನಕ ಕಡಿಯಲು ಪ್ರಯತ್ನಿಸಿ ಸೋತು ಸುಣ್ಣವಾಗಿ ಶಾಪ ಹಾಕುತ್ತಾ ಹೋಗುತಿದ್ದರಂತೆ. ಈ ಘಟನೆ ನಮ್ಮ ಅಜ್ಜಿ ಚಿಕ್ಕವರಾಗಿನದು. ನಮ್ಮ ಕಾಲಕ್ಕೆ ಆಗಲೇ ಕಾಗದದ ಹಣ ಬಂದಿದ್ದರಿಂದ ಪಂಜುಗಳ್ಳರ ಹಾವಳಿ ಇಲ್ಲದಾಗಿತ್ತು. 

ಅಪ್ಪಾಜಿರಾಯರು ಬರೆಯುವ ಅರರಿಂದ ಅರವತ್ತು ಸರಣಿ ೧೨:ದನವೇ ಧನ

ಹಳ್ಳಿಯಲ್ಲಿ ಒಬ್ಬ ರೈತನ ಹಿರಿಮೆಯನ್ನು ಅರಿಯಲು ಅವನಲ್ಲಿನ ರಾಸುಗಳ ಸಂಖ್ಯೆಯನ್ನು ಅಳತೆಗೋಲಾಗಿ ಪರಿಗಣಿಸುವ ಕಾಲ ಅದಾಗಿತ್ತು. ಪಶು ಸಂಪತ್ತು ಹೆಚ್ಚಿದಷ್ಟೂ ಅವನ ಅಂತಸ್ತು ಜಾಸ್ತಿ. ಎಂಟೆತ್ತಿನ ಕಮತ ಇಟ್ಟವನೆಂದರೆ ದೊಡ್ಡ ಕುಳ ಎಂದೇ ಲೆಕ್ಕ. ದನ ಧಾನ್ಯ ಸಮೃದ್ಧಿಯಿರುವ ಮನೆ ಧನ್ಯ. ಆ ಸಂಖ್ಯೆ ಹೆಚ್ಚಿದರೆ ದೇಶಕ್ಕೆ ಸುಖ ಎಂಬ ಮಾತಿನಲ್ಲಿ ನಂಬಿಕೆ.

ಹಸು ಎಂದರೆ ಗೋಸಂಪತ್ತು. ಆಕಳು ಹೆಣ್ಣು ಕರು ಹಾಕಲಿ ಅಥವಾ ಹೋರಿ ಕರ ಹಾಕಲಿ ಎರಡು ಒಂದೇ. ಆದರೆ  ಎಮ್ಮೆ ಹೆಣ್ಣುಗರು ಹಾಕಿದರೆ ಖುಷಿ. ಕೋಣಗರ ಈದರೆ ಅಸಮಾಧಾನ. "ನೆಚ್ಚಿದ ಎಮ್ಮೆ ಕೋಣ ಈಯಿತು" ಎಂಬ ಗಾದೆಯೆ ಆ ಮನೋಭಾವದ ಪ್ರತೀಕ. ಸಾಧಾರಣವಾಗಿ ಕೋಣಗರುಗಳು ಹೆಚ್ಚು ಕಾಲ ಬಾಳುತ್ತಿರಲಿಲ್ಲ. ಕಾರಣ ಬಹುಶಃ ಅವನ್ನು ನಿರ್ಲಕ್ಷ್ಯ ಮಾಡುವದರಿಂದಲೆ ಇರಬೇಕು. ಅವಕ್ಕೆ ತಾಯಿಯ ಹಾಲನ್ನೂ ಕುಡಿಯಲು ಬಿಡುತ್ತಿರಲಿಲ್ಲ.  ಎಮ್ಮೆ ಅಷ್ಟು ಸೂಕ್ಷ್ಮದ ಪ್ರಾಣಿಯಲ್ಲ. ಕರು ಇರಲಿ ಬಿಡಲಿ ಹತ್ತಿ ಕಾಳು, ಹಿಂಡಿ ರುಬ್ಬಿ, ತಿನ್ನಲು ಅದರ ಮುಂದೆ ಇಟ್ಟರೆ ಯಾವುದೇ ತೊಂದರೆ ಇಲ್ಲದೆ ಹಾಲು ಕರೆಯುವುದು. ಅದರ ಈ ದಪ್ಪ ಚರ್ಮವೇ, ಮನುಷ್ಯರ ಮನಸ್ಸನ್ನೂ ದಪ್ಪ ಮಾಡಿ, ಕ್ರೂರಿಗಳನ್ನಾಗಿಸಿರಬೇಕು.

ಆದರೆ ಆಕಳುಗಳು ಹಾಗಲ್ಲ. ಬಹು ತುಂಟಾಟ ಸ್ವಭಾವದವು. ಕರು ಕಾಣದಿದ್ದರೆ ಹಾಲು ಏರಿಸಿಕೊಳ್ಳುವವು. ಕೆಚ್ಚಲನ್ನು ಎಷ್ಟೇ ಹಿಂಡಿದರೂ ತೊಟ್ಟು ಹಾಲೂ ಸಿಗದು. ಅದರ ಮೇಲೆ ಕಾಲು ಝಾಡಿಸಿ ಒದೆಯುವ ದಢಾಸಿತನ ಬೇರೆ. ನಮ್ಮ ಮನೆಯಲ್ಲಿ ಸದಾ ಹೈನು. ಅದೂ ಒಂದು ಹಸುವಾದರೂ ಇದ್ದೆ ಇರುತ್ತಿತ್ತು. ಹಾಲು ಕೊಡುವುದರಲ್ಲಿ ಎಮ್ಮೆಯನ್ನು ಹೋಲಿಸಿದರೆ ಕಡಿಮೆಯಾದರೂ ಅದೇ ಬೇಕು. ಕಾರಣ ಗೋಮಾತೆ ಸೇವೆಯಿಂದ ಪುಣ್ಯ ಬರುವುದು ಎಂಬ ನಂಬಿಕೆ.

ಅನೇಕ ಸಾಧು ಸಜ್ಜನರನ್ನು ಬಣ್ಣಿಸುವಾಗ, "ಆತ ಬಿಡಪ್ಪ, ಹಸುವಿನಂಥ ಮನುಷ್ಯ" ಎಂದು ಹೇಳುವವರನ್ನು ಕಂಡರೆ ನನಗೆ ನಗು ತಡೆಯಲಾಗುವುದಿಲ್ಲ. ಆಕಳುಗಳ ತರಲೆ, ಅವುಗಳನ್ನು ಪಳಗಿಸುವ ತಂತ್ರಗಳು ಕಂಡುಂಡ ನನಗೆ, ಹಸುವಿನ ಹೋಲಿಕೆ, ದ್ವಂದ್ವಾರ್ಥದಿಂದ ಕೂಡಿದ್ದಿರಬಹುದೇ ಎಂಬ ಸಂಶಯ ಇದ್ದೇ ಇದೆ. ಅಂದಹಾಗೆ, ಪುಣ್ಯಕೋಟಿ ಎಂಬ ಹಸುವಿನ ಹಾಡುಗಬ್ಬ ಹೃದಯ ತಟ್ಟದ ಕ್ಷಣವಿರಲಿಲ್ಲ. ಆಹಾರ ಸರಪಳಿ, ಜೈವಿಕ ನಿಯಮ ಎಂಬಿತ್ಯಾದಿ ಹಲವು ವಿಷಯ ವೈವಿಧ್ಯಗಳು ತಲೆ ತಟ್ಟಿದ ಮೇಲೂ, ಆ ಹಾಡಿನ ಸಮ್ಮೋಹಕತೆ ಮಾಸಿಲ್ಲ.

ಎಪ್ಪತ್ತರ ದಶಕದಿಂದೀಚೆಗೆ, ಸಿಂಧಿ ಹಸುಗಳು ಬಂದ ಮೇಲೆ, ಹಸುವಿಗೂ ಎಮ್ಮೆಗೂ ಅಂಥ ವ್ಯತ್ಯಾಸವೇನೂ ಇಲ್ಲ. ಜವಾರಿ ತಳಿಗಳ ಚುರುಕು, ಚಲಾಕಿತನ ಇವಕ್ಕಿಲ್ಲ. ಈ ಸಿಂಧಿ ಹಸು ನಮ್ಮ ಪುಣ್ಯಕೋಟಿಯಲ್ಲ ಎಂಬುದು ಖಾತ್ರಿ. ನನ್ನ ಮಟ್ಟಿಗೆ, ಇದೂ ಒಂದು ಹಾಲು ಹೊರಸೂಸುವ ಯಂತ್ರ. ಜವಾರಿ ಹಸುವಿನ ಹಾಲಿಗಿಂತಲೂ ಹೆಚ್ಚು ಗಟ್ಟಿಯಾಗಿದ್ದರೂ, ಆ ಹಾಲೇ ದಿವಿನ.

ನಮ್ಮಲ್ಲಿ ಒಂದು ಆಕಳು ಇತ್ತು. ಕಾಳಿ ಎಂಬ ಅಪರೂಪದ ಹೆಸರು ಅದಕ್ಕೆ. ಹಸುವಿಗೆ ಯಾವಾಗಲೂ ಗಂಗೆ, ಗೌರಿ, ತುಂಗೆ ಎಂದೇ ಕರೆಯಲಾಗುತ್ತದೆ. ಲಕ್ಷ್ಮಿ ಎಂಬ ಹೆಸರೂ ತೀರಾ ಕಡಮೆ. ಎಲ್ಲ ಶಿವನ ವಾಹನದ ವಂಶದವರು ಎಂದು ಹಾಗಿರಬೇಕು. ಕಾಳಿಯ ಹಾಲನ್ನು ಒಬ್ಬರೇ ಹಿಂಡಬೇಕು. ಅದೂ ಅಮ್ಮನೇ ಆಗಬೇಕು. ಬೇರೆಯವರು ಬಂದರೆ ಮುಗಿಯಿತು. ಅಕಸ್ಮಾತ್ತಾಗಿ ಅಮ್ಮ ಊರಿಗೆ ಹೋದರೆ ಹಾಲು ಕರೆಯಲು ಆಗುವುದೇ ಇಲ್ಲ. ಕೆಲವು ಸಲ ಬೇರೆಯವರನ್ನು ಕರೆಯಲು ಕೇಳಿಕೊಂಡಾಗ ಅಕಸ್ಮಾತ್ತಾಗಿ ಅವರೇನಾದರೂ ಮಾತನಾಡಿದರೆ ಸಾಕು, ಹಾಲು ತುಂಬಿದ ತಂಬಿಗೆ ಮಾರು ದೂರ ಹೋಗಿ ಬೀಳುವುದು. ಸಗಣಿಯ ಸಾರಣೆ ಇವರಿಗೂ.

ಹಾಲು ಹಿಂಡುವ ಕಷ್ಟ ಹಾಲು ಕುಡಿಯುವವರಿಗೆ ಗೊತ್ತಿರಲಿಕ್ಕಿಲ್ಲ. ಕೆಲವೊಮ್ಮೆಯಂತೂ, ತುಂಟ ಆಕಳುಗಳಿಗೆ ಹಾಲು  ಕರೆಯಲು ಇಬ್ಬರು ಬೇಕೇ ಬೇಕು. ನಾವು ಅದರ ಹಿಂಗಾಲುಗಳಿಗೆ ಹಗ್ಗ ಕಟ್ಟಿ ಹಿಡಿದಾಗ, ಇನ್ನೊಬ್ಬರು ಹಾಲು ಹಿಂಡುವರು. ಇನ್ನು ಒಂದು ಆಕಳು ಬಹು ಚಾಲಾಕಿ. ಅದನ್ನು ಮೇಯಲು ಬಿಟ್ಟಾಗ ಗೋಣು ಬಗ್ಗಿಸಿ ತಮ್ಮ ಕೆಚ್ಚಲಿಗೆ ತಾವೇ ಬಾಯಿ ಹಾಕಿ ಹಾಲನ್ನು ಚಪ್ಪರಿಸಿ ಬಿಡುತ್ತಿತ್ತು. ಸಂಜೆ ಮನೆಗೆ ಬಂದಾಗ ಹಾಲು ಹಿಂಡಲು ನೋಡಿದಾಗ ಕೆಚ್ಚಲು ಬರಿದಾಗಿರುತಿತ್ತು. ಅದಕ್ಕೆ ಅದನ್ನು ಹೊರಗೆ ಬಿಡುವಾಗ ಅದರ ಪಕ್ಕೆಗೆ ಚೂಪಾದ ಕೋಲುಗಳನ್ನು ಮುಂಬದಿಯಲ್ಲಿ ಬರುವಂತೆ ಹೊಟ್ಟೆಗೆ ಕಟ್ಟಿ ಬಿಡುತಿದ್ದೆವು. ಹಾಲು ಕುಡಿಯಲು ತಲೆ ಹಿಂದೆ ತಿರುಗಿಸಿದರೆ ಸಾಕು ಚೂಪಾದ ಕೋಲು ಅದರ ಮುಖಕ್ಕೆ ಚುಚ್ಚುವದು. ಅನಿವಾರ್ಯವಾಗಿ ಅದು ತನ್ನ ಅಭ್ಯಾಸವನ್ನು ನಿಲ್ಲಿಸಿತು.

ಇನ್ನು ಒಂದು ಆಕಳು ಬಹು ಸಾಧು. ಚಿಕ್ಕ ಮಕ್ಕಳು ಕೆಚ್ಚಲಿಗೆ ಬಾಯಿಹಾಕಿದರೂ ಸುಮ್ಮನಿರುತಿತ್ತು. ಯಾರಾದರೂ ಬರಲಿ ತುಸು ತವಡು (ಹೊಟ್ಟು) ಇಟ್ಟರೆ ಸಾಕು ಹಾಲು ಕರೆದರೆ ಸುಮ್ಮನೆ ಇರುವವು. ಕೆಲವು ಆಕಳುಗಳು ಬಹು ತುಂಟಲ ಮಾರಿಗಳು ಊರ ದನದೊಂದಿಗೆ ಮೆಯಲು ಬಿಟ್ಟಾಗ ಗುಂಪು ತೊರೆದು ಹಸಿರು ಕಂಡ ಕಡೆ ನುಗ್ಗುವವು. ಅವನ್ನು ಹತೋಟಿಯಲ್ಲಿಡುವುದು ಬಹು ಕಷ್ಟ. ಅದಕ್ಕೆ ಹೊರಗೆ ಬಿಡುವಾಗ ಭಾರವಾದ ಮರದ ಕೊರಡನ್ನು ಅವುಗಳ ಕೊರಳಿಗೆ ಗುದ್ದಿಕತ್ತಿ ಬಿಡುತ್ತಿದ್ದೆವು. ಆಗ ಅವುಗಳ ಹಾರಾಟ ತುಸು ಕಡಿಮೆಯಾಗುವುದು. ಇನ್ನೂ ಮೊಂಡದನಗಳಾದರೆ ಅವುಗಳ ಕೊಂಬು ಮತ್ತು ಒಂದು ಮುಂಗಾಲನ್ನು ಹಗ್ಗದಿಂದ ಕಟ್ಟಲಾಗುವುದು. ಆಗ ಅದು ತಲೆ ತಗ್ಗಿಸಿಯೇ ನಡೆಯಬೇಕು. ಓಡುವ ಮಾತೇ ಇಲ್ಲ. ಮೇಲಾಗಿ ಯಾರನ್ನಾದರೂ ಇರಿವ ಭಯವಿಲ್ಲ.

ಸಾಧಾರಣವಾಗಿ ಊರ ದನಗಳನ್ನೆಲ್ಲ ಕಾಯಲು ಒಬ್ಬರು ಇರುತ್ತಿದ್ದರು. ನಿಗದಿತ ಸಮಯಕ್ಕೆ ಸರಿಯಾಗಿ ಅವುಗಳನ್ನು ಗುಂಪುಗೂಡಿಸಿಕೊಂಡು ಊರ ಹೊರಗೆ ಮೇಯಿಸಲು ಹೋಗುವರು. ಸಾಧಾರಣವಾಗಿ ಒಂದು ದನಕ್ಕೆ ಇಷ್ಟು ಎಂದು ಅವರಿಗೆ ದುಡ್ಡುಕೊಡುವ ವಾಡಿಕೆ.  

ನನಗಂತೂ ಕೊನೆಯವರೆಗೆ  ಈಡೇರದ  ಆಶೆ ಎಂದರೆ ಎಮ್ಮೆಯ ಸವಾರಿ. ರೊಟ್ಟಿ ಬುತ್ತಿ ಕಟ್ಟಿಕೊಂಡು ಎಮ್ಮೆಯ  ಮೇಲೆ ಕುಳಿತು ಸಾಗುವ ದನ ಕಾಯುವ ಹುಡುಗರ ಗತ್ತು ಗಮ್ಮತ್ತು ನನಗೆ ಬರಲೇ ಇಲ್ಲ. `ಸಂಪತ್ತಿಗೆ ಸವಾಲ್' ಚಿತ್ರದಲ್ಲಿ ವರನಟ ರಾಜಕುಮಾರ್ ಎಮ್ಮೆ ಮೇಲೆ ಕುಳಿತು `ಯಾರೇ ಕೂಗಾಡಲಿ...' ಎಂದು ಹಾಡಿದಾಗ ನನಗೆ ಅಲ್ಲಿ ನಾನೇ ಕುಳಿತಂತೆ ಅನಿಸಿತ್ತು.

ನಮ್ಮ ಊರಲ್ಲಿ ಒಂದು ಮನೆತನದವರಿಗೆ ಎಮ್ಮೆಕಾಯುವವರು ಎಂದೇ ಹೆಸರಿದೆ. ವಿಚಿತ್ರ  ಎಂದರೆ ಎಮ್ಮೆಗೆ ಒಂದು ರುಪಾಯಿ ಕಾಯುವ ಕೂಲಿಯಾದರೆ  ಹಸುವಿಗೆ ಎರಡು ರುಪಾಯಿ. ಹೋಗುವಾಗ ಮನೆಯಿಂದ  ಬಿಡಿಬಿಡಿಯಾಗಿ ಹೋಗಿ ಊರ ಹೊರಗೆ ಗುಂಪಾಗಿ ಮೇಯಲು ಹೊರಡುವವು. ಬರುವಾಗ ಗುಂಪಾಗಿ ಬರುವುದರಿಂದ ಅವುಗಳ ಗೊರಸಿನಿಂದ ಹೊರಡುವ ಧೂಳಿನಿಂದ ಆಕಾಶದಲ್ಲಿ ಅಷ್ಟೆತ್ತರದ ವರೆಗೆ ಕೆಂಪು ಹರಡುವುದು. ಅವು ನಿತ್ಯ ಸೂರ್ಯಾಸ್ತಕ್ಕೆ ಮುಂಚೆ ನಿಗದಿತ ಸಮಯದಲ್ಲೆ ಬರುವವು. ಆ ಸಮಯವೆ ಗೋಧೂಳಿ ಮುಹೂರ್ತ ಬಲು ಶ್ರೇಷ್ಠ ಎಂಬ ನಂಬಿಕೆಯುಂಟು. ಅವು ಬೆಳಗ್ಗೆ ೯ಕ್ಕೆ ಹೊರಟರೆ ಸಂಜೆ ಐದಕ್ಕೆ ಮನೆಗೆ ಬರುವವು. ಮಕ್ಕಳನ್ನು ಸಾಲಿಗೆ ಕಳುಹಿಸುವಂತೆ ಅವನ್ನು ಕಳುಹಿಸಬೇಕು. ಸಾಧಾರಣವಾಗಿ ಎಲ್ಲ ದನಗಳು ಮೇಯಲು ಗುಂಪಿನೊಡನೆ ಹೋಗಿ ಹೊಟ್ಟೆತುಂಬ ಮೇವು ತಿಂದು, ನೀರು ಕುಡಿದು ಆರಾಮಾಗಿ ಕಾಲಾಡಿಸಿಕೊಂಡು ಸಂಜೆ ಸಲೀಸಾಗಿ ಹೋಗಿ ಮನೆಗೆ ಬರುವವು. ಆದರೆ ತುಡುಗು ದನಗಳು ಮಾತ್ರ ದನ ಕಾಯುವವರ ಕಣ್ಣು ತಪ್ಪಿಸಿ ಕಂಡವರ ಹೊಲಕ್ಕೆ ನುಗ್ಗುವವು. ಆಗ ಸಮಸ್ಯೆಯ ಆರಂಭ. ಸಾಧಾರಣವಾಗಿ ಯಾರೂ ಆಕಳುಗಳಿಗೆ ಹೊಡೆಯುವುದಿಲ್ಲ. ಆದರೆ ಬೆಳೆ ಹಾಳಾಗುವುದನ್ನು ಸಹಿಸಲು ಸಾಧ್ಯವೇ. ಅದಕ್ಕಾಗಿಯೇ ಊರಲ್ಲಿ ಬನ್ನಿ ದೊಡ್ಡಿ ಎಂಬ ವ್ಯವಸ್ಥೆಯುಂಟು. ಅದಕ್ಕೆ ಕೊಂಡವಾಡ ಎಂತಲೂ ಹೆಸರು. ತುಡುಗು ಮಾಡಿ ಬೆಳೆ ತಿನ್ನುವ ದನಗಳನ್ನು ಬನ್ನಿ ದೊಡ್ಡಿಗೆ ಹಾಕುವರು.

ಅದರ ಬೀಗದ ಕೈ ಊರ ಗೌಡನ ಹತ್ತಿರ ಇರುವುದು. ಅದು ಸಾಧಾರಣವಾಗಿ ಎಂಟು ಹತ್ತು ದನ ಹಿಡಿಯಬಹುದಾದ ಮಾಳಿಗೆ ಇಲ್ಲದ ಕಟ್ಟಡ. ಅದಕ್ಕೆ ಕಬ್ಬಿಣದ ಸರಳಿರುವ ಬಾಗಿಲು. ಯಾರು ಬೇಕಾದರು ಬಂದು ಒಳಗೆ ಏನಿದೆ ಎಂದು ನೋಡಬಹುದು. ಅದರಲ್ಲಿ ದನವನ್ನು ಕೂಡಿ ಹಾಕಿದರೆ ಸಂಬಂಧಿಸಿದವರು ಬಂದು ಗೌಡನಿಗೆ ದಂಡದ ದುಡ್ಡು ಕಟ್ಟಿ ಬಿಡಿಸಿಕೊಂಡು ಹೋಗಬೇಕು. ಅಕಸ್ಮಾತ್‌ ಯಾರೂ ತಿಂಗಳುಗಟ್ಟಲೆ ಬಾರದಿದ್ದರೆ ಅದನ್ನು ಹರಾಜು ಹಾಕುವರು. ಅಲ್ಲಿಯತನಕ ಅವಕ್ಕೆ ಒಳಗೆ ಮೇವು ನೀರಿನ ವ್ಯವಸ್ಥೆ ಮಾಡಲಾಗುತ್ತಿತ್ತು. ಅದರ ಮಾಲೀಕನು ತಡಮಾಡಿದಂತೆ ದಂಡ ಹೆಚ್ಚಾಗುವುದು. ದಿನಕ್ಕೆ ಇಷ್ಟು ಎಂದು ನಿಗದಿಯಾಗಿರುವುದು. ಅದು ಊರ ಗೌಡನ ಅಧಿಕಾರಕ್ಕೆ ಒಳಪಟ್ಟಿದ್ದು. ಸಾಮಾನ್ಯವಾಗಿ ದನಗಳು ಕಳೆದರೆ ಅದರ ಯಜಮಾನ ಮಾಡುವ ಮೊದಲ ಕೆಲಸ ಎಂದರೆ ಆಸು ಪಾಸಿನ ಊರುಗಳಲ್ಲಿನ ದೊಡ್ಡಿಯನ್ನು ನೋಡುವುದು. ಅಲ್ಲಿ ಇಲ್ಲದಿದ್ದರೆ ಕಿರುಬನ ಬಾಯಿಗೆ ಬಲಿಯಾಗಿದೆ ಎಂದೆ ಅರ್ಥ. ಆಗಿನ ಕಾಲದಲ್ಲಿ ದನಗಳ್ಳರು ಬಹು ಕಡಿಮೆ. ಮಾಂಸಕ್ಕಾಗಿ ಮಾರಾಟ ಮಾಡುವುದಂತೂ ಯೋಚಿಸಲೂ ಸಾಧ್ಯವಿರಲಿಲ್ಲ. ದೊಡ್ಡಿಯ ಹಣ ಸರ್ಕಾರಕ್ಕೆ ಕಟ್ಟಬೇಕು ನಿಜ. ಆದರೆ ಊರ ಗೌಡನು ಅಷ್ಟೋ ಇಷ್ಟೋ ಕಟ್ಟುವನು. ಅದು ಅವನ ಆದಾಯದ ಬಾಬ್ತು. ಬೆಳೆ ಹಸಿರಾಗಿದ್ದಾಗಲಂತೂ ದೈನಂದಿನ ಆದಾಯ ಖಾತ್ರಿ. ತಳವಾರನಿಗೆ ತುಸು ಹಣ ನೀಡಿ ಅವುಗಳ ಮೇವು ನೀರಿನ ವ್ಯವಸ್ಥೆ ಮಾಡಲಾಗುತಿತ್ತು.

ಕರು ಸತ್ತ ಆಕಳಿನ ಹಾಲು ಕರೆಯುವುದು ತುಸು ಕಷ್ಟದಾಯಕ. ಆದರೆ ಮಾನವನೂ ಬುದ್ದಿ ಇರುವ ಪ್ರಾಣಿ. ಹಾಗೆ ಸತ್ತ ಕರುವಿನ ಚರ್ಮ ಸುಲಿಸಿ ಅದರೊಳಗೆ ಹುಲ್ಲು ತುಂಬಿ ಹಾಲು ಕರೆಯುವಾಗ ಆಕಳ ಮುಂದೆ ಇಟ್ಟರೆ ಅದು ಆಪ್ಯಾಯತೆಯಿಂದ ಅದನ್ನು ನೆಕ್ಕಲು ಮೊದಲು ಮಾಡಿದಾಗ ಹಾಲು ತನ್ನಿಂದ ತಾನೇ ಕೆಚ್ಚಲಲ್ಲಿ ತೊರೆ ಬಿಡುವುದು.  ಸರಬರನೆ ಹಾಲು ಕರೆಯುವರು.

ನಮ್ಮ ಕಡೆ ಕೋಣ ಸಾಕುವವರು ಬಹುವಿರಳ. ವಂಶಾಭಿವೃದ್ಧಿಗಂತೂ ಊರಮ್ಮನಿಗೆ ಬಿಟ್ಟ ಕೋಣ ಇದ್ದೇ ಇರುತಿತ್ತು. ಎಲ್ಲೋ ಒಂದೆರಡು ಕೋಣಗಳು ಒಡ್ಡರ ಬಂಡಿಗೆ ಹೂಡಲು ಬಳಕೆಯಾಗುತಿದ್ದವು. ಕಡಲ ತೀರದಲ್ಲಿ ಬಹುಪ್ರೀತಿಯ ಹವ್ಯಾಸವಾದ ಕಂಬಳ ನಮ್ಮಲ್ಲಿ ಇಲ್ಲ. ಹಾಗಾಗಿ ಕೋಣಗಳಿಗೆ ಪ್ರಾಧಾನ್ಯ ಅಷ್ಟಕ್ಕಷ್ಟೇ. ಊರಿಗೆ ಒಂದೋ ಎರಡೋ ಹೋರಿಗಳು ಇರಿಯುತ್ತಿದ್ದವು. ಆಕಳು ಬೆದಗೆ ಬಂದಾಗ ಆ ಹೋರಿ ಇದ್ದವರಲ್ಲಿಗೆ ಹೋಗಿ ಅವರಿಗೆ ಹಣ ನೀಡಿ ಹಾಯಿಸುತಿದ್ದರು. ಅದೂ ಹಣ ಕೊಟ್ಟರೂ ಏನೋ ಉಪಕಾರ ಮಾಡಿದವರಂತೆ ಆಡುತಿದ್ದರು. ಆದರೆ ಕೃತಕ ಗರ್ಭಧಾರಣೆ ವಿಧಾನವು ಪಶುಸಂಗೋಪನಾ ಇಲಾಖೆಯಿಂದ ವ್ಯಾಪಕವಾಗಿ ಪ್ರಚಾರಕ್ಕೆ ಬಳಕೆ ಬಂದುದರಿಂದ, ಇದುವರೆಗಿನ ಆ ಒಂದು ಹೆಮ್ಮೆಯ ಕೋಡೂ ಮುರಿಯಿತು. ಇಂದಿನ ಸಮಾನತೆಯ ಯುಗದಲ್ಲಿ ದನಗಳಲ್ಲಿ  ಆದದ್ದು ಜನಗಳಲ್ಲಿ ಆಗುವದೂ ವಿಕಾಸ. ಮುಂದಿನ ಹಂತವೇನೋ ಎಂಬ ಆತಂಕ ಸಹಜವಾಗಿ ಮೂಡಿದೆ. ಈಗ ಭುವನ ಸುಂದರಿ ಐಶ್ವರ್ಯ ರೈ ಬಗೆಗೂ ಇಂಥದೇ ಆರೋಪಗಳು ಬಂದಿವೆ.

ದನಗಳ ಮಾರಾಟಕ್ಕಾಗಿಯೇ ವಾರಕ್ಕೊಮ್ಮೆ ಸಂತೆ ನಡೆಯುವುದು. ದನದ ಸಂತೆ ಎಂದು ಕರೆದರೂ, ಅಲ್ಲಿ ಕೋಳಿ, ಕುರಿ, ಮೇಕೆ ಸಹ ವ್ಯಾಪಾರಕ್ಕೆ ಇರುವವು. ಅಲ್ಲಿ ಹೆಚ್ಚಾಗಿ ಹೈನಿನ ರಾಸುಗಳದೆ ವ್ಯಾಪಾರ. ಒಳ್ಳೆಯ ಎತ್ತುಗಳನ್ನು ದನದ ಜಾತ್ರೆಯಲ್ಲಿಯೇ ಖರೀದಿಸುವರು. ಅದರಲ್ಲೂ ಘಾಟಿ ಸುಬ್ರಮಣ್ಯ, ಚುಂಚನಗಿರಿ ಮತ್ತು ಮುಡುಕುತೊರೆ ದನದ ಜಾತ್ರೆಗಳು ಬಹು ಪ್ರಸಿದ್ಧವಾದವು. ಅಲ್ಲಿ ಸಾವಿರಾರು ರಾಸುಗಳು ಕೈಬದಲಾಗುತ್ತವೆ. ಕೋಟಿಗಟ್ಟಲೆ ವ್ಯವಹಾರ. ಜನ ಅಷ್ಟು ದೂರವಾದರೂ ಹೋಗಿತರುವರು. ಜಾತ್ರೆಯಲ್ಲಿ ದನದ ವ್ಯಾಪಾರವೇ ಒಂದು ವಿಭಿನ್ನ ಕಸರತ್ತು. 

ಮಾರುವವರು, ಕೊಳ್ಳುವವರು ರುಮಾಲಿನ ಒಳಗೆ ಕೈ ಇಟ್ಟುಕೊಂಡು ವ್ಯವಹಾರ ಕುದುರಿಸುವರು. ಅಲ್ಲಿ ಬೆರಳುಗಳಿಂದಲೇ ಬೆಲೆ ನಿಗದಿ. ಅದು ಹೇಗೆ ಎಂಬುದು ನನಗೆ ಅಂದು ತಿಳಿದಿರಲಿಲ್ಲ. ಇಂದಿಗೂ ಅರ್ಥವಾಗಿಲ್ಲ. ದನದ ಬೆಲೆಯು ಅದರ ಜಾತಿ, ಬಣ್ಣ, ಹಲ್ಲುಗಳ ಸಂಖ್ಯೆ, ಅದರ ಸುಳಿಗಳು, ಅದರ ಸ್ವಭಾವ ಮತ್ತು ಕೊಂಬುಗಳ ವಿನ್ಯಾಸದ  ಮೇಲೆ ನಿಗದಿಯಾಗುತ್ತಿತ್ತು. ಮನೆಯಲ್ಲಿ ಹುಟ್ಟಿ ಬೆಳೆದ ದನಗಳನ್ನು ಮಾರುವಾಗ ಅನೇಕರು ಕಣ್ಣೀರು ಹಾಕುವ ಸಂದರ್ಭಗಳೂ ಸಾಕಷ್ಟಿದ್ದವು. ವಿಶೇಷವಾಗಿ ಆಕಳುಗಳನ್ನು ಮಾರಿದಾಗ ಅವೂ ಕೊಂಡವರ ಜತೆ ಹೋಗದೆ ಮೊಂಡಾಟ ಮಾಡುವವು. ಕೆಲ ದನಗಳಂತೂ, ಮಾರಾಟವಾದ ಮೇಲೂ, ತಮ್ಮ ಹಳೇ ಮಾಲೀಕರ ಮನೆಯನ್ನು ಹುಡುಕಿಕೊಂಡು ಹರದಾರಿ ದೂರ ನಡೆದಿದ್ದೂ ಉಂಟು.

ದನದ ಜಾತ್ರೆಗಳು ಎರಡುವಾರಗಳ ವರೆಗೆ ನಡೆಯುವವು. ಲಕ್ಷಗಟ್ಟಲೆ ಬೆಲೆಬಾಳುವ ಎತ್ತುಗಳೂ ಉಂಟು. ಅನೇಕರ ಮನೆಯಲ್ಲಿ ಮೂರುತಲೆಮಾರಿನ ಆಕಳುಗಳು ಇರುವದು ಸಾಮಾನ್ಯ.

ಅಲ್ಲದೇ ಹೆಣ್ಣು ಮಕ್ಕಳಿಗೆ ಮೊದಲ ಹೆರಿಗೆಯಾದಾಗ ತೌರು ಮನೆಯವರು ಕರೆಯುವ ಆಕಳನ್ನು ಕೊಡುಗೆಯಾಗಿ ನೀಡುವ ಪದ್ಧತಿಯು ಇದೆ. ಕೆಲವರಂತೂ ಕರೆಯುವ ರಾಸನ್ನು ಮಗಳಿಗೆ ನೀಡಿ ಮತ್ತೆ ಅದು ಗಬ್ಬವಾದಾಗ ವಾಪಸ್ಸು ಪಡೆದು ಪುನಹ ಕರು ಹಾಕಿದ ಮೇಲೆ ಕಳುಹಿಸುವರು. ನಮ್ಮ ಮನೆಯಲ್ಲಿ ಒಂದು ಆಕಳು ಬಲು ಹುಷಾರಿ. ಬೆಲೆ ಇದ್ದಾಗ ಎಲ್ಲ ಹಸಿರುಮಯ. ಬೆಳಗ್ಗೆ ಜಂಗಳ ದನಗಳ  ಜತೆ ಮೇಯಲು ಹೋದದ್ದು ಸಂಜೆ ಬರುತ್ತಲೇ ಇರಲಿಲ್ಲ. ಅರ್ಧರಾತ್ರಿಯ  ಮೇಲೆ ಮನೆ ಮುಂದೆ ಮುಚ್ಚಿದ ಬಾಗಿಲ ಎದುರು ನಿಂತು ಅಂಬಾ ಎನ್ನುತಿತ್ತು. ಸರಿರಾತ್ರಿಯವರೆಗೆ ಹೊಲದಲ್ಲಿ ಹೊಟ್ಟೆ ಬಿರಿಯುವಂತೆ ತಿಂದು ಬರುವುದು. ಹೊಲದ ಮಾಲಕರು ಬೆಳಗ್ಗೆ  ಬಂದು ನೋಡಿದಾಗ ಬೆಳೆ ಎಲ್ಲ ಹಾಳು.
ಈಗಲೂ ಹಾಲು ಹೈನು ಸಮೃದ್ಧಿಯಾಗಿದೆ. ಹಾಲಿನ ಹೊಳೆ ಹರಿಯುವುದು ಎಂಬ ಮಾತು ಒಂದು ಅರ್ಥದಲ್ಲಿ ನಿಜವಾಗಿದೆ. ಕೇಳಿದ್ದೆಲ್ಲಾ ಕೊಡುವ ದೇವಧೇನುವಿನ ಕತೆ, ದಿಟವೋ ಸಟೆಯೋ ಗೊತ್ತಿಲ್ಲ. ಆದರೆ, ಆಕೆಯ ಮಗಳ ಹೆಸರು ಈಗ ನಂದಿನಿ ಬ್ರಾಂಡಾಗಿದೆ. ಸೊಪ್ಪು ಹಾಕದೇ ಹಾಲು, ಹೆಪ್ಪು ಹಾಕದೇ ಮೊಸರು, ಮೊಸರೇ ಇಲ್ಲದ ಬೆಣ್ಣೆ, ಜಿಡ್ಡಿಲ್ಲದ ತುಪ್ಪ ಎಲ್ಲ ಬಂದಿದೆ. ತಿಂಗಳುಗಟ್ಟಳೇ ಕಾಪಿಡುವ ಹಾಲು ಹಾಗೂ ಅದರ ಉತ್ಪನ್ನಗಳು ಬಂದಿವೆ.

ಆದರೆ ಕಾಣೆಯಾಗಿರುವುದು ಜನ-ದನಗಳ ನಡುವಿರುವ ಮಧುರ ಬಾಂಧವ್ಯ. ಗ್ರಾಮೀಣ ಸಮಾಜದಲ್ಲಿ ಜನ ದನಗಳ ಬಾಳು ಸಮರಸದಿಂದ ನಡೆವ ಕಾಲ ಅದಾಗಿತ್ತು. ಆಕಳು ಎಂದರೆ ಅನೇಕರಿಗೆ ಪೂಜ್ಯ ಭಾವನೆ. ಅದು ಎಷ್ಟರಮಟ್ಟಿಗೆ ಎಂದರೆ, ಹಾಲು ಮತ್ತಿತ್ತರ ಉತ್ಪನ್ನಗಳನ್ನು ಪಂಚಾಮೃತ ಪಂಚಗವ್ಯ ಹಾಗೂ ಕೀಟನಾಶಕವಾಗಿಯೂ ಅದರ ಗಂಜಲವನ್ನೂ ಬಳಸುವ ವೈಶಿಷ್ಟ್ಯಅಥವಾ ವಿಪರ್ಯಾಸ ನಮ್ಮ ಸಂಸ್ಕೃತಿಯದ್ದು.

ಆಕಳು ಪವಿತ್ರ ಎಂಬ ನಂಬಿಕೆ ಎಷ್ಟು ಆಳವಾಗಿ ನೆಲೆಯೂರಿದೆ ಎಂದರೆ, ಏನೆಲ್ಲ ವೈಜ್ಞಾನಿಕ ಪ್ರಗತಿ, ಅಗಾಧ ಸಂಪತ್ತು ಗಳಿಸಿದ್ದರೂ, ನೂತನ ಗೃಹಪ್ರವೇಶಕ್ಕೆ ಕರುಸಹಿತ ಹಸು ಬೇಕೇ ಬೇಕು. ಈಗ ಅವುಗಳನ್ನು ಕೆಲ ಕಾಲಕ್ಕೆ ಬಾಡಿಗೆ ನೀಡುವುದೇ ನಗರದಲ್ಲಿ ಒಂದು ದೊಡ್ಡ ದಂಧೆ. ಮೊನ್ನೆ ನನ್ನ ಶಿಷ್ಯನೊಬ್ಬ ಕರುವಿನ ಸಮೇತ ಹಸುವನ್ನು ಹೊಸ ಮನೆಗೆ ಕರೆಸಿದ್ದೆ. ಅದು ಗಂಜಳ ಹಾಕಿತು... ಎಂಥ ಶುಭ ಶಕುನ ಎಂದು ಅಭಿಮಾನದಿಂದ ಹೇಳಿಕೊಂಡ. ಈ ಹೈಟೆಕ್ ಸಿಟಿಯಲ್ಲಿ ಅದೆಲ್ಲಿಂದ ತಂದ್ಯೋ ಮಾರಾಯ ಎಂದರೆ, ಆತ ಅದಕ್ಕಾಗಿ ಸಾವಿರಾರು ರುಪಾಯಿ ತೆತ್ತಿದ್ದು ಗೊತ್ತಾಯಿತು.  "ಅಲ್ಲ ಕಣಯ್ಯ... ಇನ್ನೊಂದಿಷ್ಟು ದುಡ್ಡು ಎಣಿಸಿದ್ದರೆ, ದನವೊಂದನ್ನೇ ಕಟ್ಟಬಹುದಾಗಿತ್ತಲ್ಲಯ್ಯ. ಹಾಲಿಗೆ ಹಾಲೂ ಆಯಿತು, ಅದರ ಆರೈಕೆ ಮಾಡ್ತ ಏಕ್ಸರ್ ಸೈಜೂ ಆಗ್ತಿತ್ತು. ಅಲ್ಲದೇ, ಸಾಕಷ್ಟು ಗಂಜಲ ಫ್ರೀ... ಮತ್ತೂ ಅದಕ್ಕೇನೋ ಥರಾವಾರಿ ಕಾಯಿಲೆಗೆ ಮದ್ದೂ ಹೌದಂತೆ" ಎಂದೆ. ಆತ "ಹೆ.. ಹೇ..." ಎಂದು ಹುಳ್ಳಗೆ ನಕ್ಕ.

ಪ್ಲಾಸ್ಟಿಕ್ಕು ಕವರುಗಳೊಳಗೆ, ಕಾಮಧೇನುವಿನ ಮಗಳು ನಂದಿನಿ ಅವತರಿಸುವುದಕ್ಕೂ ಮುಂಚಿನ ದಿನಗಳಲ್ಲಿ, ಗೋದಾನ ಜಾರಿಯಲ್ಲಿತ್ತು. ಆದರೀಗ, ನಂದಿನಿಯ ಅವತಾರವಾಗಿದೆ ಸ್ವಾಮಿ, ಹಾಗಾಗಿ, ಯಾರೂ ಹಸುವಿನ ದಾನ ಪಡೆಯಲ್ಲ. ಬದಲಿಗೆ ಶಕ್ತ್ಯಾನುಸಾರ ಬಂಗಾರ ಅಥವಾ ಬೆಳ್ಳಿಯ ತಗಡಲ್ಲಿ ಹಸುವಿನ ಚಿತ್ರ ಬರೆದೋ ಅಥವಾ ಡಾಲರ್ ಲೆಕ್ಕದಲ್ಲಿ ದುಡಿಮೆಯಿದ್ದರೆ ಪುಟ್ಟದೊಂದು ವಿಗ್ರಹ ಮಾಡಿಸಿಯೋ ಕೊಡಿ ಎಂಬ ಸಲಹೆ ಬರುತ್ತದೆ. ಕಾರಣ ಕೆದಕಿದಾಗ ಗುರುಗಳು ಹೇಳಿದ ಲೌಕಿಕ ಸತ್ಯ ಹೀಗಿತ್ತು: ``ಹಾಲು ಬೇಕಂದರ ಕೊಂಡು ಕುಡಿ. ಮನ್ಯಾಗ ಆಕಳು ಕಟ್ಟಿದರೆ, ಹೆಂಡಿ (ಸಗಣಿ) ಹೊಡಿಯೋದ ಬದಕಾಗ್ತದ...

ಅಪ್ಪಾಜಿರಾಯರು ಬರೆಯುವ ಅರರಿಂದ ಅರವತ್ತು ಸರಣಿ ೧೪:ಹಳ್ಳಿಯ ಆಣೆ ಹಣ ಲೆಕ್ಕ

ಪ್ರತಿ ವರ್ಷ ಯುಗಾದಿಯ ಸಂಜೆಯೆ ಮುಂಬರುವ ವರ್ಷದ ಮುನ್ಸೂಚನೆಯನ್ನು ಊರಿನ ಗುಡಿಯಲ್ಲಿ ಪಂಚಾಂಗ ಶ್ರವಣದ ಮೂಲಕ ಹಿರಿಯರು ತಿಳಿಯುವರು. ಮಳೆ ಬೆಳೆಗಳ ಅಂದಾಜನ್ನು ಆಣೆ ಲೆಕ್ಕದಲ್ಲಿ ಅರಿಯುವರು. ನಾಲಕ್ಕಾಣೆ ಮಳೆ ಎಂದರೆ ಕೊರತೆ, ೮ ಆಣೆ ಮಳೆ ಎಂದರೆ ಪರವಾ ಇಲ್ಲ, ಹನ್ನೆರಡಾಣೆ ಎಂದರೆ ಸಮೃದ್ಧಿ ಅದಕ್ಕೂ ಹೆಚ್ಚಾದರೆ ಅತಿವೃಷ್ಟಿ. ಇದೆ ರೀತಿಯಲ್ಲಿ ಬೆಳೆಗಳ ಅಂದಾಜು. ಹೆಂಗಸರು ಮಕ್ಕಳು ಸಹ ಮಾರನೆ ದಿನ ಚಂದ್ರನನ್ನು ನೋಡಿ ಧನ ಮತ್ತು ಧಾನ್ಯದ ಅಂದಾಜು ಮಾಡುವರು. ಅಂದು ಕತ್ತಲಾಗುತ್ತಿದ್ದಂತೆಯೆ ಎಲ್ಲ ಮುಗಿಲ ಕಡೆ ಮುಖ ಮಾಡಿ ಚಂದ್ರದರ್ಶನಕ್ಕೆ ಹಂಬಲಿಸುವರು. ಹೇಳಿ ಕೇಳಿ ಬಿದಿಗೆ ಚಂದ್ರ. ಕಾಣುವುದು ತುಸು ಕಷ್ಟ. ಕಂಡೊಡನೆ ಸಂಭ್ರಮದಿಂದ ಎಲ್ಲರಿಗೂ ತೋರಿಸುವರು. ನಂತರ ಹಿರಿಯರಿಗೆ ನಮಿಸುವರು. ಆ ದಿನ ಚಂದ್ರ ಯಾವ ಕಡೆ ಹೆಚ್ಚು ವಾಲಿರುವನೋ ಎಂಬುದರ ಮೇಲೆ ಹಣದ ಬೆಲೆ ಜಾಸ್ತಿ ಇಲ್ಲವೆ ಧಾನ್ಯದ ಬೆಲೆ ಹೆಚ್ಚು ಎಂದು ವ್ಯಾಖ್ಯಾನವಾಗುವುದು.

ಧಾನ್ಯದ ಸಮೃದ್ಧಿ ಇದ್ದರೂ ಜನಕ್ಕೆ ಹಣದ ಪರದಾಟ ಬಹಳ. ಹಳ್ಳಿಯಲ್ಲಿ ತಿಂಗಳ ಸಂಬಳದವರು ವಿರಳ. ಸಾಲಿ ಮಾಸ್ತರು, ಸಕ್ಕರೆ ಜಿನ್ನಿನಲ್ಲಿನ ನೌಕರರು ತಿಂಗಳು ತಿಂಗಳು ಹಣದ ಮುಖ ನೋಡುವರು. ಅಂಗಡಿಯ ಒಂದೊ ಎರಡೊ ಮನೆಯವರನ್ನು ಬಿಟ್ಟರೆ ಉಳಿದವರೆಲ್ಲ ಆಯಗಾರರಾದ ಕಸಬುದಾರರು. ಇನ್ನೆಲ್ಲ ವಾರದ ಕೂಲಿಯವರು. ದೊಡ್ಡ ರೈತರನ್ನು ಬಿಟ್ಟರೆ ಉಳಿದವರು ದೊಡ್ಡ ಮೊತ್ತದ ನಗದು ಹಣ ಕಾಣುವುದು ಸುಗ್ಗಿಯಲ್ಲಿ ಕಾಳು ಮಾರಿದಾಗಲೆ.

ಹತ್ತಿರದ ಹೊಸಪೇಟೆಯಲ್ಲಿ ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಸ್ಟೇಟ್ ಬ್ಯಾಂಕು ಬಿಟ್ಟರೆ ದಕ್ಷಿಣ ಕನ್ನಡದ ಮೂಲದ ಒಂದೋ ಎರಡೋ ಖಾಸಗಿ ಬ್ಯಾಂಕುಗಳು ಇದ್ದವು. ಅಲ್ಲಿರುವವರು ಕಿಣಿ, ಪ್ರಭು, ಪೈ ಮತ್ತು ಕಾಮತ್‌. ಅವರು ಪಕ್ಕಾ ವ್ಯವಹಾರಸ್ಥರು. ಅಲ್ಲಿ ಹಣವಿದ್ದವರಿಗೆ ಮಣೆ. ಅಲ್ಲಿಗೆ ಹೋಗುವವರು ಹಣವಂತರು ಮತ್ತು ದೊಡ್ಡ ವ್ಯಾಪಾರ ವ್ಯವಹಾರ ಮಾಡುವವರು ಮಾತ್ರ. ಶಿಕ್ಷಕರೂ ಕೂಡಾ ಚೆಕ್‌ ಮೂಲಕ ಸಂಬಳ ಪಾವತಿಯಾಗುವ ಪದ್ದತಿ ಬರುವ ತನಕ ಬ್ಯಾಂಕಿನ ಕಟ್ಟೆ ಹತ್ತಿರಲಿಲ್ಲ. ಜನ ಸಾಮಾನ್ಯರಿಗಂತೂ  ಅಲ್ಲಿ ಕಾಲಿಡಲೆ ಭಯ. ಹಾಗಿದ್ದರೆ ಹಣಕಾಸಿನ ವ್ಯವಹಾರ ನಡೆಯುತ್ತಿರಲಿಲ್ಲ ಎಂದಲ್ಲ. ಹಳ್ಳಿಗಳಲ್ಲಿ ಸಾಕಷ್ಟು ಹಣಕಾಸಿನ ವ್ಯವಹಾರ ನಡೆಯುತಿತ್ತು. ಆದರೆ ಅದು ಖಾಸಗಿ ಸಾಹುಕಾರರ ಕಪಿಮುಷ್ಟಿಯಲ್ಲಿತ್ತು..

ರೈತರಿಗೆ ಹೊಲಮನೆ ಬಿಟ್ಟರೆ ಗೊತ್ತಿದ್ದುದು ದಲಾಲಿ ಅಂಗಡಿ ಮಾತ್ರ. ಅವರ ವ್ಯವಹಾರವೆಲ್ಲ ಅಲ್ಲಿಯೆ. ವರ್ಷದುದ್ದಕ್ಕೂ ಖರ್ಚಿಗೆ ಬೇಕಾದಾಗ ಅವರಲ್ಲಿಗೆ ಹೋಗಿ ಹಣ ಪಡೆಯುವರು. ಸುಗ್ಗಿಯಲ್ಲಿ ಮಾಲು ಅವರಿಗೆ ಹೊಡೆಯಬೇಕೆಂದು ಕರಾರು. ದವಸ ಧಾನ್ಯ ಬಂದಾಗ ಅಂಗಡಿ ಧಣಿ ತಮ್ಮ ದಲಾಲಿ, ಬಡ್ಡಿ, ಗಂಟು ಮುರಿದುಕೊಂಡ ಮಿಕ್ಕ ಹಣ ಕೊಡುವರು. ಅಂಗಡಿಯವರಿಗೆ ಎರಡು ಪಟ್ಟು ಲಾಭ. ಮಾರುವ ಮಾಲಿಗೆ ಅವರು ಹೇಳಿದ್ದೆ ದರ. ಅದನ್ನು ಮಾರಿಸಿದ್ದಕ್ಕೆ ದಲಾಲಿ ಬೇರೆ. ಕೊಟ್ಟ ಹಣಕ್ಕೆ ಬಡ್ಡಿ ಬರುವುದು.

ಇದರಿಂದ ನಗರದಲ್ಲಿನ ದಲಾಲಿ ಅಂಗಡಿಗಳು ಸುತ್ತಮುತ್ತಲಿನ ಹಳ್ಳಿಗರ ಪಾಲಿಗೆ ಅಕ್ಷಯ ಭಂಡಾರ. ವಾರ ವಾರವೂ ಅಂಗಡಿ ಕಟ್ಟೆ ಕಾದು ಹಣ ಪಡೆದು ಕೂಲಿ ಬಟವಾಡೆ ಮಾಡುವುದು ರೈತಾಪಿ ಮನೆತನದ ಹಿರಿಯನ ಕೆಲಸ. ಊರಲ್ಲಿ ಒಂದೆರಡು ಮನೆತನ ಬಿಟ್ಟರೆ ಎಲ್ಲರೂ ಬಾಕಿದಾರರೆ.. ಅನೇಕ ಮನೆತನಗಳಲ್ಲಿ ತಲೆ ತಲೆಮಾರಿನಿಂದ ಈ ವ್ಯವಹಾರ ನಡೆದಿರುವುದು. ಅವರು ಮಾತ್ರ ಸರಿ ರಾತ್ರಿ ಕೇಳಿದರೂ ಇಲ್ಲ ಎನ್ನದೆ ಕೊಡುವವರೂ ಇದ್ದರು.

ಹೆಚ್ಚು ಹಣ ಇದ್ದವರೂ ಅದನ್ನು ಬ್ಯಾಂಕಿನಲ್ಲಿ ಇಡುತ್ತಿರಲಿಲ್ಲ. ದಲಾಲಿ ಅಂಗಡಿಯಲ್ಲಿ ಇಡುವರು. ನನ್ನ ಗೆಳೆಯ ನಾರಾಯಣದೇವರ ಕೇರಿಯವನು. ಅದು ತುಂಗಭದ್ರಾ ನದಿಯ ಹಿನ್ನೀರಿನಲ್ಲಿ ಮುಳುಗಿದಾಗ, ನಮ್ಮ ಊರ ಹತ್ತಿರವೆ ಜಾಗ ಕೊಟ್ಟು ಹೊಸ ಊರು ಕಟ್ಟಿದರು. ಅದಕ್ಕೆ ಹೊಸ ಮಲಪನ ಗುಡಿ ಎಂದೆ ಹೆಸರು. ಅವರಿಗೆ ದೊಡ್ಡ ಮೊತ್ತದ ಪರಿಹಾರ ಬಂದಿತು. ಅದನ್ನು ಅವರು ಅಡತಿ ಅಂಗಡಿಯ ದಣಿಯಲ್ಲಿ ಇಟ್ಟಿದ್ದರು, ಬೇಕು ಬೇಕಾದಾಗ ಹೋಗಿ ಹಣ ತರುವರು. ಆದರೆ ಅದಕ್ಕೆ ಇವರಿಗೆ ಬಡ್ಡಿ ಕೊಡುತ್ತಿರಲಿಲ್ಲ. ಬದಲಾಗಿ ಹಣ ಸುರಕ್ಷಿತವಾಗಿ ಇಟ್ಟುಕೊಂಡುದಕ್ಕೆ ಇವರೆ ತುಸು ಹಣ ಕೊಡಬೇಕಾಗಿತ್ತು ಈಗ ಬ್ಯಾಂಕಿನಲ್ಲಿರುವ ಸೇಫ್ಟಿ ಲಾಕರ್‌ ತರಹ. ಇಲ್ಲವೆ ಸ್ವಿಸ್‌ ಬ್ಯಾಂಕ್‌ ನಂತೆ ಎನ್ನಬಹದು. ಅದೂ ಕಾಗದ ಪತ್ರ ಏನೂ ಇಲ್ಲ. ಬರಿ ನಂಬುಗೆಯ ವ್ಯವಹಾರ. ಒಂದು ಪುಸ್ತಕದಲ್ಲಿ ಹಚ್ಚಿಕೊಡುವರು. ಆದರೆ ಎಂದೂ ಧೋಕಾ ಮಾಡುತ್ತಿರಲಿಲ್ಲ.

ರೈತರಿಗೆ ಹಬ್ಬ ಹುಣಿಮೆ, ಮದುವೆ, ಒಳ್ಳೆಯದು ಕೆಟ್ಟದು ಎಲ್ಲದಕ್ಕೂ ಇಲ್ಲ ಎನ್ನದೆ ದುಡ್ಡು ಸಿಗುವುದು. ಆದರೆ ಮಳೆ ಬೆಳೆ ಕೈಕೊಟ್ಟಾಗ ಮಾತ್ರ ಫಜೀತಿ. ಬಾಕಿ ಉಳಿಸಿಕೊಂಡಾಗ ಚಕ್ರ ಬಡ್ಡಿ ಬೀಳುವುದು. ಅಲ್ಲದೆ ಸಾಲ ಕೊಡುವವರು ಕೈ ಹಿಡಿತ ಮಾಡುವರು. ಎರಡು ಮೂರು ವರ್ಷವೂ ಬೆಳೆ ಕೈಗೆ ಹತ್ತದಿದ್ದರೆ ಮಾತ್ರ ದಣಿಗಳು ನಿಷ್ಠುರವಾಗುವರು. ಜಮೀನು ಅವರ ಹೆಸರಿಗೆ ಒತ್ತೆ ಬೀಳುವುದು. ಜಮೀನು ಸಾಗು ಮಾಡಬಹುದು. ಆದರೆ ಸಾಲ ತೀರುವ ತನಕ ಅವರ ಹೆಸರಲ್ಲೆ ಇರುವುದು ನಮ್ಮ ಊರಲ್ಲಿ ಬಹುತೇಕ ಎಕರೆ, ಎರಡೆಕರೆ ಇದ್ದ ರೈತರ ಜಮೀನುಗಳು ಅವರ ಹೆಸರಲ್ಲಿ ಇರುತ್ತಿರಲಿಲ್ಲ. ಆದರೆ ಸಾಲ ಹೊರೆಯಾದಾಗ ಖಂಡಿತ ಖರೀದಿ ಮಾಡಿಸಿಕೊಂಡು ಮಾರುಕಟ್ಟೆ ದರಕ್ಕಿಂತ ತುಸು ಹೆಚ್ಚು ಬೆಲೆ ನಿಗದಿ ಮಾಡಿಕೊಳ್ಳುವರು. ಅಸಲು ಬಡ್ಡಿ ಚುಕ್ತಾ ಆದಮೇಲೆ ಉಳಿದರೆ ಹಣ ನೀಡುವರು. ರೈತರು ಮಾತ್ರ ಯಾವುದೆ ಕಾರಣಕ್ಕೂ ಜಮೀನು ಪರಭಾರೆಯಾಗಲು ಬಿಡುತ್ತಿರಲಿಲ್ಲ. ಧಣಿಗೆ ಗುತ್ತಿಗೆ ನೀಡಿ ಜೀವ ವತ್ತೆ ಇಟ್ಟು ಅದರಲ್ಲೆ ದುಡಿದು ಜಮೀನು ಉಳಿಸಿಕೊಳ್ಳುವರು. ಮೈಮುರಿದು ದುಡಿಯುವವರಿಗೆ ಭೂಮಿ ಕಳೆದುಕೊಳ್ಳುವ ಭಯವಿರಲಿಲ್ಲ. ಒಂಬತ್ತು ವರ್ಷದ ವರಿಂದ ಹಿಡಿದು ಎಂಬತ್ತು ವರ್ಷದವರಗೆ ಮನೆಯವರೆ ಒಂದಲ್ಲ ಒಂದು ಕೃಷಿ ಕೆಲಸ ಮಾಡುವರು. ಹಾಗಾಗಿ ಅವರ ಕೂಲಿಯೆ ಸಾಕಷ್ಟು  ಉಳಿತಾಯವಾಗುತಿತ್ತು. ಎತ್ತುಗಳು ಇದ್ದವರು ಇನ್ನೊಬ್ಬರ ಕೆಲಸಕ್ಕೆ ಉಚಿತವಾಗಿ ಹೋಗುವರು. ಅವರು ಅದಕ್ಕೆ ಪ್ರತಿಯಾಗಿ ಇವರಲ್ಲಿಗೆ ಬರುವರು. ಬಹುತೇಕ ಕೊಟ್ಟಿಗೆ ಗೊಬ್ಬರವನ್ನೆ ಬಳಸುವರು. ಇದರ ಪರಿಣಾಮ ಉಳಿತಾಯ. ಮೇಲಾಗಿ ವೈಭೋಗದ ವಸ್ತುಗಳಿಗೆ ಹಣ ವೆಚ್ಚವಾಗುತ್ತಿರಲಿಲ್ಲ. ಎಲ್ಲ ವಸ್ತುಗಳನ್ನು ಬೆಳೆಯುವರು. ಸೋಪು ಎಣ್ಣೆ  ಮತ್ತು ಬಟ್ಟೆಗೆ ಮಾತ್ರ ಹಣ. ಅಗಸರು, ಕ್ಷೌರಿಕರು, ಕುಂಬಾರರು, ಬಡಿಗೇರರು ಕಮ್ಮಾರರು ಮೊದಲಾದ ಎಲ್ಲ ಆಯಗಾರರಿಗೂ ಸುಗ್ಗಿಯಲ್ಲಿ ಧಾನ್ಯವನ್ನೆ ಕೊಡುವ ರೂಢಿ. ಹಣದ ಚಲಾವಣೆ ಕಡಿಮೆ. ಕೂಲಿ ಕೆಲಸಗಾರರ ಕೊರತೆ ಕಾಡುತ್ತಿರುಲಿಲ್ಲ. ಗೊಚಗಾರರು ತಂಡ ಕಟ್ಟಿಕೊಂಡು ನಾಟಿ ಮಾಡುವ, ಕಳೆತೆಗೆಯುವ, ಕೆಲಸ ಮಾಡುವರು. ಗೌಳೇರು ಗಾಡಿ ಕಟ್ಟಿಕೊಂಡು ಬಂದು ಕಬ್ಬು ಕಡಿದು ಕೊಟ್ಟು ಸೋಗೆಯನ್ನು ಮೇವಿಗಾಗಿ ಬಂಡಿಯಲ್ಲಿ ಹೇರಿಕೊಂಡು ಹೋಗುವರು. ಇದರಿಂದ ಕೃಷಿ ಖರ್ಚು ಕಡಿಮೆಯಾಗುತಿತ್ತು. ಬಂದ ಬೆಳೆ ಕೈಗೆ ಹತ್ತುತಿತ್ತು.

ನಮಗೂ ಎರಡೆಕರೆ ಗದ್ದೆ ಇತ್ತು. ನಾವು ಎತ್ತು ಬಂಡಿ ಇಟ್ಟಿರಲಿಲ್ಲ. ಕೂಲಿ ಬೇಸಾಯ. ಹಾಗಾಗಿ ಖರ್ಚು ಜಾಸ್ತಿ. ನಮ್ಮ ಅಪ್ಪನೂ ದಲಾಲಿ ಅಂಗಡಿಯ ಗಿರಾಕಿ. ಅಲ್ಲದೆ ಬೇಸಾಯದ ಖರ್ಚಿನ ಜತೆಗೆ ಇತರ ವೆಚ್ಚಕ್ಕೂ ಹಣ ಪಡೆಯುವರು. "ಸಾಲ ಮಾಡಿ ತುಪ್ಪ ತಿನ್ನು, ಕಡ ತಂದು ಕಡುಬು ಮಾಡು" ಎಂಬ ಗುಂಪಿಗೆ ಸೇರಿದವರು. ಧಣಿಯದೆ ಬಟ್ಟೆ ಅಂಗಡಿಯೂ ಇತ್ತು. "ಹೊರಬೇಡ ಅಂಗಡಿ ಸಾಲ ಊರ ಹೊಣೆಯ" ಎಂಬ ಹಿತವಚನ ನಮ್ಮ ಅಪ್ಪನಿಗೆ ಹಿಡಿಸದು. ಅಂಗಡಿಯಲ್ಲಿ ಅಪ್ಪ ಸೋದರ ಮಾವನ ಮಕ್ಕಳ ಮದುವೆಗೆ ಜಾಮೀನಾಗಿ ಉದ್ದರಿ ಜವಳಿ ಕೊಡಿಸಿದ. ಅವರು ಬಾಕಿ ಕಟ್ಟಲಿಲ್ಲ. ನಾಲಕ್ಕು ವರ್ಷದಲ್ಲಿ ಬಡ್ಡಿ ಬೆಳೆದು ಬೆಟ್ಟವಾಯಿತು, ಜಾಮೀನುದಾರನಾಗಿದ್ದ ಅಪ್ಪನಿಗೆ  ಧಣಿ, ತಾಯಿಯಷ್ಟೆ ಮಗಳು ದೊಡ್ಡವಳಗಿದ್ದಾಳೆ ಬಾಕಿ ಚುಕ್ತಾ ಮಾಡಿ ಎಂದು ವರಾತ ಹಚ್ಚಿದರು. ಅಂದರೆ ಅಸಲಿನ ಸಮ ಸಮ ಬಡ್ಡಿಯಾಗಿದೆ. ವಾರಕ್ಕೊಮ್ಮೆ ಅಂಗಡಿ ಆಳು ಬಾಕಿವಸೂಲಿಗೆ ಮನೆ ಬಾಗಿಲಿಗೆ ಬರುವನು. ಅವನಿಗೆ ಚಾ ಕಾಫಿ ಕೊಟ್ಟು ಕಳುಹಿಸುವುದಲ್ಲದೆ ಬಂದ ಕೂಲಿ ಬೇರೆ ಕೊಡಬೇಕು. ಅವನನ್ನು ನೋಡಿದರೆ ಪುರಾಣದ ನಕ್ಷತ್ರಿಕನ ನೆನಪಾಗುವುದು. ಅದನ್ನು ನೋಡಿಯೇ ಏನೋ ನನಗೆ ಸಾಲ ಎಂದರೆ ಪುಕು ಪುಕು. ಆ ಭಯ ಇಂದಿಗೂ ಇದೆ. ಸಾಲದ ಒಜ್ಜೆ ಜಾಸ್ತಿಯಾಗಿ ಒಂದು ದಿನ ಗದ್ದೆ ಧಣಿಯ ಪಾಲಾಯಿತು. ನಮ್ಮದೆ ಕಮತ ಇಲ್ಲ. ಇನ್ನು ಗುತ್ತಿಗೆ ಕೊಟ್ಟು ಸಾಗು ಮಾಡಿಸಿದರೆ ಗಿಟ್ಟುವುದಿಲ್ಲ. ಅಲ್ಲಿಗೆ ನಮಗೆ ಭೂಮಿಯ ಋಣ ಹರಿಯಿತು.

ಬಹಳ ಜನ ಅಲ್ಪತೃಪ್ತರು. ಹಾಸಿಗೆ ಇದ್ದಷ್ಟು ಕಾಲು ಚಾಚುವ ರೂಢಿಯವರು. ಹೆಚ್ಚಿನ ಮಹತ್ವಾಕಾಂಕ್ಷಿಗಳಲ್ಲ. ಆದರೆ ಅನೀರೀಕ್ಷಿತ ಖರ್ಚು ಬಂದಾಗ ಮಾತ್ರ ಕಣ್ಣು ಕಣ್ಣು ಬಿಡಬೇಕಾಗಿತ್ತು. ಆದರೆ ಭೂಮಿ ಇಲ್ಲದವರಿಗೂ ಸಾಲ ಸಿಗುತಿತ್ತು. ಆದರೆ ಮನೆ ಆಧಾರ ಹಾಕಬೇಕು. ವರ್ಷಕೊಮ್ಮೆ ಬಡ್ಡಿ ಕಟ್ಟಿದರೂ ಸಾಕು. ಯಾವುದೆ ಕಿರಿ ಕಿರಿ ಇಲ್ಲ. ಅದರ ಸರ್ಕಾರಿ ಸ್ವರೂಪವೆ ಭೂ ಅಡಮಾನ ಬ್ಯಾಂಕು.

ಆದರೆ ಸಾಧಾರಣವಾಗಿ ಯಾರೂ ಬಡ್ಡಿ ಬಾಕಿಬಿದ್ದರೂ ಮನೆ ಖಾಲಿ ಮಾಡಿಸುತ್ತಿರಲಿಲ್ಲ. ಒಂದೊಂದು ಸಾರಿ ಮನೆ ಮಾರಾಟವಾಗಿರುವುದು ಯಜಮಾನನಿಗೆ ಬಿಟ್ಟು ಬೇರೆಯವರಿಗೆ ಗೊತ್ತೆ ಆಗುತ್ತಿರಲಿಲ್ಲ. ನಮ್ಮ ಬೇಕಾದವರೊಬ್ಬರು ತೀರಿಕೊಂಡ ಸುದ್ದಿಕೇಳಿ ಮೂರನೆ ದಿನ ನಾನು ಮಾತನಾಡಿಸಿಕೊಂಡು ಬರಲು ಹೊರಟೆ..  ಹಾದಿಯಲ್ಲಿ ಒಬ್ಬ ವ್ಯಕ್ತಿ ಅವರ ವಿಳಾಸ ಕೇಳಿದ. ನಾನೂ ಅಲ್ಲೆ ಹೋಗುವೆ, ಜತೆಗೆ ಬಾ ಎಂದು ಕರೆದೊಯ್ದೆ. ಅವನು ಅಲ್ಲಿಗೆ ಹೋದ ತುಸು ಸಮಯದ ನಂತರ ಹಿರಿಯ ಮಗನನ್ನು ಕರೆದು,

"ನಿಮ್ಮ ಅಪ್ಪ ನಮ್ಮ ದಣಿಯ ಗಿರಾಕಿ. ಬಹಳ ಒಳ್ಳೆಯವರು" ಎಂದ. ನಂತರ ಮೆಲ್ಲಗೆ "ನೀವಿರುವ ಮನೆ ನಮ್ಮ ದಣಿಯ ಹೆಸರಿಗಿದೆ. ನಿಮ್ಮ ಅಪ್ಪ ಸಾಲ ಮಾಡಿ ಬರೆದು ಕೊಟ್ಟಿದ್ದರು. ಆತ ಬಹಳ ಸಾಚಾ ಮನುಷ್ಯ. ಹಿರಿಯರ ನೆರಳು ಕಳೆಯಬಾರದು. ಅದಕ್ಕೆ ಅಸಲು ಕಟ್ಟಿದರೆ ಸಾಕು ಬಡ್ಡಿ ಮಾಫಿ ಮಾಡಿ ಮನೆ ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಿ. ಅದನ್ನು ಹೇಳಲು ಧಣಿ ಕಳುಹಿಸಿದರು". ಎಂದ.

ಮನೆಯವರಿಗೆ ಗಾಬರಿ ಆಯಿತು. ಆದರೆ ಧಣಿಯ ಉದಾರತೆಗೆ ಮಾರು ಹೋದರು. ಸ್ವಲ್ಪ ಸಮಯ ಪಡೆದು ಅಸಲು ಕಟ್ಟಿ ಮನೆ ಉಳಿಸಿಕೊಂಡರು.

ಸಣ್ಣ ಪುಟ್ಟ ಸಾಲ ಬೇಕಾದರೆ ಕೊಡುವವರು ಇದ್ದರು. ಪಟ್ಟಣದಲ್ಲಿ ಗಿರವಿ ಅಂಗಡಿಗಳು ಇದ್ದವು. ಅಲ್ಲಿನ ಮಾರವಾಡಿಗಳು ಬಂಗಾರ ಬೆಳ್ಳಿವತ್ತೆ ಇಟ್ಟುಕೊಂಡು ಕೊಡುವರು. ಬಡ್ಡಿ ದರ ಜಾಸ್ತಿ ಅವರ ವ್ಯವಹಾರ ಬೆಣ್ಣೆಯಲ್ಲಿನ ಕೂದಲು ತೆಗೆಯುವಂತೆ. ಮಾತು ಮೃದು. ನಡೆ ಕಠಿನ. ಅವಧಿ ಒಳಗೆ ಬಿಡಿಸಿಕೊಂಡರೆ ಸರಿ. ಇಲ್ಲವಾದರೆ ದಕ್ಕು ಆಗುವುದು.. ಹಳ್ಳಿಯಲ್ಲಿಯೇ ಕೆಲವರು ಹಣವಿದ್ದವರು ಹಿತ್ತಾಳೆ ಪಾತ್ರೆ ಪಡಗ ಒತ್ತೆ ಇಟ್ಟುಕೊಂಡು ಹಣ ಕೊಡುವರು. ಕೆಲವರಂತೂ ರೇಷ್ಮೆ ಸೀರೆಯನ್ನೂ ಅಡ ಇಡುವವರಿದ್ದರು. ಋಣ ಪರಿಹಾರ ಕಾಯಿದೆ ಕಟ್ಟುನಿಟ್ಟಾಗಿ ಜಾರಿಗೆ ಬಂದಾಗ ಸರಕಾರಿ ಅಧಿಕಾರಿಗಳೆ ಬಂದು ನಿಂತು ಅಡ ಇಟ್ಟವರ ದಾಗಿನ ಕೊಡಿಸಿದರು. ಆದರೆ ನಂತರ ಜನರಿಗೆ ದುಡ್ಡು ಮುಖ ಕೆರದುಕೊಂಡರೂ ಹುಟ್ಟದಾಯಿತು. ಅಂದಿನಿಂದ ಹಳ್ಳಿಗಳಲ್ಲಿ  ಸತ್ತೆ ವ್ಯವಹಾರ ಬಂದಾಯಿತು. ಆದರೆ ಈಗ ಅದೆ ಕೆಲಸವನ್ನು ಕಾರ್ಪೊರೇಟ್ ಸಂಸ್ಥೆಯಾದ ಮುತ್ತೂಟ್ ಫೈನಾನ್ಸ್ ಮಾಡುತ್ತಿದೆ. ಅದಕ್ಕೆ ಸಿನೆಮಾ ನಟರು ಲಕ್ಷ ಲಕ್ಷ ಅಂಭಾವನೆ ಪಡೆದು ಪ್ರಚಾರ ಮಾಡುತ್ತಾರೆ.

ಇನ್ನು ಕೂಲಿ ನಾಲಿ ಮಾಡುವವರಿಗೂ ವಾರದ ಸಾಲ ಸಿಗುವುದು. ಅವರನ್ನು ವಾರದ ಬಡ್ಡಿ ಎನ್ನುವರು. ಹೆಚ್ಚಾಗಿ ಪಠಾಣರು ಮತ್ತು ಲಬ್ಬೇರರು ಈ ದಂಧೆ ಮಾಡುವರು. ಅವರದು ಮೂರಾಣೆ ಬಡ್ಡಿ. ಬಾಕಿ ಚುಕ್ತಾ ಆಗದಿದ್ದರೆ ಗಿರಾಕಿಯನ್ನು ಹಿಡಿದು ಕೂಡಿಸುವರು. ಅಲ್ಲಿ ಏನು ಮಾಡುತಿದ್ದರೋ ಏನೋ. ಬಾಕಿದಾರರಂತೂ ಹಣ್ಣು ಹಣ್ಣು ಆಗಿರುವರು. ಮನೆಯವರು ಹೋಗಿ ಹಣ ಕೊಟ್ಟು ಬಿಡಿಸಿಕೊಂಡು ಬರುವರು. ಕುಡುಕರು, ಹೊಣೆಗೇಡಿಗಳು ಚಟಗಾರರು ಇವರ ಖಾಯಂ ಗಿರಾಕಿಗಳು. ಒಂದು ರೀತಿಯಲ್ಲಿ ಈಗ ಸಿನೇಮಾರಂಗದಲ್ಲಿ ಚಾಲತಿಯಲ್ಲಿರುವ ಮೀಟರ್‌ ಬಡ್ಡಿ ದಂಧೆ ಅದಾಗಿತ್ತು.

ರೈತರಿಗೆ ಧಾನ್ಯದ ಕೊರತೆ ಬಿದ್ದರೆ ಇತರೆ ರೈತರಲ್ಲಿ  ಕಡ ತರುವರು. ಸುಗ್ಗಿಯಲ್ಲಿ ಗೂಡಿ ನೆಲ್ಲಿಗೆ ಹತ್ತು ಸೇರು ಸೇರಿಸಿ ಕೊಡಬೇಕಿತ್ತು. ಹಣ ಬೇಕಿದ್ದರೆ ನೂರು ರೂಪಾಯಿ ಪಡೆದರೆ ಸುಗ್ಗಿಯಲ್ಲಿ ಬೇರೆಯವರಿಗಿಂತ ಕಡಿಮೆ ದರದಲ್ಲಿ ಅವರಿಗೆ ನೆಲ್ಲು ಕೊಡಬೇಕು.

ಇನ್ನೊಂದು ಅಮಾನವಿಯ ಪದ್ದತಿ ಇದ್ದಿತು. ಅದು ಜೀತ ಪದ್ದತಿ. ದೊಡ್ಡ ವಕ್ಕಲತನವಿರುವವರು ಸಾಲ ಕೊಟ್ಟು ದುಡಿಯಲು ಇಟ್ಟುಕೊಳ್ಳುವರು. ಅವರಿಗೆ ಹೊಟ್ಟೆ ಬಟ್ಟೆಗೆ ಕೊಡುವರು. ಆದರೆ ಕೂಲಿ ಮಾತ್ರ ನೆಪ ಮಾತ್ರಕ್ಕೆ. ವರ್ಷಕ್ಕೆ ಇಷ್ಟು ಎಂದು ನಿಗದಿಯಾಗಿರುವುದು. ತಂದೆಯ ಮದುವೆಗೆ ಮಾಡಿದ ಸಾಲಕ್ಕೆ ಮಕ್ಕಳೂ ಜೀತ ಮಾಡಿದ ಉದಾಹರಣೆಗಳು ಬಹಳ. 

ಸಾಮಾನ್ಯರು ಸಾಲ ಮಾಡಲು ಸಾಧಾರಣವಾಗಿ ಅಂಜುವರು. "ಸಾಲ ಮಾಡಲಿ ಬೇಡ, ಸಾಲದೆನ ಬೇಡ, ನಾಳಿಗೆ ಏನೆಂಬ  ಚಿಂತೆ ಬೇಡ" ಎಂಬ ಮಾತನ್ನು ತಾಯಿ ಮಗುವಿಗೆ ತೊಟ್ಟಿಲಲ್ಲಿರುವಾಗಲೆ ಹಾಡಿನ ಮೂಲಕ ತಿಳಿಸುವಳು. ಜನರಲ್ಲಿ  ಋಣಪ್ರಜ್ಞೆ ಅತಿ ಗಾಢವಾಗಿತ್ತು. ಮನೆಯ ಹಿರಿಯರು ಸಾಯುವಾಗ ಮಕ್ಕಳಿಗೆ ಸಾಲದ ವಿವರ ತಿಳಿಸಿ ತೀರಿಸಲು ಹೇಳುವರು. ಮಕ್ಕಳೂ ಸಹ ಸಾಲ ತೀರಿಸಿದ ಮೇಲೆ ನಿಟ್ಟುಸಿರುಬಿಟ್ಟು ಇವತ್ತು ನಾವು ನಮ್ಮ ಅಪ್ಪನ ಮಕ್ಕಳಾದೆವು ಎನ್ನುವರು. ಬಡ್ಡಿ ಮಗ ಎನ್ನುವುದು ಸಾಮಾನ್ಯವಾದ ತೆಗೆಳಿಕೆಯಾಗಿತ್ತು ವಾರಸುದಾರರಿಲ್ಲದವರು ಮಂದಿನ ಜನ್ಮದಲ್ಲಿ ಸಾಲ ಕೊಟ್ಟವರ ಮಗನಾಗಿ ಹುಟ್ಟಿ ಋಣ ತೀರಿಸುವೆ ಎಂದು ಅಲವತ್ತುಕೊಳ್ಳುವರು. ಎಷ್ಟೆ ಕಷ್ಟ ಇದ್ದರೂ ಸಾಲ ತೀರಿಸಲು ಹೆಣುಗುತಿದ್ದರೇ ವಿನಃ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಪ್ರಾಣ ಒತ್ತೆ ಇಟ್ಟಾದರೂ ಬಾಕಿ ಚುಕ್ತಾ ಮಾಡುವ ಗುಣ ಇತ್ತು. ಸತ್ಯ ಹರಿಶ್ಚಂದ್ರನ ಕಥೆ ಅವರ ಪಾಲಿಗೆ ಉತ್ತಮ ಉದಾಹರಣೆಯಾಗಿತ್ತು.

ಅರವತ್ತರ ದಶಕದಲ್ಲಿ ಸಹಕಾರಿ ಚಳುವಳಿ ಬಲವಾಯಿತು. "ಒಬ್ಬರಿಗಾಗಿ ಎಲ್ಲರು, ಎಲ್ಲರಿಗಾಗಿ ಒಬ್ಬರು" ಎಂಬ ತತ್ವದಮೇಲೆ ರೈತರಿಗೆ ಸೊಸೈಟಿಗಳ ಮೂಲಕ ಸಾಲ ಸೌಲಭ್ಯ ದೊರೆಯತೊಡಗಿತು. ಕರ್ನಾಟಕವು ಸಹಕಾರಿ ಚಳುವಳಿಯಲ್ಲಿ ಮುಂಚೂಣಿಗೆ ಬಂತು. ಪ್ರತಿ ಗ್ರಾಮಕ್ಕೂ ಸಹಕಾರಿ ಸಂಘ ಕಾಲಿಟ್ಟಿತು. ಊರಿನ ಹಿರಿಯನೆ ಅದರ ಅಧ್ಯಕ್ಷನಾದ. ಆತ ಹೆಬ್ಬಟ್ಟಿನ ಗಿರಾಕಿ. ಅಕ್ಷರಸ್ಥ  ಕಾರ್ಯದರ್ಶಿಯ ಕೈಗೊಂಬೆಯಾದ.. ಅವನು ತಾನು ಮೊಸರು ತಿಂದು ಅಧ್ಯಕ್ಷರ ಬಾಯಿಗೆ ಒರಸತೊಡಗಿದ. ಇದರಿಂದ ಸೊಸೈಟಿಗಳು ಮುಚ್ಚತೊಡಗಿದವು. ಸುಧಾರಣೆಗಾಗಿ ಹಲವು ಕಾನೂನು ಬಂದವು. ಅಧಿಕಾರದ ಅವಧಿ ಸೀಮಿತವಾದಾಗ ಅಧ್ಯಕ್ಷರ ಸಂಬಂಧಿಗಳು ಕುರ್ಚಿ ಹಿಡಿದರು. ವಂಶ ಪಾರ್ಯಂಪರೆಯಾಗಿ ಅಧಿಕಾರ ಹಿಡಿಯುವ ಪ್ರವೃತ್ತಿ ಬಲವಾಯಿತು. ಅದರ ಜತೆ ಅಕ್ಕಿ ಸಕ್ಕರೆ ನೀಡತೊಡಗಿದಾಗ ಹಿತಾಸಕ್ತಿ ಹೆಚ್ಚಾಯಿತು. ಸಹಕಾರ ಸಂಘಗಳು ರಾಜಕೀಯ ಮೇಲಾಟದ ಮೊದಲ ಮೆಟ್ಟಿಲಾದವು. ಸಹಕಾರಿ ಚಳುವಳಿಗೆ ಹಿನ್ನೆಡೆಯಾಯಿತು. ಆದರೆ ಇದರಿಂದ ಜನರಲ್ಲಿ ಕೊಟ್ಟವನು ಕೋಡಂಗಿ ಇಸುಕೊಂಡವನು ಈರಭದ್ರ ಎಂಬ ಭಾವನೆ ಬಲಿಯಿತು. ಐಷಾರಾಮಿ ಜಿವನದ ಹಂಬಲ ಹೆಚ್ಚಾಯಿತು. ದಣಿಯದೆ ದುಡ್ಡು ಗಳಿಸುವ ಹಂಬಲ ಹೆಚ್ಚಾಯಿತು. ಸುಸ್ತಿದಾರರು ಹೆಚ್ಚಿದರು. ಬ್ಯಾಂಕುಗಳೂ ಆದ್ಯತೆಯ ಮೇಲೆ ಸಾಲ ನೀಡತೊಡಗಿದವು. ಸರಕಾರಿ ಸಾಲ ಎಂದರೆ ತೀರಿಸಬೇಕಿಲ್ಲ. ಮನ್ನಾ ಆಗುವುದು ಎಂದುಕೊಂಡು ಅಪವ್ಯಯ ಹೆಚ್ಚಾಯಿತು. 

ಸಾಲದ ಶೂಲಕ್ಕೆ ಜನ ಬಲಿಯಾಗುವುದನ್ನು ತಪ್ಪಿಸುವ ಬದ್ಧತೆಯಿಂದ ಸರಕಾರ ಅನೇಕ ಕ್ರಮ ತೆಗೆದುಕೊಂಡಿದೆ..  ಋಣಮುಕ್ತ ಕಾಯಿದೆ, ಜೀತಮುಕ್ತ ಕಾಯಿದೆ ಜಾರಿಗೆ ಬಂದಿವೆ. ಬ್ಯಾಂಕುಗಳ ರಾಷ್ಟ್ರೀಕರಣದಿಂದ ಜನಸಾಮಾನ್ಯರಿಗೆ ಅವು ಮುಕ್ತವಾಗಿವೆ. ಇಪ್ಪತ್ತು ಅಂಶದ ಕಾರ್ಯಕ್ರಮದಲ್ಲಿ ದನಕ್ಕೆ, ಕುರಿಗೆ ಕೋಳಿಗೆ ಕರೆ ಕರೆದು ಸಾಲ ಕೊಡುವರು.

ವಿಪರ್ಯಾಸ ಎಂದರೆ ಸಾಕಷ್ಟು ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು ಅನಷ್ಠಾನವಾಗುತ್ತಿವೆ. ಪ್ರಗತಿಪರ ಕಾನೂನು ಜಾರಿಗೆ ಬಂದಿವೆ. ಆದರೆ ಹಳ್ಳಿ ಹಾಳಾತ್ತಲಿವೆ. ನಗರಕ್ಕೆ ವಲಸೆ ಹೋಗುವುದು, ಕೂಲಿ ಅರಸಿ ಗುಳೆ ಹೊರಡುವುದು ಮಿತಿ ಮೀರಿದೆ. ಬೇಸಾಯ ಬೇಡದ ಬದುಕಾಗಿದೆ. ರೈತರ ಆತ್ಮಹತ್ಯ ಪ್ರಕರಣಗಳು ಹೆಚ್ಚಾಗುತ್ತಲೆ ಇವೆ. ಸಾಲ ಮನ್ನಾ, ಕಡಿಮೆ ಬಡ್ಡಿ, ಕಡಿತದ ದರದಲ್ಲಿ ಬೀಜ, ಕೃಷಿ ಉಪಕರಣ ಬೆಳೆ ಸಾಲ, ಬೆಳೆ ವಿಮೆ, ಅನುದಾನ, ಪ್ರೋತ್ಸಾಹ ಧನ  ಮೊದಲಾದ  ಸೌಲಭ್ಯಗಳ ನಡುವೆಯೂ ರೈತನ ಸಾವು  ತಪ್ಪಿಲ್ಲ.  ಅನ್ನದಾತನ ಆತ್ಮಹತ್ಯೆಯು ಇಂದು ನಾವೆಲ್ಲ ಚಿಂತೆನೆ ಮಾಡಬೇಕಾದ ಗಂಭೀರ ವಿಷಯವಾಗಿದೆ

ಅಪ್ಪಾಜಿರಾಯರು ಬರೆಯುವ ಆರರಿಂದ ಅರವತ್ತು ಸರಣಿ ೧೫:ಇದ್ದುದರಲ್ಲೆ ಇಲಾಜುಆರೋಗ್ಯ ರಕ್ಷಣೆಯ ಹೊಣೆಯಿಂದ ಅಮೆರಿಕಾದಲ್ಲಿ ಉಂಟಾದ ಹಣಕಾಸಿನ ಮುಗ್ಗಟ್ಟು ನನಗೆ ನಮ್ಮ ದೇಶದಲ್ಲಿನ ಹಳೆಯ ನೆನಪು ತಂದಿತು. ಮಾನವನ ಮೂಲಭೂತ ಅಗತ್ಯ ಎಂದರೆ ಅನ್ನ, ವಸತಿ ಮತ್ತು ಆರೋಗ್ಯ ಐವತ್ತು ವರ್ಷದ ಹಿಂದೆ ಸಾಧಾರಣವಾಗಿ ಎಲ್ಲರದು ರಟ್ಟೆಮುರಿವ ದುಡಿತ, ಹೊಟ್ಟೆತುಂಬ ಊಟ ಮತ್ತು ಕಣ್ಣು ತುಂಬ ನಿದ್ದೆ. ಮಣ್ಣು, ಕಲ್ಲು ಇಲ್ಲವೆ, ಹುಲ್ಲಿನ ಒಂದು ಸೂರು. ಇನ್ನು ಆರೋಗ್ಯ, ಚಿಕ್ಕ ಪುಟ್ಟ ಕಾಯಿಲೆಗೆ ಕ್ಯಾರೆ ಎನ್ನುತ್ತಿರಲಿಲ್ಲ. ನಮ್ಮವರು ಬಹುತೇಕ ಕಾಯಿಲೆಗಳಿಗೆ ವೈದ್ಯರ ಹತ್ತಿರ ಹೋಗುತ್ತಿರಲಿಲ್ಲ. ಔಷಧಿಯನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಊರಲ್ಲಿ ವೈದ್ಯರೂ ಇರಲಿಲ್ಲ. ಏನಿದ್ದರೂ ಖರ್ಚಿಲ್ಲದ ಚಿಕಿತ್ಸೆ.

ಬೇಸಿಗೆಯಲ್ಲಿನೀರಿನ ಬದಲಾವಣೆಯಿಂದ ಬರುವ ಸಮಸ್ಯೆ ಬೇಧಿ. ಅದು ಬೇಸಿಗೆಯಲ್ಲಿ ತುಸು ಹೆಚ್ಚು ಕಡಿಮೆಯಾದರೂ ಮಕ್ಕಳ ತಳ ಕಿತ್ತಿಕೊಳ್ಳುತಿತ್ತು. ತಿಪ್ಪೆಗೆ ತೆರಪಿಲ್ಲದ ಓಡಾಟ. ಬರೀ ನೀರು, ನೀರು ಬೇಧಿ. ನಡೆಯಲಾಗದಷ್ಟು ನಿತ್ರಾಣ. ಆದರೆ ಮನೆಯರಿಗೆ ಗಾಬರಿ ಇಲ್ಲ. ಮೇಲೆ ಮೇಲೆ ಮಜ್ಜಿಗೆ ಕುಡಿಸುವರು. ಅಲ್ಲಿಗೂ ಕಡಿಮೆಯಾಗಲಿಲ್ಲ ಆಗ   ಪಕ್ಕದ ಮನೆಯ ನೆವ್ವಾರ ದುಗ್ಗೆಮ್ಮನನ್ನು ಕರೆದರು.

ನೋಡಬೇ, ದುಗ್ಗೆವ್ವ, ಸಣ್ಣ ಸ್ವಾಮಿ ಯಾಕೋ ಉಚ್ಚಿಕೋತಾನೆ, ಎನ್ನುವರು.

ದುಗ್ಗೆಮ್ಮ ಸಾಕಷ್ಟು ವಯಸ್ಸಾದರೂ ಇನ್ನೂ ಗಟ್ಟಿಮುಟ್ಟು ಆಳು. ನಿತ್ಯವೂ ಪಟ್ಟಣಕ್ಕೆ ಮೊಸರು ಮಾರಲು ಹೋಗುವಳು. ತಲೆ ಎಲ್ಲ ಹಂಜಿ ಬುಟ್ಟಿಯಂತೆ ಬೆಳ್ಳಾಗಾದರೂ, ಹಲ್ಲು  ಮಾತ್ರ ಕರ್ರಗೆ ಹೊಳೆಯುತಿದ್ದವು. ಕಾರಣ ಅವರು ತಿಕ್ಕುತಿದ್ದ ನಸಿ ಪುಡಿ. ದುಗ್ಗೆಮ್ಮ ಬಂದವಳೆ ಬಿಸಿ ಬೂದಿ ತಾಂಬಾ ಯಮ್ಮಾ, ಎನ್ನುವಳು. ನಂತರ ಅವಳ ಎದುರಿನಲ್ಲಿ ಅಂಗಿ ಬಿಚ್ಚಿ ಬರಿ ಮೈನಲ್ಲಿ ಕೂಡಿಸಿದರು. ಅವಳು ತನ್ನ ಬೆರಳುಗಳಿಗೆ ಬೂದಿ ಸವರಿಕೊಂಡು ನಮ್ಮ ಕೈ ಎತ್ತಿಸಿ ಕೊಂಕುಳಿಗೆ ಬೂದಿ ಸವರಿ ತೋಳಿನ ಕೆಳಭಾಗದ ನರ ಹಿಡಿದು ಬಲವಾಗಿ ಕೆಳಗೆ ಜಗ್ಗುವಳು. ಅವು ಲಳಕ್, ಲಳಕ್ ಎನ್ನವವು. ನೋವಿನಿಂದ ಕೈ ಕೊಡವಿದರೂ ಹಾಗೆಯೆ ಎರಡೂ ಕಡೆಗೂ ಮೂರು ಬಾರಿ ಎಳೆದಾಗ ತಟ್ಟನೆ ಬೇಧಿ ನಿಲ್ಲುವುದು, ಅದನ್ನು "ಅರವೆ"  ಹರಿಯುವುದು ಎಂದು ಕರೆಯುತಿದ್ದರು. ವಿರೇಚನ ನೀರಿನಿಂದ ಬರುವ ರೋಗ. ಈಗಿನ ಡಯೇರೀಯಾ ಕೂಡಾ ನೀರಿನ ಸೋಂಕಿನಿಂದ ಬರುವುದು. ಆದರೆ ಸೋಜಿಗ ಎಂದರೆ ಈಗ ಅದನ್ನು ಗುಣಪಡಿಸಲ ಒಂದು ಕೋರ್ಸ ಆಂಟಿ  ಬಯಾಟಿಕ್  ನೀಡಲೇಬೇಕು. ಆದರೆ ಅಂದು ಯಾವುದೆ ಔಷಧಿ ಇಲ್ಲದೆ ತೋಳಿನ ನರಗಳನ್ನು ಜಗ್ಗಿದರೆ ಸಾಕಿತ್ತು. ನನ್ನ ಅನೇಕ ವೈದ್ಯಮಿತ್ರರನ್ನು ವಿಚಾರಿಸಿದರೂ ವಿವರಣೆ ದೊರೆಯಲಿಲ್ಲ. ಅಲೋಪತಿಯಲ್ಲಿ ಸಿಗದಿದ್ದರೂ ಆಕ್ಯೂಪ್ರಷರ್ ಚಿಕಿತ್ಸೆಯಲ್ಲಿ ತುಸು ಮಟ್ಟಿಗೆ ಸಮಾಧಾನಕರ ಉತ್ತರ  ಇದೆ ಎನಿಸಿದೆ.

ಹೊಟ್ಟೆನೋವಿಗೆ ಇನ್ನೊಂದು ಚಿಕಿತ್ಸೆ ಚೆನ್ನಾಗಿ ನೆನಪಿದೆ.. ಹೆಚ್ಚಾಗಿ ಹಾರಿ ಕುಣಿದು ಕುಪ್ಪಳಿಸಿದಾಗ ಹೆಚ್ಚಿನ ಭಾರ ಎತ್ತಿದಾಗ ಹೊಟ್ಟೆಮುರಿತ ಜತೆಗೆ ಬೇಧಿ. ಹೆಂಗಸರಿಗೆ ದೊಡ್ಡ ಕೊಡ ಹೊತ್ತರೆ ಹೊಟ್ಟೆನೋವು ಆಗ ಬಟ್ಟಿ ಬಿದ್ದಿದೆ ಎನ್ನವರು. ಅದು ಬಟ್ಟಿ ತಿಕ್ಕುವದರಿಂದ ಗುಣವಾಗುತಿತ್ತು. ಬಟ್ಟಿತಿಕ್ಕುವುದು ಎಂದರೆ ಗೋಡೆ ಕಡೆ ಮುಖ ಮಾಡಿ ನಿಲ್ಲಿಸಿ ಎರಡೂ ಕಾಲ ಹಿಮ್ಮಡಕ್ಕೆ ಎಣ್ಣೆ ಹಚ್ಚಿ ನೀವುತಿದ್ದರು. ಅದು ನೋವಿಗಿಂತ ಹೆಚ್ಚಾಗಿ ಕಚಗುಳಿ ಇಟ್ಟಂತಾಗುವುದು. ಒಂದೊಂದು ಸಲ ಬಟ್ಟಿ ತಿಕ್ಕಿಸಿಕೊಳ್ಳುವವರು ತಕ ತಕ ಕುಣಿಯುವರು. ಅವರನ್ನು ಹೇಗೋ ನಿಲ್ಲಿಸಿ ಎರಡು ನಿಮಿಷ ನರಗಳನ್ನು ತಿಕ್ಕಿದರೆ ಸಾಕು ಹೊಟ್ಟೆನೋವು ತಟ್ಟನೆ ಮಾಯ.

ಹೊಟ್ಟೆನೋವು ತೀವ್ರವಾಗಿದ್ದರೆ ರಂಜು ಹಿಡಿಯುವರು. ಹೊಟ್ಟೆನೋವಿನಿಂದ ಬಳಲುತ್ತಿರುವವರನ್ನು ಅಂಗಾತ ಮಲಗಿಸಿ ಹೊಕ್ಕಳಿನ ಸುತ್ತ ಎಣ್ಣೆ ಸವರುವರು. ನಂತರ  ಸಗಣಿಯಲ್ಲಿ ಮಾಡಿದ ದೀಪದ ಪ್ರಣತಿಯಲ್ಲಿ ದೀಪ ಹಚ್ಚಿ ಹೊಕ್ಕಳ ಮೇಲೆ ಇಡುವರು.ನಂತರ ಅದರ ಮೇಲೆ ಹಿತ್ತಾಳೆಯ ಚೊಂಬು ಬೋರಲು ಹಾಕಿದಾಗ ತುಸು ಹೊತ್ತು   ಉರಿದು ಆರಿಹೋಗುವುದು. ಆಗ ಹೊಟ್ಟೆಯಲ್ಲಿನ ಮಾಂಸ ಖಂಡಗಳನ್ನು ಒಳಗೆ ಎಳೆದ ಅನುಭವ ಅಗುವುದು. ಅಲ್ಲದೆ ಚೊಂಬು ಹೊಟ್ಟೆಗೆ ಗಟ್ಟಿಯಾಗಿ  ಅಂಟಿಕೊಂಡಿರುವುದು. ಅದನ್ನು ತೆಗೆಯಲು ಚೊಂಬಿನ ಬಾಯಿಯ ಹತ್ತಿರದ ಮಾಂಸ ಖಂಡವನ್ನು ತುಸು ಕೆಳಗೆ ಒತ್ತಿ ಗಾಳಿ ಚೊಂಬಿನ ಒಳ ಹೋಗುವಂತೆ ಮಾಡಿದರೆ ಚೊಂಬು ಶಬ್ದ ಮಾಡುತ್ತಾ ಹಿಡಿತ ಸಡಿಲವಾಗುತಿತ್ತು. ಇದರಿಂದ ಹೊಟ್ಟೆ ತುಸು ನಿರಾಳವೆನಿಸುವುದು. ಅದಕ್ಕೆ ವೈಜ್ಞಾನಿಕ ಹಿನ್ನೆಲೆ ಇದೆ. ದೀಪವನ್ನುಇಟ್ಟು ಅದರ ಮೇಲೆ ತಂಬಿಗೆ ಕವಚಿ ಹಾಕಿದಾಗ ಅದರಲ್ಲಿನ   ಆಮ್ಲಜನಕವನ್ನು ಉಪಯೋಗಿಸಿಕೊಂಡು ದೀಪ ಉರಿಯುವುದು. ಅದು ಮುಗಿದೊಡನೆ ದೀಪ ಆರುವುದು. ಚೊಂಬಿನಲ್ಲಿನ ಒತ್ತಡ  ಕಡಿಮೆಯಾಗಿ ಹೊರಗಿನ ಒತ್ತಡ ಹೆಚ್ಚಿರುವುದರಿಂದ ಅದು ಹೊಟ್ಟೆಗೆ ಅಂಟಿಕೊಳ್ಳುವುದು. ಒತ್ತಡದ ವ್ಯತ್ಯಾಸದಿಂದ ಹೊಟ್ಟೆಗೆ ಹಾಯೆನಿಸುವುದು. ಆದರೆ ಇದನ್ನು ಹೆಂಗಸರಿಗೆ ಮಾಡುವಾಗ ಬಹು ಎಚ್ಚರ ವಹಿಸಬೇಕು. ಅವರು ಎಳೆ ಬಸಿರಿಯರಾಗಿದ್ದರೂ ರಂಜು ಹಿಡಿಯುತ್ತಿರಲಿಲ್ಲ. ಅದರಿಂದ ಗರ್ಭಪಾತವಾಗುವ ಸಂಭವ ಹೆಚ್ಚು.

ಸಾಮಾನ್ಯವಾಗಿ  ಮಕ್ಕಳ ಇನ್ನೊಂದು ವ್ಯಾಧಿ ಊಟ ಸೇರದಿರುವುದು ಮತ್ತು ಅತಿ ಅಳು. ಅದಕ್ಕೆ ಉಪ್ಪುಮಂತ್ರಿಸಿ ತುಪ್ಪ ಅನ್ನದ ಜತೆ ತಿನ್ನಸಿದರೆ ಸಾಕಿತ್ತು. ಚಿಕ್ಕಮಕ್ಕಳು ಜಾಸ್ತಿ ಅತ್ತರೆ ದೃಷ್ಟಿ ತೆಗೆದು ಹಾಕುವ ಪದ್ದತಿ ಈಗಲೂ ಇದೆ. ಹಂಚಿ ಕಡ್ಡಿಯನ್ನು ಮಕ್ಕಳ ಮುಖದ ಮೂಂದೆ ಮೂರುಬಾರಿ ನಿವಾಳಿಸಿ ಅತ್ತಿ ದೃಷ್ಟಿ, ಕತ್ತಿ ದೃಷ್ಟಿ, ತಾಯಿದೃಷ್ಟಿ, ನಾಯಿ ದೃಷ್ಟಿ, ಊರ ಮಂದಿ ದೃಷ್ಟಿ ನಿವಾರಣೆ ಆಗಲಿ ಎನ್ನುತ್ತಾ ಮೂಲೆಯಲ್ಲಿ ಸುಡುವರು. ಅದು ಛಟ್ ಛಟ್ ಅಂತ ಸದ್ದು ಮಾಡಿದರೆ ಎಷ್ಟು ದೃಷ್ಟಿಯಾಗಿದೆ ಎಂದು ಹಲಬುವರು. ಇನ್ನೂ ಕೆಲವರು ಒಣ ಮೆಣಸಿನಕಾಯಿಯನ್ನು ಇಳೆ ದೆಗೆದು ಒಲೆಯ ಉರಿಯಲ್ಲ ಹಾಕುವರು. ದೃಷ್ಟಿಯಾಗಿದ್ದರೆ ಘಾಟು ಬರುವುದಿಲ್ಲ ಎಂಬ ನಂಬಿಕೆ. ಈಗ ಇವೆಲ್ಲ ನಗರ ಪ್ರದೇಶದಲ್ಲಿ ಮಾಯವಾಗಿವೆ. ಹಂಚಿಕಟ್ಟಿ ದೊರಕುವುದಿಲ್ಲ. ಒಲೆಯ ಉರಿ ಮೊದಲೆ ಇಲ್ಲ.

ಆಗಿನದೊಡ್ಡ ಪಿಡುಗು ಎಂದರೆ ಸಿಡುಬು. ನಾಲಕ್ಕು ಜನರಲ್ಲಿ ಒಬ್ಬರ ಮುಖದ ಮೇಲೆ ಅದರ ಕಲೆಗಳು. ಸಿಡುಬು ಬಂದರೆ ಅವರ ಮೈ ತುಂಬಾ ಗುಳ್ಳೆಗಳು ಎದ್ದು ಕೀವು ತುಂಬುವವು. ಮೈ ಎಲ್ಲ ಜರಡಿಯಂತಾಗುವುದು. ಆಗ ಅವರನ್ನು ಬರಿ ಮೈನಲ್ಲಿ ಬಾಳೆ ಎಲೆ ಮೇಲೆ ಮಲಗಿಸಿ, ಬಾಳೆ ಎಳೆ ಹೊಚ್ಚಿ ಬೇವಿನ ತೊಪ್ಪಲಲ್ಲಿ ಗಾಳಿ ಹಾಕುವರು. ಅದನ್ನು ದೊಡ್ಡಮ್ಮ ಎನ್ನುವರು. ಅದಕ್ಕೆ ಔಷಧಿಯೆ ಇಲ್ಲ. ಬಹುತೇಕ ಅದರ ಕಲೆ ಉಳಿಯುವುದು. ಇನ್ನೊಂದು ಸಣ್ಣ ಅಮ್ಮ. ಅದಕ್ಕೆ ತಟ್ಟು ಅಥವ ಗೊಬ್ಬರ ಎಂದೂ ಹೆಸರು. ಆಗ ಮೈ ಮೇಲೆಲ್ಲ ಚಿಕ್ಕಚಿಕ್ಕ ಕೀವಿಲ್ಲದ ಗುಳ್ಳೆಗಳು. ಜತೆಗೆ ಜ್ವರ ಬರುವುದು. ಅದರ ಲಕ್ಷಣ ಕಾಣತ್ತಿರುವಂತೆ ತಿನ್ನಲು ಎಲ್ಲ ನಂಜಿನ ಪದಾರ್ಥ ಕೊಡುವರು. ಉದ್ದೇಶ ಅವು ಪೂರ್ಣ ಹೊರ ಬೀಳಲಿ ಎಂದು. ಆಗಲೂ ಯಾವುದೆ ಔಷಧಿ ಇಲ್ಲ. ಒಂಬತ್ತು ದಿನ ಕಾಯುವರು, ಆ ಅವಧಿಯಲ್ಲಿ ಊರು ಬಿಟ್ಟು ಹೋಗುವ ಹಾಗಿರಲಿಲ್ಲ. ಒಂಬತ್ತನೆ ದಿನ ಗ್ರಾಮ ದೇವತೆಗೆ ಹಣ್ಣು ಕಾಯಿ ಅಕ್ಕಿ ಮೊಸರಿನ ಸಮರ್ಪಣೆ ಯಾದ ಮೇಲೆ ಸಾಧಾರಣ ಸ್ಥಿತಿಗೆ ಬರುತಿತ್ತು.

ಮಕ್ಕಳಿಗೆ ಹೆಚ್ಚಾಗಿ ಭಾದಿಸವುದು ನಾಯಿ ಕೆಮ್ಮು. ಅದು ತಿಂಗಳುಗಟ್ಟಲೆ ಇರುವುದು. ಎಳೆಯರು ಬಹಳ ಬಳಲುವರು. ಅದಕ್ಕೆ ಮಂತ್ರ ಹಾಕಿಸುವರೆ ವಿನಃ ಔಷಧಿ ಇರಲಿಲ್ಲ. ಸಾಧಾರಣ ಕೆಮ್ಮಾದರೆ ಗಂಟಲಿಗೆ ಕುತ್ತಿಗೆ ಕೆಳಗೆ ಬೇಲಿಯಲ್ಲಿನ ಕಳ್ಳಿಯ ಹಾಲು ತುಸುವೆ ಹಚ್ಚಿ  ಅದರ ಬುಡದ ಮಣ್ಣು ಸವರವರು. ಕೆಮ್ಮು ಕಡಿಮೆಯಾಗುವುದು. ದೇಹದ ಇತರ ಭಾಗಕ್ಕೆ ಕಳ್ಳಿ ಹಾಲು ತಗುಲಿದರೂ ಸಾಕು ಗುಳ್ಳೆಯಾಗುವವು. ಆದರೆ ಕೆಮ್ಮಿದ್ದವರಿಗೆ ಏನೂ ಆಗುತ್ತಿರಲಿಲ್ಲ.

ಕಾಮಣಿ ಇನ್ನೊಂದು ಪ್ರಬಲ ರೋಗ. ಅದರಲ್ಲಿ ಅನೇಕ ವಿಧ. ಕೂಳು ಕಾಮಣಿ ಅಂದರೆ ತಿಂದದ್ದೆ ತಿಂದದ್ದು. ಮಿತಿಯೆ ಇಲ್ಲ. ನಿದ್ದೆ ಕಾಮಣಿ ಎಂದರೆ ಸದಾ ಮಲಗಿರುವುದು. ಕಂಭಕರ್ಣನ ಮೊಮ್ಮಕ್ಕಳ ತರಹ. ಇನ್ನೊಂದು ಹಳದಿ ಕಾಮಣಿ. ಕಣ್ಣು ಮೈ ಎಲ್ಲ ಹಳದಿಯಾಗುವುದು. ಅದು ತೀವ್ರವಾದಾಗ ಹಾಕಿಕೊಂಡ ಬಿಳಿ ಬಟ್ಟೆ ಹಳದಿ ಬಣ್ಣಕ್ಕೆ ತಿರುಗುವುದು ಎಂಬ ನಂಬಿಗೆ ಇತ್ತು. ಅದಕ್ಕೆ ಹಸಿರು ಔಷಧಿ ಕೊಡುವರು ಮೊಸರು, ಎಣ್ಣೆ ತುಪ್ಪ ತಿನ್ನುವ ಹಾಗಿಲ್ಲ. ಅಲ್ಲದೆ ಯಾವುದೋ ಸಸ್ಯದ ರಸ ಲೇಪಿಸಿದ ದಾರವನ್ನು ರಟ್ಟೆಗೆ ಕಟ್ಟಿದಾಗ ಅದು ತೋಳಿಗೆ ಉರಿ ಉಂಟುಮಾಡುತಿತ್ತು. ಅದರಿಂದ ತೋಳಿನ ಮೇಲೆ ಬರೆ ಹಾಕಿದ ಗುರುತು ಮೂಡುವುದು. ಆದರೆ ಆ ಗುರುತು ಮಾಸುವುದರೊಳಗೆ ಕಾಮಣಿ ಕಡಿಮೆಯಾಗುತಿತ್ತು.

ಎಲ್ಲರ ಮನೆಯಲ್ಲೂ ೮-೧೦ ಮಕ್ಕಳು ಹುಟ್ಟಿದರೂ ಉಳಿಯುವುದು ಎರಡೋ ಮೂರೋ ಮಕ್ಕಳ ಮರಣದ ಪ್ರಮಾಣ ಹೆಚ್ಚಿತ್ತು. ಕೆಲವರಂತೂ ಹುಟ್ಟಿದ ಮಕ್ಕಳು ಬೇಗ ಸಾಯುವುದರಿಂದ ಉಳಿದ ಮಗುವಿಗೆ ಕಲ್ಲು, ಗುಂಡು, ತಿಪ್ಪೆ ಎಂದು ಹೆಸರಿರುವುದು. ಅವರನ್ನು ಕಲ್ಲಣ್ಣ, ಗುಂಡಮ್ಮ, ತಿಪ್ಪಕ್ಕ ಎಂದೆ ಕರೆಯುವರು. ಆ ರೀತಿಯಲ್ಲಿ  ಅವರು ಹೆಚ್ಚುಕಾಲ ಬದುಕಲಿ ಎಂಬುದು ಅವರ ಉದ್ದೇಶ.  ಹೆಂಗಸರ ಮರಣ ಪ್ರಮಾಣ ಹೆಚ್ಚು. ಅದೂ ಹೆರಿಗೆಯ ಸಮಯದಲ್ಲಿ. ಮೊದಲನೆ ಹೆರಿಗೆ ಯಾಗುವುದು ಎಂದರೆ ಮರುಜನ್ಮವಾದಂತೆ. ಹೆರಿಗೆ ತಡವಾದರೆ ವೀಳೆದ ಎಲೆಯ ಮೇಲೆ ಕುಂಕುಮದಲ್ಲಿ ಚಕ್ರ ಬಿಂಬನ ಕೋಟೆಯನ್ನು ಬರದು ಕೊಡುವರು.. ನೋವು ತಿನ್ನುವ ಮಹಿಳೆಗೆ ಅದನ್ನು ದಿಟ್ಟಿಸಿ ನೋಡುತ್ತಾ ಅದರಿಂದ ಹೊರ ಬರುವ ಹಾದಿ ಹುಡುಕಲು ಹೇಳುವರು. ಅದು ಅವಳಮನಸ್ಸನ್ನು ಬೇರೆ ಕಡೆ ಸೆಳೆವ ಯೋಜನೆ. ಅದನ್ನು ದಿಟ್ಟಿಸುತ್ತಾ ಇದ್ದರೆ ನೋವು ಮರೆಯಾಗುವುದು.

ಮಕ್ಕಳಿಗೆ ಹುಟ್ಟಿದ ತಕ್ಷಣ ಬಳೆ ಚೂರಿನಿಂದ ಹೊಟ್ಟೆಯ ಮೇಲೆ ಬಿಸಿ ಮುಟ್ಟಿಸುವರು. ಅಲ್ಲದ ಬೆಸ ತಿಂಗಳುಗಳಲ್ಲಿ ಬಳೆ ಚೂರನ್ನು ಕಾಯಿಸಿ ನಡು ನೆತ್ತಿಯಮೇಲೆ, ಎರಡೂ  ಮಲಕಿನ ಮೇಲೆ ಚುಟುಕೆ ಹಾಕುವರು. ಇದರಿಂದ ಮಕ್ಕಳಿಗೆ ಸೆಳೆತದ  ಖಾಯಿಲೆ ಬಾರದು..ಇದು ಒಂದು ರೀತಿಯ ಅಗ್ನಿ ಚಿಕಿತ್ಸೆ. ಆದಿತ್ಯವಾರ ಆಮವಾಸ್ಯೆಯ ದಿನ ಮಕ್ಕಳ ಅಂಗಾಲಿಗೆ ಕೇರುಸುಟ್ಟು ಅದರ ರಸವನ್ನು ಸೂಜಿಯಿಂದ ಮುಟ್ಟಿಸುವರು. ಆದರೆ ಅದು ಬೇರೆ ಭಾಗದಲ್ಲಿತಗುಲಿದರೆ ಗಾಯವಾಗುವುದು. ಮಕ್ಕಳಿಲ್ಲದ ಹೆಣ್ಣು ಮಕ್ಕಳು ಚಿಕ್ಕಮಕ್ಕಳ ಬೆನ್ನಿಗೆ ಕೇರು ಹಾಕಿದರೆ ಮಕ್ಕಳಾಗುವವು ಎಂಬ ನಂಬಿಕೆ. ಅದಕ್ಕಾಗಿ ಚಿಕ್ಕ ಮಕ್ಕಳನ್ನು ಬರಿ ಮೈನಲ್ಲಿ ಬಿಡುತ್ತಿರಲಿಲ್ಲ. ಹಾಗೇನಾದರೂ ಹಾಕಿದ್ದು ಕಂಡುಬಂದರೆ ಅವರ ಜನ್ಮ ಜಾಲಾಡುವರು.

ಮದ್ದು ಹಾಕುವರು ಎಂಬುದು ಒಂದು ಸಾರ್ವತ್ರಿಕ ಭಯ. ಅದೂ ಜೀವನದಲ್ಲಿ ತೃಪ್ತಿಇಲ್ಲದವರು ಯಾರನ್ನಾದರೂ ಊಟಕ್ಕೆ ಕರೆದು ಅದರಲ್ಲಿ ಮದ್ದು ಬೆರೆಸುವರು. ಅದನ್ನು ತಿಂದವರು ನವೆದು ನವೆದು ಸಾಯುವರು. ಅದಕ್ಕೆ ವಮನ ಮಾಡಿಸ ಮದ್ದು ತೆಗೆಯುವರು. ವಾಂತಿಯಲ್ಲಿ ಗೋಲಿ ಗಾತ್ರದ ಮದ್ದು ಕಂಡುಬರುವುದು. ಅದರ ಮೇಲೆ ಕೂದಲು  ಬೆಳೆದರೆ ಬಲು ತೆಗೆಸುವುದ ಬಲು ಕಷ್ಟ. ಹಲ್ಲಿಯನ್ನು ಕೊಂದು ಅದನ್ನುತಲೆಕೆಳಗೆ ನೇತುಹಾಕಿ ಅದರ ರಕ್ತ ತೊಟ್ಟಿಕ್ಕುವ ಜಾಗದಲ್ಲಿ ಅಕ್ಕಿ ಹರಡುವರು. ಅದರಿಂದ ತೋಯ್ದ ಅಕ್ಕಿಯನ್ನು ನಂತರ ಹಿಟ್ಟು ಮಾಡಿ ಆಹಾರದಲ್ಲಿ ಬೆರಸಿದರೆ ಅದು ತಿಂದವರಿಗೆ ಭಾದಿಸುವುದು ಎನ್ನಲಾಗುತಿತ್ತು. ಅಪರಿಚಿತರ ಮನೆಯಲ್ಲಿ ಆಹಾರ ಸೇವನೆ ಕಡಿಮೆ. ಅಕಸ್ಮಾತ್ ತಿನ್ನ ಬೇಕಾದರೆ ಊಟದ ನಂತರ ಏಲಕ್ಕಿ ತಿಂದರೆ ಪರಿಣಾಮ ಬೀರದು ಎಂದ ಗಂಡಸರ ಜೋಬಿನಲ್ಲಿ ಏಲಕ್ಕಿ ಇಟ್ಟುಕೊಳ್ಳುವರು.

ಗಂಡಸರ ಜೀವಾವಧಿ ಬಹು ಐವತ್ತಕ್ಕೂ ಕಡಿಮೆ. ಎದೆಯೊಡೆದು ಸಾವು ಬಹಳ. ಅದಕ್ಕೆ ವಯಸ್ಸಾದ ನಂತರ ಅತಿ ದುಃಖದ ಅಥವ ಸಂತೋಷದ ವಿಷಯವನ್ನು ತಟ್ಟನೆ ಹೇಳುತ್ತಿರಲಿಲ್ಲ. ಹಿರಿಯರ ಮೂಲಕ ಸುತ್ತಿ ಬಳಸಿ ತಿಳಿಸುತ್ತಿದ್ದರು. ಪ್ರತಿ ಮನೆಯಲ್ಲೂ ಕುಟ್ಟಣಿಗೆ ಇರುವುದು ಸಾಮಾನ್ಯ. ಕಾರಣ ಮಧ್ಯ ವಯಸ್ಸು ದಾಟಿದಂತೆ ಹಲ್ಲು ಸಡಿಲವಾಗಿ ತಾವಾಗಿಯೆ ಉದುರುವವು. ಆಗ ಹಲ್ಲು ಕಟ್ಟುವ ಡಾಕ್ಟರ್ ಇಲ್ಲವೆ ಇಲ್ಲ. ಅದೆನೋ ಕಾಣೆ ಚೀನಿಯರೊಬ್ಬರು ಮಾತ್ರ ಪಟ್ಟಣದಲ್ಲಿ ಇದ್ದರು. ಅವರು ಹಲ್ಲು ಕಟ್ಟುವುದಕ್ಕಿಂತ ಕೀಳುವುದೆ ಜಾಸ್ತಿ.

ಓಣಿಗೊಬ್ಬ ಕುರುಡರು ಸಾಮಾನ್ಯ. ಅವರು ಕಟಕಟ ಎಂದು ಸದ್ದು ಮಾಡುತ್ತಾ ಕೋಲು ಹಿಡಿದು ಬರುವರು. ಬಹುತೇಕರು ಕಣ್ಣಿನ ಪರೆಯಿಂದ ಕುರುಡರಾದವರು.. ಡಾ.ಮೋದಿ ಬಂದ ಮೇಲೆ ಉಚಿತ ಕಣ್ಣಿನ ಪರೆ ತೆಗೆವ ಚಳುವಳಿ ಪ್ರಾರಂಭವಾಯಿತು. ಕುರುಡುತನ ಸ್ವಲ್ಪ ಇಳಿಮುಖವಾಯಿತು. ಲಕ್ವ, ಮಧುಮೇಹ, ಕ್ಷಯದಂತಹ ಗಂಭಿರ ಕಾಯಿಲೆಗಳೂ ಇದ್ದವು, ಪಕ್ಷವಾತ ಬಂದರೆ ಕಾಡು ಪಾರಿವಾಳದ ರಕ್ತಲೇಪನ ಮಾಡುವರು. ಕೊನೆಗೆ ಅಂಕೋಲಕ್ಕೆ ಹೋಗುವರು. ಕ್ಷಯವಂತೂ ಸಾಮಾನ್ಯ.. ಕೆಮ್ಮುತ್ತಾ ಕೆಮ್ಮುತ್ತಾ ಸೊರಗಿ ಅಸ್ಥಿಪಂಜರದಂತೆ ಆದವರು ಬಹಳ. ಅವರಿಗೆ ನೀರಾವನ್ನು ಅದೂ ಸೂರ್ಯ ಹುಟ್ಟುವ ಮುಂಚೆ ಕುಡಿಯುವರು. ಜತೆಗೆ ಹಾಸಿಗೆ ಪಥ್ಯ ಅತಿ ಮುಖ್ಯ. ಮೂಳೆ ಮುರಿತಕ್ಕೆ  ಒದ್ದೆಯಾದ ಭತ್ತದ ತವಡನ್ನು ಬಿದಿರಿನ ಸೀಳು ಬಳಸಿ ಕಟ್ಟು ಹಾಕುವರು. ತೀವ್ರವಾದರೆ ಪುತ್ತೂರರಿಗೆ ಹೋಗುವರು. ಸಕ್ಕರೆ ಕಾಯಿಲೆ ಗೊತ್ತಾಗುವುದು. ಕಾಲಿನ ಗಾಯ ವ್ರಣವಾದಾಗ, ಇನ್ನೊಂದು ಮೋಟಾ ವಿಧಾನವೆಂದರೆ ಮೂತ್ರ ಮಾಡಿದ ಜಾಗದಲ್ಲಿ ಇರುವೆಗಳು ಮುಕುರಿದಾಗ ಸಕ್ಕರೆ ಕಾಯಿಲೆ ಇದೆ ಎನ್ನುವರು. ಅದಕ್ಕೆ ಬೇವಿನ ಸೊಪ್ಪಿನ ರಸ, ಹಾಗಲಕಾಯಿ ರಸ, ಮೆಂತ್ಯದ ಪುಡಿಯೆ ಔಷಧಿ. ಅನ್ನ ಬಿಟ್ಟು ಜೋಳ, ನವಣಿಯನ್ನು ಹೆಚ್ಚು ಬಳಸುವರು. ಇದರ ಜತೆ ನಾರು ಬೇರಿನ ಕಷಾಯ, ಚೂರ್ಣದ ಬಳಕೆಯೂ ಇತ್ತು. ಅದರಲ್ಲೂ ಉತ್ತಮ ಅಂಶಗಳು ಇದ್ದವು. ಸಣ್ಣ ಪುಟ್ಟ ಕಾಯಿಲೆಗಳನ್ನಂತೂ ಇದ್ದುದರಲ್ಲೆ ಇಲಾಜು ಮಾಡುವರು.

ಆರೋಗ್ಯ ರಕ್ಷಣೆ ಸರಕಾರದ ಹೊಣೆಯಾದ್ದರಿಂದ ಪ್ರಪಂಚದ ದೊಡ್ಡ ಅಣ್ಣ ಅಮೆರಿಕಾ ಟ್ರಿಲಿಯನ್‌ ಗಟ್ಟಲೆ ಸಾಲ ಮಾಡಿ ದಿವಾಳಿಯ ಅಂಚಿಗೆ ಬಂದಿದೆ. ಹಿರಿಯ ನಾಗರಿಕರ ಆರೈಕೆ, ಮೆಡಿಕೇರ್‌ ಮತ್ತು ಮೆಡಿಕಲ್ ಏಡ್‌ ವೆಚ್ಚದಿಂದ ಹೈರಾಣಾಗಿದೆ. ಹೋದ ಬಾರಿ ನನಗೆ ಅಮೆರಿಕಾದಲ್ಲಿ ಅಸೌಖ್ಯವಾದಾಗ ಐದು ತಾಸು ಆಸ್ಪತ್ರೆಯಲ್ಲಿದ್ದುದಕ್ಕೆ ಹತ್ತು ಸಾವಿರ ಡಾಲರ್ ಬಿಲ್ಲು ಬಂದಿತ್ತು. ತಕ್ಷಣ ಭಾರತಕ್ಕೆ ಬಂದರೆ ಬರಿ ಸಾವಿರದ ಐದು ನೂರು ರೂಪಾಯಿಯಲ್ಲಿ ಗುಣವಾಯಿತು  ಸದ್ಯ. ಭಾರತದಲ್ಲಿ ಆ ಸಮಸ್ಯೆ ಇಲ್ಲ. ಕಾರಣ ನಮ್ಮ ಯೋಚನಾ ವಿಧಾನ ಮತ್ತು ಪರಂಪರೆ. ರೋಗ ಗುಣವಾದರೆ ವೈದ್ಯನ ಕೈಗುಣ ಇಲ್ಲದಿದ್ದರೆ ರೋಗಿಯ ಕರ್ಮ ಎಂಬ ಭಾವನೆಯೆ ನೆಮ್ಮದಿ ನೀಡಿದೆ, ಡಾಕ್ಟರು ಔಷಧಿ ಕೊಡುವರೆ ಹೊರತು ಆಯುಷ್ಯ ಕೊಡಲಾರರು. ಹಣೆಯಲ್ಲಿ ಬರೆದಂತೆ ಆಗುವುದು ಎಂಬ  ಕರ್ಮ ಸಿದ್ದಾಂತವು ಬಹುತೇಕ ಜನರ ವೈದ್ಯಕೀಯ ವೆಚ್ಚವನ್ನು ಉಳಿಸಿದೆ. ಆದರೆ ಬದಲಾದ ಕಾಲದಲ್ಲಿ ಮೊದಲಿನಂತೆ ಇರಲಾಗದು. ಮುಂದೆ ನಮಗೂ ತೊಂದರೆ ಬರಬಹುದು. ಅದಕ್ಕೆ ಒಂದೆ ಪರಿಹಾರ. ವೈದ್ಯಕೀಯ ಕ್ಷೇತ್ರವನ್ನು ಉದ್ಯಮವಾಗಿಸದೆ ಆಧುನಿಕ ಚಿಕಿತ್ಸೆಯ  ಜತೆ ಪಾರಂಪರಿಕ ವಿಧಾನವನ್ನೂ ಬಳಸಿದರೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ರಕ್ಷಣೆಯಾಗುವುದು.

ನನಗಂತೂ ಮೊದಲ ಬಾರಿ ಡಾಕ್ಟರ್ ಜತೆ ಮುಖಾಮುಖಿಯಾದದ್ದು ಹೈಸ್ಕೂಲಿನ ಕೊನೆ ವರ್ಷದಲ್ಲಿ. ಅದೂ  ಶಾಲೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಹೋದಾಗ. ಅದು ನಮಗೆ ಅಗ್ನಿ ಪರೀಕ್ಷೆಯೆ ಆನಿಸಿತ್ತು. ಬಟ್ಟೆ ಬಿಚ್ಚಿ ಪರೀಕ್ಷೆ ಮಾಡುವರು ಎಂಬ ವದಂತಿಯಿಂದ ನಮಗೆ ಇನ್ನಿಲ್ಲದ ಸಂಕೋಚ. ನಂತರ ವೈದ್ಯರ ಮುಖ ನೋಡುವುದ ಹೇಗೆ ಎಂಬ ಮುಜುಗರ ನೆನಸಿಕೊಂಡರೆ ಮುಗುಳು ನಗೆ ಮೂಡುವುದು

ಅಪ್ಪಾಜಿರಾಯರು ಬರೆಯುವ ಆರರಿಂದ ಅರವತ್ತು ಸರಣಿ ೧೫:ಇದ್ದುದರಲ್ಲೆ ಇಲಾಜು

ಆರೋಗ್ಯ ರಕ್ಷಣೆಯ ಹೊಣೆಯಿಂದ ಅಮೆರಿಕಾದಲ್ಲಿ ಉಂಟಾದ ಹಣಕಾಸಿನ ಮುಗ್ಗಟ್ಟು ನನಗೆ ನಮ್ಮ ದೇಶದಲ್ಲಿನ ಹಳೆಯ ನೆನಪು ತಂದಿತು. ಮಾನವನ ಮೂಲಭೂತ ಅಗತ್ಯ ಎಂದರೆ ಅನ್ನ, ವಸತಿ ಮತ್ತು ಆರೋಗ್ಯ ಐವತ್ತು ವರ್ಷದ ಹಿಂದೆ ಸಾಧಾರಣವಾಗಿ ಎಲ್ಲರದು ರಟ್ಟೆಮುರಿವ ದುಡಿತ, ಹೊಟ್ಟೆತುಂಬ ಊಟ ಮತ್ತು ಕಣ್ಣು ತುಂಬ ನಿದ್ದೆ. ಮಣ್ಣು, ಕಲ್ಲು ಇಲ್ಲವೆ, ಹುಲ್ಲಿನ ಒಂದು ಸೂರು. ಇನ್ನು ಆರೋಗ್ಯ, ಚಿಕ್ಕ ಪುಟ್ಟ ಕಾಯಿಲೆಗೆ ಕ್ಯಾರೆ ಎನ್ನುತ್ತಿರಲಿಲ್ಲ. ನಮ್ಮವರು ಬಹುತೇಕ ಕಾಯಿಲೆಗಳಿಗೆ ವೈದ್ಯರ ಹತ್ತಿರ ಹೋಗುತ್ತಿರಲಿಲ್ಲ. ಔಷಧಿಯನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಊರಲ್ಲಿ ವೈದ್ಯರೂ ಇರಲಿಲ್ಲ. ಏನಿದ್ದರೂ ಖರ್ಚಿಲ್ಲದ ಚಿಕಿತ್ಸೆ.

ಬೇಸಿಗೆಯಲ್ಲಿನೀರಿನ ಬದಲಾವಣೆಯಿಂದ ಬರುವ ಸಮಸ್ಯೆ ಬೇಧಿ. ಅದು ಬೇಸಿಗೆಯಲ್ಲಿ ತುಸು ಹೆಚ್ಚು ಕಡಿಮೆಯಾದರೂ ಮಕ್ಕಳ ತಳ ಕಿತ್ತಿಕೊಳ್ಳುತಿತ್ತು. ತಿಪ್ಪೆಗೆ ತೆರಪಿಲ್ಲದ ಓಡಾಟ. ಬರೀ ನೀರು, ನೀರು ಬೇಧಿ. ನಡೆಯಲಾಗದಷ್ಟು ನಿತ್ರಾಣ. ಆದರೆ ಮನೆಯರಿಗೆ ಗಾಬರಿ ಇಲ್ಲ. ಮೇಲೆ ಮೇಲೆ ಮಜ್ಜಿಗೆ ಕುಡಿಸುವರು. ಅಲ್ಲಿಗೂ ಕಡಿಮೆಯಾಗಲಿಲ್ಲ ಆಗ   ಪಕ್ಕದ ಮನೆಯ ನೆವ್ವಾರ ದುಗ್ಗೆಮ್ಮನನ್ನು ಕರೆದರು.

ನೋಡಬೇ, ದುಗ್ಗೆವ್ವ, ಸಣ್ಣ ಸ್ವಾಮಿ ಯಾಕೋ ಉಚ್ಚಿಕೋತಾನೆ, ಎನ್ನುವರು.

ದುಗ್ಗೆಮ್ಮ ಸಾಕಷ್ಟು ವಯಸ್ಸಾದರೂ ಇನ್ನೂ ಗಟ್ಟಿಮುಟ್ಟು ಆಳು. ನಿತ್ಯವೂ ಪಟ್ಟಣಕ್ಕೆ ಮೊಸರು ಮಾರಲು ಹೋಗುವಳು. ತಲೆ ಎಲ್ಲ ಹಂಜಿ ಬುಟ್ಟಿಯಂತೆ ಬೆಳ್ಳಾಗಾದರೂ, ಹಲ್ಲು  ಮಾತ್ರ ಕರ್ರಗೆ ಹೊಳೆಯುತಿದ್ದವು. ಕಾರಣ ಅವರು ತಿಕ್ಕುತಿದ್ದ ನಸಿ ಪುಡಿ. ದುಗ್ಗೆಮ್ಮ ಬಂದವಳೆ ಬಿಸಿ ಬೂದಿ ತಾಂಬಾ ಯಮ್ಮಾ, ಎನ್ನುವಳು. ನಂತರ ಅವಳ ಎದುರಿನಲ್ಲಿ ಅಂಗಿ ಬಿಚ್ಚಿ ಬರಿ ಮೈನಲ್ಲಿ ಕೂಡಿಸಿದರು. ಅವಳು ತನ್ನ ಬೆರಳುಗಳಿಗೆ ಬೂದಿ ಸವರಿಕೊಂಡು ನಮ್ಮ ಕೈ ಎತ್ತಿಸಿ ಕೊಂಕುಳಿಗೆ ಬೂದಿ ಸವರಿ ತೋಳಿನ ಕೆಳಭಾಗದ ನರ ಹಿಡಿದು ಬಲವಾಗಿ ಕೆಳಗೆ ಜಗ್ಗುವಳು. ಅವು ಲಳಕ್, ಲಳಕ್ ಎನ್ನವವು. ನೋವಿನಿಂದ ಕೈ ಕೊಡವಿದರೂ ಹಾಗೆಯೆ ಎರಡೂ ಕಡೆಗೂ ಮೂರು ಬಾರಿ ಎಳೆದಾಗ ತಟ್ಟನೆ ಬೇಧಿ ನಿಲ್ಲುವುದು, ಅದನ್ನು "ಅರವೆ"  ಹರಿಯುವುದು ಎಂದು ಕರೆಯುತಿದ್ದರು. ವಿರೇಚನ ನೀರಿನಿಂದ ಬರುವ ರೋಗ. ಈಗಿನ ಡಯೇರೀಯಾ ಕೂಡಾ ನೀರಿನ ಸೋಂಕಿನಿಂದ ಬರುವುದು. ಆದರೆ ಸೋಜಿಗ ಎಂದರೆ ಈಗ ಅದನ್ನು ಗುಣಪಡಿಸಲ ಒಂದು ಕೋರ್ಸ ಆಂಟಿ  ಬಯಾಟಿಕ್  ನೀಡಲೇಬೇಕು. ಆದರೆ ಅಂದು ಯಾವುದೆ ಔಷಧಿ ಇಲ್ಲದೆ ತೋಳಿನ ನರಗಳನ್ನು ಜಗ್ಗಿದರೆ ಸಾಕಿತ್ತು. ನನ್ನ ಅನೇಕ ವೈದ್ಯಮಿತ್ರರನ್ನು ವಿಚಾರಿಸಿದರೂ ವಿವರಣೆ ದೊರೆಯಲಿಲ್ಲ. ಅಲೋಪತಿಯಲ್ಲಿ ಸಿಗದಿದ್ದರೂ ಆಕ್ಯೂಪ್ರಷರ್ ಚಿಕಿತ್ಸೆಯಲ್ಲಿ ತುಸು ಮಟ್ಟಿಗೆ ಸಮಾಧಾನಕರ ಉತ್ತರ  ಇದೆ ಎನಿಸಿದೆ.

ಹೊಟ್ಟೆನೋವಿಗೆ ಇನ್ನೊಂದು ಚಿಕಿತ್ಸೆ ಚೆನ್ನಾಗಿ ನೆನಪಿದೆ.. ಹೆಚ್ಚಾಗಿ ಹಾರಿ ಕುಣಿದು ಕುಪ್ಪಳಿಸಿದಾಗ ಹೆಚ್ಚಿನ ಭಾರ ಎತ್ತಿದಾಗ ಹೊಟ್ಟೆಮುರಿತ ಜತೆಗೆ ಬೇಧಿ. ಹೆಂಗಸರಿಗೆ ದೊಡ್ಡ ಕೊಡ ಹೊತ್ತರೆ ಹೊಟ್ಟೆನೋವು ಆಗ ಬಟ್ಟಿ ಬಿದ್ದಿದೆ ಎನ್ನವರು. ಅದು ಬಟ್ಟಿ ತಿಕ್ಕುವದರಿಂದ ಗುಣವಾಗುತಿತ್ತು. ಬಟ್ಟಿತಿಕ್ಕುವುದು ಎಂದರೆ ಗೋಡೆ ಕಡೆ ಮುಖ ಮಾಡಿ ನಿಲ್ಲಿಸಿ ಎರಡೂ ಕಾಲ ಹಿಮ್ಮಡಕ್ಕೆ ಎಣ್ಣೆ ಹಚ್ಚಿ ನೀವುತಿದ್ದರು. ಅದು ನೋವಿಗಿಂತ ಹೆಚ್ಚಾಗಿ ಕಚಗುಳಿ ಇಟ್ಟಂತಾಗುವುದು. ಒಂದೊಂದು ಸಲ ಬಟ್ಟಿ ತಿಕ್ಕಿಸಿಕೊಳ್ಳುವವರು ತಕ ತಕ ಕುಣಿಯುವರು. ಅವರನ್ನು ಹೇಗೋ ನಿಲ್ಲಿಸಿ ಎರಡು ನಿಮಿಷ ನರಗಳನ್ನು ತಿಕ್ಕಿದರೆ ಸಾಕು ಹೊಟ್ಟೆನೋವು ತಟ್ಟನೆ ಮಾಯ.

ಹೊಟ್ಟೆನೋವು ತೀವ್ರವಾಗಿದ್ದರೆ ರಂಜು ಹಿಡಿಯುವರು. ಹೊಟ್ಟೆನೋವಿನಿಂದ ಬಳಲುತ್ತಿರುವವರನ್ನು ಅಂಗಾತ ಮಲಗಿಸಿ ಹೊಕ್ಕಳಿನ ಸುತ್ತ ಎಣ್ಣೆ ಸವರುವರು. ನಂತರ  ಸಗಣಿಯಲ್ಲಿ ಮಾಡಿದ ದೀಪದ ಪ್ರಣತಿಯಲ್ಲಿ ದೀಪ ಹಚ್ಚಿ ಹೊಕ್ಕಳ ಮೇಲೆ ಇಡುವರು.ನಂತರ ಅದರ ಮೇಲೆ ಹಿತ್ತಾಳೆಯ ಚೊಂಬು ಬೋರಲು ಹಾಕಿದಾಗ ತುಸು ಹೊತ್ತು   ಉರಿದು ಆರಿಹೋಗುವುದು. ಆಗ ಹೊಟ್ಟೆಯಲ್ಲಿನ ಮಾಂಸ ಖಂಡಗಳನ್ನು ಒಳಗೆ ಎಳೆದ ಅನುಭವ ಅಗುವುದು. ಅಲ್ಲದೆ ಚೊಂಬು ಹೊಟ್ಟೆಗೆ ಗಟ್ಟಿಯಾಗಿ  ಅಂಟಿಕೊಂಡಿರುವುದು. ಅದನ್ನು ತೆಗೆಯಲು ಚೊಂಬಿನ ಬಾಯಿಯ ಹತ್ತಿರದ ಮಾಂಸ ಖಂಡವನ್ನು ತುಸು ಕೆಳಗೆ ಒತ್ತಿ ಗಾಳಿ ಚೊಂಬಿನ ಒಳ ಹೋಗುವಂತೆ ಮಾಡಿದರೆ ಚೊಂಬು ಶಬ್ದ ಮಾಡುತ್ತಾ ಹಿಡಿತ ಸಡಿಲವಾಗುತಿತ್ತು. ಇದರಿಂದ ಹೊಟ್ಟೆ ತುಸು ನಿರಾಳವೆನಿಸುವುದು. ಅದಕ್ಕೆ ವೈಜ್ಞಾನಿಕ ಹಿನ್ನೆಲೆ ಇದೆ. ದೀಪವನ್ನುಇಟ್ಟು ಅದರ ಮೇಲೆ ತಂಬಿಗೆ ಕವಚಿ ಹಾಕಿದಾಗ ಅದರಲ್ಲಿನ   ಆಮ್ಲಜನಕವನ್ನು ಉಪಯೋಗಿಸಿಕೊಂಡು ದೀಪ ಉರಿಯುವುದು. ಅದು ಮುಗಿದೊಡನೆ ದೀಪ ಆರುವುದು. ಚೊಂಬಿನಲ್ಲಿನ ಒತ್ತಡ  ಕಡಿಮೆಯಾಗಿ ಹೊರಗಿನ ಒತ್ತಡ ಹೆಚ್ಚಿರುವುದರಿಂದ ಅದು ಹೊಟ್ಟೆಗೆ ಅಂಟಿಕೊಳ್ಳುವುದು. ಒತ್ತಡದ ವ್ಯತ್ಯಾಸದಿಂದ ಹೊಟ್ಟೆಗೆ ಹಾಯೆನಿಸುವುದು. ಆದರೆ ಇದನ್ನು ಹೆಂಗಸರಿಗೆ ಮಾಡುವಾಗ ಬಹು ಎಚ್ಚರ ವಹಿಸಬೇಕು. ಅವರು ಎಳೆ ಬಸಿರಿಯರಾಗಿದ್ದರೂ ರಂಜು ಹಿಡಿಯುತ್ತಿರಲಿಲ್ಲ. ಅದರಿಂದ ಗರ್ಭಪಾತವಾಗುವ ಸಂಭವ ಹೆಚ್ಚು.

ಸಾಮಾನ್ಯವಾಗಿ  ಮಕ್ಕಳ ಇನ್ನೊಂದು ವ್ಯಾಧಿ ಊಟ ಸೇರದಿರುವುದು ಮತ್ತು ಅತಿ ಅಳು. ಅದಕ್ಕೆ ಉಪ್ಪುಮಂತ್ರಿಸಿ ತುಪ್ಪ ಅನ್ನದ ಜತೆ ತಿನ್ನಸಿದರೆ ಸಾಕಿತ್ತು. ಚಿಕ್ಕಮಕ್ಕಳು ಜಾಸ್ತಿ ಅತ್ತರೆ ದೃಷ್ಟಿ ತೆಗೆದು ಹಾಕುವ ಪದ್ದತಿ ಈಗಲೂ ಇದೆ. ಹಂಚಿ ಕಡ್ಡಿಯನ್ನು ಮಕ್ಕಳ ಮುಖದ ಮೂಂದೆ ಮೂರುಬಾರಿ ನಿವಾಳಿಸಿ ಅತ್ತಿ ದೃಷ್ಟಿ, ಕತ್ತಿ ದೃಷ್ಟಿ, ತಾಯಿದೃಷ್ಟಿ, ನಾಯಿ ದೃಷ್ಟಿ, ಊರ ಮಂದಿ ದೃಷ್ಟಿ ನಿವಾರಣೆ ಆಗಲಿ ಎನ್ನುತ್ತಾ ಮೂಲೆಯಲ್ಲಿ ಸುಡುವರು. ಅದು ಛಟ್ ಛಟ್ ಅಂತ ಸದ್ದು ಮಾಡಿದರೆ ಎಷ್ಟು ದೃಷ್ಟಿಯಾಗಿದೆ ಎಂದು ಹಲಬುವರು. ಇನ್ನೂ ಕೆಲವರು ಒಣ ಮೆಣಸಿನಕಾಯಿಯನ್ನು ಇಳೆ ದೆಗೆದು ಒಲೆಯ ಉರಿಯಲ್ಲ ಹಾಕುವರು. ದೃಷ್ಟಿಯಾಗಿದ್ದರೆ ಘಾಟು ಬರುವುದಿಲ್ಲ ಎಂಬ ನಂಬಿಕೆ. ಈಗ ಇವೆಲ್ಲ ನಗರ ಪ್ರದೇಶದಲ್ಲಿ ಮಾಯವಾಗಿವೆ. ಹಂಚಿಕಟ್ಟಿ ದೊರಕುವುದಿಲ್ಲ. ಒಲೆಯ ಉರಿ ಮೊದಲೆ ಇಲ್ಲ.

ಆಗಿನದೊಡ್ಡ ಪಿಡುಗು ಎಂದರೆ ಸಿಡುಬು. ನಾಲಕ್ಕು ಜನರಲ್ಲಿ ಒಬ್ಬರ ಮುಖದ ಮೇಲೆ ಅದರ ಕಲೆಗಳು. ಸಿಡುಬು ಬಂದರೆ ಅವರ ಮೈ ತುಂಬಾ ಗುಳ್ಳೆಗಳು ಎದ್ದು ಕೀವು ತುಂಬುವವು. ಮೈ ಎಲ್ಲ ಜರಡಿಯಂತಾಗುವುದು. ಆಗ ಅವರನ್ನು ಬರಿ ಮೈನಲ್ಲಿ ಬಾಳೆ ಎಲೆ ಮೇಲೆ ಮಲಗಿಸಿ, ಬಾಳೆ ಎಳೆ ಹೊಚ್ಚಿ ಬೇವಿನ ತೊಪ್ಪಲಲ್ಲಿ ಗಾಳಿ ಹಾಕುವರು. ಅದನ್ನು ದೊಡ್ಡಮ್ಮ ಎನ್ನುವರು. ಅದಕ್ಕೆ ಔಷಧಿಯೆ ಇಲ್ಲ. ಬಹುತೇಕ ಅದರ ಕಲೆ ಉಳಿಯುವುದು. ಇನ್ನೊಂದು ಸಣ್ಣ ಅಮ್ಮ. ಅದಕ್ಕೆ ತಟ್ಟು ಅಥವ ಗೊಬ್ಬರ ಎಂದೂ ಹೆಸರು. ಆಗ ಮೈ ಮೇಲೆಲ್ಲ ಚಿಕ್ಕಚಿಕ್ಕ ಕೀವಿಲ್ಲದ ಗುಳ್ಳೆಗಳು. ಜತೆಗೆ ಜ್ವರ ಬರುವುದು. ಅದರ ಲಕ್ಷಣ ಕಾಣತ್ತಿರುವಂತೆ ತಿನ್ನಲು ಎಲ್ಲ ನಂಜಿನ ಪದಾರ್ಥ ಕೊಡುವರು. ಉದ್ದೇಶ ಅವು ಪೂರ್ಣ ಹೊರ ಬೀಳಲಿ ಎಂದು. ಆಗಲೂ ಯಾವುದೆ ಔಷಧಿ ಇಲ್ಲ. ಒಂಬತ್ತು ದಿನ ಕಾಯುವರು, ಆ ಅವಧಿಯಲ್ಲಿ ಊರು ಬಿಟ್ಟು ಹೋಗುವ ಹಾಗಿರಲಿಲ್ಲ. ಒಂಬತ್ತನೆ ದಿನ ಗ್ರಾಮ ದೇವತೆಗೆ ಹಣ್ಣು ಕಾಯಿ ಅಕ್ಕಿ ಮೊಸರಿನ ಸಮರ್ಪಣೆ ಯಾದ ಮೇಲೆ ಸಾಧಾರಣ ಸ್ಥಿತಿಗೆ ಬರುತಿತ್ತು.

ಮಕ್ಕಳಿಗೆ ಹೆಚ್ಚಾಗಿ ಭಾದಿಸವುದು ನಾಯಿ ಕೆಮ್ಮು. ಅದು ತಿಂಗಳುಗಟ್ಟಲೆ ಇರುವುದು. ಎಳೆಯರು ಬಹಳ ಬಳಲುವರು. ಅದಕ್ಕೆ ಮಂತ್ರ ಹಾಕಿಸುವರೆ ವಿನಃ ಔಷಧಿ ಇರಲಿಲ್ಲ. ಸಾಧಾರಣ ಕೆಮ್ಮಾದರೆ ಗಂಟಲಿಗೆ ಕುತ್ತಿಗೆ ಕೆಳಗೆ ಬೇಲಿಯಲ್ಲಿನ ಕಳ್ಳಿಯ ಹಾಲು ತುಸುವೆ ಹಚ್ಚಿ  ಅದರ ಬುಡದ ಮಣ್ಣು ಸವರವರು. ಕೆಮ್ಮು ಕಡಿಮೆಯಾಗುವುದು. ದೇಹದ ಇತರ ಭಾಗಕ್ಕೆ ಕಳ್ಳಿ ಹಾಲು ತಗುಲಿದರೂ ಸಾಕು ಗುಳ್ಳೆಯಾಗುವವು. ಆದರೆ ಕೆಮ್ಮಿದ್ದವರಿಗೆ ಏನೂ ಆಗುತ್ತಿರಲಿಲ್ಲ.

ಕಾಮಣಿ ಇನ್ನೊಂದು ಪ್ರಬಲ ರೋಗ. ಅದರಲ್ಲಿ ಅನೇಕ ವಿಧ. ಕೂಳು ಕಾಮಣಿ ಅಂದರೆ ತಿಂದದ್ದೆ ತಿಂದದ್ದು. ಮಿತಿಯೆ ಇಲ್ಲ. ನಿದ್ದೆ ಕಾಮಣಿ ಎಂದರೆ ಸದಾ ಮಲಗಿರುವುದು. ಕಂಭಕರ್ಣನ ಮೊಮ್ಮಕ್ಕಳ ತರಹ. ಇನ್ನೊಂದು ಹಳದಿ ಕಾಮಣಿ. ಕಣ್ಣು ಮೈ ಎಲ್ಲ ಹಳದಿಯಾಗುವುದು. ಅದು ತೀವ್ರವಾದಾಗ ಹಾಕಿಕೊಂಡ ಬಿಳಿ ಬಟ್ಟೆ ಹಳದಿ ಬಣ್ಣಕ್ಕೆ ತಿರುಗುವುದು ಎಂಬ ನಂಬಿಗೆ ಇತ್ತು. ಅದಕ್ಕೆ ಹಸಿರು ಔಷಧಿ ಕೊಡುವರು ಮೊಸರು, ಎಣ್ಣೆ ತುಪ್ಪ ತಿನ್ನುವ ಹಾಗಿಲ್ಲ. ಅಲ್ಲದೆ ಯಾವುದೋ ಸಸ್ಯದ ರಸ ಲೇಪಿಸಿದ ದಾರವನ್ನು ರಟ್ಟೆಗೆ ಕಟ್ಟಿದಾಗ ಅದು ತೋಳಿಗೆ ಉರಿ ಉಂಟುಮಾಡುತಿತ್ತು. ಅದರಿಂದ ತೋಳಿನ ಮೇಲೆ ಬರೆ ಹಾಕಿದ ಗುರುತು ಮೂಡುವುದು. ಆದರೆ ಆ ಗುರುತು ಮಾಸುವುದರೊಳಗೆ ಕಾಮಣಿ ಕಡಿಮೆಯಾಗುತಿತ್ತು.

ಎಲ್ಲರ ಮನೆಯಲ್ಲೂ ೮-೧೦ ಮಕ್ಕಳು ಹುಟ್ಟಿದರೂ ಉಳಿಯುವುದು ಎರಡೋ ಮೂರೋ ಮಕ್ಕಳ ಮರಣದ ಪ್ರಮಾಣ ಹೆಚ್ಚಿತ್ತು. ಕೆಲವರಂತೂ ಹುಟ್ಟಿದ ಮಕ್ಕಳು ಬೇಗ ಸಾಯುವುದರಿಂದ ಉಳಿದ ಮಗುವಿಗೆ ಕಲ್ಲು, ಗುಂಡು, ತಿಪ್ಪೆ ಎಂದು ಹೆಸರಿರುವುದು. ಅವರನ್ನು ಕಲ್ಲಣ್ಣ, ಗುಂಡಮ್ಮ, ತಿಪ್ಪಕ್ಕ ಎಂದೆ ಕರೆಯುವರು. ಆ ರೀತಿಯಲ್ಲಿ  ಅವರು ಹೆಚ್ಚುಕಾಲ ಬದುಕಲಿ ಎಂಬುದು ಅವರ ಉದ್ದೇಶ.  ಹೆಂಗಸರ ಮರಣ ಪ್ರಮಾಣ ಹೆಚ್ಚು. ಅದೂ ಹೆರಿಗೆಯ ಸಮಯದಲ್ಲಿ. ಮೊದಲನೆ ಹೆರಿಗೆ ಯಾಗುವುದು ಎಂದರೆ ಮರುಜನ್ಮವಾದಂತೆ. ಹೆರಿಗೆ ತಡವಾದರೆ ವೀಳೆದ ಎಲೆಯ ಮೇಲೆ ಕುಂಕುಮದಲ್ಲಿ ಚಕ್ರ ಬಿಂಬನ ಕೋಟೆಯನ್ನು ಬರದು ಕೊಡುವರು.. ನೋವು ತಿನ್ನುವ ಮಹಿಳೆಗೆ ಅದನ್ನು ದಿಟ್ಟಿಸಿ ನೋಡುತ್ತಾ ಅದರಿಂದ ಹೊರ ಬರುವ ಹಾದಿ ಹುಡುಕಲು ಹೇಳುವರು. ಅದು ಅವಳಮನಸ್ಸನ್ನು ಬೇರೆ ಕಡೆ ಸೆಳೆವ ಯೋಜನೆ. ಅದನ್ನು ದಿಟ್ಟಿಸುತ್ತಾ ಇದ್ದರೆ ನೋವು ಮರೆಯಾಗುವುದು.

ಮಕ್ಕಳಿಗೆ ಹುಟ್ಟಿದ ತಕ್ಷಣ ಬಳೆ ಚೂರಿನಿಂದ ಹೊಟ್ಟೆಯ ಮೇಲೆ ಬಿಸಿ ಮುಟ್ಟಿಸುವರು. ಅಲ್ಲದ ಬೆಸ ತಿಂಗಳುಗಳಲ್ಲಿ ಬಳೆ ಚೂರನ್ನು ಕಾಯಿಸಿ ನಡು ನೆತ್ತಿಯಮೇಲೆ, ಎರಡೂ  ಮಲಕಿನ ಮೇಲೆ ಚುಟುಕೆ ಹಾಕುವರು. ಇದರಿಂದ ಮಕ್ಕಳಿಗೆ ಸೆಳೆತದ  ಖಾಯಿಲೆ ಬಾರದು..ಇದು ಒಂದು ರೀತಿಯ ಅಗ್ನಿ ಚಿಕಿತ್ಸೆ. ಆದಿತ್ಯವಾರ ಆಮವಾಸ್ಯೆಯ ದಿನ ಮಕ್ಕಳ ಅಂಗಾಲಿಗೆ ಕೇರುಸುಟ್ಟು ಅದರ ರಸವನ್ನು ಸೂಜಿಯಿಂದ ಮುಟ್ಟಿಸುವರು. ಆದರೆ ಅದು ಬೇರೆ ಭಾಗದಲ್ಲಿತಗುಲಿದರೆ ಗಾಯವಾಗುವುದು. ಮಕ್ಕಳಿಲ್ಲದ ಹೆಣ್ಣು ಮಕ್ಕಳು ಚಿಕ್ಕಮಕ್ಕಳ ಬೆನ್ನಿಗೆ ಕೇರು ಹಾಕಿದರೆ ಮಕ್ಕಳಾಗುವವು ಎಂಬ ನಂಬಿಕೆ. ಅದಕ್ಕಾಗಿ ಚಿಕ್ಕ ಮಕ್ಕಳನ್ನು ಬರಿ ಮೈನಲ್ಲಿ ಬಿಡುತ್ತಿರಲಿಲ್ಲ. ಹಾಗೇನಾದರೂ ಹಾಕಿದ್ದು ಕಂಡುಬಂದರೆ ಅವರ ಜನ್ಮ ಜಾಲಾಡುವರು.

ಮದ್ದು ಹಾಕುವರು ಎಂಬುದು ಒಂದು ಸಾರ್ವತ್ರಿಕ ಭಯ. ಅದೂ ಜೀವನದಲ್ಲಿ ತೃಪ್ತಿಇಲ್ಲದವರು ಯಾರನ್ನಾದರೂ ಊಟಕ್ಕೆ ಕರೆದು ಅದರಲ್ಲಿ ಮದ್ದು ಬೆರೆಸುವರು. ಅದನ್ನು ತಿಂದವರು ನವೆದು ನವೆದು ಸಾಯುವರು. ಅದಕ್ಕೆ ವಮನ ಮಾಡಿಸ ಮದ್ದು ತೆಗೆಯುವರು. ವಾಂತಿಯಲ್ಲಿ ಗೋಲಿ ಗಾತ್ರದ ಮದ್ದು ಕಂಡುಬರುವುದು. ಅದರ ಮೇಲೆ ಕೂದಲು  ಬೆಳೆದರೆ ಬಲು ತೆಗೆಸುವುದ ಬಲು ಕಷ್ಟ. ಹಲ್ಲಿಯನ್ನು ಕೊಂದು ಅದನ್ನುತಲೆಕೆಳಗೆ ನೇತುಹಾಕಿ ಅದರ ರಕ್ತ ತೊಟ್ಟಿಕ್ಕುವ ಜಾಗದಲ್ಲಿ ಅಕ್ಕಿ ಹರಡುವರು. ಅದರಿಂದ ತೋಯ್ದ ಅಕ್ಕಿಯನ್ನು ನಂತರ ಹಿಟ್ಟು ಮಾಡಿ ಆಹಾರದಲ್ಲಿ ಬೆರಸಿದರೆ ಅದು ತಿಂದವರಿಗೆ ಭಾದಿಸುವುದು ಎನ್ನಲಾಗುತಿತ್ತು. ಅಪರಿಚಿತರ ಮನೆಯಲ್ಲಿ ಆಹಾರ ಸೇವನೆ ಕಡಿಮೆ. ಅಕಸ್ಮಾತ್ ತಿನ್ನ ಬೇಕಾದರೆ ಊಟದ ನಂತರ ಏಲಕ್ಕಿ ತಿಂದರೆ ಪರಿಣಾಮ ಬೀರದು ಎಂದ ಗಂಡಸರ ಜೋಬಿನಲ್ಲಿ ಏಲಕ್ಕಿ ಇಟ್ಟುಕೊಳ್ಳುವರು.

ಗಂಡಸರ ಜೀವಾವಧಿ ಬಹು ಐವತ್ತಕ್ಕೂ ಕಡಿಮೆ. ಎದೆಯೊಡೆದು ಸಾವು ಬಹಳ. ಅದಕ್ಕೆ ವಯಸ್ಸಾದ ನಂತರ ಅತಿ ದುಃಖದ ಅಥವ ಸಂತೋಷದ ವಿಷಯವನ್ನು ತಟ್ಟನೆ ಹೇಳುತ್ತಿರಲಿಲ್ಲ. ಹಿರಿಯರ ಮೂಲಕ ಸುತ್ತಿ ಬಳಸಿ ತಿಳಿಸುತ್ತಿದ್ದರು. ಪ್ರತಿ ಮನೆಯಲ್ಲೂ ಕುಟ್ಟಣಿಗೆ ಇರುವುದು ಸಾಮಾನ್ಯ. ಕಾರಣ ಮಧ್ಯ ವಯಸ್ಸು ದಾಟಿದಂತೆ ಹಲ್ಲು ಸಡಿಲವಾಗಿ ತಾವಾಗಿಯೆ ಉದುರುವವು. ಆಗ ಹಲ್ಲು ಕಟ್ಟುವ ಡಾಕ್ಟರ್ ಇಲ್ಲವೆ ಇಲ್ಲ. ಅದೆನೋ ಕಾಣೆ ಚೀನಿಯರೊಬ್ಬರು ಮಾತ್ರ ಪಟ್ಟಣದಲ್ಲಿ ಇದ್ದರು. ಅವರು ಹಲ್ಲು ಕಟ್ಟುವುದಕ್ಕಿಂತ ಕೀಳುವುದೆ ಜಾಸ್ತಿ.

ಓಣಿಗೊಬ್ಬ ಕುರುಡರು ಸಾಮಾನ್ಯ. ಅವರು ಕಟಕಟ ಎಂದು ಸದ್ದು ಮಾಡುತ್ತಾ ಕೋಲು ಹಿಡಿದು ಬರುವರು. ಬಹುತೇಕರು ಕಣ್ಣಿನ ಪರೆಯಿಂದ ಕುರುಡರಾದವರು.. ಡಾ.ಮೋದಿ ಬಂದ ಮೇಲೆ ಉಚಿತ ಕಣ್ಣಿನ ಪರೆ ತೆಗೆವ ಚಳುವಳಿ ಪ್ರಾರಂಭವಾಯಿತು. ಕುರುಡುತನ ಸ್ವಲ್ಪ ಇಳಿಮುಖವಾಯಿತು. ಲಕ್ವ, ಮಧುಮೇಹ, ಕ್ಷಯದಂತಹ ಗಂಭಿರ ಕಾಯಿಲೆಗಳೂ ಇದ್ದವು, ಪಕ್ಷವಾತ ಬಂದರೆ ಕಾಡು ಪಾರಿವಾಳದ ರಕ್ತಲೇಪನ ಮಾಡುವರು. ಕೊನೆಗೆ ಅಂಕೋಲಕ್ಕೆ ಹೋಗುವರು. ಕ್ಷಯವಂತೂ ಸಾಮಾನ್ಯ.. ಕೆಮ್ಮುತ್ತಾ ಕೆಮ್ಮುತ್ತಾ ಸೊರಗಿ ಅಸ್ಥಿಪಂಜರದಂತೆ ಆದವರು ಬಹಳ. ಅವರಿಗೆ ನೀರಾವನ್ನು ಅದೂ ಸೂರ್ಯ ಹುಟ್ಟುವ ಮುಂಚೆ ಕುಡಿಯುವರು. ಜತೆಗೆ ಹಾಸಿಗೆ ಪಥ್ಯ ಅತಿ ಮುಖ್ಯ. ಮೂಳೆ ಮುರಿತಕ್ಕೆ  ಒದ್ದೆಯಾದ ಭತ್ತದ ತವಡನ್ನು ಬಿದಿರಿನ ಸೀಳು ಬಳಸಿ ಕಟ್ಟು ಹಾಕುವರು. ತೀವ್ರವಾದರೆ ಪುತ್ತೂರರಿಗೆ ಹೋಗುವರು. ಸಕ್ಕರೆ ಕಾಯಿಲೆ ಗೊತ್ತಾಗುವುದು. ಕಾಲಿನ ಗಾಯ ವ್ರಣವಾದಾಗ, ಇನ್ನೊಂದು ಮೋಟಾ ವಿಧಾನವೆಂದರೆ ಮೂತ್ರ ಮಾಡಿದ ಜಾಗದಲ್ಲಿ ಇರುವೆಗಳು ಮುಕುರಿದಾಗ ಸಕ್ಕರೆ ಕಾಯಿಲೆ ಇದೆ ಎನ್ನುವರು. ಅದಕ್ಕೆ ಬೇವಿನ ಸೊಪ್ಪಿನ ರಸ, ಹಾಗಲಕಾಯಿ ರಸ, ಮೆಂತ್ಯದ ಪುಡಿಯೆ ಔಷಧಿ. ಅನ್ನ ಬಿಟ್ಟು ಜೋಳ, ನವಣಿಯನ್ನು ಹೆಚ್ಚು ಬಳಸುವರು. ಇದರ ಜತೆ ನಾರು ಬೇರಿನ ಕಷಾಯ, ಚೂರ್ಣದ ಬಳಕೆಯೂ ಇತ್ತು. ಅದರಲ್ಲೂ ಉತ್ತಮ ಅಂಶಗಳು ಇದ್ದವು. ಸಣ್ಣ ಪುಟ್ಟ ಕಾಯಿಲೆಗಳನ್ನಂತೂ ಇದ್ದುದರಲ್ಲೆ ಇಲಾಜು ಮಾಡುವರು.

ಆರೋಗ್ಯ ರಕ್ಷಣೆ ಸರಕಾರದ ಹೊಣೆಯಾದ್ದರಿಂದ ಪ್ರಪಂಚದ ದೊಡ್ಡ ಅಣ್ಣ ಅಮೆರಿಕಾ ಟ್ರಿಲಿಯನ್‌ ಗಟ್ಟಲೆ ಸಾಲ ಮಾಡಿ ದಿವಾಳಿಯ ಅಂಚಿಗೆ ಬಂದಿದೆ. ಹಿರಿಯ ನಾಗರಿಕರ ಆರೈಕೆ, ಮೆಡಿಕೇರ್‌ ಮತ್ತು ಮೆಡಿಕಲ್ ಏಡ್‌ ವೆಚ್ಚದಿಂದ ಹೈರಾಣಾಗಿದೆ. ಹೋದ ಬಾರಿ ನನಗೆ ಅಮೆರಿಕಾದಲ್ಲಿ ಅಸೌಖ್ಯವಾದಾಗ ಐದು ತಾಸು ಆಸ್ಪತ್ರೆಯಲ್ಲಿದ್ದುದಕ್ಕೆ ಹತ್ತು ಸಾವಿರ ಡಾಲರ್ ಬಿಲ್ಲು ಬಂದಿತ್ತು. ತಕ್ಷಣ ಭಾರತಕ್ಕೆ ಬಂದರೆ ಬರಿ ಸಾವಿರದ ಐದು ನೂರು ರೂಪಾಯಿಯಲ್ಲಿ ಗುಣವಾಯಿತು  ಸದ್ಯ. ಭಾರತದಲ್ಲಿ ಆ ಸಮಸ್ಯೆ ಇಲ್ಲ. ಕಾರಣ ನಮ್ಮ ಯೋಚನಾ ವಿಧಾನ ಮತ್ತು ಪರಂಪರೆ. ರೋಗ ಗುಣವಾದರೆ ವೈದ್ಯನ ಕೈಗುಣ ಇಲ್ಲದಿದ್ದರೆ ರೋಗಿಯ ಕರ್ಮ ಎಂಬ ಭಾವನೆಯೆ ನೆಮ್ಮದಿ ನೀಡಿದೆ, ಡಾಕ್ಟರು ಔಷಧಿ ಕೊಡುವರೆ ಹೊರತು ಆಯುಷ್ಯ ಕೊಡಲಾರರು. ಹಣೆಯಲ್ಲಿ ಬರೆದಂತೆ ಆಗುವುದು ಎಂಬ  ಕರ್ಮ ಸಿದ್ದಾಂತವು ಬಹುತೇಕ ಜನರ ವೈದ್ಯಕೀಯ ವೆಚ್ಚವನ್ನು ಉಳಿಸಿದೆ. ಆದರೆ ಬದಲಾದ ಕಾಲದಲ್ಲಿ ಮೊದಲಿನಂತೆ ಇರಲಾಗದು. ಮುಂದೆ ನಮಗೂ ತೊಂದರೆ ಬರಬಹುದು. ಅದಕ್ಕೆ ಒಂದೆ ಪರಿಹಾರ. ವೈದ್ಯಕೀಯ ಕ್ಷೇತ್ರವನ್ನು ಉದ್ಯಮವಾಗಿಸದೆ ಆಧುನಿಕ ಚಿಕಿತ್ಸೆಯ  ಜತೆ ಪಾರಂಪರಿಕ ವಿಧಾನವನ್ನೂ ಬಳಸಿದರೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ರಕ್ಷಣೆಯಾಗುವುದು.

ನನಗಂತೂ ಮೊದಲ ಬಾರಿ ಡಾಕ್ಟರ್ ಜತೆ ಮುಖಾಮುಖಿಯಾದದ್ದು ಹೈಸ್ಕೂಲಿನ ಕೊನೆ ವರ್ಷದಲ್ಲಿ. ಅದೂ  ಶಾಲೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಹೋದಾಗ. ಅದು ನಮಗೆ ಅಗ್ನಿ ಪರೀಕ್ಷೆಯೆ ಆನಿಸಿತ್ತು. ಬಟ್ಟೆ ಬಿಚ್ಚಿ ಪರೀಕ್ಷೆ ಮಾಡುವರು ಎಂಬ ವದಂತಿಯಿಂದ ನಮಗೆ ಇನ್ನಿಲ್ಲದ ಸಂಕೋಚ. ನಂತರ ವೈದ್ಯರ ಮುಖ ನೋಡುವುದ ಹೇಗೆ ಎಂಬ ಮುಜುಗರ ನೆನಸಿಕೊಂಡರೆ ಮುಗುಳು ನಗೆ ಮೂಡುವುದು.

ಅಪ್ಪಾಜಿರಾಯರ ಸರಣಿ ‘ಆರರಿಂದ ಅರವತ್ತು'೧೬: ಹೈಸ್ಕೂಲು ಅಂಗಳದಲ್ಲಿ

ನನ್ನ ಹೈಸ್ಕೂಲು ಶಿಕ್ಷಣ ಹೊಸಪೇಟೆಯ ಮುನಿಸಿಪಲ್ ಶಾಲೆಯಲ್ಲಿ ಆಯಿತು. ಅದು ತುಂಬ ಹಳೆಯ ಶಾಲೆ. ಬಹು ದೊಡ್ಡದು ಕೂಡಾ. ಊರ ಹೊರಗೆ ವಿಶಾಲ ಮೈದಾನದಲ್ಲಿದೆ. ಅಲ್ಲಿ   ಕನ್ನಡ, ತೆಲಗು. ತಮಿಳು, ಉರ್ದು, ಸಂಸ್ಕೃತ ಕಲಿಕೆಗೆ ಅವಕಾಶವಿತ್ತು. ಅವನ್ನೆಲ್ಲ ಓದುವವರೂ ಸಾಕಷ್ಟು ಇದ್ದರು. ಜಿಲ್ಲಾ ಕೇಂದ್ರವನ್ನು ಬಿಟ್ಟರೆ ಇದೆ ಅತಿ ಹಳೆಯ ಮತ್ತು ದೊಡ್ಡ ಶಾಲೆ. ಅದು ಪ್ರಾರಂಭವಾದದ್ದು ೧೯೩೭ರಲ್ಲಿ. ಅದರ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದು ಆಗಿನ ಮದ್ರಾಸ್ ಪ್ರಾಂತ್ಯದ ಗವರ್ನರ್ ಆದ ಸ್ಟ್ಯಾನ್ಲಿ ಅವರು. ಇದರ ವಿಶೇಷತೆ ಎಂದರೆ ಬೃಹತ್ತಾದ  ಈ ಕಲ್ಲಿನ ಕಟ್ಟಡ ಮುಗಿಸಲು ತೆಗೆದುಕೊಂಡ ಕಾಲ ಕೇವಲ ೧೦೦ ದಿನ. ಆಗ ಜನಪ್ರತಿನಿಧಿಯಾಗಿದ್ದವರು ಡಾ. ನಾಗನಗೌಡ. ಅವರು ನಮ್ಮ ಭಾಗದ ಮೊದಲ ಪಿಎಚ್. ಡಿ  ಪದವೀಧರರು. ಅದೂ ಪ್ಯಾರಿಸ್ಸಿನ ಮೇರಿ ಕ್ಯೂರಿ ಇನ್ ಸ್ಟಿಟ್ಯೂಟಲ್ಲಿ ಕಲಿತವರು. ಕೃಷಿ ವಿಜ್ಞಾನದಲ್ಲಿ ಪರಿಣಿತರು. ಮಂತ್ರಿಗಳೂ ಆಗಿದ್ದರು. ಈಗ ನಮ್ಮ ಜಿಲ್ಲೆಯಲ್ಲಿ ಎಲ್ಲೆಲ್ಲೂ ಹರಡಿರುವ ಜಾಲಿ ಗಿಡದ ಬೀಜವನ್ನು ತಂದವರು ಅವರೆ. ಅದಕ್ಕೆ ಬಹುಕಾಲ ಅದಕ್ಕೆ ನಾಗನಗೌಡರ ಜಾಲಿ ಎಂದೆ ಹೆಸರಾಗಿತ್ತು. ಹೊಲ ಗದ್ದೆಗಳಿಗೆ ಬೇಲಿಯಾಗಿ ಮಾತ್ರವಲ್ಲ ಇತ್ತೀಚಿನ ವರೆಗೆ ಬಡಬಗ್ಗರ ಮನೆಯ ಒಲೆಗೆ ಉರುವಲಾಗಿಯೂ ಅದು ಬಹು ಉಪಕಾರಿಯಾಗಿತ್ತು.

ಬಳ್ಳಾರಿಯು ಮೊದಲಿನಿಂದಲೂ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟ ಪ್ರದೇಶ. ಅದು ಬರಗಾಲಕ್ಕೆ, ಬಡತನಕ್ಕೆ ಹೆಸರಾದ BACK ಜಿಲ್ಲೆಗಳಲ್ಲಿ ಒಂದು. B- ಬಳ್ಳಾರಿ, A- ಅನಂತಪುರ, C- ಕಡಪಾ ಮತ್ತು K- ಕರ್ನೂಲು. ಹೀಗಾಗಿ ಇಲ್ಲಿ ತೆಲಗು ಪ್ರಭಾವ ಬಹಳ. ಬಹುಶಃ ಬಳ್ಳಾರಿ ಬಹು ಜನರ ಮನೆ ಮಾತು ತೆಲುಗು. ಸುತ್ತ ಮುತ್ತಲಿನವರಿಗೆಲ್ಲ ಎರಡೂ ಭಾಷೆಗಳಲ್ಲಿ ಬಳಕೆ. ನಗರದಲ್ಲಂತೂ, "ರಾರಾ ಪೋರಾ" ಸಂಸ್ಕೃತಿ, ಎನ್ಟಿಆರ್ ಮತ್ತು ಎಎನ್ಆರ್ ಸಿನೆಮಾಗಳು ಆಂಧ್ರದ ಜತೆಯಲ್ಲಿಯೇ ಇಲ್ಲಿಯೂ ಬಿಡುಗಡೆ ಆಗುತ್ತಿದ್ದವು, ಅಷ್ಟೆ ಅಲ್ಲ ಜಯಭೇರಿ ಬಾರಿಸುತ್ತಿದ್ದವು. ಏಕೀಕರಣವಾದ ಮೇಲೆ ಬಳ್ಳಾರಿ ಮೈಸೂರು ರಾಜ್ಯದಲ್ಲಿ ವಿಲೀನವಾದರೂ ಮೂರು ನಾಲಕ್ಕು ವರ್ಷ ಅಂದರೆ ನಾನು ಹೈಸ್ಕೂಲು ಮುಗಿಸುವವರೆಗೂ ಶೈಕ್ಷಣಿಕವಾಗಿ ಮದರಾಸಿನ ನಿಯಾಮಾವಳಿಗಳೆ ಇಲ್ಲಿ ನಮಗೂ ಅನ್ವಯವಾಗುತ್ತಿದ್ದವು. ಆಗ ದೊಡ್ಡ ತಾಲೂಕಿನಲ್ಲಿ ಮಾತ್ರ ಪ್ರೌಢಶಾಲೆ. ಮುನಿಸಪಾಲಟಿ ಇದ್ದಲ್ಲಿ ಮುನಿಸಿಪಲ್ ಸ್ಕೂಲು. ಉಳಿದ ತಾಲೂಕುಗಳಲ್ಲಿ ಬೋರ್ಡು ಸ್ಕೂಲು. ಅಂದರೆ ಜಿಲ್ಲಾ ಬೋರ್ಡು ಶಾಲೆಗಳು.  ಖಾಸಗಿ ಶಾಲೆಗಳು ಅತಿ ಕಡಿಮೆ. ಬಹುಶಃ ಜಿಲ್ಲಾ ಕೇಂದ್ರದಲ್ಲಿನ ವಾರ್ಡ್ಲಾ ಶಾಲೆಯೊಂದೆ ಇತ್ತು ಅಂತ ಕಾಣುತ್ತೆ. ನಮ್ಮ ಪುಣ್ಯಕ್ಕೆ ಹೊಸಪೇಟೆಯಲ್ಲಿ ಮುನಿಸಿಪಲ್ ಸ್ಕೂಲ್ ಇತ್ತು.. ಉಳಿದವು ಬೋರ್ಡು ಸ್ಕೂಲುಗಳು. ಅವೂ ಇದ್ದದ್ದು ಮೂರೋ ನಾಲಕ್ಕೋ. ಬೋರ್ಡು ಎಂದರೆ ಡಿಸ್ಟ್ರಿಕ್ಟ್ ಬೋರ್ಡು ನಂತರ ಅವೆ ತಾಲೂಕು ಬೋರ್ಡು ಶಾಲೆಗಳಾದವು. ಆಗ ಪದವಿ ಕಾಲೇಜಿನ ಮಾತಂತೂ ದೂರ ಉಳಿಯಿತು. ಅದೇ ತಾನೆ ಬಳ್ಳಾರಿಯಲ್ಲಿ ವೀರಶೈವ ಕಾಲೇಜು ಕಣ್ಣು ಬಿಡುತ್ತಿತ್ತು. ಅದಕ್ಕೂ ಮೊದಲು ಅನಂತಪುರ ಅಥವ ಮದನಪಲ್ಲಿಗೆ ಕಾಲೇಜು ಶಿಕ್ಷಣಕ್ಕಾಗಿ ಹೋಗಬೇಕಿತ್ತು. ಕಾರಣ ನಮ್ಮದು ಗಡಿ ಜಿಲ್ಲೆ. ತೆಲುಗಿನ ಪ್ರಭಾವ ಜಾಸ್ತಿ. ಆದ್ದರಿಂದ ಹೆಚ್ಚಿನ ಶಿಕ್ಷಣಕ್ಕೆ ಬೆಂಗಳೂರು ನಮ್ಮವರಿಗೆ ದೂರ. ಪರ ಪ್ರಾಂತ್ಯವಿದ್ದಂತೆ. ಇನ್ನು ಕೆಲ ಭಾಗ ಹೈದ್ರಾಬಾದಿನ ನಿಜಾಮರ ಆಡಳಿತದಲ್ಲಿತ್ತು. ಆದ್ದರಿಂದ ಬ್ರಿಟಿಷರಿಂದ ಪ್ರಾರಂಭಿಸಲಾಗಿದ್ದ ಶಾಲೆ ಕಾಲೇಜುಗಳು ನಮ್ಮಲ್ಲಿನವರನ್ನು ಆಕರ್ಷಿಸುತ್ತಿದ್ದವು. ಹೆಚ್ಚು ಅನುಕೂಲಸ್ಥರಾದರೆ ಮದರಾಸಿನ ಪ್ರಸಿಡೆನ್ಸಿ ಕಾಲೇಜು ಹುಡುಗರಿಗೆ, ಹುಡುಗಿಯರಿಗೆ ಸ್ಟೆಲ್ಲಾ ಮೇರಿಸ್. ಅವು ಆಕ್ಸಫರ್ಡ  ಮತ್ತು ಕೇಂಬ್ರಿಡ್ಜಗಳ ಹೆಬ್ಬಾಗಿಲಿದ್ದಂತೆ. ಆದರೆ ಅಲ್ಲಿ ಕಾಲೇಜು ಓದುವವವರು ವಿರಳಾತಿ ವಿರಳ. ಅನಂತಪುರ ಇಲ್ಲವೆ ಮದನಪಲ್ಲಿಗೆ ಹೋಗುವವರೆ ಹೆಚ್ಚು. ಆದ್ದರಿಂದ ಆಂಧ್ರಪ್ರದೇಶದ ದೊಡ್ಡ ದೊಡ್ಡ ಹಿರಿಯ ನಾಯಕರ ಸಹಪಾಠಿಗಳು ನಮ್ಮ ಜಿಲ್ಲೆಯಲ್ಲಿದ್ದರು. ನಮ್ಮ ರಾಜ್ಯಪಾಲರಾಗಿದ್ದ ವೆಂಕಟ ಸುಬ್ಬಯ್ಯನವರ ಸಹಪಾಠಿ ನಮ್ಮ ಹತ್ತಿರದ ಗ್ರಾಮದ ಸಿರಿವಂತರ ಮಗ. ಆ ಗ್ರಾಮಕ್ಕೆ ಆತನೆ ಪ್ರಥಮ ಪದವೀಧರ. ಅಷ್ಟೆ ಏಕೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ. ಎಸ್ ರಾಜಶೇಖರರೆಡ್ಡಿಯವರು ಓದಿದ್ದು ನಮ್ಮ ಬಳ್ಳಾರಿಯಲ್ಲಿಯೇ. ಅವರು ಮುಖ್ಯಮಂತ್ರಿಯಾದ ಮೇಲೂ ತಮ್ಮ ಹೈಸ್ಕೂಲು ಸಹಪಾಠಿಗಳ ಜತೆ ಸಂಪರ್ಕ ಇಟ್ಟುಕೊಂಡಿದ್ದರು. ವಿಜಯನಗರದ ಅರಸ ಕೃಷ್ಣದೇವರಾಯನು ಕರ್ನಾಟಕಾಂಧ್ರ ಸಾರ್ವಭೌಮನಾಗಿದ್ದ ಎಂಬುದಕ್ಕೆ ನಮ್ಮ ಜಿಲ್ಲೆ ಜೀವಂತ ಸಾಕ್ಷಿಯಾಗಿದೆ.

ಒಂದು ದಿನ ಬೆಳಗ್ಗೆ ಪ್ರಾರ್ಥನೆ ಮುಗಿದು ಮೊದಲ ಪಿರಯಡ್ ನಲ್ಲಿ ತರಗತಿಯಲ್ಲಿ ಹಾಜರಿ ತೆಗೆದುಕೊಳ್ಳುತಿದ್ದರು. ಒಂದೆ ಸಲ ಬಹಳ ಜನ ಶಾಲೆಯಲ್ಲಿ ನುಗ್ಗಿದರು. ಎರಡು ಲಾರಿಗಳಲ್ಲಿ ಪಡ್ಡೆ ಹುಡುಗರು ಬಂದಿದ್ದರು. ಅವರೆಲ್ಲರೂ ಕರ್ನಾಟಕಕ್ಕೆ ಜಯವಾಗಲಿ ಎಂದು ಘೋಷಣೆ ಕೂಗುತಿದ್ದರು. ಪ್ರತಿ ತರಗತಿಯ ಮುಂದೆ ಬಂದು ಎಲ್ಲರನ್ನೂ ಹೊರಗೆ ಕರೆದರು. ನಾವೆಲ್ಲ ಎರಡು ಮಾತಿಲ್ಲದೆ ಶಾಲೆಯ ಹೊರಗೆ ಜಮಾಯಿಸಿದೆವು. ಅಲ್ಲಿ ನೆರೆದಾಗ ಗೊತ್ತಾಯಿತು. ಅದು ಏಕೀಕರಣದ ಚಳುವಳಿ ಎಂದು. ಆ ಮೆರವಣಿಗೆಯಲ್ಲಿ ಟಿಸಿಎಚ್ ಹುಡುಗರದೆ ಮುಂದಾಳುತನ. ಸ್ಥಳೀಯ ನಾಯಕರೂ ಇದ್ದರು. ಬಳ್ಳಾರಿ ಜಿಲ್ಲೆಯನ್ನು ವಿಶಾಲ ಮೈಸೂರಿನಲ್ಲಿ ಸೇರಿಸಬೇಕೆಂದು ಒತ್ತಾಯಿಸಲು ಚಳುವಳಿ ನಡೆದಿತ್ತು. ಅದು ಭಾಷಾವಾರು ಪ್ರಾಂತ್ಯ ರಚನೆಗೆ ಮುಂದಾದ ಕಾಲ. ಪೊಟ್ಟಿ ಶ್ರೀರಾಮುಲು ಅವರ ಪ್ರಾಣ ತ್ಯಾಗದಿಂದ ಕೇಂದ್ರ ಸರ್ಕಾರವು ಭಾಷಾವಾರು ಪ್ರಾಂತ್ಯ ರಚನಗೆ ಕೈ ಹಾಕಿತ್ತು. ಬಳ್ಳಾರಿ ಜಿಲ್ಲೆಯನ್ನು ಆಂಧ್ರ ಪ್ರದೇಶದಲ್ಲಿ ಸೇರಿಸಲು ಹುನ್ನಾರ ನಡೆದಿತ್ತು. ಮುಖ್ಯವಾಗಿ ಬಳ್ಳಾರಿ ನಗರ ಮತ್ತು ಸುತ್ತಮುತ್ತಲು ತೆಲುಗರ ಪ್ರಾಬಲ್ಯ ಬಹಳ. ಅವರದೆಲ್ಲ ಆಂಧ್ರದತ್ತ ಒಲವು. ಆದರೆ ಉಳಿದೆಲ್ಲ ತಾಲೂಕಿನವರು ಮತ್ತು ಗ್ರಾಮಾಂತರ ಪ್ರದೇಶದವರು ಕನ್ನಡಿಗರು. ಅದಕ್ಕೆಂದೆ ಚಳುವಳಿ ನಡೆದಿತ್ತು.

ಮಹಬಲೇಶ್ವರಪ್ಪ, ಟೆಕ್ಕೂರು ಸುಬ್ರಮಣ್ಯ, ಬೂದಿಹಾಳು ಅನಂತಾಚಾರ್ಯ, ಆರ್. ನಾಗನಗೌಡ, ಜೋಳದ ರಾಶಿ ದೊಡ್ಡನಗೌಡ ಮೊದಲಾದ ಗಣ್ಯರು ಒತ್ತಡ ಹಾಕಿ ಬಳ್ಳಾರಿ ಆಂಧ್ರದ ಪಾಲಾಗುವುದನ್ನು ತಪ್ಪಿಸಿದರು. ಅದರೂ ಆಲೂರು, ಆದೋನಿ ಮತ್ತು ರಾಯದುರ್ಗ ತಾಲೂಕುಗಳು ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಿದ್ದರೂ ಕೈಬಿಟ್ಟು ಹೋದವು.

ಏಕೀಕರಣದ ನಂತರ ಮುಂಬಯಿ, ನಿಜಾಮ, ಮದ್ರಾಸು ಪ್ರಾಂತ್ಯ ಹಳೆ, ಮೈಸೂರು ಮತ್ತು ಕೆಲ ಸಣ್ಣ ಪುಟ್ಟ ರಾಜರುಗಳ ಸಂಸ್ಥಾನಗಳೂ ಸೇರಿ ವಿಶಾಲ ಮೈಸೂರು ಆಯಿತು. ಅದರಿಂದ ಭಾವನಾತ್ಮಕವಾಗಿ ಕನ್ನಡ ಮಾತನಾಡುವ ಜನರೆಲ್ಲ ಒಂದಾದರು. ಅದಾಗಿ ಅರವತ್ತು ವರ್ಷಗಳೆ ಕಳೆದರೂ ಇನ್ನೂ ಸಮಾನ ಅಭಿವೃದ್ಧಿಯ ಅವಕಾಶ ದೊರೆತಿಲ್ಲ ಎಂಬ ಗೊಣಗಾಟ ತಪ್ಪಿಲ್ಲ. ಪ್ರತ್ಯೇಕ ಪ್ರಾಂತ್ಯ ಬೇಕೆಂಬ ಕೂಗು ಕೇಳಿ ಬಂದರೂ ಅದು ಅಷ್ಟೇನೂ ಗಟ್ಟಿಯಾಗಿಲ್ಲ. ನಂಜುಂಡಪ್ಪ ಸಮಿತಿ ಪ್ರಾದೇಶಿಕ ವ್ಯತ್ಯಾಸಗಳನ್ನು ನಿವಾರಿಸಲು ತಳಸ್ಪರ್ಶಿ ವರದಿ ನೀಡಿದರೂ ಅದಿನ್ನೂ ಅನುಷ್ಠಾನಕ್ಕೆ ಬರಬೇಕಿದೆ.. ಅದೆಲ್ಲ ಏನೆ ಇದ್ದರೂ ವಿಶಾಲ ಮೈಸೂರು ಆದದ್ದು ನಮ್ಮ ಭಾಗದ ಹೈಸ್ಕೂಲು ವಿದ್ಯಾರ್ಥಿಗಳಿಗೆ ಮಾತ್ರ ಬಹಳ ಅನುಕೂಲವಾಯಿತು. ಮೊದಲು ಮದರಾಸು ಪ್ರಾಂತ್ಯದಲ್ಲಿದ್ದಾಗ ಎಸ್ಎಸ್ ಎಲ್ ಸಿ ಎಂದರೆ ಮಿನಿ ಐಎಎಸ್ ನಂತೆ ಭಾಸವಾಗಿತ್ತು. ಅಂತಿಮ ಪರೀಕ್ಷೆಗೆ ಕೂಡಲು ಮೊದಲು ಪೂರ್ವ ತಯಾರಿ ಪರೀಕ್ಷೆಯನ್ನು ಶಾಲೆಯವರೆ ನಡೆಸುವರು. ಅದರಲ್ಲಿ ಪಾಸಾದವರಿಗೆ ಮಾತ್ರ ಪಬ್ಲಿಕ್‌ ಪರೀಕ್ಷೆ ಕಟ್ಟಲು ಅವಕಾಶ. ಆ ವಿಷಯದಲ್ಲಿ ಮುಖ್ಯೋಪಾಧ್ಯಾಯರದೆ ಕೊನೆ ಮಾತು. ವಶೀಲಿಬಾಜಿಗೆ ಅವಕಾಶವೆ ಇರಲಿಲ್ಲ. ಕಾರಣ ಪರಿಕ್ಷೆಗೆ ಕುಳಿತರೆ ಅವರಿಗೆ ಮೂರೆ ಅವಕಾಶ. ಅದಲ್ಲದೆ ಒಂದೆ ಸಲ ಎಲ್ಲ ಏಳು ವಿಷಯಗಳಲ್ಲೂ ಪಾಸಾಗಲೆಬೇಕು. ಒಂದು ವಿಷಯದಲ್ಲಿ ಅನುತ್ತೀರ್ಣನಾದರೆ ಇಪಿಎಸ್ ಎಂದು ಪ್ರಮಾಣ ಪತ್ರ ಕೊಡುವರು. ಅವರು ಸಾರ್ವಜನಿಕ ಸೇವೆಗೆ ಅರ್ಹರು. ಅಂದರೆ ಸರಕಾರಿ ಕೆಲಸದ ಮಟ್ಟಿಗೆ ಅವರು ಪಾಸಾದ ಲೆಕ್ಕ. ಎಲ್ಲ ವಿಷಯದಲ್ಲಿ ಪಾಸದವರು ಮಾತ್ರ ಇಸಿಪಿಎಸ್ ಅಂದರೆ ಎಲಿಜಿಬಲ್ ಪಾರ್ ಕಾಲೇಜ್ ಅಂಡ್ ಪಬ್ಲಿಕ್ ಸರ್ವಿಸ್. ಅವರು ಕಾಲೇಜೂ ಸೇರಬಹುದು. ಕೆಲಸಕ್ಕೂ ಅರ್ಹರು. ಯಾರೆ ಪರಿಕ್ಷೆಗೆ ಕುಳಿತರೆ ಅವರಿಗೆ ಮೂರೆ ಅವಕಾಶ. ನಾಲಕ್ಕನೆ ಸಾರಿ ಪರೀಕ್ಷೆ ಕಟ್ಟುವ ಹಾಗಿಲ್ಲ. ಫಲಿತಾಂಶದ ಪ್ರಮಾಣವೂ ಬಹು ಕಡಿಮೆ. ಹೀಗಾಗಿ ಇನ್ನೊಂದು ವರ್ಷ ಓದಿದರೂ ಸರಿ ಎಂದು ಪೋಷಕರು ಸುಮ್ಮನಾಗುವರು. ಅದರಿಂದ ಎಸ್ಎಸ್ ಎಲ್ ಸಿಯಲ್ಲಿ ಬಲಿತ ಬಾಲಕರು ಬಹಳ. ಎಷ್ಟೋ ಜನ ಮದುವೆಯಾದವರೂ ಇರುವರು. ಇದರಿಂದ ಹೈಸ್ಕೂಲು ದಾಟದೆ ಎಡವಿ ಬಿದ್ದ ಗಾಯಾಳುಗಳು ದಂಡು ಬಹುದೊಡ್ಡದಾಗಿತ್ತು. ಎಷ್ಟೊ ಜನ ನಮ್ಮ ಹುಡುಗ ಹೈಸ್ಕೂಲು ಮುಗಿಸಿದ್ದಾನೆ ಎನ್ನುವರೆ ವಿನಃ ಪಾಸಾಗಿದ್ದಾನೆ ಎನ್ನುತ್ತಿರಲಿಲ್ಲ. ಆದರೆ ಆಗ ಅದೆ ದೊಡ್ಡದು ಎನಿಸಿತ್ತು. ಏಕೀಕರಣಕ್ಕೆ ಮೊದಲು. ಹೈಸ್ಕೂಲು ಅಂತಿಮ ವರ್ಷಕ್ಕೆ ಎಸ್ಎಸ್ಎಲ್ ಸಿ, ಎಸ್ಎಸ್ಸಿ ಮತ್ತು ಎಚ್ ಎಸ್‌ ಸಿ ಎಂದು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಹೆಸರು ಕೆಲವು ಕಡೆ ಅವಧಿ ಹತ್ತು ವರ್ಷವಾದರೆ ಕೆಲವುಕಡೆ ಹನ್ನೊಂದು ವರ್ಷ. ನಿಜಾಂ ಪ್ರಾಂತ್ಯದಲ್ಲಂತೂ ಉರ್ದು ಕಡ್ಡಾಯ.. ಅಲ್ಲಿನ ಮುಲ್ಕಿ ನಿಯಮದ ಪ್ರಕಾರ ಉರ್ದು ಬರದವರಿಗೆ ಸರ್ಕಾರಿ ನೌಕರಿಯೆ ಇಲ್ಲ. ಇಂಗ್ಲಿಷ್ ಬರಲೆಬೇಕೆಂತಲೂ ಇರಲಿಲ್ಲ. ಅಲ್ಲಿನ ಅಧಿಕಾರಿಗಳ ನೇಮಕವಂತೂ ನಿಜಾಂರ ಮರ್ಜಿಯ ಮೇರೆಗೆ ಆಗುತ್ತಿದ್ದುದರಿಂದ ಆಡಳಿತಭಾಷೆ ಉರ್ದು. ಆದ್ದರಿಂದ ಅಲ್ಲಿ ಕಲಿತ ನಮ್ಮ ಹಿಂದಿನ ನಾಯಕರುಗಳಿಗೆಲ್ಲ ಉರ್ದುಭಾಷೆ ಚೆನ್ನಾಗಿ ಬರುವುದು.. ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ತಲೆದೂಗುವಂತೆ ಉರ್ದುವಿನಲ್ಲಿ ಭಾಷಣ ಮಾಡುತ್ತಿದ್ದರು. ಈಗಲೂ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮ ಸಿಂಗ್ ಉರ್ದುವಿನಲ್ಲಿ ಉತ್ತಮ ವಾಗ್ಮಿಗಳು. ಏಕಿಕರಣವಾದ ಹೊಸದರಲ್ಲಿ ಗುಲ್ಬರ್ಗ ರಾಯಚೂರು ಬೀದರುಗಳಲ್ಲಿ ಸಣ್ಣ ಸಮಸ್ಯೆಯೆ ತಲೆ ಎತ್ತಿತು. ನೈಜಾಂ ಪ್ರಾಂತ್ಯದ ಅಧಿಕಾರಿಗಳು ಮೈಸೂರಿಗೆ ಸೇರಬೇಕಾಯಿತು. ಅವರಿಗೆ ಕನ್ನಡವೂ ಬರಲ್ಲ ಇಂಗ್ಲಿಷೂ ಅಷ್ಟಕಷ್ಟೆ. ಆಧೀನ ನೌಕರರಿಗೆ ಅದರಲ್ಲೂ ಹಳೆಯ ಮೈಸೂರಿನವರಿಗೆ ಉರ್ದು ಅಡ್ಡ ಗೋಡೆ.  ಆಡಳಿತದ ವೈಖರಿ ಹೇಳುವ ಹಾಗೆ ಇಲ್ಲ. ಅಲ್ಲದೆ ಅವರ ಸೇವಾ ಪುಸ್ತಕಗಳೂ ಹಿಂಬದಿಯಿಂದ ಪ್ರಾರಂಭ. ಅವು ಉರ್ದು ಭಾಷೆಯಲ್ಲಿದ್ದವು. ಅವರ ಭಾಷಾ ಪ್ರೇಮ ಅಸೀಮ. ಅದೂ ಎಷ್ಟು ಕಟ್ಟುನಿಟ್ಟು ಆಗಿದ್ದವೆಂದರೆ ಅಂಕೆಗಳನ್ನು ಕೂಡಾ ಉರ್ದುವಿನಲ್ಲೆ ಬರೆಯುವರು. ಅವರ ಪಿಂಚಣಿಯನ್ನು ನಿಗದಿ ಮಾಡಲು ಬೆಂಗಳೂರಿನಲ್ಲಿ ತಿಣುಕುವಂತಾಗಿತ್ತು. ದಾಖಲೆಗಳನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಲು ವಿಶೇಷ ವಿಭಾಗವನ್ನೆ ತೆರೆಯಬೇಕಾಯಿತು. ನಾನು ಗುಲ್ಬರ್ಗ ಕಾಮಲಾಪುರದ ಕಾಲೇಜಿನಲ್ಲಿ  ಕೆಲಸ ಮಾಡುವಾಗ ಕಾಶಿಂ ಎಂಬ ನಾಲಕ್ಕನೆ ದರ್ಜೆ ನೌಕರನು ಸೇವಾವಧಿ ಮುಗಿದ ಮೇಲೆ ಒಂದುವರ್ಷ ಹೆಚ್ಚಾಗಿ ಕೆಲಸ ಮಾಡಿದ್ದ. ಕಾರಣ ಅವನ ಜನ್ಮ ದಿನಾಂಕ ಉರ್ದವಿನಲ್ಲಿ ನಮೂದಾದ್ದರಿಂದ ಆ ತಪ್ಪಾಗಿತ್ತು. ಅದು ಬೆಳಕಿಗೆ ಬಂದ ಮೇಲೆ ತಕ್ಷಣ ನಿವೃತ್ತಿ ಮಾಡಲಾಯಿತು. ಅಷ್ಟೆ ಅಲ್ಲ ಬಡಪಾಯಿಯ ನಿವೃತ್ತಿಯಾಗಬೇಕಾದ ದಿನಾಂಕದ ನಂತರ ಕೆಲಸ ಮಾಡಿದ ಅವಧಿಯಲ್ಲಿನ ಪಡೆದ ವೇತನವನ್ನೂ ಕಟಾಯಿಸಲಾಯಿತು...

ಮದ್ರಾಸು ಪ್ರಾಂತ್ಯದಿಂದ ಬಂದವರಿಗೆ ಮಾತ್ರ ಸಮಸ್ಯೆಯೆ ಇರಲಿಲ್ಲ. ಅಲ್ಲಿ ಎಲ್ಲ ಇಂಗ್ಲಿಷ್ ಭಾಷೆಯದೆ ಮೇಲಾಟ. ಏಕೀಕರಣವಾದ ಮೇಲೆ ಮೈಸೂರು ರಾಜ್ಯದಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ತಮ್ಮದೆ ನಿಯಮ ಜಾರಿಗೆ ತಂದರು. ಅದರ ತಕ್ಷಣದ ಲಾಭ ನಮಗೆ ಆಯಿತು. ಕಾರಣ ಮೈಸೂರು ರಾಜ್ಯದಲ್ಲಿಎಸ್ಎಸ್ಎಲ್ ಸಿ ಪರೀಕ್ಷೇಯ ನಿಯಮಾವಳಿಗಳು ಸರಳವಾಗಿದ್ದವು. ಅಲ್ಲಿ ಎಲ್ಲ ವಿಷಯಗಳಲ್ಲೂ ಒಟ್ಟಿಗೆ ಪಾಸಾಗಬೇಕೆಂಬ ನಿಯಮ ಇರಲಿಲ್ಲ. ಪಾರ್ಟ ಬೈ ಪಾರ್ಟ ಸಬಜೆಕ್ಟ ಬೈ ಸಬ್ಜೆಕ್ಟ್ ಪರಿಕ್ಷೆಗೆ ಕಟ್ಟಬಹುದಿತ್ತು. ಎಂ ಎಸ್ ಎಂ ಗಾಡಿಯಲ್ಲಿ ಏರಬಹುದಿತ್ತು ಅಂದರೆ ಮಾರ್ಚ- ಸೆಪ್ಟೆಂಬರ್ -ಮಾರ್ಚ ಪರೀಕ್ಷೆಗೆ ಕೂಡಬಹುದಿತ್ತು ಹಾಸ್ಯಕ್ಕೆ ಆ ಹೆಸರು. ಅಲ್ಲದೆ ಪರೀಕ್ಷೆಗೆ ಕುಳಿತುಕೊಳ್ಳಲು ಮೂರೆ ಅವಕಾಶದ ಮಿತಿ ಇರಲಿಲ್ಲ.  ಎಷ್ಟು ಸಾರಿ ಬೇಕಾದರೂ ಪರೀಕ್ಷೆ ಬರೆಯಬಹುದಿತ್ತು ಈ ಅವಕಾಶವನ್ನು ಮದ್ರಾಸು ಎಸ್ಎಸ್ಎಲ್‌ಸಿ ಗೆ ಮೂರುವರ್ಷ ಮಣ್ಣು ಹೊತ್ತು ಮನೆಯಲ್ಲಿ ಕುಳಿತವರು ಚೆನ್ನಾಗಿ ಬಳಸಿಕೊಂಡರು. ಬಹುತೇಕರು ಪರೀಕ್ಷೆ ಕಟ್ಟಿ ಪಾಸಾದರು. ಕೆಲವರು ಪ್ರಥಮ ದರ್ಜೆಯನ್ನೂ ಪಡೆದರು. ಅವಧಿಯಲ್ಲಿನ ವ್ಯತ್ಯಾಸ ಸರಿಪಡಿಸಲು ಎಲ್ಲರಿಗೂ ೧೧ನೆ ವರ್ಷದಲ್ಲೆ ಎಸ್ಎಸ್ ಎಲ್ ಸಿ ಕಟ್ಟಲು ನಿಯಮ ಬಂದಿತು. ಅದರಿಂದ 4+3+3 ಇದ್ದವರು ಇನ್ನು ಒಂದು ವರ್ಷ ಹೆಚ್ಚುವರಿಯಾಗಿ ಕಲಿಯಬೇಕಾಯಿತು. ಅದಕ್ಕೆ ಓಲ್ಡ ಎಯ್ತ್ ಮತ್ತು ನ್ಯು ಎಯ್ತ್ ಎಂದು ಎಂಟನೆ ತರಗತಿಯನ್ನೆ ಎರಡು ಸಲ ಓದಬೇಕಾಯಿತು. ನಂತರ ಪಿಯುಸಿ ಒಂದೆ ವರ್ಷ. ಕೆಲವೆ  ಕಾಲದ ನಂತರ ಪುನಃ ೧೦ವರ್ಷ ಹೈಸ್ಕೂಲು ಮತ್ತು ಎರಡುವರ್ಷ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿ ಬಂದಿತು. ಈಗಲೂ ಅದೆ ಇದೆ.

ಅಪ್ಪಾಜಿರಾಯರ ಸರಣಿ:ಹೋಗುವಾಗ ಹುರುಪು ಬರುವಾಗ ಅಳುಕು

ಹೈಸ್ಕೂಲಿಗೆ ಬಂದನಂತರ ನಾನು ಶಾಲೆಗೆ ನಮ್ಮ ಹಳ್ಳಿಯಿಂದಲೆ ಹೋಗುತಿದ್ದೆ.. ಶಾಲೆ ನಮ್ಮ ಹಳ್ಳಿಗೆ ನಾಲಕ್ಕು ಮೈಲು ದೂರದಲ್ಲಿದೆ. ನಮ್ಮ ಊರಿನಿಂದ ನಾಲಕ್ಕು ಜನ ಮಕ್ಕಳು ಶಾಲೆ ಹೋಗುತಿದ್ದೆವು. ಕಾಲು ನಡಗೆಯಲ್ಲೆ ನಮ್ಮ ನಿತ್ಯ ಪ್ರಯಾಣ. ಗೌಡರ ಮೂರು ಮಕ್ಕಳು ಒಂಟೆತ್ತಿನ ಗಾಡಿಯಲ್ಲಿ ಹೋಗುವರು. ವಾಹನ ಸೌಕರ್ಯ ಕಡಿಮೆ. ಆಗ "ಬೋಂ ಬೊಂ" ಮತ್ತು "ಎಸ್‌.ವಿ.ಎಂ.ಎಸ್‌" ಎಂದು ಎರಡು ಬಸ್ಸುಗಳು ಇದ್ದವು. ಆದರೆ ಅವು ಶಾಲೆಯ ಸಮಯಕ್ಕೆ ಸರಿಯಾಗಿ ಇರಲಿಲ್ಲ. ಸ್ಟೋರ್‌ಬಸ್‌ ಮಾತ್ರ ಶಾಲೆಗೆ ಮಕ್ಕಳನ್ನು ಬಿಡಲು ಇದ್ದಿತು. ಅದನ್ನು ಹಂಪಿ ಕ್ಯಾಂಪಿನಲ್ಲಿರುವ ಕೆಇಬಿ ನೌಕರರ ಮಕ್ಕಳಿಗಾಗಿ ಓಡಿಸುತಿದ್ದರು. ಅದರಲ್ಲಿ ಕಮಲಾಪುರ ಮತ್ತು ಇತರ ಮಕ್ಕಳಿಗೂ ಅವಕಾಶ ಇತ್ತು. ಅದಕ್ಕೆ ತಿಂಗಳಿಗೆ ಐದು ರೂಪಾಯಿ ಕೊಟ್ಟು ಪಾಸು ಮಾಡಿಸಬೇಕಿತ್ತು. ಅಷ್ಟು ಹಣವನ್ನು ತಿಂಗಳು ತಿಂಗಳು ಕೊಡುವುದು ಕಷ್ಟವಿತ್ತು. ಆಗ ಶಾಲೆಯ ಶುಲ್ಕವೆ ತಿಂಗಳಿಗೆ ಎರಡು ರೂಪಾಯಿ ಹನ್ನೆರಡಾಣೆ. ಅದನ್ನೆ ದಂಡವಿಲ್ಲದೆ ಕಟ್ಟಿದ ನೆನಪೆ ಇಲ್ಲ. ಹಾಗಿದ್ದಾಗ ಇನ್ನು ಬಸ್ಸಿಗೆ ಹೋಗುವ ಮಾತೆಲ್ಲಿ. ಅಲ್ಲದೆ ಆ ಬಸ್ಸು ಕಿಕ್ಕಿರಿದು ತುಂಬಿರುತಿತ್ತು. ನಮ್ಮ ಊರಿಗೆ ಬರುವಾಗಲೆ ಆದರ ಫುಟ್‌ಬೋರ್ಡ ಮೇಲೂ ಬಾಗಿಲಲ್ಲೂ ಜನ ನೇತಾಡುತ್ತಾ ಬರುತ್ತಲಿದ್ದರು. ಆ ಗೋಡವೆಯೇ ಬೇಡ ಎಂದು ನಾವು ನೆಡೆದೆ ಶಾಲೆಗೆ ಹೋಗುತಿದ್ದೆವು.

ನಮಗೆ ಅದೇನೂ ಅಷ್ಟು ದೂರ ಎನಿಸುತ್ತಿಲಿಲ್ಲ. ಪಟ್ಟಣಕ್ಕೆ ನಮ್ಮ ಹಳ್ಳಿಯಿಂದ ಮೂರು ಮೈಲು. ಅಲ್ಲಿಂದ ಶಾಲೆಗೆ ಒಂದು ಮೈಲು. ಆದರೆ ಮಧ್ಯದಲ್ಲಿ ಮೂರು ಊರುಗಳು. ಅದೂ ಕೊರೆದು ಇಟ್ಟಂತೆ. ನಮ್ಮ ಊರ ಹೊರಗೆ ಕಡೆ ಅಗಸಿ ಮತ್ತು ಭವ್ಯವಾದ ವಿಜಯನಗರದ ಕಾಲದ ಎಂದೂ ಜಲ ಬತ್ತದ ಸೂಳೆ ಭಾವಿ ಅಲ್ಲಿಂದ ಅರ್ಧ ಮೈಲಿಗೆ ಕೊಂಡನಾಯಕನಹಳ್ಳಿ. ಅದೂ ಚಿಕ್ಕ ಊರೆ. ಅಲ್ಲಿ ರಸ್ತೆಯ ಪಕ್ಕದಲ್ಲೆ ಒಂದು ಹಿಟ್ಟಿನ ಜಿನ್ನು. ಮೂರು ಊರಿಗೂ ಅದು ಒಂದೆ. ವಿದ್ಯುತ್‌ ಇಲ್ಲದ ಕಾಲ. ಬಹುಶಃ ಅದು ಡಿಜಿಲ್‌ ನಿಂದ ನಡೆಯುತ್ತಲಿರಬೇಕು. ಅದು ಚಾಲು ಆದರೆ ಕು ಕು ಎಂಬ ಶಬ್ದ ದೂರದವರೆಗೆ ಕೇಳುತ್ತಲಿತ್ತು. ಹತ್ತು ಹದಿನೈದು ಸೇರು ಜೋಳ ತುಂಬಿದ ಬುಟ್ಟಿಯನ್ನು ಸಲೀಸಾಗಿ ತಲೆಯ ಮೇಲೆ ಇಟ್ಟುಕೊಂಡು ಹಿಟ್ಟು ಮಾಡಿಸಲು ಹೆಂಗಸರು ಬರುವರು. ಒಂದೊ ಎರಡೊ ಸೇರಾದರೆ ಮನೆಯಲ್ಲೆ ಬೀಸುವ ಕಲ್ಲಿನಲ್ಲಿ ಕೆಲಸ ಮುಗಿಸುತ್ತಿದ್ದರು. ಅಕ್ಕಿ ಹಾಕಿಸಲು ಮಾತ್ರ ಬಂಡಿಯಲ್ಲಿ ನೆಲ್ಲು ಚೀಲ ಹಾಕಿಕೊಂಡು ಬರುವರು.

ನಂತರ ಒಂದು ಮೈಲು ಹೋದರೆ ಅನಂತ ಶಯನ ಗುಡಿ. ಅಲ್ಲಿ ಭವ್ಯವಾದ ವಿಜಯನಗೆರದ ಶೈಲಿಯ ದೇಗುಲ. ಆದರೆ ಅಲ್ಲಿ ದೇವರೆ ಇಲ್ಲ. ಗುಡಿ ಕಟ್ಟಿಸಿದ ಗೋಸಾಯಿ ದೇವರನ್ನು ಕರತರಲು ಹೋದನಂತೆ. ಅನಂತಶಯನ ಶರತ್ತಿನ ಮೇಲೆ ಬರಲು ಒಪ್ಪಿದ.. ಭಕ್ತ ಮುಂದೆ ಮುಂದೆ ಹೋಗಬೇಕು ದೇವರು ಅವನ ಹಿಂದೆ ಬರುವ. ಆದರೆ ತಿರುಗಿ ನೋಡಿದರೆ ಅಲ್ಲಿಯೆ ನಿಲ್ಲುವ. ಅದರಂತೆ ಅವರು ಹೊರಟರು. ಹೊರಟಾಗ ದೇವರ ಕಾಲು ಗೆಜ್ಜೆಯ ಸದ್ದು ಕೇಳುತಿತ್ತು. ಹಡಗಲಿನ ಹತ್ತಿರದ ಹೊಳಲಿನ ನದಿ ತಟದಲ್ಲಿ ಮರಳು ಇದ್ದುದರಿಂದ ಗೆಜ್ಜೆಯ ಸದ್ದು ಕೇಳಲಿಲ್ಲ. ಭಕ್ತ ಹಿಂದಿರುಗಿ ನೋಡಿದ. ದೇವರು ಅಲ್ಲಿಯೆ ನೆಲಸಿದ ಎಂಬ ಕಥೆ ಇದೆ. ಇಲ್ಲಿ ಗುಡಿ ಇದೆ. ವಿಗ್ರಹ ಇಲ್ಲ. ಹೊಳಲಿನಲ್ಲಿ ನದಿ ದಡದಲ್ಲಿ ಸುಂದರ ಅನಂತಶಯನನ ವಿಗ್ರಹ ಇದೆ. ಇತ್ತೀಚಿನ ವರೆಗೂ ಅದು ಬಯಲಿನಲ್ಲೆ ಇತ್ತು ಈಗ ಗುಡಿ ಕಟ್ಟಿಸಿರುವರು. ಇದೆರ ಸತ್ಯಾಸತ್ಯತೆ ನಂಬುಗೆಯ ಮಾತು.ಅನಂತ ಶಯನ ಗುಡಿ

ಆಮೇಲೆ ಒಂದುಮೈಲಿ ದೂರದಲ್ಲಿ ಹೊಸಪೇಟೆ. ಆದ್ದರಿಂದ ಅಲ್ಲಿ ಸದಾ ಜನ ಸಂಚಾರ ಇರುತಿತ್ತು. ಅದರಲ್ಲೂ ಕಬ್ಬಿನ ಸೀಜನ್ನಿನಲ್ಲಂತೂ ಕಬ್ಬಿನ ಬಂಡಿಗಳ ಓಡಾಟ ತೆರಪಿಲ್ಲದೆ ಇರುತಿತ್ತು. ನಮಗೆ ಆಗ ಹಿಗ್ಗೆ ಹಿಗ್ಗು. ಗಾಡಿ ಹೊಡೆಯುವವರ ಕಣ್ಣು ತಪ್ಪಿಸಿ ಚಲಿಸುವ ಬಂಡಿಯಿಂದ ಕಬ್ಬು ಕಿತ್ತು ಹಾದಿ ಉದ್ದಕ್ಕೂ ಕಬ್ಬುತಿನ್ನುತ್ತಾ ಹೋಗುತಿದ್ದರೆ ದಾರಿ ಸವೆದದ್ದು  ಗೊತ್ತಾಗುತ್ತಲೆ ಇರಲಿಲ್ಲ. ಅನೇಕ ಸಲ ಶಾಲೆಗೆ ಹೋದ ಮೇಲೆ ಕಬ್ಬು ತಿನ್ನುವಾಗಿನ ಬಿಳಿಯ ಸಿಬ್ಬು ಬಾಯಿಗೆ ಗಲ್ಲಕ್ಕೆ ಅಂಟಿರುವುದು ನೋಡಿ ಮೇಷ್ಟ್ರು ತೊಳೆದುಕೊಂಡು ಬರಲು ತರಗತಿಯಿಂದ ಹೊರ ಹಾಕುತಿದ್ದರು. ಅದರಿಂದ ನಮಗೆ ಏನೂ ಪರಿಣಾಮವಾಗುತ್ತಿಲಿಲ್ಲ. ಇನ್ನು ಮಳೆಗಾಲದಲ್ಲಂತೂ ಸಂಭ್ರಮವೋ ಸಂಭ್ರಮ. ನಮ್ಮ ಊರ ಕಡೆ ಅಗಸಿ ದಾಟಿದರೆ ರಸ್ತೆಯ ಪಕ್ಕದಲ್ಲೆ ಕೆಮ್ಮಣ್ಣು ಗುಂಡಿ. ಗಾಬರಿ ಬೀಳ ಬೇಡಿ. ಅದರ ಹೆಸರು ಮಾತ್ರ. ಅದು ನಿಜವಾಗಲೂ ಕೆಮ್ಮಣ್ಣು ಕುಣಿ. ಅದೇನೂ ಗಿರಿಧಾಮವಾದ ಕೆಮ್ಮಣ್ಣು ಗುಂಡಿಯಂತಿಲ್ಲ. ಅಲ್ಲಿನ ಭೂಮಿ ಕೆಂಗಲು ಬಣ್ಣದ್ದು. ಅಲ್ಲಿನ ಮಣ್ಣನ್ನು ಸುಣ್ಣ ಬಳಿದ ಮೇಲೆ ಕೆಂಪು ಕಾರಣಿ ಮಾಡಲು ಬಳಸುತ್ತಿದ್ದರು. ಅಲ್ಲಿ ಬಂದು ಬಂಡಿಗಟ್ಟಲೆ ಮಣ್ಣನ್ನು ತೋಡಿಕೊಂಡು ಹೋಗುವರು. ಹಾಗಾಗಿ ಅಲ್ಲಿ ಮಳೆ ಬಂದಾಗ ಕೆಂಪನೆಯ ನೀರು ಇರುವುದು. ಅದರಲ್ಲಿ ಕಪ್ಪೆಗಳದೆ ಸಾಮ್ರಾಜ್ಯ. ಅದರ ಮುಂದೆ ನಿಂತು ಕೆಲಹೊತ್ತು ಕಪ್ಪೆಗಳಿಗೆ ಕಲ್ಲು ಹೊಡೆಯುವುದು ಮಳೆಗಾಲದಲ್ಲಿ ನಮ್ಮ ನಿತ್ಯ ದ ಆಟ. ನಮ್ಮ ಗುರಿ ಸರಿ ಇರುತ್ತಿಲಿಲ್ಲವೋ, ಇಲ್ಲವೆ ಕಪ್ಪೆಗಳೆ ಬಲು ಚುರುಕಾಗಿದ್ದವೂ ತಿಳಿಯದು ನಾವು ಹೊಡೆದ ಕಲ್ಲು ಕಪ್ಪೆಗಳಿಗೆ ತಗುಲುತ್ತಿದ್ದು ವಿರಳ. ನಾವು ಎಸೆದ ಕಲ್ಲಗಳು ಬೀಳುವುದರಲ್ಲೆ ಅವು ಟಣಕ್ಕನೆ ಜಿಗಿಯುತಿದ್ದವು ನಮ್ಮ ಕಲ್ಲು ಪುಳಕ್ಕನೆ ನೀರಿನಲ್ಲಿ ಬೀಳುತಿತ್ತು. ಅದೆ ನಮಗೆ ಸಂತೋಷ ಕೊಡುತಿತ್ತು. ಇನ್ನು ಮುಂದೆ ಹೋದರೆ ಹಿಪ್ಪೆ ಹಳ್ಳ. ಜೋರಾಗಿ ಮಳೆಬಂದರೆ ಅಲ್ಲಿನ ಪಣುವಿನ ಕೆಳಗೆ ನೀರು ಹರಿವ ರಭಸ, ಅದು ತುಸು ಎತ್ತರದಲ್ಲದ್ದುದರಿಂದ ನೀರು ಕೆಳಕ್ಕೆ ಬೀಳುವ ಜೋರು ಎಷ್ಟು ನೋಡಿದರೂ ಸಾಲದು. ಅದೆ ನಮಗೆ ಜೋಗದ ಜಲಪಾತ ನೋಡಿದಾಗಿನ ಖುಷಿ ಕೊಡುತಿತ್ತು. ಅಲ್ಲಿಂದ ಒಂದು ಊರು ದಾಟಿದರೆ ಟುಬಾಕಿ ಪಣುವು. ಅಲ್ಲಿನ ಹಳ್ಳವು  ನಗರದ ಮಧ್ಯದಲ್ಲಿ ಹರಿಯುವ ಬಸವನ ಕಾಲುವೆಯಲ್ಲಿ ಹೆಚ್ಚಾದ ನೀರನ್ನು ಹೊರ ತರುತಿತ್ತು. ಆ ನೀರು ಎಷ್ಟು ಹರಡಿದೆ ಎಂದು ಅಂದಾಜು ಮಾಡುವುದೆ ನಮ್ಮ ಕೆಲಸ. ಅದರ ಪಕ್ಕದಲ್ಲೆ ಇದ್ದ ಸುಣ್ಣದ ಭಟ್ಟಿಗಳು ಬೇಸಿಗೆಯಲ್ಲಿ ಸದಾ ಬಿಳಿ ಹೊಗೆ ಉಗುಳುತ್ತಾ ಘಾಟು ವಾಸನೆ ಹೊರಹಾಕುತ್ತಾ ಇರುವವು. ಮಳೆಗಾಲದಲ್ಲಿ ಮಾತ್ರ ತೆಪ್ಪಗೆ ಇರುತಿದ್ದವು. ಅಲ್ಲಿಗೆ ಬಂದರೆ ಪಟ್ಟಣ ಸೇರಿದಂತೆ. ಅಲ್ಲಿಂದ ತುಸು ಮುಂದೆ ಬಂದರೆ ಜಕಾತಿ ಕಟ್ಟೆ. ಅಲ್ಲಿ ಬಂಡಿಗೆ ಎರಡಾಣೆ ಜಕಾತಿ. ಸುಗ್ಗಿಯಲ್ಲಿ ಕಬ್ಬಿನ ಬಂಡಿಗಳ ಭರಾಟೆಯಾದರೆ  ಹಂಪೆಯ ಜಾತ್ರೆಯ ಸಮಯದಲ್ಲಿ ಜನರಬಂಡಿಗಳು. ತಿಂಗಳುಗಟ್ಟಲೆ ಗಿಜಿಗುಡುತ್ತಿದ್ದವು. ಸೈಕಲ್ಲಿಗೆ ಒಂದಾಣೆ ನಿತ್ಯ ಹೋಗುವವರು ತಂಗಳ ಲೆಕ್ಕದಲ್ಲಿ ಕೊಟ್ಟು ಅವರು ಕೊಡುತಿದ್ದ ಕಭ್ಭಿಣದ ಬಿಲ್ಲೆಯನ್ನಯ ಸೈಕಲ್ಲಿನ ಮುಂಭಾಗಕ್ಕೆ ನಟ್ಟಿನ ಮೂಲಕ ಕಾಣುವಂತೆ ಕಟ್ಟಲಾಗುತಿತ್ತು. ಸರಿ ಸುಮಾರು ನೂರಾರು ಬಂಡಿಗಳು ದಿನಾ ಜಾತ್ರೆಗೆ ಬರುತಿದ್ದವು. ನಮ್ಮ ಜಿಲ್ಲೆಯ ಎಲ್ಲ ಹಳ್ಳಿಗಳಿಂದಲೂ ಬರುವವರು ಹಂಪೆಗೆ ಹೋಗಲು ಇದ್ದುದು ಅದೊಂದೆ ದಾರಿ ಎಲ್ಲರೂ ಜಕಾತಿ ಕಟ್ಟಲೇಬೇಕು.ಆಗ ಎಲ್ಲಿ ನೋಡಿದರೂ ಜನವೋ ಜನ.

ಕಡೆ ಅಗಸಿಮಳೆಗಾಲ ಮೊದಲಾದ ಎರಡು ಮೂರುತಿಂಗಳು ಶಾಲೆಗೆ ಹೋಗಲು ನಮಗೆ ಎಲ್ಲಿಲ್ಲದ ಹುರುಪು. ಅದಕ್ಕೆ ಕಾರಣ ಹಾದಿಯುದ್ದಕ್ಕೂ ಇದ್ದ ಹುಣಿಸೆ ಮರಗಳು, ಅವು ಮಿಡಿ ಬಿಡುವುದು ಶುರವಾಗುತಿದ್ದಂತೆ ನಮ್ಮ ದಾಳಿ ಮೊದಲಾಗುತಿತ್ತು. ನಮ್ಮಲ್ಲಿ ಚುರುಕಾಗಿದ್ದ ಅಂಜನಿಗೆ ಆಗ ಬಹು ಮನ್ನಣೆ. ಅವನು ಸರಸರನೆ ಮರ ಏರಿ ನಿಮಿಷಾರ್ಧದಲ್ಲಿ ರೆಂಬೆ ಅಳ್ಳಾಡಿಸುತಿದ್ದ .  ಎಳೆ ಹುಣಿಸೆ ಕಾಯಿ ಉದರಿದವನ್ನು ಆಯುವ ಕೆಲಸ ನಮ್ಮದು. ನಾವು ಎಲ್ಲರೂ ಸೇರಿ ಹಾದಿಯುದ್ದಕ್ಕೂ ಒಗರಾದ ಅವನ್ನು ನಾವು ತಂದಿದ ಉಪ್ಪಿನ ಸಮೇತ ತಿನ್ನುತ್ತಾ ನಡೆಯುತಿದ್ದೆವು, ಆಗ ಇದ್ದ ಹುಣಿಸ ಮರ ಒಂದಲ್ಲ ಎರಡಲ್ಲ. ಹಾದಿಯುದ್ದಕ್ಕೂ ಇದ್ದವು ಆದರೆ ಕಾಯ ಬಲಿತ ಮೇಲೆ ನಮ್ಮ ಅಟ ನಡೆಯುತ್ತ ಇರಲಿಲ್ಲ. ಕಾಯಲು ಜನರು ಇರುತಿದ್ದರು. ನಮ್ಮ ಮುಂದಿನ ಆಕರ್ಷಣೆ ಎಂದರೆ ಬಾರಿ ಮರಗಳು. ಅಲ್ಲಿ ಒಂದೆ ತೊಂದರೆ. ಹತ್ತುವ ಹಾಗಿಲ್ಲ. ಬಾರಿಮುಳ್ಳು ಕಚಕ್ಕನೆ ಚುಚ್ಚುತಿತ್ತು. ಏನಿದ್ದರೂ ಕಲ್ಲು ಬೀಸಿ ಹಣ್ಣು ಕಾಯಿ ಉದರಿಸಬೇಕು. ಹತ್ತು ಕಲ್ಲು ಹೊಡೆದರೆ ಒಂದು ಬೀಳುವುದ ಕಷ್ಟ. ಆದರೆ ನಾವು ಛಲ ಬಿಡದೆ  ರಾಜಾ ವಿಕ್ರಮನಂತೆ ಪ್ರಯತ್ನಿಸುತಿದ್ದೆವು ಇಲ್ಲಿ ಮಾತ್ರ ಸಾಮೂಹಿಕವಾಗಿ ಕೆಲಸ ಮಾಡುತಿದ್ದೆವು ಒಬ್ಬರು ಕಲ್ಲು ಆರಿಸಿ ಕೊಡಬೇಕು. ಇದ್ದವರಲ್ಲೆ ಗುರಿವಾನ ಎನಿಸಿದವರು ಕಲ್ಲು ಬೀರ ಬೇಕು. ಇನ್ನುಉಳಿದ ಒಬ್ಬಿಬ್ಬರು ಹಣ್ಣು ಕಾಯಿ ಆರಿಸಬೇಕು. ಅವು ಬೇಲಿಯೊಳಗೋ, ಪೊದೆಯ  ಮಧ್ಯವೋ ಬಿದ್ದರೂ ಬಿಡದೆ ಹೋಗಿ ತರವೆವು. ನಂತರ ಎಲ್ಲರೂ ಹಂಚಿಕೊಂಡು ಜೇಬಿನಲ್ಲಿ ತುಂಬಿಕೊಂಡು ಹಾದಿ ಸವೆಸುತಿದ್ದವು ಅವನ್ನು ತಿನ್ನುವುದೂ ಒಂದುಕಲೆ. ಬಾಯಲ್ಲಿ ಹಾಕಿತಿಂದ ಮೇಲೆ ಬೀಜವನ್ನು ಗುರಿಇಟ್ಟು ಉಗಳ ಬೇಕು. ಅದರಲ್ಲೂ ಚಳ್ಳೆ ಹಣ್ಣ ತಿನ್ನುವಾಗಲಂತೂ ಮಜವೇ ಮಜ. ಅದು ಲೋಳೆ ಲೋಳೆ. ಒಂದು ರೀತಿಯಲ್ಲಿ ಸಿಂಬಳದಂತೆ ಅಂಟುವುದು. ಹಣ್ಣು ತಿಂದು  ಬೀಜವನ್ನು ಅವನ ಬೆನ್ನಿಗೆ ಇವನು, ಇವನ ಬೆನ್ನಿಗೆ ಅವನು  ಅಂಟುವಂತೆ ಉಗಳಿದರೆ ಗೊತ್ತೆ ಆಗುತ್ತಿರಲಿಲ್ಲ. ಹಾದಿಯ ಹೊಲದಲ್ಲಿ ಒಂದೋ ಎರಡೋ ಮಾವಿನ ಮರಗಳೂ ಇದ್ದವು ಆದರೆ ಅವು ನಮಗೆ ನರಿಯ ಪಾಲಿನ ಹುಳಿದ್ರಾಕ್ಷಿ. ಹತ್ತುವ ಮಾತು ದೂರ. ಅವು ಅಷ್ಟು ದಪ್ಪ ಮತ್ತು ಎತ್ತರ. ಮೇಲಾಗಿ ಅವನ್ನು ಹೊಲದ ಒಢೆಯರು ಅಜ್ಜು ಗಾವಲು ಕಾಯುತಿದ್ದರು. ಅಕಸ್ಮಾತ್ ನಾವು ಮಾವಿ ಕಾಯಿ ಕದಿಯಲು ಪ್ರಯತ್ನಿಸಿದರೆ ಬೆನ್ನಮೇಲೆ ಬಾಸುಂಡೆ ಬರುವಂತೆ ಬಾರಿಸುತಿದ್ದರು. ಅದಕ್ಕೆ ನಾವು ಆ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ.ಸೂಳಿಭಾವಿ

ಶಾಲೆಗೆ ಹೋಗುವಾಗಿನ ಖುಷಿ ಬರುವಾಗ ಇರುತ್ತಿರಲಿಲ್ಲ.. ಕಾರಣ ಕತ್ತಲಾಗುವ ಮೊದಲೆ ಮನೆ ಸೇರ ಬೇಕಿತ್ತು. ಹಳ್ಳಿಯ ಹುಡುಗರಾದ್ದರಿಂದ ನಮಗೆ ಕತ್ತಲೆ ಎಂದರೆ ಭಯವೇನೂ ಇರಲಿಲ್ಲ. ಆದರೆ ನಮ್ಮ ಭೀತಿಗೆ ಕಾರಣವೇ ಬೇರೆ. ನಾವು ಹೋಗುವ ಹಾದಿಯಲ್ಲಿನ ಎರಡು ಊರಗಳ ಸುಡುಗಾಡುಗಳು ರಸ್ತೆಯ ಪಕ್ಕದಲ್ಲೆ ಇದ್ದವು. ಹಗಲೆನೋ ಪರವಾಯಿಲ್ಲ. ಹೆಣ ಹೂಳುವ ಪ್ರಕ್ರಿಯೆಯನ್ನು ಹೆದರಿಕೆ ಇಲ್ಲದೆ ನೋಡುತಿದ್ದೆವು ನೂರಾರು ಜನರಿರುವರಲ್ಲ. ನಮಗೆ ಆಗ ಏನು  ಅನಿಸುತ್ತಿರಲಿಲ್ಲ. ಅದರೆ ಸಂಜೆ ಊರಿಗೆ ವಾಪಸ್ಸು ಬರುವಾಗ ಕತ್ತಲಾಗಿದ್ದರಂತೂ ಆ ಕಡೆ ನೋಡುವುದಕ್ಕೂ ಭಯ. ಹೋಗುವಾಗ ನಾಲಕ್ಕು ಐದು ಜನರಿರುತ್ತಲಿದ್ದೆವು. ಅವರಲ್ಲಿ ಒಬ್ಬಿಬರು ಬೇರೆ ಶಾಲೆಯವರು. ಎಲ್ಲರೂ ಬೇರೆ ಬೇರೆ ತರಗತಿ. ಆದ್ದರಿಂದ ಬರುವಾಗ ಒಟ್ಟಿಗೆ ಬರಲು ಆಗುತ್ತಿರಲಿಲ್ಲ. ಕಾಯುವುದು ಕಷ್ಟ ಎನಿಸುತಿತ್ತು. ಹಾಗಾಗಿ ಮನೆ ಬರುವಾಗ ಜತೆಯವರು ಸಿಗುವುದು ವಿರಳ. ಆದರೂ ಕೈನಲ್ಲಿ ಜೀವ ಹಿಡಿದುಕೊಂಡ ಬರುತಿದ್ದೆವು. ಆ ಜಾಗ ಹತ್ತಿರ ಬಂದಾಗ ಜೀವ ಪುಕು ಪುಕು. ಯಾರಾದರು ಬರುವರೆನೋ ಎಂಬ ಆಶೆ. ಯಾರೆ ಬಂದರೂ ಅವರ ಜತೆಯಲ್ಲಿ ಹೆಜ್ಜೆ ಹಾಕಿ ಆ ಜಾಗ ದಾಟುವ ತವಕ. ಯಾರೂ ಜತೆಯಲ್ಲಿಲ್ಲದಿದ್ದರೆ ಎದೆ ಢವ ಢವ ಹೊಡೆಯವ ಶಬ್ದ ಕಿವಿಗೆ ಕೇಳವಷ್ಟು ಗಟ್ಟಿಯಾಗಿರುತಿತ್ತು. ಸ್ಮಶಾನವು ಇನ್ನೂ ತುಸು ದೂರದಲ್ಲಿ ಇರುವಾಗಲೆ ಆ ಕಡೆ ತಪ್ಪಿಯೂ ನೋಡಬಾರದೆಂದು. ಅದರ ವಿರದ್ಧ ದಿಕ್ಕಿಗೆ ಮುಖ ತಿರುಗಿಸಿ ಜೋರಾಗಿ ಕಾಲು ಹಾಕುತಿದ್ದೆವು. ಅದು ದಾಟಿ ಬಹುದೂರ ಬಂದ ಮೇಲೆ ಉಸಿರಾಟ ಸಾಮಾನ್ಯವಾಗುತಿತ್ತು. ಈ ಅನುಭವ ಸುಮಾರು ಎರಡು ವರ್ಷದವರೆಗ ಹೋಗುವಾಗ ಅಲ್ಲಿ ನಡೆವ ಅಂತಿಮ ಕ್ರಿಯೆ ಕಣ್ಣಿಗೆ ಬಿದ್ದಾಗಲೆಲ್ಲ ಆಗುತಿತ್ತು. ಆದರೆ ನಮ್ಮ ಜತೆ ದುರುಗಪ್ಪ ಶಾಲೆಗೆ ಬರತೊಡಗಿದಾಗ ಆ ಭಯ ನಿವಾರಣೆಯಾಯಿತು. ಅವನದು ಗಟ್ಟಿ ಎದೆ ಗುಂಡಿಗೆ. ನಾವು ಶಾಲೆಗೆ ಹೋಗುವಾಗ ದಫನ ಕಾರ್ಯ ನೋಡಿದ್ದರೆ ಬರುವಾಗ ತಪ್ಪದೆ ನಮ್ಮ ಜತೆ ಬರುತಿದ್ದ. ಹಾಗೆ ಬಂದವನು ಹೆಣವನ್ನು ಸಮಾಧಿ ಮಾಡಿದ ಜಾಗಕ್ಕೆ ಹೋಗಿ ಅಲ್ಲಿರುವ ಪುಡಿಗಾಸು, ತೆಂಗಿನ ಹೋಳು ನಿಂಬೆ ಹಣ್ಣು ತರುತ್ತಿದ. ನಮ್ಮ ಎದುರಲ್ಲೆ ಆ ಕಾಯಿ ಹೋಳನ್ನು ತುಂಡು ಮಾಡಿ ನಗುತ್ತಾ ತಿನ್ನುತಿದ್ದ. ನಮಗೆ ಮೊದಲಲ್ಲಿ ಬಹಳ ಹೆದರಿಕೆ. ಮಾರನೆ ದಿನ ಅವನ ಮುಖ ಕಾಣುವ ತನಕ ರಾತ್ರಿ ಅವನಿಗೆ ಏನಾಗಿದೆಯೋ ಎಂಬ ಗಾಬರಿ. ಆದರೆ ಅವನು ಬೆಳಗ್ಗೆ ಹೆಗಲಿಗೆ ಚೀಲ ಹಾಕಿಕೊಂಡ ನಗುನಗುತ್ತಾ ಬಂದಾಗ ಎದೆ ಹಗುರವಾಗುವುದು. ಈ ರೀತಿ ಅವನು ಒಂದೆರಡು ಸಲ ಮಾಡಿದ ಮೇಲೆ ನಮಗೂ ಧೈರ್ಯ ಬಂದಿತು. ಆದರೂ ನಾವು ಅವನ ಜತೆ ಕೊಬ್ಬರಿ ಹಂಚಿಕೊಳ್ಳಲು ಮುಂದಾಗಲಿಲ್ಲ. ಆಗಿನಿಂದ ನಾವೂ ಅವನ ಜತೆಯಲ್ಲಿ ಸಮಾಧಿಮಾಡಿದ ಜಾಗಕ್ಕೆ ಹೋಗಿ ಬರುವ ಎದೆಗಾರಿಕೆ ತೋರಿದೆವು. ಸಾವು, ಹೆಣ, ಸುಡುಗಾಡು ಮತ್ತು ಕತ್ತಲ ಭಯವನ್ನು ಅವನು ನಮ್ಮ ಮನದಿಂದ ಬೇರು ಸಹಿತ ಕಿತ್ತುಹಾಕಿದ.

ಆರರಿಂದ  ಅರವತ್ತು- ಕೊಳ್ಳಿದೆವ್ವಗಳ ಕಾಟ!

ಹಳ್ಳಿಯ ಕಡೆ ದೆವ್ವ, ಭೂತ ಪಿಶಾಚಿ, ಗಾಳಿಗಳಿಗೆ ದೇವರಿಗಿಂತ ಹೆಚ್ಚಿಗೆ ಭಯ ಪಡುವರು. ಆ ಬಗ್ಗೆ ನಾವು ಬಹಳ ಕಂಡು ಕೇಳಿದ್ದೆವು. ನಮ್ಮಲ್ಲಿ ದಕ್ಷಿಣ ಕನ್ನಡಜಿಲ್ಲೆಯಂತೆ ಭೂತಾರಾಧನೆ ಇಲ್ಲದಿದ್ದರೂ ದೆವ್ವದ ಕಾಟದ ಬಗ್ಗೆ ನಂಬಿಕೆ ಬಹಳ. ಅದರಲ್ಲೂ ಅರಳಿ ಮರದಲ್ಲಿ ಬ್ರಹ್ಮರಾಕ್ಷಸ, ಹುಣಿಸೆ ಮರ ದೆವ್ವಗಳ ಖಾಯಂ ನಿವಾಸ ಸ್ಥಳ ಎಂಬ ದೃಢವಾಗಿ ನಂಬಿಕೆ.. ಅಮವಾಸ್ಯೆ ಬಂದರೆ ಎಲ್ಲರಿಗೂ ರಾತ್ರಿಯ ಹೊತ್ತು ಅರಳಿ ಮರ, ಹುಣಿಸೆ ಮರದ ಕೆಳಗೆ ಹಾದು ಹೋಗಲೂ ಹೆದರಿ ಉಚ್ಚೆ ಹೊಯ್ದುಕೊಳ್ಳುವರು. ಆದಿತ್ಯವಾರ, ಅಮವಾಸ್ಯೆ ರಾತ್ರಿ ಮತ್ತು ಅರಳಿ ಮರ ಒಂದಾದರೆ ಬ್ರಹ್ಮರಾಕ್ಷಸನು ಖಂಡಿತ ಪ್ರತ್ಯಕ್ಷನಾಗುವನು ಎಂಬುದು ಎಲ್ಲ ಅಜ್ಜಿಯರು ಹೇಳುವ ಕಥೆಯ ಸಾರ. ಯಾರೂ ತಮ್ಮಲ್ಲಿದ್ದ ವಿದ್ಯಯನ್ನು ಶಿಷ್ಯರಿಗೆ ಮನಃಪೂರ್ವಕವಾಗಿ ಹೇಳಿಕೊಡುವುದಿಲ್ಲವೋ ಅವರು ಬ್ರಹ್ಮರಾಕ್ಷಸರಾಗುವರು ಎಂಬ ನಂಬಿಕೆ ಇತ್ತು. ಇನ್ನು ದೆವ್ವವಾಗುವವರು ಗಂಡಸರಿಗಿಂತ ಹೆಂಗಸರೆ ಜಾಸ್ತಿ. ಅದೂ ಮದುವೆಯಾಗದೆ ಹರೆಯದಲ್ಲಿ ಅಕಾಲ ಮರಣಕ್ಕೆ ತುತ್ತಾದವರು ದೆವ್ವವಾಗುವುದು ಹೆಚ್ಚು. ದೆವ್ವ ಹಿಡಿಯುವುದೂ ಹೆಚ್ಚಾಗಿ ಹಸಿ ಮೈಯವರಿಗೆ. ಅಂದರೆ ಹೊಸದಾಗಿ ಹರೆಯಕ್ಕೆ ಬಂದ ಹದಿಹರೆಯದ ಹುಡುಗಿಯರು, ಅದೆ ತಾನೆ ಹೆರಿಗೆಯಾದ ಬಾಣಂತಿಯರು, ಹೊಸದಾಗಿ ಮದುವೆಯಾದವರು. ಅದಕ್ಕೆ ಅವರನ್ನು ಮುರೊ ಸಂಜೆಯ ಹೊತ್ತಿನಲ್ಲಿ ಹೊರಗೆ ಹೋಗದಿರಲು ಹೇಳುತಿದ್ದರು. ಇನ್ನು ರಾತ್ರಿಯಾದರಂತೂ ದೆವ್ವ ಓಡಾಡುವ ಕಾಲ. ಅವರು ಒಬ್ಬರೆ ಮನೆ ಬಿಟ್ಟು ಕದಲುವ ಹಾಗಿರಲಿಲ್ಲ. ಆಗ ಅಂತೂ ನಾನು ಅದನ್ನೆಲ್ಲ ಅಕ್ಷರಶಃ ನಂಬಿದ್ದೆ. ದೆವ್ವಬಡಿದವರೂ ಆಡಿದ ಆಟ, ಆಡುವ ಮಾತು ನಮ್ಮಲ್ಲಿ ಅಚ್ಚರಿ ಹುಟ್ಟಿಸುತಿತ್ತು ಆ ಸಮಯದಲ್ಲಿ ನಯ ನಾಜೂಕಿಗೆ ಹೆಸರಾದ ಹುಡುಗಿಯರೂ ಸಹಾ ಅಪಾರ ಶಕ್ತಿ ಪ್ರದರ್ಶಿಸುತ್ತಿದ್ದರು. ಅವರನ್ನು ಹಿಡಿಯಲು ಒಬ್ಬರಿಂದ ಸಾಧ್ಯವೆ ಆಗುತ್ತಿರಲಿಲ್ಲ. ಹಿರಿಯರು ಗುರುಗಳು ಎಂಬ ಗೌರವವಿಲ್ಲದೆ ಮಾತನಾಡುತ್ತಿದ್ದರು. ಗಂಡನನ್ನು ಬೈಯುವರು. ಅತ್ತೆಯನ್ನು ಹೊಡೆಯುವರು. ಅರಪಾವು ಅನ್ನ ಉಣ್ಣುವ ಹುಡುಗಿ ಸೇರಕ್ಕಿ ಅನ್ನ ತಿಂದರೂ ಇನ್ನೂ ಬೇಕು ಎಂದು ಆರ್ಭಟಿಸಿದ್ದನ್ನೂ ನಾನು ನೋಡಿದ್ದೇನೆ. ಅದಕ್ಕೆ ಯಾರಾದರೂ ಅಳತೆ ಮೀರಿ ತಿನ್ನುವವರನ್ನು ನೋಡಿದರೆ ಅವನೇನು ದೆವ್ವ ತಿಂದಂತೆ ತಿನ್ನುವನು, ದಣಿವಿಲ್ಲದೆ ದುಡಿಯುವವರಿಗೆ ಅವನು ದೆವ್ವದಂತೆ ಕೆಲಸ ಮಾಡುವನು ಎಂಬ ಮಾತು ರೂಡಿಯಲ್ಲಿ ಬಂದಿದೆ. ದೆವ್ವ ಹಿಡಿದ ಅವಿದ್ಯಾವಂತೆಯು ಇಂಗ್ಲಿಷ್ ಮಾತನಾಡಿದ್ದು, ತಾನು ಹೋಗದೆ ಇದ್ದ ಊರಿನ ವಿವರ ಹೇಳಿದ್ದು ಉಂಟು. ಇದಕ್ಕೆಲ್ಲ ಮಂತ್ರ ಮಾಟ ಮಾಡಿ, ಯಂತ್ರ ಕಟ್ಟಿಸಿ ಭೂತೋಚ್ಛಾಟನೆ ಮಾಡಿಸುತ್ತಿದ್ದರು. ಕೊಳ್ಳೆಗಾಲದ ಮಾಂತ್ರಿಕರು, ಮಲೆಯಾಳಿ ಮಾಂತ್ರವಾದಿಗಳು ದೆವ್ವ ಬಿಡಿಸುವುದರಲ್ಲಿ ಎತ್ತಿದ ಕೈ. ಇನ್ನಂದು ವಿಶೇಷವೆಂದರೆ ಅವುಗಳಿಗೆ ದೇವರ ಸಾನಿಧ್ಯ ಸಹನೆಯಾಗುವುದಿಲ್ಲ. ಸಾಧ್ಯವಾದಷ್ಟೂ ದೂರವಿರಲು ಪ್ರಯತ್ನಿಸುತ್ತವೆ. ಕೆಲವು ದರಗಾಗಳ ಮುಲ್ಲಾಗಳು ದೆವ್ವ ಬಿಡಿಸುವುದರಲ್ಲಿ ಹೆಸರಾಗಿದ್ದರು. ನವಿಲುಗರಿಯ ಪಿಂಛಾದಿಂದ ಹೊಡೆಯುತ್ತಾ ಬೂದಿ ಊದಿದರೆ ಎಂಥಹ ದೆವ್ವವೂ ದಿಕ್ಕೆಟ್ಟು ಓಡುವುದು. ಇನ್ನೂ ಎರಡು ಸ್ಥಳಗಳು ದೆವ್ವ ಬಿಡಿಸಲು ತುಂಬ ಹೆಸರುವಾಸಿ. ಗುಲ್ಬರ್ಗಾ ಜಿಲ್ಲೆಯ ಗಾಣಗಾಪುರ ಮತ್ತು ದಾವಣಗೆರೆ ಜಿಲ್ಲೆಯ ಉಕ್ಕಡಗತ್ರಿ ಗಾಣಗಾಪುರದಲ್ಲಿ ದತ್ತಾತ್ರೇಯನ ಪೂಜಾ ಸಮಯದಲ್ಲಿ ಘಂಟಾನಾದ ಮತ್ತು ಚರ್ಮವಾದ್ಯಗಳ ಶಬ್ದ ಶುರುವಾದೊಡನೆ ಶಕೆ ಇರುವವರು ಓಲಾಡುವರು, ತಲೆಬಿರು ಹೊಯ್ದುಕೊಂಡು ಕುಣಿಯುವರು. ಕಂಬ ಹತ್ತುವರು. ಗಂಡು ಹೆಣ್ಣು ಎಂಬ ಭೇದವಿಲ್ಲ. ಅಸ್ತಿ ಅಂತಸ್ತುಗಳ ಪರಿವೆ ಇಲ್ಲ. ದೆವರ ತೀರ್ಥ ಮೈ ಮೇಲೆ ಹಾಕಿದಾಗ ಓಡುತ್ತಾ ನದಿ ತಟ ಸೇರಿ ನೀರಲ್ಲಿ ಬೀಳುವರು. ಅಲ್ಲಿಂದ ಎದ್ದ ಮೇಲೆ ಅವರಿಗೆ ಇದೆಲ್ಲದರ ಅರಿವೆ ಇರುವುದಿಲ್ಲ.

ಉಕ್ಕಡಗತ್ರಿಯ ಅಜ್ಜಯ್ಯನದೂ ಅದೆ ಪ್ರಬಾವ. ಆದಿತ್ಯವಾರ, ಅಮವಾಸ್ಯೆಯ ದಿನ ಅಲ್ಲಿ ಜನಜಾತ್ರೆ. ಪೂಜಾಸಮಯದಲ್ಲಿ ಮೈನಲ್ಲಿನ ಗಾಳಿ ಹೊರಹೊಮ್ಮುವುದು. ಅಲ್ಲಿಯೂ ಹತ್ತಿರದ ನದಿಯಲ್ಲಿ ಮುಳುಗಿ ಎದ್ದ ನಂತರ ಮಾಮೂಲಿನಂತಾಗುವುರು ಎಂಬ ನಂಬಿಕೆ. ಅಲ್ಲಿನ ವಿಶೇಷವೆಂದರೆ ಹಾಕಿದ್ದ ಚಪ್ಪಲಿ ಅಲ್ಲಿಯೆ ಬಿಡಬೇಕು. ಅಲ್ಲಿನ ರಾಸಿ ರಾಸಿ ಚಪ್ಪಲಿ ನೋಡಿದರೆ  ಸಾಕು, ಭೂತ ಪೀಡಿತರ ಪ್ರಮಾಣದ ಅರಿವಾಗುವುದು. ಆಗ ನಾನು ತೆರೆದ ಬಾಯಿಯಿಂದ ಅದನ್ನೆಲ್ಲ ನೋಡಿ ಆಶ್ಚರ್ಯಚಕಿತಾನಾದರೂ ಕ್ರಮೇಣ ಕಾರಣ ಹೊಳೆಯಿತು. ಇದು ಒಂದು ಮಾನಸಿಕ ಸಮಸ್ಯೆ. ದೈಹಿಕ ಬದಲಾವಣೆಯ ಸಂದರ್ಭದಲ್ಲಿ ದೇಹದ ಜೊತೆ ಮನಸ್ಸೂ ದುರ್ಬಲವಾಗಿರುವುದು. ಮನಕ್ಕೊಪ್ಪದ ಒತ್ತಾಯ, ಒತ್ತಡಗಳನ್ನು ಪ್ರತಿಭಟಿಸುವ ಪ್ರಕ್ರಿಯೆಯ ದೆವ್ವ ಹಿಡಿಯುವುದು. ಪುರುಷ ಪ್ರಧಾನ ಸಮಾಜದಲ್ಲಿ, ಕಾಟ ಕೊಡುವ ಅತ್ತೆಯರ ಕಾಲದಲ್ಲಿ, ದೇವರಿಗೆ ಹೆದರದವರು ದೆವ್ವಕ್ಕೆ ಭಯಪಡುವ ಸಮಯದಲ್ಲಿ ಅತೃಪ್ತ ಮನಸ್ಸು ಈ ರೀತಿ ಮಾಡುತಿತ್ತು ಎಂದು ನನ್ನ ಅನಿಸಿಕೆ. ಇದೂ ಒಂದು ರೀತಿಯ ಹಿಸ್ಟೀರಿಯಾ ಅಥವ ಮನೋವ್ಯಾಧಿ. ಇತ್ತೀಚೆಗೆ ಇವುಗಳ ಪ್ರಭಾವ ಕ್ಷೀಣ ವಾಗುತ್ತಿದೆ. ದೆವ್ವ ಹಿಡಿದಿದೆ ಅದನ್ನು ಬಿಡಿಸಬೇಕು ಎಂಬ ಮೂಢನಂಬಿಕೆ ಮಾಯವಾಗಿ ಮನೋವೈದ್ಯ ರಲ್ಲಿಗೆ ಕರೆದೊಯ್ಯುವರ ಸಂಖ್ಯೆ ಹೆಚ್ಚಿದೆ. ಆಪ್ತ ಸಲಹೆ ಮತ್ತು ಔಷಧಗಳಿಂದ ವಿಚಿತ್ರ ಮತ್ತು ಅಸಹಜ ನಡವಳಿಕೆಯನ್ನು ನಿಯಂತ್ರಿಸಬಹುದಾಗಿದೆ.

ಹುಡುಗರಾಗಿದ್ಧಾಗ ನಮ್ಮನ್ನು ಕಾಡಿದ್ದ ಎರಡು ಬಹುದೊಡ್ಡ ವಿಷಯ ಎಂದರೆ ಕೊಳ್ಳಿದೆವ್ವಗಳು ಮತ್ತು ಥಳ ಥಳನೆ ಕತ್ತಲ್ಲೂ ಹೊಳೆವ ನಾಗಮಣಿ. ನಾವುರಾತ್ರಿಯಲ್ಲಿ ನಮ್ಮ ಅಜ್ಜಿ ಸುತ್ತ ಕುಳಿತಾಗ ಅವಳು ಹೇಳುತಿದ್ದ ಕಥೆಗಳಲ್ಲಿ ಅವುಗಳ ಪ್ರಸ್ತಾಪ ಪದೇ ಪದೇ ಬರುತಿತ್ತು.ಹಾದಿ ಹೋಕರನ್ನು ಸರಿ ರಾತ್ರಿಯಲ್ಲಿ ಕೊಳ್ಳಿದೆವ್ವಗಳು ಹೇಗೆ ದಾರಿತಪ್ಪಿಸುವವು ಎಂಬುದನ್ನಂತೂ ಮನ ಮಟ್ಟುವಂತೆ ವರ್ಣಿಸುತ್ತಿದ್ದರು. ಕಗ್ಗತ್ತಲ ರಾತ್ರಿಯಲ್ಲಿ ಅರಿಯದ ಊರಿಗೆ ಬರುವ ಪ್ರವಾಸಿಗರೆ ಆ ಕೊಳ್ಳಿದೆವ್ವಗಳಿಗೆ ಹೇಳಿ ಮಾಡಿಸಿದ ಗುರಿ. ಆಗ ಬಹುತೇಕ ರಸ್ತೆಗಳಿಲ್ಲದ ಕಾಲ. ಬಂಡಿ ಜಾಡು ಇದ್ದರೆ ಬಹುದೊಡ್ಡದು. ಇಲ್ಲವಾದರೆ ಕಾಲುದಾರಿ  ಸಿಕ್ಕರೂ ಸಾಕಿತ್ತು.ಅನೇಕ ಸಾರಿ ಅದೂ ಕಾಣುತ್ತಿರಲಿಲ್ಲ. ನಕ್ಷತ್ರಗಳ ಬೆಳಕೆ ದಾರಿ ದೀಪ. ಮೋಡ ಮುಸುಕಿದರೆ ಅದೂ ಇಲ್ಲ. ಹಾಗಾಗಿ ಯಾರೆ ಆದರೂ ಕತ್ತಲಾಗುವ ಮುಂಚೆ ಗೂಡು ಸೇರತಿದ್ದರು. ಇಲ್ಲವಾದರೆ ಹತ್ತಿರದ ಹಳ್ಳಿಗೆ ಹೋಗಿ ಆಶ್ರಯ ಪಡೆಯುತಿದ್ದರು.

ಅವರ ಕಥೆಗೆ ಪ್ರತ್ಯಕ್ಷ ಪುರಾವೆ ಸಹ ಅವರ ಬಳಿ ಇದ್ದಿತು. ಅದು ಬೇರೆ ಯಾರು ಅಲ್ಲ. ಸಾಕ್ಷಾತ್ ನಮ್ಮ ತಾತನೆ. ಒಂದು ಸಾರಿ ನಮ್ಮ ತಾತನಿಗೆ ಅವುಗಳ ಪ್ರತ್ಯಕ್ಷ್ಯ ಅನುಭವವಾಯಿತಂತೆ. ಅವರಿಗೆ ಮದುವೆಯಾದ ಹೊಸದು. ಹೆಂಡತಿ ತೌರಿಗೆ ಹೋಗಿದ್ದಾಳೆ. ಆದೂ ಏನು ದೂರದ ಊರಲ್ಲ. ಮೂರು ಹರದಾರಿ ಇರಬಹುದು. ಅವರಿಗೆ ಇಳಿ ಹೊತ್ತಿಗೆ ಹೆಂಡತಿಯ ನೆನಪಾಗಿದೆ. ಹೆಂಡತಿಯನ್ನು ನೋಡ ಬೇಕೆಂದು. ಯಾರು ಏನು ಹೇಳಿದರೂ ಕೇಳದೆ ಇಲ್ಲೆ ಎರಡು ತಾಸಿನ  ಹಾದಿ ರಾತ್ರಿ ಮಲಗುವ ಮುನ್ನ ತಲುಪುವೆ ಎಂದು ಹೊರಟಿರುವರು. ಅವರಿಗ ಬೀಡಿ ಸೇದುವ ಚಟ ಇಲ್ಲ. ಅಂದ ಮೇಲೆ ಬೆಂಕಿ ಪೊಟ್ಟಣ ವೂ ಇಲ್ಲ. ಇನ್ನು ಬ್ಯಾಟರಿ ಮಾತೆಲ್ಲಿ. ಹತ್ತಾರು ಸಾರಿ ಓಡಾಡಿದ ಹಾದಿ. ಕಣ್ಣು ಕಟ್ಟಿ ಬಿಟ್ಟರೂ ಆ ಊರಿಗೆ ಹೋಗಿ ಮುಟ್ಟ ಬಲ್ಲೆ ಎಂಬ ಆತ್ಮ ವಿಶ್ವಾಸ.. ಹೊರಟೆ ಬಿಟ್ಟಿದ್ದಾರೆ. ಊರಿಂದ ಇನ್ನೂ ಹರದಾರಿ ಹೋಗಿಲ್ಲ ಕತ್ತಲು ಆವರಿಸಿದೆ. ಅಮವಾಸ್ಯೆಯು ಮುಂದಿದೆ. ಚಂದ್ರನ ಸುಳಿವಿಲ್ಲ. ಅಲ್ಲೊಂದು ಇಲ್ಲೊಂದು ಕಣ್ಣು ಮಿಟುಕಿಸುವ ನಕ್ಷತ್ರಗಳು. ತುಸು ದೂರ ಹೋದರೆ ಹೆಂಡತಿಯ ಊರಿನ ದೀಪ ಕಾಣುತ್ತದೆ ಅದರ ಜಾಡು ಹಿಡಿದು ಹೋದರಾಯಿತು ಎಂದು ಭರ ಭರನೆ ಸಾಗಿದ್ದಾರೆ. ತುಸು ದೂರ ಹೋದ ನಂತರ ಪಂಜಿನ ಬೆಳಕು ಕಂಡಿದೆ. ಆಗ ರಾತ್ರಿಯಲ್ಲಿ ದೂರ ಪ್ರಯಾಣ ಮಾಡುವವರು ಕೈನಲ್ಲಿ ಉರಿವ ಪಂಜು ಹಿಡಿದು ಹೊರಡುತಿದ್ದರು. ದಾರಿ ಕಾಣಲಿ ಎಂಬದಕ್ಕಿಂತ ಕಾಡು ಪ್ರಾಣಿಗಳು ಹತ್ತಿರ ಬರಬಾರದೆಂಬ ಮುನ್ನೆಚ್ಚರಿಕೆ. ಸರಿ, ತುಸು ಜೋರಾಗಿ ನಡೆದು ಅವರನ್ನು ಸೇರಿ ಕೊಂಡರೆ ಜತೆಯೂ ಆಗುತ್ತದೆ ಮಾತನಾಡುತ್ತಾ ಪ್ರಯಾಣದ ಆಯಾಸವೂ ಕಾಣುವುದಿಲ್ಲ ಎಂದು ಬಿರುಸಾಗಿ ಹೆಜ್ಜೆ ಹಾಕಿದ್ದಾರೆ. ಆದರೆ ಮುಂದಿರುವವನು ಇವರಿಗಿಂತ ಜೋರಾಗಿ ನಡೆದಿರುವಂತೆ ಕಾಣುತ್ತದೆ. ಇವರು ವೇಗ ಹೆಚ್ಚಿಸಿದಂತೆ ಅವನೂ ವೇಗ ಹೆಚ್ಚಿಸಿದ್ದಾನೆ. ಎಷ್ಟುಹೊತ್ತು ನಡೆದರೂ ಅವನನ್ನು ಹಿಡಿಯಲಾಗಿಲ್ಲ. ಅಲ್ಲೆ ಸಿಕ್ಕ ಕಲ್ಲಿನ ಮೇಲೆ ಕುಳಿತು ದಣಿವಾರಿಸಿಕೊಂಡಿದ್ದಾರೆ. ಪುನಃ ಅವನ ಬೆಳಕು ಕಂಡಿದೆ. ಇವರು  ಎದ್ದವರೆ  ಧಾವಿಸಿದ್ದಾರೆ. ಹೀಗೆ ಅನೇಕ ಬಾರಿ ಬೆನ್ನಟ್ಟಿದರೂ ಅವನು ಕೈಗೆ ಸಿಕ್ಕಿಲ್ಲ. ಕೊನೆಗೆ ಸುಸ್ತಾಗಿ ಅಲ್ಲೆ ಕುಳಿತಿದ್ದಾರೆ.ಚುಮುಚುಮು ಬೆಳಗಾಗಿದೆ. ತಂಗಾಳಿ ಬೀಸಿದೆ. ಕುಳಿತಲ್ಲೆ  ನಿದ್ರೆ ಮಂಪರು ತುಸು ಹೊತ್ತಿನ ನಂತರ ಎದ್ದು ನೋಡಿದಾಗ ರಾತ್ರಿಯೆಲ್ಲ ನಡೆದರೂ ಅವರು ಮೊದಲು ಹೊರಟ ಸ್ಥಳದಲ್ಲೆ ಇದ್ದಾರೆ. ಬರಿ ದಣಿವಾದದ್ದೆ ಬಂತು ಊರು ದೂರದಲ್ಲೆ ಇದೆ. ಆವರಿಗೆ ಆಗ ದಿಗ್ಭ್ರಭ್ರಮೆ ಯಾಗಿದೆ. ಮನೆಗೆ ಬಂದು ಹೇಳಿದಾಗ ಅವರ ಹಿರಿಯರು 'ಇದೆಲ್ಲ ಕೊಳ್ಳಿದೆವ್ವದ  ಆಟ . ಅದು ಹೀಗೆಯೆ  ಗೋಳಾಡಿಸುವುದು. ಆದರೆ ಏನೂ ಅಪಾಯ ಮಾಡದು, ಎಂದು ವಿವರಿಸಿದರಂತೆ. ದೇವರು ದೊಡ್ಡವನು. ಹೆಚ್ಚು ತೊಂದರೆ ಯಾಗಲಿಲ್ಲ. ಅಂದಿನಿಂದ ನಮ್ಮ ಅಜ್ಜ ಕತ್ತಲಾದ ಮೇಲೆ ಹೊರಗೆ ಕಾಲಿಡುತ್ತಿದ್ದಿಲ್ಲ', ಎಂದು ಅವರು ಕಥೆ ಮುಗಿಸುತ್ತಿದ್ದರು. ಯಾಕಜ್ಜಿ ತಾತ ಅಷ್ಟು ರಾತ್ರಿ ಹೊರಟಿದ್ದ? ಎಂದು ನಾವೆಲ್ಲ ಕೇಳಿದಾಗ ಸುಕ್ಕು ಬಿದ್ದ ಅವರ ಬಿಳಿಕೆನ್ನೆ ಕೆಂಪಾದಂತೆ ಕಂಡಿತು.

ಅದಕ್ಕೆ ಪುಟ ಕೊಡುವಂತೆ ರಾತ್ರಿಯ ಹೊತ್ತು ನಮ್ಮ ಮನೆಯ ಮಾಳಿಗೆಯ ಮೇಲೆ ಕುಳಿತಾಗ ನಮಗೆ ಅಗೀಗ ಅನತಿ ದೂರದಲ್ಲಿದ್ದ ಗುಡ್ಡಗಳ ಸಾಲಿನಲ್ಲ್ಲಿ ಮಿಣಮಿಣ ಮಿನುಗುವ ದೀಪ ಓಡಾಡಿದಂತೆ ಕಾಣುತಿತ್ತು. ನಾವು ಕೇಳಿದ ಕಥೆಗೂ ಕಾಣುತ್ತ ಇರುವ ನೋಟಕ್ಕೂ ತಾಳೆ ಹಾಕಿ ಅವೂ ಕೂಡಾ ಕೊಳ್ಳಿದೆವ್ವ ಇರಬಹುದು ಎಂದು ಕೊಳ್ಳತಿದ್ದೆವು. ಇದೆ ನಂಬಿಕೆ ನಾನು ವಿಜ್ಞಾನದ ಪದವಿ ಸೇರುವುವರೆಗೂ ಇತ್ತು. ಆಲ್ಲಿ ಗೊತ್ತಾಯಿತು. ಕುರುಚಲು ಕಾಡಿನಲ್ಲಿ ಜವಗು ಪ್ರದೇಶದಲ್ಲಿ ಮೀಥೇನ್ಅನಿಲ ಉತ್ಪಾದನೆ ಆಗುತ್ತದೆ. ಅದು ಕೆಲವು ಸಲ ಹತ್ತಿ ಉರಿಯುವುದು ಎಂದು.ಆಗ ಈ ಕೊಳ್ಳಿದೆವ್ವದ ಕಥನದ ರಹಸ್ಯ ಬಯಲಾಯಿತು.

ಇತ್ತೀಚೆಗೆ ನಮ್ಮ ಹಳ್ಳಿಯ ಮನೆಗೆ ಹೋದಾಗ ರಾತ್ರಿ ಮೊಮ್ಮಕ್ಕಳೊಡನೆ ಮಾಳಿಗೆ ಏರಿ ಕುಳಿತಿದ್ದೆವು. ಈಗಲೂ ಬೆಟ್ಟಗಳಲ್ಲಿ ಬೆಳಕು ಚಲಿಸಿದಂತೆ ಕಾಣುತಿತ್ತು ಆಗ ಯಾವಾಗಾದರೊಮ್ಮೆ ಕಾಣುತ್ತಿದ್ದುದು ಈಗ ಮಾಮೂಲು ಮಾತಾಗಿದೆ. ಅದು ಒಂದು ಎರಡು ಕಡೆ ಅಲ್ಲ. ಹತ್ತಾರು ಕಡೆ. ಗುಡ್ಡಗಳ ಎತ್ತರವೂ  ಕಡಿಮೆಯಾದಂತೆ ತೋರಿತು.. ನನ್ನ ಮೊಮ್ಮಕ್ಕಳು ಅದೇನೆಂದು ನನ್ನನ್ನು ಕೇಳಲಿಲ್ಲ. ನಿತ್ಯ ಅವರು ಟಿವಿ ನೋಡವವರು ತಾನೆ. ಅಕಸ್ಮಾತ್  ಅವರು ಕೇಳಿದರು ನಾನು ಕೊಳ್ಳಿದೆವ್ವ ಅಂದರೆ ಖಂಡಿತ ಗೊಳ್ಳನೆ ನಗುತಿದ್ದರು. ಅವು ಕಳ್ಳ ದೆವ್ವಗಳು ಎಂದು ಅವರಿಗೂ ತಿಳಿದಿದೆ. ಕದ್ದ ಕಬ್ಬಿಣದ ಅದಿರನ್ನ ಸಾಗಿಸುವ ಕಳ್ಳ ಲಾರಿಗಳೆಂದು ಧಾರಾಳವಾಗಿ ಹೇಳುತಿದ್ದರು. ರಾತ್ರಿಯೆಲ್ಲ ರಾಜಾರೋಷವಾಗಿ ಅದಿರು ತುಂಬಿಕೊಂಡು ಸಾಗುವ ಲಾರಿಗಳ ಹೆಡ್ ಲೈಟುಗಳ ಚಲನೆ ಗುಡ್ಡಗಳ ತುಂಬಾ ನಮಗೆ ಚಲಿಸುವ ದೀಪಗಳಂತೆ ಕಾಣುವವು. ಆದರೆ ಇವು ಹಿಂದೆ ಕೇಳುತ್ತಿದ್ದ, ಹುಡುಗರು ನಂಬುತ್ತಿದ್ದ ಅಮಾಯಕ ಹಾದಿ ತಪ್ಪಿಸುವ ಹುಡುಗಾಟದ ಕೊಳ್ಳಿ ದೆವ್ವಗಳಂತೆ ನಿರಪಾಯಕಾರಿಗಳಲ್ಲ.ಹಸಿರು ಗುಡ್ಡಗಳನ್ನು ಬಗೆದು ಕೆಪುಕೊರಕಲನ್ನು ಮಾಡಿ ಅಲ್ಲ ಕಡೆ ಕೆಂಧೂಳು ಹರಡಿರುವುರು. ಸರಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಮಾಡಿ ದೇಶದ ಸಂಪತ್ತನ್ನು ಲೂಟಿ ಮಾಡಿ ಪರಿಸರವನ್ನು ಕುಲಗೆಡಿಸಿ ಸಮಾಜವನ್ನು ಪತನದ ಅಂಚಿಗೆ ತಂದು ನಿಲ್ಲಿಸಿರುವ ಈ ಖದೀಮ ಅದಿರು ಸಾಗಣಿಕೆದಾರ ಕಳ್ಳ ದೆವ್ವಗಳು!

ಆರರಿಂದ ಅರವತ್ತು- ೨೧: ನಾಗಮಣಿ ರಹಸ್ಯ

ನನ್ನ ಬಾಲ್ಯದ ಒಂದು ಸಾಹಸ ಈಗಲೂ ಮನದಲ್ಲಿ ಹಚ್ಚ ಹಸುರಾಗಿದೆ. ವಿದ್ಯುತ್‌ ಇಲ್ಲದ ರಾತ್ರಿಗಳು ನಮಗೆ ಅದ್ಭುತ ಲೋಕಕ್ಕೆ ದಾರಿಗಳಾಗಿದ್ದವು. ಕತ್ತಲಾಗುತ್ತಿದ್ದಂತೆ ಊಟ ಮಾಡಿ ಹಾಸಿಗೆ ಸೇರುತಿದ್ದೆವು. ಗೋಣಿಚೀಲದ ಮೇಲೆ ಕವದಿ ಹಾಸಿ ಹಳೆಯ ಸೀರೆಯ ತಲೆದಿಂಬು ಇದ್ದರೆ ಅದೆ ನಮಗೆ ಸುಪ್ಪತ್ತಿಗೆ. ಊಟವಾಗುವ ತನಕ ಲಾಟೀನು ಬೆಳಕು ಕೊಟ್ಟರೆ ನಂತರ ಚಿಮಣೀ ಎಣ್ಣೆ ಬುಡ್ಡಿ ನಮಗೆ ನಿದ್ದೆ ಬರುವ ತನಕ ಮಂಕು ಬೆಳಕು ಚೆಲ್ಲುವುದು. ಬಿಳಿ ಗೋಡೆಗಳ ಮೇಲೆ ನೆರಳುಗಳ ಆಟ ನಮಗೆ  ರಮ್ಯಲೋಕಕ್ಕೆ ರಹದಾರಿ ನೀಡುತಿತ್ತು. ನಿದ್ದೆ ಬರುವ ತನಕ ಕಥೆ ಕೇಳುವುದೆ ಒಂದು ದೊಡ್ಡ ಕೌತುಕ.. ಎಲ್ಲ ರಾಜ ರಾಣಿಯರ, ರಾಮಾಯಣ, ಮಹಾಭಾರತದ ಕಥೆಗಳು. ವಾಸ್ತವ ಮತ್ತು ಕಲ್ಪನಾಲೋಕದ ನಡುವಿನ ಗೆರೆ ಬಹುತೇಕ ಮಾಯವಾಗಿರುತಿತ್ತು. ಅದೊಂದು ಅದ್ಭುತ ರಮ್ಯಲೋಕ. ಕೇಳುತ್ತಾ ಕೇಳುತ್ತಾ ನಿದ್ರೆಗೆ ಜಾರಿದ ಮೇಲೆ ಕನಸಲ್ಲೂ ಅದೆ ಮುಂದುವರಿಯುತಿತ್ತು.

ಆಗ ಅಜ್ಜಿ ಹೇಳುತಿದ್ದ ಕಥೆಗಳಲ್ಲಿ ನಾಗಮಣಿಯ ಹೆಸರು ಸದಾ ಬರುತಿತ್ತು. ಅದನ್ನು ನಾಗರತ್ನ ಎಂತಲೂ ಕರೆಯುತಲಿದ್ದರು. ಅತಿ ಪುರಾತನವಾದ ಸರ್ಪದ ತಲೆಯಲ್ಲಿ ನಾಗರತ್ನವಿರುವುದು ಎಂಬ ನಂಬಿಕೆ ಬಲವಾಗಿತ್ತು.. ಸಂಪತ್ತಿಗೂ ಹಾವಿಗೂ ಅವಿನಾಭಾವ ಸಂಬಂಧ ಆ ನಂಬಿಕೆ ನಮ್ಮ ದೇಶದಲ್ಲಿ ಮಾತ್ರವಲ್ಲ ಎಲ್ಲ ಸಂಸ್ಕೃತಿಗಳಲ್ಲೂ ಇದೆ. ಇನ್ನು ಕೆಲವು ಕಡೆ ಅವನ್ನು ಡ್ರಾಗನ್‌ ಎನ್ನುವರು.. ಎಷ್ಟೋ ನಿಧಿ ಶೋಧನೆಯ ಸಿನೇಮಾಗಳಲ್ಲಿ ಇದನ್ನು ನಾವು ನೋಡಬಹುದು. ಅದರಲ್ಲೂ ಈಗಿನ ಡಿಜಿಟಲ್‌ ಯುಗದಲ್ಲಂತೂ ಮೈ ನವಿರೇಳುವ ದೃಶ್ಯಗಳಿರುತ್ತವೆ. ನಮ್ಮಲ್ಲಿ ಮಾತ್ರ ನಿಧಿ ಕಾಯುವುದು ಬರಿ ಹಾವು ಅಲ್ಲ, ಅದು ಘಟ ಸರ್ಪ. ಅದಕ್ಕೆ ಮೈ ಮೇಲೆ ರೋಮಗಳು ಬೇರೆ ಇರುವವು ಎನ್ನಲಾಗಿದೆ. ಕೆಲವು ಸಲ ಅದಕ್ಕೆ ಸಂದರ್ಭಕ್ಕ ತಕ್ಕಂತೆ ಐದು ಹೆಡ, ಏಳು ಹೆಡೆ ಇರುವದು ಎಂದು ವರ್ಣಿಸುವರು. ಅದರ ಬಗ್ಗೆ ನಮಗಂತೂ ಎಳ್ಳಷ್ಟೂ ಅನುಮಾನವಿರುತ್ತಿರಲಿಲ್ಲ. ಅಷ್ಟೆ ಏಕೆ ನಮ್ಮ ಪುರಾಣಗಳೆ ಹೇಳುತ್ತವಲ್ಲ ಆದಿಶೇಷನಿಗೆ ಸಾವಿರ ಹೆಡೆ ಇದೆ, ಅದರ ಮೇಲೆ ಭೂಮಂಡಲವೆ ನಿಂತಿದೆ ಎಂದು, ಹಾಗಿದ್ದ ಮೇಲೆ ಎಳೆಯ ಹುಡುಗರಾದ ನಾವು ನಾಗಮಣಿ ರಹಸ್ಯವನ್ನು ನಂಬದಿರುವುದು ಸಾಧ್ಯವೆ? ಆಗ ನಾನು ಕೇಳಿ ತಿಳಿದುಕೊಂಡಂತೆ ನಾಗಮಣಿಯನ್ನು ಹೊಂದಿರುವ ಸರ್ಪವು ಬಹು ದೊಡ್ಡದು. ಅಲ್ಲದೆ ವಯಸ್ಸಾಗಿರುವುದು. ಅದಕ್ಕೆ ಕತ್ತಲಲ್ಲಿ ಕಣ್ಣು ಮಸಕು. ಮನುಷ್ಯರಿಗೆ ವಯಸ್ಸಾದ ಮೇಲೆ ಕಣ್ಣು ಮಂದವಾಗುವುದು ಅದರಂತೆ ಎಲ್ಲ ಪ್ರಾಣಿಗಳಿಗೂ ಅದು ಸಹಜ ಲಕ್ಷಣ. ನಾವು ಕನ್ನಡಕ ಹಾಕುತ್ತೇವೆ. ಅವಕ್ಕೆ ಕನ್ನಡಕ ಹಾಕುವ ಸೌಲಭ್ಯವೂ ಇಲ್ಲ ಹಾವೂ ಕೂಡಾ ವಯಸ್ಸಾದಂತೆ ಜಡವಾಗುವುದು. ಅದು ರಾತ್ರಿಯಲ್ಲಿ ಮಣಿಯನ್ನು ಕೆಳಗೆ ಇಟ್ಟು ಆಹಾರ ಹುಡುಕುತ್ತಾ ಹೋಗುವುದು. ಕಾರಣ ಅದು ಮಣಿಯನ್ನು ಧರಿಸಿ ಹೊರಟರೆ ಇದು ಬರುವುದು ಇತರ ಬಲಿಯಾಗುವ ಪ್ರಾಣಿಗೂ ಗೊತ್ತಾಗಿಬಿಡುವುದು. ಆಗ ಅದು ಸುಲಭವಾಗಿ ತಪ್ಪಿಸಿಕೊಳ್ಳುವುದು. ಅದಕ್ಕೆ ಅದು ಮಣಿಯನ್ನು ನೆಲದ ಮೇಲೆ ಇಟ್ಟು ಸುತ್ತ ಮುತ್ತ ಹರಿದಾಡಿ ಆಹಾರ ಪಡೆಯುವುದು ಎಂಬ ವಿವರಣೆ ಕೇಳಿದ್ದೆವು. ಅಕಸ್ಮಾತ್‌ ಯಾರಾದರೂ ಆ ಮಣಿಯನ್ನು ಕದಿಯಲು ಬಂದರೆ ತಕ್ಷಣ ಧಾವಿಸಿ ಬಂದು ಕಚ್ಚುವುದು. ಅದರಿಂದ ಯಾರೂ ಅದರ ತಂಟೆಗೆ ಹೋಗುವುದಿಲ್ಲ.

ವಜ್ರ, ವೈಢೂರ್ಯ, ಮಾಣಿಕ್ಯ ಧಾರಾಳವಾಗಿ ಸಿಗಬಹುದು. ಆದರೆ ನಾಗರತ್ನ ಬಹು ವಿರಳ.  ಆದರೂ ಲಕ್ಷಕೊಬ್ಬರು ಧೈರ್ಯ ಮಾಡಿ ನಾಗಮಣಿಯನ್ನು ಪಡೆದವರಿದ್ದಾರಂತೆ. ಅವರದು ಬಹು ಮುನ್ನೆಚ್ಚರಿಕೆಯ ಕಾರ್ಯ ವಿಧಾನ. ಸರ್ಪ ಬದುಕಿರುವವರೆಗೆ ಮಣಿ ಪಡೆಯುವುದ ಆಗದ ಮಾತು. ಇನ್ನು ಅದನ್ನು ಕೊಲ್ಲುವುದು ಸಾಧ್ಯವೇ ಇಲ್ಲ. ಅದಕ್ಕಾಗಿ ಅವರು ಯೋಜನೆ ರೂಪಿಸುವರು.. ವರ್ಷಗಟ್ಟಲೆ ಕಾದು ಆ ಘಟ ಸರ್ಪದ ಸುಳಿವು ಪಡೆಯುತ್ತಾರೆ. ಅದು ಹರಿದಾಡುವ ಹಾದಿ, ಆಹಾರ ಹುಡುಕುವ ಸಮಯ ಗುರುತಿಸುವರು. ನಂತರ ಒಂದು ಕಬ್ಬಿಣದ ಜರಡಿಯಾಕಾರದ ವಿಶೇಷ ಉಪಕರಣ ತಯಾರಿಸುವರು. ಅದರ ತುಂಬ ಚಿಕ್ಕ ಚಿಕ್ಕ ರಂದ್ರಗಳಿರಬೇಕು. ಅದನ್ನ ನಾಗಮಣಿಯ ಮೇಲೆ ಮುಚ್ಚಿದಾಗಲೂ ನಾಗಮಣಿಯ ಕಿರಣಗಳು ಪ್ರಕಾಶಮಾನವಾಗಿ ಹೊರ ಸೂಸಬೇಕು. ಮತ್ತು ಆ ರಚನೆಯ ಮೇಲು ಭಾಗದಲ್ಲಿ ಮೊನಚಾದ ಡಬ್ಬಣದ ಗಾತ್ರದ ನೂರಾರು ಚೂಪಾದ ಮೊಳೆಗಳನ್ನು ಬೆಸೆದಿರುವುರು. ಆ ಘಟ ಸರ್ಪ ಓಡಾಡುವ ಜಾಗದಲ್ಲೆ ಅವಿತಿರುವರು. ಅದು ಬಂದು ನಾಗಮಣಿಯನ್ನು ನೆಲದ ಮೇಲೆ ಇಟ್ಟು ಆಹಾರ ಅರಸುತ್ತಾ  ಹೋದಾಗ ಕಬ್ಬಿಣದ ಸೂಜಿಯಂತಹ ಚೂಪಾದ ಮೊನೆ ಇರುವ ಆ ಉಪಕರಣವನ್ನು ಮಣಿಯ ಮೇಲೆ ಬೋರಲು ಹಾಕುವರು. ತಕ್ಷಣ ಅಲ್ಲಿಂದ ದೂರ ಓಡುವರು. ಆಗ ತುಸು ಪ್ರಕಾಶ ಕಡಿಮೆಯಾಗುವುದು. ಸರ್ಪದ ಗಮನಕ್ಕೆ ಬಂದರೂ ಅದು ಜಾಸ್ತಿ ಯೋಚನೆ ಮಾಡುವುದಿಲ್ಲ. ಹೇಗಿದ್ದರೂ ಬೆಳಕು ಕಾಣುತ್ತಿರುವುದಲ್ಲ.. ಅದರಲ್ಲೆ ಆಹಾರ ಹುಡುಕಿ ತಿಂದು ಸಾವಕಾಶವಾಗಿ ಮಣಿ ಇಟ್ಟ ಜಾಗಕ್ಕೆ ಬರುವುದು. ಸಾಧಾರಣವಾಗಿ ಹಾವುಗಳು ಒಮ್ಮೆ ಆಹಾರ ತಿಂದ ಮೇಲೆ ಹಾವುಗಳು ಜಡವಾಗುವವು.. ಆಹಾರ ಜೀರ್ಣಸಿಕೊಳ್ಳಲು ಹದಿನೈದು ದಿನ ಬೇಕು. ಸೋಮಾರಿಗಳನ್ನು `ಕಪ್ಪೆ ತಿಂದ ಹಾವಿನಂತೆ ಇದ್ದಾನೆ ಏಳುವುದೂ ಕಷ್ಟ ಎದ್ದ ಮೇಲೆ ನಡೆಯುವುದು ಇನ್ನೂ ನಿದಾನ' ಎಂದು ಹಂಗಿಸುವರು. ಆಹಾರ ಸೇವಿಸಿದ ಹಾವು ಬಂದು ನೋಡಿದರೆ ಬೆಳಕು ಕಾಣುವುದು ಆದರೆ ಮಣಿ ಹತ್ತಿರ ಹೋಗಲಾಗುವುದಿಲ್ಲ. ಅತ್ತಿತ್ತ ನೋಡುವುದು. ಯಾರೂ ಇಲ್ಲ. ಕೋಪ ಉಕ್ಕೇರುವುದು. ರಭಸದಿಂದ ಹೆಡೆ ಬಿಚ್ಚಿ ಮುಚ್ಚಿದ್ದ ಉಪಕರಣದ ಮೇಲೆ ಅಪ್ಪಳಿಸುವುದು. ತಕ್ಷಣ ಅದಕ್ಕೆ ಚೂಪಾದ ಮೊನೆಗಳಿಂದ ಗಾಯವಾಗುವುದು. ಅದು ಇನ್ನೂ ರೋಷದಿಂದ ಮತ್ತೊಮ್ಮೆ ಹೊಡೆಯುವುದು ತಕ್ಷಣವೆ ಅದರ ಸಾವು ಶತಃಸಿದ್ಧ. ನಂತರ ಹೊತ್ತೇರಿದ ಮೇಲೆ ಅವರು ಬಂದು ಸರ್ಪಕ್ಕೆ ಸಂಸ್ಕಾರ ಮಾಡಿ ಮಣಿಯನ್ನು ಪಡೆಯುವರು. ಸರ್ಪ ಸಂಸ್ಕಾರವಂತೂ ನಮ್ಮಲ್ಲಿ ಮರೆಯಲಾರದ ಆಚರಣೆ.

ಮನೆಯಲ್ಲಿ ಹಾವು ಬರುವುದು ಸಹಜ. ಅದರಲ್ಲೂ ಮಣ್ಣಿನ ಮನೆಗಳಲ್ಲಿ ಇಲಿಗಳ ಹಾವಳಿ ಬಹಳ. ಇಲಿ ಹುಡುಕಿ ಹಾವೂಗಳೂ ಬರುತಿದ್ದವು. ದೇವರೆಂದು ನಾಗರ ಕಲ್ಲನ್ನು ವರ್ಷಕೊಮ್ಮೆ ಪೂಜೆ ಮಾಡಿದರೂ, ಮನೆಯಲ್ಲಿ ದೇವರ ಜೊತೆ ಬೆಳ್ಳಿನಾಗಪ್ಪನನ್ನು ಇಟ್ಟಿದ್ದರೂ ನಿಜವಾದ ಹಾವು ಬಂದಾಗ ಮಾತ್ರ ಅದನ್ನು ಜೀವಸಹಿತ  ಬಿಡುತ್ತಿರಲಿಲ್ಲ. ಜಂತೆಯಲ್ಲಿದ್ದ ಹಾವನ್ನು ಹೊಡೆಯಲು ವಿಶೇಷವಾದ ಭರ್ಚಿಗಳೆ ಇದ್ದವು. ಅವುಗಳ ತುದಿಯು ಚೂಪಾಗಿದ್ದ ಅರ್ಧ ಅಂಗುಲ ಕೆಳಗೆ ಕೊಕ್ಕೆಯಂತಿರುತಿತ್ತು. ಅದನ್ನು ಸಂದಿಯಲ್ಲಿದ್ದ ಹಾವಿನ ಮೈಗೆ ಚುಚ್ಚಿದಾಗ ಕೊಕ್ಕೆ ಅದರ ಮೈನಲ್ಲಿ ಸಿಕ್ಕಿಹಾಕಿಕೊಂಡು ಬಿಡುವುದು. ಆಗ ಎಳೆದರೆ ಹಾವೂ ಹೊರಬರುವುದು. ಅದನ್ನು ಎಳೆದು ಕೊಂದು ಹಾಕುವರು. ಅಕಸ್ಮಾತ್‌ ಹಾವೇನಾದರೂ ಬಿಲದಲ್ಲಿ ಅಡಗಿದ್ದು ಖಂಡಿತವಾದರೆ ಕಪ್ಪೆ ಹಿಡಿದು ಅದಕ್ಕೆಉದ್ದನೆ ತಂತಿಗೆ ಜೋಡಿಸಿದ ಕೊಕ್ಕೆ ಗಾಳ ಸಿಕ್ಕಿಸುವರು. ಅದನ್ನು ಬಿಲದಲ್ಲಿ ಬಿಡುವರು.. ಹಾವು ಆ ಕಪ್ಪೆಯನ್ನು ನುಂಗಿದಾಗ ನಂತರ ಅದು ಪುರ್ಣವಾಗಿ ನುಂಗುವವರೆಗೆ ಬಿಟ್ಟು ನಂತರ ತಂತಿಯನ್ನು ಎಳೆಯುತಿದ್ದರು. ಕಪ್ಪೆ ನುಂಗಿದ ಹಾವು ಹೊರ ಬರುತಿತ್ತು. ಸಾಧಾರಣವಾಗಿ ಹೆಂಡತಿ ಬಸುರಿ ಇದ್ದವರು ಹಾವನ್ನು ಕೊಲ್ಲುತಿದ್ದಿಲ್ಲ. ಬಸುರಿ ಹೆಂಗಸಿನ ನೆರಳು ಬಿದ್ದರೆ ಹಾವಿಗೆ ಪರೆ ಬರುವುದು. ಅದರ ಕಣ್ಣು ಕಾಣಿಸುವುದಿಲ್ಲ. ಅದರ ಚಲನೆ ನಿಧಾನವಾಗುವುದು ಎಂದೂ ನಂಬಿಕೆ ಇದೆ. ಅದಕ್ಕೆ ಅದು ಹೆರಿಗೆಯಾಗುವವರೆಗೆ ಅಲ್ಲಿಯೇ ಸುತ್ತಾಡುವುದು ಎಂದು ನಂಬಿದ್ದರು. ಹಾವಿನ ಪೊರೆಯನ್ನಂತೂ ನಾನು ಸಾಕಷ್ಟು ಸಲ ನೋಡಿರುವೆ. ಅದನ್ನು ಪುಸ್ತಕದೊಳಗೆ ಇಟ್ಟರೆ ಹಾವಿನ ಭಯ ಇರುವುದಿಲ್ಲ. ಇನ್ನು ಹಾವನ್ನು ಹಿಡಿಯುವವರೂ ಇದ್ದರೂ. ಅವರಿಗೆ ಕೈನಲ್ಲಿ ಗರುಡರೇಖೆ ಇದೆ ಎನ್ನುವರು. ಅವರನ್ನು ನೋಡಿದರೆ ಹಾವು ಚಕ್ಕನೆ ನಿಂತು ಬಿಡುವುದು. ಆದರೆ ಅಂಥವರು ಬಹು ವಿರಳ. ಹಾವನ್ನು ಹೊಡೆದ ಮೇಲೆ ಅದರ ಬಾಯಲ್ಲಿ ತೂತಿನ ಬಿಲ್ಲೆ ಇಟ್ಟು ಅದನ್ನು ಸುಟ್ಟುಹಾಕುವರು. ನಂತರ ಅದರ ಬೂದಿಯಿಂದ ತೂತಿನ ಬಿಲ್ಲೆಯನ್ನು ಆಯ್ದು ಅದನ್ನು ಮಕ್ಕಳ ಉಡದಾರದಲ್ಲಿ ಕಟ್ಟಿದರೆ ಸರ್ಪದೋಷ ಪರಿಹಾರವಾಗುವುದು ಎಂದು ನಂಬಿದವರು ಬಹಳ.

ಮಕ್ಕಳಾಗದಿದ್ದರೆ ಸರ್ಪದೋಷವಿದೆ ಎಂದು ಪೂಜೆ ಮಾಡಿಸಿ ಮಗುವಾದ ನಂತರ ಅದಕ್ಕೆ ನಾಗರಾಜ, ನಾಗರತ್ನ, ಸುಬ್ರಾಯ, ಸುಬ್ಬುಲಕ್ಷಿ ಎಂದೆ ಹೆಸರಿಡುವರು. ಕಜ್ಜಿ ಹುರುಕು ಮೊದಲಾದ ಚರ್ಮವ್ಯಾದಿಗಳಿಗೆ ಅದರಲ್ಲೂ ಸರ್ಪ ಸುತ್ತು ಆದರೆ ಅದಕ್ಕೆ ನಾಗರ ಕಾಟವೆ ಕಾರಣ. ಬೆನ್ನಿಗೆ ಜಾಜಿನಿಂದ ಗರುಡನ ರೇಖಾಚಿತ್ರ ಬರೆಯುವರು. ಆಗ ಅದು ಹರಡುವುದು ನಿಲ್ಲುವುದು. ನಾಗರ ಪಂಚಮಿಯ ಮೊದಲೆ ಪೂಜೆಗೆ ಮೊದಲೆ ಎಳೆ ಹುಣಿಸೆಕಾಯಿ ತಿಂದರೆ ಕಜ್ಜಿ ಬರುವುದೆಂದು ಗಾಢವಾಗಿ ನಂಬಿದ್ದರು. ಈಗಲೂ ಸರ್ವ ಸಂಕಟ ನಿವಾರಣೆಗೆ ಕುಕ್ಕೆ ಸುಬ್ರಮಣ್ಯದಲ್ಲಿ ಆಶ್ಲೇಷಬಲಿ ಪೂಜೆ ಮಾಡಿದರೆ ಪರಿಹಾರವಾಗುವುದು ಎಂಬುದನ್ನು ರಾಜಕಾರಣಿಗಳು, ಸಿನೆಮಾ ನಟರಾದ ಅಮಿತಾಬ್‌, ಅಭಿಷೇಕ್‌ ಐಶ್ವರ್ಯ ರಾಯ್‌, ಕ್ರಿಕೆಟ್‌ ದೇವರು ಸಚಿನ್‌ ಮೊದಲಾದವರೂ ನಂಬಿ ನಡೆದುಕೊಂಡಿದ್ದಾರೆ. ನಾಗರಹಾವಿನ ತಳಕನ್ನು ನೋಡಬಾರದು ಎಂದು ನಿಷೇಧವಿದೆ. ಅಪರೂಪಕ್ಕೆ ನಾಗರಹಾವು ಕೇರೆ ಹಾವು ಜೋಡಿಯಾಗಿ ಕೂಡಿ ಆಡುವುದೂ, ಒಂದೊಕ್ಕೊಂದು ಸರಪಳಿಯಂತೆ ಸೇರಿ ಮೈಥುನದಲ್ಲಿ ತೊಡಗಿದಾಗ ಅವನ್ನು ತಡವಿದರೆ ಸಹಜವಾಗಿ ಕೋಪದಿಂದ ಹಾನಿ ಮಾಡಬಹುದೆಂಬ ಕಾರಣದಿಂದ ಈ ನಂಬಿಕೆ ಬಂದಿರಬಹುದು.

ಈ ರೀತಿಯಾದ ನಾಗಮಣಿಗಳು ಪ್ರಪಂಚದಲ್ಲಿ ಐದಾರು ಮಾತ್ರ ಇರಬಹುದು. ಅದನ್ನು ನೋಡಿದವರು ಬಹಳ ವಿರಳ. ಇದು ನಾವು ಕೇಳಿದ ಕಥಾನಕದ ಸಾರ. ಲಕ್ಷಕೊಬ್ಬರಿಗೆ ನಾಗಮಣಿ ನೋಡುವ ಅವಕಾಶ ಸಿಕ್ಕರೆ ಅದೆ ಅವರ ಪೂರ್ವಾಜಿತ ಪುಣ್ಯ. ನಮ್ಮ ಮನಸ್ಸಲ್ಲಿ ಈ ಮಾಹಿತಿ ಅಚ್ಚು ಒತ್ತಿದಂತೆ ಕೂತುಬಿಟ್ಟಿತ್ತು. ಒಂದು ದಿನ ಶಾಲೆಯಿಂದ ಮನೆಗೆ ಬರುವಾಗ ರಾತ್ರಿಯಾಗಿತ್ತು. ಪೂರ್ತಿ ಕತ್ತಲು. ಪುಣ್ಯಕ್ಕೆ ನನ್ನ ಜತೆಗೆ ಗಿರಿ ಇದ್ದ. ಇನ್ನೇನು ಊರ ಹತ್ತಿರ ಬಂತು ಎಂದುಕೊಂಡು ಧೈರ್ಯಗೊಂಡೆವು. ಆಗ ನಾವು ಕೆಮ್ಮಣ್ಣ ಕುಣಿಯ ಹತ್ತಿರವಿದ್ದೆವು. ಆದು ಮಳೆಗಾಲ ಕೆಮ್ಮಣ್ಣು ಕುಣಿಯಲ್ಲಿ ವಂಡು ನೀರು ತುಂಬಿತ್ತು. ಅದರಲ್ಲಿರುವ ಕಪ್ಪೆಗಳ ವಟವಟ ದನಿ ಕಿವಿಗೆ ರಾಚುತಿತ್ತು. ಅಷ್ಟರಲ್ಲಿ ಕುಣಿಯ ದಂಡೆಯ ಮೇಲಿದ್ದ ಕಳ್ಳಿಸಾಲಿನಲ್ಲಿ ಏನೋ ಹರಿದ ಸಳ ಸಳ ಸಪ್ಪಳ ಕೇಳಿಬಂತು. ನಮಗೆ ಖಾತ್ರಿಯಾಯಿತು ಅಲ್ಲಿ ಹಾವು ಹರಿದಾಡುತ್ತಿದೆ ಎಂದು. ನಾವು ತುಸು ದೂರದಲ್ಲೆ ರಸ್ತೆಯ ಮೇಲೆ ಇದ್ದೆವು. ಗಾಬರಿಗೆ ಕಾರಣವಿರಲಿಲ್ಲ. ಕುತೂಹಲದಿಂದ ತಿರುಗಿ ನೋಡಿದೆವು. ಕಳ್ಳಿಗಿಡದ ಬೊಡ್ಡೆಯ ಪಕ್ಕದಲ್ಲಿ ಥಳ ಥಳ ಹೊಳೆಯುವ ವಸ್ತುವೊಂದು ಕಾಣಿಸಿತು. ನಮಗೆ ಅನುಮಾನವೆ ಉಳಿಯಲಿಲ್ಲ. ಅಲ್ಲಿ ಘಟಸರ್ಪ ಪುನಃ ಬಂದಿದೆ. ಮಣಿಯನ್ನು ಇಟ್ಟು ಆಹಾರ ಹುಡುಕಲು ಹೊರಟಿದೆ ಎಂದು. ತುಸು ಹೊತ್ತು ನಿಂತು ನೋಡಿದೆವು. ದಿಕ್ಕು ತೋಚದಂತಾಯಿತು. ಲಕ್ಷಕೊಬ್ಬರಿಗೆ ನಾಗಮಣಿ ಕಾಣಿಸುವುದು ಎಂದು ಹೇಳಿದ ಮಾತು ನೆನಪಿಗೆ ಬಂತು. ಅದು ಸಿಕ್ಕುವುದಂತೂ ಕೋಟಗೊಬ್ಬರಿಗೆ. ಎದೆ ತುಂಬಿ ಬಂತು. ಆದರೂ ಘಟಸರ್ಪದ ಗೊಡವೆ ಬೇಡ ಎಂದು ಮನೆಗೆ ಬಂದೆವು. ಹಾದಿಯಲ್ಲಿ ಬರುವಾಗ ನಾಗಮಣಿಯ ಸುಳಿವನ್ನು ಬೇರೆ ಯಾರಿಗೂ ಕೊಡಬಾರದೆಂದು ಆಣೆ ಇಟ್ಟುಕೊಂಡೆವು. ಮನೆ ತಲುಪಿದಾಗ ನಮ್ಮ ಅಮ್ಮ, `ಏನಪ್ಪಾ ಇದು ಇಷ್ಟು ತಡಮಾಡಿದಿ. ಹುಳು ಹುಪ್ಪಡಿ ಓಡಾಡುವ  ಹೊತ್ತು ಒಬ್ಬನೆ ಬಂದಿಯಲ್ಲ', ಎಂದು ಕಾಳಜಿಯಿಂದ ಕೇಳಿದಳು.

`ಇಲ್ಲಮ್ಮಾ, ಜತೆಗೆ ಗಿರಿ ಇದ್ದ. ಸಾಲಿ ಬಿಡುವುದೆ ತಡವಾಯಿತು' ಸಮಜಾಯಿಷಿ ಹೇಳಿದೆ. ನಾಗಮಣಿಯ ಮಾತು ತುಟಿತನಕ ಬಂದಿತು. ಆದರೆ ಆಣೆ ಇಟ್ಟು ಕೊಂಡಿದ್ದರಿಂದ ಅದನ್ನು ಹೊರ ಹಾಕದೆ ನುಂಗಿಕೊಂಡೆ. ಅಂದು ರಾತ್ರಿ ನಿದ್ದೆ ಬೇಗ ಬರಲಿಲ್ಲ. ಕಣ್ಣು ಮುಚ್ಚಿದರೆ ಥಳ ಥಳ ಹೊಳೆವ ನಾಗಮಣಿ. ಕಿವಿಯಲ್ಲಿ ಭುಸುಗುಟ್ಟುವ ಸರ್ಪದ ಸದ್ದು. ನಿದ್ದೆಯ ಮಧ್ಯ ಮೆಟ್ಟಿ ಬಿದ್ದೆನೆಂದು ಕಾಣುತ್ತದೆ. ಅಮ್ಮನ ಕೈ ನನ್ನ ತಲೆ ಸವರುತಿತ್ತು. ರಾತ್ರಿ ಎಲ್ಲ ಬುಕ್ಕಸಾಗರದ ಏಳು ಹೆಡೆ ನಾಗಪ್ಪ ಮನೆ ಬಾಗಿಲಿಗೆ ಬಂದು ನಿಂತಂತೆ ಕನಸು. ಸುಬ್ರಮಣ್ಣಕ್ಕೆ ಹೋದಾಗ ನೋಡಿದ ಹುತ್ತದಲ್ಲಿನ ನಾಗರಾಜ ಮುಗಿಲೆತ್ತರ ನಿಂತಿದ್ದಾನೆ. ಅವನ ತಲೆ ಒನೆಯುವುದನ್ನು ನೋಡಿದರೆ ಸಾಕು ಭಯವಾಗುತ್ತಿದೆ. ನಾಗರ ಪಂಚಮಿಯ ದಿನ ಹಾಲು ಹಾಕಲು ಹೋಗುವ ಅಶ್ವತ್ಥ ಎಲ್ಲ ನಾಗರಕಲ್ಲುಗಳೂ ಜೀವಂತವಾಗಿ ಕಟ್ಟೆಯ ಮೇಲೆ ಹರಿದಾಡುತ್ತಿವೆ. ಅಲ್ಲಿರುವ ಅಶ್ವತ್ಥ ಗಿಡದ ರೆಂಬೆ ರೆಂಬೆಗಳಿಗೂ ಬಿಳಲುಗಳಂತೆ ಹಾವುಗಳು ಜೋಲು ಬಿದ್ದಿದಿವೆ. ಮರದ ಕೆಳಗೆ ಹೋಗುವವರನ್ನು ನೋಡಿ ಭುಸ್‌ ಎಂದು ತಮ್ಮೆರಡು ನಾಲಿಗೆ ಚಾಚುತ್ತಿವೆ. ಕಿಟಾರನೆ ಕಿರುಚಿ ಎದ್ದು ಕುಳಿತೆ. ಹಾಸಿಗೆ ಒದ್ದೆಯಾಗಿತ್ತು
ಯಾಕಪ್ಪಾ, ಹೆದರಿದ್ದೀಯಾ. ಕೆಟ್ಟ ಕನಸು ಏನಾದರೂ ಬಿದ್ದಿತೆ? ನಾನಿದ್ದೇನೆ ಏನೂ ಆಗಲ್ಲ ಮಲಗು, ಎಂದು ಅಮ್ಮ ಚುಕ್ಕಿ ತಟ್ಟಿದಳು. ಆಗ ಮಂಪರು ಬಂತು.

ಅಪ್ಪಾಜಿರಾಯರ ಸರಣಿ :ನಾಗಮಣಿ ಸಿಕ್ಕಿದ ಪ್ರಸಂಗ

ಬೆಳಗ್ಗೆ ಎದ್ದೊಡನೆ ಶಾಲೆಗೆ ಹೋಗಲು ಅವಸರ ಮಾಡಿದೆ. ಗಬಗಬ ಊಟಮಾಡಿ ಹೆಗಲಿಗೆ ಚೀಲ ಏರಿಸಿ ಹೊರಟೆ. ಗಿರಿಯೂ ಬಂದು ಜತೆಗೂಡಿದ. ನಾವು ಬೇರೆ ಯಾರಿಗೂ ಕಾಯಲಿಲ್ಲ. ಕೆಮ್ಮಣ್ಣು ಕುಣಿಯ ಹತ್ತಿರ ಬಂದಾಗ ಆತುರದಿಂದ ಕಳ್ಳಿಸಾಲಿನ ಹತ್ತಿರ ಹೋದೆವು. ಅಲ್ಲಿ ಏನೂ ಕಾಣಲಿಲ್ಲ. ರಾತ್ರಿ ನೋಡಿದ್ದು ನಿಜವೆ, ಎಂಬ ಅನುಮಾನ ಮೂಡಿತು. ಏನೆ ಆಗಲಿ ಇಂದು ಖಚಿತ ಪಡಿಸಿಕೊಳ್ಳೋಣ ಎಂದು ಮಾತನಾಡಿ ಕೊಂಡೆವು. ಅಂದು ಶಾಲೆ ಹೊತ್ತಿಗೆ ಸರಿಯಾಗಿಬಿಟ್ಟಿತು. ನಮ್ಮ ಊರಿನ ಹುಡುಗರೆಲ್ಲ ಹೊರಟರು. ನಾವು ಬೇಕೆಂದೆ ಹಿಂದೆ ಉಳಿದೆವು. ಮೈದಾನದಲ್ಲಿ ನಡೆಯತಿದ್ದ ಫುಟ್‌ ಬಾಲ್ ಆಟ ನೋಡುತ್ತಾ ನಿಂತೆವು. ಕತ್ತಲಾಯಿತು ಆಗ ಹೊರಟೆವು. ಯಥಾರೀತಿ ಕೆಮ್ಮಣ್ಣು ಕುಣಿಯ ಹತ್ತಿರ ಬಂದು ಆತುರದಿಂದ ಕಣ್ಣು ಹಾಯಿಸಿದರೆ ಮಣಿ ಅಲ್ಲೆ ಹೊಳೆಯುತ್ತಾ ಇತ್ತು. ಆದರೆ ಜಾಗ ತುಸು ಬದಲಾಯಿಸಿತ್ತು. ನಮಗಂತೂ ಖಚಿತವಾಯಿತು ಅದು ನಾಗರತ್ನ ಎಂದು. ಒಂದು ಕ್ಷಣ ಏನೂ ತೋಚಲಿಲ್ಲ. ಎರಡು ನಿಮಿಷ ನಿಂತು ನೋಡಿ ಮನೆಗೆ ಹೊರಟೆವು.

ರಾತ್ರಿ ಎಲ್ಲ ಅದೆ ಕನಸು. ಬೆಳಗಾಗುವುದೆ ತಡ ಗಿರಿಯ ಮನೆಗೆ ಓಡಿದೆ. ಎಲ್ಲಿ ಹೋಗುತ್ತಿರುವೆ? ಎಂಬ ಅಮ್ಮನ ಮಾತಿಗೆ ಇಲ್ಲೆ ಗಿರಿಯ ಹತ್ತಿರ ಪುಸ್ತಕ ಬೇಕಿದೆ ಈಗ ಬರುತ್ತೇನೆ, ಎನ್ನುತ್ತಾ ಓಡಿದೆ. ಅವನೂ ಆಗಲೆ ಎದ್ದು ಕೂತಿದ್ದ. ನನ್ನನ್ನು ನೋಡಿದ ಅವನು ಹಾರಗ್ಗಾಲಲ್ಲಿ ನನ್ನತ್ತ ಓಡಿ ಬಂದ. ಇಬ್ಬರೂ ಸೇರಿ ಮರೆಗೆ ಹೋಗಿ ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಅನರ್ಘ್ಯ ರತ್ನ ನಮ್ಮಿಬ್ಬರ ಕಣ್ಣಿಗೆ ಮಾತ್ರ ಬಿದ್ದಿದೆ. ನಾವೆ ಅದೃಷ್ಟವಂತರು ಎಂದು ಹೆಮ್ಮೆಯಾಯಿತು. ಆದರೆ ಏನು ಉಪಯೋಗ. ಅದನ್ನು ಪಡೆಯುವ ಬಗೆ ಹೇಗೆ. ನಮ್ಮಿಂದ ಅಂತೂ ಕಬ್ಬಿಣದ  ಮುಳ್ಳುಗಳ ಬುಟ್ಟಿ ಮಾಡಿಸಲಾಗುವುದಿಲ್ಲ. ಇನ್ನೊಬ್ಬರಿಗೆ ಹೇಳುವ ಹಾಗಿಲ್ಲ. ಇಬ್ಬರೂ ತಲೆ ಕೆರೆದುಕೊಂಡೆವು. ಶಾಲೆಗೆ ಹೋಗುತ್ತಾ ಯೋಚಿಸೋಣ ಎಂದು ತೀರ್ಮಾನಿಸಿದೆವು.

ಮನೆಗೆ ಹೋದವನೆ, ಅಮ್ಮಾ, ಬೇಗ ಬೇಗ ಊಟ ಹಾಕು, ಎಂದು ಗಡಿ ಬಿಡಿ ಮಾಡಿದೆ. ಇನ್ನೂ ಹೊತ್ತಾಗಿಲ್ಲ ಯಾಕಿಷ್ಟು ಅವಸರ, ಎಂದ ಅಮ್ಮನಿಗೆ, ಇಲ್ಲ ಇವತ್ತು ಶಾಲೆಗೆ ಬೇಗ ಹೋಗಬೇಕು, ಮೇಷ್ಟ್ರು ಹೇಳಿದ್ದಾರೆ ಎಂದು ಹಿಂದುಮುಂದು ನೋಡದೆ ಸುಳ್ಳು ಹೇಳಿದೆ. ಸರಿಯಪ್ಪಾ, ನೀನೋ ನಿನ್ನ ಮಾಷ್ಟ್ರೋ ಏನಾದರೂ ಮಾಡಿಕೋ, ಬಿಸಿ ಅನ್ನ ಬಾಯಿ ಸುಟ್ಟೀತು ಹುಷಾರಾಗಿ ತಿನ್ನು, ಎಂದರು. ಅವರ ಮಾತು ಕಿವಿಯ ಮೇಲೆ ಹಾಕಿಕೊಳ್ಳದೆ ಗಬಾಗಬಾ ಊಟ ಮಾಡಿ ಪಾಟಿ ಚೀಲ ಹೆಗಲಿಗೆ ಏರಿಸಿ ಅಂಗಳದೊಳಗೆ ಬರುಷ್ಟರಲ್ಲೆ ಗಿರಿಯೂ ಹಾಜರಾದ.  ಇಬ್ಬರೂ ಹೆಗಲ ಮೇಲೆ ಕೈ ಹಾಕಿಕೊಂಡು ಹೊರಟೆವು. ಕೆಮ್ಮಣ್ಣ ಕುಣಿಯ ಹತ್ತಿರ ಉಸಿರು ಬಿಗಿ ಹಿಡಿದು ನೋಡಿದೆವು. ಅಲ್ಲಿ ಏನೂ ಇಲ್ಲ .ಈಗ ನಮಗೆ ಖಚಿತವಾಯಿತು ಸರ್ಪ ರಾತ್ರಿ ಮಾತ್ರ ಬರುವುದು..  ಅಲ್ಲಿಯ ಹತ್ತಿರದ ಮರದ ಕೆಳಗೆ ಕೂತು ಯೋಚನೆ ಮಾಡಿದೆವು.

`ಅಪ್ಪ ಅಮ್ಮಗೆ ಹೇಳೋಣ. ಅವರು ಏನಾದರೂ ಮಾಡಬಹುದು' ಗಿರಿ ಹೇಳಿದ. ಯಾರ ಅಪ್ಪ ಅಮ್ಮಗೆ ಹೇಳಬೇಕು, ಅಲ್ಲದೆ ಅವರು ನಂಬುವರೆ. ಹುಡುಗರು ಎಂದು ಹಾಸ್ಯ ಮಾಡಬಹುದು.. ಅವರು ತಡಮಾಡಿದರೆ ಸರ್ಪ ಬೇರೆ ಕಡೆ ಹೋಗಬಹುದು. ಏನಾದರೂ ಮಾಡಿ ನಾವೆ ಆ ಮಣಿಯನ್ನು ವಶ ಮಾಡಿಕೊಳ್ಳಬೇಕು ಯಾರಿಗೂ ಹೇಳೋದು ಬ್ಯಾಡ ಎಂದು ನಿರ್ಧರಿಸಿದೆವು.

ಸರ್ಪವನ್ನಂತೂ ಹೊಡೆಯುವ ಮಾತೆ ಇಲ್ಲ.. ಇನ್ನು ಕದ್ದು ಓಡುಬಹುದೆಂದರೆ ಅದು ಬೆನ್ನಟ್ಟಿ ಬಂದು ಕಚ್ಚುವುದು. ಅದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಬಲಪ್ರಯೋಗದಿಂದ ಪಡೆಯಲಾಗದು. ಮತ್ತೆ ಹೇಗೆ ಮಾಡಬೇಕೆಂದು ಹೊಳೆಯಲಿಲ್ಲ. ಕೊನೆಗೆ ಗಿರಿ ಒಂದು ಉಪಾಯ ಹೇಳಿದ. ಮಣಿಯಮೇಲೆ ಏನಾದರೂ ಹಾಕಿ ಅದು ಸರ್ಪಕ್ಕೆ ಕಾಣದಂತೆ ಮಾಡಿ, ಓಡಿ ಹೋಗುವುದು. ಅದು ಹುಡುಕಿ ಹುಡುಕಿ ಬೆಳಗಿನ ಹೊತ್ತಿಗೆ ಹೊರಟು ಹೋದಾಗ ಬಂದು ತೆಗೆದುಕೊಂಡು ಹೋಗುವುದು. ಅಕಸ್ಮಾತ್‌ ಅದು ಅಲ್ಲಿಯೇ ಸುಳಿದಾಡುತ್ತಿದ್ದರೆ ಹತ್ತಿರ ಹೋಗುವುದೆ ಬೇಡ.  ಉಪಾಯವೇನೋ ಸರಿ ಎನಿಸಿತು ಆದರೆ ಆ ರತ್ನದ ಕಾಂತಿ ಕಾಣದಂತೆ ಏನು ಹಾಕುವುದು? ಮಣ್ಣನ್ನಂತೂ ಹಾಕಲಾಗುವುದಿಲ್ಲ. ಅದರಿಂದ ಕಾಂತಿ ಹೊರ ಬರುವುದು. ಬಟ್ಟೆ ಹಾಕಿದರೆ ಉಪಯೋಗವಿಲ್ಲ. ಸುಲಭವಾಗಿ ಸರಿಸಬಹುದು. ಏನು ಮಾಡಲು ತೋಚದೆ ಯೋಚಿಸುತ್ತಾ  ಕುಳಿತವು. ಆಗ ನಮ್ಮೆದುರು ಹೋಗುತಿದ್ದ ಒಂದು ಎಮ್ಮೆ ತೊಪತೊಪನೆ ಸೆಗಣಿ ಹಾಕಿತು. ತಕ್ಷಣವೆ ಹೊಳೆಯಿತು. ಆ ಮಣಿಯ ಮೇಲೆ ಸೆಗಣಿ ಹಾಕಿ ಓಟ ಕಿತ್ತುವುದು. ನಂತರ ಮುಂದಿನ ಮಾತು. ಕೊನೆಗೆ ಆ ಯೋಜನೆ ಎಲ್ಲಕ್ಕಿಂತ ಉತ್ತಮ ಎನಿಸಿದ್ದರಿಂದ ಅಂದೆ ರಾತ್ರಿ ಆ ಕೆಲಸ ಮಾಡಲು ನಿರ್ಧರಿಸಿದೆವು.

ಶಾಲೆಗೆ ಹೋದ ಮೇಲೂ ನಾನು ಅದೆ ಗುಂಗಿನಲ್ಲಿ ಕುಳಿತೆ. ಶಾಲೆಯಲ್ಲಿ ಮಾಷ್ಟ್ರಿಂದ ಬೈಗಳು ತಿನ್ನಬೇಕಾಯಿತು. ಅವರು ಕೇಳಿದ ಪ್ರಶ್ನೆಗೆ ನಾನು ಪರಧ್ಯಾನದಲ್ಲಿ ಏನೋ ಉತ್ತರ ಕೊಟ್ಟೆ. ಇಲ್ಲಿ ಕುಳಿತು ಏನು ನಕ್ಷತ್ರ ಎಣಿಸುತ್ತಿರುವೆಯಾ ಎಂದು ಕಿವಿ ಹಿಂಡಿದರು. ಆದಿನ ಪೂರ್ತಿ ಏನು ಪಾಠ ಮಾಡಿದರೋ ನನ್ನ ತಲೆಗಂತೂ ಹೋಗಲೆ ಇಲ್ಲ. ಬೆಲ್ಲು ಹೊಡೆಯುವುದನ್ನೆ ಕಾಯುತ್ತಾ ಕುಳಿತೆ. ಕೊನೆಯ ಬೆಲ್ಲಾಗುತ್ತಲೆ ಚಂಗನೆ ತರಗತಿಯಿಂದ ಹೊರಬಂದೆ. ಗಿರಿ ಆಗಲೆ ಬಂದಿದ್ದೆ. ಈಗ ನಮ್ಮ ಯೋಜನೆ ಕಾರ್ಯಗತ ಮಾಡುವ ವಿಧಾನದ ಕುರಿತು ಯೋಚಿಸ ತೊಡಗಿದೆವು. ಮೊದಲು ಸೆಗಣಿ ಸಂಗ್ರಹಿಸಬೇಕಿತ್ತು. ಸೆಗಣಿಗೇನೂ ಬರವಿರಲಿಲ್ಲ. ಹಾದಿಯುದ್ದಕ್ಕೂ ಒಂದಲ್ಲ ಒಂದು ದನ ಸೆಗಣಿ ಹಾಕುತ್ತವೆ. ಆದರೆ ಎರಡು ಬೊಗಸೆಯಷ್ಟು ಸೆಗಣಿಯನ್ನು ಮೂರು ಮೈಲು ಹೇಗೆ ಒಯ್ಯುವುದು?

ಗಿರಿ ಮಹಾತ್ಯಾಗಕ್ಕೆ ಮುಂದಾದ. ಅವನ ಪುಸ್ತಕಗಳನ್ನು ನನ್ನ ಚೀಲದಲ್ಲೆ ಇಟ್ಟುಕೊಂಡರೆ ತನ್ನ ಚೀಲದಲ್ಲಿ ಸೆಗಣಿ ಹಾಕಿಕೊಳ್ಳುವುದಾಗಿ ಹೇಳಿದ. ಅವನ ಜಾಣತನಕ್ಕೆ ನಾನು ತಲೆ ತೂಗಿದೆ. ತಕ್ಷಣ ಅವನ ಎಲ್ಲ ಪುಸ್ತಕಗಳನ್ನೂ ನನ್ನ ಚೀಲದಲ್ಲೆ ತುರುಕಿದೆ. ಚೀಲ ಬಸುರಿ ಹೆಂಗಸಿನ ಹೊಟ್ಟೆಯಂತೆ ಉಬ್ಬಿತು.ಚೀಲ ಹರಿಯುವುದೇನೋ ಎನಿಸಿತು. ಏನೂ ಪರವಾಇಲ್ಲ. ನಾವು ಸಾಧಿಸಬೇಕಾದ ಮಹಾನ್‌ ಕೆಲಸದ ಮುಂದೆ ಇವೆಲ್ಲ ಏನು, ಎಂದು ಸಮಾಧಾನ ಮಾಡಿಕೊಂಡೆ. ದಾರಿಯಲ್ಲಿ ಹೋಗುವಾಗ ಎಲ್ಲಿ ದನ ಕಂಡರೆ ಅಲ್ಲಿ ನಿಲ್ಲುತ್ತಿದ್ದೆವು. ಎರಡು ಮೂರು ಕಡೆ ಏನೂ ಫಲ ಸಿಗಲಿಲ್ಲ. ಕೊನೆ ನಾಲಕ್ಕಾರು ದನಗಳು ಬರುತ್ತಲಿದ್ದವು ಅವುಗಳಲ್ಲಿ ಎರಡು ಸೆಗಣಿ ಹಾಕಿದವು. ಆತುರಾತುರದಿಂದ ಬಿಸಿ ಬಿಸಿ ಶೆಗಣಿ ಸಂಗ್ರಹಿಸಿದೆವು. ನಮ್ಮ ಮುಖ ಊರಗಲ ಆಯಿತು. ಕತ್ತಲಾಗುವ ತನಕ ಕಾದು ನಂತರ ಮೆಲ್ಲಗೆ ಊರ ಕಡೆ ಹೊರಟೆವು. ಕೆಮ್ಮಣ್ಣು ಕುಣಿ ಹತ್ತಿರ ಬಂದಂತೆ ಎದೆ ಬಡಿತ ಹೆಚ್ಚಾಯಿತು.

ಗಿರಿ, `ಬೇಡ ಕಣಪ್ಪಾ ಹಾವಿನ ಸಹವಾಸ, ಸುಮ್ಮನೆ ಮನೆಗೆ ಹೋಗೋಣ. ಇದರ ಗೊಡವೆಯೆ ಬೇಡ' ಎಂದು ತಲೆ ಕೊಡವಿದ.
`ನೀನು ಪುಕ್ಕಲ. ಏನೂ ಆಗುವುದಿಲ್ಲ ಬಾ. ನಾವು ಮಣಿ ಕೈಗೆ ಬರುವ ಸಮಯದಲ್ಲಿ ಹಿಂದೆ ಸರಿಯುವುದೆ. ನೀನು ನನ್ನ ಚೀಲ ಹಿಡಿದು ದೂರ ನಿಂತುಕೋ. ನಾನೊಬ್ಬನೆ ಹೋಗಿ ಸೆಗಣಿಯನ್ನು ಅದರ ಮೇಲೆ ಹಾಕಿ ಬರುವೆ. ತಕ್ಷಣ ಅಲ್ಲಿಂದ ಓಡೋಣ' ಅವನನ್ನು ಒಪ್ಪಿಸಿದೆ. ಕೆಮ್ಮಣ್ಣು ಕುಣಿ ಹತ್ತಿರ ಬಂದಿತು.

ನಮಗೆ ಒಂದು ಅನುಮಾನ. ಸರ್ಪ ಇವತ್ತು ಬರದೆ ಇದ್ದರೆ ಹೇಗೆ? ಹಾಗೇನಾದರೂ ಬರದಿದ್ದರೆ ನಮಗೆ ಅದೃಷ್ಟವಿಲ್ಲ, ಎಂದು ತೆಪ್ಪಗೆ ಮನೆಗೆ ಹೋಗೋಣ. ಎಂದು ಸಮಾಧಾನ ಮಾಡಿಕೊಂಡೆವು. ದೇವರನ್ನುನೆನಸುತ್ತಾ ಹತ್ತಿರ ಹೋದೆವು. ನಾಗರತ್ನ ಯಥಾರೀತಿ ಕಳ್ಳಿಯ ಗಿಡದ ಕೆಳಗೆ ಫಳ ಫಳ ಹೊಳೆಯುತಿತ್ತು. ನಾನು ಗಿರಿಯನ್ನು, `ಚೀಲ ಹಿಡಿದು ದೂರ ನಿಂತಿರು. ಅದರ ಮೇಲೆ ಶೆಗಣಿ ಹಾಕಿದ ತಕ್ಷಣ ನಾನು ಓಡಿ ಬರುವೆ. ಇಬ್ಬರೂ ಅಲ್ಲಿಂದ ಓಡಿ ಬಿಡೋಣ. ಸರ್ಪಕ್ಕೆ ಯಾವುದೆ ಸುಳಿವು ಸಿಗಬಾರದ' ತಿಳಿ ಹೇಳಿದೆ.

ಅವನು ದೂರ ಹೋದ. ನಾನು ಸೆಗಣಿಯನ್ನು ಎರಡೂ ಕೈನಲ್ಲಿ ಹಿಡಿದು ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಸದ್ದಾಗದ ಹಾಗೆ ಅದರತ್ತ ಸರಿದೆ. ಹತ್ತರ ಬಂದ ಕೂಡಲೆ ಎರಡೂ ಕೈತುಂಬ ಇದ್ದ ಹಸಿ ಸೆಗಣಿಯನ್ನುಥಳ ಥಳ ಹೊಳೆಯುತಿದ್ದ ಅದರ ಮೇಲೆ ಹಾಕಿದೆ. ಅದರ ಬೆಳಕು ಕಾಣದಾಯಿತು. ನಾನು  ಚೀಲದಲ್ಲಿದ್ದ ಉಳಿದ ಸೆಗಣಿಯನ್ನುಅದರ ಮೇಲೆ ಸುರಿದು ಅಲ್ಲಿಂದ ಒಂದೆ ಉಸುರಿಗೆ ಓಡಿದೆ. ಗಿರಿಯ ಹತ್ತಿರವೂ ನಿಲ್ಲಲಿಲ್ಲ. ಕಡೆಯ ಅಗಸಿಯವರೆಗೆ ದಮ್ಮು ಹಿಡಿದು ಓಡಿದೆ.

ಗಿರಿಯು `ತಡೆ, ತಡೆ, ಏನಾಯಿತು?' ಎಂದು ಕೇಳುತ್ತಾ ಹಿಂಬಾಲಿಸಿದ. ಏದುಸಿರು ಬಿಡುತ್ತಾ ಊರ ಗುಡ್ಡೆಕಲ್ಲಿನ ಹತ್ತಿರ ಬಂದೆವು. ಅಲ್ಲಿ ಸೆಗಣಿಹತ್ತಿದ ಚೀಲವನ್ನು ಏನು ಮಾಡಬೇಕು ಎಂದು ಚಿಂತೆಯಾಯಿತು. ನಮ್ಮ ಮನೆಯಲ್ಲಿದೆ ಎಂದು ಹೇಳು. ನಾಳೆ ಒಣಗಿಸಿದ ಮೇಲೆ ಎನಾದರೂ ಹೇಳ ಬಹುದು ಎಂದು ಅವನಿಗೆ ತಿಳಿಹೇಳಿದೆ.. ಅಂತೂ ಘನ ಕಾರ್ಯ ಸಾಧಿಸಿ ಮನೆ ಸೇರಿದೆ. ಪುಣ್ಯಕ್ಕೆ ನಾನು ಮನೆಗೆ ಬಂದಾಗ ಅಮ್ಮ ಅಡುಗೆ ಮನೆಯಲ್ಲಿದ್ದಳು. ಬೇರೆ ಯಾರೂ ಗಮನಿಸಲಿಲ್ಲ

ರಾತ್ರಿ ಕಣ್ಣಿಗೆ ಕಣ್ಣು ಹತ್ತಲಿಲ್ಲ. ತುಸು ಕಣ್ಣು ಮುಚ್ಚಿದರೆ ಸರ್ಪ ಭುಸ್‌ಎಂದಂತೆ ಕೇಳುತಿತ್ತು. ಅಮ್ಮನನ್ನುಗಟ್ಟಿಯಾಗಿ ಹಿಡಿದುಕೊಂಡು ನಿದ್ದೆ ಹೋದೆ.

ಬೆಳಗ್ಗೆ ಶಾಲೆಗೆಂದು ಹೊರಟೆವು ಅಲ್ಲಿ ಬಂದು ನೋಡಿದಾಗ ಕಳ್ಳಿಗಿಡದ ಬೊಡ್ಡೆಯಲ್ಲಿ ನಾವು ಹಾಕಿದ್ದ ಸೆಗಣಿಯ ರಾಶಿ ಹಾಗೆಯೇ ಇತ್ತು. ಅದನ್ನುಅಲುಗಿಸಿದ ಗುರುತೂ ಇರಲಿಲ್ಲ. ಗಿರಿ ಈಗಲೆ ನೋಡೋಣ ಎಂದ. ನಾನು ಮುನ್ನಚ್ಚರಿಕೆಯಿಂದ ಈಗ ಬೇಡ ಎಂದೆ. ಯಾರಿಗೆ ಗೊತ್ತು ಸರ್ಪ ಕಾಯುತ್ತಿಬಹುದು. ಸಂಜೆ ಬಂದು ನೋಡೋಣ ಎಂದುಕೊಂಡೆವು. ಶಾಲೆಗೆ ಹೊರಟೆವು..

ಆದರೆ ಗಿರಿ `ಸಂಜೆಯ ತನಕ ಕಾಯುವುದು ಬೇಡ. ಮಧ್ಯಾಹ್ನವೆ ಶಾಲೆಗೆ ಚಕ್ಕರ್‌ ಹೊಡೆದು ಬಂದು ಬಿಡೋಣ. ನಾಗಮಣಿ ದೊರಕುವಾಗ ಅರ್ಧ ದಿನ ಶಾಲೆ ಹೋದರೆ ಏನಂತೆ? ಮಾರನೆ ದಿನ ಏನಾದರೂ ಕಾರಣ ಕೊಟ್ಟರಾಯಿತು ಕಣ್ಣ ಬೆಳಕು ಇದ್ದಾಗಲೆ ಅದನ್ನು ತೆಗೆದು ಕೊಳ್ಳವುದು ಉತ್ತಮ' ಎಂದು ಸಲಹೆ ನೀಡಿದ.ನನಗೆ ಅವನ ಸಲಹೆ ಸರಿ ಎನಿಸಿತು
ಮಧ್ಯಾಹ್ನ ಊಟದ ಗಂಟೆಯಾದ ಮೇಲೆ ಮೆಲ್ಲಗೆ ಮನೆ ಕಡೆ ಹೊರಟೆವು. ನಾವು ಕೆಮ್ಮಣ್ಣು ಕುಣಿ ಹತ್ತಿರ ಬಂದಾಗ ಮೂರವರೆ ಸಮಯ. ಸುತ್ತ ಮುತ್ತ ನೋಡಿದೆವು ಯಾರೂ ಇರಲಿಲ್ಲ. ಸರ್ಪದ ಸುಳಿವೂ ಕಾಣಲಿಲ್ಲ. ನಾವು ಹಾಕಿದ ಸೆಗಣಿ ಗುಡ್ಡೆ ಹಾಗೆಯೆ ಇತ್ತು ಮೇಲೆ ತುಸು ಒಣಗಿತ್ತು. ನಾನು ಗಿರಿಯನ್ನು ಕಾಯಲು ನಿಲ್ಲಿಸಿ ಕೋಲೊಂದನ್ನು ತೆಗೆದುಕೊಂಡು ಕಳ್ಳಿಗಿಡದ ಬುಡದಲ್ಲಿನ ಸೆಗಣಿ ಕೆದಕ ತೊಗಿದೆ. ಅಲ್ಲಿ ಏನೂ ಕಾಣಲಿಲ್ಲ. ನನಗೆ ನಿರಾಶೆಯಾಯಿತು. ಮಣಿಯ ಮೇಲೆ ಸರಿಯಾಗಿ ಸೆಗಣಿ ಹಾಕಿದ ನೆನಪು ನನಗೆ ಇದೆ. ಸೆಗಣಿರಾಶಿಯೂ ಚದುರಿಲ್ಲ. ಹಾಗಿದ್ದರೆ ಮಣಿ ಹೇಗೆ ಮಾಯವಾಯಿತು ಗೊತ್ತೆ ಆಗಲಿಲ್ಲ. ಆದದ್ದಾಗಲಿ ಎಂದು ಕೈ ಬೆರಳನ್ನು ಹಾಕಿ ಹಾಕಿ ಸೆಗಣಿಯನ್ನು ಪೂರ್ತಿ ಜಾಲಾಡಿದೆ. ಕೊನೆಗ ಗುಡಗಿನ ವಸ್ತು  ಸಿಕ್ಕಿತು. ಓಹೋ ಸಿಕ್ಕಿತು! ಎಂದು ಕೂಗುತ್ತಾ ಗಿರಿಯ ಹತ್ತಿರ ಬಂದೆ. ಅವನಿಗೂ ಬ್ರಹ್ಮಾನಂದವಾಗಿತ್ತು. ಅದನ್ನು ಎಚ್ಚರಿಕೆಯಿಂದ ಕುಣಿಯಲ್ಲಿದ್ದ ನೀರಿನಲ್ಲಿ ತೊಳೆದೆವು. ಅದು ಮಣಿಯೂ ಅಲ್ಲ, ಮಣ್ಣೂ ಅಲ್ಲ. ಜೀರಂಗಿಯಂತಹ ಒಂದು ಹುಳ, ನಾನು ಸೆಗಣಿ ಹಾಕಿದ ರಭಸಕ್ಕೆ ಅದರೊಳಗೆ ಸಿಕ್ಕ ಸತ್ತು ಹೋಗಿತ್ತು. ಇಬ್ಬರೂ ಒಬ್ಬರ ಮುಖ ಒಬ್ಬರು ಮಿಮಿಕಿ ನೋಡಿದೆವು. ನಮ್ಮ ಮಡ್ಡು ತಲೆಗೆ ಆಗ ಹೊಳೆಯಿತು. ನಾವು ರಾತ್ರಿಯಲ್ಲಿ ನೋಡಿದ್ದು ನಾಗಮಣಿಯಲ್ಲ. ಮಿಂಚಿನ ಹುಳದ ಜಾತಿಯ ಆದರೆ ತುಸು ದೊಡ್ಡದಾದ ಕೀಟ. ಅದು ಸಹ ಕತ್ತಲ್ಲಿ ಹೊಳೆವ ಬೆಳಕನ್ನು ಹೊರಹಾಕುತ್ತದೆ.. ಮೂರು ದಿನ ನಾಗರತ್ನ ಕುರಿತು ನಾವು  ಕನಸು ಕಂಡಿದ್ದೆವು. ಅದನ್ನು ಪಡೆಯಲು ಹರಸಾಹಸ ಮಡಿದ್ದೆವು ಆದರೆ ಈಗ ನಮ್ಮ ಕೈನಲ್ಲಿ ಮಣಿ ಇರಲಿಲ್ಲ. ಹಸಿ ಸೆಗಣಿ ಬಳಿದುಕೊಂಡ ಹುಳ ಇತ್ತು.

ಅಪ್ಪಾಜಿರಾಯರ ಸರಣಿ ಆರರಿಂದ ಅರವತ್ತು: ಗುರುಗಳ ಗರಿಮೆ- ೧

ನಮ್ಮಶಾಲೆಯ ಶಿಕ್ಷಕರಲ್ಲಿ ಸ್ಥಳೀಯರೆ ಹೆಚ್ಚು. ಅದರಲ್ಲೂ ಮೇಲುವರ್ಗದ ಶಿಕ್ಷಕರೇ ಜಾಸ್ತಿ. ಆದರೆ ಗಣಿತ ಮತ್ತು ವಿಜ್ಞಾನಕ್ಕೆ ಮಾತ್ರ ಮೈಸೂರು ಸೀಮೆಯವರಿದ್ದರು. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಕ್ಕೆ ರಂಗನಾಥನ್, ಜೀವಶಾಸ್ತ್ರ ಪಾಠ ಮಾಡಲು ವೆಂಕಟಸುಬ್ಬಯ್ಯ ಹೆಸರುವಾಸಿ. ಅವರು ಕಪ್ಪೆ ಜಿರಳೆ ಕೊಯ್ಯುವಾಗ ನಮಗೆಲ್ಲ ಒಂದು ರೀತಿ. ವಿವಿಧ ಪಕ್ಷಿಗಳ ಮೊಟ್ಟೆಗಳನ್ನೂ, ವಿವಿಧ ಆಕಾರದ ಎಲೆಗಳನ್ನೂ, ಬಣ್ಣ ಬಣ್ದ ಹೂಗಳನ್ನೂ ಸಂಗ್ರಹಿಸಿ ಸಂರಕ್ಷಿಸುವ ಆಸಕ್ತಿಯನ್ನು ಅವರು ಬೆಳಸಿದರು. ಅವರ ತರಗತಿ ಎಂದರೆ ಸೂಜಿ ಬಿದ್ದರೂ ಕೇಳಬಹುದಾದ ಮೌನ. ಕಾರಣ ಅವರು ಬಹು ಮೆಲುದನಿಯಲ್ಲಿ ಪಾಠ ಮಾಡುವರು. ಅದರಲ್ಲೂ ರಂಗನಾಥನ್ ಅವರು ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ಪಾಠ ಎಂದರೆ ಎಲ್ಲಿಲ್ಲದ ಶಿಸ್ತು. ಅವರದು ಒಂದು ವಿಶೇಷ... ಅವರು ಪಾಠವನ್ನು ಬಹಳ ಚೆನ್ನಾಗಿ ಮಾಡುವವರು. ಆದರೆ ನೋಟ್ಸ್ ಮಾತ್ರ ಕೊಡುತ್ತಿರಲಿಲ್ಲ. ಎಲ್ಲರಿಗೂ ಪಾಠ ಮಾಡುವಾಗಲೇ ಟಿಪ್ಪಣಿ ಮಾಡಿಕೊಳ್ಳಬೇಕೆಂದು ಕಡ್ಡಾಯ ಮಾಡುತ್ತಿದ್ದರು. ಅದರಿಂದ ಅವರು ಪಾಠ ಮಾಡುವಾಗ ಕಮಕ್‌ ಕಿಮಕ್‌ ಎನ್ನುವ ಹಾಗಿಲ್ಲ. ಅದರಿಂದ ಜಾಣ ಮಕ್ಕಳಿಗೆ ಒಂದು ಅನುಕೂಲವಿತ್ತು. ಅವರು ಮಾಡಿಕೊಂಡ ಟಿಪ್ಪಣಿಗಳಿಗೆ ಶಾಲೆಗೆ ಸರಿಯಾಗಿ ಬರದವರಿಂದ, ಬಂದರೂ ಬರೆದುಕೊಳ್ಳಲಾಗದವರಿಂದ ಬಹು ಬೇಡಿಕೆ. ಅವರು ಬಹಳ ವಿಶ್ವಾಸದಿಂದ ಮಾತನಾಡಿಸಿ ಬೆಣ್ಣೆ ಹಚ್ಚಿ ನೋಟ್ಸ್ ಪಡೆದು ಕಾಪಿ ಮಾಡಿಕೊಳ್ಳುತ್ತಿದ್ದರು. ಕೆಲವರು ಮಾತ್ರ ಧಿಂ ರಂಗ ಎಂದು ಆರಾಮಾಗಿ ಇರತ್ತಿದ್ದರು. ಪರೀಕ್ಷೆ ಹತ್ತಿರ ಬಂದಾಗ ಮಾತ್ರ ಯಾರದಾದರೂ ನೋಟ್ಸನ್ನು ಕದ್ದು ಅಭ್ಯಾಸ ಮಾಡುತ್ತಿದ್ದರು. ಡಿಸೆಂಬರ್‌ ತಿಂಗಳು ಬಂದಾಗ ಇದ್ದಕ್ಕಿದ್ದಂತೆ ನೋಟ್ಸುಗಳು ಮಾಯವಾಗುವ ಘಟನೆಗಳು ಬಹಳ. ಎಲ್ಲರಿಗೂ ಗೊತ್ತು ಅವು ಏನಾಗಿವೆ ಎಂದು. ಆದರೆ ಹೇಳುವ ಹಾಗಿಲ್ಲ. ಪೂರ್ವ ಕಾಲದ  ಸಂಪ್ರದಾಯಸ್ಥ ಹೆಂಗಸರು, ಗಂಡನ ಹೆಸರು ಗೊತ್ತಿದ್ದರೂ ಹೇಳಲು ನಾಚಿಕೆ ಪಟ್ಟುಕೊಳ್ಳುವಂತೆ ಸುಮ್ಮನಿರಬೇಕಿತ್ತು. ತುಟಿ ಪಿಟಕ್‌ ಎನ್ನದೆ ಸಹಿಸಿಕೊಳ್ಳಲೇಬೇಕು. ಕಾರಣ ಆ ಕೆಲಸ ಮಾಡಿರಬಹುದಾದವರು ಎಲ್ಲರೂ ದಾಂಡಿಗರೆ. ಎಲ್‌ಎಲ್‌ ಬಿಗಳೇ. `ಲಾರ್ಡ್ಸ ಆಫ್‌ ಲಾಸ್ಟ್‌ ಬೆಂಚಸ್' -ಕೊನೆಯ ಬೆಂಚಿನ ಕಟ್ಟಾಳುಗಳೇ. ದೂರು ನೀಡಿದರೆ ಶಾಲೆ ಬಿಟ್ಟ ಮೇಲೆ ಸರಿಯಾದ ಉಡುಗೊರೆ ತಪ್ಪದೆ ಸಿಗುತಿತ್ತು. ಪಾಠ ಮಾಡುವಾಗಲೇ ನೋಟ್ಸ್ ಮಾಡಿಕೊಳ್ಳುವ ಅವರ ಕಡ್ಡಾಯ ಆಗ ತುಸು ಕಷ್ಟ ಎನಿಸಿದರೂ, ಕಾಲೇಜಿಗೆ ಹೋದಾಗ ಬಹು ಅನುಕೂಲವಾಯಿತು. ಅಲ್ಲಿ ಪಾಠ ಮಾಡುವಾಗ ಕಣ್ಣು ಕಣ್ಣು ಬಿಡುವ ಪ್ರಸಂಗ ಬರಲಿಲ್ಲ.

ಸಾಮಾಜಿಕ ಅಭ್ಯಾಸದ ಗುರುಗಳು ಇದಕ್ಕೆ ತದ್ವಿರುದ್ಧ. ಅವರು ಕೊಡುವ ನೋಟ್ಸ್ ಬಹು ಜನಪ್ರಿಯ. ಅದನ್ನು ಇದ್ದಕಿದ್ದಂತೆ ಬರದರೆ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಖಾಯಂ.
ಆಗಿನ ಇತಿಹಾಸವೆಂದರೆ ಘಜನಿ, ಘೋರಿ, ಮೊಗಲರು ಮತ್ತು ಬ್ರಿಟಿಷ ಗವರ್ನರ್‌ಗಳ ರಾಜ್ಯಭಾರದ ವಿವರ. ಕರ್ನಾಟಕದ ಬಗ್ಗೆ ಒಂದಕ್ಷರವೂ ಇಲ್ಲ. ಇನ್ನು ಭೂಗೋಳವಂತೂ ಅಯೋಮಯ. ಆಫ್ರಿಕಾ, ಆಸ್ಟ್ರೇಲಿಯಾ, ಯೂರೋಪಿನ ಬಗ್ಗೆ ಓದಿದರೂ ಅಮೇರಿಕಾ, ಏಷಿಯಾಗಳ ಬಗ್ಗೆ ವಿವರ ಅಷ್ಟಕಷ್ಟೆ. ಅಂದರೆ ಬ್ರಿಟಿಷ್‌ ಸಾಮ್ರಾಜ್ಯದ ವಸಾಹತುಗಳ ಬಗ್ಗೆ ಅಧ್ಯಯನಕ್ಕೆ ಆದ್ಯತೆ. ಅಮೆಜಾನ್ ಮತ್ತು ನೈಲ್‌ಗಳ ತಿಳಿಯಬೇಕಿದ್ದ ನಮಗೆ ಕಾವೇರಿ ಮತ್ತು ಕೃಷ್ಣಾ ನದಿಗಳ ಬಗ್ಗೆ ತುಸುವೂ ತಿಳಿದಿರಲಿಲ್ಲ. ಕಿಂಬರ್ಲಿ ಕುರಿತು ಓದುವ ನಮಗೆ ಕೋಲಾರದ ಚಿನ್ನದ ಗಣಿಯ ಮಾಹಿತಿ ತಿಳಿಯಬೇಕಿರಲಿಲ್ಲ. ಇದಕೆಲ್ಲ ಕಾರಣ ಅಂದಿನ ಪಠ್ಯ ಕ್ರಮ.  ನಾವಿನ್ನೂ ಮೆಕಾಲೆ ಮಹಾಶಯನ ವರದಿಗೆ ಅನುಗುಣವಾದ ಶಿಕ್ಷಣ ಕ್ರಮದ ಅಡಿಯಲ್ಲಿದ್ದೆವು. `ರಕ್ತ ಮಾಂಸದಿಂದ ಭಾರತೀಯರು ಮತ್ತು ನಡೆ ನುಡಿಗಳಿಂದ ಯುರೋಪಿಯನರು' ಆಗಬೇಕಿತ್ತು. `ಶಾಲೆ ಕಾಲೇಜುಗಳು ಗುಮಾಸ್ತರನ್ನು ತಯಾರಿಸುವ ಕಾರ್ಖಾನೆಗಳಾಗಿದ್ದವು' ಅದಕ್ಕಾಗಿಯೆ ನಮ್ಮ ಇತಿಹಾಸ ಮತ್ತು ಭೂಗೋಳ ಗೌಣವಾಗಿದ್ದವು. ಇತ್ತೀಚೆಗೆ ಬದಲಾವಣೆ ಬಂದಿರುವುದು ಗಮನಾರ್ಹ.

ಇತಿಹಾಸದ ತರಗತಿ ಬಂದರೆ ಮಾನೀಟರನಿಗೆ ಒಂದು ಹೆಚ್ಚಿನ ಕೆಲಸ. ಅವನು ತರಗತಿ ಪ್ರಾರಂಭವಾಗುವ ಮೊದಲೆ ಆ ದಿನದ ಪಾಠಕ್ಕೆ ಸಂಬಂಧಿಸಿದ ನಕ್ಷೆ ತಂದು ತರಗತಿಯಲ್ಲಿ ನೇತು ಹಾಕಬೇಕಿತ್ತು. ಭೂಗೋಳದ ಪಾಠವಾದರಂತೂ ಭೂಗೋಳದ ವೈವಿಧ್ಯಮಯ ನಕ್ಷೆ ಇದ್ದೆ ಇರಬೇಕು. ಜತೆಗೆ ಒಮ್ಮೊಮ್ಮೆ ದುಂಡನೆಯ ಗ್ಲೋಬು ಟೇಬಲ್ಲಿನ ಮೇಲೆ ಪ್ರತ್ಯಕ್ಷವಾಗುತಿತ್ತು. ಆ ದಿನ ಎಲ್ಲರೂ ಅಟ್ಲಾಸು ತರಲೇಬೇಕು. ಪಾಠವಾದ ಮೇಲೆ ನಮ್ಮನ್ನು ಒಬ್ಬೊಬರನ್ನಾಗಿ ಕರೆದು ನದಿ, ನಗರ, ಪರ್ವತ, ಗುರುತಿಸಲು ಹೇಳುವರು. ಅವರು ಅಷ್ಟೆಲ್ಲ ಹೇಳಿದರೂ ಹಿಮಾಲಯ ಪರ್ವತವನ್ನು ಹಿಂದೂ ಮಹಾಸಾಗರದಲ್ಲಿ, ಕನ್ಯಾಕುಮಾರಿಯನ್ನು ಕಾಶ್ಮೀರದಲ್ಲಿ ಬಂದರು ನಗರವನ್ನು ಮಧ್ಯಪ್ರದೇಶದಲ್ಲಿ ಹುಡುಕುವ ಭೂಪರೂ ಇದ್ದರು. ಆಗ ತರಗತಿಯಲ್ಲಿ ನಗುವೆ ನಗು. ಹಾಗೆ ತಪ್ಪು ಆಗಲು ಒಂದು ಬಲವಾದ ಕಾರಣವಿತ್ತು ನಕಾಶೆಯಲ್ಲಿನ ಹೆಸರುಗಳೆಲ್ಲ ಇಂಗ್ಲಿಷ್‌ನಲ್ಲೆ ಇರುತಿದ್ದವು. ನೇಕರ ಇಂಗ್ಲಿಷ್‌ ಬಹು ತುಟ್ಟಿ. ಅದಕ್ಕೆ ಮೊದಲ ಅಕ್ಷರ ನೆನಪಿಟ್ಟುಕೊಂಡು ಅಂದಾಜಿನಮೇಲೆ ಗುರುತಿಸಲು ಪ್ರಯತ್ನಿಸುತಿದ್ದರು. ಅದಕ್ಕೆ ಅಸಂಗತವಾಗುತಿತ್ತು.

ಪರೀಕ್ಷೆಯಲ್ಲಿ ನಾವು ನಕ್ಷೆ ಎಳೆದು ಕೊಟ್ಟದ್ದ ಸ್ಥಳ ಗುರುತಿಸಲು ನಾಲಕ್ಕು ಅಂಕಗಳುಇದ್ದವು. ಅದಕ್ಕೆ ಈ ತಯಾರಿ. ಒಂದೊಂದು ಸಾರಿ ನಕ್ಷೆಯಲ್ಲಿ ಗುರುತಿಸಲು ಬಳಸುವ ಪಾಯಿಂಟರ್‌ನಿಂದ ತಪ್ಪು ಮಾಡದವರಿಗೆ ಏಟು ಬೀಳುತಿತ್ತು. ನಾವೆಲ್ಲರೂ ಭಾರತದ ನಕಾಶೆಯನ್ನು ಹಾಕುವುದನ್ನು ಅಭ್ಯಾಸ ಮಾಡಲೇಬೇಕಿತ್ತು. ಬಂದರುಗಳನ್ನು ಸಾಗರದ ಹತ್ತಿರ ಗುರುತಿಸಬೇಕು ಮತ್ತು ನದಿಗಳನ್ನು ಸಮುದ್ರ ಸೇರಿಸಬೇಕು ಎಂಬ ಮೂಲಪಾಠವನ್ನಂತೂ ಅವರು ಮನದಟ್ಟು ಮಾಡಿಸಿದ್ದರು.

ಸಾಮಾಜಿಕ ಅಭ್ಯಾಸದ ಮಾಷ್ಟ್ರು ಕೊಡುತಿದ್ದ ನೋಟ್ಸು ಬಹಳ ಜನಪ್ರಿಯವಾಗಿದ್ದರೂ ಒಬ್ಬಿಬ್ಬರು ಬರೆದುಕೊಳ್ಳುತ್ತಲೇ ಇರಲಿಲ್ಲ. ಕಾರಣ ನಂತರ ತಿಳಿಯಿತು. ಅವರ ಅಣ್ಣ ಅಥವಾ ಹಿರಿಯ ನಂಟರೊಬ್ಬರು ಇದೇ ಶಾಲೆಯಲ್ಲಿ ಅಭ್ಯಾಸ ಮಾಡುವಾಗ, ಇದೇ ಮಾಷ್ಟ್ರು ಕೊಟ್ಟ ನೋಟ್ಸನ್ನು ಬರೆದು ಕಂಡಿದ್ದನ್ನು ಹೊಂದಿದ್ದರು. ಅದನೆ ಇವರೂ ಓದುತಿದ್ದರು. ಕಾರಣ ಕಳೆದ ಹತ್ತು ವರ್ಷದಲ್ಲಿ ಅದರಲ್ಲಿ ಒಂದಕ್ಷರವೂ ಬದಲಾವಣೆಯಾಗಿರಲಿಲ್ಲ.

ನಾನು ನಿವೃತ್ತನಾಗಿ ಹತ್ತು ವರ್ಷ ಕಳೆದರೂ ಇನ್ನು ನೆನಪಿರುವುದು ನಮ್ಮ ಕನ್ನಡ ಮೇಷ್ಟ್ರು. ಬಾಲಕೃಷ್ಣ ಭಟ್ಟರು ಎಂದು ಅವರ ಹೆಸರು. ಬಹಳ ಮಜಭೂತಾದ ಆಕಾರ. ತರಗತಿಗೆ ಬಂದು ಕುರ್ಚಿಯಲ್ಲಿ ಕುಳಿತರೆ ಇರುವೆ ನುಸಿಯಲೂ ಜಾಗ ಇರದು. ಅವರು ತುಂಬ ಸಂಪ್ರದಾಯಪ್ರಿಯರು. ಫುಟ್‌ ಬಾಲನಂತೆ ದುಂಡಗಿನ ಮುಖ. ಮಿರಮಿರನೆ ಮಿಂಚುವ ನುಣ್ಣಗಿನ ತಲೆ. ಹಿಂಭಾಗದಲ್ಲಿ ಕಿರುಬೆರಳ ಗಾತ್ರದ ಶಿಖೆ. ವಿಶಾಲವಾದ ಹಣೆಯ ಮೇಲೆ ಎದ್ದು ಕಾಣುವ ಬಿಳಿಯ ಮೂರು ಭಸ್ಮದ ಸಾಲು. ಮಧ್ಯದಲ್ಲಿ ದುಂಡಗೆ ಗಂಧದ ಬೊಟ್ಟು. ಬೊಟ್ಟು ಅಂಚಿನ ಮೇಲು ಕೋಟೆ ಪಂಚೆ. ತುಂಬುತೋಳಿನ ಅಂಗಿ ಕೊರಳ ಸುತ್ತು ಶಿವನ ಕೊರಳಲಲ್ಲಿರುವ ಹಾವಿನಂತೆ ಸುತ್ತಿಕೊಂಡಿರುವ ಜರಿ ಅಂಚಿನ ಶಲ್ಯ. ಅವರು ಎದುರು ಬಂದರೆ ಸಾಕು ಎಂಥವರೂ ಎರಡೂ ಕೈ ಎತ್ತಿ ಮುಗಿಯ ಬೇಕೆನಿಸುವ ವಿದ್ವತ್‌ ಕಳೆಯಿಂದ ಕೂಡಿದ ವ್ಯಕ್ತಿತ್ವ. ಅವರ ಪಾಠದ ರೀತಿ ಮೋಡಿ ಮಾಡುವಂತಹದು. ವ್ಯಾಕರಣ ಬೋಧನೆಯಲ್ಲಿ ಎತ್ತಿದ ಕೈ. ಹೈಸ್ಕೂಲ್ ನಂತರ ಇಂಗ್ಲಿಷ್‌ಗೆ ಶರಣಾಗಿ ನಂತರ ಆಂಗ್ಲ ಭಾಷೆಯ ಉಪನ್ಯಾಸಕನಾಗಿ ವೃತ್ತಿ ಪ್ರಾರಂಭಿಸಿ, ಪ್ರಾಂಶುಪಾಲನಾಗಿ ನಿವೃತ್ತನಾದ ಹತ್ತು ವರ್ಷದ ಮೇಲೂ ಕನ್ನಡ ಪದ್ಯ ಒಂದಕ್ಕೆ ಪ್ರಸ್ತಾರ ಹಾಕಿ ಗಣ ವಿಭಜನೆ ಮಾಡುವಾಗ  ಅವರು ಕಲಿಸಿ ಕೊಟ್ಟ `ಯಮಾತಾ ರಾಜ ಭಾನ ಸಲಗಮ' ತಟ್ಟನೆ ನೆನಪಿಗೆ ಬರುತ್ತದೆ. ಅವರ ಬಾಯಲ್ಲಿ ಹಳೆಗನ್ನಡ ಸುಲಿದ ಬಾಳೆಹಣ್ಣು. ಅಷ್ಟು ಸರಳವಾಗಿ ಪದವಿಭಜನೆ ಮಾಡಿ ಅರ್ಥ ವಿವರಣೆ ನೀಡುವರು. ಇನ್ನು ನಡು ಗನ್ನಡವನ್ನಂತೂ ದ್ರಾಕ್ಷಿ ಹಣ್ಣು ತಿಂದಂತೆ,  ರುಚಿಕಟ್ಟಾಗಿ ಪಾಠ ಮಾಡುತ್ತಿದ್ದರು. ಅವರು ಸದಾ ಶಾಂತಮೂರ್ತಿ. ಕಡು ಕೋಪದಲ್ಲಿ ಅವರು ಬೈದರೂ ಬಳಸುತ್ತಿದ್ದುದು, ಭ್ರಷ್ಟ, ಪಾಪಿಷ್ಟ ಎಂಬ ಪದಗಳು ಮಾತ್ರ. ಅದೂ ತಿಂಗಳಿಗೆ ಒಂದೋ ಎರಡು ಸಾರಿ. ನಮಗೆ ಕೊನೆ ಕೊನೆಗೆ ಗೊತ್ತಾಗಿತ್ತು ಅವರ ಕೋಪ ಉಕ್ಕುವ ದಿನ. ಅವರು ತಿಥಿ ನಕ್ಷತ್ರ ನೋಡಿ ನಾಪಿತನ ಕೈಗೆ ತಲೆ ಕೊಡುತ್ತಿದ್ದರು. ತಲೆಯ ಮುಂಡನ, ಮುಖ ಕ್ಷೌರ ಒಟೊಟ್ಟಿಗೆ ಆಗುತಿತ್ತು. ಅಂದು ಅವರ ಶಿರೋಭಾಗ, ಮುಖ ಮಿರಿ ಮಿರಿ ಮಿಂಚುತಿತ್ತು. ಆ ದಿನ ಮಾತ್ರ ಮುಟ್ಟಿದರೆ ಮುನಿ. ತುಸು ತಂಟೆ ಮಾಡಿದರೂ ಸಾಕು ಕೋಪ ಉಕ್ಕುತಿತ್ತು. ಬಹುತೇಕ ಕ್ಷೌರಿಕನ ಕತ್ತಿಯ ಪರಿಣಾಮವಾಗಿ ಮುಖ ತಲೆ ಉರಿತ ಮೂಡಿರಬಹುದು. ಅದಕ್ಕೆ ಸದಾ ಶಾಂತ ಮೂರ್ತಿಯಾದ ಅವರು ವೀರಭದ್ರನಂತೆ ಘರ್ಜಿಸುತ್ತಿದ್ದರು.

ಅವರದು ಬಹು ವಿನಯಶೀಲ ವ್ಯಕ್ತಿತ್ವ. ಯಾರೆ ನಮಸ್ಕಾರ ಮಾಡಿದರೂ ಎರಡೂ ಕೈ ಎತ್ತಿ ನಮಸ್ಕಾರ ಎನ್ನುವುದು ಅವರಿಗೆ ರಕ್ತಗತವಾಗಿತ್ತು. ಅದಕ್ಕೆ ಹಿರಿ ಕಿರಿಯರೆಂಬ ಭೇದವಿಲ್ಲ. ಎಂಟನೆ ತರಗತಿಯ ಎಳೆ ಹುಡುಗನು `ನಮಸ್ಕಾರ್‌ ಸಾರ್‌' ಎಂದರೆ  ಅವರು ಆತ್ಮೀಯತೆಯಿಂದ `ನಮಸ್ಕಾರ ಅಪ್ಪ, ಚೆನ್ನಾಗಿದ್ದೀಯ' ಎನ್ನುವರು. ಅವರ ಈ ಸದ್ಗುಣವನ್ನು ದುರುಪಯೋಗ ಪಡಿಸಿಕೊಳ್ಳುವ ಕಿಡಿಗೇಡಿಗಳೂ ಇದ್ದರು. ಅವರು ಮನೆಯಿಂದ ಶಾಲೆಗೆ ಸುಮಾರು ಎರಡು ಮೈಲು ದೂರ. ಅವರು ಹಳೆಯ ಸೈಕಲ್ಲನ್ನು ಏರಿ ಸಾವಕಾಶವಾಗಿ ರಸ್ತೆಯಲ್ಲಿ ಬರುವುದೆ ಒಂದು ಮೋಜಿನ ವಿಷಯ. ಅಷ್ಟು ಸ್ಥೂಲಕಾಯದ ಅವರು ಹೇಗೋ ಹಳೆಯ ಸೈಕಲ್ಲ ಮೇಲೆ ಏರಿ ಬರುತ್ತಿರುವುದನ್ನು ನೋಡಿದರೆ ಸರ್ಕಸ್‌ ನಲ್ಲಿ ಆನೆ ಸೈಕಲ್‌ ಸವಾರಿ ಮಾಡುವ ದೃಶ್ಯ ನೆನಪಿಗೆ ಬರುವುದು.

ಅವರು ಸೈಕಲ್‌ ಹತ್ತಿ ಗಂಭಿರವಾಗಿ ರಸ್ತೆಯಲ್ಲಿ ಸಾಗುತ್ತಿರುವಾಗ ಯಾರಾದರೂ ನಮಸ್ಕಾರ ಎಂದರೆ ಸಾಕು ಗಡಿ ಬಿಡಿಗೊಳ್ಳುತ್ತಿದ್ದರು ಎಂದಿನ ಅಭ್ಯಾಸದಂತೆ ನಮಸ್ಕಾರ ಎನ್ನಲು ಕೈ ಎತ್ತುತಿದ್ದರು. ಮೊದಲೆ ಮಹಾಕಾಯ. ಸೈಕಲ್ಲಿನ ಸಮತೋಲನ ತಪ್ಪುತಿತ್ತು. ಹೇಗೋ ಸಂಭಾಳಿಸಿಕೊಂಡು ಬೀಳದಂತೆ ಮುಂದೆ ಸಾಗುತಿದ್ದರು. ಅವರ ಆಗಿನ ಗಲಿಬಿಲಿ ನೋಡುವವರಿಗೆ ನಗೆಯ ವಸ್ತುವಾಗುತಿತ್ತು ಆದರೂ ಅವರು ಪ್ರತಿ ನಮಸ್ಕಾರ ಮಾಡುವುದನ್ನು ಬಿಡುತ್ತಿರಲಿಲ್ಲ. ನಮಸ್ಕಾರ  ಹೇಳಿದ ಹುಡುಗ ತರಗತಿಯಲ್ಲಿ ಸಿಕ್ಕರೆ ಮಾತ್ರ ಅವನಿಗೆ ಮಹಾ ಮಂಗಳಾರತಿ ಮಾಡುತ್ತಿದ್ದರು. ಆದರೆ ಮೊದಲೆ ಆಗುವ ಅನಾಹುತ ಗೊತ್ತಿದ್ದ ಆ ಹುಡುಗ ಅಂದು ಅವರ ತರಗತಿಗೆ ಬರುತ್ತಲೆ ಇರಲಿಲ್ಲ. ಮಾರನೆ ದಿನ ಅವರಿಗೆ ಅದರ ನೆನಪೆ ಇರುತ್ತಿರಲಿಲ್ಲ. ಈ ಹಾಸ್ಯ ಪ್ರಸಂಗ ತಿಂಗಳಿಗೆ ಒಂದೆರಡು ಸಾರಿ ಮರುಕಳಿಸುತಿತ್ತು. ಹುಡುಗರು ಮಾತ್ರ ಬೇರೆ ಬೇರೆಯವರು. ನಿವೃತ್ತರಾದ ಮೇಲೂ ಅವರು ಜ್ಯೋತಿಷ್ಯ, ಪ್ರವಚನ, ಪಂಚಾಗದ ಕೈಪಿಡಿ ರಚನೆ ಹೀಗೆ ಹಲವು ಜನೋಪಯೋಗಿ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಸಾರ್ಥಕ ಜೀವನ ನಡೆಸಿದರು.

ಅಪ್ಪಾಜಿರಾಯರ ಸರಣಿ:ಕೇಳಿದ್ದು ಗಾಳಿಗೆ ನೋಡಿದ್ದು ಮನಸಿಗೆ

ನಾವು ಬಾಯಿ ಹೊಲಿದುಕೊಂಡು ಕೂಡುತಿದ್ದ ತರಗತಿ ಎಂದರೆ ಇಂಗ್ಲಿಷ್‌ ಅವಧಿ. ಆಗ ಗೊಣಗಿದರೂ ಈಗಲೂ ನೆನಸುವ ಶಿಕ್ಷಕರೆಂದರೆ ಶಾಬಾದಿಮಠ ಎಂಬ ಹೆಸರಿನ ಗುರುಗಳು. ಅವರು ಹೊಸದಾಗಿ ಇಂಗ್ಲಿಷ್‌ ಮಾಷ್ಟರ್‌ ಆಗಿ ಬಂದರು. ಅವರದು ಧಾರವಾಡ ಅಂತ ಕಾಣುತ್ತದೆ. ಬಹಳ ಟಿಪ್‌ ಟಾಪ್‌ ಉಡುಪು. ಯಾವಾಗಲೂ ಬಿಳಿಯ ಪೂರ್ತಿ ತೋಳಿನ ಅಂಗಿ, ಬಿಳಿಯ ಪ್ಯಾಂಟು, ಸದಾ ಇನ್‌ಸರ್ಟ್ ಮಾಡಿರುವರು. ಗರಿಗರಿ ಇಸ್ತ್ರಿಯ ಉಡುಪು. ಜತೆಗೆ ಕೆಂಪು ಕೊರಳಪಟ್ಟಿ ಅದಕ್ಕೊಂದು ಸುಂದರ ಪಿನ್‌. ಕಾಲಲ್ಲಿ ಮಿರಿ ಮಿರಿ ಮಿಂಚು ಕರಿ ಷೂಗಳು. ಎದುರಿಗೆ ನಿಂತವರ ಮುಖ ಅದರಲ್ಲಿ ಕಾಣಬಹುದಿತ್ತು. ಅವರಿಗೆ ಹಿರಿಯ ಹುಡುಗರು ಟಿನೋಪಾಲ್‌ ಎಂದು ಅಡ್ಡ ಹೆಸರು ಇಟ್ಟಿದ್ದರು. ಬಿಳಿ ಬಟ್ಟೆಗಳನ್ನು ಒಗೆದ ಮೇಲೆ ಅವುಗಳಿಗೆ ಥಳ ಥಳ ಹೊಳೆಯುವ ಬಿಳಿಬಣ್ಣ ತರಲು ಟಿನೋಪಾಲ್ ಬಳಸುತಿದ್ದರು. ಅದಕ್ಕೆ ಅವರಿಗೆ ಆ ಹೆಸರು.

ನಮ್ಮ ಸಮಸ್ಯೆ ಎಂದರೆ ಅವರು ತರಗತಿಯಲ್ಲಿ ಕನ್ನಡ ಮಾತನಾಡುತ್ತಲೆ ಇರಲಿಲ್ಲ. ಆಗ ತಾನೆ ಇಂಗ್ಲೆಂಡಿನಿಂದ ಇಳಿದು ಬಂದವರಂತೆ ಸದಾ ಇಂಗ್ಲಿಷ್‌ನಲ್ಲೆ ಅವರ ಮಾತು ಕತೆ. ಈವರೆಗೆ ಎಲ್ಲರೂ ಇಂಗ್ಲಿಷ್ ಪಾಠ ಓದಿದ ಮೇಲೆ ಅದರ ಸಾರವನ್ನು ಕನ್ನಡದಲ್ಲೆ ಹೇಳುತಿದ್ದರು. ಕಥೆ ಗೊತ್ತಾಯಿತು ಎಂದರೆ ಪಾಠ ತಿಳಿದಂತೆ ಎಂದು ನಮ್ಮೆಲ್ಲರ ಭಾವನೆ. ಅದನ್ನು ಇವರು ಬುಡಮೇಲು ಮಾಡಿದರು. ಅವರು ಇಂಗ್ಲಿಷ್‌ಗೆ ಇಂಗ್ಲಿಷ್‌ನಲ್ಲೆ ಅರ್ಥ ಹೇಳುತ್ತಿದ್ದರು.

Have you understood? ಎಂಬ ಅವರ ಪ್ರಶ್ನೆಗೆ ನಾವು ತಲೆ ಅಲ್ಲಾಡಿಸಿದಾಗ ಮತ್ತೆ ಮತ್ತೆ ಇಂಗ್ಲಿಷ್‌ನಲ್ಲೆ ಹೇಳುತ್ತಿದ್ದರೆ ವಿನಃ ಕನ್ನಡದ ಅರ್ಥ ಹೇಳುತ್ತಿರಲಿಲ್ಲ. ಅವರು ಯಾವ ಭಾಷೆಯಲ್ಲಾದರೂ ಮಾತನಾಡಿಕೊಳ್ಳಲಿ ನಾವು ತಿಳಿದಷ್ಟು ಅರ್ಥ ಮಾಡಿಕೊಂಡರಾಯಿತು ಎಂದು ಸುಮ್ಮನಿರಲೂ ಬಿಡುತ್ತಿರಲಿಲ್ಲ. ನಾವೂ ಇಂಗ್ಲಿಷ್‌ನಲ್ಲೆ ಮಾತನಾಡಬೇಕೆಂದು ಕಡ್ಡಾಯ ಮಾಡಿದ್ದರು. ಏನನ್ನಾದರೂ ಕೇಳಲು ನಮಗೆ ಸ್ವಾತಂತ್ರ್ಯವಿತ್ತು. ಅವರು ಹೊಡೆಯುವುದು ಬಡಿಯುವುದ ಕಡಿಮೆ. ಅವರು ಬೈದರೂ ನಮಗೆ ಮೋಜು. ಕಾರಣ ಯಾವಾಗಲಾದರೂ ಗದರಿದರೆ ಇಂಗ್ಲಿಷ್‌ನಲ್ಲೆ ಇರುವುದರಿಂದ ಅದು ನಮಗೆ ತಿಳಿಯುತ್ತಲೆ ಇರಲಿಲ್ಲ. ಅವರ ಇಂಗ್ಲಿಷ್‌ ತರಗತಿಯಲ್ಲಿ ಕನ್ನಡದಲ್ಲಿ ಮಾತನಾಡುವ ಹಾಗಿಲ್ಲ. ಹಾಗೇನಾದರೂ ಯಾರಾದರೂ ಕನ್ನಡದಲ್ಲಿ ಮಾತನಾಡಿದರೆ ಅರ್ಧ ಆಣೆ ದಂಡ ತೆರಬೇಕು. ಇಲ್ಲವೆ ಅವರ ತ‘ರಗತಿಯಲ್ಲಿ ಕೂಡುವ ಹಾಗಿಲ್ಲ. ಅನಿವಾರ್ಯವಾಗಿ ನಾವು ಹರಕು ಮುರುಕ ಇಂಗ್ಲಿಷ್‌ನಲ್ಲಿ ಮಾತನಾಡಲು ಮೊದಲು ಮಾಡಿದೆವು. ಇನ್ನು ಬೇರೆ ಮಾಷ್ಟ್ರ ತರಗತಿಯಂತೆ ಅವರ ತರಗತಿಯಲ್ಲಿ ಗಲಾಟೆ ಸದ್ದು ಗದ್ದಲ ಇರತ್ತಿಲಿಲ್ಲ. ಅವರ ಭಾಷೆಯಲ್ಲಿಯೇ ಹೇಳ ಬೇಕೆಂದರೆ pin drop silence. ಅದರ ಅರ್ಥ ಹುಡುಗರೆಲ್ಲ ರಾತ್ರೋ ರಾತ್ರಿ ಸಭ್ಯರಾದರು ಎಂದಲ್ಲ. ಏನೆ ಮಾತನಾಡಿದರೂ ಇಂಗ್ಲಿಷ್‌ ನಲ್ಲಿ ಮಾತನಾಡಬೇಕಲ್ಲ. ಅಪ್ಪಿತಪ್ಪಿ ಕನ್ನಡ ಬಳಸಿದರೆ ನಕ್ಷತ್ರಿಕನಂತೆ ಕಾಡುತಿದ್ದ ಕ್ಲಾಸ್‌ ಲೀಡರ್‌ ಅವನು ಹೇಳಿದರೆ ದಂಡ ನೀಡಬೇಕು. ಇಲ್ಲವೆ ಹೊರಗೆ ಹೋಗಬೇಕು. ಆಗಿನ್ನೂ ತರಗತಿಯಿಂದ ಹೊರಗೆ ಹಾಕಿದರೆ ದೊಡ್ಡ ಅವಮಾನ ಎಂಬ ಭಾವನೆ ಇತ್ತು ಈಗಿನಂತೆ ನಗು ನಗುತ್ತಾ ಹೊರ ನಡೆಯುವ ಗೈರತ್ತು ನಮಗಿರಲಿಲ್ಲ. ಅದಕ್ಕೆ ಯಾಕಪ್ಪ ಇಲ್ಲದ ಉಸಾಬರಿ ಎಂದು ಮೂಕರಂತೆ ಕುಳಿತು ಕೊಳ್ಳುತಿದ್ದೆವು. ಅಬ್ಬಬ್ಬಾ ಎಂದರೆ ನಮ್ಮಮಾತು ಎಸ್‌ ಸರ್‌, ನೋ ಸರ್‌ ಅಷ್ಟರಲ್ಲೆ ಮುಕ್ತಾಯವಾಗುತಿತ್ತು.

ಅವರ ಇನ್ನೊಂದು ಸೂಚನೆ ನಮಗೆ ಮಾತ್ರವಲ್ಲ ಮನೆಯವರಿಗೂ ತುಸು ಬಿಸಿ ಮುಟ್ಟಿಸಿತು. ಅವರು ವ್ಯಾಕರಣ ಬೋಧನೆಗೆ ಬಹಳ ಪ್ರಾಧಾನ್ಯ ಕೊಡುತ್ತಿದ್ದರು. ವಾರದಲ್ಲಿ ಒಂದು ಅವಧಿ ಅದಕ್ಕೆ ಮೀಸಲು. ಅದಕ್ಕಾಗಿ ಪ್ರತಿಯೊಬ್ಬರೂ ರೆನ್‌ & ಮಾಟಿರ್ನ್‌ರ ಗ್ರಾಮರ್‌ ಪುಸ್ತಕ ಖರೀದಿಸಬೇಕೆಂದು ಒತ್ತಾಯ ಮಾಡಿದರು. ಪಠ್ಯ ಪುಸ್ತಕವನ್ನು ಕೊಳ್ಳುವುದೆ ನಮಗೆ ಏಳು ಹನ್ನೊಂದು. ಬಹುತೇಕ ಸೆಕೆಂಡ್‌ ಹ್ಯಾಂಡ್‌ ಪುಸ್ತಕಗಳನ್ನೆ ಬಳಸುತ್ತಿದ್ದೆವು. ಆಗ ಈಗಿನಂತೆ ಪದೇ ಪದೇ ಪಠ್ಯಕ್ರಮ ಬದಲಾಗುತ್ತಿರಲಿಲ್ಲ. ಮುರುನಾಲಕ್ಕು ಮಂದಿ ಅಣ್ಣತಮ್ಮಂದಿರು ಇದ್ದ ಮನೆಯಲ್ಲಿ ತಮ್ಮದೆ ಪುಸ್ತಕ ಬಳಸುತ್ತಿದ್ದ ಹಿರಿಮೆ ಕೆಲವರ ಕುಟುಂಬಕ್ಕೆ ಇತ್ತು. ಅಣ್ಣ ಕೊಂಡಿದ್ದ ಪುಸ್ತಕವನ್ನೆ ಅವನಿಗಿಂತ ಒಂದೋ ಎರಡೋ ವರ್ಷ ಚಿಕ್ಕವನಾದ ತಮ್ಮ ಮತ್ತೆ ಬಳಸುತಿದ್ದ. ಇಲ್ಲದಿದ್ದರೆ ಪಾಸಾದ ಕೂಡಲೆ ಹಿಂದಿನ ವರ್ಷದ ಪುಸ್ತಕಗಳನ್ನು ಅರ್ಧ ಬೆಲೆಗೆ ಕೊಂಡು ಓದುವವರು ಬಹಳ. ಹೀಗಿರುವಾಗ ಹತ್ತು ರೂಪಾಯಿ ಬೆಲೆಯ ಗ್ರಾಮರ್‌ ಪುಸ್ತಕ ಕೊಡಿಸಲು ತಂದೆ ತಾಯಿಯರು ಸುಲಭವಾಗಿ ಒಪ್ಪುತ್ತಿರಲಿಲ್ಲ. ಆದರೆ ವಾರಕ್ಕೆ ಒಂದು ದಿನದ ಆ ಅವಧಿಯಲ್ಲಿ ತರಗತಿಗೆ ಹೋಗುವಂತಿರಲಿಲ್ಲ. ಕೊನೆಗೆ ಹೇಗೋ ತಿಪ್ಪಲು ಬಿದ್ದು ಕೊಡಿಸುತ್ತಿದ್ದರು. ಅವರು ತರಗತಿಯಲ್ಲಿ ಮಾಡಿದ ವ್ಯಾಕರಣದ ಅಂಶಗಳಿಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳನ್ನು ಮನೆಯಲ್ಲಿ ಮಾಡಿ ತರುವುದನ್ನು ಕಡ್ಡಾಯ ಮಾಡಿದ್ದರು. ತರಗತಿಯಲ್ಲಿ ಗ್ರಾಮರ್‌ ಪುಸ್ತಕ ಹಿಡಿದು ಪ್ರಶ್ನೆ ಓದಿ ಅಲ್ಲಿಯೇ ಉತ್ತರ ಹೇಳಬೇಕಿತ್ತು. ಒಂದು ಕ್ರಿಯಾ ಪದವನ್ನು 72 ರೀತಿಯಲ್ಲಿ (3 persons, 2 numbers, 12 tenses, 2 voices) ಬಳಸಿ ಹೇಳಬೇಕಿತ್ತು ಆಗ ಅದು ನಮಗೆ ತೊಂದರೆ ಎನಿಸಿದರೂ ಮುಂದೆ ಕಾಲೇಜಿಗೆ ಬಂದಾಗ ಅವರ ದೂರ ದೃಷ್ಟಿಗೆ ನಮನ ಸಲ್ಲಿಸಿದೆ.

ಮೊದಲಿನಂತೆ ಈಗ ವ್ಯಾಕರಣಕ್ಕೆ ಪ್ರತ್ಯೇಕ ಅವಧಿ ಇಲ್ಲ. ಅದು ಪಾಠದ ಒಂದು ಭಾಗವಾಗಿರಬೇಕು. Incidental ಆಗಿರಬೇಕು ಎಂಬುದ ಶಿಕ್ಷಣ ತಜ್ಞರ ಆಶಯ. ಆದರೆ ಅದರ ಫಲವಾಗಿ ಇಂಗ್ಲಿಷ್ ವ್ಯಾಕರಣ accidental ಆಗಿದೆ ಎಂಬುದು ವಾಸ್ತವ. ಉದ್ದೇಶ ಒಳ್ಳೆಯದೆ. ಆದರೆ ಆಚರಣೆಗೆ ತರುವಾಗ ಆಗುವ ಅನಾಹುತಗಳಿಂದಾಗಿ ಕನ್ನಡ ಮಾಧ್ಯಮ ಶಾಲೆಗಳ ಇಂಗ್ಲಿಷ್ ಕಲಿಕೆಯ ಮಟ್ಟ ಪಾತಾಳ ಮುಟ್ಟಿರುವುದೂ ಒಂದು ವಿಪರ್ಯಾಸವಾಗಿದೆ. ಶಿಸ್ತಿನ ಸಿಪಾಯಿಯ ಬಾಯಲ್ಲಿ ತರಗತಿಯಲ್ಲಿ ಇಂಗ್ಲಿಷ್‌ ಪದ ಬಿಟ್ಟು ಬೇರೆ ಭಾಷೆ ಬಳಸುವಂತೆ ಮಾಡಿದ ಕೀರ್ತಿ ನಮ್ಮ ಸಹಪಾಠಿ ಇಮಾಮ್‌ ಸಾಬನಿಗೆ ಸಲ್ಲಬೇಕು. ಅವರು agreement of verb ಪಾಠ ಮಾಡಿದ್ದರು. ಇಮಾಮ್ ಎಷ್ಟೆ ಹೇಳಿಕೊಟ್ಟರೂ ಅವನು I go, you go, He go ಎನ್ನುತಿದ್ದ. ಅವರು ಪದೇ ಪದೇ He goes, she goes, it goes, Imam goes ಎಂದು ಹೇಳಿದರೂ ಅವನ ತಲೆಗೆ ಹೋಗಲೆ ಇಲ್ಲ. ಮತ್ತೆ ಅವನು teacher go ಎಂದುಬಿಟ್ಟ. ಅವರು ದನಿ ಏರಿಸಿ `ಇಮಾಮ್‌, third person present tense singular verb ಕೊ ಎಸ್‌ ಲಗಾನಾ ರೆ ಎಂದುಬಿಟ್ಟರು' ತರಗತಿಯಲ್ಲಿ ನಗುವಿನ ಹಳ್ಳ ಹರಿಯಿತು.. ಇದರಿಂದ ಮಾತೃ ಭಾಷೆಯಲ್ಲಿ ಕಲಿಸಿದರೆ ಬೇಗ ಅರ್ಥವಾಗುವುದು ಎಂದು ವಾದಿಸುವವರಿಗೆ ಉತ್ತಮ ಉದಾಹರಣೆ ಸಿಕ್ಕಂತಾಗಬಹದು.

ವಿಜ್ಞಾನ ತರಗತಿಗಳು ಯಾವಾಗಲೂ ದೊಡ್ಡ ಸುಸಜ್ಜಿತ ಪ್ರಯೋಗಾಲಯದಲ್ಲಿ ನಡೆಯುತ್ತಲಿದ್ದವು. ವಿಜ್ಞಾನದ ತರಗತಿ ಬಂದಾಗ ಎಲ್ಲರೂ ಸಾಲಾಗಿ ಹೋಗಿ ಅಲ್ಲಿ ಕುಳಿತಿರಬೇಕಿತ್ತು. ಭೌತ ಶಾಸ್ತ್ರ ಮತ್ತು ರಸಾಯನ ಶಾಸ್ತ್ರದ ಪಾಠಗಳನ್ನು ಕಲಿಸುವಾಗ ನಾವು ಹೋಗುವ ಮೊದಲೆ ಪ್ರಯೋಗಾಲಯ ಸಹಾಯಕನು ಉಪಕರಣಗಳನ್ನು ಜೋಡಿಸಿ ಇಡುತಿದ್ದ. ವಿಶೇಷವಾಗಿ ರಸಾಯನ ಶಾಸ್ತ್ರದ ಅನಿಲಗಳ ಅಭ್ಯಾಸ ಮಾಡಲು ಬಹು ಖುಷಿ ಎನಿಸುತಿತ್ತು. ನೀರಿನ ಕೆಳ ಮುಖ ಸ್ಥಾನ ಪಲ್ಲಟನೆಯಿಂದ ಅನಿಲವನ್ನು ಸಂಗ್ರಹಿಸಬೇಕಾದರೆ. ದೊಡ್ಡ ಪ್ರನಾಳದಲ್ಲಿ ಹಾಕಿದ ರಸಾಯನಿಕ ವಸ್ತುಗಳನ್ನು ಕಾಯಿಸಿದಾಗ ಬಿಡುಗಡೆಯಾದ ಅನಿಲವು ನೀರು ತುಂಬಿದ ತೊಟ್ಟಿಯಲ್ಲಿ ಇಟ್ಟ ಅನಿಲ ಗವಾಕ್ಷಿಯ ಮೇಲೆ ಬೋರಲು ಹಾಕಿದ ನೀರು ತುಂಬಿದ ಜಾಡಿಯಲ್ಲಿ ಬುಳಬುಳನೆ  ತುಂಬುವುದನ್ನು ನೋಡಲು ಬಹು ಕುತೂಹಲ ವಾಗುತಿತ್ತು. ಆಮ್ಲ ಜನಕದ ಭೌತಿಕ ಲಕ್ಷಣಗಳಾದ ಬಣ್ಣ ವಾಸನೆ, ರುಚಿಯನ್ನು ಎಲ್ಲರೂ ಕಣ್ಣಾರೆ ಕಂಡು ಸ್ವಾನುಭವದಿಂದ ಹೇಳಬಹುದಿತ್ತು. ಇನ್ನು ದಹನಾನು ಕೂಲಿ, ದಹ್ಯ ವಸ್ತು ಎಂದು ತೋರಿಸುವಾಗ ಮೈ ಜುಮ್‌ ಎನ್ನುತಿತ್ತು. ಆ ಅನಿಲ ಜಾಡಿಯ ಬಾಯಿಯನ್ನು ತುಸುವೆ ತೆರೆದು ಉರಿವ ಕಡ್ಡಿಯನ್ನು ಹಿಡಿದಾಗ ಅದು ಪ್ರಕಾಶ ಮಾನವಾಗಿ ಉರಿದರೆ ದಹನಾನುಕೂಲಿ, ಧಗ್‌ ಎಂದು ಹತ್ತಿಕೊಂಡು ಉರಿದರೆ ದಹ್ಯವಸ್ತು ವಾದ ಜಲಜನಕ. ಬೆಂಕಿ ಆರಿಹೋದರೆ ಅದು ದಹನಾನು ಕೂಲಿಯಲ್ಲದ ಇಂಗಾಲದ ಡೈ ಆಕ್ಸೈಡ್‌ ಎಂದು ಆಗ ಕಲಿತದ್ದು ಅರವತ್ತು ವರ್ಷವಾದರೂ ಇನ್ನೂ ಕಣ್ಣ ಮುಂದೆ ಕಟ್ಟಿದಂತಿದೆ. ಉರಿವ ಮೆಗ್ನೀಷಿಯಂ ರಿಬ್ಬನ್‌ ಅನ್ನು ಆಮ್ಲಜನಕದ ಜಾಡಿಯಲ್ಲಿ ಇಟ್ಟಾಗ ಧೀಫಾವಳಿಯ ಸುರು ಸುರು ಬತ್ತಿಯಂತೆ ಅದು ಉರಿಯುವುದು ಮೋಜಿನ ವಿಷಯವಾಗಿತ್ತು. ಅದರ ಬೂದಿಯೆ ಮೆಗ್ನೀಷಿಯಂ ಆಕ್ಸೈಡು ಎಂದರೆ ಅಚ್ಚರಿ ಮೂಡುತಿತ್ತು.

ಅವರು ಪ್ರಯೋಗ ಮಾಡುವಾಗ ಒಬ್ಬಿಬ್ಬರು ವಿದ್ಯಾರ್ಥಿಗಳನ್ನು ಸಹಾಯಕ್ಕೆ ಕರೆಯುತಿದ್ದರು. ನಮಗೆ ಅವಕಾಶ ಸಿಕ್ಕಾಗ ಸ್ವರ್ಗ ಮೂರೆ ಗೇಣು. ಹೈಡ್ರೊಜನ್ ಸಲಫೈಡ್‌ ಅನಿಲ ತಯಾರಿಕೆ ಮಾಡಿದಾಗ ಪ್ರಯೋಗಾಲಯದ ತುಂಬ ನಗುವಿನ ಹೊಳೆ. ಅದಕ್ಕೆ ಕಾರಣ ಅದರ ದುರ್ವಾಸನೆ. ಅದರದು ಕೊಳೆತ ಕೋಳಿ ಮೊಟ್ಟೆಯ ವಾಸನೆ. ಆ ವಾಸನೆಯು ಬಹುಮಟ್ಟಿಗೆ ಹೊಟ್ಟೆ ಕೆಟ್ಟಾಗ ಹೊರ ಬರುವ ಅಪಾನ ವಾಯುವಿನಂತೆ ಇದ್ದದ್ದೆ ನಮಗೆಲ್ಲ ಮೋಜಿನ ಸಂಗತಿ. ನಮ್ಮ ತರಗತಿಯಲ್ಲಿದ್ದ ಪಾಡುರಂಗ ಶೆಟ್ಟಿ ಸದಾ ಜೇಬಿನಲ್ಲಿ ಕಡಲೆ, ಬಟಾಣಿ ತುಂಬಿಕೊಂಡು ಕಟಂ ಕಟಂ ಎಂದು ತಿನ್ನುತ್ತಲೆ ಇರುತ್ತಿದ್ದ. ಅದಕ್ಕೆ ಯಾರದೂ ದೂರಿಲ್ಲ. ಆದರೆ ಅವನು ಯಾರಿಗೂ ಕೊಡದ  ಜಿಪುಣ. ಬಾಯಿ ಬಿಟ್ಟು ಕೇಳಿದರೂ ಒಂದೊ ಎರಡೊ ಕಾಳು ಕೈಗೆ ನೀಡುತಿದ್ದ.. ಆದರೆ ಅವನ ಪಕ್ಕದಲ್ಲಿ ಕುಳಿತುಕೊಳ್ಳಲು ಬಹಳ ಪೈ ಪೋಟಿ. ಯಾವಾಗಲಾದರೂ ಒಮ್ಮೆ ಅಪ್ಪಿತಪ್ಪಿ ತಾನು ತಿನ್ನುವಾಗ ಕೊಡವುದಿತ್ತು. ಆದರೆ ಅ ಅವಕಾಶ ಸಿಗದವರು ಅವನನ್ನು H2S ಎಂದು ಅಡ್ಡ ಹೆಸರಿನಲ್ಲಿ ಕರೆದು ಅಪಹಾಸ್ಯ ಮಾಡುತ್ತಿದ್ದರು. ಅದು ಸಕಾರಣ ವಾಗಿಯೂ ಇತ್ತು. ಅವನ ಹಿಂದೆ ಕುಳಿತವರಿಗೆ ತಿಪ್ಪೆಗುಂಡಿಯ ಪಕ್ಕದಲ್ಲಿ ಹೋದ ಅನುಭವ. ಆ ಪ್ರಮಾಣದಲ್ಲಿ ಹೂಸು ಬಿಡುತಿದ್ದ. ಅವನು ನಗರದ ದೊಡ್ಡ ವ್ಯಾಪಾರಿಯೊಬ್ಬರ ಮಗ. ಜತೆಗೆ ಅವನ ಜೇಬಿನಲ್ಲಿನ ಕಡಲೆಯ ಆಸೆ, ಅನ್ನಲೂ ಆಗದೆ, ಅನುಭವಿಸಲೂ ಆಗದೆ ಎಲ್ಲರೂ ಸಹಿಸುತಿದ್ದೆವು.

ನಮಗೆಲ್ಲ ಗುರುಗಳ ಮೇಲಿನಷ್ಟೆ ಗೌರವ ಪ್ರಯೋಗಾಲಯದ ಸಹಾಯಕರ ಮೇಲೆ. ಅವರ ಹೆಸರುನ ರಾಮ ಸಿಂಗ್‌. ಕಾರಣ ಪ್ರಯೋಗಾಲಯದಲ್ಲಿ  ಚಿಕ್ಕ ಸಿನೆಮಾ ತೋರಿಸುವ ಪ್ರೊಜೆಕ್ಟರ್‌ ಇತ್ತು. ವಿಜ್ಞಾನ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ಕಿರುಚಿತ್ರಗಳನ್ನು ಅಲ್ಲಿ ಪ್ರದರ್ಶಿಸುತ್ತಿದ್ದರು. ಆ ಪ್ರದರ್ಶನದ ಹೊಣೆ ಅವರದು.. ಹೊರಗರ ಸಿನೆಮಾ ನೋಡಲು ನೆಲಕ್ಕೆ ನಾಲಕ್ಕಾಣೆ ನೀಡಬೇಕಿತ್ತು. ಹಳ್ಳಿಯಿಂದ ಬರುವುದೂ ಕಷ್ಟವಿತ್ತು. ಹಾಗಾಗಿ ನಾವು ಕಂಡರಿಯದ ಹೊಸ ಪ್ರಪಂಚಕ್ಕೆ ಕರೆದೊಯ್ಯುವ  ಹರಿಕಾರನಂತೆ ಅವರು ಭಾಸವಾಗುತ್ತಿದ್ದರು. ಎಲ್ಲವೂ ಮೊದಲೆ ನಿಗದಿಪಡಿಸಿದ ವೇಳಾಪಟ್ಟಿಯಂತೆ ನಡೆಯುತಿತ್ತು ಆದರೆ ನಮಗೆ ಅವರು ಮನಸ್ಸು ಮಾಡಿದರೆ ನಮಗೆ ಸಿನೆಮಾ ತೋರಿಸಬಲ್ಲರು ಅವರಿಲ್ಲದೆ ಸಿನೇಮಾ ನೋಡುವುದು ಸಾದ್ಯವಿಲ್ಲ ಎಂಬ ಗಾಢ ನಂಬಿಕೆ.

ಪಾಠ ಕೇಳಿ ಕಲಿತಿರುವುದನ್ನು ಮರೆತರೂ ಮರೆಯಬಹುದು ಆದರೆ ಪ್ರಯೋಗ ನೋಡಿ, ಸಿನೆಮಾ ನೋಡಿ ಮನದಟ್ಟಾಗಿರುವುದು ಬಹುಕಾಲ ನೆನಪಿನಲ್ಲಿರುತಿತ್ತು.

ಆಟ ಮುಖ್ಯಅಪ್ಪಾಜಿರಾಯರ ಸರಣಿ:ಪಾಠದಷ್ಟೆ

ನಮ್ಮ ಶಾಲೆಯಲ್ಲಿ ಆಟಗಾರರಿಗೆ ವಿಶೇಷ ಸ್ಥಾನ ಇತ್ತು. ಅವರಿಗೂ ತಾವು ಶಾಲೆಯ ಹಿರಿಮೆಗೆ ಕಾರಣ ಎಂಬ ಹೆಮ್ಮೆ. ನಮ್ಮಲ್ಲಿ ಆರೆಂಟು ಉತ್ತಮ ಕ್ರೀಡಾಪಟುಗಳಿದ್ದರು. ಮಹಾವೀರ ಅವರಲ್ಲಿ ಹೆಸರುವಾಸಿ. ಅವನು ಹೆಸರಿಗೆ ತಕ್ಕಂತೆ ಮಹಾವೀರನೆ ಆಟೋಟಗಳಲ್ಲಿ ಫುಟ್‌ ಬಾಲ್ ಕಬ್ಬಡಿಯಲ್ಲಂತೂ ಎತ್ತಿದ ಕೈ. ಕಟ್ಟುಮಸ್ತಾದ ಆಳು. ಎಲ್ಲ ಕ್ರೀಡಾಕೂಟಗಳಲ್ಲಿ ಜನರ ಕಣ್ಮಣಿ. ಪ್ರತಿ ತರಗತಿಯಲ್ಲೂ ಯಾವುದೆ ಧಾವಂತ ಇಲ್ಲದೆ ಓದಿದವನು. ಯಾವುದೆ ತರಗತಿಯಲ್ಲೂ ಒಂದೆ ವರ್ಷಕ್ಕೆ ಪಾಸಾದಂತೆ ಕಾಣುತ್ತಿರಲಿಲ್ಲ. ಆದರೆ ಅವನಿಗೆ ಅದಾವುದು ಲೆಕ್ಕಕ್ಕೆ ಇದ್ದಂತೆ ಕಾಣದು ಎಸ್‌ ಎಸ್‌ ಎಲ್‌ಸಿ ಪ್ರವೇಶ ಪರೀಕ್ಷೆಯಲ್ಲಿ ಫೇಲಾದರೂ ಮನ ನೊಂದುಕೊಳ್ಳದೆ ಮತ್ತೆ ಮರು ಪ್ರವೇಶ ಪಡೆಯುತಿದ್ದ. ತರಗತಿಯಲ್ಲಿ ಇರುವುದಕ್ಕಿಂತ ಆಟದ ಮೈದಾನದಲ್ಲೆ ಮಿಂಚುತಿದ್ದ. ಅವನ ಪ್ರತಾಪ ಬೆಳಗ್ಗೆ ಆರು ಗಂಟೆಯಿಂದ ಎಂಟರವರೆಗೆ ಮತ್ತು ಸಂಜೆ ನಾಲಕ್ಕು ಗಂಟೆಯ ಮೇಲೆ. ಚೆಂಡು ಕಾಣುವರೆಗೆ ಆಟ ಆಡಿದ್ದೆ ಆಡಿದ್ದು. ದಣಿವು ಎಂಬುದೆ ಇರಲಿಲ್ಲ. ಈ ವಿಷಯದಲ್ಲಿ ಆತ ಏಕಾಕಿ ಅಲ್ಲ. ಅವನ ಜತೆ ನಾಲಕ್ಕಾರು ಈ ರೀತಿಯ ಹುಡುಗರ ಗುಂಪೆ ಇತ್ತು. 

ಜಿಗಿತದ ಸ್ಪರ್ಧೆಗಳಲ್ಲಿ ಎಲ್ಲರೂ ಉದ್ದ ಕಾಲಿನ ಹುಡುಗರೆ. ಅವರು ದಾಪುಗಾಲು ಹಾಕುತ್ತಾ ಓಡಿ ಬಂದು ಜಿಗಿಯುವಾಗ ನೋಡುವುದೆ ಒಂದು ಚೆಂದ. ವಿನಾಯತಿ ಎಂದರೆ ಜೋಸೆಫ್ ಎಂಬ ಐದು ಅಡಿ ಎರಡು ಅಂಗುಲದ ಆಸಾಮಿ.. ಆದರೆ ಅವನು ಹೈಜಂಪ್‌ ಮಾಡುವಾಗ ಹಕ್ಕಿಯಂತೆ ಹಾರಿ ತನ್ನ ಎತ್ತರಕಿಂತ ಮೇಲಿರುವ ಬಾರಿನ ಮೇಲೆ ಸಮಾಂತರವಾಗಿ ಸುಲಭವಾಗಿ ಜಿಗಿದು ಬಿಡುವುದು ಸೋಜಿಗವಾಗಿತ್ತು.. ಕ್ರಿಕೆಟ್‌ ಬಾಲ್‌ ಎಸೆಯುವುದರಲ್ಲಿ ಶಿವನಗೌಡ ಮೊದಲು. ಕಾರಣ ಅವನು ಹಳ್ಳಿಯ ಹುಡುಗ. ಮಾವಿನ ಕಾಯಿ, ಹುಣಿಸೆಕಾಯಿ, ಬಾರಿಹಣ್ಣಿನ ಮರಕ್ಕೆ ಕಲ್ಲು ಹೊಡೆದ ಅಭ್ಯಾಸ ಇಲ್ಲಿ ಉಪಯೋಗವಾಗುತಿತ್ತು. ಓಟ ಮತ್ತು ನಡಗೆಯ ಸ್ಪರ್ಧೆಗಳಲ್ಲಿ ಹಳ್ಳಿಯ ಹುಡುಗರದೆ ಸದಾ ಮೇಲುಗೈ. 

ಆದರೆ ಹಾಕಿ ಫುಟ್‌ಬಾಲ್‌, ಕ್ರಿಕೆಟ್‌, ವಾಲಿಬಾಲ್‌, ಬಾಸ್ಕೆಟ್‌ಬಾಲ್‌ಗಳಲ್ಲಿ ಪೇಟೆಯವರದೆ ಪಾರುಪತ್ಯ. ಕಾರಣ ಅವರಿಗೆ ಶಾಲಾ ಸಮಯದ ನಂತರ ಅಭ್ಯಾಸ ಮಾಡಲು ಅವಕಾವಿತ್ತು. ಅವರ ಒತ್ತಾಸೆಗೆ ದೈಹಿಕ ಶಿಕ್ಷಕರು ತುದಿಗಾಲಲ್ಲಿ ನಿಂತಿರುತಿದ್ದರು. ಜಿಲ್ಲಾ ಕ್ರೀಡಾಕೂಟದ ಸಮಯದಲ್ಲಿ ಬೇರೆ ಶಾಲೆಯವರಿಗೆ ಸದಾ ಅವರ ಮೇಲೆ ಕಣ್ಣು. ವಿದ್ಯಾರ್ಥಿಗಳಲ್ಲದವರನ್ನು ಕರೆದು ತಂದು ಆಟ ಆಡಿಸುತ್ತಿದ್ದಾರೆ ಎಂಬ ಶಂಕೆ. ಅದಕ್ಕೆಂದೆ ಅವರ ಗುರುತಿನ ಚೀಟಿಯನ್ನು ಪದೇ ಪದೇ ಪರಿಶೀಲಿಸಲು ಒತ್ತಾಯ ಮಾಡುತ್ತಿದ್ದರು. ನಮ್ಮ ಶಿಕ್ಷಕರಾದರೂ ಗುರುತಿನ ಚೀಟಿಯನ್ನು ತಪ್ಪದೆ ಒಯ್ಯುತಿದ್ದರು. ಅನೇಕ ವರ್ಷಗಳಿಂದಲೂ ಬರುತ್ತಲೇ ಇದ್ದಾರೆ ಎಂದು ಅನುಮಾನಗೊಂಡ ಶಾಲೆಯವರೊಬ್ಬರು ದೂರು ನೀಡಿದಾಗ ಖುದ್ದು ಪರಿಶೀಲನೆಯಾಯಿತು. ಅಧಿಕಾರಿಗಳ ಜತೆ ಆಕ್ಷೇಪಿಸಿದವರೂ ಬಂದು ಪರೀಕ್ಷಿಸಿದಾಗ ಚಿಳ್ಳೆ ಪಿಳ್ಳೆಗಳೊಂದಿಗೆ ಆಜಾನುಬಾಹುಗಳಾದ ಇವರು ಸಹಾ ತರಗತಿಯ ಹಿಂದಿನ ಬೆಂಚಿನ ಮೇಲೆ ಕುಳಿತಿರುವುದನ್ನು ನೋಡಿದರು. ಹಾಜರಾತಿ ಹಾಗೂ ಇತರ ದಾಖಲೆ ಪರಿಶೀಲಿಸಿದರು. ಎಲ್ಲ ಸರಿ ಇರಲು ಹೀಗೂ ಉಂಟೆ ಎಂದು ಮೂಗಿನ ಮೇಲೆ ಬೆರಳಿಟ್ಟು ಕೊಂಡು ವಾಪಸ್ಸು ಹೋದರು. ಇವರಿಗೆ ಮಾತ್ರ ಯಾವುದೆ ಸಂಕೋಚವಿಲ್ಲ. ಶಾಲೆಗೆ ಹೊಸದಾಗಿ ಬರುವವರಿಗೆ ಅಣ್ಣ, ಪಾಸಾಗಿ ಹೋಗುವವರಿಗೆ ತಮ್ಮನಾಗಿ ನೆಮ್ಮದಿಯಿಂದ ಇರುತಿದ್ದರು
ಪಾಠಗಳಿಗಿಂತ ಆಟದಲ್ಲೇ ಮಕ್ಕಳಿಗೆ ಆಸಕ್ತಿ ಹೆಚ್ಚಾಗಿತ್ತು. ಆಗಿನ ಶಿಕ್ಷಣದಲ್ಲಿ ಎಳೆಯ ಮಕ್ಕಳಿಂದ ಹಿಡಿದು ಮೀಸೆ ಮೂಡಿದ ಬಲಿತ ಬಾಲಕರವರೆಗ ಹಿಂಜರಿಕೆ ಇಲ್ಲದೇ ಭಾಗವಹಿಸಲು ಮುಕ್ತ ಅವಕಾಶವಿತ್ತು. ಆಟಗಾರರಲ್ಲಿ ನಾಲಕ್ಕು ವಿಭಾಗಗಳಿದ್ದವು. ಸೀನಿಯರ್‌, ಜೂನಿಯರ್‌, ಸಬ್‌ ಜೂನಿಯರ್ ಮತ್ತು ಪಿಗ್ಮಿ ಎಂದು ಎತ್ತರ ಮತ್ತು ತೂಕದ ಆಧಾರದ ಮೇಲೆ ವರ್ಗೀಕರಣ ಮಾಡುತ್ತಿದ್ದರು. ಬಲ ಭೀಮನಿಗೆ ಇರುವಷ್ಟೇ ಅವಕಾಶ ಕಡ್ಡಿ ಪೈಲವಾನನಿಗೂ ಪಂದ್ಯಾಟಗಳಲ್ಲಿ ಭಾಗವಹಿಸಿ, ತಮ್ಮ ವಿಭಾಗದಲ್ಲಿ ಪ್ರಶಸ್ತಿ ಪಡೆವ ಅವಕಾಶ ಇರುತಿತ್ತು. ಹೀಗಾಗಿ ನನಗೂ ಜಿಲ್ಲಾ ಮಟ್ಟದ ಪಂದ್ಯಾಟಗಳಲ್ಲಿ ಹಲವು ಪ್ರಶಸ್ತಿಗಳನ್ನು ಗೆಲ್ಲಲು ಅವಕಾಶ ಸಿಕ್ಕಿತು. ತೆಳ್ಳನೆಯ ಕುಳ್ಳ ಆಕೃತಿಯ ನಾನು ಆಟೋಟಗಳ ಸ್ಪರ್ಧೆಯಲ್ಲಿ ಪಿಗ್ಮಿಯಿಂದ ಪ್ರಾರಂಭ ಮಾಡಿ, ಸಬ್‌ ಜೂನಿಯರ್‌ ಆಗಿ ಪ್ರಶಸ್ತಿಗಳನ್ನು ಬಾಚಿದ್ದೆ. ಎಸ್‌ ಎಸ್‌ ಎಲ್‌ ಸಿ ಬರುವ ಹೊತ್ತಿಗೆ ಜೂನಿಯರ್‌ ಹಂತ ತಲುಪಿದೆ. ವಾಲಿಬಾಲ್‌ ಆಡಲು ಹೋಗಿ ಬೆರಳು ಉಳುಕಿತು. ಅದನ್ನು ಕೈ ಬಿಟ್ಟೆ. ಬಾಸ್ಕೆಟ್‌ ಬಾಲಂತೂ ನನ್ನ ಅಳವಿಗೆ ಮೀರಿದ್ದಾಗಿತ್ತು. ಹತ್ತು ಅಡಿಗೂ ಹೆಚ್ಚು ಎತ್ತರದಲ್ಲಿದ್ದ ಬುಟ್ಟಿಗೆ ಚೆಂಡು ಹಾಕ ಬೇಕಿತ್ತು. ಅದರ ಆಟಗಾರರು ಎಲ್ಲರೂ ಲಂಬೂಗಳೇ. ನಾನು ಅವರ ಭುಜಕ್ಕೂ ಬರಲಾರೆ ಹಾಗಾಗಿ ಅತ್ತ ತಪ್ಪಿಯೂ ಸುಳಿಯುವಂತಿರಲಿಲ್ಲ. ಅವೆರಡನ್ನು ಬಿಟ್ಟು ಬೇರೆ ಎಲ್ಲ ಆಟಗಳಲ್ಲಿ ಭಾಗಹಿಸಿದೆ. ಕೋ ಕೋ, ಕಬಡಿ, ಫುಟ್‌ ಬಾಲ್, ಹಾಕಿ ಪಂದ್ಯಾಟಗಳಲ್ಲಿ ನನಗೆ ಅವಕಾಶ ಸಿಕ್ಕಿತು.

ಖೋಖೋ ಅಭ್ಯಾಸ ಮಾಡುವಾಗಿನ ಒಂದು ಪ್ರಸಂಗ ಈಗಲೂ ನೆನಪಿದೆ. ಅತಿ ಕಿರಿಯ ವಿಭಾಗದ ಹುಡುಗರು ಸಾಧಾರಣವಾಗಿ ಖೊಖೋ ಆಟದಲ್ಲಿ ಚುರುಕು. ಅದಕ್ಕೆ ನಮ್ಮ ಆಟದ ಮಾಷ್ಟ್ರು ಅತಿ ಕಿರಿಯ ಹುಡುಗರು ಮತ್ತು ಹಿರಿಯ ಹುಡುಗಿಯರಿಗೆ ಖೊಖೋ ಪಂದ್ಯಗಳನ್ನು ಅಡಿಸುವರು. ಇಬ್ಬರಿಗೂ ತರಬೇತಿ ಯಾಗಲಿ ಎಂದು ಅವರ ಉದ್ದೇಶ. ಆ ಪಂದ್ಯವನ್ನು ನೋಡಲು ನೂಕುನುಗ್ಗಲು. ಕೆಲವು ಹಿರಿಯ ಹುಡುಗರು ಬಂದು ನನಗೆ ನೀನು ಅವರನ್ನು ಬೆನ್ನಟ್ಟಿ ಔಟು ಮಾಡುವುದು ಕಷ್ಟ. ನೀನು ಕುಳಿತಿರುವ ಬಾಕ್ಸನ ಗೆರೆಗಳ ಎದುರಲ್ಲಿ ಇರುವವರನ್ನು ನೇರವಾಗಿ ಹೋಗಿ ಮುಟ್ಟು ಅಂದರೆ ಅವರಿಗೆ ಓಡುವ ಅವಕಾಶವಿರದು ಎಂದು ಹೇಳಿ ಕೊಟ್ಟರು. ನಾನು ಅದರಂತೆ ಬಾಕ್ಸನ ಗೆರೆಯ ಅತ್ತಿತ್ತ  ನೋಡದೆ ನೇರವಾಗಿ ಎದುರಿನವರ ಮೇಲೆ ದಾಳಿ ಮಾಡುತಿದ್ದೆ. ಅವರಿಗೆ ಬೆನ್ನುತೋರಿಸಿ ಓಡುವ ಅವಕಾಶ ಸಿಗುತ್ತಿರಲಿಲ್ಲ. ಆಗ ಸಾಮಾನ್ಯವಾಗಿ ಕೈ ಅವರ ದೇಹದ ಮುಂಭಾಗದಲ್ಲಿ ತಗುಲುವುದು. ಆಗ ಸುತ್ತ ನಿಂತವರ ಕೇಕೆ ಮುಗಿಲು ಮುಟ್ಟುತಿತ್ತು. ಒಂದೆರಡು ಸಲ ಹೀಗಾದ ಮೇಲೆ ನನಗೆ ಅವರ ಸಲಹೆಯ ಹಿಂದಿನ ಕುಚೇಷ್ಟೆ ಅರ್ಥವಾಯಿತು.

ಈಗಿನಂತೆ ಆಗ ಪ್ರೌಢ ಶಾಲೆಗಳ ಸಂಖ್ಯೆ ಹೆಚ್ಚಿರಲಿಲ್ಲ. ಜಿಲ್ಲೆಯಲ್ಲಿ  ಇಪ್ಪತ್ತರೊಳಗೆ. ಎಲ್ಲ ಶಾಲೆಗಳು ಎಲ್ಲ ಆಟದಲ್ಲಿ ಭಾಗವಹಿಸುತ್ತಿರಲಿಲ್ಲ. ಹಾಕಿ, ಫುಟ್‌ ಬಾಲ್‌ ವಾಲಿಬಾಲ್‌ ಬಾಸ್ಕೆಟ್‌ ಬಾಲ್‌ ಗಳಿಗೆ ಆರೆಂಟು ತಂಡಗಳಿದ್ದರೆ ಹೆಚ್ಚು. ಇನ್ನು ಹುಡುಗಿಯರ ಸಂಖ್ಯೆಯಂತೂ ಬಹು ಮಿತವಾಗಿತ್ತು. ಈಗ ಹಾಗಿಲ್ಲ. ಮೊದಲು ವಲಯ ಮಟ್ಟದಲ್ಲಿ, ನಂತರ ತಾಲೂಕು ಮಟ್ಟದಲ್ಲಿ ಕ್ರೀಡಾಕೂಟ ನಡೆಸಿ ನಂತರ ತಾಲೂಕಿನಲ್ಲಿ ಪ್ರಥಮ ಎರಡು ಸ್ಥಾನ ಪಡೆದವರು ಮಾತ್ರ ಜಿಲ್ಲಾ ಮಟ್ಟಕ್ಕೆ ಹೋಗುವರು. ತಂಡ ಪಂದ್ಯಾಟಗಳಲ್ಲಂತೂ ಒಂದೆ ಶಾಲೆಯ ತಂಡ ಇರುವುದಿಲ್ಲ. ಸೋತಿರಲಿ, ಗೆದ್ದಿರಲಿ ಚೆನ್ನಾಗಿ ಆಡುವ ತಾಲೂಕಿನಲ್ಲಿರುವ ಎಲ್ಲ ತಂಡಗಳನ್ನು ಗಮನಿಸಿ ಆಯ್ಕೆ ಮಾಡುತ್ತಾರೆ. ಸ್ವಾಭಾವಿಕವಾಗಿ ಗೆದ್ದ ತಂಡದವರು ಹೆಚ್ಚು ಇರುವರು. ಕಬಡಿ, ಖೋಖೋ. ಫುಟ್‌ ಬಾಲ್‌ ಆಟೋಟಗಳಲ್ಲಿ ನಾನು ಗೆದ್ದ  ಪಾರಿತೋಷಕಗಳನ್ನು ನನ್ನ ಹೆಂಡತಿ ಮೊನ್ನೆ ಮೊನ್ನೆಯವರಿಗೆ ಜತನವಾಗಿ ಇಟ್ಟಿದ್ದಳು. ಅವು ಬೆಳ್ಳಿ ಲೇಪನದ ಹಿತ್ತಾಳೆಯವು ಎಂದು ಕಾಣುತ್ತದೆ. ಬಹಳ ವರ್ಷಗಳ ಮೇಲೆ ಹಿತ್ತಾಳೆ ತೇಲಿತು. ಆದರೂ ನನ್ನವಳಿಗೆ ಅವನ್ನು ಕಂಡರೆ ಅದೇನೋ ಅಭಿಮಾನ. ಮಕ್ಕಳು ಬಹುಮಾನಗಳನ್ನು ಬಾಚಿ ತರುವುದನ್ನು ಮೊದಲುಮಾಡಿದ ಮೇಲೆ. ಅವುಗಳನ್ನು ಮರೆತಳು. ಹೊಸ ನೀರು ಬಂದಾಗ ಹಳೆಯ ನೀರು ಕೊಚ್ಚಿ ಹೋಗುವುದು ನಿಸರ್ಗದ ನಿಯಮ.

ಶನಿವಾರದ ಮುಂಜಾನೆಯ ಎರಡು ಅವಧಿಗಳು ಮಾತ್ರ ಮಕ್ಕಳಿಗೆ ಅತ್ಯಾಕರ್ಷಕವಾಗಿರುತಿದ್ದವು. ಆಗ ಪಾಠ ಪ್ರವಚನ ಇಲ್ಲ. ಪ್ರಾರ್ಥನೆಯಾದ ಮೇಲೆ ಎಲ್ಲರೂ ಮೈದಾನದಲ್ಲಿ ತರಗತಿವಾರು ನಿಲ್ಲಬೇಕು. ಆಗ ಇನ್ನೂ ಸಮವಸ್ತ್ರದ ಕಾಟ ಇರಲಿಲ್ಲ. ಹರಿದಿಲ್ಲದ ಹೊಲಸಾಗಿರದ ಬಟ್ಟೆಇದ್ದರೆ ಸಾಕಿತ್ತು. ಎಷ್ಟೊ ಹುಡುಗರ ಚೊಣ್ಣದ ಗುಂಡಿ ಇಲ್ಲದೆ ಪೋಸ್ಟ ಆಪೀಸ್‌ ಅಂದು ಹಾಸ್ಯಕ್ಕೆ ಗುರಿಯಾಗುತಿದ್ದರು. ಅಂಗಿಗೂ ಅಷ್ಟೆ. ಗುಂಡಿ ಹೋದಮೇಲೆ ಪಿನ್ನು ಹಾಕಿಕೊಂಡು ಬಂದರೆ ದೊಡ್ಡದು. ಆದ್ದರಿಂದ ಸಾಮೂಹಿಕ ಕವಾಯತು ಅಕ್ಷರಶಃ ವರ್ಣ ಮಯವಾಗಿರುತಿತ್ತು. ಮಕ್ಕಳ ಮೇಲುಸ್ತುವಾರಿ ತರಗತಿಯ ಶಿಕ್ಷಕರದು. ನಂತರ ಸಾಮೂಹಿಕ ವ್ಯಾಯಾಮ. ಸಹಸ್ರಾರು ಜನರು ಡ್ರಮ್ಮಿನ ಲಯಬದ್ಧ ಹೊಡತಕ್ಕೆ ಅನುಗುಣವಾಗಿ ನಿಂತು, ಕುಳಿತು ಮಾಡುತಿದ್ದ ವ್ಯಾಯಾಮ ಎಲ್ಲರ ಮನ ಮತ್ತು ಗಮನ ಸೆಳೆಯುತಿತ್ತು. ನೂರಾರು ಹಾದಿ ಹೋಕರೂ ನಿಂತು ನೋಡುತಿದ್ದರು. ಮಳೆ ಬಂದರೆ ಮತ್ತು ಪರೀಕ್ಷೆ ಹತ್ತಿರವಾದಾಗ ವಿನಾಯತಿ ಇರುತಿತ್ತು.

ಎಲ್ಲರಿಗೂ ಸಂಭ್ರಮದ ದಿನವೆಂದರೆ ಆಗಷ್ಟ ೧೫ ಮತ್ತು ಜನವರಿ ೨೬ ರ ಸಮಾರಂಭಗಳು. ಅವನ್ನು ಬಹಳ ಸಡಗರದಿಂದ ಆಚರಿಸುತಿದ್ದೆವು. ಬೆಳ್ಳಂ ಬೆಳಗ್ಗೆ ಶಾಲಾ ಅವರಣದಲ್ಲಿ ಸೇರಿ ಪ್ರಭಾತ್ ಫೇರಿ ಹೊರಡುತಿದ್ದೆವು ಶಾಲಾ ಬ್ಯಾಂಡು, ಲೇಝಿಂ ತಂಡಗಳು ಶಾಲೆಯ ಹೆಸರಿನ ಬಟ್ಟೆಯ ಬ್ಯಾನರ್‌, ಜತೆಗೆ ರಾಷ್ಟ್ರಧ್ವಜ ಹಿಡಿದು ಸಾಗುವವರ ಹಿಂದೆ ಆಕರ್ಷಕ ಪ್ರದರ್ಶನ ನೀಡುತ್ತಾ ಹೋಗುತಿದ್ದರು. ಅವರ ಹಿಂದೆ ಮೂರು ಜನರ ಸಾಲಿನಲ್ಲಿ ಸಾವಿರಾರು ವಿದ್ಯಾರ್ಥಿಗಳು. ೨೦ ಮಕ್ಕಳ ಗುಂಪಿಗೆ ಒಬ್ಬ ಘೋಷಣೆ ಕೂಗುವ ಮುಂದಾಳು, ಬಹುತೇಕರ ಕೈನಲ್ಲಿ  ಚಿಕ್ಕಚಿಕ್ಕ ಧ್ವಜಗಳು. ಮಾಳಿಗೆಯ ಮೇಲೆ ನಿಂತು ನೋಡುವವರಿಗೆ ರಸ್ತೆಯಲ್ಲಿ ಮೂರುಬಣ್ಣದ ಅಲೆ ಸಾಗುತ್ತಿರುವಂತೆ ಕಾಣುತಿತ್ತು. ಅವನು `ಭಾರತಮಾತಾ ಕಿ, ಮಹಾತ್ಮ ಗಾಂಧಿ ಕಿ, ಜವಹರಲಾಲ್ ನೆಹರೂ ಕಿ, ಸುಭಾಷ್‌ ಚಂದ್ರ ಬೋಸ್‌ ಕಿ' ಎಂದರೆ ಉಳಿದವರೆಲ್ಲ ಜೈ ಎನ್ನುವರು. ಆಗ ನನಗೆ ಹೆಸರುಗಳ ವಿಶೇಷ ತಿಳಿದಿತ್ತು. ಆದರೆ  'ಕೀ' ಅಂದರೇನು ಎಂದು ಅರ್ಥವೆ ಆಗಿಲಿಲ್ಲ. ಸಾಬರ ಗೆಳೆಯರು ಉರ್ದುವಿನಲ್ಲಿ ಬೈಯುವಾಗ ತೆರಿ......ಕಿ ಎಂದು ಬಳಸುವುದು ಗೊತ್ತಿತ್ತು. ಆದರೂ `ಕೀ' ಎಂದಾಗಲೆಲ್ಲ ಜೋರಾಗಿ ಜೈ ಎನ್ನುತ್ತಿದ್ದೆವು
ಇನ್ನೊಂದು ಜನಪ್ರಿಯ 'ಘೋಷಣೆ ಒಂದೆಮಾತರಂ' ಲೀಡರು `ಒಂದೆ' ಎಂದರೆ ಸಾಮೂಹಿಕವಾಗಿ ನಾವೆಲ್ಲ `ಮಾತರಂ' ಎಂದು ಕೂಗುವುದು ಬಹು ಖುಷಿಯ ವಿಷಯ. ಇನ್ನು ಒಂದೆ ಮಾತರಂ ಎಂದಾಗ, ಕೆಲವರ ಎರಡೆ ಮಾತರಂ, ಮೂರೆ ಮಾತರಂ ಯಾಕೆ ಅಲ್ಲ ಎಂಬ ಪ್ರಶ್ನೆಗೆ ನಮಗೆ ಉತ್ತರ ಗೊತ್ತಿರಲಿಲ್ಲ ನಂತರ ಗೊತ್ತಾಯಿತು ಅದು ಬಂಗಾಲಿ ಭಾಷೆ. ಒಂದೆ ಎಂದರೆ ನಮಿಸುವೆ ಮತ್ತು ಮಾತರಂ ಎಂದರೆ ತಾಯಿ ಎಂದು. ಅರ್ಥ ಗೊತ್ತಿಲ್ಲದಿದ್ದರೂ ಆರ್ಭಟಕ್ಕೆ ಕೊರತೆ ಇರಲಿಲ್ಲ. ಮೆರವಣಿಗೆ ಹೋಗುತ್ತಿರುವಾಗ ನಮ್ಮ ಮನೆಯವರು ನಿಂತು ನೋಡುವುದು ಕಂಡರೆ ಉತ್ಸಾಹ ಉಕ್ಕೇರುತಿತ್ತು ಆಗ ಗಂಟಲು ಹರಿವ ತನಕ ಕೂಗಿದ್ದೆ ಕೂಗಿದ್ದು. ಅದನ್ನು ಕೇಳಿ ಅಮ್ಮ, ಅಪ್ಪ, ಅಕ್ಕಂದಿರ ಖುಷಿ ಹೇಳತೀರದು. ಜತೆಗೆ ದೇಶ ಭಕ್ತಿಗೀತೆಗಳ ಸಾಮೂಹಿಕ ಗಾಯನ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸುತ್ತಿ ಎಲ್ಲರೂ ನಮ್ಮ ಮೈದಾನದಲ್ಲಿ ಸೇರಿ ಸಾಮೂಹಿಕ ಧ್ವಜಾಆರೋಹಣವಾಗುತಿತ್ತು. ಕೊನೆಯಲ್ಲಿ ಎಲ್ಲರಿಗೂ ವರ್ತಕ ಸಂಘದವರು ಲಾಡು ಹಂಚುತಿದ್ದರೂ. ಅದೂ ಎರಡೆರಡು. ಜತೆಗೆ ಶಾಲೆಯವರು ಹಂಚುವ ಪೆಪ್ಪರಮೆಂಟು ಬೇರೆ. ಆಗ ಬರಿ ಶಾಲೆ ಮಕ್ಕಳು ಮಕ್ಕಳು ಮಾತ್ರವಲ್ಲ ಸಾರ್ವಜನಿಕರೂ ಉತ್ಸಾಹದಿಂದ ಭಾಗವಹಿಸುತಿದ್ದರು. ಮೂರು ನಾಲಕ್ಕು ಮೈಲು ಸುತ್ತಿದರೂ ಆಯಾಸ, ಬೇಸರದ ಸುಳಿವೆ ಇರುತ್ತಿರಲಿಲ್ಲ.. ನಗರದಲ್ಲಿ ಸುತ್ತುವಾಗ ಮಕ್ಕಳನ್ನುನೋಡಲು ಅವರ ಮನೆಯವರು ಸಾಲುಗಟ್ಟಿ ನಿಲ್ಲವರು. ಪ್ರತಿಯೊಬ್ಬರೂ ಚಿಕ್ಕ ಚಿಕ್ಕ ಧ್ವಜ ಬೀಸುತ್ತಾ ಸಾಗುತಿದ್ದರೆ ಮಾಳಿಗೆಯ ಮೇಲೆ ನಿಂತು ನೊಡುವರಿಗೆ ಮೂರು ರಂಗಿನ ಅಲೆ ರಸ್ತೆಯಲ್ಲಿ ಚಲಿಸುವಂತೆ ಕಾಣವುದು. ಮನೆ ಹತ್ತಿರ ಬಂದಾಗ, ಮನೆಯವರನ್ನು ನೋಡಿದಾಗ ಘೋಷಣೆ ಕೂಗುವವರ ಹುಮ್ಮಸ್ಸು ಹೆಚ್ಚುತಿತ್ತು. ಜೈಕಾರ ಮುಗಿಲು ಮುಟ್ಟುತಿತ್ತು.

ಈಗ ರಾಷ್ಟ್ರೀಯ ಹಬ್ಬಗಳು ಕಾಟಾಚಾರದ ಸರ್ಕಾರಿ ಆಚರಣೆಯಾಗಿವೆ. ಎಲ್ಲ ಕಡೆ ಧ್ವಜಾರೋಹಣ ಇಲಾಖೆಯ ಆದೇಶದ ಪ್ರಕಾರ ಕಡ್ಡಾಯ. ಪರಿಣಾಮವಾಗಿ. ಹರಿದ ಧ್ವಜ ಹಾರಿಸುವುದು, ತಲೆಕೆಳಗಾಗಿ ಹಾರಿಸುವುದು, ರಾತ್ರಿಯಾದರೂ ಧ್ವಜ ಇಳಿಸದಿರುವುದು, ಧ್ವಜಾರೋಹಣದಲ್ಲೂ ರಾಜಕೀಯ ಮಾಡುವುದು ಕಂಡು ಬರುತ್ತಿದೆ ಕಾರಣ. ದುಡಿಯದೆ ದೊರೆತುದರ ಬೆಲೆ ಅರಿಯುವುದಾದರೂ ಹೇಗೆ ಸಾಧ್ಯ? ಈಗ ಆಚರಣೆಯ ಆಡಂಬರ ಹೆಚ್ಚಿದೆ. ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದು.. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಆಕರ್ಷಕ ಸ್ತಬ್ಧ ಚಿತ್ರಗಳೂ ಇರುವವು. ಆದರೆ ಜನರ ಆಸಕ್ತಿ ಕಡಿಮೆಯಾಗಿದೆ. ಮಕ್ಕಳಿಗೆ ಮೊದಲಿನ ಉತ್ಸಾಹ ಇಲ್ಲ. ಸಾರ್ವಜನಿಕರಂತೂ ಸರೆ ಸರಿ. ಬಹುತೇಕರು ರಜೆ ಎಂದು ಸಿನೆಮಾ, ಪಿಕ್‌ನಿಕ್‌ ಪಾರ್ಟಿ ಮಾಡಲು ಯೋಜನೆ ಹಾಕುವರು.. ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರ ನೆನಪು ಮಾಸುತ್ತಿದೆ. ಕಾಲನ ಕಾಲ್ತುಳಿತಕ್ಕೆ ಕರುಣೆ ಇರದು.

(ಮುಂದುವರಿಯುವುದು)

ಆರರಿಂದ ಅರವತ್ತು:ಅಪ್ಪಾಜಿರಾಯರ ಸರಣಿ ಪೂರ್ತಿ ಓದಿಗೆ ಇಲ್ಲಿ ಕ್ಲಿಕ್ಕಿಸಿ    '

 

ಪುಟದ ಮೊದಲಿಗೆ
 
Votes:  10     Rating: 4.9    
 
 
ಸಂಬಂಧಿಸಿದ ಲೇಖನಗಳು
  ತುಳು ಜನಪದರ ಸಿರಿಕೃಷ್ಣ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಮೆಸೊ ಅಮೆರಿಕಾದ ಮಯಾ ಲಿಪಿ:ಅಪ್ಪಾಜಿರಾಯರ ಸರಣಿ
  ನಾನು ಗಂಡ ಅವಳು ಹೆಂಡತಿ!:ಮೂರನೇ ಕಿವಿಯ ಪುಟಗಳು ೧೧
  ಭೂತನ ಕಾಡಲ್ಲಿ ತೀರಿದ ಅಪ್ಪ:ರಾಜೇಶ್ವರಿ ಕಥನ ೧೧
  ತುಳುಭೂತಗಳ ನಡುವೆ ಗೌತಮ ಬುದ್ಧ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಬೆಂಗಳೂರಿನ ಕಾಲೇಜು ದಿನಗಳು:ರಾಜೇಶ್ವರಿ ಕಥನ ೧೦
  ಕಾಮರಾಜಕೂಟದ ಕುರಿತು:ತೋಳ್ಪಾಡಿ ಸೌಂದರ್ಯ ಲಹರಿ
  ನಾಗಮಂಡಲವೆಂಬ ನೃತ್ಯಸೇವೆ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ನಿರಂಜನ ಜಡವಸ್ತುಗಳ ಹೆಸರು ಕಲಿತ:‘ಮೂರನೇ ಕಿವಿ’ಯ ಪುಟಗಳು
  ಕನಸಿನ ಮನೆ:ರಾಜೇಶ್ವರಿ ‘ನಂಗೆ ಅಮ್ಮ ಹೇಳಿದ್ದು’ ಕಥನ ೯
  ತುಳುನಾಡಿನ ಕನ್ನಡಿಗ ಭೂತಗಳು:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಕ್ಯೂನಿಫಾರಂ ಲಿಪಿ:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಅವಳು ಅಮ್ಮ ಮಾತ್ರ: ಮೂರನೇ ಕಿವಿಯ ಪುಟಗಳು ೯
  ವಿವಾಹ ಪ್ರಕರಣ: ನಾರಾಯಣ ಯಾಜಿ ಬರೆಯುವ ಅಂಬೋಪಾಖ್ಯಾನ
  ಭೂತವಾದ ಬೆಳ್ಳಾರೆಯ ರಾಜಕುಮಾರ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಈಜಿಪ್ಟಿನ ಚಿತ್ರ ಲಿಪಿ:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ನಾರಾಯಣ ಯಾಜಿ ಬರೆದ ಅಂಬೋಪಾಖ್ಯಾನ
  ಮನೆಗೆ ಬಂದರು ಗಾಂಧೀಜಿ:ರಾಜೇಶ್ವರಿ ತೇಜಸ್ವಿ ಕಥನ
  ಅವಳಿವೀರ ಕೋಟಿಚೆನ್ನಯರು:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಈಜಿಪ್ಟಿನ ರೊಜೆಟ್ಟಾ ಶಿಲೆ:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಕತ್ತಲೆ ತಂದ ದೀಪಾವಳಿ: ‘ಮೂರನೇ ಕಿವಿ’ ಮುಂದುವರಿದ ಪುಟಗಳು
  ಅಪ್ಪನ ಮನೆ ತುಂಬಿಸಿದ್ದು :ರಾಜೇಶ್ವರಿ ಕಥನ ೭
  ಲಜ್ಜೆಯ ಬೀಜಕ್ಕೆ ನಾಚುಕೆಯ ನೀರು:ತೋಳ್ಪಾಡಿ ಸೌಂದರ್ಯ ಲಹರಿ
  ಡಾ.ಕೆ.ವಿ. ರಮೇಶ್‌:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಹನುಮಂತ ಭೂತದ ಕೋಲ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಹರಕೆಯ ಮೊರೆ ಹೋಗಿ:‘ಮೂರನೇ ಕಿವಿ’ ಯ ಪುಟಗಳು ೮
  ದೊಡ್ಡಮನೆ ಸಾಕಮ್ಮನವರು:ರಾಜೇಶ್ವರಿ ತೇಜಸ್ವಿ ಕಥನ
  ಕಬಕ ಪುತ್ತೂರಿನ ಕುಂಞಿ ಭೂತ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಪ್ರಪಂಚದ ಅತಿ ಪುರಾತನ ಬರಹ:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ನಕಲಿ ವೈದ್ಯನ ವೃತ್ತಾಂತ:‘ಮೂರನೇ ಕಿವಿ’ ಮುಂದುವರಿದ ಪುಟಗಳು
  ಅಮ್ಮನ ಮದುವೆ :ರಾಜೇಶ್ವರಿ ‘ ನಂಗೆ ಅಮ್ಮ ಹೇಳಿದ್ದು’ ಕಥನ
  ಕನ್ನಡದ ಪುರುಷ ಭೂತ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಸಜೀವಿಗಳೂ ನಿರ್ಜೀವಿಗಳೂ:‘ಮೂರನೇ ಕಿವಿ’ ಯ ಪುಟಗಳು
  ಪೆಜತ್ತಾಯರ ರಕ್ಷಾ ಸರಣಿಯ ಕೊನೇ ಕಂತು
  ಮೌನ ಮಾತಾಗಿ ಮಂತ್ರವಾಗುವ ಪರಿ:ತೋಳ್ಪಾಡಿ ಸೌಂದರ್ಯ ಲಹರಿ
  ‘ಹಣೆ ಬರಹ’:ರಾಜೇಶ್ವರಿ ಬರೆವ ‘ ನಂಗೆ ಅಮ್ಮ ಹೇಳಿದ್ದು’ ಕಥನ
  ತುಳುನಾಡಿನ ಕುಲೆ ಭೂತಗಳು:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಶಂ.ಬಾ ಜೋಷಿಯವರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಊಟವೂ ಪಾಠವಾದ ಬಗೆ:`ಮೂರನೇ ಕಿವಿ’ ಯ ಪುಟಗಳು
  ರಕ್ಷಾನ ಸಂಗಾತಿಗಳು:ಪೆಜತ್ತಾಯರ ಸರಣಿ
  ರೆವರೆಂಡ್ ಉತ್ತಂಗಿ ಚೆನ್ನಪ್ಪನವರು:ಅಪ್ಪಾಜಿರಾಯರ ಸರಣಿ
  ಅಜ್ಜಿ ಭೂತ ಮತ್ತು ಕೂಜಿಲು:ಲಕ್ಷ್ಮೀ.ಜಿ. ಪ್ರಸಾದ್ ಸರಣಿ
  ಮಗುವಿನಲ್ಲಿ ತಾಯಿ ತನ್ನನ್ನೇ ನಿಟ್ಟಿಸುವಂತೆ:ಸೌಂದರ್ಯ ಲಹರಿ
  ಅನುನಾಸಿಕ ಕಲಿಯುವ `ಸರ್ಕಸ್':ಮೂರನೇ ಕಿವಿ’ ಯ ಪುಟಗಳು ೪
  ರಕ್ಷಾ ಮತ್ತು ಡಾಗ್ ಶೋ:ಪೆಜತ್ತಾಯರ ಸರಣಿ
  ಜನಪ್ರಿಯದೈವ ಕೊರಗ ತನಿಯ:ಲಕ್ಷ್ಮೀ.ಜಿ. ಪ್ರಸಾದ್ ಸರಣಿ
  ಡಾ.ಕೇಶವ ಅಭಿಶಂಕರ್:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಅಂತೂ ಅಪ್ಪ ಎಂದ ಮಗ!:ಮೂರನೇ ಕಿವಿ’ ಯ ಪುಟಗಳು ೩
  ರಕ್ಷಾನ ವಾಹನ ಪ್ರೀತಿ:ಪೆಜತ್ತಾಯರ ಸರಣಿ
  ಅಗ್ನಿ ಚಾಮುಂಡಿ ಗುಳಿಗ:ಲಕ್ಷ್ಮೀ.ಜಿ. ಪ್ರಸಾದ್ ಸರಣಿ
  ಡಾ.ಚಿದಾನಂದ ಮೂರ್ತಿಗಳು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ನಿರಂಜನನ ಕಲಿಕೆ ಶುರುವಾಯ್ತು:‘ಮೂರನೇ ಕಿವಿ’ ಯ ಪುಟಗಳು
  ಬಂದೂಕು ಕಸಿಯುವ ನಾಯಿ:ಪೆಜತ್ತಾಯರ ರಕ್ಷಾ ಸರಣಿ
  ಕಲ್ಕುಡ ಕಲ್ಲುರ್ಟಿ ಅವಳಿ ಭೂತಗಳು:ಲಕ್ಷ್ಮೀ ಪ್ರಸಾದ್ ಸರಣಿ
  ಡಾ.ಸೂರ್ಯನಾಥ್ ಕಾಮತರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ