ಸೆಪ್ಟೆಂಬರ್ ೨೪, ೨೦೧೪
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ದಿನದ ಬ್ಲಾಗ್ - ಸಾಗರಿಯ ಟೈಂ ಪಾಸ್ ಬರಹಗಳು    
ಜಿತೇಂದ್ರ
ಗುರುವಾರ, 22 ಜನವರಿ 2009 (09:28 IST)
ಸಾಗರಿಯ ಟೈಂ ಪಾಸ್ ಬರಹಗಳು

‘ಸುಮ್ಮನೆ ಬೇಜಾರಾಯಿತಾ?ಯಾರದೋ ಮೇಲೆ ಸಿಟ್ಟಾ? ನೋವು ಹೆಚ್ಚಾಯಿತಾ? ಹೀಗೆಲ್ಲ ಆಗುತ್ತಿದ್ದರೆ ಒಮ್ಮೆ ಮಳೆಯಲ್ಲಿ ನೆನೆಯುತ್ತಾ ಅದರ ಥರಾನೇ ಒಂದೇ ಸಮ ಅತ್ತುಬಿಡಿ. ಗುಡುಗಿದಾಗ ಜಾಸ್ತಿ ಬಿಕ್ಕಳಿಸಿ, ಮಿಂಚಿದಾಗ ಸಮಾಧಾನದ ನಗು ಬೀರಿ. ಇಲ್ಲ ಬಾಲ್ಕನಿಯಲ್ಲಿ ಒಬ್ಬರೇ ಕೂತು ಯಾರೊಂದಿಗೆ ಕಾಫಿ ಕುಡಿಯಬೇಕಿತ್ತು, ಲಲ್ಲೆಗರಿಯಬೇಕಿತ್ತು ಅಂತೆಲ್ಲ ನೆನಪಿಸಿಕೊಂಡು ಅಳಿ. ಹೀಗೆ ಅಳುವುದರಿಂದ ಖಂಡಿತ ಸಮಾಧಾನ ಸಿಗುತ್ತೆ. ಒಮ್ಮೆ ಅತ್ತು ಹಗುರಾಗಿ" ಹೀಗೆ ಬ್ಲಾಗಿಗರಿಗೆಲ್ಲ ಅಳುವಿನ ಪಾಠ ಹೇಳಿಕೊಡುತ್ತಿದ್ದಾರೆ ಸಾಗರಿ.

ತಮ್ಮ ಟೈಂ ಪಾಸ್ ಬರಹಗಳ ಮೂಲಕ ಬ್ಲಾಗಿನಲ್ಲಿ ಕಾಣಿಸಿಕೊಳ್ಳುವ ಅವರು ಹಿಂದಿನ ಲೇಖನದಲ್ಲಿ ದೇವಹಿತ ಅನ್ನುವಂತ ಕಥೆಯೊಂದನ್ನ ತೆರೆದಿಟ್ಟಿದ್ದಾರೆ. ತಮ್ಮ ನೆಚ್ಚಿನ ಜಾಗ ಟೆರೇಸಿನ ಸುತ್ತ ನಾಲ್ಕು ಗೋಡೆಗಳೆದ್ದು ಸೂರ್ಯಚಂದ್ರರೂ ಕಾಣದಂತಾದ್ದನ್ನು ಹೇಳುತ್ತಾ ಟೆರೇಸಿನ ಮೇಲೊಂದು ಕವಿತೆ ಕಟ್ಟಿದ್ದಾರೆ. ಗೇಟಿನ ಮುಂದೆ ತೂಕಡಿಸುತ್ತಾ ಕನಸು ಕಂಡಿದ್ದಾರೆ. ಇಂತಹದ್ದೇ ಇನ್ನೂ ನಾಲ್ಕಾರು ಬರಹಗಳು ಇಲ್ಲಿವೆ.

ಸುದೇಶರ ಸ್ವಿಸ್ ಪ್ರವಾಸ

ಅನುಭೂತಿ ಮೂಲಕ ಭಾವನೆಗಳ ವಿನಿಮಯ ಮಾಡಿಕೊಳ್ಳುವ ಸುದೇಶ್ ಶೆಟ್ಟಿ ಸದ್ಯ ಸ್ವಿಟ್ಜರ್ಲೆಂಡಿನ ಅನುಭವಗಳ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. " ನಾನು ‘ಆ ದಿನಗಳು' ಎ೦ಬ ಸಿನಿಮಾದ೦ತೆ ಕಥೆ ಬರೆಯಲು ಹೊರಟಿಲ್ಲ. ಅ೦ತಹ ಗಹನವಾದ ವಿಷಯವೇನೂ ಅಲ್ಲ. ತೀರಾ ಇತ್ತೀಚೆಗೆ ನಾನು ಹದಿನಾಲ್ಕು ದಿನಗಳ ಮಟ್ಟಿಗೆ ‘ಸ್ವಿಟ್ಜರ್ಲೆ೦ಡ್'ಗೆ ಹೋಗಿದ್ದೆ. ಅದರ ಬಗ್ಗೆ ಬರೆಯಬೇಕೆ೦ದು ತು೦ಬಾ ದಿನಗಳಿ೦ದ ಅ೦ದುಕೊಳ್ಳುತ್ತಿದ್ದೆ. ಆದರೆ ‘ಸ್ವಿಟ್ಜರ್ಲೆ೦ಡ್' ನಿ೦ದ ಬ೦ದ ಮೇಲೆ ಊಟಿ ಟ್ರಿಪ್, ನ೦ತರ ಸ್ವಲ್ಪ ‘ಅಕ್ಷೀ.....' ಮು೦ತಾದ ಗ೦ಡಾಂತರಗಳಿ೦ದ ಬರೆಯಲಾಗಿರಲಿಲ್ಲ. ಈಗ ಅದೆಲ್ಲ ಮುಗಿದು, ಬರೆಯುವ ಶುಭಕಾಲ ಬ೦ದಿದೆ." ಅಂತೆಲ್ಲ ಪೀಠಿಕೆ ಹಾಕುತ್ತಾ ಕಥೆ ಬಿಚ್ಚಿಟ್ಟಿದ್ದಾರೆ. ಅಚಾನಕ್ಕಾಗಿ ಸಿಕ್ಕ ಅವಕಾಶದಿಂದ ಮೊದಲ ಬಾರಿ ವಿದೇಶ ಪ್ರಯಾಣಕ್ಕೆ ಹೊರಟವರು ವಿಯೆನ್ನಾ ಸುತ್ತಿ ಸ್ವಿಸ್ ಗೆ ಬಂದಿಳಿದಿದ್ದಾರೆ. ಆ ದೇಶದ ಬಗ್ಗೆ ಹೇಳುವುದು ತುಂಬಾ ಇದೆಯಂತೆ. ಈಗ ಬರೆದದ್ದು ಬರೀ ಪೀಠಿಕೆಯಂತೆ. ಮುಂದಿನ ಭಾಗ ಸ್ವಿಸ್ ನಲ್ಲಿ ‘ಮೊದಲ ದಿನ ಮೌನ...'

ಅನುಭೂತಿಯಲ್ಲಿ ಇನ್ನೂ ಒಂದಿಷ್ಟು ಬೆಚ್ಚನೆಯ ಬರಹಗಳಿವೆ. ವೈದೇಹಿಯವರ ‘ಅಮ್ಮಚ್ಚಿಯೆಂಬ ನೆನಪು' ಓದಿದ ಸುದೇಶ್ ಅದೇ ಗುಂಗಿನಲ್ಲಿ ತಮ್ಮ ಪಮ್ಮಿಯ ನೆನಪನ್ನು ಬಿಚ್ಚಿಟ್ಟಿದ್ದಾರೆ. ದೇವರ ಸ್ವಂತ ಊರಿನ ಅನುಭವದ ಬಗ್ಗೆ ಬರೆದಿದ್ದಾರೆ. ಹಲಸಿನ ಹಣ್ಣಿನ ಗಟ್ಟಿಯ ರುಚಿ ತೋರಿಸಿದ್ದಾರೆ. ಮತಾಂತರದ ಬಗ್ಗೆ ಸಣ್ಣದೊಂದು ಮಾತು ಬೆಳೆಸಿದ್ದಾರೆ. ಒಂದಿಷ್ಟು ಕವಿತೆಗಳೂ ಜೊತೆಗಿವೆ.

ಹಳೆಯ ಕೊಳಲೊಳಗೆ ಹೊಸ ಉಸಿರು

ಕ್ಷಣಕ್ಷಣಕ್ಕೂ ಹೊಸ ಆಲಾಪದೊಂದಿಗೆ ಬರುವ ಸತೀಶ್ ಈ ಬಾರಿ ಹುಲಿಯ ಬಾಯಿಂದ ತಪ್ಪಿಸಿಕೊಂಡು ಬಂದ ಕಥೆ ಬರೆದಿದ್ದಾರೆ. ಹತ್ತು ವರ್ಷಗಳ ಹಿಂದೆ ಒಂದು ಸಲ ದೇವಸ್ಥಾನಕ್ಕೆ ಹೋಗಿ ಬರೋವಾಗ, ಕಾಡುದಾರಿಯ ನಡುವೆ ಹುಲಿಯೊಂದು ಎದುರಾಗಿತ್ತಂತೆ. ಆಗ ಎದ್ದೆಬಿದ್ದೆ ಅಂತ ತಿರುಗಿನೋಡದೆ ಓಡಿದ್ದವರು ಈಗ ಏದುಸಿರು ಬಿಡುತ್ತಾ ಅದನ್ನೆಲ್ಲ ಹೇಳುತ್ತಿದ್ದಾರೆ.

ಮಣ್ಕುಳಿ ಗುಡ್ಡದ ಹಚ್ಚಹಸಿರು ಮತ್ತು ಚಿಮ್ಮುವ ಜಲದ ವರ್ಣನೆ, ಒಂದು ವಾಚಿನ ಕಥೆ ಮುಂತಾದ ಲೇಖನಗಳು ಓದಿಸಿಕೊಂಡು ಹೋಗುವಂತಿವೆ. ಕಥೆ, ಕವಿತೆ, ಚಾರಣ, ಅನುವಾದ ಮುಂತಾದ ಬಗೆಯ ಬರಹಗಳು ಇಲ್ಲಿವೆ. ಹಳೆಯ ಕೊಳಲೊಳಗೆ ಹೊಸ ಉಸಿರನ್ನು ಕಾಣಬೇಕಿದ್ದವರು ಇಲ್ಲಿಗೊಮ್ಮೆ ಹೋಗಿಬನ್ನಿ.

ಓದುವ ಹವ್ಯಾಸದಲ್ಲಿ ಶಾನಭಾಗರ ಪರಿಚಯ

ತಮ್ಮ ‘ಓದುವ ಹವ್ಯಾಸ'ದ ಮೂಲಕ ಕನ್ನಡ ಪುಸ್ತಕಗಳ ಪರಿಚಯ ಮಾಡಿಕೊಡುವ ನರೇಂದ್ರ ಪೈ ಸದ್ಯ ವಿವೇಕ ಶಾನಭಾಗರ ಬರವಣಿಗೆಗಳ ಪರಿಚಯ ಮಾಡಿಕೊಡುವ ಯತ್ನದಲ್ಲಿದ್ದಾರೆ. ಕೆಲ ತಿಂಗಳ ಹಿಂದೆ ಶಾನಭೋಗರನ್ನು ಭೇಟಿಯಾಗಿದ್ದ ಪೈ ಅಲ್ಲಿ ಅವರೊಟ್ಟಿಗೆ ನಡೆಸಿದ ಸಾಹಿತ್ಯ ಚರ್ಚೆಯ ಮೊದಲ ಭಾಗವನ್ನ ಬ್ಲಾಗಿನಲ್ಲಿ ಹಾಕಿದ್ದಾರೆ. ವಿವೇಕರ ಕಥಾ ಜಗತ್ತಿನ ಒಂದು ಪರಿಚಯದ ನಂತರ ಎರಡನೇ ಭಾಗ ಹಾಕುತ್ತೇನೆ ಅಂತಂದು ಅವರ ಒಟ್ಟು ಕೃತಿಗಳನ್ನು ಪರಿಚಯಿಸುತ್ತಿದ್ದಾರೆ. ಶಾನಭಾಗರ ಕಥಾ ಸಂಕಲನಗಳಾದ ‘ಅಂಕುರ' , ಲಂಗರು', ‘ಹುಲಿ ಸವಾರಿ' , ‘ಮತ್ತೊಬ್ಬನ ಸಂಸಾರ' , ಮೊದಲ ನಾಟಕ ‘ಸಕ್ಕರೆ ಗೊಂಬೆ', ಮೊದಲ ಕಾದಂಬರಿ ‘ಇನ್ನೂ ಒಂದು' ಕೃತಿಗಳ ಕುರಿತ ಸಂಕ್ಷಿಪ್ತ ಪರಿಚಯಗಳು ಇಲ್ಲಿವೆ. ವಿವೇಕ ಶಾನಭಾಗರ ಒಟ್ಟಾರೆ ಸಾಹಿತ್ಯದ ಬಗ್ಗೆ ತಿಳಿಯಬಯಸುವವರು ಇಲ್ಲೊಮ್ಮೆ ಕಣ್ಣು ಹಾಯಿಸಬಹುದು.

ಸಿದ್ದು ಬರೆದ ಕವಿತೆಗಳು

ಕನ್ನಡದಲ್ಲಿ ಮತ್ತೊಂದು ಹೊಸ ಬ್ಲಾಗು ಶುರುವಾಗಿದೆ. ಈ ಬಾರಿ ತಮ್ಮ ಕವಿತೆಗಳೊಂದಿಗೆ ಬ್ಲಾಗ್ ಬಾಗಿಲು ತೆರೆದಿದ್ದಾರೆ ಸಿದ್ಧು ದೇವರಮನಿ. ತಮ್ಮ ಬಗ್ಗೆ ಹೆಚ್ಚೇನೂ ಹೇಳಿಕೊಳ್ಳದ ಸಿದ್ಧು ಸದ್ಯಕ್ಕಿಲ್ಲಿ ಚೆಂದದೆರಡು ಕವಿತೆಗಳನ್ನು ಹಾಕಿದ್ದಾರೆ. ಒಂದು ‘ಗೆಳೆತನ ಮನುಷ್ಯರನ್ನಾಗಿಸಲಿ...' ಇನ್ನೊಂದು ‘ಮರೆತ ಮೋಡದ ಹುಡುಗಿ...' ಎರಡು ಭಿನ್ನ ನೆಲೆಗಟ್ಟಿನ ಪದ್ಯಗಳು. ಎರಡೂ ಆಪ್ತವಾಗಿವೆ. ಅದರದ್ದೊಂದು ಕೊಂಡಿ ಇಲ್ಲಿದೆ.

ಎಲ್ಲಿಯದೋ ನೋವು
ಫಟಕ್ಕೆ೦ದು ಜಾರಿ.. ನೆನಪ ಸೇರಿ
ಮನ೦ಗಳಕ್ಕೆ ರ೦ಗೋಲಿ ಹಾಕಿ
ಕಿಚ್ಚಚ್ಚಿ, ಜ್ವಾಲೆ ಉಗುಳಿ
ಎದೆಗೆ ಎಗುರಿ ಎದುರಿಸಿ
ಮರೆಯಾಗುವ ಮುನ್ನ ಮಳೆಯಾಗಿ ಬರುವ ಬಾಷೆ ಇತ್ತು
ಮರೆತ ಮೋಡದ ಹುಡುಗಿ
ಮರೆತು ಕು೦ತಾಳೆಲ್ಲಿ?

ನಿಂತ ಅಂತರಗಂಗೆ

ಕನ್ನಡದಲ್ಲಿ ಈಗ ಹೊಸ ಬ್ಲಾಗುಗಳಿಗೆ ಕೊರತೆಯಿಲ್ಲ. ಅಂತೆ ಚೆನ್ನಾಗಿ ಬರುತ್ತಿರುವ ಬ್ಲಾಗುಗಳೂ ಒಂದಿಷ್ಟು ಕಾಲ ನಿಂತು ಬರುವುದುಂಟು. ಡಾ.ಜೆ ಬಾಲಕೃಷ್ಣ ಅವರ ‘ಅಂತರಗಂಗೆ' ಕೂಡ ಅದರಲ್ಲಿ ಒಂದು.

ಅಂತರಗಂಗೆಗೆ ಹೊಕ್ಕರೆ ಅಲ್ಲಿ ಒಂದಿಷ್ಟು ಚಂದನೆ ಕಥೆಗಳು ಸಿಗುತ್ತವೆ. ‘ವಿಚಾರಣೆ, ಬದುಕೆಂದರೆ, ಡೆತ್ ಸರ್ಟಿಫಿಕೇಟ್, ಆತ್ಮಹತ್ಯಾ ಟಿಪ್ಪಣಿಗೊಂದು ಮುನ್ನಡಿ' ಸಣ್ಣಕಥೆಗಳು ಇಲ್ಲಿವೆ. ಲೇಖಕರೂ ಎಂದೋ ಬರೆದು ಮೂಲೆಯಲ್ಲಿಟ್ಟಿದ್ದ ಪ್ರೀತಿ ಪದ್ಯಗಳು, ರಷ್ಯನ್ ಕವಿತೆಯ ಅನುವಾದಗಳಿವೆ. ಮುತ್ತೋಡಿ ಎಂಬ ಅನುಭಾವದ ಅದ್ಭುತ ನೀಲಜಗತ್ತಿನ ಚಿತ್ರಣದ ಜೊತೆಗೆ ಹುಲಿಯ ಜಾಡು ಹರಸಿ ಹೊರಟ ಅನುಭವ ಕಥನವಿದೆ. ಪರಿಸರ ಸಂರಕ್ಷಣೆ ಕುರಿತ ಲೇಖನಗಳಿವೆ. ಇನ್ನಿತರ ಚಿಂತನೆಗಳೂ ಓದಸಿಗುತ್ತವೆ.

ಇವಿಷ್ಟೂ ಬ್ಲಾಗ್ ಬರಹಗಳ ಲಿಂಕುಗಳನ್ನು ಒಟ್ಟಿಗೆ ಹಾಕಿ ಲೇಖಕರು ಸದ್ಯ ಬ್ಲಾಗಿಸುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಅವರು ಮತ್ತೆ ಬ್ಲಾಗಿಸಲು ಮನಸ್ಸು ಮಾಡಲಿ ಎಂಬ ಆಶಯ ನಮ್ಮದು. ಅಲ್ಲಿಯವರೆಗೆ ಅವೆಲ್ಲವನ್ನೂ ಓದುತ್ತಿರಿ.

ಸೈಕಲ್ ಸಾಹಸಿಗರ ಬ್ಲಾಗ್ ಕೃಷಿ

ಗೋವಿಂಧ ಭಟ್ ಎರಡು ದಶಕಗಳ ಹಿಂದೆ ಬರೀ ಸೈಕಲ್ಲಿನಲ್ಲೇ ವಿಶ್ವ ಸುತ್ತಿ ಬಂದ ಕನ್ನಡಿಗ. ದಿನಕ್ಕೆ ಎಂಟು ಕಿ.ಮೀ ಸರಾಸರಿಯಲ್ಲಿ ಹೊರಟು ವರ್ಷಗಳ ಕಾಲ ಸೈಕಲ್ ತುಳಿಯುತ್ತಲೇ ಜಪಾನ್, ರೋಮ್ ಮುಂತಾದ ಕಡೆಯೆಲ್ಲ ತಿರುಗಿ ಬಂದ ಸಾಹಸಿಗ. ತಮ್ಮ ಸೈಕಲ್ ಪ್ರವಾಸದಿಂದ ಇತಿಹಾಸದ ಪುಟ ಸೇರಿದ ವ್ಯಕ್ತಿ. ಹೀಗಿರುವ ಅವರು ಸದ್ಯ ಕನ್ನಡದಲ್ಲಿ ಬ್ಲಾಗಿಸುತ್ತಿದ್ದಾರೆ. ಅದುವೇ ‘ಹಳ್ಳಿಯಿಂದ' ಎಂಬ ಬ್ಲಾಗಿನ ಮೂಲಕ.

ಗೋವಿಂದ ಭಟ್ಟರ ವಿಶ್ವಪರ್ಯಟನೆಯ ರೋಚಕ ಅನುಭವಗಳ ಒಂದಿಷ್ಟು ತುಣುಕುಗಳು ಇಲ್ಲಿವೆ. ಸೈಕಲ್ ತುಳಿಯುತ್ತಲೇ ವಿಶ್ವ ಸುತ್ತುವಾಗಲಿನ ತಮ್ಮ ಅನುಭವಗಳು, ಪತ್ರ ವ್ಯವಹಾರ, ಪರದೇಶದಲ್ಲಿ ರೂಪಾಯಿ ಲೆಕ್ಕಾಚಾರಗಳೆನ್ನೆಲ್ಲ ಹೇಳುತ್ತಾ ಅನಿರೀಕ್ಷಿತವಾಗಿ ಸಿಕ್ಕ ನೋಟು ನಾಣ್ಯಗಳಿಂದಲೇ ತಮ್ಮ ಪ್ರವಾಸ ಮುಂದುವರೆದಿದ್ದನ್ನು ನೆನೆದಿದ್ದಾರೆ. ಫುಕುವೋಕಾ ರಂಥ ಕೃಷಿಯ ಹರಿಕಾರನೊಡನೆ ವಾರಗಟ್ಟಲೆ ಜೊತೆಗಿದ್ದ ತಮ್ಮ ಅನುಭವಗಳನ್ನು ತೆರೆದಿಡುತ್ತಾ ತಾವು ಕಂಡಂತೆ ಫುಕುವೋಕಾರನ್ನು ವಿವರಿಸಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಕೃಷಿ ಮಾಡುತ್ತಿರುವ ಅವರು ಚೀನಾದಿಂದ ಸದಾಸಂ ಅನ್ನುವ ಬೈಕಿನಂಥ ಯಂತ್ರ ತರಿಸಿಕೊಂಡು ಅದರಲ್ಲಿ ಓಡಾಡುತ್ತಿದ್ದಾರೆ. ಜಗತ್ತಿನ ಅನೇಕ ಆಗುಹೋಗುಗಳ ಕುರಿತು ಗೋವಿಂದ ಇಲ್ಲಿ ಬರೆಯುತ್ತಾರೆ. ಇದು ಅವರ ಅನಿಸಿಕೆಗಳನ್ನು ಹಂಚಿಕೊಳ್ಳಲು ಒಂಥರಾ ಟ್ರಯಲ್ ಇಂಜಿನ್ ಅಂತೆ.

ನಿಜಕ್ಕೂ ಒಂದಿಷ್ಟು ಒಳ್ಳೆಯ ವಿಚಾರಪೂರ್ಣ ಅನಿಸಿಕೆ, ಅನುಭವಗಳ ಲೇಖನಗಳು ಇಲ್ಲಿವೆ. ಒಮ್ಮೆ ಓದಿ ಬನ್ನಿ. ಹಾಗೇ ಗೋವಿಂದಭಟ್ಟರ ಸೈಕಲ್ ಯಾತ್ರೆ ಕುರಿತು ೧೯೮೭ರಲ್ಲಿ ಸುಧಾರಲ್ಲಿ ಪ್ರಕಟವಾಗಿರುವ ಲೇಖನವೂ ಇದೆ. ಓದಲು ಮರೆಯದಿರಿ.

ಅಂತೂ ಬಹುಮಾನ ಬಂತು!

ಭಾರೀ ಕುತೂಹಲ ಕೆರಳಿಸಿದ್ದ ಛಂದ ಮುಖಪುಟ ವಿನ್ಯಾಸ ಸ್ಪರ್ಧೆಯ ವಿಜೇತ ಮುಖಪುಟವನ್ನ ಕೊನೆಗೂ ಅಪಾರ ಬ್ಲಾಗಿನಲ್ಲಿ ಪ್ರಕಟಿಸಲಾಗಿದೆ. ಮೈಸೂರಿನ ಕಾವಾದ ಅಂತಿಮವರ್ಷದ ಕಲಾವಿದ್ಯಾರ್ಥಿ ಪ್ರವೀಣ್ ಹೆಗಡೆ ರಚಿಸಿದ ವಿನ್ಯಾಸ ಬಹುಮಾನಕ್ಕೆ ಆಯ್ಕೆಗೊಂಡಿದೆ.

ವಸುದೇಂದ್ರರ ಕಥಾ ಸಂಕಲನಕ್ಕಾಗಿ ಈ ಮುಖಪುಟ ವಿನ್ಯಾಸ ಸರ್ಧೆಯನ್ನ ಆಯೋಜಿಸಲಾಗಿತ್ತು. ಸ್ಪರ್ಧೆಗೆ ಬಂದ ಇನ್ನೂರೈವತ್ತಕ್ಕೂ ಹೆಚ್ಚು ಮುಖಪುಟಗಳಲ್ಲಿ ಅಂತಿಮ ಮೂವತ್ತು ವಿನ್ಯಾಸಗಳನ್ನ ಆರಿಸಿ, ಅದರಲ್ಲಿ ಒಂದನ್ನ ಆರಿಸಿಕೊಡಿ ಅಂತ ಅಪಾರ ಬ್ಲಾಗಿನಲ್ಲಿ ಹಾಕಿದ್ದರು. ಸರಿಯಾಗಿ ಊಹಿಸಿದವರಿಗೆ ಸೂಕ್ತ ಬಹುಮಾನ ಕೊಡುತ್ತೇವೆ ಅಂತ ಆಯ್ಕೆಗೆ ಪ್ರೇರಣೆ ಕೂಡ ನೀಡಿದ್ದರು. ಸಾಕಷ್ಟು ಬ್ಲಾಗಿಗರು ತಮ್ಮ ನೆಚ್ಚಿನ ವಿನ್ಯಾಸಕ್ಕೆ ಓಟು ಮಾಡಿದ್ದರು. ಬಹುತೇಕರಿಗೆ ಆಶ್ಚರ್ಯ ಎನ್ನುವಂತೆ ಪ್ರವೀಣ್ ರ ಹೊಸ ಬಗೆಯ ವಿನ್ಯಾಸಕ್ಕೆ ಬಹುಮಾನ ಸಂದಿದೆ. ಆರನೇ ತರಗತಿ ಓದುತ್ತಿರುವ ವಿನೀಶಾ ಎಂಬ ಹುಡುಗಿ ಕೂಡ ಮುಖಪುಟ ವಿನ್ಯಾಸ ಮಾಡಿದ್ದು, ಅದು ಅಂತಿಮ ಕ್ಷಣದವರೆಗೂ ಬಹುಮಾನಕ್ಕೆ ಪರಿಗಣಿಸಲ್ಪಟ್ಟಿದ್ದು ಸ್ಪರ್ಧೆಯ ವಿಶೇಷ. ಇನ್ನು ಡಿಸೆಂಬರ್ ನಲ್ಲಿ ಕಥಾ ಸಂಕಲನ ಬರುವುದೊಂದೇ ಬಾಕಿ. ಹೆಚ್ಚಿನ ಸುದ್ದಿಗೆ ಅಪಾರ ಬ್ಲಾಗ್ ನೋಡಿ.

ಭಾವಜೀವಿಯ ಹನಿಗವಿತೆಗಳು

ಕವಿಯ ಮನಸ್ಸಿನ ಈ ಭಾವಜೀವಿ ಸದ್ಯ ಹನಿಗವಿತೆ ಬರೆಯುವುದರಲ್ಲಿ ತಲ್ಲೀನ. ನನಗೇಕೋ ಕಥಾಸಾಗರಿಗಿಂತ, ಕಾದಂಬರಿಗಿಂತ ಕಾವ್ಯ ಕನ್ನಿಕೆಯೇ ಇಷ್ಟ ಅನ್ನುವ ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್ ಇಲ್ಲಿ ತಮ್ಮಿಷ್ಟದಂತೆ ಕವಿತೆ ಬರೆಯುತ್ತಾರೆ. ಮೊದಲ ಒಲವಿನ ಚೆಲುವು , ಅವಳಿಲ್ಲದ ನೆನಪುಗಳ ಸೆಳವು, ಕಣ್ಣೊಳಗೆ ಕವಿತೆ ಎಂಬ ಮನೆ ಕಟ್ಟಿದ್ದು, ಪ್ರೀತಿಯ ಬೆಡಗು, ಸಂತಸಗಳ ಮೆರವಣಿಗೆ ಎಲ್ಲವೂ ಇಲ್ಲಿದೆ. ಅದರದ್ದೊಂದು ಹನಿ ಇಲ್ಲಿದೆ.

ನೆರಳು

ನನ್ನೊಂದಿಗಿದ್ದೂ
ನನ್ನದಾಗದ
ಮೋಹಕ
ಮಾಯೆ !!

ಹೃದಯದ ವೀಣೆ ಮೀಟಿದಾಗ

ಹೃದಯದ ವೀಣೆ ಮೀಟಿದಾಗ ಒಮ್ಮೊಮ್ಮೆ ತನ್ ತಾನೇ ಕವಿತೆಯೊಂದು ಹುಟ್ಟುತ್ತದೆ. ಇರುವ ಭಾವವೆಲ್ಲ ಹರಿದುಬಂದು ಅದೇ ನಾಲ್ಕು ಪದವಾಗಿ, ಸಾಲಾಗಿ ಚಂದದೊಂದು ಪದ್ಯವೂ ಆಗುತ್ತದೆ. ಹರ್ಷರ ವಿಷಯದಲ್ಲೂ ಇದೇ ಆಗಿದೆ. ಅವರ ‘ಹೃದಯ ವೀಣೆ ಮೀಟಿದಾಗ ’ ಬ್ಲಾಗೇ ಅದಕ್ಕೆ ಸಾಕ್ಷಿ.

ಮೌನವಾಗಿದ್ದ ಮಾತುಗಳಿಗೆ ಪದ ಪುಂಜದಲ್ಲಿ ಹಿಡಿಯಲು ಮಾಡಿದ ಪ್ರಯತ್ನವೇ ನನ್ನ "ಹೃದಯ ವೀಣೆ ಮೀಟಿದಾಗ". ತುಟಿಯಂಚಿನಲ್ಲಿ ಸುಳಿದಾದಿದ ಅತ್ತ ಮರೆಮಾಚಲು ಆಗದೇ ಇತ್ತ ಹೇಳಲು ಆಗದೇ, ಒತ್ತರಿಸಿ ಬಂದ ಭಾವನೆಗಳು ಲೇಖನಿ ಮೂಲಕ ಕೆಲವು ಸಾಲುಗಳಾಗಿ ಮೂಡಿಸಲು ಪ್ರಯತ್ನಿಸಿದ್ದೇನೆ ಅನ್ನುತ್ತಾರೆ ಹರ್ಷ. ಕಳೆದೆರಡು ವರ್ಷಗಳಿಂದ ಬ್ಲಾಗಿಸುತ್ತಿರುವ ಇವರ ಬ್ಲಾಗಿನಲ್ಲಿ ಹೀಗೆ ಒತ್ತರಿಸಿಬಂದ ಭಾವನೆಗಳ ಗುಚ್ಛವಿದೆ. ಅಮ್ಮನ ನೆನಪಿನಿಂದ ಅವಳ ನೆನಪಿನವರೆಗೆ ದೂರದ ಕನಸಿನೂರಿಗೆ ಪಯಣ ಹೊರಟಿದೆ. ಬೇಸರದ ಸಂಜೆಗಳಲ್ಲಿ ಮಾತು ಮುಗಿಯದೇ, ಹುಚ್ಚು ಹುಡುಗಿಯ ನೆನಪು ಕಾಡುತ್ತಿದೆ. ಒಮ್ಮೆ ನೋಡಿಬನ್ನಿ.

ಕೃಷಿಗೊಂದು ಕನ್ನಡಿ ರೈತಾಪಿ

ಕನ್ನಡದಲ್ಲಿ ಕೃಷಿ ವಿಚಾರಗಳಿಗೇ ಅಂತಲೇ ಮೀಸಲಿರುವ ಬ್ಲಾಗುಗಳು ಅಪರೂಪ. ಕೆಲವೇ ಕೆಲವು ಬ್ಲಾಗುಗಳಷ್ಟೆ ಅದರ ಬಗ್ಗೆ ಬರೆಯುತ್ತಿವೆ. ಹೀಗಿರುವ ಹೊತ್ತಲ್ಲಿ ಕೃಷಿ ಜಗತ್ತಿನ ಸುತ್ತಮುತ್ತಲಿನ ಸಂಗತಿಗಳನ್ನು ತಿಳಿಸಿಕೊಡಲೆಂದೇ ಶುರುವಾಗಿದೆ ‘ರೈತಾಪಿ'.

‘ಇದೊಂದು ಕೃಷಿ ಬಗ್ಗೆ ಆಸಕ್ತಿಯಿದ್ದು, ಹವ್ಯಾಸಿಯಾಗಿ ಕೃಷಿ ಲೇಖನಗಳನ್ನು ಬರೆಯುವವರ ಲೇಖನಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಸಲುವಾಗಿ ಹುಟ್ಟಿಕೊಂಡ ಬ್ಲಾಗ್.' ಎನ್ನುವುದು ರೈತಾಪಿ ನಿರ್ವಾಹಕರ ಮಾತು. ಇದರಲ್ಲಿ ಮಾವೆಂಸ ಪ್ರಸಾದ, ಕಡವಿನಮನೆ ಆರ್. ಶರ್ಮಾ ತಲವಾಟ ನಾಗರಾಜ ಮತ್ತಿಗಾರ ಮೊದಲಾದವರು ಬರೆಯುತ್ತಾರೆ. ಆಸಕ್ತಿ ಇದ್ದರೆ ನೀವು ಬರೆಯಬಹುದು. ಇದು ಕೃಷಿಕರ ಜಗತ್ತಿನ ಸುತ್ತಲಿನ ಪ್ರಪಂಚದ ಬಗ್ಗೆ ಮಾತ್ರಕ್ಕೆ ಸೀಮಿತ. ಈಗಾಗಲೇ ನಾಲ್ಕಾರು ಕೃಷಿ ಸಂಬಂಧಿ ಉಪಯುಕ್ತ ಲೇಖನಗಳು ಇಲ್ಲಿ ಕಾಣಿಸಿಕೊಂಡಿವೆ. ಮುಂದೆಯೂ ಕಾಣಿಸಿಕೊಳ್ಳಲಿವೆ. ನೆಟ್ಟಿನಲ್ಲಿ ಕೃಷಿ ಬಗ್ಗೆ ಹುಡುಕುತ್ತಿರುವವರು, ಅದರ ಬಗ್ಗೆ ತಿಳಿದುಕೊಳ್ಳಬೇಕು ಅಂತ ಆಸಕ್ತಿ ಇರುವವರು ಎಲ್ಲರೂ ರೈತಾಪಿಯನ್ನೊಮ್ಮೆ ನೋಡಿ ಬರಬಹುದು.

ಇರುವ ಮೂವತ್ತರಲ್ಲಿ ಗೆಲುವು ಯಾರಿಗೆ?

ಛಂದ ಪುಸ್ತಕ ಹೊರತರುತ್ತಿರುವ ವಸುದೇಂದ್ರರ ಕಥಾ ಸಂಕಲನಕ್ಕೊಂದು ಚಂದದ ಮುಖಪುಟ ಮಾಡಿಕೊಡಿ ಅಂತ ಸ್ಪರ್ಧೆ ಏರ್ಪಡಿಸಿದ್ದು ನಿಮಗೆ ಗೊತ್ತಿರಬಹುದು. ಅದಕ್ಕೆ ನಾ ಮುಂದು ತಾ ಮುಂದು ಅಂತ ೬೫ ಕಲಾವಿದರು ೨೪೫ ಮುಖಪುಟಗಳನ್ನು ಕಳಿಸಿದ್ದರು. ಅದರಲ್ಲಿ ಹೆಚ್ಚು ಚೆನ್ನಾಗಿರೋ ಮೂವತ್ತು ವಿನ್ಯಾಸಗಳನ್ನ ಆಯ್ದು ಅಪಾರ ಬ್ಲಾಗಿನಲ್ಲಿ ಹಾಕಿದ್ದಾರೆ. ಈ ಮೂವತ್ತರಲ್ಲಿ ಒಂದಕ್ಕೆ ಮುಂದಿನ ವಾರ ಬಹುಮಾನ ನೀಡ್ತಾರಂತೆ. ಬಹುಮಾನ ಕೇವಲ ಅವರಿಗೆ ಮಾತ್ರವಲ್ಲ, ನಮಗೂ ಇದೆ. ನಾವು ಈ ಮೂವತ್ತು ಪುಸ್ತಕದೊಳಗೆ ಯಾವುದು ಬೆಸ್ಟ್ ಅಂತ ಹೇಳಿ, ಅದು ತೀರ್ಪುಗಾರರ ತೀರ್ಪಿನೊಂದಿಗೆ ತಾಳೆ ಆದ್ರೆ ಒಂದು ಆಕರ್ಷಕ ಬಹುಮಾನ ದಕ್ಕುತ್ತೆ. ಈಗಾಗಲೇ ಸಾಕಷ್ಟು ಜನ ತಮ್ಮ ಅಭಿಪ್ರಾಯ ದಾಖಲಿಸ್ತಾ ಇದ್ದಾರೆ. ನೀವಿನ್ನೂ ನೋಡಿಲ್ಲವಾದರೆ ಕೂಡಲೇ ಹೊರಡಿ. ಇರುವ ಮೂವತ್ತರಲ್ಲಿ ಗೆಲ್ಲುವವರು ಯಾರು ಅಂತ ಊಹಿಸಿ. ಶ್ರಮವಿಲ್ಲದೆ ಪುಕ್ಕಟೆ ಬಹುಮಾನ ಗೆಲ್ಲಿ.

ಹೇಮಾಂತರಂಗದ ಮಾತುಗಳು

ಈ ಹುಡುಗಿಯರು ಯಾಕೆ ಹೀಗೆ? ಹಾಗಂತ ಈ ಹುಡುಗಿಗೆ ಎಷ್ಟೋ ಬಾರಿ ಅನಿಸಿದ್ದಿದೆ. ಅದಕ್ಕೆ ಕಾರಣವೂ ಇದೆ. ಗೆಳೆತಿಯರ ಕಷ್ಟಗಳಿಗೆ ಮರುಗುತ್ತಾ ಸಲಹೆ ಕೊಟ್ಟವರು, ಇನ್ನೊಂದಿಷ್ಟು ದಿನ ಬಿಟ್ಟು ನೋಡಿದರೆ ಅವರೆಲ್ಲ ಏನೂ ಆಗಿಲ್ಲವೆಂಬಂತೆ ಇದ್ದದ್ದರಲ್ಲಿ ಅನುಸರಿಸಿಕೊಂಡು ಹೋಗುವ ಬುದ್ಧಿ ಕಂಡು ಹೀಗೆ ಅನಿಸಲು ಶುರುವಾಗಿದೆ.

ಇದು ಸಿಟಿ ಹುಡುಗಿಯೊಬ್ಬಳ ಮನದ ಮಾತುಗಳು. ಇಲ್ಲಿ ಹೇಮಾ ತಮ್ಮ ಅಂತರಂಗದ ಅನಿಸಿಕೆಗಳನ್ನು ಬರೆದಿಡಲು ಶುರುಮಾಡಿದ್ದಾರೆ. ‘ಬರವಣಿಗೆ ನನ್ನ ಬರಹಗಳನ್ನು ಹರಿಬಿಡಲು ನಾನು ಹುಡುಕಿಕೊಂಡ ದಾರಿಯಷ್ಟೆ. ಭೋರ್ಗರೆವ ಭಾವಗಳಿಗೆ ಅಕ್ಷರಗಳ ಬೊಗಸೆಯೊಡ್ಡಿ ಬ್ಲಾಗಿನ ಒಡಲಲಿ ತುಂಬುತ್ತಿರುವೆ' ಎನ್ನುವುದು ಹೇಮಾಂತರಂಗದ ಮಾತುಗಳು. ಸದ್ಯಕ್ಕಿಲ್ಲಿ ಸಿದ್ಧಾಂತಕ್ಕೆ ಕಟ್ಟಿಬಿದ್ದ ಹೆಣ್ಣೊಬ್ಬಳ ಕಥೆ ಇದೆ. ಓದಿಬನ್ನಿ.

ಅತ್ರಿ ಬುಕ್ ಸೆಂಟರ್

ಮಂಗಳೂರಿನ ಪ್ರಸಿದ್ಧ ಪುಸ್ತಕದಂಗಡಿ ಅತ್ರಿ ಬುಕ್ ಸೆಂಟರ್ ಈಗ ಬ್ಲಾಗಿನಂಗಳಕ್ಕೂ ವಿಸ್ತರಿಸಿಕೊಂಡಿದೆ. ವಿದ್ಯಾರ್ಥಿ ದೆಸೆಯಲ್ಲಿ ಒಂದು ಹವ್ಯಾಸವಾಗಿ ತೊಡಗಿದ ಪುಸ್ತಕ ವ್ಯಾಪಾರವನ್ನೇ ವೃತ್ತಿಯನ್ನಾಗಿ ಕುದುರಿಸಿಕೊಂಡ ಜಿ. ಎನ್. ಅಶೋಕವರ್ಧನ ಅತ್ರಿ ಬುಕ್ ಸೆಂಟರ್ ತೆರೆದವರು. ಈಗ ಅದರ ಹೆಸರಿನಲ್ಲೇ ಬ್ಲಾಗನ್ನೂ ತೆರೆದಿದ್ದಾರೆ. ಅಲ್ಲಿ ಪುಸ್ತಕ ವ್ಯಾಪಾರದಲ್ಲಿನ ತಮ್ಮ ಅನುಭವಗಳನ್ನು ಬಿಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಹೊಸದಾಗಿ ಬಿಡುಗಡೆಯಾಗುವ ಪುಸ್ತಕಗಳ ಸುದ್ದಿ ಸಮಾಚಾರ, ಬಿಳಿಹುಲಿಗೆ ಬಣ್ಣ ಬಂದದ್ದು, ಗ್ರಂಥಾಲಯ ಸಮ್ಮೇಳನದ ನೇಪಥ್ಯದ ಕಥೆ-ವ್ಯಥೆ ಎಲ್ಲವನ್ನೂ ಬರೆದಿಟ್ಟಿದ್ದಾರೆ. ಪುಸ್ತಕ ನೀತಿಯ ಬಗ್ಗೆ ಮಾತಾಡುತ್ತಾ, ಗ್ರಂಥಾಲಯದ ಆರೋಗ್ಯಕ್ಕೊಂದಿಷ್ಟು ಕಷಾಯದಂಥ ಸಲಹೆ ನೀಡಿದ್ದಾರೆ.

ಸದ್ಯ ತಮ್ಮ ತಂದೆ ಜಿ.ಟಿ.ನಾರಾಯಣ ರಾವ್ ರ ದೇಹದಾನದ ವಿಷಯವನ್ನಿಟ್ಟುಕೊಂಡು ಸಣ್ಣದೊಂದು ನೆನಪಿನ ಲೇಖನ ಬರೆದಿದ್ದಾರೆ. ಇದೆಲ್ಲವನ್ನೂ ಓದಬೇಕಿದ್ದವರು ಬುಕ್ ಸೆಂಟರ್ ಗೆ ಹೋಗಿಬನ್ನಿ.

ಹಾಗೇ ಸುಮ್ಮನೆ ಬರೆದದ್ದು...

‘ಭಾವನೆಗಳು ಮನಸ್ಸಿನ ಕಟ್ಟೆಯೊಡೆದು ಅಕ್ಷರ ರೂಪ ಪಡೆದಾಗ ಹುಟ್ಟಿದ್ದೇ 'ಹಾಗೇ ಸುಮ್ಮನೆ'. ಭಾವನೆಗಳು ಬಾಲಿಶವೆನ್ನಿಸುವ ತನಕ ಜೀವಂತಿಕೆಯಿಂದಿರುತ್ತೆ... ನಂತರ.... ಮತ್ತೆ ಭಾವದೊಡಲಲ್ಲಿ ಹುದುಗಿ ಹೋಗುತ್ತೆ...' ಹೀಗಂತ ಸುಮ್ಮನೆ ಬ್ಲಾಗಿಸುತ್ತಿರುದ್ದಾರೆ ಎಸ್ ಕೆ ಹೆಗ್ಡೆ. ಸದ್ಯಕ್ಕಿಲ್ಲಿ ‘ಮಾತು ಮರೆತವನ ಸ್ವಗತ' ನಡೆಯುತ್ತಿದೆ. ಎದೆಯೊಳಗಿನ ಭಾವವನ್ನ ಬಚ್ಚಿಟ್ಟುಕೊಂಡೇ ಬಂದ ಹುಡುಗ ಹುಡುಗಿಯ ಮದುವೆ ಕರೆಯೋಲೆ ಕಂಡು ಕಂಗಾಲಾಗಿದ್ದಾನೆ. ಹೊಳೆಯುತ್ತಿದ್ದ 'ಗಣೇಶ'ನ ಆಕರ್ಷಕ ಚಿತ್ರದ ಕೆಳಗೆ ಅಚ್ಚಾಗಿದ್ದ ಅವಳ ಮುದ್ದಾದ ಹೆಸರಿನ ಮೇಲೆ ಬಿದ್ದ ಇವನ ಕಂಬನಿಯೂ ಹೊಳೆಯಲಾರಂಭಿಸಿದೆ...

ಅಂತೆಯೇ, ‘ಬೋಗಿಯೊಳಗಿನ ಕಲರವ... ' , ‘"ಮೌನ ಮಾತನಾಡುವುದಿಲ್ಲ..." , ‘ಹುಚ್ಚು ಕೋಡಿ ಮನಸ್ಸು... ' ಮುಂತಾದ ಆಪ್ತ ನಿರೂಪಣೆಯ ಬರಹಗಳು ಇಲ್ಲಿವೆ. ಒಮ್ಮೆ ಓದಿ ಬನ್ನಿ.

ನಾವಡರ ಪಾಕಪ್ರಯೋಗ

ಇಷ್ಟು ದಿನ ಚೆಂಡೆಮದ್ದಳೆ ಮೂಲಕ ಸದ್ದುಮಾಡುತ್ತಿದ್ದ ಅರವಿಂದ ನಾವಡರು ತಿಂಗಳಿಂದ ನಳಪಾಕದ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅಡಿಗೆ ಮಾಡೋದು ಅವರಿಗೆ ಹೊಸತೇನಲ್ಲ. ಅದನ್ನ ಚೆಂಡೆಮದ್ದಳೆಯ ಬ್ರಹ್ಮಚಾರಿಯ ಪುಟಗಳಲ್ಲೇ ಓದಬಹುದು. ಹಾಗೇ ಪ್ರಯೋಗಗಳಿಂದ ಕಲಿತ ಒಂದೊಂದು ಅಡಿಗೆಯನ್ನೂ ಪಾಕಚಂದ್ರಿಕೆ ಅನ್ನುವ ಬ್ಲಾಗಿನ ಮೂಲಕ ಅಕ್ಷರಕ್ಕಿಳಿಸಿಕೊಡುತ್ತಿದ್ದಾರೆ. ಕಾಯಿರಸ, ಹಿರೇಕಾಯಿ ಸಿಪ್ಪೆ ಪಲ್ಯ, ಕಲ್ಲಂಗಡಿ ಸಿಪ್ಪೆ ಪಲ್ಯ, ಅವಲಕ್ಕಿ ಬಿಸಿಬೇಳೆ ಬಾತ್...ಹೀಗೆ ಭಿನ್ನ ರುಚಿಗಳನ್ನ ಮಾಡುವ ವಿಧಾನದ ವಿವರಣೆಗಳು ಇಲ್ಲಿವೆ.

ಸದ್ಯ ಪಾಕಚಂದ್ರಿಕೆಯಲ್ಲಿ ಇಡ್ಲಿವಡೆಯ ಸುವಾಸನೆ ಹೊಮ್ಮುತ್ತಿದೆ. ಮುಂದಿನ ಸಂಚಿಕೆಯಲ್ಲಿ ಸಾಂಬಾರ್ ಮಾಡೋದನ್ನ ಹೇಳಿ ಕೊಡ್ತಾರಂತೆ. ಮೆತ್ತನೆ ಇಡ್ಲಿ ಮಾಡೋದು ಹೇಗಪ್ಪಾ ಅನ್ನುವವರು ಈ ಪಾಠವನ್ನೊಮ್ಮೆ ಓದಿ ಪ್ರಯೋಗಿಸಬಹುದು.

ಈಶಾನ್ಯೆಯ ಜೀವಜಾಲ

ನಿಮಗೆ ಕೆ ಪಿ ಈಶಾನ್ಯೆ ಗೊತ್ತಲ್ಲ. ಪೂರ್ಣಚಂದ್ರತೇಜಸ್ವಿಯವರ ಮಗಳು. ಅವರು ಕಳೆದೊಂದು ತಿಂಗಳಿನಿಂದ ಬ್ಲಾಗಿಸಲು ಶುರುಮಾಡಿದ್ದಾರೆ ‘ಜೀವಜಾಲ' ದ ಹೆಸರಿನಲ್ಲಿ. ಕಳೆದ ಮೇನಲ್ಲಿ ಹದಿನೆಂಟು ದಿನ ಕಾಲ್ನಡಿಗೆಯಲ್ಲಿ ಮೌಂಟ್ ಎವರೆಸ್ಟ್ ಹತ್ತಿ ಬಂದವರು ಈಗ ಮೌಂಟ್ ಎವರೆಸ್ಟ್ ಕ್ಯಾಂಪಿನ ಅನುಭವಗಳ ಬಗ್ಗೆ ವಿವರಿಸುವ ಯತ್ನದಲ್ಲಿದ್ದಾರೆ. ಗೆಳೆತಿಯ ಕಡೆಯಿಂದ ಕ್ಯಾಂಪ್ ನಲ್ಲಿ ತನ್ನ ಸೀಟು ಕಾದಿರಿಸಿಕೊಂಡ ನಂತರ ಬಾಸ್ ಕಡೆಯಿಂದ ರಜೆ ದೊರಕಿದ್ದಂತೂ ಅವರಿಗೆ ಹಿಮಾಲಯದ ಒಂದು ಮೆಟ್ಟಿಲನ್ನೇ ಏರಿದಷ್ಟು ಖುಷಿ ತಂದಿದೆ. ಈಗ ಟ್ರೆಕ್ಕಿಂಗ್ ಪೂರ್ವಭ್ಯಾಸವಾಗಿ ರಿಂಗ್ ರೋಡಿನ ಫುಟ್ ಪಾತಿನ ಮೇಲೆ ಬಿರುಬಿರನೆ ನಡೆಯುವ ಯತ್ನದಲ್ಲಿದ್ದಾರೆ. ಮುಂದಿನ ಕಂತುಗಳಲ್ಲಿ ಹಿಮಾಲಯ ಹತ್ತುವ ಅವರ ಸಾಹಸಗಾಥೆಯ ಕಥೆ ಮೂಡಿಬರಲಿದೆ. ಇದನ್ನೆಲ್ಲ ಓದಬೇಕಿದ್ದರು ಜೀವಜಾಲದಲ್ಲಿ ಈಗಲೇ ತಮ್ಮ ಬ್ಲಾಗ್ ಪ್ರತಿಗಳನ್ನು ಕಾಯ್ದಿರಿಸಿಕೊಳ್ಳಿ.

ಪ್ರಿಯಾರ ಪುಟ್ಟು ಪ್ರೀತಿಯ ನೆನಪು

‘ಆಗಿನ್ನೂ ಹನ್ನೆರಡು ವರ್ಷ. ಮನಸ್ಸು ಮಾಯಾಜಿಂಕೆಯ ಬೆನ್ನು ಹತ್ತಿತ್ತು.... ನಾನು ಶಾಲೆಗೆ ಹೋಗುತ್ತಿದ್ದ ವಿಷ್ಣುಮೂರ್ತಿ ಬಸ್ಸಿನ ಕ್ಲೀನರ್ ಸಾಧಿಕ್ ಅಂತ ಅರೆಗಡ್ಡ ಬಿಟ್ಟ ಬಿಳಿಯ ಚಂದದ ಹುಡುಗ.ಬಸ್ ಇನ್ನೇನು ಹೊರಡುತ್ತದೆ ಅನ್ನುವಾಗ, ಓಡಿಹೋಗಿ ಬಸ್‌ ಹತ್ತುತ್ತಿದ್ದೆ. ಸಾದಿಕ್‌ ಬಾಗಿಲ ಬದಿ ನಿಂತಿರುತ್ತಿದ್ದ. ನಾನು ಹತ್ತಿದ ಕೂಡಲೇ ಕಿವಿ ಹರಿದುಹೋಗುವಂತೆ ವಿಷಲ್ ಹೊಡೆಯುತ್ತಿದ್ದ. ಬಾಗಿಲ ಬಳಿ ಅವನನ್ನು ದಾಟಿ ಬರುವಾಗ ಅದೇಕೋ ಒಂಥರಾ ಅನಿಸುತ್ತಿತ್ತು. ಮತ್ತೆ ಕಿಟಕಿ ಹತ್ತಿರ ಕೂತು ಆಗಾಗ ಅವನ ಮುಖ ನೋಡುತ್ತಿದ್ದೆ. ಆ ಪುಣ್ಯಾತ್ಮ ಬಾಗಿಲ ಬಳಿ ನಿಂತು ಬಸ್ಸಿನ ಗಾಳಿಗೆ ಮುಖವೊಡ್ಡಿ ಚೊಂಪೆ ಕೂದಲನ್ನು ಹಾರಿಸುತ್ತಾ ಸ್ಟೈಲ್ ಹೊಡೆಯುತ್ತಿದ್ದ. ಆತ ನನ್ನತ್ತ ನೋಡುತ್ತಿಲ್ಲ, ಅನ್ನುವುದು ತಿಳಿದು ಒಳಗೊಳಗೇ ಬೇಜಾರಾಗಿ, ‘ನಾನೆಷ್ಟು ಪಾಪ' ಅಂತ ನನ್ನ ಬಗೆಗೇ ಮರುಕಪಡುತ್ತಿದ್ದೆ...'

ಮೊನ್ನೆ ನೀನಾಸಂ ಶಿಬಿರ ಅರ್ಧಕ್ಕೆ ಬಿಟ್ಟು ಊರಿಗೆ ಹೊರಟ ಪ್ರಿಯಾ ಅಲ್ಲಿ ಅದೇ ಹುಡುಗನನ್ನು ಕಂಡು ಹೀಗೆ ಹಳೆಯ ನೆನಪಿಗೆ ಜಾರಿದ್ದಾರೆ. ಮತ್ತೆ ಸಿಕ್ಕ ಹುಡುಗ ಎಂದಿನಂತೆ ಗಾಳಿಗೆ ಚೊಂಪೆಗೂದಲು ಹಾರಿಸುತ್ತಾ ಇವರತ್ತ ಕಣ್ಣು ಮಿಟುಕಿಸಿಯೇ ಬಿಟ್ಟಿದ್ದಾನೆ! ಅಕ್ಷರ ಹೂವಿನ ಹೆಸರಲ್ಲಿ ಬ್ಲಾಗಿಸುವ ಪ್ರಿಯಾ ಕೆರ್ವಾಶೆ ಇಂತಹದ್ದೇ ಬೆಚ್ಚನೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಮಂಜಿನ ಹಾದಿಯಲ್ಲಿ ಬೆತ್ತಲೆಯ ಜೀವ ಕಂಡಿದ್ದು, ಅಪ್ಪ ತೋಟ ಮಾರಲು ಮುಂದಾಗಿದ್ದು, ಅಮ್ಮ ಅಮ್ಮನಾಗುವ ಮೊದಲು... ಮುಂತಾದರ ಬಗ್ಗೆ ಬರೆದ ಲೇಖನಗಳು ಇಲ್ಲಿವೆ.

ವಿಶ್ವ ಪರಂಪರೆಯ ದರ್ಶನ

ಕನ್ನಡಪ್ರಭದ ಪತ್ರಕರ್ತ ಅಲೆಮಾರಿ ಸದ್ಯ ವಿಶ್ವ ಪರ್ಯಟನೆಯಲ್ಲಿದ್ದಾರೆ. ಜಗತ್ತಿನ ಅನೇಕ ಕೌತುಕಗಳು, ನಾಗರಿಕತೆಗಳ ದರ್ಶನ ಮಾಡಿಸುವ ಸಲುವಾಗಿ ವಿಶ್ವಪರಂಪರೆ ಬ್ಲಾಗ್ ತೆರೆದಿದ್ದಾರೆ. ಐತಿಹಾಸಿಕ ನಗರ ಮಕಾವೊನಿಂದ ಹೊರಟವರು ಬೆಕಾ ಕಣಿವೆ ಸುತ್ತಿ, ದೊರೆಗಳ ಊರು ದಾಟಿ, ಕೀನ್ಯಾದ ಹವಳದ ಮನೆಗಳನ್ನು ಕಂಡು, ಪುರ್ನುಲುಲು , ಫ್ರೇಸರ್ ,ಕ್ವೀನ್ಸ್ ಲ್ಯಾಂಡ್ ಗಳನ್ನೆಲ್ಲ ಬಳಸುತ್ತಾ ಸದ್ಯ ಪೆಂಗ್ವಿನ್ ಗಳ ಸ್ವರ್ಗ ಮಾಕ್ವೈರ್ ದ್ವೀಪಕ್ಕೆ ಬಂದು ನಿಂತಿದ್ದಾರೆ.

ವಿಶ್ವದ ವಿವಿಧ ಐತಿಹಾಸಿಕ ಸ್ಥಳಗಳ ಕಿರು ಪರಿಚಯ ಇಲ್ಲಿದೆ.

ರೇವನ್ನರ ಒಲವು

ಕವಿ ಮಾಡಿದ ಹುಡುಗಿ ಅಂತ ತಮ್ಮನ್ನ ಗುರುತಿಸಿಕೊಳ್ಳುವ ರೇವನ್ನರ ಒಲವೇ ಈ ದಿನದ ಬ್ಲಾಗ್.

ಹುಡುಗಿಯ ದಿಸೆಯಿಂದಲೇ ಇವರು ಕವಿಯಾಗಿರುವುದರಿಂದ ಇಲ್ಲಿರುವುದೆಲ್ಲ ಒಲವಿನ ಕವಿತೆಗಳೇ ಅಂತ ಹೇಳಬೇಕಾದ್ದಿಲ್ಲ. ನೀ ನನ್ನ ಮರೆತ ಕ್ಷಣಗಳು ಇಲ್ಲಿ ಸಾಲಾಗುತ್ತವೆ ಅಂತನ್ನುವ ರೇವನ್ನರ ಪ್ರತಿ ಸಾಲಿನಲ್ಲೂ ನಲ್ಲೆಯ ನೆನಪು ಕಾಡುವಂತಿದೆ. ಹಾಗೆ ಪ್ರೀತಿ-ಅದರ ರೀತಿಯ ಬಗೆಗೆ ಬರೆದ ಒಂದಿಷ್ಟು ಕವಿತೆಗಳು ಇಲ್ಲಿವೆ. ಒಮ್ಮೆ ಓದಿ ಬನ್ನಿ.

ಸೋಮುವಿನ ಸಾಲುಕಥೆಗಳು

ಕನ್ನಡ ಬ್ಲಾಗ್ ಲೋಕದ ಲವರ್ ಬಾಯ್ ಸೋಮು ಪ್ರೇಮಪತ್ರಗಳನ್ನ ಬರೆಯುವಷ್ಟೆ ತುಡಿತದಲ್ಲಿ ಸಣ್ಣಕಥೆಗಳನ್ನೂ ಬರೆಯಬಲ್ಲರು. ಅದರಲ್ಲೂ ಒಂದೆರೆಡು ಸಾಲಿನಲ್ಲೇ ಕಥೆಯೊಂದನ್ನ ಹೇಳಬಲ್ಲ ಹುಡುಗ. ಸದ್ಯ ನವಿಲಗರಿಯಲ್ಲಿ ಅಂತದ್ದೇ ಒಂದೆರಡು ಸಾಲಿನ ಕತೆಗಳ ಸದ್ದಾಗುತ್ತಿದೆ. ‘ತಪ್ಪು ಯಾರದ್ದು ಅಂತ ಜಗಳವಾಡಿದರು.ಕೊನೆಗೂ ಉತ್ತರ ಸಿಗದೆ ಇಬ್ಬರು ತಬ್ಬಿಕೊಂಡರು.' ಇದು ಅಂತಹದ್ದೇ ಕಥೆಯೊಂದರ ಸ್ಯಾಂಪಲ್ ಅಷ್ಟೇ. ಪೂರ್ತಿ ಸಾಲು ಕಥೆಗಳನ್ನೋದುವ ಕುತೂಹಲವಿದ್ದವರು ನವಿಲುಗರಿಯತ್ತ ಮುಖಮಾಡಿ ಹೊರಡಿ.

ಪ್ರಕೃತಿಯಲ್ಲಿ ಷೇರುಪೇಟೆ ಕಥೆ

ಊರಲ್ಲಿನ ಕೋತಿಗಳಿಗೂ ಷೇರುಪೇಟೆಗೂ ಏನು ಸಂಬಂಧ? ಗೊತ್ತಾಗಬೇಕಾದವರು ರಾಜೇಂದ್ರಭಟ್ಟರ ಈ ಕಥೆ ಓದಿ. ದೀಪಾವಳಿಗೂ ಮೊದಲೇ ಷೇರು ಮಾರುಕಟ್ಟೆಗಳು ಜನರನ್ನ ದಿವಾಳಿಯಾಗಿಸಿದ್ದರಿಂದ ಶುರುವಿಟ್ಟು, ಕೋತಿ ಕೊಳ್ಳುವವನ ಕಥೆ ಹೇಳಿ, ಅದಕ್ಕೂ ಷೇರು ಮಾರುಕಟ್ಟೆಗಳ ವ್ಯವಹಾರಕ್ಕೂ ಇರುವ ಸಾಮ್ಯತೆಯನ್ನ ಸೂಚ್ಯವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.

ರಾಜೇಂದ್ರರ ಬ್ಲಾಗಿನಲ್ಲಿ ಇನ್ನೂ ಒಂದಿಷ್ಟು ಮಿನಿ, ಮೈಕ್ರೋ ಕಥೆಗಳಿವೆ. ಕನಸು, ಮನಸಿನ ಸ್ವಗತ ಇತ್ಯಾದಿಗಳೂ ಇವೆ. ಒಮ್ಮೆ ಓದಿ ಬನ್ನಿ.

ಅನಿವಾಸಿ ಪರೀಕ್ಷೆಯಲ್ಲಿ ಭೈರಪ್ಪ ಫೇಲ್

ಇತ್ತೀಚೆಗಷ್ಟೆ ಕನ್ನಡದ ಪತ್ರಿಕೆಯೊಂದರಲ್ಲಿ ಭೈರಪ್ಪರವರು ಮತಾಂತರದ ಬಗ್ಗೆ ಬರೆದ ಲೇಖನ ನೀವೆಲ್ಲ ಓದಿರಬಹುದು. ಆಸ್ಟ್ರೇಲಿಯಾದಲ್ಲಿರುವ ಅನಿವಾಸಿ ಸುದರ್ಶನ್ ಕೂಡ ಆ ಲೇಖನ ಓದಿದ್ದಾರೆ. ಅದರೊಳಗೆ ಭೈರಪ್ಪನವರು ನೀಡಿದ್ದ ಅಂಕಿಅಂಶಗಳ ಬಗ್ಗೆ ಕುತೂಹಲ ಮೂಡಿದ್ದೇ, ಅದೆಲ್ಲದರ ಮೂಲ ಹುಡುಕಿ ಹೋದ ಸುದರ್ಶನ್ ದಂಗಾಗಿ ಹೋಗಿದ್ದಾರೆ. ಭೈರಪ್ಪ ನೀಡಿದ ಲೆಕ್ಕಾಚಾರಗಳೆಲ್ಲ ಎಷ್ಟು ತಪ್ಪಾಗಿವೆ ನೋಡಿ ಅಂತ ಒಂದಿಷ್ಟು ತಪ್ಪನ್ನು ಹೆಕ್ಕಿ ಕೊಟ್ಟಿದ್ದಾರೆ. ಮಿಕ್ಕಿದ್ದು ನೀವೇ ನೋಡಿ ಅಂತ ಸಂಬಂಧಪಟ್ಟ ಲಿಂಕು ಬಿಟ್ಟಿದ್ದಾರೆ. ಭೈರಪ್ಪನವರ ಲೇಖನ ಮಕ್ಕಳ ಕೈಗೆ ಸಿಕ್ಕದ ಹಾಗೆ ನೋಡಿಕೊಳ್ಳಿ ಅಂತ ಸಣ್ಣದೊಂದು ಎಚ್ಚರಿಕೆ ನೀಡಿದ್ದಾರೆ. ಸುದರ್ಶನ್ ಲೆಕ್ಕಾಚಾರ ಎಷ್ಟು ಸರಿ ಅಂತ ನಾವೇ ಪರೀಕ್ಷಿಸಿಕೊಳ್ಳಬೇಕು.

ಕಾಮರೂಪಿಯ ಕಥೆ

ಸುಮಾರು ಆರು ದಶಕದ ಹಿಂದಿನದ್ದು. ಪೋಲಿಯೋ ಪೀಡಿತ ಒಬ್ಬ ಕುಂಟು ಹುಡುಗ. ಆತನ ಕಾಲು ಸರಿಹೋಗಲೆಂದು ಮೂಢನಂಬಿಕೆಗಳಿಗೆ ಮೊರೆಹೋದ ಮನೆಯವರು, ಒಂದು ದಿನ ಅವನನ್ನಿಡಿದು ಮೈಗೆಲ್ಲ ಬರೆ ಹಾಕಿ ಮಲಗಿಸುತ್ತಾರೆ. ಉರಿ ಆತನನ್ನು ಸುಡುತ್ತದೆ. ಹೇಗೋ ಹುಡುಗ ಉಳಿದುಕೊಳ್ಳುತ್ತಾನೆ. ಕುಂಟತನವೂ. ಜೊತೆಗೆ ಸುಟ್ಟಗಾಯಗಳ ಗುರುತು. ಈಗ ಹುಡುಗ ಬೆಳೆದು ದೊಡ್ಡವನಾಗಿ, ವಯಸ್ಸೂ ಮಾಗಿದೆ. ಆದರೂ ಗಾಯಗಳ ನೆನಪು ಇನ್ನೂ ಕೊರೆಯುತ್ತಿದೆ. ಆದದ್ದೆಲ್ಲ ಯಾವಗಲೂ ಒಳಿತೇ ಆಗುವುದಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ.

ಇದೊಂದು ಕಥೆಯೋ ಅಥವಾ ಘಟನೆಯೋ? ಲೇಖಕರೇ ಹೇಳುವಂತೆ ಇದು ಎರಡೂ ಹೌದು. ತಮ್ಮ ಅನುಭವವನ್ನೇ ಬಳಸಿ ಬರೆದಂಥ ಸಾಲುಗಳು. ಇವರು ನಾಡಿನ ಖ್ಯಾತ ಪತ್ರಕರ್ತ ಎಂ ಎಸ್ ಪ್ರಭಾಕರ್ ಅಲಿಯಾಸ್ ಕನ್ನಡದ ಹೆಸರಾಂತ ಬರಹಗಾರ ಕಾಮರೂಪಿ. ಮುಂದಿನದ್ದೆಲ್ಲ ಅವರ ಬ್ಲಾಗಿನಲ್ಲಿದೆ.

ಚುಂ ಬನವಾಸಿ

ಎಡಶಾಲಿಗಳ ಪರವೂ ಅಲ್ಲದ, ಬಲಶಾಲಿಗಳ ಪರವೂ ಅಲ್ಲದ ನಡುವಿನ ಕನ್ನಡ ಚಿಂತನೆಯನ್ನು ಮಾಡುತ್ತಾ ಬಂದವರು ಪವ್ವಿ. ಕಳೆದ ಮೂರು ವರ್ಷಗಳಿಂದ ಬ್ಲಾಗಿಸುತ್ತಿರುವ ಇವರು ಕನ್ನಡ ನಾಡು ನುಡಿ ಕುರಿತ ತಮ್ಮ ಚಿಂತನೆ ಆಲೋಚನೆಗಳನ್ನೆಲ್ಲ ಒಂದೆಡೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ವಾಯ್ಸ್ ಆಫ್ ಇಂಡಿಯಾ ಅನ್ನೋ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕನ್ನಡತಿ ಕನ್ನಡವನ್ನು ಹೇಗೆಲ್ಲ ಬಳಸಿಕೊಳ್ಳುತ್ತಿದಾಳೆ ಅಂತ ವಿವರಿಸುತ್ತಾ ಹಿಂಗ್ಯಾಕೆ ಆಡ್ತಿ ಕನ್ನಡತಿ ಅಂತ ಪ್ರಶ್ನಿಸಿದ್ದಾರೆ. ಹುಡುಗಾಟದ ಹುಡುಗಿಯ ಬ್ಲಾಗ್ ಹುಡುಕಾಟವನ್ನು ಪರಿಚಯಿಸಿದ್ದಾರೆ. ಉಪೇಂದ್ರರ ಬುದ್ಧಿವಂತ ಚಿತ್ರ ನೋಡಿ ಬಂದವರು ಬುದ್ಧಿವಂತನ ವರಸೆಗಳನ್ನು ಪಟ್ಟಿಮಾಡಿದ್ದಾರೆ. ಇಂತಹದ್ದೇ ಹತ್ತು ಹಲವು ಲೇಖನಗಳು ಇಲ್ಲಿವೆ.

ಸಾಮ್ರಾಟರ ಪುನರ್ಜನ್ಮ

ಬ್ಲಾಗು, ಅಂತರ್ಜಾಲ, ಬರವಣಿಗೆ ಎಲ್ಲವನ್ನೂ ವಿಪರೀತ ಹಚ್ಚಿಕೊಂಡು, ಕಡೆಗೆ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದ ನಗೆ ಸಾಮ್ರಾಟರಿಗೆ ಪುನರ್ಜನ್ಮವಾಗಿದೆ. ಮತ್ತೆ ಬ್ಲಾಗಿನ ಬಾಗಿಲು ತೆರೆದು ಗಹಗಹಿಸಿ ನಗುತ್ತಿದ್ದಾರೆ. ಅದನ್ನ ಅವರ ಮಾತಿನಲ್ಲೇ ಕೇಳಿ. ‘ನಗೆ ಸಾಮ್ರಾಟರು ತಮ್ಮ ಜೀವನದಿಂದ ಬೇಸತ್ತು ಅತ್ಯಂತ ಗಾಢವಾದ ಆಲೋಚನೆಗಳಿಂದ ತುಂಬಿದ ನೋಟ್ ಒಂದನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವರದಿಯನ್ನು ನೀವು ಓದಿದ್ದೀರಿ. ಆದರೆ ಅನಂತರ ಏನಾಯಿತು ಎಂಬುದು ತೀರಾ ಕುತೂಹಲಕರ. ಆತ್ಮಹತ್ಯೆ ಮಾಡಿಕೊಂಡ ಸಾಮ್ರಾಟರಿಗೆ ಮುಂದೇನಾಯಿತು ಎಂಬುದು ಬಹುದೊಡ್ಡ ಥ್ರಿಲ್ಲರ್ ಸಿನೆಮಾದ ಪ್ಲಾಟ್ ಇದ್ದ ಹಾಗಿದೆ. ಆದರೆ ಈ ಹೊತ್ತಿನ ತುರ್ತಿನ ಮಾಹಿತಿಯೆಂದರೆ ಸಾಮ್ರಾಟರು ವಾಪಸ್ಸು ಬದುಕಿ ಬಂದಿದ್ದಾರೆ!'.

ಒಟ್ಟಿನಲ್ಲಿ ನಗೆ ನಗಾರಿ ಮತ್ತೆ ಸದ್ದಾಗುತ್ತಿದೆ. ನಗಲು ಸಿದ್ಧರಾಗಿ.

ಕಲ್ಲರೆಯ ಮನೆ

ಕಲ್ಲರೆಮನೆ- ಇದು ಮನದೊಳಗೆ ಮನೆ ಮಾಡಿದವರಿಗಾಗಿ ಮಾತ್ರ....ಅಂತಂದು ಬ್ಲಾಗಿಸುತ್ತಿದ್ದಾರೆ ಕಲ್ಲರೆ ಮಹೇಶ್. ಹಾಗಂತ ಇಲ್ಲಿ ಬರೀ ಅವರ ಮನದೊಳಗಿದ್ದವರೇ ಹೋಗಬೇಕು ಅಂತಿಲ್ಲ. ನಾವು ನೀವು ಎಲ್ಲ ಹೋಗಿ ಬರಬಹುದು. ಒಂದಿಷ್ಟು ಚಂದದ, ಆಪ್ತ ಎನಿಸುವಂಥ ಕವಿತೆಗಳು ಇಲ್ಲಿವೆ. ಅದರದ್ದೊಂದು ಹನಿ ಇಲ್ಲಿದೆ.

ಉರಿಬಿಸಿಲ ಬಯಲಲ್ಲಿ
ನಿನ್ನ ಹುಡುಕುತ್ತ ಹೊರಟರೆ
ಓಡುವ ನನ್ನದೇ ನೆರಳಲ್ಲಿ
ನನಗಿಂತ ಮುಂದೆ ನೀನು

ಹಿಡಿಯಲಾರದೆ ಸೋತು ಕುಳಿತು
ಕೂಡಿಟ್ಟ ಇಷ್ಟಿಷ್ಟೇ ದಾರ ಸೇರಿಸಿ
ನಿನ್ನ ಹೆಸರಿಟ್ಟ ಗಾಳಿಪಟ ಹಾರಿಸಿದರೆ
ಆಕಾಶದೆತ್ತರದಲ್ಲಿ ನೀನು

ಇಟ್ಟಿಗೆ ಸಿಮೆಂಟಿನ ಕಥೆ

ಇಟ್ಟಿಗೆ ಸಿಮೆಂಟು- ಒಂಥರ ಭಿನ್ನವಾದ ಹೆಸರು. ಬೆಳಗಾಯಿತೆಂದರೆ ಇಟ್ಟಿಗೆ-ಸಿಮೆಂಟುಗಳೊಡನೆ ಗುದ್ದಾಟಕ್ಕಿಳಿಯುವ ಪ್ರಕಾಶ್ ಹೆಗ್ಡೆ ಅದನ್ನೇ ತಮ್ಮ ಬ್ಲಾಗಿನ ನಾಮದೇಯವಾಗಿಸಿದ್ದಾರೆ. ಹೇಳಿ ಕೇಳಿ ಇದು ಕಂಟ್ರಾಕ್ಟರರೊಬ್ಬರ ಖಾಸಗಿ ಬ್ಲಾಗು. ಕೂಡಿ ಕಳೆದು ಕಟ್ಟುವ ತರ ತರಹ ಕಥೆಗಳೇ ಇಲ್ಲಿವೆ. ‘ನೀವುಂಟು ಅವರುಂಟು' ಅಂತ ಅಸಾಮಿಯೊಬ್ಬರು ಹೊರಗೆ ನಡೆದಿದ್ದು, ನಂಬಿಕೆ ವಿಶ್ವಾಸಗಳ ಬಗೆಗೆ ದುಬಾರಿ ಪಾಠ ಕಲಿತದ್ದು, ವಾಸ್ತು ಮತ್ತು ಅವಾಸ್ತವದ ವ್ಯತ್ಯಾಸ ಅರಿತದ್ದು, ಮಧ್ಯ ರಾತ್ರಿಯಲ್ಲೂ ವಾಸ್ತು ಪಾಠ ಹೇಳುತ್ತಾ ಸುಸ್ತಾದದ್ದು... ಹೀಗೆ ಥರಾವರಿ ಮಜಲುಗಳು ಇಲ್ಲುಂಟು. ನವಿರಾದ ನಿರೂಪಣೆ ಎಲ್ಲವನ್ನೂ ಓದಿಸಿಕೊಂಡು ಹೋಗುತ್ತದೆ. ಒಮ್ಮೆ ಹೋಗಿ ಬನ್ನಿ.

ಮೋಹನ ರಾಗ

ಅವಧಿಯ ಜಿ ಎನ್ ಮೋಹನ್ ಗೊತ್ತಲ್ಲ. ಈ ಟಿವಿ ಸುದ್ದಿ ಸಂಪಾದಕರಾಗಿದ್ದವರು ಸದ್ಯ ಮೇ ಫ್ಲವರ್ ಮೀಡಿಯಾ ಹೌಸ್ ನಡೆಸುತ್ತಿರುವವರು. ಈಗ ಇನ್ನಷ್ಟು ಬರಿಲಿಕ್ಕೆ ಅಂತ ಒಂದು ಖಾಸಗಿ ಬ್ಲಾಗು ಶುರುಮಾಡಿಕೊಂಡಿದ್ದಾರೆ. ‘ಈ ಬ್ಲಾಗ್ ಬೇಕಿತ್ತಾ.. ಅನ್ನೋದು ನನಗೂ ಸ್ಪಷ್ಟವಾಗಿಲ್ಲ. ಆದ್ರೆ ಎಲ್ಲೋ ಒಂದು ಕಡೆ ನಾನು ಬರೆದಿರೋದು ಸೇರಿಸಬೇಕು, ನನ್ನ ಎಲ್ಲಾ ಕೆಲಸಗಳೂ ಬೇರೆಯವರಿಗೆ ಅಲ್ಲದಿದ್ರೂ ನನಗೆ ಬೇಕು ಅಂದಾಗ ಒಂದ್ ಕಡೆ ಸಿಗ್ಬೇಕು ಅಂತ ಅನ್ಸುತ್ತೆ.' ಅಂತಂದು ತಾವೇ ಸ್ಪಷ್ಟಿಕರಣ ನೀಡಿದ್ದಾರೆ.

ಸದ್ಯ ಮೋಹನರಿಗೆ ತಮ್ಮ ಗುರು ಜಿ ಎಸ್ ಸದಾಶಿವರ ನೆನಪು ಕಾಡಿದೆ. ನಂಗೂ ಬೂಕರ್ ಬಂತು ಅನ್ನುತ್ತಲೇ ಅವರ ಮನ ಹಳೆಯ ನೆನಪುಗಳಿಗೆ ಜಾರಿದೆ. ಅಪಾರರಂಥ ಗೆಳೆಯರನ್ನು ಅಪಾರವಾಗಿ ನೆನೆಯುತ್ತಿದೆ. ಹೀಗೆ ಅವರ ನೇವರಿಕೆ, ಅನುಭವಗಳೆಲ್ಲ ಈ ಬ್ಲಾಗಿನಲ್ಲಿ ಬರಹವಾಗಿ ಬರಲು ಶುರುವಾಗಿದೆ.

ಛಂದದ ಅಪಾರ ಮುಖಪುಟಗಳು

ಛಂದ ಪುಸ್ತಕ ಹೊರತರುತ್ತಿರೋ ವಸುದೇಂದ್ರರ ಕಥಾ ಸಂಕಲನಕ್ಕೆ ಚಂದದೊಂದು ಮುಖಪುಟ ಮಾಡಿಕೊಡಿ ಅಂತ ಅಪಾರ ತಮ್ಮ ಬ್ಲಾಗಿನಲ್ಲಿ ಹಾಕಿದ್ದು ನೆನೆಪಿರಬೇಕಲ್ಲ. ಕೆಂಡಸಂಪಿಗೆಯಲ್ಲಿ ಕೂಡ ಈ ಸುದ್ದಿ ಪ್ರಕಟ ಆಗಿತ್ತು. ಈಗ ನೋಡಿದ್ರೆ ಛಂದದ ಮೇಲ್ ಬಾಕ್ಸಿಗೆ ರಾಶಿಗಟ್ಟಲೆ ಮುಖಪುಟಗಳು ಬಂದು ಬೀಳುತ್ತಿವೆ. ಈ ಅಪಾರ ಸಂಖ್ಯೆಯ ಮುಖಪುಟಗಳನ್ನು ನೋಡಿಯೇ ಅಪಾರ ಸುಸ್ತಾಗಿ ಹೋಗಿದ್ದಾರಂತೆ. ಹಂಪಿ ಎಕ್ಸ್‌ಪ್ರೆಸ್ ಅನ್ನೋ ಈ ಕಥಾ ಸಂಕಲನಕ್ಕೆ ವಿನ್ಯಾಸ ಮಾಡಲು, ಕಲಾವಿದರ ಜತೆಜತೆಯಲ್ಲೇ ಮುಖಪುಟ ವಿನ್ಯಾಸ ಮಾಡುವ ಕುರಿತು ಒಮ್ಮೆಯೂ ಆಲೋಚಿಸದವರ ತನಕ ಎಲ್ಲರೂ ಒಂದು ಕೈ ನೋಡುತ್ತಿದ್ದಾರಂತೆ.

ಅಂದ ಹಾಗೆ ರೈಲು ಹೊರಡುವುದು ತಡವಾಗುತ್ತಂತೆ. ವಿನ್ಯಾಸಕಾರರ ಉತ್ಸಾಹಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಕಡೆಯ ದಿನಾಂಕವನ್ನ ಅಕ್ಟೋಬರ್ ೩೦ರವರೆಗೆ ವಿಸ್ತರಿಸಲಾಗಿದೆ. ಇನ್ನೂ ಪ್ರಯತ್ನಿಸದಿದ್ದವರು ಒಂದು ಕೈ ನೋಡೇ ಬಿಡಿ.

ಬಾಲವನದ ಕಥೆಗಳು

ಬಾಲವನ ಅರ್ಥಾತ್ ಮಕ್ಕಳ ಉದ್ಯಾನದಲ್ಲೀಗ ಬುದ್ಧಿವಂತ ಅಜ್ಜ ಪುಂಡ ಮಕ್ಕಳಿಗೆ ಪಾಠ ಕಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯ ಸಂಗ್ರಹದಲ್ಲಿ ತೊಡಗಿರುವ ಈ ಬ್ಲಾಗಿನಲ್ಲಿ ಇಂತಹುದ್ದೇ ಅನೇಕ ಮಕ್ಕಳ ಕಥೆಗಳಿವೆ. ‘ತೋಳ ಮತ್ತು ಸಿಂಹ, ಏಡಿಮರಿ ಮತ್ತು ಅದರ ಅಮ್ಮ, ತೋಳ ಮತ್ತು ಮೇಕೆಮರಿ, ಆಮೆ ಮತ್ತು ಬಾತುಕೋಳಿ' ಮುಂತಾದ ನೀತಿ ಕಥೆಗಳು ಬಾಲವನದಲ್ಲಿವೆ. ಜೊತೆಗೆ ‘ಒಂದು ಎರಡು..., ಉಂಡಾಂಡಿ ಗುಂಡ...' ದಂಥ ಮಕ್ಕಳ ಹಾಡು, ಪದ್ಯ ಹಾಗೂ ಜನಪದ ಗೀತೆ ಇತ್ಯಾದಿಗಳೂ ಇಲ್ಲುಂಟು. ಓದಬೇಕಿದ್ದವರು ಬಾಲವನಕ್ಕೆ ಬನ್ನಿ.

ಟೀನಾ ಮತ್ತೆ ಬರೆಯೋದು ಗ್ಯಾರಂಟೀನಾ?

ಹೆಚ್ಚೂ ಕಡಿಮೆ ಒಂದೂವರೆ ತಿಂಗಳಿನಿಂದ , ಹೇಳದೇ ಕೇಳದೇ ಬ್ಲಾಗ್ ಪರಿವಾರದಿಂದ ಕಾಣೆಯಾಗಿದ್ದ ಟೀನಾ ಮತ್ತೆ ಬಂದಿದ್ದಾರೆ. ಕಣ್ಣ ಕೋಣೆಯ ಕಿಟಕಿ ಮುಚ್ಚೇ ಹೋಯಿತೇನೋ ಅನ್ನುವಷ್ಟರಲ್ಲೇ ಮತ್ತೆ ಬ್ಲಾ-ಗಿಲು ತೆರೆದಿದ್ದಾರೆ. ಬಂದವರೇ, ತಪ್ಪಾತು. ಕ್ಷಮಿಸ್ಬುಡಿ. ನಿಮ್ನೆಲ್ಲ ಸಖತ್ ಮಿಸ್ ಮಾಡ್ಕೊಂಡೆ ಅಂತ ಗೋಗರೆಯುತ್ತಿದ್ದಾರೆ. ಮೇಲುನೋಟಕ್ಕೆ ನಿಮ್ಮನ್ನೆಲ್ಲ ಮಿಸ್ ಮಡ್ಕೊಂಡೆ ಅಂತಿದ್ರೂ ಊರಿನಲ್ಲಿ ಹೊತ್ತುಹೊತ್ತಿಗೆ ಊಟ, ಸೊಂಪುನಿದ್ದೆ, ಮಗುವಿನೊಡನೆ ಜೂಟಾಟ ಆಡುತ್ತಾ ಆರಾಮವಾಗೇ ಕಾಲ ಕಳಿದಿದ್ದಾರೆ. ಇನ್ನೊಂದು ವಾರದಲ್ಲಿ ಮತ್ತೆ ಬೆಂಗಳೂರಿಗೆ ಬಂದು ರಾಶಿ ಬರೀತಾರಂತೆ. ಅದಕ್ಕೆ ಇದೇ ಪೀಠಿಕೆಯಂತೆ. ಇವರಿಗೆ ನಾವೇನ್ ಹೇಳೋಣಾ ಅಂತ?

ಗೀತಾ ಮನಸಿಗೆ ತೋಚಿದ್ದು

ದೀಪಾವಳಿಗೆ ಇನ್ನೂ ಎರಡು ವಾರ ಬಾಕಿ ಇರೋವಾಗಲೇ ಮುಂಗಡವಾಗಿ ಶುಭ ಕೋರುತ್ತಾ ಬ್ಲಾಗಿಸಿದ್ದಾರೆ ಗೀತಾ ಗಣಪತಿ. ಮಾತ್ರವಲ್ಲ ದೀಪಗಳ ಹಬ್ಬವನ್ನ ಯಾಕೆ ಆಚರಿಸುತ್ತಾರೆ, ಅದರ ಮಹತ್ವ ಏನು ಅಂತೆಲ್ಲ ಸಣ್ಣದೊಂದು ಟಿಪ್ಪಣಿಯನ್ನು ಬರೆದಿದ್ದಾರೆ.

ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಇವರಿಗೆ ನಗರ ಜೀವನ ಬಲು ಬೋರಾಗಿದೆಯಂತೆ. ಹಳ್ಳಿಶಾಲೆಯಲ್ಲೇ ಓದಿ ಬೆಳೆದು ಕಲಿತವರು ಈಗ ,‘ನಮ್ಮ ಮಕ್ಕಳಿಗೆ ಆ ಹಳ್ಳಿಯ ಜೀವನದ ಚೂರು ಅರಿವು ಮೂಡಿಸದೇ ೨ ವರ್ಷಕ್ಕೆಲ್ಲ ಶಾಲೆಗೆ ಸೇರಿಸಿ, ಇ೦ಟರ್ವ್ಯು ಕೊಡಿಸಿ, ಯುಕೆಜಿ, ಎಲ್ಕೆಜಿ ಅ೦ದ್ಕೊ೦ಡು ಕೆಜಿ ಗಟ್ಟಳೆ ಭಾರದ ಪುಸ್ತಕ ಚೀಲ ಹೊರಿಸಿ ಅವರನ್ನೂ ಶಿಸ್ತಿನ ಸಿಪಾಯಿ ಮಾಡೋದು ಬೇಕಾ?' ಅಂತ ಯೋಚಿಸುತ್ತಿದ್ದಾರೆ. ಗಂಡಹೆಂಡತಿ ಇಬ್ಬರು ಈಗಿರುವ ಕೆಲಸ ಬಿಟ್ಟು ಹಳ್ಳಿಗೆ ಹೋಗಿ ನೆಮ್ಮದಿಯಿಂದ ಬದುಕಬೇಕು ಅಂತ ಅವರ ಮನ ಹಾತೊರೆಯುತ್ತಿದೆ. ಇದೆಲ್ಲ ಸಾಧ್ಯವಾ? ಅನ್ನುವ ಪ್ರಶ್ನೆಯೂ ಮುಂದಿದೆ. ಹೀಗೆ ಅವರ ‘ಮನಸಿಗೆ ತೋಚಿದ್ದು' ಇಲ್ಲಿದೆ.

ಬಾಗೇಶ್ರೀ ಕಂಡ ಗುಲಾಬಿ ಟಾಕೀಸು

‘ಗುಲಾಬಿ ಟಾಕೀಸ್ ಸಿನೆಮಾ ನೋಡುವುದಕ್ಕೆ ಮೊದಲು ಒಂದು statutory warning: ಇದೇ ಹೆಸರಿನ ವೈದೇಹಿಯ ಮೂಲ ಕತೆಯನ್ನು ಸಿನೆಮಾ ನೋಡುವುದಕ್ಕೆ ಮುಂಚೆ ಓದಿಕೊಂಡು ಹೋಗಬೇಡಿ. ಈಗಾಗಲೆ ಓದಿಬಿಟ್ಟಿದ್ದರೆ ಅದಕ್ಕೂ ಸಿನೆಮಾಕ್ಕೂ ಏನಾದರೂ ಸಂಬಂಧ ಇರಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಂತೂ ಹೋಗಬೇಡಿ. ಕತೆ ಮತ್ತು ಸಿನೆಮಾಗಿರುವ ವ್ಯತ್ಯಾಸ ಸಣ್ಣ ಅಲೆ ಮತ್ತು ಸೈಕ್ಲೋನಿನ ನಡುವಿನ ವ್ಯತ್ಯಾಸದಂತಹದು.’ ಹಾಗಂತ ಬರೆದಿದ್ದಾರೆ ಬಾಗೇಶ್ರೀ. ಗುಲಾಬಿ ಟಾಕೀಸಿನ ಚಂದದ ಚಿತ್ರಣ ಇಲ್ಲಿದೆ.

ಬಾಗೇಶ್ರೀ ಅಪರೂಪಕ್ಕೊಮ್ಮೆ ಒಂದೊಳ್ಳೆ ಲೇಖನದೊಂದಿಗೆ ಬ್ಲಾಗಿನಂಗಳದಲ್ಲಿ ಕಾಣಿಸಿಕೊಳ್ಳುತ್ತಾರೆ. ಅನುವಾದದಲ್ಲೇನೋ ಮಜವಿದೆ ಅಂತಂದು ಗಾಲಿಬನ ಗಜಲೊಂದನ್ನು ತಂದು ಹಾಕುತ್ತಾರೆ. ಸಮಯವನ್ನೇ ನುಂಗುವ ಸಮಯದ ಬಗ್ಗೆ ಒಂದೆರಡು ಮಾತು ಬರೆದು ಸುಮ್ಮನಾಗುತ್ತಾರೆ. ‘ನಂಗೆ ಇನ್ನೂ ಸ್ವಲ್ಪ ನುಗ್ಗುವ ಛಾತಿ ಇರಬೇಕಾ’ ಅಂತ ಯೋಚಿಸುತ್ತಾ ಕೂರುತ್ತಾರೆ. ಸದ್ಯಕ್ಕಿಲ್ಲಿ ಗುಲಾಬಿಯ ಕಂಪಿದೆ. ಓದಬೇಕಿದ್ದವರು ಹೋಗಿ ಬನ್ನಿ.

ಸುದ್ದಿಗಳ ಮಾತು

ಸದ್ಯ ಸುದ್ದಿಯಲ್ಲಿರುವ ಬ್ಲಾಗುಗಳ ಪೈಕಿ ಸುದ್ದಿಮಾತು ಕೂಡ ಒಂದು. ಸುದ್ದಿ ಮಾಡುವವರ ಅರ್ಥಾತ್ ಪತ್ರಕರ್ತರ ವಲಯದೊಳಗಿನ ಸುದ್ದಿಯನ್ನು ಬಿತ್ತರಿಸುವುದು ಈ ಬ್ಲಾಗಿನ ಉದ್ದೇಶ. ಪತ್ರಿಕಾ ರಂಗದ ಸುದ್ದಿ ಗಾಸಿಪ್ ಗಳು, ಟಿವಿವಾಹಿನಿಗಳ ಕುಟುಕು ಕಾರ್ಯಚರಣೆ ಸಂಗತಿ... ಜೊತೆಗೆ ರಾಜಕೀಯ ಸುದ್ದಿ ಮುಂತಾದ ಸಂಗತಿಗಳ ಕುರಿತು ಸುದ್ದಿಮಾತು ಮಾತನಾಡುತ್ತದೆ.

‘ಐದು ಮಂದಿ ಇದ್ದೇವೆ. ನಾವ್ಯಾರೂ ಪತ್ರಕರ್ತರಲ್ಲ. ಹಾಗಂತ ಪತ್ರಿಕೋದ್ಯಮ ಪರಿಚಯ ಇಲ್ಲ ಅಂತಲ್ಲ. ನಾವೆಲ್ಲರೂ ಬೇರೆ ಬೇರೆ ಪತ್ರಿಕೆಗಳಲ್ಲಿ 4-5 ವರ್ಷ ಕಾಲ ಕೆಲಸ ಮಾಡಿ ಈಗ ಬೇರೆಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಹಾಗಾಗಿ ಪತ್ರಿಕೋದ್ಯಮದೆಡೆಗೆ ಇಂಥ ಕಾಳಜಿ. ಪತ್ರಿಕೆ, ಪತ್ರಿಕೋದ್ಯಮ ಬಗ್ಗೆನೇ ಬರೆದರೆ ಹೇಗೆ ಅಂತ ನಾವೆಲ್ಲಾ ಕೂಡಿ ನಿರ್ಧಾರ ಮಾಡಿ ಬ್ಲಾಗ್ ಆರಂಭಿಸಿದೆವು' ಅಂತಾರೆ ಈ ಬ್ಲಾಗಿನ ಸಂಪಾದಕರುಗಳು. ಸುದ್ದಿಮಾತು ಇನ್ನೇನೇನು ಸುದ್ದಿ ಬಗ್ಗೆ ಬರೆಯುತ್ತದೆಯೋ ನೋಡಬೇಕು.

ಮಧುರ ಮನಸ್ಸು

ಗರ್ಲ್ ಫ್ರೆಂಡ್ ಹುಡುಗರಿಗೇಕೆ ಅನಿವಾರ್ಯ? ಇದು ಹುಡುಗರು ತಿಳಿದುಕೊಳ್ಳಲೇ ಬೇಕಾದ ಸಂಗತಿಯಂತೆ. ಹಾಗಂತ ವಿಶ್ಲೇಷಿಸಿ ಬರೆಯುವ ಪ್ರಯತ್ನದಲ್ಲಿದ್ದಾರೆ ಸಚಿನ್ ಕುಮಾರ ಹಿರೇಮಠ. ಹುಡುಗರ ಹುಡುಗುಬುದ್ಧಿಯೇ ಇದಕ್ಕೆಲ್ಲ ಕಾರಣ ಅನ್ನೋದು ಅವರ ಅನಿಸಿಕೆ. ವೃತ್ತಿಯಲ್ಲಿ ಮಾಸ್ತರರಾಗಿರುವ ಇವರು ಪ್ರೇಮಕಥೆಗಳನ್ನ ಬರೆಯೋದರಲ್ಲೂ ಎತ್ತಿದ ಕೈ. ಮದುವೆ ಸ್ನೇಹದ ಅಂತ್ಯವೇ? ಅನ್ನೋದು ಇವರ ಇನ್ನೊಂದು ಅನುಮಾನದ ಪ್ರಶ್ನೆ.

‘ಇದು ನಮ್ಮ ಹೊಸ ಪ್ರಯತ್ನ. ಮಧುರ ಮನಸಿನ ಮಾಧುರ್ಯತೆಯನ್ನು ಸವಿಯಲು ಇದೊಂದು ಅಪ್ರತಿಮ ವೇದಿಕೆ.ಇದು ಹೃದಯ ಅರಳಿಸುವ ನವ ನವೀನ ಭಾವದ ಹೂವುಗಳನ್ನು ಪೋಣಿಸಿ ಮಾಲೆಯನ್ನಾಗಿಸಿ ಸಾಹಿತ್ಯದ ಚೌಕಟ್ಟಿಗೆ ಹಾಕುವ ಪ್ರಥಮ ಪ್ರಯತ್ನ.' ಅಂತನ್ನೋದು ಮಧುರೆ ಮನಸೇ ಅನ್ನುವ ಈ ಬ್ಲಾಗಿನ ಮುನ್ನುಡಿ. ಪೂರ್ತಿ ಒದಬೇಕಿದ್ದವರು ಅಲ್ಲಿಗೇ ಹೋಗಬೇಕು.

ಚಿತ್ರಕುಲುಮೆಯಲ್ಲಿ ಚಿತ್ರಗಳ ಸುಗ್ಗಿ

ದಸರಾ ಉತ್ಸವವನ್ನು ತನ್ನ ಕ್ಯಾಮರಾ ಕಣ್ಣುಗಳಲ್ಲಿ ಸೆರೆ ಹಿಡಿಯುವುದಾಗಿ ಹೇಳಿ ಹೊರಟಿದ್ದ ಚಿತ್ರಕುಲುಮೆ ಈಗ ಕೊಟ್ಟ ಮಾತಿನಂತೆ ಚಿತ್ರಗಳೊಂದಿಗೆ ಹಾಜರಾಗಿದೆ. ಮೊನ್ನೆಯಷ್ಟೆ ಮುಗಿದ ದಸರಾ ಹಬ್ಬದ ಅಪರೂಪದ ಕ್ಷಣಗಳನ್ನು ತನ್ನ ಬ್ಲಾಗಿನಲ್ಲಿ ತಂದೊಡ್ಡಿದೆ. ರಾತ್ರಿ ಕಣ್ಣಲ್ಲಿ ಮೈಸೂರು ಅರಮನೆ ಕಂಡ ಕುಲುಮೆ ಅಲ್ಲೇ ಸುತ್ತುತ್ತ ಅಂಬಾರಿ ಜೊತೆಗೆ ಇನ್ನಿತರ ದಸರಾ ಮೆರುಗುಗಳನ್ನು ಚಿತ್ರ ಸಮೇತ ಹೊತ್ತು ಬಂದಿದೆ.

ಹೆಸರೇ ಹೇಳುವಂತೆ ಇದು ಚಿತ್ರಗಳಿಗಾಗಿಯೇ ಮೀಸಲಾಗಿರುವ ಬ್ಲಾಗು. ಇಲ್ಲಿ ಚಿತ್ರಗಳ ದಾಸ್ತಾನು ಮಾಡುವ ಕೆಲಸ ನಡೆಯುತ್ತಿದೆ. ಕಲಾವಿದನೊಬ್ಬನ ಕಲ್ಪನೆಯ ಗೀರು ಗುರುತುಗಳಿವೆ. ನಡುವೆ ಅಲ್ಲಲ್ಲಿ ಕೊಂಕು-ಡೊಂಕುಗಳ ಕ್ಯಾತೆ ಇದೆ. ಇದನ್ನೆಲ್ಲ ನೋಡಬೇಕಿದ್ದವರು ಚಿತ್ರಕುಲುಮೆಗೊಮ್ಮೆ ಹೋಗಿಬನ್ನಿ.

ಸಂದೀಪರ ಕಡಲತೀರ

ಹೆಸರಲ್ಲೇನಿದೆ ಮಹಾ? ಅಂತಂದು ಹೆಸರೇ ಹೇಳದೆ ಕಾಡಿಸುವವರೆಂದರೆ ಸಂದೀಪ್ ಕಾಮತ್ ರಿಗೆ ಇನ್ನಿಲ್ಲದ ಸಿಟ್ಟಂತೆ. ಇಂಟರ್ ನೆಟ್ಟಿನ ಚಾಟ್ ರೂಂನಲ್ಲಿ ಯಾವುದೋ ಹೆಸರೇಳಿಕೊಂಡು ಚಾಟ್ ಮಾಡುವ ಹುಡುಗಿಯಿಂದ ಹಿಡಿದು, ಇಲ್ಲಿ ಬ್ಲಾಗ್ ಲೋಕದಲ್ಲಿ ಅನಾಮಿಕರಾಗಿಯೇ ಉಳಿದುಬಿಡುವ ಒಂದಿಷ್ಟು ಬ್ಲಾಗಿಗರ ತನಕ, ಮುಂದೊಂದು ದಿನ ಅವರೆಲ್ಲ ತಮ್ಮ ನಿಜವಾದ ಗುರುತು ಹೇಳಿಬಿಟ್ರೆ ನಮ್ಮ ಕಲ್ಪನೆಗಳಿಗೆಲ್ಲ ನೋವಾಗಲ್ವ ಅಂತ ಖಾರವಾಗೇ ಪ್ರಶ್ನಿಸುತ್ತಿದ್ದಾರೆ.

ಕಡಲ ತೀರ ಅನ್ನುವ ಬ್ಲಾಗಿನಲ್ಲಿ ಬ್ಲಾಗಿಸುವ ಸಂದೀಪರು ಹೀಗೆ ಆಗಾಗ್ಗೆ ತಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ. ಧರ್ಮ ಮತ್ತು ವಿಜ್ಞಾನದಿಂದ ಹಿಡಿದು ಹಿಂದೂವಾದದವರೆಗೆ ಒಂದಿಷ್ಟು ಚರ್ಚೆಗೆ ಒಳಗಾದ ಲೇಖನಗಳು ಇಲ್ಲಿವೆ. ಪತ್ರ-ಈಮೇಲ್ ಗಳಲ್ಲಿನ ಆಪ್ಯಾಯಮಾನತೆ ಕುರಿತು ಚೆಂದವಾಗಿ ಮಾತನಾಡಿದ್ದಾರೆ. ಒಂದೆರಡು ಪುಸ್ತಕ ಬಿಡುಗಡೆ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ. ಇಂತಹದ್ದೇ ಹಲವು ಲೇಖನಗಳು ಇಲ್ಲಿವೆ.

ನಿಶು ಮನೆಯಲ್ಲಿ ಜಯಂತ ಕಾಯ್ಕಿಣಿ

ಮೂರು ವರ್ಷ, ನಾಲ್ಕು ತಿಂಗಳಿನ ನಿಶುವಿನ ಮನಗೆ ಮೊನ್ನೆ ಕನ್ನಡದ ಕವಿ, ಕಥೆಗಾರ ಜಯಂತ ಕಾಯ್ಕಿಣಿ ಬಂದಿದ್ದರು. ವಿಶ್ವ ಕನ್ನಡ ಸಮ್ಮೇಳನಕ್ಕೆ ಶಿಕಾಗೋಗೆ ಹೋದವರು,ನಿಶುಮನೆಗೂ ಭೇಟಿ ಕೊಟ್ಟಿದ್ದರು. ಜಯಂತ್ ಅಂಕಲ್ ಮತ್ತು ನಿಶುವಿನ ನಡುವೆ ನಡೆದ ಉಭಯ ಕುಶಲೋಪರಿಗಳನ್ನು ನೋಡಿ ಖುಷಿಪಡುತ್ತಾ ನಿಶುವಿನ ಅಮ್ಮ ಕ್ಲಿಕ್ಕಿಸಿದ ಒಂದಿಷ್ಟು ಚಿತ್ರಗಳನ್ನು ಬ್ಲಾಗಿನಲ್ಲಿ ಹಾಕಿದ್ದಾರೆ. ಆ ನಡುವೆ ಕ್ಯಾಮರಾ ಮೆಮೋರಿ ಫುಲ್ಲಾಗಿ ........`live view' ಇಲ್ಲದೆ....... ಬೆಳಕಿನ ಸಮಸ್ಯೆಯೂ ಇದ್ದಿದ್ದರಿಂದ ಒಳ್ಳೆಯ ಚಿತ್ರಗಳನ್ನು ತೆಗೆಯಲಾಗಲಿಲ್ಲ ಎನ್ನುವ ಚಿಂತೆ ಅಮ್ಮನದು. ಆದರೆ ನಿಶು ಮಾತ್ರ, ಜಯಂತ್ ಅಂಕಲ್ಲನ್ನು ನೋಡಿದ ಖುಷಿ ಜೊತೆಗಿರುವಾಗ ಆ ಫೋಟೋ ಸರಿಯಾಗಿ ಬರದಿದ್ದರೂ ಪರವಾಗಿಲ್ಲ ಅಮ್ಮ ಎಂದು ಮುಗಳ್ನಗುತ್ತಿದ್ದಾನೆ.

ನಿಶುವಿನ ತುಂಟಾಟ, ನಗು, ಹರಟೆ, ತಮಾಷೆಗಳ ಜೊತೆಗೆ ನಿಶುವೇ ಹಾಡಿರುವ ಕರಡಿಯ ಹಾಡು ಕೂಡ ಇಲ್ಲಿದೆ. ಈ ಪುಟಾಣಿಯ ಬ್ಲಾಗಿಗೆ ನಿಮಗೂ ಸ್ವಾಗತ.

ಅಮರ್ತ್ಯ ಕೃಷ್ಣನ ಅಫಿಶಿಯಲ್ ವೆಬ್ ಸೈಟ್

ಇದು ಅಮ್ಮು ಅಲಿಯಾಸ್ ಅಮರ್ತ್ಯ ಕೃಷ್ಣನ ಅಫಿಶಿಯಲ್ ವೆಬ್ಬು ಸೈಟು. ಮಾಲಾ ರಾವ್ ತಮ್ಮ ಮುದ್ದು ಮಗ ಅಮರ್ತ್ಯನಿಗೇಂತ ಒಂದು ಸ್ಪೆಷಲ್ ಬ್ಲಾಗು. ಮಗುವಿನ ಬ್ಲಾಗು ಅಂದಮೇಲೆ ಕೇಳಬೇಕೇ ಇದರಲ್ಲಿ ಮುದ್ದು ಸೂಸುವ ಕಂದಮ್ಮಗಳ ಚಿತ್ರ, ಒಂದೊಂದು ಮುದ್ದಿಗೂ ಒಂದೊಂದು ಹಾಡು. ಒಂದಿಷ್ಟು ಫೊಟೋ ಕಾಮಿಕ್ಸ್, ನಗೆ ಬುಗ್ಗೆ, ಅಮ್ಮುವಿನ ಸೂಪರ್ ಕುಣಿತದ ಜೊತೆಗೆ ಗೋಕುಲದ ಗೋಪ ಗೋಪಿಯರು. ಒಟ್ಟಾರೆ ಪುಟ್ಟ ನಂದಗೋಕುಲವೇ ಇದು. ಇಂತಿಪ್ಪ ಕೃಷ್ಣನ ಲೀಲೆಗಳನ್ನು ನೋಡಬೇಕೆಂದುಕೊಂಡವರು ಇಲ್ಲೀಗೆ ಹೋಗಬೇಕು.

ಇವಳು ಯಾರು ಬಲ್ಲಿರೇನು?

‘ಇವಳು ಗುಪ್ತಗಾಮಿನಿ. ಮಾತಿಗೆ ತೊಡಗಿದರೆ ಸಾವಿರ ನಾಲಿಗೆ. ಸುಮ್ಮನೆ ಕುಳಿತರೆ ಮಹಾಮೌನಿ; ತುಟಿಗೆ ಬೀಗ.
ಇವಳು ಅವನ ಅಹಂಕಾರಕ್ಕೆ ಸವಾಲು. ತನ್ನೊಳಗಿನ ಬೆರಗು, ಅಚ್ಚರಿಗಳಿಂದಲೇ ಜಗತ್ತು ನೋಡುವ ಇವಳ ಹೃದಯಕ್ಕೆ ಸಾವಿರ ಕಣ್ಣು.
ಪ್ರತಿಶಬ್ದಕ್ಕೆ ಹುಟ್ಟು, ಪ್ರತಿ ಮೌನಕ್ಕೆ ಮರುಹುಟ್ಟು.' ಅನ್ನುವ ಇವಳು ಕಲಾವಿದ ಪುಂಡಲೀಕ ಕಲ್ಲಿಗನೂರ ಅವರ ಚಿತ್ರಗಳೊಂದಿಗೆ ಮೈದುಂಬಿಕೊಂಡು ನಮ್ಮೆದುರಿಗಿದ್ದಾಳೆ.

ಇಲ್ಲಿ ಇವಳು ಮಾತ್ರ ಬರೆಯುತ್ತಾಳೆ. ಬೇಜಾರಾದಾಗ ಕವಿತೆ ಹನಿಗವಿತೆಗಳೊಂದಿಗೆ ಕಾಣಿಸಿಕೊಳ್ಳುತ್ತಾಳೆ. ಈಗಷ್ಟೆ ಶುರುವಾಗಿರುವ ಈ ಬ್ಲಾಗಿನಲ್ಲಿ ಒಂದಿಷ್ಟು ಚುಟುಕು ಕವಿತೆಗಳಿವೆ. ಅದರದ್ದೊಂದು ತುಣುಕು ಇಲ್ಲಿದೆ.

ನನ್ನವನು
ಗೀಚುವ
ಪ್ರತಿ ಚಿತ್ರದಲ್ಲೂ
ನಾನು
ಬೆತ್ತಲು
ಅವನು
ಬಟಾ ಬಯಲು

ಕ್ಯಾಮರಾದ ಹಿಂದೆ ಛಾಯಾ ಕನ್ನಡಿ

ತಮ್ಮ ಮನೆಯ ಅಂಗಳದ ಮರದ ಎಲೆಯೊಂದರಲ್ಲಿ ಬಿಳಿಚುಕ್ಕೆಯಾಗಿ ಕಂಡ ಮೊಟ್ಟೆ, ಕ್ರಮೇಣ ಎಲೆಯನ್ನು ಮೇಯುತ್ತಾ ಹುಳುವಾಗಿ ಬೆಳೆದಿದ್ದು, ತದ ನಂತರ ಅದೇ ಚಿಟ್ಟೆಯಾಗಿ ಪುರ್... ಎಂದು ಹಾರಿಹೋಗಿದ್ದು ಎಲ್ಲವನ್ನೂ ಅಚ್ಚುಕಟ್ಟಾಗಿ ವಿವರಿಸಿದ್ದಾರೆ ಶಿವು. ಹುಳು ಚಿಟ್ಟೆಯಾಗಿ ಪರಿವರ್ತನೆಯಾಗುವ ಅಪರೂಪದ ಚಿತ್ರಗಳು ಇಲ್ಲಿವೆ. ಅಲ್ಲಲ್ಲಿ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಶಿವುರವರ ಇಂತಹದ್ದೇ ಅನೇಕ ವೈವಿದ್ಯಮಯ ಬರಹಗಳನ್ನು ಈ ಛಾಯಾಕನ್ನಡಿ ಬ್ಲಾಗಿನಲ್ಲಿ ಒಟ್ಟಾಗಿ ಕಾಣಬಹುದು.

ಕ್ಯಾಮರಾ ಹಿಂದೆ ಅಂತನ್ನುವ ಇನ್ನೊಂದು ಬ್ಲಾಗಿನಲ್ಲೂ ಶಿವು ಬ್ಲಾಗಿಸುತ್ತಿದ್ದಾರೆ. ಅಲ್ಲಿ ‘ಬೇರೆ ಬೇರೆ ತರ ತರ ಒಂಥರಾ.....ಚಿತ್ರಗಳು' ಅಂತನ್ನುತ್ತ ತಮ್ಮ ಅನಿಸಿಕೆ ಅನುಭವಗಳನ್ನು ಬೇರೆ ರೀತಿಯಲ್ಲೇ ತೆರೆದಿಡುವ ಪ್ರಯತ್ನ ಮಾಡುತ್ತಿದ್ದಾರೆ.

ಭ್ರಮರದ ಝೇಂಕಾರ

‘ಜಲಪಾತದಲ್ಲಿ ನೀರು ಇಳಿಜಾರಿನೆಡೆ ಬೀಳುವುದು ಸಹಜ. ಈ ಫೋಟೋದಲ್ಲೂ ಆದೇ ರೀತಿ ಕೆಳಮುಖವಾಗಿಯೇ ನೀರು ಹರಿಯುತ್ತಿದೆ. ಅಲ್ಲವೇ? ಜಲಪಾತ ಅಥವಾ ತಡಸಲಿನಲ್ಲಿ ನೀರು ಮೇಲಿನಿಂದ ಕೆಳಕ್ಕೆ ಬೀಳುವುದನ್ನು ಎಲ್ಲರೂ ನೋಡಿರುತ್ತಾರೆ. ನಾನೂ ನೋಡಿದ್ದೇನೆ. ಆದರೆ ಈ ಎರಡು ಚಿತ್ರದಲ್ಲಿ ನೀರು ಹೇಗೆ ಹರಿದು ಸಾಗಿದೆ? ನೀವೇ ಊಹಿಸಿಕೊಳ್ಳಿ' ಹೀಗಂತ ಒಂದೆರಡು ಫೋಟೊ ತೋರಿಸಿ ನಮ್ಮನ್ನೇ ತಬ್ಬಿಬ್ಬಾಗುವಂತೆ ಮಾಡುತ್ತಾರೆ ಗಜಾನನ ಹೆಗಡೆ.

ಭ್ರಮರ ಅನ್ನುವ ಈ ಬ್ಲಾಗಿನಲ್ಲಿ ಮಾತಿಗಿಂತ ಚಿತ್ರಕ್ಕೇ ಮಹತ್ವ. ಅಂಬೋಲಿಯ ಅಂದ ಚಂದದಿಂದ ಊಟಿಯ ಡೆಸ್ಟಿನಿವರೆಗೆ ಸಾಲುಸಾಲು ಚಿತ್ರಗಳಿವೆ. ಪಾಪ...ಅದು ಕಾಡು ಪಾಪಾ ಅನ್ನುತ್ತಲೇ ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಸದಾಶಿವ ಭೋಸಲೆ ಅನ್ನುವ ಗಾಂಧಿವಾದಿಯ ಪರಿಚಯ ಮಾಡಿಕೊಟ್ಟಿದ್ದಾರೆ. ಇಂತಹದ್ದೇ ನಾಲ್ಕಾರು ಲೇಖನಗಳು ಇಲ್ಲಿವೆ.

ಮೌನಕಣಿವೆಯ ಮಾತುಗಳು

ಇದು ಮೌನ ಕಣಿವೆ. ಬ್ಲಾಗೆಂಬ ಕಣಿವೆಯಲ್ಲಿ ಮೌನವಾಗೇ ತಮ್ಮ ಪಾಡಿಗೆ ತಾವು ಬ್ಲಾಗಿಸುತ್ತಿರುವವರ ಬ್ಲಾಗು. ಹಾಗಂತ ಇಲ್ಲಿ ಮಾತಿಗೆ ಬರವಿಲ್ಲ. ಸುರಗಿ ಅನ್ನುವ ನಾಮಧೇಯರು ಇಲ್ಲಿ ಆಗಾಗ್ಗೆ ತಮ್ಮ ಅನುಭವ- ಅನಿಸಿಕೆಗಳೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಅಡಿಕೆ ತೋಟಕ್ಕೆ ಗೊಬ್ಬರ ಖರೀದಿಗೆಂದು ಊರಿಗೆ ಹೋಗಿದ್ದ ಅವರು ಈಗ ಮತ್ತೆ ಬಂದಿದ್ದಾರೆ. ಸಾವಯುವ ಕೃಷಿಯನ್ನು ನೆಚ್ಚಿಕೊಂಡರೂ ರಾಸಾಯನಿಕ ಗೊಬ್ಬರ ಹಾಕಬೇಕಾದ ಅನಿವಾರ್ಯತೆಯನ್ನು ಹೇಳುತ್ತಲೇ, ಬಳೆಗಾರ ಚೆನ್ನಯ್ಯನಂತಹ ಬ್ಯಾರಿಗಳ ಕಥೆ ಬಿಚ್ಚಿಟ್ಟಿದ್ದಾರೆ.

ಸ್ವತಃ ಕೃಷಿಕರಾಗಿರುವ ಇವರು ಪ್ರತ್ಯೇಕ ಕೃಷಿ ಬಜೆಟ್ ಬೇಕು ಅಂತ ವಾದಿಸುತ್ತಾ, ತಮ್ಮೀ ವಿಚಾರವನ್ನು ಯಾವುದೇ ಪತ್ರಿಕೆಗಳು ಹಾಕದಿದ್ದರೂ ಚಿಂತೆಯಿಲ್ಲ ಅನ್ನುತ್ತಲೇ ಅದೆನ್ನೆಲ್ಲ ಬ್ಲಾಗಿಗೆ ಹಾಕಿದ್ದಾರೆ. ಮತ್ತೆ ಜಾರಿದಳು, ಬೇಡ ತಾಯ್ತನ ಬೇಡ , ಹೋಗು ದಕ್ಷನ ಮಗಳೇ ಮುಂತಾದ ಸಂವೇದನಾ ಶೀಲ ಬರಹಗಳು ಇಲ್ಲಿವೆ. ಮೌನಕಣಿವೆಯಲ್ಲಿ ಮಾತನ್ನರಸುವವರು ಇಲ್ಲಿಗೆ ಹೋಗಬಹುದು.

ಪೂಜಾ ವಿಧಾನಗಳ ಪಟ್ಟಿ

ದೂರದ ಅಮೆರಿಕಾದಲ್ಲಿದ್ದರೂ ಇವರು ಸಂಸ್ಕೃತಿ ಮರೆತಿಲ್ಲ. ಹಬ್ಬ ಹರಿದಿನಗಳನ್ನ ತಪ್ಪದೇ ಆಚರಿಸೋದು ಬಿಟ್ಟಿಲ್ಲ. ಪ್ರಪಂಚದ ಮೂಲೆಮೂಲೆಯಲ್ಲಿ ಹರಡಿಕೊಂಡಿರುವ ಕನ್ನಡಿಗರಿಗೆ ಹಬ್ಬ-ಸಂಪ್ರದಾಯ ಎಲ್ಲವನ್ನೂ ನೆನಪುಮಾಡಿಸುವ ಸಲುವಾಗಿ ಶ್ರೀ ‘ಪೂಜಾ ವಿಧಾನ' ಅನ್ನೋ ಈ ಬ್ಲಾಗನ್ನ ನಡೆಸುತ್ತಿದ್ದಾರೆ. ಹೆಸರೇ ಹೇಳುವಂತೆ ಈ ಬ್ಲಾಗು ಹಬ್ಬ, ಪೂಜೆ ಹಾಗೂ ವ್ರತಗಳ ಆಚರಣೆ ಇತ್ಯಾದಿ ವಿಷಯಗಳಿಗೆ ಮೀಸಲು.

ಈ ಬ್ಲಾಗಿನಂಗಳಕ್ಕೆ ಕಾಲಿಡುತ್ತಿದ್ದಂತೆ ಇಂಪಾದ ಭಕ್ತಿಗೀತೆಯೊಂದು ನಿಮ್ಮನ್ನು ಸ್ವಾಗತಿಸುತ್ತದೆ. ಮುಂದಿನ ದಿನಗಳಲ್ಲಿ ಯಾವ್ಯಾವ ಹಬ್ಬ ಇದೆ ಅಂತ ಮೆನು ತೋರಿಸುತ್ತದೆ. (ವಿ.ಸೂ; ಆಧಾರ-ಒಂಟಿಕೊಪ್ಪಲ್ ಪಂಚಾಂಗ) ಅದೂ ಅಮೆರಿಕಾ ಮತ್ತು ಭಾರತದ ದಿನಾಂಕಗಳಿಗೆ ಅನುಗುಣವಾಗಿ ಪ್ರತ್ಯೇಕವಾಗಿ. ಹಬ್ಬ-ಆಚರಣೆಗಳ ಮಹತ್ವ ಇತ್ಯಾದಿ ಕುರಿತ ಲೇಖನಗಳೂ ಇಲ್ಲಿವೆ. ಸದ್ಯ ದಸರಾ ಹಬ್ಬದ ವಿಶೇಷತೆ ಕುರಿತು ವರ್ಣಿಸಲಾಗಿದೆ.

ಅಂದಹಾಗೆ ಈ ‘ಶ್ರೀ' ಕನ್ನಡದ ಬ್ಲಾಕ್ ಲೋಕದಲ್ಲಿ ಈಗಾಗಲೇ ಚಾಲ್ತಿಯಲ್ಲಿರೋ ಅನೇಕ ಶ್ರೀ ಗಳಲ್ಲಿ ಒಬ್ಬರೋ ಅಥವಾ ಇನ್ನೊಬ್ಬರು ಹೊಸ ಶ್ರೀ ಯೋ ಅನ್ನುವುದೇ ಕುತೂಹಲಕಾರಿ.

ಪುಟ್ಟಿಯ ಪ್ರಪಂಚ

ಹೇಳಿಕೇಳಿ ಇದು ಪುಟ್ಟಿ ಪ್ರಪಂಚ. ಅವಳ ಪುಟ್ಟ ಹೆಜ್ಜೆಗಳ ಸಪ್ಪಳದಿಂದಲೇ ಈ ಬ್ಲಾಗ್ ಶುರುವಾಗಿದ್ದು. ಆಮೇಲೆ ಅವಳು ಅಮ್ಮನ ನೋಡಿ ನಕ್ಕಿದ್ದು, ಆ ಊ ಮಾತು ಶುರುಮಾಡಿದ್ದು, ಬೋರಲು ಬಿದ್ದಿದ್ದು, ತೆವಳಿದ್ದು, ಅಂಬೆಗಾಲಿಟ್ಟರಿಂದ ಹಿಡಿದು ಈಗ ಚೆಂಡು ಎಸೆಯುತ್ತಿರುವ ವರೆಗೆ ಅವಳ ಆಟೋಟಗಳ ಸಮಸ್ತ ವಿವರಗಳು ಇಲ್ಲಿವೆ.

ಪುಟ್ಟಿಗೀಗ ವಯಸ್ಸು ಎಷ್ಟಪ್ಪ ಅಂದ್ರೆ ಎಂಟು ತಿಂಗಳ ಮೇಲೆ ನಾಲ್ಕು ವಾರ ಅಷ್ಟೆ. ಪುಟ್ಟಿಗೊಂದು ಮುದ್ದಾದ ಹೆಸರು ಇದೆ ಸಾಹಿತ್ಯ ಅಂತ. ದೂರದ ಫ್ಲೋರಿಡಾದಲ್ಲಿರುವ ಇವಳಿಗೆ ಕನ್ನಡ ಕಲಿಸುವುದು ಹೇಗಪ್ಪ ಅನ್ನುವುದು ಅವರಮ್ಮ ರೂಪಶ್ರೀಯ ಚಿಂತೆ. ಸದ್ಯ ಪುಟ್ಟಿಯ ಪರವಾಗಿ ಬ್ಲಾಗಿಸುತ್ತಿರುವವರು ಅವರೇ. ಒಟ್ಟಿನಲ್ಲಿ ಕನ್ನಡದ ಮಕ್ಕಳ ಚಂದದ ಬ್ಲಾಗುಗಳಲ್ಲಿ ನಮ್ಮೀ ಪುಟ್ಟಿ ಬ್ಲಾಗು ಕೂಡ ಒಂದು.

ಮೆಟ್ರೋ ಗುಂಗಿನಲ್ಲಿ ರಶ್ಮಿ

ಚೆನ್ನೈ ಉರಿಬಿಸಿಲಿನಲ್ಲಿ ಬೆವರು ಸುರಿಸಿ ಬಂದ ರಶ್ಮಿ ಈಗ ಬೆಂಗಳೂರಿನ ಚುಮುಚುಮು ಚಳಿಗೆ ಫುಳಕಿತಗೊಳ್ಳುತ್ತಿದ್ದಾರೆ. ಸದ್ಯ ಇಲ್ಲಿನ ಟ್ರಾಫಿಕ್ ಜಾಮ್ ನ ಮಧ್ಯೆ ಸಿಕ್ಕಿ ಒದ್ದಾಡುತ್ತಿರುವ ಅವರಿಗೆ ಚೆನ್ನೈ ಮೆಟ್ರೋ ರೈಲಿನ ನೆನಪಾಗುತ್ತಿದೆ. ಬಸ್ ಅಂದರೆ ಕಿರಿಕಿರಿ ಅನ್ನುವ ಇವರಿಗೆ ರೈಲೆಂದರೆ ಅಚ್ಚುಮೆಚ್ಚಂತೆ. ಅದರಲ್ಲೂ ಚೆನ್ನೈನ ಮೆಟ್ರೋ ರೈಲುಗಳು, ಜನಸಂದಣಿ ಮತ್ತು ಅವರ ನಡುವಿನ ಆಪ್ತ ಸಂವಹನ ಎಲ್ಲವನ್ನೂ ಅಷ್ಟೇ ಆಪ್ತವಾಗಿ ನೆನೆದಿದ್ದಾರೆ. ಹೀಗೆ ರಶ್ಮಿಯ ಅನುಭವಗಳು-ಅನಿಸಿಕೆಗಳು ಸೂರ್ಯಕಾಂತಿಯಲ್ಲಿ ಆಗಾಗ್ಗೆ ಅರಳುತ್ತವೆ.

ಅನುರಾಗ ಅನ್ನುವ ಇನ್ನೊಂದು ಬ್ಲಾಗಿನಲ್ಲೂ ರಶ್ಮಿ ಬ್ಲಾಗಿಸುತ್ತಿದ್ದಾರೆ. ಅಲ್ಲಿಯೂ ಅವರ ಕನಸು ಕನವರಿಕೆಗಳು ಕವಿತೆಗಳ, ಬರಹಗಳ ರೂಪ ಪಡೆಯುತ್ತಿವೆ.

ಕೆನೆಕಾಫಿಯ ಸವಿರುಚಿ

‘ಮಳೆಹನಿಯ ನಡುವಲ್ಲಿ ಕನಸುಗಳಿಲ್ಲ
ಮೋಡದಾಚೆಯ ಅರಮನೆಯಲ್ಲಿ ಬೇಸರದ ಸಂಜೆಗಳಿರಬೇಕು...' ಇದು ಕೆನೆಕಾಫಿಯ ರುಚಿಯ ಒಂದು ಸ್ಯಾಂಪಲ್ ಅಷ್ಟೆ. ವಾರಗಳ ಹಿಂದಷ್ಟೆ ಕಾಫಿಯಂಗಡಿಯ ಬ್ಲಾ-ಗಿಲು ತೆರೆದ ವೈಶಾಲಿ ಇಲ್ಲಿ ಬ್ಲಾಗಿಸುತ್ತಿದ್ದಾರೆ. ಸದ್ಯ ಬಾಲ್ಕನಿಯ ಅಂಚಿಗೆ ನಿಂತು ಕನಸು ತುಂಬಿಕೊಳ್ಳುವ ಹೊತ್ತಲ್ಲಿ ಮೌನದಲ್ಲಷ್ಟು ಮಾತು ಬೆಸೆಯುತ್ತಾ ನಿಂತಿದ್ದಾರೆ. ಜೊತೆಗೆ ಕಾಫಿಕೆನೆಯಷ್ಟೆ ಸವಿಯಾದ ಕವಿತೆಗಳ ಸಾಲುಸಾಲು, ಆಗೊಮ್ಮೆ ಈಗೊಮ್ಮೆ ಬೀಳುವ ಬಾಲ್ಕನಿಯ ಕನಸುಗಳು ಇವೆಲ್ಲದರ ಜೊತೆಗೆ ಅವರ ಕನಸಿನ ಮೆರವಣಿಗೆ ಸಾಗುತ್ತಿದೆ. ಕಾಫಿರುಚಿ ಕಾಣಬೇಕಿದ್ದವರು ಇಲ್ಲಿಗೆ ಹೋಗಬಹುದು.

ಚರಿತಾರ ಹಾಡುಪಾಡು

ನನ್ನ ಪಾಡಿಗೆ ನಾನು... ಎನ್ನುತ್ತಲೇ ಬ್ಲಾಗಿನ ಮನೆಗೆ ಕಾಲಿಟ್ಟಿದ್ದಾರೆ ಚರಿತಾ. ಕೆಂಡಸಂಪಿಗೆಯಲ್ಲಿ ಕಲಾವಿದೆಯಾಗಿ ಆಗಾಗ್ಗೆ ಕಾಣಿಸಿಕೊಳ್ಳುವ ಇವರು ಸದ್ಯ ಹಳೆಯ ನಂಟೊಂದರ ಕನವರಿಕೆಯಲ್ಲಿದ್ದಾರೆ. ಕಲಾವಿದ್ಯಾರ್ಥಿಯಾಗಿದ್ದಾಗ ಬಂಗಾಳದ ಶಾಂತಿನಿಕೇತನದಲ್ಲಿ ಕಳೆದ ದಿನಗಳ ಅನುಭವವನ್ನು ಆಪ್ತವಾಗಿ ತೆರೆದಿಟ್ಟಿದ್ದಾರೆ. ಬಂಗಾಳದ ಹಳ್ಳಿಗಳು, ಸಪಾಟಾದ ವಿಶಾಲ ಬಯಲು, ಹೇರ್ಕಟ್ ಮಾಡಿಸಿ ನಿಂತ ಹೈದನಂತಿರುವ ತಾಳೆಮರಗಳ ಸಾಲು... ಎಲ್ಲವನ್ನೂ ಕಂಡು ವಿಸ್ಮಯಗೊಂಡಿದ್ದಾರೆ. ತಿಳಿಹಸಿರಿನ 'ಲೇಡಿಬರ್ಡ್' ನೊಂದಿಗೆ ಅಲ್ಲಿನ ಅಂಗಳದಲ್ಲೆಲ್ಲ ಸುತ್ತಾಡಿದ್ದಾರೆ.

ಮೊನ್ನೆ ಮೇಲುಕೋಟೆಗೆ ಭೇಟಿ ಕೊಟ್ಟ ಅವರಿಗೆ ಹಳೆಯ ನೆನೆಪುಗಳೆಲ್ಲ ಮತ್ತೆ ಕಣ್ಮುಂದೆ ಬಂದಂತಾಗಿದೆ. ಅದಕ್ಕೂ ಮುನ್ನ ಚರಿತಾ ನೆಲೆ ಇರದ ನಲ್ಮೆ ಅರಸಿ.... ವಿರಾಗಿಯಂತೆ ನಡೆದಿದ್ದಾರೆ.

ಉದಯರಾಗದ ಚಿತ್ತಾರ

ದಿನದ ಬ್ಲಾಗಿನಲ್ಲಿದೆ ಉದಯರಾಗದ ಸುಂದರ ಚಿತ್ರಗಳ ಪ್ರತಿಬಿಂಬ.

ಚುನಾವಣಾ ಕಾವು ತಡೆಯಲಾರೆ ಎಂಬಂತೆ ನೀರಿಗಿಳಿದು ತೇಲುತ್ತಿರುವ ಕಾಗೆ, ನೂರು ರೂಪಾಯಿಗೆ ಸಿಗುವ ಪರಿಸರ ಸ್ನೇಹಿ ಬೈಕು, ಕಲ್ಲಿನಲ್ಲೂ ಅರಳಿದ ಚಿತ್ತಾರ, ಗುಡ್ಡದ ಮೇಲಣ ಕಲ್ಲು ಚಪ್ಪರ... ಕ್ಯಾಮರಾ ಕಣ್ಣೊಂದು ಸೆರೆಹಿಡಿದ ಇಂತೆಲ್ಲ ಚಿತ್ರಗಳು ಇಲ್ಲಿವೆ. ಈ ಚಿತ್ರಗಳನ್ನೆಲ್ಲ ತಮ್ಮ ಉದಯರಾಗಕ್ಕೆ ತುಂಬುತ್ತಿದ್ದಾರೆ ಬ್ಲಾಗಿಗ ಮಹೇಶ್. ನೋಡಬೇಕಿದ್ದವರು ಇಲ್ಲಿಗೊಮ್ಮೆ ಹೋಗಿಬರಬಹುದು.

ನೀಲಿಹೂವಿನ ತೋಟ

ನೀಲಿಹೂವೆಂದರೆ ಬರೀ ಹೂವಲ್ಲ. ಭಾವಗಳಿಗೆ ಗಾಳ ಹಾಕಿದಾಗ ಸಿಕ್ಕ ಪ್ರೀತಿ ಎಂಬ ತಿಮಿಂಗಿಲ, ಭೋರೆಂದು ಸುರಿಯುವ ಭಾವಗಳಿಗೆ ಹಿಡಿದ ಬೊಗಸೆ, ಒಲವಿನ ಸಾಲು... ಎಲ್ಲವೂ. ಅಂತೆಯೇ ಇಲ್ಲಿ ಅದೆಲ್ಲ ಇದೆ. ತೆರೆದಿಟ್ಟ ಭಾವದ ಪ್ರೇಮಹನಿಗಳು, ನಾಲ್ಕು ಸಾಲಲ್ಲೇ ಮುಗಿದುಹೋಗುವ ಸಾಲುಸಾಲು ಕಥೆಗಳು, ಪ್ರೀತಿಯ ಗಾಳ ಹಾಕುವ ಒಲವಿನೋಲೆಗಳು ಎಲ್ಲ ಸಾಲುಸಾಲಾಗಿ ಹೊರಹೊಮ್ಮುತ್ತಿವೆ.

ಎಲ್ಲಾ ನೋವುಗಳನ್ನ ನಮ್ಮದಾಗಿಸಿಕೊಂಡು ನಲಿವಾಗಿಸಬೇಕು ಅನ್ನುವುದು ಈ ನೀಲಿಹೂವಿನ ಆಶಯ. ಇಂತಿಪ್ಪ ಹೂವಿನ ಬರಹತೋಟ ನೋಡಬಯಸುವವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಪತ್ತಾರರ ಚಿನ್ನದ ಹುಡುಗ

‘ಜಾಗತೀಕರಣದ ದಿಸೆಯಿಂದಾಗಿ ಇವತ್ತು ಕಂಪ್ಯೂಟರ್ ಗಳೇ ಎಲ್ಲ ಅಂತಾಗಿರಬಹುದು. ಆದರೆ ಅದೆಂದೂ ಕಲಾವಿದನ ಸ್ಥಾನ ಆಕ್ರಮಿಸಲು ಸಾಧ್ಯವಿಲ್ಲ. ಬ್ರಶ್ ಜಾಗದಲ್ಲಿ ಮೌಸ್ ಬರಬಹುದು. ಅದಕ್ಕೂ ಕಲಾವಿದನ ಚಿಂತನೆ ಮತ್ತು ಕೌಶಲ್ಯ ಬೇಕು.' ಹೀಗೆ ಸಾಗುತ್ತದೆ ಪತ್ರಕರ್ತ ದೇವು ಪತ್ತಾರರ ವಿಚಾರ ಸರಣಿ.

ದೇವು ಈಗ ತಮ್ಮ ಬ್ಲಾಗಿನಲ್ಲಿ ಕಲೆಯ ಕೌಶಲ್ಯದ ಕುರಿತು ಚರ್ಚಿಸಿದ್ದಾರೆ. ಅದಕ್ಕೂ ಮುನ್ನ ಉಸ್ತಾದ್ ವಿಲಾಯತ್ ಖಾನರ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟಿದ್ದಾರೆ. ಬೇಂದ್ರೆ ಪತ್ರಕರ್ತರಾಗಿ ಕೆಲಸ ಮಾಡಿದ್ದರ ಸವಿವರವಾಗಿ ಅಷ್ಟೇ ಅರ್ಥಪೂರ್ಣವಾಗಿ ಬರೆದಿದ್ದಾರೆ. ‘ಪತ್ನಿ ಪೀಡಕ ಶೇಕ್ಸ್ ಪಿಯರ್ ತೆರಿಗೆವಂಚಕ ಕೂಡ' ಅನ್ನುವಂತ ವಿಚಾರಪೂರ್ಣ ಬರಹವಿದೆ. ಜಾನ್ ಮ್ಯಾಕ್ಸವೆಲ್ ಕೋಟ್ಜಿ, ರಾಜೇಂದ್ರ ಕೇಶವಲಾಲ್ ಶಹಾ ರಿಂದ ಹಿಡಿದು ಗಿಟಾರ್ ರಾಚಪ್ಪನ ವರಗೆ ವಿವಿಧ ವರ್ಗದ ವ್ಯಕ್ತಿಪರಿಚಯದ ಬರಹಗಳು ಇಲ್ಲಿವೆ. ಸಂಗೀತ, ಕಲೆಯಲ್ಲಿ ಆಸಕ್ತಿ ಉಳ್ಳ ಪತ್ತಾರರ ಇಂತಹದ್ದೇ ಹಲವು ಬರಣಿವಣಿಗೆಗಳನ್ನು ಇಲ್ಲಿ ಕಾಣಬಹುದು

ಪೂರ್ಣಿಮರ ಹೆಸರಿನ ಕಸಿವಿಸಿ

ನಾವಿಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವ ನಮ್ಮ ಹೆಸರು ಅಲ್ಲಿ ಪರದೇಶದ ಜನರ ಬಾಯಲ್ಲಿ ಮತ್ತೇನೋ ಆಗಿ, ಯಾಕದ್ರೂ ಈ ಹೆಸರಿಟ್ಟುಕೊಂಡೆನಪ್ಪ ಅಂತನ್ನಿಸಿದರೆ ಹೇಗಾಗಬಹುದು? ಉತ್ತರ ಬೇಕಿದ್ದವರು ಪೂರ್ಣಿಮಾ ಭಟ್ಟರ ಈ ಪೇಚಿನ ಪ್ರಸಂಗಗಳನ್ನೊಮ್ಮೆ ಓದಿ. ಸದ್ಯ ಲಂಡನ್ನಿನಲ್ಲಿರುವ ಅವರಿಗೆ ಹೆಸರಿನದ್ದೇ ಚಿಂತೆ. ಸಹೋದ್ಯೋಗಿಗಳಿಂದ ಹಿಡಿದು, ಸೇಲ್ಸ್ ನ ಹುಡುಗಿಯವರೆಗೆ ಎಲ್ಲರೂ ಇವರ ಹೆಸರಿಗೆ ಕೊಟ್ಟ ಹಿಂಸೆ ಅಷ್ಟಿಷ್ಟಲ್ಲ. ಅಂತೂ ಇಂತು ಅವರಿಗೆಲ್ಲ ‘ಪೂನಿ' ಅಂತ ಕರೆಯಲು ಕಲಿಸಬೇಕಾದರೇ ಆರು ತಿಂಗಳಾಯಿತಂತೆ. ಇನ್ನೂ ಪೂರ್ತಿ ಹೆಸರು ಕಲಿಸುವುದು ಅದೆಷ್ಟೋ ವರ್ಷಕ್ಕೊ.

ಬರೆಯುವುದು ಅಪರೂಪಯಾದರೂ, ಬರದದ್ದೆಲ್ಲ ಆಪ್ತ ಎಂಬಂತೆ ಬರೆಯುವ ಅವರ ಕವಿತೆ ಒಂದು ತುಣುಕು ಇಲ್ಲಿದೆ.

ನಡೆದದ್ದು ಅವರ
ಮೂಗಿನ ನೇರ ದಾರಿ ಹಿಡಿದೇ.
ಹಾಗಾದರೆ ತಪ್ಪಾಗಿದ್ದೆಲ್ಲಿ?
ಕೊನೆಗೂ ಮರೆತಿದ್ದು
ಮನೆಯ ಹಾದಿ!

ಮಹೇಂದ್ರ ಕಣ್ಣಲ್ಲಿ ರಘು ದೀಕ್ಷಿತ್

ಚಿತ್ರ ಕಲಾವಿದ ಮಹೇಂದ್ರ ಸಿಂಹ ಸದ್ಯ ರಘು ದೀಕ್ಷಿತ್ ರ ಸಂಗೀತದ ಗುಂಗಿನಲ್ಲಿದ್ದಾರೆ. ಅವರು ಬಹಳ ದಿನದಿಂದಲೂ ಬಲ್ಲ ರಘು ಬಗ್ಗೆ ಮಾತಾಡುತ್ತಾ ಕನ್ನಡಕ್ಕೊಂದು ಫಿರಂಗಿ ಧ್ವನಿ ಬಂದಂತಾಗಿದೆ ಎಂತೆಲ್ಲ ಹೊಗಳಿದ್ದಾರೆ. ಆದರೂ ಅವರ ಕೆಲ ಹಾಡುಗಳನ್ನು ಕೇಳಲಿಕ್ಕೆ ಕಷ್ಟ ಅಂತಲೂ ತೆಗೆಳಿದ್ದಾರೆ. ಒಟ್ಟಾರೆ ಸ್ನೇಹಿತನೆಂಬ ಹಂಗಿಗೊಳಗಾಗದೇ ನೇರವಾಗಿ ಅನಿಸಿದ್ದನ್ನು ಬರೆದಿದ್ದಾರೆ.

‘ಬಣ್ಣದ ಚಿಗುರು' ಎಂಬ ಈ ಬ್ಲಾಗ್ ಚಿತ್ರ - ಚಿಂತನೆ - ಚಿಂದಿ - ಚಿತ್ರಾನ್ನ ಎಲ್ಲಕ್ಕೂ ಮೀಸಲಂತೆ. ಉಳಿದಂತೆ ಮಹೇಂದ್ರ ಬಿಡುವಾಗಿದ್ದಾಗಲೆಲ್ಲ ಬರೆದ ಕವಿತೆಗಳು, ಲೇಖನಗಳು ಅದಕ್ಕೆ ತಕ್ಕಂತೆ ಚಂದದ ಚಿತ್ರಗಳು ಎಲ್ಲಾ ಇಲ್ಲಿವೆ. ಒಮ್ಮೆ ಹೋಗಿ ಬನ್ನಿ.

ಭಾವನಾ ತೋಟದಲ್ಲಿ ಬಸ್ಸಿನ ಕಥನ

ಇಲ್ಲೊಬ್ಬರು ಬ್ಲಾಗಿಗರು ಇನ್ನೂ ಬಸ್ಸಿನಲ್ಲಿ ಸಿಕ್ಕ ಹುಡುಗಿಯ ಜಪ ಮಾಡುತ್ತಿದ್ದಾರೆ. ಸುನೀಲ್ ಮಲ್ಲೇನಹಳ್ಳಿ ಅನ್ನುವ ಇವರು ಮೊನ್ನೆ ಮೊನ್ನೆ ಯಾವುದೋ ಊರಿಗೆ ಹೊರಟಿದ್ದರಂತೆ. ಹೀಗೆ ಬಸ್ಸಿನಲ್ಲಿ ಹೋಗುವಾಗ ಪಕ್ಕದಲ್ಲಿ ಹುಡುಗಿಯೊಬ್ಬಳು ಬಂದು ಕೂತಿದ್ದಾಳೆ. ಅವಳ ಕಂಡು ಇವರ ಹೃದಯ ಮಿಡಿದಿದೆ. ಹುಡುಗಿಯ ಮೆಚ್ಚಿಸಲೆಂದು ಚಿಲ್ಲರೆ ಕಾಸು ದಾನ ಮಾಡಿದ್ದು, ಇಂಗ್ಲಿಷ್ ಪುಸ್ತಕ ಓದಿದ್ದು ಹೀಗೆ ಎಲ್ಲ ಪರಿಯ ಸರ್ಕಸ್ಸು ಮಾಡಿ ಹುಡುಗಿಯನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಎರಡು ಕಂತಾಗಿರುವ ಅವರ ಈ ಅನುಭವ ಕಥನ ಇನ್ನೂ ಸರಣಿಯಾಗಿ ಮುಂದುವರಿಯುತ್ತಾ ಸಸ್ಪೆನ್ಸ್ ಉಳಿಸಿಕೊಂಡಿದೆ.

‘ಭಾವನಾ ತೋಟದೊಳಗೆ ನಿಮಗಾದರದ ಸ್ವಾಗತ' ಹಾಗಂತ ಈ ಬ್ಲಾಗಿನ ಹೆಸರು. ಹೆಚ್ಚಾಗಿ ಕವಿತೆಗಳು, ಒಮ್ಮೊಮ್ಮೆ ಲೇಖನ, ಆಗೊಮ್ಮೆ ಈಗೊಮ್ಮೆ ರೀಮಿಕ್ಸ್ ಹಾಡುಗಳು ಎಲ್ಲ ಇಲ್ಲಿ ಬಂದು ಹೋಗುತ್ತಿರುತ್ತವೆ.

ಯಾರಿದು ಎನಿಗ್ಮಾ

ಯಾರಿದು ಎನಿಗ್ಮಾ? ಹಾಗೊಂದು ಪ್ರಶ್ನೆ ಈಗ ಬ್ಲಾಗ್ ಲೋಕದಲ್ಲೆಲ್ಲ ಸುತ್ತಾಡುತ್ತಿದೆ. ವಾರದ ಹಿಂದಷ್ಟೆ ಬ್ಲಾಗು ಶುರು ಮಾಡಿ, ಪೋಸ್ಟುಗಳ ಮೇಲೆ ಪೋಸ್ಟು ಮಾಡುತ್ತ ಬಂದಿರುವ ಬ್ಲಾಗಿನತ್ತ ಬ್ಲಾಗಿಗರ ಚಿತ್ತ ಸಹಜವಾಗೇ ಹರಿಯುತ್ತಿದೆ. ಚೇತನಾರ ಅಂಕಣವನ್ನೇ ಮುನ್ನುಡಿಯಾಗಿಸಿಕೊಂಡು ಬಂದ ಬ್ಲಾಗಿನಲ್ಲಿ ಈಗಾಗಲೇ ಚಾರುಲತಾ ಒಂದೆರಡು ಕವಿತೆ ಹಾಡಿದ್ದಾರೆ. ಪ್ರಮತಿ ಚಂದದೊಂದು ಕಥೆ ಬರೆದಿದ್ದಾರೆ. ‘ಬಾನಿಗೊಂದು ಬೊಗಸೆ. ಇದಕ್ಕೇಕೆ ಹೆಸರಿನ ಹಂಗು?' ಅಂತನ್ನುವ ಎನಿಗ್ಮಾ ಮಾತ್ರ ಅನಾಮಧೇಯರಾಗೇ ಉಳಿದಿದ್ದಾರೆ. ಅದ್ಯಾರೇ ಇರಲೀ, ನಿರಂತರವಾಗಿ ಬರೆಯುತ್ತಿರಲಿ ಎಂಬುದೇ ನಮ್ಮ ಆಶಯ.

ನಯಾಗರಾದಲ್ಲಿ ಹೃದಯ ಚಿತ್ತಾರ

ಸದ್ಯ ಕೆನಡಾ ದೇಶದ ಮಾಂಟ್ರಿಯಾಲ್ ನಗರದಲ್ಲಿರುವ ಬೆಂಗಳೂರು ನಿವಾಸಿ ರಾಜಶೇಖರ್ ಕಳೆದೊಂದು ವರ್ಷದಿಂದ ಬ್ಲಾಗಿಸುತ್ತಿದ್ದಾರೆ. ಕಳೆದ ತಿಂಗಳು ಸಿಕ್ಕ ರಜೆಯಲ್ಲೇ ನಯಾಗರ ಜಲಪಾತ ಸುತ್ತಿ ಬಂದ ರಾಜ್ ಇಡೀ ನಯಾಗರಾವನ್ನೇ ಬ್ಲಾಗಿಗೆ ತಂದಿದ್ದಾರೆ. ಜಲಪಾತದ ಅಡಿಯಿಂದ ಮುಡಿಯವರೆಗೆ ಹೋಗಿಬಂದಿದ್ದು, ಹರಡಿದ ಹನಿಗಳ ನಡುವೆ ಕಾಮನಬಿಲ್ಲು ಮೂಡಿದ್ದು , ರಾತ್ರಿ ನಯಾಗರಾದ ಬಣ್ಣವೇ ಬದಲಾದದ್ದು, ದಟ್ಟವಾದ ಮೋಡವೊಂದರಂತೆ ನೀರು ಮೇಲಕ್ಕೇರುತ್ತಿದ್ದದ್ದು ಎಲ್ಲವೂ ಇವರ ಕ್ಯಾಮರಾ ಕಣ್ಣಿನಲ್ಲಿ ಬಂಧಿಯಾಗಿವೆ.

ವಸಂತಕಾಲದಲ್ಲಿ ಮಾವಿನ ಚಿಗುರು ನೋಡುವ , ಕೋಗಿಲೆ ಹಾಡು ಕೇಳುವ ಭಾಗ್ಯ ನಮ್ಮಂತ ಪರದೇಶದಲ್ಲಿರುವವರಿಗಿಲ್ಲ ಎಂತನ್ನುತ್ತಲೇ ಹಸಿರು ಹೊದ್ದಿಕೊಂಡ ಪ್ರಕೃತಿ ಯಾವ ದೇಶದ್ದಾದರೂ ನೋಡಲು ಚೆಂದ ಅಂತ ರಾಜ್ ಸಮಾಧಾನಪಟ್ಟುಕೊಳ್ಳುತ್ತಾರೆ. ಹಾಗಂದುಕೊಳ್ಳುತ್ತಲೇ ಕೆನಡಾದಲ್ಲಿನ ವಸಂತಕಾಲ, ಚಳಿಗಾಲದಲ್ಲಿನ ಸುಂದರ ಚಿತ್ರಗಳನ್ನು ಬ್ಲಾಗಿಗೆ ತುಂಬಿಸಿದ್ದಾರೆ. ಈಗ, ಇದನ್ನೆಲ್ಲ ನಿಜವಾಗಿ ನೋಡುವ ಅದೃಷ್ಟ ನಮಗಿಲ್ಲವಲ್ಲ ಅಂತ ಹಲುಬುವ ಅವಕಾಶ ನಮ್ಮದು!

ಅಕ್ಷರವಿಹಾರದಲ್ಲಿ ಮಹಿಳಾ-ವಾದ

ಚೇತನಾರ ಬ್ಲಾಗಿನಲ್ಲಿ ಮಹಿಳಾವಾದದ ಕುರಿತು ನಡೆಯುತ್ತಿದ್ದ ಚರ್ಚೆ ಈಗ ‘ಅಕ್ಷರ ವಿಹಾರ'ದತ್ತ ತಿರುಗಿದೆ. ಆಗಾಗೊಮ್ಮೆ ವಿನಾಕಾರಣ ಏನನ್ನಾದರೂ ಬರೆದು ವಾದ ಮಾಡುವ ವಿನಾಯಕರು ಈ ಬಾರಿ ‘ಮೆಣಸಿನಕಾಯಿ ಮತ್ತು ಮಹಿಳಾವಾದ' ಅಂತ ಬರೆದು ಇನ್ನೊಂದು ವಾದಕ್ಕೆ ಕಿಚ್ಚು ಹಚ್ಚಿದ್ದಾರೆ. ಮೆಣಸಿನಕಾಯಿ ತರುವುದರಿಂದ ಶುರುವಾದ ವಿನಾಯಕರ ಮಾತು ಮತ್ತೆಲ್ಲಿಗೋ ತಿರುಗಿ, ಮಹಿಳಾ-ಪುರುಷ ವಾದ ಅಂತೆಲ್ಲ ಗಸ್ತು ಹೊಡೆಯುತ್ತಿದೆ. ಅದಕ್ಕೆ ಪ್ರತಿಯಾಗಿ ಎಂಬಂತೆ ಮಾತು ಬೆಳೆದು ವಿಚಾರ ಇನ್ನೆಲ್ಲಿಗೋ ಮುಟ್ಟುತ್ತಿದೆ. ಇಂತಹದ್ದೊಂದು ಚರ್ಚೆಯಲ್ಲಿ ನೀವು ಭಾಗವಹಿಸಬೇಕೆಂದಿದ್ದರೆ, ಕೂಡಲೇ ಇಲ್ಲಿಗೆ ಹೊರಡಿ.

ಕನಸಿಗೂ ಒಂದು ಬ್ಲಾಗ್

ಕನಸು ಕಾಣೋದಕ್ಕೆ, ಕಂಡಿದ್ದನ್ನು ಬರೆಯೋದಕ್ಕೆ ಅಂತಲೇ ಸುಷ್ಮ ಒಂದು ಬ್ಲಾಗು ಶುರು ಮಾಡಿದ್ದಾರೆ. ಅದೇ ‘ಕಂಡೆ ನಾನೊಂದು ಕನಸು'. ನಿದ್ದೆಯ ವೇಳೆಯಲ್ಲಿ, ನಿದ್ದೆ ಬರದ ಹೊತ್ತಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಕನಸುಗಳಿಗೆ ಕಥೆಯ ರೂಪ ಕೊಟ್ಟು ಇಲ್ಲಿ ಬರೆಯುತ್ತಿದ್ದಾರೆ. ‘ಇದು ನನ್ನ ಕನಸುಗಳ ತಾಣ. ಹಾಗೆಂದು ಇವು ನಾನು ಕಂಡುಕೊಂಡ ಕನಸುಗಳಲ್ಲ! ತಾವಾಗೇ ಬಂದು ಬಿದ್ದಕನಸುಗಳು! ಈಗ ಐದು ವರುಷಗಳಿಂದ ನಾನು ಸಾಕಷ್ಟು ಬದಲಾಗಿದ್ದೇನೆ. ಅದೆಷ್ಟರ ಮಟ್ಟಿಗೆ ಎಂದರೆ ನನ್ನ ಬದುಕಿನ ಅಷ್ಟೂ seriousness ಕನಸುಗಳೊಳಗೆ ತೂರಿ ಹೋಗಿ ನಾನು ನಿರಾಳವಾಗಿಬಿಟ್ಟಿದ್ದೇನೆ!' ಅನ್ನುವುದು ಕನಸು ಇವರ ಮನದ ಮಾತು.

ಶ್ರೀದೇವಿಯ ಆಲಾಪ

ಹೊಸತೊಂದು ಆಲಾಪದೊಂದಿಗೆ ಆಗಾಗ್ಗೆ ಬ್ಲಾಗಿನಂಗಳದಲ್ಲಿ ಕಾಣಿಸಿಕೊಳ್ಳುವ ಶ್ರೀದೇವಿ ಈ ಬಾರಿ ಹಳದಿಯೊಳಗಿನ ಬೆಳಕಿನೊಡನೆ ಬಂದಿದ್ದಾರೆ. ಹಳದಿಯ ಬೆಳಕಿನೊಡನೆ ಹೂವಿನಂತೆ ಅರಳುವ ಹುಡುಗಿ ತನ್ನ ದಿನಚರಿಯನ್ನು ತೆರೆದಿಡುವ ಸ್ವಗತದಂತಿದೆ. ಬುದ್ದಿವಂತರಲ್ಲದವರಿಗೆ ಅಷ್ಟು ಸುಲಭವಾಗಿ ಅರ್ಥವಾಗದ ಸಾಲುಗಳು ಮತ್ತೇನೋ ಚಿಂತನೆಗೆ ಹಚ್ಚುತ್ತವೆ.

ಉಳಿದಂತೆ ಸಂಗೀತಪ್ರಿಯೆ ಶ್ರೀದೇವಿಯ ರಾಗರತಿಯ ಸಾಲು, ಕಾಮನ್ ಬಿಲ್ಲು, ಕಪ್ಪುಬಿಳಿಯಂಥ ಕವಿತೆಗಳು ಇನ್ನಿತರ ಆಲಾಪಗಳು ಇಲ್ಲಿ ಓದಸಿಗುತ್ತವೆ. ಒಮ್ಮೆ ಹೋಗಿಬನ್ನಿ.

ಓದಿದ್ದು ಕೇಳಿದ್ದು ನೋಡಿದ್ದು

ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.

ಗೃಹಸಚಿವರ ಖಾಸಗಿ ಬ್ಲಾಗು

ನಮ್ಮ ಕರ್ನಾಟಕ ರಾಜ್ಯದ ಗೃಹ ಸಚಿವರಾದ ಡಾ.ವಿ ಎಸ್ ಆಚಾರ್ಯರು ಕಳೆದೊಂದು ವರ್ಷದಿಂದಲೂ ಬ್ಲಾಗಿಸುತ್ತಾ ಬಂದಿದ್ದಾರೆ. ಮಂತ್ರಿಗಳ ಭಾಷಣ ವರದಿಗಳಿಂದ ಹಿಡಿದು ಸರ್ಕಾರಿ ಕೆಲಸಗಳವರೆಗೆ, ವಿವಿಧ ಪ್ರಚಾರ ಕಾರ್ಯಗಳು, ಸಭೆಗಳು ಎಲ್ಲದರ ವಿವರ ಇಲ್ಲಿದೆ. ಅದಕ್ಕೆ ತಕ್ಕಂತ ಪತ್ರಿಕಾ ವರದಿಗಳನ್ನು ಅಲ್ಲಲ್ಲಿ ಉಲ್ಲೇಖಿಸಲಾಗಿದೆ. ಕೆಲವೊಮ್ಮೆ ಸಚಿವರ ವಿರುದ್ಧ ಬರೆದ ಪತ್ರಕರ್ತರನ್ನು ತರಾಟೆಗೆ ತೆಗೆದುಕೊಳ್ಳುವುದು, ಸಚಿವರನ್ನು ಸಮರ್ಥಿಸಿಕೊಳ್ಳುವ ಯತ್ನವೂ ನಡೆದಿದೆ.

ಜೊತೆಗೆ ಆಚಾರ್ಯರ ಬಾಲ್ಯದ ಅಪರೂಪದ ಛಾಯಾಚಿತ್ರಗಳು, ನೆನಪುಗಳು, ವಿವಿಧ ಮಹನೀಯರೊಡನೆ ಅವರು ತೆಗೆಸಿಕೊಂಡ ಚಿತ್ರಗಳು ಇಲ್ಲಿ ಕಾಣ ಸಿಗುತ್ತವೆ. ಏನೇ ಆಗಲಿ ಸದಾ ಅಧಿಕಾರ ನಡೆಸುವಲ್ಲೇ ಬಿಸಿಯಾಗಿರುವ ಮಂತ್ರಿಗಳು ಆಗಾಗ್ಗೆ ಬಿಡುವು ಮಾಡಿಕೊಂಡು ಬ್ಲಾಗಿಸುತ್ತಿರುವುದು ಖುಷಿಯ ವಿಚಾರವೇ.

ಚೆವಾರ್ ಬ್ಲಾಗಿನಲ್ಲಿ ವಯಲಿನ್ ಮಾಂತ್ರಿಕನ ನೆನಪು

ಚೆವಾರ್ ತಮ್ಮ ‘ಹಳೆಯ ಕೊಳಲೊಳಗೆ ಹೊಸ ಉಸಿರು' ನಲ್ಲಿ ವಯಲಿನ್ ವಾದಕ ಕುನ್ನಕುಡಿ ಆರ್ ವೈದ್ಯನಾಥನ್ ರನ್ನು ನೆನೆದಿದ್ದಾರೆ. ಅದರಂತೆ ವೈದ್ಯನಾಥನ್ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ರುಪಾಯಿ ಅಗಲದ ಕುಂಕುಮ ಬೊಟ್ಟು, ಚಿನ್ನದ ಮಾಲೆ ಧರಿಸಿದ, ಪಿಟೀಲಿನ ತಂತಿಯ ಮೈಮೇಲೆ ಕೈಯಾಡಿಸಿದರೆ ಎಲ್ಲರನ್ನೂ ಮಂತ್ರ ಮುಗ್ಧಗೊಳಿಸುತ್ತಿದ್ದ ಕುನ್ನಕುಡಿ ನಿಧನ ಚೆವಾರ್ ರಂಥ ಅಭಿಮಾನಿಗಳಿಗೆ ದುಃಖ ತಂದಿದೆ. ಪದ್ಮಪ್ರಶಸ್ತಿ ವಿಜೇತ ಖ್ಯಾತ ವಯಲಿನ್ ವಾದಕನ ನಿಧನದ ಸುದ್ದಿಯನ್ನು ಈವರೆಗೂ ಮಾಧ್ಯಮಗಳು ಬಿತ್ತರಿಸದೇ ಇರುವುದು ಅವರಿಗೆ ಬೇಸರ ತಂದಿದೆ.

ಪಾರಿಜಾತದಲ್ಲಿ ಕೆಮ್ಮಿನ ಕೊರೆತ

ಒಮ್ಮೆ ಕೆಮ್ಮು ಬಂದರೆ ಹಾಗೆಲ್ಲ ಸುಮ್ಮನೆ ಹೋಗುವುದಿಲ್ಲ. ಒಂದಿಷ್ಟು ಕಾಡಿ ಮತ್ತೇನೇನೋ ಕಾಟ ಕೊಟ್ಟ ಮೇಲೆ ವಾಸಿಯಾಗೋದು. ಕೆಮ್ಮಿದವರಿಗಷ್ಟೆ ಗೊತ್ತು ಅದರ ಕಷ್ಟ. ಇಲ್ಲ ಅಂತ ವಾದಿಸುವವರು ಶುಭದಾರ ಈ ಕಷ್ಟಗಳನ್ನೊಮ್ಮೆ ಕೇಳಿ. ತಿಂಗಳುಗಟ್ಟಲೆ ಕೆಮ್ಮಿ ಕಂಗಾಲಾಗಿ, ಇಂಗ್ಲಿಷಿನ ಮಾತ್ರೆಗಳಿಂದ ಹಿಡಿದು, ಆರ್ಯುರ್ವೇದ ಅಲೋಪತಿವರೆಗೆ ನಾನಾ ಚಿಕಿತ್ಸೆಯನ್ನು ಕೈಗೊಂಡಾಗ್ಯೂ ಕೆಮ್ಮು ಮಾತ್ರ ಇವರನ್ನು ಬಿಟ್ಟು ಹೋಗಿಲ್ಲ. ಆ ನೆಪದಲ್ಲೇ ಇವರಿಗೆ ಮಾಧುರಿ, ರಾಣಿ ಮುಖರ್ಜಿ ಥರ ಅಂತೆಲ್ಲ ಕಾಂಪ್ಲಿಮೆಂಟು ಸಿಕ್ಕಿದ್ದು ಸುಳ್ಳಲ್ಲ.

ಉಳಿದಂತೆ ‘ಚವಣೆ ಪ್ರಸಂಗ' ‘ವನಸುಮ' , ‘ಯಶಸ್ವಿ ಪುರುಷನ ವೃತ್ತಾಂತ' , ‘ರಸ್ತೆ ದಾಟುವಾಗ' ಮುಂತಾದ ಲಘು ಹರಟೆಯ ಬರಹಗಳು ಓದಲು ಖುಷಿ ಕೊಡುತ್ತವೆ. ಒಮ್ಮೆ ಓದಿ ಬನ್ನಿ.

ಲಹರಿಯಲ್ಲಿ ಬಾಯ್ಸ್ ಡೈರಿ

ಕಳೆದೆರಡು ತಿಂಗಳ ಹಿಂದಿನಿಂದ ಬ್ಲಾಗ್ ಲೋಕದಿಂದ ಕಾಣೆಯಾಗಿದ್ದ ಎಂಡಿ ಈ ಬಾರಿ ಬಾಯ್ಸ್ ಡೈರಿಯೊಂದಿಗೆ ಬಂದಿದ್ದಾರೆ. ಸದ್ಯಕ್ಕಿಲ್ಲಿ ಅವರ ಬಾಯ್ಸ್ ಬಳಗದ ಪರಿಚಯ ನಡೆಯುತ್ತಿದೆ. ವಿಜಯನಗರದ ಪಾರ್ಕ್ ವೀವ್ ನಲ್ಲಿ ಭೇಟಿಯಾಗಿ, ಬೆಚ್ಚಗೆ ಬೀಯರ್ ಹೀರುತ್ತಾ ಮಾತು ಶುರು ಮಾಡಿದ್ದಾರೆ. ಒಂದಿಷ್ಟು ನಶೆ ಏರಿದ್ದೆ, ಸರಣಿಯ ಮುಂದಿನ ಭಾಗದಲ್ಲಿ ‘ಥ್ರೀ ಪೆಗ್ಸ್ ' ಎನ್ನುವ ನೈಜ ಕಥೆಯೊಂದನ್ನು ಹೇಳುವುದಾಗಿ ಮಾತು ಕೊಟ್ಟಿದ್ದಾರೆ.

ಬೇದ್ರೆ ಮಿದುಳು

ಬೇದ್ರೆ ಮಿದುಳು ಎಂಬ ಹೊಸ ಬ್ಲಾಗ್ ಪ್ರಾರಂಭಿಸಿದ್ದಾರೆ ಚಿತ್ರದುರ್ಗದ ಬೇದ್ರೆ ಮಂಜುನಾಥ್. ಸುಮ್ಮನೆ ಬೇದ್ರೆ ಮಿದುಳಿಗೆ ಕೈ ಹಾಕಬೇಡಿ ಎನ್ನುತ್ತಲೇ ಎಲ್ಲರನ್ನೂ ತಮ್ಮ ಬ್ಲಾಗಿಗೆ ಪ್ರೀತಿಯಿಂದ ಆಹ್ವಾನಿಸಿದ್ದಾರೆ. ಶಿಕ್ಷಣ ಕ್ಷೇತ್ರದತ್ತ ಆಸಕ್ತಿ ಹೊಂದಿರುವ ಮಂಜುನಾಥ್ ತಾವು ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪತ್ರಿಕೆಗಳಿಗೆ ಬರೆದಿರುವ ಲೇಖನಗಳನ್ನು ಬ್ಲಾಗಿನಲ್ಲೂ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ಬರಹಗಾರರ ಉತ್ತಮ ಲೇಖನಗಳನ್ನೂ ಪ್ರಕಟಿಸಿದ್ದಾರೆ. ವ್ಯಕ್ತಿತ್ವ ವಿಕಸನ, ಸಾಮಾನ್ಯ ಜ್ಞಾನ, ಶಿಕ್ಷಣ, ಸಂವಹನ ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಪುಸ್ತಕ ಪರಿಚಯಗಳಿವೆ. ಅವರೇ ಬರೆದಿರುವ ಪುಸ್ತಕಗಳ ವಿವರಗಳಿವೆ. ಬೇದ್ರೆ ಮಿದುಳಿಗೆ ನೀವೂ ಒಮ್ಮೆ ಕೈ ಹಾಕಬಹುದು.

ಪಲ್ಲವಿಯ ರಾಗ

ಈಗ್ಗೆ ತಿಂಗಳುಗಳ ಹಿಂದಿನಿಂದ ಕನ್ನಡ ಬ್ಲಾಗ್ ಲೋಕದಲ್ಲಿ ಸದ್ದು ಮಾಡುತ್ತ ಬಂದಿರುವ ಪಲ್ಲವಿ ಎಂಬ ಧಾರವಾಡದ ಹುಡುಗಿ ಬ್ಲಾಗಿನಂಗಳಕ್ಕೆ ಬಂದಿದ್ದಾರೆ. ಇಷ್ಟು ದಿನ ಸಂಪದದ ಅಂಗಳದಲ್ಲಿ ಸುತ್ತಾಡುತ್ತಿದ್ದ ಅವರ ಬ್ಲಾಗ್ ಬರಹಗಳು ಈಗ ಬ್ಲಾಗ್ ಸ್ಪಾಟಿನ ತಾಣಕ್ಕೂ ವಿಸ್ತರಿಸಿಕೊಂಡಿವೆ. ಮಧ್ಯರಾತ್ರಿಯಲ್ಲಿ ಬುದ್ಧನಂತೆ ಎಚ್ಚೆತ್ತು ಯೋಚನೆ ಮಾಡುವ ಹುಡುಗಿ, ಕಚೇರಿ ಎಂಬ ನರಕದ ಕುರಿತು ಸರಣಿಯಾಗಿ ಬರೆಯತೊಡಗಿದ್ದಾರೆ. ಈಗಷ್ಟೆ ಅವರ ಮನೆಯ ಬಾಗಿಲಿಗೆ ಬಂದಿದ್ದ ಜೋಗಿತಿ ಮದುವೆಯ ಸದ್ದು ಮೊಳಗಿಸಿಹೋಗಿದ್ದಾಳೆ. ಅದಕ್ಕೆ ಪ್ರತಿಕ್ರಿಯೆಯೇನೋ ಎಂಬಂತೆ ಪಲ್ಲವಿ ನಾಚಿ ನೀರಾಗಿದ್ದಾರೆ.

ನಾಕುತಂತಿಯ ರಾಗ

ಬರೀ ಮಚ್ಚು-ಕೊಚ್ಚು ಅನ್ನೋದರಲ್ಲೇ ಮುಳುಗಿ ಹೋಗಿರೋ ನಮ್ಮ ಕನ್ನಡ ಸಿನಿಮಾ ರಂಗಕ್ಕೆ ಒಂದೊಳ್ಳೆ ಲವ್ ಸ್ಟೋರಿ ಸಿಗಲ್ವ. ಅದರಲ್ಲೂ ಸಿನಿಮಾದವರಿಗೆ ಸಾಫ್ಟ್ ವೇರ್ ಮಂದಿ ಲವ್ ಸ್ಟೋರಿ ಕಥೆಗಳೇ ಕಾಣಿಸೋಲ್ವ. ಹಾಗಂತ ನೊಂದುಕೊಳ್ಳುತ್ತಲೇ ಇಲ್ಲೊಬ್ಬರು ಸಾಫ್ಟ್ ವೇರ್ ಇಂಜಿನಿಯರ್ ತಮ್ಮ ದುಃಖ ತೋಡಿಕೊಳ್ಳುತ್ತಿದ್ದಾರೆ. ‘ಬೆಂಗಳೂರಿನಲ್ಲಿ ಆಗೂ ಒಂದು ಐವತ್ತು ಪರ್ಸೆಂಟು ಲವ್ ಸ್ಟೋರಿಗಳು ಸಾಫ್ಟವೇರ್ ಇಂಡಸ್ಟ್ರೀಯಲ್ಲೇ ಶುರು ಆಗೋದರಿಂದ ಈ ವಿಷಯದ ಮೇಲೆ ಒಂದಾದರೂ ಸಿನಿಮಾ ಮಾಡಬೇಕು' ಅನ್ನೋದು ಇವರ ಆಗ್ರಹ. ಶ್ರೀಧರರ ಈ ನಾಕುತಂತಿಯ ರಾಗವನ್ನೊಮ್ಮೆ ಕೇಳಬೇಕಿದ್ದವರು ಅಲ್ಲಿಗೆ ಹೋಗಬಹುದು.

ಛಾಯಾಕನ್ನಡಿ

ಛಾಯಾಕನ್ನಡಯಲ್ಲಿ ಶಿವುವಿನ ಕ್ಯಾಮೆರಾ ಮನಸಿನ ಮಿಡಿತ ನವಿರಾಗಿ ಸಾಗುತ್ತಿದೆ. ಮೊನ್ನೆ ಮೊನ್ನೆ ವೃದ್ಧ ಮತ್ತು ಕರಿಬೇವು ಎಂಬ ಲೇಖನವೊಂದು ಅಪ್‌ಡೇಟ್ ಆಗಿದೆ. ಬೆಂಗಳೂರಿನ ಮಲ್ಲೇಶ್ವರಂ ರೈಲು ನಿಲ್ದಾಣದ ಒಂದಿಷ್ಟು ಕಪ್ಪು ಬಿಳುಪು ಛಾಯಾಚಿತ್ರಗಳು ಗಮನ ಸೆಳೆಯುತ್ತದೆ. ಮೊತ್ತಮೊದಲ ಬಾರಿಗೆ ದುಡಿದ ಹಣವನ್ನೆಲ್ಲ ಒಟ್ಟು ಮಾಡಿ ಕೊಂಡ ಕ್ಯಾಮರವನ್ನು ಬೆರಳಿನಿಂದ ಸ್ಪರ್ಶಿಸಿದಾಗ ಆದ ಆನಂದದ ಅನುಭವವನ್ನು ಅವರು `ನೆರಳು ಬೆಳಕಿನ ಬೆಚ್ಚಗಿನ ನೆನಪುಗಳ`ಲ್ಲಿ ಬೆಚ್ಚಗೆ ಹೇಳಿಕೊಂಡಿದ್ದಾರೆ. ಗೋಧೂಳಿ ಸಮಯದಲ್ಲಿ ಕಾಯಕ ಮುಗಿಸಿ ಮನೆ ಕಡೆಗೆ ಪಯಣ ಹೊರಟ ಎತ್ತಿನ ಗಾಡಿ, ಮರಿಗಳಿಗೆ ಗುಟುಕು ಕೊಡಲು ಕಾತರಿಸಿರುವ ಮರಕುಟಿಕ ಹಕ್ಕಿ, ಕುರಿಹಿಂಡಿನೊಂದಿಗೆ ಮರಳುತ್ತಿರುವ ಕುರಿಗಾಹಿಯ ಚಿತ್ರಗಳು ಮತ್ತೆ ಮತ್ತೆ ನೋಡಲು ಖುಷಿಕೊಡುತ್ತವೆ. ಶಿವು ಕೆ. ಕ್ಲಿಕ್ಕಿಸಿದ ಹಲವು ಬಿಂಬಗಳು ಮನಸ್ಸಿನಲ್ಲಿ ಉಳಿಯುವುದರಿಂದ ಈ ಬ್ಲಾಗ್ ಇಷ್ಟವಾಗುತ್ತದೆ.

ನಿರಚಿತ

ಹೆಚ್ಚು ಕಡಿಮೆ ಮೂರುವರೆ ತಿಂಗಳಿನಿಂದ ಬ್ಲಾಗ್ ಲೋಕದಿಂದ ಕಾಣೆಯಾಗಿದ್ದ ನಿರಚಿತ ಮತ್ತೆ ಬಂದಿದ್ದಾರೆ. ಈ ಬಾರಿ ಒಂದಿಷ್ಟು ಎಸ್ ಎಂಎಸ್ ಹನಿಗಳೊಂದಿಗೆ. ‘ಮಲೆನಾಡಿನ ಮಳೆ ಹನಿಯಂತೆ ನನ್ನ ಮನಸ್ಸು!!! ತೇವದ ಹನಿಗಳ ನಡುವೆ ಅಕ್ಷರದ ಬೆಚ್ಚನೆಯ ಕಾವು ಸಿಗುವುದೆಂಬ ಎಂಬ ಮರೀಚಿಕೆ ಹುಡುಕಾಟ...' ಅನ್ನೋ ಮಲೆನಾಡಿನ ಹುಡುಗಿ ಇಷ್ಟು ದಿನ ಬರೆಯದಿದ್ದಕ್ಕೆ ಕಾರಣ ಗೊತ್ತಿಲ್ಲ. ಇನ್ನು ಮುಂದಾದರೂ ಆಗಾಗ್ಗೆ ಬರೆಯುತ್ತಾರೆಂಬ ಆಶಯ ನಮ್ಮದು. ಸದ್ಯಕ್ಕೆ ಅವರ ಅನುವಾದದ ಎಸ್ಸೆಮ್ಮೆಸ್ ಹನಿಯೊಂದು ಇಲ್ಲಿದೆ.

ಬರೆದೆ ನಿನ್ನ ಹೆಸರ ಮರಳ ಮೆಲೆ
ನೀರಿನ ಅಲೆ ಬಂದು ಕೊಚ್ಚಿ ಹೋಯ್ತು
ಬರೆದೆ ನಿನ್ನ ಹೆಸರ ಗಾಳಿಯ ಮೇಲೆ
ಬಿರುಗಾಳಿ ಬಂದು ತೂರಿ ಹೋಯ್ತು
ಕಡೆಗೆ ನಿನ್ನ ಹೆಸರ ಬರೆದೆ ನನ್ನ ಹೃದಯದಿ
ಪಾಪಿ! ನಿನ್ನ ಹೆಸರ ಬರೆದಿದ್ದಿದ್ದೆ ತಡ ಹೃದಯಬಡಿತ ನಿಂತೊಯ್ತು.

ಯುವಪ್ರೇಮಿಯ ಒಲವಿನೋಲೆ

ಇಲ್ಲೊಬ್ಬ ಯುವಪ್ರೇಮಿ ಕಳೆದೆರಡು ವರ್ಷಗಳಿಂದ ನಲ್ಲೆಗೆ ಒಲವಿನೋಲೆ ಬರೆಯುತ್ತಲೇ ಬ್ಲಾಗಿಸುತ್ತಿದ್ದಾರೆ. ಹೇಳಿಕೇಳಿ ಇದು ಪ್ರೇಮಿಯ ಬ್ಲಾಗಾದ್ದರಿಂದ ಇಲ್ಲಿ ಪ್ರೇಮ ನಿವೇದನೆಯ ಒಂದಿಷ್ಟು ಕವಿತೆ ಬಿಟ್ಟರೆ ಬೇರೆ ಏನೂ ಇಲ್ಲ. ಅದರಲ್ಲೇ ಹುಡುಗಿಗೆ ಕಣ್ಣು ಹೊಡೆಯುವುದು ಲಲ್ಲೆ ಗರೆದು, ಗಲ್ಲ ಸವರಿ, ಕೆನ್ನೆ ಮುತ್ತಿಕ್ಕಿ ಮುದ್ದು ಮಾಡುವುದು ಎಲ್ಲ ನಡೆದಿದೆ. ಮನೆಮನವ ಎಂದು ನೀ ತುಂಬುವೆ ಅಂತಂದು ಹಾಡು ಕೂಡ ಹಾಡಿದ್ದಾರೆ. ಕೇಳಬೇಕು ಅನ್ನಿಸುವವರು ಒಮ್ಮೆ ಹೋಗಿ ಬನ್ನಿ.

ಸೋಗೆಮನೆಯ ತಂಪು

ಅಕಾಲ ಅನ್ನೋ ಹೆಸರಿನಲ್ಲಿ ಬ್ಲಾಗಿಸುತ್ತಿರುವ ಈ ಬ್ಲಾಗಿಗರು ಕಾಲಕಾಲಕ್ಕೆ ಒಂದಿಷ್ಟು ಬರಹಗಳನ್ನು ಬ್ಲಾಗಿಗೆ ಹಾಕುತ್ತಿದ್ದಾರೆ. ತಿಂಗಳ ಹಿಂದಷ್ಟೆ ಶುರುವಾದ ಬ್ಲಾಗಿನಲ್ಲಿ ಒಂದಿಷ್ಟು ಚೆಂದದ ಪದ್ಯಗಳಿವೆ. ಸದ್ಯಕ್ಕಿಲ್ಲಿ ಜರಿಲಂಗದ ಹುಡುಗಿಯ ತೊಳತಾಟವಿದೆ. ಉಳಿದಂತೆ ‘ಒಂದು ಮುಂಜಾವು, ಮನುಷ್ಯ ತೀರಾ ಹುಚ್ಚ, ಬೂಟುಗಳು, ಚಾರ್ಮಿನಾರು, ಗೀರು' ಮುಂತಾದ ಕವಿತೆಗಳಿವೆ. ಕಥೆಯಲ್ಲದ ಕಥೆಯ ಜೊತೆಗೆ ಕಥೆಗಳೋ ಕಥೆಗಳಿವೆ. ಎಲ್ಲವನ್ನೂ ಓದಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬರಬಹುದು.

ಅಧಿಕ ಪ್ರಸಂಗಿಯ ಪ್ರಸಂಗಗಳು!

ಇಲೊಬ್ಬರು ಅಧಿಕ ಪ್ರಸಂಗಿ ಆಗಾಗ್ಗೆ ಅಧಿಕವಾದ ಪ್ರಸಂಗತನ ಮಾಡುತ್ತಲೇ ಬಂದಿದ್ದಾರೆ. ಒಂದು ಮನಸ್ಸಲ್ಲೇ ಹತ್ತು ಮುಖಗಳನ್ನ ಕಾಣೋ ಇವರಿಗೆ ಸುಮ್ಮನೆ ಯಾರನ್ನಾದ್ರು ಎದುರು ಹಾಕಿಕೊಳ್ಳೊದು ಇಷ್ಟವಂತೆ. ಈಗಿವರ ಕಣ್ಣು ಬಿದ್ದಿರೋದು ‘ಬುದ್ದಿವಂತ'ನ ನಕಲಿನ ಸುದ್ದಿ ಮೇಲೆ. ಹಣಕ್ಕಾಗಿ ತಮ್ಮ ಬುದ್ಧಿವಂತಿಕೆಯನ್ನೇ ಕಳೆದುಕೊಳ್ಳುತ್ತಿರೋ ‘ಬುದ್ದಿವಂತ' ಇನ್ನೂ ಮುಂದಾದರೂ ಸ್ವಂತ ಬುದ್ದಿಯನ್ನು ಉಪಯೋಗಿಸಿ ಮುಂದೆ ಬರಬೇಕು ಅನ್ನುವುದು ಈ ಅಧಿಕ ಪ್ರಸಂಗಿಯ ಗೀತೋಪದೇಶ. ಏನೇ ಆದರೂ ಇದು ಅಧಿಕ ಬ್ಲಾಗಿತನ!

ಜೋಗಿಮನೆಯಲಿ ಹೊಸ ಹಾಡು

ಜೋಗಿ ಅದೇನೇ ಬರೆದರೂ ಚಂದ! ಹಾಗಂತ ಓದಿದವರು ಹೇಳ್ತಾರೆ. ಇಲ್ಲ ಅನ್ನುವವರು ಅವರ ಈ ಹೊಸ ಕವಿತೆ ‘ಒಂದು ವಿಪ್ಲವ ರಾತ್ರಿಗೆ' ಓದಬಹುದು. ಸುಮ್ಮನೆ ಹುಟ್ಟುವ ಸಾಲುಗಳು ಎಲ್ಲಿಂದಲೋ ಮತ್ತೆಲ್ಲಿಗೋ ಒಯ್ದುಬಿಡುತ್ತವೆ. ಹೆಚ್ಚಿಗೆ ಏನೂ ಹೇಳಬೇಕಾದ್ದಿಲ್ಲ. ಅಂತದ್ದೊಂದು ತುಣುಕು ಇಲ್ಲಿದೆ ಓದಿ.

ಬಂಡೆಹೊತ್ತು ಬೆಟ್ಟ
ಹತ್ತುವ ಇಳಿವ ಸಿಸಿಫಸ್ಸನ ಕರ್ಮಕಾಂಡ.
ತುದಿಯೇರಿದ ಮರುಕ್ಷಣ
ತಳಸ್ಪರ್ಶಿ ಅನುಭವ.
ನಿರರ್ಥಕತೆಯ ಅಂತ್ಯಕ್ಕೆ
ಅನೂಹ್ಯ ತಿರುವು
ಮಾರ್ಚ್ ಏಪ್ರಿಲ್ ಮೇ
or May not.

ಸಿಹಿಯಾದ ಕನಸು

ದಿನದ ಬ್ಲಾಗಿನಲ್ಲಿದೆ ಭಗ್ನಪ್ರೇಮಿಯ ಒಂದಿಷ್ಟು ಬೆಚ್ಚನೆಯ ಕನಸುಗಳು.

ಹೊಸತೊಂದು ವಿರಹದ ಪತ್ರ ಹೊತ್ತು ಆಗಾಗ್ಗೆ ಬ್ಲಾಗ್ ಲೋಕದಲ್ಲಿ ಕಾಣಿಸಿಕೊಳ್ಳುವ ನಾಗೂ ಈ ಬಾರಿ ಜಡಿ ಮಳೆಯನ್ನೊತ್ತು ತಂದಿದ್ದಾರೆ. ಮನದ ನೆಲದಲ್ಲಿ ರಾಡಿ ಎಬ್ಬಿಸೋ ಅವಳ ನೆನೆಪು ಇವರಿಗೆ ಥೇಟ್ ಜಡಿಮಳೆಯಂತೆಯೇ ಕಂಡಿದೆ. ಇಲ್ಲಿರುವ ಪತ್ರಗಳೆಲ್ಲ ‘ಮುದ್ದು ಮನಸುಗಳಿಗಾಗಿ....ಕಂಡ ಕನಸುಗಳಿಗಾಗಿ , ಒಟ್ಟಾರೆ ಪ್ರೇಮಿಗಳಿಗಾಗಿ...ಪ್ರೀತಿಗಾಗಿ' ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಅಂತೆಯೇ ಮುದ್ದುಮುದ್ದಾದ ಒಂದಿಷ್ಟು ಪತ್ರಗಳು ಇಲ್ಲಿವೆ. ಓದಿ ಬನ್ನಿ.

ಶುರುವಾಯಿತು ಕಂತೆ, ಮತ್ತೆ ಓಡುತಿದೆ ಬಂಡಿ

ಕಳೆದ ನಾಲ್ಕುವರೆ ತಿಂಗಳ ಹಿಂದೆ ಆರೋಗ್ಯ ಸರಿ ಇರದೆ ಬ್ಲಾಗಿಸುವುದನ್ನು ನಿಲ್ಲಿಸಿದ್ದ ನವರತ್ನ ಸುಧೀರ್ ಮೈಕೊಡವಿಕೊಂಡು ಮತ್ತೆ ಬ್ಲಾಗಿನಂಗಳಕ್ಕೆ ಬಂದಿದ್ದಾರೆ. ಅವರ ಹಾಳು ಮೂಳು ಅಂತೆ ಕಂತೆಗಳ ಅನ್ವೇಷಣೆ ಮತ್ತೆ ಆರಂಭವಾಗಿದೆ. ಸದ್ಯ ಚಿನ್ನದ ಹುಡುಗ ಬಿಂದ್ರಾನ ಬ್ಲಾಗ್ ಕೊಂಡಿಯನ್ನು ಹೆಕ್ಕಿ ತೆಗೆದು ಅವರ ಮನದಾಳದ ಆಲೋಚನೆಗಳನ್ನು ಬಿಚ್ಚಿಟ್ಟಿದ್ದಾರೆ.

ಇನ್ನೂ ತಿಂಗಳ ಹಿಂದೆ ‘ಬತ್ತಿದ ಬೆಳದಿಂಗಳು ಹರವಿಕೊಳದು' ಅಂತಂದು ಬ್ಲಾಗ್ ಬಾಗಿಲು ಮುಚ್ಚಿ ಹೋಗಿದ್ದ ಶಾಂತಲ ಭಂಡಿ ಮತ್ತೆ ಬ್ಲಾಗಿಸಲು ಬಂದಿದ್ದಾರೆ. ಈ ಬಾರಿ ಅಮ್ಮ ಕನಸಲಿ ಬಂದ ಕಥೆ ಹೇಳುತ್ತಿದ್ದಾರೆ. ಹರಿದು ಹೋದವಳ ಹಸಿರು ಸೀರೆಗೆ ತೇಪೆಹಾಕಲು ಯಾವ ಅಂಗಡಿಯಲ್ಲಿ ಸಿಗಬಹುದು ನೂಲು ಅಂತ ಹುಡುಕುತ್ತಿದ್ದಾರೆ.

ರಾಷ್ಟ್ರಶಕ್ತಿ ಕೇಂದ್ರ

೬೧ನೇ ಸ್ವಾತಂತ್ರ್ಯೋತ್ಸವದ ಈ ಹೊತ್ತಲ್ಲಿ ಬ್ಲಾಗಿನಂಗಳಕ್ಕೆ ಬಂದಿದೆ ನಾಡು-ನುಡಿ ಮತ್ತು ರಾಷ್ಟ್ರಪರವಾದ ಚಿಂತನೆಗಳಿಂದ ಕೂಡಿರುವ ರಾಷ್ಟ್ರೀಯ ಶಕ್ತಿ ಎಂಬ ಈ ಬ್ಲಾಗ್. ಚಕ್ರವರ್ತಿ ಸೂಲಿಬೆಲೆ ಸಂಪಾದಕತ್ವದ ಈ ಬ್ಲಾಗ್ ದೇಶೀಯ ಚಿಂತನೆಗಳಿಂದ ಕೂಡಿದೆ. ಆಗಾಗ್ಗೆ ಕಾರ್ಯಕ್ರಮಗಳ ಮೂಲಕ ಮತ್ತು ತಮ್ಮ ಬ್ಲಾಗ್ ಬರಹಗಳ ಮೂಲಕ ಜನರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ. ರಾಷ್ಟ್ರವೀರರ- ಮಹಾತ್ಮರ ಸಂಗತಿಗಳು, ಮಾಹಿತಿಗಳು ಜೊತೆಗೆ ಒಂದಿಷ್ಟು ವಿಚಾರಪೂರ್ಣ ಲೇಖನಗಳು ಇಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಒಮ್ಮೆ ಹೋಗಿ ಬನ್ನಿ.

ಇದು ಸುಂದರನಾಡು

ಸುಂದರನಾಡಿನ ಈ ಬ್ಲಾಗಿಗರೀಗ ಒಂದಿಷ್ಟು ಪ್ರೀತಿಯ ಮಾತುಗಳನ್ನಾಡುತ್ತಾ , ತಮ್ಮೀ ಸಾಲು ಕವನವಾಗದಿದ್ದರೂ ಪ್ರೀತಿಗೆ ಮುನ್ನುಡಿಯಾಗಲಿ ಅಂತ ಕಾಯುತ್ತಿದ್ದಾರೆ. ಜೊತೆಗೆ ಇಲ್ಲಿ ‘ಮಳೆಗಾಲದ ಮುಸ್ಸಂಜೆ, ಮಳೆಮಳೆ, ಕನಸಲಿ ಕಾಡುವೆ ಏಕೆ?, ಮರೆ ನೀ ಮೌನ, ನೆನಪಾಗುತಿದೆ ಯಾಕೋ ಇಂದು' ಮುಂತಾದ ಕನವರಿಕೆಗಳೂ ಇವೆ. ಒಂದೊಮ್ಮೆ ಸ್ನೇಹದ ಕಡಲಲ್ಲಿ ಪ್ರೀತಿಯ ಸುನಾಮಿ ಎದ್ದಿದೆ. ಜಿಟಿಮಳೆಯಲ್ಲಿ ಅಮ್ಮನ ಪಕೋಡದ ರುಚಿ ನೆನಪಾಗಿದೆ. ಆಗಾಗ್ಗೆ ಕನ್ನಡದ ಒಂದಿಷ್ಟು ಜನಪ್ರಿಯ ಗಾದೆಗಳು ಕಾಣಿಸಿಕೊಂಡಿವೆ. ಇದನ್ನೆಲ್ಲ ಓದಬೇಕಿದ್ದವರು ಒಮ್ಮೆ ಹೋಗಿ ಬನ್ನಿ.

ಒಂದಾನೊಂದು ಕಾಲದಲ್ಲಿ

ತಮ್ಮೆಲ್ಲ ಕನಸುಗಳು ಹಗಲು ಕನಸಾಗಿಯೇ ಉಳಿದು, ಅದರೊಳಗಿನ ಉತ್ಸಾಹ ಸೋಡಾ ಬಾಟಲಿನ ಸ್ಪಿರಿಟಿನಂತೆ ಒಂದಿಷ್ಟು ಸಮಯದಲ್ಲೇ ಇಳಿದುಹೋಗುವ ಕುರಿತು ನೊಂದು ಬರೆದಿದ್ದಾರೆ ಅನಂತು. ಒಂದಾನೊಂದು ಕಾಲದಲ್ಲಿ ಅಂತಂದು ಬ್ಲಾಗಿಸುವ ಅವರು ಇಲ್ಲಿ ಆಗಾಗ್ಗೆ ತಮ್ಮ ಬದುಕಿನ ಕಥೆ ಹೇಳುತ್ತಾರೆ. ‘ಒಬ್ಬ ಮೂರನೇ ಕ್ಲಾಸಿನ ಹುಡುಗನ rough book ಗೂ, ಈ ಬ್ಲಾಗ್ ಗೂ ಅಷ್ಟೊಂದೇನೂ ವ್ಯತ್ಯಾಸ ಇಲ್ಲ. ' ಹಾಗಂತ ಅವರೇ ತಮ್ಮ ಬ್ಲಾಗಿನ ಕುರಿತು ಹೇಳಿಕೊಂಡಿದ್ದಾರೆ. ಅಂತೆಯೇ ಮೂರನೇ ಕ್ಲಾಸಿನ ಹುಡುಗನೊಬ್ಬ ಬರೆಯುವಷ್ಟು ಮುಗ್ದತೆಯ ಒಂದಿಷ್ಟು ಬರಹಗಳು ಇಲ್ಲಿವೆ.

ಒಲವಿನ ಪತ್ರಗಳು

ಒಂದಿಷ್ಟು ಒಲವಿನ ಪತ್ರ ಹೊತ್ತು ಆಗಾಗ್ಗೆ ಬ್ಲಾಗಿನಂಗಳದಲ್ಲಿ ಕಾಣಿಸಿಕೊಳ್ಳುವ ಸೋಮು ಇವತ್ತು ಸಂಪಿಗೆಯ ಅಂಗಳಕ್ಕೆ ಬಂದಿದ್ದಾರೆ. ‘ಉನ್ಕಿ ಯಾದ್ ಆಯೆ ತೋ ದಿಲ್ ಕ್ಯಾ ಕರೇ? ' ಅಂತ ಹೊಸತೊಂದು ಪತ್ರ ಹೊತ್ತು ತಂದಿದ್ದಾರೆ. ‘ಬೆಳಗ್ಗೆ ಎದ್ದು ಕೂತೆನೆಂದರೇ ರಾತ್ರಿ ಕನವರಿಸಿದ ನಿನ್ನ ಮಲ್ಲಿಗೆ ನೆನಪುಗಳ ಸರಮಾಲೆ ಮತ್ತೆ ಮತ್ತೆ ಕಾಡತೊಡಗುತ್ತದೆ. ಮೇಲೇಳಲಾಗದೇ ಮತ್ತೆ ನಿನ್ನ ನೆನಪುಗಳ ರಗ್ಗು ಹೊದ್ದು ಮಲಗಿದರೆ ಮತ್ತೆ ನಿನ್ನ ಬಂಗಾರದ ಬೆರಳ ಕಚಗುಳಿಯಿಟ್ಟಂತಾಗಿ ಮೈತುಂಬಾ ಒಂದು ತೆರನಾದ ಜೀವಂತಿಕೆಯ ಹೂವು ಅರಳುತ್ತವೆ.' ಹೀಗೆ ಬರಹಕ್ಕೊಂದು ಭಾವ ತುಂಬಿ ಬರೆಯುವ ಸೋಮು ಬ್ಲಾಗಿನಲ್ಲಿ ಒಂದಿಷ್ಟು ಒಲುಮೆಯ ಪತ್ರಗಳಿವೆ. ಒಮ್ಮೆ ಹೋಗಿ ಓದಿ ಬನ್ನಿ.

ಕಳ್ಳಕುಳ್ಳರು ಮತ್ತೆ ಬಂದರು

ಕನ್ನಡದ ಬ್ಲಾಗಿನಂಗಳದಲ್ಲಿ ಕಳ್ಳಕುಳ್ಳರ ಜೋಡಿಯ ಮೋಡಿ ಮತ್ತೆ ಶುರುವಾಗುತ್ತಿದೆ. ವಿಕಾಸ್ ನೇಗಿಲೋಣಿ ಮತ್ತು ಚೇತನ್ ನಾಡಿಗೇರ್ ಎಂಬ ಈ ಕಳ್ಳಕುಳ್ಳರು ಒಂದೆಂಟು ತಿಂಗಳ ಹಿಂದೆ ಒಂದು ಬ್ಲಾಗ್ ಮಾಡಿ, ಒಂದಿಷ್ಟು ಲೇಖನಗಳನ್ನು ಹಾಕಿ ಮಾಯವಾಗಿದ್ದರು. ಈಗ ಮತ್ತೆ ಬ್ಲಾಗಿನಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ಬಂದಿದ್ದೇ , ಒಬ್ಬರು ತಮ್ಮ ಉಡುಪಿಯ ರಸ್ತೆಯಲ್ಲಿ ಅಲೆಮಾರಿಯಂತೆ ಅಲೆದ ನೆನೆಪುಗಳನ್ನೆಲ್ಲ ಹೊತ್ತು ತಂದಿದ್ದಾರೆ. ಉಡುಪಿ ಕೂಡ ಉಳಿದೆಲ್ಲ ನಗರಗಳಂತೆ ಬೆಳೆದು ಬದಲಾದದ್ದನ್ನು ಕಂಡು ದಂಗಾಗಿದ್ದಾರೆ. ಇನ್ನೊಬ್ಬರು ‘ಪರಿಚಿತ ನೋವೇ...' ಅಂತ ನೋವಿನ ಪರಿಚಯವನ್ನು ನೆನೆಯುತ್ತಿದ್ದಾರೆ.

ಕನಸಿನ ಮೋಡ, ಪ್ರೀತಿಯ ಮಳೆ

ಕನಸುಗಳ ಮೋಡ ಕಟ್ಟಿದರೆ ಪ್ರೀತಿಯ ಮಳೆ ಸುರಿಯುತ್ತದೆ. ಹಾಗಂತ ನಂಬಿರುವ ರಾಧಾಕೃಷ್ಣ ತಮ್ಮ ‘ಕನಸು ಮತ್ತು ಪ್ರೀತಿ' ಬ್ಲಾಗಿನಲ್ಲಿ ಆಗಾಗ್ಗೆ ಕನಸು ಕಾಣುತ್ತಲೇ ಬಂದಿದ್ದಾರೆ. ಆದರೆ ಅವರು ಸದ್ಯಕ್ಕೆ ಕಂಡಿರುವುದು ಕನಸಲ್ಲ, ಬೆಂಗಳೂರಿನ ಭಾರೀ ಟ್ರಾಫಿಕ್ಕು ಮತ್ತು ವೋಲ್ವೊ ಬಸ್ಸಿನಲ್ಲಿ ಪ್ರಯಾಣಿಸಿದ ಸಾರಿಗೆ ಸಚಿವರ ಕಥೆಯನ್ನ. ಸಾರಿಗೆ ಸಚಿವರು ಐಷಾರಾಮಿ ಬಸ್ಸಿನಲ್ಲಿ ಪ್ರಯಾಣಿಸುತ್ತಲೇ ದೂರನ್ನಾಲಿಸುವುದು ಬಿಟ್ಟು, ಬಿಎಂಟಿಸಿ ಬಸ್ಸಿನೊಳಗೆ ಬಂದು ಜನರ ಕಷ್ಟ ಕೇಳಬೇಕು ಅನ್ನುವುದು ಇವರ ಆಗ್ರಹ.

ಉಳಿದಂತೆ, ತಿಂಗಳಿಗೊಮ್ಮೆ ಎಂಬಂತೆ ಬರೆಯುವ ಇವರ ಬ್ಲಾಗಿನಲ್ಲಿ ಆಗಾಗ್ಗೆ ಕಾಣುವ ಕನಸಿನ ವಿವರಣೆ ಇದೆ. ಕಾಣಬೇಕಿದ್ದವರು ಒಮ್ಮೆ ಹೋಗಿಬನ್ನಿ.

ನೀಲಾಂಜಲದ ಪಿಸುಮಾತು

ದಿನದ ಬ್ಲಾಗಿನಲ್ಲಿ ನೀಲಾಂಜಲದ ಒಂದಿಷ್ಟು ಪಿಸುಮಾತುಗಳು.

ಸದ್ಯ ಮುಂಬಯಿಯಲ್ಲಿ ಇರೋ ಕೆಲಸ ಬಿಟ್ಟು ಬ್ಲಾಗಿಸುತ್ತಾ ಇದ್ದೀನಿ ಅನ್ನುವ ಸೌಪರ್ಣಿಕರಿಗೆ ಮೊನ್ನೆ ಹೊಸ ರುಚಿ ಮಾಡುವ ಹೊಸ ಖಯಾಲಿ ಹುಟ್ಟಿತ್ತಂತೆ. ಹಾಗೆ ಅನಿಸಿದ್ದೇ ಹಿಂದೊಮ್ಮೆ ಕೇಳಿದ್ದ ‘ಸುಶಿ'ಯ ಬಗ್ಗೆ ನೆಟ್ಟಿನಲ್ಲಿ ಹುಡುಕಾಡಿ ಜಪಾನಿ ಖಾದ್ಯದ ಅನ್ವೇಷಣೆ ಮಾಡಿದ್ದಾರೆ. ಜೊತೆಗೆ ಹಿಂದೊಮ್ಮೆ ತಮ್ಮ ಮನೆಯ ಚಿಂಚಿ ಅರ್ಥಾತ್ ಅಳಿಲೊಂದು ಹದ್ದಿನ ಬಾಯಿಂದ ತಪ್ಪಿಸಿಕೊಂಡ ಕಥೆ ಹೇಳಿದ್ದಾರೆ. ಇನ್ನೂ ಹಲವು ಬರಹಗಳೂ ಈ ಬ್ಲಾಗ್ ಬೊಗಸೆಯಲ್ಲಿವೆ. ಒಮ್ಮೆ ಹೋಗಿ ಬನ್ನಿ.

ಟೈಮ್ ಪಾಸಿಗಿದೆ ಕಡ್ಲೇಕಾಯಿ

ಈ ಕಡ್ಲೆಕಾಯಿ ಬ್ಲಾಗಿನ ಬ್ಲಾಗಿಗರು ಮೊನ್ನೆ ತಮ್ಮ ಮನೆಯ ಮುಂದಣ ಹೊಂಗೇಮರವನ್ನು ನೆನೆದು, ಅದರ ಮೇಲೊಂದು ಕವನ ಬರೆದಿದ್ದರು. ಹೀಗೆ ಬರೆದ ವಾರದಲ್ಲೇ ಯಾರೋ ಪಾಪಿಗಳು ಆ ಮರವನ್ನೇ ಕಡಿದುಬಿಟ್ಟಿದ್ದಾರೆ. ಗೆಳೆಯರ ದಿನದಂದೇ ಈ ಹೊಂಗೇಮರ ಮತ್ತು ಇವರ ನಡುವಣ ಸ್ನೇಹ ಮುರಿದುಬಿತ್ತಂತೆ. ಬಳಿ ಬಂದಾಗಲೆಲ್ಲ ನೆರಳು ನೀಡುತ್ತಿದ್ದ, ಹೂ ಹಾಸಿ ಸ್ವಾಗತಿಸುತ್ತಿದ್ದ ಮರ ಈ ಕಣ್ಮರೆಯಾಗಿದ್ದನ್ನು ಕಂಡು ಅವರ ಮನ ಮರುಗುತ್ತಿದೆ. ಜೊತೆಗೆ ಟೈಮ್ ಪಾಸ್ ಆಗುವ ಒಂದಿಷ್ಟು ಕವನಗಳೂ ಇಲ್ಲಿವೆ. ಕಡಲೇ ಪ್ರಿಯರೆಲ್ಲ ಒಮ್ಮೆ ಹೋಗಿಬನ್ನಿ.

ಮೆಡಿಟರೇನಿಯನ್ ರುಚಿ ಸವಿದವರು

ದೂರದೂರಿನಲ್ಲೂ ಶುದ್ದ ಶಾಖಾಹಾರಿಯಾಗಿಯೇ ಉಳಿದುಕೊಂಡ ಪ್ರವೀಣ್ ಅಲ್ಲಿ ಅನುಭವಿಸಿದ ಮುಜುಗರಗಳನ್ನೆಲ್ಲ ತಮ್ಮ ಈ ಬ್ಲಾಗಿನಲ್ಲಿ ಬಿಡಿಬಿಡಿಯಾಗಿ ವರ್ಣಿಸಿದ್ದಾರೆ. "ಖುಲ್ ಜಾ ಸಿಮ್ ಸಿಮ್" ಅಂತ ಆಲಿಬಾಬಾದ ಕದ ತೆರೆದು ಹೊಳ ಹೊಕ್ಕವರು ಮಾಂಸಹಾರಿಗಳ ಮಧ್ಯೆಯೂ ಒಂದಿಷ್ಟು ತರಕಾರಿ ಊಟ ಸಿಕ್ಕು ನಿಟ್ಟುಸಿರು ಬಿಟ್ಟಿದ್ದಾರೆ. ಕಡೆಗೂ ಮೆಡಿಟರೇನಿಯನ್ ಊಟ ಚಪ್ಪರಿಸಿದ್ದಾರೆ. ಇದೆನ್ನೆಲ್ಲ ಓದಿ ಹೊಟ್ಟೆ ತುಂಬಿಸಿಕೊಳ್ಳುವವರು ಈ ಬ್ಲಾಗಿಗೆ ಹೋಗಬಹುದು.

ಇದು ಕನಸಿನರಮನೆ

ದಿನದ ಬ್ಲಾಗಿನಂಗಳದಲ್ಲಿ ಕನಸಿನರಮನೆಯ ಬಾಗಿಲು ತೆರೆದು ಕೂತಿದ್ದಾರೆ ನಟೇಶ ಬಾಬು. ಈಗಷ್ಟೆ ಇಲ್ಲಿ ಒಂದಿಷ್ಟು ಗಾಂಧಿ ‘ಹನಿ'ಗಳು ಸಾಲಾಗಿ ಹರಿಯುತ್ತಿವೆ. ಅದಕ್ಕೂ ಮುಂಚೆ ಇವರು ಮುಂಗಾರಿನ ಮಳೆ ಕಂಡಿದ್ದೇ ‘ಸುರಿಯುತ್ತಲೇ ಇದೆ ಪಾಪಿ ಮಳೆ ಮುಗಿಯದ ಕಣ್ಣೀರಿನಂತೆ...' ಅಂತ ಗೊಣಗಿಕೊಂಡಿದ್ದಾರೆ. ಹಿಂದಿನ ಲೇಖನದಲ್ಲಿ ‘ನಿನ್ನೆ ಅಲ್ಲಿ.. ಇಂದು ಇಲ್ಲಿ.. ನಾಳೆ ಎಲ್ಲೋ? ' ಅಂತ ಉದ್ಯೋಗ ವಲಸೆ ಬಗ್ಗೆ ಒಮ್ಮೆ ಗಂಭೀರವಾಗಿ ಯೋಚಿಸಿದ್ದಾರೆ. ‘ತೆರೆದಿದೆ ಮನೆ ಓ ಬಾ ಬೆಳಕೆ!' ಅನ್ನುತ್ತಲೇ , ‘ಯಾರೋ ಪಾಪಿಗಳು ಬಾಗಿಲು ತಟ್ಟುತ್ತಿದ್ದಾರೆ' ಅಂತೆಲ್ಲ ದೂರಿದ್ದಾರೆ. ಅದೆಲ್ಲ ಏನು ಅಂತ ಕೇಳಬಯಸುವವರು ಈ ಬ್ಲಾಗಿಗೇ ಹೋಗಬೇಕು.

ಬ್ಲಾಗ್ ಕಲರವ

ಬ್ಲಾಗ್ ಲೋಕದಲ್ಲಿ ಒಂದಿಷ್ಟು ಕಲರವ ಎಬ್ಬಿಸುತ್ತಿರುವ ಈ ಬ್ಲಾಗಿನ ಹೆಸರೇ ಕಲರವ. ಈಗಂತೂ ಇಲ್ಲಿ ನಿತ್ಯ ಒಂದಾದರೂ ಬರಹಗಳು ತಪ್ಪದೇ ಬರುತ್ತಿವೆ. ಹರೆಯದ ಹುಡುಗರ ಮಾತು, ಮೌನ, ಒಂದೊಮ್ಮೆ ಬಿಸಿಚರ್ಚೆ ಕೂಡ ನಡೆಯುತ್ತಿವೆ. ಉತ್ಸಾಹಿ ಯುವಕರ ಈ ಬ್ಲಾಗ್ ಪತ್ರಿಕೆಯನ್ನು ಒಮ್ಮೆ ಓದಿ ಬನ್ನಿ.

ನಿಹಾರಿಕೆಯ ಕವಿತೆ

ದಿನದ ಬ್ಲಾಗಿನಲ್ಲಿ ನಿಹಾರಿಕೆಯ ಒಂದಿಷ್ಟು ಕವಿತೆಗಳ ಕಚಗುಳಿ. ಹೊಸತೊಂದು ಕವಿತೆಯೊಂದಿಗೆ ಆಗಾಗ್ಗೆ ಬ್ಲಾಗಿನಂಗಳದಲ್ಲಿ ಕಾಣಿಸಿಕೊಳ್ಳುವ ಮಹೇಶರು ಈ ಬಾರಿ ಕತ್ತಲ ಮೇಲೊಂದು ಕವಿತೆ ಹೊಸೆದಿದ್ದಾರೆ. ಅವರ ‘ಮತ್ತೆ ಮಳೆ ಹೊಯ್ಯುತಿದೆ.., ಪೌರ್ಣಿಮೆ, ಕೆಲವು ಹನಿಗಳು, ಪರಿಕ್ರಮಣ, ಮೌನ' ಮುಂತಾದ ಕವಿತೆಗಳು ಮತ್ತೆ ಓದುವಂತಿವೆ. ಅದರದ್ದೊಂದು ತುಣುಕು ಇಲ್ಲಿದೆ.

ನೀಳ ಜಡೆಯ ಮೇಲೆ
ಕನಕಾಂಬರದ ಕಂಪು
ಕಾಣದ ಕೆನ್ನೆಯ ಮೇಲೆ
ಕಂಬನಿ ಇಳಿದಿದೆ

ರೋಮಾಂಚನದ ಸಂಜೆ
ಮಾತು ಮುರಿದ ಹುಡುಗಿ
ಕಣ್ಣಲ್ಲೇ ಮಾತಾಗುತ್ತಾಳೆ.

ಬೀಸಿದೆ ಗಾಳಿ
ಬೆಳಕ ಹಿಡಿದ ಕೈಗೆ
ಮುಗಿದ ತೈಲದ
ಅರಿವೇ ಇಲ್ಲ

ಮತ್ತೆ ಬಂದರು ಚೇತನಾ

ಕಳೆದೆರಡು ತಿಂಗಳ ಹಿಂದೆ ಬ್ಲಾಗ್ ಬಾಗಿಲು ಮುಚ್ಚಿ ಹೊರಟುಹೋಗಿದ್ದ ಚೇತನಾ ಮತ್ತೆ ಬ್ಲಾಗಿನಂಗಳಕ್ಕೆ ಬಂದಿದ್ದಾರೆ. ಸದ್ಯ ತಮ್ಮ ಬ್ಲಾಗಿನ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅವರಿಂದ ಸಖತ್ ಬರೆಯುವ ಕುರಿತು ಭರವಸೆಗಳ ಮಹಾಪೂರವೇ ಹರಿದಿದೆ. ‘ಓಹ್! ನಿಮ್ಮ ಜತೆ ಹಂಚಿಕೊಳ್ಳಲು ಸಾಕಷ್ಟು ಸಮಾಚಾರ ಒಟ್ಟು ಮಾಡಿಕೊಂಡಿದ್ದೇನೆ ನಾನು. ‘ಪೋಟ್ಲೀ ಬಾಬಾ' ನ ಹಾಗೆ ನನ್ ಪೋಟಲಿಯಿಂದ ಒಂದೊಂದೇ ಕಥೆ ತೆಗೆಯುವೆ. ಸದ್ಯದಲ್ಲೇ ಊರಿಗೆ ಹೋಗ್ತೇನೆ. ಅಲ್ಲಿ ಸಖತ್ ಮಳೆಯಂತೆ! ಜೀವ ಎಳೀತಿದೆ ಗೊತ್ತಾ?' ಅಂತ ಒಂದೇ ಉಸಿರಿನಲ್ಲಿ ಮುಂಬರುವ ಬರಹಗಳ ಮುನ್ಸೂಚನೆಯನ್ನೇ ನೀಡಿದ್ದಾರೆ. ಹೊಸದೊಂದು ಹುರುಪಿನಲ್ಲಿರುವ ಚೇತನಾ ಹೀಗೆ ಕೊಟ್ಟ ಭರವಸೆಗಳನ್ನೆಲ್ಲ ಈಡೇರಿಸುತ್ತಾರಾ? ಕಾದು ನೋಡಬೇಕು.

ಮೊಗ್ಗಿನ ಜಡೆ

ಇರುವ ಇಷ್ಟುದ್ದ ಕೂದಲನ್ನು ಹಾರೈಕೆ ಮಾಡಿಕೊಳ್ಳುವುದೇ ಕಷ್ಟ. ಅದರಲ್ಲೂ ನೀಳ ಕೇಶರಾಶಿ ಹೊಂದಿರುವ ಹೆಂಗಸರ ಪಾಡು ಹೇಳತೀರದು. ಈ ಕಷ್ಟಗಳನ್ನೆಲ್ಲ ಅರಿತೋ ಏನೋ ಮಾಲಾ ‘ಮೊಗ್ಗಿನ ಜಡೆ' ಶುರು ಮಾಡಿದ್ದಾರೆ. ಚೊಟುದ್ದ ಜಡೆಯಿಂದಿಡಿದು ಉದ್ದದ ಕೂದಲಿನ ಜಡೆ ಹೊಂದಿರುವವರಿಗೆ ಕೂದಲಿನ ಊಟೋಪಚಾರ, ಆರೈಕೆ ಇತ್ಯಾದಿ ಸಂಗತಿಗಳ ಕುರಿತು ಇಲ್ಲಿ ಮಾಹಿತಿ ನೀಡುತ್ತಾರೆ. ಆಗಾಗ್ಗೆ ಅಜ್ಜಿಯ ಹರ್ಬಲ್ ಉಪಾಯಗಳೂ ಪುಕ್ಕಟೆಯಾಗಿ ಸಿಗುತ್ತವೆ.

ಬ್ಲಾಗುತ್ತಾ ಇರು

ಬ್ಲಾಗುತ್ತಾ ಇರು ಎನ್ನುವ ಭರತರು ಕಳೆದ ಮೂರು ವರ್ಷದಿಂದ ಬ್ಲಾಗಿಸುತ್ತಲೇ ಇದ್ದಾರೆ. ಹೊಸಬರಹದಲ್ಲಿ ಬರೆಯುವ ಇವರು ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಆಗಾಗ್ಗೆ ನಾಲ್ಕು ಮಾತುಗಳನ್ನಾಡಿದ್ದಾರೆ. ನಡುವೆ ಕಲ್ಲು-ಕೋಟೆಗಳ ನಡುವಲ್ಲೊಂದು ಕಣಿವೆಯ ಚಿತ್ರಗಳು, ಲಾಲ್ ಬಾಗ್ ನ ಹಕ್ಕಿಗಳೂ, ಒಂದಿಷ್ಟು ಕವಿತೆಗಳು ಮನಸೆಳೆಯುತ್ತವೆ.

ಚಿತ್ರ ವಿಚಿತ್ರಗಳು

ಜಗತ್ತು ಎಷ್ಟು ಚಿತ್ರಮಯವೋ ಅಷ್ಟೇ ವಿಚಿತ್ರಮಯ. ಹೀಗೆ ವಿಚಿತ್ರವಾದ ಒಂದಿಷ್ಟು ಸಂಗತಿಗಳನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದು ಬ್ಲಾಗಿನಲ್ಲಿಡುವ ಕೆಲಸ ಮಾಡುತ್ತಿದ್ದಾರೆ ಲಕ್ಷ್ಮಿ. ಫಲಕೋತ್ಸವದ ಸರಣಿ ಚಿತ್ರಗಳು, ನೀರಿನ ಕೊಳಾಯಿಯಲ್ಲಿ ಕರೆಂಟ್ ! , ಅವಿವಾಹಿತರ ಕನಸು ! ಮುಂತಾದ ಚಿತ್ರಗಳು ನಿಜಕ್ಕೂ ವಿಚಿತ್ರವಾಗಿವೆ. ನೀವೂ ಒಮ್ಮೆ ನೋಡಿಬನ್ನಿ.

ವಿರಾಟ ರೂಪ

ದಿನದ ಬ್ಲಾಗಿನಲ್ಲಿ ವಿನಯ್ ಜೋಶಿಯ ವಿರಾಟ ರೂಪದ ದರ್ಶನ.

ಈಗಿನ್ನೂ ವಿಧ್ಯಾರ್ಥಿಯಾಗಿರುವ ವಿನಯ್ ತಮ್ಮ ಬ್ಲಾಗಿನಲ್ಲಿ ಒಂದಿಷ್ಟು ವಿಚಾರಪೂರ್ಣ ಬರಹಗಳನ್ನು ಬರೆದಿದ್ದಾರೆ. ಕನ್ನಡ ಪುಸ್ತಕಗಳು ಹೇಗಿರಬೇಕು? ಅನ್ನುವ ಕುರಿತು ಈಗಷ್ಟೆ ಅವರ ಬ್ಲಾಗಿನಲ್ಲಿ ಸಣ್ಣದೊಂದು ಚರ್ಚೆ ಆರಂಭವಾಗಿದೆ. ಈಚೀಚೆಗೆ ಪುಸ್ತಕಗಳ ಬೆಲೆ ಪುಟಸಂಖ್ಯೆಯಷ್ಟೆ ಆಗುತ್ತಿರುವ ಕುರಿತು ಈ ಬ್ಲಾಗಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಕನ್ನಡ ಓದುಗರು ಹೆಚ್ಚೆಚ್ಚು ಪುಸ್ತಕಗಳನ್ನು ಕೊಂಡು ಓದುವಂತಾಗಬೇಕು ಅನ್ನುವುದು ಇವರ ಆಶಯ. ಇಂತಹದ್ದೆ ಹಲವು ಲೇಖನಗಳು ಇಲ್ಲಿವೆ.

ರಾಘವೇಂದ್ರರ ಹೋಮ್ ಸ್ಟೇ

ನನ್ನ ನಲವತ್ತನೇ ವಯಸ್ಸಿಗೇ ಹತ್ತೊಂಬತ್ತು ಅವತಾರಗಳನ್ನು ಮುಗಿಸಿದ್ದಾಗಿದೆ ಎಂದು ಅವಲತ್ತು ತೋಡಿಕೊಳ್ಳುವ ರಾಘವೇಂದ್ರ ಶರ್ಮ ಈಗ ಇಪ್ಪತ್ತನೇ ಅವತಾರವಾಗಿ ಹೋಮ್ ಸ್ಟೇ ಶುರುಮಾಡುತ್ತಿದ್ದಾರೆ. ಹಾಗಂತ ಅವರೇ ತಮ್ಮ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಪಂಚತಂತ್ರದಲ್ಲಿರೋ ಒಂದಿಷ್ಟು ಅನೀತಿ ಕಥೆಗಳನ್ನು ಹುಡುಕಿ ತೆಗೆದಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಕಾಡುಕೋಣದ ಮುಂದೆ ಸಿಕ್ಕಿಕೊಂಡ ಕಥೆಯನ್ನು ವಿವರಿಸಿದ್ದಾರೆ. ಇನ್ನೂ ಹಲವು ಬ್ಲಾಗ್ ಬರಹಗಳು ಇಲ್ಲಿವೆ. ಒಮ್ಮೆ ಹೋಗಿ ಬನ್ನಿ.

ಕುಂದಾಪುರದ ಕನ್ನಡ

ಕುಂದಾಪುರದ ಕನ್ನಡದಲ್ಲೇ ಮಾತನಾಡಲು ಬ್ಲಾಗಿನಂಗಳಕ್ಕೆ ಬಂದಿದ್ದಾರೆ ವಿಜಯರಾಜ್ ಕನ್ನಂತ್. ಬೆಂಗಳೂರು ಎಂಬ ಮಹಾನಗರದಲ್ಲಿ ಕನ್ನಡ ಅನ್ನೋದು ಕಿಚಿಡಿ ಆಗಿರೋ ಹೊತ್ತಲ್ಲಿ ಕುಂದಾಪುರದ ಆಡುಮಾತಿನ ದಾಟಿಯಲ್ಲಿ ಮಾತಾಡಿದ್ರೆ ಮನಕ್ಕೆ ಅದೆಷ್ಟೋ ಖುಷಿ ಅನ್ನೋದು ಅವರ ಅಭಿಪ್ರಾಯ. ಹೀಗೆ ಮಾತನಾಡಿದ ಒಂದಿಷ್ಟು ಮಾತುಗಳು ಇಲ್ಲಿವೆ. ಕುಂದಾಪುರದ ಭಾಗದಲ್ಲಷ್ಟೆ ಬಳಸುವ ಪದ, ನುಡಿಗಟ್ಟು ಇತ್ಯಾದಿಗಳನ್ನು ಪಟ್ಟಿ ಮಾಡಿ ಇಲ್ಲಿ ಕೊಡಿಡಲು ಪ್ರಯತ್ನಿಸುತ್ತಿದ್ದಾರೆ ವಿಜಯ್.

ಮನಸೆಂಬ ಹುಚ್ಚು ಹೊಳೆಯಲಿ

‘ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ..' ಅಂತನ್ನುವ ಚಿತ್ರ ತಮ್ಮ ಬ್ಲಾಗೆಂಬ ಹೊಳೆಯಲ್ಲಿ ತಮ್ಮ ಒಂದಿಷ್ಟು ನೆನಪುಗಳನ್ನು ತೇಲಿ ಬಿಟ್ಟಿದ್ದಾರೆ. ಮೊನ್ನೆ ಗುರು ಪೂರ್ಣಿಮೆಯಂದು ಅವರಿಗೆ ತಮ್ಮ ಗುರುಗಳೆಲ್ಲರ ನೆನಪಾಗಿದೆ. ಆಮೇಲೆ ಬೇಸಿಗೆ ನೆಪದಲ್ಲಿ ಮಾವಿನಹಣ್ಣನ್ನೂ ರುಚಿ ತೋರಿಸಿದ್ದಾರೆ. ಈ ನಡುವೆ ಹಿಂದೊಮ್ಮೆ ಬರೆದ ಒಂದೆರಡು ಕವನಗಳನ್ನು ತಂದು ಓದಿಗೆ ಹಚ್ಚಿದ್ದಾರೆ. ಮಕ್ಕಳ ಮುದ್ದು ಮಾತಿಗೆ ಮಾರುಹೋಗಿದ್ದಾರೆ. ಇಂತಹದ್ದೆ ಒಂದಿಷ್ಟು ನೆನಪು-ನೇವರಿಕೆಗಳು ಇಲ್ಲಿವೆ.

ಭಟ್ಟರ ಕುಮ್ರಿ

ದಿನದ ಬ್ಲಾಗಿನಲ್ಲಿ ಶಶಿಧರ ಭಟ್ಟರ ಒಂದಿಷ್ಟು ಸಂಕೋಚದ ಮಾತುಗಳು.

ಸಾಯಿಬಾಬಾ ಕಣ್ಣು ಬಿಟ್ಟ ಸುದ್ದಿ ಬಣ್ಣಬಣ್ಣವಾಗಿ ವರದಿಯಾಗುತ್ತಿರುವ ವೇಳೆ, ಈ ಪತ್ರಕರ್ತರಿಗೆ ಇದೆಲ್ಲ ಬಾಬಾ ನಿಜಕ್ಕೂ ಕಣ್ಣು ಕಣ್ಣು ಬಿಟ್ಟು ಪರಿತಪಿಸಿದಂತೆ ಕಾಣಿಸುತ್ತಿದೆ. ಇದೆಲ್ಲವನ್ನೂ ಕಂಡ ಭಟ್ಟರ ಮನಸ್ಸು ವೈಕುಂಠರಾಜರ ಉದ್ಬವ ಕಾದಂಬರಿಯನ್ನು ನೆನೆಯತೊಡಗಿದೆ. ಭಗವಂತ ಕೂಡ ಇಂದು ಶೋಷಣೆಯ ವಸ್ತುವಾಗುತ್ತಿರುವುದನ್ನು ಕಂಡ ಅವರು ದೇವರು ಆಧ್ಯಾತ್ಮ ಎಲ್ಲ ಖಾಸಗಿಯಾಗಿದ್ದರಷ್ಟೆ ಚೆನ್ನ ಅನ್ನುತ್ತಾರೆ. ಉಳಿದಂತೆ ಬರಹದ ಬಗೆಗಿನ ತೊಳಲಾಟ, ಮಾತನಾಡಲಾಗದ ಸಂಕಟ, ಒಂದಿಷ್ಟು ವೈಚಾರಿಕತೆ, ಪ್ರೀತಿಯ ಮಾತುಗಳು ಇಲ್ಲಿವೆ.

ಹಳ್ಳಿ ಕನ್ನಡದ ಸುಗ್ಗಿ

ದಿನದ ಬ್ಲಾಗಿನಲ್ಲಿ ಮಂಜುನಾಥ ಸ್ವಾಮಿಯವರ ಹಳ್ಳಿ ಕನ್ನಡದ ಸುಗ್ಗಿ.

ಮೂಲತಃ ಚಿತ್ರದುರ್ಗದವರಾದ ಮಂಜುನಾಥ್ ತಮ್ಮೂರಿನ ಕಲಿ ಮದಕರಿ ನಾಯಕನ ಚರಿತ್ರೆಯನ್ನೂ, ಅವನ ವೀರಗುಣವನ್ನೂ ತಿಳಿಸುವ ಒಂದಿಷ್ಟು ಜನಪದಗಳನ್ನು ತಮ್ಮ ಈ ಬ್ಲಾಗಿನಲ್ಲಿ ಕಲೆಹಾಕಿದ್ದಾರೆ. ಕಲಾವಿದರಾದ ಅವರ ಕ್ಯಾಮರ ಕಣ್ಣಿನಲ್ಲಿ ಬದಾಮಿ, ಪಟ್ಟದ ಕಲ್ಲಿನ ಸುಂದರ ಚಿತ್ರಗಳು ಸೆರೆಯಾಗಿವೆ. ಬೆಣ್ಣೆ ಮಾತಾಡಿ ಬಿಸ್ಕತ್ ಮಾಡುವುದನ್ನೂ ಹೇಳಿಕೊಟ್ಟಿದ್ದಾರೆ. ಈಗಷ್ಟೆ ಬ್ಲಾಗಿಸುತ್ತಿರುವ ಅವರ ಬ್ಲಾಗಿಗೊಮ್ಮೆ ಹೋಗಿಬನ್ನಿ.

ಎಕ್ಸ್ ಕ್ಯೂಸ್ ಮಿ ಪ್ಲೀಸ್...

ಎಕ್ಸ್ ಕ್ಯೂಸ್ ಮಿ ಪ್ಲೀಸ್...ಎನ್ನುತ್ತಾ ಈಗಷ್ಟೆ ಬ್ಲಾಗಿನಂಗಳ ಪ್ರವೇಶಿಸಿದ್ದಾರೆ ಮೈತ್ರಿ. ಭಕ್ತೆಗೆ ‘ದೇವ' ಪತಿಯಾಗಬಹುದು.. ಭಕ್ತನಿಗೆ ‘ದೇವಿ'...!? ಅನ್ನೋ ಇವರ ಪ್ರಶ್ನೆಗೆ ಬ್ಲಾಗಿಗರು ಈಗಷ್ಟೆ ಉತ್ತರ ಹುಡುಕುವ ಯತ್ನದಲ್ಲಿದ್ದಾರೆ. ದೀಪದ ಬುಡ- ಒಂದು ಅಳಲು, ಮಾತಿಗೆ ನೆವವಿಲ್ಲ... ಪ್ರೀತಿಗೆ ಜನವಿಲ್ಲ! ಮುಂತಾದ ಕವಿತೆಗಳು ಓದುತ್ತಲೇ ಇಷ್ಟವಾಗುತ್ತವೆ. ಅದರದ್ದೊಂದು ಭಾಗ ಇಲ್ಲಿದೆ.

ಹಾಳು ಮೌನದ ಬಯಲಲ್ಲಿ
ಒಂಟಿ ಪಾಪಾಸುಕಳ್ಳಿ
ಯ ಹಾಗೆ ನಿಂತಿರುವೆ
ಅದಕ್ಕೇ,
ಮಾತಿಗೆ ನೆವವಿಲ್ಲ,
ಪ್ರೀತಿಗೆ ಜನವಿಲ್ಲ!

ಓಶೋ ಹಕ್ಕಿಯ ಹಾಡು

ಓಶೋ ನಿಮಗೇಕಿಷ್ಟ? ಗೊತ್ತಿಲ್ಲದಿದ್ದರೆ ಹೋಗಲಿ, ಇಲ್ಲೊಬ್ಬರು ಓಶೋ ತಮಗೇಕಿಷ್ಟ ಅಂತ ಬರೆದಿದ್ದಾರೆ ಅದನ್ನಾದರೂ ಓದಿ. ಕನ್ನಡದಲ್ಲಿ ಓಶೋ ಚಿಂತನೆಗಳನ್ನು ಪ್ರಚುರಪಡಿಸುವ ಸಲುವಾಗಿ ಈ ಓಶೋ ಹಕ್ಕಿ ಎಂಬ ಬ್ಲಾಗ್ ಹುಟ್ಟಿಕೊಂಡಿದೆ. ಈ ಬ್ಲಾಗು ಓಶೋನ ಓದಿಗಾಗಿ, ಓಶೋನ ಅಧ್ಯಯನಕ್ಕಾಗಿ, ಆತನ ಮೇಲಿನ ಪ್ರೀತಿಗಾಗಿ, ಜಗಳಕ್ಕಾಗಿ , ತಕರಾರಿಗಾಗಿ... ಅನ್ನೋದು ಬ್ಲಾಗಿಗರ ಸಂದೇಶ. ಸದ್ಯಕ್ಕಿಲ್ಲಿ ಅಂತಹ ಜಗಳ, ತಕರಾರು ತೆಗೆಯಲು ಸುಪ್ರೀತ್, ಚೇತನಾ ಮತ್ತು ನಗೆ ಸಾಮ್ರಾಟರಿದ್ದಾರೆ. ನಿಮಗೂ ಓಶೋ ಕುರಿತು ಒಂದೆರಡು ಮಾತು ಬರೆಯಬೇಕು ಅನ್ನಿಸಿದರೆ, ವಾದ-ಪ್ರತಿವಾದಗಳನ್ನೆಲ್ಲ ಎದುರಿಸುವ ಆಸಕ್ತಿ ಇದ್ದರೆ ಕೂಡಲೇ ಈ ಬ್ಲಾಗಿಗೆ ದೌಡಾಯಿಸಿ.

ಸಲ್ಲಾಪದ ಮಾತುಗಳು

ಬೇಂದ್ರೆ ಕವನದ ಮೋಡಿಗೆ ಮತ್ತೆ ಮತ್ತೆ ಒಳಗಾಗುವ ಸುನಾಥರು ಈ ಬಾರಿ ವರಕವಿಯ ಪ್ರೇಮ ಕವಿತೆಯೊಂದರ ಕುರಿತು ನಾಲ್ಕು ಮಾತು ಬರೆದಿದ್ದಾರೆ. ಕೇವಲ ನಾಲ್ಕು ನುಡಿಗಳ ಈ ಕವನ ಅವರಿಗೆ ಅತಿ ಸುಂದರವಾದ ನಿಸರ್ಗ ಕವನವಾಗಿ, ದಾಂಪತ್ಯಕವನವಾಗಿಯೂ ಕಾಣಿಸಿದೆ. ಹಿಂದಿನ ಲೇಖನದಲ್ಲಿ ಭಾಷೆ ಎನ್ನುವ ಉಪಕರಣದ ಕುರಿತು ಕಾವೇರಿದ ಚರ್ಚೆ ನಡೆದಿದೆ. ಶಂಕರ ಭಟ್ಟರ ವಾದದಲ್ಲಿಯ ದೋಷಗಳ ಕುರಿತು ಅಕ್ಷರ ಚಕಮುಕಿ ಏರ್ಪಟ್ಟಿದೆ.

ಹೀಗೆ ಸಲ್ಲಾಪದಲ್ಲಿ ನಾಡು-ನುಡಿಯ ಕುರಿತು ಆರೋಗ್ಯಕರ ಚರ್ಚೆಗಳು ಆಗಾಗ್ಗೆ ನಡೆಯುತ್ತಲೇ ಇವೆ. ಅದೆಲ್ಲ ಏನೆಂದು ತಿಳಿಯಬಯಸುವವರು ಇಲ್ಲಿಗೊಮ್ಮೆ ಹೋಗಿಬನ್ನಿ.

ಈ ಪ್ರಪಂಚ

ದಿನದ ಬ್ಲಾಗಿನಲ್ಲಿ ರವೀಶರ ಈ ಪ್ರಪಂಚ.

ಕನ್ನಡ ಮತ್ತು ಇಂಗ್ಲಿಷು ಎರಡೂ ಭಾಷೆಗಳಲ್ಲಿ ಬರೆಯುತ್ತಾ ಕಳೆದೆರಡು ವರ್ಷಗಳಿಂದ ಬ್ಲಾಗಿಸುತ್ತಿದ್ದಾರೆ ರವೀಶ್. ಹೆಸರಿನಂತೆ ಇದು ಪ್ರಪಂಚ ಪರ್ಯಟನೆಯ ಬ್ಲಾಗ್. ಸಾಹಿತ್ಯ, ಸಿನಿಮಾ, ಪ್ರವಾಸ ಹಬ್ಬ-ಆಚರಣೆ ಎಲ್ಲದರ ಕುರಿತ ಬರಹಗಳು ಇಲ್ಲಿವೆ. ಇಲ್ಲಿ ಈಗಷ್ಟೆ ಮುಂಗಾರಿಗೆ ಮೈಒಡ್ಡಿ ನಿಂತಿರುವ ಮಂಗಳೂರಿನ ಚಿತ್ರಗಳಿವೆ. ಅಲ್ಲಲ್ಲಿ ಪುಸ್ತಕ ಮತ್ತು ಚಿತ್ರ ವಿಮರ್ಶೆಗಳು ಓದಲು ಸಿಗುತ್ತವೆ. ಇನ್ನೂ ಹತ್ತು ಹಲವು ವಿಚಾರಪೂರ್ಣ ಲೇಖನಗಳು ಈ ಪ್ರಪಂಚದೊಳಗಿವೆ. ಓದಬೇಕಾದವರು ಒಮ್ಮೆ ಹೋಗಿ ಬನ್ನಿ.

ಬೆಂಗಳೂರು ಫೋಟೋ ಬ್ಲಾಗ್

ಚಿತ್ರಗಳನ್ನು ನೀವು ನೋಡಿರಬಹುದು, ತೆಗೆದಿರಬಹುದು. ಪೋಟೋಗ್ರಫಿಯನ್ನು ವೃತ್ತಿಯಾಗಿಯೂ ಹವ್ಯಾಸವಾಗಿಯೂ ಮಾಡಿದ ಅನುಭವವಿರಬಹುದು. ಆದರೆ ಒಂದು ಮಹಾನಗರದ ಗಲ್ಲಿಗಲ್ಲಿಯ ವಿಶೇಷತೆಯನ್ನೂ, ವೈಶಿಷ್ಠ್ಯವನ್ನೂ ಚಿತ್ರದಲ್ಲಿ ಸೆರೆಹಿಡಿದಿರುವವರು ಕಡಿಮೆ. ಆದರೆ ಇಲ್ಲೊಂದು ಬ್ಲಾಗ್ ಇದೆ. ಹೆಸರೇ ಸೂಚಿಸುವಂತೆ ಇದು ಬೆಂಗಳೂರಿನ ಫೋಟೋ ಬ್ಲಾಗ್. ಬೆಂಗಳೂರಿನ ಆಟೋ ಡ್ರೈವರ್‌ನಂತೆ ಅಲ್ಲಿನ ಪ್ರತಿ ಬಡಾವಣೆಗಳಿಗೂ, ಅಡ್ಡ ರಸ್ತೆಗಳಿಗೂ, ಕಿರಿದಾದ ಗಲ್ಲಿಗಳಿಗೂ ನಿಮ್ಮನ್ನು ನುಗ್ಗಿಸಿ ಅಲ್ಲಿನ ಚಿತ್ರಗಳನ್ನು ನಿಮಗೆ ತೋರಿಸುತ್ತಾರೆ ಗೋಪಾಲ್ ಎಮ್.ಎಸ್.

ಬೆಂಗಳೂರಿನ 100 ಫೀಟ್ ರೋಡಿನಿಂದ ಹಿಡಿದು ನಾಗಶೆಟ್ಟಿಹಳ್ಳಿಯವರೆಗಿನ ನೂರಾರು ಚಿತ್ರಗಳು ಇಲ್ಲಿವೆ. ಪ್ರತಿಯೊಂದು ಸುಂದರ ದೃಶ್ಯಕಾವ್ಯ. ಯಾವುದಾದರೂ ಗಲ್ಲಿ ಬಿಟ್ಟುಹೋಗಿದ್ದರೆ ನೀವದನ್ನು ಗುರುತಿಸಬಹುದು ಎನ್ನುವಷ್ಟರ ಮಟ್ಟಿಗೆ ಇಡಿ ಬೆಂಗಳೂರೇ ಇಲ್ಲಿದೆ. ಚಿತ್ರಗಳನ್ನು ನೋಡಿ ಸಣ್ಣದೊಂದು ಉದ್ಗಾರ ತನ್ನಿಂದ ತಾನೇ ಹೊರಬರದಿದ್ದರೆ ನಿಮ್ಮ ಕಣ್ಣಿಗೇನೋ ಸಮಸ್ಯೆಯಿದೆ.

ಶೆಟ್ಟರ ಒಂದಿಷ್ಟು ಕನಸುಗಳು

ದಿನದ ಬ್ಲಾಗಿನಲ್ಲಿ ಶೆಟ್ಟರ ಒಂದಿಷ್ಟು ಕನಸುಗಳು.

‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ.

ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

 

ಹಾಗೇ ಸುಮ್ಮನೆ ಬರೆದಿದ್ದು

ದಿನದ ಬ್ಲಾಗಿನಲ್ಲಿದೆ ಮನಸ್ವಿ ಹಾಗೇ ಸುಮ್ಮನೆ ಬರೆದ ಮಾತುಗಳು.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗಲೆಲ್ಲ ಅವರು ಹೀಗೆ ಸುಮ್ಮನೆ ಬರೆಯುತ್ತಾ ಹೋಗುತ್ತಾರೆ. ಮನಸ್ವಿ ಈಗಷ್ಟೆ ಪತ್ರಕರ್ತ ಸದಾಶಿವರ ಕುರಿತು ಬರೆದಿದ್ದಾರೆ. ಗೂಗಲ್ ನಲ್ಲಿ ಕನ್ನಡ, ಕ್ಯಾಮರಾ ಮತ್ತು ಫೋಟೋಗ್ರಫಿ ಮಾಹಿತಿ ಮುಂತಾದ ಉಪಯುಕ್ತ ಲೇಖನಗಳು ಇಲ್ಲಿವೆ. ಜಗತ್ತಿನ ಆಗುಹೋಗುಗಳ ಕುರಿತು ಆಗಾಗ್ಗೆ ಒಂದೆರಡು ಮಾತುಗಳನ್ನಾಡಿದ್ದಾರೆ. ಜೊತೆಗೊಂದಿಷ್ಟು ಕವಿತೆಗಳೂ ಇವೆ. ನೀವು ಹಾಗೇ ಸುಮ್ಮನೆ ಒಮ್ಮೆ ಹೋಗಿ ಬರಬಹುದು.

ಹುಡುಕಾಟದಲ್ಲಿದ್ದಾರೆ!

ಮನಸ್ಸಿನೊಳಗೆ ಉದ್ಭವಿಸುವ ದ್ವಂದ್ವಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿದ್ದಾರೆ ಯಜ್ಞೇಶ್.

ನಿರಂತರವಾಗಿ ಮಸ್ತಕದಲ್ಲಿ ಹರಿಯುತ್ತಿರುವ ಕನಸು, ತಳಮಳ, ಸಂತೋಷ, ಬೇಸರ, ಜೀವನ, ಗುರಿ, ನಗು, ಅಳು, ಮೌನ ಗಳಿಂದ ಉಂಟಾಗುವ ದ್ವಂದ್ವಗಳನ್ನು ಸೆರೆ ಹಿಡಿಯುವ ಹಾಗು ಅದರಲ್ಲೇ ಉತ್ತರ ಕಂಡುಕೊಳ್ಳಲೆಂದೇ ಅವರು ಬ್ಲಾಗಿಸುತ್ತಿದ್ದಾರೆ. ಈಗಷ್ಟೆ ಆ ಬೆಟ್ಟದ ತುದಿಯಲ್ಲಿ ನಿಂತು ಕವಿತೆ ಹೊಸೆದಿದ್ದಾರೆ. ನಡುವೆ ಒಂದೆರಡು ಕಥೆ ಬರೆದಿದ್ದಾರೆ. ಕೊಡೈಕೆನಾಲ್ ಸುತ್ತಿ ಬಂದಿದ್ದಾರೆ. ಇನ್ನೂ ಹತ್ತು ಹಲವು ಬಗೆಯಲ್ಲಿ ಬರೆದಿದ್ದಾರೆ. ಜೊತೆಗೆ ಕನ್ನಡದ ಗೀತೆಗಳನ್ನು ಅಂತರ್ಜಾಲದಲ್ಲಿ ಸಂಗ್ರಹಿಸುವ ಉದ್ದೇಶ ಹೊತ್ತ ‘ಸಂಗ್ರಹ' ಬ್ಲಾಗನ್ನೂ ನಿರ್ವಹಿಸುತ್ತಿದ್ದಾರೆ.

ಸುಮ್ಮನೆ ಕ್ಲಿಕ್ಕಿಸಿದ್ದು!

ದಿನದ ಬ್ಲಾಗಿನಲ್ಲಿ ಸುಮ್ಮನೆ ಕ್ಲಿಕ್ಕಿಸಿದ ಒಂದಿಷ್ಟು ಚಿತ್ರಗಳ ಸುಗ್ಗಿ.

ಅಮರ ಮತ್ತು ವಿಜಯ್ ಎಂಬ ಈ ಛಾಯಾಗ್ರಾಹಕರ ಕ್ಯಾಮರ ಕಣ್ಣು ಸೆರೆ ಹಿಡಿದ ಚಂದದ ಚಿತ್ರಗಳು ಇಲ್ಲಿವೆ. ಗೋಕರ್ಣದ ಕಡಲ ತೀರ ಬಳಸಿ, ಮೈಸೂರು ಅರಮನೆ ತಲುಪಿ ಶ್ರೀರಂಗ ಸನ್ನಿಧಿ ಸುತ್ತಿ ಬಂದಿರುವ ಕ್ಯಾಮರಾಗಳು ಹೀಗೆ ಹೋದಲ್ಲೆಲ್ಲ ಒಂದೊಂದು ಫೋಟೊ ಹೊತ್ತು ಬಂದಿವೆ. ಅರಳುವ ಹೂವಿನಿಂದ ಹಿಡಿದು ಆಡುತ್ತಿರುವ ಮಗುವಿನವರೆಗೆ ಬಣ್ಣ ಬಣ್ಣದ ಚಿತ್ರಗಳು ಇಲ್ಲಿ ನಗುತ್ತಾ ನಿಂತಿವೆ.

ಪುರಂದರನ ದರ್ಶನ

ಕನ್ನಡದ ಬ್ಲಾಗಿಗರಿಗೆ ಪುರಂದರ ದಾಸರ ಗೀತೆಗಳ ನಿತ್ಯದರ್ಶನ ಮಾಡಿಸುತ್ತಿದ್ದಾರೆ ನೀಲಾಂಜನರು. ದಾಸರ ಗೀತೆಗಳನ್ನು ಪಲ್ಲವಿ ಚರಣಗಳ ಸಹಿತವಾಗಿ ಇಲ್ಲಿ ಕೊಡಲಾಗುತ್ತಿದೆ. ಒಟ್ಟಾರೆ ದಾಸ ಪದಗಳ ಸಾರ ಸಂಗ್ರಹ ಇಲ್ಲಿದೆ.

ಚುರುಮುರಿಯ ಮಸಾಲೆ

ಚುರುಮುರಿಯ ಮಸಾಲೆ ಹೊತ್ತು ಅಮೆರಿಕಾದ ಟೆಕ್ಸಾಸ್ ನಿಂದ ಬ್ಲಾಗಿನಂಗಳಕ್ಕೆ ಬಂದಿದ್ದಾರೆ ಕಿರಣ್ ಜಯಂತ್.

ಚೂರು ಕಲ್ಪನೆ! ಚೂರು ಪಾರು ಮಸಾಲ...ಚೂರು ವಾಸ್ತವ! ಚೂರು ಪಾರು ಟೈಮ್ ಪಾಸ್...ಹಾಗೆಯೇ, ಕಳೆದು ಹೋದ ಮಧುರ ನೆನಪುಗಳಿಗೆ ಜೀವ ಕೊಡಲೆತ್ನಿಸುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ. ಮುಂಗಾರಿನ ಈ ಹೊತ್ತಲ್ಲಿ ಅವರಿಗೆ ಜೋಗದ ನೆನಪಾಗಿದೆ. ಹಾಗೇ ನಾಲ್ಕು ಪದ ಕಟ್ಟಿ ಬರೆದಿದ್ದಾರೆ. ಬಿಜೆಪಿಯ ಅನುಕಂಪದ ಅಲೆಗೆ ಒಂದಿಷ್ಟು ಕಾರಣ ಹುಡುಕಿದ್ದಾರೆ. ಅಪ್ಪಿಕೋ ನನ್ನ...ತಬ್ಬಿಕೋ ನನ್ನ ಅಂತೆಲ್ಲ ಹಾಡು ಹಾಡಿದ್ದಾರೆ. ಸಕಲೇಶಪುರ ರೈಲ್ವೆ ಟ್ರಾಕ್ ನಿಂದ ಮಲೆಯ ಮಾರುತದ ವರೆಗೆ ಒಂದು ಸುತ್ತು ಹಾಕಿದ್ದಾರೆ.

ಇಂತಿಪ್ಪ ಚುರುಮುರಿಯ ಉಪ್ಪುಕಾರವನ್ನು ಚಪ್ಪರಿಸ ಬಯಸುವವರು ಇಲ್ಲಿಗೊಮ್ಮೆ ಹೋಗಿಬನ್ನಿ.

ಇದ ಬಲ್ಲಿರೇನಯ್ಯ

ಬಲ್ಲಿರೇನಯ್ಯ ಎಂದು ಪ್ರಶ್ನಿಸುವ ಈ ಬಲ್ಲಿಗರು ತಮ್ಮ ಬ್ಲಾಗಿನಲ್ಲಿ ತಾವು ಬಲ್ಲ ಒಂದಿಷ್ಟು ಮಾತುಗಳನ್ನಾಡಿದ್ದಾರೆ. ಇವರ ‘ವಿಷಕ್ರಿಮಿ ನ್ಯಾಯ, ಚಿಲ್ಲರೆ ಸಮಸ್ಯೆ, ಯುದ್ದ ಕಾಲೇ ಶಸ್ತ್ರಾಭ್ಯಾಸ ......! ' ಮುಂತಾದ ಲೇಖನಗಳು ವಿಚಾರಕ್ಕೆ ಹಚ್ಚುವಂತಿವೆ. ಮಳೆಗಾಲದಲ್ಲಿ ವಟಗುಟ್ಟುವ ಗೋಂಕುರು ಕಪ್ಪೆಗಳನ್ನು ನೆನೆಯುವ ಲೇಖಕರು, ಮುಂದೊಂದು ದಿನ ಅವು ವಿನಾಶದ ಅಂಚು ತಲುಪುವ ಸಾಧ್ಯತೆ ಕುರಿತು ಎಚ್ಚರಿಸಿದ್ದಾರೆ. ಇಂತಹದ್ದೆ ಹಲವು ಲೇಖನಗಳು ಇಲ್ಲಿವೆ.

ಹೆಜ್ಜೆಯ ಸದ್ದು

ದಿನದ ಬ್ಲಾಗಿನಲ್ಲಿ ಕಾರ್ತಿಕ್ ಪರಾಡ್ಕರ್ ರ ಹೆಜ್ಜೆಯ ಸದ್ದು.

ಕನಸು ಕಂಗಳ ಈ ಹುಡುಗ ಹೀಗೆ ಕನಸಿದ ಒಂದಿಷ್ಟು ಪದಗಳು ಇಲ್ಲಿವೆ. ಸಿಗರೇಟಿನಂಚಿನಲ್ಲಿ ಕರಗುತ್ತಿರುವ ವಿಷಾದ ರಾತ್ರಿಯಲ್ಲೂ ಕವಿತೆಯೊಂದು ಸುರುಳಿಯಾಗಿ ಸುತ್ತುತ್ತಾ ಬಂದಿದೆ. ಕವನ ಬರೆಯುವುದೆಂದರೆ ಕಾರ್ತಿಕ್ ಗೆ ಇನ್ನಿಲ್ಲದ ಆಸ್ಥೆ. ಅನಿಸಿದ್ದನ್ನು ಹಾಗೇ ಅಕ್ಷರಕ್ಕಿಳಿಸುವ ಅವರ ಪ್ರಯತ್ನ ಎಗ್ಗಿಲ್ಲದೇ ಸಾಗಿದೆ.

ಅವಳ ಕಾಮನಬಿಲ್ಲಿನಂತಹ ಕಣ್ಣುಗಳನ್ನು ಕಂಡು ಇವನು ಹುಚ್ಚೆದ್ದು ಬರೆದ ಒಂದೆರಡು ಸಾಲು ಇಲ್ಲಿದೆ.

ಕಣ್ಣುಗಳು
ಹೊಸ ಕಾಮನಬಿಲ್ಲನ್ನು
ಹುಟ್ಟಿಸುತ್ತವೆ
ನನಗೊಂದು
ಹೊಸ ದಿಗಂತ
ತೆರೆದುಕೊಳ್ಳುತ್ತದೆ
ಮನಸ್ಸು ಹಕ್ಕಿಯಾಗಿ
ಕಾಮನಬಿಲ್ಲನ್ನು
ಚುಂಬಿಸಿ
ಪುಳಕಗೊಳ್ಳುತ್ತದೆ

ಅಲೆಮಾರಿ ಪುಟಗಳು

ದಿನದ ಬ್ಲಾಗಿನಲ್ಲಿ ಗುರಿಯಿಲ್ಲದ ಚಿಂತನೆಗಳ ಅಲೆಮಾರಿ ಬದುಕಿನ ಒಂದಿಷ್ಟು ಪುಟಗಳು.

ಸಾವು ಅನ್ನುವುದು ಅಷ್ಟೊಂದು ಭೀಕರವಾದ, ಬದುಕಿನುದ್ದಕ್ಕೂ ಕಾಡುತ್ತಲೇ ಹೋಗುವ ಸಂಗತಿಯೇ? ಹಾಗೆಂದು ಬರೆಯುತ್ತಾರೆ ಈ ಅಲೆಮಾರಿ ಬ್ಲಾಗಿಗರು. ಜೊತೆಗೆ ಸಾಕ್ಷಿಯಾಗಿ ಮೊದಲ ಬಾರಿಗೆ ಕೋರ್ಟ್ ಮೆಟ್ಟಿಲು ತುಳಿದು ಬಂದ ಅನುಭವಗಳನ್ನು ಸರಣಿಯಾಗಿ ಹಂಚಿಕೊಂಡಿದ್ದಾರೆ. ಪ್ರಜಾವಾಣಿ ಮತ್ತು ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಯಾವುದು ಉತ್ತಮ ಅಂತ ಚರ್ಚೆ ಮಾಡಿದ್ದಾರೆ. ಸಾಮಾಜಿಕ ಸಂಬಂಧಗಳ ಮೌಲ್ಯಗಳ ಕುರಿತು ಬರೆದ ಒಂದಿಷ್ಟು ಸಾಲುಗಳಿವೆ. ತೀರಿಹೋದ ನಾಯಿಯ ನೆನಪು ಇವರನ್ನೊಮ್ಮೆ ಕಾಡಿದೆ. ಇಂತಹದ್ದೆ ಹತ್ತು ಹಲವು ಬರಹಗಳು ಇಲ್ಲಿವೆ.

ವ್ಯಂಗ್ಯಗಳ ಬಣ್ಣ

ದಿನದ ಬ್ಲಾಗಿನಲ್ಲಿ ಒಂದಿಷ್ಟು ವ್ಯಂಗ್ಯಗಳ ಬಣ್ಣ.

ಕಾರ್ಟೂನ್ ಕಾರ್ಟೂನ್ ಅನ್ನೋ ಈ ಬ್ಲಾಗಿನಲ್ಲಿ ವ್ಯಂಗ್ಯಚಿತ್ರಗಳ ಒಂದು ನೋಟವಿದೆ. ಮೊನ್ನೆಯಷ್ಟೆ ಹೆಚ್ಚಾದ ಪೆಟ್ರೋಲ್ ಬೆಲೆಯಿಂದ ಹಿಡಿದು, ಯಡಿಯೂರಪ್ಪ ಸರ್ಕಾರದ ಸರ್ಕಸ್ಸುಗಳು, ಪೊಲಿಟಿಕಲ್ ಗಾಸಿಪ್ಸ್ ಇತ್ಯಾದಿಗಳವರೆಗೆ ಚಿತ್ರಕಾರರ ವಾರೆನೋಟ ಹರಿದಿದೆ. ಮೊನಾಚಾದ ಸೂಜಿಯಂತೆಯೇ ಚುಚ್ಚುವ ಮಾತು, ಗೆರೆಗಳ ನಡುವಿನ ಜಾದು, ಕಣ್ಣು ಕೋರೈಸುವ ಬಣ್ಣ ಇಲ್ಲಿನ ಚಿತ್ರಗಳ ವಿಶೇಷ. ನೋಡಬೇಕಿದ್ದವರು ಇಲ್ಲಿಗೊಮ್ಮೆ ಹೋಗಿಬನ್ನಿ.

ಮನಸಿನ ಮಾತುಗಳ ಸದ್ದು

ದಿನದ ಬ್ಲಾಗಿನಲ್ಲಿ ವಿಜಯ್ ರಾಜ್ ಕನ್ನಂತ್ ರ ಮನಸಿನ ಪಿಸುಮಾತುಗಳ ಸದ್ದು.

ಕಮರಿಹೋದ ಕನಸೊಂದು ಇಲ್ಲಿ ಈಗಷ್ಟೆ ಮತ್ತೆ ಚಿಗುರುತ್ತಿದೆ. ಟೀವಿ ಸೀರಿಯಲ್ಲು , ದೇವರ ಟ್ರಬಲ್ಲೂ ಅಂತ ಧಾರವಾಹಿಗಳ ಕಣ್ಣೀರಕೋಡಿಯ ರಹಸ್ಯವನ್ನು ಬಯಲಿಗೆಳೆಯ ಪ್ರಯತ್ನ ನಡೆದಿದೆ. ಲೇಖಕ ವಿಜಯ್ ರಾಜ್ ತಮ್ಮ ಮನಸ್ಸಿನ ಪಿಸುಮಾತುಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಮತ್ತೆ ನೆನಪಾಯಿತು ಕಮಲಶಿಲೆ ಹಬ್ಬ ಎಂದು ನೆನಪುಗಳ ಸವಿಸಂತೆಗೆ ಜಾರಿದ್ದಾರೆ. ಅರಮನೆ, ಆಕ್ಸಿಡೆಂಟ್, ಮುಸ್ಸಂಜೆ ಮಾತು ಮುಂತಾದ ಹೊಸ ಚಿತ್ರಗಳ ಕುರಿತು ಒಂದಿಷ್ಟು ಮಾತು ಹಂಚಿಕೊಂಡಿದ್ದಾರೆ. ಆಕರ್ಷಕ ತಲೆಬರಹಗಳೇ ಲೇಖನವನ್ನೊಮ್ಮೆ ಪೂರ್ತಿ ಓದುವಂತೆ ಮಾಡುತ್ತವೆ. ಇವರ ‘ಯಾಕೆ ಕಾಡುತಿದೆ ಸುಮ್ಮನೆ ನನ್ನನು ಯಾವುದು ಈ ರಾಗ... ಕನಸು ಕಾಣೋಣ ಬನ್ನಿ, ನೆನಪೆಂಬ ನವಿಲುಗರಿ, ಮೂಕಜ್ಜಿಯ ಕನಸು.. ಮೂಕವಾಯ್ತು ಮನಸು, ಅಂತೂ ಇಂತೂ..... ವೋಟು ಬಂತು...' ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ.

ಪದ ನಾಲ್ಕು ಸಾಲಾಗಿ

ಇಲ್ಲಿ ಒಂದಿಷ್ಟು ಪದಗಳು ಕೂಡಿ ನಾಲ್ಕು ಸಾಲಾಗಿ ಹೊರಹೊಮ್ಮಿವೆ. ರೋಮಾಂಚನಕಾರಿ ಟ್ರೆಕ್ಕಿಂಗ್ ನ ವಿವರಗಳಿವೆ. ಗೆಳೆಯರೆಲ್ಲ ಸೇರಿ ಜೋಗದಿಂದ ಹಿಡಿದು ಬಿಳಿಗಿರಿ ರಂಗನಬೆಟ್ಟದವರೆಗೆ ಸುತ್ತಿಬಂದ ಹೆಜ್ಜೆಯ ಗುರುತುಗಳಿವೆ. ಜೊತೆಯಾಗಿ ತೆಗೆಸಿಕೊಂಡ ಚಿತ್ರಗಳೂ ಇವೆ. ಅದೆಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸಿದ್ದಾರೆ ಚೇತನ್. ನಡುವೆ ಒಂದಿಷ್ಟು ನೆನೆಪುಗಳ ನವಿಲುಗರಿ ತೆರೆದುಕೊಂಡಿದೆ. ಕೆಲವು ನೆನಪುಗಳು ಕವಿತೆಯಾಗಿ ಹೊರಹೊಮ್ಮಿದೆ.

ಕಳೆದ ನಾಲ್ಕು ವರ್ಷಗಳಿಂದ ಬ್ಲಾಗಿಸುತ್ತಿರುವ ಚೇತನ್ ತಮ್ಮ ಎಲ್ಲ ಅನುಭವಗಳನ್ನು ಬರಹಕ್ಕೆ ಇಳಿಸಿಟ್ಟುಕೊಂಡಿದ್ದಾರೆ. ಓದಬೇಕು ಅಂದುಕೊಂಡವರು ಅವರ ಬ್ಲಾಗಿಗೊಮ್ಮೆ ಭೇಟಿ ಕೊಡಿ.

ಕೇದಗೆಯ ಕಂಪು

ಪರಿಮಳದ ಹಾದಿಯಲಿ ಘಮಘಮದ ಜಾಡು ಹಿಡಿದವರ ಕೇದಗೆಬನ ದಿನದ ಬ್ಲಾಗ್.

‘ಸಂಗೀತವೇ ಸುಂದರ ; ಅದನ್ನು ಮತ್ತಷ್ಟು ಸುಂದರಗೊಳಿಸುವುದು ಹೇಗೆ ?' ಅಂತ ಇಲ್ಲಿಬ್ಬರು ಗಂಧ-ಸುಂಗಂಧ ಎನ್ನುವವರು ಬ್ಲಾಗ್ ಲೋಕದಲ್ಲಿ ಹೊಸತೊಂದು ಚರ್ಚೆಗೆ ಚಾಲನೆ ನೀಡಿದ್ದಾರೆ. ಲಲಿತಕಲೆಗಳಿಗೆ ವಿಮರ್ಶೆ ಬೇಕೇ? ಅನ್ನುವುದು ಅವರ ಇನ್ನೊಂದು ಪ್ರಶ್ನೆ. ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ, ಮಾತು ಬೆಳೆಸುವುದೇ ಅವರ ಕಾಯಕ.

‘ನಾನು ಗಂಧ, ಅವನು ಸುಗಂಧ. ಹೀಗೇ...ಬದುಕಿನ ಬನದ ಯಾವುದೋ ತಿರುವಿನಲ್ಲಿ ಇಬ್ಬರೂ ಎದುರಾದೆವು. ಖುಷಿಯಾಯಿತು. ಕೈ ಕೈ ಕುಲುಕಿದವು. ಈಗ ನಡೆಯುತ್ತಿದ್ದೇವೆ. ನೀವೂ ಬಂದು ಸೇರಬಹುದು.ಸಿನಿಮಾ, ಸಂಗೀತ, ಕಲೆ, ನಾಟಕ-ಹೀಗೆ ಕೆಲವದ್ದರಲ್ಲಿ ಸಮಾನ ಆಸಕ್ತಿ. ಈ ಬ್ಲಾಗ್ ವಿಮರ್ಶಿಸುವ ನೆಲೆಯದ್ದಲ್ಲ. ಬನದಲ್ಲಿ ಆಘ್ರಾಣಿಸಿ ಅನುಭವಿಸಿದ್ದನ್ನು ಅನಾವರಣಗೊಳಿಸುವುದಷ್ಟೇ, ನಿಮ್ಮಂತೆಯೇ...' ಅನ್ನುವುದು ಅವರ ಆಹ್ವಾನ. ಆಸಕ್ತರು ಕೇದಗೆಯ ವನಕ್ಕೆ ಲಗ್ಗೆ ಇಡಬಹುದು.

ಕವಿತೆಗಳ ಕಲರವ

ದಿನದ ಬ್ಲಾಗಿನಲ್ಲಿ ಪುಷ್ಪಲತಾರ ಮನದಾಳದ ಕವಿತೆಗಳ ಕಲರವ.

‘ನಾನು ಬರೆಯುವುದು ನನ್ನನ್ನು ನಾನು ಕಂಡುಕೊಳ್ಳುವುದಕ್ಕೆ, ಖುಷಿಗೆ, ನೋವಿಗೆ, ಮತ್ತೆ ಕಾಣಿಸುವುದಕ್ಕೆ;ನಿಮ್ಮೊಂದಿಗೆ ಸಂವಾದಿಸುವುದಕ್ಕೆ..' ಅಂತನ್ನುವ ಪುಷ್ಪಲತಾ ತಮ್ಮ ಮನದ ಮಾತುಗಳನ್ನೆಲ್ಲ ಕವಿತೆಯ ರೂಪಕ್ಕೆ ಇಳಿಸಿದ್ದಾರೆ. ಆಕ್ವೇರಿಯಂ ಎದುರು ನಿಂತ ಅವರ ಕವಿ ಮನಸ್ಸಿಗೆ ಅದೊಂದು ಪುಟ್ಟ ವಿಶ್ವವಾಗಿ ಕಾಣಿಸಿದೆ. ಆಮೇಲೆ ಮನದಾಳದ ಮನೋಲ್ಲಾಸವನ್ನು ವಿವರಿಸುತ್ತಾ, ಕನಸು ಕದ್ದ ಹುಡುಗನಿಗೊಂದು ಓಲವಿನೋಲೆ ಬರೆದಿದ್ದಾರೆ. ಒಂದಿಷ್ಟು ಕನಸುಗಳು ಚಿಗುರೊಡೆದಿವೆ. ಇದನ್ನೆಲ್ಲ ಓದಬೇಕು ಅಂದುಕೊಳ್ಳುತ್ತಿರುವವರು ಈ ಬ್ಲಾಗಿಗೊಮ್ಮೆ ಹೋಗಿಬನ್ನಿ.

ನಗುವ ಬಣ್ಣಗಳು

ಬಣ್ಣಗಳಲ್ಲಿ ನಗು ತುಂಬಿ ಭಾವನೆ ಅರಳಿಸುವ ಹೇಮಶ್ರೀ ದೂರದ ಕ್ಯಾಲಿಫೋರ್ನಿಯದಿಂದ ಬ್ಲಾಗಿಸುತ್ತಿದ್ದಾರೆ. ತಮ್ಮ ಇತ್ತೀಚಿನ ಲೇಖನದಲ್ಲಿ ನೆನಪಿನ ಸುರುಳಿ ಬಿಚ್ಚಿ ಮಾತನಾಡಿದ್ದಾರೆ. ಚಿಕ್ಕಂದಿನಲ್ಲಿ ಸ್ಕೂಲಿಗೆ ಹೋಗುವಾಗಿದ್ದ ಮಜಾ, ಜಿಟಿಜಿಟಿ ಮಳೆಯಲ್ಲಿ ನೆನೆದು ತಣ್ಣಗಾದ ಅನುಭವಗಳೆಲ್ಲವನ್ನು ಮೆಲುಕು ಹಾಕಿದ್ದಾರೆ. ಅಲ್ಲಿನ ಬಿರು ಬೇಸಿಗೆಯಲ್ಲಿ ಲಾವಂಚದ ಬೀಸಣಿಗೆಯಿಂದ ಗಾಳಿ ಹಾಕಿಕೊಳ್ಳುತ್ತಾ ಜತಿನ್ ದಾಸ್ ರನ್ನು ನೆನೆದಿದ್ದಾರೆ . ಹೀಗೆ ನೆನಪಿನ ಅಲೆಯಲ್ಲಿ ಮುಳುಗಿಹೋಗಿದ್ದವರಿಗೆ ತಟ್ಟನೆ ತಮಗೆ ಮೂವತ್ತು ವರ್ಷ ವಯಸ್ಸಾದದ್ದು ನೆನಪಾಗಿದೆ. ಇಷ್ಟು ವಯಸ್ಸಾಗಿ ಹೋಯ್ತ ಅಂತ ಅಚ್ಚರಿ ಪಟ್ಟು, ಸದ್ಯ ಯೋಗ ಜಿಮ್ಮು ಅಂತೆಲ್ಲ ಯೋಚನೆ ಮಾಡುತ್ತಿದ್ದಾರೆ.

ಮನಸ್ಸು ಹಕ್ಕಿಯಾಗಿ....

ದಿನದ ಬ್ಲಾಗಿನಂಗಳದಲ್ಲಿ ಆರೇಹಳ್ಳಿ ರವಿಯವರ ಮನಸ್ಸು ಹಕ್ಕಿ.

ಒಂದಿಷ್ಟು ವಿಚಾರ, ಒಂದಿಷ್ಟು ವಿಮರ್ಷೆ-ವಿಶ್ಲೇಷಣೆ, ನಡುವೆ ಅಲ್ಲಲ್ಲಿ ಗಹನ ಸಂವಾದ... ಹೀಗೆ ಸಾಗಿದೆ ಹಾರುವ ಹಕ್ಕಿಯ ಮನಸ್ಸು. ಮೊನ್ನೆಯಷ್ಟೆ ಕನ್ನಡ ಸಾಹಿತ್ಯ .ಕಾಂ ನ ಸಮಾರಂಭವೊಂದಕ್ಕೆ ಕಾಲಿಟ್ಟು, ಅಲ್ಲಿ ನಡೆದ ಸಂವಾದವನ್ನೆಲ್ಲ ಬಿಡಿಬಿಡಿಯಾಗಿ ವಿವರಿಸಿದ್ದಾರೆ. ಇವರ ಹಿಂದಿನ ಬ್ಲಾಗ್ ಬರಹಗಳಾದ ‘ನಕಲಿ ಸಾರಾಯಿಯ ನರಮೇಧ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ' ,
‘ಕನ್ನಡ ತಂತ್ರಾಂಶಗಳೂ, ಮಾತುಗಾರರೂ...', ‘ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...' ‘ವಂಚನೆ ಅನ್ನೋದು...ಪುರಾತನ ಕಸುಬು' ‘QuestNet:ಚಿನ್ನದಂತ ಮೋಸ' ಇತ್ಯಾದಿ ಲೇಖನಗಳು ಆರಾಮವಾಗಿ ಓದಿಸಿಕೊಂಡು ಹೋಗುತ್ತವೆ.

ಕೆಲವು ಬರಹಗಳೂ ದೀರ್ಘವಾಗಿದ್ದರೂ, ವಿಷಯ ವೈವಿದ್ಯ ಮತ್ತು ನಿರೂಪಣೆಯಿಂದಾಗಿ ಗಮನ ಸೆಳೆಯುತ್ತವೆ.

ಅಕ್ಷರದ ವಿಹಾರ

ದಿನದ ಬ್ಲಾಗಿನಂಗಳದಲ್ಲಿ ವಿನಾಯಕ ಕೋಡ್ಸರರ ಅಕ್ಷರ ವಿಹಾರ.

ಬ್ಲಾಗಿನ ಬಾಗಿಲಿಗೆ ಬೀಗ ಜಡಿದುಹೋಗಿದ್ದ ವಿನಾಯಕರು ಮತ್ತೆ ಬಂದಿದ್ದಾರೆ. ಹೀಗೆ ಬಂದವರೇ ,ಎಡ ಬಲ ಪಂಥೀಯರಲ್ಲಿ ಯಾರು ಉತ್ತಮ? ಬುದ್ದಿಜೀವಿಗಳೆಲ್ಲರೂ ಅನ್ಯರನ್ನು ಓಲೈಸುವುದರಲ್ಲಿಯೇ ಕಾಲ ಕಳೆಯುತ್ತಾರಾ? ಅಂತೆಲ್ಲ ಹೇಳಿ ಸಣ್ಣದೊಂದು ಚರ್ಚೆ ಹುಟ್ಟುಹಾಕಿದ್ದಾರೆ. ಉಳಿದಂತೆ ಪುಟ್ಟಪುಟ್ಟಿಯರ ಒಂದಿಷ್ಟು ಪ್ರೇಮಪತ್ರಗಳಿವೆ. ನಡುವೆ ಇನ್ನೂ ಒಂದಿಷ್ಟು ವಿಷಯಗಳ ಒಗ್ಗರಣೆ. ಇರುವ ಇಷ್ಟೂ ಬರಹಗಳು ಹಾಗೇ ಓದಿಸಿಕೊಂಡು ಹೋಗುವಂತಿವೆ.

ಒಮ್ಮೆ ನೀವು ಹೋಗಿ ಓದಿ ಬನ್ನಿ.

ಸಿನಿಮಾಕ್ಕೊಂದು ಥಿಯೆಟರ್

ಕನ್ನಡ ಚಿತ್ರಲೋಕದ ಸಖತ್ ಸಮಾಚಾರಗಳು, ಜೊತೆಗೊಂದಿಷ್ಟು ಗಾಸಿಪ್, ಒಂದಿಷ್ಟು ಚಿತ್ರ ವಿಮರ್ಶೆ ಇತ್ಯಾದಿ ಸುದ್ದಿ ಸೊಗಡುಗಳ ಹದವಾದ ಮಿಶ್ರಣದಲ್ಲಿ ಮೂಡಿಬರುತ್ತಿದೆ ಪಿರಮಿಡ್ ಸಾಯಿಮಿರ ಥಿಯೆಟರ್ ಎಂಬ ಸಿನಿಮಾ ಬ್ಲಾಗ್. ಈಗಷ್ಟೆ ಬಿಡುಗಡೆಯಾಗಿರುವ ಚಿತ್ರ ಹೇಗಿದೆ? ಯಾವ ಚಿತ್ರ ಬಿಡುಗಡೆಗೆ ಸಿದ್ದವಿದೆ? ಯಾವ ಹೊಸ ಚಿತ್ರ ಸೆಟ್ಟೇರಿದೆ? ಎಲ್ಲದಕ್ಕೂ ಉತ್ತರ ಇಲ್ಲಿದೆ. ಕನ್ನಡ ಮಾತ್ರವಲ್ಲದೆ ಇನ್ನಿತರ ಭಾಷೆಗಳ ಸಿನಿಮಾ ಸಮಾಚಾರಗಳೂ ಇಲ್ಲಿ ಲಭ್ಯ.

ಸಿನಿಮಾಸಕ್ತರು ಇಲ್ಲಿಗೊಮ್ಮೆ ಭೇಟಿ ನೀಡಬಹುದು.

ತಳಕಿನ ಬ್ಲಾಗ್

ದಿನದ ಬ್ಲಾಗಿನಲ್ಲಿ ತಳಕು ಶ್ರೀನಿವಾಸರ ಕವಿತೆಗಳ ಸುಗ್ಗಿ.

ಕಳೆದ ಮೂರು ವರ್ಷಗಳಿಂದ ತಮ್ಮ ಬ್ಲಾಗ್ ಬರಹ ಕೃಷಿಯಲ್ಲಿ ತೊಡಗಿದ್ದಾರೆ ಶೀನಿವಾಸರು. ಹೀಗೆ ದಿನವೂ ಹೊತ್ತೊಯ್ಯುವ ರೈಲೊಂದರ ಮಾತಾಗಿ, ರೇಷ್ಮೆ ಹುಳುವಿನ ಆತ್ಮಕಥೆಯಾಗಿ, ಮಗುವೊಂದರ ನಗುವಾಗಿ ನಿಂತಿವೆ ಅವರ ಕವನಗಳು. ಅಲ್ಲಲ್ಲಿ ಸಂಸ್ಕೃತಿ, ಸಂಪ್ರದಾಯಗಳ ಕುರಿತು ಬರೆದ ಬರಹಗಳಿವೆ. ಅವರದ್ದೊಂದು ಕವಿತೆಯ ತುಣುಕು ಇಲ್ಲಿದೆ.

ಬದುಕು ಈರುಳ್ಳಿಯಂತೆ
ಬಲು ಘಾಟು, ಕತ್ತರಿಸಲು ಕಣ್ಣಿನಲ್ಲಿ ನೀರು
ಸುಲಿದಷ್ಟೂ ಪದರಗಳು
ಗಟ್ಟಿಯಾದ ಸಾರವಿಲ್ಲವೇ ಇಲ್ಲ
ತಿರುಳೇ ಇಲ್ಲದ ಸುರುಳಿ
ಸವಿಯಲು ಬಲು ಆನಂದ
ಜೊತೆಗೆ ಬಾಯಿ ವಾಸನೆ

ವೀಣಾರ ಮನಸ್ಸಿನ ಮಾತು

ದಿನದ ಬ್ಲಾಗ್ ಜಗುಲಿಯಲ್ಲಿ ವೀಣಾರ ಮನಸ್ಸಿನ ಮಾತುಗಳು.

ಅವರೇ ಹೇಳಿರುವಂತೆ ಇಲ್ಲಿ ಮನಸ್ಸಿನ ಮಾತುಗಳಿಗಷ್ಟೇ ಅವಕಾಶ. ಚಿಕ್ಕವರಾಗಿದ್ದಾಗೊಮ್ಮೆ ಟೀಚರ್ ಕೈಯಲ್ಲಿ ತಪ್ಪಿ ಬೈಸಿಕೊಂಡಿದ್ದರಿಂದಿಡು , ಮೊನ್ನೆ ಒಬ್ಬರೇ ಕೂತು ಬೈಸಿಕಲ್ ಥೀಫ್ ಸಿನಿಮಾ ನೋಡಿದ್ದರವರೆಗೆ, ಅನಿಸಿದ್ದು ಬಯಸಿದ್ದು ಕನಸಿದ್ದು ಎಲ್ಲವನ್ನೂ ಇಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೆ ನೊಂದ ತಾಯಿಯೊಬ್ಬಳ ತ್ಯಾಗದ ಕುರಿತು ಬರೆದಿದ್ದಾರೆ. ಗೆಳತಿಯ ಏಳಿಗೆ ಕಂಡು ಖುಷಿ ಪಟ್ಟಿದ್ದಾರೆ. ವೀಣಾಧರಿಯಂತವರನ್ನು ಕಂಡು ಸಂಭ್ರಮಿಸಿದ್ದಾರೆ. ತಮ್ಮ ನೆಚ್ಚಿನ ಲೇಖಕಿಯನ್ನು ಕಂಡು, ಮಾತನಾಡಿಸಿದಾಗಲಂತೂ ಸ್ವರ್ಗಕ್ಕೆ ಮೂರೇ ಗೇಣು!

ಇಂತಿಪ್ಪ ವೀಣಾರ ಮನಸ್ಸಿನ ಮಾತುಗಳನ್ನು ಓದ ಬಯಸುವವರು ಇಲ್ಲಿಗೊಮ್ಮೆ ಹೋಗಿ ಬರಬಹುದು.

ಇಲ್ಲಿರುವುದು ಕವನಗಳಲ್ಲ...!

ದಿನದ ಬ್ಲಾಗಿನಂಗಳದಲ್ಲಿ ಪ್ರತೀ, ಪಶಾಂತರ ಕನಸುಗಳ ಚಿತ್ತಾರ.

‘ಇಲ್ಲಿರುವುದು ಕವನಗಳಲ್ಲ, ಮನದ ಭಾವನೆಗಳು' ಅನ್ನುವ ಇವರು ಹೀಗೆ ಮನಸಿಗೆ ಅನಿಸಿದ ಪ್ರತಿ ಭಾವನೆಯನ್ನೂ ಅಕ್ಷರಕ್ಕಿಳಿಸಿದ್ದಾರೆ. ಕನಸಿನಲ್ಲಿ ಕಾಡುವ ಕನ್ಯೆಗೆ ಮುನಿಸು ತರವೇ ಅಂತೆಲ್ಲ ಕೇಳುತ್ತಲೇ ಇನ್ನಷ್ಟು ಕನಸಿದ್ದಾರೆ. ಅಲ್ಲಲ್ಲಿ ನೆನಪುಗಳ ತೋರಣ, ಒಂದಿಷ್ಟು ಮಾತು-ಪಿಸುಮಾತುಗಳ ಸದ್ದಿದೆ. ಕನಸು ಹೇಗಿರುತ್ತದೆಂದು ಕೇಳುವವರು ಇವರ ಕನಸುಗಳನ್ನೊಮ್ಮೆ ಕೇಳಿ ಬರಬಹುದು.

ಇಂಚರದ ಸದ್ದು

ದಿನದ ಬ್ಲಾಗಿನಂಗಳದಲ್ಲಿ ಇರ್ಷಾದರ ಇಂಚರದ ಕಲರವ.

ಈಗಿನ್ನೂ ವಿದ್ಯಾರ್ಥಿಯಾಗಿರುವ ಇರ್ಷಾದರ ಬ್ಲಾಗಿನಲ್ಲಿ ಚಿಂತನೆಯ ಓರೆಗಲ್ಲಿಗೆ ಹಚ್ಚುವ ಒಂದಿಷ್ಟು ಬರಹಗಳಿವೆ. ಅವರು ಇತ್ತೀಚೆಗೆ ‘ಮರೆಯಾಗದ ಮೂಡಿಗೆರೆಯ ಸಂತ' ನನ್ನು ನೆನೆಯುತ್ತಾ ಒಂದಿಷ್ಟು ಮಾತು ಬರೆದಿದ್ದಾರೆ. ವ್ಯಂಗ್ಯಗಳ ಚಿತ್ರ ವಿಷಾದಕ್ಕೆ ತಿರುಗುತ್ತಿರುವುದು, ಅವಕಾಶವಾದಿ ರಾಜಕಾರಣ, ಪ್ರತಿಭಾ ಪಲಾಯನ ಇತ್ಯಾದಿ ಕುರಿತು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬೆಳ್ಳಿಗ್ಗೆ ಎಂಟಕ್ಕೆ ಕಾಲೇಜಿಗೆ ಹೋಗುವ ಖುಷಿಯ ಕುರಿತು ವಿವರಿಸಿದ್ದಾರೆ. ಎಟಿಎಂ ಯಂತ್ರದೆದೆರು ಪೇಚಿಗೆ ಸಿಲುಕಿಕೊಂಡಿದ್ದನ್ನೂ ಹೇಳಿಕೊಂಡಿದ್ದಾರೆ. ಇಂತಹದ್ದೆ ಹತ್ತು ಹಲವು ಮುಕ್ತ ಬರಹಗಳು ಇಲ್ಲಿವೆ.

ಬ್ರಹ್ಮಾನಂದರ ಓಂಕಾರ

ಈ ದಿನದ ಬ್ಲಾಗಿನಂಗಳದಲ್ಲಿ ಬ್ರಹ್ಮಾನಂದರ ಓಂಕಾರ ಸದ್ದು.

ಭಾವುಕ ಪ್ರಪಂಚದ ಎಳೆಎಳೆಯನ್ನು ತಮ್ಮೊಳಗಿನ ಕಣ್ಣಿನಿಂದ ಕಂಡವರಂತೆ ಬರೆದಿದ್ದಾರೆ ಬ್ರಹ್ಮಾನಂದ. ಇರುವ ಒಂದಿಷ್ಟೇ ಲೇಖನಗಳಲ್ಲಿ ಆಪ್ತತೆ ಇದೆ. ಬಯಸಿದವರು ಸಿಗದಿದ್ದಾಗಿನ ನಿರಾಶೆ, ಇದ್ದವರು ಕಣ್ಮರೆಯಾದಾಗಿನ ಹತಾಶೆಗಳ ಜೊತೆಜೊತೆಗೆ ಬದುಕು ಕಟ್ಟಲು ಸ್ಪೂರ್ತಿಯಾದವರ ನೆನಪುಗಳು ಇಲ್ಲಿದೆ. ಇವರ ‘ಬೆಂಚು ಬರಹದ ಬಗ್ಗೆ ಕೊಂಚ ಬರಹ , ಮರೆಯಾದರೂ ಮರೆಯದವರು, ಅಪರಿಚಿತನಾಗಿ ಬಂದು ಪರಿಚಿತನಾಗಿ ಹೋಗುವಾಗ, ತಂಡದ ಕೊಂಡಿ ಕಳಚಿಕೊಂಡಾಗ' ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗಿಬಿಡುತ್ತವೆ.

ಸವಡಿಯ ಮಳೆ ನೆನಪು

ಇಲ್ಲಿ ಹೊರಗಡೆ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯ ಜೊತೆ ನೆನೆದು ಬರೆದಿದ್ದಾರೆ ಚಾಮರಾಜ ಸವಡಿ. ಗೇಟಿನ ಮುಂದೆ ಮುಖವಾನಿಸಿನಿಂತವರಿಗೆ ಯಾಕೋ ಅವರೂರಿನ ನೆನಪಾಗಿಬಿಟ್ಟಿದೆ. ಮಳೆಯ ನೀರಿನ ಹೊಂಡದಲ್ಲಿ ಓಕುಳಿಯಾಡಿದ್ದನ್ನು ನೆನೆಯುತ್ತಾ ಬಾಲ್ಯಕ್ಕೆ ಜಾರಿದ್ದಾರೆ. ಮೇ ತಿಂಗಳಿನ ಬಿರು ಬಿಸಿನಲ್ಲಿ ಕೊಪ್ಪಳದ ನೆಲ ಸುಡುತ್ತಿದ್ದ ಪರಿ ವಿವರಿಸಿದ್ದಾರೆ. ಹೀಗೆ ಅಂದುಕೊಳ್ಳುತ್ತಿರುವಾಗಲೇ ಕಿಟಿಕಿಯಾಚೆ ಚಂದ್ರ ಕಾಣಿಸಿ ಅವನ ಬಗ್ಗೆಯೂ ನಾಲ್ಕು ಮಾತನಾಡಿದ್ದಾರೆ. ಅದರಿಂದೆ ಡ್ರೈವರ್ ಎಂಬ ಆಪದ್ಬಾಂದವನ ಕುರಿತ ಸಣ್ಣದೊಂದು ಕಥೆ ಇದೆ. ಉಳಿದಂತೆ ಈ ಪತ್ರಕರ್ತನ ಒಂದಿಷ್ಟು ಕನಸು-ಕನವರಿಕೆಗಳಿವೆ.

ಈ ನಡುವೆ ತಾವು ಹದಿನಾಲ್ಕು ವರ್ಷದ ಹಿಂದೆ ಬರೆದಿದ್ದ ಒಂದಿಷ್ಟು ಕವಿತೆಗಳನ್ನು ತಂದು ಕೆಡವಿದ್ದಾರೆ. ಅದರದ್ದೊಂದು ತುಣುಕು ಇಲ್ಲಿದೆ.

ಇದ್ದಕ್ಕಿದ್ದಂತೆ
ಮಾತು ಕಳೆದುಕೊಂಡು
ಮೌನಿಯಾಗಿ
ಎಲ್ಲೋ ದಿಟ್ಟಿಸುವವ
ಹೆಗಲ ಮೇಲೆ ಕೈಇಟ್ಟರೆ
ಬೆಚ್ಚುವವ
ಕಾರಣವಿಲ್ಲದೇ
ಭಾವುಕನಾಗುವವ
ಮೂಕ ಪ್ರೇಮಿ

ಕನಸಿಗೆ ನೂರು ತುಂಬಿದೆ

ನೂರು ಕನಸುಗಳನ್ನು ಹೊತ್ತು ಬ್ಲಾಗಿನಂಗಳಕ್ಕೆ ಬಂದಿದ್ದಾರೆ ಶ್ರೀ.

ಸದ್ಯಕ್ಕೀಗ ಇಲ್ಲಿ ಬಿಸಿ ಸುದ್ದಿ ತಣಿದ ಮೇಲೆ ಏನಾಗುತ್ತದೆ ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಹೀಗೆ ಸಿಕ್ಕ ಸುದ್ದಿಯನ್ನೇ ಮಾಧ್ಯಮಗಳು ಹೇಗೆ ಬಲುವಾಗಿ ಬಳಸಿಕೊಳ್ಳುತ್ತಾವೆಂಬ ಕುರಿತು ವಿವರಿಸುವ ಪ್ರಯತ್ನ ಮಾಡಿದ್ದಾರೆ. ನೆನಪು ಕನಸುಗಳ ಕುರಿತೆಲ್ಲ ಕಥೆ, ಕವಿತೆ ಬರೆಯುವ ಹವ್ಯಾಸ ಅವರದ್ದು. ನೋವಲ್ಲೊಂದು ಕವಿತೆ ಹುಟ್ಟಿದೆ. ಅದೇ ಕಥೆಯಾಗಿ ಬೆಳೆದಿದೆ. ಆಮೇಲೆ ಹರಟೆ ಹೊಡೆಯಲಿಕ್ಕೂ ಇಲ್ಲಿ ಅಡ್ಡಿ ಇಲ್ಲ. ಜೊತೆಗೆ ಪರಿಸರ ವಿಚಾರ ಅಂತೆಲ್ಲ ಚಿತ್ತ ಹರಿದಿದೆ. ಅವರು ಒಮ್ಮೊಮ್ಮೆ ಕನಸು ಕಾಣುತ್ತಲೇ ಅದು ತಮ್ಮ ಕನಸಲ್ಲ ಎಂದು ಕನವರಿಸಿದ್ದಾರೆ. ಆ ಕನವರಿಕೆಯ ಒಂದೆರಡು ಸಾಲು ಇಲ್ಲಿವೆ.

ಗೊತ್ತಿದ್ದವರು
ಹೇಳುತ್ತಾರೆ,
ಕನಸಿಗೆ ಬಣ್ಣವಿಲ್ಲವ೦ತೆ...
ಆದರೆ...
ಬಣ್ಣವಿಲ್ಲದ ಕನಸು
ಬದುಕಿಗೆ ಬಣ್ಣ ತು೦ಬುತ್ತದಲ್ಲ,
ಅದು ಹೇಗೆ?

ಗುಬ್ಬಚ್ಚಿ ಕವಿತೆಯ ಗೂಡು

ಈ ದಿನ ಗುಬ್ಬಚ್ಚಿ ಗೂಡಿನೆಡೆಗೆ ಸಾಗಿದೆ ದಿನದ ಬ್ಲಾಗಿನ ಪಯಣ.

ಹೀಗೆ ಗುಬ್ಬಿಯಾಗಿ ಆಕಾಶದೆಲ್ಲೆಲ್ಲ ಹಾರಾಡಬೇಕೆನ್ನುವ ಆಸೆ ಹೊತ್ತ ಕುಮಾರಸ್ವಾಮಿ ಈ ಗೂಡಿನಲ್ಲಿ ತಮ್ಮ ಭಾವಕ್ಕೊಂದು ರೂಪ ಕೊಟ್ಟಿದ್ದಾರೆ. ‘ಚಿಗುರೊಡೆದ ಭಾವನೆಗೆ ಪದರೂಪ ಕೊಟ್ಟು ಹಕ್ಕಿಯಂತೆ ಹಾಡಿಬಿಡುವೆ. ಕೇಳಿಕೊಂಡವರು ನೆಚ್ಚಿಕೊಂಡರೆ ನಲಿಯುವೆ' ಎನ್ನುವುದು ಈ ಗುಬ್ಬಚ್ಚಿಯ ಆಲಾಪ. ಇವರ ನನ್ನ ಮುದ್ದು ಚಂದಿರ, ಕಾದಿರುವೆನು ಅಭಿಸಾರಿಕೆ, ಬಾರೋ ಅಂಗಳಕೆ ಮುಂತಾದ ಕವಿತೆಗಳು ಹಾಗೆಯೇ ಓದಿಸಿಕೊಂಡು ಹೋಗುತ್ತವೆ. ಅದರದ್ದೊಂದು ತುಣುಕು ಇಲ್ಲಿದೆ.

ಇನಿಯ ನಿನ್ನ ಕನಸನ್ನು ಕಂಗಳಲಿ ಕಟ್ಟಿ
ಕಾದಿಹೆನು ಎವೆಮುಚ್ಚದೆ ಕಾತುರದಿಂದ
ನಿದ್ದೆಯಲಿ ಜಾರಿಬಿಡುವೆನೆಂಬ ಆತಂಕ
ಕಂಗಳ ತೆರೆದು ನಿನ್ನ ಹುಡುಕುತಿರುವೆನು

ಕೃಷ್ಣನಿಗೆ ತುಳಸಿ ಜಪ

ಒಂಟಿತನದಲ್ಲೇ ಒಲವನ್ನು ಕಾಣಬಯಸುವ ಕವಿಯೊಬ್ಬರ ‘ಕೃಷ್ಣ ತುಳಸಿ' ದಿನದ ಬ್ಲಾಗ್.

ಸುಮ್ಮನೆ ಕಾಡುವ ನಲ್ಲೆಯ ನೆನಪು, ತುಡಿತ, ತೊಳಲಾಟವೆಲ್ಲವನ್ನೂ ಅಕ್ಷರ ರೂಪಕ್ಕಿಳಿಸಿರುವ ಇವರ ಕವಿತೆಗಳು ಹಾಗೆಯೇ ಓದಿಸಿಕೊಂಡು ಹೋಗುತ್ತವೆ. ಹೀಗೆ ನೆನಪು ಕಾಡಿದಾಗಲೆಲ್ಲ ಅವರು ಬಂಡೆಯೊಂದರ ಮೇಲೆ ಕೂತು ಧ್ಯಾನಿಸುತ್ತಲೋ , ಮರದ ಮೇಲಣ ಕೋಗಿಲೆಯನ್ನು ದಿಟ್ಟಿಸುತ್ತಲೋ ತಮ್ಮನ್ನು ತಾವು ಕಳೆದುಕೊಂಡಿದ್ದಾರೆ. ನಡುವೆ ಅಲ್ಲಲ್ಲಿ ನಿರಾಶೆ, ಸಾಂತ್ವನ, ಆಧ್ಯಾತ್ಮ ಬೆರೆತ ಸಾಲುಗಳಿವೆ. ಒಮ್ಮೊಮ್ಮೆ ಭಕ್ತಿ ರಸವೂ ಉಕ್ಕಿ ಬಂದಂತಿದೆ. ಒಂಟಿತನದಲ್ಲೇ ಕಳೆದುಕೊಂಡದ್ದೆಲ್ಲವನ್ನು ಮತ್ತೆ ಪಡೆಯುವ, ಮೌನದಲ್ಲೇ ಸಂಭಾಷಣೆ ನಡೆಸುವ ಹಂಬಲ ಈ ಕವಿತೆಗಳಲ್ಲಿದೆ.

ಕಾವ್ಯಕ್ಕೊಂದು ಹೃದಯವೀಣೆ

ಈ ದಿನದ ಬ್ಲಾಗ್ ಹರ್ಷ ಬೀರಗೆ ಬರೆಯುವ `ಹೃದಯ ವೀಣೆ ಮೀಟಿದಾಗ`. ನನ್ನ ಬಗ್ಗೆ ನಾನೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ, ಹಾಗಾಗಿ ಈಗ ನನ್ನ ಬಗ್ಗೆ ನಾನು ಹೇಳಿಕೊಳ್ಳುವುದಕ್ಕಿಂತ ನೀವೇ ನಿಮಗನಿಸಿದ ಹಾಗೆ ತಿಳಿದುಕೊಳ್ಳಿ ಎಂದು ಕಂಗ್ಲೀಷ್‌ನಲ್ಲಿ ತಮ್ಮ ಪರಿಚಯ ಹೇಳಿಕೊಂಡಿರುವ ಈ ಬ್ಲಾಗಿಗರು ಕಾವ್ಯದ ವಿಷಯಕ್ಕೆ ಬಂದಾಗ ಸ್ವಲ್ಪ ಭಾವುಕರಾಗಿದ್ದಾರೆ.

ಜೀವದ ಗೆಳತಿ, ಕನಸಿನ ಕನ್ಯೆ, ನಿನ್ನ ಕಣ್ಣೀರ ಹನಿಗೊಂದು ಹೀಗೆ ಹಲವು ಭಾವುಕ ನಿಮಿಷಗಳಿಗೆ ಹರ್ಷ ಕಿಲಿಮಣೆ ಕುಟ್ಟಿ ಭರವಸೆ ಮೂಡಿಸಿದ್ದಾರೆ. ಅವರೇ ಹೇಳುವಂತೆ ಇವೆಲ್ಲಾ ಒತ್ತರಿಸಿ ಬಂದ ಭಾವಗಳು, ಲೇಖನಿಯ ಮೂಲಕ ಹೊರಹೊಮ್ಮಿದೆ. ಹೀಗೆ ಅವರು ಬರೆದಿರುವ ಕವಿತೆಗಳಲ್ಲಿ ಅವಳ ನೆನಪು, ದೂರದ ಕನಸಿನೂರಿಗೆ, ಮುಗಿಯದಿರಲಿ ಮಾತುಗಳು, ಹೃದಯವೀಣೆ ಮೀಟಿದಾಗ, ಬೇಸರ, ಅಮ್ಮನ ನೆನಪು ಇತ್ಯಾದಿಗಳು ನವಿರಾಗಿದೆ. ಹರ್ಷ ಬರೆದ ಒಂದು ಕವಿತೆಯ ನಾಲ್ಕು ಸಾಲು ನಿಮ್ಮ ಮೊದಲ ಓದಿಗೆ ಕೆಳಗೆ ನೀಡಲಾಗಿದೆ. ಅವರ ಕವನ ರಸಾಯನ ನಿಮಗೆ ಇಷ್ಟವಾದರೆ ನೀವು ಅವರನ್ನು ಹುಡುಕಿಕೊಂಡು ಅವರ ಬ್ಲಾಗಿಗೆ ಹೋಗಬಹುದು. ಆದರೆ ಒಂದು ತಿಂಗಳಿಂದ ಅವರು ಅಲ್ಲಿ ಕಾಣುತ್ತಿಲ್ಲ.

ಬೇಸಿಗೆಯಲ್ಲೊಮ್ಮೆ ನಾವಿಬ್ಬರು
ಸೇರಿ ರಾತ್ರಿ ಆಗಸದ ಚುಕ್ಕಿಗಳನ್ನು
ಹೆಕ್ಕಿ, ಹೆಕ್ಕಿ ಎಣಿಸಿದ್ದು, ಮುಂಜಾನೆ
ಎರಡು ಚುಕ್ಕಿ ನಿನ್ನ ಕಣ್ಣಲ್ಲೇ ಇದೆ
ಎಂದು ನಾನು ಆಂದಾಗ,
ನನ್ನ ಹುಚ್ಚನೆಂದು ನಕ್ಕಿದ್ದು ನೆನಪಿದೆ ತಾನೇ?


ಇವತ್ತಿಗೆ ಇದೇ ಪರ್ಯಾಯ

ಇವತ್ತು ಏನ್ ವಿಶೇಷ ಅಂತ ತಿಳಿಯುವ ಕುತೂಹಲವೇ? ಹಾಗಾದರೆ ಪರ್ಯಾಯ ಎಂಬ ಈ ಬ್ಲಾಗಿಗೊಮ್ಮೆ ಭೇಟಿ ನೀಡಿ. ಯಾಕಂದ್ರೆ ಇವತ್ತಿನ ಇತಿಹಾಸ ಏನು ಅನ್ನುವುದರಿಂದ ಹಿಡಿದು, ಇವತ್ತು ಯಾರ ಹುಟ್ಟುಹಬ್ಬ, ಏನ್ ವಿಶೇಷ ಅನ್ನುವುದರವರೆಗೆ ಎಲ್ಲವನ್ನೂ ಪಟ್ಟಿಮಾಡಿ ಇಲ್ಲಿ ಕೊಟ್ಟಿದ್ದಾರೆ ಪತ್ರಕರ್ತ ನೆತ್ರಕೆರೆ ಉದಯಶಂಕರ. ಕೃಷಿಯಿಂದ ಹಿಡಿದು ಮಾಹಿತಿ ತಂತ್ರಜ್ಝಾನದವರೆಗೆ ವಿವಿಧ ವಿಷಯಗಳ ಕುರಿತು ಅವರ ವಿಚಾರ ಲಹರಿ ಹರಿದಿದೆ. ಜೊತೆಗೆ ರಾಜ್ಯ ರಾಜಕೀಯದ ಕಸರತ್ತು ಕುರಿತು ಆಗಾಗ್ಗೆ ಬರೆದ ಬರಹಗಳು ಇಲ್ಲಿವೆ.

ಕಾವ್ಯಕ್ಕೂ ಒಂದು ಕೃಷಿ

ದಿನದ ಬ್ಲಾಗಿನಂಗಳದಲ್ಲಿ ತೆರೆದುಕೊಳ್ಳುತ್ತಿದೆ ಸುಶೀಲ ಸುಸಂಕೃತ ಎಂಬ ಹೆಸರಿನವರ ಕಾವ್ಯಕೃಷಿ.

ಈ ದಿನ ಎಂಬುದು ನಿನ್ನೆ ನಾಳೆಗಳ ನೇವರಿಕೆಯ ನಡುವೆ ತೆಗೆದುಕೊಂಡ ಅಲ್ಪ ವಿರಾಮದಂತೆ ಎಂದು ಬರೆಯುತ್ತಾರೆ ಸುಶೀಲ್. ಇಂತಿಪ್ಪ ಪಯಣಿಗ ನಾಳೆಗಳ ಕನಸು ಕಾಣುತ್ತಲೇ ಕವಿತೆ ಹೊಸೆದಿದ್ದಾರೆ. ನೆನಪುಗಳ ಅಲೆಯಲ್ಲಿ ಮಿಂದು ಬಂದಿದ್ದಾರೆ. ಇಲ್ಲಿ ಮೌನ ಮಾತಾಗಿದೆ. ಒಮ್ಮೆಮ್ಮೆ ಮಾತು ಮೌನಕ್ಕೆ ತಿರುಗಿದೆ. ನಡುವೆ ಒಂದಿಷ್ಟು ಕನವರಿಕೆ ಇದೆ. ಹೀಗೆ ಕನವರಿಸಿದ ಒಂದೆರಡು ಸಾಲು ಇಲ್ಲಿದೆ.

ಕನ್ನಡದ ಕ್ಲಾಸಿನಲ್ಲಿ ಕದ್ದು-ಮುಚ್ಚಿ
ಬೆಲ್ಲದ ಸವಿ ಸವಿಯುವಾಗ ಸಿಕ್ಕಿಬಿದ್ದು
ಬೆಲ್ಲಾದ ನಂತರವೂ
ಬೆತ್ತಗಳ ಕೆಳಗೆ ಬೆತ್ತಲಾಗುವ ಪುಟ್ಟ ಮನಸು

ಮುಲುಗುಡುವ ಮುಂಗೈ-ಬೆರಳು
ಅದುಮಿಟ್ಟ ಕಣ್ಣ ಕೋಡಿ
ಒತ್ತಿ ಹಿಡಿದ ಯಾತನೆಯ ಕೂಗು
ಬೆಲ್ಲದ ಸಿಹಿಯನ್ನೂ ಮರೆಸುವಂತಹ
ಕಹಿ ನೆನಪುಗಳು!

ರಂಜನಿಯ ಭಾವ ಚಿತ್ತಾರ

ಭಾವ ಚಿತ್ತಾರದಲ್ಲೀಗ ರಂಗೋಲಿಯ ಚಿತ್ತಾರ ಹರಡಿದೆ. ಕಪ್ಪು ಬಿಳುಪಿನಿಂದ ಹಿಡಿದು ಬಗೆಬಗೆಯ ಬಣ್ಣಗಳ ರಂಗೋಲಿಗಳೂ ಕಣ್ಣು ಕೋರೈಸುತ್ತಿವೆ. ಅದಕ್ಕೂ ಮುನ್ನ ಲೇಖಕಿಗೆ ತಮ್ಮ ಬಾಲ್ಯದ ನೆನಪಾಗಿದೆ. ಅಜ್ಜಿ ಮನೆಯಲ್ಲಿ ಕಣ್ಣಾ ಮುಚ್ಚಾಲೆ, ಮರಕೋತಿ ಆಟ ಆಡಿದ್ದು, ಭಾನುವಾರಗಳಂದು ಕಬ್ಬನ್ ಪಾರ್ಕ್ , ಲಾಲ್ ಬಾಗ್ ಅಂತೆಲ್ಲ ಸುತ್ತಿ ಮಜಾ ಉಡಾಯಿಸುತ್ತಿದ್ದುದ್ದೆಲ್ಲವನ್ನೂ ನೆನೆದಿದ್ದಾರೆ. ಇವತ್ತಿನ ಮಕ್ಕಳು ಹೀಗೆ ಮಜಾ ಮಾಡುತ್ತಿಲ್ಲವಲ್ಲ ಅಂತ ಮರುಕ ಪಟ್ಟುಕೊಂಡಿದ್ದಾರೆ. ಮದುವೆ, ದೀಪಾವಳಿ ಕುರಿತು ಅನಿಸಿಕೆ ಅಂಚಿಕೊಂಡಿದ್ದಾರೆ. ಇನ್ನೂ ಕವಿತೆ ಬರೆಯೋದು ಅಂದ್ರಂತು ಅವರಿಗೆ ತುಂಬಾ ಇಷ್ಟ ಅಂತ ಅವರ ಬ್ಲಾಗಲ್ಲಿರುವ ಹತ್ತಾರು ಕವಿತೆಗಳೇ ಸಾರಿ ಹೇಳುತ್ತಿವೆ.

ಇದೆನ್ನೆಲ್ಲ ನೀವು ಓದಬೇಕಾ? ಹಾಗಾದರೆ ಭಾವ ಚಿತ್ತಾರಕ್ಕೊಮ್ಮೆ ಭೇಟಿ ಕೊಡಿ.

ಶೀಲವೆಂಬ ಮೋಟುಗೋಡೆ ದಾಟಿ

‘ಇಣುಕಿದಾಗ ಏನು ಕಂಡೀತೆಂಬ ಕುತೂಹಲ ನಮಗೂ ಇದೆ!' ಅಂತನ್ನುತ್ತಲೇ ಅಶ್ಲೀಲತೆಯೆಂಬ ಮೋಟುಗೋಡೆಯನ್ನು ಹತ್ತಿ ಆಚೆಗಿಣುಕುವ ಯತ್ನದಲ್ಲಿದ್ದಾರೆ ಮೋಟುಗೋಡೆಯ ಪಡ್ಡೆ ಹುಡುಗರು. ಈ ಪರಿಧಿಯನ್ನು ಸ್ವಲ್ಪವೇ ದಾಟಿ, ಆ ಮೋಟುಗೋಡೆಯನ್ನು ಹತ್ತಿ, ಆಚೆ ಇಣುಕಿ ನೋಡಲಿದ್ದೇವೆ ಅನ್ನುತ್ತಾರೆ ಸುಶ್ರುತ, ಶ್ರೀನಿಧಿ ,ಸಂದೀಪ ನಡಹಳ್ಳಿ ಮತ್ತು ಹರ್ಷ. ಇಣುಕಿ ನೋಡುವ ಅವರ ಈ ಪ್ರಯತ್ನಕ್ಕೆ ಭಾರೀ ಬೆಂಬಲವೇ ದೊರೆತಿದೆ. ಪ್ರೇಮದಂತೆಯೇ ಕಾಮದ ಬಗ್ಗೆಯೂ ಮುಕ್ತವಾಗಿ ಮಾತನಾಡುವಂತಾಗಬೇಕು ಅನ್ನುವುದು ಅವರ ಆಶಯ. ಹೀಗೆ ಮುಕ್ತವಾಗಿಯೇ ಬರೆದ ಒಂದಿಷ್ಟು ಬರಹಗಳು ಇಲ್ಲಿವೆ.

ಇಣುಕಿ ನೋಡುವ ಆಸಕ್ತಿ ಇದ್ದವರು ಮೋಟು ಗೋಡೆಯನ್ನು ಏರಬಹುದು.

ಮಣಿಕಾಂತರ ಮಮಕಾರ

ಇಲ್ಲಿ ಅವನು ಆ ಜೇನು ತುಟಿಯ ಹುಡುಗಿಗೆ ಬರೆದ ಐನೂರನೇ ಪ್ರೇಮಪತ್ರವಿದೆ. ಆ ಆಫೀಸಿನ ಹುಡುಗನಿಗೆ ಹೊಸದಾಗಿ ಕೆಲಸಕ್ಕೆ ಬಂದ ಹುಡುಗಿಯ ಕಂಡು ಹುಚ್ಚೇ ಹಿಡಿದಿದೆ. ಆ ನಾನೂರನೇ ನಂಬರಿನ ಬಸ್ಸಿನಲ್ಲಿ ಓಡಾಡುವ ಹುಡುಗಿಯೇನೂ ಕಡಿಮೆ ಇಲ್ಲ. ಬೇರೆ ಹುಡುಗೀರನ್ನ ನೋಡಿದ್ರೆ ಅಷ್ಟೆ ಅಂತ ಧಮಕಿ ಹಾಕುತ್ತಲೇ ತನ್ನ ಪ್ರೇಮ ನಿವೇದಿಸಿಕೊಳ್ಳುತ್ತಿದ್ದಾಳೆ.

ಹೀಗೊಂದಿಷ್ಟು ಒಲವಿನೋಲೆಗಳ ಚಿತ್ತಾರಗಳು ಮಣಿಕಾಂತರ ಈ ಒಲವೇ ಮರೆಯದ ಮಮಕಾರ ದಲ್ಲಿದೆ. ಪತ್ರಕರ್ತ ಮಣಿಕಾಂತ್ ಈಗಷ್ಟೆ ಆರ್ ಎನ್ ಜಯಗೋಪಾಲರ ಹಾಡುಗಳನ್ನು ನೆನೆಸಿಕೊಂಡು ಬರೆದಿದ್ದಾರೆ. ದುಃಖದ ಮಡುವಿನಲ್ಲೂ ಗೋಪಾಲರು ಹಾಡು ಕಟ್ಟಿದ ಕಥೆ ಹೇಳಿದ್ದಾರೆ. ಜೊತೆಗೆ ಒಂದಿಷ್ಟು ಸುದ್ದಿ-ಸ್ವಾರಸ್ಯಗಳ ಸಾಂಗತ್ಯವಿದೆ. ಲಂಕೇಶರು ವೈಎನ್ಕೆ ಜೊತೆ ಕಾರು ಓಡಿಸಿದ್ದು, ತೇಜಸ್ವಿ ಕುರಿತ ಕೆಲವು ನೆನಪುಗಳೂ ಇವೆ. ಇದನ್ನೆಲ್ಲ ಮೆಲುಕು ಹಾಕುವವರು ಒಲವೇ ಮರೆಯದ ಮಮಕಾರಕ್ಕೆ ಒಮ್ಮೆ ಹೋಗಿ ಬನ್ನಿ.

ಕನ್ನಡದಲ್ಲಿ ಷೇರು ಮಾರುಕಟ್ಟೆ ಸುದ್ದಿ

ಷೇರು ಮಾರುಕಟ್ಟೆಯಲ್ಲಿ ನಿತ್ಯ ಏನಾಗುತ್ತಿದೆ ಎಂಬ ಕುತೂಹಲವೇ? ಷೇರು ವ್ಯವಹಾರಗಳ ಕುರಿತು ತಿಳಿದುಕೊಳ್ಳುವ ಆಸಕ್ತಿ ಇದೆಯೇ? ಇಂತಿಷ್ಟು ಮಾಹಿತಿಗಳನ್ನು ಕನ್ನಡದಲ್ಲೇ ಪಡೆಯ ಬಯಸುತ್ತೀರಾ? ಹಾಗಿದ್ದರೆ ಒಮ್ಮೆ ಷೇರು ಮಾರುಕಟ್ಟೆ ಎಂಬ ಈ ಬ್ಲಾಗಿಗೆ ಹೋಗಿ ಬನ್ನಿ. ಷೇರು ಪೇಟೆಯಲ್ಲಿನ ನಿತ್ಯದ ಸುದ್ದಿ, ಸೂಚ್ಯಾಂಕಗಳ ಏರಿಳಿತ, ಕಷ್ಟ-ನಷ್ಟ ಇತ್ಯಾದಿ ವಿಷಯಗಳ ಕುರಿತ ಮಾಹಿತಿ ಇಲ್ಲಿದೆ. ಜೊತೆಗೆ ಮಾರುಕಟ್ಟೆಯ ವ್ಯವಸ್ಥೆ , ವಿವಿಧ ಕಂಪನಿ ಷೇರುಗಳ ದಿನದ ಬೆಲೆ, ಲಾಭ-ನಷ್ಟದ ಕುರಿತೂ ಮಾಹಿತಿ ದೊರೆಯುತ್ತದೆ.

ಹರಟೆಗೊಂದು ಸೋಮಾರಿ ಕಟ್ಟೆ

ಶಂಕರ ಪ್ರಸಾದರ ಸೋಮಾರಿ ಕಟ್ಟೆ ದಿನದ ಬ್ಲಾಗ್.

ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ ಕಟ್ಟಿಕೊಂಡಿದ್ದಾರೆ ಶಂಕರ್. ಇಷ್ಟು ದಿನ ಇದೇ ಕಟ್ಟೆಯಲ್ಲಿ ಕೂತು ಹರಟೆ ಹೊಡೆಯುತ್ತಿದ್ದ ಶಂಕರರಿಗೆ ಈಗ ‘ಚಂದಮಾಮ'ನ ನೆನಪಾಗಿ ಬಿಟ್ಟಿದೆ.ಆಗೊಮ್ಮೆ ಈಗೊಮ್ಮೆ ಆಟೋ ಹಿಂದೆ ಬೀಟ್ ಹೊಡೆದು ಆಟೋ ಅಣಿಮುತ್ತು ಕಲೆ ಹಾಕುವ ಅಭ್ಯಾಸವೂ ಇವರಿಗುಂಟು. ಇನ್ನುಳಿದಂತೆ ಲೋಕದ ಆಗು ಹೋಗುಗಳ ಕುರಿತೆಲ್ಲ ಲೋಕಾಭಿರಾಮವಾಗಿ ಹರಟಿದ್ದಾರೆ.

ಹರಟೆ ಪ್ರಿಯರು ಈ ಸೋಮಾರಿ ಕಟ್ಟೆಯಲ್ಲಿ ಬಂದು ಕೂರಬಹುದು.

ಚಿತ್ರರಂಗಕ್ಕೊಂದು ಮ್ಯಾಜಿಕ್ ಕಾರ್ಪೆಟ್

ಕಳೆದ ವಾರ ಬಿಡುಗಡೆಯಾದ ಮುಸ್ಸಂಜೆ ಮಾತು ಚಿತ್ರ ಹೇಗಿದೆ? ಕತೆ ಸ್ವಲ್ಪ ಬೋರು ಗುರು, ನಿಜ ಹೇಳ್ಬೇಕು ಅಂದ್ರೆ ಅಲ್ಲಿ ಕಥೆನೇ ಇಲ್ಲ. ಸುದೀಪ್ ಅಭಿನಯ ಓಕೆ, ಅಷ್ಟೊಂದು ಕೊರೆತ ಯಾಕೆ?.... ಎರಡು ತಿಂಗಳ ಹಿಂದಷ್ಟೆ ಶುರುವಾದ ಮ್ಯಾಜಿಕ್ ಕಾರ್ಪೆಟ್ ಬ್ಲಾಗಿನಲ್ಲಿ ಹೀಗೆ ಸಿನಿಮಾ ಜಗತ್ತಿನ ಕುರಿತ ಚರ್ಚೆಯೊಂದು ಸದ್ದಿಲ್ಲದೆ ನಡೆದಿದೆ. ಕನ್ನಡದ ಸಿನಿಮಾಗಳಿಂದ ಹಿಡಿದು ಇರಾನಿ ಭಾಷೆಯ ಕಲಾತ್ಮಕ ಚಿತ್ರಗಳವರೆಗೆ ಮಾತು ಮುಂದುವರೆದಿದೆ. ಕನ್ನಡದ ವಿವಿಧ ಬ್ಲಾಗುದಾರರು ಸಿನಿಮಾ ಜಗತ್ತು ಎಂಬ ಮಾಯಾ ಪರದೆಯ ಕುರಿತು ತಮಗೆ ಅನಿಸಿದ್ದು, ಕಂಡಿದ್ದು, ಕೇಳಿದ್ದು ಎಲ್ಲವನ್ನೂ ಇಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ನಾವಡರು ‘ಚಿಲ್ಡ್ರನ್ ಆಫ್ ಹೆವನ್' ಕುರಿತು ಕುರಿತು ಬರೆದಿದ್ದಾರೆ. ‘ಮುಸ್ಸಂಜೆಯ ಮಾತು', ‘ಅರಮನೆ'ಗಳಲ್ಲಿ ಏನುಂಟು, ಏನಿಲ್ಲ ಅಂತ ಅನೇಕರು ಹರಟಿದ್ದಾರೆ.

ಇಂತಿಪ್ಪ ಚರ್ಚೆಯಲ್ಲಿ ಭಾಗವಹಿಸಲು ಬಯಸುವವರು ಮ್ಯಾಜಿಕ್ ಕಾರ್ಪೆಟ್ ನತ್ತ ಧಾವಿಸಬಹುದು.

ಅಶೋಕರ ಪ್ರಪಂಚ

ಕೂತಲ್ಲೇ ಕೂತು ವಿಜ್ಞಾನ ಪ್ರಪಂಚದ ಸುತ್ತು ಹಾಕುವ ಅಶೋಕರ ಪ್ರಪಂಚ ಈ ದಿನದ ಬ್ಲಾಗ್.

ವಿಜ್ಞಾನ ಜಗತ್ತಿನ ವಿಸ್ಮಯಕಾರಿ ಸಂಗತಿಗಳನ್ನೆಲ್ಲ ಹೆಕ್ಕಿ ತಂದು ತಮ್ಮ ಬ್ಲಾಗಿನಲ್ಲಿ ಹರಡಿಕೊಂಡಿದ್ದಾರೆ ಅಶೋಕ್ ಕುಮಾರ್. ರೆಫ್ರಿಜರೇಟರ್ ಟಿವಿ, ಅತಿ ಸಣ್ಣ ಹೆಲಿಕಾಫ್ಟರ್, ಹಾರುವ ಆಂಬ್ಯುಲೆನ್ಸ್ ನಿಂದ ಹಿಡಿದು ಸರೋವರ ಮಾಯವಾದದ್ದು, ದನದಿಂದ ಜನರೇಟರಿಗೆ ಸ್ಪೂರ್ತಿಯಾದದ್ದರವರೆಗೆ ಮೂಗಿನ ಮೇಲೆ ಬೆರಳಿಟ್ಟುಕೊಂಡು ಓದುವಂಥ ವೈವಿಧ್ಯಮಯ ವಿಷಯಗಳ ಕುರಿತ ಚುಟುಕು ಲೇಖನಗಳು ಇಲ್ಲಿವೆ. ಜೊತೆಗೆ ಕಂಪ್ಯೂಟರಿನಿಂದ ಕಾರಿನವರೆಗೆ ವಿವಿಧ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಹೊಸ ಹೊಸ ಸಂಶೋಧನೆಗಳ ಕುರಿತೂ ಆಗಾಗ್ಗೆ ಕಣ್ಣು ಹಾಯಿಸಿದ್ದಾರೆ.

ಕನ್ನಡ ಬ್ಲಾಗುಗಳಲ್ಲಿ ವಿಜ್ಞಾನ ಬರಹಗಳನ್ನು ಹುಡುಕುತ್ತಿರುವವರು ಅಶೋಕರ ಪ್ರಚಂಚವನ್ನೊಮ್ಮೆ ಸುತ್ತಿ ಬರಬಹುದು.

ಪ್ರತಿಸ್ಪಂದನ

ಈ ದಿನದ ಬ್ಲಾಗಿನಂಗಳದಲ್ಲಿ ಕಾಣಿಸಿಕೊಂಡಿವೆ ಗಣೇಶರ ತ್ರಿವಳಿ ಬ್ಲಾಗ್ ಚುಕ್ಕಿಗಳು.

ಪಂಚ್ ಲೈನ್, ಪ್ರತಿಸ್ಪಂದನ, ಅಪಾರ್ಥಕೋಶ ಇದು ಗಣೇಶರ ತ್ರಿವಳಿ ಬ್ಲಾಗುಗಳ ಹೆಸರು. ಪಂಚ್ ಲೈನ್ ಹೆಸರೇ ಹೇಳುವಂತೆ ಪಂಚ್ ಆಗುವ ಲೈನ್ ಗಳಿಗಾಗಿಯೇ ಮೀಸಲಿರುವ ಬ್ಲಾಗ್. ದಿನನಿತ್ಯದ ಆಗುಹೋಗುಗಳಲ್ಲೇ ಒಂದಿಷ್ಟು ಕೊಂಕುಗಳನ್ನು ಹೆಕ್ಕಿ ತೆಗೆದಿರುವ ಗಣೇಶ್ ಅದನ್ನೇ ಪಂಚ್ ಮಾಡಿ ತಮ್ಮ ಬ್ಲಾಗಿನಂಗಳದಲ್ಲಿ ಕೂಡಿಸಿಟ್ಟಿದ್ದಾರೆ. ಅಪಾರ್ಥಕೋಶದಲ್ಲಿ ಅಪಾರವಾದ ಅರ್ಥ ಬರುವಂತಹ ಅಪಾರ್ಥ ಪದಕೋಶಗಳನ್ನು ಕಲೆ ಹಾಕುವ ಪ್ರಯತ್ನ ನಡೆಸಿದ್ದಾರೆ. ಪ್ರತಿಸ್ಪಂದನದಲ್ಲಿ ಪ್ರಸಕ್ತ ಸಂಗತಿಗಳ ಬಗ್ಗೆ ತಮಗನಿಸಿದ್ದನ್ನು ಬರೆದಿದ್ದಾರೆ.

‘ಚಕೋರಿಯರ ಚಿನ್ನದ ಹಬ್ಬದ ಇನ್ನೊಂದು ಮುಖ...!'ಅಂತ ಬಂಗಾರದ ಹಬ್ಬದ ಹಿಂದಿನ ಉದ್ದೇಶವನ್ನು ವಿವರಿಸುವ ಗಣೇಶ್ , ಇತ್ತೀಚೆಗೆ ಮೊಬೈಲ್ ಕಂಪನಿಯೊಂದು ಒಳಬರುವ ಕರೆಗಳಿಗೂ ಕಾಸು ನೀಡುವುದನ್ನು ಕಂಡು ಚಕಿತಕೊಂಡಿದ್ದಾರೆ. ‘ಕಾಳ್' ಮೀ ಅಂತಂದು ಕಾಳು ಹಾಕುವ ಈ ಪರಿಯನ್ನು ಪರಿಪರಿಯಾಗಿ ಬಿಡಿಸಿದ್ದಾರೆ.

ಬ್ಲಾಗಾಸಕ್ತರು ಈ ತ್ರಿವಳಿ ಬ್ಲಾಗುಗಳನ್ನೊಮ್ಮೆ ಸುತ್ತಿ ಬರಬಹುದು.

ಭಾವ ತೀರದ ಯಾನ

ಭಾವ ತೀರದ ಯಾನದೊಟ್ಟಿಗೆ ಬ್ಲಾಗಿನಂಗಳಕ್ಕೆ ಬಂದಿದ್ದಾರೆ ಶ್ರೀಪ್ರಿಯೆ.

ಇತ್ತೀಚೆಗಷ್ಟೆ ಗೃಹಾನ್ವೇಷಣೆಗೆಂದು ತೆರಳಿದ್ದ ಯಾನದ ಜಾಲಿಗರು ಅಲ್ಲಿ ನಡೆದ ಪಚೀತಿಗಳನ್ನು ಪರಿಪರಿಯಾಗಿ ವಿವರಿಸಿದ್ದಾರೆ. ಅದಕ್ಕೂ ಹಿಂದಿನ ಬರಹದಲ್ಲಿ ಸಂಬಂಧಗಳೋ ಸಂಕಷ್ಟಗಳೋ ಅಂತ ಒಂದಿಷ್ಟು ಹರಟೆ ಹೊಡೆದಿದ್ದಾರೆ. ಇಪ್ಪತ್ತು ವರ್ಷಗಳ ಹಿಂದಿನ ‘ಅಜ್ಜಿಯ ಪತ್ರ' ವನ್ನು ನೆನಪಿಸಿಕೊಂಡು ನೆನಪಿನಂಗಳಕ್ಕೆ ಜಾರಿದ್ದಾರೆ. ಬೇಹುಗಾರಿಕೆ ಅಂತಂದು ಅಲ್ಲಿಇಲ್ಲಿ ಸುತ್ತು ಹಾಕುವುದರಲ್ಲೂ ಅವರು ಮುಂದು.ಇನ್ನು ನಾರೀ ಮಿಡಿತದಲ್ಲಿ ಒಂದಿಷ್ಟು ಚುರುಕು ಮುಟ್ಟಿಸುವ ಸ್ತ್ರೀ ವಾದಿ ಚಿಂತನೆಗಳಿವೆ.

ಜೊತೆಗೆ ಭಾವನೆಗಳ ಅಲೆಯಲ್ಲಿ ತೇಲಿಸಿಬಿಡುವ ‘ನೋವಿಗೆ ಮುಲಾಮು ಹಚ್ಚಿದವರಿಗೆ ಸಲಾಮು!' ಅಂತ ಲೇಖನಗಳೂ ಇಲ್ಲಿವೆ. ಹೇಳಬೇಕಾದ್ದನ್ನು ನೇರವಾಗಿ, ಅಷ್ಟೇ ಸರಳವಾಗಿ ಮನಸ್ಸಿಗೆ ನಾಟುವಂತೆ ಬರೆದಿದ್ದಾರೆ ಶ್ರೀಪ್ರಿಯೆ. ನಿಜಕ್ಕೂ ಇದು ಭಾವ ತೀರದ ಯಾನವೇ!

ದಿಗಂತ

ದಿನೇಶರ ದಿಗಂತ ದಿನದ ಬ್ಲಾಗ್.

ಮುಂಜಾನೆಯ ಸುಂದರ ಕನಸಿನಿಂದ ಎಚ್ಚರವಾದಾಗ, ನಲ್ಲೆಯ ನೆನಪು ಬಿಡದೇ ಕಾಡಿದಾಗಲೆಲ್ಲ ಕವಿತೆಯ ಮೊರೆ ಹೊಕ್ಕು ಒಂದಿಷ್ಟು ಸಾಲು ಬರೆದು ತಣ್ಣಗಾಗುವಂತೆ ಇವೆ ದಿನೇಶರ ಪದ್ಯಗಳು. ಪ್ರೇಮ ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡ ನಾವಿಕ ದಿಕ್ಕು ಹುಡುಕುತ್ತಾ ದಿಗಂತದೆಡೆಗೆ ಸಾಗಿ ಬಂದಿದ್ದಾರೆ. ನಲ್ಲೆಯೊಂದಿನ ಮಾತು, ಸರಸ ಸಲ್ಲಾಪ, ಹುಸಿ ಮುನಿಸು ಎಲ್ಲವನ್ನೂ ಕಾವ್ಯಕ್ಕಿಳಿಸುವ ಪ್ರಯತ್ನ ಇಲ್ಲಿದೆ. ಅಂತಹದ್ದೆ ಒಂದೆರಡು ಸಾಲುಗಳು ಇಲ್ಲಿವೆ.

ಸುರುಳಿ ಸುತ್ತುವ ಸಿಗರೇಟು ಹೊಗೆಯಲ್ಲಿ
ಸುಳಿದಾಡುವ ನಿನ್ನ ನೆನಪು
ಸುಡುವ ಹೃದಯಕ್ಕೆ ರೂಪಕ..

ತುದಿಯಲ್ಲಿ ತೂಗಾಡುವ ಬೂದಿ
ಉದುರಿಬಿಳಲಿರುವ ಜೀವದ ಪ್ರತೀಕ
ಬೂದಿಯಡಿಯ ಬೆಂಕಿ
ಮನಸು ಹೊತ್ತ ಕನಸು...

ಹರ್ಷ ಚರಿತ್ರೆ

ತಮ್ಮ ಚಾರಣ ಚರಿತ್ರೆಯನ್ನು ಬ್ಲಾಗಿನಂಗಳಕ್ಕೆ ತಂದಿದ್ದಾರೆ ಹರ್ಷ ಭಟ್.

ಜೋಗದಿಂದ ಹಿಡಿದು ಒರಿಸ್ಸಾದ ಭುವನೇಶ್ವರದವರೆಗೆ ಊರೂರು ಅಲೆದ ಹರ್ಷ ಅದನ್ನೆಲ್ಲ ಇಲ್ಲಿ ಬರೆದಿದ್ದಾರೆ. ಹೀಗೆ ಸುತ್ತುವಾಗ ಸೆರೆಸಿಕ್ಕ ಸಂಗತಿಗಳನ್ನೆಲ್ಲ ಬಿಡಿಯಾಗಿ ವಿವರಿಸಿದ್ದಾರೆ. ಅವರ ಅನುಭವಗಳು ಒಂದು ಪ್ರವಾಸ ಕಥನದಂತೆಯೇ ಓದಿಸಿಕೊಂಡು ಹೋಗುತ್ತವೆ. ಅವರು ಬೇಸಿಗೆಯ ತಾಪಕ್ಕೆ ಬೆಂದು ‘ಮಿಯಾಲಜಿ' ಅಂತಂದು ಮೈ ಮೇಲೆ ನೀರು ಸುರಿದುಕೊಂಡಿದ್ದಾರೆ. ‘ಹೆಸರಲ್ಲೇನಿದೆ ಅಂತಂದ್ರಾ' ಅಂತ ಪ್ರಶ್ನಿಸುತ್ತಾ ತಮ್ಮ ಹೆಸರಿನಲ್ಲಾದ ಮಿಸ್ಟೇಕಿನ ಕಥೆ ಹೇಳಿದ್ದಾರೆ. ಗುಡಿಗುಡಿ ಅನ್ನೋ ಅಪರೂಪದ ಜೂಜಿನಾಟ ಕುರಿತ ಲೇಖನವೊಂದು ಇಲ್ಲಿದೆ.

ಇಂತಹದ್ದೇ ಹತ್ತು ಹಲವು ಅನುಭವಗಳನ್ನು ಓದಬಯಸುವವರು ಈ ಬ್ಲಾಗಿಗೆ ಹೋಗಬಹುದು.

ಬಾಳ ದೋಣಿ

ದಿನದ ಬ್ಲಾಗಿನಂಗಳಕ್ಕೆ ಬಂದಿದ್ದಾರೆ ಬಾಳ ದೋಣಿಯ ಪಯಣಿಗ.

ಹೀಗೊಂದು ದಿನ ಬಸ್ಸಿನಲ್ಲಿ ಹೋಗುತ್ತಿರುವಾಗ ಪರಿಚಯವಾದ ಅಪರಿಚಿತ ಹುಡುಗಿ, ಇದ್ದಕ್ಕಿದ್ದ ಹಾಗೆ ನೆನಪಾಗುವ ಹಾಡು, ಆಗಾಗ್ಗೆ ಕಾಡುವ ಬಾಲ್ಯದ ನೆನಪು... ಹೀಗೆ ಬಾಳದೋಣಿಯ ಪಯಣಿಗ ನೆನಪುಗಳ ದೋಣಿಯಲ್ಲಿ ಕುಳಿತು ಮೆಲುಕು ಹಾಕಿದ್ದಾರೆ. ಶಿರಸಿಯಲ್ಲಿ ಕಡೆಗೂ ಸ್ಪೈಸ್ ನೆಟ್ ವರ್ಕ್ ಸಿಕ್ಕಿದ್ದಕ್ಕೆ ಸಂಭ್ರಮಿಸಿದ್ದಾರೆ. ತಲೆನೋವಿಗೂ ಒಂದು ಡಜನ್ ಕಾರಣಗಳನ್ನು ಹೆಕ್ಕಿ ತೆಗೆದಿದ್ದಾರೆ. ನಾಡು ನುಡಿಯ ಅಂದ್ರೆ ಇವರಿಗೆ ಸ್ವಲ್ಪ ಪ್ರೀತಿ ಜಾಸ್ತಿ. ನನ್ನ ದೇಶ ನನ್ನ ಜನ ಅನ್ನುತ್ತಲೇ, ಜೇನಿನ ಹೊಳೆಯೋ ಹಾಲಿನ ಮಳೆಯೋ ಅಂತೆಲ್ಲ ಹಾಡಿ ಹೋಗಿದ್ದಾರೆ. ಅಂತೆಯೇ ಕನಸು ಕಾಣುವುದೂ ಇವರಿಗಿಷ್ಟವೇ. ಕನಸು ಕಾಣೋದಕ್ಕೆ ಕಾಸು ಕೊಡಬೇಕ? ಸಕ್ಕತ್ ಕನಸೇ ಕಾಣಿರಿ ಅನ್ನೋದು ಅವರ ಪುಕ್ಕಟೆ ಸಲಹೆ.

ನೀವೂ ಒಮ್ಮೆ ಈ ದೋಣಿಯಲ್ಲಿ ಪಯಣಿಸಬಹುದು.

ಕನ್ನಡವೇ ನಿತ್ಯ

ಎಂ ಎಸ್ ಶ್ರೀರಾಮರ ನಿತ್ಯ ಕನ್ನಡದ ಕಂಪು ಸೂಸುವ ಬ್ಲಾಗ್ ದಿನದ ಬ್ಲಾಗ್ ಚುಕ್ಕಿ.

ಕನ್ನಡ ನಾಡುನುಡಿ ಸಾಹಿತ್ಯದ ಕುರಿತು ಬ್ಲಾಗ್ ಲೋಕದಲ್ಲಿ ಆಗಾಗ್ಗೆ ಚರ್ಚೆಗಳಿಗೆ ಕಾರಣವಾಗುವ ಬ್ಲಾಗುಗಳಲ್ಲಿ ಶ್ರೀರಾಮರ ಕನ್ನಡವೇ ನಿತ್ಯ ಬ್ಲಾಗ್ ಕೂಡ ಒಂದು. ಮೂರು ವರ್ಷಗಳ ಹಳೆಯ ಬ್ಲಾಗಿನಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಕುರಿತ ಬರಹಗಳ ಬಂಡಾರವಿದೆ. ಅವರು ಇತ್ತೀಚಿನ ಲೇಖನದಲ್ಲಿ ಹೈದರಾಬಾದ್ ಏಕೀಕರಣ ಕುರಿತ ಪುಸ್ತಕವೊಂದರ ಬಗ್ಗೆ ಬರೆದಿದ್ದಾರೆ. ಅದಕ್ಕೂ ಹಿಂದಿನ ಲೇಖನಗಳಲ್ಲಿ ಅವರು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಬರೆದ ಅಂಕಣ ಬರಹಗಳಿವೆ. ತೇಜಸ್ವಿಯಿಂದ ಹಿಡಿದು ವೈಎನ್ಕೆ, ಕಾಯ್ಕಿಣಿ ವರೆಗೆ ತಮಗಿಷ್ಟವಾದ ವ್ಯಕ್ತಿಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಒಂದಿಷ್ಟು ಪುಸ್ತಕಗಳ ಕುರಿತು ಮುಕ್ತ ಚರ್ಚೆ ನಡೆಸಿದ್ದಾರೆ. ಅಹ್ಮದಾಬಾದಿನಲ್ಲಿ ಪ್ರಾಧ್ಯಪಕರಾಗಿರುವ ಶ್ರೀರಾಮ್ ಗ್ರಾಮೀಣ ಅಭಿವೃದ್ದಿ ,ಅರ್ಥವ್ಯವಸ್ಥೆಗಳ ಕುರಿತೂ ಅರ್ಥಪೂರ್ಣವಾಗಿ ಬರೆದಿದ್ದಾರೆ.

ಜೊತೆಗೆ ಅವರದ್ದೇ ಆದ ‘ನನ್ನದಲ್ಲದ ಕವಿತೆ' ಮತ್ತು ‘ಜಾಯ್ ಆಫ್ ಬುಕ್ಸ್ ' (ಇಂಗ್ಲಿಷ್) ಎಂಬ ಬ್ಲಾಗುಗಳಿವೆ.

ಕರ್ಮಕಾಂಡ

ಶ್ರೀಧರ ರಾಜು ಅವರ ಕರ್ಮಕಾಂಡ ಈ ದಿನದ ಬ್ಲಾಗ್.

ಅನಿರೀಕ್ಷಿತವಾದದ್ದೆಲ್ಲ ನಿರೀಕ್ಷಿತವೇ ಎನ್ನುವ ಶ್ರೀಧರ್ ಹಾಗೆ ಅನಿಸಿದ್ದು, ಆದದ್ದು ಎಲ್ಲವನ್ನೂ ತಮ್ಮ ಬ್ಲಾಗಿನಲ್ಲಿ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಅವರ ಇತ್ತೀಚಿನ ಲೇಖನದಲ್ಲಿ ದೇವರ ಅಸ್ಥಿತ್ವ ಕುರಿತು ಸಣ್ಣದೊಂದು ಚರ್ಚೆ ನಡೆದಿದೆ. ಆಗಾಗ್ಗೆ ಬ್ರಹ್ಮನೊಡನೆ ಸಂವಾದ ನಡೆಸುತ್ತಾ ತಾವು ಮುಖ್ಯಮಂತ್ರಿಯಾಗುವ ಆಸೆಯನ್ನೂ ಜೊತೆಗೆ ತಮ್ಮ ಪ್ರಣಾಳಿಕೆಯ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ. ನಾನು ಕವಿಯಲ್ಲ ಅಂತಂದುಕೊಂಡೆ ಕವಿತೆ ಬರೆದಿದ್ದಾರೆ. ಹಾಗೇ ಇಷ್ಟವಾಗುವ ಪದ್ಯವೊಂದರ ಸಾಲು, ಸಿನಿಮಾ ಕುರಿತು ಮಾತನಾಡಿದ್ದಾರೆ. ಭೈರಪ್ಪ, ಉಪೇಂದ್ರ ಅಭಿಮಾನಿ ತಾವೆಂದು ಹೇಳಿಕೊಂಡಿದ್ದಾರೆ.

ಜೊತೆಗೊಂದಿಷ್ಟು ಹರಟೆಯ ಲೇಖನಗಳೂ ಇಲ್ಲಿವೆ.

ನೀಲಗಿರಿ

ನ್ಯೂಜಿಲೆಂಡಿನ ಅನುಭವಗಳನ್ನು ಹಂಚಿಕೊಳ್ಳಲು ಬ್ಲಾಗಿನಂಗಳಕ್ಕೆ ಬಂದಿದೆ ನೀಲಗಿರಿ.

ಅಲ್ಲಿ ನ್ಯೂಜಿಲೆಂಡಿನ ವಿಮಾನ ನಿಲ್ದಾಣವೊಂದರಲ್ಲಿ ಟ್ರಾಫಿಕ್ ಜಾಮ್! ಆಗಸದಂಗಳದಲ್ಲಿ ವಿಮಾನಗಳ ಸರ್ಕಸ್ಸು. ಒಂದಾದ ಮೇಲೊಂದರಂತೆ ಸರದಿಗಾಗಿ ಕಾಯುತ್ತಾ ಇಳಿಯುತ್ತಿದ್ದ, ಏರುತ್ತಿದ್ದ ವಿಮಾನಗಳು... ಇದನ್ನೆಲ್ಲ ತಮ್ಮ ಕ್ಯಾಮರ ಕಣ್ಣಿನಲ್ಲಿ ಕ್ಲಿಕ್ಕಿಸಿದ ಗಿರಿಜ, ನೀಲಗಿರಿಗೆ ತಂದು ತುಂಬಿಸಿದ್ದಾರೆ. ನ್ಯೂಜಿಲೆಂಡಿನಲ್ಲೂ ಸಸ್ಯಾಹಾರಿಯಾಗೇ ಉಳಿಯುವ ಹಟತೊಟ್ಟು , ಅಲ್ಲಿ ಮೆಣಸಿನಕಾಯಿಯಿಂದಿಡಿದು ಮೂಲಂಗಿವರೆಗೆ ಬಗೆಬಗೆಯ ತರಕಾರಿ-ಸೊಪ್ಪು ಬೆಳೆಸುತ್ತಿರುವ ಸಚಿತ್ರ ವರದಿಯನ್ನು ತಮ್ಮ ಬ್ಲಾಗಿನಂಗಳದಲ್ಲಿ ಹರಡಿದ್ದಾರೆ. ಆಗಾಗ್ಗೆ ತಮ್ಮೂರಿನ ಅಕ್ಕ ಪಕ್ಕ ಅಡ್ಡಾಡಿ ಬಂದು ಅದರ ಪರಿಚಯ ಮಾಡಿಕೊಟ್ಟಿದ್ದಾರೆ. ನ್ಯೂಜಿಲೆಂಡಿನ ಮಳೆಯ ನಡುವೆ ಮೂಡಿದ ಕಾಮನಬಿಲ್ಲು, ಮೋಡಗಳ ನಡುವಿನಿಂದ ಹೊರಬಂದ ಸೂರ್ಯನನ್ನು ಕಂಡು ಅಚ್ಚರಿಗೊಂಡಿದ್ದಾರೆ. ಅಲ್ಲಿನ ಕಾಲದ ವ್ಯವಸ್ಥೆ ಗೊತ್ತಾಗದೇ ಪರದಾಡಿದ್ದಾರೆ.

ಇಂತದೇ ಹತ್ತು ಹಲವು ಸಮಾಚಾರಗಳು ಈ ಬ್ಲಾಗಿನಲ್ಲಿವೆ. ಆಸಕ್ತರು ನೀಲಗಿರಿಯನ್ನೊಮ್ಮೆ ಏರಿ ಬರಬಹುದು.

ಕಾಲಚಕ್ರ

ರಾಜ್ಯ ಚುನಾವಣೆ ಒಂದೊಂದು ದಿನವೂ ಒಂದೊಂದು ರೂಪ ಪಡೆದುಕೊಳ್ಳುತ್ತಿರುವ ದಿನಗಳಲ್ಲಿ, ಚುನಾವಣೆಯ ಸಖತ್ ಸಮಾಚಾರವನ್ನು ನಿಮ್ಮೊಂದಿಗೆ ಹರಟಲು ಸಂಪಿಗೆಯ ಬ್ಲಾಗಿನಂಗಳಕ್ಕೆ ಬಂದಿದೆ ಕಾಲಚಕ್ರ.

‘ಒಳ್ಳೇ ಅಡ್ನಾಡಿಗಳ ಹಾಗೆ ಅತ್ಲಾಗ್ ಇತ್ಲಾಗ್ ಆಡೋ ರಾಜಕಾರಣಿಗಳ ಬಗ್ಗೆ ಯಾಕಾದ್ರೂ ಬರೀ ಬೇಕು ಅನ್ನೋದು ಒಳ್ಳೇ ಪ್ರಶ್ನೆ, ಆದ್ರೂ ರಾಜ್ಯದ ರಾಜಕಾರಣದ ಬಗ್ಗೆ ನನಗನ್ನಿಸಿದ್ದನ್ನು ಬರೆದಿದ್ದೇನೆ, ಓದೋ ಖುಷಿ ನಿಮ್ದು!' ಅಂತಂದುಕೊಂಡೇ ರಾಜಕಾರಣಿಗಳ ಬದುಕು-ಬಂಡವಾಳವನ್ನ ಜಾಲಿಸಿ ಬರೆದಿದ್ದಾರೆ ಕಾಲಚಕ್ರದ ಲೇಖಕರು. ಮೈಸೂರು ಕನ್ನಡದ ಗ್ರಾಮ್ಯ ಶೈಲಿಯಲ್ಲಿರುವ ಈ ಬರಹಗಳು ಕಟ್ಟೆ ಪುರಾಣವನ್ನು ಕಣ್ಮುಂದೆ ಕಟ್ಟಿಕೊಡುತ್ತವೆ. ಸಖತ್ತಾಗಿ ಓದಿಸಿಕೊಂಡು ಹೋಗುತ್ತವೆ.

ಹರಟೆಪ್ರಿಯರು ಇಲ್ಲೊಂದಿಷ್ಟು ಹೊತ್ತು ಆರಾಮವಾಗಿ ಹರಟಿ ಬರಬಹುದು.

ಗ್ಲೋಕಲ್ ಫಂಡಾ

ದಿನದ ಬ್ಲಾಗಿನಂಗಳಕ್ಕೆ ಕಾಲಿರಿಸಿದೆ ರವಿ ಹೆಗಡೆ ಅವರ ಗ್ಲೋಕಲ್ ಫಂಡಾ.

ಪತ್ರಕರ್ತ ರವಿ ಹೆಗಡೆ ಅನೇಕ ವರ್ಷಗಳ ಕಾಲ ಕನ್ನಡಪ್ರಭ ಪತ್ರಿಕೆಯಲ್ಲಿ ಬರೆದ ‘ಗ್ಲೋಕಲ್ ಫಂಡಾ' ಅಂಕಣ ಬರಹಗಳ ಸಂಗ್ರಹ ಇಲ್ಲಿದೆ. ರವಿ ಗ್ಲೋಬಲ್ ಟು ಲೋಕಲ್ ವರೆಗೆ ಸುತ್ತುಹಾಕಿ, ಸುದ್ದಿ ಹೆಕ್ಕಿ, ಅದಕ್ಕೊಂದಿಷ್ಟು ಕೊಂಕಿನ ಮಸಾಲೆ ಲೇಪಿಸುತ್ತಾ ಬರೆದಿದ್ದಾರೆ. ತಿಳಿಹಾಸ್ಯದ ಶೈಲಿಯಲ್ಲಿರುವ ಬರಹಗಳು ಹಾಗೇ ಓದಿಸಿಕೊಂಡು ಹೋಗುತ್ತವೆ. ಅವರ ‘ರಾಜಕಾರಣಿಗಳಿಗೆ ಪ್ರತಿವರ್ಷ ಹರಿಶ್ಚಂದ್ರ ಪ್ರಶಸ್ತಿ', ‘ಪ್ರಗತಿಪರ ಭ್ರಷ್ಟಾಚಾರರಿಂದಲೇ ದೇಶದ ಪ್ರಗತಿ' , ‘ದೇವೇಗೌಡರ ಆಶೀರ್ವಾದದ ಪರಿಣಾಮಗಳ ಅಧ್ಯಯನ' ಮುಂತಾದ ಲೇಖನಗಳು ಮತ್ತೆ ಮತ್ತೆ ಓದುವಂತಿವೆ. ಇಲ್ಲಿನ ಬಹುತೇಕ ಬರಹಗಳು ಮೇಲ್ನೋಟಕ್ಕೆ ಹಾಸ್ಯ ಬರಹಗಳಂತೆ ಕಂಡರೂ ಅದರೊಳಗೆ ಆಳವಾದ ಚಿಂತನೆಗಳಿವೆ.

ಆಸಕ್ತರು ಗ್ಲೋಕಲ್ ಅನ್ನು ಒಮ್ಮೆ ಸುತ್ತಿ ಬರಬಹುದು.

ಹರಿಣಿ ಗ್ಯಾಲರಿ

ದಿನದ ಬ್ಲಾಗಿನಂಗಳದಲ್ಲಿ ಬಿತ್ತರಗೊಂಡಿದೆ ಹರಿಣಿ ಎಂದೇ ಖ್ಯಾತರಾದ ಹರಿಶ್ಚಂದ್ರ ಶೆಟ್ಟಿಯವರ ವ್ಯಂಗ್ಯಚಿತ್ರಗಳ ಗ್ಯಾಲರಿ.

ಚುನಾವಣೆಯ ಕಾವು ಏರುತ್ತಿರುವ ಈ ದಿನಗಳಲ್ಲಿ ಹರಿಣಿ ಗ್ಯಾಲರಿಗೊಳಗೆ ಚುನಾವಣಾ ವಿಶೇಷ ವ್ಯಂಗ್ಯಚಿತ್ರಗಳ ಹೊಳೆಯೇ ಹರಿದಿದೆ. ರಾಜಕಾರಣಿಗಳ ಪಕ್ಷಾಂತರ-ಅವಾಂತರ, ಓಟು-ಫೈಟು ಇತ್ಯಾದಿ ಸಂಗತಿಗಳ ಕುಟುಕು ಚಿತ್ರಗಳು ಇಲ್ಲಿವೆ. ಯಡಿಯೂರಪ್ಪರಿಂದ ಹಿಡಿದು, ದೇವೇಗೌಡರ ತನಕ ಸಿಕ್ಕಸಿಕ್ಕ ಪ್ರಭಾವಿ, ಪುಡಾರಿ ರಾಜಕಾರಣಿಗಳ ಮೇಲೆಲ್ಲ ಅವರ ವಕ್ರದೃಷ್ಟಿ ಬಿದ್ದಿದೆ. ನಾಯಕರ ಆಸೆ-ಭರವಸೆ ಕುರಿತು ಒಂದಿಷ್ಟು ಕೊಂಕಿಸುತ್ತಲೇ ಚಿತ್ರಿಸಿದ್ದಾರೆ. ಮೂರು ವರ್ಷಗಳಷ್ಟು ಹಳೆಯದಾದ ಬ್ಲಾಗಿನಲ್ಲಿ ಐದುನೂರಕ್ಕೂ ಹೆಚ್ಚು ಚಿತ್ತಾಕರ್ಷಕ ವ್ಯಂಗ್ಯ ಚಿತ್ರಗಳ ಸಂಗ್ರಹವಿದೆ.

ವ್ಯಂಗ್ಯಾಸಕ್ತರು ಇಲ್ಲಿಗೊಮ್ಮೆ ಭೇಟಿ ನೀಡಬಹುದು.

ಸಂಜೆಯ ರಾಗಕೆ..!

ಸಂಜೆಯ ಹೊತ್ತಲ್ಲೊಂದು ಕವಿತೆಯ ರಾಗ ಹಾಡಿ ಕೆನ್ನೆ ಕೆಂಪಾಗುವಂತೆ ಮಾಡುತ್ತಿದ್ದ ಭಾವಜೀವಿ ಕೆಲ ತಿಂಗಳುಗಳಿಂದ ತಮ್ಮ ಬ್ಲಾಗಿನಿಂದ ಕಾಣೆಯಾಗಿದ್ದಾರೆ. ಆಗಾಗ್ಗೆ ಅವರ ಬ್ಲಾಗಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕವಿತೆಗಳು ಸಂಜೆಯ ಓದಿಗೆ ಸಾಥ್ ನೀಡುತ್ತಿದ್ದವು ಅಂತ ಅವುಗಳಿಗೆ ಬಂದ ಕಮೆಂಟುಗಳೇ ಸಾರಿ ಹೇಳುತ್ತಿವೆ. ಹೀಗಿದ್ದು ಅವರು ಬರೆಯದಿರುವುದು ನ್ಯಾಯವೇ? ಅಂತ ಓದುಗ ಮಹಾಶಯರು ಕೇಳುತ್ತಿದ್ದಾರೆ.

ಒಮ್ಮೊಮ್ಮೆ ಪ್ರಯತ್ನಪೂರ್ವಕವಾಗಿ, ಹಲವೊಮ್ಮೆ ಅಪ್ರಯತ್ನವಾಗಿ ಮನದಲ್ಲಿ ಮೂಡಿದ್ದು ಹಾಗು ಉಳಿದದ್ದು, ಎಚ್ಚರವಿದ್ದಾಗಲೆಲ್ಲ ಕಾಡಿದ್ದು ಎಲ್ಲವನ್ನೂ ಭಾವಜೀವಿ ತಮ್ಮ ಕವಿತೆಯೊಳಗೆ ಸೊಗಸಾಗಿ ಇಳಿಸಿದ್ದಾರೆ. ಒಂದಿಷ್ಟು ಹನಿಗವಿತೆಗಳ ಮೂಲಕ ಕಾಡಿದ್ದಾರೆ. ಕಣ್ಣೀರೂ ಇಡಿಸಿದ್ದಾರೆ. ಅದರದ್ದೊಂದು ಹನಿ ಇಲ್ಲಿದೆ.

ಕಳೆದ ಕಾಲಗಳ ಪುಸ್ತಕ
ತಿರುವುತ್ತಿದ್ದೆ
ಕೆಲವೆಡೆ ರಕ್ತದಲ್ಲಿ ಬರೆದಿತ್ತು
ಹಲವೆಡೆ ಕಣ್ಣೀರಿಂದ ಅಳಿಸಿ ಹೋಗಿತ್ತು

ನಿಶು ಮನೆ

ಈ ಬಾರಿ ಬ್ಲಾಗಿನಂಗಳ ಹೊಕ್ಕವನಿಗೆ ಕಂಡದ್ದು ಅಮೆರಿಕಾದ ಬೋಸ್ಟನ್ ನಲ್ಲಿರುವ ಮನೆಯಲ್ಲಿ ಕುಳಿತಿರೋ ನಿಶು ಅನ್ನೋ ಕನ್ನಡ ಕಂದಮ್ಮನ ಚೆಲ್ಲಾಟ-ರಂಪಾಟಗಳು. ಸಣ್ಣದೊಂದು ಅಳುವಿನೊಂದಿಗೆ ಬ್ಲಾಗಿಗೆ ಬಂದ ನಿಶು ಇಲ್ಲೇ ನಗುವಾಗಿ ಬೆಳೆದಿದ್ದಾನೆ. ಹಕ್ಕಿಯ ರೆಕ್ಕೆ ಕಂಡು ವಿಸ್ಮಯ ಪಟ್ಟಿದ್ದಾನೆ, ಅದನ್ನೇ ಹಿಡಿಯ ಹೊರಟಿದ್ದಾನೆ. ಒಮ್ಮೊಮ್ಮೆ ಅತ್ತು ತನ್ನ ಕಣ್ಣನ್ನು ಕೆಂಪಗೆ ಮಾಡಿಕೊಂಡಿದ್ದಾನೆ. ಅಲ್ಲಲ್ಲಿ ತೂಕಡಿಸಿದ್ದಾನೆ. ನಿದ್ದೆ ಬಂತೆಂದಾಗ ಇಲ್ಲೇ ಲಾಲಿ ಹಾಡು ಕೇಳುತ್ತಾ ಮಲಗಿದ್ದಾನೆ. ಸದ್ಯಕ್ಕೀಗ ಅಮ್ಮನೊಂದಿಗೆ ಗಾಳಿ ಪಟ ಹಾರಿಸುತ್ತಿರುವ ಈ ಪೋರ ಇದೇ ತಿಂಗಳ ೨೬ನೇ ತಾರೀಖಿನಂದು ತನ್ನ ಮೂರನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದಾನೆ.

ನಿಶು ಮನೆ ಎಂಬ ಈ ಮಕ್ಕಳ ಮನೆಯಲ್ಲಿ ಕನ್ನಡ ಕಾಗುಣಿತದೊಂದಿಡಿದು, ಮಕ್ಕಳ ಪದ್ಯ, ಕತೆ, ಕವಿತೆ ಹೀಗೆ ಮಕ್ಕಳಿಗೆ ಬೇಕಾದ ಎಲ್ಲವೂ ಇದೆ. ವೆಬ್ ಸೈಟುಗಳಲ್ಲಿ ಮಕ್ಕಳ ಬರಹಗಳನ್ನು ಹುಡುಕುತ್ತಿರುವವರು, ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಇಟ್ಟುಕೊಂಡಿರುವವರು, ಮಕ್ಕಳಂತ ಮನಸ್ಸಿನವರೆಲ್ಲರೂ ನಿಶಾಂತನ ಮನೆಗೊಮ್ಮೆ ಭೇಟಿ ಕೊಡಲು ಅಡ್ಡಿಯಿಲ್ಲ.

ನಿರಂತರ

ದಿನದ ಬ್ಲಾಗ್ ಅಂಗಳಕ್ಕೆ ಕಾಲಿರಿಸಿದೆ ಟಿಪಿ ಬಳಗದ ನಿರಂತರ.

ಕಳೆದೆರಡು ವರ್ಷಗಳಿಂದ ನಿಂತು ಹೋದಂತಿದ್ದ ಬ್ಲಾಗಿನಲ್ಲಿ ಮತ್ತೆ ಬರಹಗಳು ಕಾಣಿಸಿಕೊಳ್ಳುತ್ತಿವೆ. ಒಂದಿಷ್ಟು ವಿಚಾರ-ವಿನೋದ , ಸಂಸ್ಕೃತಿ-ಸಂವೇದನೆಯ ಬರಹಗಳಿಂದ ಕೂಡಿರುವ ಈ ಬ್ಲಾಗಿನಲ್ಲಿ ದೇಶ ವಿದೇಶಗಳಲ್ಲಿರುವ ಕನ್ನಡದ ೨೩ಕ್ಕೂ ಹೆಚ್ಚು ಲೇಖಕರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಜೀವನ ಮಾರ್ಗದರ್ಶನದ ಕುರಿತು ನಿರಂತರವಾಗಿ ಕ್ರಿಯಾಶೀಲ ವಿಚಾರಧಾರೆಗಳು ಹೊರಹೊಮ್ಮುತ್ತಿವೆ. ಅಡುಗೆ , ಆರೋಗ್ಯ, ಹಬ್ಬ ಹರಿದಿನ,ಜನಪದ ಆಚಾರ ವಿಚಾರಗಳು ಮುಂತಾದ ವೈವಿಧ್ಯಮಯ ವಿಷಯಗಳ ಕುರಿತಾದ ಬರಹಗಳು ಇಲ್ಲಿವೆ.

ಐ ಆಮ್ ಥಿಂಕಿಂಗ್ ಅಲೌಡ್

ಈಗ ಬಳಕೆಯಿಲ್ಲದೆ ಅಳಿವಿನಂಚಿನಲ್ಲಿರೋ ಗಾದೆಗಳನ್ನ ಸಂಗ್ರಹಿಸುವ ಹಠಕ್ಕೆ ಬಿದ್ದಿರುವ ಸೀಮಾ ಹೆಗೆಡೆ ಅವರ ಬ್ಲಾಗ್ ಈ ದಿನದ ಅತಿಥಿ. ಉತ್ತರ ಕನ್ನಡದಲ್ಲಿ ಬಳಕೆಯಲ್ಲಿದ್ದ, ಇರುವ ಗಾದೆಗಳನ್ನು ಹೆಕ್ಕಿ ತೆಗೆಯುತ್ತಿರುವ ಸೀಮಾ ಈವರೆಗೂ ೧೮೨ ಗಾದೆ ಸಂಗ್ರಹಿಸಿದ್ದಾರೆ. ಹೀಗೆ ಸಂಗ್ರಹಿಸಿದ ಪ್ರತಿಗಾದೆಗೂ ಅಡಿ ಟಿಪ್ಪಣಿ ನೀಡಿ ಪ್ರಕಟಿಸಿದ್ದಾರೆ.

ಗಾದೆಗಳಿಗಷ್ಟೆ ಸೀಮಿತವಾಗಿರದ ಈ ಬ್ಲಾಗಿನಲ್ಲಿ ಬಗೆಬಗೆಯ ಬರಹಗಳೂ ಉಂಟು. ಸದ್ಯ ಜಪಾನಿನ ಟೋಕಿಯೊದಲ್ಲಿ ಅಧ್ಯಯನದಲ್ಲಿ ತೊಡಗಿರುವ ಸೀಮಾ ತಮ್ಮನ್ನು ಕಾಡಿದ ತಮ್ಮೂರಿನ ನೆನಪುಗಳನ್ನು ಕುರಿತು ಬರೆದಿದ್ದಾರೆ. ಮನುಷ್ಯ ಸಂಬಂಧಗಳ ಕುರಿತು ಮಾತನಾಡಿದ್ದಾರೆ. ನಡುವೆ ಇಂಗ್ಲಿಷ್ ನಲ್ಲೂ ಅಕ್ಷರ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕನ್ನಡದಲ್ಲಿ ಅಪರೂಪದ ಗಾದೆಗಳ ಅನ್ವೇಷಣೆಯಲ್ಲಿರುವವರು ಈ ಬ್ಲಾಗಿಗೆ ಭೇಟಿ ಕೊಡಬಹುದು.

ನೆಂಪು

ದಿನದ ಬ್ಲಾಗ್ ಬುಟ್ಟಿಗೆ ಸೇರಿಕೊಂಡಿದೆ ನೆಂಪು.

ನೆಂಪು ಎಂಬುದು ನಾಲ್ಕಾರು ಗೆಳೆಯರು ಸೇರಿ ನಡೆಸುತ್ತಿರುವ ಬ್ಲಾಗ್. ಇಲ್ಲಿ ಉಡುಪಿಯ ಸುತ್ತ ಮುತ್ತಲಿನ ಹಳ್ಳಿ ಬದುಕಿನ ಚಿತ್ರಣವಿದೆ. ನೆಂಪಿನಂಗಳದ ಮನೆ ,ಊರ ಮುಂದಿನ ದೇವಸ್ಥಾನ, ನೆಲ-ಜಲಗಳ ಸಖ್ಯದ ಕುರಿತು ಮಾತು ಹಂಚಿಕೊಂಡಿದ್ದಾರೆ. ನೆಂಪು ಬಳಗದ ಸದಸ್ಯರೆಲ್ಲ ಒಟ್ಟಾಗಿ ಊರುರು ಸುತ್ತಿ ಬಂದ ಪ್ರವಾಸ ಕಥನಗಳು ಇಲ್ಲಿವೆ. ಕೊಡಚಾದ್ರಿಯಿಂದ ಹಿಡಿದು, ಮುನ್ನಾರ್ , ದೆಹಲಿ ಅಂತೆಲ್ಲ ಅವರ ಪಯಣ ಸಾಗಿದೆ. ಹಂಪಿ ಕುರಿತು ಸಮಗ್ರ ವರದಿಯೊಂದನ್ನೇ ಇಲ್ಲಿ ದಾಖಲಿಸಿದ್ದಾರೆ. ಜೊತೆಗೆ ನೆಂಪಿನ ಹಿರಿಯರು ತಮ್ಮ ನೆನೆಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.

ಅಂದ ಹಾಗೆ ನೆಂಪು ಎಂಬುದು ಕುಂದಾಪುರದ ಹತ್ತಿರವಿರುವ ಹಳ್ಳಿಯ ಹೆಸರು. ಈ ಹೆಸರಿನಲ್ಲೂ ಒಂದು ವಿಶಿಷ್ಟತೆ ಅಡಗಿದೆ. ಕುತೂಹಲವಿದ್ದವರು ಬ್ಲಾಗಿಗೊಮ್ಮೆ ಭೇಟಿ ನೀಡಿ.

ಇ ಯುಗದ ಪರಿಚಯ

ಈ ಯುಗದ ಪರಿಚಯ ಮಾಡಿಕೊಡಲು ಬ್ಲಾಗಿನಂಗಳಕ್ಕೆ ಧಾವಿಸಿದ್ದಾರೆ ಜಯಂತ್ ಬಾಬು.

ಜಯಂತ್ ಗೆ ಕವಿತೆಗಳೆಂದರೆ ಅಚ್ಚು ಮೆಚ್ಚು. ಅದಕ್ಕೆ ಅವರು ಕವಿತೆಗಳ ಮೂಲಕವೇ ತಮ್ಮೆಲ್ಲ ಭಾವಗಳನ್ನು ಹರಿಬಿಡುವ ಪ್ರಯತ್ನ ಮಾಡಿದ್ದಾರೆ. ತಮಗೆ ಅನಿಸಿದ್ದು, ಕನಸಿದ್ದೆಲ್ಲದರ ಕುರಿತು ಮಾತನಾಡಿದ್ದಾರೆ. ಕವಿತೆಯೊಳಗೆ ಕತೆ ಹೊಸೆಯುವ ಪ್ರಯತ್ನ ಮಾಡಿದ್ದಾರೆ. ಒಮ್ಮೆಮ್ಮೆ ಕವನ ಬರೆಯೋದು ಬೇಜಾರು ಅಂತ ಅಂದುಕೊಂಡು ಭಿನ್ನ ಪ್ರಯೋಗಗಳಿಗೂ ಮುಂದಾಗಿದ್ದಾರೆ. ಜಯಂತಣ್ಣನ ರಗಳೆ ಅಂತಂದು ತಮ್ಮದೇ ಒಂದಿಷ್ಟು ರಗಳೆಗಳ ಕುರಿತು ಬರೆದುಕೊಂಡಿದ್ದಾರೆ.

ಅವರು ಇತ್ತೀಚೆಗೆ ಬರೆದ ಕವಿತೆಯ ಮೊದಲ ಸಾಲುಗಳು:

ಇಲ್ಲೇ.. ಹೀಗೆ.. ಇರುತ್ತಿದ್ದೆ
ನೀ ಬರುವ ಮುನ್ನ.
ನಾನು,
ನನ್ನೊಡನೆ
ಉತ್ತರವಿಲ್ಲದ ಪ್ರಶ್ನೆಗಳು.

ಜೀವಸಂಶಯ

ದಿನದ ಬ್ಲಾಗಿನಂಗಳದಲ್ಲಿ ಹರಡಿಕೊಂಡಿರುವ ಬ್ಲಾಗಿನ ಹೆಸರು ಜೀವಿಶಿವು ಅವರ ಜೀವಸಂಶಯ.

ಶಿವು ತಮ್ಮ ಇತ್ತೀಚಿನ ಲೇಖನ ‘ಭಾರತೀಯನಿಗೇ ವಿಶಿಷ್ಟವಾದ ಆಧುನಿಕತೆಯ ಶೋಧವಿರುವ ನವಿಲುಗಳು ಕತೆ' ಯಲ್ಲಿ ಅನಂತಮೂರ್ತಿ ಅವರ ನವಿಲುಗಳು ಕತೆ ಕುರಿತು ಚರ್ಚಿಸಿದ್ದಾರೆ. ವಿಮರ್ಶೆಯ ನೆಲೆಗಟ್ಟನ್ನು ಬದಿಗಿಟ್ಟು, ಕತೆ ಕುರಿತು ತಮಗೇನು ಅನಿಸಿತು ಎಂಬುದನ್ನು ಹೇಳಿದ್ದಾರೆ. ಹಿಂದಿನ ಲೇಖನಗಳಲ್ಲಿ ಆವರಣ ಮತ್ತಿತರ ಕೃತಿಗಳ ಕುರಿತು ಅವರ ವಿಚಾರ ಲಹರಿ ಹರಿದಿದೆ. ಮುಂಗಾರು ಮಳೆ ಸಿನಿಮಾದ ಯಶಸ್ಸಿನ ಮೂಲಕ ಆ ಪದದ ಅರ್ಥವೇ ಬದಲಾದದ್ದರ ಬಗ್ಗೆ ಬೆರಗುಗೊಂಡು ಬರೆದಿದ್ದಾರೆ.

ಕನ್ನಡ ಸಾಹಿತ್ಯಾಸಕ್ತ ಓದುಗರು ಇಲ್ಲಿಗೊಮ್ಮೆ ಹೋಗಿ ಬರಬಹುದು.

ನಗೆ ನಗಾರಿ ಡಾಟ್ ಕಾಮ್

ದಿನದ ಬ್ಲಾಗಿನಂಗಳ ಹೊಕ್ಕು ನಗೆಯ ನಗಾರಿ ಬಾರಿಸುತ್ತಿರುವ ಬ್ಲಾಗಿನ ಹೆಸರೇ ನಗೆ ನಗಾರಿ ಡಾಟ್ ಕಾಮ್.

ಕೇವಲ ನಗೆಗಷ್ಟೆ ಮೀಸಲಾಗಿರುವ ಈ ನಗೆಯಂಗಳದಲ್ಲಿ ಒಂದಿಷ್ಟು ಹರಟೆ, ಕುಚೋದ್ಯ, ಲೈಟಾಗಿ ಕಾಲೆಳೆಯುವ ಬರಹಗಳು ಹೀಗೆ ತರಾವರಿ ನಗೆ ಬುಗ್ಗೆಗಳುಂಟು. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ ಅನ್ನುವ ಸಂಪಾದಕರು ಇಲ್ಲಿ ಒಂದಿಷ್ಟು ನಗೆ ಬಾಂಬು ಸಿಡಿಸುವುದನ್ನು ಮರೆತಿಲ್ಲ. ತಮ್ಮ ಪತ್ತೆದಾರಿ ಚೇಲನನ್ನು ಕಟ್ಟಿಕೊಂಡು ಗಸ್ತು ತಿರುಗುವ ನಗೆ ಸಾಮ್ರಾಟರು ಸೆರೆ ಸಿಕ್ಕ ಸಂಗತಿಗಳನ್ನೆಲ್ಲ ನಗಾರಿಯಲ್ಲಿ ಕೆಡವುತ್ತಾ ನಗೆ ಚಟಾಕಿ ಹಾರಿಸಿದ್ದಾರೆ. ನಗೆ ನಗಾರಿ ಬ್ಯೂರೋ ಇತ್ತೀಚೆಗೆ ಕನ್ನಡದ ಸುದ್ದಿ ಚಾನೆಲ್ಲೊಂದರ ಕುರಿತು ಕುಟುಕು ಕಾರ್ಯಾಚರಣೆ ನಡೆಸಿದೆ.

ಸಿನಿಮಾ, ಕ್ರೀಡೆ, ರಾಜಕೀಯ, ಚರ್ಚೆಯ ಕಡೆಗೆಲ್ಲ ಅವರ ದೃಷ್ಟಿ ಹರಿದಿದೆ. ಅವರ ಸೀರಿಯಸ್ಲೀ ಸೀರಿಯಸ್ಸು, ಅವರಿವರ ಬಯಾಗ್ರಫಿ ಇತ್ಯಾದಿ ಕಾಲಮ್ಮುಗಳನ್ನು ಓದಿಯೇ ಅನುಭವಿಸಬೇಕು. ನಗೆಚಿತ್ರಗಳನ್ನು ನೋಡಿಯೇ ತೀರಬೇಕು. ಒಮ್ಮೆ ಹೊಟ್ಟೆ ಹುಣ್ಣಾಗುವಂತೆ ನಗಬೇಕು ಅಂತಂದುಕೊಂಡವರು ಈ ಬ್ಲಾಗಿಗೊಮ್ಮೆ ಭೇಟಿ ಕೊಡಬಹುದು.

ನೀ ಮಾಯೆಯೊಳಗೋ

ದಿನದ ಬ್ಲಾಗನ್ನರಸುತ್ತ ಬ್ಲಾಗಿನಂಗಳ ಹೊಕ್ಕವನಿಗೆ ಕಾಡಿದ್ದು ವಿಕ್ರಂ ಹತ್ವಾರರ ನೀ ಮಾಯೆಯೊಳಗೋ ಒಳಗಿನ ಮಾಯೆ.

ಅದ್ಯಾವುದೋ ಮಾಯೆಗೆ ಸಿಕ್ಕಿಹಾಕಿಕೊಂಡವರಂತೆ ಬರೆದಿರುವ ಹತ್ವಾರ್ , ಹೀಗೆ ಕಾಡಿದ್ದು ಕನಸಿದ್ದು ಎಲ್ಲಕ್ಕೂ ಕವಿತೆಯ ರೂಪ ಕೊಟ್ಟಿದ್ದಾರೆ. ಪ್ರತಿ ಕವಿತೆಯೊಳಗೊಂದು ಹೊಸ ರೀತಿ, ತಾಜಾತನ ಸೃಷ್ಟಿಸಿ ಮತ್ತೆ ಮತ್ತೆ ಓದುವಂತೆ ಮಾಡಿದ್ದಾರೆ. ನೀ ಮಾಯೆಯೊಳಗೋ ಅಂತಂದು ೧೯ ಸರಣಿ ಲೇಖನ ಬರೆದಿದ್ದಾರೆ. ಅಮೆರಿಕಾದಲ್ಲಿ ಕೂತು ಮಳೆಯನ್ನು ನೆನೆಯುತ್ತಾ, ನಮ್ಮನ್ನೂ ತೋಯಿಸಿದ್ದಾರೆ. ಹುಟ್ಟುಹಬ್ಬದ ಬಗ್ಗೆ ‘ನನ್ನ ಫಿಲೋಸಫಿ ಸಿಂಪಲ್. ಹುಟ್ಟುಹಬ್ಬದ ದಿನದಂದು ಸಾವಿಗೊಂದು ಕಣ್ಣುಹೊಡೆದು ಇನ್ನೊಂಚೂರು ಹೆಚ್ಚಿಗೆ ಪ್ರೀತಿಸುವುದಕ್ಕೆ ಸಾಧ್ಯವಾಗಬೇಕು' ಅಂತ ಬರೆದು, ನೀವೇನು ಹೇಳ್ತೀರಿ ಅಂತ ಪ್ರಶ್ನಿಸಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ನಮ್ಮನ್ನು ಮೋಡಿ ಮಾಡಿದ್ದಾರೆ.

ಇಂತಿಪ್ಪ ಹತ್ವಾರರು ಕಳೆದೆರಡು ತಿಂಗಳಿನಿಂದ ಬ್ಲಾಗಿನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಅಂತ ಅವರ ಓದುಗ ಅಭಿಮಾನಿಗಳು ಗಲಾಟೆ ಆರಂಭಿಸಿದ್ದಾರೆ. ಅವರು ಅಮೆರಿಕಾ ಬಿಟ್ಟು ಕನ್ನಡ ನಾಡಿಗೆ ಹಿಂತಿರುಗಿದ್ದಾರೆಂಬ ಸುದ್ದಿಯೂ ಹಬ್ಬಿದೆ. ಅದೇನಾದರೂ ಇರಲಿ ಅವರು ಶೀಘ್ರದಲ್ಲೇ ಬ್ಲಾಗಿನಂಗಳದಲ್ಲಿ ಕಾಣಿಸಿಕೊಳ್ಳುತ್ತಾರೆಂಬ ವಿಶ್ವಾಸ ಮಾತ್ರ ನಮ್ಮದು. ಹತ್ವಾರರ ಬ್ಲಾಗಿನಲ್ಲಿ ಕಡೆಯದಾಗಿ ಕಾಣಿಸಿಕೊಂಡಿರುವ ಕವಿತೆಯೊಂದರ ಸಾಲುಗಳು ಇಲ್ಲಿವೆ.

ನೇಗಿಲಿಳಿದಾಗ ನೋವೆನ್ನದೆ ನೆಲ
ಮೈತುಂಬ ತುಟಿ ಬಿರಿದು ನಗೆಸೂಸಿ,
ಒಳಬಿಟ್ಟಿತು ಹದಗೊಂಡಿತು
ತೆನೆಯ ನಗುವ ನೆನೆಸಿ.

ಗಂಡಭೇರುಂಡ

ದಿನದ ಬ್ಲಾಗಿನಂಗಳಕ್ಕೆ ಬಂದಿಳಿದಿದೆ ಶ್ರೀನಿವಾಸರ ಗಂಡಭೇರುಂಡ.

ನಾನು ಬರೆಯುವುದು ನನ್ನ ಸಂತೋಷಕ್ಕಾಗಿ ಮಾತ್ರ ಅಂತ ಅವರು ಹೇಳುತ್ತರಾದರೂ, ಭೇರುಂಡರ ಬರಹಗಳ ಮೂಲಕ ನಮಗೊಂದಿಷ್ಟು ಖುಶಿ ಸಿಗುವುದು ದಿಟ. ಸಮಯ ಸಿಕ್ಕಾಗಲೆಲ್ಲ ಊರುರು ಸುತ್ತಿ ಬಂದವರು ಅದನ್ನೆಲ್ಲ ತಮ್ಮ ಬ್ಲಾಗಿನಲ್ಲಿ ರಸವತ್ತಾಗಿ ದಾಖಲಿಸಿದ್ದಾರೆ.‘ಇದು ಎಂಥ ಲೋಕವಯ್ಯ'ಅಂತಂದು ವಿಸ್ಮಯ ಪಟ್ಟಿದ್ದಾರೆ. ತಮ್ಮ ಯೋಗದ ಅಭ್ಯಾಸ ಕುರಿತು ಸಾಕಷ್ಟು ಬರೆದಿದ್ದಾರೆ. ನಗುವವರ ಕೂಟ ಕಂಡು ನಕ್ಕಿದ್ದಾರೆ. ತಮ್ಮದೊಂದು ಫೋಟೊ ಪ್ರಕಟಿಸಿ ಎಲ್ಲರನ್ನೂ ನಗಿಸಿದ್ದಾರೆ. ‘ಧ್ವಜಕ್ಕೆ ಶಾಂಪೇನ್ ' ಅಂತೆಲ್ಲ ಬರೆದು ಭಾರೀ ಚರ್ಚೆ ಮಾಡಿದ್ದಾರೆ.

ಹಾಗಂತ ಪ್ರೇಮ ಕವಿತೆಗಳೇನು ಕಮ್ಮಿ ಇಲ್ಲ. ಅವರದ್ದೊಂದು ಕವಿತೆಯ ಸಾಲುಗಳು:

ಕಾಲವರಿತಿದೆ ವಿರಹ ಬೇಗೆಯ, ನೊಂದ ಮನಗಳ ಬೆಸೆದಿದೆ!
ಮತ್ತೆ ಹೊಸ ಹೊಸ ಭಾವವೆಲ್ಲವನುಣಿಸಿ ಮೈತ್ರಿಯ ಹೊಸೆದಿದೆ!
ನಿನ್ನ ಸನಿಹವೆ ಸ್ವರ್ಗವಾಯಿತು, ಗೆಳತಿ! ನನ್ನೀ ಮನಸಿಗೆ;
ನನ್ನ ಮನವಾಸರೆಯ ತೋರಿತು ನಿನ್ನ ಸಾಸಿರ ಕನಸಿಗೆ!

ಅಂತರ್ವಾಣಿ

ದಿನದ ಬ್ಲಾಗಿನೊಳಗೆ ಕಾಣಿಸಿಕೊಳ್ಳುತ್ತಿದೆ ಜಯಶಂಕರರ ಅಂತರ್ವಾಣಿ.

ಫಿನ್ ಲ್ಯಾಂಡಿಗೆ ಪ್ರವಾಸ ಹೋಗಿದ್ದು, ಮಲ್ಲೇಶ್ವರಂ ಮಾಲ್ ನಲ್ಲಿ ಹರಕು ಜೀನ್ಸ್ ಕೊಂಡಂತೆ ಕನಸು ಕಂಡಿದ್ದು, ಆರ್ಕುಟ್ ಜಾಲದಲ್ಲಿ ಸಿಕ್ಕಿ ಬಿದ್ದು ಬೆಮಿಗಳ ಜೊತೆ ಚಾಟ್ ಮಾಡಿದ್ದು (ಬೆರಳಚ್ಚು ಮಿತ್ರರು) ಇಂತೆಲ್ಲ ಬರಹಗಳ ಖಜಾನೆ ಇರೋದು ಅಂತರ್ವಾಣಿಯಲ್ಲಿ ಮಾತ್ರ. ಸದ್ಯ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ಜಯಶಂಕರ್ , ತಮ್ಮ ಮನದೊಳಗಿನ ಮಾತುಗಳನ್ನು ಅಂತರ್ವಾಣಿಯಲ್ಲಿ ಬಿಚ್ಚಿಟ್ಟಿದ್ದಾರೆ. ಮಗುವಾಗಿದ್ದಾಗಿನಿಂದ ಹಿಡಿದು, ಕುಂಟೆ ಬಿಲ್ಲೆ ಆಡಿದ್ದು, ಅಪ್ಸರೆಯನ್ನು ನೆನೆದು ಕನಸು ಕಂಡಿದ್ದು, ಪ್ರೇಮ ಪರೀಕ್ಷೆಯಾದದ್ದು ಎಲ್ಲದರ ಬಗ್ಗೆಯೂ ಬರೆದಿದ್ದಾರೆ.

ಕತೆ, ಕವಿತೆ, ಹರಟೆ ಎಲ್ಲವೂ ಇಲ್ಲುಂಟು. ಆಸಕ್ತರು ಅಂತರ್ವಾಣಿಯನ್ನೊಮ್ಮೆ ಆಲಿಸಬಹುದು.

ನಾವೇಕೆ ಹೀಗೆ?

ದಿನದ ಬ್ಲಾಗಿನಂಗಳದಲ್ಲಿ ಕಾಣಿಸಿಕೊಳ್ಳುತ್ತಿವೆ ಲಕ್ಷ್ಮಿ ಒಡೆತನದ ತ್ರಿವಳಿ ಬ್ಲಾಗ್ ಗಳು.

ನಾವೇಕೆ ಹೀಗೆ? ,ಚಿತ್ರ ವಿಚಿತ್ರ, ಜಿಂದಗಿ ಕಾಲಿಂಗ್ ಇವು ಲಕ್ಷ್ಮಿಯವರ ಮೂರು ಬ್ಲಾಗುಗಳ ಹೆಸರುಗಳು. ಲಕ್ಷ್ಮಿ ತಮ್ಮ ಮನಸ್ಸಿನಲ್ಲಿ ಉದ್ಬವಿಸುವ ನೂರಾರು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ನಾವೇಕೆ ಹೀಗೆ ಎಂದು ನಮ್ಮನ್ನೆ ಪ್ರಶ್ನಿಸುತ್ತಾರೆ. ಅಕ್ರಮ ಸಕ್ರಮದ ಕುರಿತು ಚರ್ಚೆ ನಡೆಸುವ ಅವರು, ಮಿಸ್ ಕಾಲ್ ಮನೋಭಾವವನ್ನು ಕಂಡು ಸಿಡಿಮಿಡಿಗೊಂಡಿದ್ದಾರೆ. ತಮ್ಮ ಮನೆಯ ಸಜ್ಜೆಯ ಮೇಲಿನ ಎಸಿ ಡಬ್ಬದ ಹಿಂದಿದ್ದ ಪಾರಿವಾಳದ ಸಂಸಾರ ಕುರಿತು ಆಸ್ಥೆಯಿಂದ ಬರೆದಿದ್ದಾರೆ. ಹಾಗೆ ಸುಮ್ಮನೆ ಅಂತ ಒಂದಿಷ್ಟು ರಿಮೇಕ್ ಹಾಡುಗಳನ್ನು ಕೂಡಿಸಿದ್ದಾರೆ. ಮದುವೆ, ಶ್ರಾದ್ಧಗಳ ಬಗ್ಗೆ ವ್ಯಾಖ್ಯಾನಿಸಿದ್ದಾರೆ.

ಚಿತ್ರ ವಿಚಿತ್ರ ಬ್ಲಾಗಿನಲ್ಲಿ ಹೆಸರಿಗೆ ತಕ್ಕಂತಹ ಸಂಗತಿಗಳನ್ನೇ ಸೇರಿಸಿ ಬರೆದಿದ್ದಾರೆ. ವೃತ್ತಿಯಲ್ಲಿ ಭೌತ ಶಾಸ್ತ್ರಜ್ಞೆ ಆಗಿರುವ ಅವರು ಜಿಂದಗಿ ಕಾಲಿಂಗ್ ನಲ್ಲಿ ತಮ್ಮ ಜಿಂದಗಿಯೊಂದಿಗಿನ ನಾನ್ ಸ್ಟಾಪ್ ಗುಸುಗುಸುವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೆಲ್ಲ ಓದ ಬಯಸುವವರು ಈ ತ್ರಿವಳಿ ಬ್ಲಾಗುಗಳಿಗೊಮ್ಮೆ ಭೇಟಿ ನೀಡಬಹುದು.

ಮಾತಿಲ್ಲದ ಮೌನ ರಾಗಗಳು

ದಿನದ ಬ್ಲಾಗಿನ ಹುಡುಕಾಟದಲ್ಲಿದ್ದವನಿಗೆ ಸಿಕ್ಕಿದ್ದು ಅಮರ ಬರೆಯುವ ಮಾತಿಲ್ಲದ ಮೌನ ರಾಗಗಳು.

ಮಾತಿಲ್ಲದ ಮೌನ ರಾಗಗಳ ಬ್ಲಾಗಿನಲ್ಲಿ ಸ್ವಗತ ಲಹರಿಯೇ ತುಂಬಿದಂತಿದೆ. ಬರವಣಿಗೆಯಲ್ಲಿ ಮೌನ ತುಂಬಿ ಬರೆಯುವ ಅಮರ ತಮ್ಮ ಬರಹಗಳ ಮೂಲಕ ಮಾತನಾಡಿದ್ದಾರೆ. ಆಗಾಗ್ಗೆ ಕಾಡುವ ನೆನಪು, ಕನಸುಗಳ ಕುರಿತು ಮನ ಮುಟ್ಟುವಂತೆ ಬರೆದಿದ್ದಾರೆ. ಜೊತೆಗೊಂದಿಷ್ಟು ಕುತೂಹಲಕಾರಿ ಕತೆ, ಹಾಯೆನಿಸಿವ ಕವನಗಳು ಇಲ್ಲಿವೆ. ಅಮರ ತಮ್ಮ ಬರಹಗಳಲ್ಲಿ ಭಾವನಾತ್ಮಕತೆ ತುಂಬಿ ಬರೆದಿದ್ದಾರೆ.

ಮೌನದ ರಾಗಗಳಲ್ಲಿ ತೇಲ ಬಯಸುವವರು ಈ ಬ್ಲಾಗಿಗೊಮ್ಮ್ರೆ ಭೇಟಿ ನೀಡಬಹುದು.

ಡೈನಾಮಿಕ್ ದಿವ್ಯ

ಹೆಸರಿನಲ್ಲಿ ಚೈತನ್ಯವನ್ನೂ ಹೊಂದಿರುವ ಡೈನಾಮಿಕ್ ದಿವ್ಯ ತಮ್ಮದೇ ಹೆಸರಿನಲ್ಲೇ ನಡೆಸುತ್ತಿರುವ ಬ್ಲಾಗ್ ಈ ದಿನದ ಅತಿಥಿ. ನವಿರು ಹಾಸ್ಯ ಹಾಗೂ ಲಘು ಚಿಂತನೆಯ ಬರಹಗಳು ಸಹಜ ಓದಿಗೆ ಸಂತಸವನ್ನೀಯುತ್ತವೆ. ಹಿಂದಿ, ಇಂಗ್ಲೀಷ್ ಹಾಗೂ ಕನ್ನಡದಲ್ಲೂ ಇವರ ಬ್ಲಾಗ್ ಬರಹಗಳು ಇರುವುದರಿಂದ ಇದನ್ನು ತ್ರಿವಳಿ ಭಾಷೆಗಳ ಬ್ಲಾಗ್ ಎನ್ನಬಹದು. ಇಲ್ಲಿನ ಎಲ್ಲ ಬರಹಗಳಿಗೂ ಒಳ್ಳೆಯ ಸ್ಪಂದನೆಗಳಿದ್ದರೂ ಕೆಲವು ದಿನಗಳಿಂದ ಲೇಖಕರೇ ಮಾಯವಾಗಿರುವುದರಿಂದ ಐದು ತಿಂಗಳಿಂದ ಬ್ಲಾಗಿನಂಗಳ ಹೊಸ ಪತ್ರಗಳಿಂದ ದೂರ ಉಳಿದಿದೆ.

ಕೊನೆಯ ಪೋಸ್ಟಿಂಗ್‌ನಲ್ಲಿ ಲೇಖಕರು ತುಟ್ಟಿಯಾಗಿರುವ ನಗುವಿನ ಕುರಿತು ಬರೆದಿದ್ದಾರೆ. ಮಗುವ ನಗು ಮಾಯವಾಗಿಹುದು ಎಲ್ಲೋ.... ಯಾಕೋ....ಮರೆತೇ ಹೋಗಿರುವರು ನಗಲು... ನಗಲು ಏನೇನು ಅವಾಂತರ ಪಡುವರು.. "ಲಾಫಿಂಗ್ ಕ್ಲಾಸಿಗೆ" ಹೋಗಿ ಮುಗಿ ಬೀಳುವರು... ಮನೆಗೆ ಮರಳಿ ಎಲ್ಲರ ಮೇಲೆ ಹಾರಿ ಬಿದ್ದು ಸಿಡುಕುವರು!! ಅಷ್ಟೊಂದ್ ಕಷ್ಟಾನಾ ನಗೋದು? ಎನ್ನುತ್ತಲೇ ನಕ್ಕು ಬಿಡಿ.... ಮನಸ್ಸು ಪೂರ್ತಿ ಮಗುವಂತೆ ನಕ್ಕು ಬಿಡಿ ಎಂದು ಬರೆದು ನಗಿಸಿದ್ದಾರೆ. ಹಿಂದಿಯಲ್ಲಿರುವ ಮಗುವಿನ ಪಾರ್ಥನೆ, ಇಂಗ್ಲಿಷ್‌ನಲ್ಲಿರುವ ಬಿಳಿಯ ನವಿಲ ಚುಟುಕು ಬರಹ, ಕತ್ತಲ ಆಗಸದದ ಭಿತ್ತಿ ಚಿತ್ರಗಳು, ಮುಗ್ದ ಮಗುವಿನ ಬಿಸಿನೀರಿನ ಸ್ನಾನ, ಇಣಚಿಯ ಹುಟ್ಟುಹಬ್ಬ ಎಲ್ಲ ಬರಹಗಳೂ ಆತ್ಮೀಯವಾಗಿದೆ.

ಕೆಂಡಸಂಪಿಗೆಯಲ್ಲಿ ಈ ಸುದ್ದಿ ನೋಡಿಯಾದರೂ ಅವರು ಮತ್ತೆ ಪ್ರತ್ಯಕ್ಷವಾಗಲಿ ಎನ್ನುವುದು ನಮ್ಮ ಆಶಯ.

ಅರ್ಚನಾ

‘ಉದರ ನಿಮಿತ್ತಂ ಬಹುಕೃತ ಪಾಕಂ' ಅಂತಲೇ ಬರೆಯೋ ಖಾದ್ಯಪ್ರಿಯೆ ಅರ್ಚನಾ ಬ್ಲಾಗಿಗೆ ಭೇಟಿ ಕೊಟ್ಟವನ ಮೂಗಿಗೆ ಬಡಿದದ್ದು ತೊಂಡೆಕಾಯಿ, ಗೋಡಂಬಿ ಪಲ್ಯದ ಪರಿಮಳ. ಆಮೇಲೆ ಫುಲ್ಕಾ, ಗೋಡಂಬಿ ಹಲ್ವಗಳ ರುಚಿಯೂ ದಕ್ಕಿತು. ಕಡೆಗೆ ಬ್ರಾಹ್ಮಿ ಎಲೆಯ ಶರಬತ್ತು ಕುಡಿದದ್ದೂ ಆಯಿತು.

ಮದುವೆಯಾದ ಮೇಲೆ ಅಡುಗೆ ಕಲಿಯುವುದು ಅನಿವಾರ್ಯ ಆಯ್ತು ಅನ್ನೋ ಅವರು, ಬಗೆಬಗೆಯ ಖಾದ್ಯಗಳ ರಿಸಿಪಿಗಳನ್ನು ಚಿತ್ರಸಮೇತವಾಗಿ ತಂದು ತಮ್ಮ ಬ್ಲಾಗಿನ ಕೋಣೆಯೊಳಗೆ ಸೇರಿಸಿದ್ದಾರೆ. ಅರ್ಚನಾ ಅಡುಗೆಯ ರುಚಿಯಷ್ಟೆ ಸವಿಯಾಗಿ ಬರೆಯುತ್ತಾರೆ ಕೂಡ. ನಮ್ಮನ್ನು ಕುಂತಲ್ಲೆ ಕೇಪ್ ಟೌನ್ ಸುತ್ತಿಸಿ ಬಿಡುವ ಅವರು ,ಮಳೆಯಲ್ಲಿ ನೆನಪನ್ನು ಇನ್ನಷ್ಟು ಹಸಿಯಾಗುವಂತೆ ಮಾಡುತ್ತಾರೆ. ಜೊತೆಗೊಂದಿಷ್ಟು ಕವಿತೆಗಳನ್ನು ಮುಂದಿಡುತ್ತಾರೆ.

ಹೊಸ ಬಗೆಯ ಅಡುಗೆ ರುಚಿ ಹುಡುಕುತ್ತಿರುವ ಎಲ್ಲ ತಿಂಡಿಪೋತ/ಪೋತಿಯರು ಇಲ್ಲಿಗೊಮ್ಮೆ ಭೇಟಿ ನೀಡಬಹುದು.

ನದಿಪ್ರೀತಿ

ದಿನದ ಬ್ಲಾಗ್ ಬೊಗಸೆಗೆ ದಕ್ಕಿದ್ದು ರವಿ ಅಜ್ಜೀಪುರ ಅವರ ನದಿಪ್ರೀತಿ.

ಪತ್ರಕರ್ತ ರವಿ ತಮ್ಮ ನದಿ ಪ್ರೀತಿಯಲ್ಲಿ ಒಂದಿಷ್ಟು ಪ್ರೀತಿ ಮಾತುಗಳನ್ನಾಡಿದ್ದಾರೆ. ಜೊತೆಗೊಂದಿಷ್ಟು ಕತೆ, ಹನಿಗವನಗಳನ್ನು ಸೇರಿಸಿದ್ದಾರೆ. ಆಗಾಗ್ಗೆ ಕಾಡುವ ನೆನಪುಗಳನ್ನು ಕೆದಕಿ ಬರೆದಿದ್ದಾರೆ. ಅಲ್ಲದೆ ಒಂದಿಷ್ಟು ಆಗು-ಹೋಗುಗಳ ಕುರಿತು ಚರ್ಚಿಸಿದ್ದಾರೆ. ಎಂದಿನಂತೆ ಓ ಮನಸ್ಸೇ ಧಾಟಿಯಲ್ಲಿರುವ ಅವರ ಬ್ಲಾಗ್ ಬರಹಗಳು ಆತ್ಮೀಯವಾಗಿವೆ. ಮನದೊಳಗಿನ ಪಿಸುಮಾತು ಇಲ್ಲಿ ಅಕ್ಷರದ ರೂಪ ಪಡೆದುಕೊಂಡಿದೆ.

ಅವರದ್ದೊಂದು ಹನಿಗವನ ಇಲ್ಲಿದೆ.
ನಾನು
ನಿನ್ನೆದೆಯೊಳಗಿನ
ಕೊಳದಲ್ಲಿ
ತೇಲುವ
ಪುಟ್ಟ ಹಾಯಿ ದೋಣಿ

ಆರೋಗ್ಯವೇ ಭಾಗ್ಯ

ಆರೋಗ್ಯವೇ ಭಾಗ್ಯ ಎಂದು ಹೇಳುತ್ತಾ ದಿನದ ಬ್ಲಾಗ್ ಜಗುಲಿಗೆ ಬಂದಿದ್ದಾರೆ ಸತ್ಯಪ್ರಕಾಶ್.

ಆರೋಗ್ಯ ಸ್ನೇಹಿ ಚಿಂತನೆ, ವಿಚಾರಗಳಿಂದ ಕೂಡಿರುವ ಈ ಬ್ಲಾಗ್, ವೈದ್ಯ ಜಗತ್ತಿನ ಕೈಪಿಡಿಯಂತಿದೆ. ನಿತ್ಯದ ದಿನಚರಿ ಹೇಗಿರಬೇಕು ಎಂಬುದರಿಂದ ಹಿಡಿದು, ಊಟ, ಉಪಚಾರ, ಜೀವನಕ್ರಮ ಇತ್ಯಾದಿಗಳೆಲ್ಲದರ ಕುರಿತು ಸತ್ಯಪ್ರಕಾಶ್ ಮಾಹಿತಿ ನೀಡಿದ್ದಾರೆ. ಜೊತೆಗೆ ಒಂದಿಷ್ಟು ಮನೆ ಮದ್ದುಗಳು, ಔಷಧಗಳ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಮಲಬದ್ದತೆ, ಆಸಿಡಿಟಿಯಂತಹ ಜೀವ ಹಿಂಡುವ ಸಮಸ್ಯೆಗಳ ಕುರಿತ ಮಾಹಿತಿಗಳೂ ಇಲ್ಲಿವೆ.

ಊಟ,ತಿಂಡಿ, ಡಯಟ್ಟು ಅಂತೆಲ್ಲ ಯೋಚಿಸುವವರು, ಆರೋಗ್ಯ ಚೆನ್ನಾಗಿದ್ದರೆ ಅದೇ ಭಾಗ್ಯ ಅಂತ ಅಂದುಕೊಳ್ಳುವವರು ಈ ಬ್ಲಾಗಿಗೊಮ್ಮೆ ಭೇಟಿ ನೀಡಬಹುದು.

ಮನಕ್ಕೆ ನೆನಹಾಗಿ

ದಿನದ ಬ್ಲಾಗ್ ಜಗುಲಿಗೆ ಸೇರಿಕೊಳ್ಳುತ್ತಿರುವ ಹೆಸರು ಚಕೋರ ಬರೆಯುವ ಮನಕ್ಕೆ ನೆನಹಾಗಿ.

‘ಬ್ರಹ್ಮಾಂಡದ ಗೊಂದಲಕ್ಕೆ ನನ್ನ ಕೊಡುಗೆ. ಒಂದಷ್ಟು ಬರೆಹ, ಒಂದಿಷ್ಟು ಹರಟೆ, ಮತ್ತೇನೋ ವಿಚಾರ, ಸಿಕ್ಕಷ್ಟು ಸಹಾನುಭೂತಿ' ಅನ್ನೋದು ಅವರೇ ತಮ್ಮ ಬ್ಲಾಗ್ ಕುರಿತು ಬರೆದುಕೊಂಡ ಅಡಿ ಬರಹ. ಅಂತೆಯೇ ಒಂದಿಷ್ಟು ವಿಚಾರ, ಚರ್ಚೆ, ತಿಳಿ ಹಾಸ್ಯ , ವಿಡಂಬನೆ, ಅನುವಾದಗಳನ್ನು ಇಲ್ಲಿ ಕಾಣಬಹುದು.

ಚಕೋರ ಒಮ್ಮೆ ಬ್ಲಾಗುಗಳ ಸ್ವರೂಪ, ಕಾಳಜಿ, ನಿರೀಕ್ಷೆಗಳು ಅಂತೆಲ್ಲ ಬರೆದು ಚರ್ಚೆಗೆ ಕಿಡಿ ಹೊತ್ತಿಸುತ್ತಾರೆ. ನಡುವೆ ಅಲ್ಲಿಂದಿಲ್ಲಿಂದ ಆಯ್ದ ಕವಿತೆಗಳನ್ನು ಅನುವಾದಿಸಿ ನಮ್ಮ ಮುಂದಿಡುತ್ತಾರೆ. ಕುಳಿತಲ್ಲೆ ಶಿಕಾಗೋ, ಸಿಂಗಪುರ ಅಂತೆಲ್ಲ ಸುತ್ತಿಸುತ್ತಾರೆ. ‘ಇರುವುದರ ತುಡಿತ, ಇರದುದರ ಸೆಳೆತ' ಅಂದುಕೊಳ್ಳುತ್ತಾರೆ. ಚಿಕ್ಕವರಾಗಿದ್ದಾಗ ಆಡುತ್ತಿದ್ದ ಅಂಕಿಗಳಾಟವನ್ನು ನೆನಪಿಸಿಕೊಳ್ಳುತ್ತಾರೆ. ಕೋಣೆಯ ಕಿಟಕಿಯಿಂದ ಇಣುಕಿ ಫೋಟೊ ತೆಗೆದ ಸಂಭ್ರಮದ ಬಗ್ಗೆ ಹೇಳುತ್ತಾರೆ. ಪ್ರೀತಿ ಪ್ರೇಮದ ಬಗ್ಗೆ ಒಂದಿಷ್ಟು ಮಾತನಾಡುತ್ತಾರೆ. ‘ಇನ್ನೆಷ್ಟು ದಿನ ಹೀಗೆ' ಎಂದು ಪ್ರಶ್ನಿಸಿಕೊಂಡು ಸುಮ್ಮನಾಗುತ್ತಾರೆ.

ಕನ್ನಡ ಸಾರಥಿ

ದಿನದ ಬ್ಲಾಗ್ ಅಂಗಳಕ್ಕೆ ಸೇರ್ಪಡೆಗೊಳ್ಳುತ್ತಿರುವ ಹೆಸರು ಪತ್ರಕರ್ತ ಸಾರಥಿ ಬರೆಯುವ ಕನ್ನಡ ಸಾರಥಿ.

‘ದುಗುಡ ದುಮ್ಮಾನಗಳಿಗೆ ಇಲ್ಲಿಲ್ಲ ಸಮ್ಮಾನ; ಮನಸ್ಸು ಹಗುರವಾಗಿರಿಸಲು ಬೇಡ ಯಾವ ಬಿಗುಮಾನ' ಹೀಗೆನ್ನುತ್ತಲೇ ಸಾರಥಿ ತಮ್ಮ ಬರಹಗಳನ್ನು ಮುಕ್ತವಾಗಿ ಹರಿಬಿಡುತ್ತಾ ಹೋಗುತ್ತಾರೆ. ಕನ್ನಡದ ಬಗ್ಗೆ ಅವರಿಗೆ ಅಪಾರ ಪ್ರೀತಿಯೇನೊ ಎಂಬಂತೆ ‘ನವೆಂಬರ್ ಒಂದು ಬಂದ್ರೆ ಕನ್ನಡುದ್ ಬಗ್ಗೆ ಯಾವ್ದಾದ್ರ್ ಒಂದ್ ಬರ್ದು ಹಾಕ್ದಿದ್ರೆ ತಿಂದುಂಡ್ ಅನ್ನ ಜೀರ್ಣ ಆಗೋದಿಲ್ಲಪ್ಪೋ. ಮಿಕ್ಕಿದ್ ದಿನ ಏನಾದ್ರೂ ಎಕ್ಕುಟ್ಟೋಗ್ಲೀ ನಮ್ಗೆಲ್ಲಾ ನವೆಂಬರ್ ಒಂದ್ ಮಾತ್ರ ಕನ್ನಡದ್ ನೆನ್ಪು ಬತ್ತೈತೆ.' ಅಂತೆಲ್ಲ ಬರೆಯುತ್ತಾ , ‘ಕನ್ನಡಿಗರಿಂದ ಕನ್ನಡದ ಕಗ್ಗೊಲೆಯಾಗಬೇಕೆ?' ಅಂತ ನಮ್ಮನ್ನೇ ಪ್ರಶ್ನಿಸುತ್ತಾರೆ.

‘ಮೀಸಲಾತಿ ಕಕ್ಕುಲಾತಿ - ಬೇಡ ಈ ದುರ್ಗತಿ ' ಅಂತ ಭಾಷಣ ಬಿಗಿಯುವ ಸಾರಥಿ, ತಮಗೆ ಸಾನಿಯ ಮಿರ್ಜಾ ಏಕೆ ಇಷ್ಟ ಅಂತನೂ ಬರೆಯುತ್ತಾರೆ. ನಡುನಡುವೆ ಕನ್ನಡದ ಸಿನಿಮಾಗಳ ಬಗ್ಗೆ ಮಾತನಾಡುತ್ತಾರೆ. ಜೊತೆಗೊಂದಿಷ್ಟು ಶಾಯರಿಗಳನ್ನೂ ಸೇರಿಸುತ್ತಾರೆ. ಅವರ ‘ನರ"ಮೇಧಾ" ಬಚಾವೋ', ‘ಲಾಡೆನ್ನೂ, ಚಿಂಪಾಂಜಿಯೂ, ಅಸತ್ಯಾನಂದರೂ...' ಇತ್ಯಾದಿ ಲೇಖನಗಳು ಇಷ್ಟವಾಗುತ್ತವೆ.

ಕನ್ನಡ ಬಲ

ಈ ದಿನದ ಬ್ಲಾಗ್ ಲೋಕದಲ್ಲಿ ಕಾಣಿಸಿಕೊಳ್ಳುತ್ತಿರುವ ಹೆಸರು ರೋಹಿತ್ ರಾಮಚಂದ್ರಯ್ಯ ಅವರ ಕನ್ನಡ ಬಲ.

ಹೆಸರೇ ಹೇಳುವಂತೆ ಇದು ಕನ್ನಡ ಬ್ಲಾಗ್ ಲೋಕದ ಬಲ ಪ್ರದರ್ಶನದ ಸಂಕೇತವೂ ಹೌದು. ಕನ್ನಡದಲ್ಲಿರುವ ಎಲ್ಲ ಬ್ಲಾಗುಗಳನ್ನು ಒಟ್ಟುಗೂಡಿಸುವ ಪ್ರಯತ್ನಕ್ಕೆ ಕೈ ಹಾಕಿರುವ ರೋಹಿತ್, ಈಗಾಗಲೇ ೫೭೯ ಕನ್ನಡ ಬ್ಲಾಗುಗಳನ್ನು ಪಟ್ಟಿ ಮಾಡಿದ್ದಾರೆ! . ದಿನದಿನಕ್ಕೂ ಅವರ ಬ್ಲಾಗ್ ಪಟ್ಟಿಯ ಸಂಖ್ಯೆ ಏರುತ್ತಲೇ ಇದೆ. ಜೊತೆಗೆ ಅಷ್ಟೂ ಬ್ಲಾಗುಗಳನ್ನು ಅಕ್ಷರಾನುಕ್ರಮವಾಗಿ ಜೋಡಿಸಿ ,ಅದರ ಕೊಂಡಿ ಸೇರಿಸಿದ್ದಾರೆ.

ಕನ್ನಡದ ಎಲ್ಲ ಆಸಕ್ತ ಬ್ಲಾಗುದಾರರು ಈ ಬ್ಲಾಗುಗಳ ಬ್ಯಾಂಕಿಗೆ ತಮ್ಮ ಬ್ಲಾಗಿನ ಕೊಂಡಿಯನ್ನು ಕಳುಹಿಸಿಕೊಡಬಹುದು.

ಶಾನಿಯ ಡೆಸ್ಕಿನಿಂದ

ಈ ದಿನದ ಬ್ಲಾಗಿನಂಗಳದಲ್ಲಿ ಕಾಣಿಸಿಕೊಳ್ಳುತ್ತಿರುವ ಹೆಸರು ಶಾನಿಯ ಡೆಸ್ಕಿನಿಂದ.

‘ವಿಮಾನ ಬಿಡಬೇಕೆಂದಿದ್ದೆ... ಒಗ್ಗಲಿಲ್ಲ... ಹಾಗಾಗಿ ರೈಲು...'ಎನ್ನುತ್ತಲೇ ಹರಟೆ ಆರಂಭಿಸುವ ಶಾನಿ ಕಥೆ, ಕವಿತೆ, ನಾಟಕಗಳ ಜೊತೆಗೆ ಒಂದಿಷ್ಟು ನೆನಪುಗಳನ್ನು ಕೆದಕಿಕೊಂಡು ಬರೆಯುತ್ತಾರೆ. ತಮಗಿಂತ ಶತಮೂರ್ಖರು ಇರಲಾರರು ಎನ್ನುತ್ತಲೇ , ಮೂರ್ಖರ ದಿನದಂದು ತಮ್ಮನ್ನು ಯಾರು ಕುರಿಯಾಗಿ ಮಾಡದ್ದಕ್ಕೆ ಬೇಸರಗೊಂಡು, ‘ಅಲ್ಲಾ, ಈ ಥರಾನೂ ನೀವು ಒಬ್ಬ ಫೂಲನ್ನು ಫೂಲ್ ಮಾಡೋದಾ? ನನ್ನ ದಿನವಾದ ಇಂದು ನಂಗೆ ಶುಭಾಶಯ ಕೋರ್ತೀರಾಂತ ಬೆಳಬೆಳಗ್ಗೇನೇ ಬೇಗನೆದ್ದು ಕೂತಿದ್ದೆ। ನಾಟ್ ಈವನ್ ಒನ್ ಎಸ್ಸೆಮ್ಮೆಸ್. ಹೋಗಲಿ ಒಂದು ಮೇಲ್? ಮೇಲೂ ಇಲ್ಲ; ಫೀಮೇಲೂ ಇಲ್ಲ! ನೀವೂ ಫೂಲ್ ಮಾಡಿದ್ರಿ ಬಿಡ್ರಿ. ಆದರೆ, ನೀವೆಂದಿಗೂ ಮೂರ್ಖರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ' ಎಂದು ಸುಮ್ಮನಾಗುತ್ತಾರೆ.

ಈ ನಡುವೆ ತಮ್ಮೂರು, ಶಾಲೆ, ಬಾಲ್ಯ ಕುರಿತು ಒಂದಿಷ್ಟು ಮಾತನಾಡುತ್ತಾರೆ. ಪ್ರೇಮದ ಬಗ್ಗೆ ಬರೆಯ ಹೊರಟು ‘ ಪ್ರೀತಿಗೆ ನನ್ನ ವಾಸ್ತುವೇ ಸರಿ ಇಲ್ಲ!' ಎಂದುಕೊಳ್ಳುತ್ತಾರೆ. ತಮ್ಮನ್ನು ತಾವೇ ಸಂತೈಸಿಕೊಂಡು ‘ನಡೆ ಮನವೆ ನಾಳೆಗಳಿಗೆ, ಸಿಹಿ ನೆನಪ ಬುತ್ತಿ ಜೊತೆಗೆ' ಎನ್ನುತ್ತ ಮುಂದೆ ಹೋಗುತ್ತಾರೆ.

ಇದೊಂದು ಪ್ರಕಟಣೆ
ಈ ಬಾರಿ ಬ್ಲಾಗಿನಂಗಳದಲ್ಲಿ ಕಾಣಿಸಿಕೊಳ್ಳುತ್ತಿರುವ ಹೆಸರು ‘ ಇದೊಂದು ಪ್ರಕಟಣೆ'’.

ಇದು ಹೆಸರಿಗಷ್ಟೆ ಪ್ರಕಟಣೆ ಅಲ್ಲ. ಬ್ಲಾಗ್ ಪೂರ್ತಿ ಇರುವುದೆಲ್ಲವೂ ಪ್ರಕಟಣೆಗಳೇ. ಹೀಗೊಂದು ಸಂಗೀತ ಕಾರ್ಯಕ್ರಮ, ನಾಟಕ, ನೃತ್ಯ, ಪುಸ್ತಕ ಬಿಡುಗಡೆ , ಉಪನ್ಯಾಸ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಕಟಣೆಗಾಗಿಯೇ ಈ ಬ್ಲಾಗ್ ಮೀಸಲು.

ಬೆಂಗಳೂರಿನಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲೂ ನಡೆಯುವ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ‘ಇದೊಂದು ಪ್ರಕಟಣೆ'ಗೆ ಸಂದೇಶ ಕಳುಹಿಸಿದರೆ ಅವರು ಪ್ರಕಟಿಸುತ್ತಾರೆ. ಅಂತೆಯೇ, "ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡಿ.ವಿ.ಜಿ ಯವರ ಹುಟ್ಟುಹಬ್ಬದ ಕಾರ್ಯಕ್ರಮ ಆಯಿತಂತೆ.... ಜೋಗಿಯವರ ಪುಸ್ತಕ ಬಿಡುಗಡೆಗೆ ನೀವು ಹೋಗಿದ್ರಾ? ಯಾವಾಗ ಎಲ್ಲಿ ನಡೆಯಿತು?..... ಮೈಸೂರ ಮಲ್ಲಿಗೆ ನಾಟಕ ನೋಡುವಾಸೆ ತುಂಬಾ ಇತ್ತು, ಆದ್ರೆ ಅದ್ಯಾವಾಗ ನಡಿತೋ ಗೊತ್ತೇ ಆಗಲಿಲ್ಲ " ಅಂತೆಲ್ಲ ಕೊರಗುವವರು ಈ ಬ್ಲಾಗಿಗೆ ಭೇಟಿ ನೀಡಿ, ಮಾಹಿತಿ ಪಡೆಯಬಹುದು.

ಸವಿಗನಸು
ದಿನದ ಬ್ಲಾಗ್ ಜಗುಲಿಯಲ್ಲಿ ಸವಿಗನಸುಗಳನ್ನು ಹೊತ್ತು ತಂದಿದ್ದಾರೆ ಕನಸುಗಾರ ಪ್ರವೀಣ್ ಬಣಗಿ.

ಮನೆಯ ಟೆರೇಸಿನಲ್ಲಿ ಕುಳಿತು ಸೂರ್ಯನನ್ನು ಕಾಣುವ ಹುಡುಗ, ಕಸುವಿಲ್ಲದ ಕನಸುಗಳನ್ನು ಹೊಸೆಯುತ್ತಾರೆ. ಮಳೆ ನಿಂತು ಹೋದಮೇಲೆ ‘ಪ್ರೀತಿ ಕಡಲೋ, ಮುಗಿಲೋ, ಮಳೆಯೋ ಮತ್ತಿನ್ನೇನೋ? ನನಗೊಂದೂ ಗೊತ್ತಿಲ್ಲ. ಆದರೆ ಈ ಪರಿಯ ಹೋಲಿಕೆ ಪ್ರೀತಿಯ ಅರ್ಥವನ್ನು ಸೀಮಿತಗೊಳಿಸದೆಂಬ ಭಯ ನನಗೆ ಕಾಡಿದ್ದಿದೆ. ಪ್ರೀತಿಯ ಕುರಿತಾಗಿ ಪುಟಗಟ್ಟಲೇ, ಗಂಟೆಗಟ್ಟಲೇ ಭಯಂಕರವಾಗಿ ಕೊರೆಯುವವರು, ಕನವರಿಸುವವರ ಎದುರು ನಿಂತು ನಿಜಕ್ಕೂ ಪ್ರೀತಿಯೆಂದರೆ ಅಷ್ಟೇನಾ ಕೇಳಬೇಕೆನಿಸುತ್ತದೆ' ಎಂದು ಸುಮ್ಮನಾಗುತ್ತಾರೆ.

ನಡುವೆ ತಮ್ಮ ಮನೆಯ ಸೊಕ್ಕಿನ ಬೆಕ್ಕಿನ ಬಗ್ಗೆ ಒಂದಿಷ್ಟು ಬರೆಯುತ್ತಾರೆ. ನೆನಪುಗಳ ನೆಪದಲ್ಲಿ ಮಾತಾಡುತ್ತಾ ಹೋಗುತ್ತಾರೆ.

ಸದ್ಯ ಮೈಸೂರಿನ ಕಾವಾ ಕಾಲೇಜಿನಲ್ಲಿ ಪದವೀ ಅಭ್ಯಸಿಸುತ್ತಿರುವ ಪ್ರವೀಣ್ , ಕಥೆ ಕವಿತೆಗಳ ಮೂಲಕ ತಮ್ಮ ಬ್ಲಾಗಿನೊಳಗೆ ನೆನಪುಗಳ ಸವಿಸಂತೆಯನ್ನೇ ಬಿಚ್ಚಿಟ್ಟಿದ್ದಾರೆ.

ನಿನ್ನೆ ನಾಳೆ

ಇಂದಿನ ಬ್ಲಾಗ್ ಜಗುಲಿಗೆ ಬಂದಿರುವವರು ನಿನ್ನೆ ನಾಳೆಗಳ ನಡುವಿನ ನೆನಪಿನ ದೋಣಿಯ ಪಯಣಿಗ.

ನಿನ್ನೆಯ ಅನುಭಾವಕ್ಕೆ ಇ೦ದಿನ ಅನುಭವವ ಕೂಡಿಸಿ ಬರುವ ನಾಳೆಗೆ ಕಾಯುತ್ತಿರುವ ನನ್ನ ಭಾವಕ್ಕೆ ಬ೦ದ ವಿಚಾರವನ್ನು ಹೀಗೆ ಹರಡಿದ್ದೇನೆ. ನಿಮ್ಮ ಮನಸಿಗೆ ಮುಟ್ಟಿದಲ್ಲಿ, ನಿಮ್ಮ ಭಾವಲಹರಿಯನ್ನು ನನ್ನತ್ತ ಹರಿಬಿಡಿ. ನನ್ನ ನಾಳಿನ ಪಯಣಕ್ಕಾದರೂ ಅನುಕೂಲವಾದೀತು ಎಂದು ಕೇಳುತ್ತ ಬರಹದ ಜಗುಲಿಗೆ ಬಂದವರ ಬೆನ್ನಿಗೆ ಹಲವೆಂಟು ಆಸಕ್ತಿ ಮೂಡಿಸುವ ಲೇಖನಗಳಿವೆ. ಗಂಭೀರ ವಿಚಾರಗಳನ್ನು ನವಿರಾಗಿ ನಿರೂಪಿಸಿರುವ ಇವರ ಶೈಲಿ ಓದಲು ಖುಶಿ ಕೊಡುತ್ತದೆ.

ದೂರದೇಶದಲ್ಲಿ ಕುಳಿತು ಅಲ್ಲಿನ ಸಂಗತಿಗಳನ್ನು ಇಲ್ಲಿ ಕಲಿತ ಸಂಸ್ಕ್ರತಿಯ ಕಣ್ಣಲ್ಲಿ ನೋಡುತ್ತಿರುವ ಇವರ ಅಭಿವ್ಯಕ್ತಿಗಳು ಸಮನ್ವಯದ ನಾವೆಯಲ್ಲಿ ತೇಲುತ್ತಿವೆ. ಇತ್ತೀಚಿನ "ನೀವು ಶಾಖಾಹಾರಿಗಳೇನು ... ಏಕೆಂದು ಕೇಳಲೆ? ಲೇಖನದಲ್ಲಿ ಜಾತಿ,ಧರ್ಮ,ಸಂಪ್ರದಾಯ, ಆಚರಣೆ,ಇತಿಹಾಸ, ಇವೆಲ್ಲದರ ಹೊರಗೆ ನಿಂತು ಕೇಳಿದ ಕೆಲವು ಪ್ರಶ್ನೆಗಳಿವೆ. - ಒ೦ದು ವೇಳೆ ನಾನೇನಾದರು ಶಾಖಾಹಾರದ ನಿಯಮವಿಲ್ಲದ ಮನೆಯಲ್ಲಿ ಬೆಳೆದಿದ್ದರೆ, ಹೀಗೆ ಕಾರಣವೊ೦ದು ಸಿಕ್ಕಿ ಮಾ೦ಸಾಹಾರಕ್ಕೆ ಎಳ್ಳು ನೀರು ಬಿಡುತ್ತಿದ್ದೆನೆ? ಗೊತ್ತಿಲ್ಲ. ಪ್ರಪ೦ಚದ ಶೇ. ೭೦ ರಷ್ಟು ಶಾಖಾಹಾರಿಗಳು ಭಾರತದಲ್ಲಿದ್ದರೂ, ಭಾರತದಲ್ಲಿ ಮಾ೦ಸಾಹಾರಿಗಳದೇ ಮೇಲುಗೈಯೂ ಹೌದು, ಮೇಲಾಗುತ್ತಿರುವ ಕೈಯೂ ಹೌದು. ನಮ್ಮಲ್ಲಿ ಎಷ್ಟು ಜನ ಹುಟ್ಟಲ್ಲದ ಕಾರಣದಿ೦ದ ಶಾಖಾಹಾರಿಗಳು? ನಿಮಗೇನಾದರೂ ಗೊತ್ತೇ?...ಇಲ್ಲಿಯ ಕೆಲಸಾಲುಗಳು.

ಲಂಡನ್ನಿನಲ್ಲಿ ಮುಂಗಾರು ಮಳೆ ಭಲ್ಲೆ ಭಲ್ಲೆ, ವಾತ್ಸಾಯನರೂರಿನಲ್ಲಿ ಐದು ರಾತ್ರಿ, ಶಿಶಿರದೊಂದು ಬೆಳಗು, ಕಾರಣ, ಅಡಿಸನ್ನನಿಗೊಂದು ನಮನ, ಆಮಿ ವೈನ್ ಹೌಸೂ ಮತ್ತವಳ ಬಿಳಿ ನೋಸೂ..ಮೊದಲಾದ ಚೆಲುಬರಹಗಳಿವೆ. ಓದಿ ಏನನ್ನಿಸಿತು ಹೇಳಿ. ಇವರ ಪಯಣಕ್ಕೆ ಹೊಸ ದಿಕ್ಕಾಗಬಹುದು. ಆಳಸುಳಿಗಳನ್ನು ಮೀರಿ ಪಯಣ ಮುನ್ನಡೆಯಬಹುದು.

ಹಾಳು ಮೂಳು ಅಂತೆ ಕಂತೆ

ಇಂದಿನ ಬ್ಲಾಗ್ ಜಗುಲಿಯಲ್ಲಿ ತಾವು ನಿವೃತ್ತ, ನಿಷ್ಕ್ರಿಯ ಅಂತ ಹೇಳಿಕೊಳ್ಳುತ್ತಲೇ ನವರತ್ನ ಸುಧೀರರು ಓದಲು ಖುಶಿ ಕೊಡುವ "ಹಾಳು ಮೂಳು ಅಂತೆ ಕಂತೆ"ಗಳನ್ನು ತಂದು ಕೆಡವಿದ್ದಾರೆ. ಹೇಗಿದ್ದರೂ ನಾವು ಜಂಕ್ ಫುಡ್ ತಿನ್ನುವುದರಲ್ಲಿ ನಿಷ್ಣಾತರು ಈ ಹಾಳು ಮೂಳೇನ್ಮಹಾ ಅಂತೀರಾ.. ಇಲ್ಲ ಇವು ಬುದ್ದಿಗೆ ಕಸರತ್ತು ಕೊಡುವ ಕಂತೆಗಳು. ಹಲವಾರು ಪ್ರಬುದ್ದ ಲೇಖನಗಳ ಅನುವಾದಗಳು, ಜಾಗತಿಕ ಸಾಮಾಜಿಕ ಚಿಂತನೆಗಳು, ವಿಸ್ಮಯದ ವಿಜ್ಞಾನ ವಿಶೇಷಗಳು, ಹೊಸ ಪುಸ್ತಕಗಳ ಓದು ಮತ್ತು ಪರಿಚಯ, ಪರಿಸರ, ನಮಗಿರಬೇಕಾದ ಸಾಮುದಾಯಿಕ ಜವಾಬ್ದಾರಿ ಮತ್ತು ಹೊಣೆಗಳು, ಸಾಹಿತ್ಯ, ರಂಗಭೂಮಿ, ಶಿಲ್ಪಕಲೆ ಮೊದಲಾದ ಆಸಕ್ತಿಕರ ವಿಷಯ ಪ್ರಬೇಧಗಳಿಲ್ಲಿವೆ.

ಸಕ್ಕರೆ ಕನ್ನಡದ ಸವಿ ಬರಹಗಳು ಓದಲು ಖುಶಿ ಕೊಡುತ್ತವೆ. ಇತ್ತೀಚಿನ ಬರಹ ವಲಸಿಗರ ಬಗ್ಗೆ ದ್ವೇಷವೇಕೆ - ಗುರುಚರಣ್ ದಾಸ್‌ರವರ ಇಂಗ್ಲಿಷ್ ಬರಹದ ಅನುವಾದ - ಒಂದು ಮುಕ್ತ ಮಾರುಕಟ್ಟೆಯಲ್ಲಿ ಬಂಡವಾಳದ ಹೊಳೆ ಆಕರ್ಷಕ ಪ್ರದೇಶಗಳಿಗೆ ಮಾತ್ರ ಹರಿಯುತ್ತದೆ. ಒಂದು ನಗರ ಅಥವಾ ರಾಜ್ಯ ಈ ಪರಿ ಆಕರ್ಷಕವೆನಿಸುವುದರಲ್ಲಿ ಒಂದು ಮುಖ್ಯ ಕಾರಣ ಉತ್ತಮ ಉತ್ಪಾದನಾ ಸಾಮರ್ಥ್ಯವುಳ್ಳ ಕೆಲಸಗಾರರ ಸುಲಭವಾಗಿ ದೊರಕುವಿಕೆ. ಹೊರಗಿನಿಂದ ವಲಸೆಬಂದ ಕಾರ್ಮಿಕರು ಸ್ಥಳೀಯ ಕಾರ್ಮಿಕರಿಗಿಂತ ಹೆಚ್ಚು ಆಸಕ್ತಿ ಮತ್ತು ಶ್ರಮವಹಿಸಿ ದುಡಿಯುತ್ತಾರೆಂಬುದು ನಮಗೆ ಎಷ್ಟೇ ಅಪ್ರಿಯವೆನಿಸಿದರೂ ಅಲ್ಲಗೆಳೆಯಲಾಗದ ಸತ್ಯ. ರಿಚರ್ಡ್ ಫ್ರೀಮನ್‍ನಂತಹ ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಿಗಳು ಹಾಗೂ ಮತ್ತಿತರರ ಸಂಶೋಧನೆಯ ಪ್ರಕಾರ ಯಾವ ಸಮಾಜ ಮತ್ತು ಸಂಸ್ಕೃತಿಗಳು ವಲಸಿಗರನ್ನು ಪ್ರೋತ್ಸಾಹಿಸಿ ತಮ್ಮದಾಗಿಸಿಕೊಳ್ಳುತ್ತವೆಯೋ ಅಂಥವು ಬೇರೆಲ್ಲ ಸಮಾಜಗಳಿಗಿಂತ ಬಹಳ ಮುಂದುವರೆದು ಏಳಿಗೆ ಸಾಧಿಸುತ್ತವೆ ಎಂದು ಪ್ರತಿಪಾದಿಸಲಾಗಿದೆ.

ರಾನ್ ಮುಯೆಕ್‌ನ ಅದ್ಭುತ ಶಿಲ್ಪ ಕಲೆ, ಯಾದ್‌ವ ಶೇಮ್ ನೇಮಿಚಂದ್ರರ ನೂತನ ಕಾದಂಬರಿಯ ಪರಿಚಯ, ನಿಮ್ಮ ಮಕ್ಕಳು ಬುದ್ಧಿವಂತರಾಗಬೇಕೆ?, ಮೈಸೂರು ಸ್ಮೆಲ್ಲಿಗೆ ಗಟ್ಟಿ ಹಿಡಿಯಿರಿ ಮೂಗನು, ನಮ್ ನಾಟ್ಕದ್ ಮೇಷ್ಟ್ರು ನಾರಾಯಣ ರಾವ್, ರಾಮೇಶ್ವರದಲ್ಲಿ ರಾಮಾಂಜನೇಯ ಸಂವಾದ, ತೂತಿನ ತುತ್ತೂರಿ, ಬಡವಾ ನೀ ಮಡಗಿದ ಹಾಂಗಿರು -ಒಂದು ತರಲೆ ಗುಬ್ಬಚ್ಚಿಯ ನೀತಿಕತೆ(ಅನುವಾದ) - ಮೊದಲಾದ ಆಸಕ್ತಿ ಹುಟ್ಟಿಸುವ ಕಂತೆಗಳು ಇಲ್ಲಿವೆ.

ತುಳಸೀವನ (೨೯-೩-೦೮)

ದಿನದ ಬ್ಲಾಗಿನ ಬೊಗಸೆಯಲ್ಲಿ ಶ್ರೀಮತಿ ತ್ರಿವೇಣಿ ಶ್ರೀನಿವಾಸರಾವ್ ಅವರ ತುಳಸೀವನ. ಸಾಹಿತ್ಯ ಬರಹಗಳಿಂದ ಸಮೃದ್ಧವಾಗಿರುವ ಈ ಸಾಂಸ್ಕೃತಿಕ ಅಂಗಳದಲ್ಲಿ ತ್ರಿವೇಣಿ ಅವರ ಕಥೆ, ಬರಹ ಹಾಗೂ ನೆನಪಿನ ಗುಚ್ಛಗಳಿವೆ. ಆನಂದಕಂದ, ಎಚ್.ಎಸ್.ವಿ, ಕುವೆಂಪು, ಕೆ.ಎಸ್.ನರಸಿಂಹಸ್ವಾಮಿ, ಚೆನ್ನವೀರ ಕಣವಿ ಎಲ್ಲರೂ ತುಳಸೀವನದ ಕವಿ-ಕಾವ್ಯ ಕಟ್ಟೆಯಲ್ಲಿ ನವಿರಾಗಿ ಹಾಡಿ ಹೋಗಿದ್ದಾರೆ. ಇತ್ತೀಚೆಗೆ ರಸಖುಷಿ ಕುವೆಂಪು ನೆನಪಿಗೆ ಸುಂದರವಾದ ಕವಿತೆ ಇದೆ. ಸರಳ ಹಾಗೂ ಸುಂದರ ಅಭಿವ್ಯಕ್ತಿಯ ತುಳಸಿ ದಳಗಳು ಸಾಂಸ್ಕೃತಿಕ ಸಾರವನ್ನೆಲ್ಲಾ ಹೀರಿಕೊಂಡು ಹಸಿರಾಗಿ ನಳನಳಿಸುತ್ತಿದೆ.

ಇತ್ತೀಚಿನ ಬರಹದಲ್ಲಿ ಸಾಲ ಎಂಬ ಸಣ್ಣ ಕಥೆ ಇದೆ. ಅಂತರ್ಜಾಲದ ವಿವಿಧ ಸಮುದಾಯಗಳಲ್ಲಿ ನಡೆಯುವ ಚರ್ಚೆ, ವಾದಗಳನ್ನು ಗಮನಿಸಿ ಚರ್ಚೆಗಳಿಂದೇನಾದೀತು? ಎಂಬ ಬರಹ ಚಿಂತನೆ ಹಚ್ಚುತ್ತದೆ. ನಾನಂತು ಚರ್ಚೆಗಳಿಂದ ದೂರವೇ ಇರಲು ಬಯಸುತ್ತೇನೆ. ನಿಮಗೆ ಚರ್ಚೆಗಳಿಂದ ನಿಜವಾಗಿ ಉಪಯೋಗವಿದೆ ಅನ್ನಿಸಿದರೆ ಆ ಬಗ್ಗೆಯೇ ಚರ್ಚಿಸಿ. ಆದರೆ ನನ್ನನ್ನು ಮಾತ್ರ ಚರ್ಚೆಗೆಳೆಯಬೇಡಿ. ಚರ್ಚೆಗೆ ನಾನಂತೂ ಸಿದ್ಧಳಿಲ್ಲ! ಎನ್ನುವ ಮನವಿಯೊಂದಿಗೆ ಲೇಖಕಿ ಈ ಬರಹವನ್ನು ಬ್ಲಾಗಿಸಿದ್ದಾರೆ.

ದೂರ.... ಬಹುದೂರ... ಉಡುಪಿಯ ಕಂಡಿರಾ? ಎಂಬ ಬನ್ನಂಜೆ ಗೋವಿಂದಾಚಾರ್ಯ ಅವರ ರಚನೆ,
ಸೋನು, ಫೋನು ಮತ್ತು ನಾನು, ನಿರಂತರ - ಬಿ. ಆರ್. ಲಕ್ಷ್ಮಣರಾವ್, ಬೆಳ್ಳಿ ಮೋಡಗಳು - ಹೃದಯವೆ ನಿನ್ನ ಹೆಸರಿಗೆ, ಎದೆಯು ಮರಳಿ ತೊಳಲುತಿದೆ - ಎಂ. ಗೋಪಾಲಕೃಷ್ಣ ಅಡಿಗ, ಮಾತಾಡ್ ಮಾತಾಡ್ ಮಲ್ಲಿಗೆ ಈ ಎಲ್ಲ ಬರಹಗಳು ಕನ್ನಡ ಕಂಪಿನಿಂದ ಬೀಗುತ್ತಿರುವ ತುಳಸೀವನದ ಚಿಗುರೆಲೆಗಳು.

ಬೆಟ್ಟದಡಿ (೨೮-೩-೦೮)

ದಿನದ ಬ್ಲಾಗಿನಂಗಳದಲ್ಲಿ ಬೆಟ್ಟದಡಿಯಿಂದ ಬಂದಿರುವ ಹರೀಶ್ ಕೇರ. ಕುಮಾರ ಪರ್ವತ, ಬಂಟಮಲೆ, ಪೂಮಲೆಗಳ ನಡುವಿನ ದಟ್ಟ ಕಣಿವೆಯಿಂದ ಹೊರಬಿದ್ದು ಇದೀಗ ಬರಹ ಮತ್ತು ಬದುಕಿನ ಉಲ್ಲಾಸ ವಿಷಾದಗಳ ಬೆಟ್ಟದಡಿಯಲ್ಲಿ - ಎಂಬುದು ಇವರ ಪರಿಚಯದ ಸಾಲು. ಹೆಸರು ಮತ್ತು ಪರಿಚಯದ ಸಾಲುಗಳೇ ಸೂಚಿಸುವಂತೆ ಇವರ ಹೆಚ್ಚಿನ ಬರಹಗಳು, ಕಾಡು,ಬೆಟ್ಟ, ಹಳ್ಳಿ ಮತ್ತು ಪರಿಸರದ ಹಲವು ನೋಟಗಳನ್ನೊಳಗೊಂಡಿವೆ. ಹಳ್ಳಿ ಮತ್ತು ನಗರದ ಬದುಕಿನ ನಲಿವು ನೋವುಗಳ ಅಭಿವ್ಯಕ್ತಿಯಿದೆ. ಓದಿದ ಪುಸ್ತಕ ಲೇಖನಗಳ ಬಗೆಗಿನ ವಿಶ್ಲೇಷಣೆ ಇಲ್ಲಿದೆ. ನೇರ ಮತ್ತು ಸರಳ ಅಭಿವ್ಯಕ್ತಿ ಎಲ್ಲ ಬರಹಗಳ ಗುಣವಿಶೇಷ. ಚಿಂತನೆಯ ಓದಿಗೆ ಗ್ರಾಸವಾಗುವ ಬರಹಗಳ ಕಣಿವೆಯ ದಾರಿಯಿದು.

ಇತ್ತೀಚಿನ ಬರಹದಿಂದ ಆಯ್ದ ಕೆಲಸಾಲುಗಳು - ಬದುಕು ಹಾಗೂ ಸಾವಿನ ನಡುವಿನ ಒಂದು ಅಲ್ಪವಿರಾಮದಂತಿದ್ದ ಈ ಮನೆ, ರೋಗಿಗಳ ಸುಖ ಹಾಗೂ ಸಂಕಟಗಳು ಜತೆಯಾಗುವ ಒಂದು ಸ್ಥಳವಾಗಿತ್ತು. "ನಮ್ಮ ತಂದೆಗೆ ಕ್ಯಾನ್ಸರ್. ಮನೆಗೆ ಕೊಂಡೋಗಿ ಅಂತ ಡಾಕ್ಟರ್ ಹೇಳಿದ್ದರು. ಇವರ ಮದ್ದಿನಲ್ಲಿ ಒಂದು ವರ್ಷದಿಂದ ಸುಖವಾಗಿದ್ದಾರೆ" ಎಂದು ಒಬ್ಬ ಹೇಳುತ್ತಾನೆ. ಪಕ್ಕದಲ್ಲಿ ನಿಂತ ಪೇಷೆಂಟ್‌ಗೆ ಅದು ಬರೀ ಮಾತಲ್ಲ, ಕಾರ್ಗತ್ತಲಲ್ಲಿ ಹೊಳೆಯುವ ಬೆಳ್ಳಿ ರೇಖೆ. ಹಾಗೇ, ಬರಿಯ ಬ್ಲಡ್‌ಪ್ರೆಶರ್ ಹೊಂದಿರುವಾತನಿಗೆ ಕ್ಯಾನ್ಸರ್ ರೋಗಿಯ ವೇದನೆಯ ಮುಂದೆ ತನ್ನದು ಏನೂ ಅಲ್ಲ ಎಂಬ ಅರಿವು. ಹಾಗೇ ಅದು ಎಲ್ಲರ ಒಡಲಲ್ಲೂ ಇದ್ದುಕೊಂಡು ಹೊಂಚು ಹಾಕುವ ಸಾವಿನ, ವೇದನೆಯ ಕಿಂಚಿತ್ ದರ್ಶನ. ನಗರಸಾಗರದಲ್ಲಿ ಹಳ್ಳಿಯ ನಡುಗಡ್ಡೆ, ಗುರುಪ್ರಸಾದ್ ಕಾಗಿನೆಲೆಯವರಿಗೊಂದು ಪತ್ರ, ರೊಟ್ಟಿ ಮದಿರೆ ಮಾನಿನಿ ಮತ್ತು ಕಾವ್ಯ, ಪುಟ್ಟ ಸ್ತನಗಳೂ-ದೊಡ್ಡ ದೇಶವೂ., ನ್ಯಾಯ, ಚಿರತೆ ಊರಿಗೆ ಯಾಕೆ ಬರುತ್ತೆ ಮೊದಲಾದ ಬರಹಗಳಿಂದ ಕೂಡಿದ ಅಕ್ಷರಕಣಿವೆ ಇದು ಎಂದು ಹೇಳಬಹುದು.

ಶ್ರೀನಿವಾಸ (೨೭-೩-೦೮)

ಇಂದಿನ ಬ್ಲಾಗ್ ಜಗುಲಿಗೆ ಬಂದಿರುವವರು ಶ್ರೀನಿವಾಸ ಬ್ಲಾಗಿನ ತ.ವಿ.ಶ್ರೀಯವರು. ಚಿತ್ರದುರ್ಗದಲ್ಲಿರುವ ತಳುಕು ಎಂಬ ಊರಿನವರಾದ ಲೇಖಕರು ಈಗ ಮುಂಬೈನ ರಿಸರ್ವ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದಾರೆ. ಮಹಾನಗರದ ಅನುಕೂಲಗಳು, ತಲ್ಲಣಗಳು, ಮನುಷ್ಯ ಸಂಬಂಧಗಳು, ಸಾಹಿತ್ಯ, ನೆನಪು, ಸಾಮಾಜಿಕ ಜವಾಬ್ದಾರಿ, ಪ್ರಗತಿಶೀಲತೆ, ಸಂಸ್ಕೃತಿ ಈ ಎಲ್ಲ ವಿಷಯಗಳ ಬಗ್ಗೆ ಸರಳವಾಗಿ ಬರೆದಿದ್ದಾರೆ. ಕನ್ನಡದ ಮೊದಲ ಕೆಲವು ಬ್ಲಾಗರ್‌ಗಳಲ್ಲಿ ಒಬ್ಬರಾದ ತವಿಶ್ರೀಯವರು ತೊದಲ್ನುಡಿಯ ಯುವಬ್ಲಾಗರ್‌ಗಳಿಗೆ ಹಿರಿಯಣ್ಣನಂತೆ ಸ್ಪಂದಿಸಿ, ವಯಸ್ಸಿನ ಅಂತರವಿಲ್ಲದೆ ಬೆರೆತು, ರಚನಾತ್ಮಕ ಬ್ಲಾಗ್ ಸಂವಾದಗಳಿಗೆ ಕಾರಣರಾಗಿದ್ದಾರೆ.

ಮರುಗಳಿಕೆ, ನಾವು ನಮ್ಮವರು, ಬ್ಲಾಗ್ ಆಕ್ಷನ್ ಡೇ, ಗಣಪತಿ ಪೂಜೆ, ಕನಕದಾಸರ ಒಂದು ಕೃತಿ, ರಜತೋತ್ಸವ, ಗೆಳೆಯರನೇಕರಿಗೆ ಕೋರಿದ ಅಕ್ಕರೆಯ ಶುಭಾಶಯಗಳು, ಬ್ಯಾಂಕಿನಲ್ಲಿ ರಜತೋತ್ಸವ, ರಥ ಸಪ್ತಮಿ, ಗೋಕುಲಧಾಮದಲ್ಲಿ ರಾತ್ರಿಯ ಶಿಬಿರ, ಮುಂಬಯಿ ಲೋಕಲ್ ಪ್ರಯಾಣ, ಅಂತರ್ಜಾಲದಲ್ಲಿ ಹರಿದಾಡುವ ವಿಕೃತ ಮನಸ್ಸು, ನೆಂಟಸ್ತಿಕೆ ಇತ್ಯಾದಿ ಎಲ್ಲ ಬರಹಗಳಲ್ಲೂ ಸಮನ್ವಯದ ಅಭಿಪ್ರಾಯಗಳು ಹಿತವೆನಿಸುವಂತೆ ಮೂಡಿವೆ.

ಇತ್ತೀಚಿನ ಬರಹ ಸಂತೃಪ್ತಿಯಲ್ಲಿ ಸರ್ಕಾರಿ ಕಚೇರಿಯ ಕಾರ್ಯವೈಖರಿ ಬಗ್ಗೆ ಬರೆದಿದ್ದಾರೆ.

ಸ್ವರಚಿತ (೨೬-೩-೦೮)

ಇಂದಿನ ಬ್ಲಾಗ್ ಬೊಗಸೆಯಲ್ಲಿ ಉಡುಪಿಯ ಷಣ್ಮುಖರಾಜ ಅವರ ಸ್ವರಚಿತ ಎಂಬ ಹೂಗುಚ್ಛ. ತಂತ್ರಜ್ಞಾನ ಕ್ಷೇತ್ರದಲ್ಲಿದ್ದುಕೊಂಡು ಕನ್ನಡದ ದೋಣಿಯಲ್ಲಿ ಹೊರಟ ಇನ್ನೊಂದು ಭಾವಯಾನವಿಲ್ಲಿದೆ. ನಾನು ಬೇರೇವ್ರ ತರಾ ಅಲ್ಲ, ಬನ್ನಿ ಹರಟೆಹೊಡೆಯೋಣ, ಓದಿ, ಓದಿಸಿ ಲೈಫ್ ನಿಮ್ಮದಾಗಿಸಿಕೊಳ್ಳಿ ಅಂತ ಟಿಪಿಕಲ್ ಮ್ಯಾನೇಜ್‌ಮೆಂಟ್ ಗುರು ತರಹ ಪರಿಚಯ ಹೇಳಿಕೊಂಡಿರುವ ಈ ಲೇಖಕರ ಬರಹಗಳು ಸುಲಭ ಕನ್ನಡದ ಲಘು ಓದಿಗೆ ಒದಗುತ್ತವೆ.

ಇತ್ತೀಚಿನ ಕವನ ಉಪದೇಶದಲ್ಲಿ ಓರಗೆಯವರಿಗೆ [?] ಉಪದೇಶ ಹೇಳಿದ್ದಾರೆ. ಪಾಡ್ ಕ್ಯಾಸ್ಟ್ಗಳು, ಹನಿಗವನಗಳು, ಹನಿಗತೆಗಳು, ಹರಟೆ. ಈ ಎಲ್ಲವನ್ನೂ ಬಳಸಿ ತಮ್ಮ ಮನದ ಲವಲವಿಕೆಯನ್ನು ಓದುಗರೊಡನೆ ಹಂಚಿಕೊಂಡಿದ್ದಾರೆ. ಹಕ್ಕಿಹಾಡು, ಹಳ್ಳಿಗೀತ, ಅವಳ ಕತೆ, ಹೋಳಿ ಶುಭಾಶಯ, ಆಲಮಟ್ಟಿ, ಉಪದೇಶ, ಹೀಗೆ ಸುಮ್ಮನೆ, ಗುಬ್ಬಚ್ಚಿ ಗೂಡಿನಲ್ಲಿ, ಮಾಯದ ಕಂಗಳ ಚೆಲುವೆ ಕೇಳು, ಬೆಟ್ಟದಾ ಮ್ಯಾಲೊಂದು ಟೆಂಟು ಹಾಕಿ, ಕೇಕು ಪುರಾಣ, ನನ್ ಮೇಸ್ಟ್ರು, ದೇವರೊಬ್ಬ ನಾಮ ಹಲವು, ತಾರೆ ಭುವಿಯ ಮ್ಯಾಲೆ, ಮೊದಲಾದ ಬರಹಗಳು ಓದಲು ಖುಶಿ ಕೊಡುತ್ತವೆ.

ಶಟರ್ ಬಗ್

ಇಂದಿನ ಬ್ಲಾಗ್ ಬೊಗಸೆಯಲ್ಲಿ ಮೂಡಿರುವುದು ಚಲನಚಿತ್ರದ ಚಲನೆಯ ವೇಗದಲ್ಲಿ ಬದುಕುತ್ತಿರುವ ಯುವ ಪ್ರತಿಭೆ ಅಭಯಸಿಂಹ ಅವರ ಶಟರ್ ಬಗ್. ಹಲವು ಇಂಗ್ಲಿಷ ಬರಹಗಳಿವೆ. ಹೆಚ್ಚಿನವು ಮಾಹಿತಿಪೂರ್ಣ ವಿಶ್ಲೇಷಣಾತ್ಮಕ ಕನ್ನಡ ಬರಹಗಳು. ತಮಗೆ ಪರಿಚಯವಿರುವ ಮಾಧ್ಯಮ ಕ್ಷೇತ್ರದ ಬಗೆಗಿನ ಎಲ್ಲ ಬರಹಗಳೂ ಸ್ಪಷ್ಟತೆ ಮತ್ತು ಸೂಕ್ಷ್ಮತೆಯಿಂದ ಮಿಂಚುತ್ತವೆ. ವಿಚಾರಗಳನ್ನು ಕ್ಲಿಕ್ಕಿಸಿದಂತಿರುವ ಈ ಬರಹಗಳ ಫ್ರೇಮಿಂಗ್ ವಿಶಿಷ್ಟವಾಗಿದೆ. ಛಾಯಾಚಿತ್ರ ಮತ್ತು ಚಲನಚಿತ್ರಗಳ ತಾಂತ್ರಿಕತೆ ಮತ್ತು ಅಭಿವ್ಯಕ್ತಿಯ ಬಗ್ಗೆ ವಿವರವಾದ ಬರಹಗಳಿಲ್ಲಿವೆ.

ಚಿತ್ರ ಹಾಗೂ ಧ್ವನಿ ಸರಣಿಗಳು - ಒಂದು ವಿಡಿಯೋದ ಚಿತ್ರ ಹಾಗೂ ಧ್ವನಿ ಸಂಯೋಜನೆಯ ತಾಂತ್ರಿಕತೆಗಳನ್ನು, ಈ ಬಗ್ಗೆ ಲಭ್ಯವಿರುವ ಹಲವಾರು ಮಾಹಿತಿಗಳನ್ನು ಒದಗಿಸುತ್ತವೆ. ಮೊದಲ ಭಾಗದಿಂದ ಕೆಲಸಾಲುಗಳು ನಿಮ್ಮ ಓದಿಗಾಗಿ: ನಮ್ಮೆಲ್ಲಾ ಅನುಭವಗಳು ಪಂಚೇಂದ್ರಿಯಗಳಿಂದಾಗುತ್ತವೆ ಎನ್ನುವುದು ಸರಿಯಷ್ಟೇ. ಸಿನೆಮಾವೊಂದಕ್ಕೆ ಕಣ್ಣು ಹಾಗೂ ಕಿವಿ ಈ ಎರಡು ಇಂದ್ರಿಯಗಳ ಮೂಲಕ ನಮ್ಮನ್ನು ತಟ್ಟಲು ಸಾಧ್ಯವಿದೆ. (ಸಧ್ಯಕ್ಕೆ) ಇವೆರಡೂ ನಮ್ಮಲ್ಲಿ ಉಂಟುಮಾಡುವ ತಾತ್ಕಾಲಿಕ ಅನುಭವಗಳ ಸರಣಿಯೆ ಒಂದು ಸಿನೆಮಾ ಆಗಿದೆ.

ಕೆಲವು ಚಿತ್ರಗಳು ಕೇವಲ ಕಣ್ಣುಗಳ ಮೂಲಕ ನಮ್ಮನ್ನು ತಟ್ಟಿದರೆ, ಇನ್ನು ಕೆಲವು ಕೇವಲ ಧ್ವನಿಯ ಮೂಲಕ. ಒಬ್ಬ ಸಮರ್ಥ ನಿರ್ದೇಶಕ ಇವುಗಳ ಸಂಯೊಜನೆಯನ್ನು ಜಾಣ್ಮೆಯಿಂದ ಮಾಡಿಕೊಂಡಾಗ, ಇವೆರಡೂ ನಿರ್ದಿಷ್ಟ ಅನುಭವಗಳನ್ನು ಕೊಡುವುದರಿಂದಾಗಿ ಚಿತ್ರವು ಕೆಲವೆಡೆ ಕಿವಿಗಳ ಮೂಲಕವೂ ಇನ್ನು ಇತರೆಡೆ ದೃಶ್ಯದ ಮೂಲಕವೂ ನಮ್ಮನ್ನು ತಟ್ಟುತ್ತದೆ. ಇವೆರಡರ ಪ್ರಯೋಗದಿಂದಲೂ ಉತ್ಪನ್ನವಾಗುವ ಭಾವನೆಗಳು, ಅದರ ತೀವ್ರತೆ ಭಿನ್ನವಾದದ್ದರಿಂದ ನಿರ್ದೇಶಕ ತಾನು ಹೇಳಬಯಸುವ ಭಾವನೆಯನ್ನು ಸಮರ್ಥವಾಗಿ ಹೇಳುವ ಮಾಧ್ಯಮವನ್ನು ಆಯಾ ಸಂದರ್ಭದಲ್ಲಿ ಪ್ರಮಾಣಾನುಸಾರ ಬಳಸಿಕೊಳ್ಳುತ್ತಾನೆ ಎನ್ನುವ ಅಭಯಸಿಂಹ ಈಗ ತಾವೇ ಹೊಸದಾಗಿ ತಯಾರಿಸುತ್ತಿರುವ ಗುಬ್ಬಚ್ಚಿಗಳು ಚಿತ್ರದ ಕೆಲಸದಲ್ಲಿ ನಿರತರಾಗಿದ್ದಾರೆ.

ವಕ್ರದಂತ (೨೪-೩-೦೮)

ಇಂದಿನ ಬ್ಲಾಗಿನಂಗಳದ ತೇರು ವಕ್ರವಾಗಿ ಯೋಚಿಸದಿರುವುದು ಅಪರಾಧ ಎಂದು ನಂಬಿರುವ, ಸುತ್ತಲ ಓರೆಕೋರೆಗಳ ಬಗ್ಗೆ ಬರೆಯುವ ವಿನಾಯಕಭಟ್ಟರ "ವಕ್ರದಂತ". ವೃತ್ತಿಯಿಂದ ಪತ್ರಕರ್ತರಾದ ಲೇಖಕರು ಮಂಗಳೂರಿನಲ್ಲಿ ಕುಳಿತು ಕರಾವಳಿಯ ಚುರುಕು ಮುಟ್ಟಿಸುವ ಬರಹಗಳನ್ನು ಲಘು ಹಾಸ್ಯ ಮತ್ತು ಅಭಿಪ್ರಾಯಗಳನ್ನು ಹದವಾಗಿ ಕಲಸಿ ಕೊಟ್ಟಿದ್ದಾರೆ.

ಇತ್ತೀಚಿನ ಬರಹ ‘ಅಂಚಿ ಇಂಚಿ ಎಲ್ಲಿಹೋದರೂ ಬೇಕು ಸಂಚಿಯಲ್ಲಿ' ಕರಾವಳಿ ಮತ್ತು ಮಲೆನಾಡಿನ ಜನಜೀವನದ ಕುರುಹಾದ ಎಲೆ ಅಡಿಕೆಯ ಸಂಚಿಯ ಬಗ್ಗೆ ಬರೆದಿದ್ದಾರೆ. ಮಂಜು ಮುಸುಕಿದ ದಾರಿಯಲ್ಲಿ, ಹೆಂಡತಿಗೂ ನದಿಯ ಗುಂಗು, ಹಿಡಿವ ಬಸ್ಸು ಬಿಟ್ಟು-ಬಿಡುವ ಬಸ್ಸು ಹಿಡಿದು, ಮನಸು ಮರೆಯದ ಮುನಾರ್, ಮೂರೂರು ಎಂಬ ಸದಾ ಚಟುವಟಿಕೆಯ ಊರು, ಚುಕು ಬುಕು ಚುಕು ಬುಕು ರೈಲೇ,ಹೊಂಗನಸು ಅಲ್ಲವಿದು ಕೆಟ್ಟ ಕನಸು, ಕಾವಲು ನಾಯಿ ಕಳವು, ಬಲ್ಲಾಳ್ ಭಾಗ್ ನಲ್ಲೊಂದು ಭೂತ ಬಾಧೆ, ಟಿಕ್ಲಿ ಕುಂಕುಮ ನುಂಗಿತ್ತ, ಲೌ ಅಟ್ ಲಾಸ್ಟ್ ನೈಟ್, ರಾಷ್ಟ್ರಪತ್ನಿ?!, ಅವ್ವ-ಯವ್ವಾ ಯವ್ವಾ ಎಷ್ಟು ಚೆನ್ನಾಗೈತವ್ವ.. ಇತ್ಯಾದಿ ತಲೆಬರಹಗಳೇ ಕುತೂಹಲ ಹುಟ್ಟಿಸಿ ಓದಿನ ಜಗುಲಿಗೆ ಎಳೆದೊಯ್ಯುತ್ತವೆ.

ಆಗಸೆಯ ಅಂಗಳ (೨೨-೩-೦೮)

ದಿನದ ಬ್ಲಾಗಿನ ಬೊಗಸೆಯಲ್ಲಿ ಆಗಸೆಯ ಅಂಗಳ. ಮೂಲತಃ ಕಾರವಾರ ಜಿಲ್ಲೆಯ ಕುಮಟಾ ತಾಲೂಕಿನ ಅಘನಾಶಿನಿ ಗ್ರಾಮದವರಾದ ವಿನಾಯಕ ಪಂಡಿತ್ ಈಗ ದಿಲ್ಲಿಯಲ್ಲಿ ಮಾಹಿತಿ ತಂತ್ರಜ್ಞಾನದ ಪ್ರಯೋಗಾಲಯದಲ್ಲಿ ಸಂಶೋಧಕರಾಗಿದ್ದಾರೆ. ತಮ್ಮೂರಲ್ಲೇ ಸಮುದ್ರವಿರುವುದರಿಂದ ಅದೇ ಜಗತ್ತಿನ ಕೊನೆಯೇನೋ ಅನಿಸುತ್ತದೆ ಎನ್ನುವ ಇವರು, ಕಾವ್ಯಾತ್ಮಕವಾಗಿ ಕುಮಟೆಯ ಮುಂದಿರುವುದೆಲ್ಲಾ ನಮ್ಮನೆಯ ಅಂಗಳ ಎನ್ನಬಹುದು ಎಂದು ತಮ್ಮ ಮೊದಲ ಮಾತಿನಲ್ಲಿ ಹೇಳಿದ್ದಾರೆ. ಹೀಗೆ ಬೆಳೆದಿರುವ ತಮ್ಮ ದೃಷ್ಟಿಕೋನದ ಅನಿಸಿಕೆಗಳನ್ನು ಇಲ್ಲಿಡಬಹುದು. ಅದಕ್ಕೇ ಈ ತಾಣಕ್ಕೆ ಅಗಸೆಯ ಅಂಗಳ ಎಂದು ಹೆಸರಿಟ್ಟಿದ್ದೇನೆ ಎನ್ನುತ್ತಾರೆ.

ಜಗತ್ತನ್ನು ಅಘನಾಶಿನಿಯ ತುಲನೆಯಲ್ಲಿ ನೋಡುತ್ತಿದ್ದ ಬಾಲ್ಯ ಸಹಜ ಕುತೂಹಲ ಹಾಗೂ ಬೆರಗು ಇಲ್ಲಿನ ಕೆಲವು ಲೇಖನಗಳಲ್ಲೂ ಕಾಣಬಹುದು. ಇತ್ತೀಚಿನ ಲೇಖನವಾದ ಕೋಡಗನ ಕೋಳಿ ನುಂಗಿತ್ತ!- ಶರೀಫರ ಪದ್ಯದ ಅದ್ಭುತ ಕಾವ್ಯಶಕ್ತಿಯ ಬಗ್ಗೆ ಬರೆದಿದ್ದಾರೆ. ಒಣಗಿದ ಅಂಗಳ ಎಂಬ ಲೇಖನದಲ್ಲಿ ಉತ್ತರ ಭಾರತದ ಬಿಸಿಲ ಧಗೆಯ ಬಗ್ಗೆ ವಿವರವಿದೆ. ಪ್ರಾಚಾರ್ಯ ಕಟ್ಟಾ ಮೂರ್ತಿಗಳು, ಕುರೋಸಾವಾರ ಚಿತ್ರಗಳು, ರಾಬರ್ಟ್ ಮುಸಿಲ್-ರ ಒಂದು ಪ್ರಬಂಧ, ಬೆನೆಗಲ್-ರ ಬಗ್ಗೆ ನಡೆಯುತ್ತಿರುವ ಚರ್ಚೆಯ ಕುರಿತು ಬರೆದ ಲೇಖನಗಳು ಮಾಹಿತಿಪೂರ್ಣವಾಗಿದೆ.

ಬಹುಮುಖಿ (೨೧-೩-೦೮)

ಇಂದಿನ ಬ್ಲಾಗಿನಂಗಳದಲ್ಲಿ ಪತ್ರಕರ್ತ ನಾಗೇಂದ್ರ ತ್ರಾಸಿ ಅವರ ಬಹುಮುಖಿ ಪ್ರತಿಭೆ. ವೆಬ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿರುವ ಲೇಖಕರಿಗೆ ಬರಹ ಮತ್ತು ಪತ್ರಿಕೋದ್ಯಮವೆಂದರೆ ತುಂಬ ಪ್ರೀತಿ. ಯಾವುದೇ ತತ್ವ, ಸಿದ್ದಾಂತಗಳಿಗೆ ಕಟ್ಟು ಬೀಳದ ವಾಸ್ತವವಾದಿ ಪತ್ರಕರ್ತನೆಂದು ಹೇಳಿರುವ ಅವರು ತಮ್ಮ ಬರಹಗಳಲ್ಲೂ ಇದನ್ನೇ ಮರುದ್ವನಿಸಿದ್ದಾರೆ. ಕಲೆ, ಸಂಸ್ಕೃತಿ, ಸುತ್ತಲ ವಿದ್ಯಮಾನ, ಸಾಮಾಜಿಕ ಕಳಕಳಿ, ವ್ಯಕ್ತಿ ವಿಶೇಷ, ಸೌಹಾರ್ದತೆ, ಚಾರಣ ಕಥನ, ಪರಿಸರ, ಇತಿಹಾಸ, ಹೀಗೆ ವಿಷಯ ವೈವಿಧ್ಯ ಹೊಂದಿರುವ ಅವರ ಬ್ಲಾಗ್ ಮಾಹಿತಿಪೂರ್ಣ ಬರಹಗಳಿಂದ ಶೋಭಿಸುವ ಬಹುಮುಖೀ ಸಾಹಿತ್ಯ.

ಇತ್ತೀಚೆಗೆ ಬರೆದಿರುವ ಬರಹ ಚಂಡೆಮದ್ದಳೆ ಗುಂಗಿನಲ್ಲಿ ಎಂಬ ಲೇಖನದಲ್ಲಿ ಯಕ್ಷಗಾನವೆಂಬ ಜನಪದ ಮಾಯಾಲೋಕದ ಬಾಲ್ಯದ ನೆನಪು ಮತ್ತು ಇಂದಿನ ಪರಿಸ್ಥಿತಿಗಳಿಗೆ ಕನ್ನಡಿ ಹಿಡಿದಿದ್ದಾರೆ. ಹೇಗೆ ನಮ್ಮೆಲ್ಲ ಆವಿಷ್ಕಾರಗಳೂ ಮತ್ತು ಓಟದ ಬದುಕು ಒಂದು ಸಮೃದ್ಧ ಕಲಾಪ್ರಕಾರವನ್ನೂ ಮೂಲೆಗೊತ್ತಿಬಿಡುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ ಈ ಬರಹ. ರಾಜ್ಯ ರಾಜಕೀಯದ ತ್ರಿಶಂಕು ಸ್ಥಿತಿ, ಮಹಿಳೆಯರು ಎಷ್ಟು ಸುರಕ್ಷಿತ, ಮುನಿಯಾಲ್ ಎಂಬ ಅಲೆಮಾರಿ, ಧರ್ಮ ಬೆಳಕು ನೀಡಬೇಕು-ಹಿಂಸೆಯನ್ನಲ್ಲ, ಆದರ್ಶ ಸಮಾಜದ ಬೆನ್ನೇರಿ ಹೊರಟವರು, ಬನ್ನಿ ಅಭಯಾರಣ್ಯಕ್ಕೆ, ಶಾಸಕರೊಬ್ಬರ ಅಜ್ಞಾತವಾಸ ಕಥನ, ತೆಹೆಲ್ಕಾ ಸೃಷ್ಟಿಸಿದ ಕೋಲಾಹಲ ಇತ್ಯಾದಿ ಲೇಖನಗಳು ಚಿಂತನೆಗೆ ಹಚ್ಚುತ್ತವೆ.

ಅಂತರಗಂಗೆ (೨೦ -೩-೦೮)

ಇಂದಿನ ಬ್ಲಾಗಿನಂಗಳದಲ್ಲಿ ಕೋಲಾರದ ಡಾ. ಜೆ.ಬಾಲಕೃಷ್ಣ ಅವರ ಅಂತರಗಂಗೆ. "ಬರದ ಬೇಗೆಯ ನನ್ನೂರಿನಲ್ಲಿ ಸದಾ ಜುಳುಜುಳುಗುಟ್ಟುವ ಗುಪ್ತಗಾಮಿನಿ ಅಂತರಗಂಗೆ. ವಿಜ್ಞಾನದ ವಿಶ್ಲೇಷಣೆಗಳೇನೇ ಇರಲಿ ಬಾಲ್ಯದಲ್ಲಿ ನಿಗೂಢತೆಯನ್ನು ಸೃಷ್ಟಿಸಿದ್ದ ಆ ನಿಸರ್ಗದ ಮಡಿಲ ಹೆಸರನ್ನು ತಮ್ಮ ಬ್ಲಾಗಿಗೆ ಇಟ್ಟುಕೊಂಡಿರುವ ಈ ಲೇಖಕರ ಕೆಲವು ಕತೆಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಸರಳ ಮತ್ತು ಸುಲಭ ಕನ್ನಡ, ಮಾಹಿತಿ, ಪರಿಸರ ಪ್ರೀತಿ, ಅನುಭವ ವಿಶೇಷಗಳು ಇವರ ಎಲ್ಲ ಬರಹಗಳಲ್ಲೂ ಸಮೃದ್ಧವಾಗಿ ವ್ಯಕ್ತವಾಗಿವೆ. ಪ್ರವಾಸದ ಅನುಭವಗಳು, ಓದಿದ ಪುಸ್ತಕಗಳ ವಿಮರ್ಶೆ, ಸುತ್ತಲ ಗ್ಲೋಬಲ್ ವಿದ್ಯಮಾನ, ಕವಿತೆ, ಕತೆಗಳು, ವ್ಯಕ್ತಿ ಪರಿಚಯ, ಸಾಹಿತ್ಯ ಸಂವಾದ, ಛಾಯಾಚಿತ್ರ ಹೀಗೆ ಎಲ್ಲ ಬಗೆಯ ಬರಹಗಳಿಲ್ಲಿವೆ. ಇತ್ತೀಚಿನ ಬರಹದಲ್ಲಿ ಮಯೂರದಲ್ಲಿ ಪ್ರಕಟವಾಗಿರುವ ಅವರ ಕಥೆ "ಡೆತ್ ಸರ್ಟಿಫಿಕೇಟ್" ಇದೆ. ಅಮೆರಿಕ ಭಾರತ ಪರಮಾಣು ಒಪ್ಪಂದ-ಚೋಮ್ ಸ್ಕಿ ನಿಲುವು,ನಿಸರ್ಗ ಪ್ರೇಮಿ ಕಲಾವಿದ ಡಾ. ಎಸ್.ವಿ.ನರಸಿಂಹನ್, ಹಾರುವ ಮನಸ್ಸುಗಳೂ ಮತ್ತು ಲೋಹದ ಪಕ್ಷಿಗಳು, ಸರ್ಕಸ್ಸಿನ ಹುಡುಗಿ, ಹಿಂದೂ ದೇವರು ಮುಸಲ್ಮಾನ ದೇವರು, ಶಾಲಭಂಜಿಕೆ -ಲೇಖಕ ಓದುಗ ಸಂವಾದ, ಮೊದಲಾದ ಉತ್ತಮ ಬರಹಗಳ ಒಟ್ಟು ಹರಿವು ಇಲ್ಲಿದೆ.

ಮನದನಿ (೧೯-೩-೦೮)

ಇಂದಿನ ಬ್ಲಾಗಿನಂಗಳದಲ್ಲಿ ಸಿದ್ದಾರ್ಥ ಅವರ ಮನದನಿ. ಮೂರು ಸಾಗರ ನೂರು ಮಂದಿರ ದೈವ ಸಾಸಿರವಿದ್ದರೆ; ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿಹಿಮಾಲಯವಿದ್ದರೆ; ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ; ಏನು ಸಾರ್ಥಕ ಮನೆಯ ಜನರೆ ಮಲಗಿ ನಿದ್ರಿಸುತಿದ್ದರೆ... ಎಂದು ತನ್ನ ಪರಿಚಯದ ಜೊತೆಗೆ ಹಾಕಿರುವ ಸ್ತುತಿನಿಂದೆಯನ್ನು (ಸ್ತುತಿ ವಿಡಂಬನೆ.. :) ಓದಿದರೆ, ಲೇಖಕರ ದನಿಯ ಶೃತಿ ಏನಿರಬಹುದು ಎಂಬ ಸುಳಿವು ಚೂರು ಸಿಗುತ್ತದೆ. ದನಿಯ ಹಲವು ಉಲಿಗಳನ್ನು, ರಾಗದೆಳೆಗಳನ್ನು ಕೇಳಲು ಇಲ್ಲಿರುವ ಎಲ್ಲ ಆಸಕ್ತಿಕರ ಬರಹಗಳನ್ನು ಓದಲೇಬೇಕು. ಹೇಳಲೇಬೇಕಾದ ಬಹಳಷ್ಟು ಸಂಗತಿಗಳು ಮನಸಿನಲ್ಲೇ ಉಳಿದುಕೊಂಡಾಗ ಇಲ್ಲಿ ಗೀಚಿ, ಆ ಗೀಚುವಿಕೆಯಿಂದ ಚಿತ್ತಾರ ಮೂಡಿಬರಲು ಕಾಯುತ್ತಿದ್ದಾರೆ.

ಹಾಸ್ಯ ಮತ್ತು ವಿಡಂಬನೆಯನ್ನ ಸೀರಿಯಸ್ಸಾಗಿ ?! ಬರೆದವರು ಕಡಿಮೆ. ಇವರು ಆ ಖಾಲಿ ಜಾಗವನ್ನು ಸಮರ್ಥವಾಗಿ ತುಂಬುವ ಎಲ್ಲ ಲಕ್ಷಣಗಳೂ ಇವೆ. ಇನ್ನೊಂದಿಷ್ಟು ಓದು, ಸುತ್ತಲ ಜಗತ್ತಿನ ಆಳ ತಿಳುವಳಿಕೆಯನ್ನ ಗಳಿಸಿಕೊಳ್ಳುತ್ತಾ ಇದೇ ಶೈಲಿಯನ್ನ ಉತ್ತಮಪಡಿಸಿಕೊಂಡರೆ ಇನ್ನೂ ಉತ್ತಮ ಬರಹಗಳ ಭರವನೆಸೆಯಿಡಬಹುದು. ಇತ್ತೀಚಿನ ಬರಹ ಬಿಡಿಸೋ ಸಿಗ್ನಲನು ಮಾಮ.. ಬೆಂಗಳೂರಿನ ಟ್ರೇಡ್ ಮಾರ್ಕ್ ಆಗಿರುವ ಟ್ರಾಫಿಕ್ ಬಗ್ಗೆ ಇದೆ. ಜನಪ್ರಿಯ ಚಿತ್ರಗೀತೆ ಪೂಜಿಸಲೆಂದೆ ಹೂಗಳ ತಂದೆ ಧಾಟಿಯಲ್ಲಿ ಬರೆದ ಕವಿತೆ ಟ್ರಾಫಿಕ್ ಗೋಜಲನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದೆ.

ಆಪರೇಶನ್ ಮಾವಿನ್ ಕಾಯಿ, ಶ್..ಅಣ್ಣಾವ್ರು ಮಲಗವ್ರೆ, ಅಮ್ಮಳಲ್ಲಿಲ್ಲದ ವಿಶೇಷತೆ ಮಮ್ಮಿಯಲ್ಲೇನಿದೆ, ಬಸ್ಸು ಸಾಗಲಿ ಮುಂದೆ ಹೋಗಲಿ, ಬದುಕೆಂಬ ಗಣಿತವನ್ನು ಬಿಡಿಸಿದವರು, ನಾನಿರುವುದೆ ನಿಮಗಾಗಿ ಮೊದಲಾದ ಲಘು ಬರಹಗಳಿಂದ ಸಂಪನ್ನವಾದ ಈ ಬ್ಲಾಗ್ ಓದಿದವರ ಮನದ ಬಿಗುವನ್ನು ಕಳೆಯುತ್ತದೆ.

ಅಮೆರಿಕೆಯಿಂದ ಅವಲೋಕಿಸುವ (೧೮-೩-೦೮)

ಇಂದಿನ ಬ್ಲಾಗ್ ಜಗುಲಿಗೆ ಅಮೆರಿಕೆಯಿಂದ ಅವಲೋಕಿಸುವ ರವಿ ಹಂಜಗಿಮಠ್ ಬಂದಿದ್ದಾರೆ. ಚುರುಕು ದೃಷ್ಟಿ, ಮೊನುಚು ಭಾಷೆಯಿಂದ ಕೂಡಿದ ಇವರ ಬರಹಗಳು ಪೂರ್ವಾಗ್ರಹ ಎನಿಸದೆ ಇಷ್ಟವಾಗುತ್ತದೆ. ಹೆಚ್ಚಿನವು ನಮ್ಮ ಸುತ್ತಲಿನ ಆಗುಹೋಗುಗಳ ಸೂಕ್ಷ್ಮ ಅವಲೋಕನವೇ ಆಗಿದೆ. ಲಿಂಕನ್ನಿನ ನಾಡಿನಲ್ಲಿ ಕೂತು ಕನ್ನಡಿಗನ ಅಭಿಪ್ರಾಯಗಳನ್ನ ನೀಡುವುದು ಇವರ ಉದ್ದೇಶ.

ಕನ್ನಡದ ದಡ್ಡ-ದಡ್ದಿಯರಿಗೆ ಅಂತ ಬಹು ಬಳಕೆಯ ಕ್ಲೀಷೆಯನ್ನು ಅಡಿಬರಹಕ್ಕೆ ಕೊಟ್ಟಿದ್ದಾರಾದರೂ, ಎಲ್ಲರೂ ಓದಬಹುದಾದ ಬರಹಗಳಿವೆ ಇಲ್ಲಿ. ಇತ್ತೀಚಿನ ಬರಹ "ಹರೇ ಹರೇ ಕೃಷ್ಣ ಕೃಷ್ಣ! ಅಲ್ ಲಾಹ್ ಹು ಅಕ್ಬರ್!" ನಲ್ಲಿ ಧರ್ಮವೆಂಬ ಅಫೀಮನ್ನು ಹೇಗೆ ಯುವಜನತೆಗೆ ಮತೀಯ ಅಥವಾ ಸೈದ್ಧಾಂತಿಕ ಸಂಸ್ಥೆಗಳು ಭೋಧಿಸುತ್ತಿವೆ ಎಂಬುದನ್ನ ಸರಳವಾಗಿ, ವಿಷದವಾಗಿ, ಸ್ವಂತ ಅನುಭವಗಳ ಮೂಲಕ ಬರೆದಿದ್ದಾರೆ.

ಭಾರತದ ರಿಯಲ್ ಎಸ್ಟೇಟೂ ಅಮೆರಿಕಾದ ರಿಸೆಷನ್ನೂ, ಗೆಂಡೆತಿಮ್ಮನ ಪ್ರಸಂಗವೂ-ಪಡುವಾರಹಳ್ಳಿಯ ಹುಚ್ಚಿಯೂ, ಯೇ ಕಚ್ಚರಾ ಲೋಗ್ ಹೈ, ಪರಿಸರ ಪ್ರಜ್ಞ್ನೆ ಮತ್ತು ನಮ್ಮ ಮೌಢ್ಯ, ಜಾತ್ಯತೀತತೆಯಲ್ಲಿ ಜಾತಿಪೀಠಗಳು, ದಾವಣಗೆರೆಯ ಹಂದಿಗಳೂ ಮತ್ತದರ ಆಕಾಶದಲ್ಲಿನ ಗಿಳಿಗಳೂ, ದಿಕ್ಕೆಟ್ಟ ರೈತರೂ ಔಷಧೀಯ ಬೆಳೆಗಳೂ, ಗ್ರಾಮವಾಸ್ತವ್ಯದ ಗ್ರಾಮಸಿಂಹ, ಮೊದಲಾದ ತೀಕ್ಷ್ಣವಾದ ಬರಹಗಳಿವೆ. ಓದಿನ ಖುಷಿಯೊಂದಿಗೆ ವಿಚಾರದ ಪರಿಧಿಯೊಳಕ್ಕೂ ಇವು ನಮ್ಮನ್ನು ಕರೆದೊಯ್ಯುತ್ತವೆ.

ನೀರದಾರಿಯ ಹೆಜ್ಜೆ (೧೭-೩-೦೮)

ಇಂದಿನ ಬ್ಲಾಗಿನಂಗಳದಲ್ಲಿ ಮೂಡಿರುವುದು ಅರುಣ್ ಮಣಿಪಾಲ್ ಅವರ ನೀರದಾರಿಯ ಹೆಜ್ಜೆ. ಖಾಲಿ ಕಾಗದದಂತಿರುವೆ ಎನ್ನುತ್ತಿರುವ ಈ ಯುವ ಕವಿ ಕಾಗದದ ತುಂಬ ಭಾವನೆಗಳ ಚಿತ್ತಾರ ಮೂಡಿಸುತ್ತಿದ್ದಾರೆ. ಒದ್ದೆ ಹೆಜ್ಜೆಗಳ ಆರ್ದ್ರತೆಯನ್ನ ಅಕ್ಷರಕ್ಕಿಳಿಸಿದ್ದಾರೆ.

ಇತ್ತೀಚಿನ ಕತೆ ‘ಹಲ್ಲಿ ಕತೆಯೊಂದು..' ಊರ ಹೊರಗಿನ ಗುಡಿಸಲ ಜೀವವೊಂದರ ಪಾಡನ್ನು ಸೂಕ್ಷ್ಮವಾಗಿ ಚಿತ್ರಿಸಿದ ಬರಹ. ಮಳೆಯ ಹುಡುಗಿಗೆ ಎಂಬ ಆಪ್ತ ಕವಿತೆಯಲ್ಲಿ ಹೀಗೆ ಹೇಳುತ್ತಾರೆ:
ಮಲೆನಾಡ ಹಾದೀಲಿ ಮಳೆ ಬಂತು ಚೆನ್ನಿಗೆ
ನೆನೆದು ಕುಣಿಯೋಣ ಬಾರೆ..
ಗುಡುಗಂತೆ ಮಿಂಚಂತೆ ತಂಪಿನ ಹನಿಯಂತೆ
ಮಳೆಯಲ್ಲಿ ಮಳೆಯಾಗು ಬಾರೆ..

ಪುಟ್ಟ ಕತೆ, ಕವಿತೆ, ಕಾಗದ ದೋಣಿ..ಎಲ್ಲ ಇಟ್ಟುಕೊಂಡು ನೀರದಾರಿಯಲ್ಲಿ ಹೆಜ್ಜೆ ಮೂಡಿಸುತ್ತ ಸಾಗುತ್ತಿರುವ ಈ ಪ್ರತಿಭೆ ಭರವಸೆ ಮೂಡಿಸುತ್ತಾರೆ. ಇತ್ತೀಚೆಗಷ್ಟೇ ಪ್ರಾರಂಭಗೊಂಡಿರುವ ಇವರ ಬ್ಲಾಗ್ ಇನ್ನು ಬಹುದೂರ ಸಾಗಲಿ.

ನಮ್ ಟೀಮ್ ಶಿವಮೊಗ್ಗ (೧೫ -೩-೦೮)

ಇಂದಿನ ನಮ್ಮ ಬ್ಲಾಗಿನಂಗಳದಲ್ಲಿ ರಂಗಸ್ಥಳ ಮತ್ತು ನಾಟಕಕ್ಕೆ ಮೀಸಲಾದ ಶಿವಮೊಗ್ಗೆಯ ಹವ್ಯಾಸಿ ಸಮುದಾಯದ ಬ್ಲಾಗ್- ನಮ್ ಟೀಮ್ ಶಿವಮೊಗ್ಗ. ಶಿವಮೊಗ್ಗದ ರಂಗಚಟುವಟಿಕೆಗಳ ಕೇಂದ್ರಬಿಂದುವಾಗಿ ರೂಪುಗೊಂಡಿದೆ ಈ ಹವ್ಯಾಸಿ ತಂಡ. ಕಳೆದ ಎಂಟು ವರ್ಷಗಳಿಂದ ಇಲ್ಲಿಯವರೆಗೆ ೪೩ ನಾಟಕಗಳನ್ನ ಕನ್ನಡ ಜನಮನಕ್ಕೆ ಹತ್ತಿರವಾಗಿಸಿದ ಸಾಧನೆ ಈ ತಂಡದ್ದು.

ನಾಡಿನ ವಿವಿಧ ನಾಟಕ ತಂಡಗಳನ್ನು ಆಹ್ವಾನಿಸಿ ನಾಟಕೋತ್ಸವ ನಡೆಸುವುದಲ್ಲದೆ, ತನ್ನದೇ ಹಲವು ನಾಟಕಗಳ ಪ್ರದರ್ಶನ, ಸಾಮಾಜಿಕ ಬದ್ಧತೆಯ ವಿಷಯಗಳ ಆಯ್ಕೆ, ರಂಗೋತ್ಸವಗಳು, ಮಕ್ಕಳ ನಾಟಕ ಶಿಬಿರ, ಇತರ ಸೃಜನಶೀಲ ಅಭಿವ್ಯಕ್ತಿಗಳಾದ ಛಾಯಾಚಿತ್ರ, ಚಿತ್ರಕಲೆ, ಕಲಾಕೃತಿ ಇತ್ಯಾದಿಗಳ ಪ್ರದರ್ಶನ ಇವು ಈ ತಂಡದ ಅನೇಕ ಚಟುವಟಿಕೆಗಳ ಕೆಲ ಮುಖಗಳು.

ತಮ್ಮೆಲ್ಲ ಚಟುವಟಿಕೆ, ನಾಟಕ ರಂಗದಲ್ಲಿನ ಹೊಸ ಪ್ರಯೋಗ, ರಂಗಪ್ರತಿಭೆಗಳ ಪರಿಚಯ, ನಾಟಕ ಸಾಹಿತ್ಯದ ಮಾಹಿತಿ, ಪ್ರದರ್ಶಿಸಿದ ಮತ್ತು ಮುಂದೆ ಪ್ರದರ್ಶಿಸಲಿಕ್ಕಿರುವ ಹಲವು ಹೊಸ ಪ್ರಯೋಗಗಳ ವಿವರವನ್ನು ಪ್ರಕಟಿಸಲು ಜನಕ್ಕೆ ತಲುಪಿಸಲು ಇವರು ಕಂಡುಕೊಂಡ ಇನ್ನೊಂದು ಮಾಧ್ಯಮವೇ ಈ ಬ್ಲಾಗ್. ಇತ್ತೀಚಿನ ಬರಹದಲ್ಲಿ ತಮ್ಮ ಹೊಸ ಪ್ರಯೋಗ "ಕಡಿದಾಳ್ ಶಾಮಣ್ಣ" ನಾಟಕ ಪ್ರಸ್ತುತಿಯ ಬಗ್ಗೆ ಬರೆದಿದ್ದಾರೆ. ನಾಟಕದ ಆಶಯ, ನಿರ್ವಹಣೆಗೆ ಹೆಗಲು ಕೊಟ್ಟಿರುವ ಪ್ರತಿಭೆಗಳು, ರಂಗದಲ್ಲಿ ಪ್ರಸ್ತುತ ಪಡಿಸಲಿರುವ ಕಲಾವಿದರು, ಮತ್ತು ನಾಟಕದ ಬರಲಿರುವ ಪ್ರದರ್ಶನಗಳ ವಿವರ ಇಲ್ಲಿದೆ.

ಈ ಕೆಲ ಸಾಲುಗಳು ಇವರ ಹೊಸ ಪ್ರಯೋಗದ ಮೌಲ್ಯವನ್ನೂ, ಸೃಜನಶೀಲತೆಯನ್ನು ಕಟ್ಟಿಕೊಡುತ್ತವೆ. "ಮಲೆನಾಡಿನ ಮೂಲೆಯ ಕಡಿದಾಳಿನಲ್ಲಿ ಜನ್ಮ ತಾಳಿದ ಶಾಮಣ್ಣ ವಿದ್ಯಾರ್ಥಿ ದೆಸೆಯಿಂದಲೇ ದೇಸೀ ಚಿಂತಕರಾಗಿ ಮೂಢನಂಬಿಕೆ ವಿರೋಧ, ಸರಳ ಮದುವೆ, ಬೇಸಾಯ ಹಾಗೂ ತನ್ನ ಸುತ್ತಮುತ್ತಲ ಜನರನ್ನು ತಮ್ಮ ಅಭಿರುಚಿಯತ್ತ ಸೆಳೆಯುವಲ್ಲಿ ಪಟ್ಟಪಾಡು ಈ ನಾಟಕದ ತಿರುಳು....ಬಹುಶಃ ನಮ್ಮ ನಡುವೆಯೇ ಇರುವ ವ್ಯಕ್ತಿಯೊಬ್ಬರ ಕುರಿತು ನಾಟಕವೊಂದು ಸಿದ್ಧವಾಗಿರುವುದು ಇದೇ ಮೊದಲು".

ಹೊಸಸುಳ್ಯ - ಪುಚ್ಚಪ್ಪಾಡಿ (೧೪-೩-೦೮)

ದಿನದ ಬ್ಲಾಗಿನಂಗಳದಲ್ಲಿ ಸುಳ್ಯದ ಯುವ ಕೃಷಿಕ, ಹವ್ಯಾಸಿ ಪತ್ರಕರ್ತ ಮಹೇಶ್ ಅವರ ಹೊಸಸುಳ್ಯ - ಪುಚ್ಚಪ್ಪಾಡಿ ಎಂಬ ಭಾವದಲೆಗಳ ನೋಟ. ಪುಟ್ಟ ಊರಿನಲ್ಲಿ ಕುಳಿತು ಪ್ರಪಂಚದಗಲಕ್ಕೂ ಹರಡಿರುವ ವಿಷಯ ಭಂಡಾರಕ್ಕೆ ನೆಟ್ ಕಿಂಡಿ ಕೊರೆದಿದ್ದಾರೆ. ಕೃಷಿ ಜಗತ್ತಿನ ಹಲವು ನೋಟ, ಹೊರಜಗತ್ತಿನ ಹುಚ್ಚಾಟ ಮೊದಲಾದ ವಿಷಯಗಳ ಬಗ್ಗೆ ಆಸಕ್ತಿ ಹುಟ್ಟಿಸುವ ಬರಹಗಳಿಲ್ಲಿವೆ. ನಿಮ್ಮ ಹಾಗೇ ನಾನು, ಆದ್ರೂ ಸ್ವಲ್ಪ ಜಾಸ್ತಿನೇ ಒಳ್ಳೆಯವನು ಎನ್ನುತ್ತಿರುವ ಮಹೇಶ್ ಅವರ ನೆಲದಲ್ಲಿ, ನೆಟ್ಟಲ್ಲಿ ಎರಡೂ ಕಡೆ ಬೆಳೆ ಬೆಳೆಯುವ ಉತ್ಸಾಹವಿದೆ.

ಇತ್ತೀಚಿನ ಬರಹ ನಿನ್ನೆಯ ಮತ್ತು ಇಂದಿನ ಮಹಿಳೆ, ಮೊನ್ನೆ ಆಚರಿಸಿದ ಮಹಿಳಾ ದಿನಾಚರಣೆಯ ಬಗೆಗಿನ ಒಂದು ಮೆಲುಕು. ರೈತರನ್ನು ಮಂಗ ಮಾಡುವ ಸಚಿವರು ಸ್ವಾಮಿ ಲೇಖನದಲ್ಲಿ ಇತ್ತೀಚೆಗೆ ಮಂಡಿಸಿದ ಕೇಂದ್ರ ಬಜೆಟ್ಟಿನ "೬೪ ಕೋಟಿ ರೈತರ ಸಾಲ ಮನ್ನಾ" ಎಂಬ ಮೂಗಿಗೆ ತುಪ್ಪ ಹಚ್ಚುವ ಸರಕಾರದ ಬಗ್ಗೆ ಚುರುಕಾಗಿ ವಿಶ್ಲೇಷಿಸಿದ್ದಾರೆ. ತುತ್ತು ಅನ್ನಕ್ಕೆ ಕುತ್ತು ಬರಲಿದೆ ನೋಡಿ, ೪೨ ವರ್ಷದ ಬಳಿಕ ಡಾಮರೀಕರಣ, ಭವಿಷ್ಯದ ವಿಷ್ಯ ಏನು, ಚಿಲ್ಲರೆ ಇಲ್ಲಾರೀ, ಲೋವೋಲ್ಟೇಜ್ -ಇದು ರೈತರ ಬವಣೆ, ನಮ್ಮ ರೈತರು ಈಗಲೂ ಸ್ವಾಭಿಮಾನಿಗಳು,ಸುಳ್ಯ ತಾಲೂಕು ಯುವಜನ ಮೇಳ, ಗುರುವಿನ ಗುಲಾಮರು ಪ್ರತಿಭಟನೆಯ ಸುಲ್ತಾನರು, ಕೊರಗರಿಂದ ಯಕ್ಷಗಾನ ಮೊದಲಾದ ವಿಚಾರಪೂರ್ಣ ಲೇಖನಗಳ ಸರಮಾಲೆ ಇಲ್ಲಿದೆ. ಇದಲ್ಲದೆ ಉದಯರಾಗವೆಂಬ ಚಂದದ ಛಾಯಾಚಿತ್ರಗಳ ಇನ್ನೊಂದು ಬ್ಲಾಗ್ ಕೂಡ ಇವರ ಹೆಸರಲ್ಲಿದೆ.

ಇರುವೆದೆಲ್ಲವ ಬಿಟ್ಟು (೧೩-೩-೦೮)

ಇಂದಿನ ಬ್ಲಾಗ್ ಜಗುಲಿಗೆ ಬಂದವರು ಇರುವೆದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಶ್ರೀ. ಪ್ರಪಂಚದ ಅಚ್ಚರಿಗಳನ್ನು ದೊಡ್ಡ ಕಣ್ಣು ಬಿಟ್ಟುಕೊಂಡು ನೋಡುತ್ತಾ, ಬುದ್ಧಿ ಮತ್ತು ಮನಸ್ಸುಗಳ ನಡುವೆ ಒಂದು ಬ್ಯಾಲನ್ಸ್ ಮಾಡುತ್ತಾ, ಕಂಡ ಅಚ್ಚರಿಯ ನೋಟಗಳನ್ನ ಅಕ್ಷರಕ್ಕಿಳಿಸುತ್ತಾ ಒಳ್ಳೆಯ ವಿಚಾರ ಪೂರ್ಣ ಲೇಖನಗಳು, ಕವಿತೆ, ಹರಟೆ ಎಲ್ಲವನ್ನು ಹಾಗೆ ಸುಮ್ಮನೆ ಎನ್ನುತ್ತಾ ಬರೆದಿದ್ದಾರೆ.

ಮತ್ತೆ ಸುತ್ತುತ್ತಾ, ದೇಶಕಾಲದ ನಂಟು, ಮಿಡಿದೊಂದು ತಂತಿಗೆ, ಹೀಗೆ ಸುಮ್ಮನೆ ಎದ್ದಿದ್ದಲ್ಲ, ಚಿನಕುರುಳಿ ಪಟಾಕಿ, ಕುಲ್ಗೆಟ್ ಭಾಷೆ, ಇಷ್ಟುಕಾಲ ಒಟ್ಟಿಗಿತ್ತು..,ಮಿಡಿದೊಂದು ತಂತಿಗೆ, ಮೊದಲಾದ ಆಪ್ತ ಬರಹಗಳ ಗುಚ್ಛವಿಲ್ಲಿದೆ. ಓದಿ ಏನನ್ನಿಸಿತು ಅಂತ ನೀವೊಂದೆರಡು ಸಾಲು ಬರೆದರೆ ಖುಷಿ ಪಡುವ ಈ ಹುಡುಗಿಯ ಒಂದೆರಡು ಸಾಲುಗಳು ನಿಮ್ಮ ಮೊದಲ ಓದಿಗೆ..

ಒಂದು ಮುದ್ದಾದ ಹೂವು ಕಣ್ಣಿಗೆ ಬಿದ್ದಾಗ ಅದನ್ನ ಕಿತ್ತು ಕೈಯಲ್ಲಿ ಹಿಡಿಯೋ ಆಸೆಗೆ ಯಾಕೆ ಬೀಳ್ತೀವಿ? ಕಿತ್ತ ಕೆಲ ಘಳಿಗೆಯಲ್ಲಿ ಮುರುಟಿಹೋಗುತ್ತೆ ಅನ್ನೋದು ಆ ಕ್ಷಣದಲ್ಲಿ ಮರೆತುಬಿಡ್ತೀವಾ...ಅಲ್ಲೇ ನೋಡಿ ಖುಷಿ ಪಟ್ಟಿದ್ದ್ರೆ ಆ ಸಂತೋಷದ ಅನುಭವ ಸದಾ ನಮ್ಮ ಜೊತೆ ಇರುತ್ತೆ ಅನ್ನೋದು ಮನಸ್ಸಿಗೆ ಯಾಕೆ ಹೊಳೆಯಲ್ಲ...ಎಲ್ಲವನ್ನ ಹಿಡಿದು ಮುಷ್ಟಿಯಲ್ಲಿ ಮುಚ್ಚಿಟ್ಟುಕೊಳ್ಳೋ ಅತಿ ಭಾವುಕತೆ ನಮ್ಮ ವಿಷಾದಗಳಿಗೆ ಕಾರಣ ಅನ್ನಿಸುತ್ತೆ! ಕೈಗೆ ಸಿಗಲಿಲ್ಲಾ ಅನ್ನೋ ಕಾರಣಕ್ಕೆ ಆ ಕ್ಷಣದ ಕಿರುನಗೆಯನ್ನೂ ಕಣ್ಣೀರಾಗಿಸಿಬಿಡೋದು ಹುಚ್ಚುತನ ಅಲ್ಲ್ವಾ!

ಸುನಿಲ ಜಯಪ್ರಕಾಶ (೧೨-೩-೦೮)

ಇಂದಿನ ಬ್ಲಾಗ್ ಜಗುಲಿಯಲ್ಲಿ ಸಂಪದದಲ್ಲಿರುವ ಸುನಿಲ ಜಯಪ್ರಕಾಶ ಅವರ ವಿಶೇಷ ಹೆಸರಿಲ್ಲದ ಬ್ಲಾಗು. ಹೆಸರಿನಲ್ಲೇನಿದೆ ವಿಷಯಕ್ಕೆ ಬನ್ನಿ ಎಂಬಂತೆ ಸರಳ ಆಡುಕನ್ನಡದಲ್ಲಿ ಬರೆಯುತ್ತಾ ಹೋಗಿರುವ ಸುನಿಲ್ ವೃತ್ತಿಯಿಂದ ಇಂಜಿನಿಯರ್ ಇದ್ದಾರೆ. ಸಾಹಿತ್ಯ ಸಂಗೀತ ಮತ್ತು ಕನ್ನಡ ಇವರ ಮುಖ್ಯ ಆಸಕ್ತಿ. ಬರಹಗಳಲ್ಲಿ ಹೆಚ್ಚಿನವು ಆಡುಗನ್ನಡವನ್ನು ಬಳಸಿ ಬರೆದವು. ವಿಷಯ ವೈವಿಧ್ಯದಂತೆ ಕನ್ನಡವೂ ಇವರ ಬರಹದೊಳಗಿನ ಆಕರ್ಷಣಾ ಶಕ್ತಿ.

ಇತ್ತೀಚಿನ ಬರಹದಲ್ಲಿ ‘ಇಂತಿ ನಿನ್ನ ಪ್ರೀತಿಯ' ಸಿನೆಮಾ ನೋಡಿದ ತಮ್ಮ ಅನಿಸಿಕೆಗಳನ್ನು ಪಟ್ಟಿಮಾಡಿದ್ದಾರೆ. ತುಂಗೆ ಮತ್ತು ಕನ್ನಡ ಸಾಹಿತ್ಯ, ಬಾಲ್ಯದ ನಂಟಿನ ನೆನಪು, ಕರ್ಮಯೋಗದಲ್ಲಿ ಒಂದು ಸಂಜೆ, ಕನ್ನಡ-ಸಕ್ಕದ-ಸಂಸ್ಕೃತ-ಇಂಗ್ಲಿಷ್, ಪೈಪೋಟಿ ಎಂದರೆ ಹೀಗಿರಬೇಕು, ಶಂಕರ ಸ್ತುತಿ, ಕನ್ನಡ ಗಾದೆಗಳು, ರತ್ನಾಕರವರ್ಣಿಯವರ ಭರತೇಶ ವೈಭವ ಕೃತಿಯ ವಿಶ್ಲೇಷಣಾ ಸರಣಿಗಳೂ, ಎಲ್ಲವೂ ಒಳ್ಳೆಯ ಓದಿಗೆ ಪೂರಕವಾಗಿವೆ. ಕೆಲವೆಡೆ ನವಿರಾಗಿ ತಮಾಷೆಯಾಗಿ ಬರೆದಿರುವ ಸಾಲುಗಳು ಸೊಗಸಾಗಿದೆ.

ತುಂಗೆ ಮತ್ತು ಕನ್ನಡ ಸಾಹಿತ್ಯ ಲೇಖನದ ಈ ಕೆಲಸಾಲುಗಳು ನಿಮ್ಮ ಮೊದಲ ಓದಿಗೆ. "..ನಾವು ಕನ್ನಡಿಗರು ಒಂದು ವಿಷಯದಲ್ಲಿ ನಿಜಕ್ಕೂ ಸ್ವಲ್ಪ ಹೆಚ್ಚಾಗಿಯೇ ಪುಣ್ಯ ಮಾಡಿದ್ದೇವೆ. ಅದು ನಮ್ಮಲ್ಲಿನ ನದಿಗಳು. ಎಲ್ಲ ಕನ್ನಡಿಗರೂ ಹೆಮ್ಮೆ ಪಡಬೇಕಾದ ಪುಸ್ತಕ "ಕವಿರಾಜಮಾರ್ಗಂ"ದ "ಕಾವೇರಿಯಿಂದಮ್ ಆ ಗೋದಾವರಂ ಇರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಳಯ ವಿಲೀನ ವಿಷಯ ವಿಶದ ವಿಶೇಷಂ" ಪದ್ಯ ನಿಜಕ್ಕೂ ರೋಮಾಂಚನ ಉಂಟುಮಾಡುತ್ತಾ, ನಮ್ಮನ್ನು ಹಿನ್ನೆಪ್ಪಾಗಿಸದೆ ಎಂದೆಂದಿಗೂ ನಮ್ಮ ಗಟ್ಟಿತನವನ್ನು ಸಾಬೀತು ಪಡಿಸುತ್ತಲೇ ಇರುತ್ತದೆ...

ಅಮೃತ ಸಿಂಚನ (೧೧-೩-೦೮)

ದಿನದ ಬ್ಲಾಗಿನ ಬೊಗಸೆಯಲ್ಲಿ ಸಂತೋಷಕುಮಾರ ಪಾಟೀಲ ಅವರ ಅಮೃತ ಸಿಂಚನ. ತನ್ನೂರು ಗದಗಿನ ಅಬ್ಬಿಗೇರಿಯ ಮಾಗಿಯ ಚಳಿಯನ್ನೂ ಅಲ್ಲಿ ನಡೆಯುವ ಉಳ್ಳಾಗಡ್ಡಿ ಮಾರಾಟವನ್ನೂ ಶೇರು ಮಾರುಕಟ್ಟೆಯ ತಲ್ಲಣದಷ್ಟೇ ಸೊಗಸಾಗಿ ವಿವರಿಸುವ ಪಾಟೀಲರು, ಒಂಚೂರು ತಮ್ಮ ಬಗ್ಗೆ ಎನ್ನುತ್ತಾ ಸ್ವಲ್ಪ ಜಾಸ್ತೀನೇ ಹೇಳಿದ್ದಾರೆ. ಹಾಗೆ ಹೇಳುತ್ತಲೇ ತಮ್ಮ ಬಗ್ಗೆ ಇರುವ ಕಂಪ್ಲೇಟು ಮತ್ತು ಕಾಂಪ್ಲಿಮೆಂಟುಗಳನ್ನೂ ಪ್ರಾಮಾಣಿಕವಾಗಿ ವಿವರಿಸಿದ್ದಾರೆ. ತಮ್ಮ ಸುತ್ತಲ ಜಗತ್ತಿನ ಸೋಜಿಗಗಳು, ಕಂಡಿದ್ದು, ಕೇಳಿದ್ದು, ಅನಿಸಿದ ವಿಷಯಗಳ ಸರಳ ಅಭಿವ್ಯಕ್ತಿಗಳು ಸರಾಗವಾಗಿ ಓದಿಸಿಕೊಳ್ಳುತ್ತದೆ.

ಚಡ್ಡಿಯ ಗುಂಡಿ ಕಿತ್ತರೂ ಪಿನ್ನು ಹಾಕಿಕೊಂಡು ಓಡಾಡುತ್ತಿದ್ದ ಪ್ರೈಮರಿ ದಿನಗಳಲ್ಲಿ ಬಿಸಿ ಬಿಸಿ ಚರ್ಚೆಯಲ್ಲಿದ್ದ ಮಹಾ ಪ್ರಳಯದ ಕುರಿತು ಇತ್ತೀಚೆಗೆ ಸೊಗಸಗಾಗಿ ಬರೆದಿದ್ದಾರೆ. ಬಿಗ್ ಎಫ್‌‌ಎಂ ರೇಡಿಯೋ ಚಾನೆಲ್‌ಗಳು ತಮ್ಮ ಚರ್ಚಾವಿಷಯಕ್ಕೆ ಆರಿಸಿಕೊಳ್ಳುವ ವಿಷಯದ ಕುರಿತು ಬಿಗ್" ಎಫ್.ಎಮ್ಮು ಮತ್ತು ಅವರ "ಬಿಗ್(?)" ಐಡಿರಿಯಾಗಳೂ ಎಂಬ ಶೀರ್ಷೆಕೆ ಬಳಸಿ ಬರೆದಿದ್ದಾರೆ. ರೇಡಿಯೋ ಜಾಕಿಗಳು ಎಲ್ಲವನ್ನೂ ತಮಾಷೆಯಾಗಿ ತೆಗೆದುಕೊಂಡರೆ ಅದರಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬ ಎಚ್ಚರಿಕೆ ಈ ಲೇಖನದಲ್ಲಿದೆ.

ಹೀಗೊಂದು ಹುಚ್ಚು ಬರಹ, ನಾವು ಶಾಪಗ್ರಸ್ಥರೇ?, ಬೆಂಗಳೂರು ಗಣೇಶನೂ, ನಗೆಹಬ್ಬವೂ ಮತ್ತು ಆರ್ಕೆಸ್ಟ್ರಾ, ಅಬ್ಬಿಗೇರಿ ಎಕನಾಮಿಕ್ಸು ಮತ್ತು ಉಳ್ಳಾಗಡ್ಡಿ ಇತ್ಯಾದಿ ಲೇಖನದಲ್ಲಿ ಮೂಡಿರುವ ಸಹಜ ಸೊಗಸು, ಮತ್ತು ದೇಸಿ ಬಾಷೆಯ ಸೊಗಡು ಅಮೃತ ಸಿಂಚನವನ್ನು ಇನ್ನಷ್ಟು ಸಮೃದ್ಧಗೊಳಿಸಿವೆ.

ಸೊಬಗಿನ ಬಳ್ಳಿ (೧೦-೩-೦೮)

ಇಂದಿನ ಬ್ಲಾಗಿನಂಗಳದಲ್ಲಿ ವೈಭವ ಎಂಬ ಕಾವ್ಯನಾಮದಿಂದ ಬರೆಯುವ ಭರತ್ ಕುಮಾರ್ ಅವರ ಸೊಬಗಿನ ಬಳ್ಳಿ. ದಿನದಿನಕ್ಕೂ ಬ್ಲಾಗ್ ಬರಹಗಳು ಬಳ್ಳಿಯ ಸೊಬಗಿನಂತೆ ಹಬ್ಬಿ ಓದುಗರಿಗೆ ಖುಷಿ ಕೊಡುತ್ತಿದೆ. ಕನ್ನಡ ಕಾವ್ಯ, ಜನಪದ, ಸಂಸ್ಕೃತಿ, ಹಳೆಗನ್ನಡ, ನವ್ಯ, ಹಲವು ಹತ್ತು ತಂತ್ರಜ್ಞಾನಗಳು, ಇಂದಿನ ನೆಟ್ ಯುಗದ ಬಲೆಯಲ್ಲಿ ಸಿಕ್ಕಿಬಿದ್ದ ಕನ್ನಡಿಗರು ಈ ಎಲ್ಲ ವಿಷಯಗಳನ್ನು ಅಧ್ಯಯನ ಮಾಡಿ ಬರೆದ ಬರಹಗಳು ಇಲ್ಲಿವೆ. ಹಲವು ತಾಂತ್ರಿಕ ವಿಷಯಗಳನ್ನು ಸರಳ ಕನ್ನಡದಲ್ಲಿ ಬರೆದಿದ್ದಾರೆ.

ಇತ್ತೀಚಿನ ಬರಹ ನಯಸೇನನ ಸಾಲುಗಳು - ೧೧ನೇ ಶತಮಾನದ ಜೈನಕವಿ ನಯಸೇನನ ಕಾವ್ಯವಿಶೇಷಗಳನ್ನು ಹಿರಿಗನ್ನಡದಿಂದ ತಿಳಿಗನ್ನಡಕ್ಕೆ ತಂದಿದ್ದಾರೆ. ನಯಸೇನ ಕಬ್ಬಕ್ಕೆ ಸಹಜತನ ಯಾಕಿರಬೇಕು ಎಂಬುದನ್ನ ಒತ್ತಿ ಹೇಳಲು ಮಳೆ ನೀರು ಮತ್ತು ಪನ್ನೀರು (ಪೊಯ್ನೀರ್) ಎಂಬ ಉಪಮೆಗಳನ್ನು ಬಳಸಿಕೊಂಡು ಚೆನ್ನಾಗಿ ಬಣ್ಣಿಸಿದ್ದಾನೆ." ಹೇಗೆ ಮಳೆಯಿಲ್ಲದೆ ಉರಿದು/ಬಿಸಿಯಾಗಿರುವ ದರೆ(ಬುವಿ)ಬರೀ ಎರಚಿದ ನೀರಿನಿಂದ ತಣ್ಣಗಾಗುವುದಿಲ್ಲವೊ ಹಾಗೆ ಕೇವಲ ಶಾಸ್ತ್ರಬಲದ ಚಟಕ್ಕೆ ಬಿದ್ದು(ಎರಚಿದ ನೀರಿನಂತೆ) ಸಹಜತನವನ್ನು (ಮಳೆ) ಕಳೆದುಕೊಂಡ ಕಬ್ಬಿಗನ ಕಬ್ಬ ಕೋಮಳವಾಗುವುದಿಲ್ಲ. ಒಟ್ಟಿನಲ್ಲಿ ಕಬ್ಬಕ್ಕೆ ಸಹಜತನ ಬಲು ಮುಖ್ಯ."

ನಯಸೇನನ ಧರ್ಮಾಮೃತ, ಕನ್ನಡದಲ್ಲಿ ವೆರಿಲಾಗ್, ಕನ್ನಡದ ಬಳಕೆ ಹೇಗಿರಬೇಕು, ನಾನಾಗಿರದನ್ನಕ್ಕ, ಕನ್ನಡದ ಅಂಕಿಗಳು ಹೇಗೆ ಬಂತು, ಕಪ್ಪೆ ಅರಭಟ್ಟನ ಕನ್ನಡ ಶಾಸನ, ಬೀಸು ಕಂಸಾಳೆ, ಅರವಟ್ಟಿಗೆ ಅಂದರೆ ಏನು, ರಾಷ್ಟ್ರಕೂಟರ ಹೊತ್ತಿನಲ್ಲಿದ್ದ ತೆಂಕು ಮತ್ತು ಬಡಗು ಬಗೆಗಳು, ನುಡಿಗಬ್ಬ, ಜನಪದ ತೆರೆನಾದ ಹಾಡುಗಳು, ಮೊದಲಾದ ಎಲ್ಲ ಬರಹಗಳು ಕನ್ನಡದ ಕಂಪಿನಿಂದ ಬೀಗುತ್ತಿರುವ ಹೂಗಳಂತೆ ಇವರ ಬ್ಲಾಗ್ ಬಳ್ಳಿಯಲ್ಲಿ ಮನೋಹರವಾಗಿವೆ.

ಮೃಗನಯನಿ (೮-೩-೦೮)

ಇಂದಿನ ಬ್ಲಾಗಿನಂಗಳದಲ್ಲಿ ಇಣುಕುತ್ತಿರುವುದು "ಮೃಗನಯನಿ" ಯವರ ಮನದೊಳಗಿನ ಕಣ್ಣು. ತನ್ನ ಪರಿಚಯಕ್ಕಿಂತ ಹೆಚ್ಚಾಗಿ ಬರಹಗಳ ಮೂಲಕ ಓದುಗರ ಮನದೊಳಕ್ಕೆ ಎಂಟ್ರಿ ಪಡೆಯಬಯಸುವ ಈ ಯುವ ಲೇಖಕಿ ಭರವಸೆ ಮೂಡಿಸುವ ಪ್ರತಿಭೆ. ಇನ್ನೂ ಓದುತ್ತಿರುವ ಅರಳುಮೊಗ್ಗು ಲೇಖಕಿ ತಾನು ಬ್ಲಾಗಿಸುವುದಕ್ಕೆ ತೊಡಗಿಸಿಕೊಂಡಿದ್ದು ಹೇಗೆ ಅಂತ ಹೇಳಿಕೊಂಡಿರುವುದು ಹೀಗೆ.. ಒಂದು ಘಮ್ಮನೆಯ, ಬಿಸಿನೀರಿನ, ಅದ್ಭುತ ಸ್ನಾನ ಮಾಡ್ಕೊಂಡು ರೂಮಿಗ್ ಬಂದೆ.. ಏನಾದ್ರೂ ಬರೆಯೊಕ್ಕೆ ಕೈ ಚಡಪಡಿಸುತ್ತಿತ್ತು. ದೀಪ ಹಚ್ಚಿ, ಪೂಜೆ ಮಾಡಿದ್ ನೆಪ ಮಾಡಿ, ವಿಷ್ಣುಸಹಸ್ರನಾಮನ ಸಹಸ್ರಾರು ಮೈಲಿ ವೇಗದಲ್ಲಿ ಬಡಬಡಿಸಿ, ಯಾವುದೋ ರೆಕಾರ್ಡ್ ಬರಿತಿದ್ದ ಗೆಳತಿಯ ಪೆನ್ ಕಿತ್ತುಕೊಂಡು ಬರೆಯೋಕ್ ಶುರು ಮಾಡಿದೆ. ಲಹರಿಯಲ್ಲಿದ್ದರೆ ಬರೀತೀನಿ.. -ಈ ಮಾತುಗಳು ಇಂದಿನ ಭಾವುಕ ಮತ್ತು ಶಕ್ತ ಯುವಮನಸ್ಸುಗಳ ಸೃಜನಶೀಲತೆಯೆಡೆಗೆ ನಮ್ಮ ಗಮನ ಸೆಳೆಯುತ್ತದೆ.

ಮಲೆನಾಡಿನ ಹಿನ್ನೆಲೆ, ಹೊಸತಲೆಮಾರಿನ ಪುಳಕಗಳು, ಬದುಕಿನ ಬನದ ಅರೆಬಿರಿದ ಭಾವ ಕುಸುಮಗಳು, ಅಕ್ಕರೆಯುಕ್ಕಿಸುವ ನೆನಪುಗಳು ಇವರ ಬರಹದಲ್ಲಿ ಪಡಿಮೂಡಿವೆ. ಓದುವವರ ಮನಸ್ಸಿಗೆ ಹಿತವಾಗಿವೆ.ನೀಲಿ ನಕ್ಷತ್ರದಿಂದ ಬಂದ ಪತ್ರ, ಬೆಳ್ಳಿಯ ಭಾವನೆ, ಮುಟ್ಟಾದ ಹುಡುಗಿ, ವನಸಿರಿಯ ಮಗಳು, ಕಾಣದ ಕಡಲಿಗೇ ಹಂಬಲಿಸುತಾ ಮನ, ಗೋಡೆ, ಮನಸು ಹಗುರ-ನೆನಪು ಬಚ್ಚಲಲ್ಲಿ ಭದ್ರ,ಮಳೆ-ನೆನೆಯುವ ಖುಷಿ, ಮನಶ್ಯಾಸ್ತ್ರ, ಮೊದ್ದಲಾದ ಚೆಲುಬರಹಗಳ ಗುಚ್ಚವಿದು. ಇತ್ತೀಚಿನ ಕತೆ ನಾಣಿ. ವಿಷಯದಷ್ಟೇ ಅಭಿವ್ಯಕ್ತಿಯೂ ಹೊಸದಾಗಿದೆ.

ಅಮೆರಿಕದಿಂದ ರವಿ (೬-೩-೦೮)

ಇಂದಿನ ಬ್ಲಾಗ್ ಬಾನಿನ ಚುಕ್ಕಿ ರವಿಕೃಷ್ಣಾರೆಡ್ಡಿಯವರ ಅಮೆರಿಕದಿಂದ ರವಿ. ವಿಕ್ರಾಂತ ಕರ್ನಾಟಕ ಪತ್ರಿಕೆಯ ಅಂಕಣಕಾರರೂ ಆಗಿರುವ ಇವರು, ತಮ್ಮ ಹಲವಾರು ಪ್ರಕಟಿತ ಅಂಕಣಗಳನ್ನೂ ಇಲ್ಲಿ ಹಂಚಿಕೊಂಡಿದ್ದಾರೆ. ವಿಚಾರಭರಿತ ವಿಷಯಗಳನ್ನು ನಿಖರ ಮಾಹಿತಿಗಳೊಂದಿಗೆ, ಚಿಂತನೆಗೆ ತೊಡಗಿಸುವ ರೀತಿಯಲ್ಲಿ ಬರೆದಿದ್ದಾರೆ. ಕೆಲವು ಲೇಖನಗಳ ವಿಡಿಯೋ ಪ್ರಸ್ತುತಿ ಕೂಡ ಇವೆ.

ಇತ್ತೀಚಿನ ಲೇಖನ -ವಿಶ್ವಕ್ಕೇ ನಾಯಕತ್ವ ಕೊಡಬಲ್ಲವನಿಗೆ ಕೊನೆಯ ಸ್ಥಾನ!!! ಇದರಲ್ಲಿ ಅಮೆರಿಕಾದ ಚುನಾವಣೆ ಮತ್ತು ನಾಯಕರ ಬಗೆಗಿನ ಮಾಹಿತಿಗಳನ್ನು ಸುಲಭ ಓದಿಗೆ ದಕ್ಕುವಂತೆ ವಿಮರ್ಶಿಸಿದ್ದಾರೆ. ಅಮೆರಿಕದಲ್ಲಿ ಅಧ್ಯಕ್ಷನಾಗುವ ಯೋಗ್ಯತೆ ಇರುವವರಲ್ಲಿ ಮೊದಲ ಸ್ಥಾನ ನಿಸ್ಸಂಶಯವಾಗಿ ರಾಲ್ಫ್ ನೇಡರ್‌ದೆ. ಆದರೆ ಅದು ಏಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಹಿಂದಿನ ಬರಹಗಳಾದ ಸ್ವತ್ರಂತ್ರ ನಿರಂಕುಶಮತಿಗಳು, ಗಂಡನ ಗೋರಿಯಿಂದ ಗದ್ದುಗೆಯತ್ತ, ಪ್ರಪಾತದ ಅಂಚಿನಲ್ಲಿ ಪರಿವರ್ತನೆಯ ಸಂಕಲ್ಪ, ನ್ಯಾಗಟಿ ಸಿಟಿ ಚಂದರ್ ಮತ್ತೆ ಹಳ್ಳಿಯತ್ತ, ಸ್ಟೀರಿಯೋಟೈಪಗಳನ್ನು ನಂಬಿದರೆ ಜೀವನಪ್ರೀತಿ ಸಾಧ್ಯವೆ, ತಿಮ್ಮಕ್ಕನಿಂದ ಕಲಿತದ್ದೇನು, ಅಯೋಗ್ಯರನ್ನು ಕೈಯಾರೆ ಆರಿಸಿಕೊಂಡು ಅಭಿವೃದ್ಧಿಯಾಗಲಿಲ್ಲ ಅಂದರೆ, ಅಮೆರಿಕ ಎಂದರೆ ಭುವಿಯ ಮೇಲಿನ ಸ್ವರ್ಗವೇನಲ್ಲ, ಇಂಟರ್ ನೆಟ್ನಲ್ಲಿ ನವಗ್ರಹ ಕಾಟ,.. ಎಲ್ಲವೂ ಒಂದಕ್ಕಿಂತ ಇನ್ನೊಂದು ಸೊಗಸಾಗಿದೆ.

ಚುರುಕು ಒಳನೋಟ, ಪೂರ್ವಾಗ್ರಹವಿಲ್ಲದ ವಿಷಯ ಮಂಡನೆ, ನವಿರು ನಿರೂಪಣೆ, ಪೂರ್ಣ ಮಾಹಿತಿ, ಮತ್ತು ಸರಳ ಬರವಣಿಗೆ ಇಲ್ಲಿನ ಬರಹಗಳ ವಿಶೇಷಗಳು.

ಕನ್ನಡ ಕಾರ್ಟೂನ್ (೫-೩-೦೮)

ಇಂದಿನ ಬ್ಲಾಗಿನಂಗಳದಲ್ಲಿ ಅರುಣ ಪ್ರಕಾಶ್, ಸುಸಂಸ್ಕೃತ, ಮತ್ತು ಪ್ರಶಾಂತ್.ಎಂ ಅವರ ಬಳಗದ ಕನ್ನಡ ಕಾರ್ಟೂನಿನ ನಗೆಮೊಗ್ಗು ಬಿರಿದಿದೆ. ಪ್ರಪಂಚದಾದ್ಯಂತ ಅಚ್ಚುಮೆಚ್ಚಾಗಿರುವ ಇಂಗ್ಲಿಷಿನ ಕ್ಯಾಲ್ವಿನ್ ಮತ್ತು ಹಾಬ್ಸ್, ದಿಲ್ ಬರ್ಟ್, ಮತ್ತು ಗಾರ್ ಫೀಲ್ಡ್, ಈ ಮೂರೂ ಹಾಸ್ಯಮಯ ಅಣಕುಚಿತ್ರಸರಣಿಗಳನ್ನು ಕನ್ನಡಕ್ಕೆ ತಂದಿರುವ ವಿಶೇಷ ಪ್ರಯತ್ನ ಇಲ್ಲಿದೆ.

ಬಿಲ್ ವಾಟರ್ಸನ್‌ನ ಅನನ್ಯ ಚಿತ್ರಸರಣಿಯ ಪುಟ್ಟ ಹುಡುಗ ಕ್ಯಾಲ್ವಿನ್ ಮತ್ತು ಅವನ ಕಲ್ಪಕ ಜೊತೆಗಾರ ಹಾಬ್ಸ್ ಎಂಬ ಸ್ಟಫ್ ಮಾಡಿದ ಹುಲಿಗೊಂಬೆ, ಆಧುನಿಕ ನಾಗರಿಕ ಜಗತ್ತಿನ ಗೋಜಲುಗಳನ್ನು ಹಾಸ್ಯದ ಎಳೆಗಳಲ್ಲಿ ಅಣಕವಾಡುತ್ತಾರೆ. ಈ ಜನಪ್ರಿಯ ಸರಣಿಯನ್ನು ಕನ್ನಡದಲ್ಲಿ ಕೇಶು-ನಾಣಿಯರಾಗಿ ಒಳ್ಳೆಯ ಅನುವಾದ ಮಾಡಿದ್ದಾರೆ ಅರುಣ ಪ್ರಕಾಶ್.

ಸ್ಕಾಟ್ ಆಡಮ್ಸ್ ಅವರ ದಿಲ್ ಬರ್ಟ್ ಸರಣಿ, ಆಫೀಸ್ ಜಗತ್ತಿನ ಸಭ್ಯ ಸೋಗಿನ ನಡವಳಿಕೆ, ಕೆಲಸ ಕದಿಯುವಿಕೆ, ಮತ್ತು ಪದವಿಯ ಅಮಲು ಅವಾಂತರಗಳನ್ನು ನಗೆಯ ಅಲೆಯ ಮೇಲಿ ಅಣಕು ದೋಣಿಗಳಾಗಿಸಿ ತೇಲಿಬಿಡುತ್ತದೆ.ಇಂಗ್ಲಿಷಿನ ದಿಲ್ ಬರ್ಟ್‌ನನ್ನು ಕನ್ನಡದ ಸಾಂಬಶಿವನಾಗಿಸಿ ಸಮರ್ಥ ಅನುವಾದ ಮಾಡಿ ಮುದ ನೀಡಿದ್ದಾರೆ ಸುಸಂಸ್ಕೃತ.

ಕರ್ನಾಟಕ ಪೊಲೀಸ್ (೪-೩-೦೮)

ದಿನದ ಬ್ಲಾಗ್ ಬೊಗಸೆಯಲ್ಲಿ ಈ ಸಲ ಬಂಧಿಯಾಗಿರುವವರು ಕರ್ನಾಟಕದ ನಾಲ್ಕು ಪೊಲೀಸ್ ಠಾಣೆಗಳು. ಕೆ.ಜಿ.ಎಫ್, ಉಡುಪಿ, ಕೋಲಾರ, ಹಾಗೂ ದಕ್ಷಿಣ ಕನ್ನಡ ಪೊಲೀಸರ ಬ್ಲಾಗ್‌ಗಳು. ತೋಚಿದ್ದನ್ನು ಗೀಚುವ, ಭಾವನೆಗಳನ್ನು ಹಂಚಿಕೊಳ್ಳುವ, ಖಾಸಗಿ ಗುಟ್ಟನ್ನು ಬಿಚ್ಚಿಡುವ, ಜಾಲಿಗರ ಪರ್ಸನಲ್ ಡೈರಿಯಾಗಿರುವ ಬ್ಲಾಗಿನಲ್ಲಿ ಆರಕ್ಷಕ ಪಡೆಗಳಿಗೇನು ಕೆಲಸ ಎಂದು ನೀವು ಈ ಬ್ಲಾಗನ್ನೊಮ್ಮೆ ಪ್ರವೇಶಿಸಿದರೆ, ಹತ್ತು ಹಲವು ಅಚ್ಚರಿಯ ಸಂಗತಿಗಳನ್ನು ಕಾಣಬಹುದು. ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಿನಂಪ್ರತಿ ನಡೆಯುವ ಪ್ರಕರಣಗಳ ಸಂಪೂರ್ಣ ವಿವರ ಬ್ಲಾಗಿನಲ್ಲಿದೆ.

`ಅಪರಾಧಿಕ ವಿಷಯಗಳಲ್ಲದೇ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಪ್ರಜ್ಞಾವಂತ ನಾಗರೀಕರೊಂದಿಗೆ ಹಂಚಿಕೊಳ್ಳುವುದು ಈ ಬ್ಲಾಗ್‌ನ ಆಶಯವಾಗಿರುತ್ತದೆ, ಇದರಿಂದ ಪೊಲೀಸ್ ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಸಾರ್ವಜನಿಕ ಬದ್ದತೆ ಹೆಚ್ಚುತ್ತದೆ` ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಇದು ಮೇಲ್ನೋಟಕ್ಕೆ ಸಹಜವಾದ, ಕುತೂಹಲವಾದ ವಿಷಯವಾಗಿ ಕಂಡರೂ, ನಂತರ ಹಲವು ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಈ ಎಲ್ಲ ಠಾಣೆಗಳ ಬ್ಲಾಗುಗಳಲ್ಲಿ ಅಫ್‌ಡೇಟ್ ಆಗುವ ಸುದ್ದಿ ಒಂದೇ ರೀತಿಯಲ್ಲಿದೆ. ಆದರೆ ಪ್ರಕರಣಗಳ ಸಂಖ್ಯೆಯಲ್ಲಿ ಮಾತ್ರ ವ್ಯತ್ಯಾಸವಿದೆ. ಕೆ.ಜಿ.ಎಫ್ ಪೊಲೀಸರ ಬ್ಲಾಗಿನಲ್ಲಿ ಇಂದು ಅಫ್‌ಡೇಟ್ ಆಗಿರುವ ಸುದ್ದಿಯನ್ನೊಮ್ಮೆ ಗಮನಿಸಿ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೩-೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ. ಕೊಲೆ: ಇಲ್ಲ. ಡಕಾಯತಿ: ಇಲ್ಲ, ಸುಲಿಗೆ: ಇಲ್ಲ, ಮನೆಗಳ್ಳತನ: ಇಲ್ಲ, ಸಾಧಾರಣ ಕಳ್ಳತನ: ಇಲ್ಲ,ವಾಹನ ಕಳ್ಳತನ : ಇಲ್ಲ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ, ರಸ್ತೆ ಅಪಘಾತಗಳು: ೦೨, -ಮಾರಣಾಂತಿಕ: ಇಲ್ಲ, -ಸಾಧಾರಣ: ೦೧. ಈ ವಿವರದ ಜೊತೆಗೆ ಪ್ರಕರಣದ ಮಾಹಿತಿಯೂ ಇದೆ. ಎಫ್‌.ಐ.ಆರ್ ಪ್ರತಿಯನ್ನು ಲಗತ್ತಿಸದೇ ಇದ್ದರೂ, ಹೆಚ್ಚು ಕಡಿಮೆ ಅದರಂತೆಯೇ ವಿವರಗಳಿವೆ.

ಪೊಲೀಸ್ ಠಾಣೆಗಳಲ್ಲಿ ದಾಖಲುಗೊಳ್ಳುವ ಎಲ್ಲ ಪ್ರಕರಣಗಳನ್ನು ಈ ರೀತಿ ಬ್ಲಾಗಿನಲ್ಲಿ ತಕ್ಷಣವೇ ಪ್ರಕಟಿಸಿ ಬಿಡುವುದು ಎಷ್ಟು ಸರಿ ಮತ್ತು ಎಷ್ಟು ತಪ್ಪು ಎನ್ನುವುದು ಒಂದು ಪ್ರಶ್ನೆಯಾದರೆ, ಇಂತಹ ಮಾಹಿತಿಗಳನ್ನು ಈ ರೀತಿ ಸರಳವಾಗಿ ನೀಡಬಹುದೇ ಎನ್ನುವುದು ಮತ್ತೊಂದು ಪ್ರಶ್ನೆ? ಸಾಬೀತಾಗದ ಮಾಹಿತಿಗಳನ್ನು ಸಾರ್ವಜನಿಕ ಅವಗಾಹನೆಗೆ ತರುವುದರಿಂದ ಏನೆಲ್ಲಾ ಅನಾಹುತಗಳು ಸೃಷ್ಠಿಯಾಗಬಹುದು ಎನ್ನುವುದರ ಕುರಿತೂ ವಿಚಾರ ಮಾಡಬೇಕಾಗುತ್ತದೆ. ಅಷ್ಟಕ್ಕೂ ವೈಯಕ್ತಿಕ ಪ್ರಕಟಣೆಗಳಿಗಾಗಿ ಬಳಸಿಕೊಳ್ಳಬೇಕಾದ ಬ್ಲಾಗ್‌ನ್ನು ಪೊಲೀಸ್ ಠಾಣೆಯೊಂದು ತನ್ನ ವ್ಯಾಪ್ತಿಯಲ್ಲಿ ದಾಖಲಾಗುವ ಪ್ರಕರಣಗಳ ವಿವರ ನೀಡಲು ಬಳಸಿಕೊಳ್ಳಬಹುದೇ ಎನ್ನುವುದು ಹಲವು ಜಾಲಿಗರ ಪ್ರಶ್ನೆಯಾಗಿದೆ.

ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಈ ಮಾಹಿತಿಗಳನ್ನು ಪ್ರಕಟಿಸಿದ್ದರೆ ಅದರಲ್ಲೇನೂ ವಿಶೇಷತೆ ಕಾಣಿಸುತ್ತಿರಲಿಲ್ಲ. ಆದರೆ ಬ್ಲಾಗ್ ಎನ್ನುವುದು ತುಂಬಾ ಖಾಸಗಿ ವಿಷಯಗಳನ್ನು ಪ್ರಕಟಿಸುವ, ಚರ್ಚಿಸುವ ಅಂಗಳ.
ಪೊಲೀಸರು ಬ್ಲಾಗಿನ ಮೂಲಕ ಹೊಸತೊಂದು ಪ್ರಯತ್ನ ಪ್ರಾರಂಭಿಸಿದ್ದಾರೆ. ಉಳಿದ ಬ್ಲಾಗಿಗರ ಪ್ರತಿಕ್ರಿಯೆ ಏನಿರಬಹುದು?

ಹಂಸನಾದ (೩ -೩-೦೮)

ಇಂದಿನ ಬ್ಲಾಗ್ ಲೋಕದಲ್ಲಿ ಸಂಗೀತಪ್ರಿಯ ಹಂಸಾನಂದಿಯವರ ಹಂಸನಾದ. ಈ ಬ್ಲಾಗಿನ ತಾಣ ಕನ್ನಡ ಬ್ಲಾಗ್ ಲೇಖಕರನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟುವ ಸಂಪದದಲ್ಲಿ. ‘ಒಳಿತಾದದ್ದೆಲ್ಲ ಎಲ್ಲೆಡೆಯಿಂದಲೂ ಬರಲಿ' ಎಂಬ ವೇದಭಾವವನ್ನು ಆವಾಹಿಸಿಕೊಂಡಿರುವ ಲೇಖಕರ ಮುಕ್ತ ತಿಳುವಳಿಕೆಯಿಂದ ಹೊಮ್ಮುವ ಕರ್ನಾಟಕ ಸಂಗೀತದ ವಿವಿಧ ರಾಗಧಾರೆಗಳು ಇಂಪಾಗಿ ಅನುರಣಿಸುತ್ತವೆ.

ರಾಗವಿಸ್ತಾರ, ದಾಸರ ಪದಗಳು, ಪ್ರಾಸ, ತಾಳ, ರಾಗಸಮೃದ್ಧಿಯ ಕರ್ನಾಟಕ ಸಂಗೀತ, ಸಂಸ್ಕೃತ ಶ್ಲೋಕಗಳ ಕನ್ನಡ ಭಾವಾರ್ಥ, ವಚನಗಳ ವೈವಿಧ್ಯ, ತ್ಯಾಗರಾಜರ ಸಂಗೀತ ಪ್ರತಿಭೆ, ರಾಗಗಳಿಂದ ಹೊಮ್ಮುವ ರಸಗಳು ಮತ್ತು ಕೇಳುಗರ ಮನದಲ್ಲೇಳುವ ಭಾವಸ್ಫುರಣ, ಇತ್ಯಾದಿ ವಿಷಯಗಳ ಪ್ರೌಢ ಬರಹಗಳಿಂದ ತುಂಬಿರುವ ಈ ಬ್ಲಾಗಿನಲ್ಲಿ, ಪ್ರಸ್ತುತ ಸಮಾಜದ ಬಗೆಗಿನ ಕೆಲವು ಹರಟೆ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ಬಗೆಗಿನ ಕೆಲ ಸಂವಾದೀ ಬರಹಗಳು, ನೆನಪಿನಿಂದ ಹೆಕ್ಕಿ ತೆಗೆದ ಒಂದಷ್ಟು ಕಥೆ, ಕವಿತೆ, ಪದ್ಯಗಳು ಇವೆ.

ನೀಲಾಂಜನರೆಂಬ ಕಾವ್ಯನಾಮದಲ್ಲಿ ಇವರು ನಡೆಸುವ ‘ಅಲ್ಲಿದೆ ನಮ್ಮ ಮನೆ' ಎಂಬ ವಿಚಾರವೈವಿಧ್ಯಗಳಿಗೆ ಮುಡಿಪಾದ, ಛಾಯಾಚಿತ್ರಗಳಿಂದ ಕಳೆಕಟ್ಟಿರುವ ಇನ್ನೊಂದು ಬ್ಲಾಗಿದೆ. ಇಲ್ಲಿಯ ಹೆಚ್ಚಿನ ಬರಹಗಳು ಇಂಗ್ಲಿಷಿನಲ್ಲಿವೆ. ಇತ್ತೀಚಿನ ಬರಹದಲ್ಲಿ ತಮ್ಮ ಬ್ಲಾಗಿಗೆ ವರ್ಷ ತುಂಬಿರುವ ಬಗ್ಗೆ ನಮ್ರತೆಯಿಂದ ಬರೆದಿದ್ದಾರೆ.

ನವಿಲಗರಿ (೨-೩-೦೮)

ದಿನದ ಬ್ಲಾಗಿನ ಅತಿಥಿ ಸಾಗರದ ಹುಡುಗ ಸೋಮು ಅವರ ಭಾವನೆಗಳ ನವಿಲಗರಿ. ಕನ್ನಡ ಓದು ಮತ್ತು ಬರೆಯುವುದರ ಬಗ್ಗೆ ತುಂಬ ಪ್ರೀತಿಯಿರುವ ಈ ಯುವಪ್ರತಿಭೆ "ಅಮ್ಮ ನೀನು ಸುಳ್ಳಿಯಲ್ಲವೇ" ಎಂಬ ಅಪ್ಯಾಯಮಾನ ಕವಿತೆಯಿಂದ ಕನ್ನಡದ ಜಾಲಿಗರ ಮನ ಗೆದ್ದವರು. ಹಳ್ಳಿಯ ಹಿನ್ನೆಲೆಯ ಈ ಕವಿ ಹೃದಯಕ್ಕೆ ಸಾಹಿತ್ಯವೆಂದರೆ ವಿಶೇಷ ಅಭಿಮಾನ. ಓದಲು ಮುದ ಕೊಡುವ ಭಾವನೆಗಳ ಅಲೆಯೇರಿದ ಸಾವಿರ ಕಣ್ಣುಗಳ ಗರಿಗೆದರಿದ ಕವಿತೆಗಳಿಲ್ಲಿವೆ.

ಇತ್ತೀಚಿನ "ಕೆಲವು ಬಯಕೆಗಳು "- ಮಣ್ಣುಗೂಡಿದ ಆಸೆಗಳನ್ನ ನವಿರಾಗಿ ಎದೆಯ ಪಲ್ಲಕ್ಕಿಯಲ್ಲಿ ಹೊತ್ತು ತಂದು ಓದುಗರ ಮನದಂಗಳಕ್ಕೆ ಅಕ್ಷರದ ಮೆಟ್ಟಿಲಿಟ್ಟು ಇಳಿಸುವ ಕವನ. ನೆನಪಿಗೆ ಬರಬಾರದು ನೀನು, ನಿನ್ನ ನೆನೆಯುತ್ತಾ, ಗೆಳತಿಯ ಗುಟ್ಟು, ಕಣ್ಣುಗಳು, ಚುಟುಕುಗಳು, ಇತ್ಯಾದಿ ಎಲ್ಲ ಕವನಗಳು ಮೊದಲ ಓದಿಗೇ ಹತ್ತಿರಾಗುತ್ತವೆ.

ಅಮ್ಮ ನೀನು ಸುಳ್ಳಿಯಲ್ಲವೇ ಕವಿತೆಯ ನಾಲ್ಕು ಸಾಲು ನಿಮ್ಮ ಮೊದಲ ಓದಿಗೆ.

ಕಣ್ಣೊಳಗೆ ರಕ್ತ ಬರಿಸುವ ನೋವುಗಳಿದ್ದರು
ಒಳಗೊಳಗೆ ಅಳುತ್ತಾ ಅಳುತ್ತಾ
ಇಷ್ಟಗಲ ನಗುನಗುತ್ತಿದ್ದ, ಮಿನುಗುತ್ತಿದ್ದ
ಭೂಮಿ ತೂಕದ ಅಮ್ಮಾ.. ನೀನು ಸುಳ್ಳಿಯಲ್ಲವೆ?

ಪಾಸಿಂಗ್ ಥಾಟ್ಸ್ (೧-೩-೦೮)

ಇಂದಿನ ಬ್ಲಾಗಿನಂಗಳದಲ್ಲಿ ತಮ್ಮನ್ನು ತಾವು ಸಸ್ನೇಹೀ ಯಾತ್ರಿಕ ಎಂದು ಕರೆದುಕೊಂಡಿರುವ ಎಂ.ಡಿ, ಯವರು ಬರೆಯುವ "ಪಾಸಿಂಗ್ ಥಾಟ್ಸ್" ನ ಹೂಮೊಗ್ಗು ಬಿರಿದಿದೆ. ಕವಿತೆ, ಗಝಲ್, ಪುಟ್ಟ ಪುಟ್ಟ ಕತೆ, ಮಾತು ಕತೆ ಎಲ್ಲ ಬರೆದಿರುವ ಇವರ ಬ್ಲಾಗಿಗೆ ಕನ್ನಡದ ಹೆಸರೇ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂದು ಓದುಗರಿಗೆ ಅನಿಸಿದರೂ, ಬರಹಗಳೆಲ್ಲ ಅಪ್ಪಟ ಕನ್ನಡದಲ್ಲೇ ಇದೆ.

ಗಹನ ವಿಚಾರಗಳನ್ನ ಸರಳವಾಗಿ, ನವಿರಾಗಿ ಹೇಳುವ ಕಲೆಯರಿತಿರುವ ಇವರ ಮಂತ್ರೋಪಚಾರ, ನಾನಾಗಲೇ ಕವಿಯಾಗಿದ್ದೆ, ಮಷ್ಕಿರಿ ೧, ಪೌಂಕ್ ರಾಯಾ ಉಧೋ ಉಧೋ, ಏಟು, ಬಸವನಗುಡಿ ಪರಿಷೆ, ಆಟೋ ಸಂದೇಶಗಳು ಅವ್ವಾ ನೀ ಮತ್ಯಾವ ಹೆಣ್ಣಲ್ಲಿ ಸಿಗುತ್ತೀ, ಗುಬ್ಬಿ ಜೀವನ, ವಾಹ್ ತಾಜ್, ಆಟೋ ಸಂದೇಶಗಳು ಮೊದಲಾದ ಎಲ್ಲ ಬರಹಗಳು ಮುದ ನೀಡುತ್ತವೆ.

ಮೊದ ಮೊದಲ ಕೆಲವು ಪೋಸ್ಟ್‌ಗಳಲ್ಲಿ ಒಂದೆರಡು ಹಿಂದಿ ಮತ್ತು ಇಂಗ್ಲಿಷ್ ಭಾವಾಭಿವ್ಯಕ್ತಿಗಳಿವೆಯಾದರೂ, ಇತ್ತೀಚಿನ ಎಲ್ಲ ಬರಹಗಳೂ ಕನ್ನಡದಲ್ಲಿವೆ. ಲೇಖಕರ ಗಝಲ್ ಪ್ರೀತಿ ಎಲ್ಲ ಬರಹಗಳಲ್ಲೂ ವ್ಯಕ್ತವಾಗಿವೆ. ದಿನದಿನದ ಘಟನೆಗಳಲ್ಲಿ ಮನಸ್ಸನ್ನು ತಾಕಿ ಹೋದ ಭಾವುಕ ಕ್ಷಣಗಳನ್ನು ಅಕ್ಷರವಾಗಿಸುವ ಪ್ರಯತ್ನ ಲೇಖಕರದು. ಕತೆಯಲ್ಲಿ ಬರುವ ಸಣ್ಣ ಊರಿನ ಟೇಲರ್ ಲೋಕದ ಅನಾವರಣ, ಆಸಕ್ತಿಯುತವಾಗಿದೆ. ವಿರಾಮದ ಓದಿಗೆ ಖುಶಿ ಕೊಡುವ ಬ್ಲಾಗಿದು.

ಇ-ಜ್ಞಾನ (೨೯-೨-೦೮)

ಇಂದಿನ ಬ್ಲಾಗ್ ಬೊಗಸೆಯಲ್ಲಿ ಸಹೃದಯೀ ಲೇಖಕರ ಸಮೂಹವೊಂದು ವಿಜ್ಞಾನ ವಿಷಯಗಳನ್ನು ಕನ್ನಡಲ್ಲಿ ಹಂಚಿಕೊಳ್ಳುತ್ತಿರುವ ಒಂದು ಶ್ಲಾಘನೀಯ ಪ್ರಯತ್ನ - ಇ-ಜ್ಞಾನ. ಕೊಳ್ಳೇಗಾಲ ಶರ್ಮ, ಟಿ.ಆರ್.ಅನಂತರಾಮು, ಟಿ.ಜಿ.ಶ್ರೀನಿಧಿ,ಡಾ.ವಿ.ಎನ್.ನಾಯಕ ಅವರ ಹಲವಾರು ವಿಚಾರಭರಿತ ಲೇಖನಗಳು, ಸರಳ ಕನ್ನಡದಲ್ಲಿ, ಸುಲಭವಾಗಿ ಅರ್ಥವಾಗುವಂತೆ, ವಿಷಯದ ಮೌಲ್ಯ ಕಳೆಯದಂತೆ, ಇಲ್ಲಿ ಅಚ್ಚುಕಟ್ಟಾಗಿ ಪ್ರಕಟಿಸಲ್ಪಟ್ಟಿವೆ. ಇಲ್ಲಿನ ಕೆಲ ಲೇಖನಗಳು ಕನ್ನಡ ಪತ್ರಿಕೆಗಳ ಪುರವಣಿಗಳಲ್ಲಿ ಈಗಾಗಲೇ ಪ್ರಕಟಗೊಂಡಿವೆ. "ವಿಜ್ಞಾನ ವಿಷಯಗಳನ್ನು ಸುಲಭ ಭಾಷೆಯಲ್ಲಿ ಎಲ್ಲರಿಗೂ ತಲುಪಿಸುವ ಮಹತ್ವಾಕಾಂಕ್ಷೆ ಈ ಬ್ಲಾಗಿನದ್ದು" ಅಂತ ಬ್ಲಾಗಿನ ಪರಿಚಯದಲ್ಲಿದೆ.

ಇತ್ತೀಚಿನ ಬರಹ - ಮೊಬೈಲ್ ಫೋನು ಮತ್ತು ಮಿದುಳಿನ ಕ್ಯಾನ್ಸರ್ - ಎಂಬ ಲೇಖನದಲ್ಲಿ ಶರ್ಮರವರು ಮೊಬೈಲ್ ಫೋನಿನ ಅತಿಬಳಕೆಯ ಬಗ್ಗೆ ಇರುವ ಮಿಥ್ಯಾರೋಪದ ಬಗ್ಗೆ ಜಗತ್ತಿನ ವಿಜ್ಞಾನಿಗಳ ಸಮುದಾಯ ಏನೆಂದಿದೆ ಎಂಬುದನ್ನು ಚರ್ಚಿಸಿದ್ದಾರೆ. ಟಿ.ಆರ್.ಅನಂತರಾಮು ಅವರು ಬರೆದಿರುವ "ನಿಷೇಧಿತ ಪುರಾತತ್ವ - ಏನಿದರ ಮಹತ್ವ" ಲೇಖನದಲ್ಲಿ ರಿಚರ್ಡ್ ಥಾಮ್ಸನ್ ಮತ್ತು ಮೈಕಲ್ ಕ್ರೆಮೋ ಎಂಬ ಲೇಖಕರು ಬರೆದಿರುವ ವಿವಾದಿತ ಫರ್ ಭಿಡನ್ ಆರ್ಕಿಯೋಲಜಿ ಮತ್ತು ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮನ್ ರೇಸ್ ಎಂಬ ಎರಡು ಪುಸ್ತಕಗಳ ಸಾರಸಂಗ್ರಹವನ್ನು ಸೊಗಸಾಗಿ ಬರೆದಿದ್ದಾರೆ. ಬರಹದ ಕೊನೆಗೆ ನಾವು ಓದುವ ವಿಷಯಗಳ ಸತ್ಯಾಸತ್ಯತೆ ಮತ್ತು ಅವುಗಳ ರೀಚ್ ಬಗ್ಗೆ ಒಂದು ಪ್ರಬುದ್ಧ ವಿಚಾರವಿದೆ - "ಒಬ್ಬ ಸಾಮಾನ್ಯ ಓದುಗನಿಗೆ ಏನಿದೆ ಆಯ್ಕೆ? ಭಗವದ್ಗೀತೆಯನ್ನು ಓದಬಹುದು, ಬೈಬಲ್ಲನ್ನು ಓದಬಹುದು, ಕುರ್ ಆನ್ ಅನ್ನೂ ಓದಬಹುದು. ಡಾರ್ವಿನ್ನನ ವಿಕಾಸವಾದವನ್ನು ಓದಿ ತಲೆದೂಗಬಹುದು, ಸೃಷ್ಟಿವಾದಿಗಳ ವಾದಸರಣಿಯನ್ನು ಮೆಚ್ಚಬಹುದು. ಯಾವ ವಿಚಾರವನ್ನು ತರ್ಕಬದ್ಧವಾಗಿ ಮನಸ್ಸಿಗೊಪ್ಪುವಂತೆ ಪ್ರತಿಪಾದಿಸಲಾಗುತ್ತದೆಯೋ ಅಂಥವು ಬೇಗ ಮನದಾಳದಲ್ಲಿ ನೆಲೆಯಾಗಿಬಿಡುತ್ತವೆ. ಈ ಹಿನ್ನೆಲೆಯಲ್ಲಿ ‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮನ್ ರೇಸ್' ಓದಬಹುದು.." ಡಾ. ನಾಯಕರ "ನಮ್ಮ ನದಿಗಳು ಮತ್ತು ಜೀವವೈವಿಧ್ಯ" ನಾವೆಲ್ಲರೂ ಓದಲೇಬೇಕಾದ ಬರಹ.

ಶರಧಿಯ ಹನಿಹನಿಯನ್ನೂ ಹೇಗೆ ಪರಿಚಯ ಮಾಡಿಸುವುದು. ಓದಿನ ಹರಿವಿಗೆ ನಾವೇ ಮೈಯೊಡ್ಡಿಕೊಳ್ಳುವುದೊಂದೇ ದಾರಿ.

ಮಧುವನ (೨೮-೨-೦೮)

ಇಂದಿನ ಬ್ಲಾಗಿನಂಗಳದಲ್ಲಿ ಅರಳಿ ನಿಂತಿರುವುದು ಮಲೆನಾಡಿಗ ಮಧು ಅವರ ನೆನಪಿನ ಮಧುವನ. ನೆನಪಿನ ತೋಟದಲ್ಲಿ ಕಂಡ ಸುಂದರ ದೃಶ್ಯಕಾವ್ಯಗಳನ್ನು ದಾಖಲಿಸುವ ಪ್ರಯತ್ನವೆಂಬ ನಮ್ರ ಅಡಿಬರಹವಿದೆ. ನವಿರು ಹಾಸ್ಯದ ಕತೆ ಮತ್ತು ಬರಹಗಳಿಂದ ರಂಜಿಸುವ ಈ ವನ ಇತ್ತೀಚೆಗಷ್ಟೇ ಚಿಗುರಿ ಹೂಬಿಡುತ್ತಿದೆ. ಅಲ್ಲಲಿ ಇಂಪಾದ ಗಾನದುಲಿ ಕೂಡಾ. ಇನ್ನೇನು ಚೈತ್ರ ಹತ್ತಿರಾಗುತ್ತಿದೆ. ಮಧುರ ಕಲ್ಪನೆಗಳ ಹೂಗಿಡಗಳಲ್ಲಿ ಅಕ್ಷರ ಭ್ರಮರದ ನಾದ ಸದಾ ಅನುರಣಿಸಲಿ ಎಂಬ ಆಶಯ ಜಾಲಿಗರದು.

ಇತ್ತೀಚೆಗಷ್ಟೇ ಬರೆದ ನಾದಮಯ ಈ ಲೋಕವೆಲ್ಲ.. ಬರಹದಲ್ಲಿ ಸಂಗೀತ ಕಲಿಯುವ ಉತ್ಸಾಹದ ಯುವಕನ ಆಸೆ ನಿರಾಸೆ ಮತ್ತು ಸುತ್ತಲ ಜಗದ ವಿವಿಧ ನಾದಗಳನ್ನ ಕೇಳಿಸುವ ಒಳಗಿವಿ, ಅದನ್ನೇ ಮರುದನಿಸುವ ಮನದ ವೀಣೆಯ ಅನೂಹ್ಯ ರಾಗ ಎಲ್ಲ ಇವೆ. ದಿನದ ಕೆಲಸಗಳು, ಬ್ಯಾಚುಲರ್ ಒಬ್ಬನ ಮಿತಿ ಮತ್ತು ಉತ್ಸಾಹಗಳ ಪ್ರಾಮಾಣಿಕ ಅಭಿವ್ಯಕ್ತಿಯಾಗಿ ಹೊಮ್ಮಿರುವ ಈ ಬರಹ ಓದಿದವರ ಮನದಲ್ಲಿ ವಿಷಾದದ ರಾಗದೆಳೆಗಳನ್ನು ಹೊಮ್ಮಿಸುತ್ತದೆ. ಅಬ್ಬಲಿಗೆ ದಂಡೆ, ಗಣೇಶನ ಮದುವೆ,ಮೆಜೆಸ್ಟಿಕ್ ಮಾಲಕಂಸ್,ನೀನಿಲ್ಲದೆ ಬಾಳೊಂದು ಬಾಳೇ,ಶ್ವಾನ ಪುರಾಣ, ಹಾವೇ ಹಾವೇ ಹಾವೊಳು ಹೂವೆ, ಇತ್ಯಾದಿ ಬರಹಗಳ ವಿಷಯ ವೈವಿಧ್ಯ, ಸಂಗೀತದ ಸಾಥ್, ಅಕ್ಷರಗಳ ಚಿನ್ನಾಟ, ನವಿರು ನಿರೂಪಣೆ, ಎಲ್ಲವೂ ತುಂಬ ಭರವಸೆ ಮೂಡಿಸುತ್ತವೆ.

ಒಳಗೂ ಹೊರಗೂ (೨೬-೨-೦೮)

ಇಂದಿನ ಬ್ಲಾಗ್ ಬಾನಿನ ಅತಿಥಿ, ಅಲೆಮಾರಿ ಎಂಬ ಅನಾಮಧೇಯ ಹೆಸರಿನಲ್ಲಿ ಯುವ ಪತ್ರಕರ್ತರೊಬ್ಬರು ನಡೆಸುತ್ತಿರುವ "ಒಳಗೂ ಹೊರಗೂ". ಅಕ್ಷರ ಪಯಣದ ಈ ಬಾಗಿಲಲ್ಲಿ ಹೊರಗಿನಿಂದಕ್ಕೆ ಸ್ಪಂದಿಸುವ ಒಳಗನ್ನೂ.. ಒಳಗಿನ ಮಾತನ್ನು ಕೇಳುತ್ತಾ ಹೊರಗಿನ ಜೊತೆ ನಡೆಯುವುದನ್ನೂ ಹತ್ತಿರದಿಂದ ನೋಡುವ ಪ್ರಯತ್ನವಿದೆ. ಬರೆಯುವ ಮತ್ತು ಓದುವ ಕಾಲದಲ್ಲೇ ಹೊಳೆದು ಬಿಡಬಹುದಾದ ಅನೇಕ ಸಂಗತಿಗಳನ್ನು ಹೇಳಿಕೊಳ್ಳುವ ತವಕವೂ ಇದೆ. ಥೇಟ್ ಕೆರೆ-ದಡದ ಆಟ, ನೆಟ್ಟಿರಲಿ ಇಲ್ಲಿ ನಿಮ್ಮ ನೋಟ....ಎನ್ನುತ್ತಾ, ಅಡ್ಡಬರುವವರನ್ನು ಒಳಗೂ ಹೊರಗೂ? ಎಂದು ಪ್ರಶ್ನಿಸುವ ಖುಷಿಯೂ ಕುಶಲತೆಯೂ ಲೇಖಕರಿಗಿದೆ.

ಇತ್ತೀಚಿನ ಬರಹ - ಆಕ್ಸಿಡೆಂಟ್ ಆಗ್ಲಿಲ್ಲ..ಅವರು ಉಳೀಲಿಲ್ಲ... - ನಗರದ ಬದುಕಿನಲ್ಲಿ ಹಿರಿಯ ಜೀವವೊಂದರ ತಳಮಳದ ಕ್ಷಣಗಳನ್ನು ಮನಃಸ್ಪರ್ಶಿಯಾಗಿ ಕಟ್ಟಿಕೊಡುತ್ತದೆ. ನೋಡಿದ ಚಲನಚಿತ್ರಗಳ ಸಂಗ್ರಹಾನುವಾದ ಮತ್ತು ವಿಶ್ಲೇಷಣೆ, ಓದಿದ ಕವಿತೆಗಳ ಬಗ್ಗೆ ಚರ್ಚೆ, ಕಾಡಿದ ಸಾಲುಗಳ ಮನನ ಇವೆಲ್ಲ ಇವರ ಸರಳ ಅಭಿವ್ಯಕ್ತಿಗಳು. ಯಾರೋ ಬಿಟ್ಟು ಹೋದ ಹೆಜ್ಜೆ ನಮಗೆ ಸಿಕ್ಕುವುದಿಲ್ಲ, ಅಲೆ ಅಲೆ ಧೂಮಲೀಲೆ, ಮುಂದುವರಿದ ನಂಬಿಕೆಯ ಪಯಣ, ಇವತ್ತಿನ ಮಾಧ್ಯಮ ಕವಿತೆಯೇ, ಹೋದುದಕ್ಕಿಂತ ಒಂದು ಬಾರಿ ಹೆಚ್ಚು ಮರಳಿ ಬಾ.. ಎಲ್ಲವೂ ಒಳಗೆ ಹೊರಗೆ ಸುಳಿಯುತ್ತಾ, ನೆನಪಿನ ಗುಂಗಿನಲ್ಲಿ ಉಳಿಯುವಂತದ್ದು.

ಪಿಚ್ಚರ್ (೨೫-೨-೦೮)

ಹೆಸರಿನ ಮುಂದೆ ಗುಂಡ್ಕಲ್ ಎಂಬ ಪುಟ್ಟ ಊರನ್ನೂ ಹೊಂದಿರುವ ಪರಮೇಶ್ವರ್ ಅವರ ಪಿಚ್ಚರ್ ಈ ದಿನದ ಬ್ಲಾಗ್ ಬೊಗಸೆಯ ಅತಿಥಿ. ವೃತ್ತಿಯಲ್ಲಿ ಸಿನೆಮಾ ಪತ್ರಕರ್ತರಾಗಿರುವ ಗುಂಡ್ಕಲ್, ತೆರೆಯ ಮೇಲಿನ ಹಾಗೂ ತೆರೆಯ ಹಿಂದಿನ ಕಥೆಯನ್ನು ಸೊಗಸಾಗಿ ಹೇಳಬಲ್ಲರು. ಬಣ್ಣದ ಲೋಕದ ಬೆರಗನ್ನು ಹತ್ತಿರದಿಂದ ಪರಿಚಯಿಸುತ್ತಾ, ಚೆಂದದ ಕವಿತೆಯನ್ನೂ ಗುನುಗುನಿಸಬಲ್ಲರು. ಆರಾಮವಾಗಿ ಕುಳಿತು ನೋಡಬಹುದಾದ ಸಿನೆಮಾವನ್ನು ಅಷ್ಟೇ ತನ್ಮಯರಾಗಿ ಓದುವಂತೆಯೂ ಬರೆಯಬಲ್ಲರು. ಕವಿತೆ, ಲೇಖನ, ತಮಾಷೆ, ಕಾರ್ಟೂನು ಇತ್ಯಾದಿಗಳ ರಸಾಯನಗಳನ್ನು ಹೊಂದಿರುವ ಅವರ ಬ್ಲಾಗ್, ಹೊಸ ಚಿತ್ರಗಳಿಗೊಂದು ಪ್ರೀಮಿಯರ್.

ಪಿಚ್ಚರ್‌! ಎಂಬ ಹೆಸರಿದ್ದ ಕೂಡಲೇ ಇದು ಕೇವಲ ಸಿನಿಮಾ ಬರ­ಹ­ಗಳ ಬ್ಲಾಗ್‌ ಅಲ್ಲ ಎಂದು ಹೇಳಿಕೊಂಡಿರುವ ಪರಮೇಶ್ವರ್, ಬೆಳ್ಳಿಪರದೆಯ ಬಳುಕಿನ ಬೆಳಕಿನಲ್ಲಿ ಹೊಟ್ಟೆಪಾಡಿನ ಅಸಹಾಯಕತೆಯನ್ನೂ, ಅದರಾಚೆಗಿನ ಬದುಕನ್ನೂ ನವಿರಾಗಿ ತೆರೆದಿಟ್ಟಿದ್ದಾರೆ. ತಮ್ಮ ನೇತ್ರ ಛಾಯಾಗ್ರಹಣಕ್ಕೆ ಸಿಕ್ಕ ಹಲವು ವಿಷಯಗಳನ್ನು ಸಹಜವಾಗಿ ಬರೆದಿದ್ದಾರೆ. ಬಣ್ಣದ ಬದುಕಿನ ಮೋಹವನ್ನು ಬೆನ್ನಿಗೆ ಕಟ್ಟಿಕೊಂಡು ಗಾಂಧೀನಗರಕ್ಕೆ ಬಂದವರ ಕಥೆಗೆ, ಏನ್‌ ಹುಡುಗರೋ ಯಾಕಿಂಗಾಡ್ತಾರೋ? ಎಂಬ ಸಿನೆಮಾ ಶೈಲಿಯ ಶೀರ್ಷಿಕೆ ಆಕರ್ಷಕವಾಗಿದೆ. ಕಿಟಕಿ, ಬಾಲ್ಕಿನಿ, ಸಿನೆಮಾ ಇತ್ಯಾದಿ ವಿಭಾಗಗಳಲ್ಲಿ ನಡೆಯುವ ಅವರ ಹೌಸ್ ಪುಲ್ ಪ್ರದರ್ಶನಗಳು ಒಟ್ಟು ಪಿಚ್ಚರ್‌ನ ಅಂದವನ್ನು ಇನ್ನಷ್ಟು ಹೆಚ್ಚಿಸಿವೆ.

ಗಣೇಶ್ ಮನೆ ಅರಮನೆ, ಗಾಳಿಪಟ: ಮಾತಿನ ಪಟ ಪ್ರೀತಿಯ ಪುಟ, ಸಿನಿಮಾ:ಗಜ ರಾಜ್ಯೋತ್ಸವ!, ಮತ್ತದೇ ಪ್ರೀತಿ, ಅದೇ ಬೆಳದಿಂಗಳು, ದಾದಾಗಿರಿಯ ದಿನಚರಿ ಹೀಗೆ ಇತ್ತೀಚೆಗೆ ಬಿಡುಗಡೆಗೊಂಡಿರುವ ಕನ್ನಡ ಚಿತ್ರಗಳ ಒಂದು ಸುತ್ತು ಹಾಕಿರುವ ಪರಮೇಶ್ವರ್ ಅದನ್ನು ಪ್ರೇಕ್ಷಕನ ಕಣ್ಣಲ್ಲಿ ನೋಡಿದ್ದಾರೆ. ಈ ಥಿಯೇಟರಿನಲ್ಲಿ ಪಿಚ್ಚರ್ ನೋಡಲು ಟಿಕೆಟ್ ಬೇಕಾಗಿಲ್ಲ.!

ಓದುವ ಹವ್ಯಾಸ (೨೪-೨-೦೮)

ಇಂದಿನ ಬ್ಲಾಗ್ ಬೊಗಸೆಯಲ್ಲಿ ಕಥೆಗಾರ ನರೇಂದ್ರ ಪೈ ಅವರ "ಓದುವ ಹವ್ಯಾಸ". ಇಲ್ಲಿ ಪುಸ್ತಕಗಳ ಬಗೆಗಿನ ಮಾತುಗಳಿವೆ. ಹೊಸ, ಹಳೆಯ ಪುಸ್ತಕಗಳ ಪರಿಚಯ, ಜಿಜ್ಞಾಸೆ, ಪ್ರಶ್ನೆ, ಚರ್ಚೆ, ಸಂವಾದ ಮತ್ತು ಓದುವ ಹವ್ಯಾಸವನ್ನು ಉತ್ತೇಜಿಸುವ ಎಲ್ಲ ಪ್ರಕ್ರಿಯೆಗಳಿಗೂ ಇಲ್ಲಿ ಅವಕಾಶವಾಗಬೇಕೆನ್ನುವುದು ಲೇಖಕರ ಆಶಯ. ಪುಸ್ತಕ ಪರಿಚಯ ಮತ್ತು ಅನುಭವ ಕಥನ, ಚಾರಣಾನುಭವಗಳ ಸರಳ ಅಭಿವ್ಯಕ್ತಿಗಳು ಓದಲು ಇಷ್ಟವಾಗುತ್ತವೆ.

ಇತ್ತೀಚೆಗೆ ಬರೆದ "ಕಾಡು ಅಲೆಯಲು ಹೊರಟು" ಬರಹದಲ್ಲಿ ಬಿಸಿಲೆಯ ಕನ್ನಡಿ ಕಲ್ಲಿನ ಚಾರಣದ ಹುಳಿಸಿಹಿ ಅನುಭವಗಳ ಕಥನವಿದೆ. ಮಕರಂದ ಸಾಠೆಯವರು ಬರೆದಿರುವ ‘ಸೂರ್ಯನನ್ನು ಕಂಡ ಮನುಷ್ಯ ‘ ಪರಿಚಯ, ಭಾಸ್ಕರ ಹೆಗಡೆಯವರ ‘ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ' ದ ಸೊಗಡಿನ ವರ್ಣನೆ, ಜಿ.ಪಿ. ಬಸವರಾಜು ಅವರ ‘ಕುಲುಕಣಿವೆಯಲ್ಲಿ' ಪ್ರವಾಸ ಕಥನದ ವಿಶ್ಲೇಷಣಾ ಪರಿಚಯ, ಮೊದಲಾದ ಪರಿಚಯ ವಿಮರ್ಶೆಗಳನ್ನು ಬರೆದಿರುವ ಇವರು ಸ್ವತಃ ಕಥೆಗಾರರು. ಇವರ ಕಥೆ ‘ಕನಸುಗಳು ಖಾಸಗಿ' ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ.

ಪರಿಚಯ ಮತ್ತು ವಿಮರ್ಶೆಯಲ್ಲಿನ ಪ್ರಾಮಾಣಿಕತೆ ಮತ್ತು ಓದಿನೆಡೆಗಿನ ಪ್ರೀತಿ ಈ ಬ್ಲಾಗಿನ ಎಲ್ಲಾ ಲೇಖನಗಳ ಗುಣವಿಶೇಷ.

ಮನದಾಳದ ಮಾತು (೨೩-೨-೦೮)

ಇಂದಿನ ಬ್ಲಾಗಿನಂಗಳದಲ್ಲಿ ಸಂದೀಪ ನಡಹಳ್ಳಿಯವರ ಮನದಾಳದ ಮಾತು. ಹವ್ಯಕ ಭಾಷೆಯ ಸೊಗಡು ಮತ್ತು ಮಲೆನಾಡಿನ ಹಿನ್ನೆಲೆ ಎಲ್ಲ ಬರಹಗಳಲ್ಲೂ ಎದ್ದು ತೋರುವ ಗುಣವಿಶೇಷ. ಕೆಲವು ಹಳೆಯ ನೆನಪು, ತಂತ್ರಜ್ಞಾನದ ವೃತ್ತಿಯ, ನೆಟ್ ಯುಗದ ಅನುಭವಗಳ ನೇರನೋಟ, ಸುತ್ತಲ ಸಮಾಜದ ಗತಿ ಮತ್ತು ಪ್ರಗತಿ ಇತ್ಯಾದಿ ವಿಷಯಗಳು ಇಲ್ಲಿ ತೆಳು ಹಾಸ್ಯದ ಲೇಪದೊಂದಿಗೆ ಅನಾವರಣಗೊಂಡಿವೆ. "ದುಃಖಕ್ಕಿಂತ ದುಗುಡ ಹೆಚ್ಚಾದಾಗ, ಅಳುವಿಗಿಂತ ಅಳುಕೇ ಮೇಲಾದಾಗ, ಮೌನವೇ ಮಾತಾಗುತ್ತದೆ!!!" ಎಂಬ ಅಡಿಬರಹವಿದೆ. ಅಲ್ಲಲ್ಲಿ ಇಣುಕುವ ಪನ್‌ಗಳು, ಪದ ಪ್ರಯೋಗಗಳು, ಅಕ್ಷರದೊಡನೆಯೇ ಆಡುವ ಆಟ ಓದುಗರಿಗೆ ಖುಷಿ ಕೊಡುತ್ತವೆ.

ಇತ್ತೀಚಿನ ಬರಹ - ಏನಿದೇನಿದು'ವಿನಲ್ಲಿ ತಾವು ಓದಿದ ಲೇಖನವೊಂದರ ಬಗ್ಗೆ ಸೂಚ್ಯಾರ್ಥದ ವಿಮರ್ಶೆ ಬರೆದಿದ್ದಾರೆ. ಗ್ರಹಣದ ಚಂದಿರನ ಚೆಲುವಾದ ಚಿತ್ರ ಮತ್ತು ಅಡಿಬರಹ, ಅವನ ನೆನಪೆಂಬ ಹವ್ಯಕ ಭಾಷೆಯ ಬನಿಯಿಳಿಯುವ ಬರಹ, ಮದುವೆಯೊಂದಕ್ಕೆ ಹೊನ್ನಾವರಕ್ಕೆ ಹೋದ ಅನುಭವ ಕಥನ, ದಾರಿಯಲ್ಲಿ ಸಿಗುವ ಬೋರ್ಡುಗಳಲ್ಲಿನ ತಮಾಷಿಗಳನ್ನು ಕೆಮೆರಾದಲ್ಲಿ ಹಿಡಿದು ಹಂಚಿಕೊಂಡಿರುವ ಕೆಲ ಚಿತ್ರಬರಹಗಳು, ಚಾರಣ ಮತ್ತು ಪ್ರವಾಸಾನುಭವ ಕಥನಗಳು, ನೋಡಿದ ನಾಟಕದ ಸಪ್ಪೆತನದ ಬಗ್ಗೆ ಬರೆದ ಉಪೇಕ್ಷೆಯ ಕಥನವಾದ ಹೀಗೊಂದು ತಂಪು ಸಂಜೆ, ಸಾಯ್ಲಿಬಿಡು, ಗಪ್ಪತಿ ಸತ್ತ, ಹೊಗೆಯಾದಳು ಹುಡುಗಿ ಇತ್ಯಾದಿ ಎಲ್ಲ ಬರಹಗಳೂ ಓದಿದ ಕೂಡಲೇ ಕಾಡತೊಡಗುತ್ತವೆ.

ನಮ್ಮೂರಿಗೆ ಮೊದಲ ಬಾರಿಗೆ ಟಿ.ವಿ. ಬಂದಾಗ, ಶಿವಜ್ಜನ ಬಾಯಿಂದ ಹೊರಟ ಮಾತುಗಳವು. ಮನೆಯಮೇಲೆ ಕಬ್ಬಿಣದ ಗೂಟಕ್ಕೆ ಅಡ್ಡಡ್ಡ ಕಟ್ಟಿದ್ದ ಆಂಟೆನಾವನ್ನು ಅವರು ಹೋಲಿಸಿದ್ದು ಏಣಿಗೆ!! ಹೌದು, ಆಂಟೆನಾ ಏಣಿಯಂತೆ ಕಾಣುವುದು ಸುಳ್ಳಲ್ಲ. ಹಾಗು ಕೆಳಗೆ ಚೌಕಿಯಲ್ಲಿ, ಏಣಿ ಮೆಟ್ಟಿಲ ಕೆಳಗೆ ಹೊಸದಾಗಿ ಬಂದು ಕುಳಿತ ಡಬ್ಬದಲ್ಲಿ ಕುಣಿಯುವ ಗೊಂಬೆಗಳು... ಮೇಲಿನ ಏಣಿಗೂ, ಕೆಳಗಿರುವ ಏಣಿಯಡಿಯ ಡಬ್ಬಕ್ಕೂ ಅವರು ಕೊಂಡಿಯನ್ನು ಹುಡುಕಿದ್ದು... ಯೋಚಿಸಿದರೆ ಕಳೆದುಹೋಗುತ್ತೇನೆ, ನೆನಪಿನ ಹೊಳೆಯಲ್ಲಿ ಎನ್ನುತ್ತಾ, ..ಮೇಲ್ಮೆತ್ತಿನ ಮನೆ ಮೇಲೆ ಏಣಿ ಅಡ್ಡಾಕಿದ್ದ; ಏಣಿ ಮೆಟ್ಲ್ ಕೆಳಗೆ , ಗೊಂಬೆ ಕುಣಿತು ಎಂದು ಸೊಗಸಾಗಿ ಬರೆದಿದ್ದಾರೆ.

ಬ್ಲಾಗಾಯಣ (೨೧-೨-೦೮)

ಇಂದಿನ ಬ್ಲಾಗಿನಂಗಳದಲ್ಲಿ ಯುವ ಕವಿ ಶ್ರೀಕಾಂತ್ ವೆಂಕಟೇಶ್ ಅವರ ಬ್ಲಾಗಾಯಣ. ಶ್ರೀ ಸಾಮಾನ್ಯನ ಕಣ್ಗಳಲ್ಲಿ ನೋಡಿದ ಆಸಕ್ತಿಯುತ ವಿಷಯಗಳನ್ನು ಕವಿತೆಯ ಹದಕ್ಕೆ ಇಳಿಸಿ ಸವಿಯಲು ಇಟ್ಟಿದ್ದಾರೆ. ಅಲ್ಲಲ್ಲಿ ಮೆಚ್ಚಿನ ಕವಿಗಳ ಕೆಲವು ಅಪರೂಪದ ಕವಿತೆಗಳನ್ನು ಸಂದರ್ಭೋಚಿತವಾಗಿ ವಿವರಗಳೊಂದಿಗೆ ನೀಡಿದ್ದಾರೆ. ಸಣ್ಣಕಥೆ, ಕವಿತೆಗಳು, ಹರಟೆ, ಪ್ರಬಂಧಗಳು ಎಲ್ಲ ಪ್ರಕಾರಗಳನ್ನೂ ಸಮರ್ಥವಾಗಿ ಬಳಸಿಕೊಂಡಿರುವ ಈ ಯುವಪ್ರತಿಭೆ ಆರಿಸಿಕೊಂಡಿರುವ ವಿಷಯಗಳು ಆಸಕ್ತಿಯುತವಾಗಿವೆ.

ಕೆಲವು ಲೇಖನಗಳು ಉತ್ತಮ ಸಂಗೀತ ಮತ್ತು ಕಾವ್ಯಗಳ ಚಿಂತನೆ, ವಿವರಣೆಯೊಂದಿಗೆ ಮತ್ತೆ ಕೆಲವು ನವಿರಾದ ರೇಖಾಚಿತ್ರದೊಂದಿಗೆ ಸೊಗಸಾಗಿವೆ. ಗಾಳಿಯಲ್ಲಿ ಧಾಳಿ, ನಕ್ಷೆ ನಿಲುವು, ಗಹನ ಗಾಂಧಾರ, ಕ್ಷಣಗಣನೆ, ವ್ಯಾಪ್ತಿ, ಬಣ್ಣಿಸಲಾರದ ಭವ, ಹಯವದನರಾಯರ ಕುದುರೆ, ಚಿತ್ಸುಖ, ಮರಳು ಮತ್ತು ನೊರೆ, ಪೂರ್ವಾಗ್ರಹ, ಪ್ರಿಯಂವದೆ..ಇತ್ಯಾದಿ ಎಲ್ಲ ಕವಿತೆಗಳು ಚೆಲುವಾದ ಸಾಲುಗಳಲ್ಲಿ, ವಿಷಯ ವೈವಿಧ್ಯದಲ್ಲಿ ಕಂಗೊಳಿಸುತ್ತಾ ಓದಲು ಕೈಬೀಸಿ ಕರೆಯುತ್ತವೆ. ಇತ್ತೀಚಿನ ಬರಹ ಹೃದಯ ಹೃದಯ ಮಿಲನದೊಳು - ಪ್ರೇಮಿಗಳ ದಿನಕ್ಕೆ ಅರ್ಪಿತವಾಗಿದ್ದು, ಪುತಿನ ಅವರ ಕವಿತೆಯನ್ನು ಉದ್ಧರಿಸಿದೆ. ಬಣ್ಣಿಸಲಾಗದ ಭವ ಕವಿತೆಯ ಕೆಲ ಸಾಲುಗಳು ನಿಮಗಾಗಿ -

ಸುತ್ತ ಸಮೃದ್ಧಿಯ ನಡುವೆಯೂ
ಮನ ಹೆತ್ತ ಅಗೋಚರ
ಕೊರತೆ.. ನೋವು .. ಬೇಗೆ...
ದಿನವೆಲ್ಲ ಹಾಡಿ-ಪಾಡಿ, ಕುಣಿದು ದಣಿದು
ಮೂರ್ತಾಸು ನಕ್ಕು ನಲಿದು
ಉಲ್ಲಾಸದೆ, ಅಬ್ಬಾ! ಉಸ್ಸೇಂದು
ಕೂರುವಷ್ಟರಲ್ಲಿ........

ಕೂಗು (೨೦-೨-೦೮)

ಇಂದಿನ ಬ್ಲಾಗ್ ಬಾನಿನಲ್ಲಿ ಚಂದಿನ ಅವರ ಕೂಗು ಲೇಖಕರು ಸೊಗಸಾದ ಕವಿತೆಗಳನ್ನ ಲಯಬದ್ಧವಾಗಿ ಕಟ್ಟಿಕೊಟ್ಟಿದ್ದಾರೆ. ವಿಷಯ ವೈವಿಧ್ಯ, ಪ್ರಾಸ, ಮತ್ತು ಸರಳ ಅನುಭಾವ ಈ ಕವಿತೆಗಳ ವೈಶಿಷ್ಟ್ಯ. ಅಂತರ್ಜಾಲ, ಒಲವು, ಅಣುಒಪ್ಪಂದ,ಅಹಿಂದ ಚಳುವಳಿ, ಕೋಳಿಜ್ವರ, ರಾಜ್ ಠಾಕ್ರೆ ವಿವಾದ, ಕರುನಾಡು, ಬದುಕಿನ ಪಯಣ, ಸುತ್ತಲ ಚೆಲುವು, ಸೋತು ಗೆಲ್ಲುವ ಪರಿ ಮೊದಲಾದ ವಿಷಯಗಳು ಮನಮುಟ್ಟುವ ಸಾಲುಗಳಲ್ಲಿ ಹಿತವಾದ ಓದನ್ನು ತೆರೆದಿಡುತ್ತವೆ.

ಒಲವಿನಾ ರಥವೇರಿ, ಎಲ್ಲಿಂದಲೋ ಬಂದವನು, ಆಹಾ ಭುವಿಯೇ ನಾಕವು, ಎಂದು ಬರುವಳು, ಆಸೆಗಳಿದ್ದರೆ ಸಾಕೆ, ಕೈಯ ಮುಗಿದು, ನಡೆಸು ಪಯಣವನು, ನಾ ಕಂಡ ಕನಸುಗಳು, ಮಾಯವಾದರು ಎಲ್ಲಿಗೆ, ಜಾಗತೀಕರಣದ ಮಳೆ, ಆತ್ಮಸಂತುಷ್ಟಿ, ಮರೆತ ದಾರಿ, ಕಡಲ ಕಿನಾರೆಗೆ, ಧರ್ಮ ಕಾರಣ, ಕಳಚಿದ ಕೊಂಡಿ.. ಇತ್ಯಾದಿ ಎಲ್ಲ ಕವಿತೆಗಳೂ ಆಸಕ್ತಿಕರವಾಗಿದ್ದು, ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಕವಿಯ ಮನದ ಕೂಗು ಓದುಗರ ಮನಸಿನಲ್ಲಿ ಮರುದನಿಗೊಳ್ಳುತ್ತದೆ.

ನಿಮ್ಮ ಕಿರು ಓದಿಗೆ ಕೆಲ ಸಾಲುಗಳು

ಎಂದು ಬರುವಳು ಕವಿತೆಯಿಂದ -
ಕಣ್ಸನ್ನೆಯಲೇ ಕುಶಲವ ಕೇಳಿ
ತುಟಿಯಂಚಿನಲಿ ಪ್ರಶ್ನೆಗಳೆಲ್ಲವ
ಸೆರೆಹಿಡಿದು, ಬಿರುಗಾಳಿಯನೆಬ್ಬಿಸಿ
ಮಿಂಚಂತೆ ಮಾಯವಾದಳೆಲ್ಲಿಗೆ.

ಶ್ರೀ..ಮನೆ (೧೯-೨-೦೮)

ದಿನದ ಬ್ಲಾಗಿನಂಗಳದ ಅತಿಥಿ ಶ್ರೀಧರ್ ಅವರ ಶ್ರೀ..ಮನೆ. ಪೂರ್ವ ಆಫ್ರಿಕಾದ ತಾಂಜಾನಿಯ ಎಂಬ ದೇಶದ ಮೂವಂಜ ಎಂಬ ನಗರದಲ್ಲಿ ವೃತ್ತಿನಿರತರಾಗಿರವ ಶ್ರೀಧರ್ ಅಲ್ಲಿನ ಬದುಕು, ಬವಣೆಗಳ ಕುರಿತು ನವಿರಾಗಿ ಬರೆಯುತ್ತಾರೆ. ಮೂಲತಃ ತುಮಕೂರು ಜಿಲ್ಲೆಯ ಸಿರಾ ತಾಲೂಕಿನವರಾದ ಇವರು ಮೀನುಗಾರಿಕೆಯಲ್ಲಿ ಪದವಿ ಮುಗಿಸಿ, ಹತ್ತು ವರ್ಷಗಳು ಸ್ವದೇಶ ಸುತ್ತಿ ನಂತರ ವಿದೇಶಕ್ಕೆ ಹಾರಿದವರು. ರಂಗುರಂಗಿನ ಕಾಮನ ಬಿಲ್ಲು, ಅದರ ನಡುವೆ ಕಷ್ಟಗಳ ಆರ್ಭಟ, ನಡುವೆ ಶಾಂತಿಯ ಗಾಳಿಪಟ ಇವೆಲ್ಲವುಗಳಿಂದ ಕೂಡಿದ ಶ್ರೀಸಾಮಾನ್ಯನ ಬದುಕು ಎಷ್ಟು ಸೊಗಸಲ್ಲವೇ ಎನ್ನುತ್ತಲೇ ಅದೆಲ್ಲವನ್ನೂ ಬ್ಲಾಗಿಸಿದ್ದಾರೆ.

ಇತ್ತೀಚೆಗೆ ತಮ್ಮ ಹುಟ್ಟು ಹಬ್ಬಕ್ಕೆ ಮುದ್ದು ಮಗ ಕಳುಹಿಸಿದ ಅಪರೂಪದ ಶುಭಾಶಯ ಪತ್ರವನ್ನು ಬ್ಲಾಗಿಗೆ ಸೇರಿಸಿರುವ ಇವರು, ರೈತನಾಗಿ ತಮ್ಮ ತಂದೆ ಕಂಡ ಕನಸು, ತಮ್ಮ ಮಗನ ಮೊದಲ ಸ್ನೇಹಿತನಾಗಿ ತಾವು ಅನುಭವಿಸುತ್ತಿರುವ ಖುಷಿಯನ್ನು ಭಾವುಕರಾಗಿ ಹೇಳಿದ್ದಾರೆ. ಆಫ್ರಿಕಾದಲ್ಲಿದ್ದುಕೊಂಡೇ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರ ಬಗ್ಗೆ ಬರೆದಿದ್ದಾರೆ. ತಾಂಜಾನಿಯ ಎಂಬ ಪುಟ್ಟ ದೇಶದ ಅಚ್ಚರಿಗಳನ್ನು, ಅಲ್ಲಿ ಮಕ್ಕಳಾದ ನಂತರ ಮದುವೆಯಾಗುವ ಅಪ್ಪ ಅಮ್ಮಂದಿರನ್ನೂ, ಇವೆಲ್ಲಾ ಸಾಮಾನ್ಯ ಎಂಬಂತಿರುವ ಅಲ್ಲಿನ ಹಕೂನ ಹರಾಖ ಎಂಬ ಸ್ಥಳೀಯ ಭಾಷೆಯ ಸೊಗಡನ್ನೂ ಹತ್ತಿರದಿಂದ ನೋಡಿ ವಿವರಿಸಿದ್ದಾರೆ.

ಕೀನ್ಯಾದಲ್ಲಿ ವಿಕೋಪಕ್ಕೆ ತಿರುಗಿರುವ ದ೦ಗೆಯ ಬಗ್ಗೆ ಬರೆಯುತ್ತಲೇ ಆಫ್ರಿಕಾ ಖಂಡಗಳ ಇತರ ಭಾಗಗಳಲ್ಲಿ ಬದುಕುತ್ತಿರುವ ಪರದೇಸಿಗಳ ತಲ್ಲಣವನ್ನು ತೆರೆದಿಟ್ಟಿದ್ದಾರೆ. ತಮ್ಮ ನೆಚ್ಚಿನ ನಟ ವಿಷ್ಣುವಿಗೆ ಬಹಿರಂಗ ಪತ್ರವನ್ನೂ ಬರೆದಿರುವ ಅಹರ್ನಿಶಿ ಎಂಬ ಈ ಶ್ರೀಧರ್, ತಮ್ಮ ಬ್ಲಾಗ್ ಬರಹಗಳನ್ನು ಪುಟ್ಟ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಜಗತ್ತಿನ ಸಾಮಾನ್ಯ ಘಟನೆಗಳನ್ನು ಕುತೂಹಲದ ಕಣ್ಣಲ್ಲಿ ನೋಡುವ, ಕಾಳಜಿಯಿಂದ ಸ್ಪಂದಿಸುವ ಅವರ ಬರಹಗಳಿಂದ ಶ್ರೀ..ಮನೆ ಶ್ರೀಮಂತವಾಗಿದೆ.

ಮನಸಿನ ಪುಟಗಳ ನಡುವೆ (೧೮-೨-೦೮)

ಇಂದಿನ ಬ್ಲಾಗ್ ಬೊಗಸೆಯಲ್ಲಿ ಚಾರಣಪ್ರಿಯ ಶ್ರೀಕಾಂತರ ಮನಸಿನ ಪುಟಗಳ ನಡುವೆ ಅರಳಿನಿಂತ ಬರಹಗುಚ್ಛ. ಅಲೆಮಾರಿಯಾದ ಇವರ ಮನಸ್ಸಿನಲ್ಲಿ ಅಲೆದಾಡುತ್ತಿರುವ ವಿಷಯಗಳನ್ನು ಇಲ್ಲಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮೊನ್ನೆ ಪ್ರೇಮಿಗಳ ದಿನದಂದು ತಮ್ಮ ಮನ ಗೆದ್ದಾಕೆಗೆ ಸುಂದರ ಕವಿತೆಯನ್ನರ್ಪಿಸಿರುವ ಈ ಭಾವಜೀವಿಯ ಸಾಲುಗಳು ಆಕರ್ಷಣೀಯವಾಗಿವೆ.

ಹಲವು ಮಧುರ ಕನಸ ಕಂಡು, ಅವಳಿಗೂ ಮನಸು ಕೊಟ್ಟು
ಚೆಲುವೆಯಾದ ನನ್ನವಳಿಗೆ ಸೋತುಹೋದೆನಲ್ಲ ನಾನು!.. ಎಂದು ಅಚ್ಚರಿ ಪಡುತ್ತಲೇ ...
ನನ್ನ ಜೀವನದಿಯಾದ ಅವಳು ಹೀಗೆ ಎಂದೆಂದೂ
ನನ್ನ ಜೀವನದಿ ಸುಖದ ನಾಳೆಗಳನು ನೀಡಲೆಂದು.. ಪದಗಳೊಡನೆ ಆಟವಾಡುತ್ತಾ ವಿನಂತಿಸುತ್ತಾರೆ.

ಕುದುರೆಮುಖ ಶಿಖರಕ್ಕೆ ಚಾರಣ, ಕೊಡಚಾದ್ರಿಯಂತಹ ಪ್ರಕೃತಿರಮ್ಯ ತಾಣವನ್ನ ವಾಣಿಜ್ಯೋದ್ದೇಶಗಳು ಅಂದಗೆಡಿಸುತ್ತಿರುವ ಬಗ್ಗೆ ಬರೆದ ಬರಹ, ಪೂರ್ಣಚಂದಿರ ಬರೆಸಿದ ಪದ್ಯ, ಬೆಣ್ಣೆಹೊಳೆ ಜಲಪಾತದ ಚಾರಣ, ಹಲವು ಹಳೆಯ ಹಾಡುಗಳ ಮಧುರ ಮೆಲುಕು, ಮಳೆಗೆ ಆಹ್ವಾನವೀಯುವ ಕವಿತೆ, ಬಾಲ್ಯದ ದಿನಗಳ ನೆನಪಿನ ಮಾಲೆ, ಶೂನ್ಯದಿಂದ ಕೋಪ-ಕೋಪದಿಂದ ಬೇಸರ ತರಹದ ಸರಳ ವಿಚಾರಪೂರ್ಣ ಬರಹಗಳು..ಎಲ್ಲ ಆಸಕ್ತಿಕರವಾಗಿದೆ. ಆಹ್ಲಾದ ಮತ್ತು ಪ್ರಕೃತಿಯೆಡೆಗಿನ ಪ್ರೀತಿ ಪುಟಪುಟದಲ್ಲೂ ತುಂಬಿಕೊಂಡಿವೆ.

ಬಾನಾಡಿ (೧೭-೨-೦೮)

ಇಂದಿನ ಬ್ಲಾಗ್ ಬಾನಿನ ಮಡಿಲಲ್ಲಿ ಸ್ಕೈಲಾರ್ಕ್ ಕಾವ್ಯನಾಮದ ಲೇಖಕರ ಬಾನಾಡಿ. ಭುವಿಯೆಲ್ಲಾ ಓಡಾಡಿ, ಬಾನೆತ್ತರಕ್ಕೆ ಬಂದಿದ್ದೇನೆ...ಬಾನಾಡಿಯಾಗಲು. ರೆಕ್ಕೆ ಬಂದಿದೆ. ಹಕ್ಕಿಯಾಗಿದ್ದೇನೆ. ಬಾನೆತ್ತರದಿಂದ ನೋಡುತ್ತೇನೆ... ಹಾರುತ್ತೇನೆ. ನಕ್ಷತ್ರಗಳನ್ನು ಹಿಡಿಯಲು. ನನ್ನ ರೆಕ್ಕೆ ಪುಟಗಳು ನಿಮಗೆ ಪುಳಕಿತವಾದರೆ ...ಹಾರಲು ಬಿಡಿ ... ಇನ್ನೂ ಎತ್ತರ. ಅಂತ ಕೇಳುತ್ತಾ ನಮ್ಮ ಮನಸ್ಸಿನ ಒಳಬಾಗಿಲು ತಟ್ಟುವ ಈ ಬ್ಲಾಗ್ ನ ಇತ್ತೀಚಿನ ಹಕ್ಕಿನೋಟ ದಾಸನ ಮಾಡಿಕೊ ಎನ್ನ ದಲ್ಲಿ..

ಬಾಲ್ಯದಲ್ಲಿ ಸಾಕಿ ಸಲಹಿದ ನಾಯಿಮರಿಯ ನೆನಪು, ಮನುಷ್ಯ ಸಮಾಜ ನಾಯಿಯೊಡನೆ ಹೊಂದಿರುವ ಬಾಂಧವ್ಯದ ಬಗ್ಗೆ ಆಪ್ತವಾಗಿ ಬರೆದಿದ್ದಾರೆ. ಮುಂಜಾನೆಯ ದಿನಚರಿಯಲ್ಲಿ ಮತ್ತೆ ಬಾಲ್ಯಕಾಲದ ಬೆಳಗುಗಳನ್ನು, ಹಳ್ಳಿಯಲ್ಲಿ ಬೆಳಕು ಕರೆಯುತ್ತಿದ್ದ ಕುಕ್ಕುಟ ಸಾಮ್ರಾಜ್ಯವನ್ನ..ನುಡಿಚಿತ್ರವಾಗಿಸಿದ್ದಾರೆ. ಸುಮಧುರ ನೆನಪುಗಳ ವಾಸನೆಯ - ಸುಮರಾಜಿ, ನೇರದಾರಿಯವರು ಬರಹದ ಬೇಡಿಕೆ, ಹೊಸವರ್ಷದ ಪಯಣದ ಕಾಲ್ದಾರಿ, ನಂಬಿಗಸ್ತ- ಬರಹದ ವ್ಯಕ್ತಿಚಿತ್ರ.. ಎಲ್ಲವೂ ಆಸಕ್ತಿ ಹುಟ್ಟಿಸುವ ಬರಹಗಳು. ಯುವ ಸಂವೇದನೆಗಳ ಹಕ್ಕಿನೋಟದಂತಹ ಬರಹಗಳ ಗುಚ್ಛವಿಲ್ಲಿದೆ.

ನೆಟ್ ನೋಟ (೧೬-೨-೦೮)

ಕನ್ನಡದಲ್ಲಿ ವೈಜ್ಞಾನಿಕ ಬರಹಗಳ ಬ್ಲಾಗ್‌ಗಳು ಕಡಿಮೆ. ಆದರೆ ಈ ಆರೋಪವನ್ನು ಅಲ್ಲಗಳೆಯುವಂತಿದೆ ಸುದೀಂಧ್ರ ಹಾಲ್ದೊಡ್ಡೇರಿಯವರ ನೆಟ್ ನೋಟ. ಸರಳ ಕನ್ನಡದಲ್ಲೇ ಕ್ಲಿಷ್ಟವೆನಿಸುವ ವೃಜ್ಞಾನಿಕ ವಿಷಯವನ್ನು ಸರಳೀಕರಿಸಿ ಹೇಳುವ ಕಲೆ ಸುದೀಂದ್ರ ಅವರದ್ದು. ಲೇಖನದ ಶೀರ್ಷಿಕೆಯಲ್ಲೇ ಪನ್ ಬಳಸಿ, ಅದರ ಅಂತಸ್ವತಃ ತೆರೆದಿಡುತ್ತಾ ಸೊಗಸಾಗಿ ಬರೆಯುವ ಜಾಣ್ಮೆಯೂ ಅವರಿಗೆ ಸಿದ್ಧಿಸಿದೆ.

ನೆಟ್ ನೋಟಕ್ಕೆ ಸಿಲುಕಿದ ಎಲ್ಲ ಲೇಖನಗಳು ಈಗಾಗಲೇ ಪತ್ರಿಕೆಯಲ್ಲಿ ಪ್ರಕಟಗೊಂಡವು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನೆಟ್ ನೋಟ ಎಂಬ ಕಾಲಂ ಬರೆಯುವ ಲೇಖಕರು ವಿಜ್ಞಾನ ಓದುಗರಿಗೆ ಪರಿಚಿತರೂ ಹೌದು. ಕದಡಿದ ನೀರಲಿ ಮೀನಿನ ಹೆಜ್ಜೆಯ ಹುಡುಕುತ ..... ಈ ಫೋನ್ ಮುಂದೆ ಬಾಯಿಬಿಟ್ಟರೆ ಬಣ್ಣಗೇಡು! ನೀರಿಗೂ ಅಂಟು - ಚ್ಯೂಯಿಂಗ್ ಗಮ್‍ನ ಹೊಸ ನೆಂಟು ಇತ್ಯಾದಿ ಲೇಖನಗಳಲ್ಲಿ ತೆಳು ಹಾಸ್ಯದ ಹಿನ್ನಲೆಯಲ್ಲಿ ವೈಜ್ಞಾನಿಕ ವಿವರಣೆಯಿದೆ. ನಮಗೆ ಅಗತ್ಯವಿರುವುದು ಉತ್ತಮ ಸಮಾಜ ನಿರ್ಮಿಸುವ ಎಂಜಿನೀಯರ್‌ಗಳು, ಭೀತಿ ಹೊಡೆದಟ್ಟುವ ತಂತ್ರ - ವಿಕಿರಣ ಪತ್ತೆ ಯಂತ್ರ ಮುಂತಾದ ಲೇಖನಗಳಲ್ಲಿರುವ ಗಂಭೀರತೆ ವಾಸ್ತವಕ್ಕೂ ಹತ್ತಿರವಿದೆ.

ತೋಚಿದ್ದನ್ನು ಗೀಚುವ ಅಂಕಣವಾಗದೆ, ನಿತ್ಯ ನೂತನ ವೈಜ್ಞಾನಿಕ ಬೆಳವಣಿಗೆಗಳನ್ನು ಚರ್ಚಿಸುವ ಅವರ ನೆಟ್ ನೋಟ ಕನ್ನಡ ಓದುಗರಿಗೆ ಅಪರೂಪದ ಮಾಹಿತಿ ಕಣಜ. ಪ್ರತಿವಾರ ಪತ್ರಿಕೆಯಲ್ಲಿ ಪ್ರಕಟವಾಗುವ ಅಂಕಣಗಳನ್ನು ಬ್ಲಾಗಿನಲ್ಲಿ ಸೇರಿಸುವ ಹಾಲ್ದೊಡ್ಡೇರಿ, ವಿಜ್ಞಾನ ಪ್ರಪಂಚದ ವಿಸ್ಮಯಗಳೊಂದಿಗೆ ಜಾಲ ಓದುಗರನ್ನು ಸ್ವಾಗತಿಸುತ್ತಾರೆ. ಚಿತ್ರಗಳಿಲ್ಲದ ಈ ಲೇಖನಗಳು ತುಸು ಗಂಭೀರ ಎನಿಸಿದರೂ, ಓದಿಕೊಂಡಂತೆ ಆಪ್ತವಾಗುತ್ತದೆ. ಜೋಕೆ ... ಜಾಲದ ಬಲೆಗೆ ಬಿದ್ದಾಗಲೇ ಅರಿವೆ ನೀ ಸಂಚು ಎನ್ನುತ್ತಾ, ಜಾಲಿಗರನ್ನು ಸ್ವಾಗತಿಸುವ ಅವರ ಬರಹಗಳ ಅಂಗಳ ವೈಜ್ಞಾನಿಕ ವಿವರಗಳ ಮಿಣುಕು ದೀಪ.

ಬರೆವ ಬದುಕಿನ ತಲ್ಲಣ (೧೫-೨-೦೮)

ಇಂದಿನ ಬ್ಲಾಗ್ ಬೊಗಸೆಯಲ್ಲಿ ಇಸ್ಮಾಯಿಲ್ ಅವರ "ಬರೆವ ಬದುಕಿನ ತಲ್ಲಣ". ಇದು ಭಾವ ಚಿತ್ತಾರವಲ್ಲ. ವಿಚಾರ ವಿಸ್ತಾರ. ಹೆಸರೇ ಸೂಚಿಸುವಂತೆ ನಮ್ಮ ಸುತ್ತಮುತ್ತಲಿನ ದೈನಿಕ ನಡಾವಳಿಗಳಲ್ಲಿ ಎಷ್ಟೊಂದು ತಲ್ಲಣಗೊಳಿಸುವ ವಿಷಯಗಳಿವೆ ಮತ್ತು ನಾವೆಲ್ಲ ಅದು ಗೊತ್ತಿದ್ದೂ ಗೊತ್ತಿಲ್ಲದ ಹಾಗೆ ಹೇಗೆ ಸುಮ್ಮನಿದ್ದೀವಿ ಎಂಬುದಕ್ಕೆ ಕನ್ನಡಿಯಂತಿರುವ ಇವರ ಲೇಖನಗಳಲ್ಲಿ ಹಲವಾರು ಉದಯವಾಣಿಯಲ್ಲಿ ಪ್ರಕಟಗೊಂಡಿವೆ. ಇಲ್ಲಿನ ಲೇಖನದಷ್ಟೇ ಆಸಕ್ತಿಯುತವಾಗಿರುವ ಮತ್ತು ವಿಚಾರಶೀಲವಾಗಿರುವ ಪ್ರತಿಸ್ಪಂದನಗಳು ಸಮಾಜದ ಜೀವಂತಿಕೆಯ ಭರವಸೆಯ ಬೀಜಗಳಾಗಿ ಭಾಸವಾಗುತ್ತವೆ. ಮೊದಲೇ ಹೇಳಿದಂತೆ ಭಾವುಕ ಸಂವೇದನೆಗಳಿಗಿಂತ ಹೆಚ್ಚಾಗಿ, ವಿಷಯವನ್ನ ಕೂಲಂಕಷವಾಗಿ, ಮಾಹಿತಿಪೂರ್ಣವಾಗಿ ಮತ್ತು ಪ್ರಗತಿಶೀಲವಾಗಿ ಮಂಡಿಸಿರುವ ರೀತಿ ಎಲ್ಲ ಬರಹಗಳ ವೈಶಿಷ್ಟ್ಯ.

ಯಾವುದೇ ರಾಜಕೀಯ ಪಕ್ಷಕ್ಕೆ ಸಲ್ಲದ, ಇಸಮುಗಳ ಹಂಗಿಲ್ಲದ ಪ್ರಖರ ಬರಹಗಳ ಗುಚ್ಛವಿಲ್ಲಿದೆ. ಇತ್ತೀಚಿನ ಲೇಖನವಾದ, ಸಂಖ್ಯೆಯಷ್ಟೇ ಆಗಿಬಿಟ್ಟ ರೈತನ ಸಾವು - ಓದುವವರ ಮನಸ್ಸಿನಲ್ಲೂ ವಿಚಿತ್ರ ತಲ್ಲಣ ಹುಟ್ಟಿಸುತ್ತಾ ನಮ್ಮ ಹೊಣೆಗಾರಿಕೆಯನ್ನು ನೆನಪು ಮಾಡುತ್ತವೆ. - ಎಲ್ಲಾ ಬಗೆಯ ಆತ್ಮಹತ್ಯೆಗಳ ಹಿಂದಿನ ಮುಖ್ಯ ಕಾರಣ ಹತಾಶೆ. ರೈತ ಯಾಕೆ ಹತಾಶನಾಗಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೇ ಯಾವ ಪ್ಯಾಕೇಜ್‌ ಘೋಷಿಸಿದರೂ ಆತ್ಮಹತ್ಯೆಗಳು ಕಡಿಮೆಯಾಗುವ ಸಾಧ್ಯತೆಗಳಿಲ್ಲ. ರೈತನ ಹತಾಶೆಯ ಕಾರಣಗಳನ್ನು ಹುಡುಕುವುದಕ್ಕೆ ‘ಹೌದು' ಅಥವಾ ‘ಇಲ್ಲ'ಗಳಲ್ಲಿ ಉತ್ತರ ಬಯಸುವ ಸಮೀಕ್ಷೆಗಳಿಗೆ ಸಾಧ್ಯವಿಲ್ಲ.- ಈ ಸಾಲುಗಳು ಇಡೀ ಲೇಖನದ ಕಿರುಗನ್ನಡಿ.

ಸುಮ್ಮಸುಮ್ಮನೆ ಪ್ರಶ್ನೆಗಳನ್ನು ಮಾತ್ರ ಓದುಗರ ಮುಂದಿಟ್ಟು ಗೋಜಲು ಮಾಡದೆ, ಆ ಪ್ರಶ್ನೆಗಳಿಗೆ ಇರಬಹುದಾದ ಸಂಭಾವ್ಯ ಪರಿಹಾರಗಳ ಸೂಚನೆಯೂ ಇರುವುದು ಈ ಬರಹಗಳ ಹಿರಿಮೆ. ಲೈಂಗಿಕ ವೃತ್ತಿನಿರತಳ ಎರಡು ರಾತ್ರಿಗಳು, ಅಮೆರಿಕದ ಆರೋಗ್ಯಕ್ಕೆ ಭಾರತದ ಸಬ್ಸಿಡಿ, ಸಾವಿರ ವರ್ಷ ಬದುಕಬೇಕಿದ್ದ ಜೀವ, ಟಾಟಾ ಉತ್ಪಾದಿಸಿದ ಅಭಿವೃದ್ಧಿಯ ಸಂಕೇತ.. ಇತ್ಯಾದಿ ಲೇಖನಗಳು ಒಂದೊಂದೂ ಸಾವಧಾನವಾಗಿ ಆದರೆ ಓದಲೇಬೇಕಾಗಿರುವ ವಿಚಾರ ಕುಸುಮಗಳು. ಬರೆದವರ ತಲ್ಲಣದ ಪ್ರಾಮಾಣಿಕತೆ ಮತ್ತು ನಿಸ್ಪ್ರಹತೆ ಓದುವವರ ಮನಸ್ಸಿನಲ್ಲೂ ವಿಚಾರ ತರಂಗಗಳನ್ನೆಬ್ಬಿಸದೆ ಹೋಗುವುದಿಲ್ಲ.

ಮಜಾವಾಣಿ (೧೪-೨-೦೮)

ರಾಜ್ಯದೆಲ್ಲಡೆ ಬಾತ್ಮೀದಾರರನ್ನು ಹೊಂದಿರುವ ಮಜಾವಾಣಿ ಈ ದಿನದ ಬ್ಲಾಗಿನಂಗಳದ ಚಿನಕುರಳಿ. ತೆಳುಹಾಸ್ಯದ ಬರಹಗಳನ್ನು, ಚಿಂತನೆಯ ಗುಟುಕಿನಲ್ಲಿ ನೀಡುವ ಈ ಬಳಗದ ಅಂಗಳದಲ್ಲಿ ಸುದ್ದಿ ವೈವಿಧ್ಯ. ತರಹೇವಾರಿ ತನಿಖಾವರದಿಗಳನ್ನು ಪ್ರಕಟಿಸುತ್ತಿದ್ದ ಮಜಾವಾಣಿ ಈಗ ಸುದ್ದಿಯಿಲ್ಲದೆ ಸ್ವಲ್ಪ ಸೊರಗಿದಂತಿದೆ. ಮಜಾವಾಣಿಯ ರಸಗುಳಿಗೆಗಳನ್ನು ಮನದಣಿಯೇ ಓದಿ ನಕ್ಕು ಹಗುರಾಗುತ್ತಿದ್ದ ಓದುಗನಿಗೆ ಇದು ಸ್ವಲ್ಪ ನಿರಾಶೆ ಮೂಡಿಸಿದೆ.

"ರಾಜ್ಯದ ಹಿತ ರಕ್ಷಣೆಗಾಗಿ ಮತ್ತೆ ಮತ್ತೆ ಮೋಸ ಹೋಗಲು ಸಿದ್ಧ" ಯಡಿಯೂರಪ್ಪನವರು ನೀಡಿದ ಈ ಗುಪ್ತ ಹೇಳಿಕೆಯನ್ನು ಶಿರಾಳಕೊಪ್ಪದ ಮಜಾವಾಣಿಯ ರಾಜಕೀಯ ವರದಿಗಾರ ಸ್ಫೋಟಗೊಳಿಸಿದ್ದು ಈಗ ಹಳೆಯ ಸುದ್ದಿ. ನನ್ನ ಬಲಗೈ ಬಗ್ಗೆ ನನಗೆ ಬೇಸರವಿಲ್ಲ" - ಎಂದು ಎಡಗೈ ಆಟಗಾರ ಯುವರಾಜ್ ಸಿಂಗ್ ನಡೆಸಿದ ಪತ್ರಿಕಾಗೋಷ್ಠಿ, ಮಾಟ-ಮಂತ್ರದ ಮೂಲಕ ಸಾಬೀತಾದ ಯಡ್ಡಿ ಆರೋಪ ಇವೆಲ್ಲಾ ಮಜಾವಾಣಿ ಮುಖಪುಟ ವರದಿಯ ಫಲಶೃತಿ ಎಂದೇ ಹೇಳಲಾಗುತ್ತದೆ. ಅಂತರ್ಜಾಲದ ಇನ್ನುಳಿದ ಪತ್ರಿಕೆಗಳಿಗೆ ಸಿಗದಂತೆ ಇಂತಹ ಸುದ್ದಿಗಳನ್ನು ಅದೆಲ್ಲಿಂದಲೋ ಹುಡುಕಿ ತರುತ್ತಿದ್ದ ಮಜಾವಾಣಿಯ ಸೊಗಸಿಗಾಗಿ ಜಾಲಿಗರು ಮತ್ತೆ ಕಾಯುತ್ತಿದ್ದಾರೆ.

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...ಎಂಬ ದ್ಯೇಯವಾಕ್ಯ ಹೊಂದಿರುವ ಮಜಾವಾಣಿ ನಗುವಿನ ಅಲೆ ಅರಳಿಸುವ ಕೆಲಸಕ್ಕೆ ಶೀಘ್ರವೇ ಚಾಲನೆ ನೀಡಲಿ. ಮುಕ್ತವಾಗಿ ನಗಲು, ನಕ್ಕು ಹಗುರಾಗಲು, ಬಾಗಿಲಲ್ಲೇ ಕಾಯುತ್ತಿರುವ ಬ್ಲಾಗಿನ ನಿವಾಸಿಗಳಿಗೆ ಸಂತಸ ತರಲು.

ಒಂಟಿ ಹಕ್ಕಿಯ ಹಾಡು (೧೨-೨-೦೮)

ಇಂದಿನ ಬ್ಲಾಗ್ ಬಾನಿನಲ್ಲಿ ಯುನಿಕ್ ಸುಪ್ರಿ ಅವರ ಒಂಟಿ ಹಕ್ಕಿಯ ಹಾಡಿನ ಹಲವು ರಾಗದೆಳೆಗಳ ವಿಶೇಷ ನೋಟ. ವಿಶಿಷ್ಟ ವಿಚಾರಗಳನ್ನು ವೈಜ್ಞಾನಿಕ ವಿವರಣೆಗಳ, ಉದಾಹರಣೆಗಳ ಮೂಲಕ ಮೊಗ್ಗರಳಿದ ಹದದಲ್ಲಿ ಬಿಡಿಸಿಡುತ್ತ ಹೋಗುವ ಇವರ ಬರಹಗಳು ಮನಸ್ಸಿಗೆ ಖುಶಿ ನೀಡುವುದೊಂದೇ ಅಲ್ಲ, ಸ್ವತಃ ನಮ್ಮನ್ನು ವಿಚಾರ ಮಾಡಲು ಪ್ರೇರೇಪಿಸುತ್ತವೆ. ಇತ್ತೀಚಿನ "ಜೀವಂತವಾಗಿರುವ ಭಾಷೆಯೊಂದೆ ನಮ್ಮ ಆಸರೆ" ಲೇಖನದಲ್ಲಿ - ನಾಗರೀಕತೆಗಳ ಉಗಮದ ಹಾದಿಯಲ್ಲಿ ಚಮತ್ಕಾರಿ ಬೆಳವಣಿಗೆಯನ್ನು ದಾಖಲಿಸಿದ್ದು ಭಾರತದ ಪುರಾತನ ಸಂಸ್ಕೃತಿ. ಇದು ಹೇಗೆ ಸಾಧ್ಯವಾದೀತು? - ಎಂಬ ಪ್ರಶ್ನೆಯನ್ನು ಮುಂದಿಡುತ್ತಾ ಅವರು ಓದಿದ ಮನು ಎಂಬ ಲೇಖಕರ ಮಹಾಸಂಪರ್ಕ ಸಿದ್ಧಾಂತವನ್ನು ಸರಳವಾಗಿ ಮೊದಲ ಓದಿಗೇ ಅರ್ಥವಾಗುವಂತೆ ಬರೆದಿದ್ದಾರೆ.

ಭಾರತೀಯ ಸಂಸ್ಕೃತಿ ಮತ್ತು ಪುರಾತನ ಆಗುಹೋಗುಗಳು ಇವರ ವಿಜ್ಞಾನದ ನೆಲೆಗಟ್ಟಿನ ಬರಹಗಳಿಂದಾಗಿ ಇಂದಿನ ಜೆಟ್-ನೆಟ್ ಯುಗದಲ್ಲೂ ಪ್ರಸ್ತುತವೆಂದರಿವಾಗುತ್ತದೆ. ಹೀಗೇ ಪ್ರಶ್ನೆಗಳು ಮತ್ತು ಹತ್ತು ಹಲವು ಗ್ರಂಥ, ವಿಚಾರಗಳ ಪರಿಚಯಗಳ ಮೂಲಕ ಸಂವಾದಿಸುವ ಈ ಬರಹಗಳೆಲ್ಲವೂ ಯಾವಾಗಲೂ ಓದುಗರ ಅಭಿಪ್ರಾಯ ಕೇಳುತ್ತ ಕೊನೆಯಾಗುತ್ತವೆ.

ದೇವರಿಲ್ಲ ಎಂದ ಬುದ್ಧನೂ ಅವತಾರವಾದ, ಬುದ್ಧಿವಂತನಿಗೆ ಕನಸು ಬಿದ್ದಾಗ, ಓಶೋ ಎಂಬ ಹಕ್ಕಿ, ಮಗು ಹುಟ್ಟಿದ ಕ್ಷಣದಲ್ಲೇ ತಾಯಿಯೂ ಹುಟ್ಟುತ್ತಾಳೆ, ಜೋಗಿಯ ಅರಮನೆಯಲ್ಲೂ ಕವಿತೆಯದೇ ಗುಂಗು.. ಇತ್ಯಾದಿ ಲೇಖನಗಳ ಸಾರಸರ್ವಸ್ವ ವಿಷಯ ವೈವಿಧ್ಯ ಮತ್ತು ವಿಸ್ತಾರ. ಹಾಡು ಒಂಟಿ ಹಕ್ಕಿಯದೇ ಆದರೂ, ಉಲಿಯ ತರಂಗಾಂತರ ಸುದೂರಕ್ಕೆ ಹಬ್ಬುತ್ತಾ ರಾಗ ವಿಸ್ತಾರವಾದಂತಿದೆ.

ಎಲ್ಲ ಬರಹಗಳ ಕೊನೆಯಲ್ಲಿ ಬರುವ ಶೇಷವಿಶೇಷ ಎಂಬ ಅಡಿಟಿಪ್ಪಣಿ ಮುಖ್ಯಬರಹಕ್ಕೆ ಸೇರಿಲ್ಲದ, ಆದರೆ ತುಂಬ ಪ್ರಸ್ತುತವೆನಿಸುವ, ಓದಲೇಬೇಕೆಂದು ಪ್ರೇರೇಪಿಸುವ ಚುಟುಕು ವೈಶಿಷ್ಟ್ಯದಿಂದ ಕೂಡಿರುತ್ತದೆ. ಮುಖ್ಯಬರಹಕ್ಕೆ ಪೂರಕವಾಗಿಯೂ, ಹೆಚ್ಚಿನ ಆಲೋಚನೆಗೆ ಪ್ರೇಷಕವಾಗಿಯೂ ಇರುವ ಈ ಬ್ಲಾಗಿನ ಸೊಗಸನ್ನ ಓದಿಯೇ ಸವಿಯಬೇಕು.

ಪಾತರಗಿತ್ತಿ ಪಕ್ಕ (೧೧-೨-೦೮)

ದಿನದ ಬ್ಲಾಗಿನ ಬೊಗಸೆಯಲ್ಲಿ ಶಿವ ಶಂಕರ್ ಅವರ ಪಾತರಗಿತ್ತಿ ಪಕ್ಕ. ಪಾತರಗಿತ್ತಿಯ ರೆಕ್ಕೆಗಳಷ್ಟೇ ಕೋಮಲವಾಗಿ, ಹೂವಿನ ವರ್ಣ ಶಲಾಕೆಗಳಂತೆ ಸೊಗಸಾಗಿ ಕಥೆಯನ್ನೂ, ಕವಿತೆಯನ್ನೂ ಚಿತ್ರಿಸಬಲ್ಲ ಶಂಕರ್, ಬ್ಲಾಗಿನಲ್ಲಿ ಅದನ್ನು ಹಾರಿಬಿಡುವ ಪರಿಯೇ ಸೋಜಿಗ. ಮೊದಲ ಮಳೆಗೆ ಮಣ್ಣಿನಿಂದೇಳುವ ನವಿರು ವಾಸನೆಯಂತೆ, ಬೇಲಿಯ ಬಳ್ಳಿಯಲ್ಲಿ ಅರಳಿ ನಿಂತ ಕಾಡು ಹೂವಿನ ಘಮದಂತೆ ಅವರ ಕಾವ್ಯಕೃಷಿ ಭಾವುಕ ಮನಸ್ಸುಗಳಿಗೆ ಮೆಲ್ಲುಸಿರ ಸವಿಗಾನ.

ಕನಸು ಕನವರಿಕೆಗಳನ್ನು ಅಕ್ಷರದಲ್ಲಿ ಬಂಧಿಸಿಟ್ಟಿರುವ ಅವರ ವಿರಹದ ಚಿತ್ತಾರಿಕೆ ಸ್ವೀಟ್ ಡ್ರೀಮ್ಸ್ ಅಂದ್ರೇನು ಎಂಬ ಚೊಚ್ಚಲ ಪುಸ್ತಕ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ತಮ್ಮ ಒಳನೋಟಕ್ಕೆ ಸಿಕ್ಕಿದ ಪುಟ್ಟ ಪುಟ್ಟ ಘಟನೆಗಳನ್ನೇ ಕಾವ್ಯವಾಗಿ, ಅಲ್ಲಲ್ಲಿ ಕಥೆಯಾಗಿ ಹೇಳಿದ್ದಾರೆ ಶಂಕರ್. ಅವರ ಕುಸುರಿಗೆ ಸಿಲುಕಿದ ರೂಪಕವೊಂದು ಹೀಗಿವೆ.

ಸ್ಪಲ್ಪ ಹೊತ್ತಿನಲ್ಲಿ ಸೂರ್ಯ ಎದ್ದಾಗ
ಮದವೇರಿದ ಬೀದಿಗಳಿಗೆ ನಿದ್ದೆಯ ಮಂಪು
ಮಗ್ಗಲು ಬದಲಾಯಿಸಿ ಮಲಗುತ್ತದೆ
ಲಾಸ್ ವೇಗಾಸ್ ಎನ್ನುವ ಆ ಮಾಯಾನಗರಿ !...

ಮೊದಲ ದೀಪಾವಳಿ, ರಾಂಡಿ ಪೌಸ್ಚ್ ಎನ್ನುವ ಸಾವಿನ ಹೊಸ್ತಿಲಲ್ಲಿ ನಿಂತವನ ಮಾತುಗಳು... ನಟ ಸಾರ್ವಭೌಮ ಡಾಕ್ಟರ್ ರಾಜ್ ಕುಮಾರ್ ನೆನಪುಗಳು ಕವಿತೆಗಳಷ್ಟೇ ಆಪ್ತವಾಗಿ ಓದಿಸಿಕೊಳ್ಳುತ್ತದೆ. ಅರಳುವ ಹೂವಿನ ಕಂಪವನ್ನು ಬ್ಲಾಗಿನಂಗಳದ ತುಂಬಾ ಹರಡುವ ಪಾತರಗಿತ್ತಿ ಹಾರುತ್ತಲಿರಲಿ.

ಅಪಾರ (೯-೨-೦೮)

ಮಧ್ಯಸಾರ ಎಂಬ ನಾಮಬಲದಲ್ಲಿ ಕುಡುಕುತನದ ಆನಂದವನ್ನು ದಾಖಲಿಸುವ ರಘು ಅಪಾರ ಅವರ ಬ್ಲಾಗ್ ಈ ದಿನದ ಚುಕ್ಕಿ. ನೀಲುವಿನಷ್ಟು ಗಾತ್ರವಿರುವ ಅವರ ಪುಟ್ಟ ಪುಟ್ಟ ಕವಿತೆಗಳು ಪೆಗ್ಗು, ಮಗ್ಗು, ಪಿಂಟು, ಲಾರ್ಜ್ ಎಂಬ ಅವರದೇ ಉಲಿಗಳಲ್ಲಿ ಹುಟ್ಟು ಹಾಕುವ ಸಂತೋಷ, ತೆಳು ಹಾಸ್ಯ, ವ್ಯಂಗ್ಯ, ವಿನೋದಗಳನ್ನು ಮನದಣಿಯೆ ಓದುವುದೇ ಒಂದು ಸೊಗಸು.

ವೃತ್ತಿಯಲ್ಲಿ ಪತ್ರಕರ್ತರಾಗಿರುವ ರಘು ಉತ್ತಮ ಮುಖಪುಟ ವಿನ್ಯಾಸಕಾರರೂ ಹೌದು. ಕಥೆಗಳನ್ನು ಬರೆಯುತ್ತಾ, ಛಾಯಾಗ್ರಹಣ ಮಾಡುತ್ತಾ, ಚಿತ್ರ ನಿರ್ಮಾಣದತ್ತಲೂ ಇವರ ಒಲವು ಅಪಾರ. ಮಧ್ಯದ ಖುಷಿಯನ್ನು ಅದರ ಎಲ್ಲ ಸಂತೋಷ, ವಿಷಾದಗಳ ಜೊತೆ ಬಿಚ್ಚಿಡುವ ರಘು, ಇತ್ತೀಚೆಗೆ ಬರೆದ ಕವಿತೆಯ ತುಣುಕು ಇಲ್ಲಿದೆ...

ಕುಡಿದವನ ಹೃದಯ ಭಯಂಕರ ಮೆದು
ಶಾಸನ ವಿಧಿಸದ ಎಚ್ಚರಿಕೆ ಇದು
ತೀರ್ಥ ತಗೊಂಡಾಗ ಮನಸೊಂದು ಗುಡಿ
ಮತ್ತೊಂದು ದ್ರೋಹಕೂ ಅದು ಈಗ ರೆಡಿ..

ಕವಿತೆಯೊಳಗೂ ನಗು ತೂರಿಸಬಲ್ಲ, ಬ್ಲಾಗಿನಲ್ಲೂ ಕಾಮೆಂಟರಿ ಕೊಡಬಲ್ಲ, ಬಂಗಾಳದಲ್ಲಿ ಹಕ್ಕಿ ಜ್ವರದಿಂದ ಸತ್ತ ಕೋಳಿಗಳಿಗೆ ಕಂಬನಿ ಮಿಡಿಯಬಲ್ಲ ರಘು, ತಮ್ಮ ಬ್ಲಾಗಿನಲ್ಲಿ ಅಪಾರ ಸಾಧ್ಯತೆಗಳಿಗೆ ತೋರಣ ಕಟ್ಟಿದ್ದಾರೆ. ಕುಡಿಯುವದನ್ನು ಬಿಡಬಹುದಿತ್ತು, ಆದರೆ ಕೆಲಸವಾದೊಡನೆ ಕೈ ಬಿಟ್ಟರೆ, ಆಗೋದಿಲ್ಲವೆ ಅದು ರಾಜಕಾರಣ? ಎನ್ನುವ ಕುಡಕರ ವಚನಕ್ಕೆ ಎಂದಿನಂತೆ ತಲೆದೂಗುತ್ತಾ, ಮತ್ತೊಂದು ಮಧ್ಯಸಾರಿ ಬರೆಯಲು ಅವರು ಅಣಿಯಾಗುತ್ತಿದ್ದಾರೆ.

ಚಂದನ (೮-೨-೦೮)

ಇಂದಿನ ಬ್ಲಾಗ್ ಬಾನಿನ ಚುಕ್ಕಿ ಬಾಲ ಅವರ ಚಂದನ. ಇದುವರೆಗಿನ ತಮ್ಮ ಬದುಕಿನಲ್ಲಿ ಅನುಭವಿಸಿದ ಘಟನೆ ಮತ್ತು ಸ್ಪಂದಿಸಿದ ವಿಚಾರಗಳನ್ನ ಆಸಕ್ತಿಯುತವಾಗಿ ಪುಟ್ಟದಾಗಿ ಹಂಚಿಕೊಳ್ಳುವ ಇವರ ಬರಹಗಳು ಓದುವವರಿಗೆ ಇಷ್ಟವಾಗುತ್ತವೆ. ಈ ಎಲ್ಲ ಬರಹಗಳಿಗೂ ಅನ್ವರ್ಥವಾಗಿರುವ ತಲೆಬರಹಗಳು ನಮ್ಮ ಜನಪದ ಗಾದೆಗಳು, ನಾಣ್ಣುಡಿಗಳು, ವಚನ, ಗೀತೆಗಳು, ಝೆನ್ ಕತೆಗಳಿಂದ ಆಯ್ದಂತವು.

ದೃಷ್ಟಾಂತವೊಂದನ್ನು ಹೇಳುತ್ತಾ ವಿಚಾರವನ್ನು ಅರಳಿಸುವ ಕಲೆ ಇವರಿಗೆ ಸಿದ್ಧಿಸಿದೆ. ಎಲ್ಲೂ ಬೇಸರವಾಗದಂತೆ, ಸುಲಭವಾಗಿ ಓದಲು ಕರೆಯುವ ಈ ಬರಹಗಳು ಅವುಗಳ ಪ್ರಗತಿಶೀಲ ಸಂವೇದನೆಯಿಂದ ವಿಶಿಷ್ಟವಾಗಿವೆ. ಇತ್ತೀಚಿನ ಮಣ್ಣಿನಲಿ ನೀರಿನಲಿ ಬದುಕನೇ ಇಟ್ಟಿರುವ ಸೂರ್ಯ ಚಂದ್ರರ... ಎಂಬ ಸು.ರಂ ಎಕ್ಕುಂಡಿಯವರ ಕವಿತೆಯ ಸಾಲಿನಿಂದ ಶುರುವಾಗುವ ಲೇಖನದಲ್ಲಿ ಜೀವರಾಶಿಗಳ ಮೂಲವಾದ ಸೂರ್ಯ ಮತ್ತವನ ಬೆಳಕಿನ ಬಗೆಗಿನ ವೈಜ್ಞಾನಿಕ ವಿವರಣೆಯಿದೆ.

ನನ್ನ ಹೆಂಡತಿ ಕಿವುಡಿ ಎಂಬ ಬರಹದಲ್ಲಿ ವಿಡಂಬನೆಯ ಮೂಲಕ ನಮ್ಮ ತೊಂದರೆ/ತಪ್ಪುಗಳು ಹೇಗೆ ನಮ್ಮ ಬೆನ್ನಲ್ಲಿರುತ್ತವೆ, ಮತ್ತು ನಾವು ಹೇಗೆ ಯಾವಾಗಲೂ ಬೇರೆಯವರ ತಪ್ಪುಗಳ ಬಗ್ಗೆ ಆಲೋಚಿಸುತ್ತಿರುತ್ತೇವೆ ಎಂಬುದನ್ನು ಬರೆದಿದ್ದಾರೆ. ಹೀಗೇ ಬರೆದಿರುವ ಪೂರ್ಣವ ಕೊಡದೆ ಪೂರ್ಣವ ಪಡೆವುದೆಂತು, ಆತ್ಮೀಯರೊಳಗನ್ನು ಮೊದಲಾರು ಕಂಡವರು, ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು, ಮೌಲ್ಯಗಳ ಅವನತಿ, ಲೈಟ್ ಹೌಸ್, ಮತ್ತು ಕೆಲ ಸಣ್ಣಕತೆಗಳಿಂದ ಮಿನುಗುವ ಈ ಬ್ಲಾಗ್ ವಿಚಾರದ ತಿಳಿಬೆಳಕನ್ನು ಹಾಯಿಸುತ್ತದೆ.

ನನ್ನ ಹಾಡು (೭-೨-೦೮)

ಈ ದಿನದ ಬ್ಲಾಗ್ ಬೊಗಸೆಯಲ್ಲಿ ಮಲ್ಲಿಕಾರ್ಜುನ ತಿಪ್ಪಾರರ ನನ್ನ ಹಾಡು. ಸಾಹಿತ್ಯವನ್ನು ಪ್ರೀತಿಸುವ ತಿಪ್ಪಾರರು ಒಲಿದಾಗ ನವಿರಾಗಿ ಹಾಡುತ್ತಾರೆ. ನಿತ್ಯ ಜೀವನದ ಸಾಮಾನ್ಯ ಘಟನೆಗಳಿಗೆ ಅಕ್ಷರದಲ್ಲಿ ರಂಗು ತುಂಬುವ ಅವರ ಕುಸುರಿ ಕಲೆಗಾರಿಕೆ ಆಪ್ತವೆನಿಸುತ್ತದೆ. ಹೆಚ್ಚಾಗಿ ಬರೆಯದ, ಬರೆಯುವ ನಾಲ್ಕು ಸಾಲುಗಳಲ್ಲೇ ಎಲ್ಲವನ್ನೂ ಹೇಳುವ ಅವರ ಭಾವಪೂರ್ಣ ಕವಿತೆಗಳು ಬ್ಲಾಗಿನ ತುಂಬಾ ಕಾಡು ಬೆಳದಿಂಗಳಂತೆ ಹರಡಿಕೊಂಡಿದೆ.

ಈ ಬಾಲ್ಯವೇ ಹಾಗೇ
ಭಾವನೆಗಳ ಬರಹಕ್ಕೆ ನಿಲುಕದ
ನೀಲಾಕಾಶ... ಎತ್ತ ನೋಡಿದತ್ತ
ಆದಿ-ಅಂತ್ಯವಿಲ್ಲದ ಸ್ತಬ್ದಚಿತ್ರ.

ಇಂತಹ ಸಾಮಾನ್ಯ ಸಾಲುಗಳಲ್ಲೇ ಬಾಲ್ಯದತ್ತ ನಮ್ಮ ನೆನಪುಗಳನ್ನು ಕೊಂಡೊಯ್ಯಬಲ್ಲ ತಿಪ್ಪಾರರು, ಯಾವುದೇ ಭಾವೋದ್ವೇಗವಿಲ್ಲದೆ ಭಾವನೆಗಳನ್ನು ಬೆಚ್ಚಗೆ ಅರಳಿಸುತ್ತಾರೆ. ಹಲವು ಅಪರೂಪದ ಕಲ್ಪನೆಗಳು, ಹಾಗೂ ಸೌಂದರ್ಯ ಪ್ರಜ್ಞೆಯೊಂದಿಗೆ ಬಂಧಿಸಿರುವ ಇಲ್ಲಿನ ಕವಿತೆಗಳು ಓದುಗರಿಗೆ ತಮ್ಮದೇ ಎನಿಸುವಷ್ಟು ಆತ್ಮೀಯತೆ ಮೂಡಿಸುತ್ತದೆ. ಕೊನೆಗೊಂದು ದಿನ ನಾವೇ ಇಲ್ಲವಾಗುವುದು, ಅತ್ತು ಬಿಡು ಹಾಗೆ ಸುಮ್ಮನೆ, ಅವ್ವ, ಮಾತಾಡು, ಎಲ್ಲಿರುವೆ, ಸಾವಿನ ಮನೆ, ಇತ್ಯಾದಿ ಕವಿತೆಗಳಲ್ಲಿ ಮೌನ ಮಾತಾಗಿದೆ. ಅಪರೂದ ರೂಪಕಗಳನ್ನು ಸೃಷ್ಟಿಸುವ ಈ ಕಲೆಗಾರ ಒಂದೇ ಪ್ಯಾರಾದಲ್ಲಿ ಕಥೆ ಬರೆದಿದ್ದಾರೆ. 35 ಸಾವಿರ ರೂಪಾಯಿಯ ಬೆಕ್ಕಿನ ಮರಿಯ ಕೊರಳಿಗೆ ಗಂಟೆ ಕಟ್ಟಿದ್ದಾರೆ!

ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ
ಸ್ಥೈರ್ಯ ತುಂಬಿ ಬೆಳೆಸಿದಾಕೆ,
ಬರೀ ಸೋಲು ಕಂಡುವನಿಗೆ
ಗೆಲುವಿನ ದಾರಿ ತೋರಿಸಿದಾಕೆ.. ಅವ್ವ..

ಇದು ಇವರ ಮತ್ತೊಂದು ಕವಿತೆಯ ಸ್ಯಾಂಪಲ್. ಭಾವನೆಗಳ ಭರಪೂರ ಸಂಗಮದಲ್ಲಿ ನನ್ನ ಹಾಡಿನ ಪಲ್ಲವಿ ದ್ವನಿಸುತ್ತಿದೆ.

ಮಾಗಿ ಕೋಗಿಲೆಯ ಹಾಡು (೬-೨-೦೮)

ಇಂದಿನ ಬ್ಲಾಗ್ ಅಂಗಳದಲ್ಲಿ ಆಟಂ ನೈಟಿಂಗೇಲ್ ಕಾವ್ಯನಾಮದ ಲೇಖಕ/ಕಿಯ ಮಾಗಿ ಮಾಗಿ ಕೋಗಿಲೆಯ ಹಾಡು. ಓದಿ ವಾಹ್ ಎಂದು ಉದ್ಗರಿಸದೆ ಇರಲಾಗುವುದಿಲ್ಲ. ಮಾಗಿ ಮಲ್ಲಿಗೆಯ ಚಂದದ ಹೂಗಳು ಬಿರಿದಂತಹ ಕವಿತೆಗಳು. ಈ ಬ್ಲಾಗ್ ಹೊಸದಾಗಿ ಈ ವರ್ಷದಿಂದ ಶುರುವಾಗಿದೆ. ಇದಕ್ಕೂ ಮುಂಚೆ ನೈಟಿಂಗೇಲ್ ಹಾಡುತ್ತಿದ್ದಿದ್ದು ಡಿವೈನ್ ಮೆಲಡಿ ಎಂಬ ಕಾವ್ಯಕಾನನದಲ್ಲಿ.

ಚಂದಿರನೇ ಅಷ್ಟು ಬೆಳಕು ಸೂಸುತ್ತಿರುವಾಗ
ಭೂತಾಯಿಯೆಷ್ಟು ಬೆಳಗುತ್ತಿರಬಾರದು
ಎನ್ನಿಸಿ ಚಂದಿರನೂರಿನ
ಹುಣ್ಣಿಮೆಯ ಕನಸು ಕಾಣುತ್ತೇನೆ.

ಇಂತಹ ಅಪರೂಪದ ರಮ್ಯ ಕಲ್ಪನೆಗಳನ್ನು ಹೊಸ ಹೊಸ ಸೌಂದರ್ಯ ಪರಿಭಾಷೆಯನ್ನ ಕಟ್ಟಿ ಕೊಡುವ ಈ ಕವಿತೆಗಳು ಚೆಂದವಾಗಿವೆ. ಛಂದವಿದೆ. ಹಂಚಿಕೊಂಡ ಗುಟ್ಟು, ಸುತ್ತಿ ಸುಳಿದಾಡಿದ ಗುರುತು, ಈ ಬೆಳದಿಂಗಳ ರಾತ್ರಿ, ಬಿಂದು ಬೆಳಕ ನೋಡುತ್ತಾ, ಅವಕ್ಕೆ ತೊಂದರೆ ಕೊಡಬೇಡ, ನೀಲಾಕಾಶ ಬಿಟ್ಟು ಎಲ್ಲವೂ ಭಾವಸರಸ್ಸಿನಲ್ಲಿ ತೇಲಿಬಿಟ್ಟ ಹಾಯಿದೋಣಿಗಳೆ.

ಸೂಕ್ಷ್ಮ ಸಂವೇದನೆಯನ್ನ ನವಿರಾಗಿ, ಹೂವು ಅರಳಿದಂತೆ ಸಹಜ ಸೊಗದಿಂದ ಹಿಡಿದಿಟ್ಟಿರುವ ಈ ಕವಿತೆಗಳು ಕವಿಮನಸ್ಸುಗಳಿಗೆ, ಭಾವುಕ ಹೃದಯಕ್ಕೆ ತಂಪೆರೆಯುತ್ತವೆ. ಮಾಗಿ ಕೋಗಿಲೆಯ ಹಾಡನ್ನ ಸವಿಯಿರೆಲ್ಲ.

ಎಲ್ಲಾ ನೋಟಗಳಾಚೆಗಿನ್ನೊಂದು ಚಿತ್ರವಿದೆ..! (೫-೨-೦೮)

ದಿನದ ಬ್ಲಾಗಿನ ಈ ದಿನದ ಚುಕ್ಕಿ ಸಿಂಧು ಅವರ ಎಲ್ಲಾ ನೋಟಗಳಾಚೆಗಿನ್ನೊಂದು ಚಿತ್ರವಿದೆ..! ಕನ್ನಡದಲ್ಲಿ ತುಂಬಾ ಆಪ್ಯಾಯಮಾನವಾಗಿ ಬರೆಯುವ ಸಿಂಧು ಸುತ್ತಲಿನ ಪ್ರಪಂಚದ ಕುರಿತ ತಮ್ಮ ಬೆರಗನ್ನು ಅಕ್ಷರಕ್ಕಿಳಿಸುವ ಬಗೆಯೇ ಸೋಜಿಗ. ಎಲ್ಲವೂ ಭಾವೋದ್ಧೀಪ್ತ ಬರಹಗಳೇ. ಭಾಷೆಯನ್ನು ಕುಸುರಿ ಕಲೆಗಾರನಂತೆ ನೇವರಿಸಿ, ಜತನದಿಂದ ಪೋಣಿಸಿರುವ ಇವರ ಬ್ಲಾಗ್ ಬಾಗೀನಗಳು ಗುಬ್ಬಿಯ ಗೂಡಿನಂತೆ ಬೆಚ್ಚನೆಯ ಸ್ಪರ್ಶ ನೀಡುತ್ತದೆ.

ನಗರ ಬದುಕಿನ ವೇಗ, ತಲ್ಲಣಗಳೊಂದಿಗೆ ಎದುರಾಗುವ ಮಾನವೀಯ ಮುಖಗಳನ್ನು, ಅದರೊಳಗಿನ ಭಾವನಾತ್ಮಕ ಸಂಬಂಧವನ್ನು ಸಿಂಧು ಪರಿಚಯಿಸುವ ರೀತಿಯೇ ಅನನ್ಯ. ಒಂದು ಚೆಂದದ ಕವಿತೆಯಿರಬಹುದು, ಚುಮುಚುಮು ಬೆಳಗಿರಬಹುದು, ಹಸಿರು ಹುಲ್ಲಿನ ಮೇಲೆ ಬಿದ್ದಿರುವ ಮುತ್ತಿನಂತ ಇಬ್ಬನಿಯಿರಬಹುದು, ಟ್ರಾಫಿಕ್ ಜಾಮ್‌ನಲ್ಲಿ, ಕಾಫಿಡೇಯಲ್ಲಿ ಕೈಯೊಡ್ಡುವ ಬಿಕ್ಷುಕ ಮಕ್ಕಳ ದೈನ್ಯತೆ ಇರಬಹದು, ಹೀಗೆ ನಮ್ಮ ಕಣ್ಣಿಗೆ ಕಂಡೂ ಕಾಣದಂತಿರುವ ಈ ಎಲ್ಲಾ ಚಿತ್ರಗಳು ಅವರ ಒಳನೋಟಕ್ಕೆ ಸಿಗುವ ರೀತಿಯೇ ಬೇರೆ. ಪ್ರತಿ ಜೀವವನ್ನೂ ಅದರೊಳಗಿನ ಜೀವನಪ್ರೀತಿಯನ್ನೂ ಅಷ್ಟೇ ಅಕ್ಕರೆಯಿಂದ, ಶ್ರದ್ಧೆಯಿಂದ, ನವಿರಾಗಿ ಹೆಣೆಯುವ ಕಾಳಜಿ ಇಲ್ಲಿನ ಬರಹದೊಗಳಗಿನ ಜೀವದ್ರವ್ಯ.

ಮೊದಲ ದಿನ ಮೌನ, ಚಾಂದ್ ಸೀ ಮೆಹಬೂಬಾ, ವೈಶಾಲಿ ಎಂಬ ಊರಿನಲ್ಲಿ ನೇಗಿಲಿಗೆ ಕಟ್ಟಿ ಗದ್ದೆ ಉಳಲು ಹಚ್ಚಿದ್ದ ಮಕ್ಕಳ ಕಥೆಗಳು, ಹೂವಿನಷ್ಟೇ ಚೆಂದದ ಕವಿತೆ ಎಲ್ಲವೂ ಬೆಳದಿಂಗಳಂತೆ. ಧರ್ಮಾಂಧತೆಯಲ್ಲಿ ಉಸಿರುಕಟ್ಟಿ ನೇತಾಡುತ್ತಿರುವ ಆಫ್ಘಾನಿಸ್ತಾನದ ಒಂದು ಅಪರೂಪದ ಚಿತ್ರಣ, ಗಡಿಪಾರು ಗವಾಕ್ಷಿ, ಕೆಂಪಿ ಕಣ್ಣು, ಅಜ್ಜ, ಅಜ್ಜಿ ಮತ್ತು ಮಳೆಯ ಕಥೆ ಇವೆಲ್ಲವೂ ಹಳೆಯ ಪೋಸ್ಟ್‌ಗಳಾದರೂ, ಬಾಲ್ಯಕಾಲದ ಸಖಿಯಂತೆ ಒಲುಮೆ ಹುಟ್ಟಿಸುವ ಆಪ್ತ ಬರಹಗಳು.

ಮಾಗಿಯ ಬೆಳಗಿನ ಕನಸು, ಮಾಧು ಮಾಮ ಎಂಬ ಭಾವಜೀವಿಯ ಕವಿತೆ ಈ ಬ್ಲಾಗಿನ ಇತ್ತೀಚಿನ ಸೇರ್ಪಡೆಗಳು. ಬರೆವ ಬದುಕಿನ ತಲ್ಲಣದಲ್ಲಿ, ಮಧುರ ನೋವಿನ ಮಿಂಚುಗಳಲ್ಲಿ ಸಿಂಧು ಅರಳಿಸುವ ದೃಶ್ಯಕಾವ್ಯ ಅಪರೂಪ. ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ, ಅದಕೆ ಕಂಡ ನೋಟ ಸಮುದ್ರದಂಥ ಪ್ರಾಣಿ.. ಎಂಬ ಕೆ.ಎಸ್.ಎನ್ ಅವರ ಸಾಲು ಅವರ ಬ್ಲಾಗಿನ ಕುರಿತು ಎಲ್ಲವನ್ನೂ ಹೇಳುತ್ತದೆ.

ಕ್ಷಿತಿಜದೆಡೆಗೆ (೪-೨-೦೮)

ಇಂದಿನ ಬ್ಲಾಗ್ ಪಯಣ ಪರಿಸರ ಪ್ರೇಮಿ ಅರುಣರ ಕ್ಷಿತಿಜದೆಡೆಗೆ. ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯ ಸರಾಗ ವ್ಯಕ್ತಿತ್ವದ ಇವರ ಲೇಖನಗಳೆಲ್ಲಾ ಪ್ರಕೃತಿ ವೈಭವದಿಂದಲೇ ತುಂಬಿರುವುದನ್ನು ನೀವು ಕಾಣಬಹುದು. ಇವರದ್ದೇ ಆದ ವೃತ್ತಿಪರ ಪ್ರವಾಸೀ ಗುಂಪು, ಇಲ್ಲಿನ ಸಾಕಷ್ಟು ಬರಹಗಳ ಪ್ರೇರಣೆಯಾಗಿದ್ದರೆ, ಇವರ ನಿಸರ್ಗ ಪ್ರೀತಿ ಎಲ್ಲ ಬರಹಗಳ ಬೆನ್ನೆಲುಬು. ಇಂದಿನ ಭಾರೀ ಚಟುವಟಿಕೆ ಹಾಗೂ ವೇಗದ ಜಗತ್ತಿನಲ್ಲಿ, ಹಾದಿಬದಿಯಲ್ಲಿ ನಿಂತು ಹಕ್ಕಿಗೊರಳನ್ನು ಕೇಳಲೂ ಪುರುಸೊತ್ತಿರದ ಹಲವಾರು ಜೀವಗಳನ್ನ, ಪ್ರಕೃತಿಯ ಮಡಿಲಿಗೆ ಕರೆದೊಯ್ದು ಹೊಸಬೆಳಕು ತೋರಿಸುವುದಲ್ಲದೆ, ಚಿಂತನೆಗೆ ಪ್ರೇರೇಪಿಸುವ ಹಲವು ಬರಹಗಳಿವೆ.

ಕನ್ನಡಕ್ಕೆ ಅಪರೂಪವೇ ಅನ್ನಿಸುವಂತಹ ವನಸಂಪತ್ತನ್ನ ಪರಿಚಯಿಸುವ ಅಪರೂಪದ ಲೇಖನಗಳ ಸರಮಾಲೆಯಿಲ್ಲಿದೆ. ಇತ್ತೀಚೆಗೆ ಬರೆದಿರುವ ವಿಶ್ವ ಸೌಂದರ್ಯ ಸ್ಪರ್ಧೆಯ ಭಾಗೀದಾರರು ನೋಡುಗರ ಮನಸ್ಸಿಗೆ ಹಿತ ಕೊಡುತ್ತಾರೆ. ಜೊತೆಗೇ ತಮ್ಮ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನೂ. ಇದನ್ನು ವಿವರಿಸುವ ಮಾತೇ ಇಲ್ಲ. ನೋಡಿಯೇ ನಲಿಯಬೇಕು. ರಾಷ್ಟ್ರೀಯ ಉದ್ಯಾನದಲ್ಲಿ ಪ್ಲಾಸ್ಟಿಕ್ ತಿಂದು ಜೀವಬಿಟ್ಟ ಜಿಂಕೆ, ಅಗಲಿದ ವನ್ಯಪ್ರಾಣಿ ವೈದ್ಯ ವಿಶ್ವನಾಥ್, ಕೊಳೆತು ಕುಲಗೆಟ್ಟಿರುವ ಬೆಂಗಳೂರನ್ನು ಶುಚಿಮಾಡುವ ಬಗೆ, ದೀಪಾವಳಿಯ ದುಃಖದ ನೆನಪು, ನಗು, ಮಳೆಗಾಲ, ವನ್ಯಜೀವಿ ಸಪ್ತಾಹ, ಬತ್ತಿಹೋದ ಗಂಗೆಗಳು, ಸ್ಟೀವ್ ಇರ್ವಿನ್ನನ ನೆನಪಿಗೆ ಬರೆದ ಲೇಖನ, ಉರಗೋಪಚಾರ, ಸೊಬಗಿನ ಕನ್ನಡ ನಾಡು, ಹಿಮಾಲಯದ ಚಾರಣ, ಆಹಾರ ಸಂಕಲೆಯ ಸಮೀಪ ದರ್ಶನ..

ಎಲ್ಲ ಲೇಖನಗಳ ತಿರುಳಾಗಿ ಪ್ರಕೃತಿ, ಹೊಳಪಾಗಿ ಪ್ರಕೃತಿಯೆಡೆಗಿನ ಕಾಳಜಿ ತುಂಬಿಕೊಂಡು ಓದುವವರಿಗೆ ಹಿತವಾದ ಅನುಭವ ಕೊಡುತ್ತವೆ. ಬನ್ನಿ ಕ್ಷಿತಿಜದೆಡೆಗೆ ಸಾಗಲು..

ಚೆಂಡೆಮದ್ದಳೆ (೩-೨-೦೮)

ಇವತ್ತಿನ ಬ್ಲಾಗ್ ರಂಗದಲ್ಲಿ ಅರವಿಂದ ನಾವಡರ "ಚೆಂಡೆಮದ್ದಳೆ"ಯಾಟ.. ನಾನು ಸುದ್ದಿ ಜೀವಿ. ನಿತ್ಯವೂ ಸುದ್ದಿ ಬರೆಯುವುದು ನನ್ನ ಕಾಯಕ. ಅದರ ಮಧ್ಯೆ ಆಗಾಗ್ಗೆ ಹೊರಡುವ ಭಾವನೆಗಳ ಮೆರವಣಿಗೆಯ ಸೊಗಸನ್ನು ತುಂಬಿಕೊಳ್ಳಲು ಈ ಬ್ಲಾಗ್ ಅಂತ ಬ್ಲಾಗ್ ರಂಗ ಪ್ರವೇಶಿಸಿರುವ ನಾವಡರ ಚಾಲ್ ಗಳು ವಿಭಿನ್ನ ಮತ್ತು ಸಂವೇದನಾ ಶೀಲ ಲಾಸ್ಯಗಳು.

ಸುತ್ತಲಿನ ಪರಿಸರ ಬದುಕುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಪದಗಳಲ್ಲಿ ಅನುರಣಿಸುವ ರೀತಿಯೇ ವಿಶಿಷ್ಟವಾಗಿರುತ್ತದೆ. ಇತ್ತೀಚಿನ "ಬೆಳಗ್ಗೆಗಿಂತ ಸಂಜೆಯೇ ವೇಗ" ಕತೆಯಲ್ಲಿ ಟ್ರಾಫಿಕ್, ಬ್ಯುಸಿಯ ನಡುವೆ ಕಳೆದುಕೊಳ್ಳುತ್ತಿರುವ ನಮ್ಮ ಬದುಕಿನ ಬಗ್ಗೆಯೇ ಇತ್ತೀಚೆಗೆ ಅನಿಸಿದ್ದನ್ನ ಪಕ್ಕದ ಮನೆಯ ಪುಟ್ಟಿಯ ಕಣ್ಣಲ್ಲಿ ಕಟ್ಟಿಕೊಟ್ಟಿದ್ದಾರೆ. ಕನಸು ಕರಗಿದ ಬದುಕು ಬರಹದ ಬಾಲಕಾರ್ಮಿಕರು, ಸೂಜಿಗಳದ್ದೇ ಬದುಕು ಬರಹದ ಪುಟ್ಟ ಡಯಾಬಿಟಿಸ್ ಪೀಡಿತರು,ಅವನಿಗೆ ಇವನು ಆಳು ಕತೆಯ ಮಾಲಿಕ, ಕೆಲಸಗಾರ, ಕೆಲಸಗಾರನ ಮಗ ಮತ್ತು ಬಡತನದ ವಿಷವರ್ತುಲದ ಅಪರೂಪದ ನೋಟ, ಕತ್ತಲೆಯ ಗುರುತು ಹೇಳಿ ಲೇಖನದ ಕಳೆದುಹೋದ ಬಾಲ್ಯದ ಮುಗ್ಧ ನೆನಪು... ಎಲ್ಲವೂ ಕಟ್ಟಿಕೊಡುವ ಅನುಭವ ವಿಭಿನ್ನ ರೀತಿಯದು. ನಾವು ದಿನದಿನ ಸಾಗಿದ ದಾರಿಯ ನೂರೆಂಟು ಮಗ್ಗುಲುಗಳನ್ನು ಮನಃಸ್ಪರ್ಶಿಯಾಗಿ ಚಿತ್ರಿಸುವ ಇವರ ಶೈಲಿ ಎಲ್ಲರಿಗೂ ಇಷ್ಟವಾಗುತ್ತದೆ.

ನಾವು ಮತ್ತು ನಮ್ಮವರು, ಬದುಕಿನ ಕೌದಿಗೆ ಬಂಧದ ಚಿತ್ರ, ಸುಕ್ಕಿನ ಮೊಹರು, ಬೊಗಸೆಲೆಕ್ಕದ ಅಪ್ಪ.. ಇತ್ಯಾದಿ ಎಲ್ಲ ಬರಹಗಳೂ ಹೊಸರೀತಿಯ ಸಂವೇದನಗಳ ಹೊಸ ಶಬ್ಧತಾನಗಳಾಗಿ ಇವರ ಚೆಂಡೆಮದ್ದಳೆಯಿಂದ ಹೊಮ್ಮುತ್ತಿವೆ.. ನೋಡಿ

ಶರಧಿ (೨-೨-೦೮)

ಈ ಬಾರಿಯ ಬ್ಲಾಗ್ ಬೊಗಸೆಯಲ್ಲಿ ಚಿತ್ರಾ ಕರ್ಕೇರಾ ಅವರ ಶರಧಿಯ ಸರದಿ. ನಿತ್ಯ ಜೀವನದ ಸಹಜ, ಸರಳ ಸಂಗತಿಗಳನ್ನು ನವಿರಾಗಿ ಹೆಣೆಯುವ ಚಿತ್ರ ಪುತ್ತೂರಿನಿಂದ ಬಂದಿರುವ ಯುವ ಪ್ರತಿಭೆ. ಅವರು ವಾಸ್ತವಕ್ಕೆ ಹತ್ತಿರವಾಗಿ ಬರೆಯುತ್ತಾರೆ. ಸುತ್ತಮುತ್ತ ನಡೆಯುವ ಸಣ್ಣಪುಟ್ಟ ಘಟನೆಗಳನ್ನು ಇದ್ದದ್ದು ಇದ್ದ ಹಾಗೆ ಬ್ಲಾಗಿಸುತ್ತಾರೆ. ಅಲ್ಲಿ ನೋಡಿ, ಇಲ್ಲಿ ಬಂದು ಕತೆ ಹೇಳಿದ ಹಾಗೆ ಇರುವ ಈ ಪ್ರಾಮಾಣಿಕ ಬರಹಗಳಿಗೆ ಚಿಂತನೆಯ ನವಿರಾದ ಸ್ಪರ್ಶವಿದೆ.

ಬಸ್ಸಿನಲ್ಲಿ ಭೇಟಿಯಾದ ಮಣಿಪುರಿ ಹುಡುಗ, ರಾತ್ರಿ ಕಾಣುವ ಎಂ.ಜಿ ರೋಡು, ಪುಸ್ತಕ ಪ್ರೀತಿಸುವ ಫ್ರಾನ್ಸಿನ ಅಧ್ಯಕ್ಷ, ರಾಖಿ ಕಟ್ಟಿ ಗಿಪ್ಟ್ ಕೊಡಲು ಬರುವ ಅಣ್ಣ ಈ ಎಲ್ಲಾ ಕತೆಗಳ ಹಿಂದಿರುವ ಮಾನವೀಯ ಆಯಾಮಗಳು ಗಮನ ಸಳೆಯುತ್ತದೆ. ಪಕ್ಕಾ ವ್ಯವಹಾರಿಯಂತಿರುವ ಬೆಂದಕಾಳೂರು, ಅದರೊಳಗಿನ ಕೃತಕ ನಗು, ಕಂಡು ಕಾಣದಂತಿರುವ ನೋವು ನರಳಾಟ, ಜನರ ಅವಸರ, ಉತ್ಸಾಹ ತಲ್ಲಣ ಎಲ್ಲವೂ ಶರಧಿಯ ಒಳನೋಟಕ್ಕೆ ಸಿಕ್ಕಿವೆ.

ರಜೆಯ ಮಜ ಅನುಭವಿಸಿದ ಕತೆ ಈ ಬಾರಿಯ ಪೋಸ್ಟಿನಲ್ಲಿದೆ. ವೃತ್ತಿ ಬದುಕಿನ ಒತ್ತಡದ ನಡುವೆ ಕಳೆದು ಹೋಗುವ ಒಂದು ವಾರ, ಅದರ ನಡುವೆ ಕೈಗೆ ಸಿಕ್ಕೂ ಸಿಗದಂತಿರುವ ಒಂದು ಭಾನುವಾರ, ಅದನ್ನು ಬೆಂಗಳೂರಿಗರು ಅನುಭವಿಸುವ ಸಂಭ್ರಮದ ವರ್ಣನೆ. ಮುಂದಿನ ಭಾನುವಾರಕ್ಕಾಗಿ ಕಾಯುತ್ತಾ, ಜುಗಾರಿ ಕ್ರಾಸ್‌ನ ಟಿಕೇಟ್ ಹಿಡಿದು ಎಲ್ಲರನ್ನೂ ಸ್ವಾಗತಿಸುವ ಶರಧಿಗೆ ಆರಾಮವಾಗಿ ಹೋಗಿ ಬರಬಹದು.

ಮನಸ್ವಿನಿ (೧-೨-೦೮)

ಕೆಂಡಸಂಪಿಗೆಯ ಇಂದಿನ ಬ್ಲಾಗ್ ಬೊಗಸೆಯಲ್ಲಿ ಸುರೇಖಾ ಅವರ ಮನಸ್ವಿನಿ. ಕಾನನದ ಸುಮವೊಂದು ಸೌರಭವ ತಾಸೂಸಿ ಸಫಲತೆಯ ಪಡೆವಂತೆ ಮಾಡೆನ್ನ ತಂದೆ ಎಂಬ ಕವಿನುಡಿಯ ಅಡಿಬರಹ. ಉತ್ತರಕನ್ನಡದ ಹಿನ್ನೆಲೆಯಿಂದ ಬಂದಿರುವ ಕವಯಿತ್ರಿಯ ಗೀತಗಳು ನವಿರಾದ ಭಾವಗಳನ್ನು ಸೂಕ್ಷ್ಮವಾಗಿ ಹೆಣೆದ ಕುಶಲ ಕುಸುರಿಯಂತೆ ಭಾಸವಾಗುತ್ತದೆ. ಎಲ್ಲೂ ಅಬ್ಬರವಿಲ್ಲದ ತಂಪುಹೊಳೆಯಂತೆ ಅಪ್ಯಾಯಮಾನ. ಈಗಾಗಲೇ ಕವನಸಂಕಲನವೊಂದನ್ನು ಪ್ರಕಾಶಿಸಿರುವ ಈ ಯುವಪ್ರತಿಭೆಯ ದೃಷ್ಟಿಕೋನವೇ ವಿಶಿಷ್ಠ, ವಿಭಿನ್ನ.

ಈಗೀಗ ರಾತ್ರಿಗಳಲ್ಲಿ, ಹಳೆಯ ಹನಿಗಳು, ಕಲ್ಲು-ಕಲೆ-ಅವಳು, ತಿಳಿದಿರಲಿಲ್ಲ, ಹಾದಿಬದಿಯ ಹೂವು, ಚುಕ್ಕಿಗಳ ನಡುವೆ, ದಡದಿಂದ ದಡಕೆ ಮೊದಲಾದ ಇನಿದನಿಯ ಕವಿತೆಗಳು ರಾಗ ಸಂಯೋಜನೆಗಾಗಿ ಕಾದು ಕೂತಷ್ಟು ಮಧುರವಾಗಿ ಮೂಡಿವೆ. ಸೂಕ್ಷ್ಮ ಸಂವೇದನೆಯನ್ನ ಸಮರ್ಥವಾಗಿ ಪದಗಳಲ್ಲಿ ಅಭಿವ್ಯಕ್ತಿಸುವ ಕೆಲವು ಹನಿಗಳು ನಿಮ್ಮ ಮೊದಲ ಓದಿಗೆ...

ಅವಳು ಒಂದೇ ಸಮನೆ
ಬಿಕ್ಕುತ್ತಿದ್ದಳು; ಕಾರಣರ್ಯಾರೋ?
ಜಾರುವ ಆ ಕಣ್ಣ ಹನಿಗಳಲ್ಲಿ
ನನ್ನದೇ ಮುಖವಿತ್ತು..

ಇಂದಿಲ್ಲಿ ಹಗಲಾಗಿದೆ,ಕಣ್ಣು ತೆರೆದಿದೆ
ಮನದಲ್ಲಿ ಹೊಸತು ಕನಸು
ಹೂವಿನ ಹಾದಿಯೇನಿಲ್ಲ
ಹುರುಪು ತುಂಬಿ,ಛಲವ ಬಿತ್ತಿ
ಮುಂದೆನ್ನ ಕಥೆ ಬರೆಯುವ
ಸರಳ ಕನಸಷ್ಟೆ!...

ನೆನಪಿನಂಗಳದಿಂದ ಒಂದಿಷ್ಟು (೨೯ -೧-೦೮)

ಈ ದಿನದ ಬ್ಲಾಗ್ ಬೊಗಸೆಯಲ್ಲಿ ಪಡಿಮೂಡಿದ ಭಾವಚಿತ್ತಾರ ಶ್ಯಾಮಾ ಅವರ ನೆನಪಿನಂಗಳದಿಂದ ಒಂದಿಷ್ಟು. ಕೆಲವು ಮಧುರ ನೆನಪುಗಳು, ಕೆಲವು ಕಹಿ ನೆನಪುಗಳು, ನನಸಾದ ಕನಸುಗಳು, ಕಳೆದುಹೋದ ಅದೆಷ್ಟೋ ಕನಸುಗಳು... ನಾನು ಪಡೆದಿದ್ದು, ಕಳೆದುಕೊಂಡಿದ್ದು, ನಾನು ಕಲಿತಿದ್ದು...ನಂಗೆ ಅನಿಸಿದ್ದು.... ಇವೆಲ್ಲವನ್ನು ಕಟ್ಟಿಡುವ ಬುಟ್ಟಿ ಈ "ನೆನಪಿನಂಗಳದಿಂದ ಒಂದಿಷ್ಟು" ಅಂತನ್ನುತ್ತಾ ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟ ಈ ಬರಹಗಾರ್ತಿ ಬರೆದಿದ್ದೆಲ್ಲ ಭಾವೋದ್ದಿಪ್ತ ಬರಹಗಳೆ.

ಹೊಸಪೀಳಿಗೆಯ ನವೋಲ್ಲಾಸ, ಭಾವುಕ ಅಚ್ಚರಿ, ವಿನಾಕಾರಣ ಪ್ರೀತಿ, ಮತ್ತು ಒಳ್ಳೆಯ ಕನ್ನಡ ಪದಕೋಶಗಳಿಂದ ಇವರು ನೇಯ್ದಿರುವ ಹೆಣಿಗೆಗಳು ವಿಶಿಷ್ಠವಾಗಿವೆ. ಚಂದ್ರನು ಬಾವಿಗೆ ಬಿದ್ದನು, ಮೊದಲಮಳೆ-ನಾನು-ಅವನು-ಒಂದು ಸುಂದರ ಕಲ್ಪನೆ, ಕಾನನ ಕುಸುಮ, ಶಿಳ್ಳೇಖ್ಯಾತರು, ಮರಳುವುದಾದರೂ ಹೇಗೆ, ಈ ಕಥೆ ಅಂದ್ರೆ ನಂಗೆ ಸಿಟ್ಟು, ನನ್ನ ಹೆಸರಿಗೊಂದು ಸಂಜೆ, ನಾಳೆಗಳು ನಮಗಿಹವು, ಕೈಜಾರಿ ಹೋಗುತ್ತಾವ ಕನಸುಗಳು.. ಮುಂತಾದ ಎಲ್ಲ ಬರವಣಿಗೆಗಳೂ ಹೆಚ್ಚು ಸದ್ದು ಗದ್ದಲವಿಲ್ಲದೆ ಸುಮ್ಮನೆ ಮನಸ್ಸಿನೊಳ ಹೋಗಿ ಮನೆ ಮಾಡುತ್ತವೆ.

ಇತ್ತೀಚಿನ ಬರಹ ಕಡಲಾಚೆಯ ಗೆಳತಿಗೊಂದು ಪ್ರೀತಿಯ ಪತ್ರದಲ್ಲಿ, ಆಪ್ತ ಗೆಳತಿಯೊಡನೆ ಕಳೆದ ಮಧುರ ಕ್ಷಣಗಳ ನೆನಪು, ಮತ್ತು ಅವಳಿಲ್ಲದಾಗಿನ ಖಾಲಿತನದ ಹಳಹಳಿಕೆ ಎರಡೂ ಅನನ್ಯವಾಗಿ ಸೇರಿಕೊಂಡು ಹೊಸದೇ ಚಿತ್ತಾರ. ಇವರ ಕಲ್ಪನೆಗಳ ವೈವಿಧ್ಯವೇ ಒಂದು ಸೊಗಸು. ಹೊಸಪೀಳಿಗೆಯ ಈ ಚಿಗುರಿನ ಸವಿಯನ್ನೊಂದಿಷ್ಟು ಸವಿಯುವ ಬನ್ನಿ..

ಈ ಪಲ್ಲವ ಹೇಗಿದೆ ನೋಡಿ..

ಕಣ್ಣುಗಳೂ ಮಾತಾಡುತ್ತವಂತೆ
ಹೌದಾ ?ನಾನು ಕೇಳಿದ್ದೆ ನಿನ್ನ,
ನಿನ್ನ ಕಣ್ಣಲ್ಲಿ ಕಣ್ಣಿಟ್ಟು
ನೋಡಿದಾಗ ಗೊತ್ತಾಯ್ತು
ಕಣ್ಣುಗಳು ಕವಿತೆಯನ್ನೂ
ಹೇಳುತ್ತವೆ....

ತುಂತುರು ಹನಿಗಳು (೨೮ -೧-೦೮)

ದಿನದ ಬ್ಲಾಗ್ ಬೊಗಸೆಯಲ್ಲಿ ತುಂತುರು ಹನಿಗಳು. ಕನ್ನಡವನ್ನು ತುಂಬ ಪ್ರೀತಿಯಿಂದ ನೇವರಿಸಿ ನೇಯುವ ಕುಶಲ ಹೂವಾಡಿಗ ಶ್ರೀನಿಧಿಯವರ ಭಾವಲಹರಿ. ಪುಟ್ಟ ಪುಟ್ಟ ಸಂತಸಗಳನ್ನು ಹೆಕ್ಕಿ ಮುದ್ದಿಸಿ ತುಂತುರು ಹನಿಗಳಾಗಿ ಸಿಂಪಡಿಸುವ ಇವರ ಸಾಲುಗಳು ಕ್ರಿಯಾಶೀಲ ಅಭಿವ್ಯಕ್ತಿಗಳು. ಸಂವೇದನಾಶೀಲ ಯುವಪ್ರತಿಭೆ ಶ್ರೀನಿಧಿಯವರ ಎಲ್ಲ ಬರಹಗಳೂ ಆತ್ಮೀಯವೆನ್ನಿಸುವಷ್ಟು ಅಪ್ಯಾಯಮಾನ.

ಖುಷಿಗೊಂದು ಪದ್ಯ ಬರೆಯುವ ಇವರ ಹೂವು ಮಾರುವ ಹುಡುಗಿ, ನಾನು ನಾನಾಗಿರುವುದು, ಮೇಪ್ಲವರಿನ ಮರ, ಹಕ್ಕಿ ಕಥೆ, ಸಾಗರ ಸಮ್ಮುಖದಲ್ಲಿ, ಬೇಸಿಗೆಯ ಮದುವೆಯೆಂದರೆ, ನಗುವ ಮುದುಕ ಎಲ್ಲವೂ ಜೀವಂತ ಬಿಂಬಗಳಾಗಿ ಹೊಳೆಯುತ್ತವೆ. ಇವರು ಇತ್ತೀಚೆಗೆ ನೂರನೆಯದಾಗಿ ಬ್ಲಾಗಿಸಿದ ಕವಿತೆ ಜಂಗಮ ಬಿಂಬಗಳು. ಶ್ರೀನಿಧಿಯ ಚಳಿಯ ಬೆಳಗು ಕವಿತೆಯ ಕೆಲಸಾಲುಗಳು ನಿಮ್ಮ ಮೊದಲ ಓದಿಗಾಗಿ..

ಒಂದೊಂದೆ ಹೂ ಹೆಕ್ಕಿ, ಬಿದಿರ ಬುಟ್ಟಿಗೆ ಹಾಕಿ
ಮತ್ತೆ ನೋಡಿದನವನು ಮಂಜದಾರಿ.
ಮೆಲು ಗೆಜ್ಜೆಯಾದನಿಯು, ಬೇಲಿದಾಟುತಲಿರಲು
ಬುಟ್ಟಿಯಾ ಹೂ ಮತ್ತೆ, ಭೂಮಿಪಾಲು....

ಬನ್ನಿ ಈ ಭಾವಜೀವಿಯ ಅಕ್ಷರಧಾರೆಯಲ್ಲಿ ತೋಯಲಿಕ್ಕೆ.

ದಿಗಂತ (೨೫ -೧-೦೮)

ಇವತ್ತಿನ ಬ್ಲಾಗ್ ಬೊಗಸೆಗೆ ದಕ್ಕಿರುವುದು ದಿನೇಶರ ದಿಗಂತ. ಸರಳ ಭಾವಪೂರ್ಣ ಕವಿತೆಗಳು ಮುಗಿಲು ತುಂಬಿ ನಿಂತಿವೆ. ನೀಲ ದಿಗಂತವಿಡೀ ಹಬ್ಬಿರುವ ಬಗೆಬಗೆಯ ಭಾವಮುಗಿಲುಗಳ ಚಿತ್ತಾರ ಓದುವವರ ಮನಸ್ಸನ್ನು ಭಾವೋತ್ಕರ್ಷತೆಯಲ್ಲಿ ತೋಯಿಸುತ್ತದೆ. ಬೆಳಗಿನ ಬೆಳಕು, ರಾತ್ರಿಯ ಕತ್ತಲೆ ಒಂದಿನ್ನೊಂದಡನೆ ಅನುಸಂಧಾನ ಮಾಡಿಕೊಂಡಂತೆ ಬರೆದಿರುವ ಈ ಸಾಲುಗಳು ಹೂಬನದಲ್ಲಿ ಬಿರಿದ ಬಗೆಬಗೆಯ ಹೂಗಳಂತಿವೆ.

ಛಾಯಾಗ್ರಹಣವನ್ನು ಇಷ್ಟಪಡುವ ಲೇಖಕರ ಕವಿತೆಗಳಲ್ಲಿ ಹಲವು ಭಾವಾನುವಾದಗಳಿವೆ. ಇನ್ನು ಕೆಲವು ಜೀವನಾನುಭವಗಳ ಸಿರಿಮೊಗ್ಗೆ. ಆಕಾರವಿಲ್ಲದ್ದು ಕವಿತೆಯಲ್ಲಿ ಅನುಭವಿಸಿದ ಮತ್ತು ಕಳೆದುಹೋದ ಪ್ರೀತಿಯ ನೆನವರಿಕೆಯಿದ್ದರೆ, ಉಳಿದ ಕವಿತೆಗಳು ಪ್ರೇಮಪೂರ್ಣ ಮಂದಾರಗಳೇ. ಕಳೆದ ಕಾಲ, ನೆನಪು, ಪ್ರಕೃತಿ, ಚೆಲುವುಗಳ ಹಲ ನೋಟಗಳ ಹೊಸದಿಗಂತ. ವಿಧವೆ ಹಕ್ಕಿಯ ಹಾಡು, ಸಿಗರೇಟು, ನಿರೀಕ್ಷೆ, ಹುಡುಕಾಟ.. ಎಲ್ಲ ಕವಿತೆಗಳಲ್ಲೂ ಹೊಸನಿಲುವು ನೋಟ. ಅಪ್ಯಾಯಮಾನವಾಗಿದೆ.

ಒಂದು ಕವಿತೆಯ ಕೆಲ ಸಾಲು ಇಲ್ಲಿವೆ..
ಸಿಗರೇಟು
ತುದಿಯಲ್ಲಿ ತೂಗಾಡುವ ಬೂದಿ
ಉದುರಿಬಿಳಲಿರುವ ಜೀವದ ಪ್ರತೀಕ
ಬೂದಿಯಡಿಯ ಬೆಂಕಿ
ಮನಸು ಹೊತ್ತ ಕನಸು...

ಬನ್ನಿ ದಿಗಂತ ವೀಕ್ಷಣೆಗೆ..

ಅಂತರಂಗ (೨೪ -೧-೦೮)

ಇವತ್ತಿನ ಬ್ಲಾಗ್ ಬೊಗಸೆಯ ಹೂವು ಸತೀಶರ ಅಂತರಂಗ. ಮುನ್ನೂರು ಬ್ಲಾಗ್ ಲೇಖನಗಳನ್ನೊಳಗೊಂಡ ಸಮೃದ್ಧ ಬ್ಲಾಗಿನಲ್ಲಿ ಇವರು ಬದುಕಿನಲ್ಲಿ ಆದ, ಆಗಬಹುದಾದ ಹಲವಾರು ವಿಷಯಗಳ ಮೇಲೆ ಇಲ್ಲಿ ಸತ್ಯಕ್ಕೆ ಎಷ್ಟು ಸಾಧ್ಯವೋ ಅಷ್ಟು ಹತ್ತಿರದಲ್ಲಿ ನಿಂತು ಬರೆದಿದ್ದಾರೆ.

ಅಮೆರಿಕದ ನೆಲದಲ್ಲಿ ದುಡಿಯುತ್ತಿರುವ ಲೇಖಕರ ಅಪ್ಪಟ ಭಾರತೀಯ ಮನಸ್ಸು ಅಲ್ಲಿಯ ಮತ್ತು ಇಲ್ಲಿಯ ವಿಷಯ ವಿಶೇಷಗಳನ್ನು ಸಮನ್ವಯಗೊಳಿಸಿ ಬರೆದಿಡುತ್ತದೆ. ರಸ್ತೆಯ ಮಟ್ಟಗಾರರಿಂದ ಸ್ಫೂರ್ತಗೊಂಡ ಬರಹ ಬದುಕು ಮತ್ತು ವೇಗದ ಚಿಂತನಾರ್ಹ ಲೇಖನವಾಗಿ ಪಡಿಮೂಡುತ್ತದೆ. ತಂತ್ರಜ್ಞಾನ, ಹಳೆಯ ಸಿನಿಮಾಗಳು, ಮಧುರಗೀತೆಗಳು, ಬೆಂಗಳೂರು, ಅವರಿರುವ ದೇಶದ ಮಾಗಿ ಮತ್ತು ವಸಂತ, ಪರಿಸರ, ಸಾಮಾಜಿಕ ಕಳಕಳಿ, ರಾಜಕೀಯ ವಿಡಂಬನೆ, ಸದ್ಯದ ಗ್ಲೋಬಲ್ ಕನ್ ಸ್ಯೂಮರಿಸಮ್ಮು ಹೀಗೆ ಎಲ್ಲ ವಿಷಯಗಳನ್ನೂ ಕೂಲಂಕಷವಾಗಿ ವಸ್ತುನಿಷ್ಠವಾಗಿ ಬರೆದಿಡುವ ಅಂತರಂಗಕ್ಕೊಮ್ಮೆ ಭೇಟಿ ನೀಡಿ.

ಇಲ್ಲಿ ಬರೆದ ತುಣುಕುಗಳು ನಿಮ್ಮ ಮನಸ್ಸನ್ನು ತಟ್ಟಬಹುದು ಎಂಬುದು ಲೇಖಕರ ನಮ್ರ ಆಶಯ. ನಿಮ್ಮ ಸಮಯವನ್ನು ಇಲ್ಲಿಯ ವಸ್ತುಗಳು ಹಾಳುಮಾಡಲಾರವು ಎಂಬ ನಂಬಿಕೆಯೊಂದಿಗೆ ನಿಮ್ಮ ಪ್ರತಿಕ್ರಿಯೆಗಳಿಗೆ ಕಾಯುತ್ತಾ ಅಂತರಂಗದ ಬ್ಲಾಗಿಲು ತೆರೆದಿಟ್ಟಿದ್ದಾರೆ.

ವಿಕಾಸವಾದ (೨೩-೧-೦೮)

ವಾದ ವಿವಾದಗಳ ನಡುವೆ ಯಾವುದೇ ಗೊಂದಲ ಹುಟ್ಟಿಸದೆ ವಾದಿಸಲು ಮುಕ್ತ ಅವಕಾಶ ಕಲ್ಪಿಸಿರುವ ವಿಕಾಸವಾದ ದಿನದ ಬ್ಲಾಗುಚ್ಚದಲ್ಲಿದೆ. ವಿಕಾಸ ಎನ್ನುವ ಹೆಸರಿನ ಮುಂದೆ ವಾದವನ್ನು ಜೋಡಿಸಿ ಹೆಗಡೆಯವರು ಮಂಡಿಸುವ ಚರ್ಚೆಗಳು ಬಲು ಸೊಗಸು. ವಿಷಯಗಳು ಒಂದನ್ನೊಂದು ಮೀರಿಸುವಂತಿದ್ದರೆ, ಕೆಲವೊಮ್ಮೆ, ನವಿರು, ಕೆಲವೊಮ್ಮೆ ಗಂಭೀರ ಎನಿಸುವ ವಾದಗಳು ಒಗರು ಸಿಹಿಯ ಸಮ್ಮಿಶ್ರಣದಲ್ಲಿ ವಾಚಕನ ಚರ್ಚೆಗೆ ಬಿಸಿಯೇರಿಸುತ್ತದೆ.

ವಿಕಾಸವಾದದೊಳಗಿನ ‘ವಾದ'ಗಳ ರಸಸ್ವಾದ ಅನುಭವಿಸುವುದೇ ಒಂದು ಬಗೆಯಾದರೆ, ವಾದದ ನಂತರ ಮೂಡುವ ಒಮ್ಮತವಲ್ಲದ ಅಭಿಪ್ರಾಯಗಳನ್ನು ಸಂಗ್ರಹಿಸಿ, ಹೊಸದೊಂದು ಚರ್ಚೆಗೆ ಪಂಕ್ತಿ ಹಾಕುವುದು ಬ್ಲಾಗಿನ ವಿಶೇಷ. ಚಹಾದ ಜೊತೆ ಚುಡಾದ ಸವಿಯಂತೆ ಕಮೆಂಟುಗಳಿವೆ. ಅಮೀರ್ ಖಾನ್ ನಿರ್ದೇಶನ ತಾರೆ ಜಮೀನ್ ಪರ್ ಎನ್ನುವ ಸಿನೆಮಾ ಇತರ ಸಿನೆಮಾಗಳಿಗಿಂತ ಹೇಗೆ ಭಿನ್ನಾಗಿದೆ ಎನ್ನುವುದು ವಿಕಾಸದ ಹೊಸ ವಾದ. ಭುವಿಯಲ್ಲಿನ ನಕ್ಷತ್ರಗಳು ಎನ್ನುವ ಈ ಚಿತ್ರದ ಕನ್ನಡ ಶೀರ್ಷಿಕೆಯನ್ನು ಯಾರು ಬೇಕಾದರೂ ಯಾವುದೇ ವಾದವಿಲ್ಲದೆ ಒಪ್ಪಿಕೊಳ್ಳಬಹುದು ಎನ್ನುವಷ್ಟು ಚೆನ್ನಾಗಿದೆ. ಪಾಪಿಯಾದವನನ್ನು ಯೇಸು ಸ್ವಾಮಿ ಕಾಪಾಡುತ್ತಾನೆ ಎನ್ನುವ ವಾದ ಆಸ್ತಿಕರಿಗೆ ಸ್ವಲ್ಪ ಗೊಂದಲ ಮೂಡಿಸಿದರೆ, ನಾಸ್ತಿಕರಿಗೆ ನಗು ತರಿಸುತ್ತದೆ. ಇವೆರಡರ ನಡುವಿನ ಆನಾಸ್ತಿಕರು ಮುಕ್ತವಾಗಿ ವಾದ ಮಂಡಿಸಿದ್ದಾರೆ.

ಚಿರಂಜೀವಿ ಮಗಳು ಓಡಿ ಹೋದ್ರೆ ನಮಗೇನು? ಯಾರನ್ನೂ ಜೀವನಪೂರ್ತಿ ಪ್ರೀತಿ ಮಾಡೋಕ್ಕಾಗಲ್ವಾ? ಭಾರತ ಆರ್ಥಿಕವಾಗಿ ಬಲಾಢ್ಯವಾಗುವುದು ಇವರಿಗೇಕೆ ಬೇಡ? ಎನ್ನುವುದೆಲ್ಲಾ ಹಳೆಯ ವಾದಗಳಾದರೂ, ಹೊಸ ವಿಷಯಗಳ ಕುರಿತು ವಾದ ಮಂಡಿಸಲು ವಿಕಾಸವಾದ ನಿಮ್ಮನ್ನು ಆಹ್ವಾನಿಸುತ್ತದೆ. ಇದನ್ನು ಓದಿದ ನಂತರ ನಿಮಗೆ ವಾದ ಮಾಡಬೇಕೆನಿಸಿದರೆ ವಿಕಾಸವಾದದ ಬಾ(ಬ್ಲಾ)ಗಿಲು ತೆರೆದಿದೆ ಎನ್ನುತ್ತಾರೆ ಹೆಗಡೆ.

ಬೊಗಳೆ-ರಗಳೆ (೨೨-೧-೦೮)

ಈ ದಿನದ ಬ್ಲಾಗ್ ಬೊಗಸೆಯ ಧಾರೆ ಬೊಗಳೆ-ರಗಳೆ. ಅಸತ್ಯಾನ್ವೇಷೀ ಲೇಖಕರ ವಿಡಂಬನ ಸಮಾರಾಧನೆ. ಇಲ್ಲಿಯ ಅರಾಜಕೀಯ ಬ್ಯೂರೋದಿಂದ ದಿನದಿನದ ಸುದ್ದಿಗಳು ಯಾವುದೇ ಪಕ್ಷಪಾತವಿಲ್ಲದೆ ಓದುಗರ ಮುಂದೆ ನಿಲ್ಲುತ್ತವೆ. ನಿತ್ಯದ ರಾಜಕಾರಣ, ಒಂದು ನಾಗರಿಕ ಸಮಾಜದ ತಲ್ಲಣ, ಬಹುಮುಖೀ ಸಂಸ್ಕೃತಿಯ ಕನ್ನಡ ಜನಮನ ಇವನ್ನು ನವಿರು ಹಾಸ್ಯದೊಂದಿಗೆ ವಿಶ್ಲೇಷಿಸುವ ಇವರ ಚಾಕಚಕ್ಯತೆಯೇ ಒಂದು ಸೊಗಸು. ಹಾಸ್ಯದ ತಿರುಳಿಟ್ಟು ಹುಳಿಹುಳಿಯಾಗಿ ಬಡಿಸುವ ಈ ರಗಳೆ ಓದಲು ಸ್ವಲ್ಪ ಕೂಡಾ ರಗಳೆಯಿಲ್ಲ. ಮೊದಲ ಸಾಲಿಗೆ ತುಟಿಯಂಚಲ್ಲಿ ಅರಳುವ ಕಿರುನಗು ಕೊನೆಯ ಸಾಲಿಗೆ ಬರುವಾಗ ಮುಖಮಂಡಲವಿಡೀ ಹೊಮ್ಮಿರುತ್ತದೆ. ಮೊನಚು, ಸೂಕ್ಷ್ಮತ್ವ ಮತ್ತು ಯಾವುದೇ ಪೂರ್ವಾಗ್ರಹಗಳಿಲ್ಲದ ಇವರ ಚಿನಕುರುಳಿಗಳು ಮುದ ನೀಡುತ್ತವೆ. ಮುಟ್ಟಿ ನೋಡಿಕೊಳ್ಳುವಂತೆ ಮಾಡುತ್ತವೆ.

ಬೊಗಳೆಗೂ ಭಾರ-ತಾ ರತ್ನ ಆದೇಶ ಅನ್ನುವುದು ಇವರ ಹೊಸ ಸುದ್ದಿ. - ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಹಾದಿ ಬೀದಿಯಲ್ಲಿರುವವರೆಲ್ಲರ ಹೆಸರು ಕೇಳಿಬರುತ್ತಿರುವುದರಿಂದ ತೀವ್ರ ಕಂಗೆಟ್ಟ ಬೊಗಳೆ ರಗಳೆ ಬ್ಯುರೋ, ತಲೆ ತಪ್ಪಿಸಿಕೊಂಡಿತ್ತು. ಆದರೂ "ಭಾರ-ತಾ ರತ್ನ" ಎಂದು ಆದೇಶಿಸುವ ಹಯಗ್ರೀವಾಜ್ಞೆ ಈಗಾಗಲೇ ಹೊರಬಿದ್ದಿರುವುದಾಗಿ ತಿಳಿದುಬಂದಿದೆ. ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಅಡ್ಡದಂಧೆಕೋರರಿಗೆ, ದುಡ್ಡಿನಲ್ಲೇ ತೇಲಾಡುತ್ತಿರುವವರಿಗೆಲ್ಲರಿಗೂ ಭಾರ-ತಾ ರತ್ನ ಪ್ರಶಸ್ತಿ ಹೊರಬೀಳುವುದು ಖಚಿತವಾಗಿದೆ.- ಇಷ್ಟು ಸಾಕಲ್ಲ ರುಚಿ ನೋಡಲು.. ಮತ್ತಿನ್ನೇನು ನೋಡ್ತಾ ಇದ್ದೀರಿ ಕ್ಲಿಕ್ ಮಾಡಿ ಅನ್ವೇಷಣೆ ನಡೆಯಲಿ..

ಚಿತ್ರದುರ್ಗ (೨೧-೧-೦೮)

ಅಮೆರಿಕನ್ನಡತಿ ಮಾಲಾರಾವ್ ಅವರ ಚಿತ್ರದುರ್ಗ ಇಂದು ನಮ್ಮ ಬ್ಲಾಗಿನ ಬೊಗಸೆಯಲ್ಲಿ. ಇಂಗ್ಲಿಷ್ ಸಾಹಿತ್ಯದ ಪ್ರೌಢ ಅಧ್ಯಯನ ಮತ್ತು ಅಧ್ಯಾಪನದ ಹಿನ್ನೆಲೆ, ಕಂಡ ಪುಟ್ಟ ನೋಟವನ್ನು ಖುಷಿಯನ್ನು ಕ್ಯಾಮೆರಾದಲ್ಲಿ ಕಂಡರಿಸುವ ಕಣ್ಣು, ಕ್ಯಾಮೆರಾಕ್ಕೆ ಸಾಥ್ ನೀಡುವ ಸರಳ ಲಲಿತ ಹನಿಗಳು, ಚೆಲುವಾದ ಇಂಗ್ಲಿಷ್ ಕವಿತೆಗಳ ಉಲ್ಲೇಖ ಮತ್ತು ಕನ್ನಡದ ಒಂದು ಪುಟ್ಟ ವ್ಯಾಖ್ಯಾನ ಫೋಟೋಕ್ಕೆ ಫ್ರೇಮಿನಂತೆ ಕಂಗೊಳಿಸುತ್ತದೆ. ಇಷ್ಟೇ ಅಲ್ಲದೆ ತಮ್ಮ ಮುದ್ದು ಮಗ ಅಮರ್ತ್ಯನಿಗೇಂತ ಒಂದು ಸ್ಪೆಷಲ್ ಬ್ಲಾಗು, ಅದರಲ್ಲಿ ಮುದ್ದು ಸೂಸುವ ಕಂದಮ್ಮಗಳ ಚಿತ್ರ, ಒಂದೊಂದು ಮುದ್ದಿಗೂ ಒಂದೊಂದು ಹಾಡು. ಪುಟ್ಟ ನಂದಗೋಕುಲವೇ ಅದು. ಇಷ್ಟೆಲ್ಲ ಬರೆದವರು ಕತೆ ಬರೆಯೋಲ್ಲವಾ ಅಂತ ಕೇಳ್ಬೇಡಿ.. ಅದಕ್ಕೆ ಮತ್ತೊಂದು ಕೊಂಡಿ ಕಥಾಕಾನನ - ಸರಳ ನೇರ ಚಿತ್ರಕ ನಿರೂಪಣೆಗಳ ಪುಟ್ಟ ಪುಟ್ಟ ಹನಿಗತೆಗಳು ದಟ್ಟ ಕಾನನದ ಹಸಿರು ತಂಪಿನ ಅನುಭವ ನೀಡುತ್ತವೆ.

ಕಾಡಿನ ಸಿಹಿ ಜೇನಿನ ಹನಿಯಂತಹ ಮಿನಿ ಕಥೆ ಜೊತೆಗೆ ಕಚಗುಳಿ ಇಡುವ ಹಾಸ್ಯವಿರುತ್ತೆ ಇಲ್ಲಿ ಅಂತ ಹೇಳಿಕೊಳ್ಳುವ ಕತೆಗಾರ್ತಿ, ಗೆಳೆಯರ ಮತ್ತು ಒದುಗರ ಪ್ರೋತ್ಸಾಹವನ್ನು ಅಕ್ಷರಕ್ಕಿಳಿಸಿರುವುದು ಹೀಗೆ.."ನಿನ್ನೆರಡು ಬ್ಲಾಗುಗಳು ಮಕಾಡೆ ಮಲಗಿರುವಾಗ ಇನ್ನೊಂದು ಹೊಸದು ಶುರು ಮಾಡುತ್ತೀಯಾ ಮಾಡು ಮಾಡು ನಾವೆಲ್ಲಾ ಬರುತ್ತೇವೆ ಎಂದು ಹುರಿದುಂಬಿಸುತ್ತಿರುವ ಮಿತ್ರರೆಲ್ಲರಿಗೂ, ಸದ್ದಿಲ್ಲದೇ ಬಂದು ಓದಿ ಆನಂದಿಸುವ ಕನ್ನಡ ಪ್ರೇಮಿಗಳಿಗೂ ಸ್ವಾಗತ" ಇನ್ವಿಟೇಷನ್ ಸಿಕ್ತಲ್ಲಾ ಇನ್ಯಾಕೆ ತಡ ಬನ್ನಿ. ಹೊಸ ಪೋಸ್ಟಿನಲ್ಲಿ ಶುಭ್ರ ಸ್ನಿಗ್ಧ ಲಿಲಿಯ ಫೋಟೋದೊಂದಿಗೆ ಬ್ಲೇಕ್‌ನ ಮಧುರ ಕವಿತೆಯ ಕಂಪು.

ಬುಕ್‌ಬಝಾರ್ (೧೯-೧-೦೮)

ಬುಕ್ ಬಝಾರ್ ಪುಸ್ತಕಗಳ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ನೀಡುವ ಆಕರ್ಷಕ ಬ್ಲಾಗ್. ಅಕ್ಷರ ಲೋಕದಲ್ಲಿ ನಡೆಯುವ ನೂತನ ವಿದ್ಯಮಾನಗ೯ಳ ಕಲರವ ಇಲ್ಲಿವೆ. ಬಿಡುಗಡೆಗೊಂಡ ಹೊಸ ಪುಸ್ತಕ, ಲೇಖಕರ ಪರಿಚಯ, ಕಥಾವಸ್ತು, ಮುಖಪುಟ ವಿನ್ಯಾಸ ಮತ್ತಿತರ ವಿಷಯಗಳ ಕುರಿತು ಚೊಕ್ಕ ಚಿಕ್ಕ ಮಾಹಿತಿ. ಅಂತರ್ಜಾಲಿಗಳು ಮತ್ತು ಲೇಖಕರ ನಡುವೆ ಪುಟ್ಟ ಸಾಹಿತ್ಯ ಸೇತುವೆ.

ಷೇಕ್ಸ್ ಪಿಯರನಿಗೆ ಪ್ರಶ್ನೆ ಕೇಳಿದ ಜಿ.ಎನ್ ಮೋಹನ್, ಉಫೀಟ್ ಬಡಿಸಿದ ಚೇತನಾ, ದೇಸಿನಗುವಿನ ಎಂ.ಎಸ್ ಮೂರ್ತಿ ಇವರೆಲ್ಲಾ ಬುಕ್‌ಬಝಾರಿನ ಪ್ರೆಷ್ ಪೇಜಸ್‌ನಲ್ಲಿದ್ದಾರೆ. ಸಂತೆಯ ಬಯಲಿನಲ್ಲಿ ಅಮೃತ ಗರುಡ, ಕಲವರ, ಕವಿಗೆ ಕನ್ನಡಿ, ಯಾರಿಟ್ಟರೀ ಚುಕ್ಕಿ, ರೈಟರ್ಸ್ ಚಾಯ್ಸ್ ಇವೆ. ಸೋಪಿನ ಗುಳ್ಳೆಯೊಂದು ಒಡೆಯದೆ ತೇಲುತ್ತಿದೆ. ಅಪಾರ ಅವರ ಮುಖಪುಟ ವಿನ್ಯಾಸಗಳು ಹಾಗೂ ಕೆಲವು ಅಪರೂಪದ ಪುಸ್ತಕಗಳ ಮುನ್ನಡಿಗಳು ಬಝಾರಿನ ಈ ಬಾರಿಯ ಸ್ಫೆಶಲ್.

ಹೊಸ ಹೊಸ ಪುಸ್ತಕಗಳ ಸೇರ್ಪಡೆಯಿಂದ ಸಂತೆಯಲ್ಲಿ ಸಡಗರ ಹೆಚ್ಚುತ್ತಿದೆ. ಕಂಪ್ಯೂಟರ್ ಪರದೆಗೆ ಕಣ್ಣುನೆಟ್ಟು ಕೂತರೆ ಒಂದಿಷ್ಟು ಪುಸ್ತಕಗಳ ಒಳಹೊಕ್ಕು ಬರಬಹದು. ಪುಸ್ತಕ ಕೊಳ್ಳುವ ಚಿಂತೆಯಲ್ಲ. ಪುಸ್ತಕದ ಈ ಸಂತೆಯಲ್ಲಿ ಯಾರೂ ಮುನಿಸಿಕೊಳ್ಳುವುದೂ ಇಲ್ಲ.

ಕುಂಚಪ್ರಪಂಚ (೧೮-೧-೦೮)

ಕುಂಚದಿಂದ ತಮ್ಮ ಕಲಾ ಪ್ರಪಂಚವನ್ನು ತೆರೆದಿಡುತ್ತಿರುವ ಪ್ರಮೋದರ ಕುಂಚಳಕ ಈ ದಿನ ಬ್ಲಾಗುಚ್ಛದ ಅರಳುಮೊಗ್ಗು. ಜಲವರ್ಣ, ತೈಲವರ್ಣ, ಸ್ಕೆಚಸ್ ಮತ್ತು ಯಾವುದೂ ಅಲ್ಲದ ಯಾವುದೂ ಆಗಬಹುದಾದ ಡಿಜಿಟಲ್ ಬಣ್ಣ ಎಲ್ಲ ಕಲಸಿ ಹಿತವಾಗಿ ತಿದ್ದಿ ತೀಡಿದ ಕುಸುರಿ ಕೆಲಸ.

ಇತ್ತೀಚೆಗಷ್ಟೆ ನಡೆದ ರೈನ್ ಬೋ - ೧೦ ಕಲಾಪ್ರದರ್ಶನದಲ್ಲಿ ಅನಾವರಣಗೊಂಡ ಇವರ ಚಿತ್ರಗಳು ನೆಟ್ಟ ಕಣ್ಣು ನೆಟ್ಟಂತೆಯೇ ಇರುವಂತೆ, ಮುಂದೆ ಕಾಣುತ್ತಿರುವ ಇದು ಇದಲ್ಲ ಇನ್ನೇನೋ ಎಂಬಂತೆ, ಎಲ್ಲೋ ಮರೆತುಹೋಗಿದ್ದ ಹಳೆಯ ರಾಗದುಲಿ ಮತ್ತೆ ಇಂಪಾಗಿ ನೆನಪಾದಂತೆ, ಕಣ್ಣ ಹನಿಯ ಮುತ್ತುದುರುವ ದುಗುಡದಂತೆ, ಅಲ್ಲಿ ಹಿಂದಕ್ಕೆಲ್ಲೋ ಮಡಚಿಟ್ಟ ನೋವಿನ ಚಾಪೆ ಅಚಾನಕ್ಕಾಗಿ ಬಿಚ್ಚಿಕೊಂಡಂತೆ.. ಇಲ್ಲ ಈ ಮಾತೆಲ್ಲ ಏಕೆ. ನೋಟವೊಂದೆ ಸಾಕು.

ಇವರ ಚಿತ್ರಗಳು ಒಂದೊಂದೂ ಆಪ್ತವಾಗುತ್ತವೆ. ನೋಟವೊಂದೇ ಸಾಕು - ಕಣ್ಣ ಮುಂದಿರುವ ಭಾವಕ್ಕೂ ಮನದ ಒಳಗಿರುವ ಭಾವಕ್ಕೂ ಸೇತುವೆಯಾಗಲಿಕ್ಕೆ. ಒಲವಿನ ಒಡವೆ, ಭಾವ ಬಣ್ಣ, ಸೂತ್ರವಿರದ ಪಾತ್ರ, ಮುಗ್ಧ ಹುಡುಗಿ.. ಎಲ್ಲ ಸೇರಿ ಸಂಜೆ ಆಕಾಶದ ಕೆಂಪು ನೀಲಿ.. ಕನ್ನಡದ ಶಕ್ತ ಯುವ ಲೇಖಕರ ಬರಹಗಳಿಗೆ ಇವರು ಬರೆದಿರುವ ಭಾವಪೂರ್ಣ ಚಿತ್ರಗಳು ನಮ್ಮನ್ನ ಬೇರೆಯದೇ ಜಗತ್ತಿಗೊಯ್ಯುತ್ತವೀ. ಬನ್ನಿ ಕುಂಚಪ್ರಪಂಚದ ಚಿತ್ರಯಾನಕ್ಕೆ.

ನೆನಪು ಕನಸುಗಳ ನಡುವೆ (೧೭-೧-೦೮)

ನೆನಪನ್ನೆಲ್ಲಾ ಉಳಿಸಿಕೊಳ್ಳುತ್ತಾ, ಕನಸಿನಲ್ಲಿಯೂ ನೆನಪನ್ನೇ ಗಳಿಸುತ್ತಲಿರುವ ಅಂತರಕ್ಕೆ "ನೆನಪು ಕನಸುಗಳ ನಡುವೆ" ಭಾವಸೇತುವೆ ನೇಯ್ದ ಶಾಂತಲಾ ಭಂಡಿಯವರ ಬ್ಲಾಗಿನಲ್ಲಿ ಕಣ್ ನೆಟ್ಟರೆ ಸೀದಾ ಭಾವಯಾನದಲ್ಲೇ ತೇಲುತ್ತೇವೆ.

ಮೂಡಲ ಮನೆಯ ಮುತ್ತಿನ ನೀರಿನೊಂದಿಗೆ ಎಂದಿನಂತೆ ಬೆಳಕಾಗುತ್ತದೆ, ಆದರೂ ಹೊಸ ದಿನಕೊಂದು ಹೊಸ ರೀತಿ, ಹೊಸ ವೈಶಿಷ್ಟ್ಯ ಇರುವಂತೆ...ಒಂದು ಬೆಳಗಿಗೆ ಮಳೆ ಮುತ್ತಾದರೆ ಇನ್ನೊಂದು ಬೆಳಗು ಇಬ್ಬನಿಯ ಮತ್ತೇ ಇದು ಎನುವಂತೆ. ಮಗದೊಂದು ಕತ್ತಲು ಕಳೆವ ಬಿಸಿಲ ಹೊಳಪಿನ ವಜ್ರದ ಹಾಗೆ. ಹೀಗೆ ಅವರವರ ಭಾವಕ್ಕೆ ಬದುಕಿಗೆ ತಕ್ಕ ಬೆಳಗು ಬೆಳಕ ಮೂಡಿಸುವ ಕಾಯಕ ಮರೆಯದು. ಭಾವಗಳು ಬೇರೆಯಾದರೂ ಬೆಳಗು ಮಾತ್ರ ಅದೇ ಆಗಿರುತ್ತದೆ..ಅಂತ ಮನಸಿನ ಸಂಪುಟದ ಒಳಜಗಲಿಗೇ ಕರೆದೊಯ್ಯುವ ಕನಸಿನ ಒಡತಿ ಬೆಳಕಿನ ಹಬ್ಬದಲ್ಲಿ ಬೆಳದಿಂಗಳು ಚೆಲ್ಲುತ್ತಾರೆ.

ನಕ್ಕುಬಿಡು ಒಮ್ಮೆ ಕತೆಯೋ, ಸಿಂಡರೆಲಾಳ ನೆನಪಿಸಿ ಬರೆದ ಕವನದ ಹೂಮೊಗ್ಗುಗಳೋ, ಪ್ರೀತಿ ಹೊತ್ತು ಬರುವವನ ಕನವರಿಕೆಗಳೋ, ಮಿಂದು ಬಂದಾಗ ಕಣ್ಣ ಕೊಳದಲ್ಲಿ.. ತಲೆಬರಹಗಳನ್ನೇ ಸಾಲಾಗಿ ಬರೆದರೆ ಅವೇ ಕವಿತೆಗಳಾಗಿ ಹೂಚೆಲ್ಲಿ ನಗುತ್ತವೆ. ಮಲೆನಾಡಿನ ಹಿನ್ನೆಲೆ, ನಮ್ರತೆ, ಅಚ್ಚರಿ, ಬದುಕಿನ ಸಿಹಿ ಕಹಿ ಒಗರುಗಳೆಲ್ಲದರ ರಸಪಾಕ ಇಲ್ಲಿದೆ. ‘ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ' ಎಂದು ಕೆ.ಎಸ್.ನ ಅವರನ್ನು ನೆನಪಿಸಿಕೊಂಡು ಉಲಿಯುವ ಭಾವೋದ್ದಿಪ್ತ ಬರಹಗಳನ್ನ ಅವುಗಳೊಳಗಿನ ಜೀವನಪ್ರೀತಿಯನ್ನ ಸವಿಯಿರೆಲ್ಲ.

ಮಲೆಯ ಮಾತು (೧೬-೧-೦೮)

ಇಂದಿನ ಮಲೆಯ ಮಾತಿನಲ್ಲಿ ಶಶಿ ಸಂಪಳ್ಳಿ ಅನಾಮಿಕ ಚೆಲುವೆಗೆ ಕಾವ್ಯದ ಕುಂಚಿಗೆ ಕಟ್ಟಿದ್ದಾರೆ. ಸವೆಯದ ಹಾದಿಯಲ್ಲಿ ಆಕೆಯ ಒಡನಾಟ ಜುಳು ಜುಳು ಝರಿಯನ್ನು ನೆನಪಿಸುವಂತದ್ದು, ಕಗ್ಗತ್ತಲ ರಾತ್ರಿಯಲ್ಲಿ ಮಿಂಚುವ ಒಂಟಿ ನಕ್ಷತ್ರದ ಹೊಳಪು ಅವಳದು ಎಂದಿದ್ದಾರೆ. ನವಿರಾಗಿ ಸಾಗಿರುವ ಕವಿತೆಯ ಕೊನೆಯ ಸಾಲುಗಳಲ್ಲಿ ವಿಷಾದವಿದೆ. ಲೂಸಿಯಾನ ಎಂಬ ಈ ಅನಾಮಿಕ ಚೆಲುವೆ ಈಗಾಗಲೇ ಸಮಾಧಿಯಲ್ಲಿ ಚಿರ ನಿದ್ರೆಯಲ್ಲಿದ್ದಾಳೆ. ಆಕೆಯ ಹಂಬಲದಲ್ಲಿ ಈ ಕವಿತೆ ಮೂಡಿದೆ. ವರ್ಡ್ಸ್ ವರ್ತ್ ಕವಿಯ ಈ ಕವಿತೆಯನ್ನು ಶಶಿ ಕನ್ನಡಕ್ಕೆ ತಮ್ಮದೇ ಅನ್ನುವಷ್ಟು ಆತ್ಮೀಯವಾಗಿ ಅನುವಾದಿಸಿದ್ದಾರೆ.

ಸಂಪಳ್ಳಿಯವರ ಮುತ್ತುಗದ ಮರದಲ್ಲಿ ಈ ಬಾರಿ ತುಂಬಾ ಹೂವುಗಳು ಅರಳಿವೆ. ಅದರ ಪಕಳೆಗಳೆಲ್ಲಾ, ಜಗದ ಜಗುಲಿಯ ಮೇಲೆ ನವಿರಾಗಿ ಹರಡಿ ಕಂಪು ಬೀರಿವೆ. ತಪ್ಪುಗಳ ಪಹರೆಯಲ್ಲಿ ನಾನು ಭ್ರಮೆಯ ಕೂಸು ಎಂದಿದ್ದಾರೆ. ಸಖತ್ ಹಾಟ್ ಮಗಾ ಗಂಭೀರವಾಗಿದೆ. ಏರಿ ಬಂದ ಕಾಡು ಕೋಣ ಬ್ಲಾಗಿನಲ್ಲಿ ಬೆದರಿ ನಿಂತಿದೆ. ಕಾಡು ಕೋಣವನ್ನು ಊರು ಕೋಣವೆಂದು ತಿಳಿಯುವ ಹೊತ್ತಿಗೆ ಎಲ್ಲರೂ ಮರವೇರಿದ ಘಟನೆ ಸ್ವಾರಸ್ಯಕರವಾಗಿದೆ. ಬಸವನ ಹುಳು ಮತ್ತು ಕವಡೆಯಲ್ಲಿ ಕವಿಯ ಜಾಣ್ಮೆ ಅಡಗಿದೆ. ನೋಟಕ್ಕೆ ದಕ್ಕಿದ ಮಳೆ ಎದೆಯೊಳಗೆ ಬೆಚ್ಚಗೆ ಅಡಗಿದೆ.

ಮಲೆಯ ಮಾತಿನಲ್ಲಿ ನವಿರು ಭಾವುಕತೆಯಿದೆ. ಅಪರೂಪದ ಭಾವಾನುವಾದವಿದೆ. ಹೀಗೂ ಇರಬಹುದು ಎನ್ನುವ ಸಂಗತಿಗಳನ್ನು ಹೌದಲ್ಲವಾ ಎನ್ನುತ್ತಾ ಓದಿಕೊಳ್ಳಬಹುದು. ವರ್ಡ್ ವರ್ತ್‌ನ ಅನಾಮಿಕ ಚೆಲುವೆಯ ಸ್ನಿಗ್ಧ ಸೌಂದರ್ಯ ದಿನದ ಬ್ಲಾಗಿನ ಬೊಗಸೆಯಲ್ಲಿದೆ.

ಟೀನಾ ಝೋನ್ (೧೫-೧-೦೮)

ಕಥೆಯೊಂದರ ಮೂಲವನ್ನು ಅರಸುತ್ತಾ ಹೋಗುವುದು, ಹಾಗೆ ಅರಸುತ್ತಾ ಹೋಗುವಾಗ ದಾರಿಗುಂಟ ಒಂದಿಷ್ಟು ಉಪಕಥೆಗಳು ಸೇರಿಕೊಳ್ಳುವುದು, ಈ ಉಪ ಕಥೆಗಳ ಚಳ್ಳೆ ಪಿಳ್ಳೆ ಪಾತ್ರಗಳೆಲ್ಲಾ ಸೇರಿಕೊಂಡು ಮತ್ತೊಂದು ಬೃಹತ್ ಕಥೆ ಸೃಷ್ಠಿಯಾಗುವುದು ಇವೆಲ್ಲಾ ಕಥೆಯ ಮೂಲವನ್ನು ಹುಡುಕುವಾಗ ಎದುರಾಗುವ ಸಹಜ ಸಂಗತಿಗಳು. ನಮ್ಮ ರಾಮಾಯಣ, ಮಹಾಭಾರತ, ಅಡಗೂಲಜ್ಜಿ, ಯೂಸೋಪನ ನೀತಿ ಕಥೆಗಳಂತೆ, ಅಮೇರಿಕ, ಜಪಾನ್, ಜರ್ಮನಿಗಳ ಕಥೆಗಳು ಹೀಗಿರಬಹುದು? ಅವುಗಳಲ್ಲಿನ ಪಾತ್ರ ಹೀಗರಬಹುದು? ಕೌತಕವಲ್ಲವೇ?

ಕಂಪ್ಯೂಟರ್ ಕೋಣೆಯ ವಿಂಡೋದೊಳಗೆ ಕುಳಿತು ಟೀನಾ, ಕೆಲವು ವಿದೇಶಿ ಕಥೆಗಳ ಮೂಲವನ್ನು ಹುಡುಕಿದ್ದಾರೆ. ಆಂಗ್ಲ ಶಿಕ್ಷಣ ಪದ್ದತಿಯ ಮೂಲಕ ಭಾರತದ ಪಠ್ಯಪುಸ್ತಕಕ್ಕೆ ಸೇರ್ಪಡೆಗೊಂಡ ಒಂದಿಷ್ಟು ವಿದೇಶಿ ಕಥೆಗಳು ನಮ್ಮವು ಎನ್ನುವಷ್ಟು ಸೊಗಸಾಗಿವೆ. ‘ಸ್ನೋ ವ್ಹೈಟ್ ಮತ್ತು ಏಳು ಕುಳ್ಳರು', ‘ಸಿಂಡರೆಲ್ಲಾ', ‘ಕಪ್ಪೆ ರಾಜಕುಮಾರ' ಮುಂತಾದ ಕಥೆಗಳನ್ನು ನೀವೂ ಕೇಳಿರಬಹುದು. ಆದರೆ ಇವುಗಳ ಮೂಲ ನಿಮಗೆ ಗೊತ್ತಾ ಎನ್ನುತ್ತಾ, ಜರ್ಮನಿ, ಇಂಗ್ಲೆಂಡಿನಲ್ಲೆಲ್ಲಾ ಸುತ್ತಿಸಿದ್ದಾರೆ.

ಪ್ರಪಂಚದಾದ್ಯಂತ ಸುಪ್ರಸಿದ್ಧವಾಗಿರುವ ‘ಫೇರಿ ಟೇಲ್'ಗಳ ಕಥೆಗಳ ಮೂಲವಿರುವುದು ಜರ್ಮನಿಯಲ್ಲಿ. ಜರ್ಮನಿಯ ಪ್ರಮುಖ ಕಥೆಗಾರರಾದ ಗ್ರಿಮ್ ಸಹೋದರರ ಕಥೆಯೇ ರೋಚಕ. ಜರ್ಮನಿಯ ಮಕ್ಕಳ ಜಾನಪದ ಕಥೆಗಳನ್ನು ಕಲೆಹಾಕಿದ್ದು ಈ ಜೋಡಿ. ಇವರು 1812ರಲ್ಲಿ ಸಂಪಾದಿಸಿದ ಎಂಭತ್ತಾರು ಕಥೆಗಳ ಪುಸ್ತಕ ‘ಕಿಂಡರ್ ಉಂಡ್-ಹಾಸ್ಮಾರ್ಶೆನ್' ಬೈಬಲ್ಲಿನ ನಂತರ ಜರ್ಮನಿಯಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕ. ಟೀನಾ ಎಷ್ಟೊಂದು ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎನ್ನುತ್ತೀರಾ? ಹೇಳುತ್ತಾ ಹೋದರೆ ಅದೇ ಒಂದು ದೊಡ್ಡ ಕಥೆಯಾದೀತು. ಕಥೆ ಮುಗಿಯುವ ಮುನ್ನ ಬೊಗಸೆಯಲ್ಲಿರುವ ಅವರ ಬ್ಲಾಗ್ ಪ್ರವೇಶಿಸಿ.

ಹರಿವ ಲಹರಿ (೧೪-೧-೦೮)

ಇಂದಿನ ಹರಿವ ಲಹರಿಯಲ್ಲಿ ಜ್ಯೋತಿ ಸಂಕ್ರಾಂತಿಗೆ ಶುಭಕೋರಿದ್ದಾರೆ. ಸಂಕ್ರಾಂತಿಯ ಸಮಯದಲ್ಲಿ ಸಹಭಾಳ್ವೆಗೆ ಸಹನೆಯಿರಲಿ ಎನ್ನುವ ಸಾಲುಗಳ ಮೂಲಕ ಬ್ಲಾಗಿನಲ್ಲಿ ಎಳ್ಳು ಬೀರಿ, ಎಲ್ಲರಿಗೂ ಬೆಲ್ಲ ಹಂಚಿದ್ದಾರೆ. ಬೇವು ಬೆಲ್ಲವನ್ನು ಮೆಲ್ಲುತ್ತಾ, ಭಾವಲಹರಿಯ ಗೂಡು ಪ್ರವೇಶಿಸಿದರೆ, ಹೀಗೇ ಸಾಗಲಿ ಎನ್ನವ ಕವಿತೆ ಸೊಗಸಾಗಿದೆ.

ಸುಪ್ತದೀಪ್ತಿ ಎನ್ನುವ ಗುಪ್ತ ನಾಮದಿಂದ ತೊರೆ ಹರಿಯುವ ತೀರದಲ್ಲಿ ಕಾವ್ಯ ಕೃಷಿ ಕೈಗೊಂಡಿರುವ ಜಾಲಿಗರು, ಕಳೆದ ವರ್ಷ 57 ಪೋಸ್ಟಿಂಗ್‌ಗಳನ್ನು ಹಾಕಿ ಭರ್ಜರಿ ಬೆಳೆ ತೆಗೆದಿದ್ದಾರೆ. ಹಳೆಯ ಕವಿತೆಗಳಿಗೆ ಕಿಚ್ಚು ಹಾಯಿಸಿ, ಹೊಸ ಸಾಲುಗಳ ಕಿಚ್ಚು ಹಚ್ಚಿದ್ದಾರೆ. ಹೊಚ್ಚ ಹೊಸದು, ಆತ್ಮಚಿಂತನ, ಭಾವಗಾನ, ಭಾವಬಿಂದುಗಳು, ಕಥನ ಕಾರಣ ಮತ್ತಿತರ ಗೂಡುಗಳಲ್ಲಿ ಈ ಕವಿತೆಗಳು ಬೆಚ್ಚಗೆ ಮುದುಡಿ, ಸಂಕ್ರಾತಿಯ ಚಳಿಯಲ್ಲಿಯೂ ಪಲ್ಲವಿ ಹಾಡುತ್ತಿವೆ.

ಸಂಕ್ರಾತಿ ಬದಲಾವಣೆಯ ಸಂಕೇತ. ಬದಲಾವಣೆ ಒಳ್ಳೆಯದನ್ನೇ ತರುತ್ತದೆ. ಎನ್ನುವ ಅವರ ಬ್ಲಾಗಿನ ಬೊಗಸೆಯಲ್ಲಿ ಬೇವು ಬೆಲ್ಲದ ಸಿಹಿಯಿದೆ.

ತೊದಲು ಮಾತು ( ೧೨-೧-೦೮)

ತಮ್ಮ ಹದಿನೇಳನೆ ವಯಸ್ಸಿನಲ್ಲಿ ಯಶವಂತ ಚಿತ್ತಾಲರ ಕತೆಯಾದಳು ಹುಡುಗಿ ಕಥೆಯನ್ನು ಒಂದೇ ಉಸುರಿಗೆ ಓದಿ, ನಿನ್ನೆ ಮೊನ್ನೆ ಅದನ್ನು ತಮ್ಮ ಬ್ಲಾಗಿನಲ್ಲಿ ಹೇಳಿಕೊಂಡು ನಿಟ್ಟುಸಿರುಬಿಟ್ಟ ಕೇಶವ ಕುಲಕರ್ಣಿ ಇಂಗ್ಲೆಂಡಿನಲ್ಲಿರುವ ಕನ್ನಡ ಬ್ಲಾಗಿಸ್ಟ್. ತೊದಲು ಮಾತು ಅವರ ಬ್ಲಾಗಿನ ಹೆಸರು. ತೊದಲು ಮಾತಲ್ಲೇ ಹಲವು ಗಂಭೀರ ವಿಷಯಗಳ ಬಗ್ಗೆ ಸುಂಸುಮ್ನೆ ಬರೆಯುವುದು ವಿಶೇಷ.

"ನೀಲು" ಕವಿತೆಗಳಿಗೆ ತೊಡಿಸಿರುವ ಛಾಯಾಚಿತ್ರಗಳು ಸೊಗಸಾಗಿವೆ. ಚಿತ್ರ ಪ್ರಿಯರಿಗೆ ನಾಲ್ಕು ವಿಮರ್ಶೆಗಳಿವೆ. ಕವನದ ಅವಲೋಕನದಲ್ಲಿ ಬೇಂದ್ರೆ ಅಡಿಗರಿದ್ದಾರೆ. ಸೌದಿ ಅರೇಬಿಯಾದ ಚಿತ್ರಗಳು ಕ್ಯಾಮರಾ ಕಣ್ಣಿನಲ್ಲಿ ಉಳಿದಿವೆ. ಉತ್ತರ ಕರ್ನಾಟಕ ಭಾಷಾ ವೈವಿಧ್ಯದ ಶಬ್ದಕೋಶವಿದೆ. ಇನ್ನೇನಿದೆ ಎನ್ನುವವರಿಗೆ ಕನ್ನಡ ಬ್ಲಾಗಿಸ್ಟ್‌ಗಳ ಕೊಂಡಿಗಳಿವೆ.

ಕ್ರಿಸ್‌ಮಸ್ ಮತ್ತು ರಂಜಾನ್, ವಯಸ್ಸು ಮತ್ತು ಮನಸ್ಸಿನ ಕುರಿತು ಅವರು ಹೊಸ ವರ್ಷದಲ್ಲಿ ಮಾತಾಡಿದ್ದಾರೆ. ಮಾತಾಡ್ ಮಾತಾಡ್ ಮಲ್ಲಿಗೆ, ಹೀಗೊಂದು ಪತ್ರ, ಶಕುಂತಲಾ, ಎಸ್‌ಮ್ಮೆಸ್ ಕವಿತೆ, ಬ್ಲಾಗಿಗೊಂದು ತ್ರಿಪದಿ ಎಲ್ಲವೂ ಹಳೆಯ ಅಪ್ಪಟ ಚಿನ್ನಗಳು. ಬ್ಲಾಗಿಸದೇ ಬರೆಯುವವನು ರೂಢಿಯೊಳಗುತ್ತಮನು, ಬ್ಲಾಗಿಸಿ ಬರೆಯುವವನು ಮಧ್ಯಮನು, ಬ್ಲಾಗಿಸಿಯೂ ಬರೆಯದವನು ಅಧಮನು ಎನ್ನುವುದು ಕುಲಕರ್ಣಿಯವರ ಅಭಿಮತ.

ಓ ನನ್ನ ಚೇತನಾ ( ೧೧-೧-೦೮)

ಬರೆಯೋದಕ್ಕೆ ಯಾಕೆ ಅಷ್ಟೆಲ್ಲಾ ನಖರಾ ಎಂದು ಕೇಳಿದ ಗೆಳೆಯನ ಮಾತನ್ನು ಸ್ಪಲ್ಪ ಗಂಭೀರವಾಗೇ ತೆಗೆದುಕೊಂಡಿದ್ದ ಚೇತನಾ ಅಲ್ಪ ವಿರಾಮದ ನಂತರ ಮತ್ತೆ ಬ್ಲಾಗಿನ ಬಾಗಿಲು ತೆರೆದಿದ್ದಾರೆ. ಸುಮ್ಮನೆ ಮುನಿಸಿಗೆ ಬರಿಯೋಲ್ಲ ಅಂತ ಪ್ರತಿಜ್ಞೆ ಮಾಡಿದ್ದರೂ, ಬ್ಲಾಗ್ ಅಡಿಕ್ಷನ್ ಎನ್ನುವುದು ಬೆನ್ನು ಬಿಡಬೇಕಲ್ಲಾ ಎಂದು ಅವರು ಸಬೂಬು ಹೇಳಿದ್ದಾರೆ.

ವರ್ತುಲ ರಸ್ತೆಯಲ್ಲಿ, ಪ್ರವಾಹದಂತೆ ನುಗ್ಗಿ ಬರುವ ಟ್ರಾಫಿಕ್‌ನಲ್ಲಿ ಆಟೋ ಹಿಡಿಯಲು ಪರದಾಡುತ್ತಾ, ಒಬ್ಬಳೇ ಇದ್ದುಬಿಡುವ ನಿರ್ಧಾರದ ಕುರಿತು ಚಿಂತಿಸುತ್ತಾ, ಆ ಚಿಂತನೆ ಹುಟ್ಟಿಸಿದ ದಾರಿಯಲ್ಲಿ ತಾನು ಹಿಂದೊಮ್ಮೆ ಪಿಯುಸಿ ಹುಡುಗಿಯಾಗಿದ್ದಾಗ ಆಟೋಗ್ರಾಫ್ ಹಾಳೆಯಲ್ಲಿ "ಒಳ್ಳೆಯ ಮಗಳು, ಹೆಂಡತಿ, ತಾಯಿ ಮತ್ತು ಗೃಹಿಣಿಯಾಗೋದು!"ಎಂದು ತನ್ನ ಜೀವನದ ಗುರಿಯನ್ನ ದಾಖಲಿಸಿದ್ದನ್ನು ನೆನೆಯುತ್ತಾ, ರಸ್ತೆ ದಾಟಿ, ದಂಡ ಕಟ್ಟಿ, ನಿಟ್ಟುಸಿರು ಬಿಡುವ ಕಥಾಪಾತ್ರಕ್ಕೆ ಡಿವೈಡರಿನ ಮೇಲೆ ಎಂಬ ತಲೆಬರಹ ಸ್ಪೆಶಲ್ಲಾಗಿದೆ.

ಇದೊಂದು ದಿನ ಬ್ಲಾಗಿನ ಬಾಗಿಲು ಮುಚ್ಚುತ್ತೇನೆ ಎಂದರೂ, ಮತ್ತೆ ಮರುಗಳಿಗೆಯಲ್ಲೇ ಹಣಕಿ ಹಾಕಿ, ಪೋಸ್ಟೊಂದನ್ನು ಕೈಯಲ್ಲಿಡಿದು, ನನ್ನನ್ನೂ ಒಳಕ್ಕೆ ಕರೆಯಿರಿ ಎಂದ ಅವರ ಬ್ಲಾಗನ್ನು ಬೊಗಸೆಯೊಳಗೆ ಹಿಡಿಯಲಾಗಿದೆ.

ಮೌನಗಾಳ ( ೧೦-೧-೦೮)

ಬೆಂಗಳೂರಿನಿಂದ ಸೋಮವಾರ ಪೇಟೆಯ ಮೂಲಕ ಕುಮಾರ ಪರ್ವತಕ್ಕೆ ಚಾರಣ ಹೊರಟವರು ಆರು ಜನ. ಪರ್ವತದ ನೆತ್ತಿಯನ್ನು ಹತ್ತಿ ಕೆಳಗಿಳಿಯುವುದರೊಳಗೆ ಗುಂಪಿನೊಳಗಿದ್ದ ಸುಶ್ರುತ ದೊಡ್ಡೇರಿಗೆ ಸುಸ್ತೋ ಸುಸ್ತು. ಸರಿ, ತಮ್ಮೂರಿನ ನೆಂಟಸ್ತಿಕೆ ಹೇಳಿಕೊಂಡು ಸ್ಥಳೀಯ ಭಟ್ಟರೊಬ್ಬರ ಮನೆಯಲ್ಲಿ ತಂಗಿ, ಬೆಳಗ್ಗೆ ಅವರೋಹಣ ಮಾಡುವುದೆಂದು ಲೆಕ್ಕಚಾರ ಹಾಕಿದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಅವರು ಬೆಳಿಗ್ಗೆ ಎದ್ದು, ಭಟ್ಟರ ಹೆಂಡತಿ ಮಾಡಿಕೊಟ್ಟ ದೋಸೆ ತಿಂದು, ಕಾಫಿ ಹೀರಿ ಸಹಜವಾಗಿ ಬೆಂಗಳೂರಿಗೆ ಹೊರಡುತ್ತಿದ್ದರು. ಆದರೆ ಭಟ್ಟರ ಮನೆಯ ಚಿಟ್ಟೆಯನ್ನು ಆಕಸ್ಮಿಕವಾಗಿ ನೋಡಿದಾಯ್ತು, ಮಾತಾಡಿದ್ದಾಯ್ತು.. ಈಗ ಏನೋ ಕನವರಿಸುತ್ತಿದ್ದಾರೆ.

ಕಥೆ ಚೆನ್ನಾಗಿದೆ ಅಂತೀರಾ? ಮುಂದೆ ಓದಲು ಮೌನಗಾಳ ಪ್ರವೇಶಿಸಿ. ಬ್ಲಾಗಿನ ಕೊಳದಲ್ಲಿ ಗಾಳ ಹಾಕಿ ಮೀನು ಹಿಡಿಯುವುದಲ್ಲಿ ಚತುರ ಎನಿಸಿಕೊಂಡಿರುವ ದೊಡ್ಡೇರಿ ಈ ಬಾರಿ ತಮ್ಮ ವಿಶಿಷ್ಠ ಅನುಭವೊಂದನ್ನು ಬರೆದಿದ್ದಾರೆ. ಕುಮಾರ ಪರ್ವತ, ಭಟ್ಟರ ಮನೆ, ಅವರ ಹೆಂಡತಿ, ಅಲ್ಲಿನ ಚಿಟ್ಟೆ, ಚಿಟ್ಟೆಯ ಸ್ಪರ್ಶ ಎಲ್ಲವೂ ಅವರ ಬರಹಕ್ಕೆ ಸಿಲುಕಿದೆ. ಲೇಖನ ನವಿರಾಗಿ,ಸರಳವಾಗಿದೆ. ದಿನದ ಬ್ಲಾಗಿನ ಬೊಗಸೆಯಲ್ಲಿ ಸಿಕ್ಕಿಕೊಂಡಿರುವ ಮೌನಗಾಳವನ್ನು ಬಿಡಿಸುವ ಸರದಿ ಈಗ ಬ್ಲಾಗೇಶನದು.

ಮಂಜು ಮುಸುಕಿದ ದಾರಿಯಲ್ಲಿ ( ೯-೧-೦೮)

ಮಂಜು ಮುಸುಕಿದ ದಾರಿಯಲ್ಲಿ ಇಂದು ಮಲ್ಲಿಗೆ ಅರಳಿದೆ. ನೆಗೆಮಲ್ಲಿಗೆ ನೋಡುತ್ತಲೇ ವಿಗ್ರಹವಾಗಿ ಹೂರಾಶಿಯೊಳಗೆ ಹೂತು ಹೋಗಿರುವ ಬ್ಲಾಗಿಗರ ಹೆಸರು ವೇಣು ವಿನೋದ್. ಹೇಳೋಕೆ ಅಂಥಾದ್ದೇನಿಲ್ಲ ಎನ್ನುತ್ತಲೇ, ನಾನು ನಾನೇ ಏನು! ಎಂದು ಪ್ರಶ್ನಿಸುತ್ತಾರೆ. ಹಿಮಹೊದ್ದ ಬೆಟ್ಟ ಸಾಲು, ನದಿ ಕಣಿವೆಗಳು ಅವರ ಸಂಗಾತಿಗಳು. ಸಮಯ ಸಿಕ್ಕಿದಾಗ ಅಲ್ಲಿಗೆಲ್ಲ ಹೋಗಿ ಬಂದು ಸೊಗಸಾದ ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಸುತ್ತಣ ಜಗತ್ತಿನ ಸಾಮಾನ್ಯ ಘಟನೆಗಳಿಗೆ ಕಾವ್ಯದ ಮೆರಗು ನೀಡಿದ್ದಾರೆ.

ವರುಷ ಸಾಗುತ್ತಲಿದೆ ಪ್ರತಿ ನಿಮಿಷ ಎನ್ನುವ ಎಚ್ಚರಿಕೆಯಲ್ಲಿ ಹೊಸ ವರ್ಷಕ್ಕೆ ಸ್ವಾಗತವಿದೆ. ಮೂರು ಬಿಂದುಗಳಲ್ಲಿ ಜೇಡವೊಂದನ್ನು ಬಂಧಿಸಿಟ್ಟಿರುವ ರೀತಿ ಅಪರೂಪ. ಮಂಗಳೂರಿಗೆ ಎಫ್‌ಎಂ ರೇಡಿಯೋ ಬಂದ ಕಥೆಯೂ ಇಲ್ಲಿದೆ. ತುಸು ಕೆಳಗೆ ಇಣುಕಿದರೆ ರಾಜಸ್ತಾನದ ಮರಳುಗಾಡಿನ ಸುಂದರ ಚಿತ್ರಗಳಿವೆ. ಮಲ್ಲಿಗೆಯ ಕಂಪು ಅಘ್ರಾಣಿಸಲು ವಿನೋದರ ಬ್ಲಾಗ್ ಪ್ರವೇಶಿಸಬಹುದು.

ಚಿತ್ರ ಕವನ ( ೭-೧-೦೮)

ನೋಟ ಹಲವು ಚಿತ್ರ ಒಂದು ಎನ್ನುವ ಬ್ಲಾಗಿಗಿರುವ ಹೆಸರು ಚಿತ್ರ ಕವನ. ಹೆಸರೇ ಸೂಚಿಸುವಂತೆ ಇಲ್ಲಿ ನೀವು ಚಿತ್ರವನ್ನೂ ನೋಡಬಹುದು. ಕವನವನ್ನೂ ಬರೆಯಬಹುದು. ಕವಿತೆ ಹೊಸೆಯಲು ಯಾವುದೇ ನಿರ್ಬಂಧವಿಲ್ಲ. ಚಿತ್ರ ನೋಡಿದ ಕೂಡಲೇ ನಿಮ್ಮ ಮನಸ್ಸಿನಲ್ಲಿ ಉದಿಸುವ ಭಾವನೆಗಳಿಗೆ ಕಾವ್ಯದ ಮೆರಗು ನೀಡಿದರೆ ಸಾಕು. ಒಂದು ಸೊಗಸಾದ ಚಿತ್ರಕವನ ರೆಡಿ. ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದ ಹಲವು ಅಪೂರ್ವ ಚಿತ್ರಗಳಿಗೆ ಈಗಾಗಲೇ ಕೆಲವು ಉತ್ಸಾಹಿ ನೆಟ್ ಕವಿಗಳು ಬಣ್ಣ ಹಚ್ಚಿದ್ದಾರೆ. ಒಂದೇ ಚಿತ್ರಕ್ಕೆ ಹಲವು ನೋಟಗಳು ಬೆರತು ಸುಂದರ ದೃಶ್ಯಕಾವ್ಯಗಳಾಗಿವೆ.

ವಾರಕ್ಕೊಮ್ಮೆ ಹೊಸ ಚಿತ್ರಗಳನ್ನು ಸೇರಿಸಲಾಗುವ ಚಿತ್ರ ಕವನದಲ್ಲಿ ಈ ಬಾರಿ ಪುಟ್ಟ ಮಕ್ಕಳಿಬ್ಬರು ಕೈ ಹಿಡಿದು, ಬೆನ್ನು ತೋರಿಸಿ ನಡೆದು ಹೋಗುತ್ತಿರುವ ಚಿತ್ರವಿದೆ. ಈ ಚಿತ್ರ ನೋಡಿದ ಕೂಡಲೇ ನಿಮ್ಮಲ್ಲೂಂದು ಭಾವ ಹುಟ್ಟುವುದು ಖಂಡಿತ. ತಡಮಾಡದೆ ನೀವೂ ಬ್ಲಾಗ್ ಪ್ರವೇಶಿಸಿ. ಕವನ ಬರೆಯಲು ನೀವು ಕವಿಯೇ ಆಗಿರಬೇಕೆಂದೇನಿಲ್ಲ. ಆದರೂ ಹೇಗೆ, ಎಂದು ಹಿಂಜರಿಕೆ ಇದ್ದರೆ ಸಲಹೆ-ಚರ್ಚೆ-ಅಭಿಪ್ರಾಯಕ್ಕಾಗಿ ವಿಶೇಷ ಕೌಂಟರ್ ತೆರೆಯಲಾಗಿದೆ. ನೊಂದಾಯಿಸಿಕೊಂಡು ಈಗಾಗಲೇ ಸದಸ್ಯರಾಗಿರುವ ಜಾಲ ಕವಿಗಳ ಸಲಹೆ ಪಡೆಯಬಹುದು. ನಿಮ್ಮೊಳಗಿನ ಸೃಜನಶೀಲತೆಗೆ ಕನ್ನಡಿ ಹಿಡಿದು, ಚಿತ್ರವೊಂದರ ಹಲವು ನೋಟಗಳ ಆಯಾಮಗಳನ್ನರಸುವುದಕ್ಕೆ ಇಷ್ಟು ಪ್ರಯತ್ನ ಮಾಡದಿದ್ದರೆ ಹೇಗೆ ಎಂದು ಚಿತ್ರಕವನ ತಂಡ ನಿಮ್ಮನ್ನು ಕರೆಯುತ್ತಿದೆ.

ಕುಂಟಿನಿ (೫-೧-೦೮)

ಕುಂಟಿನಿ ಎನ್ನುವ ಒಳ್ಳೆಯ ಹುಡುಗ ಇಂದು ತಮ್ಮ ಬ್ಲಾಗಿನಲ್ಲಿ ನಾಲ್ಕು ಸಾಲು ಬರೆದಿದ್ದಾರೆ. ಇದು ಅವರ ಸೀರಿಯಲ್ ಕವಿತೆಯ 29ನೇ ಪ್ರಯೋಗ. ನಾನು ತುಂಬಾ ಸಿಂಪಲ್ಲು ಅಷ್ಟೇ ಕೇರಿಂಗು, ಅಷ್ಟು ಪ್ರೀತಿ, ಇಷ್ಟು ಭಾವನೆ ಅಂತ ಅವರ ಪ್ರೊಪೈಲ್‌ನಲ್ಲಿದೆ. ಪೋಸ್ಟ್‌ನ ತುದಿಗೊಂದು ಆನೆಯ ಚಿತ್ರವಿದೆ. ಆನೆ ಚಿತ್ರವೆಂದರೆ ಕೆಳಗೆ ರಾಜನ ಕಥೆ ಇರಬೇಕು. ಇದೆ. ಅವರ ಬ್ಲಾಗ್ ಪ್ರವೇಶಿಸಿ ಕವಿತೆ ಓದಿ. ನವಿರಾಗಿದೆ.

ಹೊಸ ವರ್ಷದಲ್ಲಿ ಎಲ್ಲವನ್ನೂ ಮರೆಯುವ ಸಂಕಲ್ಪ ಮಾಡಿದ್ದೇನೆ ಎಂದಿರುವ ಕುಂಟಿನಿ ಬ್ಲಾಗ್ ಆಫ್‌ಡೇಟ್ ಮಾಡಲು ಮಾತ್ರ ಮರೆತಿಲ್ಲ. ಮರತೇನೆಂದರೂ ಮರೆಯಲಿ ಹೇಗೆ ಎನ್ನುವಂತೆ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಮರೆಯುವುದು ನೆನಪಿಗಿಂತ ಕಷ್ಟ ಎಂದು ಅವರಿಗೆ ಹೀಗೆ ಬರೆದ ನಂತರ ಅನಿಸಿದಂತಿದೆ. ಕನಸುಗಳ ಲೋಕಕ್ಕೆ ಕದವಿಕ್ಕುತ್ತೇನೆ ಹಾಗಾಗಿ ಈ ವರ್ಷ ಯಾವ ಪುಸ್ತಕವನ್ನೂ ಓದುವುದಿಲ್ಲ ಎನ್ನುವುದು ಕುಂಟಿನಿಯವರ ವರ್ಷದ ಹೊಸ ಪ್ರತಿಜ್ಞೆ.

ಚಂಪಕಾವತಿ (೪-೧-೦೮)

ಒಂದು ಕಡು ಕಪ್ಪು ಫಲಕದ ಮೇಲೆ ಕೆಂಪನೆಯ ಬಾರ್ಡರ್. ಭಯ ಹುಟ್ಟಿಸುವಂತೆ. ಒಳಗೆ ಚಂಪಕಾವತಿ ಎನ್ನುವ ಬಿಳಿಯ ಟೈಟಲ್. ಕೆಳಗೆ ಇಣುಕಿದರೆ ಪಂಚವ್ಯಸನಗಳು. ಸಾಹಿತ್ಯ, ನಾಟಕ, ಸಿನಿಮಾ, ಯಕ್ಷಗಾನ, ಕ್ರಿಕೆಟ್. ಬ್ಲಾಗಿಂಗ್ ಅಂದ್ರೆ ಬರೀ ಹುಚ್ಚು, ಬ್ಲಾಗರ್ ಅಂದ್ರೆ ಕೋಡು, ಕೇಳೋರಿಲ್ಲ, ಹೇಳೋರಿಲ್ಲ ಓದೋರಿಲ್ಲ ಪಾಡು! ಎನ್ನುತ್ತಾ ತಮ್ಮ ಅಕ್ಷರ ಲೋಕಕ್ಕೆ ಅಕ್ಕರೆಯ ಸ್ವಾಗತ ಕೋರುತ್ತಾರೆ ಸುಧನ್ವಾ ದೇರಾಜೆ. ನಾನು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ, ಬದುಕು ಬೆಂಗಳೂರಿನ ಸುದ್ದಿಮನೆಯೊಂದರಲ್ಲಿ ಎಂದು ಪರಿಚಯಿಸಿಕೊಂಡಿದ್ದಾರೆ.

ದೇರಾಜೆ ಒಡ್ಡೋಲಗದಲ್ಲಿ ಚಂಡೆಮದ್ದಳೆಗಳ ಸದ್ದು ಸಾಮಾನ್ಯ. ಅವರು ಒಂದು ರೀತಿ ಭಾಗವತರು. ವಿಷಯ ವೈವಿಧ್ಯ. ಲೇಖನ ಗಂಭೀರ. ಈ ಬಾರಿ ‘ಕುರುಕ್ಷೇತ್ರಕ್ಕೊಂದು ಆಯೋಗ' ಎನ್ನುವ ದೇರಾಜೆ ಸೀತಾರಾಮಯ್ಯನವರ ಅಪೂರ್ವ ಪುಸ್ತಕವೊಂದನ್ನು ಪರಿಚಯಿಸಿದ್ದಾರೆ. ಮಹಾಭಾರತದ ಮುಖ್ಯ ಪಾತ್ರಗಳ ಪರಿಚಯವಿದೆ. ದುರ್ಯೋಧನ, ಭೀಷ್ಮ, ಕರ್ಣ ಎಲ್ಲರೂ ಬ್ಲಾಗಿನಲ್ಲಿ ಬಂದು ಅಚ್ಚರಿ ಮೂಡಿಸಿದ್ದಾರೆ. ಅಪರೂಪದ ಪುಸ್ತಕ. ಕೊಳ್ಳಲು ಆಸಕ್ತಿ ಇದ್ದವರಿಗೆ ಪ್ರಕಾಶಕರ ಸಂಚಾರಿ ಸಂಖ್ಯೆಯಿದೆ. ಬಲ್ಲಿರೇನಯ್ಯಾ.... ಬ್ಲಾಗಿನ ಬೊಗಸಯಲ್ಲಿ ಇಂದು ಚಂಪಕಾವತಿ ಇದೆ. ಪ್ರವೇಶ ಉಚಿತವಿದೆ.

ಅವಧಿ (೩-೧-೦೮)

ಯಾರದೋ ಮಗುವಿನ ಬಸಿರನ್ನು ಹೊತ್ತಿರುವ ಹೆಂಡತಿನ್ನುದ್ದೇಶಿಸಿ, ಗಂಡ ಹೇಳುತ್ತಾನೆ. "ಹೆಂಗಸರಿಗೇನು? ಮೈ ಮಾರಿಯಾದರೂ ಜೀವನ ಮಾಡ್ತೀರಿ. ಈ ಪ್ರಶ್ನೆಗೆ ಉತ್ತರಿಸಲೂ ಆಗದ, ಗಂಡನನ್ನು ಶಫಿಸಲೂ ಆಗದೆ, ಹೆಂಡತಿ ಮೌನವಾಗಿ ಕಂಬನಿ ಮಿಡಿಯುತ್ತಾಳೆ. ಬಾಡಿಗೆ ತಾಯ್ತನ ಹೊರಬೇಕಾಗಿ ಬಂದ ಹೆಣ್ಣೊಬ್ಬಳ ಅಂತರಂಗವನ್ನೂ, ಆಕೆಯ ಗಂಡನ ಹಣದ ವ್ಯಾಮೋಹವನ್ನು ತೆರೆದಿಡುತ್ತದೆ ಇಂದು ಅವಧಿಯಲ್ಲಿ ಚೇತನಾ ತೀರ್ಥಹಳ್ಳಿ ಬರೆದಿರುವ ಕೈಲಾಗದವನಿಗೆ ಮೈಯೆಲ್ಲಾ ಪೌರುಷ ಎನ್ನುವ ಲೇಖನ.

ಭಾಮಿನಿ ಷಟ್ಪದಿ ಎನ್ನುವ ಕಾಲಂ ಮೂಲಕ ಓದುಗ ಜಾಲಕ್ಕೆಲ್ಲಾ ಪರಿಚಯವಾಗಿರುವ ಚೇತನಾರ ಬರಹಗಳು ಸರಳ ಸುಂದರ. ಅವಧಿಯಲ್ಲಿ ಹದಿನೆಂಟು ವಿಭಾಗಳಿವೆ. ವಿ.ಎಂ ಮಂಜುನಾಥ್ ಅವರ ಕಥೆ, ಬಹುರೂಪಿಯವರ ಡೋರ್ ನಂ 142, ನಟರಾಜ್ ಹುಳಿಯಾರ್ ಅವರ ಗಾಳಿ ಬೆಳಕು, ಶ್ರೀನಿವಾಸ ರಾಜು ಕುರಿತು ರಘುನಾಥ ಚಹ ಅವರ ಲೇಖನ ಎಲ್ಲವೂ ಬರವಣಿಗೆಯ ರಸಗವಳ. ದಿನದ ಬ್ಲಾಗ್ ಬೊಗಸೆಯಲ್ಲಿ ಇಂದು ಭೂಮಿಯ ಹಂಬಲದ ತೇರಿದೆ.

ಜೋಗಿಮನೆ (೨-೧-೦೮)

ಬ್ಲಾಗಮಂಡದಲ್ಲಿ ಜೋಗಿಮನೆ ಎಲ್ಲರಿಗೂ ಪರಿಚಿತ. ಈ ದಿನ ಗೆಳೆಯನ ಹೊಸ ಸಂಕಲನವನ್ನು ಪ್ರೀತಿಸುತ್ತಾ.. ಎನ್ನುವ ತಲೆಬರಹದಲ್ಲಿ ಅವರು ತಮ್ಮ ಸ್ನೇಹಿತ ಗೋಪಾಲಕೃಷ್ಣ ಕುಂಟಿನಿ ಅವರ ಹೊಸ ಕವನ ಸಂಕಲನದ ಕುರಿತು ಬರೆದಿದ್ದಾರೆ.

ಗೆಳೆತನದ ನೆನಪು ಹಾಗೂ ಕವನದ ಸಾಲುಗಳು ನವಿರಾಗಿದೆ. ಕುಂಟಿನಿ ಬೆಳೆಯುತ್ತಾ ಹೋಗುವುದನನ್ನು ನಾನು ಪ್ರೀತಿಯಿಂದ ನೋಡುತ್ತೇನೆ ಎನ್ನುವ ಜೋಗಿ ತುಂಬಾ ಮಾತಾಡುವವನ ಒಳಗೆ ಕವಿತೆ ಇರುವುದಕ್ಕೆ ಸಾಧ್ಯವಿಲ್ಲ ಎನ್ನುವ ನನ್ನ ನಂಬಿಕೆಯನ್ನು ಸುಳ್ಳಾಗಿಸಿದವರು ಇಬ್ಬರು; ಕುಂಟಿನಿ ಮತ್ತು ಕಾಯ್ಕಿಣಿ ಎನ್ನುತ್ತಾರೆ. ಇಂದಿನ ಬೊಗಸೆಯಲ್ಲಿ ಅವರ ಬ್ಲಾಗ್ ಇದೆ.

ಅನಿವಾಸಿ (೧-೧-0೮)

ದಿನದ ಬ್ಲಾಗ್ ಬುಟ್ಟಿಗೆ ಯಾರನ್ನು ಬಲೆಹಾಕಬೇಕೆಂದು ದಿನಪೂರ್ತಿ ಬ್ಲಾಗಮಂಡಲ ಸುತ್ತಿ ಸುಸ್ತಾದ ಬ್ಲಾಗೇಶನಿಗೆ ಕೊನೆಗೆ ಕಣ್ಣಿಗೆ ಬಿದ್ದದ್ದು ಅನಿವಾಸಿಯೊಬ್ಬರ ಮುಗಿದರೂ ಮುಗಿಯದ್ದು ಎನ್ನುವ ತಲೆಬರಹ. ಮುಗಿದರೂ ಮುಗಿಯದ್ದು ಏನಿರಬಹುದು ಎನ್ನುವ ಕುತೂಹಲದೊಂದಿಗೆ ಬ್ಲಾಗಿಗೆ ಧುಮಿಕಿದರೆ, ಅಲ್ಲಿ ಈ ವರ್ಷ ಏನೆಲ್ಲಾ ಬರೆಯಬೇಕೆಂದುಕೊಂಡಿದ್ದೆ ಎನ್ನುವ ಉದ್ದನೆಯ ಅನಿವಾಸಿ ಪಟ್ಟಿ.

ಸುರುಳಿ ಬಿಚ್ಚಿದೆ. ಹಿಂದೂ ಮೂಲಭೂತವಾದಿತ್ವ, ಲೈಂಗಿಕತೆ ಮತ್ತು ಸಮಾನತೆಯ ನಡುವಿನ ಕೊಂಡಿ, ನಾಲ್ಕಾರು ಕಥೆಗಳು, ಕಾದಂಬರಿ, ಅಬ್ಬಾ! ಎಷ್ಟೊಂದು ವಿಷಯಗಳು ಅನಿವಾಸಿ ತಲೆಯಲ್ಲಿ. ಆನಿವಾಸಿ ಸೊಗಸಾಗಿದೆ. ವಿಷಯ ವೈವಿಧ್ಯ. ಹೊಸ ವರ್ಷದಲ್ಲಿ ಅವರು ಕಳೆದ ವರ್ಷ ಮರೆತಿದ್ದ ಲೇಖನಗಳು ಮೂಡಿಬರಲಿ. ಜಾಲ ಕಿಟಕಿಗೆ ಪರದೆ ಬೀಳುವ ಮುನ್ನ ದಿನದ ಬ್ಲಾಗ್ ಬುಟ್ಟಿಗೆ ಅವರಿಗೆ ಸ್ವಾಗತ.

ಅಲೆಮಾರಿಯ ದಿನಚರಿ (೩೧-೧೨-0೭)

ಹೊಸ ವರ್ಷಕ್ಕೆ ಇನ್ನು ಕಲವೇ ಕ್ಷಣಗಳು ಬಾಕಿ ಉಳಿದಿರುವಾಗ ಬ್ಲಾಗೇಶ ನಡೆಸಿದ ತುರುಸಿನ ಬ್ಲಾಕಾಯ ಪ್ರವೇಶದಲ್ಲಿ ಮೌಸಿಗೆ ಸಿಕ್ಕಿದ ತುಣುಕು ಟೀಮ್ ಮಂಗಳೂರಿನ ಗಾಳಿಪಟ ಗಾಥೆ. ಈ ಗಾಳಿಪಟದ ಮೂಲವನ್ನು ಹುಡುಕುತ್ತಾ ಬ್ಲಾಗಮಂಡಲದಲ್ಲಿ ನಿಟ್ಟಿಸಿರು ಬಿಟ್ಟು ಕೊಂಡಿಗಾಗಿ ಕಾದು ಕುಳಿತಾಗ ಕಿಟಿಕಿಯಲ್ಲಿ ಕೈಚಾಚಿ ಒಳಗೆ ಎಳೆದುಕೊಂಡದ್ದು ಅಲೆಮಾರಿಯ ದಿನಚರಿ. ಫಾಲೋ ಮಿ ಎಂದು ಕರೆದುಕೊಂಡ ಕನ್ನಡ ಕೊಂಡಿಯ ಬಾಲವನ್ನು ಹಿಡಿದು ಬ್ಲಾಗ್ ಪ್ರವೇಶಿಸಿದರೆ, ಬ್ಲಾಗಮಂಡಲದ ತುಂಬಾ ಹಾರುತ್ತಿರುವ ಬಣ್ಣ ಬಣ್ಣದ ಗಾಳಿಪಟ.

ಯೋಗರಾಜ ಭಟ್ಟರ ಗಾಳಿಪಟ ಇನ್ನೂ ಹಾರಿಲ್ಲವಲ್ಲ ಎಂದು ಕಣ್ಣು ಕಿರಿದಾಗಿಸಿದರೆ, ಇವು ಪಣಂಬೂರಿನ ಕಡಲ ಕಿನಾರೆಯಲ್ಲಿ ಕಳೆದ ವರ್ಷ ನಡೆದ ಗಾಳಿಪಟ ಉತ್ಸವದಲ್ಲಿ ಹಾರಿದ ಪತಂಗಗಳು. ಅಬ್ಬಾ! ಅಪರೂಪದ ಗಾಳಿಪಟ ಹಾರಿಸಿದ ಕನ್ನಡದ ಬ್ಲಾಗಿಗ ಯಾರು ಎಂದು ಹುಡುಕುತ್ತಾ, ಬ್ಲಾಗಮಂಡಲದ ಮಧ್ಯಭಾಗಕ್ಕ ಬಂದೆ.

ಅಚ್ಚರಿ ಕಾದಿತ್ತು. ಪಟದ ದಾರ ಹಿಡಿದು ನಿಂತ ಬ್ಲಾಗ್ ಮಾಲೀಕ ರಾಜೇಶ ನಾಯ್ಕರಿಂದ ಪಣಂಬೂರಿನ ಕಡಲ ಕಿನಾರೆಯಲ್ಲಿ ಇದೇ ಬರುವ ಜನವರಿ ೧೯ ಮತ್ತು ೨೦ ರಂದು ಗಾಳಿಪಟ ಉತ್ಸವ? ಆ ಹಿನ್ನೆಲೆಯಲ್ಲಿ ಬ್ಲಾಗಮಂಡಲದಲ್ಲಿ ಇಂದು ಗಾಳಿಪಟ ಹಾರಿಸಿರುವುದಾಗಿ ಕಾಮೆಂಟರಿ. ಗಾಳಿಪಟ ಹಾರಿಬಿಡುವ ಕನಸಿನ ಹಿಂದಿರುವ ಟೀಮ್ ಮಂಗಳೂರಿನ ಸಾಹಸ ಗಾಥೆ ಕುತೂಹಲ ಕೆರಳಿಸಿತು. ಅಲ್ಲಿಂದ ಪಣಂಬೂರಿನ ಕಡಲ ತಡಿಗೆ ದೌಡಾಯಿಸಿದೆ. ಉಸುಕು ನೆಲದಲ್ಲಿ ಕಾಲೂರಿ, ಆಕಾಶದತ್ತ ಮುಖನೆಟ್ಟು ಅಲ್ಲಿ ಹಾರಾಡುವ ಸಾವಿರಾರು ಗಾಳಿಪಟಗಳನ್ನು ಕಣ್ಣಲ್ಲಿ ತುಂಬಿಸಿಕೊಂಡೆ. ಬ್ಲಾಗಮಂಡಲದಲ್ಲಿ ದಾರ ಸುತ್ತಿ ಪಟ ಹಾರಿಸಿದ ನಾಯ್ಕರಿಗೆ ಬಾಗೀನ ಅರ್ಪಿಸಿದೆ.

ಪುಟದ ಮೊದಲಿಗೆ
 
Votes:  4     Rating: 4.75    
 
 
ಸಂಬಂಧಿಸಿದ ಲೇಖನಗಳು
  ವೈದ್ಯರನ್ನು ಉಳಿಸಲು ಮಿಂಚುಳ್ಳಿ ಮಾಡಿರುವ ಮೊರೆ
  ಮುರುಗೇಶ ಮತ್ತು ಕಿವುಡು ಕಾಮಧೇನು:ಗುರು ಕುಲಕರ್ಣಿ ಬರಹ
  ಸಿ.ಪಿ.ನಾಗರಾಜ ಬರೆದ ಮೂರು ಮಾಡರ್ನ್ ಕಥಾಪ್ರಸಂಗಗಳು
  ಚೆನ್ನಾಗಿದ್ಯಾ ಟೋನಿ? ಚೆನ್ನಾಗಿಲ್ವಾ ಟೋನಿ?:ವಿಕಾಸ್ ಬರಹ
  ನಳಿನಿ ಮಯ್ಯ ಬರೆದ ಅಪೂರ್ವ ದಾಂಪತ್ಯ ಜೀವನ ಚಿತ್ರಗಳು
  ಪುಟಗಳಿಗೆ ಕಿಟಕಿಗಳಿಲ್ಲ:ಚರಿತಾ ಬರೆದ ಮೌನಲಹರಿ
  ನರಸಿಂಹ ರಾಯಚೂರ್ ವಿರಚಿತ ವಾರಾಂತ್ಯ ರಾಜಕೀಯ ಕಾಲಕ್ಷೇಪ
  ಜಲಪ್ರಳಯ: ನಾವು ಕಲಿಯಬೇಕಾದ ಪಾಠಗಳು:ಡಿ.ಎಸ್.ನಾಗಭೂಷಣ ಬರಹ
  ಚಿತ್ತಾಲರ ಶಿಕಾರಿ ಓದಿ ಸಚಿನ್ ಕೊಳಿಗೆ ಬರೆದದ್ದು
  ಸೀನಿಯರ್ ಬಹದ್ದೂರ ದೇಸಾಯಿ ಬರೆಯುವ ಪುಗಸಟ್ಟೆ ಸಲಹೆಗಳು
  ಪ್ರಶಸ್ತಿ ಪಿ.ಸಾಗರ ವಿರಚಿತ ಪೀಜಿ ಪುರಾಣವು
  ಜೇನಲ್ಲಿ ಮೂನಿಲ್ಲದ ಕಾಲ:ಮಿಂಚುಳ್ಳಿ ಸ್ವಗತ
  ಕೇದಾರದ ಹರೀಶ ಬದುಕಿರಲಿ ಶಿವನೇ:ರಾಜೀವ ಮೊರೆ
  ಅಪ್ಪ ಮತ್ತು ಟೆಲಿಗ್ರಾಂ:ನವೀನ ಹಣಮಂತಗಡ ಬರಹ
  ನಿನ್ನೆ ಅಪ್ಪಂದಿರ ದಿನ ಇಂದು ಪ್ರಶಸ್ತಿ ಮಾಡುವ ಅಪ್ಪನ ನಮನ
  ಗಡಸಿನ ಅಪ್ಪ, ಮಮತೆಯ ಅಪ್ಪ:ಸುಧೀಂದ್ರ ಬುಧ್ಯ ಬರಹ
  ಧಾರ್ಮಿಕ ಅನುಭವವೆಂದರೇನು? ಯು.ಜಿ. ಕೃಷ್ಣಮೂರ್ತಿ ಚಿಂತನೆ
  ಕಾಮರೂಪಿಯ ಅನಿಸಿಕೆಗಳೆಂಬ ಬ್ಲಾಗು
  ಸೂರಿಯ ಕಡ್ಡಿಪುಡಿಯ ಕುರಿತು ದತ್ತರಾಜ್ ವ್ಯಾಖ್ಯಾನ
  ಸೀನಿಯರ್ ದೇಸಾಯಿ ಬರೆಯುವ ಲಘು ಕಾಮೆಂಟರಿ ಶುರುವಾಯಿತು
  ಡೈರೆಕ್ಟರ್ಸ್ ಸ್ಪೆಷಲ್ ಕುರಿತು ಅಜೇಯ ಸಿಂಹಾವಲೋಕನ
  ನೆನಪುಗಳ ನೆರಳುಗಳನ್ನು ಅರಸಿ:ಕಾಮರೂಪಿ ಬ್ಲಾಗಿನಿಂದ
  ಅಮೇರಿಕಾದಲ್ಲಿರುವ ನಾಗ ಐತಾಳ ವಿರಚಿತ ಶ್ವಾನ ಪಾರಾಯಣ
  ಶ್ಯಾಮಲಾ ಗುರುಪ್ರಸಾದ ಬರೆದ ಫ್ರೀದಾ ಕಾಹ್ಲೋ ಕಲಾ ಕಥನ
  ಮಲೆಗಳಲ್ಲಿ ಮದುಮಗಳು ಎಂಬ ಭ್ರಮ ನಿರಸನ:ಅಶೋಕವರ್ಧನ ಬ್ಲಾಗ್
  ಕನ್ನಡಕ್ಕೆ ಇದಕ್ಕಿಂತ ಖುಷಿಯ ವಿಷಯವೇನಿದೆ:ಶ್ರೀರಾಂ ಆಶಯ
  ಏಳುಸುತ್ತಿನ ಹಿತ್ತಲ ಮಲ್ಲಿಗೆ:ವೆಂಕಟೇಶ್ ಮುಂಬೈ ಬರಹ
  ಜೀತಕ್ಕಿರುವವರ ಜೀವಿತ ಕಥೆಗಳು:ನಾಗರಾಜ ಹೆತ್ತೂರ್ ಬರಹ
  ಅಕ್ಕ ಎಂಬ ಅಕ್ಕರೆ ಅಕ್ಕ ಎಂಬ ಅಚ್ಚರಿ!:ಮಧುಸೂದನ ಬರಹ
  ಆಪಲ್ ಎಂಬ ಮೊಬೈಲ್ ಮಾಯಾವಿ:ಸುದರ್ಶನ ಗುರುರಾಜ ಬರಹ
  ಕೈಗಂಟಿದ ಮಸಿಯನ್ನು ಮುಖಕ್ಕೆ ಬಳಿದುಕೊಂಡರೆ? ಸುಧೀಂದ್ರ ಬರಹ
  ಕಮಲ ತನ್ನನ್ನು ತಾನೇ ಹೊಸಕಿತೇ?:ನರಸಿಂಹ ರಾಯಚೂರ್ ಪ್ರಶ್ನೆ
  ಎಸ್.ಮಂಜುನಾಥ್ ಮಾಡಿರುವ ಖಡ್ಗ ಮೀಮಾಂಸೆ
  ಓಟೇ ಹಾಕದ ಒಂಟಿ ಓಲೆಯ ಬೀರಯ್ಯ:ಗಂಗಾಧರಯ್ಯ ಬರಹ
  ಮಲೆಗಳಲ್ಲಿ ಮದುಮಗಳು ಎಲ್ಲಿ? ದಿಲಾವರ್ ರಾಮದುರ್ಗ ಬ್ಲಾಗ್
  ಅಮ್ಮನ ಕೂಡೆ ವೋಟ್ ಮಾಡಿದ್ದು:ಸ್ಮಿತಾ ಮಾಕಳ್ಳಿ ಬರಹ
  ವೋಟು ಹಾಕಿ ಸೋತ ಮುಖಗಳು:ಉಮಾರಾವ್ ಬರಹ
  ಸಚಿನ್ ಕೊಳಿಗೆ ಕಂಡ ಮಲೆಗಳಲ್ಲಿ ಮದುಮಗಳು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್’:ಮತ್ತೊಂದು ಕಥಾಪ್ರಸಂಗ
  ದೆವ್ವವಾದ ನರಭಕ್ಷಕ:ಕಾರ್ಲೋ ಅನುವಾದಿಸಿದ ಕಾರ್ಬೆಟ್ ಕಥನ
  ಪೈ ಎಂಬ ಮಾಯೆಯ ಸಿನೆಮಾ ಗಣಿತ:ದಿಲಾವರ್ ರಾಮದುರ್ಗ ಬರಹ
  ಆನ್ ಲೈನ್ ಆರಂಭಶೂರರ ಕುರಿತು ದತ್ತರಾಜ್ ಅನಿಸಿಕೆಗಳು
  ಮಲೆಗಳಲ್ಲಿ ಮದುಮಗಳಿಗೆ ರೂಪಲಕ್ಷ್ಮಿ ಮರುಳಾಗಿ ಬರೆದದ್ದು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್:ಒಂದು ಕಥಾಪ್ರಸಂಗ
  ಎವರೆಸ್ಟ್ ಏರಿದ್ದು ಮೊದಲು ಯಾರು?:ಎಂ.ವೆಂಕಟಸ್ವಾಮಿ ಬರಹ
  ಮಾಂಕ್ಷಾವಲಿ ನಾಮಾಂಕಿತ ಮಂಟೇಸ್ವಾಮಿ:ಬಾಬು ಕೌದೇನಹಳ್ಳಿ ಬರಹ
  ಕರ್ನಾಟಕ ಜನಸಾಹಿತ್ಯ ಸಮಾವೇಶ:ಅರುಣ ಜೋಳದ ಸಮೀಕ್ಷೆ
  ಚಾರ್ಲ್ಸ್ ಡಾರ್ವಿನರ ಆಮೆಗಳು:ಪಾಲಹಳ್ಳಿ ವಿಶ್ವನಾಥ್ ಬರಹ
  ತಗಾದೆಯಿಲ್ಲದ ಯುಗಾದಿ ಇರಲಿ:ಅನಸೂಯಾದೇವಿ ಹಾರೈಕೆ
  ಯುಗಾದಿಯ ಬಿಸಿಲಲ್ಲಿ ರತ್ನಪಕ್ಷಿಯ ಅರಸುತ್ತಾ:ಗೊರವರ ಬರಹ
  ಮುದುಕಿಯೊಬ್ಬಳ ಒಳ್ಳೆಯ ಶಾಪ:ಪ್ರೀತಂ ರಾವ್ ಲಂಡನ್ ಡೈರಿ
  ಜಗತ್ತಿನೆದುರು ನಿರುತ್ತರ ಕೊರಿಯ:ರೋಹಿತ ಬರಹ
  ಪರಿಮಳ ಹೊತ್ತು ಬರುತ್ತಿದ್ದವರು:ಎಲ್.ಸಿ.ಸುಮಿತ್ರ ನೆನಪುಗಳು
  ದೇವದೂತರಂತೆ ಬಂದಿದ್ದವರು:ಮಿಂಚುಳ್ಳಿ ಲಹರಿ
  ಬಿಗ್ ಬಾಸ್ ಎಂಬ ಮನೆ ಮುರುಕ ಆಟದ ಕುರಿತು ಭಾವನಾ ರಾವ್ ಮರುಕ