ಸೆಪ್ಟೆಂಬರ್ ೧೭, ೨೦೧೪
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಬಳ್ಳಂಬೆಟ್ಟಿನ ಬಾಲ್ಯಕಾಲ-12: ಮೊಗೆದಷ್ಟೂ ತೀರದ ಶಾಲಾ ನೆನಪುಗಳು    
ಶಕುಂತಲಾ ಆರ್.ಕಿಣಿ
ಬುಧವಾರ, 31 ಆಗಸ್ಟ್ 2011 (02:53 IST)
(ಛಾಯಾ ಚಿತ್ರಗಳು: ರಂಜನ್, ಪಳ್ಳತ್ತಡ್ಕ ಮತ್ತು ಅನುಪಮ್, ಪೆರ್ಲ)

ನನ್ನ ಬಾಲ್ಯಕಾಲದಲ್ಲಿ ನಮಗಿದ್ದ ಮನೋರಂಜನಾ ಸಾಧನಗಳೆಂದರೆ ಶಾಲಾ ವಾರ್ಷಿಕೋತ್ಸವಗಳು ಮತ್ತು ಯಕ್ಷಗಾನಗಳು.  ಆಗಿನ ಕಾಲದಲ್ಲಿ ಶಾಲಾ ವಾರ್ಷಿಕೋತ್ಸವಗಳು ಈಗಿನಂತೆ ರಾತ್ರಿ ಹತ್ತರ ಒಳಗೆ ಮುಗಿಯುವಂಥದಲ್ಲ. ಸಂಜೆ ಆರಂಭವಾದರೆ ಮರುದಿನ ಬೆಳಕು ಹರಿಯುವವರೆಗೆ ಕಾರ್ಯಕ್ರಮಗಳು ಇರುತ್ತಿದ್ದುವು.  ಯಾಕೆಂದರೆ, ನಡುರಾತ್ರಿಯ ಬಳಿಕ ಕಾರ್ಯಕ್ರಮ ಮುಗಿದರೆ, ಶಾಲೆಯಿಂದ ತಮ್ಮತಮ್ಮ ಮನೆಗಳಿಗೆ ಮರಳಲು ಮಕ್ಕಳಿಗೆ ಮತ್ತು ಮನೆ ಮಂದಿಗೆ ತೊಂದರೆ ಆಗುತ್ತಿತ್ತಲ್ಲವೇ?  ತಮ್ಮ ಮನೆಯ ಮಕ್ಕಳು ನಾಟಕದಲ್ಲಿರಲಿ, ಬಿಡಲಿ ಊರಿಗೆ ಊರೇ ಶಾಲಾ ವಾರ್ಷಿಕೋತ್ಸವವನ್ನು ಸಂಭ್ರಮಿಸಿ ಆಚರಿಸುತ್ತಿತ್ತು.

ನಾನು ಶಾಲೆಗೆ ಹೋಗಲು ಆರಂಭಿಸುವ ಮುನ್ನವೇ, ಪೆರ್ಲದ ಶ್ರೀ ಸತ್ಯನಾರಾಯಣ ಶಾಲೆಯಲ್ಲಿ ನನ್ನ ಅಣ್ಣಂದಿರು ಓದುತ್ತಿದ್ದ ಸಮಯದಲ್ಲಿ, ಶಾಲೆಯ ತರಗತಿಯ ಕಟ್ಟಡಗಳಿಗಿಂತ ಇನ್ನೂ ಎತ್ತರದಲ್ಲಿ, ಗುಡ್ಡದ ಮೇಲೆ 'ಕಲಾನಿಲಯ'ವೆಂಬ ಪ್ರತ್ಯೇಕ ಕಟ್ಟಡದಲ್ಲಿ ವಾರ್ಷಿಕೋತ್ಸವದ ಆಚರಣೆಗಳು ನಡೆಯುತ್ತಿದ್ದುವು.  ದೊಡ್ಡ ಸಭಾಂಗಣ, ಎತ್ತರದ ಸ್ಟೇಜ್, ಪರದೆಗಳು, ಎರಡೂ ಬದಿಗಳಲ್ಲಿ ಕೈ ಮುಗಿದು ನಿಂತ ಬೇಲೂರ ಶಿಲಾಬಾಲಿಕೆಯ ಥರದ ಚಿತ್ರಗಳು - ಇವುಗಳಿಂದ 'ಕಲಾನಿಲಯ' ಆ ಕಾಲಕ್ಕೆ ಭವ್ಯವಾದ ನಿಲುವನ್ನು ಹೊಂದಿದ್ದ ಕಟ್ಟಡ.

ಆಗ ನಾವೆಲ್ಲ ಪೆರ್ಲದ ಪೇಟೆಯಿಂದ ಒಂದಷ್ಟು ದೂರದ ಅಜಿಲಡ್ಕವೆಂಬಲ್ಲಿದ್ದ, ಯಮುನಕ್ಕನ ಮಗ ಸುಬ್ರಾಯ ಭಾವನವರ ಮನೆಯಲ್ಲಿ ಉಳಿದುಕೊಂಡು ನಾಟಕ ನೋಡಲು ಹೋಗುತ್ತಿದ್ದೆವು.  ಪೆರ್ಲ ಶಾಲೆಯಿಂದ ಅವರ ಮನೆಗೆ ತುಂಬ ನಡೆಯಬೇಕಾಗಿತ್ತು.  ನಾಟಕ ಮುಗಿದ ಮೇಲೆ ಇನ್ನೂ ಬೆಳಕು ಮೂಡುವ ಮುನ್ನ ಕತ್ತಲೆಯಲ್ಲಿಯೇ ದಾರಿದೀಪಗಳಿಲ್ಲದ ಆ ದಾರಿಯಲ್ಲಿ ನಡೆದುಕೊಂಡು ಬಂದು ಅವರ ಮನೆ ಸೇರುತ್ತಿದ್ದೆವು.

ನನ್ನ ಅಣ್ಣ ಬಬ್ಬಣ್ಣ ಪಾತ್ರ ವಹಿಸಿದ್ದ, 'ಮ್ಯಾಕ್ ಬೆತ್' ನಾಟಕ, ಅದರಲ್ಲಿ ಲೇಡಿ ಮ್ಯಾಕ್ ಬೆತ್ ಳಿಗೆ ತನ್ನ ತೀರಿಹೋದ ಗಂಡ ಭೂತವಾಗಿ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಹಿಂದಿನಿಂದ ಹೊಗೆ ಹಾಕಿ, ನಿಜವಾಗಿ ಭೂತವೇ ಎದ್ದು ಬರುತ್ತಿದೆ ಏನೋ ಎಂದು ಅಂಜಿ ಬಟ್ಟೆ ಒದ್ದೆ ಮಾಡಿಕೊಂಡ ನೆನಪು ನನಗೆ.  ಒಮ್ಮೆ ಕೂರಿಪ್ಪುಡೆಯ ಸುಬ್ರಾಯ ದೊಡ್ಡಪ್ಪನ ಮಗ ಸೀತಣ್ಣ, ಶಿವನ ಪಾತ್ರ ವಹಿಸಿ, ಶಿವಲಿಂಗದ ಮರೆಯಿಂದ ಕುತ್ತಿಗೆಗೆ ಹಾಕಿಕೊಂಡ ರಟ್ಟಿನಿಂದ ಮಾಡಿದ ನಾಗರಹಾವಿನ ಸಮೇತ ಭಕ್ತನಿಗೆ ಪ್ರತ್ಯಕ್ಷವಾಗುವ ಸೀನ್ ನೋಡಿ ಭಕ್ತಿ ಪರವಶತೆಯಿಂದ ನಾವೆಲ್ಲ ಕೈ ಮುಗಿದಿದ್ದೆವು.  ಅವರೆಲ್ಲ ಅಷ್ಟು ಚೆನ್ನಾಗಿ ಅಭಿನಯಿಸುತ್ತಿದ್ದರೋ, ಅಥವಾ ನಮ್ಮ ವಯಸ್ಸಿಗೆ ಸಹಜವಾದ ಮುಗ್ಧತೆಯೋ, ನಾವೆಲ್ಲ ಮುಂದಿನ ವರ್ಷದ ವಾರ್ಷಿಕೋತ್ಸವದವರೆಗೂ  ಅದೇ ಗುಂಗಿನಲ್ಲಿ, ಅವೇ ಸಂಭಾಷಣೆಗಳನ್ನು ಉರುಹೊಡೆದು, ಮನೆಗಳಲ್ಲಿ ಮತ್ತೆ ಮತ್ತೆ ಆ ದೃಶ್ಯಗಳನ್ನು ಅಭಿನಯಿಸುತ್ತಿದ್ದೆವು.ನವಜೀವನ ಹೈಸ್ಕೂಲು, ಪೆರ್ಡಾಲ

ನಾನು ಪಳ್ಳತ್ತಡ್ಕ ಶಾಲೆಯಲ್ಲಿ ಏಳನೆಯ ತರಗತಿಯಲ್ಲಿದ್ದಾಗ, ಬದಿಯಡ್ಕದ ನವಜೀವನ ಶಾಲೆಯ ರಜತ ಮಹೋತ್ಸವ ನಡೆಯಿತು.  ಅದು ಮೂರು ದಿನಗಳ ಕಾಲ ನಡೆದ ಅಭೂತಪೂರ್ವ ಸಮಾರಂಭ.  ನನ್ನ ದೊಡ್ಡಕ್ಕ ವನಿತಕ್ಕ ಆಗ ಅಲ್ಲಿ ಹತ್ತನೆಯ ತರಗತಿ ಓದುತ್ತಿದ್ದರು.  ಅಕ್ಕ ಸ್ವಯಂಸೇವಕರ ಲೀಡರ್ ಆಗಿ Volunteer ಎಂದು ಬರೆದ ಬ್ಯಾಡ್ಜ್ ನ್ನು ಸಿಕ್ಕಿಸಿಕೊಂಡು ಓಡಾಡುವುದನ್ನು ಸಂಭ್ರಮಾತಿರೇಕಗಳಿಂದ ನಾವೆಲ್ಲ ನೋಡುತ್ತಿದ್ದೆವು.  ನಾವು ಚಿಳ್ಳೆಪಿಳ್ಳೆಗಳೆಲ್ಲಾ ಬದಿಯಡ್ಕದ ಗುಲಾಬಿ ಅಕ್ಕನ ಮನೆಯಲ್ಲಿ ನಾಲ್ಕು ದಿನಗಳ ಕಾಲ ಭದ್ರವಾಗಿ ಝಂಡಾ ಊರಿ ಮೂರು ದಿನಗಳ ವಾರ್ಷಿಕೋತ್ಸವವನ್ನು ಸವಿದ ನೆನಪು.  ಹಳ್ಳಿಯ ಮೂಲೆಮೂಲೆಯಿಂದ ಜಾತ್ರೆ ಎಂಬಂತೆ ಮನೆಮಂದಿಯೊಂದಿಗೆ ಜನ ಬಂದು ರಾತ್ರಿ ಹಗಲೂ ಅಲ್ಲಿ ನಡೆದ ಸಮಾರಂಭಗಳನ್ನು ವೀಕ್ಷಿಸಿದ್ದರು.  ಪ್ರಸಿದ್ಧ ಚಿತ್ರ ಕಲಾವಿದರಾದ ಶ್ರೀ ಪಿ.ಎಸ್. ಪುಣಿಂಚಿತ್ತಾಯರು ನವಜೀವನ ಶಾಲೆಯ ಅಧ್ಯಾಪಕರಾದ ಶ್ರೀಕಯ್ಯಾರಕಿಞ್ಞಂಣ್ಣ ರೈಗಳನ್ನು ಕುಳ್ಳಿರಿಸಿ ಅವರ ರೇಖಾಚಿತ್ರವನ್ನು ಸಭಿಕರ ಎದುರೇ ಬಿಡಿಸಿದ್ದು, ಆರ್ಕೇಸ್ಟ್ರಾಗಳಿಲ್ಲದ ಆ ಕಾಲದಲ್ಲೂ ಸಕಲವಾದ್ಯ ಪರಿಕರ, ಸಹಗಾಯಕರೊಡನೆ "ತಾರ್ ಮಿಲೇ ನದೀ ಕೇ ಜಲ್ ಮೇ ನದೀ ಮಿಲೇ ಸಾಗರ್ ಮೇ" ಮುಂತಾದ ಹಾಡುಗಳನ್ನು ಹಾಡಿ ರಂಜಿಸಿದ ನವಜೀವನ ಶಾಲೆಯ ಹಳೆ ವಿದ್ಯಾರ್ಥಿ (ಹೆಸರು ನೆನಪಿಲ್ಲ) ತಂಡ, ನನ್ನಕ್ಕನ ಕ್ಲಾಸ್ ಮೇಟ್ ವೇದಾವತಿ ಎಂಬಾಕೆ ರುಕ್ಮಿಯಾಗಿ ನಟಿಸಿದ್ದ 'ರುಕ್ಮಿಣೀ ಸ್ವಯಂವರ' ನಾಟಕ, ಮಂಗಳೂರಿನ ಯಾವುದೋ ತಂಡ ಅಭಿನಯಿಸಿದ 'ಉಳ್ಳಾಲ ಅಬ್ಬಕ್ಕರಾಣಿ' ನಾಟಕ, ಅಲ್ಲದೇ ನವಜೀವನ ಶಾಲೆಯ ಹಳೆ ವಿದ್ಯಾರ್ಥಿಗಳು ತಾವೇ ಬರೆದು ನಟಿಸಿದ, "ಅದಲು-ಬದಲು" -ಎಂಬ ನಾಟಕ -ಇವೆಲ್ಲವೂ ಈಗಲೂ ನೆನಪಲ್ಲಿ ಉಳಿದ ತುಣುಕುಗಳು.

ಪೌರಾಣಿಕ ನಾಟಕದ ದೃಶ್ಯಮರು ವರ್ಷ ನಾನು ಎಂಟನೆಯ ತರಗತಿಗಾಗಿ ಪೆರ್ಲದ ಶ್ರೀ ಸತ್ಯನಾರಾಯಣ ಶಾಲೆಯನ್ನು ಸೇರಿದೆ.  ಅದುವರೆಗೆ ನನಗೆ ಶಾಲೆಯೆಂಬುದು ಮನೆಯ ಇನ್ನೊಂದು ಮುಂದುವರಿದ ಭಾಗವೇ ಆಗಿತ್ತು.  ಆದರೆ ಪೆರ್ಲ ಶಾಲೆಗೆ ಬಂದ ಮೇಲೆ ಶಿಸ್ತು ಬದ್ಧ ಶಾಲೆಯ ರೀತಿ ನೀತಿಗಳ ಅನುಭವ ನನಗಾಯಿತು.  ಕನ್ನಡ ಭಾಷೆ, ಸಾಹಿತ್ಯಗಳ ಜ್ಞಾನಭಂಡಾರವೆನಿಸಿದ ರಾಮಕೃಷ್ಣಭಟ್ ಮಾಸ್ಟರ್, ಕಾವ್ಯವಾಚನಪ್ರಿಯ ಪಂಜರಿಕೆ ವಿಷ್ಣುಭಟ್ ಮಾಸ್ಟರ್, ಆಧುನಿಕ ಕಾವ್ಯಾಸಕ್ತಿಯ ಹಾಗೂ ಚಿಂತನೆಯ ರಾಮಭಟ್ ಮಾಸ್ಟರ್, ಅಂಗೈಗಳೆರಡನ್ನೂ ತಿಕ್ಕಿಕೊಳ್ಳುತ್ತ ಪಾಠ ಮಾಡುವ ವಾಗ್ಮಿ ಹಿಂದಿ ಪಂಡಿತ್ ಪೆರ್ಲಕೃಷ್ಣಭಟ್, ಲೆಕ್ಕವನ್ನು ಅರೆದು ಕುಡಿದಂತಿದ್ದ ಗೋಪಾಲಕೃಷ್ಣಭಟ್, ಲೆಕ್ಕದಲ್ಲಿ ಅವರಿಗೇನೂ ಕಮ್ಮಿ ಇಲ್ಲದ ಬಳ್ಳಂಬೆಟ್ಟು ಈಶ್ವರಭಟ್, ಇತಿಹಾಸದ ಗರ್ಭದೊಳಗೆ ನಮ್ಮನ್ನು ಕೊಂಡೊಯ್ಯುತ್ತಿದ್ದ ಜಿ.ಶಂಕರಭಟ್, ತಮಾಷೆ ಮಾಡುತ್ತ ಸಮಾಜ ಪಾಠ ಮಾಡುವ ಭರಣ್ಯ ಮಾಸ್ಟರ್, ವಿಜ್ಞಾನವನ್ನು ಅತ್ಯಂತ ಆಕರ್ಷಕವಾಗಿ ಕಲಿಸುತ್ತಿದ್ದ ಕಡು ಶಿಸ್ತಿನ ಹಾಗೂ ಸಿಟ್ಟಿನ ಚಾಲತ್ತಡ್ಕ ಮಾಸ್ಟರ್, ಸದಾ ನಗುತ್ತಲೇ ಇಂಗ್ಲಿಷ್ ಪಾಠ ಮಾಡುವ ಕೆ.ಎಸ್.ಬಿ, ನಾಚುತ್ತಾ ಪಾಠ ಮಾಡುತ್ತಿದ್ದ ಕಜಂಪಾಡಿ ಮಾಸ್ಟರ್... ಹೀಗೆ ಘಟಾನುಘಟಿಗಳ ಪಡೆಯೇ ಅಲ್ಲಿತ್ತು.  ಇವರೆಲ್ಲರ ಗರಡಿಯಲ್ಲಿ ಪಳಗಿ 'ಸೈ' ಅನ್ನಿಸಿಕೊಳ್ಳಬೇಕಾದರೆ ಅಷ್ಟೇ ಪರಿಶ್ರಮ, ಕಠಿಣ ಅಭ್ಯಾಸದ ಅಗತ್ಯವಿತ್ತು.  ನನ್ನ ಓದಿಗೊಂದು ಶಿಸ್ತಿನ ಚೌಕಟ್ಟನ್ನು ಹಾಕಿಕೊಟ್ಟ ಶಾಲೆಯದು.

ಪೆರ್ಲ ಶಾಲೆಯಲ್ಲಿ ಬಲಿತ ಹುಡುಗರ ಕೀಟಲೆ, ಚೇಷ್ಟೆಗಳು ನಮ್ಮನ್ನು ಸಂಕಷ್ಟಕ್ಕೆ ಈಡು ಮಾಡುತ್ತಿದ್ದುವು.  ಮನೆಯಲ್ಲಿ ಹೇಳಲು ಮುಜುಗರವಾಗುವ ಸನ್ನಿವೇಶಗಳೂ ಇದ್ದುವು.  ಹುಡುಗಿಯರ ನಡಿಗೆ, ವೇಷಭೂಷಣ, ಮೈಕಟ್ಟಿಗೆ ಅನುಗುಣವಾಗಿ ನಾಮ ವಿಶೇಷಣಗಳನ್ನು ಹಚ್ಚುತ್ತಿದ್ದರು.  ದಪ್ಪ ಮೈಕಟ್ಟಿನ ಹುಡುಗಿಯೊಬ್ಬಳಿಗೆ 'ಪೂತನಿ' ಎಂಬ ಅಡ್ಡ ಹೆಸರಿತ್ತು.  ಆಗ ಆ ಹೆಸರಿನ ವೈಶಿಷ್ಟ್ಯ, ಔಚಿತ್ಯಗಳು ನಮಗೆ ಗೊತ್ತಿರಲಿಲ್ಲ.  ದೂರದ ಹಳ್ಳಿಗಳಿಂದ ವೇಗವಾಗಿ ನಡೆದುಬರುತ್ತಿದ್ದ ಕೆಲವು ಹುಡುಗಿಯರ ನಡಿಗೆ ಹಾರಿ ಹಾರಿ ನಡೆದಂತೆ ಕಾಣುತ್ತಿತ್ತಾದುದರಿಂದ ಕುದುರೆಯೆಂದೋ, ಹುಲಿವೇಷವೆಂದೋ ಏನಾದರೊಂದು ಹೆಸರಿನಿಂದ ಅವರನ್ನು ಕರೆಯುತ್ತಿದ್ದರು.  ಈ ಹುಡುಗರ ಕೀಟಲೆ, ಕಾಟಗಳ ಜೊತೆಗೆ ನಮಗೆ ಪಡ್ರೆ, ಸ್ವರ್ಗ ಮುಂತಾದ ಕಡೆಗಳಿಂದ ಬರುತ್ತಿದ್ದ ಕರಾಡಸ್ಥ ಹುಡುಗಿಯರ ಹೆದರಿಕೆಯೂ ಇತ್ತು.  ಬಳ್ಳಂಬೆಟ್ಟು, ದೈಯ್ಯಂದ್ರೆ, ಚಾಲಕ್ಕೋಡು, ವಳಕ್ಕುಂಜ, ಪರ್ತಿಕ್ಕಾರು, ದಂಬೆಮೂಲೆಗಳಿಂದ ಪೆರ್ಲ ಶಾಲೆಗೆ ಬರುತ್ತಿದ್ದ ನಮ್ಮ ಪಡೆಗಳಿಗಿಂತಲೂ, ಸ್ವರ್ಗ, ಪಡ್ರೆ, ಕಜಂಪಾಡಿಗಳಿಂದ ಬರುತ್ತಿದ್ದ ಇವರ ಪಡೆಯೇ ಸಂಖ್ಯೆಯಿಂದಲೂ, ಬಾಯ್ಬಲದಿಂದಲೂ ಬಲವಾಗಿತ್ತು.  ನಮ್ಮ ಕೊಂಕಣಿ ಭಾಷೆಗಿಂತಲೂ ವೇಗವಾಗಿ ಮತ್ತು ಅರ್ಥೈಸಲು ಕಷ್ಟವಾಗುವ ಅವರ ಕರಾಡಭಾಷೆಯಲ್ಲಿ ಪುಂಖಾನುಪುಂಖವಾಗಿ ಒಮ್ಮೆ ಬೈಗಳು ಹೊರಟಿತೆಂದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿರಲಿಲ್ಲ.  ಗಂಡು ಹುಡುಗರಿಗೂ ಸಡ್ಡು ಹೊಡೆದು ನಿಲ್ಲುತ್ತಿದ್ದ ಸತ್ಯಪ್ರೇಮ ಎಂಬಾಕೆಯ ಧೈರ್ಯ, ಮುನ್ನುಗ್ಗುವ ಛಾತಿ ಹಾಗೂ ಯಾವುದೇ ಅಡೆತಡೆ ಇಲ್ಲದೆ ಹೊಮ್ಮುವ ವಾಗ್ಝರಿಗಳು ಆಗ ನಮ್ಮನ್ನು ಬೆಚ್ಚಿ ಬೀಳಿಸಿ ಅವಳ ಬಗ್ಗೆ ಅಸಹನೆ, ಸಿಟ್ಟನ್ನು ಉತ್ಪತ್ತಿ ಮಾಡುತ್ತಿದ್ದವಾದರೂ, ಈಗ ಆಕೆಯನ್ನು ನೆನೆದಾಗ ಆಕೆ ಸ್ತ್ರೀವಾದದ ಪ್ರಥಮ ಪ್ರತಿಪಾದಕಿ ಎಂದು ಅನಿಸಿ ಆಕೆಯ ಬಗ್ಗೆ ಅಭಿಮಾನ ಮೂಡುತ್ತಿದೆ.

ಹೀಗೆ ಅತ್ಯಂತ ಸಮರ್ಥ ಶಿಕ್ಷಕರ ಸಮೂಹ, ಗೋಳು ಹುಯ್ದುಕೊಳ್ಳುವ ಗಂಡು ಹುಡುಗರು, ಹೆದರಿಕೆ ಹುಟ್ಟಿಸುವ ಸತ್ಯಪ್ರೇಮಾದಿಗಳ ಬಳಗದ ನಡುವೆ ತೀರಾ ಕುಗ್ರಾಮದಿಂದ ಬಂದ ನನ್ನ ಮುಂದೆ ಒಂದೋ ಸಂಕೋಚದಿಂದ ಮುದುಡಿ ಮೂಲೆಗುಂಪಾಗುವ ಇಲ್ಲವೇ ಅವೆಲ್ಲಕ್ಕೂ ಎದೆ ಒಡ್ಡಿ ಚಿಮ್ಮಿ ಮೇಲಕ್ಕೇಳುವ ಎರಡು ಸಾಧ್ಯತೆಗಳಿದ್ದುವು.  ಸ್ವಭಾವತ: ನಾಚಿಕೆಯ ಸ್ವಭಾವದ ನನ್ನ ಸಹೋದರ, ಸಹೋದರಿಯರಂತೆ, ನಾನೂ ನಾಚಿಕೆಯ, ಅಂತರ್ಮುಖಿ ಸ್ವಭಾವದ, ಕಥೆ, ಕಾದಂಬರಿಗಳ ಪ್ರಪಂಚದಲ್ಲೇ ಮುಳುಗೇಳುತ್ತಿದ್ದವಳಾಗಿದ್ದರೂ, ಓದಿನಲ್ಲಿ ಎಲ್ಲರಿಗಿಂತ ಮುಂದಿರಬೇಕು ಎಂಬ ನನ್ನ ಒಳಛಲದ ನಿಮಿತ್ತ ನಿಧಾನವಾಗಿ ತಲೆ ಎತ್ತತೊಡಗಿದ್ದೆ.  ಈ ನನ್ನ ಒಳಛಲಕ್ಕೆ ಇನ್ನಷ್ಟು ಗಟ್ಟಿಬಲ ಬಂದದ್ದು ನಾನು ಭಾಗವಹಿಸುತ್ತಿದ್ದ ಭಾಷಣ ಸ್ಪರ್ಧೆಗಳಿಂದ.  ಒಮ್ಮೆ ಭಾಷಣ ಸ್ಪರ್ಧೆಯಲ್ಲಿ, ಪ್ರತಿ ಬಾರಿ ಪ್ರಥಮ ಸ್ಥಾನ ಗಳಿಸುತ್ತಿದ್ದ ನಮ್ಮ ನೆರೆಯ ಕೃಷ್ಣಭಟ್ಟರ ಮಗ, ನನಗಿಂತ ಒಂದು ತರಗತಿ ಮುಂದಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ ಸುಬ್ರಹ್ಮಣ್ಯ ಭಟ್ಟರನ್ನು ಎರಡನೆಯ ಸ್ಥಾನಕ್ಕೆ ತಳ್ಳಿ, ನಾನು ಪ್ರಥಮ ಸ್ಥಾನ ಗಳಿಸಿದ್ದೇ, ನನ್ನನ್ನು ಕಾಸರಗೋಡಿನಲ್ಲಿ ನಡೆಯುವ ಜಿಲ್ಲಾಮಟ್ಟದ ಅಂತರ್ಶಾಲಾ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರತಿನಿಧಿಯಾಗಿ ಕಳುಹಿಸಿದರು.  ಆದರೆ ಅಲ್ಲಿಯ ಸ್ಪರ್ಧೆಯ ನಿಯಮಗಳು, ಕೊನೆಯ ಕ್ಷಣದಲ್ಲಿ ಕೊಟ್ಟ ವಿಷಯ, ಮೈಕ್ ನಲ್ಲಿ ನಮ್ಮ ನಂಬರ್ ಕರೆದಾಗ ಯಾರನ್ನೋ ಕರೆದಂತಾಗಿ ಅನುಭವಿಸಿದ ತಬ್ಬಿಬ್ಬು, ವೇದಿಕೆಯ ಕೆಳಗಿದ್ದ ನೂರಾರು ಅಪರಿಚಿತ ಮುಖಗಳು, ಕೊನೆಯ ಒಂದು ನಿಮಿಷಕ್ಕಿಂತ ಮುಂಚೆ ಬಾರಿಸಿದ ಬೆಲ್ ನಿಂದಾದ ಗೊಂದಲ - ಇವುಗಳಿಂದ ನಾನು ಸೋತು ಬಂದದ್ದು ಬೇರೆ ವಿಷಯ.  ಆದರೆ ಜಿಲ್ಲಾಮಟ್ಟದ ಅಂತರ್ಶಾಲಾ ಸ್ಪರ್ಧೆಯಲ್ಲಿ ಮಗಳು ಭಾಗವಹಿಸಿದಳು ಎಂಬುದು ನನ್ನ ಅಪ್ಪಯ್ಯನಿಗೆ ಬಲು ಹೆಮ್ಮೆಯ ವಿಷಯವಾಗಿತ್ತು.

ನನ್ನ ಈ ಶೂನ್ಯ ಸಾಧನೆಯಿಂದ ನನಗಾದ ಒಂದು ದೊಡ್ಡ ಲಾಭವೆಂದರೆ, ಅದುವರೆಗೆ ಪ್ರಾಥಮಿಕ ಶಾಲಾಮಟ್ಟದಲ್ಲಿ ಮಾತ್ರ ಶಾಲಾವಾರ್ಷಿಕೋತ್ಸವದ ನಾಟಕಗಳಲ್ಲಿ ಭಾಗವಹಿಸಲು ಹೆಣ್ಣು ಮಕ್ಕಳಿಗೆ ಅನುಮತಿ ನೀಡುತ್ತಿದ್ದ ಅಪ್ಪಯ್ಯ, ನನಗೆ ಮಾತ್ರ ಆ ವರ್ಷ ಪೆರ್ಲ ಶ್ರೀ ಸತ್ಯನಾರಾಯಣ ಶಾಲೆಯ ರಜತಮಹೋತ್ಸವದ ನಾಟಕದಲ್ಲಿ ಭಾಗವಹಿಸಲು ಅನುಮತಿ ಕೊಟ್ಟದ್ದು.  ನಾನಾಗ ಒಂಭತ್ತನೆಯ ತರಗತಿ.  ಪಂಜರಿಕೆ ವಿಷ್ಣುಭಟ್ ಮಾಸ್ಟರ್ ಅವರ ನಿರ್ದೇಶನದಲ್ಲಿ "ಕಚ-ದೇವಯಾನಿ" ನಾಟಕವನ್ನು ಆಡಿಸಿದ್ದರು.  ಈ ನಾಟಕಕ್ಕಾಗಿ ನಮಗೆ ಹಾಡು ಕಲಿಸಲು ಶ್ರೀ ಈಶ್ವರಯ್ಯ ಅನಂತಪುರ (ತುಷಾರ - ಉದಯವಾಣಿ ಬಳಗ) ಹಾಗೂ ಅವರ ಸಹೋದರರಾದ ಶ್ರೀ ಶ್ರೀಕೃಷ್ಣಯ್ಯ ಅನಂತಪುರ ಬರುತ್ತಿದ್ದರು.  "ಮನವೇ ವೇದನೆ ತುಂಬಿದ ಜಗದಿ," "ನೀನಿರದ ಎನ್ನೊಡಲು ಕುಣಿವ ಸೂತ್ರದ ಗೊಂಬೆ" ಮುಂತಾದ ಸುಮಧುರ ಹಾಡುಗಳನ್ನು ತಾವೇ ಬರೆದು ಸಂಗೀತ ಬದ್ಧಗೊಳಿಸಿ, ಹಾರ್ಮೋನಿಯಂ ನುಡಿಸುತ್ತಾ ನಮಗೆ ಹೇಳಿಕೊಡುತ್ತಿದ್ದ ಈ ಕಲಾವಿದ ಸಹೋದರರೇ ನಮಗೆ ನಾಟಕದ ದಿನ ಮೇಕಪ್ ಕೂಡಾ ಮಾಡಿದ್ದರು.  ಈ ನಾಟಕಕ್ಕಾಗಿ ನಾನು ರಾಣಿ ದೇವಯಾನಿಯ ಪಾತ್ರಕ್ಕೆ ಒಪ್ಪುವ ಸೀರೆಗಾಗಿ ನಮ್ಮ ನೆಂಟರಿಷ್ಟರ ಮನೆಗೆಲ್ಲಾ ಎಡತಾಕಿದ್ದೆ.  ಕೊನೆಗೆ ಅಮ್ಮನ ಒಂದು ರೇಷ್ಮೆಸೀರೆಯನ್ನು ಕಷ್ಟಪಟ್ಟು ಸಂಪಾದಿಸಿದ್ದೆ.

ನವಜೀವನ ಶಾಲೆಯಂತೆಯೇ ನಮ್ಮ ಶಾಲೆಯಲ್ಲೂ ರಜತ ಮಹೋತ್ಸವ ಮೂರುದಿನಗಳ ಕಾಲ 'ಕಲಾನಿಲಯ'ದ ಮಾಮೂಲಿ ಜಾಗವನ್ನು ಬಿಟ್ಟು ಕೆಳಗಿನ ಶಾಲಾ ಮೈದಾನದಲ್ಲಿ ಹಾಕಿದ ಭವ್ಯ ಚಪ್ಪರದಲ್ಲಿ, ಸುಂದರ ವೇದಿಕೆಯಲ್ಲಿ ವೈಭವೋಪೇತವಾಗಿ ನಡೆಯಿತು.  ನಾವೂ ಸ್ವಯಂಸೇವಕರ ಬ್ಯಾಡ್ಜ್ ಸಿಕ್ಕಿಸಿ ಸಂಭ್ರಮದಿಂದ ಓಡಾಡಿದೆವು.  ಸ್ವಯಂ ಸೇವಕರಿಗೆ ಊಟ, ತಿಂಡಿಗಳ ಕೂಪನ್ ಬೇರೆ ಕೊಟ್ಟಿದ್ದರು.  ಸಮ್ಮೋಹಿನಿ ವಿದ್ಯೆಯ ಪ್ರದರ್ಶನ, ನನ್ನ ದೊಡ್ಡಪ್ಪನ ಮಗ ಪತ್ತು ಸ್ತ್ರೀಪಾತ್ರ ವಹಿಸಿ ಭಾಗವಹಿಸಿದ್ದ ಹಳೆವಿದ್ಯಾರ್ಥಿಗಳ ನಾಟಕ ನೆನಪಾಗುತ್ತದೆ.  ನನ್ನ ನಾಟಕದ ದಿನ ನನ್ನ ಅಪ್ಪಯ್ಯ ಎಲ್ಲರಿಗಿಂತ ಮುಂದೆ ಕುಳಿತು, "ದೇವಯಾನಿ'ಯ ಪಾತ್ರದ ನನ್ನ ಸಂಭಾಷಣೆ, ಅಭಿನಯವನ್ನು ಧನ್ಯತೆಯಿಂದ ಆಸ್ವಾದಿಸಿದ ರೀತಿ ಈಗಲೂ ಕಣ್ಣಿಗೆ ಕಟ್ಟಿದಂತಿದೆ.  ನಮ್ಮ ಮನೆಯ ಕೆಲಸದ ಚನಿಯಾರು, ಐತ, ಮಂಚಪ್ಪ ಮುಂತಾದವರೂ ಈ ನಾಟಕಕ್ಕೆ ಬಂದಿದ್ದು ಸ್ಟೇಜ್ ಮೇಲಿನಿಂದ ನಾನು ನೋಡುವಾಗ ನನ್ನ ಕಣ್ಣಿಗೆ ಅವರು ಕಣ್ಣರಳಿಸಿ ಕುಳಿತದ್ದು ಕಾಣಿಸುತ್ತಿತ್ತು.  ನಾನು ಯಯಾತಿಯ ಸಾಮ್ರಾಜ್ಯಕ್ಕೆ ಮಾತ್ರವಲ್ಲ, ಇಡೀ ಭೂಮಂಡಲಕ್ಕೇ ರಾಣಿ ಎಂಬಂತೆ ಕಿರೀಟ ತೊಟ್ಟ ನನಗಾಗ ಭಾಸವಾಗುತ್ತಿತ್ತು.  ಆದರೆ ನನ್ನ ಭ್ರಮೆಯ ಪ್ರಪಂಚ ಕರಗಿದ್ದು ನಾಟಕದ ಮರುದಿನ ಬೆಳಗ್ಗೆ, ನಾನು ಅಮ್ಮನನ್ನು ನಾಟಕಕ್ಕಾಗಿ ಕಾಡಿಬೇಡಿ ತಂದಿದ್ದ ರೇಷ್ಮೆಸೀರೆ ಕಾಣಿಸುವುದಿಲ್ಲ ಎಂಬ ಸತ್ಯ ತಿಳಿದಾಗ........

(ಮುಂದುವರಿಯುವುದು)

ಶಕುಂತಲಾ ಕಿಣಿ ಬರೆಯುವ ‘ ಬಳ್ಳಂಬೆಟ್ಟಿನ ಬಾಲ್ಯಕಾಲ’ ಸರಣಿ ಮೊದಲಿಂದ ಓದಲು ಇಲ್ಲಿ ಕ್ಲಿಕ್ ಮಾಡಿ 

 

ಪುಟದ ಮೊದಲಿಗೆ
 
Votes:  1     Rating: 5    
 
 
ಸಂಬಂಧಿಸಿದ ಲೇಖನಗಳು
  ತುಳು ಜನಪದರ ಸಿರಿಕೃಷ್ಣ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಮೆಸೊ ಅಮೆರಿಕಾದ ಮಯಾ ಲಿಪಿ:ಅಪ್ಪಾಜಿರಾಯರ ಸರಣಿ
  ನಾನು ಗಂಡ ಅವಳು ಹೆಂಡತಿ!:ಮೂರನೇ ಕಿವಿಯ ಪುಟಗಳು ೧೧
  ಭೂತನ ಕಾಡಲ್ಲಿ ತೀರಿದ ಅಪ್ಪ:ರಾಜೇಶ್ವರಿ ಕಥನ ೧೧
  ತುಳುಭೂತಗಳ ನಡುವೆ ಗೌತಮ ಬುದ್ಧ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಬೆಂಗಳೂರಿನ ಕಾಲೇಜು ದಿನಗಳು:ರಾಜೇಶ್ವರಿ ಕಥನ ೧೦
  ಕಾಮರಾಜಕೂಟದ ಕುರಿತು:ತೋಳ್ಪಾಡಿ ಸೌಂದರ್ಯ ಲಹರಿ
  ನಾಗಮಂಡಲವೆಂಬ ನೃತ್ಯಸೇವೆ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ನಿರಂಜನ ಜಡವಸ್ತುಗಳ ಹೆಸರು ಕಲಿತ:‘ಮೂರನೇ ಕಿವಿ’ಯ ಪುಟಗಳು
  ಕನಸಿನ ಮನೆ:ರಾಜೇಶ್ವರಿ ‘ನಂಗೆ ಅಮ್ಮ ಹೇಳಿದ್ದು’ ಕಥನ ೯
  ತುಳುನಾಡಿನ ಕನ್ನಡಿಗ ಭೂತಗಳು:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಕ್ಯೂನಿಫಾರಂ ಲಿಪಿ:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಅವಳು ಅಮ್ಮ ಮಾತ್ರ: ಮೂರನೇ ಕಿವಿಯ ಪುಟಗಳು ೯
  ವಿವಾಹ ಪ್ರಕರಣ: ನಾರಾಯಣ ಯಾಜಿ ಬರೆಯುವ ಅಂಬೋಪಾಖ್ಯಾನ
  ಭೂತವಾದ ಬೆಳ್ಳಾರೆಯ ರಾಜಕುಮಾರ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಈಜಿಪ್ಟಿನ ಚಿತ್ರ ಲಿಪಿ:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ನಾರಾಯಣ ಯಾಜಿ ಬರೆದ ಅಂಬೋಪಾಖ್ಯಾನ
  ಮನೆಗೆ ಬಂದರು ಗಾಂಧೀಜಿ:ರಾಜೇಶ್ವರಿ ತೇಜಸ್ವಿ ಕಥನ
  ಅವಳಿವೀರ ಕೋಟಿಚೆನ್ನಯರು:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಈಜಿಪ್ಟಿನ ರೊಜೆಟ್ಟಾ ಶಿಲೆ:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಕತ್ತಲೆ ತಂದ ದೀಪಾವಳಿ: ‘ಮೂರನೇ ಕಿವಿ’ ಮುಂದುವರಿದ ಪುಟಗಳು
  ಅಪ್ಪನ ಮನೆ ತುಂಬಿಸಿದ್ದು :ರಾಜೇಶ್ವರಿ ಕಥನ ೭
  ಲಜ್ಜೆಯ ಬೀಜಕ್ಕೆ ನಾಚುಕೆಯ ನೀರು:ತೋಳ್ಪಾಡಿ ಸೌಂದರ್ಯ ಲಹರಿ
  ಡಾ.ಕೆ.ವಿ. ರಮೇಶ್‌:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಹನುಮಂತ ಭೂತದ ಕೋಲ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಹರಕೆಯ ಮೊರೆ ಹೋಗಿ:‘ಮೂರನೇ ಕಿವಿ’ ಯ ಪುಟಗಳು ೮
  ದೊಡ್ಡಮನೆ ಸಾಕಮ್ಮನವರು:ರಾಜೇಶ್ವರಿ ತೇಜಸ್ವಿ ಕಥನ
  ಕಬಕ ಪುತ್ತೂರಿನ ಕುಂಞಿ ಭೂತ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಪ್ರಪಂಚದ ಅತಿ ಪುರಾತನ ಬರಹ:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ನಕಲಿ ವೈದ್ಯನ ವೃತ್ತಾಂತ:‘ಮೂರನೇ ಕಿವಿ’ ಮುಂದುವರಿದ ಪುಟಗಳು
  ಅಮ್ಮನ ಮದುವೆ :ರಾಜೇಶ್ವರಿ ‘ ನಂಗೆ ಅಮ್ಮ ಹೇಳಿದ್ದು’ ಕಥನ
  ಕನ್ನಡದ ಪುರುಷ ಭೂತ:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಸಜೀವಿಗಳೂ ನಿರ್ಜೀವಿಗಳೂ:‘ಮೂರನೇ ಕಿವಿ’ ಯ ಪುಟಗಳು
  ಪೆಜತ್ತಾಯರ ರಕ್ಷಾ ಸರಣಿಯ ಕೊನೇ ಕಂತು
  ಮೌನ ಮಾತಾಗಿ ಮಂತ್ರವಾಗುವ ಪರಿ:ತೋಳ್ಪಾಡಿ ಸೌಂದರ್ಯ ಲಹರಿ
  ‘ಹಣೆ ಬರಹ’:ರಾಜೇಶ್ವರಿ ಬರೆವ ‘ ನಂಗೆ ಅಮ್ಮ ಹೇಳಿದ್ದು’ ಕಥನ
  ತುಳುನಾಡಿನ ಕುಲೆ ಭೂತಗಳು:ಲಕ್ಷ್ಮೀ.ಜಿ.ಪ್ರಸಾದ್ ಸರಣಿ
  ಶಂ.ಬಾ ಜೋಷಿಯವರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಊಟವೂ ಪಾಠವಾದ ಬಗೆ:`ಮೂರನೇ ಕಿವಿ’ ಯ ಪುಟಗಳು
  ರಕ್ಷಾನ ಸಂಗಾತಿಗಳು:ಪೆಜತ್ತಾಯರ ಸರಣಿ
  ರೆವರೆಂಡ್ ಉತ್ತಂಗಿ ಚೆನ್ನಪ್ಪನವರು:ಅಪ್ಪಾಜಿರಾಯರ ಸರಣಿ
  ಅಜ್ಜಿ ಭೂತ ಮತ್ತು ಕೂಜಿಲು:ಲಕ್ಷ್ಮೀ.ಜಿ. ಪ್ರಸಾದ್ ಸರಣಿ
  ಮಗುವಿನಲ್ಲಿ ತಾಯಿ ತನ್ನನ್ನೇ ನಿಟ್ಟಿಸುವಂತೆ:ಸೌಂದರ್ಯ ಲಹರಿ
  ಅನುನಾಸಿಕ ಕಲಿಯುವ `ಸರ್ಕಸ್':ಮೂರನೇ ಕಿವಿ’ ಯ ಪುಟಗಳು ೪
  ರಕ್ಷಾ ಮತ್ತು ಡಾಗ್ ಶೋ:ಪೆಜತ್ತಾಯರ ಸರಣಿ
  ಜನಪ್ರಿಯದೈವ ಕೊರಗ ತನಿಯ:ಲಕ್ಷ್ಮೀ.ಜಿ. ಪ್ರಸಾದ್ ಸರಣಿ
  ಡಾ.ಕೇಶವ ಅಭಿಶಂಕರ್:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ಅಂತೂ ಅಪ್ಪ ಎಂದ ಮಗ!:ಮೂರನೇ ಕಿವಿ’ ಯ ಪುಟಗಳು ೩
  ರಕ್ಷಾನ ವಾಹನ ಪ್ರೀತಿ:ಪೆಜತ್ತಾಯರ ಸರಣಿ
  ಅಗ್ನಿ ಚಾಮುಂಡಿ ಗುಳಿಗ:ಲಕ್ಷ್ಮೀ.ಜಿ. ಪ್ರಸಾದ್ ಸರಣಿ
  ಡಾ.ಚಿದಾನಂದ ಮೂರ್ತಿಗಳು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ
  ನಿರಂಜನನ ಕಲಿಕೆ ಶುರುವಾಯ್ತು:‘ಮೂರನೇ ಕಿವಿ’ ಯ ಪುಟಗಳು
  ಬಂದೂಕು ಕಸಿಯುವ ನಾಯಿ:ಪೆಜತ್ತಾಯರ ರಕ್ಷಾ ಸರಣಿ
  ಕಲ್ಕುಡ ಕಲ್ಲುರ್ಟಿ ಅವಳಿ ಭೂತಗಳು:ಲಕ್ಷ್ಮೀ ಪ್ರಸಾದ್ ಸರಣಿ
  ಡಾ.ಸೂರ್ಯನಾಥ್ ಕಾಮತರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ