ಜೂನ್ ೧೯, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ವೆಂಕಟಸ್ವಾಮಿ ಅಂಡಮಾನ್ ೪: ಕಾಲಾಪಾನಿ ಎಂಬ ಜೇಲುವಾಸ    
ಎಂ.ವೆಂಕಟಸ್ವಾಮಿ
ಗುರುವಾರ, 15 ಸೆಪ್ಟೆಂಬರ್ 2011 (04:44 IST)
ಸೆಲ್ಲೂಲರ್ ಜೈಲು ಮುಂದಿರುವ ಕಟ್ಟಡ

೧೭೯೭ರಲ್ಲಿ ಲಾರ್ಡ್ ಕೇನಿಂಗ್ ತನ್ನ ನಿಕಟವರ್ತಿ ಫ್ರೆಡ್ರಿಕ್ ಜೆ ಮೌಂಟ್, ಇಂಡಿಯನ್ ಜೈಲುಗಳ ಇನ್ಸ್‌ಪೆಕ್ಟರ್‌ರನ್ನು ಅಂಡಮಾನ್ ದ್ವೀಪಗಳ ಸಮೀಕ್ಷೆ ನಡೆಸುವಂತೆ ಆಜ್ಞೆ ನೀಡಿದ. ಆತ ದೊಡ್ಡ ಸ್ಟೀಮರ್ ‘ಪ್ಲೂಟೊ’ನಲ್ಲಿ ಹಲವು ಅಧಿಕಾರಿಗಳೊಂದಿಗೆ ಸಮೀಕ್ಷೆ ನಡೆಸಿ ಕೊನೆಗೆ ಎಲ್ಲಾ ದ್ವೀಪಗಳಲ್ಲೂ ಪೋರ್ಟ್‌ಬ್ಲೇರ್ ದ್ವೀಪವೆ ಜೈಲು ಕಟ್ಟಲು ಸರಿಯಾದ ದ್ವೀಪ ಎಂದು ವರದಿಯಲ್ಲಿ ತಿಳಿಸಿದ. ಜೊತೆಗೆ ‘ಅಂಡಮಾನ್ ಐಲ್ಯಾಂಡರ‍್ಸ್’ ಎಂಬ ಪುಸ್ತಕವನ್ನೂ ರಚಿಸಿದ. ಇದರಲ್ಲಿ ಆದಿವಾಸಿಗಳ ಬಗ್ಗೆ ಅಧಿಕೃತ ವಿಷಯಗಳನ್ನು ದಾಖಲೆ ಮಾಡಿದ.

ಆದಿಮಾನವರು, ರಾಸ್ ದ್ವೀಪದ ಹತ್ತಿರದಲ್ಲಿದ್ದ ಪೋರ್ಟ್‌ಬ್ಲೇರ್‌ನ ಅಬರ್‌ಡೀಸ್ ಬಸ್ತಿ ಮೇಲೆ ದಾಳಿ ಮಾಡಿ ಬ್ರಿಟಿಷರನ್ನು ಸಾಯಿಸಿದರು. ನಿರಂತರವಾಗಿ ಆಂದೋಲನಕಾರರ ಗುಂಪುಗಳನ್ನು ಇಲ್ಲಿಗೆ ಕರೆದುತರಲಾಗುತ್ತಿದ್ದು ವಸತಿ ಮತ್ತು ಊಟದ ವ್ಯವಸ್ಥೆಯನ್ನು ಸರಿಯಾಗಿ ಮಾಡಿರಲಿಲ್ಲ. ಜೊತೆಗೆ ಆದಿಮಾನವರ ದಾಳಿಯಿಂದ ಆಂದೋಲನಕಾರರನ್ನು ರಕ್ಷಿಸಲು ಸಾಧ್ಯವಾಗದೆ ಹೊಸ ಜೈಲನ್ನು ಕಟ್ಟಲು ಯೋಚಿಸಲಾಯಿತು. ಜೇಮ್ಸ್ ಪೆಟ್ಟಿಸನ್ ವಾಕರ್ ಪೋರ್ಟ್‌ಬ್ಲೇರ್‌ನ್ನು ಮೊದಲ ಜೈಲು ಸೂಪರಿನ್ಟಿಂಡೆಂಟ್ ಆಗಿ ನೇಮಿಸಲಾಯಿತು. ವಾಕರ್ ನಾಲ್ಕು ಬ್ರಿಟಿಷ್ ಅಧಿಕಾರಿಗಳು ಮತ್ತು ೭೩೩ ಕೈದಿಗಳೊಂದಿಗೆ ೧೦ ಮಾರ್ಚ್ ೧೮೫೮ರಂದು ಇಲ್ಲಿಗೆ ಆಗಮಿಸಿದ. ಈತನ ಜೊತೆಗೆ ಮೌಂಟ್ ಎಂಬ ವೈದ್ಯನೂ ಬಂದಿದ್ದ.     

ದೇಶದಲ್ಲಿ ಮೊದಲ ಬಾರಿಗೆ ೧೮೫೭ರಲ್ಲಿ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿ ಕಾಣಿಸಿಕೊಂಡಿತು. ಮುಂದಿನ ದಿನಗಳಲ್ಲಿ ಇದು ದೊಡ್ಡದಾಗಿ ಬೆಳೆಯುವ ಸೂಚನೆಗಳನ್ನು ಕಂಡ ಬ್ರಿಟಿಷರು ಈ ಚಳುವಳಿಯನ್ನು ತಡೆಗಟ್ಟಲು ಮತ್ತು ಆಂದೋಲನಕಾರರನ್ನು ಹತ್ತಿಕ್ಕಲು ಬಂಗಾಳ ಕೊಲ್ಲಿಯ ಮಧ್ಯೆ ಪೋರ್ಟ್‌ಬ್ಲೇರ್ ದ್ವೀಪದಲ್ಲಿ ದೊಡ್ಡದಾದ ಸೆಲ್ಯೂಲರ್ ಜೈಲನ್ನು ಕಟ್ಟಲು ಯೋಜನೆಯನ್ನು ರೂಪಿಸಿದರು. ಮುಂದೆ ಇದು ಸುಮಾರು ೯೦ ವರ್ಷಗಳ ಕಾಲ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಅತ್ಯಂತ ಹೇಯ ಹಿಂಸೆ ನೀಡಿದ ಮತ್ತು ದುಃಸ್ವಪ್ನಕಾರಕ ಜೈಲಾಗಿ, ಸೆಲ್ಲೂಲರ್ ಜೈಲ್ ಅಥವಾ ಕಾಲಾಪಾನಿ ಎಂದೇ ಕುಖ್ಯಾತಿಯಾಯಿತು. ೧೮೫೮ರಲ್ಲಿ ಮೊದಲ ಬಾರಿಗೆ ಇಲ್ಲಿಗೆ ಆಂದೋಲಕಾರರನ್ನು ಹಿಡಿದು ತರಲಾಯಿತು. ಮೊದಲಿಗೆ ಕಟ್ಟಿದ್ದ ಸಣ್ಣಸಣ್ಣ ಕಟ್ಟಡಗಳು ಸಾಲದಾಗಿ ದೊಡ್ಡದಾದ ಜೈಲನ್ನು ಕಟ್ಟಲು ಯೋಚಿಸಲಾಯಿತು.

ನಕ್ಷತ್ರ ಮೀನಿನ ೭ ರೆಕ್ಕೆ ಅಥವಾ ಮೃದ್ವಂಗಿಯ ಟೆಂಟ್ಯಾಕಲ್ಸ್ ಆಕಾರದಲ್ಲಿ ಮೂರು ಅಂತಸ್ತಿನ ೭ ಕಟ್ಟಡಗಳನ್ನು ಕಟ್ಟಲು ೩೦, ಸೆಪ್ಟಂಬರ್ ೧೮೯೬ ರಂದು ಅಡಿಪಾಯ ಹಾಕಲಾಯಿತು. ಸರಿಯಾಗಿ ಹತ್ತು ವರ್ಷಗಳ ನಂತರ ೧೯೦೬ರ ಅಂತ್ಯಕ್ಕೆ ಈ ಜೈಲನ್ನು ಕಟ್ಟಿ ಮುಗಿಸಲಾಯಿತು. ಮೊದಲಿಗೆ ೬೦೦ ಜನರಿಗೆ ಮಾತ್ರ ಜೈಲು ನಿರ್ಮಿಸಲು ಯೋಚಿಸಿ ಅದರ ವೆಚ್ಚ ೫,೧೭,೩೫೨ ರೂಪಾಯಿಗಳೆಂದು ಲೆಕ್ಕ ಹಾಕಲಾಗಿದ್ದು ಇದರಲ್ಲಿ ಕಬ್ಬಿಣ, ಕಲ್ಲು-ಮಣ್ಣಿನ ವೆಚ್ಚವನ್ನು ಸೇರಿಸಿರಲಿಲ್ಲ. ಇದರ ಜೊತೆಗೆ ೬೦೦ ಜನ ಕೈದಿಗಳು ಮತ್ತು ಕೆಲವು ಕೆಳದರ್ಜೆ ಉಸ್ತುವಾರಿ ಅಧಿಕಾರಿಗಳ ಸಂಬಳವನ್ನು ಸೇರಿಸಿರಲಿಲ್ಲ. ಪಕ್ಕದ ವೈಪರ್ ದ್ವೀಪದಲ್ಲಿದ್ದ ಕೈದಿಗಳಿಂದ ಪ್ರತಿ ತಿಂಗಳು ೨೦,೦೦೦ ಚದರ ಅಡಿ ಶಿಲೆಗಳನ್ನು ಕಟ್ಟಡಕ್ಕಾಗಿ ಒಡೆದು ತರಲು ದಕ್ಷಿಣ ದ್ವೀಪ ಸಮೂಹಗಳ ಅಧಿಕಾರಿಗೆ ಒಪ್ಪಿಸಲಾಯಿತು. ಇದು ಸಾಲದೆಂಬಂತೆ ಪಕ್ಕದ ಬರ್ಮಾ ದೇಶದಿಂದ ಆಗಾಧ ಕಲ್ಲು ಮತ್ತು ಇಟ್ಟಿಗೆಗಳನ್ನು ತರಿಸಲಾಯಿತು. ಜೊತೆಗೆ ಕಟ್ಟಡದ ಕೆಲಸವನ್ನು ತೀವ್ರಗೊಳಿಸಲು ಸುತ್ತಮುತ್ತಲ ದ್ವೀಪಗಳಲ್ಲಿದ್ದ ಕೈದಿಗಳನ್ನು ಕರೆದು ತರಲಾಗಿತ್ತು. ಮೆಕ್ ಕ್ಯೂಲಿನ್ ಎಂಬ ಉಪ ಎಂಜಿನಿಯರನ್ನು ಮೊದಲಿಗೆ ಕಟ್ಟಡದ ಉಸ್ತುವಾರಿ ನೋಡಿಕೊಳ್ಳಲು ನಿಯೋಜಿಸಲಾಗಿತ್ತು.ಏಳು ಕಟ್ಟಡಗಳ ಹಳೆ ಸೆಲ್ಲೂಲರ್ ಜೈಲು

ಪ್ರತಿ ಕೊಠಡಿ ೧೩.೫x೭ ಅಡಿ ಉದ್ದ ಅಗಲ ಮತ್ತು ೧೦ ಅಡಿ ಎತ್ತರವಾಗಿದ್ದು ಹಿಂದಿನ ಗೋಡೆಯಲ್ಲಿ ೩x೧ ಅಡಿ ಅಗಲದ ಕಿಟಿಕಿಯನ್ನು ಮತ್ತು ಮುಂದೆ ಗಟ್ಟಿಯಾದ ಕಬ್ಬಿಣ ಗ್ರಿಲ್ ಬಾಗಿಲುಗಳನ್ನು ಇಡಲಾಯಿತು. ಎಲ್ಲಾ ೭ ಕಟ್ಟಡಗಳು ಕೂಡುವ ಮಧ್ಯೆ ಎತ್ತರದ ಗೋಪುರ ಇದ್ದು ಕಾವಲುಗಾರರು ಇಲ್ಲಿಂದ ಎಲ್ಲಾ ಕಡೆಯೂ ವೀಕ್ಷಿಸಬಹುದಾಗಿತ್ತು. ವಿಶೇಷವೆಂದರೆ ಪೂರ್ತಿ ಕಟ್ಟಡದ ಮುಂದಿನ ಗೋಡೆಗಳನ್ನು ಹಿಂದಿನ ಕಟ್ಟಡದಿಂದ ಪೂರ್ಣವಾಗಿ ನೋಡುವಂತೆ ರೂಪಿಸಲಾಗಿತ್ತು. ಒಟ್ಟು ೨೧ ಅಂತಸ್ತುಗಳಲ್ಲಿ ರಾತ್ರಿ ಹೊತ್ತು ೨೧ ಕಾವಲುಗಾರರನ್ನು ನೇಮಿಸಲಾಗಿದ್ದು, ಮಧ್ಯದ ಎತ್ತರದ ಗೋಪುರದಲ್ಲಿ ಹಗಲೂ ರಾತ್ರಿ ವಿಶೇಷ ಕಾವಲು ಪಡೆ ಇರುತ್ತಿತ್ತು. ಸಾಯಂಕಾಲದಿಂದ ಬೆಳಗಿನವರೆಗೂ ೧೨ ಗಂಟೆ ಕಾಲ ಕೈದಿಗಳನ್ನು ಕೊಠಡಿಗಳಲ್ಲಿ ಕೂಡುಹಾಕಲಾಗಿ ಆ ಸಮಯದಲ್ಲಿ ಮಲ ಮೂತ್ರ ಬಂದರೆ ಕೈದಿಗಳು ಒಳಗೆ ಹೋಗುವಂತಿರಲಿಲ್ಲ. ಕಪ್ಪೆಯಂತೆ ಹೊರಕ್ಕೆ ತೆವಳಿಕೊಂಡು ಬಂದು ಕಾವಲುಗಾರನ ಮೂಲಕ ಜಮಾದಾರನಿಗೆ ವಿಷಯ ತಿಳಿಸಿ ಅವನ ಅಪ್ಪಣೆ ಪಡೆದ ಮೇಲೆ ಹೊರಗೆ ಬಂದು ಮಲ ಮೂತ್ರ ವಿಸರ್ಜನೆ ಮಾಡಬೇಕಾಗಿತ್ತು. ಇದಕ್ಕಾಗಿ ಅವರಿಗೆ ಬೆಳಿಗ್ಗೆ ಜೈಲರ್‌ನಿಂದ ಶಿಕ್ಷೆ ಕಾದಿರುತ್ತಿತ್ತು. 

ಈ ಜೈಲಿಗೆ ಡೆವಿಡ್ ಬೆರ್ರಿ ಎಂಬ ರಾಕ್ಷಸನಂತ ಜೈಲರ್ ಇದ್ದು, ಆತ ‘ನಾನೇ ಇಲ್ಲಿ ದೇವರು ದೆವ್ವ ಎಲ್ಲ. ನನ್ನ ಆಜ್ಞೆಯನ್ನು ಇಲ್ಲಿ ದೇವರೂ ಮೀರಲಾರ’ ಎಂದು ಸ್ವಾತಂತ್ರ್ಯ ಹೋರಾಟಗಾರರನ್ನು ಚಿತ್ರ ಹಿಂಸೆಗೆ ಒಳಪಡಿಸುತ್ತಿದ್ದ. ತೆಂಗಿನಕಾಯಿ ಎಣ್ಣೆ ತೆಗೆಯುವುದು, ಹುಕ್ಕಾ ಶೆಲ್ಸ್ ಮಾಡುವುದು. ಹಗ್ಗ ಹೆಣೆಯುವುದು, ಬೆಟ್ಟ ಕಡೆಯುವುದು, ಹಳ್ಳಗಳನ್ನು ತುಂಬುವುದು, ಕಲ್ಲು ಒಡೆಯುವುದು, ಇಟ್ಟಿಗೆ ಮಾಡುವುದು, ಮರಗಳಿಂದ ರಬ್ಬರ್ ಹಾಲು ತೆಗೆಯುವುದು ಇತ್ಯಾದಿ ಕೆಲಸಗಳನ್ನು ಅವರು ನಿರಂತರವಾಗಿ ಮಾಡಬೇಕಾಗಿತ್ತು. ಇಲ್ಲಿಗೆ ಬಂದ ಕೈದಿಗಳನ್ನು ೬ ತಿಂಗಳು ತೀವ್ರವಾದ ಶಿಕ್ಷೆಗೆ ಒಳಪಡಿಸಲಾಗಿ, ಮುಂದೆ ೧೮ ತಿಂಗಳ ಕಾಲ ಬೇರೆ ದ್ವೀಪಗಳ ಜೈಲಿಗೆ ವರ್ಗಾಯಿಸಲಾಗುತ್ತಿತ್ತು. ಅನಂತರ ೩ ವರ್ಷ ರಾತ್ರಿ ವೇಳೆ ಬ್ಯಾರಕ್‌ಗಳಲ್ಲಿ ಮಲಗಿಸಿ ಅವರಿಂದ ದಿನವೆಲ್ಲ ದುಡಿಸಲಾಗುತ್ತಿತ್ತು. ಮುಂದೆ ೫ ವರ್ಷ ಕಾಲ ಕೂಲಿ ಆಳುಗಳಾಗಿ ದುಡಿತ. ಈ ಸಮಯದಲ್ಲಿ ಸ್ವಲ್ಪ ಕೂಲಿ ದೊರಕುತ್ತಿತ್ತು. ಒಟ್ಟು ೧೦ ವರ್ಷ ಕಾಲ ತೀವ್ರ ರೀತಿಯ ಶಿಕ್ಷೆಗಳನ್ನು ಅನುಭವಿಸಿದ ಮೇಲೆ ಬ್ರಿಟಿಷರು ತೋರಿಸಿದ ಯಾವುದಾದರು ಒಂದು ಸ್ಥಳದಲ್ಲಿ ಅವರು ಸ್ವತಂತ್ರವಾಗಿ ಬದುಕಬಹುದಾಗಿತ್ತು. ಅಲ್ಲಿ ಅವರಿಗೆ ಒಂದಿಷ್ಟು ಬಂಜರು ಭೂಮಿ ಕೊಡಲಾಗುತ್ತಿತ್ತು. ಇಲ್ಲಿ ಅವರು ಆಕಳು ಇಟ್ಟುಕೊಂಡು, ಮದುವೆ ಕೂಡ ಮಾಡಿಕೊಳ್ಳಬಹುದಾಗಿತ್ತು. ಆದರೆ ಬ್ರಿಟಿಷರ ಅಪ್ಪಣೆ ಇಲ್ಲದೆ ಆ ಸ್ಥಳವನ್ನು ಅವರು ಬಿಟ್ಟು ಹೋಗುವಂತಿರಲಿಲ್ಲ. ೨೫ ವರ್ಷಗಳು ತುಂಬಿದ ಮೇಲೆಯೇ ಅವರಿಗೆ ಪೂರ್ಣ ಸ್ವಾತಂತ್ರ ದೊರಕುತ್ತಿತ್ತು.

ಸೆಲ್ಲೂಲರ್ ಜೈಲಿನ ಒಂದು ಭಾಗದಲ್ಲಿರುವ ಜೈಲು ಸ್ಮಾರಕ೧೯೪೧ರಲ್ಲಿ ಈ ವಲಯದಲ್ಲಿ ಸಂಭವಿಸಿದ ದೊಡ್ಡ ಭೂಕಂಪನದಿಂದ ಈ ಕಾಲಾಪಾನಿ ಜೈಲು ಅನೇಕ ಕಡೆ ಬಿರುಕು ಬಿಟ್ಟುಕೊಂಡಿತು. ಅನಂತರ ಜಪಾನ್ ಸೈನಿಕರ ದಾಳಿಯಿಂದ (೧೯೪೨-೧೯೪೫) ಈ ಜೈಲು ಕಟ್ಟಡ ಪೂರ್ಣವಾಗಿ ಜಖಂಗೊಂಡಿತ್ತು. ನಕ್ಷತ್ರ ಮೀನಿನ ಆಕಾರದಲ್ಲಿ ಕಟ್ಟಿದ್ದ ೭ ಸಾಲು ಕಟ್ಟಡಗಳಲ್ಲಿ ೪ ಕಟ್ಟಡಗಳನ್ನು ಪೂರ್ಣವಾಗಿ ಕೆಡವಿ ೩ ಕಟ್ಟಡಗಳನ್ನು ಮಾತ್ರ ಉಳಿಸಿಕೊಳ್ಳಲಾಯಿತು. ಇವುಗಳ ಜೊತೆಗೆ ಪ್ರಸ್ತುತ ಮುಂದಿನ ಮುಖ್ಯ ದ್ವಾರ ಇರುವ ಕಟ್ಟಡ ಮಾತ್ರ ಉಳಿದುಕೊಂಡಿದೆ. ಅಂಡಮಾನ್-ನಿಕೋಬಾರ್ ದ್ವೀಪಗಳ ಮೇಲೆ ಆಕ್ರಮಣ ಮಾಡಿದ ಜಪಾನ್ ಸೈನ್ಯ ಎಲ್ಲವನ್ನು ದ್ವಂಸ ಮಾಡಿ ಸಿಕ್ಕಿದವರನ್ನು ಹಿಡಿದು ಹಿಂಸಿಸುತ್ತ ಸಾವಿರಾರು ಜನರನ್ನು ಸಾಯಿಸಿತ್ತು. ಬ್ರಿಟಿಷರು ಜೋಪಾನವಾಗಿ ಕಾಯ್ದಿಟ್ಟಿದ್ದ ಲೆಕ್ಕಪತ್ರಗಳನ್ನೆಲ್ಲ ಸುಟ್ಟು ಹಾಕಲಾಯಿತು. ೧೯೪೫ರಲ್ಲಿ ಸುಭಾಷ್ ಚಂದ್ರ ಬೋಸ್ ಜಪಾನ್ ತಲುಪಿ ಅಲ್ಲಿನ ನಾಯಕರನ್ನು ಸಂಧಿಸಿದ ಮೇಲೆ ಜಪಾನ್ ತನ್ನ ದಾಳಿಯನ್ನು ಹಿಂದಕ್ಕೆ ತೆಗೆದುಕೊಂಡು ಈ ಪ್ರದೇಶವನ್ನು ಮುಕ್ತಿಗೊಳಿಸಿತು.  

೧೧ ಪೆಬ್ರವರಿ, ೧೯೭೯ರಂದು ಅಂದಿನ ಪ್ರದಾನಿ ಮಂತ್ರಿ ಶ್ರೀ ಮುರಾರ್ಜಿ ದೇಸಾಯಿ ಅವರ ಕಾಲದಲ್ಲಿ ಈ ಜೈಲನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಪರಿವರ್ತಿಸಲಾಯಿತು. ಮಧ್ಯದ ಜೈಲು ಕಟ್ಟಡದ ಎರಡನೇ ಅಂತಸ್ತಿನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತ ಚಿತ್ರ ಹಿಂಸೆಗೆ ಗುರಿಯಾಗಿ ಇಲ್ಲಿ ಪ್ರಾಣ ತ್ಯಾಗ ಮಾಡಿದ ೩೩೬ ಹೋರಾಟಗಾರರ ಹೆಸರುಗಳನ್ನು ಕೆತ್ತಲಾಗಿದೆ. ಜೈಲು ಕಟ್ಟುವುದಕ್ಕಿಂತ ಮುಂಚೆ ಮೊದಲ ಬಾರಿಗೆ ಭಾರತದಿಂದ ಇಲ್ಲಿಗೆ ಕರೆದು ತಂದ ೨೨೦ ಕೈದಿಗಳು ರಾತ್ರೋರಾತ್ರಿ ಪೋರ್ಟ್‌ಬ್ಲೇರ್ ದ್ವೀಪದಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿ ೧೪೦ ಜನರು ಪ್ರಾಣ ಕಳೆದುಕೊಂಡರು ಎನ್ನಲಾಗಿದೆ. ಅವರೆಲ್ಲ ಸಮುದ್ರಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿರಬೇಕು, ಇಲ್ಲ ಸುತ್ತಮುತ್ತಲಿನ ದ್ವೀಪಗಳಲ್ಲಿದ್ದ ಆದಿಮಾನವರ ವಿಷ ಬಾಣಗಳ ದಾಳಿಯಿಂದ ಸತ್ತಿರಬೇಕು ಎನ್ನಲಾಗಿದೆ. ಬ್ರಿಟಿಷರ ಕೈಗಳಿಗೆ ಸಿಕ್ಕಿದ ಉಳಿದ ೮೦ ಜನರನ್ನು ಒಂದೇ ದಿನ ನೇಣುಗಂಭಕ್ಕೆ ಏರಿಸಿ ಸಾಯಿಸಲಾಯಿತು. ೯೦ ವರ್ಷಗಳ ಸುದೀರ್ಘ ಹಿಂಸೆ ನಡೆಸಿದ ಬ್ರಿಟಿಷರು ಒಟ್ಟು ೭೫೦ಕ್ಕಿಂತ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ಇಲ್ಲಿ ನೇಣಿನ ಕುಣಿಕೆಗೆ ಏರಿಸಿದ್ದಾರೆ. ಈ ಜೈಲು ಕಟ್ಟಡಗಳ ಮಧ್ಯೆ ಕಟ್ಟಿರುವ ಸಣ್ಣ ಸ್ಮಾರಕದಲ್ಲಿ ಅಂದಿನ ನಾಯಕರು ಮತ್ತು ಬ್ರಿಟಿಷ್ ಕಾರ್ಯವೈಖರಿ ಬಿಂಬಿಸುವ ಕಪ್ಪು ಬಿಳುಪಿನ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಪ್ರತಿ ಸಾಯಂಕಾಲ ಜೈಲು ಗೋಡೆಗಳ ಮಧ್ಯೆ ಒಂದು ಗಂಟೆ ಹಿಂದಿ ಮತ್ತು ಒಂದು ಗಂಟೆ ಇಂಗ್ಲಿಷ್ ಭಾಷೆಗಳಲ್ಲಿ ಕತ್ತಲು ಬೆಳಕಿನ ನಡುವೆ ಜೈಲುಗೋಡೆಗಳ ಮಧ್ಯೆ ಆ ಕಾಲದಲ್ಲಿ ನಡೆದ ಭರ್ಬರ ಕೃತ್ಯಗಳ ಅಣಕು ಪ್ರದರ್ಶನವನ್ನು ತೋರಿಸಲಾಗುತ್ತದೆ.

ಒಟ್ಟಿನಲ್ಲಿ ೧೮೫೮ರಿಂದ ೧೯೪೭ರವರೆಗೆ ೯೦ ವರ್ಷಗಳಲ್ಲಿ ನೂರಾರು ದೇಶಪ್ರೇಮಿಗಳನ್ನು ಆಹುತಿ ತೆಗೆದುಕೊಂಡ ಈ ಕಾಲಾಪಾನಿಯ ಮಧ್ಯದಲ್ಲಿರುವ ಸೆಲ್ಲೂಲರ್ ಜೈಲಿನ ಇತಿಹಾಸ ಕೇಳಿದರೆ ಇಂದಿಗೂ ಮೈ ಜುಮ್ಮೆನಿಸುತ್ತದೆ. ಪ್ರತಿ ಭಾರತೀಯನೂ ಒಮ್ಮೆ ಈ ಕಾಲಾಪಾನಿಯ ದ್ವೀಪಗಳನ್ನು ನೋಡಬೇಕಾಗಿದೆ. ಭಾರತದ ಭೌಗೋಳಿಕ ವಿಸ್ತೀರ್ಣದ ಬಗ್ಗೆ ಯಾರನ್ನಾದರು ಕೇಳಿದಾಗ, ಕಾಶ್ಮೀರದಿಂದ ಕನ್ಯಾಕುಮಾರಿ ಅಟಕ್‌ನಿಂದ (ಗುಜರಾತ್) ಕಟಕ್ ಎನ್ನುತ್ತಾರೆ. ಇದು ಶುದ್ಧ ಸುಳ್ಳಿನ ಮಾತು. ಪೂರ್ವದಲ್ಲಿ ಅರುಣನು ಚುಂಬಿಸುವ ಅರುಣಾಚಲ ಪ್ರದೇಶವಿದ್ದರೆ, ದಕ್ಷಿಣದ ತುತ್ತ ತುದಿಯಲ್ಲಿ ಇರುವುದು ಶ್ರೀಲಂಕಾ ದ್ವೀಪಕ್ಕಿಂತ ಕೆಳಗಿರುವ ನಿಕೋಬಾರ್‌ನ ಇಂದಿರಾ ಪಾಯಿಂಟ್. ಇಲ್ಲಿಂದ ಕೇವಲ ೧೪೦ ಕಿ.ಮೀ ದೂರದ ದಾರಿಯನ್ನು ಸಮುದ್ರದ ಮೇಲೆ ಪಯಣಿಸಿದರೆ ಮಲೇಷ್ಯಾ ದೇಶ ದೊರಕುತ್ತದೆ.  

***

ಜಪಾನ್ ಸೈನಿಕರು ಅಂಡಮಾನ್ ದ್ವೀಪಗಳ ಮೇಲೆ ಹೇಯ ಕೃತ್ಯವನ್ನು ಮಾಡಿದರು. ವಿದ್ಯಾರ್ಥಿಗಳನ್ನು ಜೈಲಿನಲ್ಲಿ ಕೂಡಿಹಾಕಿ ಗುಂಪುಗಳಲ್ಲಿ ಅವರ ಮೇಲೆ ಗುಂಡಿಕ್ಕಿ ಸಾಯಿಸಿದರು. ಬಹಳಷ್ಟು ವಿದ್ಯಾರ್ಥಿ ಮತ್ತು ಸಾರ್ವಜನಿಕರನ್ನು ದೊಡ್ಡ ದೊಡ್ಡ ಹಳ್ಳಗಳನ್ನು ತೋಡಿ ಗುಂಪಾಗಿ ಹೂಳಲಾಯಿತು. ಪೋರ್ಟ್‌ಬ್ಲೇರ್‌ಗೆ ೧೫ ಕಿ.ಮೀ. ದೂರದಲ್ಲಿರುವ ಹೋಫ್ರಿಯೆಗುಂಗ್ ಸ್ಮಾರಕ ಅದಕ್ಕೆ ಸಾಕ್ಷಿಯಾಗಿ ನಿಂತಿದೆ. ಅದೇ ರೀತಿಯ ಸ್ಮಾರಕ ಡಾ. ದಿವಾನ್ ಸಿಂಗ್ ಗುರುದ್ವಾರ ಕೂಡ. ಡಿಸೆಂಬರ್ ೨೯, ೧೯೪೩ ರಿಂದ ಮೂರು ದಿನಗಳು ಕಾಲ ಸೆಲ್ಲೂಲರ್ ಜೈಲನ್ನು ವೀಕ್ಷಿಸಿದ ನೇತಾಜಿ ಯಾವುದೇ ಆಧಾರ ಇಲ್ಲದೆ ಯಾರಿಗೂ ಶಿಕ್ಷೆ ನೀಡಬಾರದೆಂದು ತಾಕೀತು ಮಾಡಿದರು. ನೇತಾಜಿಯ ಬೇಟೆಯ ನಂತರ ಯಾವ ಕೈದಿಯನ್ನೂ ಗಲ್ಲಿಗೆ ಏರಿಸಲಿಲ್ಲ ಎನ್ನಲಾಗುತ್ತದೆ.

ಉಪವಾಸ ಸತ್ಯಾಗ್ರಹಸೆಲ್ಲೂಲರ್ ಜೈಲಿನ ಕೆಲವು ನೋಟಗಳು
ಬ್ರಿಟಿಷರ ಶಿಕ್ಷೆಗಳಿಗೆ ರೋಸಿಹೋದ ಕೈದಿಗಳು ಕೊನೆಗೂ ಮೇ ೧೨, ೧೯೩೩ರಂದು ಆಹಾರ ತ್ಯಜಿಸಿ ಸತ್ಯಾಗ್ರಹ ಮಾಡತೊಡಗಿದರು. ಬ್ರಿಟಿಷ್ ಚೀಫ್ ಕಮಿಷನರ್ ಆಂದೋಲನಕಾರರ ವಿರುದ್ಧ ‘ನಾನು ಅವರ ಬೇಡಿಕೆಗಳಿಗಾಗಿ ಒಂದೇ ಒಂದು ಇಂಚೂ ಬಗ್ಗುವುದಿಲ್ಲ. ಬೇಕಾದರೆ ಅವರ ಹೆಣಗಳು ಸಮುದ್ರದ ಮೇಲೆಲ್ಲಾ ತೇಲಾಡಲಿ’ ಎಂದು ಹೇಳಿಕೆ ನೀಡಿದ. ಸತ್ಯಾಗ್ರಹ ೪೬ ದಿನಗಳು ನಡೆದು ಈ ನಡುವೆ ೩ ಜನರ ಪ್ರಾಣಪಕ್ಷಿ ಹಾರಿಹೋಗಿತ್ತು. ಬ್ರಿಟಿಷರ ಒತ್ತಾಯದಿಂದ ಅವರಿಗೆ ಆಹಾರ ಕೊಡಲು ಹೋಗಿ ಅವರು ಸತ್ತುಹೋಗಿದ್ದರು. ಯಾರಿಗೂ ತಿಳಿಯದಂತೆ ಅವರ ದೇಹಗಳನ್ನು ಸಮುದ್ರಕ್ಕೆ ಎಸೆದಿದ್ದರು. ಈ ವಿಷಯ ಇಡೀ ದೇಶಕ್ಕೆ ತಲುಪಿ, ದೇಶದಲ್ಲೆಲ್ಲ ವಿರೋಧಗಳು ಕಾಣಿಸಿಕೊಂಡವು.

ದೇಶದ ಮೂಲೆಮೂಲೆಯಿಂದಲೂ ಟೆಲಿಗ್ರಾಂಗಳ ಮೂಲಕ ಜನರು ಬ್ರಿಟಿಷರನ್ನು ನಿಂದಿಸಿದರು. ರವಿಂದ್ರನಾಥ್ ಟಾಗೂರ್ ಅವರು ‘ನಿಮ್ಮ ತಾಯಿ ನಾಡು ಹೂ ಬಿರಿಯುವುದನ್ನು ಮರೆಯಲಾರಳು’ ಎಂದು ಟೆಲಿಗ್ರಾಂ ಕಳುಹಿಸಿದ್ದರು. ಕೊನೆಗೂ ಬ್ರಿಟಿಷ್ ಆಡಳಿತ, ಕೈದಿಗಳ ಬೇಡಿಕೆಗಳ ಬಗ್ಗೆ ಯೋಚಿಸಲೇಬೇಕಾಗಿ ಬಂದಿತು. ೧೯೩೩, ಜೂನ್ ೨೬ ರಂದು ಸತ್ಯಾಗ್ರಹವನ್ನು ಹಿಂದಕ್ಕೆ ತೆಗೆದುಕೊಳ್ಳಲಾಯಿತು. ಆಂದೋಲನಕಾರರು ಬೆರೆಯಲು ಅವಕಾಶ ಮಾಡಿಕೊಡುವುದರ ಜೊತೆಗೆ ಓದಲು ದಿನಪತ್ರಿಕೆ, ಪುಸ್ತಕಗಳನ್ನು ನೀಡಲಾಯಿತು. ರಾತ್ರಿ ಹೊತ್ತು ಕೋಣೆಗಳಲ್ಲಿ ದೀಪಗಳನ್ನು ಹಚ್ಚಲಾಯಿತು. ಒಳಾವರಣದಲ್ಲಿ ಕೇರಮ್, ಚೆಸ್, ಚೆಂಡಾಟ, ಸಂಗೀತ ಇತ್ಯಾದಿಗಳಿಗೆ ಅವಕಾಶ ನೀಡಲಾಯಿತು. ಚರಿತ್ರೆ, ಆರ್ಥಿಕತೆ ಇತ್ಯಾದಿಯ ಬಗ್ಗೆ ಪಾಠಗಳನ್ನು ಪ್ರಾರಂಭ ಮಾಡಲಾಯಿತು. ಕೈಬರಹದ ಪತ್ರಿಕೆಯನ್ನು ಪ್ರಾರಂಭಿಸಲಾಯಿತು. ಹಿಂದಿ, ಬೆಂಗಾಳಿ ಮತ್ತು ಇಂಗ್ಲಿಷ್ ಪತ್ರಿಕೆಗಳು ಬರತೊಡಗಿದವು.

ಎರಡನೇ ವಿಶ್ವ ಮಹಾಯುದ್ಧ ನಡೆಯುತ್ತಿದ್ದ ಕಾಲದಲ್ಲಿ ಗ್ರೇಟರ್ ಈಸ್ಟ್ ಏಷ್ಯಾಟಿಕ್ ನೇಷನ್ಸ್ ಅಸೆಂಬ್ಲಿ ೫, ನವೆಂಬರ್ ೧೯೪೩ರಂದು ಟೋಕಿಯೊದಲ್ಲಿ ಪ್ರಾರಂಭವಾಯಿತು. ಈ ಸಭೆಗೆ ಅಜಾದ್ ಹಿಂದ್ ಸರಕಾರದ ಮುಖ್ಯಸ್ಥ ಸುಭಾಷ್ ಚಂದ್ರ ಬೋಸ್‌ರನ್ನು ಜಪಾನ್‌ನ ಮುಖ್ಯಮಂತ್ರಿಗಳಾದ ಜನರಲ್ ಟೊಜೊ ಆಹ್ವಾನಿಸಿದ್ದರು. ಆದರೆ ನೇತಾಜಿ ಅವರು ಅಂಡಮಾನ್-ನಿಕೋಬಾರ್ ದ್ವೀಪಗಳನ್ನು ಅಜಾದ್ ಹಿಂದ್ ಸೈನ್ಯದ ವಶಕ್ಕೆ ನೀಡದಿದ್ದರೆ ನಾನು ಟೋಕಿಯೊ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರು. ೭ ನವೆಂಬರ್ ೧೯೪೩ರಂದು ಟೊಜೊ ಅಂಡಮಾನ್-ನಿಕೋಬಾರ್ ದ್ವೀಪಗಳಿಂದ ನಮ್ಮ ಸೈನ್ಯ ಹೊರಬರುವುದೆಂದು ಹೇಳಿಕೆ ನೀಡಿದ ಮೇಲೆ ನೇತಾಜಿ ಆ ಸಭೆಯಲ್ಲಿ ಪಾಲ್ಗೊಂಡರು. ಭಾರತ ದೇಶ ಬ್ರಿಟಿಷರ ವಶದಲ್ಲಿದ್ದಾಗಲೇ ಈ ದ್ವೀಪಗಳು ಸ್ವಾತಂತ್ರ್ಯ ಪಡೆದುಕೊಂಡಿದ್ದವು.

ಡಿಸೆಂಬರ್ ೨೯, ೧೯೪೩ರಂದು ನೇತಾಜಿ ಪೋರ್ಟ್‌ಬ್ಲೇರ್‌ಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಜಪಾನ್ ಕಮಾಂಡರ್ ಮತ್ತು ಇಂಡಿಯನ್ ಇಂಡಿಪೆಂಡನ್ಸ್ ಲೀಗ್ ಸದಸ್ಯರು ಅವರನ್ನು ಬರಮಾಡಿಕೊಂಡರು. ಮರುದಿನ ೩೦ರಂದು ನೇತಾಜಿ ಸೆಲ್ಲೂಲರ್ ಜೈಲಿನ ಒಳಗೆ ಮತ್ತು ಹೊರಗೆಲ್ಲ ನೋಡಿದರು. ಅವರ ಸುತ್ತಲೂ ರಕ್ಷಣಾ ಸೈನ್ಯವಿದ್ದು ಭಾರತೀಯರನ್ನು ಅವರ ಹತ್ತಿರಕ್ಕೆ ಬಿಡಲಿಲ್ಲ. ಆದರೂ ಜೈಲು ಅಧಿಕಾರಿಗಳ ಜೊತೆಗೆ ಮಾತನಾಡಿ ನೇತಾಜಿ ಅವರು ಎಲ್ಲವನ್ನೂ ಅರ್ಥ ಮಾಡಿಕೊಂಡರು. ಜಪಾನ್ ಎಲ್ಲಾ ರೀತಿಯ ಶಿಕ್ಷೆಗಳನ್ನು ತ್ಯಜಿಸಿ ಎಲ್ಲರನ್ನು ಸ್ವತಂತ್ರವಾಗಿ ಬಿಟ್ಟುಬಿಡುವುದಾಗಿ ಮಾತು ಕೊಟ್ಟಿತು. ಅದೇ ದಿನ ಜಮ್‌ಖಾನಾ ಮೈದಾನದ ಅಂಡಮಾನ್ ಕ್ಲಬ್ ಮೇಲೆ ತ್ರಿರಂಗ ಬಾವುಟವನ್ನು ಹಾರಿಸಿದರು. ಬ್ರಿಟಿಷರ ಆಡಳಿತದಲ್ಲಿ ಇದೇ ಮೊದಲು ಹಾರಿಸಿದ ಬಾವುಟ. ೯೦ ನಿಮಿಷಗಳ ಕಾಲ ಸಾರ್ವಜನಿಕರ ಎದುರಿಗೆ ಭಾಷಣ ಮಾಡಿದ ನೇತಾಜಿ ಕೊನೆಗೆ ದೆಲ್ಲಿ ಚಲೋ ಜೈಹಿಂದ್ ಎಂದು ಭಾಷಣ ಮುಗಿಸಿದರು. ಇಡೀ ಜನ ಸಮೂಹ ಮಂತ್ರಮುಗ್ದವಾಗಿ ಭಾಷಣ ಕೇಳಿ ಆತ್ಮಾವಲೋಕನ ಮಾಡಿಕೊಂಡಂತೆ ತೋರುತ್ತಿತ್ತು, ಕೊನೆಗೆ ರಾಷ್ಟ್ರಗೀತೆ ಹಾಡಲಾಯಿತು. ಅಂಡಮಾನ್‌ನಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ‘ಶಹೀದ್’ ಅಥವಾ ‘ಸ್ವರಾಜ್’ ಎಂದು ಕರೆಯಲಾಯಿತು.

ಸುಭಾಷ್ ಚಂದ್ರ ಬೋಸ್‌ಅನಂತರ ಹತ್ತಿರದ ರಾಸ್ ದ್ವೀಪದಲ್ಲಿ ಬ್ರಿಟಿಷ್ ಚೀಫ್ ಕಮಿಷನರ್ ಬಂಗಲೆಯ ಮೇಲೆ ನೇತಾಜಿ ಅವರು ರಾಷ್ಟ್ರೀಯ ಬಾವುಟವನ್ನು ಹಾರಿಸಿದರು. ಅಲ್ಲಿ ಮಾತನಾಡುತ್ತ ‘ನಮ್ಮ ತ್ರಿರಂಗಾ ಬಾವುಟ ಬ್ರಿಟಿಷ್ ಚೀಫ್ ಕಮಿಷನರ್ ಬಂಗಲೆಯ ಮೇಲೆ ಹಾರಾಡುತ್ತಿರುವುದು ಮರೆಯಲಾಗದ ಸಂಗತಿ. ಒಂದು ದಿನ ಇದೇ ಬಾವುಟ ದೆಲ್ಲಿಯ ವೈಸ್‌ರಾಯ್ ಬಂಗಲೆಯ ಮೇಲೆ ಕೂಡ ಹಾರಾಡುತ್ತದೆ’ ಎಂದರು. ಮಂದುವರಿದು ‘ಅಂಡಮಾನ್ ದ್ವೀಪಗಳು ಸ್ವಾತಂತ್ರ್ಯ ಪಡೆದಿದ್ದು ದೇಶ ಸ್ವಾತಂತ್ರ್ಯ ಪಡೆಯುವುದರ ಸಂಕೇತ. ಬ್ರಿಟಿಷ್‌ರು ಅಂಡಮಾನ್ ದ್ವೀಪಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಜೈಲಾಗಿ ಉಪಯೋಗಿಸಿಕೊಂಡಿದ್ದಾರೆ. ಪ್ರೆಂಚ್ ಬಂಡಾಯವಾದಾಗಲೂ ಫ್ರೆಂಚ್ ದೇಶ ಮೊದಲಿಗೆ ಪ್ಯಾರಿಸ್‌ನ ಬಾಸ್ಟೈಲನ್ನು ಸ್ವಾತಂತ್ರ್ಯಗೊಳಿಸಿಕೊಂಡಿತ್ತು. ಅಂಡಮಾನ್ ಜನರು ನಮ್ಮ ನಿಜವಾದ ದೇಶಭಕ್ತರು, ಹೆಚ್ಚು ನೋವು ಅನುಭವಿಸಿದವರು. ಅಂಡಮಾನ್ ಮೊದಲಿಗೆ ಸ್ವಾತಂತ್ರ್ಯ ಪಡೆಯಬೇಕಾಗಿತ್ತು, ಪಡೆದಿದೆ. ಈ ದ್ವೀಪಗಳು ಭಾರತದ ಒಂದು ಅವಿಭಾಜ್ಯ ಅಂಗ. ಹಾಗೂ ಬಹಳ ಮುಖ್ಯವಾದುದು’. ಎಂದು ಹೇಳಿದರು.

ಬ್ರಿಟಿಷರು ಮೊದಲಿಗೆ ಈ ಭಾಗವನ್ನು ತಮ್ಮ ವಶದಲ್ಲೇ ಇಟ್ಟುಕೊಳ್ಳಲು ಆಲೋಚಿಸಿದ್ದರು. ಮಾರ್ಚ್  ೩, ೧೯೪೭ರಂದು ಇಂಡಿಯಾದ ಇನ್ ಚಾರ್ಜ್ ಪಾಟ್ರೈಸ್ ಲಾವರೆನ್ಸ್, ಲಾರ್ಡ್ ವೈಸ್‌ರಾಯ್ ಅವರಿಗೆ ಪತ್ರ ಬರೆದು ಇದು ರಕ್ಷಣೆಗೆ ಸಂಬಂಧ ಪಟ್ಟಂತೆ ಬಹಳ ಮುಖ್ಯಾವಾದುದ್ದು. ಈ ದ್ವೀಪಗಳು ತಮ್ಮ ವಶದಲ್ಲೇ ಇರುವುದು ಒಳಿತೆಂದು ಬರೆದಿದ್ದರು. ಬ್ರಿಟಿಷ್ ಚೀಪ್ ಆಫ್ ರಾಯಲ್ ಬೇಸನ್ನು ಇಲ್ಲಿ ಸ್ಥಾಪಿಸಬೇಕೆಂದು ಅವರು ಯೋಚಿಸಿದ್ದರು.  ಮೇ ೨೮, ೧೯೪೭ ರಂದು ಇಂಡಿಯಾ-ಬರ್ಮಾ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ ಮೌಂಟ್ ಬ್ಯಾಟನ್, ನೆಹರು ಮತ್ತು ಸರದಾರ್ ಪಟೇಲ್ ಅವರು ಈ ದ್ವೀಪಗಳ ಬಗ್ಗೆ ತುಂಬಾ ಆತಂಕ ಹೊಂದಿದ್ದಾರೆ ಎಂದು ತಿಳಿಸಿ ಅನಂತರ ಈ ದ್ವೀಪಗಳನ್ನು ಭಾರತಕ್ಕೆ ನೀಡದೆ ಹೋದರೆ ಭಾರತ-ಬ್ರಿಟನ್ ಸಂಬಂಧ ಹದಗೆಡುವುದರಲ್ಲಿ ಸಂದೇಹವಿಲ್ಲ ಎಂದು ಪ್ರಾಂಕ್ ಟರ್ನ್ ಅವರಿಗೆ ಪತ್ರ ಬರೆದರು. ಅದೇ ಸಮಯದಲ್ಲಿ ಜಿನ್ನಾ, ಪಾಕಿಸ್ತಾನ ಇಂಡಿಯಾ ವಿಭಜನೆಯಲ್ಲಿ ಈ ದ್ವೀಪಗಳನ್ನು ಪರಿಶೀಲಿಸಬೇಕಿದೆ ಎಂದು ಹೇಳಿಕೆ ನೀಡಿ ಎಲ್ಲರನ್ನು ಗೊಂದಲಗೊಳಿಸಿದ್ದರು. ನೆಹರು, ೧೯೪೧ರ ಜನಗಣತಿಯ ಪ್ರಕಾರ ೩೪,೦೦೦ ಜನರಲ್ಲಿ ೮,೦೦೦ ಮುಸ್ಲಿಮರಿದ್ದು, ಈ ಭಾಗ ಹಿಂದೂಗಳಿಗೆ ಸೇರಬೇಕಿದೆ ಎಂದರು. ರಕ್ಷಣೆಯ ವಿಷಯ ಬಂದಾಗ ದೂರದಲ್ಲಿರುವ ಪಾಕಿಸ್ತಾನಕ್ಕಿಂತ ಈ ಭಾಗ ಭಾರತಕ್ಕೆ ಮುಖ್ಯ ಎಂದರು. ಮೌಂಟ್ ಬ್ಯಾಟನ್ ಅವರು ಬ್ರಿಟಿಷ್ ಪ್ರಧಾನ ಮಂತ್ರಿಗಳಿಗೆ ಮನದಟ್ಟು ಮಾಡಲು ಸಫಲರಾಗಿದ್ದರು. ಕೊನೆಗೂ ಭಾರತಕ್ಕೆ ಈ ದ್ವೀಪಗಳನ್ನು ಸೇರಿಸಲಾಯಿತು. ಇದಾದ ಮೇಲೆ ಜೈಲಿನಲ್ಲಿದ್ದ ಎಲ್ಲರನ್ನೂ ಮುಕ್ತಿಗೊಳಿಸಲಾಯಿತು. ಕೊನೆಗೆ ಲಾರ್ಡ್ ಮೌಂಟ್‌ಬ್ಯಾಟನ್ ಅವರ ಭಾರತದೊಂದಿಗಿನ ಅಕ್ಕರೆಯಿಂದ ಈ ದ್ವೀಪಗಳು ಭಾರತಕ್ಕೆ ದೊರಕಿದವು.              

೧೯೧೦ರಿಂದ ಜೈಲಿನಲ್ಲಿದ್ದ ವೀರ ಸಾವರ್‌ಕರ್ ೧೯೪೭ರಲ್ಲಿ ಬಿಡುಗಡೆ ಹೊಂದಿ ಸ್ವತಂತ್ರ ಭಾರತವನ್ನು ಕಂಡಿದ್ದರು. ಅವರು ಜೈಲಿನಲ್ಲಿದ್ದಾಗ ಒಮ್ಮೆ ‘ನಾವು ಪ್ರಸ್ತುತ ಜೈಲಿನಲ್ಲಿ ಅಸಹಾಯಕ ಕೈದಿಗಳಾಗಿದ್ದೇವೆ. ಒಂದು ದಿನ ಸ್ವಾತಂತ್ರ್ಯ ಯೋಧರ ನೆನಪಿನಲ್ಲಿ ನಮ್ಮ ಪುತ್ಥಳಿಗಳು ಇಲ್ಲೆಲ್ಲ ಏಳುತ್ತವೆ. ಮುಂದಿನ ಪೀಳಿಗೆ ಈ ಸ್ಮಾರಕಗಳನ್ನು ದರ್ಶಿಸಿ ನಮ್ಮ ಬಗ್ಗೆ ಹೇಳಿಕೊಳ್ಳುತ್ತದೆ. ನಮ್ಮ ದೇಶ ಪ್ರೇಮಿಗಳು ವರ್ಷಗಟ್ಟಲೆ ಇಲ್ಲಿದ್ದರು, ನಮ್ಮ ದೇಹದ ದೇಹ, ಆತ್ಮದ ಆತ್ಮಗಳು’ ಎಂದು ಹೇಳಿದ್ದರು. ಪ್ರಸ್ತುತ ನೀವು ಈ ಸೆಲ್ಲೂಲರ್ ಜೈಲನ್ನು ನೋಡಿ ಆಂದೋಲನಕಾರರ ಕತೆಯನ್ನು ಕೇಳಿದಾಗ ಅವರು ಹೇಳಿದ ಮಾತುಗಳು ನಿಜ ಎನಿಸುತ್ತದೆ.

ದೇಶದ ನಾನಾ ಭಾಗಗಳಿಂದ ಆಂದೋಲನಕಾರರನ್ನು ಬ್ರಿಟಿಷರು ಹಿಡಿದು ತಂದು ಇಲ್ಲಿ ಜೈಲಿಗೆ ಹಾಕಿದ್ದರು. ಅವರಲ್ಲಿ ಮುಖ್ಯವಾಗಿ ವಹಾಬಿ ಆಂದೋಲನ/ಗದಾರ್ ಆಂದೋಲನ (೧೮೩೦-೧೮೬೯), ಮೊದಲ ರಾಂಪಾ ಆಂದೋಲನ (೧೮೭೮-೯೦), ಎರಡನೇ ರಾಂಪಾ ಆಂದೋಲನ (೧೯೨೨-೨೪), ಧಾರಾವಾಡಿ (ಬರ್ಮಾ) ಕೃಷಿಕರ ಆಂದೋಲನ (೧೯೩೦) ಮತ್ತು ಮೊಪ್ಲಾ ಆಂದೋಲನ/ಮಲಬಾರ್ ಆಂದೋಲನ (೧೭೯೨-೧೯೪೭). ಈ ಆಂದೋಲನಕಾರರ ಗುಂಪುಗಳನ್ನು ಇಲ್ಲಿಗೆ ರವಾನಿಸಲಾಯಿತು. ಈ ಗುಂಪುಗಳಲ್ಲಿದ್ದ ಅತಿ ಮುಖ್ಯ ನಾಯಕರೆಂದರೆ ಸರ‍್ವಶ್ರೀ. ಲಹಿರ, ಆಶುತೋಷ್, ರಾ.ನೋನಿ ಗೋಪಾಲ ಮುಖರ್ಜಿ, ಪಂಡಿತ್ ಪರಮಾನಂದ, ಉಲ್ಲಾಸ್ಕರ್ ದತ್ತ, ಬಿರೇಂದ್ರ ಕುಮಾರ್ ಘೋಷ್, ಜೋಷಿ, ದಾಜಿ ವಾಮನ್ ನಾರಾಯಣ, ಪ್ರೊ.ಭಾಯಿ ಪರಮಾನಂದ ಪೃಥ್ವಿ ಸಿಂಗ್ ಅಜಾದ್, ರಾಮಾ ರಾಖಾ, ಹಿಂದು ಭೂಷಣ್ ರಾಯ್, ಗಣೇಶ್ ದಾಮೋದರ್ ಸಾವರ‍್ಕರ್, ಸಾವರ‍್ಕರ್, ವೀರ್ ವಿನಾಯಕ್ ದಾಮೋದರ್, ಮಹಾವೀರ್ ಸಿಂಗ್, ಶಹಾಪುರ್ ಈಟಾವ್, ಮೊಹಿತ್ ಮೊಯಿತ್ರ, ಪಬ್ನ ಬೆಂಗಾಳ್, ಮೋತಿಲಾಲ್ ವರ್ಮ, ಬಟುಕೇಶ್ವರ್ ದತ್ತ, ಜೆಯದೇವ್ ಕಪೂರ್, ದೂದ್ ನಾಥ್ ತಿವಾರಿ, ಶೇರ್ ಅಲಿ, ಭಾನ್ ಸಿಂಗ್, ಬಾಬಾ ಸೊಹನ್ ಸಿಂಗ್, ಮೋಹ್ ಕಿಶೋರ್ ರಾಮದಾಸ್. ಇಲ್ಲಿ ಪ್ರಾಣ ತ್ಯಾಗ ಮಾಡಿದವರ ಪಟ್ಟಿ ಭಾರಿ ದೊಡ್ಡದಿದೆ. ಬಾಲಕಿಸ್ನಯ್ಯ ಹೆಸರಿನ ಮೈಸೂರಿನ ಒಬ್ಬರ ಹೆಸರು ಮಾತ್ರ ದಾಖಲಾಗಿದೆ.    

೧೦.೦೩.೧೮೫೮ರಿಂದ ಜೈಲಿಗೆ ಬಂದವರ ರಾಜ್ಯ ಮತ್ತು ಆಂದೋಲನಕಾರರ ಸಂಖ್ಯೆ:
೧೦.೦೩.೧೮೫೮: ೧
ಅಸ್ಸಾಂ - ೫
ಬೆಂಗಾಳ - ೧
ಬಿಹಾರ - ೧
ಗುಜರಾತ್ - ೯
ಹೈದರಾಬಾದ್ - ೧
ಯುನೈಟೆಡ್ ಪ್ರಾವಿನ್ಸ್ - ೫೭
ಮಧ್ಯ ಪ್ರದೇಶ - ೩೯
ಮಹಾರಾಷ್ಟ್ರ - ೩೯
ಮೈಸೂರು - ೧ (ಹೆಸರು ಬಾಲಕಿಸ್ನಯ್ಯ)
ಒರಿಸ್ಸಾ - ೬
----------
ಒಟ್ಟು - ೧೩೬
----------

೧೮೬೪-೧೮೭೨: ೨
ದೆಹಲಿ - ೧
ಆಫ್‌ಘಾನಿಸ್ತಾನ - ೧
ಪನ್ನಾ - ೧೫
----------
ಒಟ್ಟು - ೧೫
----------

೧೯೦೯-೧೯೨೧: ೩
(ಜೈಲಿನಲ್ಲಿ ಸತ್ತವರ ಸಂಖ್ಯೆ)
ಬಾಂಬೆ - ೮೩
ಪಂಜಾಬ್ - ೭೩
ಯುನೈಟೆಡ್ ಪ್ರಾವಿನ್ಸ್ - ೧೦
ಬೆಂಗಾಳ - ೪೬
----------
ಒಟ್ಟು - ೧೩೨
----------

೧೯೨೨: ೪
(ಜೈಲಿನಲ್ಲಿ ಸತ್ತವರ ಸಂಖ್ಯೆ)
ಯುನೈಟೆಡ್ ಪ್ರಾವಿನ್ಸ್ - ೨
ಮದ್ರಾಸ್ - ೬
----------
ಒಟ್ಟು - ೮
----------

೧೯೩೨-೧೯೩೮
ಮದ್ರಾಸ್ - ೨
ದೆಲ್ಲಿ - ೨
ಯುನೈಟೆಡ್ ಪ್ರಾವಿನ್ಸ್ - ೧೧
----------
ಒಟ್ಟು - ೧೫
----------

ಬಿಹಾರ - ೧೯
ಬೆಂಗಾಳ - ೩೩೪
ಅಸ್ಸಾಂ - ೫
ಮದ್ರಾಸ್ - ೨
----------
ಒಟ್ಟು - ೩೬೦
----------

೧೯೨೨- ೧೯೨೪:
ಮೊಪ್ಲಾ - ೨೧
----------
ಒಟ್ಟು - ೨೧
----------
ರಾಯಲ್ ಇಂಡಿಯನ್ ಆರ್ಮಿ ಸೆಕ್ಯೂರಿಟಿ ಕಾರ‍್ಪ್ಸ್ ಮತ್ತು
ಸೆಂಟ್ರಲ್ ಇಂಡಿಯನ್ ಹೋರ‍್ಸ್ ಮ್ಯೂಟಿನೀರ‍್ಸ್ ೧೯೪೦
    - ೧೧
----------
ಒಟ್ಟು - ೧೧
----------
೧೯೪೨ ೧೯೪೫:

ಜಪಾನಿಯರು - ೭
----------
ಒಟ್ಟು - ೭
----------
ಇನ್ನಿತರರು
- ೪೪
- ೬
- ೧೯
- ೪೪
-------------
ಎಲ್ಲಾ ಪಟ್ಟಿಗಳ ಒಟ್ಟು - ೮೨೦

 

(ಮುಂದುವರಿಯುವುದು)

ವೆಂಕಟಸ್ವಾಮಿ ಬರೆಯುವ ಅಂಡಮಾನ್ ಕಥಾನಕ ಮೊದಲಿಂದ ಓದಲು ಇಲ್ಲಿ ಕ್ಲಿಕ್ ಮಾಡಿ    

 


 

 

ಪುಟದ ಮೊದಲಿಗೆ
 
Votes:  3     Rating: 5    
 
 
ಸಂಬಂಧಿಸಿದ ಲೇಖನಗಳು
  ಹಣೆಯಲ್ಲಿ ಮತ್ತೊಮ್ಮೆ ಕಾಂಬೋಡಿಯಾ ಬರೆಯೋ ಭಗವಂತಾ!
  ವಿದಾಯಕ್ಕೆ ಒಂದೇ ದಿನ:ಭಾರತಿ ಕಾಂಬೋಡಿಯಾ ಕಥನ
  ಕಾಂಬೋಡಿಯಾದ ಮೂಡೇ ಬೇರೆ:ಭಾರತಿ ಪ್ರವಾಸ ಕಥನ
  ಅಂಗ್‌ಕೋರ್ ವಾಟ್ ಕಂಡೆ:ಭಾರತಿ ಕಾಂಬೋಡಿಯಾ ಕಥನ
  ಬಾ ಅಂತ ಕರೀತಿದ್ದ ಬನವಾಸಿ: ಪ್ರಶಸ್ತಿ ಪ್ರವಾಸ ಕಥನ
  ಸಿದ್ದಪ್ಪಾರು ಮತ್ತೆ ಕಾಣೆಯಾದರು:ಭಾರತಿ ಕಾಂಬೋಡಿಯಾ ಕಥನ
  ಸರ್ವಾಧಿಕಾರದ ಅವಾಂತರಗಳು:ಭಾರತಿ ಕಾಂಬೋಡಿಯಾ ಕಥನ
  ಸಿದ್ದಪ್ಪಾರನ್ನು ಬಿಟ್ಟು ಬಂದಿದ್ದು:ಭಾರತಿ ಕಾಂಬೋಡಿಯಾ ಕಥನ
  ಅಂತೂ ಕಾಂಬೋಡಿಯಾದೊಳಕ್ಕೆ ಕಾಲಿಟ್ಟೆ!:ಭಾರತಿ ಪ್ರವಾಸ ಕಥಾನಕ
  ಭಾರತಿ ಬಿ.ವಿ. ಬರೆವ ಕಾಂಬೋಡಿಯಾ ಕಥನ ಆರಂಭವಾಯಿತು
  ಸಾವಿನ ಕಣಿವೆಯಲ್ಲೊಂದು ವಲಸೆ ಹಕ್ಕಿಯ ದಿನ
  ಬರೀ ನೀಲ ನೀಲ ಲೇಹ್ ಲದಾಕ್:ವೆಂಕಟಸ್ವಾಮಿ ಬರಹ
  ಕುವೆಂಪು ಬೆಳೆದ ಕುಪ್ಪಳಿ ಕಂಡು ಭಾರತಿ ಬರೆದದ್ದು
  ಕಥೆಗಳ ಪಿಸುಗುಟ್ಟುವ ಕಡಲು:ಯೋಗೀಂದ್ರ ಯಾನ
  ಬಸವಾಪಟ್ಟಣ ರಮೇಶ್ ಬರೆದ ಬಾಲ್ಟಿಕ್ ಪ್ರವಾಸ ಕಥನ
  ಎವರೆಸ್ಟ್ ಮೇಲೆ ಟ್ರ್ಯಾಪಿಕ್ ಜಾಮ್-ಅಪಘಾತಗಳು
  ಸಿಂಧು ಬರೆದ ಹೂಕಣಿವೆ ಚಾರಣ ಕವಿತೆ
  ಹದಿನೈದು ಜೊತೆ ಹಸ್ತಗಳ ಗುರುತಿನ ಕಲೆ: ಅಂಜಲಿ ಪ್ರವಾಸ ಕಥನ
  ವೆಂಕಟಸ್ವಾಮಿ ಬರೆದ ಅಂಡಮಾನ್ ಕಥಾನಕ-೧೨: ಕೊನೆ ದಿನ
  ವೆಂಕಟಸ್ವಾಮಿ ಅಂಡಮಾನ್:ವಂಡೂರ್ ಹವಳ ದಿಬ್ಬಗಳಲ್ಲಿ
  ಗೀರ್ವಾಣಿ ಯುರೋಪಿನಲ್ಲಿ ಸಾಂಬಾರ ಹುಡುಕಿದ ಕಥೆ
  ವೆಂಕಟಸ್ವಾಮಿ ಅಂಡಮಾನ್:ನಾರ್ಥ್ ಬೇ ಐಲ್ಯಾಂಡ್‌ಗಳಲ್ಲಿ
  ವೆಂಕಟಸ್ವಾಮಿ:ಗುಬ್ಬಚ್ಚಿ ಬೋಟಿನಿಂದ ಪಾರಾದ ಪ್ರಸಂಗ
  ಹಿಡಿಂಬೆಯ ದೇಗುಲ ಕಂಡೆ: ಸತ್ಯಮೂರ್ತಿ ಪ್ರವಾಸ ಕಥನ
  ಅಂಡಮಾನ್ ಕಥನ-೮: ಯಾವ್‌ಲಾಕ್ ದ್ವೀಪದಲ್ಲಿ
  ವೆಂಕಟಸ್ವಾಮಿ ಅಂಡಮಾನ್: ಪೋರ್ಟ್‌ಬ್ಲೇರ್ ಕಡೆಗೆ
  ವೆಂಕಟಸ್ವಾಮಿ ಅಂಡಮಾನ್ :ಜ್ಯಾಲಾಮುಖಿಯ ಬ್ಯಾರನ್ ದ್ವೀಪ
  ವೆಂಕಟಸ್ವಾಮಿ ಅಂಡಮಾನ್ : ಭೂಕಂಪ,ಸುನಾಮಿ,ಜ್ವಾಲಾಮುಖಿ...
  ವೆಂಕಟಸ್ವಾಮಿ ಅಂಡಮಾನ್ : ಸಾಲು ಸುಂದರ ದ್ವೀಪಗಳು
  ವೆಂಕಟಸ್ವಾಮಿ ಅಂಡಮಾನ್:ಅಳಿದುಳಿದ ಪ್ರಪಂಚದ ಮೂಲ ನಿವಾಸಿಗಳು
  ಅಂಡಮಾನ್ ಚಾರಿತ್ರಿಕ ಹಿನ್ನೆಲೆ: ಸಾಗರಯಾನಿಗಳು
  ರಾಜೇಶ್ ನಾಯ್ಕರ ದೇಗುಲ ಯಾನ:ಉಣಕಲ್ ಚಂದ್ರಮೌಳೇಶ್ವರ
  ಇಕ್ಕೇರಿಯ ಅಘೋರೇಶ್ವರ ದೇಗುಲ
  ಕ್ಯುಬೆಕ್ ನಗರಿ ಎಂಬ ಫ್ರೆಂಚ್ ಸುಂದರಿ:ವೈಶಾಲಿ ಪ್ರವಾಸ ಕಥನ
  ಪಾಂವಲಿ ಖಾಂಟಾ ಪರ್ವತದಲಿ ರಾಜೀವ ನಾರಾಯಣ ಚಾರಣ
  ಅಡಗೂರಿನ ಲಕ್ಷ್ಮೀನಾರಾಯಣ ದೇವಾಲಯ
  ಮೈಲಾರದ ಮೈಲಾರಲಿಂಗೇಶ್ವರ
  ಹಡಾಳಿ ಎಂಬ ಹೊಳೆಬದಿಯ ಊರು:ತರೀಕೆರೆ ತಿರುಗಾಟ
  ಹರಿಹರೇಶ್ವರ ದೇವಾಲಯ;ರಾಜೇಶ ನಾಯ್ಕರ ದೇಗುಲ ಯಾನ
  ನಗರೇಶ್ವರ ದೇವಸ್ಥಾನ:ರಾಜೇಶ್ ನಾಯ್ಕರ ದೇಗುಲ ಯಾನ
  ಹೊಸಗುಂದದ ಉಮಾಮಹೇಶ್ವರ
  ಕುಂದಗೋಳದ ಶಂಭುಲಿಂಗೇಶ್ವರ
  ಹಿಮಕಂದರಗಳ ಹಾದಿಯಲ್ಲಿ ಈರಪ್ಪ ಕಂಬಳಿ
  ನರೇಗಲ್ ಸರ್ವೇಶ್ವರ:ರಾಜೇಶ್ ನಾಯ್ಕರ ದೇಗುಲಯಾನ
  ಹೊನ್ನಾವರದ ಚೆನ್ನಕೇಶವ:ರಾಜೇಶ್ ನಾಯ್ಕರ ದೇಗುಲಯಾನ
  ಗದುಗಿನ ಗಳಗೇಶ್ವರ ದೇವಾಲಯ:ರಾಜೇಶ್ ಸರಣಿ
  ಭೇಟ್ ದ್ವಾರಕೆಯಿಂದ ಅನು ಪಾವಂಜೆ
  ದ್ವಾರಕೆಯ ವೀಥಿಯಿಂದ ಅನು ಪಾವಂಜೆ
  ಸೋಮನಾಥದಿಂದ ಅನು ಪಾವಂಜೆ
  ಇಂದೋರಿಂದ ಅನು ಪಾವಂಜೆ
  ಉಜ್ಜೈನಿಯ ಓ೦ಕಾರೇಶ್ವರದಿಂದ ಅನು ಪಾವಂಜೆ
  ಉಜ್ಜಯಿನಿಯಿಂದ ಅನು ಪಾವಂಜೆ
  ಔರ೦ಗಾಬಾದಿಂದ ಅನು ಪಾವಂಜೆ
  ಎಲ್ಲೋರದಿಂದ ಅನು ಪಾವಂಜೆ
  ಅಜಂತಾದಲ್ಲಿ ಅನು ಪಾವಂಜೆ