ಕವಿ ಜೀವಯಾನದ ಎಸ್.ಮಂಜುನಾಥ್ ಅವರ ಈತನಕದ ಕವಿತೆಗಳ ಸಂಕಲನ ನಾಳೆ ಭಾನುವಾರ ಬೆಂಗಳೂರಲ್ಲಿ ಬಿಡುಗಡೆಯಾಗಲಿದೆ.ತಮ್ಮ ಕವಿತೆಗಳ ಕುರಿತು ಅವರೇ ಬರೆದದ್ದು ಇಲ್ಲಿದೆ
ನಾನು ಕವಿತೆಗೆ ಯಾಕೆ ವಾಲಿದೆ? ಕವಿತೆಯೂ ನನ್ನ ಕಡೆ ಕೊಂಚ ವಾಲಿತು ಎಂಬ ಕಾರಣವಂತೂ ಇದ್ದೇ ಇದೆ. ಬಾಲ್ಯಪೂರ್ವದ ಜೀವನ ನನ್ನ ಮನಸ್ಸಿನ ಮೇಲೆ ಮೂಡಿಸಿದ ಕೆಲವು ಕುರುಹುಗಳು ಅದು ಹೇಗೋ ನನ್ನನ್ನು ಕವಿತೆಯ ದಾರಿಗೆ ಹೊರಳಿಸಿರಬೇಕು. ಏನಂದರೂ ಕವಿತೆಯೆನ್ನುವುದು ಪ್ರಥಮವಾಗಿ ನಾನಿದ್ದೇನೆ ಎನ್ನುವುದಕ್ಕೆ ದಾಖಲೆಯೇ ಎನಿಸುತ್ತದೆ.
ಉದಾಹರಣೆಗೆ, ಪಡಸಾಲೆಯಲ್ಲಿ ಚಿಕ್ಕಿ ಪರಸ್ಥಳದಿಂದ ಬಂದ ತಂದೆಯ ಸ್ನೇಹಿತರೊಂದಿಗೆ ಮಾತಾಡುತ್ತಿದ್ದಾರೆ: 'ನಮ್ಮ ಮಂಜು ಈ ಮಳೆಗಾಲದಲ್ಲಿ ಹೊರಟೇಹೋದ ಅಂದುಕೊಂಡಿವಿ. ಹೇಗೋ ಉಳಿದ’. ದೈಹಿಕವಾಗಿ ಸೂಕ್ಷ್ಮವಾಗಿದ್ದ ನನ್ನ ಕುರಿತು ಹೇಳಿದ ಮಾತು ಅದು. ಒಳಗೆ ಮಲಗಿದ್ದ ನನ್ನ ಕಿವಿಗೆ ಬಿದ್ದು ತೀವ್ರವಾದ ಐಂದ್ರಿಕವೆನಿಸುವಂಥ ಖುಷಿಯಾಯಿತು. ಯಾಕೆ? ಆ ವಿಲಕ್ಷಣವಾದ ಅಹಂಕಾರ ಯಾವ ಬಗೆಯದು?
ಮಾಧ್ಯಮಿಕ ಶಾಲೆಯ ಹಂತದಲ್ಲಿ ಕನ್ನಡ ಪಾಠದ ಪ್ರಶ್ನೆಗಳಿಗೆ ಉತ್ತರ ಬರೆಯುವಾಗ, ಪ್ರಬಂಧ ಬರೆಯುವಾಗ ನಾನು ಎಲ್ಲೋ ಕೇಳಿದ್ದ ಶಬ್ದಗಳು, ನನಗೇ ಗೊತ್ತಿಲ್ಲದ ಭಾವನೆಗಳು ಭಾಷೆಯ ಮೂಲಕ ಮೇಲೆ ಬಂದು ಅಚ್ಚರಿ ತರುತ್ತಿತ್ತು. ಬರೆಯುವುದು ನನ್ನನ್ನು ಶೋಧಿಸುವ ವಿಶೇಷವಾದ ಪ್ರಕ್ರಿಯೆ ಎಂದು ಅಸ್ಪಷ್ಟವಾಗಿ ತಿಳಿಯತೊಡಗಿತು. ಅಪ್ರಜ್ಞೆಯಿಂದ ಪದಗಳು, ಭಾವನೆಗಳು ಮೇಲೆದ್ದು ಬಂದು ಅಪ್ರಜ್ಞೆಗೂ ಪ್ರಜ್ಞೆಗೂ ಸಂಕ ಕಟ್ಟುತ್ತ ಮನಸ್ಸಿನ ಇಡಿತನ ಅನುಭವಕ್ಕೆ ಬರುತ್ತ ಇದು ವ್ಯಕ್ತಿತ್ವಕ್ಕೇ ಬಹಳ ಲಾಭಕರವೆಂಬ ಸುಳಿವು ಹತ್ತತೊಡಗಿತ್ತು.
ಒಬ್ಬ ಮೇಸ್ಟರಿದ್ದರು. ಅವರು ಮಕ್ಕಳ ಕೈಲಿ ಒಂದು ನಾಟಕ ಮಾಡಿಸಿದ್ದರು. ಸಿದ್ಧಾರ್ಥ ತನ್ನ ಅಣ್ಣ ದೇವದತ್ತನಿಗೆ ಪ್ರಾಣಿದಯೆ ನಿರೂಪಿಸುವ ನಾಟಕ. ದೇವದತ್ತ ಬಾಣ ಬಿಟ್ಟು ಕೆಡವಿದ ಹಕ್ಕಿ ಸಿದ್ಧಾರ್ಥನ ಬಳಿ ಬಿದ್ದು, ಸಿದ್ಧಾರ್ಥ ಅದಕ್ಕೆ ಶುಶ್ರೂಷೆ ಮಾಡಿ, ಆ ಹಕ್ಕಿ ಹೊಡೆದವನದ್ದಲ್ಲ ದಯೆ ತೋರಿದವನದು ಎಂದು ಸಾಧಿಸಿ, ನಮ್ಮ ಮೇಸ್ಟರು ನಿಗದಿಪಡಿಸಿದ ವಚನವೊಂದನ್ನು ಹಾಡುತ್ತಾನೆ:
ದಯವಿಲ್ಲದಾ ಧರ್ಮ ಯಾವುದಯ್ಯಾ
ದಯವೇ ಬೇಕು ಸಕಲ ಪ್ರಾಣಿಗಳಲ್ಲಿ
ದಯವೇ ಧರ್ಮದ ಮೂಲವಯ್ಯಾ
ಸೋದರ ದೇವದತ್ತಾ | ಎಂದಿಗು ನಿನಗೆ
ಜೀವಿಗಳಲ್ಲಿ ಪ್ರೇಮ | ಚಿರವಿರಲಿ
ಬುದ್ಧನ ಬಾಯಲ್ಲಿ ಬಸವನ ವಚನ- ನಮ್ಮ ಮೇಸ್ಟರ ಸೇರ್ಪಡೆಯೊಂದಿಗೆ! ಪಾಠದಲ್ಲಿರದ, ಆಟದಲ್ಲೂ ಇರದ ಬೇರೊಂದು ಖುಷಿ ಮತ್ತು ಸ್ವಾತಂತ್ರ್ಯ ಈ ಕ್ರಿಯೆಯಲ್ಲಿದೆ ಎಂದು ಸಿದ್ಧಾರ್ಥನಾದ ಒಬ್ಬ ಹುಡುಗನಿಗೆ ಗೊತ್ತಾಗದೇ ಅರಿವಾಗಿದ್ದು ಸಹಜವೇ!
ಮತ್ತೊಂದು ನಾಟಕದಲ್ಲಿ ಅವನು ಸಾಕ್ಷಾತ್ ಕವಿ! ಪ್ರಿಯತಮೆಗೆ 'ಇಗೋ ನನ್ನ ಮೊದಲ ಕವನಸಂಕಲನ’ ಎಂಬ ಡಯಲಾಗ್ ಅವನ ಬಾಯಲ್ಲಿ! ನಿಜಕ್ಕೂ ನಾಟಕಕ್ಕೂ ಅಷ್ಟಾಗಿ ವ್ಯತ್ಯಾಸ ತಿಳಿಯದ ಆ ವಯಸ್ಸಲ್ಲಿ ಆ ಮಾತು ಒಂದು ಮಾನಸಿಕ ಸೂಚನೆಯಂತಾಗಿರಬಹುದಾದ್ದು ವಿಚಿತ್ರವೇ.
ತಾಯಿಯಿಲ್ಲದ ಆ ಹುಡುಗನಿಗೆ ತಾಯಿಯಂತಿದ್ದುದು ಅವನ ಅಕ್ಕನೇ. ಮನೆಯಲ್ಲಿ ಅಮ್ಮನ ಒಂದೂ ನೈಜವಾದ ಪಟವಿಲ್ಲದ ಕಾರಣ ಅಕ್ಕ ತಮ್ಮನಿಗೆ ಹೇಳುತ್ತಿದ್ದುದು: 'ಚೆನ್ನಾಗಿ ಚಿತ್ರ ಬರೆಯುವುದನ್ನು ಕಲಿ. ಒಂದು ರಾತ್ರಿ ಮಲಗುವ ಮುಂಚೆ ಅಮ್ಮನನ್ನು ಗಾಢವಾಗಿ ಪ್ರಾರ್ಥಿಸಿ ಮಲಗು. ಕನಸಲ್ಲಿ ಅವಳು ಕಾಣಿಸಿಕೊಳ್ಳುತ್ತಾಳೆ. ಆಮೇಲೆ ಅದನ್ನು ಮರೆಯದೇ ಬೆಳಗ್ಗೆ ಅವಳ ಚಿತ್ರವನ್ನು ಬರೆದುಕೊಡು’.
ಇದು ಮಾನಸಿಕ ಸೂಚನೆಗಿಂತ ಹೆಚ್ಚಾದ ಬದುಕಿನ ಯಾವ ನಿಗೂಢ ಸನ್ನೆಯಾಯಿತೋ ನಾನು ಕಾಣೆ. ಹಾಗಾಗಿ ನನ್ನ ಕವಿತೆ ಚಿತ್ರವತ್ತಾಗಿರುವುದು ಅದರ ಪ್ರವೃತ್ತಿಯಾಯಿತು. (ಚಿತ್ರಕಾರನಾಗದೆ ನಾನು ಅಕ್ಕನ ಅಭಿಲಾಷೆಯನ್ನು ಹುಸಿಗೊಳಿಸಿದೆ. ಕವಿತೆ ಬರೆಯುತ್ತ- ಅದು ನನ್ನನ್ನು ಬರೆಯುತ್ತ!- ಕ್ಷಮಾರ್ಹನಾಗಲು ಯತ್ನಿಸಿರುವೆ)
ಎಳೆಯುತ್ತಿರುವ ಗೆರೆಯೊಂದಿಗೇ ಚಿತ್ರ ಮೂಡುವಂತೆ, ಗಾಯಕನ ಸ್ವರ ಆ ಕ್ಷಣದಲ್ಲಿ ಹುಟ್ಟುವಂತೆ, ಕವಿತೆ ಕೂಡ ಆ ಗಳಿಗೆ ಮೈದಾಳಬೇಕು ಎನ್ನುವ ತುರ್ತು ಇರಬೇಕು ಎನಿಸಿತು. ಏನನ್ನೋ ಹೇಳುವುದು ಎರಡನೆಯ ಪ್ರಾಶಸ್ತ್ಯದ್ದು ಎಂದು. ಆದ ಕವಿತೆಗಿಂತ ಆಗುತ್ತಿರುವ ಕವಿತೆ ನನ್ನ ರೀತಿಯಾಯಿತು.
ಆ ಕಿರಿಯ ವಯಸ್ಸಲ್ಲಿ ನನಗೆ ದೊರೆತ ಶ್ರೀ ಯು.ಆರ್. ಅನಂತಮೂರ್ತಿಯವರು ಹೇಳಿದ್ದು: 'ಒಂದು ವಸ್ತುವನ್ನು ದಿಟ್ಟಿಸಿ ನೋಡಿ ನಿನಗೇ ಹೇಗೆ ಕಾಣುತ್ತದೋ ಅದನ್ನು ಬರಿ’. ಸಂವೇದನೆಯನ್ನು ಬೆಳೆಸಿಕೊಳ್ಳಲು ತೋರಬಹುದಾದ ದಾರಿ ಇದೊಂದೇ ಎಂದು ನನಗೆ ಈಗಲೂ ಅನಿಸುತ್ತದೆ. ವರ್ಡ್ಸ್ವರ್ಥ್ ನ ಅಂಥದೇ ಒಂದು ವಾಕ್ಯ ನನ್ನ ಮನಸ್ಸಿಗೆ ನಾಟಿತ್ತು: 'ನಾನು ನನ್ನ ಕಾವ್ಯವಸ್ತುವನ್ನು ತದೇಕ ನೋಡುತ್ತೇನೆ’ ಪರಿಸರದಲ್ಲಿ ಕಾವ್ಯದ ಒಂದು ಸಿದ್ಧ ಮಾದರಿಯಿದ್ದಾಗ(ಅದು ಆಗ ಅಡಿಗರದಿತ್ತು) ಹೊಸದಾಗಿ ಬರೆಯಬೇಕೆನ್ನುವವನಿಗೆ ಹೀಗೆ ನೇರವಾಗಿ ನೋಡುವ ಛಲವಷ್ಟೇ ಹೊಸ ದಾರಿ ತೆರೆಯಬಲ್ಲದು.
ಯಾವುದೇ ಕಲೆಗಾದರೂ ಸೃಷ್ಟಿಗೊಂಡ ಅದನ್ನು ತನ್ನ ಮನಸ್ಸಲ್ಲಿ ಮೂಡಿಸಿಕೊಳ್ಳುವ ಇನ್ನೊಬ್ಬರು ಬೇಕು. ಸಿನಿಮಾವನ್ನು ತನ್ನ ಮೇಲೆ ಮೂಡಿಸಿಕೊಳ್ಳುವ ಪರದೆಯಂತೆ ಅದು. ಆ ರೀತಿ ಅನಂತಮೂರ್ತಿಯವರು ನನ್ನ ಮೊದಲ ಕವಿತೆಗಳಿಗೆ ಮನಸ್ಸು ಕೊಟ್ಟು ಉಪಕರಿಸಿದರು.
ಅವರಿಂದ ನಾನು ಕಲಿತಿರಬಹುದಾದ ಮತ್ತೊಂದು ಅಂಶವೆಂದರೆ ಅನುಭವ ಪ್ರಾಮಾಣಿಕತೆ. 'ಆಗಾಗುವ ಮುನ್ನವೆ ತಾನಾದೆನೆಂಬವರ ಬಳಿಗೆ ಅಡಿಯಿಡುವವನಲ್ಲ ನಮ್ಮ ಗುಹೇಶ್ವರಾ’ ಎನ್ನುತ್ತಾನೆ ಪ್ರಭು. ಉಬ್ಬಿದ ಹೇಳಿಕೆಯಿಂದಾಗಲೀ ಊಹಾಪೋಹದಿಂದಾಗಲೀ ಆದದ್ದು ಹೆಚ್ಚುವುದಿಲ್ಲ, ಬದಲಿಗೆ ಕಮ್ಮಿಯೇ ಆಗುತ್ತದೆ. ನನ್ನ ಆದರ್ಶವೆಂದರೆ ಕೆಲವೇ ರೂಪಾಯಿ ಹಿಡಿದು ಸಂತೆ ಮಾಡುವ ಹಳ್ಳೀ ಹೆಂಗಸು. ಕಡೆಯಲ್ಲಿ ಆಕೆ ಮನೆಯ ಮಗುವಿಗೆ ಒಂದು ಅಂಗಿ ಮತ್ತು ಜಿಲೇಬಿಯನ್ನೂ ಒಯ್ಯುತ್ತಾಳೆ. ಅನುಭವ ಮತ್ತು ಅಭಿವ್ಯಕ್ತಿಯ ಕ್ಲುಪ್ತ ಲೆಕ್ಕಾಚಾರವೆಂದರೆ ಆ ಬಗೆಯದು ಎಂದು ನಾನು ತಿಳಿಯುವೆ.
ಮೊದಲ ಸಂಕಲನ 'ಹಕ್ಕಿಪಲ್ಟಿ’ಯ ನಂತರ ಇನ್ನು ನನಗೆ ಬರೆಯಲು ಆಗುವುದಿಲ್ಲ, ಮುಗಿಯಿತು ಎನಿಸುತ್ತಿರುವಾಗಲೇ ತಾವೋ ಪದ್ಯಗಳನ್ನು 'ಸುಮ್ಮನಿರುವ ಸುಮ್ಮಾನ’ ಎಂಬ ಹೆಸರಲ್ಲಿ ಅನುವಾದ ಮಾಡಿದೆ. ಆ ವೇಳೆಗೆ ಅಲ್ಲಮ, ಕುಮಾರವ್ಯಾಸ, ಬೇಂದ್ರೆಯವರನ್ನು ಓದಿರುವುದು ಸೇರಿ ಅನುವಾದದ ಪ್ರಕ್ರಿಯೆ ಕನ್ನಡಕ್ಕೆ ನನ್ನ ಮನ ತೆರೆಯಿಸಿ ಒಂದು ರೀತಿಯ ಬಿಡುಗಡೆ ಕೊಟ್ಟಿತು. 'ಬಾಹುಬಲಿ’ಯ ಬೆನ್ನುಡಿಯನ್ನು ಉಕ್ತಲೇಖನ ಮಾಡಿಸುತ್ತ ಶ್ರೀ ಪುತಿನ ಅವರು ಕಾವ್ಯ 'ದೇಶೀಯವೂ ಪ್ರಸನ್ನವೂ ವಿಶದವೂ’ ಆಗಿರಬೇಕೆಂದು ಹೇಳಿದ್ದು ನನ್ನ ಮನಸ್ಸಿಗೆ ಮಂತ್ರವಾಯಿತು. 'ನಂದಬಟ್ಟಲು’, 'ಮೌನದ ಮಣಿ’, 'ಕಲ್ಲಪಾರಿವಾಳಗಳ ಬೇಟ’, 'ಮಗಳು ಸೃಜಿಸಿದ ಸಮುದ್ರ’ -ಈ ಎಲ್ಲದರ ಮೂಲಕ ಅನುಭವ ಮತ್ತು ಅಭಿವ್ಯಕ್ತಿಯ ವಿಶದತೆ ಪಳಗುತ್ತ ಹೋಗಿದೆ ಎಂದು ನಾನು ತಿಳಿದಿರುವೆ.
ಚಿತ್ರದ ಒಲವಿನ ನನ್ನ ಸ್ವಭಾವಕ್ಕೆ ಕಣ್ಣಿದಿರಿನ ಲೋಕದ ಬಗ್ಗೆ ಮೊದಲ ನಿಷ್ಠೆ. ಅದೇ 'ಕೊಟ್ಟ ಕುದುರೆ’, ಅದಕ್ಕೆ ಬದಲಿ ಬೇರೊಂದಿಲ್ಲ ಎನ್ನುವುದು ನನ್ನ ಭಾವನೆ. ಕವಿತೆ ಈ ಲೋಕವನ್ನು ದೇವರು ಎಂದು ಭಾವಿಸಬೇಕು. ಇನ್ನೇನಿದ್ದರೂ ಈ ಬುನಾದಿಯಿಂದಲೇ- ಎಂಬ ನಂಬಿಕೆ ನನ್ನದು. ಕವಿತೆಯ ಆರ್ಶ್ಚಯವೇನೆಂದರೆ ಅದು ಲೋಕಾನುಭವವನ್ನು ಮೀರಿದ ಪರಿಣಾಮವಾದರೂ ಎಲ್ಲವನ್ನೂ ಇಂದ್ರಿಯಾನುಭವದ ಲಕ್ಷಣಗಳಲ್ಲೇ ಉಳಿಸಿಕೊಳ್ಳುವಂಥದು.
ಕವಿತೆಯಲ್ಲಿ ಅಸಾಧಾರಣವಾದ್ದಕ್ಕಿಂತಲು ಸಾಮಾನ್ಯವಾದ ಅನುಭವ, ಉದ್ರೇಕಕ್ಕಿಂತಲು ಸಮಾಧಾನದ್ದು ನನಗೆ ಮೆಚ್ಚುಗೆ. ಎಂಥ ಆಕಾಶದ ಬಯಕೆಯೂ ಮಣ್ಣ ಹುಡಿಯಲ್ಲೆ ಅರಳುವುದು ನನಗಿಷ್ಟ. ಲಂಬವಾದ್ದಕ್ಕಿಂತಲು ಸಮವಾದ್ದು, ತಾರಕಕ್ಕಿಂತಲು ಮಂದ್ರ, ವೇಗಕ್ಕಿಂತಲು ನಿಧಾನ, ದೊಡ್ಡ ಅಪೂರ್ಣತೆಗಿಂತ ಸಣ್ಣ ಅಪೂರ್ಣತೆ, ಎಲ್ಲಾ ಊಟಕ್ಕಿಂತಲು ನಮ್ಮ ಮನೆಯ ಊಟ, ಎಲ್ಲ ದೇವರಿಗಿಂತಲು ನಮ್ಮ ಮನೆಯ ದೇವರ ಗೂಡೊಳಗಿನ ಪಟ -ಗೊಂಬೆ, ದೇವರ ಅತೀತತೆಗಿಂತಲು ಸರ್ವಾಂತರ್ಯಾಮಿತನ-ಇದೆಲ್ಲ ಪ್ರಿಯ. ನನಗೆ ಅತ್ಯಂತ ಪ್ರಿಯವಾದ ದೃಶ್ಯವೆಂದರೆ ಸುಲಭವಾಗಿ ನೋಡ ಸಿಗುವ ದಿಗಂತದ ದೀರ್ಘ ಗೆರೆ.
ಸಾಮಾನ್ಯ ಜೀವನದಲ್ಲೇ ಏನೆಲ್ಲ ಮೌಲ್ಯಗಳೂ ವ್ಯಕ್ತವಾಗುತ್ತಿವೆ ಎಂಬುದೇ ದಿಟ.
‘ಇದು ವಿಚಾರಿಸೆ ಬರಿಯ ತೊಳಸಿಯ ಉದಕ’ ಎನ್ನುವುದಿಲ್ಲವೆ ಕವಿಗುರು ಕುಮಾರವ್ಯಾಸ? ಅಷ್ಟೇ ಅಲ್ಲ ಕವಿತೆ ತುಳಸೀಗಿಡದ ನೆರಳಂತೆ ಎಂದೂ ಅನಿಸುತ್ತದೆ. ಅದರಡಿ ನಿಂತು ತಣಿಯಲು ಸಾಧ್ಯವಿಲ್ಲ. ಬೇಕೆಂದರೆ ಮನಸನ್ನಷ್ಟೇ ಅದರಡಿಗೆ ನಿಲ್ಲಿಸಿ ತಣಿಸಬಹುದು. ಲೋಕದ ನಮ್ಮ ಯಾವ ತಾಪತ್ರಯವನ್ನೂ ಕವಿತೆ ಬಗೆಹರಿಸಲಾರದು. ಚದುರಿಹೋದ ಮನಸ್ಸನ್ನಷ್ಟೇ ಸಮತೆಗೆ ತಂದು ತಣಿಸಬಲ್ಲದು. ಹಾಗೆ ಬದಲಾದ ಮನಸ್ಸಿಂದ ಲೋಕವೂ ಸ್ವಲ್ಪ ಬೇರೆ ರೀತಿ ಆದೀತು.
ಹಾಸುಹೊಕ್ಕಾಗಿರುವುದು ಬದುಕಿನ ಲಕ್ಷಣವಾದ್ದರಿಂದ ಯಾವುದೇ ಒಂದು ತುಣುಕೂ ಇಡೀ ಬದುಕನ್ನು ಒಳಗೊಂಡಿರುತ್ತದೆ. ಜೀವದ ಗುಣ ಅದು: ಶಿರದಲ್ಲಾಗಲೀ ಕಾಲಿನ ಕಿರುಬೆರಳಲ್ಲಾಗಲೀ ಎಲ್ಲಾ ಕಡೆ ಹರಿದಿರುವುದು. ಆಗ ಅಲ್ಲಿ ಚಿಕ್ಕದು ದೊಡ್ಡದು ಎಂಬ ತಾರತಮ್ಯವಿರುತ್ತದೆಯೆ? ಚಿರಂತನತೆ ಎಂಬುದೂ ಕಾಲದ ಅತಿ ದೀರ್ಘ ಅವಧಿ ಎಂಬುದಕ್ಕಿಂತ ಕ್ಷಣದ ಅಳೆಯಲಾಗದ ಆಳ ಎಂದೇ ನಾನು ಅಂದುಕೊಳ್ಳುವುದು. ಅದು ಕ್ಷಣದಲ್ಲಿ ಪೂರಾ ಕರಗುವುದರಿಂದ ಬರುವ ಭಾವನೆ. ಒಂದು ಸ್ವರದಲ್ಲಿ ಲೀನವಾಗಿ ಮೇಲೆದ್ದು ಮತ್ತೊಂದು ಸ್ವರ ಹೊರಡಿಸುವ ಗಾಯಕನಂತೆ. ಆ ಕ್ಷಣದಲ್ಲಿ ಅವನ ಹುಟ್ಟು ಮತ್ತು ಸಾವು ಎರಡೂ ಇರುವಂತೆ. ಕ್ಷಣಕ್ಷಣದ ಹುಟ್ಟು, ಸಾವು- ಸೃಜನಶೀಲತೆಯೆಂದರೆ.
ಪ್ರಕೃತಿಯಲ್ಲಿ ಆಂತರಿಕವಾದ ಸೂಕ್ಷ್ಮ ಸಾಮರಸ್ಯದ ತತ್ವಗಳು ಕ್ರಿಯಾಶೀಲವಾಗಿರುವಂತೆ ಭಾಸವಾಗುತ್ತದೆ. ಕವಿತೆಯ ರೂಪಕ ಕೂಡ ಅಲ್ಲಿಂದಲೇ ಉದ್ಭವವಾಗುವುದು. ಕವಿತೆಯ ಮೂಲಕ ಆ ತತ್ವಗಳನ್ನು ಸ್ಪರ್ಶಿಸುವುದು ನನ್ನ ಪಾಲಿಗೆ ಮುಖ್ಯವೆನಿಸುತ್ತದೆ.
ಕವಿತೆಯನ್ನು ನಾನು ಹೆಚ್ಚೆಚ್ಚು ಕಾಣುತ್ತಿರುವಂತೆ ಅದು ನಿಶ್ಚಿತ ಜ್ಞಾನವನ್ನು ಕೆಡಿಸುವ, ಬಿಡುಗಡೆಗೊಳಿಸುವ, ಅಂದರೆ ಅಹಂಕಾರವನ್ನು ಮೃದುಗೊಳಿಸುವ ಮಾಧ್ಯಮವಾಗಿಯೇ ನನಗೆ ಒದಗಿದೆ. ಎಲ್ಲ ಜ್ಞಾನವೂ ಪೂರ್ವಕಲ್ಪಿತವೇ: ಕವಿತೆ ಮಾತ್ರ ಅಪೂರ್ವಕಲ್ಪಿತ! ಹೀಗೆ ನೋಡಿದರೆ ಅಹಂಕಾರವೆನ್ನುವುದೇ ಹಾಗೆ ನೋಡಿದರೆ ಮನಸ್ಸಾಗಿರುತ್ತದೆ. 'ತಾನು ಒಂದು ಲೋಟ ನೀರು’ ಎಂದುಕೊಳ್ಳುವುದಕ್ಕೂ 'ತಾನು ನೀರು’ ಎಂದುಕೊಳ್ಳುವುದಕ್ಕೂ ಇರುವ ವ್ಯತ್ಯಾಸ ಅದು. ಸಾಧಾರಣವಾಗಿ ನಾವು ನಮ್ಮ ಪೂರ್ವಗ್ರಹದ ಮೂಲಕ ಲೋಕಾನುಭವವನ್ನು ಪಡೆಯುತ್ತಿರುತ್ತೇವೆ. ಇರುವುದು ಅದೊಂದೇ ದಾರಿ ಎಂದೂ ನಮಗನಿಸುತ್ತದೆ. ನನ್ನ ಅನನ್ಯತೆಯೆಂದರೆ ಮತ್ತೇನು? ಎನಿಸುತ್ತದೆ. ಮೊದಮೊದಲು ನನಗೆ ಅನನ್ಯವಾದ ವ್ಯಕ್ತಿತ್ವ, ವಿಶಿಷ್ಟವಾದ ಸಂವೇದನೆಯಲ್ಲಿ ಹೆಚ್ಚು ನಂಬಿಕೆಯಿತ್ತು. ಕ್ರಮೇಣ ಅದರ ಮಿತಿ ಅರಿವಾಯ್ತು. ಅಲ್ಲಮ, ಕುಮಾರವ್ಯಾಸರ ಪ್ರಭಾವ ಅದಕ್ಕೆ ಕಾರಣ. ಇಲ್ಲಿ ಅನನ್ಯತೆಯೆಂದರೆ ಅನುಭವಿಸುವುದು ನಾನು ಎಂಬುದರ ಹೊರತಾಗಿ ಆಗುವ ಅನುಭವವೇ ಭಿನ್ನ ಎಂಬುದಿಲ್ಲ. ಎಲ್ಲ ಸ್ಥಿತಿಗಳೂ, ಭಾವಗಳು ತಮ್ಮಷ್ಟಕ್ಕೇ ಇವೆ. ಅವುಗಳ ಸ್ಪರ್ಶವಾದಾಗ ನಾನು ಅವಕ್ಕೆ ಪಕ್ಕಾಗುತ್ತೇನೆ. ಬಾಲ್ಯ ಬಂದು ಮುಟ್ಟಿದಾಗ ನಾನು ಬಾಲಕನಾಗಿದ್ದೆ ಎಂಬ ಹಾಗೆ. ಸಂತೋಷ, ವ್ಯಾಕುಲ, ಒಳಿತು, ಕೆಡುಕು, ಬುದ್ಧಿ, ಮೂರ್ಖತೆ, ಔದಾರ್ಯ, ಸಣ್ಣತನ, ಧೈರ್ಯ, ಭಯ ಯಾವ್ಯಾವುದು ಬಂದು ಮುಟ್ಟುತ್ತದೋ ನಾನು ಆಗ ಅದಾಗಿರುತ್ತೇನೆ. ಇದರ ಹೊರತಾಗಿ ನನ್ನದೇ ಸ್ವೋಪಜ್ಞವಾದ ಅನನ್ಯತೆಯ ಬಗ್ಗೆ ಹೆಚ್ಚಿನ ಭರವಸೆಯಿಲ್ಲ ಎನಿಸತೊಡಗಿತು.
ಲೋಕಾನುಭವವನ್ನು ಹೀಗೆ ನನ್ನನ್ನು ಬಿಟ್ಟು ಮನಸ್ಸಿನ ಮೂಲಕ ಪಡೆದಿದ್ದಾದರೆ ಅದರ ಸ್ವರೂಪವೇ ಬೇರೆಯಾಗುತ್ತದೆ. ಅದಕ್ಕೊಂದು ಹಾಜರಿ ಇರುತ್ತದೆ. ಈ ಹಾಜರಿ ಮನಸ್ಸಿನ ಸ್ವಂತ ಗುಣ. ಪಕಳೆಯ ಪರಿಮಳದ ಹಾಗೆ ಅನುಭವವನ್ನು ಸುತ್ತುವರೆದಂಥದು ಆ ಹಾಜರಿ. ಮತ್ತೊಂದು ಮನಸ್ಸಿಗೆ ಪುಷ್ಠಿಯಾಗುವಂಥದು ಅದು.
ಕವಿತೆ ನನಗೆ ನನ್ನನ್ನು ಒಡೆದು ಮನಸ್ಸನ್ನು ಕಾಣಿಸುತ್ತದೆ. ಮಂಜುಗಡ್ಡೆಯ ಒಳಬಂಧ ಸಡಿಲವಾಗಿ ಕರಗುವಂತೆ ಮಾಡುವ ಶಾಖ ಅದು. ಹಾಗೆ ಕರಗುವುದೇ ಅನುಭವ, ಕವಿತೆ. ನಾನು ಎಂಬ ಗಟ್ಟಿಯಾದ ನೆಲೆಯಿಂದ ಎಲ್ಲವನ್ನೂ ಅನುಭವಿಸುವುದು ಎಂಬುದು ಹೋಗಿ, ನಾನೊಂದು ಕಿಟಕಿ ಬಾಗಿಲುಗಳನ್ನು ತೆರೆದಿಟ್ಟ ಮನೆಯಂತಾಗಿ, ಬೆಳಕು ಗಾಳಿಗಳೆಲ್ಲ ಮನಸೋ ಇಚ್ಛೆ ಹಾಯ್ದು ಬರುವಂತೆ ಆಗುತ್ತದೆ. ನನ್ನ ಮೇಲೆ ಕವಿತೆಯ ಪ್ರಭಾವ ಇದು.
ಅಹಂಕಾರವನ್ನು ಸಂಪೂರ್ಣ ಇಲ್ಲವಾಗಿಸಿಕೊಳ್ಳುವುದು ಅಧ್ಯಾತ್ಮದ ಆದರ್ಶ, ಕವಿತೆಯದಲ್ಲ. ಕ್ಷಿತಿಜದ ಗೆರೆಯ ಮೇಲೇ ಓಡಾಡುವ ದೋಣಿಯಂತೆ ಕಾಣುವುದು ಅದು- ಕವಿತೆಯಲ್ಲಿ. ನಾನು ಕಲ್ಪಿಸಿಕೊಳ್ಳುವ ಒಂದು ಚಿತ್ರವಿದೆ. ಅದೊಂದು ವೃತ್ತ. ಅದರ ಪರಿಧಿಯಲ್ಲಿರುವ ಅಸಂಖ್ಯ ಬಿಂದುಗಳಂತೆ ನಮ್ಮ ಪರಿಮಿತವಾದ ವೈಯಕ್ತಿಕ ಚಹರೆ. ಕೇಂದ್ರದೆಡೆಗೆ ಸಾಗಿದಂತೆ ಹೆಚ್ಚೆಚ್ಚು ಸಾಧಾರಣೀಕರಣಗೊಳ್ಳುತ್ತೇವೆ ಮತ್ತು ಕೇಂದ್ರದಲ್ಲಿ ಒಬ್ಬನೇ ಮನುಷ್ಯ ಇರುತ್ತಾನೆ. ಆ ಕೇಂದ್ರದಲ್ಲಿ ನಿಂತು ನುಡಿಯುವ ವ್ಯಾಸರಂಥ ಕವಿಯ ಮಾತು ಜಗತ್ತಿನ ಎಲ್ಲ ಜೀವ ಮತ್ತು ಜಡದ ಮಾತೂ ಆಗಿ ಕೇಳುತ್ತದೆ.
ಹಾಗಿದ್ದಷ್ಟೂ, ಎಲ್ಲ ಸತ್ಯಗಳೂ ನನ್ನನ್ನು ಬಂದು ಮುಟ್ಟಲಿಕ್ಕಾಗಿಯೇ ಇವೆ ಎಂದೆನಿಸುತ್ತದೆ. (ಇಲ್ಲದಿದ್ದರೆ ಅವುಗಳಿಗೆ ಜೀವಂತವಾದ ಮೈ ಎಲ್ಲಿ?) ನಾನು ಜೀವಂತವಾಗಿ, ಸಂವೇದನಾಶೀಲನಾಗಿ ಇರುವುದಾದರೆ ಎಲ್ಲವೂ ನನ್ನನ್ನು ಬಂದು ತಲುಪುತ್ತವೆ- ನನ್ನ ವಿಳಾಸ ಬರೆದದ್ದು ನನಗೇ ಬಂದು ತಲಪುವಂತೆ. ನಾನು ಬೇಡ ಎಂದರೆ ಮಾತ್ರ ಅವು ಮರಳಿ ಹೋಗುತ್ತವೆ. ರಿಲ್ಕ್ ಕವಿಯ ಒಂದು ಮಾತು ನನಗೆ ಪ್ರಿಯವಾದುದು: 'ದೇವರು ಎಲ್ಲೆಲ್ಲೂ ಪ್ರಕಟಗೊಳ್ಳಲು ಹಾತೊರೆಯುತ್ತಿದ್ದಾನೆ. ಅವನು ನಿನ್ನ ಒಪ್ಪಿಗೆಯನ್ನು ಬೇಡುತ್ತಿದ್ದಾನೆ’ ಎಂಬುದು.
ನಾನು ದೇವರು, ಭಕ್ತಿ ಎಂದು ಬರೆದಿರುವುದನ್ನೆಲ್ಲ ಕೆಲವರು ತಪ್ಪಾಗಿ ತಿಳಿಯಬಹುದು. ದೇವರೆಂದರೆ ನನ್ನ ಇರುವಿಕೆಯನ್ನು ಸಾಂದ್ರಗೊಳಿಸಿಕೊಳ್ಳುವ ಕೇಂದ್ರ ಅಷ್ಟೇ. ಕತ್ತಲ ಮೊತ್ತವನ್ನು ಹಿಡಿದಿಟ್ಟುಕೊಳ್ಳುವ ದೀವಿಗೆಯ ಹಾಗೆ, ಮನಸ್ಸು ಮೊನೆಗೊಂಡಾಗ ಉಂಟಾಗುವುದೆಲ್ಲ ದೇವರೇ. ಆಗ ವ್ಯಕ್ತಿನಿಷ್ಠವಾದ್ದು ವಸ್ತುನಿಷ್ಠವಾದ್ದು ಎಂಬ ಭೇದ ಕಳೆದುಕೊಳ್ಳುವುದು ಅದರ ಚಂದ. ಕವಿತೆಯಿಂದ ನನಗೆ ದೊರೆತ ದೇವರು ಇದು. ದೇವರು ಇದ್ದಾನೆ ಎಂಬ ನಿಲುವಿಗಿಂತ ಇರುವಿಕೆಯೇ ದೇವರು ಎಂಬ ಭಾವನೆ ಸಂಪೂರ್ಣ ಭಿನ್ನವಾದುದು.
‘ಹಕ್ಕಿ ಪಲ್ಟಿ’ಯಿಂದ ಹಿಡಿದು ನನ್ನ ಇತ್ತೀಚಿನ 'ಜೀವಯಾನ’ದವರೆಗೂ ನನ್ನ ಕವಿತೆಯ ಯಾನ ಇರುವುದು ಇಡಿಯಾದ ಒಂದು ಮನಸ್ಸಿನ ಕಡೆಗೇ. ಅದು 'ಮೌನದ ಮಣಿ’. ಅದರ ಸ್ಪರ್ಶದಿಂದಾದ ಪುಲಕಗಳು ನನಗೆ ಕವಿತೆಗಳು. ಆ ದೊಡ್ಡದನ್ನು ಕನ್ನಡ ಎಂದೂ ಕರೆಯಬಹುದು. ಎಲೆಯಂತೆ ನಾವು ಅಂಟಿಕೊಂಡಿರುವ ಮರ- ಕನ್ನಡ. ಮೊತ್ತವಾಗಿ ಇರುವ ಪ್ರಜ್ಞೆ ಅದು. ವ್ಯಕ್ತಿಯ ಶ್ವಾಸಕೋಶಕ್ಕೆ ವಾತಾವರಣದ ಗಾಳಿ ಇರಬೇಕಾದಂತೆ ನಾನು- ಅದರ ಸಂಬಂಧ.
ಈಚಿನ 'ಜೀವಯಾನ’ ಬರೆಯುವಾಗ ನನಗೆ ಹೆಚ್ಚು ಅನುಭವಕ್ಕೆ ಬಂದಿದ್ದು ಕನ್ನಡದ ಅಭಿವ್ಯಕ್ತಿಗೊಳ್ಳುವ ತವಕವೇ. ಕವಿತೆ ನಾನು ಬರೆಯುವುದಲ್ಲ, ಭಾಷೆ ಬರೆದುಕೊಳ್ಳುವುದು ಎನ್ನುವುದು ನನಗೆ ಇನ್ನಿಲ್ಲದಂತೆ ಅರಿವಾಯ್ತು. ಭಾಷೆಯೇ ತನ್ನನ್ನು ತಾನು ಹೇಗೆ ಹೊಂದಿಸಿಕೊಳ್ಳುತ್ತದೆ, ಭಾವನೆಯನ್ನೂ ಸರಿಪಡಿಸಿಕೊಳ್ಳುತ್ತದೆ ಎಂಬುದೆಲ್ಲ ಮನ ಕಲಕುವ ಅನುಭವ. ಬರೆಯುವವನು ಅದಕ್ಕೆ ಅಡ್ಡಿಯಾಗಬಾರದಷ್ಟೇ. ತೆರೆದ ಮನಸ್ಸಿಂದ, ವಿನಯದಿಂದ ಅನುವು ಮಾಡಿಕೊಡಬೇಕಷ್ಟೇ. ಅದು ಬರುವಾಗ 'ಸರಿದು ನಿಲ್ಲುವುದು’ ಅವನ ಧರ್ಮ.
ಅನುಭವದ ಆಕಾರದಲ್ಲಿ ಮನಸ್ಸನ್ನು ಎರಕ ಹೊಯ್ಯುವುದು ಕಾವ್ಯ ಪ್ರಕ್ರಿಯೆಯ ಮರ್ಮ. ಅದು ಯಾವ ಬಿಂದುವಿನಲ್ಲಿ ಸಾಧ್ಯವಾಗುತ್ತದೆಂಬುದು ಹೇಳಬರದು; ಆದರೆ ಬಹಳ ಕೃತಕೃತ್ಯಗೊಳಿಸುವಂಥದು.
‘ಜೀವಯಾನ’ ಕವಿತೆಯನ್ನು ಬರೆಯುವ ಹೊತ್ತಿಗೆ ಕವಿತೆಯ ಬಗ್ಗೆ ನಾನು ಅಂದುಕೊಳ್ಳುವುದೆಲ್ಲವೂ ಒಂದು ಹಂತಕ್ಕೆ ಬಂದು ಮುಟ್ಟಿರುವಂತೆ ನನಗನಿಸುತ್ತದೆ. 'ಜೀವಯಾನ’ ಸದಾ ನನ್ನೊಳಗಿದ್ದಂಥ ನನ್ನ ಆಪ್ತ ಕವಿತೆ. ಆವರೆಗಿನ ನನ್ನ ಬೇರೆಲ್ಲ ಕವಿತೆಯೂ ಅದನ್ನು ಬರೆಯಲಿಕ್ಕೆಂದೇ ತಯಾರಿ ಎಂದು ನನಗೆ ಅನಿಸಿದರೆ ಅದು ನನ್ನ ಭಾವನೆಯಷ್ಟೇ. ಪ್ರೀತಿ ಎನ್ನುವುದೇ ಅನುಭವ ಪಡೆಯುವ ರೀತಿ ಎಂದು ಕವಿತೆ ಅಷ್ಟು ಹೊತ್ತಿಗೆ ನನಗೆ ಕಲಿಸಿದೆ. ಅತ್ಯಂತ ದುರ್ಬಳಕೆಯಾದ ಈ ಶಬ್ದದ ಭಾವುಕ ಛಾಯೆಯನ್ನು ನಾನು ಸೂಚಿಸುತ್ತಿರುವುದಲ್ಲ. ಇರುವಿಕೆಗೆ ಸಮಾನಾರ್ಥಕವಾಗಿ ಬಳಸುತ್ತಿರುವುದು. ಲೋಕ ಮತ್ತು ಮನಸ್ಸು ಒಂದಕ್ಕೊಂದು ಗೋಡೆಯಾಗದೆ ಕನ್ನಡಿಯೆನಿಸುವ ಸ್ಥಿತಿಯನ್ನು ವಿವರಿಸಲು ಬಳಸುತ್ತಿರುವುದು. ಹಿಗ್ಗು- ಪ್ರೀತಿ-ಇರುವು ಎಲ್ಲಾ ಒಂದೇ. ಅದೇ ಜೀವ ಮತ್ತು ಜಡ ಎಲ್ಲಕ್ಕೂ ಅರ್ಥವಾಗುವ ಭಾಷೆ. 'ತನ್ನ ಮುಟ್ಟಿ ನೀಡಿದುದೆ ಪ್ರಸಾದ’ ಎನ್ನುತ್ತಾನೆ ಅಲ್ಲಮಪ್ರಭು. ಎಲ್ಲದರೊಳಗೂ ಇರುವ ತಾನು ಮತ್ತು ತನ್ನೊಳಗಿರುವ ಎಲ್ಲ-ಮತ್ತು ಅದು ಯಾವುದರ ವಿಶಿಷ್ಟ ಚಹರೆಯನ್ನೂ ತೊಡೆದುಹಾಕದೇ -ಇದೇ ನನಗೆ ಕವಿತೆಯ ಅನುಭವ ಎನಿಸುತ್ತಿದೆ. ನನಗೆ ತೋರುವಂತೆ ಬದುಕಿನ ಯಾವುದೇ ಬೌದ್ಧಿಕವಾಗಿ ಸಮರ್ಥವಾದ ವಿವರಣೆಗಿಂತಲು ಈ ಧೋರಣೆ ಫಲಪ್ರದವಾದದು. ಇದು ಬದುಕಿಗೆ ಕಾವ್ಯದ್ದೇ ಧೋರಣೆ ಎಂದು ನನ್ನ ಭಾವನೆ.
ಏನೆಲ್ಲ ಅಂದುಕೊಂಡ ಮೇಲೂ ಇದನ್ನು ಮಾತ್ರ ಎಂದಿಗೂ ಮರೆಯಲಾಗದು: ಬದುಕಿನ ಕಾವ್ಯಗುಣವೆಂದರೇ ಅದು ಎಲ್ಲ ತೀರ್ಮಾನಗಳನ್ನು ಭಂಗಗೊಳಿಸುವಂಥದು. ಅದೊಂದು ವಿಧಿವಿಲಾಸ! ಅದೇ ಅದರ ಜೀವಂತಿಕೆ ಮತ್ತು ಸೃಜನಶೀಲತೆ. ಬದುಕಿನ ಈ ಗುಣವನ್ನೇ ನಾವು ನೆಚ್ಚಿಕೊಳ್ಳಬೇಕಾದ್ದು. ಇಲ್ಲದಿದ್ದರೆ ಕಾವ್ಯಕ್ಕಿಂತ ತತ್ವಶಾಸ್ತ್ರವೇ ಮೇಲುಗೈಯಾಗಿರುತ್ತಿತ್ತು. ಹಾಗಾಗಿ ನಾನಿಲ್ಲಿ ಬರೆದಿರುವುದೆಲ್ಲ ನನ್ನ ಕವಿತೆಗೆ ಸಮರ್ಥನೆ ಎಂದೋ ನನ್ನ ಕವಿತೆ ಇದಕ್ಕೆಲ್ಲ ಪುರಾವೆ ಎಂದೋ ನಾನು ಹೇಳುವುದಲ್ಲ. ಕವಿತೆಯ ಅಲೆ ನನ್ನ ಮೇಲೆ ಹಾಯ್ದು ನನ್ನನ್ನು ತೋಯಿಸಿದ್ದು ಹೀಗೆ ಎಂದಷ್ಟೇ.
ನಾಕು ಕವಿತೆ ಬರೆದು ಎಂಟು ಮಾತಾಡಿದೆ, ಸಹನೆಯಿರಲಿ.
(ಎಸ್.ಮಂಜುನಾಥ್ ಅವರ `ನೆಲದ ಬೇರು ನಭದ ಬಿಳಲು' ಈತನಕದ ಕವಿತೆಗಳ ಪುಸ್ತಕ 15.4.2012ರ ಭಾನುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ಬಿಡುಗಡೆ)