ಮೇ ೧೮, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಬೆನ್ನಿ ಬೆನ್ಯಾಮಿನ್ ‘ಆಡುಜೀವನ’ ಮಲಯಾಳಂ ಕಾದಂಬರಿಯ ಇಪ್ಪತ್ತಮೂರನೇ ಕಂತು, ಅನುವಾದ:ಅಶೋಕ್ ಕುಮಾರ್-    
ಡಾ. ಅಶೋಕ್ ಕುಮಾರ್
ಶುಕ್ರವಾರ, 20 ಏಪ್ರಿಲ್ 2012 (04:05 IST)
ಚಿತ್ರಗಳು: ವಿಷ್ಣು

ಕ್ರಮೇಣ ಸೆಕೆ ಅದರ ಮೂರ್ಧನ್ಯಾವಸ್ಥೆಗೆ ತಲುಪುತ್ತಲಿತ್ತು. ಇಲ್ಲಿಗೆ ಬಂದು ಇಳಿದ ದಿನ ಎಂಥಾ ಸೆಕೆಯಪ್ಪಾ ಇದು ಎಂದು ನಾನು ಆಶ್ಚರ್ಯ ಪಟ್ಟಿದ್ದೆ. ಆದರೆ ಅದು ಸೆಕೆಯ ಆರಂಭದ ದಿನಗಳಲ್ಲಿ ಒಂದಾಗಿತ್ತಷ್ಟೇ. ದಿನಗಳು ಕಳೆದಂತೆ ಅದು ಮೆಲ್ಲಗೆ ವರ್ಧಿಸುವುದನ್ನು ನಾನರಿತೆ. ಸೆಕೆ ತನ್ನ ತೀಕ್ಷ್ಣತೆಯನ್ನು ಪೂರಾ ಗಾಳಿಯಲ್ಲಿ ತುಂಬಿರಿಸಿತು. ಪ್ರತಿಸಲವೂ ಗಾಳಿ ನನ್ನನ್ನು ಹಾದುಹೋಗುವಾಗ ಒಂದು ಬೆಂಕಿಯ ಕುಲುಮೆಯೊಳಗೆ ಸಿಕ್ಕಿಬಿದ್ದಂಥ ಅನುಭವವಾಗುತ್ತಿತ್ತು.

ಆ ದಿನಗಳಲ್ಲೆಲ್ಲಾ ನನ್ನ ಅತ್ಯಂತ ದೊಡ್ಡ ಕನಸು, ಮೋಹ, ಪ್ರಾರ್ಥನೆ  ಏನಾಗಿತ್ತೆಂದು ಊಹಿಸಬಲ್ಲಿರಾ....? ಇಲ್ಲಿಂದ ಬಿಡುಗಡೆ ಪಡೆಯುವುದು....? ಕುಡಿಯಲು ಸ್ವಲ್ಪ ನೀರು ಸಿಗುವುದು....? ಸ್ವಲ್ಪ ಒಳ್ಳೆಯ ಊಟ ಲಭಿಸುವುದು....? ನನ್ನ ಮಗುವನ್ನು ಒಮ್ಮೆ ಕಾಣುವುದು....? ನನ್ನ ಸೈನುವನ್ನು ಒಮ್ಮೆ ಕರೆಯುವುದು....? ಇವಾವುದೂ ಆಗಿರಲಿಲ್ಲ. ಒಂದಷ್ಟು ಹೊತ್ತು ತುಸು ನೆರಳಿನಲ್ಲಿ ಸ್ವಲ್ಪ ಕುಳಿತುಕೊಳ್ಳುವುದೆಂಬುದೆ ಆಗಿತ್ತು ಅಂದಿನ ನನ್ನ ಹತ್ತಿಕ್ಕಲಾಗದ ಹೇರಾಸೆ. ಯಾರಿಗೆ ನೆರಳು ಕೇವಲ ಒಂದು ಕನಸಾಗಿಬಿಟ್ಟಿರುವುದೋ ಅವನ ನೋವನ್ನು ಒಮ್ಮೆ ಯೋಚಿಸಿನೋಡಿ. ನನ್ನ ಉಡುಪನ್ನು ಕಳಚಿ ನಾನು ಅದರಿಂದ ನೆರಳನ್ನುಂಟುಮಾಡಲು ಪ್ರಯತ್ನಿಸಿದ್ದೇನೆ. ಅಷ್ಟೇ ಏಕೆ , ಹೇಳಿದರೆ ನೀವು ನಂಬುತ್ತೀರಾ....? ನನ್ನ ಕೈಯಲ್ಲಿರುವ ಕೋಲಿನಿಂದ ಬೀಳುವ ನೆರಳಿನಲ್ಲಿ ಕೂಡ ಒಂದು ತಣ್ಣೆರಳನ್ನು ಹುಡುಕಿಕೊಳ್ಳಲು ನಾನು ಶ್ರಮಿಸಿದ್ದೇನೆ. ಒಂದು ಕಾಗೆಯ ರೆಕ್ಕೆಯಷ್ಟು ನೆರಳು ಸಹ ಇಲ್ಲದಂಥ ಜಾಗ ಎಂದೆಲ್ಲ ಹೇಳುವುದನ್ನು ಕೇಳಿದ್ದೆ. ನಾನದನ್ನು ನಿಜವಾಗಿಯೇ ಅನುಭವಿಸಿಸಿದೆ.

ಸೆಕೆ ಶುರುವಾದೊಡನೆ ನನ್ನ ಕಂಬಳಿ ಹೊದಿಕೆಯನ್ನು ಮಂಚದ ಮೇಲೆ ಎಳೆದು ಕಟ್ಟಿ ನಾನೊಂದು ತಂಪಿನ ತಂಬನ್ನು ಮಾಡಿಕೊಂಡಿದ್ದೆ. ಅದರ ಅಡಿಯಲ್ಲಿ ಕುಳಿತರೆ ಒಂದಿಷ್ಟು ಆಶ್ವಾಸನ ಸಿಗುತ್ತಿತ್ತು. ಆದರೆ ಅದಕ್ಕೆ ಬಿಡಬೇಕಲ್ಲ....ಬೆಳಗ್ಗೆ ಐದು ಗಂಟೆಗೆ ಶುರುವಾಗುವ ಕೆಲಸ. ರಾತ್ರಿ ಹತ್ತು ಗಂಟೆ ಆದರೂ ಮುಗಿಯುವುದಿಲ್ಲ. ಒಂದು ಸೆಟ್ ಆಡುಗಳನ್ನು ಕರೆದುಕೊಂಡುಹೋಗಿ ಮರಳಿ ತಲುಪುವಷ್ಟರಲ್ಲಿ ಅರ್‌ಬಾಬ್ ಮುಂದಿನ ಮಸರದೊಳಗಿನ ಆಡುಗಳನ್ನು ತೆರೆದು ಬಿಟ್ಟಿರುತ್ತಾನೆ. ಎರಡು ಬೋಸಿ ನೀರು ಕುಡಿಯುವುದಕ್ಕೆ ಸಾಲುವಷ್ಟು ಸಮಯವಷ್ಟೇ ಸರಿಯಾಗಿ ಸಿಗುತ್ತಿದ್ದುದು. ಅಷ್ಟರೊಳಗಾಗಲೇ ಆಡುಗಳೆಲ್ಲ ಒಂದು ದಾರಿಗೆ ಸಾಗಿ ಬಿಟ್ಟಿರುತ್ತವೆ. ಕೂಡಲೇ ಅವುಗಳ ಬೆನ್ನಟ್ಟಿ ಹೋಗದಿದ್ದರೆ ಅವು ತಮ್ಮ ಪಾಡಿಗೆ ಎಲ್ಲಾದರೂ ಹೋಗಿಬಿಡುವುವು. ಮತ್ತೆ ಅವುಗಳನ್ನು ಹಿಡಿಯಬೇಕಾದರೆ ಪಡುವ ಪರಿಪಾಟಲು ಹೇಳುವುದೇ ಬೇಡ. ಆದ್ದರಿಂದ ಒಂದು ಕ್ಷಣವೂ ತಡ ಮಾಡದೆ ಒಂದೇ ಓಟ ಶುರು ಹಚ್ಚುತ್ತಿದ್ದೆ.. ಓಡಿಓಡಿ ನನ್ನ ಬಾಯಿಯಿಂದ ಹುಚ್ಚುನಾಯಿಯ ಬಾಯಿಂದಲೆಂಬಂತೆ ನೊರೆ ಬುರುಗು ಬರುತ್ತಿತ್ತು. ಸರ್ವನಾಶಕ ಪುತ್ರನ ಕತೆಯಂತೆ ಮರುಭೂಮಿಯಲ್ಲಿ ಈ ಪ್ರಾಣಿಗಳ ಜೊತೆ ಇದ್ದು ಅಲೆಯುವಂತಾಗಲು, ಓ ನನ್ನ ಅಲ್ಲಾಹ್, ನಿನ್ನಲ್ಲೂ ನನ್ನ ಪಿತನಲ್ಲೂ ನಾನು ಏನು ಅಪರಾಧ ಮಾಡಿದೆ ಎಂದು ನಾನು ಆಕಾಶದ ಕಡೆಗೆ ಕಣ್ಣುಗಳನ್ನೆತ್ತಿ ಕೇಳುತ್ತಿದ್ದೆ. ಅಲ್ಲಿಂದ ಉರಿಯುವ ಸೂರ್ಯನ ರೂಪದಲ್ಲಿ ಅಲ್ಲಾಹು ನನ್ನನ್ನು ನೋಡುವನು. ನೀನು ಹಾದುಹೋಗ ಬೇಕಾದ ಯಾತನೆಯ ದಿನಗಳು ಇನ್ನೂ ಬರಲಿವೆಯಷ್ಟೆ ಎಂದು ಅವನು ನನ್ನೊಡನೆ ಹೇಳುವನು. ನಾನು ಮರುಭೂಮಿಯ ಪ್ರವಾದಿಯನ್ನು ಪ್ರಾರ್ಥಿಸುವಂತೆ ಸುಟ್ಟು ಪಕ್ವವಾದ ಮರಳಿನಲ್ಲಿ ಮಂಡಿಯೂರಿ ನಿಂತು ಆಕಾಶದ ಕಡೆಗೆ ನೋಡುತ್ತ ಪ್ರಾರ್ಥಿಸುತ್ತಿದ್ದೆ. ಓ ನನ್ನ ಅಲ್ಲಾಹುವೇ, ನನ್ನನ್ನು ಈ ಯಾತನೆಗಳಿಂದ ಬೇಗನೆ ಬಿಡುಗಡೆಗೊಳಿಸಪ್ಪಾ. ನಿನ್ನ ಜನರಾದ ಯಿಸ್ರೇಲಿಯರಿಗೆ ಮೂಸ ಎಂಬ ಓರ್ವ ವಿಮೋಚಕನನ್ನು ಕಳುಹಿಸಿಕೊಟ್ಟ ಹಾಗೆ ನೀನು ನನಗೂ ಒಬ್ಬ ವಿಮೋಚಕನನ್ನು ಕಳಿಸಿಕೊಡಪ್ಪಾ. ಈ ಗುಲಾಮತನದಿಂದ ಬಿಡುಗಡೆ ಹೊಂದಲು ನನಗೆ ಸಹಾಯ ಮಾಡಪ್ಪಾ....

ಅಲ್ಲಾಹು ನನ್ನ ಪ್ರಾರ್ಥನೆ ಕೇಳಿಸಿಕೊಂಡನೇ ಎಂದೆನಗೆ ಗೊತ್ತಿಲ್ಲ. ಆದರೆ ಆ ನಂಬಿಕೆ ನನ್ನಲ್ಲಿ ತುಂಬಿದಂತಹ ಆತ್ಮಧೈರ್ಯ ಎಷ್ಟೆಂದು ನನಗೆ ಗೊತ್ತು. ಅವಿಶ್ವಾಸಿಗಳೇ....ಪರಮ ಕಾರುಣಿಕನಾದ ಅಲ್ಲಾಹು ಅನುಗ್ರಹಿಸಿ ನೀಡಿರುವ ಸುಖಶೀತಳಿಮೆಯಲ್ಲಿ ರಮಿಸಿ ಜೀವಿಸುವ ಭಾಗ್ಯವಂತರೇ....ಪ್ರಾರ್ಥನೆಗಳು ನಿಮಗೆ ಕೇವಲ ಪ್ರಹಸನಗಳೂ ಕಾರ್ಯಕ್ರಮಗಳೂ ಮಾತ್ರವಾಗಿರಬಹುದು. ಆದರೆ, ನನ್ನ ಪಾಲಿಗೆ ಅದು ನನ್ನ ಸಹಿಷ್ಣುತೆಯ ಅಸ್ತಿತ್ವಕ್ಕೆ ಲಭಿಸಿದ್ದ ಕೊನೆಯ ಆಸರೆಯಾಗಿತ್ತು. ನಾನು ಶರೀರದಿಂದ ಹೆಚ್ಚು ಬಸವಳಿದಾಗಲೂ ಆತ್ಮದಿಂದ ಸಹಿಸಿನಿಂತದ್ದು ಆ ವಿಶ್ವಾಸದ ಬಲದಿಂದಲೇ. ಇಲ್ಲದಿದ್ದಲ್ಲಿ ಆ ಬೆಂಕಿಗಾಳಿಯಲ್ಲಿ ನಾನೊಂದು ಹುಲ್ಲಿನ ಎಸಳಂತೆ ಬಾಡಿ ಕರಕಾಗಿ ಹೋಗಿಬಿಡುತ್ತಿದ್ದೆ.

ಬಿಸಿಯಾಗುವುದಕ್ಕಿಂತಲೂ ಶೀಘ್ರವಾಗಿ ಮರಳು ತಂಪಾಗುವುದು. ರಾತ್ರಿ ಎಂಟು ಅಥವಾ ಒಂಬತ್ತು ಗಂಟೆ ಆಗುವಷ್ಟರಲ್ಲಿ ಮರಳು ತಂಪಾಗಿಬಿಟ್ಟಿರುತ್ತದೆ. ಅನಂತರ ಆ ಮರಳಿನಲ್ಲಿ ಮಲಗಿ ನಿದ್ರಿಸಲು ಬಹಳ ಹಿತವಾಗಿರುತ್ತದೆ. ಭೂಮಿಯ ಕೆಳಮಜಲಿನಿಂದ ತಂಪಿನ ಒಂದು ಬುಗ್ಗೆ ಮೇಲಕ್ಕೆ ಹೊಮ್ಮಿ ಬಂದು ದೇಹದಲ್ಲಿ ತೆವಳಿ ಹಬ್ಬುತ್ತಿರುವ ಹಾಗೆ ಅನಿಸುವುದು. ಎಂತಹ ಸುಖವೆಂದು ಬಲ್ಲಿರಾ?....ಅದು ಹಗಲಿನ ಸುಸ್ತನ್ನು ಪೂರ್ತಿ ಕರಗಿಸಿ ಹೋಗಲಾಡಿಸಿಬಿಡುತ್ತದೆ. ಭೂಮಿಯ ಒಳಭಾಗದಲ್ಲಿ ಕುದಿದು ಕುಪ್ಪಳಿಸುವ ಶಾಖವಿದೆಯೆಂದು ಹೇಳಿದರೂ ನಾನು ನಂಬುವುದಿಲ್ಲ. ಮರುಭೂಮಿಯಲ್ಲಿ ಜಲವಿಲ್ಲ ಎಂದು ಹೇಳಿದರೂ ನಾನು ನಂಬುವುದಿಲ್ಲ. ನಾನು ಮಲಗುತ್ತಿದ್ದ ಮಣ್ಣಿನ ಹರಹಿನ ತಳದ ಹಾದಿಯಾಗಿ ಒಂದು ಹೊಳೆ ನೀರವವಾಗಿ ಹರಿಯುತ್ತಿರಬಹುದು ಎಂದೇ ನನ್ನ ನಂಬಿಕೆ. ಆ ನೀರಿನ ಪ್ರವಾಹದ ಮೇಲೆಯೇ ನಾನು ಮಲಗಿ ನಿದ್ರಿಸುತ್ತಿರುವೆ. ಒಂದು ತೆಪ್ಪದ ಮೇಲೆ ಎಂಬಂತೆ. ಆ ನೆನಪಿನ ನಿರ್ವೃತಿಯೇ ನನಗೆ ದುಪ್ಪಟ್ಟು ಹಿತವನ್ನೂ ನಿದ್ದೆಯನ್ನೂ ದಯಪಾಲಿಸುತ್ತಿತ್ತು. ಆದರೆ, ಆ ಮಣ್ಣಿನ ಶಯನವನ್ನು ಹೆದರಿಕೆಯಿಂದ ಕೊನೆಗೊಳಿಸಬೇಕಾದುದಕ್ಕೆ ನನಗೊಂದು ಕಾರಣವುಂಟಾಯಿತು....ಅದನ್ನು ಹೇಳುವೆ.

ಒಂದು ದಿನ ಮುಂಜಾನೆ ನಾನು ಮಸರದ ಒಳಹೊಕ್ಕಾಗ ಮೂರ್ನಾಲ್ಕು ಆಡುಗಳು ಸತ್ತುಬಿದ್ದಿರುವುದನ್ನು ಕಂಡೆ! ನಾನು ಭಯಬಿದ್ದೆ. ಹಿಂದಿನ ದಿನದವರೆಗೂ ಏನೊಂದೂ ತೊಂದರೆಯಿಲ್ಲದೆ ಓಡಿ ಕುಣಿದಾಡಿ ನಡೆದಂಥ ಆಡುಗಳು ಅವು. ಅವುಗಳಲ್ಲಿ ಒಂದು ಪೂರ್ಣ ಗರ್ಭಿಣಿ ಬೇರೆ. ಏನು ನಡೆಯಿತೆಂದು ನನಗೆ ಯಾವೊಂದು ಸುಳುಹೂ ಸಿಗಲಿಲ್ಲ. ಏನಾದರೂ ಕಾಯಿಲೆ ಬಂದಿತ್ತಾದರೆ ಅದು ಹೇಗೆ ಮೂರ್ನಾಲ್ಕು ಆಡುಗಳು ಒಂದೇ ಸಲಕ್ಕೆ....? ಅಲ್ಲಾಹ್, ಇದೇನಾದರೂ ಅಂಟುಜಾಡ್ಯವಿರಬಹುದೇ....? ಆದರೆ, ಹಾಗಾಗಿದ್ದರೆ ಅದರ ಲಕ್ಷಣಗಳು ನನಗಾದರೂ ಕಾಣಿಸಬೇಕಿತ್ತಲ್ಲವೇ....? ನಾನು ಹೌಹಾರಿ ಅರ್‌ಬಾಬ್‌ನ ಗುಡಾರಕ್ಕೆ ಓಡಿದೆ. ಏನೇನೋ ಹೇಳಿ ವರದಿಯೊಪ್ಪಿಸಿದೆ. ನನ್ನ ಭಾಷೆಯಲ್ಲೇ. ಅರ್‌ಬಾಬ್ ಇಷ್ಟರಲ್ಲಾಗಲೇ ನನ್ನ ಭಾಷೆ ಕಲಿತಿರಬೇಕು. ಅಲ್ಲದಿದ್ದರೂ  ಅಗತ್ಯವು ಕೇಳುವವನದಾಗಿದ್ದಲ್ಲಿ ಭಾಷೆ ಯಾವುದಾದರೂ ಆತನಿಗೆ ಅರ್ಥವಾಗುತ್ತದೆ ಎಂದು ಬಳಿಕ ಎಷ್ಟೋ ಬಾರಿ ಸ್ಪಷ್ಟವಾಗಿದೆ. ಹಾಗಲ್ಲದೆ, ಅಗತ್ಯವು ಹೇಳುವವನದಾಗಿದ್ದರೆ ಯಾವ ಭಾಷೆಯಲ್ಲಿ ಹೇಳಿದರೂ ಅದು ಕೇಳುಗನಿಗೆ ಏನೂ ಅರ್ಥವಾಗುವುದಿಲ್ಲ. ಇದೂ ನನಗನುಭವವಾಗಿದೆ! ಅರ್‌ಬಾಬ್ ಮೇಲೆದ್ದು ನನ್ನ ಜೊತೆಗೆ ಮಸರಕ್ಕೆ ಬಂದ. ಸತ್ತ ಆಡುಗಳ ಸುತ್ತಲೂ ನಡೆದು ನೋಡಿದ. ಅವುಗಳನ್ನು ತಿರುಗಿಸಿ ಹೊರಳಿಸಿ ಪರೀಕ್ಷಿಸಿ ನೋಡಿದ. ಸತ್ತ ಕಣ್ರೆಪ್ಪೆಗಳನ್ನು ಅಗಲಿಸಿ ನೋಡಿದ. ಯಾವಾಗ ತಪ್ಪು ನನ್ನ ಮೇಲೆ ಹೊರಿಸಲ್ಪಡುವುದೋ ಬೆನ್ನಿಗೆ ಏಟು ಬೀಳುವುದೋ ಎಂದು ನಾನು ನಿರೀಕ್ಷಿಸುತ್ತಾ ನಿಂತೆ. ಆದರೆ ಹಾಗೇನೂ ಸಂಭವಿಸಲಿಲ್ಲ. ಅರ್‌ಬಾಬ್ ಮಸರದ ಸುತ್ತಲೂ ನಡೆದು ಏನೇನೋ ಪರಿಶೋಧಿಸಿದ. ಆಮೇಲೆ ಹೋಗಿ ಗಾಡಿಯಿಂದ ಒಂದು ಸನಿಕೆ ತಂದುಕೊಟ್ಟು ಹೊಂಡ ತೋಡಲು ಹೇಳಿದ. ನಾನು ಕುಣಿ ತೋಡಿ ಮುಗಿಸಿದಾಗ ಅರ್‌ಬಾಬ್ ತಾನೇ ಆಡುಗಳನ್ನು ಎಳೆದುಕೊಂಡು ಬಂದು ಗುಂಡಿಯಲ್ಲಿ ಹಾಕಿ ಮುಚ್ಚಿದ. ನನಗೆ ಭಾರೀ ಅಚ್ಚರಿಯೆನಿಸಿತು. ಎಂಜಲು ಕೈಯಲ್ಲಿ ಕಾಗೆ ಓಡಿಸದ ನನ್ನ ಅರ್‌ಬಾಬ್ ಇಷ್ಟು ಬೆಲೆಬಾಳುವ ಆಡುಗಳನ್ನು ಹೇಗೆ ಗುಂಡಿಯೊಳಗೆ ಹಾಕಿ ಮುಚ್ಚಿದ ಅಂತ....? ನನಗೆ ತಲೆ ಬುಡ ಅರ್ಥವಾಗಲಿಲ್ಲ. ಅರ್‌ಬಾಬ್ ಹೇಳಲೂ ಇಲ್ಲ. ನಾನು ನನ್ನ ಎಂದಿನ ಕೆಲಸಗಳಿಗೆ ಹೋದೆ. ಆಡುಗಳ ಹಾಲು ಕರೆದೆ. ಸ್ವಲ್ಪ ಅರ್‌ಬಾಬ್‌ಗೆ ತೆಗೆದುಕೊಂಡುಹೋಗಿ ಕೊಟ್ಟೆ. ನಾನು ಸ್ವಲ್ಪ ಕುಡಿದೆ. ಉಳಿದದ್ದನ್ನು ಮರಿಗಳಿಗೆ ಕೊಟ್ಟೆ. ಆಡುಗಳನ್ನು ಜೊತೆಯಲ್ಲಿ ಕರೆದುಕೊಂಡು ಹೊರಗೆ ಹೋದೆ. ಎರಡು ಖುಬೂಸ್ ಕಚ್ಚಿ ಜಗಿದು ತಿಂದೆ. ಮಸರ ಗುಡಿಸಿ ಮುಗಿಸಿದೆ. ತೊಟ್ಟಿಗಳಲ್ಲಿ ನೀರು, ಗೋಧಿ, ಹಸಿಹುಲ್ಲು, ಒಣಹುಲ್ಲು, ಉಪ್ಪು ತುಂಬಿಸಿದೆ. ನನ್ನ ನಿತ್ಯಾಭ್ಯಾಸಗಳನ್ನು ಆವರ್ತನಗೊಳಿಸಿದೆ. ಆಡುಗಳು ಸತ್ತರೇನು....? ಬದುಕಿದರೇನು....? ಅರ್‌ಬಾಬ್‌ಗೇ ನಷ್ಟ. ನನಗೇನೂ ಲಾಭವೂ ಇಲ್ಲ ನಷ್ಟವೂ ಇಲ್ಲ. ಎಷ್ಟೇ ನಿಸ್ಸಂಗತೆ ಪಾಲಿಸಲು ಪ್ರಯತ್ನಿಸಿದರೂ ಆ ಸಾವುಗಳು ನನ್ನಲ್ಲಿ ಅತಿಯಾಗಿ ಉಮ್ಮಳಿಸಿ ಬರುತ್ತಲೇ ಇದ್ದವು. ಅದರಲ್ಲೂ ಹೆಚ್ಚಾಗಿ ಆ ಪೂರ್ಣಗಬ್ಬದ ಆಡಿನ ಮರಣ. ಚೊಚ್ಚಲ ಪ್ರಸವಕ್ಕೆ ತಯಾರಾಗುತ್ತಿತ್ತು ಆ ಆಡು! ಅದರ ನಡಿಗೆಯಲ್ಲೂ ನೋಟದಲ್ಲೂ ಆ ಒಂದು ಹೆಮ್ಮೆಯೂ ಗರ್ವವೂ ನನಗೆ ಕಂಡುಬರುತ್ತಲಿತ್ತು. ಆಡಾದರೂ ಅದಕ್ಕೂ ಇರುತ್ತದಲ್ಲವೇ ಭಾವನೆಗಳು. ತಾಯಿಯಾಗುವುದನ್ನೂ ಮರಿಗೆ ಮೊಲೆಯೂಡುವುದನ್ನೂ ಎಲ್ಲಾ ಎಷ್ಟು ಸಲ ಅದು ಕನಸು ಕಂಡಿರಬಹುದು. ಪಾಪ. ಎಲ್ಲವೂ ಒಂದೇ ರಾತ್ರಿಯಲ್ಲಿ ಅಸ್ತಮಿಸಿ ಬಿಟ್ಟಿದೆ. ಇಷ್ಟೇನೇ ನಾವುಗಳು ಕನಸುಗಳಿಂದ ಕಟ್ಟಿ ಎಬ್ಬಿಸುವ ಈ ಜೀವನ!

ಆಡೇ,.....ಪ್ರೀತಿಯ ಆಡೇ....ನನ್ನ ನಿನ್ನ ಈ ಜೀವನಗಳು ಯಾರೋ ನೀಡಿದ ಕಾಣಿಕೆಗಳಷ್ಟೇ. ಆ ದಾತನು ಅನುಮತಿಸಿರುವುದಕ್ಕಿಂತ ಒಂದು ದಿನ ಕೂಡ ಹೆಚ್ಚಾಗಿ ಬದುಕಲು ನನಗೂ ನಿನಗೂ ಹಕ್ಕಿಲ್ಲ. ಅನುಭವಿಸ ಬೇಕಾದುದನ್ನೆಲ್ಲ ಅನುಭವಿಸದೆ ನಾವು ಇಲ್ಲಿಂದ ತೆರಳುವುದೂ ಸಾಧ್ಯವಿಲ್ಲ. ನೀನು ಸೌಭಾಗ್ಯವತಿ ಕಣೇ ಆಡೇ. ಈ ಮಸರದಲ್ಲಿ ಸಿಕ್ಕಿಬಿದ್ದು ನರಕವನ್ನನುಭವಿಸದೆ ಬೇಗನೆಯೇ ಹೋಗಿಬಿಡಲು ನಿನಗೆ ಸಾಧ್ಯವಾಯಿತಲ್ಲ. ನೀನು ದುರದೃಷ್ಟವಂತೆ ಕಣೆ ಆಡೇ. ನಿನ್ನ ಮರಿಯನ್ನು ಒಮ್ಮೆ ಕೂಡ ಕಾಣಲಾಗದೆ ಸಾಯಲು ನೀನು ವಿಧಿಸಲ್ಪಟ್ಟೆಯಲ್ಲ. ನಾನು ಎರಡು ರೀತಿಯಲ್ಲೂ ನಿರ್ಭಾಗ್ಯವಂತ. ನಾನು ಈ ಮಸರದಲ್ಲಿ ಬಿದ್ದುಕೊಂಡು ಎಲ್ಲಾ ಕಾಲಕ್ಕೂ ನರಕವನ್ನನುಭವಿಸಬೇಕು. ನನಗೆ ನನ್ನ ಮಗುವನ್ನು ಒಮ್ಮೆ ಕೂಡ ಕಾಣಲು ಸಾಧ್ಯವಾಗುವುದಿಲ್ಲ. ಶಾಪಗ್ರಸ್ತ ಜೀವನ!

ರಾತ್ರಿ ಖುಬೂಸ್ ತಿಂದು ಮುಗಿಸಿದ ಮೇಲೆ ನಾನು ಬರಿ ನೆಲದ ಮೇಲೆ ಒಂದು ಕಲ್ಲನ್ನು ತಲೆದಿಂಬಾಗಿ ಇಟ್ಟುಕೊಂಡು ಮಲಗಿದೆ. ಆ ವೇಳೆಯಲ್ಲಿ ಅರ್‌ಬಾಬ್ ರೂಢಿಗೆ ವಿಪರೀತವಾಗಿ ಗಾಡಿ ಸ್ಟಾರ್ಟ್ ಮಾಡಿದ. ಅರ್‌ಬಾಬ್ ಎಲ್ಲಿಗಾದರೂ ಹೋಗುತ್ತಿರುವನೇ ಎಂಬೊಂದು ವ್ಯಾಮೋಹ ನನ್ನಲ್ಲಿ ತಟ್ಟನೆ ಉದಿಸಿತು. ಹಾಗಿದ್ದರೆ ತಪ್ಪಿಸಿಕೊಳ್ಳುವುದೇ ಸರಿ. ಏನೂ ತಿಳಿಯದವನ ಹಾಗೆ ನಾನು ಮಲಗಿದೆ. ಆದರೆ ನನ್ನ ಸರ್ವೇಂದ್ರಿಯಗಳನ್ನೂ ಕಾತರದಿಂದ ಹರಿತವಾಗಿಸಿಕೊಂಡಿದ್ದೆ. ಅರ್‌ಬಾಬ್ ಗಾಡಿಯನ್ನು ತೆಗೆದುಕೊಂಡು ಮಸರದ ಸುತ್ತಲೂ ಓಡಿಸತೊಡಗಿದನು. ಬಹಳ ನಿಧಾನವಾಗಿ ಏನನ್ನೋ ಹುಡುಕುತ್ತಿರುವ ಹಾಗಿತ್ತು ಅದು. ಮೂರು ನಾಲ್ಕು ಸುತ್ತು ಓಡಿಸಿದ ಮೇಲೆ ತಿರುಗಿ ಬಂದು ಗುಡಾರದ ಮುಂದೆ ನಿಲ್ಲಿಸಿದ. ಮತ್ತೆ ಗುಡಾರದೊಳಕ್ಕೆ ಹೋದನು. ಆಶಾಭಾವಲೋಕಕ್ಕೆ ಉದಯಿಸಿ ಬಂದಿದ್ದ ಪ್ರತೀಕ್ಷೆಯ ಸರ್ವ ನಕ್ಷತ್ರಗಳೂ ಒಂದೇ ಕ್ಷಣದಲ್ಲಿ ಕತ್ತಲಲ್ಲಿ ನಂದಿಹೋದವು. ನನಗೆ ವ್ಯಥೆ ಸಂಕಟಗಳುಂಟಾದವು. ಸರ್ವವನ್ನೂ ನಾನು ಶಪಿಸಿದೆ. ಅಲ್ಲಾಹುವನ್ನೇ ನಾನು ಶಪಿಸಿದೆ.

ಆ ರಾತ್ರಿ ಮತ್ತೂ ಹಲವು ಬಾರಿ ಅರ್‌ಬಾಬ್ ಮಸರದ ಸುತ್ತಲೂ ಗಾಡಿ ತೆಗೆದುಕೊಂಡು ಸುತ್ತು ಹಾಕಿದ. ನನಗೊಂದೂ ಅರ್ಥವಾಗಲಿಲ್ಲ. ನನಗೆ ಏನನ್ನೂ ಹೇಳಲೂ ಇಲ್ಲ. ನಾನೇನೂ ಕೇಳಲೂ ಇಲ್ಲ. ಆಡುಗಳು ಮನುಷ್ಯರೊಡನೆ ಮಾತನಾಡುವುದಿಲ್ಲವಲ್ಲ.

ನಾನು ಆ ಮರಳಸುಖದಲ್ಲಿ ಮಲಗಿ ನಿದ್ದೆಹೋಗಿಬಿಟ್ಟೆ. ರಾತ್ರಿ ಎಷ್ಟೋ ವೇಳೆ ಕಳೆದಿರಬೇಕು. ಮಸರದೊಳಗಡೆ ಆಡುಗಳ ಕೀಚುಕಿರುಚು ನೆಗೆದಾಟಗಳನ್ನು ಕೇಳಿಯೇ ನಾನು ಎಚ್ಚರಗೊಂಡೆ. ನಾನು ನೋಡಿದಾಗ ಅರ್‌ಬಾಬ್ ತಂತಿಬೇಲಿಯ ಸುತ್ತಲೂ ನೋಡುತ್ತ ಪರಿಭ್ರಾಂತನಾಗಿ ಓಡುತ್ತಲಿದ್ದನು. ಅದರ ನಡುವೆಯೆ ನನ್ನನ್ನು ಹೆಸರು ಹಿಡಿದು ಕೂಗುತ್ತಾ ’ ಹಯ್ಯಾ....ಹಯ್ಯಾ....’ಎಂದು ಕಿರುಚುತ್ತಲೂ ಇದ್ದಾನೆ. ನಾನು ತಡಬಡಿಸಿ ಮೇಲೆದ್ದು ಅತ್ತ ಹೋದೆ. ಅರ್‌ಬಾಬ್ ನನ್ನ ಕೈಗೆ ಒಂದು ಕೋಲನ್ನು ಕೊಟ್ಟುಬಿಟ್ಟು ದೂಡುತ್ತಾ ಮಸರದೊಳಕ್ಕೆ ಕರೆದೊಯ್ದು ಬಿಟ್ಟನು. ವಿಷಯ ಅರಿಯದೆ ನಾನು ಮಸರದೊಳಗೆ ಗಾಬರಿಯಾಗಿ ನಿಂತೆ. ಅರ್‌ಬಾಬ್ ಅಂತೂ ಚೂಫ್....ಚೂಫ್....ಹಯ್ಯಾ....ಹಯ್ಯಾ....ಎಂದು ಹೇಳುತ್ತಾ ಗಾಡಿ ಆನ್ ಮಾಡಿ ಮಸರದೊಳಕ್ಕೆ ಬೆಳಕನ್ನು ಹಾಯಿಸಿದ. ಆಡುಗಳು ಆಗಲೂ ಅಸ್ವಸ್ಥವಾಗಿ ಕಿರಿಚುತ್ತಲೂ ಜಿಗಿದಾಡುತ್ತಲೂ ಇದ್ದವು. ನಾನು ಮೆಲ್ಲಗೆ ಒಂದೊಂದೇ ಆಡನ್ನು ಸರಿಸಿ ಅಲ್ಲೇನು ನಡೆಯುತ್ತಿದೆ ಎಂದು ನೋಡಿದೆ. ಕೊನೆಗೆ ನಾನು ಆ ದೃಶ್ಯವನ್ನು ಕಂಡೆ! ಆಡುಗಳು ಕಿರುಚಿದ್ದಕ್ಕೂ ಜಿಗಿದಾಡಿದ್ದಕ್ಕೂ ಕಾರಣವನ್ನು ಕಂಡೆ. ನಾನು ಹೆದರಿ ಕೂಗುತ್ತಾ ಹಿಂದಕ್ಕೆ ಓಡಿದೆ. ಒಂದು ಆಡಿನ ಕಾಲಿಗೆ ಒಂದು ಹಾವು ಬಿಗಿದು ಸುತ್ತಿ ಮಲಗಿದೆ.    

ಊರಿನಲ್ಲಿ ಒಂದು ನೀರುಹಾವನ್ನು ಕಂಡರೆ, ಒಂದು ಕೇರೆ ಹಾವನ್ನು ಕಂಡರೆ ಮತ್ತೆ ಮೂರು ದಿನ ಆ ಕಡೆಗೇ ಸುಳಿಯದಂಥವನು ನಾನು. ಹಾವು ಎಂಬ ಹೆಸರನ್ನು ಕೇಳಿದರೇ ನನಗೆ ಭಯ. ನಾನು ಮಸರದಿಂದ ಓಡಿ ಹೊರಕ್ಕೆ ನೆಗೆದೆ. ಅದನ್ನು ಕಂಡು ಅರ್‌ಬಾಬ್ ಸಿಟ್ಟಿನಿಂದ ಇಳಿದು ಬಂದು ನನ್ನನ್ನು ಹಿಡಿದು ಮಸರದೊಳಕ್ಕೆ ತಳ್ಳಿಬಿಟ್ಟು ಹೊರಗಿನಿಂದ ಅಗಳಿ ಹಾಕಿಬಿಟ್ಟನು. ಇನ್ನು ನನ್ನ ಮುಂದಿರುವುದು ಎರಡೇ ದಾರಿಗಳು ಮಾತ್ರ. ಒಂದು, ಹೇಗಾದರೂ ಮಾಡಿ ಆ ಹಾವನ್ನು ಕೊಲ್ಲುವುದು. ಇಲ್ಲದಿದ್ದರೆ ಆಡುಗಳ ಜೊತೆಗೆ ಬಿದ್ದುಕೊಂಡು ಹಾವಿನ ಕಡಿತಕ್ಕೊಳಗಾಗಿ ಸಾಯುವುದು. ಆವಶ್ಯಕತೆಗಳೇ ಮನುಷ್ಯನಲ್ಲಿ ಧೀರತೆಯನ್ನೂ ಭೀರುತನವನ್ನೂ ಎಲ್ಲಾ ತುಂಬುವುದು. ಇನ್ನೂ ಪೂರ್ಣವಾಗದ ಒಂದು ಮುಷ್ಟಿ ಬಯಕೆಗಳು ನನ್ನಲ್ಲಿ ಧುಮುಗುಟ್ಟುತ್ತ ನಿಂತಿವೆ. ನಾನು ಆಗ ಧೀರನಾಗಿಯೇ ತೀರಬೇಕಿತ್ತು. ಬದುಕಿರಬೇಕು ಎಂಬುದು ನನ್ನ ಜರೂರು ಆವಶ್ಯಕತೆಯಾಗಿತ್ತು.

ನಾನು ಆಡುಗಳ ನಡುವಿನಿಂದ ಮೆಲ್ಲಮೆಲ್ಲಗೆ ನುಸುಳಿಕೊಂಡು ಹೋಗಿ ಹಾವು ಸುತ್ತಿಕೊಂಡಿದ್ದ ಆಡಿನ ಕಾಲಿಗೆ ಗುರಿಯಿಟ್ಟು ಹೊಡೆದೆ. ಜನಗಳ ಗುಂಪಿನಲ್ಲಿ ಹೇಗೋ ಹಾಗೆಯೇ ಆಡುಗಳ ಗುಂಪಿನಲ್ಲೂ ಹಾವು ಸಾಯುವುದಿಲ್ಲ. ಕಿಕ್ಕಿರಿದು ನಿಂತಿರುವ ಆಡುಗಳ ನಡುವೆ ಹಾವಿಗೆ ಹೇಗೆ ತಾನೆ ಎಲ್ಲಿ ತಾನೆ ಪೆಟ್ಟು ಬೀಳಲು ಸಾಧ್ಯ. ಅದರ ದೇಹದ ಮೇಲೆ ಬರಿದೇ ಕೋಲು ಒಮ್ಮೆ ತಾಗಿತು ಅಷ್ಟೇ. ಅದು ಫೂತ್ಕರಿಸುತ್ತಾ ನನ್ನ ಕಡೆಗೆ ಬಂದಿತು. ನಾನು ಹೊರಕ್ಕೆ ಓಡಿದೆ. ಆದರೆ ಮಸರದ ಬಾಗಿಲನ್ನು ಬಂಧಿಸಲಾಗಿದೆಯಲ್ಲ. ಹೆದರಿಕೆಯಿಂದ ಹುಚ್ಚು ಹಿಡಿದಂತಾಗಿದ್ದ ನಾನು ತಿರುಗಿ ನಿಂತು ಯದ್ವಾತದ್ವಾ ಹೊಡೆದೆ.ಹಲವು ಏಟುಗಳು ಆಡುಗಳ ಬೆನ್ನಿಗೇ ಬಿದ್ದವು.ಅವು ಚೀರುತ್ತಾ ಓಡ ತೊಡಗಿದವು. ನಾನು ಹೊಡೆಯುತ್ತಲೇ ಇದ್ದೆ. ಒಂದೇ ಒಂದು ಏಟು ಕೂಡ ಹಾವಿಗೆ ಬಿದ್ದಿರಲಾರದು. ಆದರೆ ಅದೂ ಹೆದರಿರಬಹುದು. ಅದು ಅದರ ಪಾಡಿಗೆ ಹೋಗಿಬಿಟ್ಟಿತು.

ನನಗೆ ಅರ್‌ಬಾಬ್‌ನಿಂದ ಸಾಕೋಸಾಕಾಗುವಷ್ಟು ಬೈಗಳ ಅಭಿಷೇಕವಾಯ್ತು. ಆಡುಗಳಲ್ಲಿ ಒಂದು ಆಗಲೇ ಸತ್ತಿತು. ನನಗೆ ನನ್ನ ಮನಃಸಮಾಧಾನ ನಷ್ಟವಾಯಿತು. ಇವಿಷ್ಟು ಆ ರಾತ್ರಿಯ ಅನಂತರಫಲಗಳು. ಅಲ್ಲಿಗೆ ನನ್ನ ನೆಲದ ಶಯನ ಮತ್ತು ಮರಳಿನ ತಂಪು ಶಾಶ್ವತವಾಗಿ ಇಲ್ಲವಾದವು. ನಾನು ಎಷ್ಟೋ ದಿನಗಳಿಂದ ಬರೀ ನೆಲದಲ್ಲೆ ಮಲಗಿ ನಿದ್ರಿಸುತ್ತಿದ್ದೆ. ಬೇಕಿದ್ದರೆ ಅವುಗಳಲ್ಲಿ ಒಂದು ಹಾವು ನನ್ನ ಕಡೆಗೆ ಹರಿದು ಬರಬಹುದಾಗಿತ್ತು. ನನ್ನನ್ನು ಕಚ್ಚಬಹುದಾಗಿತ್ತು. ನನ್ನನ್ನು ನಿಷ್ಕರುಣವಾಗಿ ಕೊಲ್ಲಬಹುದಿತ್ತು. ಮರುಭೂಮಿಯ ಹಾವುಗಳು ಉಗ್ರ ವಿಷವುಳ್ಳಂಥವು ಎಂದು ನಾನು ಕೇಳಿದ್ದೇನೆ. ಅವು ಹರಿದು ಹೋಗುವ ದಾರಿಯಲ್ಲಿ ಒಂದು ಕಿರುಸ್ಪರ್ಶ ಸಾಕು ನನ್ನ ಜೀವನವು ಅವಸಾನವಾಗಲು. ಆದರೆ, ಯಾವ ಹಾವೂ ನನ್ನನ್ನು ಅರಸಿ ಬರಲಿಲ್ಲ. ನಾನು ಅಲ್ಲಿ ಮಲಗಿರುವುದನ್ನು ಅರಿತು ಅವು ಹಾದಿ ಬದಲಿಸಿ ಹೋಗಿರ ಬಹುದು. ಕರುಣಾಮಯನಾದ ಅಲ್ಲಾಹು ಎಲ್ಲವನ್ನೂ ನಿಶ್ಚಯಿಸಿದ್ದಾನೆ. ಆ ಪ್ರಕಾರವೇ ಎಲ್ಲವೂ ನದೆಯುವುದು. ಒಂದು ಹಾವು ಸಹ ಅವನ ನಿರ್ಧಾರ ಬಿಟ್ಟು ನಡೆಯುವುದಿಲ್ಲ. ಎಲ್ಲಾ ಸ್ತುತಿಯೂ ನಿನಗಿರಲಿ ಅಲ್ಲಾಹುವೇ. 

ಮರುದಿನ ಮುಂಜಾನೆ ಮೂರು ಆಡಿನ ಮರಿಗಳು ಮಸರದ ಒಳಗೆ ಸತ್ತು ಬಿದಿದ್ದವು. ಅವುಗಳಲ್ಲಿ ಒಂದು ನನ್ನ ನಬೀಲ್ ಆಗಿದ್ದ....!       

(ಮುಂದುವರೆಯುವುದು)

ಪುಟದ ಮೊದಲಿಗೆ
 
Votes:  4     Rating: 5    
 
 
ಸಂಬಂಧಿಸಿದ ಲೇಖನಗಳು
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು
  ವಿಜಯರಾಘವನ್ ಅನುವಾದಿಸಿದ ಇಟಾಲಿಯನ್ ಕವಿತೆ
  ಕೃಷ್ಣಮೂರ್ತಿ ಹನೂರರ ಕಾದಂಬರಿಯ ಒಂದು ಅಧ್ಯಾಯ
  ನಿತ೦ಬಗಳಿಗೊ೦ದು ಕವಿತೆಯ ಅಂಜಲಿ:ಸುಮತಿ ಮುದ್ದೇನಹಳ್ಳಿ ಬರಹ
  ಪ್ರತಿಭಾ ನಂದಕುಮಾರ್ ಬರೆದ ದೇವಿ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಎರಡು ಕವಿತೆಗಳು
  ರಾಬಿಯಾಶೇಖ್ ಬರೆದ ಹೀಗೊಂದು ಸಾನೆಟ್
  ಭಾನುವಾರದ ವಿಶೇಷ: ನಾಗರಾಜ ವಸ್ತಾರೆ ಬರೆದ ಕಥೆ ‘ಹತೋಟಿ’
  ಸ್ಮಿತಾ ಅಮೃತರಾಜ್ ಬರೆದ ಎರಡು ಕವಿತೆಗಳು
  ಗಣನಾಥ ಅನುವಾದಿಸಿದ ಇನ್ನಷ್ಟು ಜಪಾನೀ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಕತೆ ‘ಅಂತರಂಗದ ಆಯಾಮ’
  ಒಂಟಿ ದೇವನಿಗೆ ನಕ್ಷತ್ರ ಬರೆದ ಕವಿತೆ
  ಅನಿಲ್ ತಾಳಿಕೋಟಿ ಅನುವಾದಿಸಿದ ನೆರೂದಾ ಕವಿತೆ
  ಕಾಲವಾದ ವಿನಯಚಂದ್ರನ್ ಕವಿತೆ
  ಕುಸುಮಾ ಶಾನಭಾಗ ಬರೆದ ಕತೆ ‘ಕುಂದ ಬೆಟ್ಟದ ಪಿಸುಮಾತು’
  ಎಸ್. ಎನ್ ಗಣನಾಥ ಅನುವಾದಿಸಿದ ಜಪಾನೀ ಕವಿತೆಗಳು
  ಪ್ರಜ್ಞಾ ಮತ್ತಿಹಳ್ಳಿ ಬರೆದ ವೇಷದ ಪದ್ಯಗಳು
  ಕಮಲಾಕರ ಕಡವೆ ಅನುವಾದಿಸಿದ ಇಟಾಲೋ ಕ್ಯಾಲ್ವಿನೋ ಕತೆಗಳು
  ಸ್ಮಿತಾ ಮಾಕಳ್ಳಿ ಮೊದಲ ಪುಸ್ತಕ ಇಂದು ಬಿಡುಗಡೆ
  ರಾಬಿಯಾಶೇಖ್ ಬರೆದ ದಿನದ ಕವಿತೆ
  ಅಗಲಿದ ಗೆಳೆಯನ ಕುರಿತು ರಾಜು ಹೆಗಡೆ ಕವಿತೆ
  `ಒಂದು ಇಂಡಿಯನ್ ಇಂಗ್ಲೀಷ್ ಕಥೆ’
  ಕಾವ್ಯಾ ಕಡಮೆ ಬರೆದ ದಿನದ ಕವಿತೆ
  ಮೈಶ್ರೀ.ನಟರಾಜ ಅನುವಾದಿಸಿದ ರಿಚರ್ಡ್ ಬ್ಲಾಂಕೋ ಕವಿತೆ
  ಭಾನುವಾರದ ವಿಶೇಷ: ವಿಕ್ರಂ ಹತ್ವಾರ್ ಬರೆದ ಕಥೆ ‘ಪೇಣಿ’
  ನಾಗರಾಜ ವಸ್ತಾರೆ ಬರೆದ ದಿನದ ಕವಿತೆ
  ವಾರದ ವಿಶೇಷ: ಪ್ರೇಮಶೇಖರ ಬರೆದ ‘ಬಾಳಿಗೊಂದಿಷ್ಟು ಗಾಳಿ’
  ಒಂದು ಮಲಯಾಳಂ ಕವಿತಾ ಸಂಕಲನದ ಕುರಿತು ಎಲ್.ಸಿ. ಸುಮಿತ್ರಾ
  ವಿಕಾಸ್ ನೇಗಿಲೋಣಿ ಕಥೆ ‘ನಮ್ಮ ಹಕ್ಕಿ ಬಿಟ್ಟೆ ಬಿಟ್ಟೆ’
  ನಕ್ಷತ್ರ ಬರೆದ ಕರುಳ ಸಂಕಟದ ಕವಿತೆ
  ಸುಧಾ ಚಿದಾನಂದಗೌಡ ಸಣ್ಣಕತೆ ‘ಲೇಡಿ ಲಕ್ಕವ್ವ’