ಮನಃಶಾಸ್ತ್ರಜ್ಞರ ಪ್ರಕಾರ ಪ್ರತಿಯೋರ್ವನು ತನ್ನ ಮೂರನೇ ವಯಸ್ಸಿನಿಂದ ತನ್ನ ಜೀವನ ಘಟನೆಗಳನ್ನ ನೆನಪಿಟ್ಟುಕೊಳ್ಳಬಲ್ಲ. ನನ್ನ ಬಾಲ್ಯದ ಅತಿ ಮೊದಲ ನೆನಪೆಂದರೆ, ನಾನು ಒಬ್ಬನೇ ಸ್ವತಂತ್ರವಾಗಿ ಕಾಲ್ನಡಿಗೆಯಲ್ಲಿ ಹೊರಟ ವಾಯು ವಿಹಾರ. ನನ್ನೂರು ಬಿಸಿಲು ಸೀಮೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಎಂಬ ಪುಟ್ಟ ಪಟ್ಟಣ. ನನಗಾಗ ನಾಲ್ಕೈದು ವರುಷವಿರಬಹುದು, ಒಂದು ಸಂಜೆ ಯಾರಿಗೂ ಹೇಳದೆ ಕೇಳದೆ ಒಬ್ಬನೇ ಹೊರಗೆ ನಡೆದಿದ್ದೆ, ನಡೆಯುತ್ತಾ ನಡೆಯುತ್ತಾ ಊರ ಹೊರಗೆ ಬಂದು ಬಿಟ್ಟಿದ್ದೆ! ನಮ್ಮೂರಿನ ಅಂಚಿನಲ್ಲಿ ಯಾರೋ ಪುಣ್ಯಾತ್ಮರು ಮೇಷ್ಟ್ರ ಮಗನೆಂದು ನನ್ನ ಗುರುತಿಸಿ ಕೊನೆಗೆ ನನ್ನನ್ನು ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದರು. ಅಮ್ಮನಿಗೆ ಈಗಲೂ ಆ ಘಟನೆಯ ನೆನೆದು ನಗುವುದು-ಮರಗುವುದು ಇದೆ. ಅಮ್ಮ ನಾನು ಕಳೆದೇ ಹೋದೆನೋ, ಯಾರಾದರು ನನ್ನ ಅಪಹರಿಸಿದರೋ ಎಂದು ಗಾಬರಿ ಪಟ್ಟಿದ್ದಳಂತೆ. ಆ ಕಾಲದಲ್ಲಿ ಮಕ್ಕಳ ಅಪಹರಣದ ಬಗ್ಗೆ ಅತಿರಂಜಿತವಾಗಿ ಚರ್ಚೆಗಳಾಗುತಿದ್ದವು, ವಿಶೇಷವಾಗಿ ಹೆಂಗಸರ ವಿರಾಮದ ಹರಟೆಗಳಲ್ಲಿ, ಮದ್ಯಾಹ್ನದ ಗಾಸಿಪ್-ಗಳಲ್ಲಿ. ಎಪ್ಪತ್ತರ ದಶಕದ ಅಂತ್ಯದಲ್ಲಿ ಈ ಎಸ್ಎಂಎಸ್, ಇಮೇಲ್, ಟ್ವೀಟರ್ ಅಥವಾ ಫೇಸ್-ಬುಕ್ ಇರಲಿಲ್ಲ ನೋಡಿ, ಹಾಗಾಗಿ ಸುದ್ದಿಗಳು ವೇಗವಾಗಿ ಹರಡುತ್ತಿದ್ದಿದ್ದು ಬಿ.ಬಿ.ಸಿ ಅಥವಾ ಹೆಂಗಸರ ಮುಖಾಂತರವೇ!
ಹೀಗೆ ನನಗೆ ಕಾಲ್ನಡಿಗೆಯಲ್ಲಿ ವಿಹಾರಕ್ಕೆ ಹೊರಟು ಬಿಡುವುದು ಬಾಲ್ಯದಿಂದ ಬಂದ ಬಿಡಲಾಗದ ಅಭ್ಯಾಸ, ಒಂದು ತಪ್ಪಿಸಲಾಗದ ಸೆಳೆತ. ಈ ಅಭ್ಯಾಸದ ಸಂಬಂಧಿಸಿದ ಮತ್ತೊಂದು ವಿಶೇಷ ಘಟನೆಯ ನೆನಪೆಂದರೆ, ತುಮಕೂರಿನಲ್ಲಿ ನಡೆದ ಫಜೀತಿ. ನನಗಾಗ ಏಳೆಂಟು ವರುಷ ವಯಸ್ಸು, ಮದ್ಯಾಹ್ನದ ಆಟಕ್ಕೆ ಡಾ. ರಾಜ್ಕುಮಾರ್ ಅವರ ಭಕ್ತ ಪ್ರಹ್ಲಾದ ಸಿನಿಮಾ ತೋರಿಸಿಕೊಂಡು, ಸಂಜೆ ಅಪ್ಪ ಪರಿಚಯದ ನಾಟಕದ ಕಂಪನಿಗೆ ಕರೆದೊಯ್ದಿದ್ದರು. ಅಪ್ಪನಿಗೆ ಅಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದರಿಂದ ನಮಗೆ ಗ್ರೀನ್ ರೂಂಗೆ, ಪರದೆ ಹಿಂದೆ ಎಲ್ಲ ಕಡೆ ಸಲೀಸಾಗಿ ಓಡಾಡುವ ಅವಕಾಶ. ನಾನು ಮತ್ತು ನನ್ನ ಅಕ್ಕ ತುಂಬಾ ದಣಿದಿದ್ದೆವು, ಹಾಗಾಗಿ ನಾವಿಬ್ಬರು ರಾತ್ರಿ ೦೮:೦೦-೦೮:೩೦ ಗಂಟೆಗೆ ನಾಟಕದ ಗ್ರೀನ್ ರೂಂ-ನಲ್ಲಿ ಸ್ವಲ್ಪ ಜಾಗ ಸಿಕ್ಕೊಡನೆ ಮಲಗಿಬಿಟ್ಟೆವು. ಸ್ವಲ್ಪ ಸಮಯದ ನಂತರ ನಾನು ಮಲಗಿದ್ದ ಸ್ಥಳದಿಂದ ಮಾಯ! ಕೆಲ ಸಮಯದ ನಂತರ ನಾನು ಮಲಗಿದ್ದ ಸ್ಥಳದಲ್ಲಿ ನಾನಿಲ್ಲದಿರುವುದನ್ನು ನನ್ನ ತಂದೆ ಗಮನಿಸಿದರು. ನಾನು ನಿದ್ದೆಗಣ್ಣಿನಲ್ಲೇ ನಾಟಕ ಕಂಪನಿಯಿಂದ ಹೊರ ನಡೆದಿದ್ದೆ. ನನ್ನ ತಂದೆ ನಾಟಕ ಕಂಪನಿಯ ಆಟೋ ರಿಕ್ಷಾದಲ್ಲಿ ನನ್ನ ಹುಡುಕಲು ಶುರು ಮಾಡಿದರು. ನಂತರ ನನಗೆ ನೆನಪಿರುವುದು ನನ್ನ ತಂದೆ ರಿಕ್ಷಾದಲ್ಲಿ ಕುಳಿತು ಮೈಕಿನಿಂದ 'ಶಂಕರಾ... ಶಂಕರಾ' ಎಂದು ಕೂಗಿದ್ದು... ಹಾಗು ಹೀಗು ಕೊನೆಗೆ ಸುಖಾಂತ್ಯ!
ಎಚ್ಚರವಿರುವಾಗ ಬಿಡಿ ನಿದ್ದೆ ಮಾಡುವಾಗಲು ನನಗೆ ನಡೆಯುವ, ಮೈಮರೆತು ವಿಹಾರಕ್ಕೆ ಹೊರಡುವ ಗೀಳು.
ನನ್ನ ಬಹು ಸಾಹಸಮಯ ಸುದೀರ್ಘ ನಡಿಗೆಯ ಘಟನೆ ಎಂದರೆ ನನ್ನ ಹದಿಹರೆಯದ ವಯಸ್ಸಿನಲ್ಲಿ ಘಟಿಸಿದ್ದು. ನನ್ನ ಊರಿಂದ ಸುಮಾರು ಮೂವತ್ತು ಕಿಲೋ ಮೀಟರ್ ದೂರದಲ್ಲಿ ಕೊಟ್ಟೂರು ಎಂಬ ಪುಟ್ಟ ಊರಿದೆ. ನನ್ನ ಊರಿಂದ ಕೊಟ್ಟೂರಿಗೆ ಒಳ್ಳೆಯ ಸಾರಿಗೆ ವ್ಯವಸ್ಥೆ ಮತ್ತು ರೈಲು ಸಂಚಾರವಿದೆ. ಪ್ರತಿ ದಿನ ಬೆಳಿಗ್ಗೆ ರೈಲು ಕೊಟ್ಟೂರಿಗೆ ಹೋಗಿ ಮತ್ತೆ ಮಧ್ಯಾಹ್ನ ೦೨:೦೦ ಘಂಟೆಗೆ ಹಿಂದಿರುಗುತ್ತದೆ. ಒಂದು ದಿನ ನನ್ನ ತಂದೆಯ ಸ್ನೇಹಿತರ ಬಳಿ ಹಣ ಪಡೆಯಲು ಆ ಊರಿಗೆ ಹೋಗಬೇಕಾಗಿ ಬಂತು. ಬೆಳಿಗ್ಗೆ ರೈಲಿನಲ್ಲಿ ಹೊರಟು ಕೊಟ್ಟೂರು ತಲುಪಿ ಆ ವ್ಯಕ್ತಿಯನ್ನು ಭೇಟಿ ಮಾಡಿದೆ. ಅವನು ವ್ಯಾಪಾರ ಇಲ್ಲದ ಕಾರಣ ಕೆಲ ದಿನಗಳ ನಂತರ ಹಣವನ್ನು ನೀಡುತ್ತೇನೆ ಎಂದು ಹೇಳಿದ. ಇನ್ನೇನು ಮಾಡುವುದು ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸ್ ಊರಿಗೆ ಹೋಗುವಾಗ ಒಂದು ಹುಚ್ಚು ಆಲೋಚನೆ ನನ್ನ ಮನಸ್ಸಿಗೆ ಬಂತು. ಮನೆಗೆ ಬಸ್ಸು ಅಥವಾ ರೈಲಿನಲ್ಲಿ ಹೋಗುವ ಬದಲು ರೈಲು ಹಳಿಯ ಮೇಲೆ ನಡೆದುಕೊಂಡು ಹೋಗಿ ಮನೆಗೆ ತಲುಪುವುದು ಅದ್ಭುತವಾಗಿರುತ್ತದೆ ಎಂದೆನಿಸಿತು. ಆ ದಿನ ಹುಣ್ಣಿಮೆ ಬೇರೆ. ಹಾಗಾಗಿ ಬಹಳ ರೋಮಾಂಚನಕಾರಿಯಾಗಿರುತ್ತದೆ ಎಂದೆನಿಸಿತು. ಮೊದಲಿಂದಲೂ ನಾನು ಸ್ವಲ್ಪ ಇಂಪಲ್ಸಿವ್, ತಟ್ಟನೆ ನಿರ್ಧರಿಸುವ ಮತ್ತು ಮಾಡುವ ಸ್ವಭಾವದವ. ಏನಾದರು ಸಾಹಸ ಮಾಡಿದರೆ ಅದ್ಭುತವಾಗಿರುತ್ತದೆ ಎಂದು ಯೋಚಿಸಿ ರೈಲು ಹಳಿಯ ಮೇಲೆ ನಡೆದು ಹೋಗಲು ತೀರ್ಮಾನಿಸಿದೆ.. ನನ್ನ ಹತ್ತಿರ ಕಡಿಮೆ ಹಣವಿತ್ತು, ಆದರೆ ಏನಾದರು ತಿನ್ನಲು ಮತ್ತು ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಹೋಗಲು ಸಾಕಾಗುವಷ್ಟಿತ್ತು. ಆದ್ದರಿಂದ ಆ ಹಣವನ್ನು ಈಗಲೇ ಖರ್ಚು ಮಾಡಬೇಕು ಇಲ್ಲವಾದರೆ ರೈಲು ಹಳಿಯ ಮೇಲೆ ನಡೆಯುವಾಗ ಮನಸ್ಸನ್ನು ಬದಲಿಸಬಹುದು ಎಂದು ಭಾವಿಸಿ ಹೋಟಲಿಗೆ ಹೋದೆ, ಆಮೇಲೆ ಸಿನಿಮಾ ನೋಡಿದೆ. ಸಿನಿಮಾ ನೋಡಿ ಬಂದ ಮೇಲೆ ನನ್ನ ಹತ್ತಿರ ಎರಡು ಮೂರು ರುಪಾಯಿ ಉಳಿದಿದ್ದವು. ದಾರಿಯಲ್ಲಿ ನಡೆದು ಹೋಗುವಾಗ ಬೇಕಾಗುತ್ತದೆ ಎಂದು ಕೆಲ ಚಾಕೋಲೆಟ್, ಪೆಪ್ಪರ್ಮಿಂಟ್-ಗಳನ್ನು ಆ ಹಣದಿಂದ ಕೊಂಡುಕೊಂಡೆ.
ನಾನು ರೈಲು ನಿಲ್ದಾಣ ತಲುಪುವ ಹೊತ್ತಿಗೆ ಸಂಜೆ ೫:೩೦ ಘಂಟೆ ಆಗಿತ್ತು. ಆಗ ಬೇಸಿಗೆಯಾದ್ದರಿಂದ ಸಂಜೆ ಏಳು ಘಂಟೆಯ ಮೇಲೆ ಕತ್ತಲು ಆಗುತಿತ್ತು. ರೈಲು ನಿಲ್ದಾಣದಲ್ಲಿ ಯಾರೂ ಇರಲಿಲ್ಲ. ಮನೆ ತಲುಪಬೇಕಾದರೆ ೨೫ ಕಿಲೋ ಮೀಟರ್ ನಡೆಯಬೇಕಿತ್ತು. ಸುಮಾರು ರಾತ್ರಿ ೯:೦೦ ಘಂಟೆಗೆ ಮನೆ ತಲುಪಬಹುದು ಎಂದು ಭಾವಿಸಿ ದೂರದ ಪ್ರಯಾಣ ಶುರು ಮಾಡಿದೆ. ರೈಲು ಹಳಿಯ ಮೇಲೆ ಮರದ ಹಲಗೆಗಳನ್ನು ಸಮ ದೂರದಲ್ಲಿ ಹಾಕಲಾಗಿತ್ತು. ಆ ಹಲಗೆಗಳ ಮಧ್ಯದಲ್ಲಿ ಕಲ್ಲುಗಳನ್ನು ತುಂಬಲಾಗಿತ್ತು. ವೇಗವಾಗಿ ನಡೆದರೆ ಸುಸ್ತಾಗುವುದೆಂದು ಸ್ವಲ್ಪ ನಿಧಾನವಾಗಿಯೇ ನಡೆಯಲು ಆರಂಭಿಸಿದೆ. ಯಾವ ಯೋಚನೆ ಅಥವಾ ಕಾಳಜಿ ಇಲ್ಲದೆ ಸುಮಾರು ಒಂದೂವರೆ ಘಂಟೆ ಕಾಲ ನಡೆದಿದ್ದೆ. ಆ ಕಾಲ್ನಡಿಗೆ ಒಂದು ಧ್ಯಾನದಂತಿತ್ತು. ಮೊದಲು, ಎಲ್ಲ ರೀತಿಯ ಆಲೋಚನೆಗಳು ನನ್ನ ಮನಸ್ಸನ್ನು ಆವರಿಸಿಕೊಂಡವು. ಕ್ರಮೇಣ ನನ್ನ ಮನಸ್ಸಿಗೆ ನೆಮ್ಮದಿ ಸಿಗುತ್ತಿರುವ ಮತ್ತು ಪ್ರಶಾಂತವಾಗುತ್ತಿರುವ ಅನುಭವವಾಯಿತು. ಸುದೀರ್ಘ ನಡಿಗೆ ನನ್ನ ಮನಸ್ಸನ್ನು ಮೃದುಗೊಳಿಸಿ ರಮ್ಯ ಭಾವನೆಗಳನ್ನು ಅರಳಿಸುತಿತ್ತು.. ದೊಡ್ಡ ದೊಡ್ಡ ಬಯಲುಗಳು, ಹೊಲಗಳು, ಸೂರ್ಯಾಸ್ತ, ಬಣ್ಣಬಣ್ಣದ ಸಂಜೆಯ ಆಕಾಶ, ಹಿತವಾದ ತಂಗಾಳಿ ಆ ಬೇಸಿಗೆಯ ಸಂಜೆಯಲ್ಲಿ, ಆಹಾ! ಎಂಥ ಅನುಭವ!
ಎಲ್ಲಾ ಚೆನ್ನಾಗಿತ್ತು. ಆದರೆ ಕತ್ತಲಾಗುತ್ತಿದ್ದ ಹಾಗೆ ತೊಂದರೆಗಳು ಶುರುವಾದವು. ದಾರಿಯಲ್ಲಿ ಕೆಲವು ದಾರಿದೀಪ ಅಥವ ಜನ ಸಂಚಾರವಿರುತ್ತದೆ ಎಂದು ನಾನಂದುಕೊಂಡಿದ್ದೆ. ಆದರೆ ರೈಲು ಹಳಿಯ ಬಳಿ ಯಾರೂ ಇರಲಿಲ್ಲ. ಅಮೇಲೆನಿಸಿತು ರೈಲು ಸಂಚಾರ ಕೇವಲ ಬೆಳಗ್ಗೆ ಮತ್ತು ಮಧ್ಯಾಹ್ನ ಇರುವುದರಿಂದ ರೈಲು ಹಳಿಯ ಬಳಿ ಯಾರೂ ಇಲ್ಲವೆಂದು.
ನಿಧಾನವಾಗಿ ನನ್ನ ಮನಸ್ಸಿನಲ್ಲಿ ಭಯ ಶುರುವಾಯಿತು. ಆತಂಕದಿಂದ ಸರಸರನೆ ನಡೆಯಲು ಮೊದಲಿಟ್ಟೆ. ಅದೃಷ್ಟವಶಾತ್ ಅಂದು ಹುಣ್ಣಿಮೆ. ತುಂಬು ಚಂದಿರನ ಬೆಳಕಲ್ಲಿ ರೈಲ್-ವೇ ಹಳಿಗಳ ಮೇಲೆ ನಡೆಯತೊಡಗಿದೆ.
ಸುಂದರವಾದ ಸಂಜೆ ಯಾವಾಗ ಭಯಾನಕ ರಾತ್ರಿಯಾಗಿ ಪರಿವರ್ತನೆಯಾಯಿತೋ ಒಂದು ಸಣ್ಣ ಶಬ್ದವೂ ನನ್ನ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತಿತ್ತು. ಜೋರಾಗಿ ಗಾಳಿ ಬೀಸಿದಾಗ ಒಣ ಎಲೆಗಳು ಮತ್ತು ಪೊದೆಗಳು ವಿಚಿತ್ರವಾದ ಸದ್ದು ಮಾಡುತಿದ್ದವು. ಭಯವನ್ನು ಓಡಿಸಲು ನಾನು ಓದಿದ ಎಲ್ಲ ವಿಜ್ಞಾನದ ಪಾಠಗಳನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದೆ. ನನ್ನನ್ನು ನಾನು ಹುರಿದುಂಬಿಸಿಕೊಳ್ಳಲು ದೊಡ್ಡ ವಿಜ್ಞಾನಿಗಳಾದ ನ್ಯೂಟನ್, ಐನ್‌ಸ್ಟೀನ್, ಸಿವಿ ರಾಮನ್-ನಂಥವರನ್ನು ನೆನಪಿಸಿಕೊಂಡೆ. ಆದರೆ ಅವರೆಲ್ಲರೂ ಕೆಲಕಾಲ ಮಾತ್ರ ನನ್ನ ಭಯವನ್ನು ಓಡಿಸಲು ಸಮರ್ಥರಾಗಿದ್ದರು, ಪಾಪ!
ಈಗ ಏನು ಮಾಡುವುದು? ನಾನು ಮನೆಯನ್ನು ಸುರಕ್ಷಿತವಾಗಿ ಸೇರಬಲ್ಲೆನೆ? ಎಂಬ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಹುಟ್ಟಿದವು. ಮನದಲ್ಲಿ ಎಲ್ಲಾ ರಮ್ಯ ಕಲ್ಪನೆಗಳು, ಮೃದುಮಧುರ ಭಾವನಗಳು ಮೆಲ್ಲನೆ ಮಾಯವಾಗಿ ಸಣ್ಣಗೆ ಭಯ ಮೂಡಿತ್ತು.
ಆ ಚಂದ್ರನ ಬೆಳಕಿನಲ್ಲೇ ರೈಲು ಹಳಿಯ ಬದಿಯಲ್ಲಿದ್ದ ಕೆಲ ಹಳ್ಳಿಗಳನ್ನು ನೋಡಿದೆ. ಅಲ್ಲೇ ಹೋಗಿ ರಾತ್ರಿ ತಂಗಬಹುದು ಎಂದು ಯೋಚಿಸಿದೆ. ಆದರೆ ಆ ಹಳ್ಳಿಗಳು ಇನ್ನು ಒಂದು ಮೈಲಿ ದೂರದಲ್ಲಿದ್ದವು. ಯಾರಾದರು ನನಗೆ ಆಶ್ರಯ ಕೊಡುತ್ತಾರೆ ಎಂಬ ನಂಬಿಕೆ ಇರಲಿಲ್ಲ. ಕತ್ತಲು ವೇಗವಾಗಿ ಆವರಿಸುತ್ತಿದ್ದುದರಿಂದ ಎಲ್ಲಿಯೂ ಕ್ಷಣ ಹೊತ್ತೂ ನಿಲ್ಲಲಿಲ್ಲ ಅಥವಾ ವಿಶ್ರಾಂತಿ ಪಡೆಯಲಿಲ್ಲ. ಅಷ್ಟು ಹೊತ್ತಿಗಾಗಲೇ ಮೂರು ಘಂಟೆಗಳ ಕಾಲ ನಡೆದು ತುಂಬಾ ದಣಿದಿದ್ದೆ. ನನ್ನ ಪೆಪ್ಪರ್ಮಿಂಟ್- ಚಾಕಲೇಟ್ ಸ್ಟಾಕ್ ಖಾಲಿಯಾಗಿತ್ತು ಮತ್ತು ನನ್ನ ಶಕ್ತಿ ಕುಂದಿತ್ತು. ಭಯಕ್ಕೋ ದಣಿವಿಗೋ ನಾನು ಚೆನ್ನಾಗಿ ಬೆವರಿದ್ದೆ.
ನನ್ನ ಊರಿಗೆ ಹೋಗುವ ದಾರಿಯಲ್ಲಿ ಮಾಲ್ವಿ ಡ್ಯಾಮ್ ಎಂಬ ಮುಖ್ಯವಾದ ರೈಲು ನಿಲ್ದಾಣವಿದೆ. ಆ ನಿಲ್ದಾಣಕ್ಕಾದರೂ ಹೋದರೆ ನನಗೆ ಸಹಾಯ ಸಿಗಬಹುದೆಂದು ಎಂಬ ದೂರದ ಆಸೆ ಹುಟ್ಟಿತು. ಸುಮಾರು ರಾತ್ರಿ ೯:೦೦ ಘಂಟೆಯ ಸಮಯ. ರೈಲು ಹಳಿಯ ಬದಿಯಲ್ಲಿದ್ದ ಹೊಲದ ಬಳಿ ಹೋಗುತ್ತಿದ್ದಾಗ ಓರ್ವನು ಹೊಲದಲ್ಲಿ ಕೆಲಸ ಮಾಡುತ್ತಿದ್ದುದ್ದನ್ನು ನೋಡಿದೆ. ಅವನು ಸುಮಾರು ನೂರು ಮೀಟರ್ ದೂರದಲ್ಲಿದ್ದನು. ನಾನು ಜೋರಾಗಿ ಕೂಗಿದೆ...ಯಾರಾದರು ಅಲ್ಲಿದ್ದೀರಾ? ಎಂದು. ಯಾರೂ ಮಾತಾಡಲಿಲ್ಲ. ಮತ್ತೆ ಜೋರಾಗಿ ಕೂಗಲು ಪ್ರಯತ್ನಿಸಿದೆ, ಈ ಸಾರಿ ಮತ್ತಷ್ಟು ಅಸಹಾಯಕನಾಗಿ.
ಆ ಚಂದ್ರನ ಬೆಳಕಿನಲ್ಲಿ ಆ ಮನುಷ್ಯ ನನ್ನ ಕೂಗಿಗೆ ಪ್ರತಿಕ್ರಿಯಿಸಿದ್ದುನ್ನು ಗಮನಿಸಿದೆ. ಆದರೆ ಅವನು ಕೋಪಗೊಂಡಿದ್ದನೋ, ಗಾಬರಿಗೊಂಡಿದ್ದನೋ, ಆಶ್ಚರ್ಯಗೊಂಡಿದ್ದನೋ, ಎಂದು ಆ ಕತ್ತಲಲ್ಲಿ ಗೊತ್ತಾಗಲಿಲ್ಲ. ಆದರೆ ಆ ಮನುಷ್ಯ ಕೊಂಚ ಹಿಂಜರಿದಿದ್ದು ನನ್ನ ಅನುಭವಕ್ಕೆ ಬಂತು.. ಕೊನೆಗೂ ಒಂದು ಪ್ರತಿಕ್ರಿಯೆ ಬಂತು. ಯಾರದು? ಎಂದು ಕೇಳಿದ. ಇಲ್ಲಿಂದ ಹಗರಿಬೊಮ್ಮನಹಳ್ಳಿ ಎಷ್ಟು ದೂರ ಎಂದು ಕೇಳಿದೆ. ಯಾವ ಉತ್ತರವೂ ಬರಲಿಲ್ಲ. ನಾನು ಕೊಟ್ಟೂರಿನಿಂದ ಬರುತ್ತಿದ್ದೇನೆ, ಎಲ್ಲ ಹಣವನ್ನು ಕಳೆದುಕೊಂಡಿದ್ದೇನೆ, ಹಗರಿಬೊಮ್ಮನಹಳ್ಳಿಯ ಕಡೆ ಹೋಗುತ್ತಿದ್ದೇನೆ, ನಾನು ಇಂತಿಂಥವರ ಮಗ, ನನ್ನ ತಂದೆ ಒಂದು ಸರ್ಕಾರಿ ಶಾಲೆಯ ಶಿಕ್ಷಕರು ಎಂದು ಸರಸರನೆ ಅವನಿಗೆ ವಿವರಿಸಿದೆ. ಆದರೂ ಅವನು ಮೌನವಾಗಿದ್ದ. ನಾನು ಸರಿಯಾಗಿ ಅವನಿಗೆ ವಿವರಿಸಿದೆನೋ ಇಲ್ಲವೋ ಎಂಬ ಅನುಮಾನ ಬಂತು. ಆದರೆ ಹಳ್ಳಿಯ ಜನರಿಗೆ ನಂಬಿಕೆ ಬಂದರೆ ಸಹಾಯ ಮಾಡುತ್ತಾರೆ ಎಂಬ ವಿಶ್ವಾಸವಿತ್ತು. ಕೊನೆಗೂ ಆ ಮನುಷ್ಯ ಬೇಲಿಯನ್ನು ದಾಟಿ ಹೊಲದೊಳಗೆ ಬರಲು ಹೇಳಿದ. ನಂತರ ಬಹಳ ಪ್ರಶ್ನೆಗಳನ್ನು ಕೇಳಿದ. ನಾನು ಕಳ್ಳನಲ್ಲನೆಂದು ಅವನಿಗೆ ನಂಬಿಕೆ ಬರಬೇಕಿತ್ತು. ಆಮೇಲೆ ಅವನು ಹೇಳಿದ ವಿಷಯ ಕೇಳಿ ನನ್ನ ಮೈಯಲ್ಲಿ ಚಳಿ ಹುಟ್ಟಿತು. ಸುಗ್ಗಿಯ ದಿನಗಳದ್ದರಿಂದ ಕಳ್ಳರ ಕಾಟ ಬಹಳವಾಗಿತ್ತು. ರೈತರಿಗೆ ಕಳ್ಳರಿಂದ ಬಹಳ ತೊಂದರೆಯಾಗುತ್ತಿತ್ತು. ಯಾರ ಬಗ್ಗೆಯು ಸ್ವಲ್ಪ ಅನುಮಾನ ಬಂದರು ಸಾಕು, ರೈತರು ಅಂಥವರನ್ನು ಹಿಂದೂ ಮುಂದು ನೋಡದೆ, ಯಾವ ಮುಲಾಜಿಲ್ಲದೆ ಕೊಂದೇ ಬಿಡುತಿದ್ದರು. ಕೆಲವೊಮ್ಮೆ ಸ್ವಲ್ಪ ಅನುಮಾನವೂ ಸಾಕಾಗಿತ್ತು. ಇಂತಹ ಸಂದರ್ಭದಲ್ಲಿ ಪೊಲೀಸರು ನಡೆದ ಕೊಲೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.
ನಂತರ ನಾನು ಯಾರೆಂಬುದನ್ನು ಮತ್ತು ಏಕೆ ಹಾಗೆ ನಡೆದುಹೋಗುತ್ತಿದ್ದೆ ಎಂಬುದನ್ನು ಅವನಿಗೆ ವಿವರಿಸಿದೆ. ನನ್ನ ಮೇಲೆ ಅವನಿಗೆ ಕರುಣೆ ಹುಟ್ಟಲು ಒಂದು ಕನಿಕರದ ಕತೆಯನ್ನು ಕಟ್ಟಬೇಕಾಯಿತು. ನಾನು ಎಲ್ಲ ಹಣವನ್ನು ಕಳೆದುಕೊಂಡಿದ್ದರಿಂದ ನನ್ನೂರಿಗೆ ನಡೆದುಕೊಂಡು ಹೋಗಬೇಕಾಗಿ ಬಂತು ಎಂದು ಹೇಳಿದೆ. ನನ್ನ ಮೇಲೆ ನಂಬಿಕೆ ಹುಟ್ಟಿಸುವುದಕ್ಕಾಗಿ ನನ್ನ ಊರಿನ ಮತ್ತು ನನ್ನ ಅಕ್ಕಪಕ್ಕದವರ ಬಗ್ಗೆ ಅವನಿಗೆ ಹೇಳಿದೆ. ಹಗರಿಬೊಮ್ಮನಹಳ್ಳಿ ಒಂದು ಒಳ್ಳೆಯ ವ್ಯಾಪಾರ ಸ್ಥಳ ಮತ್ತು ಅಲ್ಲಿ ಸ್ಥಳೀಯ ರೈತರ ಬೆಳೆಗಳಿಗೆ APMC ಮಾರುಕಟ್ಟೆ ಇದೆ. ರೈತರು ಮತ್ತು ಹಳ್ಳಿ ಜನ ಒಂದಲ್ಲ ಒಂದು ಕೆಲಸಕ್ಕಾಗಿ ಆ ಊರಿಗೆ ಬಂದು ಹೋಗಿ ಮಾಡುತ್ತಿರುತ್ತಾರೆ. ಎಷ್ಟೋ ಸಲ ಸಿನಿಮಾ ನೋಡಲು, ಮನರಂಜನೆಗೆ ಬರುತ್ತಿರುತ್ತಾರೆ. ಅದೃಷ್ಟವಶಾತ್ ಅವನಿಗೆ ನನ್ನ ಊರಿನ ಬಗ್ಗೆ ತಿಳಿದಿತ್ತು. ಹಾಗಾಗಿ ನನ್ನ ಕತೆಯನ್ನು ನಂಬಿದ.
ಅವನು ನನ್ನನ್ನು ಪುಟ್ಟ ಹುಲ್ಲಿನ ಬಣವೆಯ ಮೇಲೆ ಕುಳಿತುಕೊಳ್ಳಲು ಹೇಳಿದ. ಅವನು ತನ್ನ ಕಡೆಯ ಜನಗಳಿಗಾಗಿ ಕಾಯುತ್ತಿದ್ದ. ಮಧ್ಯಮಧ್ಯದಲ್ಲಿ ನನ್ನ ಜೊತೆ ಮಾತಾಡುತ್ತ ತನ್ನ ಕೆಲಸವನ್ನು ಮುಂದುವರೆಸಿದ. ಸುಮಾರು ರಾತ್ರಿ ೯:೩೦ ಘಂಟೆಗೆ ಅವನ ಜನ ಅವನಿಗೆ ಊಟ ತಂದರು. ಸುಮಾರು ಹತ್ತು ಜನರಿದ್ದರು. ರಾತ್ರಿ ಬಹಳ ಹೊತ್ತು ಕೆಲಸ ಮಾಡುವ ಯೋಜನೆ ಮಾಡಿದ್ದರು. ಅವರೆಲ್ಲರಿಗೂ ಮತ್ತೆ ನನ್ನ ಕತೆಯನ್ನು ಹೇಳಬೇಕಾಯಿತು. ಎಲ್ಲರಿಗೂ ನನ್ನ ಮೇಲೆ ಕರುಣೆ ಹುಟ್ಟಿತು. ನಾನು ಮುಂಜಾನೆಯ ಮೊದಲ ಬಸ್ಸಿಗೆ ಹೊರಟು ನನ್ನ ಮನೆ ಸೇರಬಹುದು ಎಂಬ ವಿಶ್ವಾಸ ಕೊಟ್ಟರು, ಧೈರ್ಯ ಹೇಳಿದರು. ನಾವೆಲ್ಲರೂ ಒಟ್ಟಿಗೆ ಊಟ ಮಾಡಿದೆವು. ಜೋಳದ ರೊಟ್ಟಿ ಮತ್ತು ಪಲ್ಯವನ್ನು ಕೊಟ್ಟರು. ನಾನು ಸಸ್ಯಾಹಾರಿಯಾಗಿದ್ದರು, ಆ ಪಲ್ಯ ಸಸ್ಯಾಹಾರಿಯೋ ಮಾಂಸಾಹಾರಿಯೋ ಎಂದು ಕೇಳದೆ ಹಸಿದ ತೋಳದ ತರಹ ಊಟ ಮಾಡಿದೆ. ಊಟವಾದ ಬಳಿಕ ಬಣವೆಯ ಹುಲ್ಲನ್ನು ಹಾಸಿ ಅದರ ಮೇಲೆ ಕೌದಿಯನ್ನು ಹಾಸಿ ಅದರ ಮೇಲೆ ಮಲಗಲು ಹೇಳಿದರು.
ತುಂಬಿದ ಹೊಟ್ಟೆ ಮತ್ತು ಸುರಕ್ಷಿತ ಭಾವನೆಯಿಂದ ನನ್ನೊಳಗಿನ ರಮ್ಯ ಭಾವನೆಗಳು ಜಾಗೃತಗೊಂಡವು. ಆ ಪೌರ್ಣಿಮೆಯ ಚಂದ್ರ, ಹೊಳೆಯುತ್ತಿರುವ ನಕ್ಷತ್ರದಿಂದ ತುಂಬಿದ ಆಕಾಶ, ತಂಗಾಳಿ, ಹೊಲದ ಮಣ್ಣಿನ ಸುವಾಸನೆ, ಹೊಲಗಳ ಪರಿಸರವನ್ನು ಆನಂದಿಸುತ ಮೆಲ್ಲಗೆ ನಿದ್ರೆಗೆ ಜಾರಿದೆ.
ಬೆಳಗಾದ ನಂತರ ಎದ್ದ ಮೇಲೆ, ಸುತ್ತಲಿನ ಪರಿಸರದ ಉಲ್ಲಾಸ ನನ್ನನ್ನು ಆವರಿಸಿತು. ರೈತರೊಂದಿಗೆ ಹತ್ತಿರದ ಹಳ್ಳಿಗೆ ನಡೆದುಕೊಂಡು ಹೋದೆ. ಚಿಕ್ಕ ಹೋಟೆಲ್-ನಲ್ಲಿ ನನಗೆ ಚಹಾ ಕೊಡಿಸಿದರು ಮತ್ತು ನನ್ನ ಊರಿಗೆ ಹೋಗಲು ಬಸ್ ಟಿಕೆಟ್ ಕೊಳ್ಳಲು ಸಹಾಯ ಮಾಡಿದರು.
ಸುಮಾರು ಬೆಳಗ್ಗೆ ೮ ಗಂಟೆಗೆ ಮನೆ ತಲುಪಿದೆ. ಮನೆಯಲ್ಲಿ ಅಪ್ಪ-ಅಮ್ಮ ಗಾಬರಿಯಾಗಿದ್ದರು, ನನ್ನ ಹುಚ್ಚು ಸಾಹಸದ ಕತೆ ಕೇಳಿ ಹಣೆ ಹಣೆ ಚೆಚ್ಚಿಕೊಂಡರು.
ಇಷ್ಟಾದರೂ ನನ್ನ ಸುದೀರ್ಘ ನಡಿಗೆಯ ಹಂಬಲ, ಕುತೂಹಲ ಮತ್ತು ಅದರ ಬಗ್ಗೆ ನನಗಿರುವ ರಮ್ಯ ಕಲ್ಪನೆ ಸ್ವಲ್ಪವೂ ಕಮ್ಮಿಯಾಗಿಲ್ಲ, ಸಮಯ ಸಿಕ್ಕಾಗಾಲೆಲ್ಲ ಏಕಾಂಗಿಯಾಗಿ ಈಗಲೂ ತಟ್ಟನೆ ಹೊರಟು ಬಿಡುತ್ತೇನೆ. ಟುಲೂಸ್ ಅಥವಾ ಬೆಂಗಳೂರಿನಂತ ಕಾಂಕ್ರಿಟ್ ಕಾಡಿನಲ್ಲಿ ಕಳೆದು ಹೋಗುವ ಅಪಾಯವಿಲ್ಲ ಮತ್ತು ಹೆಚ್ಚು ಸಾಹಸವೂ ಇಲ್ಲ.
ಹಳೆಯ ಫ್ರೆಂಚ್ ಪ್ರಬಂಧಕಾರ ಜೋಸೆಫ್ ಜೌಬೇರ್ಟ್ ಹೇಳಿದಂತೆ ಕೋಪಕ್ಕೆ ಒಂದು ಸುದೀರ್ಘ ನಡಿಗೆ ಒಳ್ಳೆ ಮದ್ದಂತೆ. ಒಮೊಮ್ಮೆ ಯೋಚಿಸುತ್ತೇನೆ, ನನಗೇಕೆ ಈ ಸುದೀರ್ಘ ನಡಿಗೆಯ ಹಂಬಲ? ಮನದೊಳಗಡಗಿದ ಯಾವುದೋ ಬೇಸರ, ಮೂಡಿದ ವ್ಯಗ್ರತೆ ಅಥವಾ ಹುಟ್ಟಿದ ಜಿಜ್ಞಾಸೆ ನನ್ನನ್ನು ಈ ನಡಿಗೆಗೆ ಪ್ರೇರೇಪಿಸುತ್ತಿರಬಹುದೇ? ಏನೋ ಗೊತ್ತಿಲ್ಲ, ನಾನಂತು ಪ್ರತಿಬಾರಿ ಸುದೀರ್ಘ ನಡಿಗೆಯಿಂದ ಹಿಂದಿರುಗಿದಾಗ ಮನವೆಲ್ಲ ತಿಳಿಯಾಗಿ ಮೂಡುವ ಪ್ರಸನ್ನತೆಯೇ ಕಾರಣವೆಂದು ನಂಬುತ್ತೇನೆ.