ಹಿಂದಿಯ ಜನಪ್ರಿಯ ನಟ ಅಮೀರ್ ಖಾನ್ ದೇಶಾನೆಲ್ಲ ಸುತ್ತಿ, ದೇಶದ ಆಮ್ ಆದ್ಮಿ- ಕಟ್ಟಕಡೆಯ ವ್ಯಕ್ತಿ-ಯನ್ನೇ ಕೇಂದ್ರವಾಗಿಟ್ಟುಕೊಂಡು, ಅವನೊಂದಿಗೆ ಬೆರೆತು, ಭಾರತವನ್ನು ಭಾವಿಸುವ ‘ಸತ್ಯಮೇವ ಜಯತೆ’ ಎಂಬ ಟೆಲಿವಿಷನ್ ಶೋ ತಯಾರಿಸಿದ್ದಾರೆ. ಇದು ಅಮೀರರ ಮೂರು ವರ್ಷಗಳ ಮಹಾತ್ವಾಕಾಂಕ್ಷೆಯ ಯೋಜನೆ. ಅದನ್ನು ಮೇ ಮೂರರಿಂದ ಸ್ಟಾರ್ ಚಾನಲ್ ಮತ್ತು ದೂರದರ್ಶನದಲ್ಲಿ ಏಕಕಾಲಕ್ಕೆ ಬಿತ್ತರಿಸುವ ಬಗೆಗಿನ ವಿವರವನ್ನು ಪ್ರಕಟಿಸಿದ್ದಾರೆ. ಹಾಗೆಯೇ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲೂ ಇದನ್ನು ಡಬ್ ಮಾಡಿ ಪ್ರಸಾರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಅಮೀರ್ ಹೀಗೆ ಹೇಳುತ್ತಿದ್ದಂತೆ, ಸ್ಥಳೀಯ ಟಿವಿ ಚಾನಲ್‌ಗಳ ಮುಖ್ಯಸ್ಥರು ಜಾಗೃತರಾದರು. ಡಬ್ಬಿಂಗು, ವ್ಯವಹಾರದ ಮಾತುಗಳನ್ನಾಡತೊಡಗಿದರು. ಹಾಗೆಯೇ ಡಬ್ಬಿಂಗ್ ವಿರುದ್ಧ ಹೋರಾಡಲು ಸದಾ ಸಿದ್ಧರಾಗಿ ನಿಂತಿರುವ ಕನ್ನಡ ಸಂಸ್ಕೃತಿ ಸೇವಕರು- ಕಿರುತೆರೆ ಸಂಘಟನೆಗಳ ಸುಲ್ತಾನರು- ‘ಡಬ್ ಮಾಡದ್ರೆ ಮಾಡ್ಕೊಳ್ಳಿ, ಪ್ರಸಾರ ಮಾಡಲು ಬಿಡುವವರು ಯಾರು’ ಎಂದು ಧಮ್ಕಿ ಹಾಕಿದರು.
ಇವರ ಈ ಧಮ್ಕಿ ಯಾವ ದುಂಡಾವರ್ತನೆಗೂ ಸಾಟಿಯಿಲ್ಲದ್ದು. ಸಹಜವಾಗಿಯೇ ಭಾಷೆ ಬಗ್ಗೆ ಒಲವಿರುವ ಕೆಲ ಬರಹಗಾರರು ಕನ್ನಡ ಸಂಸ್ಕೃತಿ ಮತ್ತು ಸಿನಿಮಾ ಸಂಸ್ಕೃತಿಯ ಅರ್ಥ ವ್ಯತ್ಯಾಸವನ್ನು ವಿವರಿಸಿದ್ದೂ ಆಯಿತು.
ಹೀಗೆ ವಿವರಿಸಿದ್ದು ‘ಸೇವಕರ’ ಮರ್ಮಕ್ಕೆ ತಾಗಿತೋ, ಸ್ವಾರ್ಥ ಜಾಗೃತವಾಯಿತೋ ಅಥವಾ ಸಮರ್ಥ ನಾಯಕನ ಕೊರತೆ ಎನ್ನಿಸಿತೋ... ಇದಕ್ಕೆಲ್ಲ ಉತ್ತರವೆಂಬಂತೆ ಮೊನ್ನೆ ಡಾ. ರಾಜ್‌ಕುಮಾರ್ ಜನ್ಮದಿನ ಆಚರಣೆಯ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ರಾಜ್ ಹಿರಿಯ ಪುತ್ರ ಶಿವರಾಜ್‌ಕುಮಾರ್, ‘ನನ್ನ ತಂದೆ ಡಾ. ರಾಜ್‌ಕುಮಾರ್ ಡಬ್ಬಿಂಗನ್ನು ವಿರೋಧಿಸಿದ್ದರು. ಅವರ ಆಸೆಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಸುಮ್ಮನೆ ಕೂರುವುದಿಲ್ಲ. ಒಮ್ಮೆ ಎದ್ದು ನಿಂತರೆ ಪ್ರಾಣ ಹೋದರೂ ಪರವಾಗಿಲ್ಲ, ಯಾವುದಕ್ಕೂ ಹೆದರುವುದಿಲ್ಲ, ಎಂತಹ ಹೋರಾಟಕ್ಕೂ ಸಿದ್ಧ. ಯಾವ ಕಾರಣಕ್ಕೂ ಡಬ್ಬಿಂಗ್ ಮಾಡಲು ಅವಕಾಶ ನೀಡುವುದಿಲ್ಲ’ ಎಂದು ಆಕ್ರೋಶದಿಂದ ಸ್ಫೋಟಗೊಂಡರು. ನೆರೆದಿದ್ದ ರಾಜ್ ಅಭಿಮಾನಿಗಳು ಬಂದಿದ್ದು ರಾಜ್‌ರ ನೆನಪಿನ ಬುತ್ತಿ ಬಿಚ್ಚಿಕೊಳ್ಳಲು, ಅವರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲು. ಆದರಿಲ್ಲಿ ಅವರ ಪುತ್ರ ಪ್ರಾಣ ಪಣಕ್ಕಿಡುವ ಮಾತುಗಳನ್ನಾಡುತ್ತಿದ್ದಾರೆ. ಈ ಮಾತಿನಿಂದ ರಾಜ್ ಅಭಿಮಾನಿಗಳು ಅವಾಕ್ಕಾದರು, ಕಿವಿ ಕಚ್ಚಿದ ಸಂಸ್ಕೃತಿ ‘ಸೇವಕರು’ ಕರ್ಣಾನಂದ ಅನುಭವಿಸಿದರು! 
ಒಂದು ಕಡೆ ಕೆಲ ಸಿನಿ-ಟಿವಿ ಸಂಘಟನೆಗಳ ಪದಾಧಿಕಾರಿಗಳ ಧಮ್ಕಿ, ಮತ್ತೊಂದು ಕಡೆ ನಾಯಕನಟ ಶಿವರಾಜ್‌ಕುಮಾರ್ ಅವರ ಆಕ್ರೋಶ- ಎರಡರಲ್ಲೂ ಪಾಳೆಗಾರಿಕೆಯ ದರ್ಪ-ದೌಲತ್ತಿದೆಯೇ ಹೊರತು ಕನ್ನಡಕ್ಕಾಗುತ್ತಿರುವ ಅನ್ಯಾಯವನ್ನು ವಿವರಿಸುವ ವಿನಯ ಕಾಣುತ್ತಿಲ್ಲ. ಡಬ್ಬಿಂಗ್‌ನಿಂದ ಕನ್ನಡ ಚಿತ್ರರಂಗಕ್ಕೆ ಆಗುವ ತೊಂದರೆಗಳನ್ನು ಜನರಿಗೆ ಮನದಟ್ಟು ಮಾಡಿಸುವ ಜಾಣ್ಮೆ ತೋರುತ್ತಿಲ್ಲ.
ಇಲ್ಲಿ ಒಂದು ವಿಷಯವನ್ನು ಎಲ್ಲರೂ ಗಮನಿಸಲೇಬೇಕು. ಅದೇನೆಂದರೆ, ಡಾ. ರಾಜ್ ಡಬ್ಬಿಂಗ್ ವಿರೋಧಿಸಿದ ಸಂದರ್ಭಕ್ಕೂ ಇವತ್ತಿನದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅನಕೃ, ನಾಡಿಗೇರ ಕೃಷ್ಣರಾಯರೊಂದಿಗೆ ರಾಜ್ ಸೇರಿ ಡಬ್ಬಿಂಗ್ ವಿರೋಧಿಸುವ ಕಾಲಕ್ಕೆ ಅದು ತೀರಾ ಅಗತ್ಯವಾದ ಕ್ರಮವಾಗಿತ್ತು. ಕನ್ನಡದ ಅಳಿವು ಉಳಿವಿಗಾಗಿ ಮಾಡಲೇಬೇಕಾಗಿದ್ದ ಅತ್ಯಗತ್ಯ ಹೋರಾಟವಾಗಿತ್ತು. ಆದರೆ ಅದೇ ಮಾತುಗಳನ್ನು ಈಗ, ಜಾಗತೀಕರಣದ ಹೊತ್ತಿನಲ್ಲಿ ಆಡಬೇಕಾಗಿ ಬಂದಾಗ, ನಮ್ಮ ದನಿಯೇ ನಮಗೆ ಎದುರಾಡುತ್ತದೆ. ಅಮೆರಿಕಾದ ಪಿಜ್ಜಾ ಬರ್ಗರ್ ಗಳನ್ನು ಅಪ್ಪಿಕೊಂಡಿರುವ ನಮ್ಮ ಮಕ್ಕಳೆ ನಮಗೆ ಉಲ್ಟಾ ಹೊಡೆಯುತ್ತಾರೆ. ಇದು ಗೊತ್ತಿದ್ದೂ ನಾವು ಕನ್ನಡ ಬಹುಸಂಸ್ಕೃತಿ ನಾಶ, ಕನ್ನಡಿಗರ ಕೆಲಸಕ್ಕೆ ಕುತ್ತು, ಕಾರ್ಮಿಕರ ಅನ್ನಕ್ಕೆ ಅಡ್ಡ ಎಂದು ಏನೆಲ್ಲಾ ಸಮಜಾಯಿಷಿ ಕೊಟ್ಟರೂ, ಈ ಸವಕಲು ಕಾರಣಗಳನ್ನೇ ಎಷ್ಟು ದಿನಾಂತ ಅಸ್ತ್ರ-ಗುರಾಣಿಯನ್ನಾಗಿ ಬಳಸುವುದು? ಬಳಸಿಕೊಂಡು ಬಂದಿದ್ದರೂ ಕನ್ನಡ ಚಿತ್ರರಂಗವೇನಾದರೂ ಉದ್ಧಾರ ಆಗಿದೆಯೇ? ಟಿವಿ ಧಾರಾವಾಹಿಗಳ, ಕಾರ್ಯಕ್ರಮಗಳ ಮಟ್ಟ ಸುಧಾರಿಸಿದೆಯೇ? ಕ್ಲಾಪ್ ಬಾಯ್ ಕೋಟಿ ಸಂಭಾವನೆ ಪಡೆದ ಸಂಭ್ರಮದ ಸುದ್ದಿ ಕೇಳುವಂತಾಗಿದೆಯೇ?
ಇವತ್ತಿಗೂ ಪರಭಾಷಾ ಚಿತ್ರಗಳ ಕತೆ, ಫ್ರೇಮು, ಟ್ಯೂನು, ಡ್ರೆಸ್ಸುಗಳಿಂದ ಹಿಡಿದು ಇಡೀ ಚಿತ್ರವನ್ನೇ, ಧಾರಾವಾಹಿಯನ್ನೇ ರೀಮೇಕು ಮಾಡುತ್ತಿದ್ದಾರೆ. ಕನ್ನಡಿಗರಿಗೆ ಕೆಲಸ ಕೊಡಬೇಕಾದ ಕನ್ನಡಿಗರೇ ಪರಭಾಷೆಯಿಂದ ನಾಯಕನಟಿಯರನ್ನಷ್ಟೇ ಅಲ್ಲ, ಪೋಷಕ ನಟ-ನಟಿಯರನ್ನೂ ಕರೆತರುತ್ತಿದ್ದಾರೆ. ಅತಿ ಹೆಚ್ಚು ಸಂಭಾವನೆ ಸಿಗುವ ಕಾರಣಕ್ಕೆ ಹೊರಗಿನ ನಿರ್ಮಾಪಕರು ಹೇಳಿದ ಕತೆಗೆ ಸಹಿ ಹಾಕಿ ಚಿತ್ರಗಳನ್ನು ಮಾಡಿಕೊಡುತ್ತಿದ್ದಾರೆ. ನಮ್ಮದಲ್ಲದ ಬದುಕನ್ನು ಬಿಂಬಿಸುವ ಪರಭಾಷಾ ಧಾರಾವಾಹಿಗಳನ್ನು ಯಥಾವತ್ತು ನಕಲು ಮಾಡಿ ಬಲವಂತವಾಗಿ ಕನ್ನಡಿಗರ ಮೇಲೆ ಹೇರುತ್ತಿದ್ದಾರೆ. ಮಲ್ಟಿ ನ್ಯಾಷನಲ್ ಕಂಪನಿಗಳಿಂದ ಕೋಟಿಗಟ್ಟಲೆ ಜಾಹೀರಾತು ಪಡೆದು ಕನ್ನಡಿಗರಿಗೆ ಬೇಡವಾದ ವಸ್ತುಗಳನ್ನು ಮಾಧ್ಯಮಗಳ ಮೂಲಕ ಮಾರುತ್ತಿದ್ದಾರೆ.
ಇದರಿಂದ ಏನಾಗಿದೆ, ಎಲ್ಲೋ ಒಂದಷ್ಟು ಜನ- ಚಿತ್ರರಂಗದಲ್ಲಿ ಪುನೀತ್, ದರ್ಶನ್, ಉಪೇಂದ್ರರಂಥ ಕೆಲವರು ಉದ್ಧಾರವಾದರೆ, ಕಿರುತೆರೆಯಲ್ಲಿ- ಸಿಹಿಕಹಿ ಚಂದ್ರು, ರವಿಕಿರಣ್, ಟಿ.ಎನ್. ಸೀತಾರಾಂ, ಬಿ.ಸುರೇಶ್‌ರಂಥವರು ಕಣ್ಣು ಬಿಡುವುದರೊಳಗೆ ಕೋಟ್ಯಧಿಪತಿಗಳಾಗುತ್ತಿದ್ದಾರೆ. ಕನ್ನಡ, ಕನ್ನಡಿಗ, ಕರ್ನಾಟಕ- ಅವತ್ತು ಹೇಗಿತ್ತೋ ಇವತ್ತು ಹಾಗೆಯೇ ಇದೆ.
ಇನ್ನು ಆಕ್ರೋಶಭರಿತರಾಗಿ ಮಾತನಾಡಿದ ಶಿವರಾಜ್‌ಕುಮಾರ್ ವಿಷಯಕ್ಕೆ ಬರುವುದಾದರೆ, ಡಾ. ರಾಜ್‌ಕುಮಾರ್ ಎಂದೂ ಯಾವ ಚಿತ್ರದಲ್ಲೂ ಬೀದಿ ರೌಡಿಯಾಗಿ ಲಾಂಗು, ಮಚ್ಚುಗಳನ್ನು ಕೈಗೆತ್ತಿಕೊಂಡವರಲ್ಲ, ರುಂಡ ಮುಂಡ ಚೆಂಡಾಡಿ ಡ್ರಮ್‌ಗಟ್ಟಲೆ ರಕ್ತ ಹರಿಸಿದವರಲ್ಲ. ಆದರೆ ಅವರ ಪುತ್ರ ಶಿವರಾಜ್‌ಕುಮಾರ್, ಕನ್ನಡಿಗರಿಗೆ ಈ ಚಿತ್ರಗಳು ಬೇಕೋ ಬೇಡವೋ ಎಂದುಕೂಡ ಯೋಚಿಸದೆ ಸರಣಿಯೋಪಾದಿಯಲ್ಲಿ ಹತ್ತಾರು ರೌಡಿಸಂ ಕಥಾವಸ್ತುವುಳ್ಳ ಚಿತ್ರಗಳಲ್ಲಿ ನಟಿಸಿದರು. ಕನ್ನಡಿಗರು ತಿರಸ್ಕರಿಸಿದರೂ, ಚಿತ್ರಗಳು ಸೋತರೂ ಬಿಡದೆ ಮಾಡುತ್ತಲೇ ಬಂದರು.
ರೌಡಿಸಂ ಕನ್ನಡ ಸಂಸ್ಕೃತಿಯೇ? ಇಲ್ಲಿ ಯಾಕೆ ತಮ್ಮ ತಂದೆ ಹಾಕಿಕೊಟ್ಟ ಹಾದಿ ನೆನಪಾಗಲಿಲ್ಲ? ಅವರ ಆದರ್ಶ ಬದುಕು ಅರಿವಿಗೆ ಬರಲಿಲ್ಲ?
ಶಿವರಾಜ್‌ಕುಮಾರ್ ಡಬ್ಬಿಂಗ್ ವಿರುದ್ಧ ಮಾತನಾಡುವುದಕ್ಕೆ ಮುಂಚೆ ವಿಷಯದ ಆಳ-ಅಗಲಗಳನ್ನು ಅಳೆದು ತೂಗಿ ನೋಡಬೇಕಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಇವತ್ತು ಡಬ್ಬಿಂಗ್ ವಿರೋಧಿಸುತ್ತಿರುವವರ ಹಿತಾಸಕ್ತಿಗಳೇನು, ಸ್ವಾರ್ಥಗಳೇನು, ಅಜೆಂಡಾಗಳೇನು ಎಂಬುದನ್ನು ಅರಿಯಬೇಕಾಗಿತ್ತು. ಯಾಕೆಂದರೆ, ಶಿವರಾಜ್‌ಕುಮಾರ್ ಸಾಮಾನ್ಯವಾಗಿ ಯಾರಿಗೂ ತೊಂದರೆ ಕೊಡದ ಸೌಮ್ಯ ಸ್ವಭಾವದ ನಟ. ಚಿತ್ರರಂಗದ ಚಿತ್ರವಿಚಿತ್ರ ನಡೆ-ನುಡಿಗಳನ್ನು ಅಪ್ಪನ ಕಾಲದಿಂದಲೂ ಅರೆದು ಕುಡಿದ ಬುದ್ಧಿವಂತ. ಇತ್ತೀಚೆಗೆ ಉಪೇಂದ್ರ ನಟಿಸಿದ ಎರಡು ಚಿತ್ರಗಳ ನಿರ್ಮಾಪಕರು, ನಮ್ಮ ಚಿತ್ರ ಮೊದಲು ಬಿಡುಗಡೆಯಾಗಬೇಕು ಎಂದು ಹುಟ್ಟುಹಾಕಿದ ಸಣ್ಣ ಸುದ್ದಿಯೊಂದು ವಿಷುಯಲ್ ಮೀಡಿಯಾಗಳಲ್ಲಿ ಬೆಟ್ಟವಾಗಿ ಬೆಳೆದು ವಿವಾದವಾಗಿ ವಿಸ್ತರಿಸಿ, ನಯಾಪೈಸೆಯ ಖರ್ಚಿಲ್ಲದೆ ಸುದ್ದಿ ಮಾಧ್ಯಮಗಳಲ್ಲಿ ಪುಕ್ಕಟ್ಟೆ ಪ್ರಚಾರ ಪಡೆಯುತ್ತಿದ್ದಾಗ, ‘ಇವರಿಬ್ಬರ ಆಟ ಕಾಮಿಡಿಯಂತಿದೆ, ಮಾಧ್ಯಮಗಳ ಬಣ್ಣ ಬಯಲಾಗುತ್ತಿದೆ’ ಎಂಬ ಅರ್ಥಗರ್ಭಿತ ಮಾತುಗಳನ್ನಾಡಿ ಎಲ್ಲರನ್ನು ಚಿಂತನೆಗೆ ಹಚ್ಚಿದ್ದರು.
ಇಂತಹ ಶಿವರಾಜ್‌ಕುಮಾರ್, ಯಾರೋ ಒಂದಷ್ಟು ಜನ ‘ಸೇವಕರ’ ಹುನ್ನಾರಕ್ಕೆ ಬಲಿಯಾಗಿ ಆಕ್ರೋಶಭರಿತವಾಗಿ ಮಾತನಾಡಿದ್ದು ನಿಜಕ್ಕೂ ದುರದೃಷ್ಟಕರ ಸಂಗತಿ. ವಿಪರ್ಯಾಸವೆಂದರೆ, ರಾಜ್ ಜನ್ಮದಿನದ ಆಚರಣೆಯ ಸಂದರ್ಭದಲ್ಲಿಯೇ ರಾಜ್‌ರ ಮತ್ತೊಬ್ಬ ಪುತ್ರ, ಶಿವರಾಜ್‌ಕುಮರ್ ಅವರ ಸಹೋದರ ಪುನೀತ್ ರಾಜ್‌ಕುಮಾರ್, ‘ನಮ್ಮ ತಂದೆಯ ಆದರ್ಶಗಳನ್ನು ರೂಢಿಸಿಕೊಳ್ಳಲು ಬದ್ಧರಾಗಿದ್ದೇವೆ. ನಮ್ಮಿಂದ ಸಹಾಯ ಮಾಡಲು ಸಾಧ್ಯವಾಗದಿದ್ದರೂ, ಕೆಟ್ಟದು ಮಾಡಬಾರದೆಂಬ ತತ್ವವನ್ನು ಅಳವಡಿಸಿಕೊಂಡಿದ್ದೇವೆ’ ಎಂಬ ಮಾತುಗಳನ್ನಾಡಿ ಎಲ್ಲರ ಮನಗೆದ್ದಿದ್ದರು. ಶಿವರಾಜ್‌ಗೆ ಸಮಯ ಸಂದರ್ಭಗಳಾದರೂ ಅರ್ಥವಾಗಬಾರದೆ?
ಡಬ್ಬಿಂಗ್ ಎಂದರೆ ಪರಭಾಷೆಯ ಚಿತ್ರ, ಧಾರಾವಾಹಿ, ಕಾರ್ಯಕ್ರಮವನ್ನು ಕನ್ನಡಕ್ಕೆ ವಾಯ್ಸ್ ಡಬ್ ಮಾಡುವುದು. ಡಬ್ ಅನ್ನು ಬೇಡ ಎಂದರೆ, ಈಗ ಹೇಗಿದೆಯೋ ಹಾಗಿರುತ್ತದೆ. ಡಬ್ ಬರಲಿ ಎಂದರೆ ಮತ್ತಷ್ಟು ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತದೆ. ಈಗಾಗಲೇ ಟಿವಿಯ ಮುಖಾಂತರ ನಮ್ಮ ಮನೆಯ ಒಳಕ್ಕೇ ಬಂದು ಕೂತಿರುವ ಪ್ರಪಂಚದ ಎಲ್ಲಾ ಭಾಷೆಗಳ ಎಲ್ಲವನ್ನೂ ನಾವು ನಮ್ಮದನ್ನಾಗಿಸಿಕೊಂಡಿದ್ದಾಗಿದೆ. ಇನ್ನು ಈ ಡಬ್ಬಿಂಗ್ ಒಂದರಿಂದ ಆಗಬಹುದಾದ ಅನಾಹುತ ಎಂಥಾದ್ದು? ರೈತರ ಆತ್ಮಹತ್ಯೆಗಿಂತ ಭೀಕರವಾದದ್ದೆ? ಕುಡಿಯುವ ನೀರಿಲ್ಲದೆ ನರಳುತ್ತಿರುವ, ಬರದಿಂದ ಬೇಯುತ್ತಿರುವ ಸ್ಥಿತಿಗಿಂತ ಭಯಾನಕವಾದದ್ದೆ?
ಡಬ್ಬಿಂಗ್ ವಿರೋಧಿಸುವ ಒಂದು ಗುಂಪು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿದೆ. ಇದು ಆಗಾಗ ಎದ್ದು ನಿಲ್ಲುತ್ತದೆ. ಡಬ್ಬಿಂಗ್‌ನಿಂದ ಕನ್ನಡ ಚಿತ್ರೋದ್ಯಮಕ್ಕೆ ಕುತ್ತು ಎಂದು ಬೊಬ್ಬೆ ಹಾಕುತ್ತದೆ. ಎಲ್ಲವೂ ತಣ್ಣಗಾದ ಮೇಲೆ ಹೋರಾಟದ ಪ್ರತಿಫಲವನ್ನು ಉಂಡು ದುಂಡಗಾಗುತ್ತದೆ. ಹಾಗಾಗಿ ಡಬ್ಬಿಂಗ್ ಎನ್ನುವುದು ಕರ್ನಾಟಕದ ಆರು ಕೋಟಿ ಕನ್ನಡಿಗರ ಸಮಸ್ಯೆಯಲ್ಲ. ಒಂದಷ್ಟು ಸ್ವಾರ್ಥಿಗಳ ಹಿತಾಸಕ್ತಿ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.
ಹಾಗೆಯೇ ಕನ್ನಡ ಚಿತ್ರರಂಗವೆನ್ನುವುದು ಅಡ್ನಾಡಿಗಳ ಕ್ಷೇತ್ರವಲ್ಲ. ಸೃಜನಶೀಲರ, ಕ್ರಿಯಾಶೀಲರ ಕ್ಷೇತ್ರ. ಇವರ ಬುದ್ಧಿವಂತಿಕೆ, ಪ್ರತಿಭೆ ಡಬ್ಬಿಂಗನ್ನೂ ಮೀರಿ ನಿಲ್ಲುವಂತಹ ಚಿತ್ರಗಳನ್ನು ಮಾಡಲಿ, ಆ ಮೂಲಕ ಕನ್ನಡದ ಮಣ್ಣಿನ ಗುಣವನ್ನು ಎತ್ತಿ ಹಿಡಿಯಲಿ. ಪರಭಾಷೆಗಳ ಮುಂದೆ ಕನ್ನಡ ತಲೆ ಎತ್ತಿ ನಿಲ್ಲುವಂತಾಗಲಿ.