ಎಂದಿನಂತೆ ಮೌಲ್ಯಮಾಪನದ ಡ್ಯೂಟಿ ರಿಪೋರ್ಟ್ ಮಾಡಿಕೊಂಡು ಗೆಳೆಯ ಗಯಾಜನ ಸುಳಿವು ಕಾಣದೆ ಅವನ ಊರಿನ ಕಡೆಯಿಂದ ಬರುವವರನ್ನು ವಿಚಾರಿಸಿದರೆ, ಅವರು ಹೇಳಿದ ಸುದ್ದಿ ಕೇಳಿ ಎದೆ ಒಡೆದು ಹೋದ ಹಾಗಾಯ್ತು. ಅವನು ತೀರಿಕೊಂಡು ಆಗಲೇ ವರ್ಷವೇ ಕಳೆದು ಹೋಗಿತ್ತು. ತುಮಕೂರು ಜಿಲ್ಲೆಯ ಶಿರಾದ ಹತ್ತಿರದ ಪಿ.ಯೂ.ಕಾಲೇಜೊಂದರಲ್ಲಿ ಇಂಗ್ಲಿಷ್ ಕಲಿಸುತ್ತಿದ್ದ ಗಯಾಜ್ ಅಹ್ಮದ್ ನಗುಮೊಗದ ಮಹಾನ್ ಸ್ನೇಹಮಯಿ. ಸಾಧಾರಣ ಎತ್ತರದ ನೋಡಲು ದುಂಡು ದುಂಡಗೆ ಲಕ್ಷಣವಾಗಿದ್ದ ಗಯಾಜ್ ಜಾತಿ ಧರ್ಮಗಳ ರಗಳೆಗಳಿಂದ ದೂರ ಉಳಿದು, ಬದುಕನ್ನು ವಾಸ್ತವ ನೆಲೆಯಲ್ಲಿ ನೋಡಬಲ್ಲ ಭಾವಜೀವಿಯಾಗಿದ್ದ ಕಾರಣಕ್ಕೆ ನನಗೆ ತುಂಬಾ ಇಷ್ಟವಾಗುತ್ತಿದ್ದ.
ಈ ಮೌಲ್ಯಮಾಪನದ ಕೆಲಸವೇ ಅಂಥಾದ್ದೋ, ಇಲ್ಲಾ ವಯಸ್ಸಿನ ಒತ್ತಡದ ಕಾರಣವೋ ಗೊತ್ತಿಲ್ಲ, ಅಂತೂ ಪ್ರತಿ ವರ್ಷವೂ ಒಬ್ಬರಲ್ಲಾ ಒಬ್ಬರು ಈ ಅವಧಿಯಲ್ಲಿ ಸಾವಿನ ಮನೆಯ ಬಾಗಿಲನ್ನು ತಟ್ಟಿ ಬಿಡುತ್ತಾರೆ. ಹೀಗೆ ಇದ್ದಕ್ಕಿದ್ದಂತೆ ತೀರಿಹೋದವರ ಗುಂಪಿಗೆ ಈ ಸಲ ಚಿಕ್ಕಬಳ್ಳಾಪುರದ ಅಶ್ವಥ್ಥರೆಡ್ಡಿ ಸೇರಿದ್ದಾರೆ. ವಯಸ್ಸು ಐವತ್ತೆರಡು ಆಗಿತ್ತು. ಬಗಲಿಗೊಂದು ಬಟ್ಟೆಯ ಬ್ಯಾಗನ್ನು ತಗಲು ಹಾಕಿಕೊಂಡಿರುತ್ತಿದ್ದ, ಸದಾ ಚಟುವಟಿಕೆಯಿಂದಿರುತ್ತಿದ್ದ ಇವರನ್ನು ನೋಡಿದ ಯಾರಿಗೇ ಆಗಲಿ ಇವರೊಬ್ಬರು ಮೇಸ್ಟ್ರು ಅಥವಾ ಪಕ್ಕಾ ಸಾಹಿತ್ಯ ಪ್ರೇಮಿ ಅನ್ನುವುದು ಎದ್ದು ಕಾಣುತ್ತಿತ್ತು. ಒಂದು ವಾರದವರೆಗೆ ನಾನಿದ್ದ ರೂಮಿನಲ್ಲಿ, ನನ್ನ ಹಿಂದಿನ ಬೆಂಚಿನಲ್ಲಿ ಕುಳಿತು ಕೆಲಸ ಮಾಡುತ್ತಿದ್ದ ರೆಡ್ಡಿಯವರು ತುಂಬಾ ತಮಾಷೆಯ ಮನುಷ್ಯ. ಸಾಯುವ ಹಿಂದಿನ ದಿನ ಸಂಜೆ ನಾಲ್ಕು ನಾಲ್ಕೂವರೆಯವರೆವಿಗೆ ಗೆಳೆಯರೊಂದಿಗೆ ನಗುನಗುತ್ತಲೇ ಕೆಲಸ ಮಾಡಿ ಹೋದ ರೆಡಿಯವರು ಮಾರನೆಯ ದಿನ ತಿರುಗಿ ಬರಲೇ ಇಲ್ಲ. ಚಿಕ್ಕಬಳ್ಳಾಪುರದ ಮನೆಯಿಂದ ಬೆಳಿಗ್ಗೆ ರೈಲಿನಲ್ಲಿ ಹೊರಟವರನ್ನು ಸಾವು ಅದ್ಯಾವ ಪರಿ ಹಿಂಬಾಲಿಸಿತ್ತೋ, ಅಂತೂ ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಇಳಿದು ಕುಸಿದು ಬಿದ್ದವರು ಮತ್ತೆ ಏಳಲೇ ಇಲ್ಲ.
ಈ ಸಾವು ಅನ್ನುವುದು ತೋರಿಸುವ ಕರಾಮತ್ತು ಆಕಸ್ಮಿಕವಾದರೂ, ಇಂಥ ಸಾವುಗಳಿಗೆ ನೆಪಗಳು ಏನೇ ಇದ್ದರೂ, ಅದು ಹತ್ತಿರದ ಮನಸ್ಸುಗಳಲ್ಲಿ ಉಳಿಸಿಬಿಡುವ ಅಳಿಸಲಾಗದ ನೋವು ಮಾತ್ರ ಬದುಕಿನುದ್ದಕ್ಕೂ ಜೊತೆಯಾಗಿ ಇದ್ದು ಬಿಡುತ್ತದೆ. ಆಗಾಗ ನೆನಪಿನ ಕುಡಿಕೆಯೊಳಗಿನಿಂದ ಎದ್ದು ನಿಂತು ವಾಸ್ತವದ ಬೆಳಕಿನಲ್ಲಿ ರಾಚುವ ಪರಿಗೆ ಎದೆಯ ನಡುವಿನಲ್ಲಿ ಸಣ್ಣಗೆ ಚಳುಕಾಡಿದಂತಾಗುತ್ತದೆ.
ನಾನು ಚಿಕ್ಕವನಿದ್ದಾಗ ನನಗೆ ತಪಲ ಅನ್ನುವ ಜೀವದ ಗೆಳೆಯನಿದ. ಬಾಲ್ಯದ ಹುಡುಗಾಟಿಕೆ, ಕುತೂಹಲ ಇಂಥ ಗೆಳೆಯನೊಬ್ಬನ ಜೀವವನ್ನೇ ಬಲಿ ತೆಗೆದುಕೊಂಡಿತ್ತು, ಅನ್ನುವ ಸಂಗತಿ ಇವತ್ತಿಗೂ ನನ್ನೊಳಗೆ ನೋವಿನ ಸೆಲೆಯಾಡಿಸುತ್ತದೆ. ಈ ಘಟನೆ ನಡೆದಾಗ ನಾವಿನ್ನೂ ಮಿಡ್ಲ್ ಸ್ಕೂಲಿನಲ್ಲಿದ್ದೆವು. ಚಿಕ್ಕವರಿದ್ದಾಗ ನನ್ನಂತೆಯೇ ನನ್ನ ವಾರಿಗೆಯ ಗೆಳೆಯರಿಗೆ ಕುದುರೆ ಸವಾರಿ ಮಾಡುವುದೆಂದರೆ ಇನ್ನಿಲ್ಲದ ಹುಚ್ಚಿನ ಸಂಗತಿಯಾಗಿತ್ತು. ಇಂಥ ಕುತೂಹಲಕ್ಕೆ ನಮ್ಮ ಹಳ್ಳಿಗೆ ವರ್ಷಕ್ಕೆ, ಆರು ತಿಂಗಳಿಗೊಮ್ಮೆ ಕುದುರೆಯ ಮೇಲೆ ಬರುತ್ತಿದ್ದ ಸ್ವಾಮೀಜಿ ಕಾರಣರಾಗಿದ್ದರು. ಸಾಲದ್ದಕ್ಕೆ ವರ್ಷದ ಯಾವುದಾದರೊಂದು ಕಾಲದಲ್ಲಿ ನಮ್ಮ ಹಳ್ಳಿಯಲ್ಲಿ ಪ್ರತ್ಯಕ್ಷವಾಗಿಬಿಡುತ್ತಿದ್ದ ಚಿಕ್ಕನಾಯಕನಹಳ್ಳಿಯ ಸೂಫಿ ತಾತಯ್ಯನ ಗೋರಿಯ ಬಡಕಲು ಕುದುರೆ ನಮ್ಮ ಆಸೆಯನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತಿತ್ತು. ತಾತಯ್ಯನ ಕುದುರೆ ನನ್ನ ಹಳ್ಳಿಯ ಮಕ್ಕಳುಗಳಿಗೆ ರಾಜ ಮಹಾರಾಜರ ಕುದುರೆಗಿಂತಲೂ ಒಂದು ಕೈ ಮುಂದೆ ಕಾಣುತ್ತಿತ್ತು. ಹಾಗಾಗಿ ಕುದುರೆ ನಮ್ಮ ಹಳ್ಳಿಯಲ್ಲಿ ಕಾಣಿಸಿಕೊಂಡರೆ ಸಾಕು, ನಾವದನ್ನು ಹಿಡಿದು ಕಟ್ಟಿ ಅದಕ್ಕೆ ಬೇಕಾದ ಮೇವನ್ನು ಹಾಕಿ ಸಲಹಿ, ಸ್ಕೂಲಿನ ಬಿಡುವಿನ ವೇಳೆಯಲ್ಲಿ, ಅದೂ ಮನೆಯವರಿಗೆ ಯಾರಿಗೂ ಕಾಣದಂತೆ ಅದರ ಮೇಲೆ ಸವಾರಿ ಮಾಡುತ್ತಿದ್ದೆವು. ಒಮ್ಮೆ ಹೀಗೆ ಮಾಡಿದ ಸವಾರಿ ಗೆಳೆಯನೊಬ್ಬನ ಜೀವವನ್ನೇ ಕಿತ್ತುಕೊಂಡು ಬಿಟ್ಟಿತೆಂಬುದನ್ನು ನೆನೆದರೆ ಇದನ್ನು ಬರೆಯುತ್ತಿರುವ ಈ ಹೊತ್ತಿನಲ್ಲೂ ಮೈ ಜುಂ ಅನ್ನುತ್ತದೆ.
ಅವತ್ತು ಶನಿವಾರ ಮಾರ್ನಿಂಗ್ ಕ್ಲಾಸನ್ನು ಮುಗಿಸಿಕೊಂಡು ಬಂದವರೇ ನಾನು, ಗೆಳೆಯರಾದ ಕೊಚ್ಚ, ಆಡಿಟ್ಟ ಮತ್ತು ತಪಲ, (ಇವರೆಲ್ಲರ ಹೆಸರುಗಳು ಬೇರೆಯೇ ಇದ್ದರೂ ನಾವು ಕರೆಯುತ್ತಿದ್ದ ಅಡ್ಡ ಹೆಸರುಗಳು) ಎಲ್ಲರೂ ಒಟ್ಟುಗೂಡಿ ಹಿಂದಿನ ದಿನವೇ ಹಿಡಿದು ಕುದುರೆಯನ್ನು ಕಟ್ಟಿದ್ದ ಊರಾಚೆಯ ಕೆರೆಯ ಅಂಗಳದ ಪಕ್ಕದಲ್ಲಿದ್ದ ಕೊಪ್ಪಲಿಗೆ ಹೋಗಿದ್ದೆವು. ಹೋಗುವಾಗ ಐದಾರು ಅಂಬಳ್ಳಿ ಎಳೆಗಳನ್ನು ಕಿತ್ತುಕೊಂಡು, ಅವುಗಳನ್ನೆಲ್ಲಾ ಒಟ್ಟಿಗೆ ಸೇರಿಸಿ ನುಣಿದು ಲಗಾಮನ್ನು ಮಾಡಿಕೊಂಡಿದ್ದೆವು. ಕುದುರೆಯನ್ನು ಹದ್ದುಬಸ್ತಿನಲ್ಲಿಡಲು ಅದರ ಬಾಯಿಗೆ ಲಗಾಮು ಹಾಕಬೇಕು ಅನ್ನುವುದು ಗೊತ್ತಿತ್ತೇ ಹೊರತು, ಅದು ಕಬ್ಬಿಣದ್ದೇ ಆಗಿರಬೇಕು ಅನ್ನುವುದು ಮಾತ್ರ ನಮಗಾರಿಗೂ ಗೊತ್ತಿರಲಿಲ್ಲ.
ನಾವು ಅಲ್ಲಿಗೆ ತಲುಪುವ ಹೊತ್ತಿಗಾಗಲೇ ಮಧ್ಯಾಹ್ನವಾಗಿ ಹೋಗಿತ್ತು. ಹಿಂದಿನ ದಿನ ಮಳೆ ಬಿದ್ದಿದ್ದರಿಂದಲೋ ಏನೋ ಬಿಸಿಲಿನ ಝಳ ವಿಪರೀತ ಇತ್ತು. ಜೊತೆಗೆ ಸಂಜೆಗೆ ಮುಂಚೆಯೇ ಮಳೆ ಬರಬಹುದಾದ ಸೂಚನೆಯಾಗಿ ಮುಗಿಲಲ್ಲಿ ಅಲ್ಲಲ್ಲಿ ಕಪ್ಪು ಮೋಡಗಳು ಹೆಪ್ಪುಗಟ್ಟಿಕೊಳ್ಳುತ್ತಿದ್ದವು. ಹಾಗಾಗಿ ಗಡಿಬಿಡಿಯಿಂದಲೇ ಕೊಪ್ಪಲಿನೊಳಗೆ ಕಟ್ಟಿದ್ದ ಕುದುರೆಯನ್ನು ಬಿಚ್ಚಿ ಹೊರಕ್ಕೆ ಕರೆ ತಂದು, ಅದರ ಬಾಯಿಗೆ ಅಂಬಳ್ಳಿ ಬಳ್ಳಿಯ ಲಗಾಮನ್ನು ಹಾಕಿದೆವು. ನಂತರ ಗೆಳೆಯನೊಬ್ಬನ ಹೆಗಲ ಮೇಲಿದ್ದ ಟವೆಲ್ಲಿನಿಂದ ಕುದುರೆಯ ಕೊರಳನ್ನು ಬಂಧಿಸಿ, ಮೊದಲು ಯಾರಾದರೂ ಇಬ್ಬರು ಅದರ ಮೇಲೆ ಕೂರುವುದೆಂದೂ, ಉಳಿದ ಇಬ್ಬರು ಕೂತವರ ರಕ್ಷಣೆಗಾಗಿ ಕುದುರೆಯ ಇಕ್ಕೆಲಗಳಲ್ಲಿಯೂ ನಡೆಯುವುದೆಂದು ತೀರ್ಮಾನಿಸಿದೆವು. ಅದರಂತೆ ನಾನು ಮತ್ತು ತಪಲ ಮೊದಲು ಕೂರುವುದೆಂದು ತೀರ್ಮಾನವಾಗಿ, ಕೊಚ್ಚ, ಆಡಿಟ್ಟರ ಸಹಾಯದಿಂದ ಕುದುರೆಯನ್ನು ಹತ್ತಿ ಕುಳಿತೆವು. ನಮ್ಮ ಈ ಎಲ್ಲ ಆಟಗಳನ್ನೂ ಕುದುರೆ ಅನಿವಾರ್ಯವಾಗಿ ಸಹಿಸಿಕೊಂಡಿತ್ತೋ ಅಥವಾ ಅದಕ್ಕೆ ನಮ್ಮಗಳನ್ನು ಪ್ರತಿಭಟಿಸುವ ಶಕ್ತಿ ಇರಲಿಲ್ಲವೋ ಗೊತ್ತಿಲ್ಲ. ತುಂಬಾ ನಿರುಪದ್ರವಿಯಂತೆ ಸುಮ್ಮನೆ ನಿಂತಿತ್ತು. ಮೊದಲು ನಾನು ಹತ್ತಿ ಲಗಾಮನ್ನು ಹಿಡಿದುಕೊಳ್ಳಬೇಕೆಂಬ ಆಸೆ ನನ್ನೊಳಗಿದ್ದರೂ, ಮುಂದೆ ಕುಳಿತು ಲಗಾಮನ್ನು ಹಿಡಿದಿದ್ದ ತಪಲನನ್ನು ಹಿಂದಿನಿಂದ ಅವುಚಿ ಕುಳಿತೆ.
ಆ ಹೊತ್ತಿಗಾಗಲೇ ಕಪ್ಪು ಕಪ್ಪು ಮಳೆಯ ಮೋಡಗಳು ಕೆಂಡದಂತೆ ಗುಂಡಗಿದ್ದ ಸೂರ್ಯನನ್ನು ಕವುಚಿಕೊಳ್ಳಲಾರಂಭಿಸಿದ್ದವು. ಸಣ್ಣಗೆ ದೂರದಿಂದ ಮಳೆಯ ವಾಸನೆಯೂ ಮೂಗಿಗೆ ಅಡರತೊಡಗಿತ್ತು. ಸಾಲದ್ದಕ್ಕೆ ತಣ್ಣಗೆ ಗಾಳಿಯೂ ತೀಡ ತೊಡಗಿತ್ತು. ಇದೆಲ್ಲದರಿಂದ ನಮ್ಮ ಚಾನ್ಸು ಎಲ್ಲಿ ಖೋತಾ ಆಗಿ ಬಿಡುತ್ತದೋ ಅನ್ನುವ ಅನುಮಾನವನ್ನು ನಮ್ಮ ರಕ್ಷಣೆಗೆ ನಿಂತಿದ್ದ ಕೊಚ್ಚ ಮತ್ತು ಆಡಿಟ್ಟರೊಳಗೆ ಆಡಿಸಿದ್ದರ ಪರಿಣಾಮವಾಗಿ ‘ಬೇಗ ಬೇಗ ಓಡುಸ್ರೋ’ ಅನ್ನ ತೊಡಗಿದರು. ಆದರೆ ನಮ್ಮನ್ನೊತ್ತ ಕುದುರೆ ಮಾತ್ರ ಇದಾವುದರ ಅರಿವೆಯೇ ಇಲ್ಲದ್ದರಂತೆ ಮೆಲ್ಲಗೆ ಹೆಜ್ಜೆಗಳನ್ನು ಇಡುತ್ತಿತ್ತು. ಮೇಲೆ ಕುಳಿತ ನಮಗೂ ಅಂಥ ಅವಸರವಿರಲಿಲ್ಲ. ಕಾರಣ ಕುದುರೆ ನಡೆದು ಹೋಗುತ್ತಿರುವಾಗ ನಮ್ಮ ಸುತ್ತಲೂ ಇದ್ದ ಗಿಡ ಮರಗಳು ಅದರ ಜೊತೆಯಲ್ಲಿಯೇ ನಡೆಯುತ್ತಿರವಂತೆ ಭಾಸವಾಗುತ್ತಿದ್ದುದರ ಜೊತೆಗೆ, ಚಿಲಿಪಿಲಿಗುಡುತ್ತಾ ಹಾರಾಡುತ್ತಿದ್ದ ಪಕ್ಷಿಗಳೆಲ್ಲಾ ಬೇರೊಂದು ಲೋಕದ ವಸ್ತುಗಳಂತೆ ಕಾಣುತ್ತಾ ಹೇಳಲಾಗದ ಪುಳಕವನ್ನು ಹುಟ್ಟಿಸುತ್ತಿದ್ದವು.
ಹೀಗೆ ನಮ್ಮ ಸವಾರಿ ಸ್ವಲ್ಪ ದೂರ ಹೋಗುವುದರೊಳಗೆ ಅಲ್ಲೊಂದು ಇಲ್ಲೊಂದು ಮಳೆಯ ಹನಿಗಳು ಬೀಳಲಾರಂಭಿಸಿದವು. ಗಾಳಿಯ ಬಿರುವೂ ಕೊಂಚ ಹೆಚ್ಚಿಕೊಂಡಿತು. ಇದರಿಂದ ಗಲಿಬಿಲಿಗೊಳಗಾದ ಕೆಳಗೆ ನಡೆದು ಬರುತ್ತಿದ್ದ ಕೊಚ್ಚ, ಆಡಿಟ್ಟರು ‘ಲೇ ಜೋರಾಗಿ ಓಡುಸ್ರಿ ಇಲ್ಲಾ ಕೆಳಕ್ಕೆ ಇಳೀರಿ’, ಅಂತ ಕೂಗಿಕೊಳ್ಳ ತೊಡಗಿದರು. ಇದಕ್ಕೆ ಸ್ಪಂದಿಸಿದವನಂತೆ ಲಗಾಮು ಹಿಡಿದಿದ್ದ ತಪಲ ತನ್ನೆರಡೂ ಕಾಲುಗಳಿಂದ ಕುದುರೆಯ ಹೊಟ್ಟೆಯ ಭಾಗಕ್ಕೆ ಒದೆಯುತ್ತಾ, ರಾಜ ಗಾಂಭೀರ್ಯದಲ್ಲಿ ಲಗಾಮನ್ನು ಎಳೆಯುತ್ತಾ ‘ಟುರ್ರ ಟುರ್ರ,’ಅಂತ ಅನ್ನತೊಡಗಿದ. ಆಗಲೂ ಕುದುರೆ ಮೆಲ್ಲಗೇ ನಡೆಯುತ್ತಿತ್ತು. ಈ ವೇಳೆಗಾಗಲೇ ಕುದುರೆಯ ಬಾಯೊಳಗಿದ್ದ ಅಂಬಳ್ಳಿ ಬಳ್ಳಿಯ ಲಗಾಮಿನ ಅರ್ಧ ಬಳ್ಳಿಗಳಾಗಲೇ ತುಂಡಾಗಿದ್ದುದರ ಕಲ್ಪನೆ ನಮಗಾರಿಗೂ ಇರಲಿಲ್ಲ.
ಮಳೆಯ ಹನಿಗಳು ಮತ್ತೂ ಹೆಚ್ಚಾಗ ತೊಡಗಿದವು. ತಪಲನ ಹುಕುಮ್ಮಿಗೂ ಕುದುರೆ ಬೆಲೆ ಕೊಡದಿದ್ದುದ ಕಂಡ ಕೊಚ್ಚನಿಗೆ ಆಗಲೋ ಈಗಲೋ ಸುರಿಯಬಹುದಾಗಿದ್ದ ಮಳೆಯನ್ನು ನೆನೆದೇ ಕೋಪವುಕ್ಕಿ, ತನ್ನ ಕೈಯ್ಯಲ್ಲಿದ್ದ ಲಕ್ಕೆಯ ಕಡ್ಡಿಯಿಂದ ಕುದುರೆಯ ಕುಂಡಿಗಳಿಗೆ ಒಂದೇ ಸಮನೆ ಹೊಡೆಯ ತೊಡಗಿದ. ಯಾವಾಗ ಲಕ್ಕೆ ಕಡ್ಡಿಯ ಏಟುಗಳು ಕುಂಡಿಗಳಲ್ಲಿ ಚುರುಕು ಮುಟ್ಟಿಸ ತೊಡಗಿದವೋ, ಆವರೆಗೂ ಸಮಾಧಾನದಿಂದಿದ್ದ ಕುದುರೆ ಒಮ್ಮೆಗೇ ಎಚ್ಚರಗೊಂಡಂತೆ, ತನ್ನ ಹಿಂಬದಿಯ ಕಾಲುಗಳೆರಡನ್ನೂ ಎತ್ತಿ ಚಿಮ್ಮುತ್ತಾ, ದಿಢೀರ್ ವೇಗ ಹೆಚ್ಚಿಸಿಕೊಂಡು ಬಿಟ್ಟಿತು. ಇದನ್ನು ನಿರೀಕ್ಷಿಸದಿದ್ದ ಮೇಲೆ ಕುಳಿತಿದ್ದ ನಮಗೆ ಒಮ್ಮೆಗೇ ಆಯ ತಪ್ಪಿದಂತಾಯ್ತು. ತಪಲ ಕುದುರೆಯ ಕತ್ತನ್ನು ಹಿಡಿದು ಮಲಗಿದರೆ, ನಾನು ಅವನನ್ನು ಅವುಚಿ ಹಿಡಿದುಕೊಂಡಿದ್ದೆ. ನಮ್ಮ ಇಂಥ ಪರಿಸ್ಥಿತಿಯನ್ನು ಮನಗಂಡಂತೆ, ಒಂದು ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಿರುತ್ತಿರುವುದರಂತೆ, ಆವರೆವಿಗೂ ಒಂದೇ ದಿಕ್ಕಿಗೆ ಓಡುತ್ತಿದ್ದ ಕುದುರೆ ಅಡ್ಡಾದಿಡ್ಡಿಯಾಗಿ ದಿಕ್ಕು ಬದಲಾಯಿಸಿಕೊಳ್ಳುತ್ತಾ, ಜಗ್ಗು ಹಾಕಿಕೊಂಡು ಓಡತೊಡಗಿತು. ನಂತರ ಲಗಾಮಿನಿಂದ ಕುದುರೆಯನ್ನು ನಿಂಯಂತ್ರಿಸಬಹುದೆಂಬ ಸಂಗತಿ ತಪಲನಿಗೆ ನಿಧಾನವಾಗಿ ಹೊಳೆದವನಂತೆ ಮೆಲ್ಲನೆ ಕುದುರೆಯ ಕುತ್ತಿಗೆಯನ್ನು ಬಿಟ್ಟು ಕೊಂಚ ಮೇಲೆದ್ದು, ಎರಡೂ ಕೈಗಳಿಂದ ಲಗಾಮನ್ನು ಹಿಡಿದು ಬಲವಾಗಿ ಜಗ್ಗಿದ. ಆ ವೇಳೆಗಾಗಲೇ ಹೆಚ್ಚೂ ಕಡಿಮೆ ತುಂಡಾಗಿ ಹೋಗಿದ್ದ ಲಗಾಮಿನ ಎಳೆಗಳು ಅವನು ಜಗ್ಗಿದಷ್ಟೇ ರಭಸವಾಗಿ ಅವನ ಕೈಗೆ ಬಂದವು.
ಆಕಾಶದಲ್ಲಿ ಮೋಡಗಳ ಹಿಂದೆ ಯಾರೋ ಕುಳಿತು ಸಣ್ಣ ಸಣ್ಣ ಕಲ್ಲುಗಳನ್ನು ಎಸೆಯುತ್ತಿದ್ದಾರೆಂಬಂತೆ, ಮಳೆ ಧೋ ಎಂದು ಸುರಿಯತೊಡಗಿತು. ಸಂಜೆಯಾಗಲು ಇನ್ನೂ ಬಹಳ ಹೊತ್ತಿದ್ದರೂ, ಸಂಜೆಯ ಕತ್ತಲನ್ನೂ ಮೀರಿಸುವಂಥ ಕತ್ತಲು ಆವರಿಸಿಕೊಂಡು ಬಿಟ್ಟಿತು. ಸಣ್ಣಗೆ, ಉದ್ದಕ್ಕೆ ದೀಪ ಹಚ್ಚಿದಂತೆ ಮಿಂಚು, ಜೊತೆಗೆ ಗುಡುಗುಗಳ ಆರ್ಭಟ ಶುರುವಾಗಿಟ್ಟಿತು. ಇದಕ್ಕೆ ಬೆಚ್ಚಿದಂತೆ ಕುದುರೆ ತನ್ನ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಹೊಲಮಾಳಗಳನ್ನು ದಾಟುತ್ತಾ, ಅದರ ಎದೆಯ ಮೇಲೆ ಹರಿಯುತ್ತಿದ್ದ ಕೆಂಪು ನೀರನ್ನೂ, ಅದರೊಳಗಿನ ಸಣ್ಣ ಪುಟ್ಟ ಗುಂಡಿಗಳನ್ನೂ ಲೆಕ್ಕಿಸದೆ ಹುಚ್ಚೆದ್ದು ಓಡ ತೊಡಗಿತು. ಕಣ್ಣುಗಳನ್ನು ಬಿಡಲಾರದಷ್ಟು ಮಳೆಯ ಹನಿಗಳು ನಮಗೆ ರಾಚುತ್ತಿದ್ದವು. ನೆಗೆಯೋಣವೆಂದರೆ ಎಲ್ಲಿದ್ದೇವೆ ಎಂಬುದರ ಅರಿವಿಲ್ಲದ್ದರ ಜೊತೆಗೆ ಭಯ ಬೇರೆ. ಸಾಲದ್ದಕ್ಕೆ ಮಳೆಯ ಹನಿಗಳು ಬಿದ್ದಂತೆಲ್ಲಾ ಮತ್ತೂ ನುಣುಪಾಗುತ್ತಾ ಜಾರತೊಡಗಿದ್ದ ಕುದುರೆಯ ಮೈ. ಹೇಗೆ ಕಷ್ಟ ಪಟ್ಟು ಹಿಡಿದರೂ ಸಿಗದ ಹಿಡಿತ. ನಮ್ಮಿಬ್ಬರೊಳಗೂ ಒಮ್ಮೆಗೇ ಅಳುವಿನ ರಾಗಗಳು ಮೂಡಿ, ಅವು ಹೊರಹೊಮ್ಮಿದರೂ ಆ ಮಳೆ, ಆ ಗಾಳಿ, ಆ ಮಿಂಚು ಸಿಡಿಲುಗಳ ನಡುವೆ ಅಪ್ಪಚ್ಚಿಯಾಗಿ ಹೋಗುತ್ತಿದ್ದವು. ನಮ್ಮ ಇಂಥ ಪರದಾಟದ ಸ್ಥಿತಿಯನ್ನು ಅರಿತದ್ದರಂತೆ ಹುಚ್ಚೆದ್ದು ಓಡುತ್ತಿದ್ದ ಕುದುರೆ ಒಮ್ಮೆಗೇ ನಿಂತು, ಎತ್ತಿ ಕುಕ್ಕಿದಂತೆ ಒಮ್ಮೆಗೇ ಕೆನೆದು ಮತ್ತೆ ಓಡ ತೊಡಗಿತು. ಇದನ್ನು ನಿರೀಕ್ಷಿಸದಿದ್ದ ಹಿಂದೆ ಕುಳಿತಿದ್ದ ನಾನು ಒಮ್ಮೆಗೇ ದೊಪ್ಪನೆ ಕೆಳಗೆ ಬಿದ್ದು ಬಿಟ್ಟೆ. ಬಿದ್ದ ರಭಸಕ್ಕೆ ಕುಂಡಿಗಳನ್ನು ಗುಂಡು ಕಲ್ಲೊಂದರಿಂದ ಜಜ್ಜಿದಂತ ಅನುಭವವಾಗಿ, ತಕ್ಷಣ ಏನು ಮಾಡಬೇಕೆಂದು ತೋಚದೆ ಕೂತಲ್ಲೇ ಬಿಕ್ಕಿ ಅಳ ತೊಡಗಿದೆ. ನನ್ನ ಆ ಅನಾಥ ಅಳು, ನನ್ನ ಕೆಳಗೆ ಹರಿಯುತ್ತಿದ್ದ ನೀರೊಳಗೆ ಬೆರೆತು, ಅದು ಹರಿದೆಡೆಯಲ್ಲೆಲ್ಲಾ ಹರಿದಾಡತೊಡಗಿದಂತೆ, ತಪಲನನ್ನು ಹೊತ್ತ ಕುದುರೆ ಸುರಿವ ಮಳೆಯಲ್ಲಿ ಮಾಯವಾಗಿ ಬಿಟ್ಟಿತ್ತು.
ಸ್ವಲ್ಪ ಹೊತ್ತಿಗೆ ಏದುತ್ತಾ ಓಡಿ ಬಂದ ಕೊಚ್ಚ, ಆಡಿಟ್ಟರು ನನ್ನನ್ನು ಎಬ್ಬಿಸಿ ನಿಲ್ಲಿಸಿ, ಅಂಥಾದ್ದೇನೂ ಆಗಿಲ್ಲ ಅನ್ನುವುದನ್ನು ಮನಗಂಡು ತಪಲನ ಬಗ್ಗೆ ವಿಚಾರಿಸಿದರು. ಕೈಸನ್ನೆಯಲ್ಲೇ ಕುದುರೆ ಹೋದ ದಿಕ್ಕನ್ನು ತೋರಿಸಿದ ನನ್ನೊಳಗೆ ಆಡುತ್ತಿದ್ದ ಭಯ, ಆತಂಕಗಳು ಅವರೊಳಗೂ ಆಡುತ್ತಿರುವುದರ ಕುರುಹಾಗಿ ಅವರಿಬ್ಬರೂ ಅಳುತ್ತಿದ್ದರು.
ಮಳೆಯ ವೇಗ ಕಡಿಮೆಯಾಗಿದೆ ಅನಿಸಿದರೂ, ಅದನ್ನೂ ಮೀರಿಸುವ ಭಯಾನಕತೆಯನ್ನು ತುಂಬಿಕೊಂಡು ಗಾಳಿ ಜೋರಾಗಿ ಬೀಸುತ್ತಿತ್ತು. ಕಾಡಿಗೆ ಮೇಯಲು ಹೋಗಿದ್ದ ದನಗಳು ಸಾಲಾಗಿ ಕೆರೆಯ ಏರಿಯ ಮೇಲೆ ಮೈಸಿಂಡರಿಸಿಕೊಂಡು ಮನೆಗಳತ್ತ ಧಾವಿಸುತ್ತಿದ್ದುದು ದೂರದಿಂದ ಕಾಣುತ್ತಿತ್ತು. ಎಲ್ಲರೂ ಅಳುವಿನ ಬಗೆ ಬಗೆಯ ರಾಗಗಳನ್ನು ನುಡಿಸುತ್ತಾ ತಪಲನನ್ನು ಹುಡುಕಿಕೊಂಡು ಹೊರಟೆವು. ಸ್ವಲ್ಪ ದೂರ ನಡೆಯುವುದರೊಳಗೆ ತಪಲ ಕಾರೆಗುತ್ತಿಯೊಂದರ ಪಕ್ಕದಲ್ಲಿ ಅಂಗಾತನಾಗಿ ಬಿದ್ದುದು ಕಂಡಿತು. ಒಂದೇ ಉಸುರಿಗೆ ನಾವು ಅವನತ್ತ ಓಡಿದೆವು. ನಮ್ಮನ್ನೇ ನೋಡುತ್ತಿದ್ದ ತಪಲನ ದೈನೇಶಿ ನೋಟ ನಮಗೆಲ್ಲಾ ಯಾವುದೋ ಅಶುಭ ಸೂಚನೆಯ ಸಂಕೇತದಂತೆ ಕಂಡು, ಹತ್ತಿರ ಹೋದವರೇ ಅವನನ್ನು ಏಳಿಸಿ ನಿಲ್ಲಿಸಿದೆವು.
ನಿಲ್ಲಲಾಗದೆ ತಟ್ಟಾಡುತ್ತಾ ತಪಲ ಕೊಚ್ಚನನ್ನು ಆತು ನಿಂತ. ಅವನ ತಲೆಯ ಹಿಂಭಾಗದಿಂದ ರಕ್ತಸ್ರಾವವಾಗುತ್ತಾ, ಆ ಸುರಿವ ಮಳೆಯಲ್ಲೂ ಅದು ಅವನ ಅಂಗಿಯಲ್ಲಿ ಕಲೆಗಟ್ಟಿಕೊಂಡಿತ್ತು.
ಇದಾದ ಕೆಲ ದಿನಕ್ಕೆ ತಪಲ ನಮ್ಮನ್ನೆಲ್ಲಾ ಬಿಟ್ಟು ಹೋದ.
ಕಾಲದ ಮಡಿಲಿನೊಳಗೆ ತಪಲ ಸೇರಿ ವರುಷ ವರುಷಗಳೇ ಕಳೆದಿವೆ. ತಪಲನ ಸಮಾಧಿಯ ಮೇಲಿಟ್ಟಿದ್ದ ತೆಂಗಿಸ ಸಸಿ ಮರವಾಗಿ ಬೆಳೆದು ಸದಾ ತುಂಬು ತುಂಬು ಗೊನೆಗಳನ್ನು ಹೊತ್ತು ನಿಂತಿರುತ್ತದೆ.