ಮೇ ೨೩, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಬೆನ್ನಿ ಬೆನ್ಯಾಮಿನ್ ‘ಆಡುಜೀವನ’ ಮಲಯಾಳಂ ಕಾದಂಬರಿಯ ಇಪ್ಪತ್ತಾರನೇ ಕಂತು, ಅನುವಾದ:ಅಶೋಕ್ ಕುಮಾರ್    
ಡಾ. ಅಶೋಕ್ ಕುಮಾರ್
ಶುಕ್ರವಾರ, 4 ಮೇ 2012 (04:04 IST)
ಚಿತ್ರಗಳು: ವಿಷ್ಣು

ಯಾವ ಯಾತನೆಯನ್ನಾದರೂ ನಾವು ಸಹಿಸಬಹುದು, ಹಂಚಿಕೊಳ್ಳಲು ಒಬ್ಬರು ನಮ್ಮ ಜೊತೆಗಿದ್ದರೆ. ಒಬ್ಬಂಟಿಯಾಗುವುದೆಂದರೆ ಎಷ್ಟು ದುರ್ಧರವೆಂದು ಬಲ್ಲಿರಾ. ವಾಕ್ಕುಗಳು ನಮ್ಮ ಒಳಗಡೆಯೇ ಇದ್ದು ವರಾಲು ಮೀನುಗಳ ಹಾಗೆ ಚಡಪಡಿಸುವುದು. ಹಂಚಿಕೊಳ್ಳಲಾಗದಂತಹ ಭಾವನೆಗಳು ಉಬ್ಬುತ್ತಾ, ನೊರೆಯುತ್ತ, ಬಾಯಿಂದ ಬುರುಗಾಗುತ್ತಲೂ ಇರುತ್ತವೆ. ದುಗುಡ ದುಮ್ಮಾನಗಳನ್ನು ಕೇಳುವುದಕ್ಕೂ ಒಂದು ಕಿವಿಯಿರಬೇಕು. ನಮ್ಮ ಕಡೆಗೆ ನೋಡಲು ಎರಡು ಕಣ್ಣಿರಬೇಕು. ನಮ್ಮೊಂದಿಗೆ ಹರಿಯಲು ಒಂದು ಕೆನ್ನೆಯ ದಂಡೆಯಿರಬೇಕು. ಇವಾವುದೂ ಇಲ್ಲದಿದ್ದರೆ ಅದು ಕೊನೆಗೆ ಹುಚ್ಚಿನಲ್ಲಿ ಕೊನೆಯಾದೀತು. ಅಲ್ಲದಿದ್ದರೆ ಆತ್ಮಹತ್ಯೆಯಲ್ಲಿ. ಏಕಾಂತ ಸೆರೆವಾಸ ವಿಧಿಸಲ್ಪಟ್ಟವರು ಹುಚ್ಚರಾಗಿಬಿಡುವುದರ ಕಾರಣ ಅದೇ ಇರಬೇಕು.

ಅಗತ್ಯಕ್ಕೆ ಮಾತುಗಳನ್ನು ಹೊರಕ್ಕೆ ಬಿಡುವುದು ಎಂಬುದೇ ಮನಸ್ಸಿಗೆ ಸಿಗುವ ಅತಿದೊಡ್ದ ಸಾಂತ್ವನ. ಅದಿಲ್ಲದಿದ್ದವನು ಮಾತುಗಳನ್ನು ನುಂಗಿ ನುಂಗಿ ಸತ್ತೇ ಹೋಗುವನು. ನಾನೂ ಆ ರೀತಿ ಸಾಯಬೇಕಾಗಿದ್ದವನೇ. ಆದರೆ ನನ್ನ ಹುಲ್ಲುಗಾತಿ ರಮಣಿಯೊಂದಿಗೂ ನನ್ನ ಮೇರಿ ಮೈಮುನಳೊಂದಿಗೂ ನನ್ನ ಕೌಸುವಿನೊಂದಿಗೂ ನನ್ನ ಕಟುಕ ರಾವುತರೊಂದಿಗೂ ಕತೆಗಳನ್ನು ಹೇಳುವುದರ ಮೂಲಕ ನುಂಗಿದ್ದ ಮಾತುಗಳನ್ನು ನಾನು ಕಕ್ಕಿಬಿಡುತ್ತಿದ್ದೆ. ನಡೆದಾಡುವಾಗಲೂ ಹಾಲು ಕರೆವಾಗಲೂ ತೊಟ್ಟಿ ತುಂಬಿಸುವಾಗಲೂ ಹುಲ್ಲು ಕೊಡುವಾಗಲೂ ಎಲ್ಲ ನಾನು ಅವುಗಳೊಂದಿಗೆ ನನ್ನ ಅತ್ಯಂತ ಪ್ರೀತಿಪಾತ್ರರೊಂದಿಗೆ ಎಂಬಂತೆ ಮಾತುಗಳನ್ನಾಡುತ್ತಲೇ ಇರುತ್ತಿದ್ದೆ. ಅದರಲ್ಲಿ ನನ್ನ ನೋವುಗಳೂ, ದುಃಖಗಳೂ, ಭಾವನೆಗಳೂ, ಸ್ವಪ್ನಗಳೂ ಎಲ್ಲ ಇದ್ದವು. ಆಡುಗಳಿಗೆ ಏನಾದರೂ ಅರ್ಥವಾಗುತ್ತಿತ್ತೇ ಎಂದು ನನಗೆ ತಿಳಿಯದು. ಆದರೆ ಅವು ನನಗೆ ಕಿವಿಗೊಟ್ಟು ಆಲಿಸುತ್ತಿದ್ದವು. ನನ್ನತ್ತ ಕಣ್ಣುಗಳನ್ನೆತ್ತರಿಸಿ ನೋಡುತ್ತಿದ್ದವು. ನನ್ನೊಂದಿಗೆ ಕಣ್ಣೀರು ಹರಿಸುತ್ತಿದ್ದವು. ನನಗೆ ಅದು ಸಾಕಿತ್ತು.

ಆಡುಗಳ ಜೊತೆಗೆ ಸಮರಸ ಹೊಂದಿದ ಆ ಜೀವನದಲ್ಲಿ ಸಂಕಟಗಳನ್ನೂ ವೇದನೆಗಳನ್ನೂ ಮಾತ್ರವಲ್ಲ, ನನ್ನ ಶರೀರವನ್ನೇ ಅವುಗಳೊಂದಿಗೆ ಹಂಚಿಕೊಂಡ ಒಂದು ಅನುಭವ ನನಗಿದೆ. ಒಂದು ರಾತ್ರಿ ಮಲಗಿದ್ದಾಗ ಒಂದಿನಿತೂ ನಿದ್ರೆ ಬರುತ್ತಿಲ್ಲ. ಎಲ್ಲಿಂದಲೋ ಎಂದರಿಯೆ ಒಂದು ಉಷ್ಣತೆ ನನ್ನನ್ನು ಬಂದು ಆವರಿಸಿತು.ಒಂದು ಬಯಕೆ. ಮರುಗಾಳಿಯಂತೆ ನುಗ್ಗಿ ಬರುವ ಒಂದು ತೃಷ್ಣೆ. ಎಷ್ಟೋ ಕಾಲದಿಂದ ನಾನು ಷಂಡನಾಗಿದ್ದೆ. ಇನ್ನು ಎಂದಾದರೂ ಜಾಗೃತನಾಗುವೆನೆಂದು ನಾನೆಂದೂ ಕಲ್ಪನೆಯನ್ನೂ ಕಂಡಿರಲಿಲ್ಲ. ಆದರೆ ಅಂದು ಅದು ಸಂಭವಿಸಿತು. ಎಷ್ಟೋ ಕಾಲದಿಂದ ಮಡುಗಟ್ಟಿ ನಿಂತಿದ್ದುದೆಲ್ಲಾ ನನ್ನಲ್ಲಿಗೆ ಭೋರ್ಗರೆಯುತ್ತಾ ಬಂದಿತು. ಸ್ವಯಂ ಶಮನಗೊಳಿಸಲು ನಡೆಸಿದ ಎಲ್ಲಾ ಪರಿಶ್ರಮಗಳೂ ನನ್ನನ್ನು ಹೆಚ್ಚು ಆಸಕ್ತಿಯತ್ತಲೇ ಬಿಗಿದೆಳೆದೊಯ್ದವಷ್ಟೆ. ನನ್ನ ಕಣ್ಣೆದುರಿನಲ್ಲೇ ನಗ್ನವಾಗಿಸಿದ ಹೆಣ್ಣು ದೇಹಗಳು ತೆವಳಿನಡೆಯಲು ತೊಡಗಿದವು. ನಾನು ಭಾವೋದ್ರೇಕದ ಒತ್ತಡದಲ್ಲಿ ಕರಗಿ ಒದ್ದಾಡಿದೆ. ನನಗೆ ಜೊತೆಸೇರಿ ಮಲಗಲು ಒಂದು ಶರೀರ ಬೇಕಾಗಿತ್ತು. ನನಗೆ ಓಡಿ ಪ್ರವೇಶಿಸಲು ಒಂದು ಗುಹೆ ಬೇಕಾಗಿತ್ತು. ಆಗ ನಾನು ಹುಚ್ಚನಾಗಿಬಿಟ್ಟೆ. ಅ ಹುಚ್ಚಿನ ತೀಕ್ಷ್ಣತೆಯಲ್ಲಿ ನಾನು ಎಲ್ಲಿಗೋ ಎದ್ದು ನಡೆದೆ. ಮತ್ತೆ ಮುಂಜಾನೆ ಯಾವಾಗಲೋ ಆಲಸ್ಯದಿಂದ ಕಣ್ಣು ತೆರೆದಾಗ ನಾನು ಮಸರದೊಳಗೆ ಇದ್ದೆ. ನನ್ನೊಟ್ಟಿಗೆ ಹುಲ್ಲುಗಾತಿ ರಮಣಿ ಅಂಟಿಕೊಂಡು ಮಲಗಿತ್ತು.

ಆಚೆಬದಿಯ ಮಸರದಲ್ಲಿ ಹಕೀಂ ಜೀವಂತವಿದ್ದಾನೆಂದು ತಿಳಿದಾಗಿನಿಂದ ಅವನನ್ನು ಆಗಿಂದಾಗ ಕಾಣಬೇಕೆಂಬ ಹಂಬಲ ಬಹಳ ಹೆಚ್ಚಾಯಿತು. ಒಂದು ಮನುಷ್ಯಜೀವಿಯನ್ನು ಕಾಣುವುದು ಎಂಬ ಕಣ್ಣಿನ ಹತ್ತಿಕ್ಕಲಾಗದ ಆಸೆಯೇ ಅದರ ಹಿಂದಿದ್ದುದು. ನನ್ನನ್ನು ಕಾಣಲು ಅವನೂ ದಾರಿ ಹುಡುಕುತ್ತಿದ್ದ. ನಾವುಗಳು ಇಬ್ಬರೂ ಬೇರೆ ಬೇರೆ ದಾರಿಗಳಿಗೆ ಆಡುಗಳನ್ನು ನಡೆಸಿಕೊಂಡು ಹೋಗುತ್ತಿದ್ದ ಕಾರಣದಿಂದಲೇ ಇಂದಿನವರೆಗೂ ಪರಸ್ಪರ ಭೇಟಿಯಾಗದಿದ್ದುದ್ದು ಎಂದು ನಾವು ತಿಳಿದುಕೊಂಡೆವು. ನಮ್ಮಿಬ್ಬರ ಮಸರಗಳ ನಡುವೆ ಒಂದು ಸಣ್ಣ ಗುಡ್ಡದ ಇಳಿಜಾರಿದೆ. ಅದು ನಾವು ಪರಸ್ಪರ ಕಾಣಲು ಇರುವ ಎಲ್ಲಾ ಸಾಧ್ಯತೆಗಳನ್ನೂ ಮರೆಯಾಗಿಸಿಬಿಟ್ಟಿತ್ತು. ಆಮೇಲಾಮೇಲೆ ನಾನು ಆ ಗುಡ್ಡದ ಇಳುಕಲನ್ನು ದಾಟಿ ಆಚೆಬದಿಗೆ ಹೋಗಲಾರಂಭಿಸಿದೆ. ಆಗ ದೂರದಲ್ಲಿ ಹಕೀಂ ಆಡುಗಳೊಂದಿಗೆ ನಡೆಯುವುದನ್ನು ಕಾಣಬಹುದಿತ್ತು. ಅವನೂ ನಿಧಾನವಾಗಿ ನನ್ನ ಹತ್ತಿರಕ್ಕೆ ಬರಲಾರಂಭಿಸಿದ. ಆ ಭೇಟಿಯನ್ನು ಅರ್‌ಬಾಬ್ ಹಲವು ಬಾರಿ ಖಂಡಿಸಿದ್ದ. ನಾನು ಅಷ್ಟಾಗಿ ಲೆಕ್ಕಿಸುತ್ತಿರಲಿಲ್ಲ. ಅನುಭವಿಸಿ ಅನುಭವಿಸಿ ಮರೆಯಾಗಿ ಹೋಗಿಬಿಡುವ ಒಂದು ಭೀತಿಯಿದೆಯಲ್ಲ. ಅದೇ ಆಗಿತ್ತು ನನಗೆ ಅರ್‌ಬಾಬ್‌ನ  ಬಗೆಗಿದ್ದ ಭಾವನೆ. ಬಂದರೆ ಏನು ಮಹಾ ಬಂದೀತು. ಸಾಕಷ್ಟು ಬಯ್ಗಳು. ಬಹಳಷ್ಟು ಹೊಡೆತ. ಅವೆರಡೂ ನನಗೆ ರೂಢಿಯಾಗಿಹೋಗಿತ್ತು. ನನ್ನ ಅರ್‌ಬಾಬ್‌ಗಿಂತಲೂ ಭಾರೀ ತಿಕ್ಕಲನಾಗಿದ್ದ ಹಕೀಂನ ಅರ್‌ಬಾಬ್. ಅವನಿಗೆ ಮಾಡಿದ್ದನ್ನೆಲ್ಲ ಅವನು ನನಗೆ ಆಗಾಗ ಹೇಳುತ್ತಿದ್ದ. ಮುಖಕ್ಕೆ ಬಿಸಿನೀರು ಎರಚುವುದು, ತಲೆಗೂದಲು ಎಳೆದು ಕೀಳುವುದು, ಗುದದ್ವಾರದಲ್ಲಿ ಕಡ್ಡಿ ತೂರಿಸಿಬಿಡುವುದು, ಎದೆಗೆ ಒದೆಯುವುದು, ಕಲಗಚ್ಚು ನೀರಿನಲ್ಲಿ ತಲೆ ಮುಳುಗಿಸುವುದು ಮುಂತಾಗಿ ಅವನ ಅರ್‌ಬಾಬ್‌ನ ಲೀಲಾವಿನೋದಗಳು ಹಲವಿದ್ದವು.

ಆದುದರಿಂದ ಬಹಳ ಅಂಜುತ್ತಲೇ ಅವನು ನನ್ನ ಬಳಿಗೆ ಬರುತ್ತಿದ್ದನು. ಬಂದರೂ ಸಹ ಏನಾದರೂ ಎರಡು ಮಾತಾಡಿ ಓಡಿ ಹೋಗಿಬಿಡುತ್ತಿದ್ದ. ಪರಸ್ಪರ ಕಾಣಲು ಕಾರಣಗಳನ್ನು ಸೃಷ್ಟಿಸುವುದೇ ಮುಂದಿನ ಯತ್ನ. ಅದಕ್ಕಾಗಿ ಆಡುಗಳ ಗುದದ್ವಾರಕ್ಕೆ ಕಡ್ದಿ ಹಾಕಿ ತಿವಿಯುತ್ತಿದ್ದೆ. ಅಲ್ಲದಿದ್ದರೆ ಬಾಲ ಹಿಡಿದು ಮುರಿಯುತ್ತಿದ್ದೆ. ಆಗ ಆಡು ಹುಚ್ಚೆದ್ದು ಓಡುವುದು. ಅದನ್ನು ಹಿಡಿಯಲೆಂಬ ಸೋಗಿನಲ್ಲಿ ಹಿಂದೆಯೇ ಓಡಿ ಅದನ್ನು ಹೊಡೆಯುವೆ. ಆಗ ಅದು ಹೆಚ್ಚಿನ ವೇಗದಿಂದ ಓಡುವುದು. ಹಾಗೆ  ನಾನು ಒಟ್ಟಿನಲ್ಲಿ ಹಕೀಂನ ಬಳಿಗೆ ತಲುಪುತ್ತಿದ್ದೆ. ದೂರದಿಂದ ಅರ್‌ಬಾಬ್ ಬೈನಾಕ್ಯುಲರ್‌ನ ಮೂಲಕ ನೋಡುವಾಗ ಯಾದೃಚ್ಛಿಕವಾಗಿ ನಾನು ಆಡಿನ ಹಿಂದೆ ಓಡಿ ಅಲ್ಲಿ ಹೋಗಿ ತಲುಪಿದೆ ಎಂದಷ್ಟೇ ಅನ್ನಿಸುವುದು. ಏನಾದರೂ ಒಂದೆರಡು ಮಾತು. ಅಷ್ಟಕ್ಕೆ ಸೀಮಿತಗೊಳ್ಳುತ್ತಿತ್ತು ನಮ್ಮ ಸಂಭಾಷಣೆ. ಚುಟುಕಾಗಿರಬೇಕು. ಅಷ್ಟಕ್ಕೇ ಸಮಯಾವಕಾಶವಿರುವುದು. ಹೆಚ್ಚು ಹೊತ್ತು ನಿಂತುಬಿಟ್ಟರೆ ಅಷ್ಟರೊಳಗೆ ಅರ್‌ಬಾಬ್ ಗಾಡಿ ತೆಗೆದುಕೊಂಡು ಹಿಂದೆಯೆ ಬರುತ್ತಾನೆ. ಹಾಗಿರುವಾಗ ಎಷ್ಟು ಕಾಯಿಸಿ ಪಾಕವಿಳಿಸಿದರೆ ಮನದ ತುಂಬಾ ತುಳುಕುತ್ತಿರುವ ಮಾತುಗಳನ್ನು ನಾಲ್ಕುನುಡಿಗಳಲ್ಲಿ ಅಡಕಗೊಳಿಸಲು ಸಾಧ್ಯ ಎಂದು ಯೋಚಿಸಿ ನೋಡಿರಿ. ದಿವಸ ಪೂರ್ತಿ ಬಾಯಿ ಮುಚ್ಚದೆ ಮಾತನಾಡಲು ಅವಕಾಶಗಳ ಸಮೃದ್ಧಿಯಿರುವ ನಿಮಗೆಲ್ಲ ಬಹುಶಃ ಅದರ ವಿವಶತೆ ಮನವರಿಕೆಯಾದೀತು ಎಂದು ಹೇಳಲಾಗದು.

ಇಪ್ಪತ್ತೇಳು

ಒಂದು ದಿನ ನಾನು ಆಡುಗಳನ್ನು ನಡೆದಾಡಲು ಬಿಟ್ಟುಬಿಟ್ಟು ಒಂದು ಮಣ್ಣಿನ ದಿಣ್ಣೆಯ ಮೇಲೆ ಕುಳಿತಿದ್ದೆ. ಅತ್ತ ದೂರದಲ್ಲಿ ಹಕೀಂ ಆಡುಗಳನ್ನು ಕರೆದುಕೊಂಡು ನಡೆದಾಡುವುದು ಕಾಣಿಸುತ್ತಿತ್ತು. ಅವನ ಬಳಿಗೆ ಒಮ್ಮೆ ಹೋಗಿ ಸ್ವಲ್ಪ ಹೊತ್ತು ಮಾತನಾಡಿದರೆ ಹೇಗೆ ಎಂದು ನನಗನಿಸಿತು. ಆದರೆ ಅರ್‌ಬಾಬ್ ಬೈನಾಕ್ಯುಲರ್‌ನಿಂದ ಕಣ್ಣು ತೆಗೆದಿಲ್ಲ. ಕಳೆದ ಹಲವಾರು ದಿನಗಳಿಂದ ನಿರೀಕ್ಷಣೆ ಸ್ವಲ್ಪ ಜಾಸ್ತಿಯೇ ಆಗಿದೆ. ಯಾವುದೇ ಕಾರಣಕ್ಕೂ ಹಕೀಂನ ಹತ್ತಿರ್ ಹೋಗುವುದಾಗಲಿ ಅವನೊಂದಿಗೆ ಸಂಪರ್ಕ ಬೆಳೆಸುವುದಾಗಲಿ ಮಾಡಕೂಡದೆಂದು ನನಗೆ ಕಟ್ಟುನಿಟ್ಟಿನ ಆದೇಶ ಕೊಟ್ಟಿದ್ದನಷ್ಟೇ. ನಾವು ಪರಸ್ಪರ ನಿರಂತರವಾಗಿ ಭೇಟಿಯಾಗುವುದರಿಂದ ಪಾರಾಗಲು ನಮ್ಮಲ್ಲಿ ಉಪಾಯಗಳು ಚಿಗುರಬಹುದೇನೋ ಎಂಬ ಭಯ ಅರ್‌ಬಾಬ್‌ಗಿತ್ತು. ಆದ್ದರಿಂದಲೇ ಇರಬೇಕು ನಮ್ಮನ್ನು ಸದಾ ದೂರವಿರಿಸುತ್ತಿದ್ದುದು. ಆದರೆ ಆತ ಹೇಳುವುದು ಬೇರೊಂದನ್ನೇ. ಆ ಕಡೆ ಇರುವ ಮಸರದಲ್ಲಿ ಹಲವಾರು ರೋಗರುಜಿನಗಳು ಇರುತ್ತವೆ. ಅವರೊಡನೆ ಸಂಪರ್ಕ ಇಟ್ಟುಕೊಂಡರೆ ಅವು ನಮ್ಮ ಮಸರಕ್ಕೆ ಹರಡುತ್ತವೆ. ನಮ್ಮ ಆಡುಗಳಿಗೆ ಆ ರೋಗಗಳು ತಗಲುತ್ತವೆ. ನಿಜವಾಗಿಯೂ  ನನಗೆ ನಗೆಯುಕ್ಕಿ ಬರುತ್ತಿತ್ತು. ಪರಿಶುದ್ಧಿಯ ಗುಡಾರವೇ ಅಲ್ಲವೇ ನಮ್ಮ ಮಸರ!!  

ನಾನು ನನ್ನ ಚಪಲವನ್ನು ಮನದಲ್ಲೇ ಹತ್ತಿಕ್ಕಿ ನಿಗಾ ವಹಿಸಿದೆ. ನಾನು ಹೇಗೋ ಹೊಡೆತ ಬೈಗಳನ್ನು ತಿನ್ನ ಬಲ್ಲೆ. ಆದರೆ ಯಾಕೆ ಪಾಪ ಆ ಬಡಪಾಯಿಗೂ ಸಹ ಏಟು ಕೊಡಿಸುವುದು. 

ಹಕೀಮನ್ನು ದೂರದಲ್ಲಿ ಕಂಡದ್ದರಿಂದಲೇ ಇರಬೇಕು ಫಕ್ಕನೆ ನಮ್ಮ ಊರಿನ ಜ್ಞಾಪಕ ಬಂದಿತು. ನನ್ನ ಮಸರ ಜೀವನದಲ್ಲಿ ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಒಂದು ಅದು. ನನ್ನ ಎಲ್ಲಾ ಆಸೆಗಳೂ ನನ್ನ ಎದೆಯಾಳದಿಂದ ಚಿಮ್ಮಿ ಬಂದವು. ನನ್ನ ಸೈನು, ನನ್ನ ಉಮ್ಮ, ನನ್ನ ಮಗ....? ನನ್ನ ಮಗಳು....? ನನ್ನ ಮನೆ. ನನ್ನ ದೋಣಿ. ವಲಸಿಗ ವಿದೇಶವಾಸಿಗಳ ಗೃಹಾತುರತೆ ಕುರಿತು ಎಷ್ಟೋ ಹೇಳುವುದನ್ನು ಕೇಳಿದ್ದೇನೆ. ಆದರೆ ಅಷ್ಟೆಲ್ಲಾ ಕಠಿನ ಸ್ಥಿತಿಗಳಲ್ಲೂ ಸಹ ನಾನು ನನ್ನ ಕನಸುಗಳನ್ನು ನೆನೆದು ವ್ಯಾಕುಲ ಪಡಲಿಲ್ಲವಲ್ಲ ಎಂಬುದು ಆಮೇಲಿನ ದಿನಗಳಲ್ಲಿ ನನಗೇ ಅಚ್ಚರಿಯುಂಟು ಮಾಡುತ್ತಿತ್ತು. ಸದ್ಯೋಭವಿಷ್ಯದಲ್ಲಿ ಒಂದು ಮರುಪಯಣದ ಸಾಧ್ಯತೆ ತೆರೆದಿರುವವರಿಗಷ್ಟೆ ಆ ಯೋಚನೆ ಹೆಚ್ಚಾಗಿ ಇರುವುದು ಎಂದೇ ನನಗನಿಸುತ್ತದೆ. ನನಗಾದರೋ ಆ ನರಕದಿಂದ ಯಾವತ್ತಾದರೂ ಪಾರಾಗಬೇಕೆಂಬ ಯೋಚನೆಯೇ ಇರಲಿಲ್ಲ. ಹೋಗಿ ಸಿಲುಕಿಬಿಟ್ಟೆ. ಇನ್ನು ಈ ಜೀವನ ಇಲ್ಲಿಯೇ. ಸತ್ತವರು ಜೀವನದ ಬಗ್ಗೆ ಕನಸುಗಳನ್ನು ಕಾಣುವುದಿಲ್ಲವಲ್ಲ. ಹಾಗಿದ್ದರೂ ಪ್ರತ್ಯಾಶೆಯು ಅದರ ಸರ್ವ ಬಲವನ್ನೂ ಹೊರತೋರುವಾಗ ಎಂದಾದರೂ ಒಮ್ಮೆ ನಾನೂ ಇಲ್ಲಿಂದ ಪಲಾಯನ ಮಾಡಬಹುದು ಎಂಬ ಒಂದು ವ್ಯಾಮೋಹದ ಕುಡಿ ನನ್ನಲ್ಲಿ ಮೊಳಕೆಯೊಡೆಯುತ್ತಿತ್ತು.

ಕರುಣಾಮಯನಾದ ಅಲ್ಲಾಹುವೇ, ನೀನು ಎಷ್ಟೋ ಮಾನವರ ಬದುಕಿನಲ್ಲಿ ಮಹಾ ಪವಾಡಗಳನ್ನು ತೋರ್ಪಡಿಸುತ್ತೀಯ. ಬೀದಿಯಲ್ಲಿ ತಿರಿದುಣ್ಣುವವನಿಗೆ ಲಾಟರಿ ಹೊಡೆದು ಒಂದೇ ದಿನದಲ್ಲಿ ಅವನು ಸಿರಿವಂತನಾಗುತ್ತಾನೆ. ವಾಸಿಯಾಗದ ಕಾಯಿಲೆಯವನು ಒಂದು ಸುಂದರ ಬೆಳಗಿನಲ್ಲಿ ಪೂರ್ಣಾರೋಗ್ಯದಿಂದ ಜೀವನಕ್ಕೆ ಮರಳಿ ಬರುತ್ತಾನೆ. ಬಸ್ಸಿನಡಿಗೆ ಸಿಕ್ಕಿ ನಜ್ಜುಗುಜ್ಜಾದನೆಂದು ತಿಳಿದವನು ಒಂದು ಗೀರುಗಾಯವೂ ಆಗದಂತೆ ಮೇಲೆದ್ದು ಬರುತ್ತಾನೆ. ವಿಮಾನಾಪಘಾತದಲ್ಲಿ ನೂರಾರು ಜನ ಸತ್ತರೂ ಅವರಲ್ಲೊಬ್ಬ ಮಾತ್ರ ಬದುಕಿ ಉಳಿಯುತ್ತಾನೆ. ನೌಕಾಘಾತಕ್ಕೊಳಗಾದವನು ವರ್ಷಗಳ  ಬಳಿಕ ಜೀವಂತವಾಗಿ ತೀರಕ್ಕೆ ಬರುತ್ತಾನೆ. ಭೂಕಂಪದಲ್ಲಿ ಕುಸಿದ ಕಟ್ಟಡಗಳ ಅವಶೇಷಗಳಡಿಯಿಂದ ಒಬ್ಬನು ತಿಂಗಳು ಕಳೆದ ಮೇಲೆ ಪುನರುಜ್ಜೀವನಗೊಂಡು ಬರುತ್ತಾನೆ. ಸಾಮಾನ್ಯ ಮನುಷ್ಯನ ವಿಚಾರ ಶಕ್ತಿಗೆ  ನಿಲುಕದ ಎಷ್ಟೋ ಸಂಗತಿಗಳಿವೆ. ಹಾಗೊಂದು ನನ್ನ ಜೀವನದಲ್ಲೂ ನಡೆಯುವಂತೆ ನೀನು ಮಾಡಲಾರೆಯಾ....? ನೀನೊಮ್ಮೆ ಮನಸ್ಸು ಮಾಡಿದರೆ ಸಾಕು. ಒಬ್ಬ ಹುಲ್ಲಿನ ಗಾಡಿಯವನು ನನಗೋಸ್ಕರ ಅವನ ಗಾಡಿಯನ್ನು ನಿಲ್ಲಿಸುತ್ತಾನೆ. ನೀರಿನ ಗಾಡಿಯವನು ನನ್ನನ್ನು ಇಲ್ಲಿಂದ ಸಾಗಿಸಿ ಎಲ್ಲಾದರೂ ಸೂಕ್ತ ತಾಣಕ್ಕೆ ತಲುಪಿಸುತ್ತಾನೆ. ಅವೆಲ್ಲಾ ಯಾಕೆ; ಅರ್‌ಬಾಬ್‌ಗೇ ಕನಿಕರ ತೋರಿ ನನ್ನನ್ನು ಮರಳಿ ಕರೆದೊಯ್ದು ಬಿಡುತ್ತಾನೆ. ಬೇಕಿರುವುದು ನಿನ್ನ ಮಹಾಮನಸ್ಸು. ನಿನ್ನ ಕಾರುಣ್ಯ ಮಾತ್ರವೇ. ನಾನು ಆಕಾಶಗಳ ಕಡೆಗೆ ನೋಡಿದೆ. ಸೂಚನೆಗಳ ಯಾವೊಂದು ಸುಳುವನ್ನೂ ನೀಡದೆ ಅಲ್ಲಿ ಬಂಜರಾದ ಬಿಳಿಚಿದ ಮೋಡದ ತುಣುಕುಗಳು ಅನಾಥವಾಗಿ ತೇಲಿ ಹೋಗುತ್ತಲಿದ್ದವು ಅಷ್ಟೇ.

ಆಗಲೇ ನನ್ನ ಎರಡು ಗಂಡಾಡುಗಳು ಗುದ್ದಾಡುವುದನ್ನು ನಾನು ಕಂಡೆ. ಹೋತಗಳಿಗೆ ಬೇರೆ ಪ್ರಾಣಿಗಳನ್ನು ಆಕ್ರಮಿಸುವಾಗ ಇರುವುದಕ್ಕಿಂತ ದುಪ್ಪಟ್ಟು ಕೆಚ್ಚು ಅವುಗಳು ತಂತಮ್ಮಲ್ಲೇ ತಿವಿದಾಡುವಾಗ ಇರುತ್ತದೆ. ತಮ್ಮೊಳಗೇ ಗುದ್ದಾಡಿ ತಲೆಯೊಡೆದು ರಕ್ತ ಕಂಡಮೇಲೇನೆ ಅವು ತಣಿಯುವುದು. ಅಷ್ಟು ಕಲಿತನ. ಒಂದು ಗಂಡಿಗೆ ಇನ್ನೊಂದು ಗಂಡಿನ ಮೇಲೆ ರೊಚ್ಚು. ನಾನು ಅವುಗಳ ಬಳಿಗೆ ಓಡಿಹೋಗಿ ಬಡಿದು ದೂರ ಮಾಡಿದೆ. ಒಂದು ಆಡು ಕೋಪವುಗುಳುತ್ತ ನಡೆದು ಹೋಯಿತು. ಇನ್ನೊಂದು ನನ್ನ ಕಡೆಗೆ ತಿರುಗಿ ಮೂಗಿನ ಹೊಳ್ಳೆ ಅರಳಿಸಿತು. ಕಣ್ಣನ್ನು ಚೂಪುಗೊಳಿಸಿತು. ಹಬೆಯನ್ನು ಉರುಬಿತು. ಕೋಪ ಪೂರಾ ಕೊಂಬಿನಲ್ಲಿ ಆವಾಹಿಸಿಕೊಂಡಿತು. ನಾನು ನಿಂತಲ್ಲಿಂದ ಕದಲಲಿಲ್ಲ. ಅದು ಮುಂದಕ್ಕೆ ನೆಗೆದು ಬಂದಾಗ ಒಂದೇ ಕ್ಷಣದಲ್ಲಿ ನಾನು ಪಕ್ಕಕ್ಕೆ ಎಗರಿ ತಪ್ಪಿಸಿಕೊಂಡೆ. ಅದನ್ನು ನಾನು ಅಸಂಖ್ಯಾತ ದಿನಗಳ ಅನುಭವದಿಂದ ಕಲಿತುಕೊಂಡಿದ್ದೆ. ಆಡುಗಳು ಒಂದೇ ಸಲಕ್ಕೆ ನೆಗೆದು ಹಾಯಲು ಬರುವುದಿಲ್ಲ. ತುಸು ನಿಂತು ತಿವಿಯುವುದಕ್ಕಾಗಿ ಗುರಿ ಹಿಡಿಯುತ್ತವೆ. ಆಮೇಲೆಯೇ ನೆಗೆದು ಬರುತ್ತವೆ. ಅದುವರೆಗೂ ನಾವು ಅಲ್ಲಿಯೇ ನಿಂತಿರಬೇಕು. ಅದು ಗುರಿ ಇಡಲಿ. ಅದು ಹಾರಿದೊಡನೆ ನಾವೂ ಪಕ್ಕಕ್ಕೆ ಜಿಗಿಯಬೇಕು. ಮತ್ತೆ ಅದಕ್ಕೆ ಗುರಿ ಬದಲಾಯಿಸಲಾಗುವುದಿಲ್ಲ. ಹೋತದ ತಿವಿತದಿಂದ ತಪ್ಪಿಸಿಕೊಳ್ಳುವುದಕ್ಕಿರುವ ಒಂದೇ ಒಂದು ದಾರಿ ಅದು ಮಾತ್ರವೇ.       

ಗುರಿ ತಪ್ಪಿಹೋದ ಹೋತ ಸ್ವಲ್ಪ ಪಕ್ಕಕ್ಕೆ ಸರಿದು ಮುಗ್ಗರಿಸಿ ಬಿತ್ತು. ಆ ಬೀಳುವಿಕೆಯ ಜೊತೆಗೆ ಬೆನ್ನಿಗೆ ನಾಲ್ಕು ಏಟುಗಳನ್ನೂ ಸಹ ಕೊಟ್ಟಾಗ ಅದರ ಛಲ ಕೊಂಚ ಕುಂದಿತು. ಹಾಗೂ ಹೀಗೂ ಒದ್ದಾಡಿ ಜಿಗಿದು ಮೇಲೆದ್ದು ಅದು ಬೇರೊಂದು ದಾರಿ ಹಿಡಿದು ಹೋಯಿತು. ಆಡು ಬಿದ್ದ ಕಡೆ ಸ್ವಲ್ಪ ಮಣ್ಣು ಜರುಗಿತ್ತು. ನಾನು ಅಯಾಚಿತವಾಗಿ ಅತ್ತ ನೋಡಿದಾಗ ಅಲ್ಲಿ ಏನೋ ಒಂದು ಇರುವ ಹಾಗಿತ್ತು. ಅಷ್ಟೇ ಅಲ್ಲ. ಅಲ್ಲಿ ಇತ್ತೀಚೆಗೆ ಯಾವಾಗಲೋ ಮಣ್ಣು ಸಡಿಲಾಗಿರುವುದರ ಒಂದು ಕುರುಹೂ ಕಂಡಿತು. ನಾನು ಮನಸ್ಸಿನಲ್ಲಿ ಹೊತ್ತಿ ಭುಗಿಲೆದ್ದ ಒಂದು ವಿಹ್ವಲತೆಯೊಂದಿಗೆ ಅಲ್ಲಿಗೆ ಹೋದೆ. ಆ ದೃಶ್ಯ ನನ್ನನ್ನು ಬೆಚ್ಚಿಬೀಳಿಸಿತು. ನಾನು ಅರ್‌ಬಾಬ್ ಇದ್ದ ದಿಕ್ಕಿಗೆ ನೋಡಿದೆ. ಆತ ಬೈನಾಕ್ಯುಲರ್‌ನಿಂದ ಕಣ್ತೆಗೆದು ವಿಶ್ರಮಿಸುತ್ತಿದ್ದ. ಇನ್ನು ಮುಂದಿನ ವೀಕ್ಷಣೆಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾನೆ. ನಾನು ಅಲ್ಲಿ ಕುಳಿತು ನಿಧಾನಕ್ಕೆ ಮಣ್ಣು ಕೆರೆಯಲು ತೊಡಗಿದೆ. ನನ್ನ ಮನದಲ್ಲಿ ನೊರೆಯಾಗಿ ಉಕ್ಕಿಬಂದ ಸಂಶಯ ಪೂರಾ ನಿಜವಾಗಿತ್ತು. ಅದನ್ನು ಕಂಡು ನಾನು ಹೌಹಾರಿ ಮೇಲೆದ್ದೆ. ಅದು ಒಬ್ಬ ಮನುಷ್ಯನ ಮುಂಗೈ ಆಗಿತ್ತು! ಕೊಳೆತು ಜೀರ್ಣವಾಗಿ ಮೂಳೆಗಳು ಮಾತ್ರವಾಗುಳಿದಿದ್ದ ಒಂದು ಹಸ್ತ!! ಭಯಂಕರ ಭೀತಿಯೊಂದಿಗೆ ಮತ್ತು ಅದಮನೀಯ ತಲ್ಲಣದೊಂದಿಗೆ ನಾನು ಉಳಿದ ಮಣ್ಣನ್ನು ಸಹ ಸರಿಸಲು ಶುರು ಮಾಡಿದೆ. ಮಣ್ಣಿನ ಒಂದು ಪದರವನ್ನಷ್ಟೆ ಸರಿಸಿದ್ದೆ. ಒಂದು ಪೂರ್ಣ ಮನುಷ್ಯ ಕಾಯದ ಅಸ್ಥಿಪಂಜರ ನನ್ನ ಕಣ್ಣೆದುರಿಗೆ ನಿಚ್ಚಳವಾಗಿ ಗೋಚರಿಸಿತು. ನಾನು ನಿಜವಾಗಿಯೂ ಹೆದರಿ ಬಿಟ್ಟಿದ್ದೆ. ನಾನು ಹಿಂದಕ್ಕೆ ಸರಿದಾಗ ನನ್ನ ಕಾಲಿಗೆ ಏನೋ ತಗುಲಿತು. ಕೊಳೆತು ದ್ರವಿಸದ ಒಂದು ಚರ್ಮದ ಬೆಲ್ಟ್ ಆಗಿತ್ತು ಅದು. ಆಗ ಎಲ್ಲಿಯೋ ಒಂದು ಪರಿಚಯದ ವಾಸನೆ ನನ್ನ ಮೂಗಿಗೆ ಬಡಿಯಿತು.

ತತ್‌ಕ್ಷಣ ನನ್ನೆದೆಯೊಳಗೆ ಒಂದು ಬರಸಿಡಿಲು ಎರಗಿತು! ನಾನು ಅಲ್ಲಿಗೆ ತಲುಪಿದ ಮೇಲೆ ಮೂರನೆ ರಾತ್ರಿ ಮಸರದಿಂದ ಓಡಿ ಹೋದಂಥ ಆ ಭೀಕರರೂಪಿಯ ಸೊಂಟದಲ್ಲಿದ್ದ ಬೆಲ್ಟ್ ಆಗಿತ್ತು ಅದು! 

ಆಡುಗಳನ್ನು ಅಲ್ಲಿಯೇ ತೊರೆದು ನಾನು ಮಸರಕ್ಕೆ ಒಂದೇ ಓಟ ಓಡಿದೆ. ಓಡಿ ತಲುಪಿದೊಡನೆ ನಾನು ಅರ್‌ಬಾಬ್‌ನ ಕಾಲಿಗೆ ಬಿದ್ದೆ. ನನಗೆ ಎಲ್ಲಿಗೂ ಹೋಗಬೇಕಾಗಿಲ್ಲ. ನಾನು  ಎಲ್ಲಿಗೂ ಓಡಿ ಪಾರಾಗುವುದಿಲ್ಲ. ನನ್ನನ್ನು ಸಾಯಿಸದಿದ್ದರೆ ಸಾಕು. ನನಗೆ ಹೀಗಾದರೂ ಜೀವಿಸಿದರೆ ಸಾಕು. ನನಗೆ ಸಾಯಲು ಹೆದರಿಕೆ. ನಾನು ರೋದಿಸುತ್ತಲಿದ್ದೆ. ಅರ್‌ಬಾಬ್  ದಂಗಾಗಿ ಹೋದ. ಆ ವಿಲಾಪದ ಕಾರಣ ಅರ್‌ಬಾಬ್‌ಗೆ ಮನವರಿಕೆಯಾಗಲೇ ಇಲ್ಲ!!

(ಮುಂದುವರೆಯುವುದು)

ಪುಟದ ಮೊದಲಿಗೆ
 
Votes:  5     Rating: 4.8    
 
 
ಸಂಬಂಧಿಸಿದ ಲೇಖನಗಳು
  ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು
  ವಿಜಯರಾಘವನ್ ಅನುವಾದಿಸಿದ ಇಟಾಲಿಯನ್ ಕವಿತೆ
  ಕೃಷ್ಣಮೂರ್ತಿ ಹನೂರರ ಕಾದಂಬರಿಯ ಒಂದು ಅಧ್ಯಾಯ
  ನಿತ೦ಬಗಳಿಗೊ೦ದು ಕವಿತೆಯ ಅಂಜಲಿ:ಸುಮತಿ ಮುದ್ದೇನಹಳ್ಳಿ ಬರಹ
  ಪ್ರತಿಭಾ ನಂದಕುಮಾರ್ ಬರೆದ ದೇವಿ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಎರಡು ಕವಿತೆಗಳು
  ರಾಬಿಯಾಶೇಖ್ ಬರೆದ ಹೀಗೊಂದು ಸಾನೆಟ್
  ಭಾನುವಾರದ ವಿಶೇಷ: ನಾಗರಾಜ ವಸ್ತಾರೆ ಬರೆದ ಕಥೆ ‘ಹತೋಟಿ’
  ಸ್ಮಿತಾ ಅಮೃತರಾಜ್ ಬರೆದ ಎರಡು ಕವಿತೆಗಳು
  ಗಣನಾಥ ಅನುವಾದಿಸಿದ ಇನ್ನಷ್ಟು ಜಪಾನೀ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಕತೆ ‘ಅಂತರಂಗದ ಆಯಾಮ’
  ಒಂಟಿ ದೇವನಿಗೆ ನಕ್ಷತ್ರ ಬರೆದ ಕವಿತೆ
  ಅನಿಲ್ ತಾಳಿಕೋಟಿ ಅನುವಾದಿಸಿದ ನೆರೂದಾ ಕವಿತೆ
  ಕಾಲವಾದ ವಿನಯಚಂದ್ರನ್ ಕವಿತೆ
  ಕುಸುಮಾ ಶಾನಭಾಗ ಬರೆದ ಕತೆ ‘ಕುಂದ ಬೆಟ್ಟದ ಪಿಸುಮಾತು’
  ಎಸ್. ಎನ್ ಗಣನಾಥ ಅನುವಾದಿಸಿದ ಜಪಾನೀ ಕವಿತೆಗಳು
  ಪ್ರಜ್ಞಾ ಮತ್ತಿಹಳ್ಳಿ ಬರೆದ ವೇಷದ ಪದ್ಯಗಳು
  ಕಮಲಾಕರ ಕಡವೆ ಅನುವಾದಿಸಿದ ಇಟಾಲೋ ಕ್ಯಾಲ್ವಿನೋ ಕತೆಗಳು
  ಸ್ಮಿತಾ ಮಾಕಳ್ಳಿ ಮೊದಲ ಪುಸ್ತಕ ಇಂದು ಬಿಡುಗಡೆ
  ರಾಬಿಯಾಶೇಖ್ ಬರೆದ ದಿನದ ಕವಿತೆ
  ಅಗಲಿದ ಗೆಳೆಯನ ಕುರಿತು ರಾಜು ಹೆಗಡೆ ಕವಿತೆ
  `ಒಂದು ಇಂಡಿಯನ್ ಇಂಗ್ಲೀಷ್ ಕಥೆ’
  ಕಾವ್ಯಾ ಕಡಮೆ ಬರೆದ ದಿನದ ಕವಿತೆ
  ಮೈಶ್ರೀ.ನಟರಾಜ ಅನುವಾದಿಸಿದ ರಿಚರ್ಡ್ ಬ್ಲಾಂಕೋ ಕವಿತೆ
  ಭಾನುವಾರದ ವಿಶೇಷ: ವಿಕ್ರಂ ಹತ್ವಾರ್ ಬರೆದ ಕಥೆ ‘ಪೇಣಿ’
  ನಾಗರಾಜ ವಸ್ತಾರೆ ಬರೆದ ದಿನದ ಕವಿತೆ
  ವಾರದ ವಿಶೇಷ: ಪ್ರೇಮಶೇಖರ ಬರೆದ ‘ಬಾಳಿಗೊಂದಿಷ್ಟು ಗಾಳಿ’
  ಒಂದು ಮಲಯಾಳಂ ಕವಿತಾ ಸಂಕಲನದ ಕುರಿತು ಎಲ್.ಸಿ. ಸುಮಿತ್ರಾ
  ವಿಕಾಸ್ ನೇಗಿಲೋಣಿ ಕಥೆ ‘ನಮ್ಮ ಹಕ್ಕಿ ಬಿಟ್ಟೆ ಬಿಟ್ಟೆ’