ಕನ್ನಡ ಚಿತ್ರರಂಗದಲ್ಲೀಗ ಡಬ್ಬಿಂಗ್ಗಿನ ಡಬ್ಬಾ ಶಬ್ದ. ಖಾಲಿ ಡಬ್ಬದಲ್ಲಿ ಕಲ್ಲುಗಳನ್ನು ಹಾಕಿ ಅಲ್ಲಾಡಿಸಿದರೆ ಉಂಟಾಗುತ್ತದಲ್ಲಾ ಅಂತಾ ಶಬ್ದ.
ಕೆಲವರಿಗೆ ಹೊಟ್ಟೆಯ ಚಿಂತೆ, ಕೆಲವರಿಗೆ ಪ್ರತಿಷ್ಠೆಯ ಚಿಂತೆ, ಇನ್ನೂ ಕೆಲವರಿಗೆ ಇದು ಕನ್ನಡ ಸಂಸ್ಕೃತಿಯ ಚಿಂತೆ. ನಮ್ಮ ನಾಡನ್ನು, ನಮ್ಮ ಭಾಷೆಯನ್ನು, ನಮ್ಮ ಸಂಸ್ಕೃತಿಯನ್ನು ಕಾಪಾಡಲು, ರಕ್ಷಣೆ ಮಾಡಲು ಎಷ್ಟೆಲ್ಲಾ ಜನ ಕಟಿಬದ್ಧರಾಗಿ ನಿಂತಿದ್ದಾರಲ್ಲಾ ಅಂತಾ ಆಶ್ಚರ್ಯವಾಗುತ್ತಿದೆ. ಈ ರೀತಿಯ ಕಾಳಜಿಯನ್ನು ಒಂದು ಒಳ್ಳೆಯ ಚಿತ್ರ ಮಾಡುವುದರಲ್ಲಿ ತೋರಿಸಿದ್ದರೆ ಅಥವಾ ಒಂದು ಟಿವಿ ಧಾರಾವಾಹಿ ಮಾಡುವುದರಲ್ಲಿ ತೋರಿಸಿದ್ದರೆ ಮೆಚ್ಚಬಹುದಿತ್ತು. ಈ ಚಲನಚಿತ್ರ ಕಾರ್ಖಾನೆಯ ಜನಕ್ಕೆ ಸ್ವಲ್ಪವಾದರೂ ಈ ನಾಡಿನ ಜನಗಳು ಚಲನಚಿತ್ರಗಳಿಂದ ಏನನ್ನು ನಿರೀಕ್ಷಿಸುತ್ತಾರೆ ಎನ್ನುವ ಪ್ರಾಥಮಿಕ ಜ್ಞಾನವಿದ್ದಿದ್ದರೆ, ಈ ನೆಲದ ಸಂಸ್ಕೃತಿಯ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದಿದ್ದರೆ, ಜಾಗತಿಕ ಮಟ್ಟದಲ್ಲಿ ಹೆಸರು ಮಾಡದಿದ್ದರೂ ಕಡೆಯಪಕ್ಷ ಈ ನೆಲಕ್ಕೆ ಹತ್ತಿರವಾದ, ರೀಮೇಕ್ ಅಲ್ಲದ, ಸದಭಿರುಚಿ ಚಿತ್ರಗಳನ್ನು ತಯಾರಿಸಲು ಪ್ರಯತ್ನಿಸಿದ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ಸೌಜನ್ಯವನ್ನು ತೋರುತ್ತಿದ್ದರು, ಎಲ್ಲವನ್ನೂ ವ್ಯಾಪಾರದಲ್ಲಿಯೇ ಅಳೆಯುವ ಈ ಮಂದಿ ಪದೇ ಪದೇ ಭಾಷೆಯ ವಿಷಯವನ್ನೆತ್ತಿ ಅದನ್ನೇ ಮಾರುವ ಸರಕಾಗಿಸಿಕೊಂಡಿದ್ದಾರೆ.
ಯಾವ್ಯಾಗ ಈ ಕಾರ್ಖಾನೆಯ ಮಂದಿಯ ಬುಡ ಅಲುಗಾಡುವುದೋ ಆಗೆಲ್ಲಾ ಎಲ್ಲಿಲ್ಲದ ಭಾಷಾ ಪ್ರೀತಿ ಉಕ್ಕಿ ಹರಿಯುತ್ತದೆ. ಯಾವುದೇ ಕ್ಷೇತ್ರಕ್ಕಿಲ್ಲದ ಪ್ರಾಮುಖ್ಯತೆ ಈ ಚಲನಚಿತ್ರ ಕಾರ್ಖಾನೆಗೆ ಯಾಕೆ ಅಂತಾ? ಅಷ್ಟಾಗಿಯೂ ಏನಾದರೂ ಈ ಕ್ಷೇತ್ರದಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗಳಾಗಿದ್ದರೆ ಅದಕ್ಕೆ ಪ್ರಾಮುಖ್ಯತೆ ಸಿಗಲಿ. ಅದೇ ಮಚ್ಚು, ಅದೇ ಲಾಂಗು ಹಿಡಿದು ಹೊಡೆದಾಡುವ, ಪ್ರೀತಿ ಪ್ರೇಮ ಅಂತಾ ಮರ ಸುತ್ತುವ ಅಥವಾ ಡ್ಯಾನ್ಸ್ ನೆಪದಲ್ಲಿ ಕವಾಯತು ಮಾಡುವುದನ್ನೇ ಇನ್ನು ಎಷ್ಟು ವರ್ಷ ಈ ಭಾರತದ ಜನ ಈ ಚಲನಚಿತ್ರ ಕಾರ್ಖಾನೆಗಳು ಉತ್ಪಾದನೆ ಮಾಡುವ ಮನರಂಜನೆ ಎಂಬ ಸರಕನ್ನು ನೋಡುತ್ತಾ ಕುಳಿತಿರುತ್ತಾರೋ ಆ ದೇವನೇ ಬಲ್ಲ.
ಇನ್ನು ಡಬ್ಬಿಂಗ್ ಬಗ್ಗೆ ಹೇಳುವುದಾದರೆ.. ಡಬ್ಬಿಂಗ್ ನಿಜಕ್ಕೂ ಚಿತ್ರರಂಗದ ಒಂದು ಕೆಟ್ಟ ತಂತ್ರ. ಮೂಕಿಚಿತ್ರಗಳ ಕಾಲದಲ್ಲಿ ಈ ತೊಂದರೆಯೇ ಇರಲಿಲ್ಲ. ಚಿತ್ರಗಳು ಮಾತಾಡಲು ಶುರು ಮಾಡಿದಾಗ ಕೂಡ ಸಮಸ್ಯೆ ಇರಲಿಲ್ಲ, ಆ ಆ ಭಾಷೆಯ ಜನ ಅಲ್ಲಲ್ಲೇ ಅವರ ಭಾಷೆಯ ಚಿತ್ರಗಳನ್ನು ನೋಡಿಕೊಳ್ಳುತ್ತಿದ್ದರು. ಯಾವಾಗ ಬೇರೆಯವರ ಚಿತ್ರಗಳು ನಮ್ಮಲ್ಲಿ, ನಮ್ಮ ಚಿತ್ರಗಳು ಬೇರೆಯವರಲ್ಲಿ(ಹರಿದಾಡಲೇ ಇಲ್ಲ) ಹರಿದಾಡಲು ಶುರು ಮಾಡಿದವೋ ಅಲ್ಲಿಂದಲೇ ಈ ಸಮಸ್ಯೆ ಪ್ರಾರಂಭವಾದದ್ದು. ಟೆಲಿವಿಷನ್ ಬಂದ ನಂತರ ಈ ಸಮಸ್ಯೆ ಇನ್ನೂ ಉಲ್ಬಣವಾಯಿತು.
ಆದರೆ ಚಿತ್ರದಲ್ಲಿ ಬಳಕೆಯಾಗುವ ಭಾಷೆ ಯಾವುದೇ ಆಗಿರಲಿ ಅದು ಬರಿ ಸಂವಹನ ಮಾಧ್ಯಮ ಮಾತ್ರವಲ್ಲ ಅಥವಾ ಬರಿ ಮಾತು, ಸಂಭಾಷಣೆ ಮಾತ್ರವಲ್ಲ. ಭಾಷೆ ಎಂದರೆ ಅದು ಒಂದು ನೆಲಕ್ಕೆ ಸಂಬಂಧಿಸಿದ್ದು, ಸಂಸ್ಕೃತಿಗೆ ಸಂಬಂಧಿಸಿದ್ದು, ಅದು ಒಂದು ಜನಾಂಗವನ್ನು ಗುರುತಿಸುವ ರೀತಿ. ಇನ್ನು ಚಲನಚಿತ್ರಗಳಲ್ಲಿ ಡಬ್ಬಿಂಗ್‌ನಿಂದಾಗುವ ಸಮಸ್ಯೆಗಳನ್ನು ಗುರುತಿಸೋಣ.. ಜಗತ್ತಿನ ಯಾವುದೇ ಚಿತ್ರವನ್ನು ನಾವು ನೋಡಿದರೂ ಸಬ್ ಟೈಟಲ್‌ನೊಂದಿಗೆ ಅದನ್ನು ಅದೇ ಭಾಷೆಯಲ್ಲಿ ನೋಡಲಿಚ್ಚಿಸುತ್ತೇವೆ. ಚಿತ್ರದಲ್ಲಿ ಮೂಡುವ ಪಾತ್ರಗಳೊಂದಿಗೆ ಅವರಾಡುವ ಮಾತು ಆ ನೆಲದ ಸೊಗಡನ್ನು ಹೊಂದಿರುತ್ತೆ. ಈಗ ಕುರೋಸೊವನ ಜಪಾನಿ ಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡಿ ನೋಡಿ ಹೇಗೆನಿಸುತ್ತದೆ. ನಿಜಕ್ಕೂ ಆ ಪಾತ್ರಗಳನ್ನು ಕನ್ನಡದಲ್ಲಿ ಊಹಿಸಲೂ ಅಸಾಧ್ಯ. ಹಾಗೇ ಕನ್ನಡದ ಪಾತ್ರಗಳನ್ನು ಜಪಾನ್ ಅಥವಾ ಇನ್ನ್ಯಾವುದೇ ಭಾಷೆಯಲ್ಲಿ ನೋಡಲಸಾಧ್ಯ. ಹೀಗೆ ಕಲ್ಪಿಸಿಕೊಳ್ಳಿ: ನವಿಲಿನ ಒಂದು ಚಿತ್ರದ ತುಣುಕಿಗೆ ಕೋಗಿಲೆಯ ಶಬ್ದವನ್ನು, ಕೋಗಿಲೆಯ ಚಿತ್ರಕ್ಕೆ ನವಿಲಿನ ಶಬ್ದವನ್ನೋ ಹಾಕಿ ನೋಡಿ ಆಗ ತಿಳಿಯುತ್ತೆ ಈ ಡಬ್ಬಿಂಗ್ಗಿನ ಅವಾಂತರ ಏನೂ ಅಂತ. ಪಾತ್ರಗಳಾಡುವ ಭಾಷೆ ಬರೀ ಭಾಷೆಯಾಗಿರದೆ ಅದು ಅವರ ಸಂಸ್ಕೃತಿಯ ಒಂದು ಭಾಗವೇ ಆಗಿರುತ್ತದೆ.
ಕೆಲದಿನಗಳ ಹಿಂದೆ ನನ್ನ ಮಗನೊಂದಿಗೆ ನಾನು ಜಪಾನ್ ಚಿತ್ರ ನಿರ್ದೇಶಕ ಓಝೂನ ‘ದಿ ಯಂಡ್ ಆಫ಼್ ಸಮ್ಮರ್’ ಚಿತ್ರವನ್ನು ನೋಡುತ್ತಿದ್ದೆ, ಅದರಲ್ಲಿ ಬರುವ ಹುಡುಗನೊಬ್ಬನ ಪಾತ್ರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ನನ್ನ ಮಗ ಅವನು ಬಳಸುವ ಭಾಷೆಯನ್ನು ಆಲಿಸಿ ಖುಷಿ ಪಡುವುದರೊಂದಿಗೆ ಅವನು ಹೊರಡಿಸುವ ಉಚ್ಛಾರಣೆ ಎಂದೂ ಕೇಳಿರದ, ಆ ಭೌಗೋಳಿಕ ವಾತಾವರಣಕ್ಕೆ, ಆ ಪಾತ್ರಗಳ ಅಭಿನಯಕ್ಕೆ ಬಿಡಿಸಲಾರದ ಬಂಧದಂತೆ ಒಂದರೊಳಗೊಂದು ಬೆಸೆದುಕೊಂಡಿದ್ದವು. ತಾನು ನಿತ್ಯ ನೋಡುವ ಸಿಂಚನ್, ಡೋರೆಮಾನ್ ಪಾತ್ರಗಳನ್ನು ಹಿಂದಿಯಲ್ಲೇ ನೋಡಿದ ನನ್ನ ಮಗನಿಗೆ ಅವು ಜಪಾನಿ ಪಾತ್ರಗಳು ಅಂತಾ ತಿಳಿದಿರಲೇ ಇಲ್ಲ. ಓಝೂ ಸಿನೆಮಾದ ಮೂಲಕ ಜಪಾನ್ ಭಾಷೆ ಹೇಗಿರುತ್ತೆ, ಅದು ಹೇಗೆ ಆ ಪ್ರದೇಶಕ್ಕೆ, ಆ ವಾಸ್ತುಶಿಲ್ಪಕ್ಕೆ, ಆ ಜನರಾಡುವ ಮಾತಿಗೆ ಒಂದು ಸೌಂದರ್ಯವನ್ನು ಸೃಷ್ಟಿಸಿರುತ್ತೆ ಎನ್ನುವುದನ್ನು ನನ್ನ ಮಗ ಅಂದು ತಿಳಿದುಕೊಂಡ.
ಕನ್ನಡಿಗರಾರೂ ಡಬ್ಬಾದ ಚಿತ್ರಗಳನ್ನು ನೋಡುವುದಿಲ್ಲ. ಅವರು ನೋಡಲಿಚ್ಛಿಸುವುದು ತಮಿಳನ್ನು ತಮಿಳಿನಲ್ಲಿ, ಹಿಂದಿಯನ್ನು ಹಿಂದಿಯಲ್ಲಿ, ಇಂಗ್ಲಿಷನ್ನು ಇಂಗ್ಲಿಷಿನಲ್ಲಿ. ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಯಾರೂ ನೋಡದೇ ಇದ್ದಾಗ ಡಬ್ಬಿಂಗ್ ಬಂದರೂ ಏನು ಪ್ರಯೋಜನ?