“ಬನಾರಸ್ ಇತಿಹಾಸಕ್ಕಿಂತ ಹಳೆಯದು, ಪರಂಪರೆಗಿಂತ ಹಳೆಯದು, ಎಲ್ಲ ದಂತಕತೆಗಳಿಗಿಂತಲೂ ಪುರಾತನವಾದುದು, ಆ ಎಲ್ಲವನ್ನೂ ಒಟ್ಟಾಗಿ ಸೇರಿಸಿದರೆ ಅವುಗಳೆಲ್ಲಕ್ಕಿಂತಲೂ ಬನಾರಸ್ ದುಪ್ಪಟು ಹಳೆಯದಾಗಿ ಕಾಣಿಸುತ್ತದೆ”
-ಮಾರ್ಕ್ ಟ್ವೈನ್, ಫಾಲೋಯಿಂಗ್ ಈಕ್ವೇಟರ್, ಅಧ್ಯಾಯ ೫೦
ಮೊದಲಿಗೆ ಇದು ಯಾವುದೇ ಜಾತಿ ಧರ್ಮ ಅಥವಾ ಪದ್ಧತಿಯನ್ನು ಟೀಕಿಸುವ ಇಲ್ಲವೆ ಪ್ರತಿಪಾದಿಸುವ ಉದ್ದೇಶ ಹೊಂದಿರುವ ಬರವಣಿಗೆಯಲ್ಲ. ಆದಿ ಶಂಕರಾಚಾರ್ಯರ ಚರಿತ್ರೆಯಲ್ಲಿ ಒಂದು ಪ್ರಸಂಗದ ಉಲ್ಲೇಖವಿದೆ. ಜಗತ್ತು ಮಾಯೆ, ಇದೊಂದು ಸ್ವಪ್ನದಂತೆ ಎಂಬ ಅದ್ವೈತ ವೇದಾಂತವನ್ನು ಬೋಧಿಸುತ್ತ ದೇಶದಾದ್ಯಂತ ಸಂಚರಿಸಿ ದಿಗ್ವಿಜಯ ಸಾಧಿಸಿದ ಶಂಕರಾಚಾರ್ಯ ಮೊದಲ ಸಲ ಸೋಲಿನ ರುಚಿಯನ್ನು ನೋಡಿದ್ದು ವಾರಣಾಸಿಯಲ್ಲಿ, ಅದರಲ್ಲೂ ಒಬ್ಬ ಅವೈದಿಕನೊಂದಿಗೆ ವಾಗ್ವಾದ ಮಾಡುವ ಸಂದರ್ಭದಲ್ಲಿ:
“ಒಂದು ಮುಂಜಾನೆ ಗಂಗೆಯಲ್ಲಿ ಸ್ನಾನ ಮಾಡಿ ಮೆಟ್ಟಿಲುಗಳನ್ನು ಏರಿ ಬರುವಾಗ ಒಬ್ಬ ಪಂಚಮನು ಶಂಕರರ ಕಾಲುಗಳನ್ನು ಮುಟ್ಟಿ ನಮಸ್ಕರಿಸುತ್ತಾನೆ. ಇನ್ನೂ ಸೂರ್ಯೋದಯವಾಗಿರದ ಆ ಬ್ರಾಹ್ಮೀ ಮುಹೂರ್ತದಲ್ಲಿ ತನ್ನ ಕಾಲುಗಳನ್ನು ಸ್ಪರ್ಶಿಸಿದವನು ಯಾರೆಂದು ಶಂಕರರಿಗೆ ತಕ್ಷಣ ಗೊತ್ತಾಗಲಿಲ್ಲ. ಆಗ ಆ ಪಂಚಮನೇ `ದಯವಿಟ್ಟು ಕ್ಷಮಿಸಿ, ನಾನೊಬ್ಬ ಅಸ್ಪೃಶ್ಯ. ಈಗ ನೀವು ಮತ್ತೆ ನದಿಗೆ ಹೋಗಿ ಸ್ನಾನ ಮಾಡಿ ಬರಬೇಕೇನೋ?’ ಎಂದು ಕ್ಷಮೆ ಕೋರಿದ. ಆಗ ಶಂಕರರು ಸಿಡಿಮಿಡಿಗೊಂಡು `ಇದು ಗೊತ್ತಿಲ್ಲದೆ ಮಾಡಿದ ಕೆಲಸವಲ್ಲ, ನೀನು ಉದ್ದೇಶಪೂರ್ವಕವಾಗಿಯೇ ನನ್ನನ್ನು ಮುಟ್ಟಿರುವೆ, ನಿನ್ನಂಥವನು ನರಕಕ್ಕೇ ಹೋಗಬೇಕು’ ಎಂದು ಹೇಳುತ್ತ ಮತ್ತೆ ಸ್ನಾನ ಮಾಡಲು ನದಿಗೆ ಇಳಿದರು. ಆಗ ಆ ಪಂಚಮನು `ಎಲ್ಲವೂ ಮಾಯೆ ಎಂದು ಬೋಧಿಸುವ ನಿಮ್ಮ ಪಾಲಿಗೆ ನರಕ ಮಾತ್ರ ಸತ್ಯಸ್ಯ ಸತ್ಯವಾಗಿದೆ, ಅಲ್ಲವೇ?’ ಎಂದು ಕೇಳಿದಾಗ ಉತ್ತರಿಸಲಾಗದೆ ಆ ಮಹಾಮೇಧಾವಿಯು ನಿಂತಲ್ಲಿಯೇ ನಿಂತುಕೊಂಡರು.
ಪಂಚಮನು ಮುಂದುವರೆದು `ಸ್ನಾನಕ್ಕೆ ಹೋಗುವ ಮುನ್ನ ನನ್ನ ಎರಡು ಪ್ರಶ್ನೆಗಳಿಗೆ ಉತ್ತರ ನೀಡಿ ಹೋಗಿ. ಇಲ್ಲವಾದರೆ ನಾನು ಮತ್ತೆ ಮತ್ತೆ ನಿಮ್ಮನ್ನು ಮುಟ್ಟಬೇಕಾಗುತ್ತದೆ’ ಎಂದು ಹೇಳಿದಾಗ ಆದಿ ಶಂಕರಾಚಾರ್ಯ ನಿಜಕ್ಕೂ ಪೇಚಿಗೆ ಸಿಲುಕಿದರು. ಅಲ್ಲಿ ಸುತ್ತ ಮುತ್ತ ಬೇರಾರೂ ಇರಲಿಲ್ಲ. ಮುಂಜಾನೆಯ ಆ ಹೊತ್ತಿನಲ್ಲಿ ಇನ್ನೂ ಯಾರೂ ಸ್ನಾನಘಟ್ಟದ ಬಳಿ ಬಂದಿರಲಿಲ್ಲ. ಆಗ ಶಂಕರ `ಸರಿ, ಅದೇನು ಪ್ರಶ್ನೆಯೋ ಬೇಗನೆ ಕೇಳು’ ಎಂದರು. `ಮೊದಲ ಪ್ರಶ್ನೆ: ನನ್ನ ದೇಹ ಮಾಯೆಯೋ ಅಥವಾ ನಿನ್ನ ದೇಹ ಮಾಯೆಯೋ? ಎಲ್ಲ ದೇಹಗಳೂ ಮಾಯೆಯೇ ಆಗಿದ್ದಲ್ಲಿ ಎರಡು ಮಾಯೆಗಳು ಪರಸ್ಪರ ಸ್ಪರ್ಶಿಸಿಕೊಂಡರೆ ಮೈಲಿಗೆ ಎಲ್ಲಿಂದ ಬಂತು? ಮತ್ತೆ ಸ್ನಾನ ಮಾಡಬೇಕಾದ ಪ್ರಮೇಯವಾದರೂ ಏನು? ನಿಮ್ಮ ಬೋಧನೆಗೆ ಅನುಗುಣವಾಗಿ ನೀವೇ ನಡೆದುಕೊಳ್ಳುತ್ತಿಲ್ಲವಲ್ಲ! ಈ ಮಾಯಾಕಲ್ಪಿತ ಜಗತ್ತಿನಲ್ಲಿ ಇವನು ಬ್ರಾಹ್ಮಣ, ಇವನು ಹೊಲೆಯ ಎಂದು ನೀವು ಹೇಗೆ ವಿಂಗಡಿಸುವಿರಿ?’
ಮೊದಲ ಪ್ರಶ್ನೆಗೇ ಆದಿ ಶಂಕರ ನಿರುತ್ತರರಾದರು. ಏಕೆಂದರೆ ಅಸ್ಪೃಶ್ಯತೆಯ ಆಚರಣೆ ಮಾಯೆ ಎಂದು ಒಪ್ಪಿಕೊಂಡರೆ ಅವರು ತೋರಿಸಿದ ಸಿಟ್ಟು ಅವರ ಅಜ್ಞಾನದ ಪ್ರದರ್ಶನವಾಗುತ್ತಿತ್ತು. ಹಾಗಲ್ಲದೆ ಆ ಆಚರಣೆ ಮಾಯೆಯಲ್ಲ ಎಂದು ಒಪ್ಪಿಕೊಂಡರೆ ಆವರೆಗಿನ ಅವರ ಸಿದ್ಧಾಂತ ಹಾಗು ದಿಗ್ವಿಜಯಗಳೆಲ್ಲವೂ ಮಣ್ಣುಪಾಲಾಗುತ್ತಿತ್ತು. 
ಆಗ ಪಂಚಮನು `ನನ್ನ ಪ್ರಶ್ನೆಗೆ ನಿನ್ನ ಬಳಿ ಉತ್ತರವಿರಲಾರದು ಎಂದು ನಾನು ಬಲ್ಲೆ, ಇರಲಿ. ನನ್ನ ಇನ್ನೊಂದು ಪ್ರಶ್ನೆಯನ್ನೂ ಕೇಳಿಬಿಡುತ್ತೇನೆ. ನಾನೊಬ್ಬ ಹೊಲೆಯ, ಅಸ್ಪೃಶ್ಯ, ಪಂಚಮ ಎಂದು ನೀವು ತೀರ್ಮಾನಿಸಿರುವಿರಿ. ಈ ಹೊಲೆತನ ನಿಮ್ಮ ಕಣ್ಣಿಗೆ ಯಾವ ಜಾಗದಲ್ಲಿ ಕಾಣಿಸುತ್ತಿದೆ? ನನ್ನ ದೇಹದಲ್ಲೋ ಅಥವಾ ನನ್ನ ಆತ್ಮದಲ್ಲೋ? ಎಲ್ಲೆಡೆ ನೀವು `ಆತ್ಮವಸ್ತುವು ನಿತ್ಯ ಶುದ್ಧ ಬುದ್ಧ ಮುಕ್ತ ಸ್ವರೂಪನು’ ಎಂದು ಬೋಧಿಸುತ್ತಿರುವಿರಿ. ಹಾಗಾಗಿ ನನ್ನ ಆತ್ಮವಂತೂ ಖಂಡಿತವಾಗಿ ನಿಮ್ಮನ್ನು ಮೈಲಿಗೆ ಮಾಡಿರಲಾರದು. ಇನ್ನು ನೀವೇ ಹೇಳುವಂತೆ ಪಂಚಭೂತಮಯವಾದ ದೇಹವು ಮಾಯಾಕಲ್ಪಿತವಾಗಿದೆ. ಅಂದ ಮೇಲೆ ಸ್ನಾನವನ್ನಾದರೂ ಏಕೆ ಮಾಡುವಿರಿ?’ ಶಂಕರ ಏನನ್ನೂ ಉತ್ತರಿಸಲಾಗದೆ ತಲೆ ತಗ್ಗಿಸಿ ನಿಂತಾಗ `ನನ್ನ ಹಾಗು ನಿಮ್ಮ ದೇಹಗಳೆರಡೂ ಮಾಯೆ ಎಂದ ಮೇಲೆ ಹರಿವ ಈ ನದಿಯೂ ಮಾಯೆಯೇ ಅಲ್ಲವೇ. ಹಾಗಾಗಿ ದಯವಿಟ್ಟು ಸ್ನಾನ ಮಾಡದೆ ನೇರವಾಗಿ ನಿಮ್ಮ ದೇವಸ್ಥಾನಕ್ಕೆ ಹೋಗಿರಿ. ಮಾಯಾಸದೃಶವಾದ ನಿಮ್ಮ ಪ್ರಾರ್ಥನೆಯಲ್ಲಿ ತೊಡಗಿರಿ’ ಎಂದು ಹೇಳಿ ಆ ಪಂಚಮ ಅಲ್ಲಿಂದ ಹೊರಟು ಹೋಗುತ್ತಾನೆ”.
ಶಂಕರರ ಈ ತೇಜೋವಧೆಯ ಪ್ರಸಂಗಕ್ಕೆ ಪುರೋಹಿತಶಾಹಿಯು ಹಲವು ಬಣ್ಣಗಳನ್ನು ನೀಡಿವೆ. ಆ ಪಂಚಮ ಪಂಚಮನೇ ಅಲ್ಲ, ಅವನು ಸಾಕ್ಷಾತ್ ಪರಮೇಶ್ವರ ಇತ್ಯಾದಿ ನಂಬಿಕೆಗಳನ್ನು ಪ್ರಚಾರ ಮಾಡಿ ತನ್ನ ಸನಾತನ ಕಂದಾಚಾರವನ್ನು ಮುಚ್ಚಿಹಾಕಲು ಪ್ರಯತ್ನಿಸಿವೆ. ಅಂಥದೊಂದು ಪ್ರಸಂಗವೇ ನಡೆದಿಲ್ಲ ಎಂದು ವಿತಂಡವಾದ ಮಾಡುವ ಪುರೋಹಿತರುಗಳೂ ಉಂಟು. ಆದರೆ ಈ ಪ್ರಸಂಗ ನಡೆದದ್ದು ಬೇರೆಲ್ಲೂ ಅಲ್ಲ. ಜಗತ್ತಿನ ಎಲ್ಲ ಪುರಾತನ ನಾಗರಿಕತೆಗಳ ತಾಯ್ನೆಲವೆಂದು ಗುರುತಿಸಲಾದ ವಾರಣಾಸಿಯಲ್ಲಿ. ಅತ್ಯಂತ ಪ್ರಾಚೀನ ಗ್ರಂಥವೆಂದು ನಂಬಲಾಗಿರುವ ಋಗ್ವೇದದಲ್ಲೂ ವಾರಣಾಸಿಯ ಉಲ್ಲೇಖವಿದೆ. ’ಹಿಂದೂ ದಾರ್ಶನಿಕತೆ’ ಎಂದು ಹೇಳಿಕೊಳ್ಳುವ ಎಲ್ಲ ಪ್ರಸ್ಥಾನಗಳ ಗಂಗೋತ್ರಿಯೂ ವಾರಣಾಸಿಯಾಗಿದೆ. ಅಲ್ಲಿ ಇಂದಿಗೂ ಜಾತಿ ಭೇದವಿಲ್ಲದೆ ಎಲ್ಲ ಭಕ್ತರೂ ನೇರವಾಗಿ ಗರ್ಭಗುಡಿಯನ್ನು ಪ್ರವೇಶಿಸಿ ತಮ್ಮ ಕೈಯಾರೆ ವಿಶ್ವನಾಥನಿಗೆ ಪೂಜೆ ಸಲ್ಲಿಸುತ್ತಾರೆ. ಅನಾದಿ ಕಾಲದಿಂದಲೂ ವಿಶ್ವನಾಥನ ಸಾನ್ನಿಧ್ಯದಲ್ಲಿ ಅಸ್ಪೃಶ್ಯತೆ, ಮಡೆಸ್ನಾನ, ಜಾತಿಪದ್ಧತಿ ಇತ್ಯಾದಿಗಳಿಗೆ ತಲೆಯೆತ್ತಲು ಸಾಧ್ಯವಾಗಿಲ್ಲ. ವೈದಿಕ ಧಾರೆಗಳಿಗಲ್ಲದೆ ಅವೈದಿಕ ಪ್ರಸ್ಥಾನಗಳಾದ ಕಾಳಾಮುಖರಿಗೆ, ಕಾಪಾಲಿಕರಿಗೆ, ವಾಮಾಚಾರಿಗಳಿಗೆ ವಾರಣಾಸಿ ತವರು ನೆಲವಾಗಿದೆ.
ಶತಶತಮಾನಗಳಿಂದ ಹೊರಗಿನ ಮುಸ್ಲಿಮರೂ ಮತ್ತು ಒಳಗಿನ ಪುರೋಹಿತರೂ ಕಾಶಿಯನ್ನು ತಮ್ಮ ಸ್ವಾಧೀನ ಮಾಡಿಕೊಳ್ಳಲು ವಿಫಲ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಆದರೆ ಈತನಕ ಯಾವ ತತ್ವ ಪ್ರಸ್ಥಾನಕ್ಕೂ ಅಲ್ಲಿ ತನ್ನ ಯಾಜಮಾನ್ಯವನ್ನು ಸ್ಥಾಪಿಸಿಕೊಳ್ಳಲಾಗಿಲ್ಲ. ಕಾಶಿ ಇಂದಿಗೂ `ಅಸ್ಪರ್ಶ ಅವಕಾಶ’ದಲ್ಲಿದೆ. ಮಾರ್ಕ್ ಟ್ವೈನ್, ಪಾಲ್ ಬ್ರಂಟನ್ ಮೊದಲಾದ ವಿದೇಶೀ ಲೇಖಕರು ಹಾಗು ಚಿಂತಕರು ಸಹ ವಾರಣಾಸಿಯನ್ನು `ದಿವ್ಯವಾದ ಬೆಳಕಿನ ನಗರ’ ಎಂದು ಕರೆದಿದ್ದಾರೆ. (ಕಾಶಿ ಎಂಬ ಪದದ ಅರ್ಥವೇ `ಬೆಳಕಿನ ನಗರ’ ಎಂದು) ಭಾರತೀಯ ಬಹುಸಂಸ್ಕೃತಿ ಹಾಗು ವೈವಿಧ್ಯಮಯ ಧಾರೆಗಳನ್ನು ಅದರ ಯಥಾರೂಪದಲ್ಲಿ ನೋಡಬೇಕೆಂದರೆ ಅದು ಸನಾತನವಾದ ಕಾಶಿಯಲ್ಲಿ ಮಾತ್ರ ಕಾಣಸಿಗುತ್ತದೆ. (ಬನಾರಸ್: ಸಿಟಿ ಆಫ್ ಲೈಟ್, ಡಯಾನಾ ಎಲ್.ಎಕ್, ಪೆಂಗ್ವಿನ್ ಪಬ್ಲಿಷರ್ಸ್, ೧೯೯೪)
ಇಂತಹ ಜಾಗದಲ್ಲಿ ಶಂಕರನ ಅದ್ವೈತವೇದಾಂತವು ಪರಾಭವಗೊಂಡಿತೆಂದರೆ ಅದು ಖಂಡಿತ ಕಟ್ಟುಕತೆಯಾಗಿರಲಾರದು. ಹಾಗೆ ನೋಡಿದರೆ ಅದು ಶಂಕರರ ತೇಜೋವಧೆಯ ಪ್ರಸಂಗವಲ್ಲ, ಬದಲಿಗೆ ಆ ಕತೆ ಕಾಶಿಯ ಹಿರಿಮೆಯನ್ನು ಎತ್ತಿ ತೋರಿಸುತ್ತದೆ. ಇಂದು ಮಡೆಸ್ನಾನವನ್ನು ವಿರೋಧಿಸುವುದು, ಬ್ರಾಹ್ಮಣ ಮಠಾಧಿಪತಿಗಳು ದಲಿತ ಕೇರಿಗೆ ಪ್ರವೇಶಿಸುವುದು, ದಲಿತ ಗುರುಗಳಿಗೆ ಬ್ರಾಹ್ಮಣರು ಪಾದಪೂಜೆ ಮಾಡುವುದು, ದಲಿತ ಸ್ವಾಮಿಗಳು ಬ್ರಾಹ್ಮಣ ಪೀಠಗಳಲ್ಲಿ ಕುಳಿತುಕೊಳ್ಳುವ ಬೇಡಿಕೆಯನ್ನು ಮುಂದಿಡುವುದು ಇವೆಲ್ಲ ಸಮಾಜ ಸುಧಾರಣೆಯ ಪ್ರಯತ್ನಗಳಿಗಿಂತ ಸಾರ್ವಜನಿಕರಿಗೆ ಒಂದು ಬಗೆಯ ಮನರಂಜನೆಯಂತೆ ಹಾಗು ವಿಡಂಬನೆಯಂತೆ ಕಾಣಿಸತೊಡಗಿದೆ. ಅಂಬೇಡ್ಕರ್ ಹೇಳುವಂತೆ ಕ್ರೈಸ್ತರಿಗೆ ಹಾಗು ಮುಸ್ಲಿಮರಿಗೆ ಇರುವಂತೆ ಹಿಂದೂಧರ್ಮಕ್ಕೆ ಒಂದು ನಿಗದಿತ ನೀತಿ ಸಂಹಿತೆ, ಏಕೀಕೃತ ಶ್ರದ್ಧೆ ಅಂದರೆ ಒಂದು ನಿಶ್ಚಿತ ಪುಣ್ಯಕ್ಷೇತ್ರ, ಪುಣ್ಯಗ್ರಂಥಗಳು ಇಲ್ಲದಿರುವುದೇ ಪ್ರತಿದಿನ ಈ ಥರದ ತಮಾಷೆಯ ಸುದ್ದಿಗಳಿಗೆ ಕಾರಣವಾಗಿರುವುದು. 
“ಬಹುತ್ವ ಹಿಂದೂಗಳ ಒಂದು ವಿಶಿಷ್ಟ ಲಕ್ಷಣ ಅದನ್ನು ಮಾತ್ರ ನಾವು ಕಳೆದುಕೊಳ್ಳಬಾರದು” ಎಂದು ಕೆಲವು ಸಂಸ್ಕೃತಿ ಚಿಂತಕರು ಹೇಳುವರು. ಆದರೆ ದಾರ್ಶನಿಕ ಅನನ್ಯತೆ ಬೇರೆ ಬಾಹ್ಯ ಆಚರಣೆ ಶಿಷ್ಟಾಚಾರಗಳು ಬೇರೆ. ಬಹುತ್ವಕ್ಕೆ ಕಾರಣವಾದ ಈವರೆಗಿನ ಭಾರತದ ಎಲ್ಲ ದಾರ್ಶನಿಕ ಪ್ರಸ್ಥಾನಗಳೂ ಖಾಸಗೀ ವಲಯದಲ್ಲಿ ಮಾತ್ರ ಜೀವಂತವಾಗಿ ಉಳಿದುಕೊಂಡು ಬಂದಿದೆ. ಸಾರ್ವಜನಿಕ ಎಂದು ಭಾವಿಸಲಾದ ಜಾಗಗಳಲ್ಲಿ (ದೇವಸ್ಥಾನಗಳಲ್ಲಿ, ಮಠ ಮಂದಿರಗಳಲ್ಲಿ ಹಾಗು ಪುಣ್ಯಕ್ಷೇತ್ರಗಳಲ್ಲಿ) ಬಹುಥರದ ಆಚರಣೆ, ಶಿಷ್ಟಾಚಾರಗಳು ನಿಸ್ಸಂಶಯವಾಗಿ ತನ್ನ ಪಾವಿತ್ರ್ಯವನ್ನು ಕಳೆದುಕೊಂಡುಬಿಡುತ್ತದೆ. ತತ್ಪರಿಣಾಮವಾಗಿ ಪರಸ್ಪರ ಕಿತ್ತಾಟಕ್ಕೆ ಕಾರಣವಾಗುತ್ತದೆ. ಆಚರಣೆಯ ನೆಲೆಯಲ್ಲಿ ಒಂದು ಸಮರೂಪದ ವ್ಯವಸ್ಥೆಯನ್ನು ಜಾರಿಗೊಳಿಸಿದ ಮಾತ್ರಕ್ಕೆ ಹಿಂದೂ ಬಹುತ್ವಕ್ಕೆ ಹಾಗು ದಾರ್ಶನಿಕ ಅನನ್ಯತೆಗೆ ಖಂಡಿತವಾಗಿ ಹಾನಿಯಾಗುವುದಿಲ್ಲ. ಕೆಲವೊಮ್ಮೆ ಸಾರ್ವಜನಿಕ ನೆಲೆಯಲ್ಲಿ ಬಹುತ್ವವನ್ನು ಕಾಪಾಡಿಕೊಳ್ಳುವುದು ಸಾಮಾಜಿಕ ಅಪರಾಧವೇ ಆಗುತ್ತದೆ.
ಇದನ್ನು ಮನಗಂಡೇ ೧೫೦ ವರ್ಷಗಳ ಹಿಂದೆಯೇ ದಯಾನಂದ ಸರಸ್ವತಿ ಹಾಗು ಬ್ರಹ್ಮಸಮಾಜದ ಚಿಂತಕರು ಹಿಂದೂಧರ್ಮವನ್ನು ಸಾರ್ವಜನಿಕ ನೆಲೆಯಲ್ಲಿ ಸಂಸ್ಥೀಕರಣಗೊಳಿಸಲು ಪ್ರಯತ್ನಿಸಿದ್ದು. ಆದರೆ ಅವರ ಪ್ರಯತ್ನಗಳು ಇಂದು ಸಂಪೂರ್ಣವಾಗಿ ವಿಫಲವಾಗಿದೆ. ನಾವಿನ್ನೂ ’ಗುಡಿ ಚರ್ಚು ಮಸೀದಿಗಳನ್ನು ಬಿಟ್ಟು ಹೊರಬರುವ’ ಆತ್ಮಸ್ಥೈರ್ಯ ಬೆಳೆಸಿಕೊಂಡಿಲ್ಲ. ಇಂದು ಭಾರತದ ಎಲ್ಲ ಮಠ ಮಂದಿರಗಳು, ಎಲ್ಲ ಪುಣ್ಯಕ್ಷೇತ್ರಗಳು ಒಂದೇ ಬಗೆಯ ನೀತಿ ಸಂಹಿತೆಯನ್ನು ಪಾಲಿಸಬೇಕಾದ ಪರಿಸ್ಥಿತಿ ಇದೆ. ಅಂಥದೊಂದು ಸಮರೂಪದ ನೀತಿ ಸಂಹಿತೆಯನ್ನು ಹೇರುವುದರಿಂದ ಪ್ರಜಾಪ್ರಭುತ್ವಕ್ಕೆ ಖಂಡಿತ ಅಪಚಾರ ಮಾಡಿದಂತಾಗುವುದಿಲ್ಲ, ಬದಲಿಗೆ ಅದನ್ನು ಜಾರಿಗೆ ತರುವುದು ತನ್ನ ನೈತಿಕ ಹೊಣೆಗಾರಿಕೆ ಎಂದು ಸರಕಾರಗಳು ಭಾವಿಸಬೇಕಾಗಿದೆ. ಇದಕ್ಕೆ ಭಾರತದ ಎಲ್ಲ ಜಾತಿ, ವರ್ಗಗಳಿಗೂ ಪೂಜನೀಯವೆನಿಸಿದ ಕಾಶಿಯ ವಿಶ್ವನಾಥನ ಮಂದಿರದ ಶಿಷ್ಟಾಚಾರವನ್ನೇ ಪಾಲಿಸಿಸುವುದು ಅತ್ಯಂತ ಸೂಕ್ತವಾದುದೆಂದು ನನ್ನ ಅಭಿಪ್ರಾಯ. ಹಾಗೆ ಪಾಲಿಸಿದಲ್ಲಿ ಭಾರತ ದೇಶವು ಜಗತ್ತಿನ ಆಧ್ಯಾತ್ಮಿಕ ಗುರು ಎಂದು ಬಾಯಲ್ಲಿ ಹೇಳುವುದನ್ನು ಬಿಟ್ಟು ಕ್ರಿಯೆಯಲ್ಲೂ ಮಾಡಿ ತೋರಿಸಿದಂತಾಗುತ್ತದೆ.
(ನಾನು ಖಂಡಿತವಾಗಿಯೂ ಕಾಶಿಯ ಬಗ್ಗೆ ಬರೀ ರಮ್ಯ ಕಲ್ಪನೆಗಳನ್ನಿರಿಸಿಕೊಂಡಿಲ್ಲ, ದೊಡ್ಡ ನಗರವೆಂದ ಮೇಲೆ ಅಲ್ಲಿ ಹುಲುಮಾನವರ ಸಣ್ಣ ಪುಟ್ಟ ವ್ಯವಹಾರಗಳು/ಅವ್ಯವಹಾರಗಳು ಇದ್ದೇ ಇರುತ್ತವೆ. ಆದರೆ ಒಂದು ಹೊಸ ವ್ಯವಸ್ಥೆಯ ನಿರ್ಮಾಣಕ್ಕೆ ಕಾಶಿಯಂತಹ ಪುಣ್ಯಕ್ಷೇತ್ರಗಳನ್ನು ಪರಿಭಾವಿಸುವಾಗ ಸುಲಭವಾಗಿ ನಿವಾರಿಸಬಹುದಾದ ಚಿಲ್ಲರೆ ತೊಡಕುಗಳನ್ನು ಮೀರಿ ಆಲೋಚಿಸಬೇಕೆಂದು ನನ್ನ ಸಹೃದಯ ಕಳಕಳಿ).