ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ನಾಗರಾಜ ವಸ್ತಾರೆ ಬರೆದ ಕವಿತೆ.
ಕನಕಧಾರೆಯ ನೆಪದಲ್ಲಿ
ನಾನು ಅಷ್ಟಿಷ್ಟು ನಂಬುವ ಅಥವಾ
ಹಿಂದಿನವರು ನಂಬುತ್ತಿದ್ದರೆಂದು ನನ್ನನ್ನೂ ಹಾಗೇ
ನಡೆಸಿಕೊಳ್ಳುವ ಶ್ರೀಮಠದಲ್ಲೊಂದು
ರೀತಿಯಿದೆ ನೀತಿಯಿದೆ
ಹೀಗೊಂದಿಷ್ಟು ಕತೆಯ ಚಾಲ್ತಿಯಿದೆ
ಅಲ್ಲಿನ ಆದಿಗುರು ಆಚಾರ್ಯರೆಂದು
ಆದ್ಯವಾಗಲಿಕ್ಕು ಮೊದಲು ನಡೆದಿದ್ದಂತೆ ಇದು
ಅಂದರೆ ಸಂನ್ಯಾಸಕ್ಕು ಮುಂಚೆ
ಎಂಟೊಂಭತ್ತು ವಯಸ್ಸಿಗೆಲ್ಲ
ಅವರಿಗೆ ಗುರುದೀಕ್ಷೆ
ಯಾಯಿತೆಂದು ಹೇಳುತ್ತಾರೆ
ಆಗಿನ್ನೂ ಬ್ರಹ್ಮಚಾರಿ
ಒಮ್ಮೆಯೊಂದು ಪೂರ್ವಾಹ್ನ
ವಾಡಿಕೆಯಂತೆ ಭಿಕ್ಷೆಗೆ ಹೋಗಿ ಒಂದು
ಗುಡಿಸಲಿನೆದುರು ದೇಹಿ ಅಂದನಂತೆ
ಬಾಲವಟು
ಮನೆಯಾಕೆ ಕಡುಬಡವಿ ಹಣ್ಣು
ಹಣ್ಣಾದ ಮುದುಕಿ ಬೇರೆ
ಇದ್ದೊಂದು ಒಣಗಿದ ನೆಲ್ಲೀಕಾಯಿಯಿತ್ತು
ಇನ್ನೇನೂ ಇಲ್ಲವೆಂದು ಪೇಚಾಡಿ ಅತ್ತು
ಕ್ಷಮಿಸೆಂದು ಅಲವತ್ತಳಂತೆ
ಮುಗುಳ್ನಕ್ಕ ವಟುವು
ಕೂಡಲೆ ಧ್ಯಾನಕ್ಕಿಳಿದು ಸ್ತುತಿಸಿದನಾದರೆ
ಒಮ್ಮಿಂದೊಮ್ಮೆಗಲ್ಲಿ
ಚಿನ್ನದ ನೆಲ್ಲಿಯದೇ ಮಳೆಯಾಯಿತಂತೆ
ಇವೊತ್ತಿಗೂ ಶ್ರೀಮಠದಲ್ಲಿ ಇದನ್ನೇ
ಕನಕಧಾರಾಸ್ತೋತ್ರವೆಂದು ಅನುಗ್ರಹಿಸುವುದಿದೆ
ಧನಸಿದ್ಧಿಗೆಂದು ಮಂದಿ ಪಠಿಸುತ್ತಾರೆ
ಮನಸಾ
ವಿಚಿತ್ರ ತಾನೆ
ಇಷ್ಟಕಾಮ್ಯಕ್ಕಾಗಿ ಹೀಗೆ ಸ್ತುತಿ
ವ್ರತ ನೇಮ ನಿಷ್ಠೆ ಮಾಡಿರೆಂದೊಬ್ಬ ಯತಿ
ಇಂತು ಇತಿಯಂತೆನ್ನುವ ಹಾಗೆ
ಪ್ರತೀತಿ ಹಚ್ಚುವುದೆ
ಹಣಗೂಡುವ ಪವಾಡಗಳು
ಅನಾದಿಯಿಂದಲೂ ಅಧ್ವಾನವೇ
ಇದ್ದಾವು
ಅಲ್ಲದೆ
ಹಣದ ಮಳೆಯೆನ್ನುವ ಈ ಪದ್ಯವಿರಲಿ
ಆ ರೂಪಕವೂ ಎಷ್ಟು ಹೇಯ
* *
ಮುಂದೆ ಸಂನ್ಯಾಸವಾಯಿತು
ಶಿವಾಂಶ
ಸಂಭೂತವಾದ್ದರಿಂದ ಎಡಗೈಯ
ಚಿಟಿಕೆಯೆಂಬಂತೆ ಒಂದಲ್ಲ ಎರಡಲ್ಲ ಹತ್ತೆಂಟು
ಸಹಜ ಪವಾಡಗಳನ್ನು ಮೆರೆದರು
ಅವರು ಭಗವತ್ಪಾದವೆಂದು ಮುಂದೆಲ್ಲ ಅನು
ಯಾಯಿಕೋಟಿ ಕರೆಯಿತು
ಹೀಗಿರುವಾಗೊಮ್ಮೆ ಅವರ ತಾಯಿಯ
ಮುಪ್ಪು ತನ್ನ ವಾತ್ಸಲ್ಯವಾಂಛೆಯಲ್ಲಿ ಬೆಂದು
ಆರ್ದ್ರಗೊಂಡು ದ್ರವಿಸಿ ಮಗನನ್ನು
ನೆನೆಯಿತಂತೆ
ಲೋಕದಲ್ಲಿ ಕೆಟ್ಟ ಮಕ್ಕಳಿದ್ದಾರು
ಆದರಂಥ ತಾಯಿಯಿರಳೆಂದು ಮೊಳಗಿದ
ಮಹಾನುಭಾವನವ ಎಲ್ಲೋ ಇದ್ದವ
ಕರೆದಾಕ್ಷಣ ಮೈದೋರಿಬಿಟ್ಟ
ನಿತ್ಯಸ್ನಾನಕ್ಕಾಗಿ ತಾಯಿ
ನದಿಯತ್ತ ಬಲುದೂರ ನಡೆಯಲಿಕ್ಕೆ
ವಯಸ್ಸು ಸಹಕರಿಸುವುದಿಲ್ಲವೆಂದು ಮನಗಂಡು
ಧ್ಯಾನಿಸಿದರೆ
ಹೊಳೆಯೇ ಹೊರಳಿತಂತೆ
ಸಮೀಪಕ್ಕೆ ಹರಿಯಿತಂತೆ
ಚೆನ್ನಾದ ಕತೆ
ಎಷ್ಟಾದರೂ ನಂಬಲೇಬೇಕು
ನಂಬಿದರಷ್ಟೇ ಇಂಬು
ಮುಂದರಿಕೆಯೆಂದು ಅವರೇ ಹೇಳಿಕೊಟ್ಟದ್ದು
ನಂಬದೆಯೆ ಪವಾಡ ಘಟಿಸುವುದಿಲ್ಲ
ಇಷ್ಟಕ್ಕು
ಮಠ ಹೇಳುವ ಈ ದೃಷ್ಟಾಂತಕ್ಕೆ
ಯಾತಕ್ಕು ಅನಿಸಿದ್ದನ್ನಿಲ್ಲಿ ಅಂದುಬಿಡುತ್ತೇನೆ
ಸ್ವಹಿತ ಸ್ವಂತವೆಂದು
ಹೊಳೆಯ ಹೊರಳು ಬದಲಿಸುವುದು
ನಮ್ಮಲ್ಲಿ ಹಳೆಯ ಚಾಳಿ
ಪರಮ ಮಾನುಷ ಅದು
ದೈವಾಂಶಸಂಭೂತವಲ್ಲದೆ
ಖುದ್ದು ದೇವರಿದ್ದರೂ ಯಾತಕ್ಕೆ
ಮಾಫಿ ಅದಕ್ಕೆ
* *
ಇಷ್ಟಿದ್ದೂ
ದೇವರನ್ನೂ ಜೀವರನ್ನೂ
ಒಂದೆನ್ನುವ ಅದ್ವೈತಕ್ಕೆ ಸದಾ
ಬದ್ಧವಿರುವೆ
ಜೀವರನ್ನು
ದೇವರಾಗಿಸುವ ಪವಾಡಗತೆಗಳಿಗೆ
ಮಾತ್ರ ಧಿಕ್ಕಾರ