ಹೌದು ಮತ್ತೆ ಜೋಗದ ಜಲಪಾತದ ಬಗ್ಗೆ ಬರೆಯುತ್ತಿದ್ದೇನೆ. ಜೋಗ ಜಲಪಾತಕ್ಕೆ ಹೋದ ಯಾರೂ ಕೂಡ ಮರೆಯಲಾರದ ಒಂದು ಕೆಲಸ ಇದೆ. ಅದು ಜಲಪಾತದ ಎದಿರು ನಿಂತು ತಮ್ಮ ಇಲ್ಲವೆ ತಮ್ಮ ಬಳಗದ ಒಂದು ಫೋಟೋ ತೆಗೆಸಿಕೊಳ್ಳುವುದು. ಹಿನ್ನೆಲೆಯಲ್ಲಿ ಸಾಲಾಗಿ ನಿಂತ ರಾಜಾ, ರೋರರ್, ರಾಕೆಟ್, ಲೇಡಿ ಇದರ ಮುನ್ನಲೆಯಲ್ಲಿ ನಾವು. ಅಲ್ಲಿ ಜೋಗದ ಜಲಪಾತವೂ ಕಾಣುತ್ತದೆ ಇಲ್ಲಿ ಫೋಟೋಗೆ ನಿಂತ ನಾವೂ ಕೂಡ. ಜೋಗದಲ್ಲಿ ಇರುವ ಹಲವಾರು ಛಾಯಾ ಚಿತ್ರಗಾರರು ಅಲ್ಲೊಂದು ಜಾಗವನ್ನ ಹುಡುಕಿ ಇರಿಸಿ ಕೊಂಡು ಯಾರದೆಲ್ಲ ಫೋಟೋ ತೆಗೆಯುತ್ತಾರೆ ಅವರನ್ನ ಅಲ್ಲಿ ನಿಲ್ಲಿಸಿಕೊಂಡು ಫೋಟೋ ತೆಗೆಯಲು ಅವರು ಮರೆಯುವುದಿಲ್ಲ. ಈ ಫೋಟೋ ಅದ್ಭುತವಾಗಿ ಬರುತ್ತದೆ ಅನ್ನುವುದರಲ್ಲಿ ಅನುಮಾನವಿಲ್ಲ. ಫೋಟೋಗೆ ನಿಂತವರು ಹಾಗೂ ಫೋಟೋ ತೆಗೆಯುವವರು ತಪ್ಪದೆ ಗಮನಿಸುವುದು ತಾವು ಹಾಗು ಜಲಪಾತದ ಆ ನಾಲ್ಕು ಟಿಸಿಲುಗಳು ಬಂದಿವೆಯೇ ಅನ್ನವುದನ್ನು. ಅದು ಬಂದಿದ್ದರೆ ತಮ್ಮ ಜನ್ಮ ಸಾರ್ಥಕ ಅನ್ನುವ ಭಾವ ಅವರದ್ದು.
ಜಲಪಾತದ ಎದಿರು ನಿಂತು ಫೋಟೋ ತೆಗೆಸಿಕೊಳ್ಳುವ ಇಲ್ಲ ತೆಗೆಯುವ ಈ ಹುಚ್ಚು ಶತಮಾನಗಳ ಹಿಂದೆಯೇ ಪ್ರಾರಂಭವಾಗಿತ್ತು ಅನ್ನುವುದು ಒಂದು ಕುತೂಹಲದ ವಿಷಯ.
ದಟ್ಟ ಕಾನನದ ನಡುವೆ ಇದ್ದ ಈ ಜಲಪಾತ ಜನರ ಕಣ್ಣಿಗೆ ಬಿದ್ದದ್ದು ೧೮೦೦ರ ನಂತರ. ಏಕೆಂದರೆ ಬಾಂಬೆ ಪ್ರವಾಸಿ ಮಂದಿರದಲ್ಲಿ ಇರಿಸಿದ್ದ ಪ್ರವಾಸಿಗಳ ಅಭಿಪ್ರಾಯ ದಾಖಲಾದ ಒಂದು ವಹಿಯ ಎರಡನೇ ಭಾಗ ಸಿಕ್ಕಿದೆಯಲ್ಲದೆ ಇದಕ್ಕೂ ಮೊದಲಿದ್ದ ಮೊದಲ ಭಾಗ ಸಿಕ್ಕಿರುವುದಿಲ್ಲ. ಇದೀಗ ಸಿಕ್ಕಿರುವ ಎರಡನೇ ಭಾಗ ೧೮೭೭ ರಿಂದ ೧೯೦೩ರವರೆಗಿನದ್ದು. ಈ ವಹಿಯಲ್ಲಿ ಮೊದಲ ಭಾಗದ ಬಗ್ಗೆ ಕೆಲ ಉಲ್ಲೇಖಗಳು ಇರುವುದರಿಂದ ಜೋಗ ಜಲಪಾತವನ್ನ ನೋಡಲು ಜನ ೧೮೦೦ರ ಸುಮಾರಿಗೇನೆ ಬರುತ್ತಿದ್ದರು ಅನ್ನುವುದು ಖಚಿತವಾಗುತ್ತದೆ. 
ಒಂದು ವಿಶೇಷವೆಂದರೆ ಹೀಗೆ ಬರುತ್ತಿದ್ದವರೆಲ್ಲ ವಿದೇಶೀಯರು. ಇಂಗ್ಲೆಂಡು, ಅಮೇರಿಕ ಮೊದಲಾದ ದೇಶಗಳವರು. ಇವರು ಅತ್ತ ಅರಬ್ಬೀ ಸಮುದ್ರದಲ್ಲಿ ದೋಣಿಗಳ ಮೂಲಕ ಬಂದು ಹೊನ್ನಾವರದಿಂದ ಗೇರಸೊಪ್ಪೆ, ಅಲ್ಲಿಂದ ನಡೆದುಕೊಂಡು ಮಾವಿನ ಗುಂಡಿ ದಾಟಿ ಜೋಗ ಜಲಪಾತದ ನೆತ್ತಿಯ ಮೇಲಿನ ಬಾಂಬೆ ಬಂಗಲೆಗೆ ಬರುತ್ತಿದ್ದರಾದರೆ ಕೆಲವರು ಸಾಗರದ ಮೂಲಕ, ಶಿಕಾರಿಪುರ, ಹರಿಹರದ ಮೂಲಕ ಬಂದದ್ದೂ ಇದೆ. ಎತ್ತಿನ ಗಾಡಿಗಳನ್ನ ಬಾಡಿಗೆಗೆ ಪಡೆದು ಬಂದವರ ಸಂಖ್ಯೆ ಅಧಿಕ. ಹಲವರು ತಮ್ಮ ಹೆಂಡಿರ ಜೊತೆಯಲ್ಲಿ ಮಕ್ಕಳ ಜೊತೆಯಲ್ಲಿ ಬಂದರು, ಇಲ್ಲಿ ಬಂದು ಉಳಿದರು, ನದಿಯನ್ನ ದಾಟಿ ಬೇರೊಂದು ದಡಕ್ಕೆ ಹೋಗಿ ಮೈಸೂರು ಬಂಗಲೆಯಿಂದ ಜಲಪಾತ ನೋಡಿದರು, ನದಿಯಲ್ಲಿ ಮೀನುಗಳನ್ನ, ನೀರು ಕುಡಿಯಲು ಬಂದ ಹುಲಿಯನ್ನ ಕೆಲವರು ನೋಡಿದರು, ಜಲಪಾತದ ನೀರಿನ ಪ್ರಮಾಣ, ಅಲ್ಲಿಯ ಬಂಡೆಯ ಗುಣ, ಅಲ್ಲಿ ಅರಳುವ ಹೂವುಗಳ ಕುರಿತು, ಅದರ ಎತ್ತರ, ವಿಸ್ತಾರದ ಕುರಿತು ಪ್ರವಾಸಿ ಮಂದಿರದ ವಹಿಯಲ್ಲಿ ದಾಖಲಿಸಿದರು. ರಾಜಾ ಜಲಪಾತದ ನೆತ್ತಿಯ ಮೇಲಿದ್ದ ಒಂದು ದೊಡ್ಡ ಕಲ್ಲಿಗೆ ಅರಸುಗಲ್ಲು ಅನ್ನುವ ಹೆಸರು ಇದ್ದುದನ್ನ, ಜಲಪಾತದ ಬಳಿಯೇ ಜೋಗಮಠ ಅನ್ನುವ ಒಂದು ಹಳ್ಳಿ ಇದ್ದುದನ್ನ ಇವರು ಹೇಳುತ್ತಾರೆ. ಅಲ್ಲದೆ ಈ ಜಲಪಾತವನ್ನ ಯಾವ ಕಾರಣಕ್ಕು ನಾಶವಾಗಲು ಬಿಡಬಾರದು ಎಂದು ಕಳಕಳಿಯಿಂದ ನಿವೇದನೆ ಮಾಡಿಕೊಳ್ಳುತ್ತಾರೆ. ಕೆಲವರು ಸುಂದರ ಕವಿತೆಗಳನ್ನ ಬರೆಯುತ್ತಾರೆ.
ಪ್ರಸ್ತುತ ಈ ಲೇಖನಕ್ಕೆ ಸಂಬಂಧಪಟ್ಟಂತೆ, ಜೋಗಕ್ಕೂ ಫೋಟೋಗ್ರಫಿಗೂ ಇದ್ದ ಸಂಬಂಧ ಕುರಿತಂತೆ ಕೆಲ ಮಾತುಗಳನ್ನ ನಾನಿಲ್ಲಿ ಹೇಳ ಬಯಸುತ್ತೇನೆ.
ಜೋಗಕ್ಕೆ ಬಂದ ಪ್ರವಾಸಿಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಇಂಜಿನಿಯರ್ ಜಾನ್ ಬಿ. ಮೆಕ್ ಫಾರಲರ್ ಅನ್ನುವವ ಓರ್ವ. ಈತ ೧೮೯೩ರ ಮಾರ್ಚ ೩೦ರಿಂದ ಎಪ್ರಿಲ್ ೩ರವರೆಗೆ ಜೋಗದಲ್ಲಿ ವಸತಿ ಮಾಡುತ್ತಾನೆ. ತಾನು ಇಲ್ಲಿ ಬಹಳ ಸಂತೋಷದಿಂದ ಕಾಲವನ್ನ ಕಳೆದದ್ದಾಗಿಯೂ, ವಿವಿಧ ಸ್ಥಳಗಳಿಂದ ಜೋಗದ ಚೆಲುವನ್ನ ತಾನು ಸವಿದದ್ದಾಗಿಯೂ ಆತ ಬರೆಯುತ್ತಾನೆ. ಅಲ್ಲದೆ ಆ ಸಮಯದಲ್ಲಿ ನದಿಯಲ್ಲಿ ಹೆಚ್ಚು ನೀರು ಇರಲಿಲ್ಲವಾದರೂ ಅದರ ಸೊಬಗು ಕಡಿಮೆ ಆಗಿರಲಿಲ್ಲ ಅನ್ನುತ್ತಾನೆ, ಜಾನ್. ಜೊತೆಗೆ ಈತ ಮತ್ತೊಂದು ವಿಷಯವನ್ನ ಹೇಳುತ್ತಾನೆ.
"ಇಡೀ ವಿಶ್ವದಲ್ಲಿ ಕ್ಯಾಮರಾ ವಿಶಿಷ್ಟ ಸ್ಥಾನಮಾನವನ್ನ ಪಡೆಯುತ್ತಿರುವಾಗ ಈ ಕಲೆಗೆ ಪೂರಕವಾಗಿ ಪ್ರವಾಸಿ ಮಂದಿರದಲ್ಲಿ ಒಂದು ಡಾರ್ಕ ರೂಮ್ ಇದ್ದಿದ್ದರೆ ಚೆನ್ನಿತ್ತು" ಎಂದು ಈತ ಅಭಿಪ್ರಾಯ ಪಡುತ್ತಾನೆ. ಅದು ಕ್ಯಾಮರಾ ಅನ್ನುವ ಒಂದು ಅದ್ಭುತ ಯಂತ್ರದ ಶೋಧನೆಯಾಗಿ ಎಲ್ಲರು ಅದನ್ನ ಬಳಸುತ್ತಿದ್ದ ಕಾಲ. ಈ ಯಂತ್ರದಿಂದ ತೆಗೆದ ಫೋಟೋಗಳನ್ನ ನೋಡಲು, ಸರಿ ಬಂದಿದೆಯೆ ಪರಿಶೀಲಿಸಲು ಇದಕ್ಕಾಗಿ ಹೊಸದಾಗಿ ಕೊಠಡಿಗಳನ್ನ ಕಟ್ಟಿಸುವ ಅವಶ್ಯಕತೆ ಇಲ್ಲವೆಂದೂ ಹಾಲಿ ಇರುವ ಬಚ್ಚಲು ಮನೆಗಳ ಮೇಲಿನ ಕೊಠಡಿಗಳನ್ನ ಡಾರ್ಕ ರೂಮನ್ನಾಗಿ ಪರಿವರ್ತಿಸಬಹುದೆಂದು ಈತ ಹೇಳುತ್ತಾನೆ. ಕಿಟಕಿಗಳಿಗೆ ಅಡ್ಡಲಾಗಿ ಹೊದಿಕೆಯ ವಸ್ತ್ರವನ್ನ ಇಳಿ ಬಿಟ್ಟು ಈ ಕೆಲಸವನ್ನ ಸುಲಭವಾಗಿ ಮಾಡಿಕೊಳ್ಳಬಹುದು ಎಂದು ಕೂಡ ಈತ ಅಭಿಪ್ರಾಯ ಪಡುತ್ತಾನೆ. ಇದರಿಂದ ಅಲ್ಲಿ ಫೋಟೋ ತೆಗೆದ ಪ್ರವಾಸಿಗಳು ತಾವು ತೆಗೆದ ಫೋಟೋಗಳ ಫಲಿತಾಂಶವನ್ನ ಈ ಡಾರ್ಕ ರೂಮುಗಳಲ್ಲಿ ನೋಡಿ ತೃಪ್ತಿ ಪಡಬಹುದು ಅನ್ನುವುದು ಅವನ ಅಭಿಪ್ರಾಯ ಕೂಡ.
ಈ ಮಾತುಗಳನ್ನ ಪ್ರವಾಸಿ ಮಂದಿರದ ವಹಿಯಲ್ಲಿ ಬರೆದ ಸುಮಾರು ಒಂದು ವರ್ಷದ ನಂತರ ಅಂದರೆ ೧೮೯೪ರಲ್ಲಿ ಇದೇ ವ್ಯಕ್ತಿ ಮತ್ತೆ ಜೋಗ ಜಲಪಾತ ನೋಡಲು ಬರುತ್ತಾನೆ. ಹೀಗೆ ಬಂದವನು ಡಿಸೆಂಬರ್ ೫ರಿಂದ ೯ರವರೆಗೆ ಜೋಗದಲ್ಲಿ ಇದ್ದು ಜಲಪಾತದ ಚೆಲುವನ್ನ ಮತ್ತೊಮ್ಮೆ ಸವಿಯುತ್ತಾನೆ. ಹಿಂದಿನ ಸಾರಿ ತಾನು ಮಾರ್ಚ ಎಪ್ರಿಲ್ ನಲ್ಲಿ ಬಂದಿದ್ದರಿಂದ ಜಲಪಾತದಲ್ಲಿ ನೀರು ಇರಲಿಲ್ಲವೆಂದೂ ಆದರೆ ಇದು ಡಿಸೆಂರ್ ಆಗಿರುವುದರಿಂದ ನೀರು ಯಥೇಚ್ಚವಾಗಿ ಇದೆ ಎಂದೂ ಈತ ಬರೆಯುತ್ತಾನೆ. ಜೊತೆಗೆ ಹಿಂದಿನ ಸಾರಿ ತಾನು ಬಂದಾಗ ಮಾಡಿದ ಒಂದು ಸಲಹೆ ಈ ಬಾರಿ ಕಾರ್ಯರೂಪಕ್ಕೆ ಇಳಿದಿರುವುದನ್ನ ನೋಡಿ ಈತ ಸಂಭ್ರಮಿಸುತ್ತಾನೆ.
ಪ್ರವಾಸಿ ಮಂದಿರದ ಒಂದು ಕೊಠಡಿಯನ್ನ ಡಾರ್ಕ ರೂಮನ್ನಾಗಿ ಪರಿವರ್ತಿಸಲಾಗಿರುತ್ತದೆ. ಅಲ್ಲದೆ ಅಲ್ಲಿ ಇಲ್ಲಿ ತುಸು ಬದಲಾವಣೆ ಮಾಡಿಕೊಂಡು ಅದನ್ನು ಫೋಟೋಗ್ರಫಿಗೆ ಉಪಯೋಗಿಸಿ ಕೊಳ್ಳಲು ಸಾಧ್ಯವಿರುತ್ತದೆ. ಪ್ರವಾಸಿಗಳಿಗೆ ಇಂತಹಾ ಒಂದು ಅನುಕೂಲತೆಯನ್ನ ಮಾಡಿಕೊಟ್ಟ ನೌಕರರನ್ನ ಆತ ಹೊಗಳುತ್ತಾನೆ. ಅವರಿಗೆ ಕೃತಜ್ಞತೆ ಹೇಳುತ್ತಾನೆ. ಹಾಗು ತನ್ನ ಬರಹದ ಕೆಳಗೆ ಜಾನ್ ಬಿ. ಮೆಕ್ ಫಾಲರ್ ಎಂದು ಸಹಿ ಮಾಡುತ್ತಾನೆ.
ಪ್ರವಾಸಿಗರ ವಹಿಯಲ್ಲಿ ಉಲ್ಲೇಖಿಸಿರುವ ಮತ್ತೊಂದು ಉಲ್ಲೇಖ ಅಂದರೆ ಬೆಂಗಳೂರಿನ ಸೌತ್ ಪರೇಡಿನಲ್ಲಿರುವ ಡೆಲ್ ಟೂಫೋ ಮತ್ತು ಕಂಪನಿಯ ಜೋಸ್ ಜಿಯೋ ಜಾನಸನ್ ಅನ್ನುವವರ ಮಾತುಗಳು. ೨೮ ಸೆಪ್ಟೆಂಬರ್, ೧೮೯೮ರಲ್ಲಿ ಇಲ್ಲಿಗೆ ಬಂದು ೧ನೇ ಅಕ್ಟೋಬರಂದು ಇಲ್ಲಿಂದ ನಿರ್ಗಮಿಸಿದ ಇವರು ತಮ್ಮಲ್ಲಿ ಮಾರಾಟಕ್ಕೆ ದೊರೆಯುವ ಜೋಗದ ವೈವಿಧ್ಯಮಯ ಫೋಟೋಗಳ ಬಗ್ಗೆ ಬರೆಯುತ್ತಾರೆ. ಬೇರೆ ಬೇರೆ ಕೋನಗಳಿಂದ ತೆಗೆದ, ಸಣ್ಣ ದೊಡ್ಡ ಫೋಟೋಗಳು ತಮ್ಮಲ್ಲಿ ದೊರೆಯುವುದಾಗಿ ಇವರು ಹೇಳುತ್ತಾರೆ. ಈ ಚಿತ್ರಗಳು ಕೈಗೆಟುಕುವ ದರದಲ್ಲಿ ಸಿಗುತ್ತವೆ ಅನ್ನವುದನ್ನ ಹೇಳಲು ಇವರು ಮರೆಯುವುದಿಲ್ಲ. ಜೋಗದ ಫೋಟೋಗಳನ್ನ ಇರಿಸಿಕೊಳ್ಳಬೇಕಾದವರು ತಮ್ಮನ್ನ ಸಂಪರ್ಕಿಸಬಹುದು ಎಂದು ಕೂಡ ಅವರು ಹೇಳುತ್ತಾರೆ.
ಜೋಗದ ಪ್ರವಾಸಿ ಮಂದಿರದ ವಹಿಯಲ್ಲಿ ಇರುವ ಮತ್ತೂ ಒಂದು ದಾಖಲೆ ಅಂದರೆ ೧೮೯೯ರ ಅಕ್ಟೋಬರ್ ೧೪ರಂದು ಡಿ. ಪಿ. ಎಂ. ಎಂಬ ಮಹನೀಯರು ಜಲಪಾತದ ಫೋಟೋಗಳನ್ನ ತೆಗೆಯುವ ನಾಗರಿಕರಿಗೆ ಒಂದು ವಿನಂತಿ ಮಾಡಿಕೊಳ್ಳುತ್ತಾರೆ. ನೀವು ತೆಗೆದ ಫೋಟೋಗಳ ಒಂದೊಂದು ಪ್ರತಿಯನ್ನ ಪ್ರವಾಸಿ ಮಂದಿರಕ್ಕೆ ನೀಡಿ, ಅದನ್ನ ಅಲ್ಲಿ ತೂಗು ಹಾಕಿದರೆ, ಹೊಸದಾಗಿ ಜಲಪಾತವನ್ನ ನೋಡಲು ಬಂದವರಿಗೆ ಯಾವ ಜಲಪಾತದ ಹೆಸರು ಏನು, ಅದು ಎಲ್ಲಿದೆ ಇತ್ಯಾದಿ ವಿವರಗಳು ತಿಳಿಯುತ್ತವೆ ಅನ್ನುತ್ತಾರೆ ಅವರು.
ಕರ್ನಾಟಕದ ಪ್ರಕೃತಿ ಚಿತ್ರಗಾರರೆಂದೇ ಪ್ರಖ್ಯಾತರಾದ ದಿ. ರುಮಾಲೆ ಚೆನ್ನಬಸಪ್ಪನವರು ಕೆಲ ತಿಂಗಳು ಜೋಗದ ಒಂದು ಪ್ರವಾಸಿ ಮಂದಿರದಲ್ಲಿ ಇದ್ದು ಜೋಗದ ಕೆಲ ವರ್ಣ ಚಿತ್ರಗಳನ್ನ ರಚಿಸಿದ್ದು ಒಂದು ಇತಿಹಾಸ. ಜೋಗ ಜಲಪಾತ ತಾನು ಧುಮುಕುವ ಸಂದರ್ಭದಲ್ಲಿ ವಿವಿಧ ಕಡೆಗಳಲ್ಲಿ ವಿವಿಧ ಆಕಾರದ ಕಾಮನ ಬಿಲ್ಲುಗಳನ್ನ ಸೃಷ್ಟಿ ಮಾಡುತ್ತದೆ. ಇಂತಹಾ ಕಾಮನ ಬಿಲ್ಲುಗಳನ್ನ ಕಂಡು ಕೊಂಡ ರುಮಾಲೆಯವರು ಆ ಕಾಮನ ಬಿಲ್ಲು ಅಲ್ಲಿ ಮೂಡಿದಾಗ ಮಾತ್ರ ಒಂದೆಡೆ ಕುಳಿತು ಅಂತಹ ಕಾಮನ ಬಿಲ್ಲುಗಳನ್ನ ಸೆರೆಹಿಡಿಯುವ ಕೆಲಸ ಮಾಡಿದರು.
ಸೂರ್ಯ ನಡು ನೆತ್ತಿಗೆ ಬಂದು ನಿಂತಾಗ ಒಂದು ಕಾಮನ ಬಿಲ್ಲು ರಾಜಾನ ಅಡಿಯಿಂದ ಪ್ರಾರಂಭವಾಗಿ ರಾಣಿಯ ಅಡಿಯಲ್ಲಿ ಅಂತ್ಯವಾಗುತ್ತದೆ. ಇದೊಂದು ಅದ್ಭುತವಾದ ದೃಶ್ಯ. ಇದನ್ನ ರುಮಾಲೆಯವರು ಅಷ್ಟೇ ಅದ್ಭುತವಾಗಿ ಚಿತ್ರಿಸಿದರು. ಈ ಚಿತ್ರವನ್ನ ೧೯೬೪ರಲ್ಲಿ ಶರಾವತಿ ವಿದ್ಯುದಾಗಾರದ ಉದ್ಘಾಟನೆಯ ಸಂದರ್ಭದಲ್ಲಿ ಅಮೇರಿಕಾದ ರಾಯಭಾರಿಯಾಗಿ ಸಮಾರಂಭಕ್ಕೆ ಬಂದಿದ್ದ ಶ್ರೀ ಚೆಷ್ಟರ್ ಬೌಲ್ಸ ಅವರಿಗೆ ನೀಡಲಾಯಿತು. ರುಮಾಲೆಯವರು ಜೋಗ ಜಲಪಾತವನ್ನ ಕುರಿತಂತೆ ಇನ್ನೂ ಕೆಲ ಚಿತ್ರಗಳನ್ನ
ಬರೆದರು. ಆದರೆ ಅವು ಈಗ ಎಲ್ಲಿವೆ ಅನ್ನುವುದು ಪತ್ತೆಯಾಗದ ವಿಷಯ.
ಫೋಟೋಗ್ರಫಿಗೆ ಸಂಬಂಧ ಪಟ್ಟ ಜೋಗದ ಇತ್ತೀಚಿನ ಕತೆ ಅಂದರೆ ಒಂದು ಚಲನ ಚಿತ್ರದ್ದು. ಈ ಚಲನ ಚಿತ್ರ ಜೋಗ ಜಲಪಾತದ ಅತೀ ಭೀಕರವಾದ ಘಟ್ಟಗಳಲ್ಲಿ ಚಿತ್ರೀಕರಣವನ್ನ ಮಾಡುವುದರ ಮೂಲಕ ಜೋಗದ ಸಮಗ್ರ ಚೆಲುವನ್ನ ಸೆರೆಹಿಡಿಯಿತಾದರೂ ಪ್ರವಾಸಿಗರಲ್ಲಿ ಆ ಚಲನಚಿತ್ರದ ನಟ ನಟಿಯರು ಹೋದೆಡೆಯಲ್ಲಿ ಹೋಗಿ, ಕುಳಿತು, ಹಾಡಿ ಬರಬೇಕು ಅನ್ನುವ ಚಪಲವನ್ನ ಸೃಷ್ಟಿ ಮಾಡಿತು. ಈ ಚಪಲದಿಂದಾಗಿ ಬಹಳ ಜನ ಜೀವ ಕಳೆದುಕೊಂಡರು, ಕೈ ಕಾಲು ಮುರಿದುಕೊಂಡರು. ಓರ್ವ ಯುವಕ ಜಲಪಾತದ ಕಡಿದಾದ ಜಾಗದಲ್ಲಿ ಹೋಗಿ ಕೆಳಗೆ ಇಳಿಯಲಾರದೆ, ಮೇಲೆ ಹತ್ತಲಾರದೆ ಪಾಡು ಪಟ್ಟಾಗ ಅಗ್ನಿ ಶಾಮಕ ದಳದವರು ಅವನನ್ನ ರಕ್ಷಿಸಬೇಕಾಯಿತು. ಅಲ್ಲಿಗೆ ಏಕೆ ಹೋಗಿದ್ದಿ ಎಂದು ಕೇಳಿದಾಗ ಆತ ತನ್ನ ಪ್ರೇಯಸಿಯ ಹೆಸರನ್ನ ಅಲ್ಲಿ ಬರೆದಿಡಲು ಹೋಗಿದ್ದೆ ಎಂದ.
ಹೋದ ವರ್ಷ ಮಳೆಗಾಲದಲ್ಲಿ ಹೆಚ್ಚುವರಿ ನೀರನ್ನ ಲಿಂಗನಮಕ್ಕಿ ಅಣೆಕಟ್ಟಿನಿಂದ ಬಿಟ್ಟಾಗ ಚಲನಚಿತ್ರದ ಚಿತ್ರೀಕರಣ ನಡೆದ ಸ್ಥಳಕ್ಕೆ ಹೋಗಿ ಸೇರಿಕೊಂಡ ಏಳೆಂಟು ಜನ ಅಲ್ಲಿಯೇ ಆಗಿ ಕೊನೆಗೆ ಲಿಂಗನಮಕ್ಕಿ ಅಣೆಕಟ್ಟಿನ ಬಾಗಿಲುಗಳನ್ನ ಇಳಿಸಿ ಅವರನ್ನ ರಕ್ಷಿಸಬೇಕಾಯಿತು.
ಹೀಗೆ ಈ ಜಲಪಾತ ಒಂದಲ್ಲಾ ಒಂದು ರೀತಿಯಲ್ಲಿ ಜನರನ್ನ ಕಾಡುತ್ತಲೇ ಇರುತ್ತದೆ. ಅಲ್ಲದೆ ಈ ಜಲಪಾತದ ಫೋಟೋಗ್ರಫಿ ಮಾಡಲು ಹಲವಾರು ಜಾಗಗಳಿರುವುದೊಂದು ಸೋಜಿಗ. ನೆತ್ತಿಯ ಮೇಲೆ ನಿಂತು, ಅಡಿಯಲ್ಲಿ ನಿಂತು, ಮುಂದಿನ ಬಂಗಲೆ ಬಳಿ ನಿಂತು, ಮತ್ತೆಲ್ಲೋ ನಿಂತು ಈ ಜಲಪಾತದ ಚೆಲುವನ್ನ ಸೆರೆ ಹಿಡಿಯಬಹುದು. ಜನ ಸೆರೆಹಿಡಿಯುತ್ತಾರೆ ಕೂಡ. ಇಂದು ಮೊಬೈಲಗಳು, ವಿವಿಧ ಬಗೆಯ ಕ್ಯಾಮರಾಗಳು, ವೀಡಿಯೋ ಕ್ಯಾಮರಾಗಳು ಬಂದಿರುವಾಗ ಜೊಗಕ್ಕೆ ಬರುವ ಪ್ರತಿಯೊಬ್ಬರೂ ಏನಾದರೊಂದನ್ನು ಹಿಡಿದುಕೊಂಡು ಬರುತ್ತಾರೆ. ಆದರೆ ವಿಚಿತ್ರವೆಂದರೆ ಅಲ್ಲಿ ವರ್ಷದ ಹತ್ತು ತಿಂಗಳು ನೀರು ಇರುವುದಿಲ್ಲ.