ಮೇ ೧೮, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಮತ್ತೆ ಮತ್ತೆ ಅಮಲ್ತಾಸ್:ರೇಣುಕಾ ದೆಹಲಿ ಕಾಲಂ    
ರೇಣುಕಾ ನಿಡಗುಂದಿ
ಸೋಮವಾರ, 28 ಮೇ 2012 (04:24 IST)

ದೆಹಲಿಯಲ್ಲೀಗ ವೈಶಾಖದ ರುದ್ರ ರಮಣೀಯತೆ. ಹೊಂಗೆಯ ಸೊಂಪು ನೆರಳು, ಬಿರಿಮೊಗ್ಗಿನ ಅರಳು. ಕಣ್ಣಿಗೆ ತಂಪು ನೀಡುವ ಗುಲ್ ಮೊಹರಿನ ಕೆಂಪು. ಇವೆಲ್ಲದರ ನಡುವೆ ಬಿಸಿಲು-ಧಗೆ ಹೆಚ್ಚಿ, ತಾಪಮಾನ 40-42 ಡಿಗ್ರಿಗಳ ಮೇಲೆ ಮೇಲೆ ನಿರ್ದಯವಾಗಿ ಸುಂಯ್ಯೆಂದು ಏರುತ್ತಿದ್ದಂತೆ ಕಣ್ಣಿಗೆ ಹಬ್ಬವಾಗಿ, ಹಾಗೇ ಹೃದಯಕ್ಕಿಳಿದು ಮನಸ್ಸಿಗೆ ಮುದ ನೀಡುವ ಹೂವಿನ ರಾಶಿ ಹೊದ್ದ ಅಮಲ್ತಾಸ್ ಎಲ್ಲೆಲ್ಲಿಯೂ ಕಾಣತೊಡಗಿದೆ. ಎಲೆಯೇ ಕಾಣದ ಮರದಲ್ಲಿ ಹೂವೇ ಹೂವಾಗಿ ಅರಳಿದ ನಸು ಹಸಿರು ಮಿಶ್ರಿತ ಹಳದಿ ಹೂಗಳ ಚೆಲುವನ್ನು ಹಿಡಿದಿಡಲು ಪದಗಳೇ ಸಿಗವು. ಮೋಹಗೊಳಿಸುವ ಅಮಲ್ತಾಸ್ ನ್ನು ಅನುಭವಿಸಿಯೇ ಆನಂದಿಸಬೇಕು. 

ದೆಹಲಿಯ ಬಿರು ಬೇಸಿಗೆಯ ಸೊಬಗೆಂದರೆ ಅಮಲ್ತಾಸ್. ಇಡೀ ನಗರ ಬಂಗಾರದ ಮೆರುಗನ್ನು ಹೊದ್ದಂತಿರುತ್ತದೆ. ಹುಚ್ಚು ಹಿಡಿಸುವ ಅಮಲ್ತಾಸ್ ಬಗ್ಗೆ ನನ್ನ ಎಲ್ಲ ದೆಹಲಿವಾಸಿಗಳಿಗೆ ಗೊತ್ತಿರುತ್ತದೆ. ಅದರ ಮೋಹಕತೆಗೆ ಮರುಳಾಗದವರೇ ಇಲ್ಲ. ಪ್ರಕೃತಿಯ ಈ ತಾಳಮೇಳ ನೋಡಿ ದಂಗಾಗಬೇಕು. ಒಂದುಕಡೆ ಅಸಹನೀಯ ಬೆಂಕಿಯುಗುಳುವ ಉರಿ ಬಿಸಿಲು ಇನ್ನೊಂದೆಡೇ ತನ್ನದೇ ಬಂಗಾರವರ್ಣದ ಮಳೆ ಸುರಿದು ಆಕರ್ಷಿಸುವ ಅಮಲ್ತಾಸ್ ಮರ. ಇದನ್ನು Golden Shower tree ಅಂತಲೇ ಕರೆಯುತ್ತಾರೆ. ದಿನಾ ಮೂಲಚಂದ್ ದಲ್ಲಿ ನನ್ನ ಚಾರ್ಟರ್ಡ್ ಬಸ್ ಇಳಿದು ರಿಂಗ್ ರೋಡಿನ ಗ್ಯಾರಾ ನಂಬರಿನ ಕಡೆಗೆ ಗಡಬಡಿಸಿ ಓಡುತ್ತೇನೆ ಸಖನನ್ನು ಕಾಣಲು ಓಡುವ ತರಳೆಯಂತೆ. ಆ ದಾರಿಯಲ್ಲಿ ಎರಡು ಅಮಲ್ತಾಸ್ ಮರಗಳಿವೆ. ಒಂದು ಬಾರಾ ನಂಬರಿನ ಬಂಗಲೆ ಎದುರು ಇನ್ನೊಂದು ತುಸು ದೂರದಲ್ಲಿ. ಮನಸೂರೆಗೊಳ್ಳುವ ಸಂಭ್ರಮವೇ ಮನಸ್ಸನ್ನು ಅರಳಿಸಿರುತ್ತದೆ. ಅದರ ನೆರಳಿಗೆ ನಿಂತರೆ ಎದೆಯಲ್ಲಿ ಸಾವಿರ ಚಿಟ್ಟೆಗಳೆಲ್ಲ ಒಮ್ಮೆಲೆ ಹಾರಾಡಿದ ಖುಶಿ. ನಿತ್ಯವೂ ಒಂದು ಕ್ಷಣ ಅದರ ನೆರಳಿಗೆ ನಿಂತು ಕತ್ತೆತ್ತಿ  ಹೂದುಂಬಿದ ಮರವನ್ನು ಕಣ್ಣಲ್ಲಿ ತುಂಬಿಕೊಂಡು, ನವುರಾದ ನರುಗಂಪನ್ನು ಹೀರಿಕೊಳ್ಳುತ್ತ, ಕೈಗೆಟುವಂತಿದ್ದರೆ ತುಸು ಕೈಯೆತ್ತಿ ಕೈಯಿಂದ ಮೆಲ್ಲನೇ ಒಂದು ಗೊನೆಯನ್ನು ಕಿತ್ತುಕೊಂಡು, ಸುಖದಿಂದ ಆಘ್ರಾಣಿಸಿ ನನ್ನ ಬ್ಯಾಗಲ್ಲಿ ಹಗುರಾಗಿ ನಲುಗದಂತೆ ಇಟ್ಟುಕೊಂಡು ಮತ್ತೆ ಹೆಜ್ಜೆ ಹಾಕುತ್ತೇನೆ. 

ಈ ನನ್ನ ಹುಚ್ಚು ಸಂಭ್ರಮವನ್ನು ಗ್ಯಾರಾ -ಬಾರಾ ನಂಬರಿನ ಕೆಲಸವಿಲ್ಲದೇ ಬಂಗಲೆಗಳನ್ನು ಕಾಯಲು ಕುಳಿತ ಗಾರ್ಡುಗಳು ವಿಸ್ಮಯದಿಂದ ನೋಡುತ್ತಾರೆ. ದಿನಕ್ಕೆ ಸಾವಿರ ನಮೂನೆಯ ಜನರನ್ನು ನೋಡಿ ಅಭ್ಯಾಸವಾದವರಿಗೆ ನಾನೇನು ಮಹಾ ಎಂದು ಸಮಾಧಾನ ಪಡುತ್ತೇನೆ. ಹಾಗೇ ಮುಂದೆ  ಬೋಧಿವೃಕ್ಷದ ನೆರಳಲ್ಲಿ ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲವೆನ್ನುವ ಶಾಂತವಾದ ಶ್ರೀರಾಮ ಶರಣಂ ಮಂದಿರವಿದೆ. ಸದ್ದಿಲ್ಲದೇ ನೆಲವರೆಸಿ,ಕಸಗೂಡಿಸಿ ಸೇವೆ ಸಲ್ಲಿಸುವವರು ಇರುತ್ತಾರೆ. ನನ್ನ ನಿತ್ಯದ ಅಮಲ್ತಾಸ್ ಪ್ರಿಯನ ದರ್ಶನ, ಅದನ್ನು ತಡವಿ ಮುದ್ದಿಸುವಂತೆ ಒಂದೆಸಳನ್ನು ಕಿತ್ತೋ, ಇಲ್ಲಾ ಹೂವಿನ ಗೆಜ್ಜೆಗಳನ್ನು ಮುಟ್ಟುವಂತೆ ಎತ್ತರಕ್ಕೆ ಕೈಚಾಚಿ ಬೆರಳಿನಿಂದ ತಡವಿ ಆನಂದಿಸುವ ತುಂಟಾಟದಲ್ಲಿ ನಾನೊಬ್ಬ ಪುಟ್ಟ ಹುಡುಗಿಯಾಗಿರುತ್ತೇನೆ. ಆಫೀಸಿನ ಪಂಚಿಂಗ್ ಟೈಮೂ ನೆನಪಾಗದು. ಮೇ -ಜೂನ ಅಷ್ಟೇ ಇದರ ಆಯಸ್ಸು. ಹಸಿರು ಹಳದಿ ಪುಟ್ಟ ಪುಟ್ಟ ದುಂಡನೆಯ ಗೆಜ್ಜೆ ಗೊಂಚಲನ್ನು ತೂಗುಬಿಟ್ಟ ತೂಗುದೀಪದಂತೆ ತೊನೆಯುವ ಅಮಲ್ತಾಸ್ ರೆಂಬೆಯನ್ನು ಎದೆಗೆ ತುಂಬಿಕೊಂಡಷ್ಟೂ ತೃಪ್ತಿಯಿಲ್ಲ. ಇನ್ನೂ ಅರಳದ ಎಳೆಮೊಗ್ಗುಗಳು ಗೆಜ್ಜೆ ಗೊಂಚಲಿನಂತೆ ತೂಗುತ್ತಿರುತ್ತವೆ. ಪೂರ್ಣ ಅರಳಿಬಿರಿದ ಹೂಗಳು ಬೆಳಗಿನ ಬಿಸಿಲಿಗೆ ಮತ್ತಷ್ಟು ಆಕರ್ಷಕವಾಗಿ ನಸುಗಂಪನ್ನು ಹರಡಿ ನಗುತ್ತಿರುತ್ತವೆ. ಬಿಸಿಲಿನ ಪ್ರಖರತೆ ಹೆಚ್ಚಿದಷ್ಟೂ ಅಮಲ್ತಾಸ್ ಬಿರಿದು ಮೆರೆಯುತ್ತದೆ. ಎತ್ತರೆತ್ತರದಿಂದ ಭೂಮಿಗೆ ಅಭಿಮುಖವಾಗಿ ರಾಶಿ ರಾಶಿಯಾಗಿ ತೂಗುವ ಗೊಂಚಲನ್ನು ಕಣ್ಣಿಂದಲೇ ಮುತ್ತಿಟ್ಟು ಸಾಗುವುದೀಗ ನನ್ನ ನಿತ್ಯದ ಬೆಳಗಿನ ದಿನಚರಿಯಾಗಿದೆ. ಬಾರಾ ನಂಬರಿನ ಎದುರು ಬಿಸಿಲಿಗೆ ಬಾಯಾರಿ ಬಂದವರಿಗೆ ನೀರುಣಿಸಲು ಮಣ್ಣಿನ ಮಟಕಾಗಳಲ್ಲಿ ಪೈಪ್ ನಿಂದ ಆಳು ನೀರು ತುಂಬಿಸುತ್ತಿರುತ್ತಾನೆ. ಬಾಯಾರಿದವರಿಗೆಂದು ಅಲ್ಲಲ್ಲಿ ಜನರು ನೀರು ತುಂಬಿದ ಹೂಜಿ, ಮಟಕಾ (ಗಡಿಗೆ) ಗಳನ್ನಿಟ್ಟು ಜಲದಾನದ ಸೇವೆ ಸಲ್ಲಿಸುತ್ತಾರೆ. ಹಕ್ಕಿ ಪಿಕ್ಕಿಗಳಿಗೆ ಮಣ್ಣಿನ ತಟ್ಟೆಯಲ್ಲಿ ನೀರಿರುತ್ತದೆ. ಪಾರಿವಾಳಗಳಿಗೆ ಬಾಜರಾ ಕಾಳನ್ನು ನಿತ್ಯವೂ ಹಾಕುವವರನ್ನು ಮೂಲಚಂದ್ ನಿಂದ ಪುರಾನಾಕಿಲ್ಲಾ ಕಡೆ ಹೋಗುವ ದಾರಿಯಲ್ಲಿ ಕಾಣಬಹುದು. ಹಿಂಡು ಹಿಂಡು ಪಾರಿವಾಳಗಳು!!

ಶ್ರೀರಾಮ್ ಶರಣಂ ನಿಂದ ಮುಂದೆ ಕೊನೆಯಲ್ಲಿನ ಒಂದು ಬಂಗಲೆಯ ಕಂಪೌಂಡ್ ಹೊರಗೆ ದುಂಡುಮಲ್ಲಿಗೆ ಸುರಿದಿವೆ ಅದರೆ ಕೈಗೆಟುಕುವುದಿಲ್ಲ. ಜಮರೂದ್ಪುರಿನ ಅಮಲ್ತಾಸ್ ಜತೆಗಿನ ನನ್ನ ಆ ಎರಡು ಕ್ಷಣದ ಸಾಂಗತ್ಯ ಇಡೀ ದಿನದ ನೂರು ಕೆಲಸಗಳ ಒತ್ತಡ, ಹೊರಗಿನ ಬಿಸಿಲೂ, ಬೆಳಕೂ ಬಾರದ ಏಸೀ ಕೋಣೆಯ ಏಕತಾನತೆಯಲ್ಲೂ ಜೀವತುಂಬುತ್ತದೆ. ಮನಸ್ಸಿನಲ್ಲಿ ಲತಾ ಮಂಟಪದಲ್ಲಿ ಕುಳಿತು ಬಂತಂಥ ಸುಖಭಾವ ನೆಲೆಸಿರುತ್ತದೆ. ಕೆಲಸದ ನಡುವೆಯೂ ಫಕ್ಕನೆ ನೆನಪಾಗಿ ಕೈಚೀಲದಲ್ಲಿ ಹಾಯಾಗಿ ಕುಳಿತ ಅಮಲ್ತಾಸ್ ಹೂವನ್ನು ಕದ್ದು ಕದ್ದು ನೋಡಿ ಬಾಡಿತೊ ಇಲ್ಲವೋ ಎಂಬ ಖಾತ್ರಿಗೆ ಅಂತರಾಳದ ಗೆಜ್ಜೆಗಳೆಲ್ಲ ಉಲಿದಂತಾಗುತ್ತದೆ. ಈ ನನ್ನ ಲೋಕವೇ ಬೇರೆ. ಮೊನ್ನೆ ಮೊನ್ನೆಯ ಮುಸ್ಸಂಜೆ ಎರ್ರಾ ಬಿರ್ರಿ ಧೂಳಿನ ಸುಂಟರಗಾಳಿ ಬೀಸುತ್ತ, ಆಗಸವೆಲ್ಲ ಬಸವಳಿದು, ಬೂದು ಬಣ್ಣದಮೋಡ ಕವಿದು, ಬೆಳ್ಳನೇ ಬೆಳ್ಳಿ ಹಗಲಿನ ಸಂಜೆಗೆ ದೆಹಲಿಗರೆಲ್ಲ ಮಳೆ ಬಂದೀತೆಂಬ ತರಾತುರಿಯಲ್ಲಿ ವಾಹನಗಳನ್ನು ಓಡಿಸುತ್ತಿದ್ದರು. ಕೆಲವೆಡೆ ಮಳೆ ಆಗಲೇ ಆರಂಭಿಸಿತ್ತು. ಅಂದೇ ನಮ್ಮ ಒಬ್ಬ ಸಹೋದ್ಯೋಗಿಯನ್ನು ಪಂಚಶೀಲ್ ಮೆಟ್ರೋ ವರೆಗೂ ಬಿಟ್ಟು ನಾವು ನೊಯ್ಡಾ ಹೋಗಲು ವ್ಯಾನಿನಲ್ಲಿ ಹೋಗುತ್ತ  ಸಿರಿಫೋರ್ಟ್ ರಸ್ತೆಗೆ ಸೇರುವ  ಗಾರ್ಗಿ ಕಾಲೇಜು ರೋಡ್ ಗೆ ತಿರುಗಿದೆವು. ಗಾರ್ಗಿ ಮತ್ತು ಕಮಲಾ ನೆಹರೂ ಕಾಲೇಜಿನ ಎದುರಿನ ಇಡೀ ಸಾಲು ರೋಡಿನ ಇಕ್ಕೆಲದಲ್ಲಿ ಅಮಲ್ತಾಸ್ ಮರಗಳ ಮನಮೋಹಕ ಹೂವರಾಶಿ. ದಾರಿ ಉದ್ದಕ್ಕೂ ಚಾಚಿದ ಅಮಲ್ತಾಸ್ ಕಂಡು ಯಾವುದೋ ಹೂವಿನ ಗಲ್ಲಿಯನ್ನು ಹೊಕ್ಕೆವೆನೋ ಎಂಬ ಖುಶಿ. 

ಆಗಸದೆತ್ತರದಲ್ಲಿ ರಾಶಿ ರಾಶಿ ಅಮಲ್ತಾಸ್. ಮನ ನವಿಲಾಗಿತ್ತು, ಗಾಳಿಗೆ ಉದುರಿ-ತೂರಿ ಹರಡಿಹೋದ ಬಂಗಾರದ ಅಮಲ್ತಾಸ್ ಪಕಳೆಗಳು ನೆಲದಲ್ಲಿ ಹಾಸಿ ಬಂಗಾರದ ರೇಕು ಹಾಸಿದಂತೆ ಚೆಲುವಾಗಿತ್ತು. ನಾನು ಡ್ರೈವರ್  ಸತೇಂದ್ರನಿಗೆ ಗಾಡಿ ಪಕ್ಕಕ್ಕೆ ನಿಲ್ಲಿಸಲು ಹೇಳಿ ಭ್ರಮಿತಳಂತೆ ಕೆಳಗಿಳಿದು ಅಮಲ್ತಾಸ್ ಹೂಹಾಸಿನಲ್ಲಿ ಅರೆಕ್ಷಣ ನಿಂತಾಗ ಮೆಟ್ರೋ ಧಾವಂತದಲ್ಲಿದ್ದ ನಮ್ಮ ಸಹೋದ್ಯೋಗಿ ಚಡಪಡಿಸತೊಡಗಿದ್ದ. ಮನದಲ್ಲಿ ಶಪಿಸಿಯಾನು ಎಂದು ಟ್ರ್ಯಾಫಿಕ್, ಆಂಧಿ ನೆನಪಾಗಿ ಮತ್ತೆ ಓಡಿಹೋಗಿ ಗಾಡಿಯಲ್ಲಿ ಕೂತೆ. ಡ್ರೈವರ್ ಇದೇನು ತನಗೆ ಸಂಬಂಧವಿಲ್ಲವೆಂಬತಿದ್ದ. ನನಗೆ ಬಕಾನಾ ಮರದ ಹೆಸರು, ಅದರ ಉಪಯುಕ್ತತೆ ಬಗ್ಗೆ ಹೇಳಿದ್ದು ಇದೇ ಸತೇಂದ್ರ್ ಡ್ರೈವರ್. ನನಗೆ ಗೊತ್ತಿರದ, ಇಷ್ಟವಾದ ಹೂ ಮರಗಳ ಬಗ್ಗೆ ಅವನನ್ನು ಕೇಳುತ್ತಿರುತ್ತೇನೆ.

ಆಗೆಲ್ಲ ಅವ ತನ್ನೂರಿನ ಬಗ್ಗೆ, ಬಾಲ್ಯದಲ್ಲಿ ಹತ್ತಿ ಆಡಿದ ಮರಗಳ ಬಗ್ಗೆ, ವಿಶಿಷ್ಟ ಹಣ್ಣು ಕಾಯಿಗಳ ಬಗ್ಗೆ ಉತ್ಸಾಹದಿಂದ ಹೇಳುತ್ತಾನೆ. ಯಾವಾಗಲೂ ಮೋಬೈಲ್ ನಲ್ಲೇ ಮುಖಪುಟದಲ್ಲೇ (facebook) ಹುದುಗಿಹೋದ ಗುರುತುಗಳು, ಮಾತು ಮರೆತ ಭಾವಗಳು, ಮನುಷ್ಯ ಮನುಷ್ಯನ ಸಂಬಂಧಗಳೇ ಅರ್ಥಹೀನವೆನಿಸುವ ಈ ಕಾಲದಲ್ಲಿ ಸಿಗುವ ನಾಲ್ಕು ಸಂತಸದ ಕ್ಷಣಗಳು ಕೋಟಿ ಮೌಲ್ಯದವು. ದೇವಲೋಕವನ್ನೇ ಸೃಷ್ಟಿಸಿದ ಅಮಲ್ತಾಸ್ ಚೆಲುವನ್ನು ಕಾಣದ ಇವರಿಗೇನೆನ್ನಲಿ? ಇವರನ್ನು ಮೊದಲು ಮೆಟ್ರೋ ಬಿಡಪ್ಪ, ನಾವು ಮತ್ತೆ ಹೀಗೆ ಇದೇ ದಾರಿಯಿಂದ ಹೋಗೋಣ ಸತೇಂದರ್ ಎಂದೆ. ನನ್ನ ಬೇರೆ ಕೋಲಿಗ್ ನಗುತ್ತಿದ್ದರು. ಈ ಘಟನೆಯನ್ನು ನನ್ನ ಕನ್ನಡ ಸ್ನೇಹಿತರಿಗೆ ಹೇಳಿದಾಗ ನಿಮ್ಮ ಹೆಸರು ಸಾಲು ಮರದ ತಿಮ್ಮಕ್ಕ ಅಂತ ಇಡಬೇಕಾಗುತ್ತೆ ಎಂದು ನಕ್ಕರು.  ಆದರೂ ದಿನಾ ಮೂಲಚಂದ್  ಬರುತ್ತಲೂ ನನಗೆ ಯಾಕೋ  ಜಿಎಸ್ಸೆಸ್ ಅವರ

ಪ್ರೀತಿ ಇಲ್ಲದ ಮೇಲೆ-
ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?

ನೆನಪಾಗಿ ಬಿಡುತ್ತದೆ. ಪ್ರಕೃತಿ ಮತ್ತು ಮಾನವನ ಅವಿನಾಭಾವ ಸಂಬಂಧ, ಪಡೆಯುವ-ತೆಗೆದುಕೊಳ್ಳುವ ಹೊಂದಾಣಿಕೆ ನಿನ್ನೆಮೊನ್ನೆಯದಲ್ಲ. ಅರಾವಳಿ ಬೆಟ್ಟದ ಸಾಲುಗಳಿಂದ ಆವರಿಸಿದ್ದ ದೆಹಲಿಯ ರೌರವ ಬಿಸಿಲು, ಧಗೆ ಅಸಹನೀಯ ಸೆಕೆಗಾಲ ವೈಶಾಖಕ್ಕಾದರೆ, ಶಿಶಿರದ ಗದಗುಡುವ ಚಳಿಯೂ ಅಷ್ಟೇ ಅಸಹನೀಯ. ಆಯಾ ಋತುವಿಗೆ ಅರಳಿ ಮೈದೋರುವ ಈ ಗಿಡಮರಗಳ ಸೊಬಗೇ ಒಂದು ವಿಶಿಷ್ಟ. ಅಮಲ್ತಾಸ್ ಮರ ಬರೀ ಮೋಹಕವಷ್ಟೇ ಅಲ್ಲ ಸಾಕಷ್ಟು ಔಷಧೀಯ ಗುಣಗಳಿಂದ ಕೂಡಿದೆ. ಅಮಲ್ತಾಸ್ ಬೇರು- ಕಾಂಡದ ತೊಗಟೆ ತೇಯ್ದು ಮಕ್ಕಳಿಗೆ ಕೊಡುತ್ತಾರಂತೆ ಕರುಳಿನ ಹುಳುಗಳ ಶಮನಕ್ಕೆ. ಸಂಧಿವಾತ ವಿರೋಧಿ ಸಸ್ಯವಂತೆ. ಮಲಬದ್ಧತೆಗೆ, ಜಠರದುರಿತ, ಯಕೃತ್ತು ಕಾಯಿಲೆಗೂ ಬಳಸುತ್ತಾರಂತೆ. ಥೈಲ್ಯಾಂಡಿನ ರಾಷ್ಟ್ರೀಯ ಮರ ಈ ಅಮಲ್ತಾಸ್. ಸಿಬ್ಬಂದಿಯೊಬ್ಬ 'ದ್ರೋಪ್ತೀ ಫೋಟೊಸ್ಟ್ಯಾಟ್' ಬಿಲ್ಲನ್ನು ಕೈಗುಡುತ್ತಾನೆ. ತಟ್ಟನೇ ಪರ್ವ ಕಾದಂಬರಿಯಲ್ಲಿ ಪಾಂಡವರ ಕಾಲದಲ್ಲಿ ದ್ರೌಪದಿಯ ದಾಸಿಯರು ಉರಿಬೇಸಿಗೆಯ ಧಗೆಯಲ್ಲಿ ಲಾವಂಚದ ಪರದೆಗಳಿಗೆ ನೀರುಣಿಸಿ ತಂಪುಗೊಳಿಸುತ್ತಿದ್ದುದು ನೆನಪಾಗುತ್ತದೆ. ಆಗಲೂ ಅಮಲ್ತಾಸ್ ಇದ್ದಿರಬಹುದಲ್ಲವೇ? -ದೆಹಲಿಯ ಹೈಲಿ ರಸ್ತೆ, ಬಾರಖಂಬಾ ರಸ್ತೆ, ಎಲ್ಲೆಂದರಲ್ಲಿ  ಕಣ್ಣಿಗೆ ಹಬ್ಬವಾಗುವ ಅಮಲ್ತಾಸ್ ಮನಸ್ಸಿಗೆ ಕಿರಿಕಿರಿಯಾಗುವ ದೆಹಲಿಯ ಬಿರು ಬೇಸಿಗೆಯನ್ನೂ, ನೀರಸ ಹಗಲನ್ನೂ, ತೂಕಡಿಸುವ ಮನಸ್ಸನ್ನೂ ತಂಪಾಗಿ ಅರಳಿಸಿ ಮುದನೀಡುವುದೇ ಚೆಂದ. ಸೆಕೆಗೆ ನಿದ್ದೆ ಬಾರದ ಇರುಳಿಗೆ ಅಮಲ್ತಾಸ್ ನೆನಪು ಗಜಲಿನಂತೆ ಹಿತವಾಗತೊಡಗುತ್ತದೆ…..  

ಪುಟದ ಮೊದಲಿಗೆ
 
Votes:  7     Rating: 2.14    
 
 
ಸಂಬಂಧಿಸಿದ ಲೇಖನಗಳು
  ರಾಜರ ಕಾಲದ ಬ್ರಾಯ್ಲರ್ ಕೋಳಿ:ಅಬ್ದುಲ್ ರಶೀದ್ ಅಂಕಣ
  ಅಂತ:ಪುರದ ಅಳುಗಳು:ಲಕ್ಷ್ಮೀಶಂಕರ ಜೋಶಿ ಅಂಕಣ
  ಉತ್ತರಾಯಣ ಕಾಲಂ:ತಿರುಮಲೇಶರ ವಾರದ ಬರಹ
  ಇಲ್ಲಿನ ಕಲ್ಯಾಣ ವಿಶೇಷ: ಪ್ರಶಾಂತ್ ತಾಂಜಾನಿಯಾ ಡೈರಿ
  ಅಲ್ಲಿಯೂ ಅಂಟಿದ ಮಳೆ ಇಲ್ಲಿಯೂ ಅಂಟುವ ಮಳೆ:ನಾಗಶ್ರೀ ಅಂಕಣ
  ಹಾವುಗಳೇ ಕಚ್ಚದಿರಿ:ರಹಮತ್ ತರೀಕೆರೆ ವಾರದ ಬರಹ
  ಸಾಹಿತಿಗಳೂ ರಾಜಕಾರಣವೂ: ನಾ.ಡಿಸೋಜ ಅಂಕಣ
  ಬಿರುಬೇಸಗೆಯಲ್ಲಿ ಕಾವ್ಯಾನುರಾಗ:ಮಹೇಶ್ ಬರೆವ ಡೆಲ್ಲಿಪೋಸ್ಟ್
  ಬೆರ್ಚಪ್ಪ ಪ್ರಪಂಚ:ತಿರುಮಲೇಶರ ವಾರದ ಬರಹ
  ಕೀರ್ಲೋಸ್ಕರದಾಗ ಕೆಲಸ ಸಿಕ್ಕತ:ಪ್ರಶಾಂತ್ ಆಡೂರ ನೆನಪುಗಳು
  ಕಣ್ಣು ಚುಚ್ಚುವ ಬೆಳಕು ಬಾಲ್ಯ:ಸಿಂಧು ಬರೆವ ಅಮ್ಮನ ಕಾಲಂ
  ಕನ್ನಡ ಗದ್ಯದ ಒಂದು ಪರಿ:ರಹಮತ್ ತರೀಕೆರೆ ವಾರದ ಬರಹ
  ಅವನು ಕಟ್ಟಿದ ಆರು ಸಾವಿರ ಮೆಟ್ಟಿಲುಗಳು:ನಾಗಶ್ರೀ ಅಂಕಣ
  ಲಾರೆನ್ಸ್ ಮೆನೆಜಸ್, ಗ್ರೇಸಿ ಮತ್ತು ಹಸಿವು:ರಶೀದ್ ಅಂಕಣ
  ‘ನೋಡಿ ನಿರ್ಮಲ ಜಲಸಮೀಪದಿ..:ತಿರುಮಲೇಶರ ವಾರದ ಬರಹ
  ಶ್ರೀಮಾನ್ ಮತದಾರ ಎಂಬ ಅಬ್ಬೇಪಾರಿ:ನಾ.ಡಿಸೋಜಾ ಅಂಕಣ
  ಜೇಬುಕತ್ತರಿಸಿಕೊಂಡ ಟಿಬೆಟನ್ನನ ಕಥೆ:ಅಬ್ದುಲ್ ರಶೀದ್ ಅಂಕಣ
  ಜಿಂಕೆಮರಿ ಮರಿಯಾನಾ ಮಿಂಚುಬಳ್ಳಿ:ನಿಹಾರಿಕಾ ಡೈರಿ
  ಪ್ರಶಾಂತ್ ಬೀರೂರು ಬರೆವ ತಾಂಜಾನಿಯಾ ಡೈರಿ ಶುರುವಾಯಿತು
  ಸಾಪೇಕ್ಷತೆ ಎಂದರೇನು?:ತಿರುಮಲೇಶರ ವಾರದ ಬರಹ
  ನಿಂದ ಛೊಲೋ ಬಿಡವಾ.. ನಿಂಗ ಪೆನ್ಶನ್ ಬರತದ:ಪ್ರಶಾಂತ್ ಬರಹ
  ದುಡಿವ ಕಂದಮ್ಮಗಳ ಕಂಡು:ಲಕ್ಷ್ಮೀಶಂಕರ ಜೋಷಿ ಕಾಲಂ
  ಬೆಳೆಕೇ ಎಲ್ಲ ಎನ್ನುವ ಚಿತ್ರಗಳು:ಮಹೇಶ್ ‘ಡೆಲ್ಲಿಪೋಸ್ಟ್’
  ಭೂಮಿ ಕಂಪಿಸಿದ ಚೀನಾದಿಂದ ನಾಗಶ್ರೀ ತಿಳಿಸಿದ ಸಂಗತಿಗಳು
  ಅಲ್ಲಾಡುತ್ತಿದ್ದ ಹಳೆಯ ಅಂಬಾಸೆಡರ್:ಅಬ್ದುಲ್ ರಶೀದ್ ಅಂಕಣ
  ಎಮ್ಮಯ ಕಾಲದ ಇಂಗ್ಲಿಷ್ ಎಂ.ಎ:ತಿರುಮಲೇಶರ ವಾರದ ಬರಹ
  ಎನ್.ಸಿ.ಮಹೇಶ್ ಬರೆಯುವ ‘ದೆಹಲಿ ಪೋಸ್ಟ್’ ಶುರುವಾಯಿತು
  ನಿಮ್ಮದೇ ನಾಟಕಕ್ಕೆ ನಮ್ಮದೇ ತಾಲೀಮು:ಸಿಂಧು ‘ಅಮ್ಮನ ಕಾಲಂ’
  ಬೆಂಕಿಪುರ ಭದ್ರಾವತಿಯಾದ ಕಥಾನಕ:ನಾ.ಡಿಸೋಜಾ ಅಂಕಣ
  ವ್ಯಾಕರಣವೆಂಬುದು ಗ್ರಾಮ್ಯವಲ್ಲವೇ?:ತಿರುಮಲೇಶರ ವಾರದ ಬರಹ
  ವೃದ್ಧಾಶ್ರಮಕ್ಕ ಜಾಗಾ ಇದ್ದರ ನೋಡ:ಪ್ರಶಾಂತ್ ಪ್ರಹಸನ
  ಸೇಂದಿ ನಕ್ಷತ್ರ ಗುರಾಯಿಸಿ ಬರೆದ ಒಗರು ಒಗರು ಕಾಲಂ
  ವಿವೇಕ್ ಕಥೆಯ ಘಾಚರಿನ ಘೋಚಾರ ಲೋಕ:ನಾಗಶ್ರೀ ಅಂಕಣ
  ವಿಶ್ವವಿದ್ಯಾಲಯಗಳೆಂಬ ಆಲದಮರಗಳು:ತಿರುಮಲೇಶರ ವಾರದ ಬರಹ
  ಕನ್ನಡದ ಬ್ಲಾಗುಗಳ ಬಾಗಿಲಲಿ ನಿಂತು:ಎಂ.ಎಸ್.ಶ್ರೀರಾಮ್ ಬರಹ
  ಬಾರಾ ಖೂನ ಮಾಫ:ಲಕ್ಷ್ಮೀಶಂಕರ ಜೋಶಿ ಅಂಕಣ
  ಸರಳತೆ ಎಂಬ ಸಿರಿವಂತಿಕೆ:ನಾ.ಡಿಸೋಜಾ ಅಂಕಣ
  ಉತ್ತರ ದಿಕ್ಕಿನ ತಿರುಗಾಟದ ಕಥೆಗಳು:ಅಬ್ದುಲ್ ರಶೀದ್ ಅಂಕಣ
  ಕೆ.ವಿ.ತಿರುಮಲೇಶರು ಬರೆದ ಹುಲ್ಲಿನ ತಾರೀಫು
  ರ್ರೀ..ನಂದ ಅಕೌಂಟ ಕ್ಲೋಸ್ ಮಾಡರಿ:ಪ್ರಶಾಂತ್ ಆಡೂರ ಪ್ರಹಸನ
  ಸೇಯಿ ಎಲಿಬಿದೆಯ ಆಸ್ಪತ್ರೆ ಸಹವಾಸ:ರೇಣುಕಾ ಕಾಲಂ
  ಸಹಜ ಸಭ್ಯತೆ ಕುರಿತ ಒಂದು ಕಾದಂಬರಿ:ಅಬ್ದುಲ್ ರಶೀದ್ ಅಂಕಣ
  ಕೆ.ವಿ.ತಿರುಮಲೇಶರು ಬರೆದ ನಗೆಯ ಹಾಯಿದೋಣಿ
  ಹೆಂಗಸರ ದುಃಖ ಮತ್ತು ಗಂಡಸರ ಸವಾರಿ:ಲಕ್ಷ್ಮೀ ಜೋಶಿ ಕಾಲಂ
  ಕಾಲುವೆಗಳ ಊರಿನ ಕೆಂಪು ಕತ್ತಲು: ನಿಹಾರಿಕಾ ಡೈರಿಯ ಪುಟಗಳು
  ಉಪ್ಪಿಟ್ಟನ್ನ ಮುತ್ತಿಕೊಂಡಿದ್ದ ಇರುವೆಗಳು:ನಾ.ಡಿಸೋಜಾ ಅಂಕಣ
  ಭಾಷೆಯೊಂದರ ಅಕ್ರಮ ಸಕ್ರಮ:ತಿರುಮಲೇಶರ ವಾರದ ಬರಹ
  ಹೋದ ಒಂಟಿಹಾದಿಯ ಬಿಟ್ಟುಬಂದು:ನಾಗಶ್ರೀ ಅಂಕಣ
  ನಾ ಹೇಗೆ ಬಡವನು ನಾ ಹೇಗೆ ಪರದೇಶಿ:ಶ್ರೀರಾಮ್ ವಾರದ ಬರಹ
  ದೆಹಲಿಯ ಹಿರಿಯ ಕನ್ನಡತಿ ನೇತ್ರಾವತಿ ಮಯ್ಯ:ರೇಣುಕಾ ಕಾಲಂ
  ಪರದಂಡ ಚಂಗಪ್ಪನವರ ದೇವರು:ಅಬ್ದುಲ್ ರಶೀದ್ ಅಂಕಣ
  ಮುಂಗಾಮಿ ಹಿಂಗಾಮಿ ತದ್ರೂಪಗಳು:ತಿರುಮಲೇಶರ ವಾರದ ಬರಹ
  ಚಿತ್ರ ಸಂತೆಯಲ್ಲೊಂದು ವಿಚಿತ್ರ ಸಂತೆ:ಪ್ರಶಾಂತ್ ಆಡೂರ ಕಥನ
  ಬ್ಯಾಂಗಲೋರ್ ಮತ್ತು ಬಾಲ್ಸೆವಿಕ್ ಸಿಂಗರ್:ಶ್ರೀರಾಮ್ ಬರಹ
  ಪುಟ್ಟಹಕ್ಕಿಯ ನಿದ್ದೆಪುರಾಣ: ಸಿಂಧು ಬರೆಯುವ ಅಮ್ಮನ ಕಾಲಂ