ಆದರೆ ಅಲ್ಲಿಂದ ಮುಂದೆ ಎಲ್ಲವೂ ಮಾಂತ್ರಿಕತೆ ಕಳೆದುಕೊಂಡವು. ಅವರಿಗಾಗಿ ಕಾಯುವುದು, ಕದ್ದು ಭೇಟಿಯಾಗುವುದು, ಮುದ್ದಾಡುವುದು ಎಲ್ಲ ವ್ಯರ್ಥ ಅನ್ನಿಸತೊಡಗಿತು. ನಿಧಾನವಾಗಿ ನನಗೆ ಸಂಬಂಧಗಳ ಬಗ್ಗೆ ಇದ್ದ ಉತ್ಸಾಹ, ನಂಬಿಕೆ ಕಡಿಮೆಯಾಗ ತೊಡಗಿತು. ಎಷ್ಟಿದ್ದರೂ ನಾನು ಒಂಟಿ ಅನ್ನುವ ಭಾವನೆ. ಒಂದು ರೀತಿಯ ವಿಚಿತ್ರ ನಿರ್ಲಿಪ್ತತೆ ಆವರಿಸತೊಡಗಿತು.
ಅದರ ಜೊತೆ ಜೊತೆಗೇ ನಾನು ಯಾರಿಗೂ, ಯಾವುದಕ್ಕೂ ಮಣಿಯಬೇಕಾಗಿಲ್ಲ ಎನ್ನುವ ವಿಶ್ವಾಸ ಬಲಿಯುತ್ತಾ ಬಂತು. ಇವನು ಬೈದರೆ, ದಬಾಯಿಸಿದರೆ ನಾನೂ ತಿರುಗಿ ಬೈಯಲು, ದಬಾಯಿಸಲು ತೊಡಗಿದೆ. ಯಾವ ಕಾರಣಕ್ಕೂ ನನ್ನತನವನ್ನು ಬಿಟ್ಟುಕೊಡಬಾರದು ಎನ್ನುವ ಹಠ ವಿಪರೀತ ತೀವ್ರವಾಗಿ ನನ್ನೊಳಗೆ ಬೆಳೆಯತೊಡಗಿತು. ಅದೇ ಹೊತ್ತಿಗೆ ನನ್ನ ಗೆಳೆಯನ ಬದುಕಿನಲ್ಲೂ ತುಂಬಾ ಬದಲಾವಣೆಗಳಾದವು.
ಆತನೊಂದು ಪತ್ರಿಕೆ ಪ್ರಾರಂಭಿಸಿದ.
ಅಷ್ಟು ಹೊತ್ತಿಗಾಗಲೇ ನಾವಿಬ್ಬರೂ ಕೇವಲ ಗೆಳೆಯರಂತೆ ಪರಸ್ಪರ ಒಪ್ಪಿಕೊಂಡುಬಿಟ್ಟಿದ್ದೆವು. ಅಂದರೆ ರೊಮ್ಯಾಂಟಿಕ್ ಭಾವನೆಗಳಿಲ್ಲದ ಶುದ್ಧ ಗೆಳೆತನ. ಇದನ್ನು ನಾನು ಯಾರಿಗೇ ಹೇಳಿದರೂ ನಂಬುವುದಿಲ್ಲ. ಆದರೆ ಇದು ಸತ್ಯ. ನಾನು ಅವನನ್ನು ಅಪಾರವಾಗಿ ಪ್ರೀತಿಸಿದೆ ನಿಜ. ಆತನನ್ನು ಬಯಸಿದ್ದೂ ನಿಜ. ಆದರೆ ನಮ್ಮ ನಡುವೆ ಯಾವುದೇ ರೀತಿಯ ಸಂಬಂಧ ಏರ್ಪಡಲಿಲ್ಲ. ಅವನು ಹೊಸಾ ಹೊಸಾ ಹುಡುಗಿಯರ ಸಹವಾಸದಲ್ಲಿ ಬೆಚ್ಚಗಿದ್ದ. ಅದರ ಬಗ್ಗೆ ಎಲ್ಲ ನನ್ನ ಹತ್ತಿರ ಹೇಳಿಕೊಳ್ಳುತ್ತಿದ್ದ. ಪತ್ರಿಕೆ ಪ್ರಾರಂಭವಾದ ಮೇಲಂತೂ ರಾಜ್ಯದ ಉದ್ದಗಲದಿಂದ ಹುಡುಗಿಯರು ಅವನಿಗೆ ಪ್ರೇಮಪತ್ರಗಳನ್ನು ಬರೆಯುತ್ತಿದ್ದರು. ದಿನಕ್ಕೆ ಐದಾರು ಹುಡುಗಿಯರು ಯಾವು ಯಾವುದೋ ಊರುಗಳಿಂದ ಹುಡುಕಿಕೊಂಡು ಬರುತ್ತಿದ್ದರು. ಇದೆಲ್ಲದರ ಜೊತೆಗೆ ತನ್ನ ವಿಪರೀತ ಕೆಲಸದ ಒತ್ತಡದಲ್ಲಿ ಅವನು ನನ್ನಿಂದ ದೂರವಾಗಿ ಹೋದ. ಫೋನಿಗೆ ಸಿಗುತ್ತಿರಲಿಲ್ಲ. ಆಫೀಸಿಗೆ ಹೋದರೂ ಸಿಗುತ್ತಿರಲಿಲ್ಲ.
ಒಂದು ದಿನ ತೀರಾ ಬಲವಂತ ಮಾಡಿ ನಾನು ಸಮಯ ತೆಗೆದುಕೊಂಡು ಅವನನ್ನು ಭೇಟಿ ಮಾಡಲು ಅವನ ಆಫೀಸಿಗೆ ಹೋದೆ. ನಾನು ಅಲ್ಲಿಗೆ ಹೋದಾಗ ಒಬ್ಬಳು ಹುಡುಗಿ ಅವನ ಜೊತೆ ಕೂತು ಮಾತನಾಡುತ್ತಿದ್ದಾಗ ನಾನು ಹೋದ ತಕ್ಷಣ ಒಳಗೆ ಹೋಗಲು ಅವನ ಕಚೇರಿಯವರು ಬಿಡಲಿಲ್ಲ. ನಾನು ಅದನ್ನು ತಮಾಷೆಯಾಗಿ ತೆಗೆದುಕೊಂಡು ನಗುತ್ತಾ ಹೊರಗೆ ಬೆಂಚಿನ ಮೇಲೆ ಕೂತು ಕಾದೆ. ಸುಮಾರು ಹೊತ್ತಾದ ಮೇಲೆ ಹುಡುಗಿ ಹೊರಟು ಹೋದಳು. ನನ್ನನ್ನು ಕಳಿಸಲಾಯಿತು. ನಾನು ಜೋರಾಗಿ ಹಾಸ್ಯ ಮಾಡಿಕೊಂಡು ’ಏನೋ ಬೋಳೀಮಗನೇ, ನಿನ್ನ ಆಫೀಸಿನಲ್ಲಿ ನಾನು ಹೊರಗೆ ಬೆಂಚಿನ ಮೇಲೆ ಕೂತು ಕಾಯುವ ಹಾಗಾಯಿತಲ್ಲಾ’ ಅಂತ ಜೋಕ್ ಮಾಡಿದೆ. ಅವನು ತಕ್ಷಣ ತನ್ನ ಆಫೀಸಿನವರಿಗೆ ಬೈದ. ಆದರೆ ಯಾಕೋ ನನ್ನ ಮನಸ್ಸಿಗೆ ಅವನು ಹಳೆಯ ಗೆಳೆಯರಿಗೆಲ್ಲ ತನ್ನ ಹೊಸಾ ಅಂತಸ್ತು ತೋರಿಸಿಕೊಳ್ಳಲು ಯಾರು ಬಂದರೂ ಹೀಗೇ ಕಾಯಿಸಿ ಅಂತ ಹೇಳಿರಬಹುದು ಎನ್ನುವ ಗುಮಾನಿ ಬಂತು. ನಾನೇನೂ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ. ಆದರೂ ಅವತ್ತು ಅವನ ಜೊತೆ ಮುಕ್ತವಾಗಿ ಮಾತನಾಡಲು ಸಾಧ್ಯವಾಗಲಿಲ್ಲ. ಯಾರೋ ಹೊಸದಾಗಿ ಪರಿಚಯವಾದವರನ್ನು ಮಾತಾಡಿಸಿದ ಹಾಗೆ ಮಾತನಾಡಿ ಎದ್ದು ಹೊರಟುಬಿಟ್ಟೆ. ಅವತ್ತು ನಮ್ಮಿಬ್ಬರಿಗೂ ಅದು ಅನುಭವಕ್ಕೆ ಬಂತು. ಇನ್ನು ನಮ್ಮ ರಸ್ತೆಗಳು ಬೇರೆ ಬೇರೆ ಎನ್ನುವ ಒಣ ಭಾವನೆ. ಹೊರಬರುವಾಗ ನನ್ನ ಕಣ್ಣಲ್ಲಿ ನೀರು ಧುಮುಕಿತು. ಉದ್ದಕ್ಕೂ ಸ್ಕೂಟರಿನ ಮೇಲೆ ಅಳುತ್ತಲೇ ಬಂದೆ. ಮನೆಗೆ ಬಂದು ಮಕ್ಕಳನ್ನು ಕರೆದುಕೊಂಡು ಕಬ್ಬನ್ ಪಾರ್ಕ್‌ಗೆ ಹೋದೆ. ಅಲ್ಲಿ ಕತ್ತಲಾಗುವವರೆಗೆ ಆಟ ಆಡಿ ನಕ್ಕು ನಾವು ವಾಪಸ್ಸು ಬಂದೆವು.
ಮನೆ ತಲುಪಿದಾಗ ಇವನು ಕಾಯುತ್ತಿದ್ದ. ಅವನ ಬೀಗದ ಕೈ ಒಳಗೇ ಇಟ್ಟುಬಿಟ್ಟಿದ್ದ. ಕಾಯುವುದು ಅವನಿಗೆ ತುಂಬಾ ಬೇಜಾರಿನ ಕೆಲಸ. ನಾವು ಬೇರೆ ಆರಾಮವಾಗಿ ತಡವಾಗಿ ಬಂದಿದ್ವಿ. ಒಳಗೆ ಬಂದ ಕೂಡಲೇ ಸಿಕ್ಕಾಪಟ್ಟೆ ಬೈಯಲು ಶುರು ಮಾಡಿದ. ನಾನು ಸ್ವಲ್ಪ ಹೊತ್ತು ಅದನ್ನು ಅಲಕ್ಷಿಸಿದೆ. ಎಷ್ಟು ಹೊತ್ತಾದರೂ ಬೈಗಳ ನಿಲ್ಲಲೇ ಇಲ್ಲ. ನಾನು ಚಪಾತಿ ಪಲ್ಯ ಮಾಡಿ ಸಾಲಾಡ್ ಮಾಡಿ ತಟ್ಟೆಯಲ್ಲಿಟ್ಟು ಕೊಡಲು ಹೋದೆ. ಅವನು ತಟ್ಟೆಯನ್ನು ಎತ್ತಿಕೊಂಡು ಫಳಾರನೆ ಗೋಡೆಗೆ ಬೀಸಿದ. ಅದು ಗೋಡೆಗೆ ಬಡಿದು ಬೌನ್ಸ್ ಆಗಿ ನನ್ನ ಕಾಲಿನ ಹತ್ತಿರ ಬಿತ್ತು. ನಾನು ಏನೂ ಮಾತಾಡದೇ ಚೆಲ್ಲಾಪಿಲ್ಲಿಯಾಗಿ ಹರಡಿದ ಚಪಾತಿ ಪಲ್ಯವನ್ನು ಬಾಚಿ ತೆಗೆಯತೊಡಗಿದೆ. ಇದೆಲ್ಲ ಕನಸಿನಲ್ಲಿ ನಡೆಯುತ್ತಿದೆ. ಎನ್ನುವಂತೆ ಸ್ವಲ್ಪ ಕೂಡ ಪ್ರತಿಕ್ರಿಯಿಸದೇ ಕಲ್ಲಾಗಿದ್ದೆ. ಅವನಿಗೆ ಇನ್ನೂ ಕೋಪ ಬಂತು. ನನ್ನ ಕತ್ತಿನ ಸುತ್ತ ಬೆರಳು ಬಿಗಿದು ಅಮುಕತೊಡಗಿದ. ಬಿಡಿಸಿಕೊಳ್ಳಲು ನಾನು ಒದ್ದಾಡಿದೆ. ಆಗಲಿಲ್ಲ. ಹೇಗೋ ಬಗ್ಗಿ ಅವನ ತೋಳಿಗೆ ಬಲವಾಗಿ ಕಚ್ಚಿದೆ. ಕಿರುಚಿ ಅವನು ಕೈಬಿಟ್ಟ. ನನ್ನ ತಾಳ್ಮೆ ಅಲ್ಲಿಗೆ ಮುಗಿದಿತ್ತು. ನಾನೂ ಜೋರಾಗಿ ಬೈದು ಕಿರುಚಲು ತೊಡಗಿದೆ. ಅವನು ನನ್ನ ಕತ್ತು ಹಿಡಿದು ದಢದಢನೆ ಹೊರಗೆ ಎಳೆದುಕೊಂಡು ಹೋಗಿ ತಳ್ಳಿ ಬಾಗಿಲು ಮುಚ್ಚಿದ.
ಆಮೇಲೆ ಎಷ್ಟು ಹೊತ್ತಾದರೂ ಬಾಗಿಲು ತೆಗೆಯಲಿಲ್ಲ. ನಾನು ಹಾಗೇ ಟೆರೇಸಿನಲ್ಲಿ ಮಲಗಿಕೊಂಡೆ. ವಿಪರೀತ ಸೊಳ್ಳೆ ಕಚ್ಚುತ್ತಿತ್ತು. ಎಷ್ಟು ಒಂಟಿ ಅನ್ನಿಸಿ ದುಃಖ ಉಕ್ಕಿ ಸುಮಾರು ಹೊತ್ತು ಅತ್ತ ಮೇಲೆ ಮನಸ್ಸಿಗೆ ಸಮಾಧಾನವಾಗಿ ಅಥವಾ ಸುಸ್ತಾಗಿ ಹಾಗೇ ನಿದ್ದೆ ಮಾಡಿದೆ.
ಮಾರನೆಯ ಬೆಳಿಗ್ಗೆ ಆಫೀಸಿಗೆ ಹೋಗದೇ ಮಕ್ಕಳನ್ನು ಕರೆದುಕೊಂಡು ಸೂಟ್‌ಕೇಸ್‌ನಲ್ಲಿ ಒಂದಷ್ಟು ಬಟ್ಟೆ ಪ್ಯಾಕ್ ಮಾಡಿಕೊಂಡು ನಮ್ಮಕ್ಕನ ಮನೆಗೆ ಹೊರಟು ಹೋದೆ. ಮೂರು ದಿನ ಮನೆಗೂ ಬರಲಿಲ್ಲ. ಫೋನೂ ಮಾಡಲಿಲ್ಲ.
ಆತನು ನನ್ನ ಅತ್ತಿಗೆ, ಅಕ್ಕಂದಿರ ಮನೆಗೆಲ್ಲ ಫೋನ್ ಮಾಡಿದ್ದ. ನಾನು ಅಲ್ಲಿರುವುದು ಗೊತ್ತಾದ ತಕ್ಷಣ ಪೋನ್ ಮಾಡಿ ’ತಕ್ಷಣ ಮನೆಗೆ ಬಾ ಇಲ್ಲದಿದ್ದರೆ ಬರಲೇ ಬೇಡಾ’ ಅಂದ.
ನಾನು ಆತನಿಗೆ ಬುದ್ದಿ ಕಲಿಸಬೇಕು ಅಂತ ನಿರ್ಧರಿಸಿ ’ಏನು ಮಾಡಿದರೂ ಬರಲ್ಲ’ ಅಂದು ಬಿಟ್ಟೆ. ಆದರೆ ನನ್ನ ಮನಸ್ಸಿನಲ್ಲಿ ವಿಪರೀತ ಭಯ ಇತ್ತು. ರಾತ್ರಿಯಾಗುವ ಹೊತ್ತಿಗೆ ಭೇದಿಯಾಗುವಷ್ಟು ಭಯ ಆವರಿಸಿತ್ತು.
ರಾತ್ರಿ ಅವನು ಕುಡಿದು ಬಂದು ಮತ್ತೆ ಮತ್ತೆ ಫೋನ್ ಮಾಡತೊಡಗಿದ. ಅವನು ’ಬಾ’ ಎನ್ನುವುದು ನಾನು ’ಬರಲ್ಲ’ ಎನ್ನುವುದು. ಕೊನೆಗೆ ಒಂದು ಸಲ ನಮ್ಮ ಭಾವ ಫೋನ್ ಎತ್ತಿಕೊಂಡು ’ಅವಳು ಬರಲ್ಲ ಏನು ಮಾಡ್ಕೋತೀಯೋ ಮಾಡ್ಕೋ’ ಅಂದುಬಿಟ್ಟರು. ಅವನು ಫೋನಿಟ್ಟುಬಿಟ್ಟ. ಅದಾಗಿ ಹದಿನೈದು ನಿಮಿಷಗಳಲಿ ಹೊರಗೆ ಸದ್ದಾಯಿತು.
ಅವನು ನನ್ನ ಮತ್ತು ಮಕ್ಕಳ ಬಟ್ಟೆ ಸಾಮಾನುಗಳನ್ನು ಗಂಟು ಕಟ್ಟಿಕೊಂಡು ಬಂದು ನಮ್ಮಕ್ಕನ ಮನೆ ಎದುರಿಗೆ ರಸ್ತೆಯಲ್ಲಿ ಬಿಸಾಕಿ ಹೊರಟುಹೋದ. ಎರಡು ಮೂರು ಸಲ ಬಂದು ಎಲ್ಲವನ್ನೂ ಬಿಸಾಕಿ ಕೊನೆಗೆ ಗಟ್ಟಿಯಾಗಿ ಕೂಗಿ ಕಿರುಚಿ ಗಲಾಟೆ ಮಾಡಿ ಹೋದ.
ನಾನು ಏನು ಮಾಡಬೇಕೋ ಗೊತ್ತಾಗದೆ ಭಯದಲ್ಲಿ ಥರಥರ ನಡುತ್ತಿದ್ದೆ. ಅದಾಗಿ ಅರ್ಧ ಗಂಟೆಗೆ ಮತ್ತೆ ಫೋನ್ ಬಂತು. ನಾವು ಪೊಲೀಸರಿಗೆ ಹೇಳುವುದೋ ಏನು ಎಂದು ಯೋಚಿಸುತ್ತಿದ್ದೆವು. ಪೋನ್ ಉತ್ತರಿಸಿದ ತಕ್ಷಣ ಅವನು ’ಈಗ ಬರ‍್ತೀಯೋ ಇಲ್ಲ ಕೊಂದು ಹಾಕಲೋ’ ಅಂದ. ನಾನು ’ಏನಾದರೂ ಮಾಡಿಕೋ’ ಅಂದುಬಿಟ್ಟೆ. ಫೋನ್ ಇಟ್ಟ ಸರಿಯಾಗಿ ಹತ್ತು ನಿಮಿಷದ ನಂತರ ಬೆಲ್ ಆಯಿತು.
ನಮ್ಮ ಭಾವ ಬಾಗಿಲು ತೆರೆದರು. ಚಕ್ಕೆಂದು ಒಂದು ಮಚ್ಚುಕತ್ತಿ ಬೀಸಿತು. ಅವರು ಸರಕ್ಕನೆ ಪಕ್ಕಕ್ಕೆ ತಿರುಗಿದರೂ ಕೈಗೆ ತಗುಲಿತು. ಸಣ್ಣಗೆ ಉದ್ದಕ್ಕೂ ಗೀರಿತು. ಅವನು ಮಚ್ಚು ಎತ್ತಿಕೊಂಡು ಬಂದಿದ್ದ ನನ್ನನ್ನು ಕೊಲ್ಲಲು, ಕುಡಿದಿದ್ದ. ಆರು ಜನ ಸೇರಿ ಎಲ್ಲ ಬಲ ಹಾಕಿ ಹಿಡಿಯಬೇಕಾಯಿತು. ಮಚ್ಚು ಕಿತ್ತು ಕೊಂಡು ನಮ್ಮ ಭಾವ ದೂರಕ್ಕೆ ಎಸೆದುಬಿಟ್ಟರು.
’ಇಂತಹ ಹೆಂಡತಿ ನನಗೆ ಬೇಡಾ; ಡೈವೋರ್ಸ್ ಬೇಕು’ ಅಂತ ಹಠ ಹಿಡಿದ ಅವನು.
’ಎಂತಹ ಹೆಂಡತಿ?’ ಎಂದು ಕೇಳಿದ್ದಕ್ಕೆ ಅವನು ಕೊಟ್ಟ ಉತ್ತರ- ’ಪಕ್ಕದ ಮನೆಯಲ್ಲಿ ಕೀ ಕೊಟ್ಟು ಹೋಗಬೇಕಾಗಿತ್ತು. ಹಾಗೇ ಯಾಕೆ ಹೋದಳು?’ ಅದಕ್ಕೇ ಈ ಶಿಕ್ಷೆ’
’ಸರಿ ನಾಳೆ ಬೆಳಿಗ್ಗೆ ಬಾ ಡೈವೋರ್ಸ್ ಪ್ರೊಸೀಜರ್ ಪ್ರಾರಂಭಿಸೋಣ’ ಅಂತ ಹೇಳಿ ಸಮಾಧಾನ ಮಾಡಿ ಅವನನ್ನು ಕಳಿಸಿಬಿಟ್ಟರು.
ಇಡೀ ರಾತ್ರಿ ನಾವು ಯಾರೂ ನಿದ್ದೆ ಮಾಡಲಿಲ್ಲ. ನನ್ನ ಇಬ್ಬರು ದೊಡ್ಡಕ್ಕಂದಿರು ಮತ್ತು ಇಬ್ಬರು ಭಾವ ನನ್ನನ್ನು ಚೆನ್ನಾಗಿ ಬೈದರು. ’ಹೋಗಿ ಹೋಗಿ ಇಂತಾ ಕಚಡಾ ಮನುಷ್ಯನನ್ನು ಮದುವೆ ಮಾಡಿಕೊಂಡೆಯಲ್ಲಾ’ ಅಂತ ಅವರ ದೂರು.
ನಾನಂದೆ ’ಅಲ್ಲಕ್ಕಾ, ನನಗೆ ಅವನ ಬಗ್ಗೆ ಪ್ರೀತಿ ಇದೆ. ಏನೋ ಅವ ಸ್ವಭಾವ ಸರಿಯಾಗಿಲ್ಲದಿದ್ದರೆ ಅವನನ್ನು ತಿದ್ದಿ ಸರಿದಾರಿಗೆ ತನ್ನಿ. ಅದು ಬಿಟ್ಟು, ಬಿಟ್ಟುಬಿಡು ಅಂತ ಹೇಳ್ತಿದ್ದೀರಲ್ಲಾ?!’
ಆದರೆ ಆ ರಾತ್ರಿ ನನ್ನ ಮನಸ್ಸು ಒಂದು ರೀತಿಯಲ್ಲಿ ಸುಟ್ಟು ಹೋಯಿತು. ಮಾರನೆಯ ದಿನ ನಾನು ಆಫೀಸಿಗೆ ಹೋಗಲು ಸಿದ್ದಳಾಗುತ್ತಿದ್ದೆ. ಫೋನ್ ರಿಂಗಾಯಿತು. ಭಾವ ತೆಗೆದುಕೊಂಡರು. ಸುಮಾರು ಹೊತ್ತು ಕೇಳಿಸಿಕೊಂಡು ’ಸರಿ ಬಾ’ ಎಂದರು.
ನಂತರ ನನ್ನ ಬಳಿಗೆ ಬಂದು ’ನಿನ್ನ ಗಂಡ ಫೋನ್ ಮಾಡಿದ್ದ. ಅವನು ರಾತ್ರಿ ಕುಡಿದಿದ್ದರಿಂದ ಏನು ಮಾಡ್ತಿದ್ದೀನಿ ಅಂತ ಗೊತ್ತಾಗಲಿಲ್ಲವಂತೆ. ಈಗ ಸಾರಿ ಹೇಳ್ತಿದ್ದಾನೆ. ಇನ್ನು ಮೇಲೆ ಕುಡಿಯಲ್ಲವಂತೆ, ಹೀಗಾಡಲ್ಲವಂತೆ. ಮಾತಾಡಲು ಬರ‍್ತಾನಂತೆ’ ಎಂದರು.
’ಬರಲಿ’ ಎಂದೆ ನಾನು.
ಬಂದ. ಸಾರಿ ಕೇಳಿದ. ಅವನ ವಾದ ಬಹಳ ವಿಚಿತ್ರವಾಗಿತ್ತು.
’ನೋಡು, ನೀನು ನನಗೆ ಪ್ರಿಯವಾಗುವ ಹಾಗಿದ್ದರೆ ನಾನು ಹೀಗೆಲ್ಲಾ ಆಡ್ತೀನಾ? ನೀನ್ಯಾಕೆ ಪತ್ರಿಕೆಗಳಿಗೆ ಬರೀಬೇಕು? ಯಾಕೆ ನಾಟಕದಲ್ಲಿ ಪಾರ್ಟ್ ಮಾಡಬೇಕು? ಸಿನಿಮಾದವರನ್ನು ಯಾಕೆ ಸಂದರ್ಶನ ಮಾಡಬೇಕು? ಸುಮ್ಮನೆ ಬೇರೆ ಎಲ್ಲ ಹೆಂಗಸರ ಹಾಗೆ ಆಫೀಸಿಗೆ ಹೋಗಿ ಬಂದು ಮನೆಯಲ್ಲಿ ಇದ್ದರೆ ನಾನು ಹೀಗಾಡ್ತೀನಾ? ನನಗೆ ಕೋಪ ಬಂದರೆ ಮಾತ್ರ ಹಾಗಾಡ್ತೀನಿ. ನನಗೆ ಕೋಪ ಬರಿಸದ ಹಾಗೆ ನೋಡಿಕೊಳ್ಳುವುದು ನಿನಗೆ ಬಿಟ್ಟಿದ್ದು. ಅದು ನಿನ್ನ ಜವಾಬ್ದಾರಿ ಕೂಡಾ. ನನ್ನನ್ನು ನೀನು ನೋಡಿಕೊಳ್ಳಬೇಕು....’
-ಹೀಗೆ
ಎಲ್ಲ ಕೇಳಿಸಿಕೊಂಡ ಮೇಲೆ ನಾನಂದೆ.
’ನಾನು ಹತ್ತು ದಿನಗಳ ಕಾಲ ಎಲ್ಲಿಗಾದರೂ ಟೂರ್ ಹೋಗ್ತೀನಿ. ನೀನು ಮಕ್ಕಳನ್ನು ನೋಡಿಕೊಂಡು ಇರು’
ಅವನು ’ಸರಿ’ ಎಂದು ಒಪ್ಪಿಕೊಂಡ.
ನಾನು ತಕ್ಷಣ ಬಸ್ ಹತ್ತಿ ಮುಂಬೈಗೆ ಹೊರಟು ಹೋದೆ. ಅಲ್ಲಿ ಜಯಂತನ ಮನೆಯಲ್ಲಿ ಮೂರು ದಿನ ಇದ್ದೆ. ಅಲ್ಲಿಂದ ಮಂಗಳೂರಿಗೆ ಹೋಗಿ ನಮ್ಮ ಪ್ರೊಫೆಸರರನ್ನು ನೋಡಲು ಹೋದೆ. ಅವರ ಜೊತೆ ಎರಡು ದಿನ ಇದ್ದೆ.
ಐದು ದಿನಗಳನ್ನು ಕಳೆಯುವಷ್ಟರಲ್ಲಿ ಮಕ್ಕಳನ್ನು ಬಿಟ್ಟಿರುವುದು ತುಂಬಾ ಕಷ್ಟ ಅನ್ನಿಸತೊಡಗಿತು. ತಕ್ಷಣ ಬಸ್ ಹತ್ತಿ ಬೆಂಗಳೂರಿಗೆ ವಾಪಸಾದೆ.
ನಾನು ಮೆಜೆಸ್ಟಿಕ್ ತಲುಪಿದಾಗ ಸಂಜೆ ಐದು. ತಕ್ಷಣ ಆಟೋ ಮಾಡಿಕೊಂಡು ಮನೆಗೆ ಬಂದೆ. ಮಕ್ಕಳು ಸ್ಕೂಲಿನಿಂದ ಬಂದಿದ್ದರು. ಅವನು ಅವರಿಗಾಗಿ ಅದ್ಬುತವಾದ ಪ್ರೂಟ್ ಸಾಲಾಡ್ ಮಾಡಿದ್ದ. ಕ್ಯಾರೆಟ್ ಹಲ್ವಾ ಮಾಡಿದ್ದ. ತರಕಾರಿ ಹಾಕಿ ಉಪ್ಪಿಟ್ಟು ಮಾಡಿದ್ದ. ಹೊರಗೆ ಬಾಲ್ಕನಿಯಲ್ಲಿ ಮಕ್ಕಳನ್ನು ಕೂರಿಸಿಕೊಂಡು ಅವರಿಗೆ ಕತೆ ಹೇಳುತ್ತಾ ತಿನ್ನಿಸುತ್ತಿದ್ದ. ನಾನು ಮೆಟ್ಟಿಲು ಹತ್ತುವಾಗಲೇ ಅವರ ಕೇಕೆ ನಗು ಕೇಳಿಸಿತ್ತು.
ನಾನು ಸೀದಾ ಒಳಗೆ ಬಂದೆ. ಕೈ ಕಾಲು ಕೂಡಾ ತೊಳೆಯದೇ ಕುರ್ಚಿಯಲ್ಲಿ ಕೂತೆ. ಮಕ್ಕಳು ಬಂದು ನನ್ನ ತೊಡೆ ಮೇಲೆ ಕೂತರು.
ಅವನು ಒಳಗೆ ಹೋಗಿ ನನಗಾಗಿ ಬಿಸಿಬಿಸಿ ಕಾಫಿ ಮಾಡಿಕೊಂಡು ಬಂದು ಕೊಟ್ಟ.
(ಅನುದಿನದ ಅಂತರಗಂಗೆ, ಲೇ: ಪ್ರತಿಭಾ ನಂದಕುಮಾರ್, ಪ್ರ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ, ಬೆಲೆ: ರೂ. 200. ಫೋನ್: 94491 74662)