ಮೇ ೨೩, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಲಂಕೇಶರ ಬೆನ್ನುಹತ್ತಿದ ರೋಹಿತ್ ಎಮ್ಮೆ ಕಳಕೊಂಡ ಪ್ರಸಂಗವು    
ರೋಹಿತ್ ಕೆ.
ಬುಧವಾರ, 23 ಮೇ 2012 (04:19 IST)
ಲಂಕೇಶ್

ಆ ಊರಿನ ಹೆಸರು ಕ್ಯಾತನಹಳ್ಳಿ. ಪಾಂಡವಪುರ ತಾಲೂಕಿನ ಸುಮಾರು ದೊಡ್ಡದೇ ಆದ ಊರು. ಕಾವೇರಿ ವರಪ್ರಸಾದವಾದ ಆ ಊರಿನಲ್ಲಿ ಸುಮಾರು ಹದಿಮೂರು ವರುಷದ ಹುಡುಗನೊಬ್ಬನಿಗೆ ಓದುವ ಗೀಳು. ಸಿಕ್ಕಿದ್ದನ್ನು ಅರಿಯುವ ಬಯಕೆ. ಆದರೆ ಪಠ್ಯದ ವಿಜ್ಞಾನ ಮತ್ತು ಗಣಿತ ಬಿಟ್ಟು! ತೊಂಬತ್ತರ ದಶಕದ ಪ್ರಾರಂಭದ ವರ್ಷವದು. ಬಾಬ್ರಿ ಮಸ್ಜಿದ್ ಇನ್ನೂ ನೆಲಸಮವಾಗಿರಲಿಲ್ಲ. ಪಂಚಾಯ್ತಿ ಲೈಬ್ರರಿಯಲ್ಲಿ ಕೆಲವು ದಿನಪತ್ರಿಕೆಗಳೂ ಮತ್ತು ನಿಯತಕಾಲಿಕೆಗಳೂ ಸಿಗುತ್ತಿದ್ದವು. ಆ ಗ್ರಂಥಾಲಯಕ್ಕೆ ಭಾನುವಾರ ಕೆಲಸದ ದಿನ; ಸೋಮವಾರ ವಾರದರಜೆ. ಪ್ರತೀ ಭಾನುವಾರ ಎಮ್ಮೆ ಬಿಟ್ಟುಕೊಂಡು ತೋಟಕ್ಕೆ ಹೋಗುವ ದಾರಿಯಲ್ಲಿ ಸಿಗುವ ಗ್ರಂಥಾಲಯದಲ್ಲಿ ಹೇಗಾದರು ಮಾಡಿ ಲಂಕೇಶ್ ಪತ್ರಿಕೆಯ ಮೇಲೆ ಹತ್ತದಿನೈದು ನಿಮಿಷವಾದರೂ ಕಣ್ಣಾಡಿಸಿ ಬರುವಾಸೆ. ಎಮ್ಮೆಯನ್ನು ದಾರಿಯಲ್ಲೇ ಬಿಟ್ಟು ಹೀಗೆ ಕದ್ದು ಓದುವ ಅಭ್ಯಾಸ ಬಹಳಕಾಲ ನಿರ್ವಿಘ್ನವಾಗಿ ನಡೆದಿತ್ತು. ಪ್ರತೀ ಭಾನುವಾರದಂತೇ ಅಂದೂ ಗ್ರಂಥಾಲಯಕ್ಕೆ ಲಗ್ಗೆ ಇಟ್ಟ ಆತ ಲಂಕೇಶ್ ತಲಾಶ್‌ನಲ್ಲಿಯೇ ಹತ್ತಾರು ನಿಮಿಷ ಕಳೆದ. ನಂತರ ಸಿಕ್ಕ ಪತ್ರಿಕೆಯನ್ನು ಎಷ್ಟೇ ಬೇಗ ಬೇಗ ಓದಿದರೂ ಸದ್ದಿಲ್ಲದೇ ಅರ್ಧಗಂಟೆ ಜಾರಿತ್ತು. ಲಗುಬಗನೆ ಹೊರಬಂದು ಮಹಿಶಿಯನ್ನು ನೋಡಿದರೆ ಕಣ್ಣಿಗೆ ಕಾಣಬಾರದೆ? ಅದು ಅವನಿಗೆ ನೆಂಟರ ಊರಾದ್ದರಿಂದ ಅಂಗೈ ರೇಖೆಯಷ್ಟೇನೂ ಪರಿಚಿತವೂ ಅಲ್ಲ. ಇಲ್ಲೇ ಹತ್ತಿರದಲ್ಲೆಲ್ಲೋ ಮೇಯುತ್ತಿರಬೇಕು ಎಂಬ ಭಂಡಧೈರ್ಯದೊಂದಿಗೆ ಹುಡುಕುತ್ತಾ ತೋಟವನ್ನೂ ತಲುಪಿದ್ದಾಯ್ತು. ಎಮ್ಮೆಯಂತೂ ಪತ್ತೆಯಾಗಲಿಲ್ಲ. ಅದುವರೆಗೆ ಗಟ್ಟಿಯಾಗಿದ್ದ ಗುಂಡಿಗೆ ಒಂದೇ ಸಮನೆ ತನ್ನ ಸದ್ದನ್ನು ಹೆಚ್ಚಿಸಿತು. ಮುಂದಿನ ಅರ್ಧಗಂಟೆಯಲ್ಲಿ ಇಡೀ ಬೇವಿನಮರದ ಬೀದಿಯವರಿಗೆಲ್ಲಾ ತಿಳಿದಾಗಿತ್ತು; ಕಿವುಡು ಲಕ್ಷಯ್ಯನ್ ದ್ಯಾವಪ್ಪನ ಮನೆ ಎಮ್ಮೆ ತಪ್ಪಿಸ್ಕೊಂಡದೆ ಅಂತ. ಅದನ್ನು ಕಷ್ಟಪಟ್ಟು ಕಳೆದಿದ್ದ ಮಹಾನುಭಾವ ನಾನೇ ಆಗಿದ್ದೆ. ಅಜ್ಜಿ ತಾತರ ರಕ್ಷಣೆಯಲ್ಲಿ ಶ್ಲೇಷ್ಮೋತ್ಪಾದನೆಯಲ್ಲಿ ನಿರತನಾಗಿದ್ದು ಎರಡೂ ಬದಿಯ ಅಂಗಿ ತೋಳುಗಳನ್ನು ಗೊಣ್ಣೆಮಿಶ್ರಿತ ಕಣ್ಣೀರಿನಿಂದ ತೋಯ್ಸಿಕೊಂಡಿದ್ದೆ. ಆ ಕಾಲಕ್ಕೆ ನನಗೆ ಗೊತ್ತಿದ್ದ ಬೈಗುಳಗಳಷ್ಟನ್ನೂ ಮನದಲ್ಲೇ ಆ ಎಮ್ಮೆಯ ಮೇಲೆ ಪ್ರಯೋಗಿಸಿದ್ದೆ. ಅವುಗಳಲ್ಲಿ ಕೆಲವನ್ನು ಹೇಳಿದರೂ ನಿಮ್ಮ ಓದು ಈ ಸಾಲಿಗೇ ಕೊನೆಯಾದೀತೆಂಬ ಭಯ ನನಗೆ. ಅಂತೂ ನಮ್ಮೆಮ್ಮೆ ಸಂಜೆ ಆರರ ಹೊತ್ತಿಗೆ ಪತ್ತೆಯಾಯ್ತು. ನಾನು ಅಜ್ಜಿ ಹುಡುಕಿದ ಕಡೆಯೇ ಸಿಕ್ಕಿತೆನ್ನಿ. ನನಗಿಂದಿಗೂ ಬಗೆಹರಿಯದ ಸಮಸ್ಯೆ ಎಂದರೆ ನಾನು ಎಮ್ಮೆ ಮೇಯಲು ಬಿಟ್ಟ ಜಾಗಕ್ಕೂ ಎಮ್ಮೆ ನಮಗೆ ಸಿಕ್ಕ ಜಾಗಕ್ಕೂ ಬಹಳೇ ಅಂತರವಿತ್ತು. ಎಮ್ಮೆ ಅಲ್ಲಿಗೆ ತಾನಾಗಿ ಹೋಗಿರುವ ಸಂಭವ ಕಡಿಮೆ. ಎಮ್ಮೆ ಪುರಾಣ ಒತ್ತಟ್ಟಿಗಿರಲಿ. ಅಂದು ನಾನು ಲಂಕೇಶರ ಪ್ರೇಮಪಾಶದಿಂದಾಗಿ ಅನುಭವಿಸಬೇಕಾಗಿ ಬಂದ ಫಜೀತಿಯ ಪ್ರಸಂಗವದು.

ಆ ಕಾಲಕ್ಕೆ ನನಗೆ ಲಂಕೇಶರಾಗಲಿ, ಅವರ ಪತ್ರಿಕೆಯ ಕುರಿತಾಗಲಿ ಏನೇನೂ ತಿಳಿದಿರಲಿಲ್ಲ. ಸಿಕ್ಕದ್ದನ್ನೆಲ್ಲಾ ಓದುವ ಗೀಳಿನಿಂದ ಗ್ರಂಥಾಲಯಕ್ಕೆ ಹೋಗುವಾಗ ಅದು ನನ್ನ ಕಣ್ಣಿಗೆ ಬಿದ್ದಿರಬೇಕಷ್ಟೆ. ನನ್ನ ನೆನಪು ಕೈಕೊಟ್ಟಿಲ್ಲವೆಂದು ಭಾವಿಸುವುದಾದರೆ, ಪ್ರಾರಂಭದಲ್ಲಿ ಪತ್ರಿಕೆಯ ಕಡೆಯ ಪುಟವನ್ನಷ್ಟೇ ಓದುತ್ತಿದ್ದೆ. ಈ ನಡುವೆ ಅದೇ ಗ್ರಂಥಾಲಯದಲ್ಲಿ ಆಗಷ್ಟೇ ಪ್ರಚಾರಕ್ಕೆ ಬರುತ್ತಿದ್ದ ರಾಮಮಂದಿರ, ಕಾಶ್ಮೀರ, ರಾಷ್ಟ್ರೀಯತೆ, ದೇಶಭಕ್ತಿ, ರಾಷ್ಟ್ರಧ್ವಜ ಕುರಿತಂತೆ ಹಲವಾರು ಚರ್ಚೆಗಳನ್ನು ಆಯಾಚಿತವಾಗಿ ಕೇಳಿಸಿಕೊಂಡಿದ್ದೆ. ಸ್ಪಷ್ಟವಾಗಿ ನೆನಪಿರುವಂತೆ ಬೆಕ್ಕಿನ ಕಣ್ಣಿನ ಕಟ್ಟುಮಸ್ತಾದ ಯುವಕನೊಬ್ಬ ಅದ್ವಾನಿಯವರೇ ಭಾರತದ ಗಂಡಸು; ಅವರಾಗಿದ್ದಕ್ಕೆ ೧೯೪೭ರ ನಂತರ ಮೊದಲಬಾರಿಗೆ ಕಾಶ್ಮೀರದಲ್ಲಿ ಬಾವುಟ ಹಾರಿಸಿ ಬಂದಿದ್ದಾರೆಂದು ಬಹಳೇ ಪ್ರಭಾವಶಾಲಿಯಾಗಿ ಹೇಳುತ್ತಿದ್ದ. ಅದನ್ನ ಕೇಳಿದಾಗ ನನಗೂ ದೇಶಪ್ರೇಮ ಉಕ್ಕಿ ಬಂದಿತ್ತು. ನಮ್ಮ ದೇಶವಾದ ಕಾಶ್ಮೀರದಲ್ಲಿ ನಮ್ಮ ಬಾವುಟ ಹಾರಲಿಲ್ಲವೆಂದರೆ ಸುಮ್ಮಲಿರಲಾದೀತೆ ಎಂದುಕೊಂಡೆ. ಅವನ ಭಾಷಣದ ನಾಲ್ಕಾರು ನನ್ನದೇ ಅವತರಣಿಕೆಗಳನ್ನು ಸಹಪಾಠಿಗಳಿಗೆ ಹೇಳಿ ಎಲ್ಲ ಬಲ್ಲವನಂತೆ ಫೋಜು ಕೊಟ್ಟದ್ದೂ ಉಂಟು.

ನಾನಿದ್ದ ಆ ಊರಿನಲ್ಲಿ ಒಕ್ಕಲಿಗರಾದಿಯಾಗಿ ಎಲ್ಲ ಜಾತಿ, ಧರ್ಮಗಳ ಜನರೂ ಇದ್ದರು. ನಾನಿದುವರೆಗೆ ಕಂಡಂತೆ ಬೇಸಾಯ ಮಾಡುವ ಸಾಬರನ್ನು ನೋಡಿದ್ದು ಮೊದಲು ಅದೇ ಊರಲ್ಲಿ. ಹಲವಾರು ಪೀಳಿಗೆಯಿಂದ ಎಲ್ಲರೂ ಎಲ್ಲರೊಂದಿಗೂ ಬೆರೆತಿದ್ದರಿಂದಾಗಿ ಅಲ್ಲಿ ಮುಸಲ್ಮಾನರ ಪ್ರತ್ಯೇಕ ಕೇರಿಯೇನಿರಲಿಲ್ಲ. ಅಯೋಧ್ಯೆಯ ರಾಮಜನ್ಮಭೂಮಿ ಚಳವಳಿ ಹುತ್ತಗಟ್ಟುತ್ತಿದ್ದ ಕಾಲವದು. ಯಾವ್ಯಾವದೋ ಚಪ್ಪಲಿ, ಕಿರೀಟ, ಇಟ್ಟಿಗೆ ಮೆರವಣಿಗೆಗಳೆಲ್ಲ ಸಾಲಾಗಿ ನಡೆದವು. ಅದುವರೆಗೆ ಕಾವೇರಿ ಮುಷ್ಕರ ಮಾತ್ರ ಕಂಡಿದ್ದ ನಾವು ರಜೆಗಳ ಬೋನಸ್‌ನಿಂದ ಹಿಗ್ಗಿದ್ದೆವು. ಅಂತೂ ಇಂತೂ ಅಯೋಧ್ಯೆಯ ಮಸೀದಿಯನ್ನು ಒಡದೇಬಿಟ್ಟರು. ಅದನ್ನು ವಿಡಿಯೋ ಕ್ಯಾಸೆಟ್ ಮಾಡಿ ಹಂಚಿದ್ದರಂತೆ. ಆಗಿನ್ನೂ ಟಿವಿಗಳು ವಿರಳ. ಯಾರ‍್ಯಾರದೋ ಮನೆಗಳಲ್ಲಿ ಗುಟ್ಟಾಗಿ ಅದರ ಪ್ರದರ್ಶನ ನಡೆದಾಗ ನಂತರ ನಮಗೆ ತಿಳಿಯುತ್ತಿತ್ತು. ನಾವು ನೋಡಲಾಗಲಿಲ್ಲವೆಂದು ಕೈ ಕೈ ಹಿಸುಕಿಕೊಂಡಿದ್ದೆವು. ಈ ಗಲಾಟೆಗಳೆಲ್ಲ ಮುಗಿಯುವ ವೇಳೆಗೆ ನಾನು ಲಂಕೇಶ್ ಪತ್ರಿಕೆಯ ಹಿಂಪುಟದಿಂದ ಒಳಪುಟಗಳಿಗೆ ಭಡ್ತಿ ಪಡೆದುಕೊಂಡಿದ್ದೆ. ಪತ್ರಿಕೆಯ ಧೋರಣೆ ನನ್ನ ಅಂದಿನ ಆಲೋಚನೆಗೆ ಅತೀ ದೂರದಲ್ಲಿದ್ದರಿಂದ ಒಪ್ಪಿಗೆಯಾಯ್ತೋ, ಅರ್ಥವಾಯ್ತೋ ತಿಳಿಯದು, ಆದರೆ ಓದಿಸಿಕೊಳ್ಳುತ್ತಿತ್ತು. ಕಾಲಸರಿದಂತೆ ಪತ್ರಿಕೆಯ ವಿಚಾರಗಳು ನನ್ನಲ್ಲಿಳಿಯುತ್ತಾ ಬಂದವು. ಲಂಕೇಶ್ ಅವರ ಟೀಕೆ-ಟಿಪ್ಪಣಿ ಮತ್ತು ಮರೆಯುವ ಮುನ್ನದ ಪುಟ್ಟ ಟಿಪ್ಪಣಿಗಳು ದಾರಿತೋರುತ್ತಾ ಬಂದವು. ಓದಲು ಪ್ರಾರಂಭಿಸಿದ ಎರಡೇ ವರ್ಷಗಳಲ್ಲೇ ಪತ್ರಿಕೆಯ ಒಂದು ಸಾಲನ್ನೂ ಬಿಡದಂತೆ ಓದಲಾರಂಭಿಸಿದೆ. ಹುಬ್ಬಳ್ಳಿಯಾಂವ ಕಾಲಂನ ಭಾಷೆ ನನಗೆ ಆಕರ್ಷಣೆಯಾಗಿತ್ತು.

ಅಂದು ನನಗೆ ಲಂಕೇಶ್‌ಪತ್ರಿಕೆಯು ನನ್ನ ಮೇಲೆ ಯಾವ ಮಟ್ಟಿನ ಪ್ರಭಾವ ಬೀರೀತೆಂಬ ಅರಿವಿರಲಿಲ್ಲ. ಚೆಡ್ಡಿಗಳ ಹಳವಂಡಗಳೆಲ್ಲ ಶುರುವಾಗುವ ಮುಂಚೆ ನಮ್ಮ ಬೀದಿಯಲ್ಲೇ ಮನೆಯಿದ್ದ ಅಮೀರ್ ಸಾಬರ ಮಗ ಹುಸೇನಿ, ಅವರ ಜಾತಿಯವರ ಮದುವೇಲಿ ಮಾಡುವ ತರತರದ ಬಾಡೂಟವನ್ನು ವರ್ಣಿಸುತ್ತಿದ್ದರೆ ಬಾಯಲ್ಲಿ ನೀರೂರುತ್ತಿತ್ತು. ಯಾಕೆಂದರೆ ಅವನು ಹೇಳುವ ಬಾಡಿನ ಲೆಕ್ಕ ಯಾವಾಗಲೂ ಕ್ವಿಂಟಾಲ್‌ಗಳಲ್ಲಿಯೇ ಇರುತ್ತಿತ್ತು. ನಾವು ಭತ್ತ ಮತ್ತು ರಾಗಿಯನ್ನು ಮಾತ್ರ ಕ್ವಿಂಟಾಲ್‌ಗಳಲ್ಲಿ ಕಲ್ಪಿಸಿಕೊಳ್ಳುತ್ತಿದ್ದೆವು. ಮದುವೆಯಲ್ಲಿ ಕರೆನೆರೆ(ಬೀಗರ ಊಟ)ಗೆ ಮಾತ್ರ ಬಾಡು ಮಾಡುತ್ತಿದ್ದ ನಾವು ಮದುವೆ ದಿನವೇ ಬಾಡು ಮಾಡುವ ಸಾಬರಿಗಿಂತ ಹಿಂದುಳಿದವರೆಂದೇ ನನ್ನ ಭಾವನೆಯಾಗಿತ್ತು. ಮುಸಲ್ಮಾನರನ್ನು ಅನ್ಯರಂತೆ ನೋಡದ ಮುಗ್ಧ ಭಾವನೆ ಆಗ ಆ ಊರಲ್ಲಿ ಸಾಬರ ಆಟೋರಿಕ್ಷಾವೊಂದನ್ನು ಸುಟ್ಟ ನಂತರವೂ; ಮತ್ತು ನನ್ನ ಪ್ರಕಾರ ಜಗತ್ತಿನ ಅತಿ ಮುಗ್ಧನಾಗಿದ್ದ ಅಮೀರ್ ಸಾಬರು ತಾವು ಟೈಲರಿಂಗ್ ಮಾಡಿ ಉಳಿಸಿದ್ದ ಹಣದಲ್ಲಿಯೇ ಕೊಂಚಪಾಲನ್ನು ಮಸೀದಿಗೆ ಹಿಂದೂಗಳ ವಿರುದ್ಧ ಹೊರಾಡಲು ಕೊಟ್ಟರಂತೆ ಎಂಬ ಸುದ್ದಿಯನ್ನು ನಮ್ಮ ಬೀದಿ ಹೆಂಗಸರ ಬಾಯಿಂದ ಕೇಳಿದ ಮೇಲೆಯೂ ಬದಲಾಗದೇ ಉಳಿದದ್ದಕ್ಕೆ ಲಂಕೇಶರೇ ನೇರ ಹೊಣೆ.

ಹೀಗೆ ಎಮ್ಮೆ ಕಳೆದುಕೊಳ್ಳುವಲ್ಲಿ ಪ್ರರಂಭವಾದ ನನ್ನ ಲಂಕೇಶರ ನಂಟು ಹಾಗೇ ಮುಂದುವರೆಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದದ್ದು ಸೆಕೆಂಡ್ ಕ್ಲಾಸಾದರೂ ಲಂಕೇಶ್‌ಪತ್ರಿಕೆಯಲ್ಲಿ ಬಂದದ್ದರ ಬಗ್ಗೆ ಕೇಳಿದ್ದರೆ ಫಸ್ಟ್‌ಕ್ಲಾಸ್ ಬರುತ್ತಿತ್ತೇನೋ? ನನ್ನ ಅಲೆಮಾರಿ ಜೀವನದ ಮುಂದಿನ ಕೊಂಡಿ ಶಿವಮೋಗ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಅಲ್ಲಿ ನಮ್ಮಣ್ಣ ಕಂದಾಯ ಇಲಾಖೆಯಲ್ಲಿ ಅಧಿಕಾರಿ. ನನ್ನ ವಾಸ್ತವ್ಯ ಅವನ ಮನೆಯಲ್ಲಿ. ಅಣ್ಣನ ಮನೆಯಲ್ಲಿ ದಿನಪತ್ರಿಕೆಯೊಂದಿಗೆ ಲಂಕೇಶ್ ಕೂಡ ಬರುತ್ತಿದ್ದರಿಂದಾಗಿ ನಂಟು ಇನ್ನೂ ಗಾಢವಾಯ್ತು. ಪತ್ರಿಕೆ ಬಂದ ದಿನವೇ ಒಂದೂ ಕಾಲಂ ಬಿಡದೆ ಓದಿಬಿಡುತ್ತಿದ್ದೆ. ಬಹುಶಃ ಆಗ ನನ್ನ ಮೆಚ್ಚಿನ ಕಾಲಂ ರೂಪಕ ಲೇಖಕರು. ನನಗದು ಪ್ರತೀವಾರದ ದಿಗ್ಭ್ರಮೆಯಾಗಿತ್ತು. ನಾನು ಹೆಸರೇ ಕೇಳಿರದ ಕಥೆಗಾರರ, ಕವಿಗಳ ಪರಿಚಯವಾಗತೊಡಗಿತ್ತು. ಅಷ್ಟೊತ್ತಿಗೆ ಲಂಕೇಶ್ ನನ್ನ ಆರಾಧ್ಯದೈವವೇ ಆಗಿಬಿಟ್ಟಿದ್ದರು. ಅಂದಿಗೆ ಲಂಕೇಶರಿಗೆ ಆಗದವರ‍್ಯಾರಾದರೂ ಬಂದು ಅವರ ದೋಷಗಳನ್ನು ನನ್ನ ಮುಂದೆ ಹೇಳಿದ್ದರೆ ಅವರಿಗೆ ಹೊಡೆದೇ ಬಿಡುತ್ತಿದ್ದೆನೋ ಏನೋ! ನನ್ನ ಅತ್ತಿಗೆ ನನ್ನ ಓದಿನ ರೀತಿ ಕಂಡು ದಿಗಿಲುಗೊಂಡಿರಬೇಕು, ಮನೆಗೆ ಲಂಕೇಶ್ ತರಿಸುವುದನ್ನೇ ನಿಲ್ಲಿಸಿಬಿಟ್ಟರು. ಎಂದಿನಂತೆ ಲಂಕೇಶ್ ಬಾರದಾಗ ಬೇಜಾರಾದರೂ ಅದನ್ನು ಎರಡೇ ದಿನಗಳಲ್ಲಿ ಪರಿಹರಿಸಿಕೊಂಡೆ ಗ್ರಂಥಾಲಯದ ಮೊರೆ ಹೋದೆ. ಆಗಿನಿಂದ ಸುಮಾರು ಐದಾರು ವರ್ಷಗಳ ಕಾಲ ನಾನು ಪತ್ರಿಕೆ ಓದಿದ್ದು ಬೇರೆ ಬೇರೆ ಊರುಗಳ ಗ್ರಂಥಾಲಯಗಳಲ್ಲಿಯೇ.

ಪದವಿ ಮುಗಿಸಿ ಸ್ನಾತಕೋತ್ತರ ಪದವಿಗೆ ಬರುವ ಹೊತ್ತಿಗೆ ಪತ್ರಿಕೆಯ ವಿಶೇಷ ಸಂಚಿಕೆಗಳನ್ನು ಕೊಂಡುಕೊಳ್ಳುವ ಅಭ್ಯಾಸ ಬೆಳೆಯಿತು. ಪುಂಡಲೀಕ ಶೇಠ್‌ರ ಸಾವಿನ ನಂತರ ಅವರ ಸ್ಧಾನಕ್ಕೆ ಬಿ.ಚಂದ್ರೇಗೌಡರು ನಿಯತವಾಗಿ ಬರೆಯಲಾರಂಭಿಸಿದರು. ನನಗೆ ರಾಜಕೀಯದ ಪ್ರಾಥಮಿಕ ಪಾಠಗಳ ಬೋಧಕರೆಂದರೆ ಜುಮ್ಮಕ್ಕ, ವಾಟಿಸ್ಸೆ, ಕಾಳಮಾವ, ಕಲಕಪ್ಪ ಮೇಷ್ಟ್ರು ಮತ್ತು ಸೀರ ಮುಂತಾದವರೇ. ‘ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’ ಮತ್ತು ಕನ್ನಡಾಭಿಮಾನಿಗಳು ಇಂಗ್ಲಿಷ್ ಫಲಕಗಳಿಗೆ ಬಣ್ಣ ಬಳಿಯುವ ಚಳವಳಿ ಕುರಿತಂತೆ ಲಂಕೇಶರು ಬರೆದ ಟಿಪ್ಪಣಿಗಳು ಮನದ ಮೂಲೆಯಲ್ಲಿ ಅಚ್ಚಳಿಯದೆ ನಿಂತಿವೆ. ಈ ನಡುವಿನ ಒಂದು ತಮಾಷೆಯ ಸಂಗತಿ ಹೇಳಲೇಬೇಕು. ಕಟ್ಟೆಪುರಾಣದ ಆಕರ್ಷಣೆ ಯಾವ ಮಟ್ಟದಲ್ಲಿತ್ತೆಂದರೆ ಪತ್ರಿಕೆ ಬಿಡಿಸುತ್ತಿದ್ದಂತೆಯೆ ಅದನ್ನೆ ಓದುತ್ತಿದ್ದೆ. ನಮ್ಮೂರ ಆಡುಭಾಷೆಯ ಮೇಲೆ ಹಿಡಿತ ಬರುವ ಮುಂಚೆಯೆ ಊರು ಬಿಟ್ಟಿದ್ದ ನಾನು ಈಗಲೂ ಸಮರ್ಥವಾಗಿ ಅದನ್ನು ಬಳಸಲಾರೆ. ನಾಗಮಂಗಲ ಸೀಮೆಯ ಚಂದ್ರೇಗೌಡರ ಭಾಷೆ ನನ್ನಲ್ಲಿ ನಗೆಯ ಬಾಂಬನ್ನೆ ಹಾಕಿದಂತಾಗುತ್ತಿತ್ತು. ಒಮ್ಮೆ ಗ್ರಂಥಾಲಯದಲ್ಲಿ ಬಹಳ ಕಷ್ಟಪಟ್ಟು ನಗೆಯನ್ನು ಬಿಗಿಹಿಡಿದು ಓದುತ್ತಿದ್ದರೂ, ಕೆಲವೊಮ್ಮೆ ಸ್ಟೌ ಆರಿಸಿದ ಮೇಲೂ ತೊಟ್ಟು ಹಾಲು ಉಕ್ಕಿ ಕೆಳಗೆ ಜಿನುಗುವಂತೆ ಫಕ್ಕನೆ ನಕ್ಕದ್ದು ಮುಜುಗರಕ್ಕೆ ಎಡೆಯಾಗಿತ್ತು. ಇಷ್ಟಿದ್ದರೂ ಬಿ.ಚಂದ್ರೇಗೌಡರು ಶಿವಮೊಗ್ಗದ ಗ್ರಂಥಾಲಯದಲ್ಲಿಯೇ ಉದ್ಯೋಗಿಯೆಂದು ಬಹಳ ದಿನ ತಿಳಿದಿರಲಿಲ್ಲ.ಚಿತ್ರ: ಹಾದಿಮನಿ

ಪತ್ರಿಕೆಯಿಂದ ನಾನು ಪಡೆದ ಅತ್ಯುತ್ತಮ ಲಾಭವೊಂದಿದೆ. ಅದು ತೇಜಸ್ವಿ. ಪೂರ್ಣಚಂದ್ರ ತೇಜಸ್ವಿ ಕುವೆಂಪು ಅವರ ಮಗ ಎಂದು ತಿಳಿದಾಗ ಮತ್ತೂ ಅಚ್ಚರಿ. ನಾನಿಲ್ಲಿ ಕೆಲವು ವಿಷಯಗಳನ್ನು ದಾಖಲಿಸುವಾಗ ಕಾಲಾನುಕ್ರಮಕ್ಕೆ ಬದ್ಧವಾಗಿಲ್ಲವೆಂಬುದು ನೆನಪಿರಲಿ, ಲಹರಿ ಹರಿದಂತೆ ಬರೆಯುತ್ತಿರುವೆ. ನಾನು ಹೈಸ್ಕೂಲು ಓದುವಾಗ ಕುವೆಂಪು ಎಂದರೆ ನಮ್ಮ ಮನೆದೇವರು ತಿರುಪತಿ ತಿಮ್ಮಪ್ಪನಷ್ಟೇ ಹತ್ತಿರ ಮತ್ತು ದೂರವೂ ಆಗಿದ್ದರು. ತೇಜಸ್ವಿ ಅವರ ಮಗನೆಂದು ತಿಳಿದಾಗ ಮತ್ತಷ್ಟು ಕೌತುಕದಿಂದ ಮನದುಂಬಿ ಅವರ ಬರವಣಿಗೆಯೊಳಗೆ ಅಂಡಲೆಯುತ್ತಿದ್ದೆ. ತೇಜಸ್ವಿ ಅವರ ಹಲವು ಕೃತಿಗಳನ್ನು ಪತ್ರಿಕೆಯಲ್ಲಿ ಓದಿದ್ದೇನೆ. ಕೆನೆತ್ ಆಂಡರ್‌ಸನ್ ಅವರ ಬರಹಗಳ ಅನುವಾದವನ್ನು ತೇಜಸ್ವಿ ಅವರ ಸ್ವಂತ ಅನುಭವಗಳೆಂದು ತಿಳಿದು ಥ್ರಿಲ್ ಆದದ್ದೆಷ್ಟು ಬಾರಿಯೋ!

ಕಾಲ ಸರಿದಂತೆ ಲಂಕೇಶರೊಂದಿಗೆಅವರ ಎದುರಾಳಿಗಳ ಪರಿಚಯವೂ ಆಗಹತ್ತಿತು. ಅವರ ಕೃತಿಗಳನ್ನು ಹುಡುಕಿ ಓದಹತ್ತಿದೆ. ನನ್ನನ್ನು ಸೆಳೆದ ಅವರ ಕೃತಿಗಳೆಂದರೆ ಸಂಕ್ರಾಂತಿ ಮತ್ತು ಕೆಲವು ಅಸಂಗತ ನಾಟಕಗಳು, ಗುಣಮುಖ, ಈಡಿಪಸ್ ಮತ್ತು ಅಂತಿಗೊನೆ ಜೊತೆಗೆ ಬೋದಿಲೇರನ ಪಾಪದ ಹೂಗಳು. ಪಾಪದ ಹೂಗಳು ಕೃತಿಯ ಮುನ್ನುಡಿ ಓದಿದಾಗ ರೂಪಕ ಲೇಖಕರು ಓದಿದಾಗಿನಂತೆ ದಿಗ್ಭ್ರಮೆಯೇ ಆಗಿತ್ತು. ಸಂಕ್ರಾಂತಿಯ ಬಸವ-ಬಿಜ್ಜಳರ ಅಲಂಕಾರರಹಿತ ಮಾತುಗಳನ್ನು ಮತ್ತೆ ಮತ್ತೆ ಓದಿ ಖುಶಿಪಡುತ್ತಿದ್ದೆ. ಇಷ್ಟಾದರೂ ಗ್ರಾಮೀಣ ಪ್ರದೇಶದಿಂದ ಬಂದು ಕೀಳರಿಮೆ ಬೆಳೆಸಿಕೊಳ್ಳುವ ಹುಡುಗನಂತೆ ಪ್ರಯತ್ನಪೂರ್ವಕವಾಗಿ ಸಂಕೋಚವನ್ನು ನಟಿಸುತ್ತಾ ಲಂಕೇಶರಿಗೆ ಕೇಳಬೇಕೆಂದಿದ್ದ ಹಲವು ಪ್ರಶ್ನೆಗಳನ್ನು ನನ್ನಲ್ಲೇ ಬಚ್ಚಿಟ್ಟುಕೊಂಡೆ. ಎಂದೂ ಲಂಕೇಶ್ ಪತ್ರಿಕೆಯ ಪ್ರಸಾರ ಸಂಖ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ತಪ್ಪದೇ ಪತ್ರಿಕೆ ಓದುತ್ತಿದ್ದೆ. ಲಂಕೇಶ್ ಓದಿನಿಂದಾಗಿಯೇ ಹಲವರೊಂದಿಗೆ ಸ್ನೇಹ ಬೆಳೆದದ್ದೂ ಉಂಟು. ಎಂ.ಎ. ೨ನೇ ವರ್ಷದಲ್ಲಿ ಅಪ್ಪ ಕೊಟ್ಟ ಹಣದಲ್ಲಿಯೇ ಉಳಿಸಿ ಪ್ರತೀವಾರ ಪತ್ರಿಕೆ ಕೊಳ್ಳುವ ಅಭ್ಯಾಸ ಬೆಳೆಸಿಕೊಂಡೆ. ಇದೇ ಹೊತ್ತಿಗೆ ಪತ್ರಿಕೆಗೆ ಇಪ್ಪತ್ತೋ ಇಪ್ಪತ್ತೆರಡೋ ವರ್ಷಗಳು ಪೂರೈಸಿದ ಸಂದರ್ಭದಲ್ಲಿ ಮೈಸೂರಿಗೆ ಕಾರ್ಯಕ್ರಮಕ್ಕೆ ಲಂಕೇಶರೇ ಬಂದಾಗ ನನ್ನ ಸಂತೋಷಕ್ಕೆ ಪಾರವೇ ಇಲ್ಲ. ದೂರದಿಂದಲೇ ನೋಡಿ ಕಣ್ತುಂಬಿಸಿಕೊಂಡಿದ್ದೆ. ಪತ್ರಿಕೆಯಲ್ಲಿ ಮೈಸೂರಿನಿಂದಲೇ ಬರೆಯುತಿದ್ದಾಳೆಂದು ನಾನು ಭಾವಿಸಿದ್ದ ನಿಮ್ಮಿಯ ಮುಖ ದರ್ಶನಕ್ಕಾಗಿ ಹುಡುಕಿ ಸುಸ್ತಾದೆ. ಅದು ನಾನು ಲಂಕೇಶರನ್ನು ಕಂಡ ಏಕೈಕ ಸಂದರ್ಭ.

ಲಂಕೇಶ ಪತ್ರಿಕೆಯನ್ನು ಓದುತ್ತಲೇ ಬೆಳೆದ ನನ್ನ ಆಲೋಚನಾ ರೀತಿ ಬೇರೆಯೇ ಆಗಿತ್ತೆಂಬುದು ಅರಿವಿಗೆ ಬಂದದ್ದು ಲಂಕೇಶ್ ಓದದವರ ಸಂಗಡವಿದ್ದಾಗ. ಇನ್ನು ಲಂಬಿಸದೆ ಎರಡೇ ವಿಚಾರ ಪ್ರಸ್ತಾಪಿಸಿ ಈ ಲೇಖನ ಮುಕ್ತಾಯ ಮಾಡುವೆ. ಪತ್ರಿಕೆಯಿಂದ ಪಡೆದದ್ದನ್ನೆಲ್ಲಾ ಪಟ್ಟಿ ಮಾಡುತ್ತಾ ಕೂರುವುದು ಕಷ್ಟ. ಲಂಕೇಶ್ ತಮ್ಮ ಬರವಣಿಗೆಯಿಂದ ಓದುಗ ಪೀಳಿಗೆಗೆ ಬೆಳೆಸಿದ ಗುಣಗಳಲ್ಲಿ ನಿರ್ಭಿಡೆ ಹಾಗು ವಸ್ತು ನಿಷ್ಠುರತೆ ಮುಖ್ಯವಾದವು. ನನಗೆ ಇದು ಅನುಭವಕ್ಕೆ ಬಂದದ್ದು ಒಂದು ವಿಚಿತ್ರ ಸಂದರ್ಭದಲ್ಲಿ. ಲಂಕೇಶರ ಮಗ ಇಂದ್ರಜಿತ್ ತನ್ನದೇ ಕ್ರೀಡಾಪತ್ರಿಕೆ ‘ಆಲ್‌ರೌಂಡರ್’ ಆರಂಭಿಸಿದಾಗ ಪತ್ರಿಕೆಯ ಜೊತೆ ಅದನ್ನೂ ಕೊಂಡು ಓದಿರಿ ಎಂಬ ಅವರ ಟಿಪ್ಪಣಿ ನೋಡಿ ಎಂಥಾ ದೈನೇಸಿ ಸ್ಥಿತಿಯೆಂದು ಮರುಗಿದೆ. ಲಂಕೇಶ್ ಹಾಗೆ ಶಿಫಾರಸು ಮಾಡಬಾರದಿತ್ತೆಂದೆನಿಸಿತು. ಅವರು ಹಾಗೆ ಬರೆದುಕೊಂಡದ್ದು ಸಾಧಾರಣ ತಂದೆಯೊಬ್ಬ ಮಗನ ಬಗೆಗಿನ ಕುರುಡು ಕಕ್ಕುಲಾತಿಯಿಂದ ಎಂದು ತಳ್ಳಿಹಾಕಲು ನನ್ನ ಮನ ಒಪ್ಪಲೇ ಇಲ್ಲ. ಲಂಕೇಶ್ ಹೀಗೆ ಮಾಡಿದರಲ್ಲಾ ಎಂದು ಬೇಸರವಾಯಿತು; ಆದರೆ ಅದರ ಹಿಂದೆಯೇ ಖುಷಿಯೂ ಆಯ್ತು. ಕಾರಣ ಲಂಕೇಶ್ ಬಗ್ಗೆ ನಾನು ವಸ್ತುನಿಷ್ಠವಾಗಿ ಚಿಂತಿಸಲು ಅಪ್ರತ್ಯಕ್ಷವಾಗಿ ಲಂಕೇಶರೇ ಕಾರಣರಾಗಿದ್ದರು. ಹಾಗೆ ಚಿಂತಿಸುವ ಗುಣವನ್ನು ನನ್ನಲ್ಲಿ ಬಿತ್ತಿದ್ದೇ ಆತ ಎಂದರಿವಾಗಿ ಸಡಿಲವಾದೆ.

ಲಂಕೇಶರ ಚಿತ್ರ ಸಂಗ್ರಹ: ಬಸುತೇಜಸ್ವಿಯವರೊಂದಿಗಿನ ಲಂಕೇಶರ ಮುನಿಸು ಜಗಜ್ಜಾಹೀರು. ಈ ವಿಚಾರದಲ್ಲಿ ಲಂಕೇಶ್ ತುಂಬಾ ಕೆಟ್ಟದಾಗಿ ನಡೆದುಕೊಂಡರು ಎಂದು ಬಹಳಷ್ಟು ಮಂದಿ ಹೇಳುವುದಿದೆ. ಲಂಕೇಶ್ ಪತ್ರಿಕೆಯ ಓದುಗನಾಗಿದ್ದ ನನಗನಿಸುವಂತೆ ತೇಜಸ್ವಿಯಂಥಾ ಅಮೂಲ್ಯ ವ್ಯಕ್ತಿಯ ಗೆಳೆತನವನ್ನು ಪಣಕ್ಕೊಡ್ಡಿ ನಿಷ್ಠುರವಾಗಿ ನಡೆದುಕೊಳ್ಳುವಂಥಾ ಚಾತಿ ಅಂದಿನ ಯಾರಿಗೂ ಇರಲಿಲ್ಲ. ಅಂದು ಲಂಕೇಶ್ ಎತ್ತಿದ್ದ ಅನುಮಾನಗಳು ಸಕಾಲಿಕವೇ ಆಗಿದ್ದವು. ಆದರೆ ಅದೇ ಸಂದರ್ಭದಲ್ಲಿ ಅಣ್ಣನ ನೆನಪು ಕುರಿತು ಲಂಕೇಶ್ ಬರೆದ ರಿವ್ಯೂ ಮಾತ್ರ ಪೂರ್ವಗ್ರಹಪೀಡಿತ ಎನಿಸಿದ್ದು ಸುಳ್ಳಲ್ಲ.

ಪುಟದ ಮೊದಲಿಗೆ
 
Votes:  8     Rating: 3.5    
 
 
ಸಂಬಂಧಿಸಿದ ಲೇಖನಗಳು
  ಕನ್ನಡಕ್ಕೆ ಇದಕ್ಕಿಂತ ಖುಷಿಯ ವಿಷಯವೇನಿದೆ:ಶ್ರೀರಾಂ ಆಶಯ
  ಏಳುಸುತ್ತಿನ ಹಿತ್ತಲ ಮಲ್ಲಿಗೆ:ವೆಂಕಟೇಶ್ ಮುಂಬೈ ಬರಹ
  ಜೀತಕ್ಕಿರುವವರ ಜೀವಿತ ಕಥೆಗಳು:ನಾಗರಾಜ ಹೆತ್ತೂರ್ ಬರಹ
  ಅಕ್ಕ ಎಂಬ ಅಕ್ಕರೆ ಅಕ್ಕ ಎಂಬ ಅಚ್ಚರಿ!:ಮಧುಸೂದನ ಬರಹ
  ಆಪಲ್ ಎಂಬ ಮೊಬೈಲ್ ಮಾಯಾವಿ:ಸುದರ್ಶನ ಗುರುರಾಜ ಬರಹ
  ಕೈಗಂಟಿದ ಮಸಿಯನ್ನು ಮುಖಕ್ಕೆ ಬಳಿದುಕೊಂಡರೆ? ಸುಧೀಂದ್ರ ಬರಹ
  ಕಮಲ ತನ್ನನ್ನು ತಾನೇ ಹೊಸಕಿತೇ?:ನರಸಿಂಹ ರಾಯಚೂರ್ ಪ್ರಶ್ನೆ
  ಎಸ್.ಮಂಜುನಾಥ್ ಮಾಡಿರುವ ಖಡ್ಗ ಮೀಮಾಂಸೆ
  ಓಟೇ ಹಾಕದ ಒಂಟಿ ಓಲೆಯ ಬೀರಯ್ಯ:ಗಂಗಾಧರಯ್ಯ ಬರಹ
  ಮಲೆಗಳಲ್ಲಿ ಮದುಮಗಳು ಎಲ್ಲಿ? ದಿಲಾವರ್ ರಾಮದುರ್ಗ ಬ್ಲಾಗ್
  ಅಮ್ಮನ ಕೂಡೆ ವೋಟ್ ಮಾಡಿದ್ದು:ಸ್ಮಿತಾ ಮಾಕಳ್ಳಿ ಬರಹ
  ವೋಟು ಹಾಕಿ ಸೋತ ಮುಖಗಳು:ಉಮಾರಾವ್ ಬರಹ
  ಸಚಿನ್ ಕೊಳಿಗೆ ಕಂಡ ಮಲೆಗಳಲ್ಲಿ ಮದುಮಗಳು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್’:ಮತ್ತೊಂದು ಕಥಾಪ್ರಸಂಗ
  ದೆವ್ವವಾದ ನರಭಕ್ಷಕ:ಕಾರ್ಲೋ ಅನುವಾದಿಸಿದ ಕಾರ್ಬೆಟ್ ಕಥನ
  ಪೈ ಎಂಬ ಮಾಯೆಯ ಸಿನೆಮಾ ಗಣಿತ:ದಿಲಾವರ್ ರಾಮದುರ್ಗ ಬರಹ
  ಆನ್ ಲೈನ್ ಆರಂಭಶೂರರ ಕುರಿತು ದತ್ತರಾಜ್ ಅನಿಸಿಕೆಗಳು
  ಮಲೆಗಳಲ್ಲಿ ಮದುಮಗಳಿಗೆ ರೂಪಲಕ್ಷ್ಮಿ ಮರುಳಾಗಿ ಬರೆದದ್ದು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್:ಒಂದು ಕಥಾಪ್ರಸಂಗ
  ಎವರೆಸ್ಟ್ ಏರಿದ್ದು ಮೊದಲು ಯಾರು?:ಎಂ.ವೆಂಕಟಸ್ವಾಮಿ ಬರಹ
  ಮಾಂಕ್ಷಾವಲಿ ನಾಮಾಂಕಿತ ಮಂಟೇಸ್ವಾಮಿ:ಬಾಬು ಕೌದೇನಹಳ್ಳಿ ಬರಹ
  ಕರ್ನಾಟಕ ಜನಸಾಹಿತ್ಯ ಸಮಾವೇಶ:ಅರುಣ ಜೋಳದ ಸಮೀಕ್ಷೆ
  ಚಾರ್ಲ್ಸ್ ಡಾರ್ವಿನರ ಆಮೆಗಳು:ಪಾಲಹಳ್ಳಿ ವಿಶ್ವನಾಥ್ ಬರಹ
  ತಗಾದೆಯಿಲ್ಲದ ಯುಗಾದಿ ಇರಲಿ:ಅನಸೂಯಾದೇವಿ ಹಾರೈಕೆ
  ಯುಗಾದಿಯ ಬಿಸಿಲಲ್ಲಿ ರತ್ನಪಕ್ಷಿಯ ಅರಸುತ್ತಾ:ಗೊರವರ ಬರಹ
  ಮುದುಕಿಯೊಬ್ಬಳ ಒಳ್ಳೆಯ ಶಾಪ:ಪ್ರೀತಂ ರಾವ್ ಲಂಡನ್ ಡೈರಿ
  ಜಗತ್ತಿನೆದುರು ನಿರುತ್ತರ ಕೊರಿಯ:ರೋಹಿತ ಬರಹ
  ಪರಿಮಳ ಹೊತ್ತು ಬರುತ್ತಿದ್ದವರು:ಎಲ್.ಸಿ.ಸುಮಿತ್ರ ನೆನಪುಗಳು
  ದೇವದೂತರಂತೆ ಬಂದಿದ್ದವರು:ಮಿಂಚುಳ್ಳಿ ಲಹರಿ
  ಬಿಗ್ ಬಾಸ್ ಎಂಬ ಮನೆ ಮುರುಕ ಆಟದ ಕುರಿತು ಭಾವನಾ ರಾವ್ ಮರುಕ
  ಹೃಷಿಕೇಶ್ ಬಡಪಾಯಿಗಳಿಗಾಗಿ ಬರೆದ ೩೭೧ನೇ ವಿಧಿಯ ಪಾಠ
  ರೈಲುಗಾಡಿಯ ರೀಲುಗಳು:ಸುಮನ್ ದೇಸಾಯಿ ಪ್ರಹಸನ
  ‘ಲೈಫ್ ಆಫ್ ಪೈ'ಕುರಿತು ಎ.ಎನ್.ಪ್ರಸನ್ನ
  ಬೆಳ್ಳೂರು ವೆಂಕಟಪ್ಪ ಬರೆದ ಮಂಟೇಸ್ವಾಮಿ ಕಥನ
  ಜೋ ಜೋ ಜೋ ಜೋ ಮಲಗಿದ್ದ ಕಂದಾ:ಪ್ರಶಾಂತ್ ಬರಹ
  ವಿಕ್ರಮನ ಕಥೆಗಳ ಕುರಿತು ಭಾವನಾ ಬರೆದ ವಿಮರ್ಶೆಯ ಸಾಲುಗಳು
  ಕೊಕ್ಕರೆಯಂಥ ಮನುಷ್ಯರು:ಎಸ್.ಮಂಜುನಾಥ್ ಗದ್ಯಚಿತ್ರ
  ಒಂದಿಷ್ಟು ಪ್ರೀತಿ ಕೇಳುವ ‘ಗೊಂಬೆಗಳ ಲವ್’:ರೂಪಲಕ್ಷ್ಮಿ ಬರಹ
  ಇಂಗಿಹೋದ ಬಾವಿಯಲ್ಲಿ:ರೋಹಿತ ಚಕ್ರತೀರ್ಥ ಬರಹ
  ಮಾಹಿತಿ ಹಕ್ಕಿನ ಮಾವಿನಕಾಯಿಯ ಕುರಿತು ಹೃಷಿಕೇಶ್ ದೇಸಾಯಿ
  ಅಜ್ಜಿಯ ಜೊತೆಗೆ ಗೌರಿಯ ನಡಿಗೆ:ನಾಗ ಐತಾಳರ ಬರಹ
  ಹೀಗೆ ನಮ್ಮೊಳಗೊಬ್ಬ ಪಾಂಡು ಪ್ರತಿಬಿಂಬ:ವಸಂತ ಬರಹ
  ಅರವಿಂದರ ದಾರ್ಶನಿಕ ಚಿಂತನೆ:ವಾಸುದೇವಮೂರ್ತಿ ಮರುಪರಿಶೀಲನೆ
  ಕಾಲುವೆಗಳ ಊರಿನ ಕಾಮನೆಗಳು:ನಿಹಾರಿಕಾ ಡೈರಿಯ ಪುಟಗಳು
  ಆಧ್ಯಾತ್ಮಿಕತೆ ಎಂಬ ಹೊಸ ಆಕರ್ಷಣೆ:ದತ್ತರಾಜ್ ಬರಹ
  ‘ಸ್ವಚ್ಛತೆ’ಯ ಅತಿ ಹುಚ್ಚು ಹೆಚ್ಚಾದೊಡೆ:ತ್ರಿವೇಣಿ ಬರಹ
  ಭುವನೇಶ್ವರಿ ಹೆಗಡೆ ಬರೆದ ನಾಮದ ಬಲವೊಂದಿದ್ದರೆ ಸಾಕೋ..
  ಕೂಡ್ಲಿಗಿಯ ಕಾಡು ಪಾಡು: ಸ್ವರೂಪ್ ಕೊಟ್ಟೂರು ಬರೆದಿದ್ದು
  ಶಾಂತಲ ಎಂಬ ಸರ್ವಮಾನ್ಯಳ ಕುರಿತು ವೆಂಕಟೇಶ್.ಕೆ
  ಗೊಂದಲಿಗರ ಕಥನಕಲೆ:ಅರುಣ್ ಜೋಳದ ಬರಹ
  ಮಣಿಕಾಂತ್ ಹೊಸ ಪುಸ್ತಕದ ಒಂದು ಅಧ್ಯಾಯ
  ಅರವತ್ತಾರರ ಹೆದರಿಕೆ ಮುಗಿಯಿತು:ಭಾರತಿ ಬರಹ
  ಟಿ.ಪಿ ವ್ಯಾಸಮುದ್ರಿ ವಿರಚಿತ ಎರಡು ಹಳ್ಳಿ ಪ್ರಸಂಗಗಳು
  ಪ್ರಜ್ಞಾವಂತರು ಸ್ವಲ್ಪ ಬುದ್ಧಿ ಹೇಳಿ ಪ್ಲೀಸ್
  ಕ್ಯಾರೆಟ್ ಮೂಗಿನ ಸ್ನೋ ಮ್ಯಾನ್:ಯೋಗೀಂದ್ರ ಕಾಲಂ