ಕಳೆದ ಹಲವು ವರ್ಷಗಳಿಂದ ಗರಬಡಿದಂತೆ ಇದ್ದ ರೈತ ಸಂಘವನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಮತ್ತೆ ಚಾಲನೆ ದೊರಕಿದೆ. ಈ ನಿಟ್ಟಿನಲ್ಲಿ ಚಿತ್ರದುರ್ಗದ ಪ್ರಗತಿಪರ ಸ್ವಾಮೀಜಿ ಎಂದೇ ಹೆಸರುವಾಸಿಯಾದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಖುದ್ದು ಮುಂದೆ ನಿಂತು ಒಗ್ಗೂಡಿಸುವ ಪ್ರಕ್ರಿಯೆಗೆ ಚಾಲನೆ ಕೊಡಲು ಮುಂದಾಗಿದ್ದಾರೆ. ಈ ಹಂತದಲ್ಲಿ ಆರಂಭಿಕ ಯಶಸ್ಸೇನೋ ದೊರೆಯಿತು. ಆದರೆ ನಂತರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮತ್ತೊಂದು ಮುಖಂಡರ ಸಭೆ ದಾವಣೆಗೆರೆಯಲ್ಲಿ ಸಭೆ ನಡೆಸಿ ಯಾವುದೇ ಕಾರಣಕ್ಕೂ ನಾವು ಒಗ್ಗೂಡುವುದಿಲ್ಲ ಎಂಬಂತೆ ನಡೆದುಕೊಂಡು ಸ್ವಾಮೀಜಿಗಳ ಪ್ರಯತ್ನಕ್ಕೆ ಹಿನ್ನೆಡೆಯಾಗಿದೆ. ಒಟ್ಟಾರೆ ರೈತ ಸಂಘದಲ್ಲಿ ಕೆಲ ಹಿರಿಯ ನಾಯಕರ ಒಣಪ್ರತಿಷ್ಠೆ, ನಾನೇ ನಾಯಕ ಎಂಬ ಹಂಬಲ, ಹೊಸದನ್ನು ಒಪ್ಪಿಕೊಳ್ಳದ ಪ್ರವೃತ್ತಿಗಳಿಂದ ಮತ್ತೊಮ್ಮೆ ಗೊಂದಲ ಏರ್ಪಟ್ಟಿದೆ. ಆದರೂ ಸ್ವಾಮೀಜಿ ಪ್ರಯತ್ನ ಮುಂದುವರೆದಿದೆ.
ಈ ನಿಟ್ಟಿನಲ್ಲಿ ಒಂದು ಕಾಲದಲ್ಲಿ ರೈತ ಸಂಘದ ಪ್ರಮುಖ ನಾಯಕರಾಗಿದ್ದ ಮರುಜಫ್ತಿಯಂತಹ ಕ್ರಾಂತಿಕಾರಕ ಬೆಳವಣಿಗೆಗೆ ಕಾರಣರಾಗಿದ್ದು ೭೦-೮೦ ರ ದಶಕದಲ್ಲಿ ಜಿಲ್ಲೆಯಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಸಂಚಲನ ಉಂಟು ಮಾಡಿದವರು ಕೆ.ಟಿ.ಶಿವಪ್ರಸಾದ್. ಪ್ರಮುಖ ರಾಜ್ಯ ರೈತ ನಾಯಕರಾಗಿದ್ದ ಪ್ರೊ. ನಂಜುಂಡಸ್ವಾಮಿ, ಕಡಿದಾಳು ಶಾಮಣ್ಣ, ಪೂರ್ಣಚಂದ್ರ ತೇಜಸ್ವಿಯ ಹತ್ತಿರದ ಒಡನಾಡಿ ಹಾಗೂ ಅಂತರರಾಷ್ಟ್ರೀಯ ಮಟ್ಟದ ಚಿತ್ರ ಕಲಾವಿದರು ಕೆ.ಟಿ.ಶಿವಪ್ರಸಾದ್. ಇಂದಿನ ಸಾಮಾಜಿಕ ವ್ಯವಸ್ಥೆ ಹಾಗೂ ಇತ್ತೀಚಿನ ಬೆಳವಣಿಗೆ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಉದಯಗಿರಿಯ ಅವರ ಮನೆಯಲ್ಲಿ ಏಕಾಂಗಿಯಾಗಿ ಚಿತ್ರಕಲೆಯಲ್ಲಿ ತೊಡಗಿಸಿಕೊಂಡು ತಾವಾಯಿತು ತಮ್ಮ ಕೆಲಸ ಆಯಿತು ಎಂಬಂತಿರುವ ಕೆ.ಟಿ.ಯನ್ನು ಇತ್ತೀಚೆಗೆ ನಾನು ನನ್ನ ಮಾವ ಕವಿ ಸುಬ್ಬು ಹೊಲೆಯಾರ್ ಹಾಗೂ ಹಿರಿಯ ದಲಿತ ಮುಖಂಡ ನಾರಾಯಣದಾಸ್ ಬೇಟಿ ಮಾಡಿ ಮಾತನಾಡಿಸಿದೆವು. ಈ ಸಂದರ್ಭ ಇಂದಿನ ರೈತ ಚಳವಳಿ, ದಲಿತ ಚಳವಳಿ, ರಾಜಕೀಯ, ಹೀಗೆ ಹತ್ತಾರು ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಮಾತಿನ ಪೂರ್ಣ ವಿವರ ಇಲ್ಲಿದೆ.
ಪ್ರಶ್ನೆ : ಒಡೆದು ಹೋಗಿರುವ ರೈತ ಸಂಘವನ್ನು ಒಗ್ಗೂಡಿಸುವ ಪ್ರಯತ್ನ ನಡೆಯುತ್ತಿದೆ ಇದಕ್ಕೆ ನಿಮ್ಮ ಅಭಿಪ್ರಾಯ ಏನು..?
ಕೆ.ಟಿ: ರೈತ ಸಂಘ ಒಟ್ಟಾಗಲಿ ಎಂಬುದು ನಮ್ಮೆಲ್ಲರ ಆಶಯ. ಈ ನಿಟ್ಟಿನಲ್ಲಿ ಚಿತ್ರದುರ್ಗ ಸ್ವಾಮಿಜಿ ಮುಂದಾಗಿರುವುದು ಸಂತಸ. ಯಾಕೆ ಒಂದಾಗುತ್ತಿಲ್ಲ: ಒಂದಾಗಿಸಲು ಸಾಧ್ಯವಾಗುತ್ತಿಲ್ಲ ಎಂದರೆ ನಮ್ಮೊಳಗಿನ ಜಾತಿ ವ್ಯವಸ್ಥೆ. ಹಿಂದೆ ನಾವೆಲ್ಲಾ (ನಂಜುಂಡಸ್ವಾಮಿ, ಸುಂದರೇಶ್ ಎಲ್ಲಾ ಮುಖಂಡರು) ರೈತ ಸಂಘದಲ್ಲಿ ಒಂದು ಸ್ಪಷ್ಟ ತಳಹದಿಯ ಮೇಲೆ ಹೋರಾಟ ನಡೆಸುತ್ತಿದ್ದೆವು. ಎಲ್ಲದಕ್ಕೂ ಮುಖ್ಯವಾಗಿ ಶೂದ್ರರೆಲ್ಲ ಒಂದಾಗಿದ್ದೆವು. ಜಾತಿ ವಿನಾಶಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೆವು. ಜತೆಜತೆಗೆ ಬೇರೆಲ್ಲಾ ಹೋರಾಟ ನಡೆಸುತ್ತಿದ್ದೆವು. ಬಹುಶಃ ಜಾತಿ ವ್ಯವಸ್ಥೆ ಇಂದಿನ ರೈತ ಸಂಘದ ಈ ಸ್ಥಿತಿಗೆ ಕಾರಣ. ಮತ್ತೆ ಈಗಿನ ನಾಯಕರಿದ್ದಾರಲ್ಲಾ ಅವರು ಹೊಸಬರಿಗೆ ಅವಕಾಶ ಮಾಡಿಕೊಡಬೇಕು (ಪುಟ್ಟಣ್ಣಯ್ಯ, ಕೋಡಿಹಳ್ಳಿ ಎಲ್ಲರೂ) ಹೊಸ ಲೀಡರ್‌ಶಿಪ್ ಬೇಕು. ರೈತ ಸಂಘದವರೆಲ್ಲ ಜಾತಿ ಬಿಟ್ಟು ಒಂದಾಗಲಿ. ದೇಹ-ಮನಸ್ಸು ಎರಡೂ ಒಂದೇ ರೀತಿ ಇರಲಿ. ಹೀಗಿದ್ದಾಗ ಮಾತ್ರ ರೈತ ಸಂಘ ಒಗ್ಗೂಡಿಸಲು ಸಾಧ್ಯ ಅದು ಸಾಧ್ಯವಾದಷ್ಟು ಬೇಗ ಆಗಲಿ ಎಂಬುದೂ ನನ್ನ ಹಾಗೂ ನನ್ನಂತಹವರ ಆಶಯ.
ಪ್ರಶ್ನೆ : ರೈತ ಸಂಘದ ಒಡಕಿಗೆ ನೀವು ಕಂಡುಕೊಂಡ ಕಾರಣಗಳೇನು?
ಕೆ.ಟಿ.: ನಮ್ಮವರೇ. ಯಾರು ರೈತರ ಬಗ್ಗೆ ಮಾತನಾಡಿದರೋ ಅವರೇ ರೈತ ಸಂಘವನ್ನು ಒಡೆದು ಹಾಕಿದರು. ಹಾಸನದಲ್ಲಿ ಭದ್ರವಾಗಿದ್ದ ರೈತ ಸಂಘವನ್ನು, ಒಕ್ಕಲಿಗರನ್ನು ಎತ್ತಿಕಟ್ಟಿ ಹಿ.ಶಿ. ರಾಮಚಂದ್ರೇಗೌಡ ಒಡೆದ. ರವಿವರ್ಮಕುಮಾರ್ ರಂತಹವರೂ ಇದರಲ್ಲಿ ಪಾಲುದಾರರು. ಸಮಾಜವಾದಿ ಚಿಂತನೆ ಮಾಡುವ ಡಿ.ಎಸ್. ನಾಗಭೂಷಣ್ ನಂತಹವರು ಏನು ಹೇಳುತ್ತಿದ್ದಾರೆ. ಉದಾಹರಣೆಗೆ ಗಾಂಧಿಯನ್ನೇ ತೆಗೆದುಕೊಳ್ಳೋಣ. ಗಾಂಧಿಗೆ ಹಿಂದೂ ಸಮಾಜ ಕಟ್ಟಬೇಕೆಂಬ ಫಿಲಾಸಫಿ ಇತ್ತು. ಹಾಗಾಗಿ ಹೋರಾಟದ ಜತೆ ತಾನು ಅಂದುಕೊಂಡಿದ್ದನ್ನು ಸಾಧಿಸಿದ. ಆದರೆ ನಮ್ಮ ಸಮಾಜವಾದಿಗಳು ಏನು ಹೇಳುತ್ತಿದ್ದಾರೆ. ಭಾರತದಂತ ಭಾರತಕ್ಕೆ ಸಮಾಜವಾದ ಅಥವಾ ಲೋಹಿಯಾವಾದದ ಯಾವ ಫಿಲಾಸಫಿಯೂ ಅನ್ವಯವಾಗುವುದಿಲ್ಲ. ಇಷ್ಟಾದರೂ ಸಮಾಜವನ್ನು ತಪ್ಪುದಾರಿಗೆಳೆಯುವ ಪ್ರಯತ್ನ ನಡೆಯುತ್ತಿದೆ. ಇದೇ ರೀತಿ ರೈತ ಸಂಘದಲ್ಲೂ ನಡೆಯುತ್ತಿದೆ.
ಅವರ‍್ಯಾರಿಗೂ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ. ಇವರೆಲ್ಲ ತಮ್ಮ ಜಾತಿಯ ಸಂಕೋಲೆಗೆ ಬಿದ್ದು ರಾತ್ರೋರಾತ್ರಿ ನಾಯಕರಾಗಲು ಹೊರಟಿದ್ದಾರೆ. ಬಹುಮುಖ್ಯವಾಗಿ ಹೇಳಬೇಕೆಂದರೆ ಇವರ‍್ಯಾರು ಜಾತಿ ಬಿಡಲು ತಯಾರಿಲ್ಲ. ಈ ಕಾರಣದಿಂದ ರೈತ ಸಂಘ ಒಂದಾಗಲ ಸಾಧ್ಯವಾಗುತ್ತಿಲ್ಲ.
ಪ್ರಶ್ನೆ: ನೂರೆಂಟು ಬಣಗಳಾಗಿರುವ ದಲಿತ ಸಂಘಟನೆಗಳನ್ನು ಒಗ್ಗೂಡಿಸಲು ಸಾಧ್ಯವಿಲ್ಲವೇ?
ಕೆ.ಟಿ: ರೈತ ಸಂಘ ಒಂದೇ ಅಲ್ಲ, ಒಡೆದು ಹೋಗಿರುವ ದಲಿತ ಸಂಘಟನೆಗಳು ಒಂದಾಗಬೇಕಾದ ಅನಿವಾರ್ಯತೆ ಇಂದು ಇದೆ. ನಾನು, ನಾರಾಯಣದಾಸ್ ಸೇರಿದಂತೆ ಹಲವಾರು ಮಂದಿ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಪ್ರಾರಂಭವಾಗುವುದಕ್ಕಿಂತಲೂ ಹಿಂದೆಯೇ ಸಮಾಜವಾದಿ ಯುವಜನಸಭಾ ಮಾಡಿ ಕಾರ್ಯಕ್ರಮ ಮಾಡುತ್ತಿದ್ದೆವು. ನಂತರ ರೈತ-ದಲಿತ ಸಂಘ ಒಗ್ಗೂಡಿ ಹೋರಾಟ ಮಾಡುತ್ತಿದ್ದು ಮತ್ತು ಅದರ ಫಲಿತಾಂಶಗಳು ಬಹುದೊಡ್ಡ ಕ್ರಾಂತಿ. ಆದರೆ ಹಿಂದೂ ಧರ್ಮದಲ್ಲಿನ ಜಾತಿ ಪದ್ದತಿ ಈ ಎಲ್ಲಾ ಸಂಘಟನೆಗಳ ವಿಘಟನೆಗೆ ಕಾರಣವಾಗುತ್ತಿರುವುದು ಕಣ್ಣೆದುರಿನ ಸತ್ಯ. ಹಾವನೂರು ವರದಿ ಪ್ರಕಾರ (ಅಸ್ಪೃಶ್ಯರಲ್ಲೇ ೧೦೪ ಜಾತಿ-ಉಪ ಜಾತಿಗಳಿವೆಯಂತೆ), ಇತ್ತೀಚೆಗೆ ಒಕ್ಕಲಿಗರಲ್ಲಿ, ೧೨ನೇ ಶತಮಾನದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಬಸವಣ್ಣ ಮತ್ತು ವೀರಶೈವ ಧರ್ಮ ಒಳಗೊಂಡಂತೆ ಈಗ ಎಲ್ಲ ಜಾತಿ ಜನಾಂಗಗಳಲ್ಲಿ ಉಪಜಾತಿಗಳು ಏರ್ಪಟ್ಟು ಅಂತರ ಹೆಚ್ಚಾಗುತ್ತಿದೆ. ಬ್ರಾಹಣರು ಈ ಜಾತಿ ವ್ಯವಸ್ಥೆಯನ್ನು ಮಾಡಿ ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ. ಇಂತಹ ಪರೀಸ್ಥಿತಿಯಲ್ಲಿ ರೈತರು-ದಲಿತರು ಜಾತಿಯತೆ ಬಿಟ್ಟು ಒಂದಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಜಾತಿ ವ್ಯವಸ್ಥೆ ಮಾಡಿದರಲ್ಲ ಅವರಿಗೆ ಮುಂದೊಂದು ದಿನ ಹೀಗೆ ಆಗುತ್ತದೆ ಎಂದು ಗೊತ್ತಿತ್ತು. ದಲಿತರಲ್ಲಿ ಎಡಗೈ, ಬಲಗೈ, ಗೌಡರಲ್ಲಿ ದಾಸ ಮತ್ತು ಮುಳ್ಳು ಇವರ ನಡುವೆ ಯಾವ ಮಟ್ಟದ ಅಂತರ ಏರ್ಪಟ್ಟದೆ ನೋಡಿ. ದಂಡೋರ ಮಾಡಿದ್ದೇ ಈ ಕಾರಣಕ್ಕಾಗಿ ಇದ್ಯಾವುದೂ ನಮ್ಮ ನಾಯಕರಿಗೆ ಅರ್ಥವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಹಳೆ ಜಿಡ್ಡುಗಳನ್ನು ತೆಗೆದು ಹೊಸ ಬಗೆಯ ಕಾರ್ಯಕ್ರಮಗಳನ್ನು ರೋಪಿಸಬೇಕಿದೆ ಹಾಗಿದ್ದಲ್ಲಿ ಮಾತ್ರ ದಸಂಸ, ರೈತ ಸಂಘ ಒಂದುಗೂಡಬಹದು.
ಪ್ರಶ್ನೆ: ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಏನು ಹೇಳುತ್ತೀರಿ?
ಕೆ.ಟಿ.: ನಿಜಕ್ಕೂ ಹೊಲಸು, ಇಂದಿನ ನಾಯಕರು ಹಾಗೂ ಸರಕಾರ ನೋಡಿದರೆ ಅರ್ಥವಾಗುತ್ತದೆ. ಲಂಚವನ್ನು ಸಂಪೂರ್ಣ ಕಾನೂನುಬದ್ದಗೊಳಿಸಿದ್ದಾರೆ. ಇವರು ಸಂವಿಧಾನಕ್ಕೆ ಎಷ್ಟು ಅಗೌರವ ತೋರುತ್ತಿದ್ದಾರೆ. ಮತ್ತು ಅಂಬೇಡ್ಕರ್ ಬರೆದಿರುವ ಇಡೀ ಸಂವಿಧಾನವನವನ್ನೇ ಮುಗಿಸಲು ಹೊರಟಿದ್ದಾರೆ. ಮೊನ್ನೆ ನೋಡಿ ಉಪಲೋಕಾಯುಕ್ತ ನೇಮಕ ಮಾಡಲು ನ್ಯಾಯಾಧೀಶರ ಅಭಿಪ್ರಾಯವನ್ನೇ ಕೇಳಿಲ್ಲ. ಪರಿಣಾಮ ಏನಾಗಿದೆ ನೋಡಿ. ಭಾರತದ ಸಂವಿಧಾನ ದುಃಖ ಅನುಸಂಧಾನದ ಸಂವಿಧಾನ ಆದರೆ ಈಗಿನ ರಾಜಕಾರಣಿಗಳಿಗೆ (ಎಲ್ಲಾ ರಾಜಕೀಯ ಪಕ್ಷಗಳು) ಈ ಸಂವಿಧಾನ ಬೇಕಾಗಿಲ್ಲ. ತಮಗೆ ಬೇಕಾದಂತೆ ತಿದ್ದಿಕೊಳ್ಳುತ್ತಿದ್ದಾರೆ. ಇಡೀ ವಿಶ್ವಕ್ಕೆ ಮಾದರಿ ಆಗಿರುವ ಸಂವಿಧಾನ ನಮ್ಮದು ಇದನ್ನು ರಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅವನೊಬ್ಬ ಅಣ್ಣಾ ಹಜಾರೆ ಅವಿವೇಕಿಗಳನ್ನು ಹಾಕಿಕೊಂಡು ಮೂಲ ಸಂವಿಧಾನದ ಆಶಯಗಳನ್ನೇ ಮುಗಿಸಲು ಹೊರಟಿದ್ದಾನೆ. ಇದೆಲ್ಲ ಸಂವಿಧಾನದ ವಿರುದ್ಧ ಷಢ್ಯಂತ್ರ.
ಪ್ರಶ್ನೆ: ರವಿಶಂಕರ್ ಗುರೂಜಿ ಸರ್ಕಾರಿ ಶಾಲೆಯಲ್ಲಿ ಓದಿದವರು ನಕ್ಸಲ್ ಆಗುತ್ತಾರೆ ಎಂದಿದ್ದಾರಲ್ಲಾ?
ಕೆ.ಟಿ: ಅವನೊಬ್ಬ ಬುಸಿನೆಸ್ ಮನ್. ಅವನ ಹೇಳಿಕೆಗೂ ಸರ್ಕಾರಿ ಶಾಲೆಗೂ ಸಂಬಂಧವೇ ಇಲ್ಲ. ಅವ್ನಿಗೆ ಮನಿ ಮಾಡುವ ಹುಚ್ಚು ಎಲ್ಲಾ ಸರಕಾರಿ ಶಾಲೆಗಳನ್ನು ನನಗೆ ಕೊಡಿ ಎಂದು ದುಡ್ಡು ಮಾಡಲು ಯೋಚಿಸುತ್ತಿದ್ದಾರೆ. ಅವನೊಬ್ಬ ನಡೆದಾಡುವ ದೇವರಂತೆ. ನಮ್ಮ ಸರ್ಕಾರಗಳು ಅಂತಹವರಿಗೆ ಕಂಬಳಿ ಹಾಸುತ್ತಿರುವುದು ನಿಜಕ್ಕೂ ದುರಂತ.
ಪ್ರಶ್ನೆ: ನಿಮ್ಮ ಪ್ರಕಾರ ಜಾತಿ ವ್ಯವಸ್ಥೆಯ ನಿರ್ನಾಮಕ್ಕೆ ಏನು ಪರಿಹಾರ..?
ಕೆ.ಟಿ: ಬುದ್ದಿಸಂ... ಬೌದ್ಧ ಧರ್ಮದಿಂದ ಮಾತ್ರ ಇಡೀ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ. ಬೌದ್ದಿಸಂ ಮಾತ್ರ ಇಡೀ ಪ್ರಪಂಚದ ಧರ್ಮಗಳ ಪೈಕಿ ಒಂದು ವೈಜ್ಞಾನಿಕ ತಳಹದಿಯ ಧರ್ಮ. ಇಲ್ಲಿ ಯಾವುದು ಮುಖ್ಯವೂ ಅಲ್ಲ ಅಮುಖ್ಯವೂ ಅಲ್ಲ. ಆಯ್ಕೆಯ ಸ್ವಾತಂತ್ರ ಹೆಚ್ಚು ಯಾವ ಧರ್ಮದಲ್ಲಿರುತ್ತದೆಯೇ ಅಲ್ಲಿ ವ್ಯಕ್ತಿಗೆ ಹೆಚ್ಚು ಸ್ವತಂತ್ರ ಇರುತ್ತದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಬೌದ್ಧಧರ್ಮದಲ್ಲಿ ವ್ಯಕ್ತಿಗೆ ಆಯ್ಕೆಯ ಸ್ವಾತಂತ್ರ ಹೆಚ್ಚು. ಉದಾಹರಣೆಗೆ ಮೊನ್ನೆ ಮಂಡ್ಯದಲ್ಲಿ ದೇವಸ್ಥಾನಕ್ಕೆ ನಮ್ಮನ್ನು ಪ್ರವೇಶಕ್ಕೆ ಬಿಡಲಿಲ್ಲ ಎಂದು ಗಲಾಟೆ ಮಾಡಲು ಹೋದ ದಲಿತರಿಗೆ ಚಚ್ಚಿ ಕಳಿಸಿದ್ದಾರೆ. ಅಲ್ಲಾ ಸ್ವಾಮಿ ಅಲ್ಲಿ ಬಿಡುವುದಿಲ್ಲ ಎಂದ ಮೇಲೆ ನೀವ್ಯಾಕೆ ಹೋಗಬೇಕು..? ನಿಮಗೆ ಎಲ್ಲಿ ಸ್ವತಂತ್ರ ಇದೆಯೋ ಅಲ್ಲಿರಿ. ಬೌದ್ಧ ಧರ್ಮದಲ್ಲಿ ಇಂತಹ ಹೆಚ್ಚು ಅವಕಾಶಗಳಿವೆ. ದೇವನೂರು ಮಹಾದೇವ ಫೋನ್ ಮಾಡಿದ್ದ ‘ಏ ನಿಮ್ಮ ಧರ್ಮ ವಿಶ್ವವ್ಯಾಪಿ ಆಗುತ್ತಿದೆಯಂತಲ್ಲ ನಂಗು ದೀಕ್ಷೆ ಕೊಡು’ ಎಂದು. ಬೌದ್ಧ ಧರ್ಮ ಇಂದು ವಿಶ್ವವ್ಯಾಪಿ ಮತ್ತು ಅಲ್ಟಿಮೆಟ್ ಎಂಬಂತೆ ಬೆಳವಣಿಗೆಯಾಗುತ್ತಿದೆ.
ಪ್ರಶ್ನೆ: ಬೌದ್ಧ ಧರ್ಮದಲ್ಲು ಮೇಲು ಕೀಳು ವ್ಯವಸ್ಥೆ ಮಾಡಿಕೊಂಡಿದ್ದಾರಲ್ಲಾ..?
ಕೆ.ಟಿ.: ಇಲ್ಲಿಯೂ ಸಣ್ಣಪುಟ್ಟ ಲೋಪದೋಷಗಳಿವೆ ನಿಜ. ಇದೇ ಕಾರಣಕ್ಕೆ ಮೊನ್ನೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದೆ. ಬೌದ್ಧ ಧರ್ಮಕ್ಕೆ ಸೇರಿದವರು ಬ್ರಾಹ್ಮಣರಂತೆ ಮಡಿ ಆಚರಣೆ ನಿಲ್ಲಿಸಬೇಕು. ಬಹುಶಃ ಭಾರತದಲ್ಲಿ ಸಾಮ್ರಾಟ್ ಅಶೋಕನ ಕಾಲದ ನಂತರ ಅತಿ ಹೆಚ್ಚು ಜನರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಕಾಲದಲ್ಲಿ. ಎಲ್ಲಾ ಧರ್ಮಗಳನ್ನು ಅಧ್ಯಯನ ಮಾಡಿದ್ದ ಅಂಬೇಡ್ಕರ್ ಕೊನೆಗೆ ಬೌದ್ಧ ಧರ್ಮ ಒಪ್ಪಿಕೊಂಡು ಲಕ್ಷಾಂತರ ಜನರ ಜತೆ ಬೌರ್ದಧ ಧರ್ಮಕ್ಕೆ ಬಂದರು. ಆದರೆ ಕೆಲವರು ಇದನ್ನು ಹೇಳುತ್ತಿಲ್ಲ. ಈಗ ಏನು ಹೇಳುತ್ತಿದ್ದಾರಲ್ಲಾ ಈ ಕ್ವಾಂಟಮ್ ಸಿದ್ದಾಂತ ಸೇರಿದಂತೆ ಎಲ್ಲವನ್ನು ಮೀರಿದ್ದು ಬುದ್ದನ ಮಧ್ಯಮ ಮಾರ್ಗ. ಇದುವೆ ಜಗತ್ತಿನ ಎಲ್ಲ ಸಮಸ್ಯೆಗಳ ಪರಿಹಾರ.
ಪ್ರಶ್ನೆ: ಚಿತ್ರಕಲೆ ಮತ್ತು ಇಂದಿನ ಕಲಾವಿದರ ಪರೀಸ್ಥಿತಿ ಬಗ್ಗೆ ಏನೆನ್ನುತ್ತೀರಿ..? ಕೆ.ಟಿ.: ಚಿತ್ರ ಕಲಾವಿದರ ಸ್ಥಿತಿ ಚಿಂತಾಜನಕವಾಗಿದೆ. ಆರ್ಥಿಕ ಹಿಂಜರಿತದಿಂದ ಮಾರಾಟ ಕಡಿಮೆಯಾಗಿದೆ. ಕಳೆದ ೬ ತಿಂಗಳಿಂದ ಪೇಂಟಿಂಗ್ ಮಾಡಿಲ್ಲ. ಈಗ ಮಾಡಲು ಕುಳಿತಿದ್ದೇನೆ. ಯಾವುದೇ ಒಬ್ಬ ಕಲಾವಿದ ನಿರಂತರವಾಗಿ ತೊಡಗಿಸಿಕೊಂಡರೆ ಪನಾರವರ್ತನೆ ಹೆಚ್ಚಾಗುತ್ತದೆ. ಕೆಲ ಅವಧಿಯಲ್ಲಿ ನಾವೂ ಕೂಡ ರಜೆ ತೆಗೆದುಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಅಧ್ಯಯನ, ಇತರೆ ಕೆಲಸಗಳನ್ನು ಮಾಡಿಕೊಳ್ಳುತ್ತೇನೆ. ಇದೇ ಏ.೧೪ ಬಾಬಾಸಾಹೇಬ್ ಅಂಬೇಡ್ಕರ್ ಜನ್ಮ ದಿನದಂದು ಬೌದ್ಧ ದೀಕ್ಷಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಅಂದು ಇಡೀ ದೇಶಾದ್ಯಂತ ನಡೆಯುತ್ತದೆ.
ಒಟ್ಟಾರೆ ಕೆ.ಟಿ ಮಾತನಾಡುವುದು ಕಡಿಮೆ. ಆದರೆ ಅವರ ಕೊಡುವ ಕಾರಣ ವ್ಯವಸ್ಥೆಯ ಬಗ್ಗೆ ಇರುವ ಅಸಹನೆ. ಜಾತಿ ವ್ಯವಸ್ಥೆಗೆ ಬೇಸತ್ತು ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಈ ಮೂಲಕ ಅಂಬೇಡ್ಕರ್ ಹಾಗೂ ಬೌದ್ಧ ಧರ್ಮದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದಿನ ಹೊಲಸು ರಾಜಕೀಯ ಇವೆಲ್ಲದರ ನಡುವೆ ಇಂದಿಗೂ ತಮ್ಮತನ ಉಳಿಸಿಕೊಂಡು ಕೆಲಸ ಮಾಡುತ್ತಿರುವುದು ನಿಜಕ್ಕೂ ಸಂತಸ ತರುವ ವಿಚಾರ.