ಕೈಯಲ್ಲೊಂದು ದೋಲು, ಹೆಗಲಲ್ಲಿ ಹಸಿರು ಶಾಲು, ಅದರ ಒಳಗೆ ಒಂದು ಮಾಸಿದ ಕೋಟು, ಅದರ ಒಳಗೆ ಅದಕ್ಕಿಂತಲೂ ಮಾಸಿದ ಒಂದು ಹಸಿರು ಜುಬ್ಬ, ತಲೆಯ ಮೇಲೊಂದು ನೇರಳೆ ಬಿಳಿ ರುಮಾಲು ದರಿಸಿದ್ದ ಆ ಮುಸಲ್ಮಾನ ಫಕೀರ ದಾಪುಗಾಲು ಹಾಕಿಕೊಂಡು ಆ ಮಳೆಯಲ್ಲಿ ನಡೆಯುತ್ತಿದ್ದ. ಆತನ ಹಿಂದೆ ಆ ಮುದುಕಿಯೂ ನಡೆಯುತ್ತಿತ್ತು. ಕೆದರಿದ್ದ ಕೂದಲು, ಇನ್ನೇನು ಅತ್ತೇ ಬಿಡುವಳು ಎನ್ನುವಂತಿದ್ದ ಆಕೆಯ ಮುಖ, ಮಾಸಿದ್ದ ಸೀರೆಯ ಮೇಲೆ ಒಂದು ಪುರಾತನ ನೀಲಿ ಜರ್ಕಿನ್ನು. ಒಂದು ಹಳೆಯ ಹಚ್ಚೆ ಕಂಡೂ ಕಾಣಿಸದಂತೆ ಆಕೆಯ ಹಣೆಯ ನಿರಿಗೆಗಳ ನಡುವೆ ಮಾಯವಾಗುತ್ತಿತ್ತು.
ಗಮನಿಸದವರಿಗೆ ಆತನಿಗೂ ಆಕೆಗೂ ಏನೂ ಸಂಬಂಧವಿಲ್ಲವೆಂದು ಅನಿಸುವಷ್ಟು ಅಂತರದಲ್ಲಿ ಅವರಿಬ್ಬರು ಹೆಜ್ಜೆ ಹಾಕುತ್ತಿದ್ದರು. ಕೊಂಚ ಗಮನಿಸಿದರೆ ಮಾತ್ರ ಆಕೆ ಆತನೆಲ್ಲಿ ಕಳೆದು ಹೋಗಿ ಬಿಡುವನೋ ಎಂಬ ಹೆದರಿಕೆಯಲ್ಲೇ ಆತನ ಹಿಂದೆ ಹೆಜ್ಜೆ ಹಾಕುತ್ತಿರುವುದು ಗೊತ್ತಾಗುತ್ತಿತ್ತು. ಆತನೂ ಅಷ್ಟೆ. ಮುಂದಕ್ಕೆ ಹೋದೊಡನೆ ಹಿಂದಕ್ಕೆ ತಿರುಗಿ ಹಿಂದೆ ಮುದುಕಿ ಇರುವಳೋ ಇಲ್ಲವೋ ಎಂದು ಖಾತರಿ ಪಡಿಸಿಕೊಂಡು ಮುಂದಕ್ಕೆ ನಡೆಯುತ್ತಿದ್ದ.
ಎಲ್ಲವನ್ನೂ ಬೇಕಾದಕ್ಕಿಂತಲೂ ಹೆಚ್ಚೇ ಗಮನಿಸುವ ಚಾಳಿ ಬೆಳೆಸಿಕೊಂಡಿರುವ ನನಗೆ ಇವರಿಬ್ಬರ ನಡುವೆ ಏನೋ ಕಥೆಯಿರಬೇಕೆಂದೂ, ಅದನ್ನು ನಾನು ಈಗಲೇ ಕೇಳದೆ ಹೋದರೆ ಈ ಕಾಲಾಂತರ ಪ್ರವಾಹದಲ್ಲಿ ಅದು ಕಳೆದೇ ಹೋಗಬಹುದೆಂದೂ, ಹಾಗೆ ಅದು ಕಳೆದು ಹೋದರೆ ಅದೊಂದು ದೊಡ್ಡ ವೃಣ ರೂಪದ ಶಾಪವಾಗಿ ನನ್ನನ್ನು ಜನ್ಮ ಪೂರ್ತಿ ಕಾಡುತ್ತಲೇ ಇರಬಹುದೆಂದೂ ಭಯವಾಗಲು ತೊಡಗಿತು. 
ಅವರಿಬ್ಬರು ನಡೆಯುತ್ತಿದ್ದ ದಾರಿಯೂ ಹಾಗೇ ಇತ್ತು. ಈ ಲೋಕಕ್ಕೂ ತನಗೂ ಯಾವುದೇ ಸಂಬಂಧವಿಲ್ಲದಿದ್ದಂತಿರುವ ಟಿಬೆಟನ್ ಕಾಲನಿಯ ಜೋಳದ ಹೊಲಗಳ ನಡುವಿನ ನಿರ್ಜನ ದಾರಿ. ಬಣ್ಣಬಣ್ಣದ ದೊಡ್ಡ ಕೊಡೆಗಳನ್ನು ಹಿಡಿದು, ಕಾಷಾಯ ಬಣ್ಣದ ನಿಲುವಂಗಿಗಳನ್ನು ಹೊತ್ತು ನಡೆಯುತ್ತಿದ್ದ ಅಪರಿಚಿತ ಟಿಬೆಟನ್ ಲಾಮಾಗಳನ್ನು ಬಿಟ್ಟರೆ ಬೇರೆ ಯಾರೂ ಆ ದಾರಿಯಲ್ಲಿ ಇರಲಿಲ್ಲ.
‘ಎಲ್ಲಿಗೆ ಹೋಗಬೇಕಾಗಿತ್ತು’ ಎಂದು ಕೇಳಿದೆ. ಅವನ ಮುಖ ಅರಳಿತು. ‘ಸಲಾಂ ಸಾಬ್, ನಾನು ಫಕೀರ. ಹಾಡು ಹೇಳಿ ಬಿಕ್ಷೆ ಎತ್ತಲು ಹೋಗುತ್ತಿರುವೆ’ ಎಂದ.
‘ಈ ಮುದುಕಿ ಯಾರು?’ಎಂದು ಕೇಳಿದೆ.
‘ಆಕೆ ನನ್ನ ತಾಯಿ. ಜೊತೆಯಲ್ಲಿ ಬಿಕ್ಷೆ ಎತ್ತಲು ಬರುತ್ತಿದ್ದಾಳೆ’ ಎಂದ.
‘ಆಹಾ ಸುಳ್ಳು ಹೇಳುತ್ತಿದ್ದೀಯಾ. ನೀನು ಮುಸಲ್ಮಾನನಾದ ಫಕೀರ. ಆಕೆಯ ಹಣೆಯ ಹಚ್ಚೆಯನ್ನು ನೋಡಿದರೆ ಕಿಳ್ಳೆಕ್ಯಾತಳೋ, ಹಕ್ಕಿಪಿಕ್ಕಿಯೋ, ಬುಂಡೆಬೆಸ್ತಳೋ ಇದ್ದ ಹಾಗಿರುವಳು.ಈ ಕೆ ನಿನ್ನ ತಾಯಿ ಆಗುವುದು ಹೇಗೆ. ಬರೀ ಸುಳ್ಳು’ ಎಂದು ನಗಾಡಿ ನನ್ನ ಲಡಾಸು ಕಾರಿಗೆ ಹತ್ತಿಸಿಕೊಂಡೆ.
ಅವರಿಬ್ಬರೂ ಹೆದರಿಕೊಂಡೇ ಬೆಚ್ಚಗೆ ಕಾರೊಳಗೆ ಕುಳಿತುಕೊಂಡರು. ‘ಅಮ್ಮಾ ನೀನಾದರೂ ನಿಜ ಹೇಳಮ್ಮಾ. ಈ ಫಕೀರ ಯಾಕೋ ಸುಳ್ಳು ಹೇಳುತ್ತಿದ್ದಾನೆ’ ಎಂದು ಆಕೆಗೆ ಕಣ್ಣು ಹೊಡೆದೆ. `ಇಲ್ಲ ಸ್ವಾಮಿ ಅವನು ಹೇಳಿದ್ದು ನಿಜ.’ ಎಂದು ಆಕೆ ನಾಚಿಕೊಂಡಳು.‘ಅವನು ನನ್ನ ನಿಜವಾದ ಮಗ.ನಾನು ಅವನ ತಾಯಿ ಸ್ವಾಮಿ. ಸುಳ್ಳು ಯಾಕೆ ಹೇಳೋಣ.’ ಎಂದಳು.
‘ಸಾರ್ ಸುಳ್ಳು ಯಾಕೆ ಹೇಳೋಣ. ನಮ್ಮ ವಿಷ್ಯ ಸ್ವಲ್ಪ ವಿಚಿತ್ರ ಆಗೈತೆ. ಅದೆಲ್ಲ ಹೇಗೆ ಹೇಳೋದು ಸಾರ್’ ಎಂದು ಆತನೂ ನಾಚಿಕೊಂಡ.
‘ಪರವಾಗಿಲ್ಲ ಬಿಡಿ, ಇಲ್ಲಿ ಟಿಬೆಟನ್ ಕಾಲನಿಯಲ್ಲಿ ಯಾರೂ ಬಿಕ್ಷೆ ನೀಡೋದೂ ಇಲ್ಲ, ಬಿಕ್ಷೆ ಬೇಡೋದೂ ಇಲ್ಲ. ನನಗೆ ನಿಮ್ಮ ಕಥೆ ಹೇಳಿ. ಕೈಲಾದಷ್ಟು ಬಿಕ್ಷೆ ನಾನೇ ನೀಡುತ್ತೇನೆ. ಇನ್ನೂ ಕಂಡಾಗಲೆಲ್ಲ ಕೊಡುತ್ತೇನೆ. ನಾವು ಫ್ರೆಂಡಾಗಿರುವಾ’ ಎಂದು ದಾರಿಯುದ್ದಕ್ಕೂ ಕಥೆ ಕೇಳುತ್ತಾ ಹುಣಸೂರಿನವರೆಗೆ ಅವರನ್ನು ಬಿಟ್ಟು ಬಂದೆ.
ಅವರಿಬ್ಬರು ಮೊನ್ನೆ ಶುಕ್ರವಾರ ಕಾರೊಳಗೆ ಹಿಂಜರಿದು ಕುಳಿತುಕೊಂಡು ಹೇಳಿದ ಆ ದೊಡ್ಡ ಕಥೆ ಈಗಲೂ ಮೈಯಲ್ಲಿ ಕುಳಿರು ಹರಿಸುತ್ತಿದೆ. ಅದನ್ನು ಚಿಕ್ಕದಾಗಿ ಇಲ್ಲಿ ಹೇಳುವೆ.
ಈ ಮುದುಕಿಯ ಹೆಸರು ರತ್ನಮ್ಮ. ಅರಕಲಗೂಡು ಸಗಣಿಕುಪ್ಪೆಯವಳು. ಜಾತಿ ಮೇಲುಸಕ್ಕರೆ ಉಪ್ಪಾರಗೌಡ. ತಾಯಿ ತೀರಿಹೋದ ಮೇಲೆ ತಂದೆ ತಮ್ಮನ ಹೆಂಡತಿಯನ್ನೇ ಹಾರಿಸಿಕೊಂಡು ಹೋದನಂತೆ. ಅದೆಲ್ಲ ಬೇರೆಯೇ ಕಥೆ. ನಮಗೆ ಈಗ ಬೇಡ. 
ಈ ಫಕೀರನ ನಿಜವಾದ ಹೆಸರು ಶಿವ. ಈತ ರತ್ನಮ್ಮನ ಮಗ. ಶಿವನ ತಂದೆ ಅಂದರೆ ರತ್ನಮ್ಮನ ಗಂಡನಿಗೆ ಮಗನನ್ನು ಹೊಡೆಯುವ ಚಟ. ಒಂದು ಸಲ ಮಗ ಶಿವ ಶಾಲೆ ತಪ್ಪಿಸಿ ಕುಶಾಲನಗರ ಕಾವೇರಿ ಹೊಳೆಯಲ್ಲಿ ಮೀನು ಹಿಡಿಯಲು ಹೋದ ಅಂತ ಸಿಕ್ಕಾಪಟ್ಟೆ ಹೊಡೆದನಂತೆ. ಆಗ ಶಿವನಿಗೆ ಏಳು ವರ್ಷ. ಈಗ ಮೂವತ್ತೇಳು. ಶಿವ ಮೂವತ್ತು ವರ್ಷಗಳ ಹಿಂದೆ ಇಂತಹದೇ ಒಂದು ಮಳೆಗಾಲದಲ್ಲಿ ಬಸ್ಸು ಹತ್ತಿ ಮೈಸೂರಿಗೆ ಹೋಗಿ ಅಲ್ಲಿಂದ ಟಿಕೆಟಿಲ್ಲದೆ ಬೆಂಗಳೂರಿಗೆ ಟ್ರೈನು ಹತ್ತಿ ಅಲ್ಲಿಂದ ಬೊಂಬಾಯಿಗೆ ಟ್ರೈನು ಹತ್ತಿದ್ದನಂತೆ. ಟ್ರೈನು ಗುಲ್ಬರ್ಗ ತಲುಪುವಾಗ ಟೀಟಿ ಬಂದು ಟಿಕೆಟ್ಟಿಲ್ಲದೆ ಸೀಟಿನ ಕೆಳಗೆ ಮಲಗಿದ್ದ ಇವನನ್ನು ಟ್ರೈನಿಂದ ಇಳಿಸಿಬಿಟ್ಟನಂತೆ. ಹಾಗೆ ಟ್ರೈನಿಂದ ಇಳಿದ ಶಿವ ಅಲ್ಲಿ ಒಂದೆರೆಡು ತಿಂಗಳು ಹಳೆ ಪ್ಲಾಸ್ಟಿಕ್ಕು, ಬಾಟಲು ಹೆಕ್ಕಿ ಗುಜರಿಗೆ ಮಾರಿ ಬದುಕಿದನಂತೆ. ಒಂದು ಗೋಣಿಚೀಲ ತುಂಬ ಹಳೆ ಪ್ಲಾಸ್ಟಿಕ್ಕು ಹೆಕ್ಕಿದರೆ ಸಿಗುವುದು ಒಂದು ರೂಪಾಯಿ. ಇದು ಬೇಡವೆಂದು ಅಲ್ಲಿರುವ ಬಂದೇನವಾಜರ ಗೋರಿಯ ಮುಂದೆ ಬಿಕ್ಷಕ್ಕೆ ಕುಳಿತ ಫಕೀರರ ನಡುವೆ ಕುಳಿತನಂತೆ. ಆ ಫಕೀರರು ಇವನಿಗೆ ದೋಲು ಕೊಟ್ಟು, ಕವ್ವಾಲಿ ಕಲಿಸಿ, ಊರೂರು ಕರಕೊಂಡು ತಿರುಗಿದರಂತೆ. ಎಲ್ಲರೂ ಇವನನ್ನು ಫಕೀರ್ ಶಿವ, ಹಜ್ರತ್ ಶಿವ ಎಂತಲೇ ಕರೆಯುತ್ತಾರಂತೆ. ಹಾಗೆ ಫಕೀರರ ಜೊತೆ ಡೆಲ್ಲಿ ಹಜರತ್ ನಿಜಾಂ, ಅಜ್ಮೀರ್ ಖ್ವಾಜಾ ಮೊಹಿಯುದ್ದೀನ್, ಅದೋನಿ ಶೆಹ್ಜಾದಾ ವಲಿ, ಬೆಂಗಳೂರು ಮಸ್ತಾನ್ ಔಲಿಯಾ, ಅರಸೀಕೆರೆಯ ಗವಿ ದರ್ಗಾ, ಹುಣಸೂರು ರತ್ನಪುರಿ ಬೀಬಿ ದರ್ಗಾ ಅಂತೆಲ್ಲ ಮೂವತ್ತು ವರ್ಷ ಓಡಾಡಿಕೊಂಡಿದ್ದವನಿಗೆ ನಾಲ್ಕು ತಿಂಗಳ ಹಿಂದೆ ತಾಯಿ ರತ್ನಮ್ಮನ ನೆನಪಾಯಿತಂತೆ. ಹಾಗೆ ನೆನಪಾದವನು ಸೀದಾ ಕುಶಾಲನಗರಕ್ಕೆ ಬಂದು ಹಳೆಯ ಕಾಕಾ ಹೋಟೆಲ್ಲಿನಲ್ಲಿ ರತ್ನಮ್ಮನ ಕೇಳಿದನಂತೆ. ರತ್ನಮ್ಮ ಬಂದಳಂತೆ. ಅವಳಿಗೆ ಈ ಫಕೀರ ಯಾರು ಅಂತ ಗೊತ್ತಾಗ್ಲಿಲ್ಲವಂತೆ. ‘ಅಯ್ಯೋ ಅಮ್ಮಾ ನಾನೇ ಶಿವ ನಿನ್ನ ಮಗಾ’ ಅಂತ ತಬ್ಕೊಂಡನಂತೆ. ರತ್ನಮ್ಮ ಮಗನ ಮೂಗಿನಲ್ಲಿರುವ ಮಚ್ಚೆ ನೋಡಿದ್ಲಂತೆ. ಅವನ ಚುಚ್ಚಿದ್ದ ಕಿವಿಯ ತೂತ ಮುಚ್ಚಿಹೋಗಿದ್ದನ್ನ ನೋಡಿದ್ಲಂತೆ. ‘ಅಯ್ಯೋ ಶಿವಾ ನನ್ನ ಮಗಾ’ ಅಂತ ಅವಳೂ ಅಳಲಿಕ್ಕೆ ಶುರು ಮಾಡಿದ್ಲಂತೆ.
ಆಮೇಲೆ ಕಳೆದ ನಾಲ್ಕು ತಿಂಗಳಿಂದ ಇವರಿಬ್ಬರೂ ಹೀಗೆ ಜೊತೆಗೆ ನಡೆಯುತ್ತಿದ್ದಾರೆ. ಹುಣಸೂರು, ಪಿರಿಯಾಪಟ್ಣ, ಮಡಿಕೇರಿ ಅಂತ ಮಗ ಶಿವ ದೋಲು ಬಾರಿಸುತ್ತಾ, ಕವಾಲಿ ಹೇಳುತ್ತಾ ಬಿಕ್ಷೆ ಎತ್ತುತ್ತಿದ್ದಾನೆ. ತಾಯಿ ರತ್ನಮ್ಮ ಅವನ ಹಾಡಿಗೆ ಅಚ್ಚರಿ ಪಡುತ್ತಾ ಖುಷಿಯಲ್ಲಿ ಅವನ ಹಿಂದೆ ಹೆಜ್ಜೆ ಹಾಕುತ್ತಿದ್ದಾಳೆ.
‘ಸಖತ್ತಾಗಿದೆ ನಿಮ್ಮ ಕಥೆ. ಇನ್ನೊಮ್ಮೆ ಸಿಗುತ್ತೇನೆ. ಆಗ ಇನ್ನೂ ಉಳಿದಿರುವ ಕಥೆ ಹೇಳಿ’ ಎಂದು ಕಾರು ನಿಲ್ಲಿಸಿದೆ. ಮುದುಕಿ ರತ್ನಮ್ಮ ಕಾರಿನ ಬಾಗಿಲು ಹೇಗೆ ತೆಗೆಯುವುದು ಎಂದು ಗೊತ್ತಾಗದೆ ಹಾಗೇ ಕುಳಿತಿದ್ದಳು.
‘ನಿನ್ನ ತಾಯಿ ನನ್ನ ಜೊತೆಗಿರಲಿ ಶಿವಾ, ನೀನು ಹೊರಡು’ ಅಂತ ತಮಾಷೆ ಮಾಡಿದೆ.
‘ಅಯ್ಯೋ ಎಲ್ಲಾದರೂ ಉಂಟಾ ಶಿವನೇ ಆಕೀ ನನ್ನ ದೌಲತ್ತು ನಂಗೇ ಬೇಕು’ ಎಂದು ಬಾಗಿಲು ತೆಗೆದು ಕಾರಿನಿಂದ ಇಳಿಸಿದ. ಆಮೇಲೆ ಅವರಿಬ್ಬರೂ ಹುಣಸೂರು ರತ್ನಪುರಿ ರಸ್ತೆಯಲ್ಲಿ ಮರೆಯಾದರು.
(ವಿಜಯ ಕರ್ನಾಟಕದಲ್ಲಿ ಪ್ರಕಟಿತ)