ಮೇ ೧೯, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಭಾನುವಾರದ ವಿಶೇಷ: ರಾಜೀವ ನಾರಾಯಣ ನಾಯಕ ಕತೆ `ಎಸ್ಸೆಮ್ಮೆಸ್ ೩-ಕಲ್ಲು ಕರಗುವ ಸಮಯ’    
ರಾಜೀವ ನಾರಾಯಣ ನಾಯಕ
ಶನಿವಾರ, 26 ಮೇ 2012 (08:32 IST)
ಚಿತ್ರಗಳು: ವಿಷ್ಣು

ನೀರುಬಿಡುವಂವ್ಗೆ ಅದೇನು ಸಂಕಟ ಬಂತೋ! ಸತ್ತಂವ ಇಂದು ನೀರೇ ಬಿಟ್ಟಿಲ್ಲ. ಹೂಗಿಡಕ್ಕೆ ಹಾಕಲೂ ಟಾಕಿಯಲ್ಲಿ ನೀರಿಲ್ಲ. ದಿನಾ ಹೂಕೊಡುವ ದಾಸಾಳ ಗಿಡಕ್ಕಾದರು ಹನಿನೀರು ಸಿಡಿಬೇಕು. ಊರಿಂದ ಪ್ಯಾಟಿಗೆ ಬಂದು ಮನೆಕಟ್ಟಿ ಉಳ್ಕಂಡಾಗಿದೆ. ಈ ಬಡಾವಣೆಯಲ್ಲಿ ಎಲ್ಲಿ ಮನೆಮನೆಗೆ ಬಾವಿ? ಮುನ್ಸಿಪಾಲ್ಟಿ ನೀರಲ್ಲಿ ಹೇಗೋ ಇಷ್ಟು ದಿನ ಕಾಲ ಕಳೆದಾಯ್ತು. ಈ ವರ್ಷ ಬಾವಿ ತೋಡಲು ಹಾಕ್ಕೊಂಡಾಗಿದೆ. ದೆವ್ರ ಪುಣ್ಯದಿಂದ ಬಾವಿಗೆ ನೀರ ಬಂದ್ರೆ ಸಾಕು, ಈ ರಗಳೆ ತೀರುವುದು... ಪಾರತಕ್ಕರ ಬಾವಿಯಿಂದ ಸೇದಿ ತಂದ ನಾಲ್ಕು ಕೊಡ ನೀರು ಹಂಡೆಯಲ್ಲಿದೆ. ಕೈಕಾಲು ತೊಳೆದು ದೆವರಿಗೆ ದೀಪ ಹಚ್ಚಬೇಕು. ಇಂದು ದೀಪ ಹಚ್ಚುಕೆ ಆಗುದೋ ಇಲ್ಲವೋ? ಎರಡೆರಡು ಸತಿಗೆ ಬಚ್ಚಲಿಗೆ ಹೋಗಿ ಬಂದಳು.

“ಕಾರವಾರಕ್ಕೆ ಹೋಗಬತ್ತಿ’’ ಅಂತ ಬೆಳಗಾಗೇ ಹೋದ ಕಾಂತ ಇನ್ನು ಮನೆಗೆ ಬಂದಿಲ್ಲ. ಏನ ಬಿಸಿನೆಸ್ಸೋ. ಅನುಮಾನ ಇಟ್ಟುಕೊಂಡು ದೇವರ ಕೋಣೆಗೆ  ಹೊಕ್ಕುದ ಯಾಕೆ? ಕಾಂತ ಬಂದ ಮೇಲೆ ಹೇಳಿದರಾಯ್ತು. ಅದೇನೋ ಮೊಬೈಲ್ ಸದ್ದಾಯಿತಲ್ಲ. ರಿಂಗ್ ಟೋನ್ ಅಲ್ಲ. ಎಸ್ಸೆಮ್ಮೆಸ್ಸು. ಹಾಳಾದ ನೆಟ್ ವರ್ಕನವ್ರು ಏನೇನೊ ಕಳಸ್ತಿರ್ತಾರೆ. ತಡಿ, ನೋಡುವಾ… ಇದ್ಯಾರದೋ ನಂಬರು. ಯಾರ್ದಪ್ಪ? ಈಗೆಂಥಾ ಹಬ್ಬನಾ ಹುಣ್ಣಿಮೆಯಾ, ವಿಶ್ ಮಾಡೂಕೆ? ಯಾರದಿರಲಿ, ನೋಡೇ ಬಿಡ್ತಿ....

“ಈ ಸಂಜೆ ಸುಂದರ, ನಿನ್ನ ನೆನಪು ಸುಮಧುರ, ನೀ ಜೊತೆಯಿರದೇ ಏನೋ ಒಂಥರ..”

ಇದ್ಯಾವ ಕಪಿಯಪ್ಪ. ಯಾರಿಗೋ ಕಳಿಸಿದ್ದು ತಪ್ಪಿ ಇಲ್ಲಿ ಬಂದಿರಬೇಕು. ಮೊಬೈಲ್ ಅಲ್ಲೇ ಬಿಟ್ಟು ಕಾಂತ ಬಂದನೋ ನೋಡಲು ಗೇಟು ದಾಟಿ ರಸ್ತೆಯಲ್ಲಿ ದೂರದ ವರೆಗೆ ಕತ್ತು ಚಾಚಿದಳು. ಮುಸ್ಸಂಜೆ ಬೆಳಕಲ್ಲಿ ನಡೆದಾಡುವವರು ಕತ್ತಲು ಮೆತ್ತಿಕೊಂಡು ತಿರುಗಾಡುತ್ತಿದ್ದರು. ಎದುರು ಮನೆಯ ಪಾರತಕ್ಕ “ಯಾಕ ತಂಗಿ, ನಿನ್ನ ಗಂಡ ಇನ್ನೂ ಬರಲಲ್ಲ?” ಅಂದಳು.

“ಅಕ್ಕ, ನೋಡೇ ಇವರ... ಕತ್ತಲಿಯಾದಮೆನಾದ್ರೂ ಮನಿಗೆ ಬರಬ್ಯಾಡ? ದೆವ್ರಿಗೆ ದೀಪ ಕಚ್ಚದೇ ಹಂಗೇ ಇಂವೆ” ಎಂದು ಹೇಳುವಷ್ಟರಲ್ಲಿ ಕಾಂತ ಎದುರಿಗೆ ಪ್ರತ್ಯಕ್ಷನಾಗಿ ``ಯಾಕೆ ಏನಾಯ್ತ? ಇಡೀ ದಿನ ನಿನ್ನ ಪೂಜೆ ಮಾಡ್ತೆ ಮನೀಲೆ ಕೂತಿರ್ಬೇಕೆ?” ಎಂದು ಒಳಗೆ ಹೋದ. ಯಾವುದಕ್ಕೋ ರೊಂಗ್ ಆಗೇ ಬಂದಿದ್ದ.

“ಏನ್ ನಿನ್ನ ಗಂಡ ಆರ್ಭಟದ ಮೆನೆ ಬಂದ್ಯಾ?” ಅಂದಳು ಪಾರತಕ್ಕ.

“ಅಕ್ಕ, ಈ ಕಲ್ಲಕಣಿ ದಂದಿ ಸಾಕಾಗಿದ ಅವರಿಗೆ. ಮನಿಕಟ್ಸು ಜನ ಚೀರಿಕಲ್ಲ ಹಾಕ್ಸಂಬುದು, ದುಡ್ಡಿಗೆ ಸತಾಯ್ಸುದು...ಇವ್ರ ನನ್ಮೆನೆ ಸಿಟ್ಮಾಡುದು” ಎಂದಳು. 

“ಈ ಗಂಡಸರೆ ಹಂಗೆ... ನೀ ಬೆಜಾರ ಮಾಡಬೆಡಾ ಹೋಗ ತಂಗಿ” ಎಂದು ಪಾರತಕ್ಕ ಸಮಾಧಾನ ಮಾಡಿ ಕಳುಹಿಸಿದಳು.

ಗಂಡ ಗುಂಡು ಹಾಕಿ ಬಂದಂಗಿದೆ. ತಾನು ಮುಟ್ಟಾಗಿದ್ದೇನೆ. ದೆವರಿಗೆ ದೀಪ ಕಚ್ಚುವವರ್ಯಾರು? ಮನೆ ಯಾಕೋ ಬಿಕೋ ಅನಿಸಿತು. ಅಳು ಬಂದಂತೆ ಆಯಿತು. ಮಕ್ಕಳನ್ನು ಇಂಜಿನಿಯರಿಂಗ್ ಕಲಿಯಲು ಹೊರಗೆ ಹಾಕ್ಕೊಂಡಾಗಿದೆ. ಇಬ್ಬರೂ ಒಂದೇ ಊರಲ್ಲಿದ್ದರೆ ಅಲ್ಲೆ ಹೋಗಿ ಉಳ್ಕಬಿಡ್ತದೆ... ಅಂವ ಮಗ ಬೆಂಗಳೂರಲ್ಲಿ, ಮಗಳು ಬೆಳಗಾಂವನಲ್ಲಿ. “ಚೆಂದಾಗೆ ಉಂಬೂಕು ಮನಸು ಬರೂದಿಲ್ಲ, ಮಕ್ಕಳ ಬುಡಕ್ಕಿಲ್ದೆ” ಎಂದಳು. “ನೀ ಮನಸ ಮಾಡದ್ರೆ ಮತ್ತುಂದಕ್ಕೆ ಟ್ರೈ ಮಾಡುವಾ” ಎಂದ ಕಾಂತ... ಮನೆಗೆ ಬಂದ ಮೇಲೆ ಇನ್ನೊಂದು ಪೆಗ್ಗು ಒಳಗಿಳಿಸಿ ಸ್ವಲ್ಪ ಮೂಡಿಗೆ ಬಂದಂಗಿತ್ತು. ಆದರೆ ಕಾಂತ ಕುಡಿದಾಗ ಅದೆಷ್ಟೇ ಚಂದಾಗಿ ಮಾತಾಡಿದರೂ ಅದ್ಯಾರೋ ಕಂಡವರ ಮಾತು ಅನಿಸುತ್ತದೆ ಇವಳಿಗೆ. “ಸಾಕ ಸುಮ್ನಿರಿ, ಹುಟ್ಟಿದ ಇಬ್ಬರನ್ನೇ ಸಮ ದಾರಿ ಮುಟಸದ್ರೆ ಸಾಕಾಗಿದ” ಎಂದು ಗಂಡನ ಉಮೇದಿಯನ್ನು ಅಲ್ಲೇ ತುಂಡುಮಾಡಿ ತಾನು ಮೂಡಲಿಲ್ಲ ಎಂಬ ಸೂಚನೆ ನೀಡಿದಳು. ಕಾಂತನಿಗೆ ರೆಡ್ ಲೈಟ್ ಸಿಗ್ಲಲ್ಲು ಸಿಕ್ತು. ಮತ್ತೆ ಮಾತಾಡಲಿಲ್ಲ.

ಟಿವಿಯಲ್ಲಿ ಬರುತ್ತಿದ್ದ ಯಾವುದೊ ಧಾರಾವಾಹಿ ಮೇಲೆ ಅವಳ ಗಮನ ಹೋಗುತ್ತಿಲ್ಲ. “ಶ್ಯಿ, ಕಥೆ ಮುಂದೋಗುದೇ ಇಲ್ಲಪ್ಪ” ಎಂದು ಗೊಣಗಿಕೊಂಡಳು. “ಕತೆ ನಿಂತೋದದ್ದ ಗುತ್ತಾಗುಕೆ ನಿಂಗೆ ನೂರಾ ಒಂದನೆ ಕಂತು ನೋಡಬೇಕಾಯ್ತಲ್ವೆ” ಎಂದು ಕಾಂತ ನ್ಯೂಸ್ ಚ್ಯಾನೆಲ್ಲುಗಳನ್ನು ಹಚ್ಚಿಕೊಂಡ. ಸರಕಾರ ಸುಭದ್ರ, ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ ಅನ್ನೋ ರಾಜಕಾರಣಿಗಳು. “ಇಲ್ಲೂ ಅದೇ ಕತೆಯಾಯ್ತಲ್ರಿ” ಎಂದು ಮಲಗಲು ಹೋದಳು. ಎಂದಿನಂತೆ ಮಲಗುವ ಮೊದಲು ಮಕ್ಕಳಿಗೆ ಫೋನ್ ಮಾಡಲು ಮೊಬೈಲ್ ಎತ್ತಿಕೊಂಡರೆ ಮೆಸೇಜೊಂದು ಬಂದು ಬಿದ್ದಿತ್ತು.

“ರಾತ್ರಿ ನೀನಿಲ್ಲದೆ ಸುಡುತಿದೆ ನನ್ನೆದೆ,ಪ್ರೇಮ ಚಂದನ ತೇದುಹಚ್ಚಲು ನೀ ಬರಬಾರದೆ!”

ಅದೇ ಸಂಜೆಯ ನಂಬರೇ... ಕೊನೆಯಲ್ಲಿ ೫೪೫. ಶ್ಯಿ, ಇದ್ಯಾರಪ್ಪ? ತಲೆಕೆಟ್ಟಿದ್ಯೋ ಹೆಂಗೆ? ಕಾಂತನಿಗೆ ತೋರಿಸಲು ಹೊರಗೆ  ಹಾಲಿಗೆ ಬಂದರೂ ಬಾಗಿಲು ದಾಟುವಷ್ಟರಲ್ಲಿ ಮನಸು ಬದಲಾಗಿ ಬೆಡಾ ಅಂತ ಸುಮ್ಮನಾದಳು. ದೀಪ ಆರಿಸಿ ಹಾಸಿಗೆ ಮೇಲೆ ಬಿದ್ದುಕೊಂಡಳು... ಮಕ್ಕಳ ಹೊರತು ನನ್ನ ನಂಬರು ಯಾರಿಗೂ ಗೊತ್ತಿಲ್ಲ. ಎಸ್ಸೆಮ್ಮೆಸ್ಸು ಹೆಂಗೆ ಬಂತು? ಸಾಯ್ಲಿ, ಮತ್ತೆ ಬಂದರೆ ನೋಡ್ಕಂಡರಾಯ್ತು ಎಂದು ಕಣ್ಣುಮುಚ್ಚಿದಳು.

*     

ಬೆಳಿಗ್ಗೆ ನೀರು ಬೇಗ ಬಂದಿತ್ತು. ಒಳಗೆಲ್ಲ ತುಂಬಿ ಆದ ಮೇಲೆ ಹೂಗಿಡಗಳಿಗೆ ನೀರು ಹಾಕುವಾಗ ಓಣಿಯ ಕೊನೆಯ ಮನೆಯ ಹೊನ್ನಪ್ಪಯ್ಯ ಬರುತ್ತಿದ್ದ. ಅವನನ್ನು ನೋಡೋದೋ ಹಿಂಸೆ. ಏನೋ ವಠಾರದವನು ಅಂತ ಮುಗುಳ್ನಕ್ಕರೂ ಸಾಕು, ಎದೆಮೇಲೆ ಕಣ್ಣುಹಾಕಿಯೇ ಹೋಗುವುದು, ಸತ್ತಂವ. ರಸ್ತೆಗೆ ಬೆನ್ನು ತಿರುಗಿಸಿ ನಿಂತಳು.

“ನೀರಿಲ್ಲದೆ ಹೂಗಿಡ ಎಲ್ಲ ಸುಡುತಿವೆ, ಚಂದಾಗಿ ನೀರು ಸೇದು ಹಾಕು” ಎಂದಾಗ ಅವಳು ತಿರುಗಲೇ ಬೇಕಾಯಿತು. ಒಮ್ಮೆ ನಕ್ಕಂತೆ ಮಾಡಿ ಮತ್ತೆ ಹಣಕಿದಳು. ಅವನು ಮುಂದೆ ಹೋದರೂ ಕೈಗೆಲ್ಲ ರೋಮರಾಶಿಯಿರುವ ಕೋರೆಹಲ್ಲುಗಳ ಪ್ರಾಣಿಯೊಂದು ಹಲ್ಲುಕಿಸಿದು ಬೆನ್ನ ಹಿಂದೇ ನಿಂತಿರುವಂತೆ, ಶ್ಯಿ!!

“ಸುಡುತಿದೆ...ಚಂದಾಗಿ” ಏನೋ ಅಂದ. ಅರೆ! ರಾತ್ರಿ ಮೆಸೇಜ್ನಲ್ಲೂ ಅಂಥದ್ದೇ ಶಬ್ದಗಳಿತ್ತಲ್ಲ! “ಸುಡುತಿದೆ ಮನ.. ಚಂದನಬಡಿ” ಹೀಗೇನೋ.. ಅಂದರೆ ಇಂವದೇ ಆಟ ಇರಬಹುದೆ ಹೆಂಗೆ? ಶ್ಯಿ!

ಕಾಂತನಿಗೆ ಎರಡನೆ ಬಿಸಿದೋಸೆ ಪ್ಲೇಟಿಗೆ ಹಾಕುವಾಗ “ನೀವ್ಯಾರಿಗು ನನ್ನ ಮೊಬೈಲ್ ನಂಬರ್ ಕೊಡ್ಬೇಡಿ ಹಾಂ” ಅಂದಳು. “ಏನ್ ನೀ ಐಶ್ವರ್ಯ ರೈನಾ, ಕರೀನಾ ಕಪೂರನಾ, ನಿನ್ನ ನಂಬರಿಗೆ ಡಿಮ್ಯಾಂಡ್ ಬರೂಕೆ?” ಅಂದ.

ದೋಸೆಕಾವಲಿ ಜೋರಾಗಿ ಚೊರಗುಟ್ಟಿತು.

*

ಸಂಕಷ್ಟಿ ದಿನ ಮಂಗಲಿ ಬೆಳಿಗ್ಗೇನೆ ಎದ್ದು ಸ್ನಾನ ಮುಗಿಸಿ ರಿಕ್ಷಾ ಮಾಡಿ ಊರಿಗೆ ಹೊರಟಿದ್ದಳು. ಪಾರತಕ್ಕ “ಬಾವಿ ಕಡಿಸ್ತಿವ್ರಿ, ಅಮ್ನೋರಿಗೆ ಪೂಜಿ ಮಾಡ್ಸಕಾ ಬಾ ತಂಗಿ” ಅಂತ ಹೇಳಿದ್ದಳು. ಕಾಂತನಿಗೆ ಹೇಳಿದರೆ ”ಊರು ಬಿಡುವಾಗ ಅಮ್ನೋರ ಕೇಳ್ಕಂಡೆ ಬಿಟ್ಟದ್ಯಾ?” ಅಂದಿದ್ದ. ಮಕ್ಕಳ ಶಾಲೆ ಕಾಲೇಜಿಗೆ ಅನುಕೂಲ ಆಗ್ಲಿ ಅಂತ ಪ್ಯಾಟಿಯಲ್ಲೆ ಮನಿಕಟ್ಟಿ ಉಳಿಲಿಕ್ಕೆ ತಾನೆ ಕಾರಣ ಆದದ್ದು ಹೌದು. ಆ ಸಿಟ್ಟು ಇನ್ನೂ ಮನಸಲ್ಲಿಕ್ಕಂಡರಲ್ಲ ಇವ್ರ... ಮನೆ ದೆವ್ರಿಗೆ ಅಮ್ನೋರು ದೆವ್ರಿಗೆ ಪೂಜೆ ಕೊಟ್ಟು ಕಾಯಿ ಒಡೆಸ್ಕೊಂಡು ಗುನಗರಿಂದ ಬಾವಿಗೆ ಆದಷ್ಟು ಬೇಗ ಜಲ ಕಾಣಿಸಲು ದೆವರಲ್ಲಿ ಹೇಳಿಕೆ ಮಾಡಿಸಿ ಬರುವಷ್ಟರಲ್ಲಿ ಕಾಂತ ಕಲ್ಲುಕಣಿಗೆ ಹೋಗಿ ಆಗಿತ್ತು. “ದೆವ್ರ ಪ್ರಸಾದನೂ ತಕ್ಕಣ್ದೇ ಹಂಗೇ ಹೋದರಲ್ಲ” ಎನ್ನುತ್ತಾ ಒಳಬಂದಳು.

ಒಳಗೆ ಬಂದವಳೇ ಸೀರೆ ಕಳಚಿ ನೈಟಿ ಜಾರಿಸುವಾಗ ಅದರ ಹುಕ್ಕು ಕೂದಲಿಗೆ ಸಿಕ್ಕಿಕೊಳ್ಳುವುದಕ್ಕೂ ಮೊಬೈಲ್ ಟಿನ್ ಆಗುವುದಕ್ಕೂ ಸಮ ಆಯಿತು. ಆ ಹಾಳಾದ ಮೊಬೈಲ್ ತೆಗೆದು ಹೊರಗೆ ಬಿಸಾಕುವಷ್ಟು ಸಿಟ್ಟು ಬಂತವಳಿಗೆ. ಆ ಕಡೆ ಕಣ್ಣೆತ್ತಿಯೂ ನೋಡದೆ ಹೊಟ್ಟೆಗೇನಾದರೂ ಹಾಕ್ಕಣ್ತಿ ಅಂತ ಅಡಿಗೆ ಕೋಣೆಗೆ ಹೋದಳು. ಮಾಡಿದ ತಿಂಡಿಯನ್ನು ಬಾಯಿಗೆ ಹಾಕಬೇಕು... ತಡಿ, ಮಕ್ಕಳದೇ ಇದ್ರು ಇತ್ತು, ನೋಡೇ ಬಿಡ್ತಿ ಎನ್ನುತ್ತಾ ಪ್ಲೇಟು ಅಲ್ಲೇ ಬಿಟ್ಟು ಹೊರಬಂದಳು. “...ಕ್ಲಾಸಲ್ಲಿ ಕೂತಾಗ ನಿನ್ನ ನೆನಪಾದರೆ ಅಮ್ಮಾ ಅಂತ ಮೆಸೇಜ್ ಮಾಡಿ ನಿನ್ನ ಮಡಿಲಿಗೆ ಬಂದಬಿಡುವೆ’’ ಎಂದಿದ್ದಳು ಮಗಳು. ಅವಳೇ ಏನಾದ್ರು ಬರೆದಿರಬಹುದು... ಇನ್ನೂ ಸಣ್ಣ ಬಾಲೆತರ ಮಾಡ್ತಾಳೆ... ಓಪನ್ ಮಾಡಿದರೆ ಅಯ್ಯೋ ಮತ್ತದೇ .....೫೪೫!

“ಸುರಿವ ಸೂರ್ಯಕಿರಣ ಅರಳುವ ಹೂಗಂಧ ಹಾರುವ ಹಕ್ಕಿಸಾಲು ನಿನ್ನ ನೆನಪನ್ನೇ ಬೆಳಗುತಿವೆ”

ಶ್ಯಿ! ತಂಗ್ಯಾಕೆ ಮೊಬೈಲು ಮನೆಯಲ್ಲೆ ಇರುವವಳಿಗೆ, ಅಂದ್ರೂ ಮಗ ದೀಪಾವಳಿಗೆ ಬಂದಾಗ “ಮೊಬೈಲ್ ದುನಿಯಾನೇ ಬೇರೆ ಅಮ್ಮ” ಎಂದು ಅಪ್ಪನಿಗೆ ಹೇಳಿ ಅದನ್ನು ಕೊಡಿಸಿದ್ದ. “ಇದನ್ನ ಕೈಲಿ ಹಿಡಿದರೆ ಸಾಕು, ಇಪ್ಪತ್ತು ವರ್ಷ ಸಣ್ಣವಳಾಗಬಿಡ್ತಿಯಾ...” ಅಂತ ನಕ್ಕಿದ್ದ. “ಈ ಎಸ್ಸೆಮ್ಮೆಸ್ ಇದೆಯಲ್ಲ ಅದು ಬಂಬಾಟಮ್ಮ. ಮನಸುಗಳು ಕನಸುಗಳಲಿ ದಾಟಾಡಲು ಇರುವ ದೋಣಿ.... ಎಷ್ಟೋ ಸಲ ನಾವು ಹೇಳಬೇಕಾದನ್ನು ಹೇಳೋಕಾಗದೇ ಒದ್ದಾಡ್ತೇವೆ. ಆಗೆಲ್ಲ ಒಂದು ಸಂದೇಶದ ಮೂಲಕ ಮನಸನ್ನು ತಲುಪಿಬಿಡಬಹುದಮ್ಮ... ಅಪ್ಪನಿಗೆ ಒಂಚೂರು ರೋಮ್ಯಾಂಟಿಕ್ ಎಸ್ಸೆಮ್ಮೆಸ್ ಕಳ್ಸು. ಅಮೇಲೆ ನೋಡು ತನ್ನ ಬಿಸಿನೆಸ್ಸಿನ ಗಂಟು ಮುಖ ಸಡಲಿಸಿ ಹ್ಯಾಂಗೆ ಮೂಡಲ್ಲಿ ಇರ್ತಾನೆ. ನಿಮ್ಮ ಜಗಳ ಮನಸ್ತಾಪಕ್ಕೆಲ್ಲ ಪುಲ್ ಸ್ಟಾಪ್ ಬೀಳುತ್ತೆ...” ಅಂದಿದ್ದ ಮಗ.

“ಶ್ಯಿ ಹೋಗೊ! ಮೊದ್ಲು ಈ ನಿನ್ ಬೆಂಗಳೂರ್ ಭಾಷೆ ಇಲ್ಲಾಡುದ ಬಿಡ. ನಂಗೆ ನೀನ ಬ್ಯಾರೆ ಯಾರೋ ಅನ್ಸಬಿಡ್ತದೊ, ತಮ್ಮ’’ ಅಂದು ಬೈದಿದ್ದಳು. ಮಕ್ಕಳು ಎಷ್ಟು ಬೇಗ ದೊಡ್ಡವಾಗಿಬಿಡ್ತವೆ! ಮೊನ್ನೆ ಮೊನ್ನೆ ಹುಟ್ಟಿದಂವ ಉಪದೇಶ ಮಾಡುವಷ್ಟು ದೊಡ್ಡ ಗಂಡಸಾಗಬಿಟ್ಟ! ಅಲ್ಲ, ಮಕ್ಕಳು ಎಷ್ಟು ಸೂಕ್ಷ್ಮ! ಅಪ್ಪ ಅಮ್ಮ ನಡುವಿನ ಮನಸ್ತಾಪ ಹೆಂಗೆ ತಿಳಿದೋಗ್ಬಿಡ್ತದೆ, ಕಳದವ್ಕೆ, ಶ್ಯಿ!

ಕನಸನು ದಾಟಾಡಿಸೋ ದೋಣಿ ಅಂದಿದ್ದ.ಕರ್ಮ! ಇಂಥ ಎಸ್ಸೆಮ್ಮೆಸ್ ಬತ್ತಿದ್ರೆ ಮೊಬೈಲ ಬಿಸಾಕಬಿಡ್ತಿ!

ಪ್ಲೇಟಿಗೆ ಹಾಕಿದ ತಿಂಡಿ ಪ್ಲೇಟಿನಲ್ಲೇ ಉಳಿಯಿತು.                                                    

*                                                

“ಮುಂಜಾನೆಯ ಇಬ್ಬನಿ ಹನಿಗಳಂತೆ ಹೊಳೆವ ನಯನಗಳು ನಿನ್ನವು. ಕಣ್ಣ ಪಸೆಯಲ್ಲಿ ತೇಲುತಿರುವ ಕನಸುಗಳು ಮಾತ್ರ ನನ್ನವು”

ಚೆನ್ನಾಗಿದೆ ಅನಿಸಿ ಎರೆಡೆರಡು ಬಾರಿ ಓದಿದಳು. ಪರವಾಗಿಲ್ಲ ಆಸಾಮಿಗೆ ಸುಂದರ ಎಸ್ಸೆಮ್ಮೆಸ್ಸು ಬರೆಯೂಕೂ ಬತ್ತಿದ! ಹಾಲ್ ಹಾದು ಹೋಗುವಾಗ ನಿಲುವುಗನ್ನಡಿಯಲ್ಲಿ ಕ್ಷಣ ನಿಂತು ಕಣ್ಣಲ್ಲಿ ಕಣ್ಣಿಟ್ಟು ಹಗುರ ರೆಪ್ಪೆ ಮುಚ್ಚಿದಳು. ಹಿಂದೆ ಯಾರೋ ನಿಂತಂತೆ, ಬಿಸಿಯುಸಿರು ಕಿವಿಬಳಿ ತಾಗಿದಂತೆ...ಗಕ್ಕನೆ ಕಣ್ಣುತೆರೆದಳು. ಯಾರೂ ಇಲ್ಲ! ಶ್ಯಿ!...
ಮಲ್ಲಿಗೆ ಗಿಡಕ್ಕೆ ನೀರು ಹಾಕಬೇಕು. ಪಾರಿಜಾತ ಗಿಡಪೂರ್ತಿ ಹೂ ಅರಳಿಸಿದೆ. ನೆಲಕ್ಕೆ ಉದುರಿದ ಹೂಗಳನ್ನು ಒಂದೊಂದೇ ಹೆಕ್ಕಿ ಸೆರಗಲ್ಲಿ ಒಟ್ಟು ಮಾಡಿದಳು. ಬಾವಿಯಲ್ಲಿ ಚಂದಾಗಿ ನೀರು ಬಂದರೆ ಮನೆಸುತ್ಲೂ ಹೂಗಿಡ ಹಚ್ಚಬೇಕು. ಕಾಲೇಜಿಗೆ ಹೋಗುವಾಗ ಮಂಕಾಳಜ್ಜಿ ಸೂಜಿಮಲ್ಲಿಗೆ ಕೊಯ್ದು ಜಡೆ ಕಟ್ಟಿ ದಣಪೆಯಲ್ಲಿ ನಿಂತು “ತಕ್ಕಾ ಮುಡ್ಕ ಮಗ” ಅಂತ ದಿನಾ ಕೊಡುತ್ತಿದ್ದದ್ದು ನೆನಪಿಗೆ ಬಂತು. ಮಾಸ್ಕೇರಿಯಿಂದ ನಡೆದು ಗಂಗಾವಳಿ ತಾರಿದಾಟಿ ಈಚೆ ಮಂಜುಗುಣಿಯಲ್ಲಿ ಬಸ್ಸು ಹಿಡಿದು ಅಂಕೋಲಿ ಕಾಲೇಜಿಗೆ ಹೋಗುವ ದಿನಗಳು ಅವು. ಗುಡ್ಡ ಬೆಟ್ಟ ಗದ್ದೆ ತೋಟ ಸುತ್ತಿ ಬರುವ ಗಂಗಾವಳಿಯ ಕಿರು ಅಲೆಗಳು ಸೂರ್ಯನ ಎಳೆಯ ಕಿರಣಗಳನ್ನು ತುಳುಕಾಡಿಸುವಾಗಿನ ಶಬ್ದ ಕಿವಿಯಲ್ಲಿ ಇನ್ನೂ ಹಾಗೆ ಇದೆ. ನದಿಯ ಸರಸ ಆತ್ಮೀಯತೆ ಮತ್ತು ಕಡಲಿನ ಪೌರುಷ ಪರಕೀಯತೆಗಳ ಸಂಗಮ ಸ್ಥಾನ ಮಂಜುಗುಣಿ. ದೋಣಿ ನಡೆಸುವ ದಾಲ್ದೇರ ಸಾಯ್ಬ “ಬೇಟಿ, ತುದಿಗೆ ಕುಳ್ಳಬೆಡಾ” ಅಂಬುವ. ಆದರೂ ದೋಣಿಗೆ ನೀರು ತುಳುಕಿ ಮುಖಕ್ಕೆ ಸಿಡಿಯುವ ಆ ರೋಮಾಂಚನಕ್ಕಾಗಿ ತಾನು ಅಂಚಿಗೇ ಕುಳ್ಳುವುದು. ಗಾಳಿಗೆ ದೋಣಿ ತುಯ್ದಾಡುವಾಗ, ತೆರೆಗಳನ್ನು ಏರಿಳಿವಾಗ ಇನ್ನೊಂದು ತುದಿಯಲ್ಲಿ ಅಡಿಗೋಣ ವಿವೇಕ ಬ್ಯಾಲನ್ಸು ಮಾಡುತ್ತಾ ನಿಂತಿರುತ್ತಿದ್ದ. ಬಿಗಿದ ಜಡೆಯಿಂದ ಬಿಡಿಸಿಕೊಂಡ ಖುಷಿಗೆ ಕೂದಲೆಳೆಗಳು ಗಾಳಿಯಲ್ಲಿ ಹಾರಾಡಿ “ನಮ್ಮ ಹಿಡಿಬಾ” ಎಂದು ಮಂಗಲಿಗೆ ಸವಾಲು ಹಾಕುತ್ತಿದ್ದವು. ಮುಡಿದ ಸೂಜಿಮಲ್ಲಿಗೆ ಜಡೆಯಿಂದ ಕಳಚಿದ ಬಿಡಿಹೂಗಳು ನೀರಿಗೆ ಬಿದ್ದು ತೆರೆಗಳಲ್ಲಿ ತೇಲುತ್ತಾ ಆ ತುದಿಗೆ ಬಂದಾಗ ವಿವೇಕ ಬೆರಳುಗಳಲ್ಲಿ ಅವನ್ನು ಗೋರುತ್ತಿದ್ದ. ತೇಲುವ ಹೂ ಎಸಳುಗಳು ನೀರಿಗೂ ಗಂಧ ಬೆರೆಸುತ್ತಿವೆ ಅನಿಸುತ್ತಿತ್ತು. ನೀಲಿನೀಲಿ ನೀರು, ಸುಂಯೆನ್ನುವ ಗಾಳಿ, ತುಳುಕುವ ಅಲೆಗಳು.. ಜಡ ವಸ್ತುಗಳೂ ಜೀವ ತಾಳುವ ಗಳಿಗೆಯದು. ವಿವೇಕನ ಕಣ್ಣಂಚುಗಳಲ್ಲಿ ಅದೇನೋ ಮಾತುಗಳಿವೆ... ದೋಣಿ ಬರುವ ವರೆಗೆ ಈಚೆ ದಡದಲ್ಲಿ ನಮ್ಮ ಪಾದಗಳನ್ನು ನೀರಲ್ಲದ್ದಿ ನಿಂತೆವು. ಮೀನುಮರಿಗಳು ಕಾಲುಕುಟ್ಟಿ ಕಚಗುಳಿಯಿಟ್ಟಾಗ ಸುಮ್ಮನೇ ನಕ್ಕೆವು. ಆದರೆ ಗಂಗಾವಳಿಯಲ್ಲಿ ಅದೆಷ್ಟೋ ನೀರು ಹರಿದು ಕಡಲಾದರೂ ವಿವೇಕನ ಹಿಮಗಟ್ಟಿದ ಮೌನ ಮಾತ್ರ ಕರಗಲೇ ಇಲ್ಲ!

ಈ ಕಾಲವಾದರೆ ಒಂದು ಎಸ್ಸೆಮೆಸ್ಸು ಸಾಕಿತ್ತು. ಮಕ್ಕಳು ಹೇಳುವುದು ಖರೆ! ಇದು ಮನಸನ್ನು ದಾಟಾಡಿಸುವ ದೋಣಿಯೇ..

ಅರೆ! ಎಲ್ಲೆಲ್ಲೋ ತೇಲಿ ಹೋದೆನಲ್ಲ, ಏನಾಗಿದೆ ನಂಗೆ! ಶ್ಯಿ!!

*

“ಶ್ಯೆ! ಹಂಗೆ ಮಾಡದ್ರೆ ಆಗಾ. ಇಂದೇ ದುಡ್ದ ಪೇಮೆಂಟ್ ಮಾಡಿ. ಮನಿಕೋಡೆ ಬಾವಿತೋಡುಕೆ ಹಾಕ್ಕಂಡಿ. ಟ್ರಕ್ಕನ ಸಾಲದ ಕಂತು ತುಂಬಬೇಕ. ಅರ್ಬನ್ ಬ್ಯಾಂಕಿನಿಂದೆ ನೋಟೀಸ ಬ್ಯಾರೆ ಬಂದಿದ. ಡ್ರೈವರಕೋಡೆ ದುಡ್ಡ ಕುಟ್ಟಕಳ್ಸಿ”

ಕಾಂತ ಕಾರವಾರಕ್ಕೆ ಫೋನು ಮಾಡಿ ಕಲ್ಲಿನ ಗಿರಾಕಿಗೆ ಒತ್ತಾಯ ಹಚ್ಚಿದ. ಗಿರಾಕಿ ತನಗಿರುವ ಅದೇನೋ ತಾಪತ್ರಯ ಹೇಳಿ ದುಡ್ಡಿಗೆ ನಾಕದಿನ ನಿಲ್ಲುವಂತೆ ಕೇಳುತ್ತಿದ್ದ.ಕಾಂತ ಫೋನಿಟ್ಟು. “ಹಾಳಾದ್ದ ಕಲ್ಲಕಣಿ ದಂದಿನ ಬ್ಯಾಡಾಗಿದ ಶ್ಯೆ!” ಎಂದು ಕಲ್ಲು ಕಡಿಯುವಲ್ಲಿ ಒಂದು ರೌಂಡು ಹಾಕಿದ. ನಾಲ್ಕಾಳು ಹೊಂಡಕ್ಕಿಳಿದ ಕಣಿಯ ಮೇಲಮೈ ಪರಾಂಬರಿಸಿ ನೋಡಿದ. “ಕೊಗ್ರಿ ದೆವ್ರೆ, ಹಿಂಗೇ ಗಟ್ಟಿ ಅರೆಯೇ ಇರಲಪ್ಪ” ಎಂದು ಕೈಮುಗಿದ. “ಮಣ್ಣಗಿಣ್ಣು ಬಂದರೆ ಕತಿನೇ ಮುಗೀತ” ಅಂದುಕೊಂಡ. ಬದಿಯಲ್ಲಿಯ ಕಣಗಿಲ ಯಂಕ್ಟನ ಕಣಿಗೆ ಎರಡಾಳು ಕಂತ ಹೋಗುದರೊಳಗೇ ಕಲ್ಲತರ ಮುಗ್ದು ಮಣ್ಣು ಬಂದೋಯ್ತಂತೆ. ಹಿಚಕಡ ರಮೇಶನ ಕಣಿಗೂ ಹಂಗೇ ಅಂತೆ. ಗುಂಟೆಗೆ ಅದೆಷ್ಟೋ ಸಾವ್ರ ಕೊಟ್ಟು ಜಾಗ ಲೀಸಿಗೆ ತಕ್ಕಂಡಾಗಿದೆ. ಮೇಲಿನ ಮಣ್ಣಿನತರ ತೆಗ್ಸುಕೆ ಜೆಸಿಬಿ ಮಶೀನಿಗೆ, ಆಳಿಗೆ ಕಾಳಿಗೆ ಅಂತೆ ಸುಮಾರ ಖರ್ಚಾಗಿದೆ. ಸಮ ಕಲ್ಲ ಬಂದ್ರೆ ಏನಾದ್ರೂ ಲಾಭ. ಇಲ್ಲದಿದ್ರೆ ಕುತ್ಗಿ ಕುಯ್ಕಂಡಂಗೆ... ಕಾಂತನ ತಲೆಯಲ್ಲಿಯ ವಿಚಾರಗಳ ಮೆರವಣಿಗೆಗೆ ಕಣಿಯ ಸುತ್ತ ಕಲ್ಲು ಕಡಿವ ಶಬ್ದ ತಾಳಹಾಕುತ್ತಿತ್ತು. ಕಣಿಯಾಳು ಬಸಪ್ಪ ಮಚ್ಚು ಅಲ್ಲೇಬಿಟ್ಟು “ಸಾವಕಾರ್ರ, ರೇಶನ್ನಿಗೆ ದುಡ್ದಬೇಕ್ರಿ” ಅಂತ ಹತ್ತಿರ ಬಂದ. ಲೆಕ್ಕಮಾಡುವಾಗ ಬಸಪ್ಪ “ಸಾವಾಕಾರ್ರ, ನಂಗ ನಾಲಕ್ಕ ಸಾವ್ರ ಹೆಚ್ಚ್ ಬೇಕ್ರಿ. ಊರಿಗ್ ಕಳ್ಸಬೇಕ್ರಿ” ಅಂದ. ಕಾಂತನಿಗೆ ತಲೆ ಗಿರ್ಕ ಆಗಿ“ಅಲ್ವೋ ಮಗನೆ, ಈಗಾಗ್ಲೇ ನಿನ್ನ ಮ್ಯಾನೆ ಹತ್ತಿಪ್ಪತ್ತ ಸಾವ್ರ ಬಾಕಿಯೀದ,ಮತ್ತೆ ಸಾಲ ಕೇಳ್ತಿ ನೀನ, ತಲೆ ಸಮ ಈದೋ?” ಅಂದ. “ಏನ ಮಾಡೋಣ್ರಿ, ಅಪ್ಪಗ ಆಸ್ಪತ್ರ್ಯಾಗ ಇಟ್ಟಾರಂತ್ರಿ. ಫೋನ ಬಂದಿತ್ರಿ.. ಸಾವಕಾರ್ರ ಮಳಗಾಲ ಮುಗ್ಯುದ್ರಾಗ ತೀರಿಸ್ತೀನಿ ತಗೋರಿ” ಅಂದ. ಹೆಚ್ಚು ಬೈದರೆ ರಾತ್ರೋರಾತ್ರಿ ಪೊಟ್ಟಲೆ ಕಟ್ಟಿ ಪರಾರಿ ಆದರೆ ಮತ್ತೆ ಲೇಬರ್ ತರಲು ಬಿಜಾಪುರಕ್ಕೆ ಹೋಗ್ಬೇಕ ಸಾಯ್ಲಿ ಎಮ್ದು ಮೆತ್ತಗಾದ.

ಲೆಕ್ಕದ ಪಟ್ಟಿಯಲ್ಲಿ ಕೊಟ್ಟ ದುಡ್ಡು ಬಂದ ದುಡ್ಡು ಹಚ್ಚಿಕೊಂಡು ”ಶ್ಯೆ! ಸಾಕಾಪ್ಪ ಈ ದಂದಿ” ಎಂದು ಸೈಕಲ್ ಮೋಟರನ್ನು ಹಿಚಕಡ ಕ್ರಾಸನಲ್ಲಿಯ ಹಮ್ಮಣ್ಣನ ಅಂಗಡಿಕಡೆ ತಿರುಗಿಸಿದ.

*

ಹಿಡಿಯಿಂದ ಅಲ್ಲಲ್ಲಿ ಬಲೆ ಚೊಕ್ಕ ಮಾಡತ್ತಿದ್ದಾಗ ನಾಣ್ಯ ಕೆಳಗೆ ಬಿದ್ದ ಸದ್ದಾಯಿತು. ಕಣ್ಣಿಟ್ಟು ಹುಡುಕಿದರೂ ಏನೂ ಕಾಣಲಿಲ್ಲ. ಬಿದ್ದದ್ದು ದುಡ್ದಲ್ಲ. ಮೊಬೈಲಿನಲ್ಲಿ ಮೆಸೇಜು ಟೋನು ಹಾಗೆ ಕೇಳಿಸಿದ್ದು. ಇಲ್ಲ, ಇದನ್ನ ಹಿಂಗೆ ಬಿಟ್ಟರಾಗ. ಇಂದು ಅಂವಗೆ ಮಂಗಳಾರತಿ ಎತ್ತಲೇಬೇಕು. ಹುಲಿಗೆ ಹೆದರಲಿಲ್ಲ, ಕರಡಿಗೆ ಹೆದರಲಿಲ್ಲ ಈ ಕಣ್ಣಿಗೆ ಕಾಣದ ಪಟೆಪಟೆಗೆ ಹೆದರೂದ್ಯಾಕೆ? ಬಟನ್ನುಗಳು ಕಿತ್ತುಬರುವ ಹಾಗೆ ಒತ್ತಿಒತ್ತಿ ನಂಬರನ್ನು ಬರೆದು ಕಾಲ್ ಮಾಡಿಯೇಬಿಟ್ಟಳು. ರಿಂಗಾಗುತ್ತಿದೆ... ಎತ್ತು, ಸಮ ಮಾಡ್ತಿ ನಿಂಗೆ.... ಫೋನ್ ಎತ್ತೊ!ರಿಂಗು ಪೂರ್ತಿಯಾದರೂ ಆ ಕಡೆಯಿಂದ ರಿಸೀವ್ ಮಾಡಲಿಲ್ಲ. ಬಿಡೂದಿಲ್ಲ ನಿಂಗೆ, ಮತ್ತೆ ಕಾಲ್ ಮಾಡಿದಳು. ಈಗ ಫೋನ್ ರಿಸೀವ್ ಮಾಡಿದೆ ಹಂದಿ! ಆದರೆ ಮಾತಾಡುತ್ತಿಲ್ಲ.ಯೇ ಯಾರೋ ನೀನು?... ಉತ್ತರವಿಲ್ಲ. ತಲೆಗಿಲೆ ಕೆಟ್ಟಿದೆಯೇನೋ? ಹೀಗೆ ಅಪರಿಚಿತ ಹೆಣ್ಣಿಗೆ ಮಣ್ಣುಬೂದಿ ಮೆಸೇಜು ಕಳಸ್ತೀಯಲ್ಲ, ಮಾಡುಕೇನು ದಂಧೆಯಿಲ್ವಾ?... ಉಹುಂ ಮಾತೇ ಇಲ್ಲ. ತನ್ನ ಮಾತುಗಳು ನಿರ್ವಾತದಲ್ಲಿ ಸುರಿದಂತೆ ಅನಿಸಿ ಪಿಚ್ಚಾಯಿತವಳಿಗೆ. ಮತ್ತೊಂದ್ಸಲ ಹಿಂಗೆ ಮಾಡು, ಸಿಗ್ದಹಾಕ್ತಿ ತಿಳ್ಕ ಎಂದು ಫೋನ್ ಎಸೆದಳು. ಮೊಬೈಲ್ ಅನಾಥವಾಗಿ ಕೆಳಕ್ಕೆ ಬಿದ್ದು ತುಸು ಹೊತ್ತು ಬೆಳಕುಬಿಟ್ಟು ಕಣ್ಣುಮುಚ್ಚಿತು.

ಮಾನ ಮರ್ಯಾದಿನೆ ಇಲ್ಲದವರು ಶ್ಯಿ, ಎನ್ನುತ್ತಾ  ಮಂಚದ ಮೇಲೆ ಕೂತಳು. ಉಸಿರು ಜೋರಾಗಿತ್ತು. ಎದೆಬಡಿತವೂ. ಈ ನಯಾಪೈಸೆ ಕಾಲ್ ಚಾರ್ಜು, ಫ್ರೀ ಎಸ್ಸೆಮ್ಮೆಸ್ಸು ಬಂದು ನಿರುದ್ಯೋಗ ನಿವಾರಣೆ ಆಗ್ಬಿಟ್ತು ನಮ್ಮ ದೇಶದಲ್ಲಿ.... ಮಾತಾಡು ಹಿಮ್ಮತ್ತಿಲ್ಲ. ಒಂದೂ ಮಾತಾಡದೆ ಹೋದನಲ್ಲ. ಮುಖೇಡಿ! ಯಾರೆಂದು ಗುತ್ತಾದರೆ ಸಮ ಮಾಡ್ತದೆ, ಶ್ಯಿ! ...
ಅಸ್ವಸ್ಥತೆ ಆವರಿಸಿತು. ಹಿಂದೆಮುಂದೆ ತಿರುಗಿದಳು. ಹಾಗೇ ಅಟ್ಟಕ್ಕೆ ಹೋಗಿ ಬಾಲ್ಕನಿಯ ಬಾಗಿಲು ತೆರೆದಳು. ಮೋಡವಿಲ್ಲದ ನೀಲಿ ಆಕಾಶ. ತೆರೇಸಿನ ಮೇಲೆ ಗರಿಚಾಚಿರುವ ಕೆಂದಾಳಿ ಮರ. ಮಗಳು ಹುಟ್ಟಿದಾಗ ನೆಟ್ಟದ್ದು ಅದು. ನೆರಳಲ್ಲಿ ನಿಂತಳು. ಬಿರುಬಿಸಿಲಲ್ಲಿಯ ನೆರಳು ಹಿತವೆನಿಸಿತು. ಯಕಶ್ಚಿತ್ ಮೆಸೇಜಿಗೆ ನಾನು ಅದೇಕೆ ಅಷ್ಟು ಉದ್ವಿಗ್ನಗೊಂಡೆ? ಅದು ಯಾರಿಗೋ ಬರೆದದ್ದಿರಬಹುದು. ಏನೋ ನಂಬರು ತಪ್ಪಾಗಿ ತನಗೆ ಬಂದದ್ದಿರಬಹುದು. ಮಾತೇ ಆಡದೆ ಹೋದ... ಆದರೆ ಫೋನಿಡುವಾಗ ಉಸಿರೊಂದು ತಗುಲಿದಂತಾಯಿತಲ್ಲ! ಆ ಉಸಿರಗಾಳಿಗೆ ಅಂಥ ಕೆಟ್ಟತನವೇನೂ ಅಂಟಿಕೊಂಡಂತಿಲ್ಲ....ಅರೆ, ಅದು  ಕಿಶೋರನೊಬ್ಬನ ಉಸಿರಂತಿದೆ! ಅಯ್ಯೋ ದೇವರೆ!!

ಗಂಟಲು ಕಟ್ಟಿಬಂತು. ಒಳಗೆ ಬಂದು ಬೆಡ್ ಮೇಲೆ ಬಿದ್ದು ತಲೆದಿಂಬಿಗೆ ಮುಖ ಒತ್ತಿಕೊಂಡಳು. ಅವಳಿಗೇನಸಿತೋ ಎದ್ದು ಮತ್ತೆ ರಿಂಗ್ ಮಾಡಿದಳು. ಉಹುಂ, ಫೋನ್ ಎತ್ತತಾಯಿಲ್ಲ. ಎತ್ತತಾನೇ ಇಲ್ಲ. ``ಸಾರಿ ಪುಟ್ಟ, ಬೈದುಬಿಟ್ಟೆ. ನೀನು ಹಾಗೆಲ್ಲ ಎಸ್ಸೆಮ್ಮೆಸ್ ಮಾಡಬಾರದು ಮರಿ, ನಂಗೆ ನಿನ್ನಂತದೆ ಮಕ್ಕಳಿದಾವೆ ಕಂದಾ” ಎಂದು ಮೆಸೇಜು ಬರೆದು ಸೆಂಡ್  ಮಾಡಿದಳು. ಮೆಸೇಜ್ ಸೆಂಟ್ ಅಂತ ಬಂದಾಗ ಆ ಬೆಳಕು ಅದೆಷ್ಟು ಚಂದ ಅನ್ನಿಸಿತೆಂದರೆ ಮೊಬೈಲಿಗೆ ಮುತ್ತಿಟ್ಟಳು... ಶ್ಯಿ! ನಂಗೇನಾಗಿದೆ... ಹಿಂಗೇಕಾಗುತಿದೆ.. ಕಪಾಟು ತೆಗೆದಳು. ಮುಚ್ಚಿದಳು. ಕಾಂತನ, ಮಕ್ಕಳ ಹಳೆಯ ಬಟ್ಟೆಗಳ ಮೇಲೆ ಕೈಯಾಡಿಸಿದಳು. ಕಣ್ಣಂಚಲ್ಲಿ ನೀರಹನಿ ತಡೆದುನಿಂತು ಅಲ್ಲೇ ಆವಿಯಾಗಿ ಸಂಕಟ ಹಾಗೇ ಇಂಗಿತು.

*

ಬಾವಿ ನಲ್ವತ್ತು ಫೂಟು ಕಂತ ಹೋದರೂ ಒರತೆ ಕಾಣಲಿಲ್ಲ. ಬರೀ ಶೇಡಿಮಣ್ಣು ಬರುತ್ತಿದೆ. ಅದೆಷ್ಟೋ ಬಾವಿತೋಡಿ ಅನುಭವವಿದ್ದ ಬೆಳಂಬಾರದ ಗೌಡರು “ಕೆಳಗೆ ಕಲ್ಲರೆ ಇದ್ದಂಗೆ ಕಾಣ್ತಿದು” ಅಂದರು. ಕಾಂತನಿಗೆ ಚಿಂತೆ ಶುರುವಾಗಿತ್ತು. ``ಶಿಲೆ ಬಂದರೆ ಡೈನಾಮೈಟ್ ಹಾಕಿ ಒಡೆಸುವಂಗೂ ಇಲ್ಲ. ಪಂಚಾಂಗ ಹತ್ತಿರವೇ ಇರುದರಿಂದ ಮನೆಗೆ ಜಖಂ ಆಗೂದ ಪಕ್ಕಾ.ಮುಶ್ಕಿಲ್ಲೆ ಆಯ್ತಪ್ಪಾ ಶ್ಯೆ!” ಎಂದ. “ನೀರು ಕಾಣದೇ ಸಿಮೆಂಟಿನ ರಿಂಗು ಇಳಿಸುವ ಪ್ರಸಂಗ ಬರುತ್ತದೋ ಏನೋ” ಎಂದು ಬಾವಿತೋಡುವ ಗುತ್ತಿಗೆ ಹಿಡಿದ ಮಲೆಯಾಳಿ ಪಿಳ್ಳೆ ಅಪಶಕುನ ನುಡಿದ. “ಇಲ್ಲ್ ನೀರ ಬರಲಿಲ್ಲಂತ ಚಿಂತೆ, ಅಲ್ಲ್ ಕಲ್ಲಕಣಿಲೆ ಕಲ್ಲು ಮುಗದು ಮಣ್ಣು ನೀರು ಬರೂದೇನೋ ಅಂಬು ಚಿಂತೆ’’ ಅಂದ. ಮಂಗಲಿಯತ್ತ ತಿರುಗಿ ``ನೀ ದೆವರಲ್ಲಿ ಜಲ ತೋರಿಸೊ ಅಂತ ಹರಕೆ ಮಾಡ್ಕಂಡೆ ಖರೆ. ಆದರೆ ಈ ಬಾವಿಗೆ ನೀರ ಬರದೆ ಕಣಿಯಲ್ಲಿ ಬಂದರೆ...” ಎಂದ. ”ಶ್ಯಿ! ಹಂಗನ್ನಬೆಡಿ ನೀವ ಹಾಂ”ಎಂದಳು. ಮೋಟರ್ ಸೈಕಲ್ಲ ಸ್ಟಾರ್ಟ್ ಮಾಡಿ “ಕಣಿಗೆ ಹೋಗ್ಬತ್ತಿ” ಎಂದು ಹೇಳಿದನಾದರೂ ಅದು ಕಣಿಗೆ ಹೋಗುವ ಹೊತ್ತಲ್ಲ ಎಂದು ಅವಳಿಗೆ ಗೊತ್ತಿತ್ತು. ``ತಡ ಮಾಡ್ಬೆಡಿ” ಅಂದು ಒಳಗೆ ಬಂದಳು.                                                     

ಮುಸ್ಸಂಜೆ ಹೊತ್ತಲ್ಲಿ ಬೇಸರ ಮನೆಯೊಳಗೆ ನಿಶ್ಚಲವಾಗಿ ಕೂತಿತ್ತು.

ಎರಡು ದಿನದಿಂದ ಮೊಬೈಲ್ ಜೀವವೇ ಇಲ್ಲದಂತೆ ತಣ್ಣಗಿದೆ. ಸ್ವಲ್ಪ ನಿರಾಳ ಆದಂತೆ ಅನಿಸಿದೆ. ಆದರೂ ಹಾಲ್ ಹಾದುಹೋಗುವಾಗ ಟೇಬಲ್ಲಿನ ಮೇಲಿಟ್ಟ ಮೊಬೈಲ್ ಪದೇಪದೇ ನೋಡುವುದು ರೂಡಿಯಾಗ್ಬಿಟ್ಟಿದೆ. ಹಾಗೇ ಸುಮ್ಮನೆ ಮೊಬೈಲು ಎತ್ತಿಕೊಂಡರೆ ಶ್ಯೀ! ಮತ್ತೆ ಮೆಸೇಜು ಬಂದು ಕೂತಿದೆ!ಕತ್ತಲೆಯಲ್ಲಿಯ ಪಿಶಾಚಿಯಂತೆ! ಅದೇ....೫೪೫!! ಇಲ್ಲ, ಇದು ಮಕ್ಕಳಾಟ ಅಲ್ಲ, ಕಿಡಿಗೇಡಿಗಳದೇ ಕೆಲಸ. ಕೂಡಲೆ ಮಗನಿಗೆ ಫೋನು ಹಚ್ಚಿ                                       

“ಮೊಬೈಲಿಗೆ ಎಸ್ಸೆಮ್ಮೆಸ್ ಬರದಂಗೆ ಮಾಡುದೆಂಗೆ?” ಎಂದಳು

“ಯಾಕಮ್ಮಾ, ಅಪ್ಪನ ರೋಮ್ಯಾಂಟಿಕ್ ತಂಟೆ ಜಾಸ್ತಿಯಾಯ್ತಾ?”

”ನೀ ಹೇಳ್ತಿಯೊ ಈ ಮೊಬೈಲ್ ಜಪ್ಪ್ ಹಾಕಬೇಕೋ” ಮಂಗಲಿಗೆ ತಡೆಯಲಾರದಷ್ಟು ಸಿಟ್ಟು ಬಂದಿತ್ತು.

”ಕೂಲ್ ಡೌನ್ ಮದರ್ ಕೂಲ್ ಡೌನ್!.. ಏನಮ್ಮ ಎಲ್ರೂ ಮೊಬೈಲು ಇಮೇಲು ಫೇಸಬುಕ್ಕು ಅಂತ ದುನಿಯಾ ದೊಡ್ಡ ಮಾಡ್ಕೊಳ್ತಿದ್ರೆ ನೀನು ಬಾವಿಯೊಳಗಿನ ಕಪ್ಪೆಯಾಗ್ತಿದ್ದೀಯಾ?.... ಹೋಗ್ಲಿ, ಮೊಬೈಲ್ ಸೆಟ್ಟಿಂಗನಲ್ಲಿ ನಂಬರ್ ಬ್ಲಾಕ್ ಮಾಡೋ ಆಪ್ಶನ್ ಇರುತ್ತೆ, ನೋಡು. ಬೇಕಾದ್ರೆ ಅಪ್ಪನ ಹೆಲ್ಪ್ ತಗೊ” ಅಂದ.

*

“ನೋಡಿ, ಎಸ್ಸೆಮ್ಮೆಸು ಬರದಂಗೆ ನಂಬರು ಬ್ಲಾಕ್ ಮಾಡ್ಕೊಡಿ, ಏನೇನೋ ಮಳ್ಳಮಳ್ಳ ಮೆಸೇಜು ಬತ್ತವೆ” ಎಂದಳು.

“ಮಳ್ಳಮಳ್ಳ ಅಂದ್ರೆ?” ಅಂದ.

``ನೀವೆ ನೋಡಿ” ಎಂದು ಮೊಬೈಲು ಬೆಡ್ ಮೇಲೆ ಎಸೆದಳು.

ಕಾಂತ ಅದನ್ನು ನೋಡದೆ “ತಾ, ಮೊಬೈಲ್ ತಾ. ಆ ನಂಬರಿಗೆ ಫೋನ್ ಮಾಡ್ತಿ, ಯಾವ ಬೋಳಿಮಗ ಅಂವ ನೋಡೇಬಿಡ್ತಿ” ಅಂದು ಎದ್ದು ಕೂತ... “ಇಷ್ಟ ಸಣ್ಣ ವಿಷ್ಯಕ್ಕೆಲ್ಲ ರಾತ್ರಿಗೆ ಕೂಗಾಡುದ ಬೆಡಾ, ಈ ಸಿಮ್ ಚೇಂಜ್ ಮಾಡ್ಬಿಟ್ರಾಯ್ತ, ಮನಿಕಣಿ” ಅಂದಳು. ಅರೆ, ಸಿಮ್ ಚೇಂಜ್ ಮಾಡೂ ವಿಷ್ಯ ಈಗಷ್ಟೇ ಹೊಳೆದದ್ದು ಅವಳಿಗೆ ಅಚ್ಚರಿಯಾಯಿತು

“ನೀ ನಿಮ್ಮ ಅಪ್ಪನ ಮನಿಯವ್ರ ಸಂತಿಗೆ ಮೊಬೈಲಲ್ ಮಾತಾಡ್ತಿ. ಅವ್ರ ಯಾರ್ಯಾರಿಗೆ ನಂಬರ್ ಮುಟ್ಸರಬಲ” ಅಂದ.

ಮಂಗಲಿ ಕೋಣೆ ದಾಟುವಾಗ ಸಣ್ಣಕ್ಕೆ “ಗಂಗಾವಳಿ ನದಿದಾಟಿ ಅಡಿಗೋಣ ಬದಿಯಿಂದೆ ಬಂದಿರಬೇಕ ಮೆಸೇಜ” ಎಂದ.

ಮಂಗಲಿ ತಿರುಗಿ ನಿಂತು “ನೀವ ಅಡಿಗೋಣ ಸುದ್ದಿ ಯಾಕ ತಂದ್ರಿ?” ಎಂದಳು.

ಕಾಂತ ಅವಳ ನೋಟದಿಂದ ವಿಚಲಿತಗೊಂಡು ಅಲ್ಲಿಂದೆದ್ದು ಒಳಗೆ ವ್ಹಿಸ್ಕಿ ಬಾಟಲ್ಲು ಹುಡುಕಾಡಿದ.

“ನಿಜ, ನದಿ ದಾಟಾಡಿದವರೆ ಮನಸಿಗೆ ಮುದಗೊಳಿಸೋ ಮೆಸೇಜ ಬರೀಯೂದ ಸಾಧ್ಯ, ಕಲ್ಕಣಿಯಲ್ಲಿ ಕಲ್ಲಾದ ಮನಸಲ್ಲಿ ಪ್ರೀತಿ ಮಾತ ಹೆಂಗೆ ಬರಬೇಕ?” ಎಂದಳು.

ಮೌನ ನಲವತ್ತು ಫೂಟಿಗಿಂತ ಕೆಳಗಿಳಿಯಿತು!  

ಮಂಗಲಿ ಲೈಟ್ ಆರಿಸಿ ಹಾಸಿಗೆಯ ತುದಿಯಲ್ಲಿ ಮಲಗಿಕೊಂಡಳು. ಅವನು ಮಲಗಿದ್ದಲ್ಲೆ ಕೈ ಉದ್ದ ಮಾಡಿ ಮೊಬೈಲ್ ತಕ್ಕಂಡು ಇನಬಾಕ್ಸ್ ಓಪನ್ ಮಾಡಿ ಮೆಸೇಜುಗಳನ್ನು ಒಂದೊಂದಾಗಿ ಓದಿದ. ಹಗುರ ಅಲ್ಲೇ ಇಟ್ಟು ಕಣ್ಣು ಮುಚ್ಚಿದ. ಒಡಲಲ್ಲಿ ಏನೋ ಸಂಕಟ ಹರಿದಾಡಿತು... ಸಣ್ಣಿರುವಾಗೇ ಅಪ್ಪ ಸಂಸಾರದ ಭಾರ ತನ್ನ ಹೆಗಲಿಗಾಕಿ ಹೋದ. ಮೆಟ್ರಿಕ್ ಮುಗಿಸಿ ಕಾಲೆಜಿಗೆ ಹೋಗಬೇಕಾದವ ಹಾಲು ಮಾರುಕೆ ಚೀರಿಕಲ್ಲು ಕಡ್ಸುಕೆ ಬಿದ್ದೆ. ತಂಗಿಯರ ಮದುವೆ ಬಾಳಂತನ ಅದ್ಕೆ ಇದ್ಕೆಲ್ಲ ಬಿಸಿಲು ಬೆಂಕಿಯಲ್ಲೂ ದುಡಿದೆ. ನಂತರ ನಮ್ಮ ಮಕ್ಕಳು ಅವರ ಶಿಕ್ಷಣ. ನಮಗಿಬ್ಬರಿಗೆ ಸಲ್ಲುವ ಸಮಯ ಮಾಡ್ಕೊಳ್ಳಲೆ ಇಲ್ಲ. ಇಬ್ಬರೂ ನೀಳ ಶ್ವಾಸಬಿಟ್ಟು ನಿರಾಳದಲ್ಲಿ ಕೂತ ನೆನಪೆ ಬರೂದಿಲ್ಲ. ನಾ ಬದುಕಿನ ಬೆನ್ನು ಹತ್ತಿದೆನೋ ಅಥವಾ ಅದೇ ಅಟ್ಟಿಸಿಕೊಂಡು ಬಂತೊ? ಶ್ಯೆ! ಕೋಣೆತುಂಬ ನಿಟ್ಟುಸಿರ ಬಿಸಿ ತುಂಬಿತು.

ಹಾಸಿಗೆಯಲ್ಲಿ ಹೊರಳಾಡಿದ. ಎದೆಯೊಳಗೆ ಬಿಸುಸುಯ್ಲು ಹಾಯುತ್ತಿದೆ. ಮಾತು ಗಂಟಲಲ್ಲಿ ಸಿಕ್ಕಿ ನರಳುತ್ತಿದೆ. ಎದ್ದು ನೀರು ಕುಡಿದ. ಅವಳ ಮೈಮೇಲೆ ಕೈಯಿಟ್ಟ. ನಿದ್ದೆಗಣ್ಣಲ್ಲಿ ಎಂಬಂತೆ ತನ್ನ ತೋಳನ್ನು ಅವಳ ತಲೆಯಡಿ ತಂದು ತಲೆದಿಂಬಾಗಿಸಿದ. ಹಗುರ ಅವಳ ಎದೆಯಲ್ಲಿ ಮುಖವಿಟ್ಟ. ಕನಸಲ್ಲಿ ಮಾತಾಡುವವನಂತೆ “ಅವೆಲ್ಲ ನಾನೇ ಬರೆಯಬಹುದಾಗಿದ್ದ ಸಾಲುಗಳು” ಎಂದ. ಹಿಂಡಿ ತೆಗೆದಂಥ ಕಣ್ಣೀರ ಹನಿಯೊಂದು ಅವಳೆದೆ ಮೇಲೆ ಟಪ್ಪಂತು. ಅದು ಕೆಳಗಿಳಿದು ನಾಭಿಯನ್ನು ಸುತ್ತಿ ಕಿಬ್ಬೊಟ್ಟೆಗೆ ಜಾರಿತು. ಅವಳ ಎದೆ, ಒಡಲು, ಕರುಳ ಒಳಗೂ ತಂಪು ನದಿಯಾಯಿತು. ಅವನನ್ನು ಅಪ್ಪಿ ಮಗು ಮಾಡಿಕೊಂಡಳು. ಆ ಅಪ್ಪುಗೆಯ ಹಿತದಲ್ಲಿ ಇನ್ನೇನು ಕಣ್ಣ ರೆಪ್ಪೆ ಮುಚ್ಚಿ ಬರುತ್ತಿದೆ ಅನ್ನುವಾಗ, ಟೇಬಲ್ ಮೇಲಿದ್ದ ಮೊಬೈಲ್ ಟಿನ್ ಎಂದು ಸದ್ದು ಮಾಡಿತು. ಇಬ್ಬರೂ ಒಮ್ಮೆಲೆ ಬೆಚ್ಚಿ ಕಣ್ತೆರೆದರು. ಮೊಬೈಲಿನ ಸಂದೇಶ ಚೆಲ್ಲಿದ ಬೆಳಕು ಇಬ್ಬರ ಕಣ್ಣಲ್ಲೂ ಬೆಳಗುತ್ತಿತ್ತು.

ರಾಜೀವ್ ನಾಯಕರ ಕತೆ `ಎಸ್ಸೆಮ್ಮೆಸ್' ೧

ರಾಜೀವ ನಾರಾಯಣ ನಾಯಕ ಕತೆ `ಎಸ್ಸೆಮ್ಮೆಸ್ ೨' 

ಪುಟದ ಮೊದಲಿಗೆ
 
Votes:  4     Rating: 3.75    
 
 
ಸಂಬಂಧಿಸಿದ ಲೇಖನಗಳು
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು
  ವಿಜಯರಾಘವನ್ ಅನುವಾದಿಸಿದ ಇಟಾಲಿಯನ್ ಕವಿತೆ
  ಕೃಷ್ಣಮೂರ್ತಿ ಹನೂರರ ಕಾದಂಬರಿಯ ಒಂದು ಅಧ್ಯಾಯ
  ನಿತ೦ಬಗಳಿಗೊ೦ದು ಕವಿತೆಯ ಅಂಜಲಿ:ಸುಮತಿ ಮುದ್ದೇನಹಳ್ಳಿ ಬರಹ
  ಪ್ರತಿಭಾ ನಂದಕುಮಾರ್ ಬರೆದ ದೇವಿ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಎರಡು ಕವಿತೆಗಳು
  ರಾಬಿಯಾಶೇಖ್ ಬರೆದ ಹೀಗೊಂದು ಸಾನೆಟ್
  ಭಾನುವಾರದ ವಿಶೇಷ: ನಾಗರಾಜ ವಸ್ತಾರೆ ಬರೆದ ಕಥೆ ‘ಹತೋಟಿ’
  ಸ್ಮಿತಾ ಅಮೃತರಾಜ್ ಬರೆದ ಎರಡು ಕವಿತೆಗಳು
  ಗಣನಾಥ ಅನುವಾದಿಸಿದ ಇನ್ನಷ್ಟು ಜಪಾನೀ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಕತೆ ‘ಅಂತರಂಗದ ಆಯಾಮ’
  ಒಂಟಿ ದೇವನಿಗೆ ನಕ್ಷತ್ರ ಬರೆದ ಕವಿತೆ
  ಅನಿಲ್ ತಾಳಿಕೋಟಿ ಅನುವಾದಿಸಿದ ನೆರೂದಾ ಕವಿತೆ
  ಕಾಲವಾದ ವಿನಯಚಂದ್ರನ್ ಕವಿತೆ
  ಕುಸುಮಾ ಶಾನಭಾಗ ಬರೆದ ಕತೆ ‘ಕುಂದ ಬೆಟ್ಟದ ಪಿಸುಮಾತು’
  ಎಸ್. ಎನ್ ಗಣನಾಥ ಅನುವಾದಿಸಿದ ಜಪಾನೀ ಕವಿತೆಗಳು
  ಪ್ರಜ್ಞಾ ಮತ್ತಿಹಳ್ಳಿ ಬರೆದ ವೇಷದ ಪದ್ಯಗಳು
  ಕಮಲಾಕರ ಕಡವೆ ಅನುವಾದಿಸಿದ ಇಟಾಲೋ ಕ್ಯಾಲ್ವಿನೋ ಕತೆಗಳು
  ಸ್ಮಿತಾ ಮಾಕಳ್ಳಿ ಮೊದಲ ಪುಸ್ತಕ ಇಂದು ಬಿಡುಗಡೆ
  ರಾಬಿಯಾಶೇಖ್ ಬರೆದ ದಿನದ ಕವಿತೆ
  ಅಗಲಿದ ಗೆಳೆಯನ ಕುರಿತು ರಾಜು ಹೆಗಡೆ ಕವಿತೆ
  `ಒಂದು ಇಂಡಿಯನ್ ಇಂಗ್ಲೀಷ್ ಕಥೆ’
  ಕಾವ್ಯಾ ಕಡಮೆ ಬರೆದ ದಿನದ ಕವಿತೆ
  ಮೈಶ್ರೀ.ನಟರಾಜ ಅನುವಾದಿಸಿದ ರಿಚರ್ಡ್ ಬ್ಲಾಂಕೋ ಕವಿತೆ
  ಭಾನುವಾರದ ವಿಶೇಷ: ವಿಕ್ರಂ ಹತ್ವಾರ್ ಬರೆದ ಕಥೆ ‘ಪೇಣಿ’
  ನಾಗರಾಜ ವಸ್ತಾರೆ ಬರೆದ ದಿನದ ಕವಿತೆ
  ವಾರದ ವಿಶೇಷ: ಪ್ರೇಮಶೇಖರ ಬರೆದ ‘ಬಾಳಿಗೊಂದಿಷ್ಟು ಗಾಳಿ’
  ಒಂದು ಮಲಯಾಳಂ ಕವಿತಾ ಸಂಕಲನದ ಕುರಿತು ಎಲ್.ಸಿ. ಸುಮಿತ್ರಾ
  ವಿಕಾಸ್ ನೇಗಿಲೋಣಿ ಕಥೆ ‘ನಮ್ಮ ಹಕ್ಕಿ ಬಿಟ್ಟೆ ಬಿಟ್ಟೆ’
  ನಕ್ಷತ್ರ ಬರೆದ ಕರುಳ ಸಂಕಟದ ಕವಿತೆ