ಲೂಯಿ ಡೆ ಅರ‍್ಗೋಟೆ ವೈ ಗೊಂಗೊರ ೧೫೬೧ರಲ್ಲಿ ಸ್ಪೇನಿನ ಕೊರಡೋಬಾದಲ್ಲಿ ಹುಟ್ಟಿದ. ಈ ಕೊರಡೋಬಾ ಎಂಬ ಊರಿನ ಬಗ್ಗೆ ಲೋರ್ಕ ಬಹಳ ಸುಂದರವಾದ ಕವಿತೆ ಬರೆದಿದ್ದಾನೆ. ಗೊಂಗೊರ ಸಲಮಾಂಕ ವಿಶ್ವವಿದ್ಯಾಲಯದಲ್ಲಿ ಕಲಿತ ಮತ್ತು ೧೫೭೭ರಲ್ಲಿ ಅವನಿಗೆ ಚರ್ಚಿನ ಸಹಾಯ ದೊರೆಯಿತು. ಗೊಂಗೊರನ ಮೊದಲ ಕವಿತೆ ೧೫೮೦ರಲ್ಲಿ ಪ್ರಕಟವಾಯಿತು. ಡಾನ್ ಕ್ವಿಕ್ಸೋಟ್ ಬರೆದ ಸೆರ್ವಾಂಟೆಸ್ ಗೊಂಗೊರನ ಸಾಂಗ್ ಆಫ್ ಕ್ಯಾಲಿಯೋಪ್ ಕವಿತೆಯನ್ನು ಹೊಗಳಿದ್ದಾನೆ. ಕ್ವಿಕ್ಸೋಟ್ ಬಗ್ಗೆ ಬಿ.ಆರ್. ಲಕ್ಷ್ಮಣರಾವ್ ಮನೋಜ್ಞವಾದ ಕವಿತೆ ಬರೆದಿದ್ದಾರೆ. ೧೬೧೩ರಲ್ಲಿ ಅವನ ಪಾಲಿಫೆಮೋ ಮತ್ತು ಸಾಲಿಟ್ಯೂಡ್ಸ್ ಬಿಡುಗಡೆಯಾದವು. ಅವು ಅವನಿಗೆ ಅಭಿಮಾನಿಗಳನ್ನೂ, ಶತ್ರುಗಳನ್ನೂ ತಂದಿತ್ತವು. ಅವು ಮತ್ತು ನಂತರದ ಕೃತಿಯಾದ ಕ್ಯೂವೆಡಾ ಅವುಗಳ ಸೋಗಿನಿಂದ, ಧ್ವನಿಯಿಂದ ಬಹಳ ವಿವಾದಾತ್ಮಕ ಕೃತಿಗಳಾದವು. ೧೬೧೭ರಲ್ಲಿ ಮ್ಯಾಡ್ರಿಡ್‌ನಲ್ಲಿ ನೆಲೆಸಿದ ಗೊಂಗೊರ ಒಬ್ಬ ಪಾದರಿಯಾಗಿ ಕೆಲಸ ಮಾಡಬೇಕಾಯಿತು. ಡ್ಯೂಕ್ ಆಫ್ ಲೆರ್ಮಾನ ದೆಸೆಯಿಂದ ಅವನು ೧೬೧೩ರಲ್ಲಿ ರಾಜನ ಪುರೋಹಿತನಾದ. ಪ್ರದರ್ಶನಗೊಳ್ಳದ ಎರಡು ಹಾಸ್ಯ ನಾಟಕಗಳನ್ನು ತಾನು ಬರೆದನಾದರೂ, ಅವನು ಹೆಚ್ಚು ಬರೆದದ್ದು ಕವಿತೆಯೇ. ಅವನು ಬಹಳಷ್ಟು ಪ್ರಸಿದ್ಧನಾದ, ಎಷ್ಟೆಂದರೆ ೧೮ನೇ ಶತಮಾನದವರೆಗೂ ಅವನ ಹೆಸರೇ ಸ್ಥಾಯಿಯಾಗಿಬಿಟ್ಟಿತ್ತು. ಅವನು ಅನಾರೋಗ್ಯದ ನಿಮಿತ್ತ ಕೊರಡೋಬಾಗೆ ಮರಳಿದ ಮತ್ತು ೧೬೨೭ರಲ್ಲಿ ಅಲ್ಲಿಯೇ ನಿಧನನಾದ.
ಗೊಂಗೊರನ ಮೊದಲ ಕವಿತೆಗಳು ಬಹಳ ಆಡಂಬರದ ಕವಿತೆಗಳು. ಆದರೆ ಅವನ ನಂತರದ ಕವಿತೆಗಳು ಇಟಲಿಯಲ್ಲಿ ಪ್ರಸಿದ್ಧವಾಗಿದ್ದ ಮ್ಯಾರಿನಿಸಂ ಎಂಬ ಶೈಲಿಯನ್ನು ಅಳವಡಿಸಿಕೊಂಡವು. ಈ ಶೈಲಿ ಸ್ಪಾನಿಶ್ ಸಾಹಿತ್ಯವನ್ನು ಬಹುಕಾಲ ಪ್ರಭಾವಿಸಿತು. ಅವನು ತೀರಿಕೊಳ್ಳುವುದಕ್ಕೆ ಮೊದಲು ಅವನು Soledades ಎಂಬ ಕೃತಿಯ ರಚನೆಯಲ್ಲಿ ತೊಡಗಿದ್ದ. ಅದನ್ನವನು ಪೂರ್ತಿಗೊಳಿಸಲೇ ಇಲ್ಲ.
ಪ್ರಣಯ
ನನ್ನ ಮುದ್ದಿನ ಹುಡುಗಿಯವಳು
ನನ್ನೀ ಫಾಸಲೆಯಲ್ಲಿ ಅಂಥ ಸುಂದರಿಯಿಲ್ಲ
ನಿನ್ನೆಯಷ್ಟೇ ಹಸೆಯೇರಿ ಅರಿಶಿನದ ಹಸಿ ಮೈನ ಮದುಮಗಳಾದವಳು
ಇಂದವಳ ಗಂಡ ಕುದುರೆಯೇರಿ ಹೊರಟಿದ್ದಾನೆ
ಯೋಧರ ಜೊತೆಗೂಡಿ ಯುದ್ಧಕ್ಕೆ ತೆರಳಿದ್ದಾನೆ
ಎದೆ ನಡುಗಿದೆ ಗಡಗಡ, ತುಟಿ ನಡುಗುತ್ತಲಿದೆ ಅಂತೆಯೇ
ಬೇಡುತ್ತ. ನನ್ನ ಕನಸುಗಳು ಸತ್ತಿವೆ, ಕಂಬನಿಗಳು
ಕುರುಡಾಗಿಸುತ್ತಿವೆ. ಓ ನಾನು ಹೋಗುತ್ತೇನೆ
ಹೋಗಲು ಬಿಡು ಸಾಗರವು ತನ್ನ
ಬೈತಲೆಯ ತೆರೆಯುವ ಕಡೆ ನನ್ನ
ಅಮ್ಮಾ ನೀ ನನಗೆ ಹೇಳಿದೆ, ಅದರ ಅರಿವಿತ್ತು ನನಗೂ
ದುಃಖವೆಷ್ಟು ದೀರ್ಘ, ಕಳೆದುಹೋಗುವುದು ಸುಖವೆಷ್ಟು ಬೇಗ
ಆದರೂ ನೀನವನಿಗೆ ಒಪ್ಪಿಸಿಬಿಟ್ಟಿದ್ದೆ ನನ್ನ ಹೃದಯವನ್ನು
ಅಮ್ಮಾ, ಅವನದರ ಕೋಣೆಯನ್ನು ಪ್ರೀತಿಯ ದುಷ್ಟ ಕೀಲಿಕೈಯಿಂದ
ತಿರುವಿ ತೆಗೆದು ಗುಲಾಮಳನ್ನಾಗಿಸಿಕೊಳ್ಳುವ ಹಾಗೆ
ಅಮ್ಮಾ ನನ್ನ ಕನಸುಗಳು ಸತ್ತಿವೆ
ನನ್ನ ಕಂಬನಿಗಳೇ ನನ್ನ ಕುರುಡಾಗಿಸುತ್ತಿವೆ
ಹಿಂದೆಲ್ಲ ಅವನ ಭವ್ಯ ಮುಖದ ಮೇಲೇ ನೆಲೆ ನಿಂತ
ನನ್ನ ಸುಂದರ ಹೊಳಪು ಕಂಗಳು ಮಂಕಾಗಿವೆಯೀಗ
ಅವನು ಆ ನನ್ನವನು, ಯಾವನ ಹೃದಯದಲ್ಲಿ
ಸುಖಶಾಂತಿಯ ನಾ ಕಂಡೆನೋ ಅವನು
ಕುದುರೆಯನೇರಿ ಹೋದಂದಿನಿಂದ ಕ್ಷಣವೂ ನಿಲ್ಲದೆ ಹರಿವ
ಸುಡುವ ಕಣ್ಣೀರಿಂದ ಕಣ್ಣು ಮಂಜಾಗಿವೆ
ಅಮ್ಮಾ ನನ್ನ ಕನಸುಗಳು ಸತ್ತಿವೆ
ನನ್ನ ಕಂಬನಿಗಳೇ ನನ್ನ ಕುರುಡಾಗಿಸುತ್ತಿವೆ
ದುಮ್ಮಾನವ ತಡೆಯೆಂದು ಕೇಳದಿರು, ನನ್ನ ಹೃದಯವು
ಮರೆಯಬೇಕೆಂದಿರುವ ಪಾಪವ ಶಪಿಸದಿರು ಎಂದು
ಶಾಪದ ಎಡೆ ಶಪಿಸುವುದು ಸರಿಯೆಂದಿದೆ
ಆದರೂ ಅಪಶಬ್ಧ ನುಡಿಯದಿರು
ನುಡಿದೆಯಾದರೆ ನೀನು ಕೊಲ್ಲುವೆ ನನ್ನ ಮನವನ್ನು
ಅಮ್ಮಾ ನನ್ನ ಕನಸುಗಳು ಸತ್ತಿವೆ
ನನ್ನ ಕಂಬನಿಗಳೇ ನನ್ನ ಕುರುಡಾಗಿಸುತ್ತಿವೆ
ಸಂಭ್ರಮದ ಯೌವನವು ಕವಣೆಗಲ್ಲಂತೆ ಇಷ್ಟು ಬೇಗ
ಬೇಗನೆ ಹಾರಿಹೋಗುವುದ ಕಂಡು ಶೋಕಿಸದಿರಲು
ಸಾಧ್ಯವೇ ನಿನಗೆ ಒಲವಿನ ತಾಯೇ
ಅವನ ಹೃದಯವು ಕಠಿಣ ಕಲ್ಲಂತೆ
ಅವನೆದೆಯು ಕೂಡ ಬಂಡೆಗಲ್ಲೇ?
ಇಲ್ಲಿ ನಿಂತಿದ್ದೇನೆ ನಾನು, ಪರಿತ್ಯಕ್ತೆ, ಏಕಾಂಗಿ
ಅಮ್ಮಾ ನನ್ನ ಕನಸುಗಳು ಸತ್ತಿವೆ
ನನ್ನ ಕಂಬನಿಗಳೇ ನನ್ನ ಕುರುಡಾಗಿಸುತ್ತಿವೆ
ಇರುಳು ನನ್ನ ಜೊತೆಯಿರದ ಹಾಸಿಗೆಯ ತಪ್ಪಿಸಿ
ನಡೆಯಲಿ. ಕಣ್ಣು ಸಪ್ಪಗಾಗಿವೆ, ಆತ್ಮ ಸತ್ತುಹೋಗಿದೆ
ಯಾರಿಗಾಗಿ ಕಣ್ಗಾವಲು ಪಹರೆ ಹಾಕಿದ್ದೆವೋ
ಅವನು ಹೋಗಿಬಿಟ್ಟಿದ್ದಾನೆ, ಇರುಳು ದೀರ್ಘವಾಗುತ್ತಿದೆ
ನನ್ನ ಕಂಬನಿಗಳೇ ನನ್ನ ಕುರುಡಾಗಿಸುತ್ತಿವೆ
ಓ ನಾನು ಹೋಗುತ್ತೇನೆ, ಹೋಗಲು ಬಿಡು
ಸಾಗರವು ತನ್ನ ಬೈತಲೆಯ ತೆರೆಯುವ ಕಡೆ ನನ್ನ
(English: John Pierrepont Rice)