ಮೇ ೨೪, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಭಾನುವಾರದ ವಿಶೇಷ: ಮೊಗಳ್ಳಿ ಗಣೇಶ್ ಕತೆ `ಸಿದ್ದೇಗೌಡರು ಮತ್ತೆ ಸಿಕ್ಕಿದ್ದರು’    
ಮೊಗಳ್ಳಿ ಗಣೇಶ್
ಶನಿವಾರ, 2 ಜೂನ್ 2012 (08:05 IST)
ಚಿತ್ರಗಳು: ವಿಷ್ಣು

ಅದು ಮಟಮಟ ಮಧ್ಯಾಹ್ನದ ಬಳ್ಳಾರಿಯ ಉರಿ ಬಿಸಿಲು. ಕಾಲವು ಅಲೆ ಅಲೆಯಾಗಿ ತಣ ತಣ ಉರಿಯುತ್ತ ಹರಿಯುತ್ತಿತ್ತು. ತುರ್ತಾಗಿ ಪತ್ರಿಕೆ ಒಂದಕ್ಕೆ ಬರೆದು ಕಳುಹಿಬೇಕಿದ್ದ ಕಥೆ ಒಂದರ ನಿರೂಪಣೆಯ ತಾಕಲಾಟದಲ್ಲಿ ತೊಳಲಾಡುತ್ತಿದ್ದೆ. ಹಳ್ಳಿಯ ಅದದೇ ಅನುಭವಗಳು ಮತ್ತೆ ಮತ್ತೆ ಮುಂದೆ ಬಂದು ನನ್ನನ್ನು ಬರೆದು ಮುಗಿಸು ಎಂದು ದುಂಬಾಲು ಬಿದ್ದಿದ್ದವು. ಈ ಮೂವತ್ತು ವರುಷಗಳಿಂದಲೂ ದಲಿತ ಸಾಹಿತ್ಯಕ್ಕೆ ವಿಮರ್ಶಕರು ಸಾಕಷ್ಟು ಮೀಸಲಾತಿ ಕೊಟ್ಟು ಸಾಕಾಗಿದ್ದಾರಲ್ಲಾ... ಓದುಗರು ಕೂಡ ಇವರ ಗೋಳು ಸಾಕೆಂದು ಮೂಗು ಮುರಿದಿದ್ದಾರಲ್ಲಾ... ನಮ್ಮವರಿಗೆಂದೇ ಬರೆಯುವ ಎಂದರೆ ಅವರು ಅವರದೇ ಗೋಳಿನ ನಡುವೆ ಮತ್ತದೇ ಗೋಳಿನ ಬಾಳಿನ ಕಥೆಯನ್ನು ಓದಿ ಸಾಧಿಸುವುದೇನಿದೆ ಬರವಣಿಗೆಯ ಬಲೆಯಲ್ಲಿ ಸಿಲುಕಿದಂತೆ ಪರಿತಪಿಸುತ್ತಿದ್ದೆ.

ಅಂತರಾಳದಿಂದ ಯಾರೊ ಎದ್ದು ಬಂದು ಕಿವಿಯಲ್ಲಿ ಬಿಕ್ಕಿದಂತಾಯಿತು. ’ನಾನಿನ್ನೂ ಒಂದೇ ಒಂದು ರಾತ್ರಿಯ ದುಃಖವನ್ನೂ ಮುಗಿಸಿಲ್ಲ. ನೀನಾದರೂ ನಮ್ಮ ಕಾಲಾಂತರದ ಮಾಮೇರಿ ಕಂಬನಿಯ ಮಳೆಯ ಒಂದನಿಯನ್ನು ನಿನ್ನ ಬರಹದಲ್ಲಿ ಒದ್ದೆಯಾಗಿಸಿಲ್ಲ. ಅಷ್ಟರಲ್ಲಾಗಲೇ ನಿನಗೆ ನಮ್ಮ ದುಃಖ ಸಾಕೆನಿಸಿಬಿಟ್ಟಿತೇ’ ಎಂದು ಮನಸ್ಸಿಗೆ ತಿವಿದಂತಾಯಿತು. ಕಥೆಯಲ್ಲಿ ಮೂಡಿದ್ದ ಅತ್ತೆಯ ಪಾತ್ರ ಬಿಕ್ಕಿ ಬಿಕ್ಕಿ ಅಳುತ್ತಿತ್ತು. ’ಅತ್ತೇ ಅತ್ತೇ; ನೀನು ಮತ್ತೆ ಮತ್ತೆ ಅತ್ತು ಕರೆದು ಯಾಕೆ ಬರುವೆ ನೀನು ಸತ್ತೇ ಇಂದಿಗೆ ಮೂವತ್ತು ವರುಷಗಳು ಕಳೆದು ಹೋಗಿವೆ... ಸಾಕು ಸಾಕಾಗಿದೆ... ಬರೆದು ಬರೆದು ಭಾವವೇ ಬರಿದಾಗುತ್ತಿದೆ... ಸಾಕು ಸಾಕು ಹೊರಟು ಹೋಗು’ ಎಂದು ಸಂಕಟದಲ್ಲಿ ಭಾವದ ಬಾಗಿಲ ಮುಚ್ಚಿಕೊಂಡೆ.
ಹೊರಗೆ ಯಾರೊ ಕೊಠಡಿಯ ಬಾಗಿಲು ತಟ್ಟಿದಂತಾಯಿತು. ಕಣ್ಣಂಚಿನ ಕಂಬನಿಯ ಒರೆಸಿಕೊಂಡು ’ಯಾರೂ’ ಎಂದೆ. ’ಒಟ್ಟಿಗೆ ಬರಬಹುದಾ ಸಾರ್...? ಎಂದು ಎಲ್ಲೊ ಎಂದೊ ಕೇಳಿದಂತಿದ್ದ ದನಿ ಒಂದು ವಿನಂತಿಸಿತು. ಗವಿಯಂತಿದ್ದ ನನ್ನ ಕೊಠಡಿ ಒಳಕ್ಕೆ ಬಂದವನನ್ನು ಬರಮಾಡಿಕೊಂಡೆ. ನನ್ನ ಮನದಲ್ಲಿದ್ದ ಹಳ್ಳಿಯ ಆ ಪಾತ್ರಗಳು, ಚಿತ್ರಗಳು, ಬಾಲ್ಯ ಕಾಲದ ನೆನಪುಗಳು ಅವನನ್ನು ನೋಡಿ; ’ನೀನ್ಯಾರಪ್ಪಾ ಇಲ್ಲೀ ತನಕ ಬಂದೆ’ ಎಂಬಂತೆ ಅಸಮಾನದಲ್ಲಿ ಅವನತ್ತ ನೋಡಿದೆವು. ಬಂದಿದ್ದವನ ಗುರುತು ತಕ್ಷಣ ತಿಳಿಯಲಿಲ್ಲ. ’ಏನ್ಸಾರ್... ಮರ‍್ತು ಬಿಟ್ಟಿದ್ದೀರೀ... ಎಷ್ಟೊ ವರ್ಷ ಆಯ್ತಲ್ಲಾ... ನನ್ಗೇ ಗುರ‍್ತು ಸಿಕ್ಕೋಲ್ತು... ಇನ್ನು ನೀವೆಂಗೆ ಕಂಡಿಡಿದೀರೀ...’ ಎನ್ನುತ್ತ ಎದುರೇ ಕೂತ. ಕೆಟ್ಟ ರಮ್ ವಾಸನೆ ಬಡಿಯುತ್ತಿತ್ತು. ಇಂತಹ ಬಿರು ಬಿಸಿಲ್ಲಿ ಹೀಗೆ ಕುಡಿದು ಬಂದಿದ್ದಾನೆ ಎಂದರೆ ಇವನು ಎಂತಹ ಮನುಷ್ಯ ಎಂದು ಬೇಸರವಾಯಿತು. ಕಥೆಯ ಒಳ ಮನದಲ್ಲಿ ಕೂತಿದ್ದ ಅತ್ತೆ ಏನೋ ಹೇಳುತ್ತ ಬಿಕ್ಕುತ್ತಿದ್ದಳು. ’ಬಾಳಾ ಎತ್ತರಕ್ಕೆ ಬೆಳೆದು ಬಿಟ್ಟಿದ್ದೀರಿ ಸಾರ್... ನಮ್ಮ ಸೀಮೆಯ ಕಳಸ ನೀವು... ನೀವು ಸಿಕ್ತೀರೊ ಇಲ್ಲೋ ಅಂತಾ ಚಿಂತೆಯಾಗಿತ್ತು; ಸದ್ಯ ಸಿಕ್ಬಿಟ್ರಿ...’ ಎಂದು ಕೃತಕವಾಗಿ ನಕ್ಕಿದ್ದ.

ಬಂದಿದ್ದವನು ನಮ್ಮ ಊರಿನವನು. ಅವನ ಹೆಸರು ಸಿದ್ದೇಗೌಡ. ಈ ಸಿದ್ದೇಗೌಡ ನನಗಿಂತ ಆರೇಳು ವರ್ಷ ಹಿರಿಯವನು. ಅವರ ಅಪ್ಪ ಒಂದು ಕಾಲಕ್ಕೆ ಇಡೀ ನಮ್ಮೂರ ಸೀಮೆಗೆ ಭಾರಿ ಕುಳವಾಗಿದ್ದವನು. ಅವನನ್ನು ಕಂಡರೆ ಜನ ನಡುಗುತ್ತಿದ್ದರು. ಆಗ ನಾನಿನ್ನೂ ಸಣ್ಣವನಾಗಿದ್ದಾಗ ಸ್ವತಃ ದೇವರಾಜ ಅರಸರು ಚುನಾವಣೆಯ ಕಾಲದಲ್ಲಿ ಹಳ್ಳಿಗೆ ಬಂದು ಮತಯಾಚಿಸುವಾಗ ಅವರ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ್ದವನು. ಉಳುವವನೇ ಭೂ ಒಡೆಯಾ ಎಂದು ಕಾನೂನು ಜಾರಿ ಮಾಡಿದ್ದರಿಂದ ಸಿದ್ದೇಗೌಡನ ಅಪ್ಪ ಕರೀಗೌಡ ನೂರಾರು ಎಕರೆ ಜಮೀನು ಕಳೆದುಕೊಳ್ಳಬೇಕಾಗಿತ್ತು. ಇಂದಿರಾಗಾಂಧಿ ಅವರನ್ನು ಹೀನಾಯವಾಗಿ ಬೈಯ್ದು ಅರಸು ಅವರ ಮುಖಕ್ಕೆ ಅವತ್ತು ಕರೀಗೌಡ ಉಗಿದಿದ್ದ. ಅರಸು ಕಡೆಯ ಜನ ಕರೀಗೌಡನ ಸೊಂಟ ಮುರಿಯುವುದು ಸುಲಭವಿತ್ತು. ಈಗಿನಂತೆ ಆಗ ಪೋಲಿಸರು ದಂಡು ದಂಡಾಗಿ ಬರುತ್ತಿರಲಿಲ್ಲ. ಅರಸು ಗಾಂಧಿವಾದಿಯಂತೆ ದಿವ್ಯವಾಗಿ ಒಮ್ಮೆ ನಕ್ಕುಬಿಟ್ಟು ಆ ಕರೀಗೌಡರಿಗೆ ಸಮಾಧಾನ ಹೇಳಿ ಹೊರಟು ಹೋಗಿದ್ದರು. ಮರುದಿನ ಅದೇ ಕರೀಗೌಡ ಡಂಗೂರ ಹೊಡೆಸಿ ಹೊಲಗೇರಿಕೆ ಬಹಿಷ್ಕಾರ ಹಾಕಿಸಿ ಹಿಂಸೆ ಕೊಟ್ಟಿದ್ದ. ಅವತ್ತಿನ ಘಟನೆಗೆ ಸಾಕ್ಷಿಯಾಗಿದ್ದ ಪಾತ್ರಗಳು ಸಿದ್ದರಾಮನ ಮುಖ ನೋಡಿದ ಕೂಡಲೇ ದುತ್ತೆಂದು ಎದ್ದು ಬಂದು; ’ನೀನ್ಯಾಕಯ್ಯಾ ಇಲಿಗಂಟಾ ಬಂದಿದ್ದೀಯೇ... ನಾವು ಯಾವುದ್ನೂ ಮರ‍್ತಿಲ್ಲಕನಯ್ಯಾ... ನಿಮ್ಮಪ್ಪ ಎಂತಾ ಅನ್ನಾಯ ಮಾಡ್ದ ಅನ್ನುದಾ ಇನ್ನೋ ಏಳೇಳು ಜನ್ಮ ಎತ್ತಿ ಬಂದ್ರೂ ಮರೀಕಾಗ್ದು ಕನಯ್ಯ...’ ಎಂದು ಅವನತ್ತ ಸಿಡುಕಿನಿಂದ ನನ್ನೊಳಗೆ ಕುಳಿತು ನೋಡುತ್ತಿದ್ದೆವು.

’ನಿಮ್ಮ ತಂದೆ ಹೇಗಿದ್ದಾರೆ’ ಎಂದು ಕೇಳಿದೆ...’ ಅಯ್ಯೋ ಏನೇಳ್ಲಿ ಸಾರ್... ನಮ್ಮಪಪ್ ಇವತ್ತು ಬಿಕಾರಿ ಆಗೋದ ಸಾರ್... ಅಷ್ಟೆಲ್ಲ ಕಸ್ಟಪಟ್ಟು ದುಡಿದು ಅಷ್ಟೆಲ್ಲ ಸಂಪಾದ್ನೆ ಮಾಡಿದ್ನೆಲ್ಲ ಕಳಕಬುಟ್ಟೊ ಸಾರ್... ಸಾಲಾ ಸಾಲಾ ಸಾಲಾ ಅಂತ ಸೋಲ ಆಗೋಯ್ತು ಸಾರ್.... ನಾವು ಯಾರ‍್ಗೇನನ್ನಾಯ ಮಾಡಿದ್ದೋ ಸಾರ್... ಬರ ಬಂದಾಗ್ಲೆಲ್ಲ ಇಡೀ ವೂರ‍್ಗೆ ಅಂಬ್ಲಿ  ಕಾಯ್ಸಿ ಕುಡಿಸ್ತಿದ್ವಲ್ಲಾ ಸಾರ್... ನೀವೇ ಕಣ್ಣಾರ ನೋಡಿರ್ದಲ್ಲಾ; ನಮ್ಮ ಮನೆತನದ ದಾನಾ ಧರ್ಮಾನೆಲ್ಲ... ಆಳು ಕಾಳ್ಗೆ ಅಂತಾ ವೊಂಗ್‌ನೂರ್ ಸಾಬ್ರ ಬಟ್ಟೆ ಅಂಗ್ಡಿ ಬಟ್ಟೆನಲ್ಲ ನಾವೇ ತರ‍್ಸಿ ಹಂಚ್ತಿದ್ವವಲ್ಲಾ ಸಾರ್... ನಿಮ್ಮಪ್ಪ, ನಿಮ್ಮ ತಾತ ಅವರಿಗೆಲ್ಲ ಹಬ್ಬುಗೊಳೆಲಿ ನಾವೇ ತಾನೇ ಸಾರ್ ಪಾವುಪಡಿ ಪಂಚೆ ಕೊಟ್ಟು ಆಶೀರ್ವಾದ ಮಾಡ್ತಿದ್ದುದೂ... ನಮ್ಮಪ್ಪೋರು ಊರ‍್ಗೆಲ್ಲ ಮದುವೆ ಮಾಡ್ಸಿ ಹೆಣ್ಣು ಗಂಡಿಗೆ ಒಂಜೊತೆ ಬಟ್ಟೆ ಕೊಡಿಸ್ತಿದ್ರಲ್ಲಾ ಸಾರ್....’

ಮನೊದೊಳಗಣ ಅತ್ತೆ ಆರ್ಭಟಿಸಿ ಕೂಗಿದಳು... ’ಆ ನೀಚನ ಮೊದಲು ಇಲ್ಲಿಂದ ಆಚೆಗೆ ಕಳ್ಸು... ಅವರನ್ನಾಯ ಅವುರ‍್ನಾ ತಿಂತಾ ಅದೇ... ಅವನ ಮಾತ ನಂಬ ಬೇಡ.... ಹೇ ಎದ್ದಾಚಗೋಗೋ...’ ಎನ್ನುತ್ತ ಅತ್ತೆ ನನ್ನ ಗಂಟಲತನಕ ಬಂದು ಒತ್ತಿದಳು. ತಡೆದುಕೊಂಡೆ. ’ಯಾವ ಕಥೆ ಬರೆಯಲೀ... ಯಾವ ಕಾಲದ ಸಂಕಟಕ್ಕೆ ನನ್ನ ಅಂತಃಸಾಕ್ಷಿಯನ್ನು ಒಡ್ಡಿಕೊಳ್ಳಲಿ... ಯಾರ ದುಃಖದಿಂದ ಯಾರ ದುಃಖ ಪರಿಹಾರವಾಗುವುದು... ಯಾರ ಅಪಮಾನದಿಂದ ಯಾರ ಅಪಮಾನ ಕರುಗುವುದು... ಯಾರ ಗಾಯದಿಂದ ಯಾರ ಗಾಯ ಮಾಯುವುದು...? ಯಾವುದೋ ಮೊಬೈಲ್ ಕರೆ ಬಂತು; ಕೈಗೆತ್ತೆಕೊಂಡೆ. ’ಆಯ್ತಾ ಸಾರ್... ವಿಶೇಷಾಂಕದ ಅಂತಿಮ ಹಂತದಲ್ಲಿದ್ದೇವೆ... ನಿಮ್ಮ ಕಥೆಗಾಗಿ ಮಾತ್ರ ಕಾಯುತ್ತಿದ್ದೇವೆ... ನಿಮ್ಮ ದಲಿತ ಕಥೆ ಇಲ್ಲಿದೆ. ವಿಶೇಷಾಂಕ ಕಂಪ್ಲೀಟ್ ಅನಿಸೋದಿಲ್ಲ. ನಿಮ್ಮ ಕಥೆ ಇದ್ದೇ ಇರಬೇಕು... ಕಾದು ಸಾಕಾಗಿದೆ. ಇವತ್ತು ಸಂಜೆಯೇ ಮೇಲ್ ಮಾಡಿಬಿಡಿ’ ಎಂದು ಪತ್ರಿಕೆಯ ಸಂಪಾದಕರು ಒತ್ತಾಯಿಸುತ್ತಿದ್ದರು. ’ಬೇಕಾದಷ್ಟು ಕಥೆಗಾರರು ಇದ್ದಾರಲ್ಲಾ... ನಮ್ಮದೇನಿದ್ದರೂ ಗೋಳಿನ ಹಳೆಯ ಅದೇ ದಲಿತರ ಕಥೇ ಅಲ್ಲವೇ... ಈ ಕಾಲದ ರಂಜನೆಯ ಜನಕ್ಕೆ; ಕಿಕ್, ಶಾಕ್ ಆದಂತದು ಬೇಕು ಎನ್ನುವವರಿಗೆ ನಮ್ಮವರ ಕಿಚ್ಚನ್ನು ಹೇಗೆ ಎಂಜಾಯ್‌ಮೆಂಟಾಗಿ ಮಾಡಿಕೊಡಲಿ... ಸವಣೂರಿನ ದಲಿತರು ಮಲ ಸುರಿದುಕೊಂಡು ಪ್ರತಿಭಟನೆ ಮಾಡಿದ್ದರಲ್ಲಾ... ಅದನ್ನು ಸುದ್ಧಿ ಮಾಧ್ಯಮಗಳು ಶಾಕ್ ಆಗಿ ಬ್ರೇಕಿಂಗ್ ನ್ಯೂಸ್ ಆಗಿ ತೋರಿದರಲ್ಲಾ... ಹಾಗೆ ಬರೆದು ಕಥೆ ಮಾಡಿ ಕಳಿಸಲೇ...’ ’ಎಕ್ಸಾಕ್ಟ್ಲಿ... ಪ್ರಿಸೈಸ್ಲಿ... ವೀ ನೀಡ್ ಸಚ್ ಎ ಸೆನ್ಸೇಷನಲ್ ಸ್ಟೋರಿ ಪ್ರಮ್ ಯೂ... ನಿಮ್ಮ ಬುಗುರಿ ಅದೇ ರೀತಿ ಇತ್ತಲ್ಲವೇ...’ ಆಯ್ತು ಸಾರ್; ಟ್ರೈ ಮಾಡ್ತೀನಿ ಊರಿಂದ ಯಾರೊ ಬಂದಿದ್ದಾರೆ... ಈ ಸಂಜೆ ಕಥೆ ಮುಗಿಯುವುದಿದೆ... ಮತ್ತೆ ಕಾಲ್ ಮಾಡ್ತೀನಿ...’ ಎಂದು ಆಫ್ ಮಾಡಿದೆ.

’ಇಷ್ಟು ವರ್ಷಗಳು ಕಳೆದು ಹೋದ ನಂತರ ಇಲ್ಲಿಗೆ ಬಂದಿದ್ದೀರಿ... ಏನು ಸಮಾಚಾರ... ನಮ್ಮೂರು ಈಗ ಹೇಗಿದೆ... ಆ ಗಾಂಧಿವಾದಿ ಪಟೇಲರು ಇದ್ದರಲ್ಲಾ... ಅವರು ಇನ್ನೂ ಇದ್ದಾರ... ಅವರ ತೋಟದ ಮನೆಯ ಆ ಹಳೇ ಬಂಗಲೇ... ಅವರ ಹಣ್ಣಿನ ವನ.. ಗುಲಾಬಿ ತೋಟ... ಆ ಹಳೇ ಬ್ರಹ್ಮ ಕಮಲದ ಅತಿ ಎತ್ತರದ ಗತಕಾಲದ ಮರ... ಹಳ್ಳದ ದಂಡೆಯ ಹೊಂಗೆ ಮರಗಳ ಸಾಲು... ಅವರ ಮಗಳು... ಸೀಮೆಗೆಲ್ಲ ಆಗ ಅವಳೇ ಒಬ್ಬಳೇ ಚೆಲುವೆ... ದೇವರಾಜ ಅರಸು ಅವರು ಮಗಳ ಜೊತೆ ಬಂದಿದ್ದಾಗ ಅವರಿಬ್ಬರೂ ದೇವಗನ್ನೆಯರು ಎಂದು ಮುಗ್ಧವಾಗಿ ಹೆಂಗಸರು ಆರತಿ ಎತ್ತಿ ಕೈಮುಗಿದದ್ದು... ನಮ್ಮೂರ ಮಾವಿನ ಮರದ ತೋಪು... ಆ ತೋಪಿನಲ್ಲೇ ನಾವು ಗುಡಿಸಲಲ್ಲಿ ಶಾಲೆ ಕಲಿಯುತ್ತಿದ್ದುದು... ಅವೆಲ್ಲ ಹಾಗೇ ಇವೆಯೇ...’ ಎಂದು ಒಂದೇ ಬಾರಿಗೆ ಭಾವದಲ್ಲಿ ತುಳುಕಿದ್ದನ್ನೆಲ್ಲಕೇಳಿದೆ. ಸಿದ್ದೇಗೌಡ ಕೆಟ್ಟದಾಗಿ ತೇಗುತ್ತಾ ಅಮಲಿನ ಕಣ್ಣುಗಳ ಹೊರಳಾಡಿಸಿ... ’ಅದ್ನೆಲ್ಲ ಯೀಗ ವಾಪಸ್ಸು ಬಾ ಅಂದ್ರೆ ಬಂದದೇ... ಈಗ ಕೆರೆನೂ ಇಲ್ಲಾ... ಕೋಡಿನೂ ಇಲ್ಲಾ... ಯಾವ ವ್ಯವಸಾಯನೂ ಇಲ್ಲ. ಕೆರೆ ಹೂಳು ತುಂಬಕಂದು... ಮಳೆನೂ ಇಲ್ದೆ ಯಾರ‍್ಯಾರೊ ಬಂದು ಕೆರೆಯ ಅಂಗಳಾನೆಲ್ಲ ಒತ್ತುವರಿ ಮಾಡ್ಕಂದು ಕೆರೆ ಮಾಳದಲ್ಲಿ ಮನೆಯಾಗವೆ ಸಾರ್... ಸರ್ಕಾರನೆ ಕೆರೆ ಮುಚ್ಚಿಸಿ ಬಡವರಿಗೆ ಅಂತಾ ಸೈಟು ಮಾಡಿಕೊಟ್ಟಿದೆ. ಕೆರೆಯ ಒಂದು ಮೂಲೇಲಿ ಇನ್ನು ಇಷ್ಟಗಲ ಕಟ್ಟೆಯಷ್ಟು ಜಾಗ ಅದೆ. ಅಲ್ಲೇ ಯೀಗ ಅಲ್ಲಿರೋರೆಲ್ಲ ತಿಕಾಮೊಕಾ ತೊಳಕೋಳೋರು. ನಮ್ಮಪ್ಪನ ಕಾಲದಲ್ಲಿ ಕೆರೆ ಎಂಗಿತ್ತು. ನಮ್ಮ ಮುತ್ತಾತ ಕೆಟ್ಟಿಸಿದ್ದ ಕೆರೆ ಸಾರ್ ಅದು. ಕೆರೆ ಏರಿ ಮಳೆಗಾಲದಲ್ಲಿ ನಿಲ್ಲದೇ ನಿಲ್ಲದೇ ನಮ್ಮ ಮನೆತನದ ಕಿರಿಸೊಸೆಯ ಕೆರೆಗೆ ಬಲಿಕೊಟ್ಟ ಮೇಲೆ ಏರಿ ಗಟ್ಟಿಯಾಗಿ ನಿತ್ಯತು ಸಾರ್....  ಅಲ್ಲಿ ನಮ್ಮೋಂಶದವಳು ಕೆರೆಗೆ ಹಾರ ಆದ್ಲಲ್ಲಾ ಸಾರ್.... ಅವಳ ಸಮಾಧಿ ಕಲ್ನು ಬಿಡ್ದೆ ಯಾರೊ ಅತ್ಯಂದೋಗಿ ಚಪ್ಪಡಿಕಲ್ಲು ಮಾಡಕಂಡ್ರು ಸಾರ್... ನೋಡುದ್ರಾ ಸಾರ್... ನ್ಯಾಯಾ ನೀತಿ ಧರ್ಮ ಕರ್ಮ ಎಲ್ಲಿಗೆ ಬಂದು ನಿಂತೋ ಅನ್ನುದಾ... ನಮ್ಮಪ್ಪ ಈ ಕೋರ‍್ಗೆಲೇ ಅರ್ಧಜೀವ ಆಗ್ಬುಟ್ಟ ಸಾರ್...? ಎಂದು ಸಿದ್ದೇಗೌಡ ಅಮಲು ಕಣ್ಣುಗಳ ತುದಿಯಲ್ಲಿ ಕಣ್ಣೀರ ಬಟ್ಟಾಡಿಸಿದ.

’ಸಮಾಧಾನ ಮಾಡ್ಕೊಳಿ... ಕಾಲ ಬದಲಾಗ್ತಿದೆ...’ ’ಏನು ಸುಡುಗಾಡು ಬದ್ಲಾವಣೆ ಸಾರ್... ಮಲ್ಟಿ ನ್ಯಾಷನಲ್ ಕಂಪನಿಯವರು ಬಂದು ಸುತ್ತಮುತ್ತ ಊರ ಜಮೀನ್ನೆಲ್ಲ ಖರೀದಿ ಮಾಡ್ತವರೆ... ನಮ್ಮಪ್ಪ ತಡಮಾಡಿದ್ರೆ ಒಳ್ಳೆ ಬೆಲೆ ಸಿಕ್ತಿತ್ತು. ಅದ್ಯಾವನೊ ತಮಿಳುನಾಡಿನ ಕಡೆಯಿಂದ ಬಂದವನು ರಾತ್ರೋರಾತ್ರಿ ಒಂದು ಕೋಟಿ ನೋಟಿನ ಗಂಟ ತಂದು ನಮ್ಮಪ್ಪನ ಮುಂದೆ ಇಟ್ಟು ಕೈ ಮುಗಿದು ಸಹಿ ಮಾಡಸ್ಕಂಡ ಸಾರ್... ತಾಡಪ್ಪಾ ವ್ಯಾಪಾರ ಮುಂದೆ ಎಂಗೆಂಗೊ ಎಂದು ಎಷ್ಟು ಹೇಳಿದ್ರೂ ನಮ್ಮಪ್ಪ ನನ್ನ ಮಾತು ಕೇಳಲಿಲ್ಲ. ಸುಮ್ನಿರ‍್ಲಾ ಲೋ... ಅವ್ಯಾವ ಅಡಕಸ್ತಿ ಜಮೀನು... ಒಂದ್ಯಾಲ್ಕೆ ಅದು ನಮ್ಮೂರೊಲ್ಗೆರಿಯವರ ಮಸಾಣಗಾಡು. ಅದಾ ಎಂಗೆಂಗೊ ಮಾಡಿ ನನ್ನ ಕೈವರ ಮಾಡ್ಕಂದು ಪತ್ರ ಮಡಿಕಂದಿವಿನಿ. ಇಂದಲ್ಲಾ ನಾಳೆ ಅದೇನಾರ ತಗರಾಲಾದ್ರೆ ಅದೂ ಕೈ ಬಿಟ್ಟೊಯ್ತದೆ... ಆ ವೋಲೇರ ಮಸಾಣಕೆ ಒಂದು ಕೋಟಿ ಬರುವಾಗ ನಾವ್ಯಾಕ್ಲಾ ಸೈ ಅಂತ ಪತ್ರ ಕೊಟ್ಟು ಕೋಟಿ ಗಂಟ ಮಡಿಕಬಾರ‍್ದು ಅಂತಾ ನಮ್ಮಪ್ಪ ಎಲ್ಲಾನು ಹಾಳು ಮಾಡುಬುಟ್ಟಾ ಸಾರ್. ಇದಾ ತಿಳಿದೇಟ್ಗೆ ಸಾಲ್ದೋರೆಲ್ಲ ಒಂದು ಅಮುರ‍್ಕಂದ್ರು. ಅವನ್ಯಾವನೊ... ನಿಮ್ಮೋನೇ ಸಾರ್... ನಿಮ್ಮಣ್ಣ ತಮ್ಮಕೆಯವನೂ... ಅದೆಲ್ಲಿಂದಲೊ ರೆಕಾರ್ಡ್ ತೆಗಿಸಿ ಇದು ದಲಿತರ ಭೂಮಿ ಅಂತಾ ಹೋರಾಟ ಮಾಡಿ ಸೀಮೆಗೆಲ್ಲ ರಂಪ ಮಾಡ್ದ ಸಾರ್... ಅವರ ಸಂಘದ ಲೀಟರು ಬಂದು ವಲಗೇರಿಯೋರಿಗೆ ತಲಾ ಹತ್ತು ಸಾವುರಾ ಅಂತ ಮನೆ ಮನೆಗೆ ಹಂಚಿದ ಮೇಲೆ ಕೇಸ್ ಮಾಯ ಆಯ್ತು; ಅಂಗೇನೇ ನಪ್ಪನ ಕೋಟಿಗಂಟು ಬೆಳಕರಿಯೊ ಹೊತ್ಗೆ ಕರಗೋಯ್ತು... ಎಂದು ಸಿದ್ದೇಗೌಡ ಸ್ವಲ್ಪ ನಿಶೆ ಇಳಿದವನಂತೆ ಕಂಡ.

’ನೀವು ಊಟ ಮಾಡೋರಂತೆ ಕ್ಯಾಂಟೀನಿಗೆ ಹೋಗುವ ಬನ್ನಿ’ ಎಂದು ನಡೆದೆ... ’ವಟ್ಟೆಗೆ ವೂಟ ಸೇರೊಲ್ತು ಸಾರ್... ಕುಡುದ್ರೆ ಏನೊ ಒಂದ್ಸಕ್ತಿ... ಅನ್ನ ಹಾಕಿದ ವಂಶ ಸಾರ್ ನಮುದೂ. ಈಗ ನೋಡಿ ನಮಗೆ ಅನ್ನನೂ ಸೇರುದಿಲ್ಲ... ನಾಲ್ಕು ಜನನೂ ಇಲ್ಲ... ಸರ್ಕಾರವಂತು ರೈತರು ಸತ್ತರೆ ಹೆಣದ ಮುಂದೆ ಮೂರು ಕಾಸು ಬಿಸಾಕಿ ಹೋಯ್ತರೆ. ಈ ಹಾಳಾದ ಭೂಮಿ ನಂಬಿ ನಾವು ಎಕ್ಕುಟ್ಟೋದೋ ಸಾರ್’ ಎಂದು ಹಿಂಬಾಲಿಸಿದ.

ದಾರಿಯಲ್ಲಿ ಹೆಜ್ಜೆ ಹೆಜ್ಜೆಗೂ ಮನದಲ್ಲಿದ್ದ ಹಳ್ಳಿಯ ಆ ಅದೇ ಪಾತ್ರಗಳು. ’ನೀನು ಇವನಿಗೆ ಯಾಕೆ ಊಟ ಹಾಕಿಸಬೇಕೂ... ಇವರಪ್ಪ ನಮ್ಮವ್ವನ ರವಕೆ ಅರದಾಕಿ ಒಡಾಡ್ಸಿದ್ದ... ನೀನು ನಂಬ್ತಿಯೋ ಬಿಡ್ತಿಯೊ... ಇವರ ತ್ವಾಟದಲ್ಲಿ ಮೂರು ಎಳನೀರ ಕಿತ್ಕಂದು ಜ್ವರವಿದ್ದು ಮಗನಿಗೆ ಕುಡಿಸುವಾ ಅಂತಾ ಹೋದ್ರೆ ಕಳ್ಳ ಅಂತಾ ಹಿಡುದು ಮರಕ್ಕೆ ಕಟ್ಟಾಕಿ ಕುಡಿಲಾ ನನ್ನೆಳನೀರ ಉಚ್ಚೆಯಾ ಅಂತಾ ಬಾಯಿಗೆ ಉಚ್ಚೆ ಉಯ್ದುಕುಡ್ಸಿದ್ದಾ... ಇಂತವನಿಗೆ ನೀನ್ಯಾಕೆ ಕರುಣೆ ತೋರಿಸ್ಬೇಕು’ ಎಂದು ತಬ್ಬಲಿ ಪಾತ್ರ ಒಂದು ಮಿಸಕಾಡಿತು.
ನಾವು ಕ್ಯಾಂಟೀನಿಗೆ ಬಂದಾಗಿತ್ತು. ಊಟ ಏನಿದೆಯಪ್ಪಾ ಎಂದು ಸಪ್ಲೈರ್‌ನ ಕೇಳಿದೆ. ಬರೀ ಅನ್ನ ಸಾಂಬರ್ ಅಷ್ಟೇ ಸಾರ್ ಎಂದು ಎರಡು ಪ್ಲೇಟ್ ತಂದಿಟ್ಟ. ಕ್ಯಾಂಪಸ್ಸಿನ ಮಿತ್ರರು ಅದೇ ವೇಳೆಗೆ ಬಂದರು. ’ನಮ್ಮೂರಿನ ರೈತರು; ಒಂದು ಕಾಲಕ್ಕೆ ಬಾರೀ ಶ್ರೀಮಂತರು’ ಎಂದು ಪರಿಚಯಿಸಿದೆ. ವಿದ್ವಾಂಸ ಮಿತ್ರರು ದಿಢೀರನೆ ರೈತರ ಕಷ್ಟ ನಷ್ಟ, ಸರ್ಕಾರದ ಭ್ರಷ್ಟಾಚಾರ, ರೈತರ ಆತ್ಮಹತ್ಯೆ, ಜಾಗತೀಕರಣದಿಂದ ಹಳ್ಳಿಗಳಲಾಗುತ್ತಿರುವ ಕಷ್ಟನಷ್ಟಗಳು, ಬಹುರಾಷ್ಟ್ರೀಯ ಕಂಪನಿಗಳ ಭೂಕಬಳಕೆಯ ಜೊತೆಗೆ ಸ್ಥಳೀಯ ರಾಜಕಾರಣಿಗಳು ಲೂಟಿ ದಂದೆಯನ್ನೆಲ್ಲಾ ಪೈಪೋಟಿಯಲು ಊಟದ ಜೊತೆಗೆ ವರೆಯಟಿ ಸೈಡ್ಸ್ ತರದಲ್ಲಿ ರಸಮಯವಾಗಿ ಮಾತನಾಡಿ ಹೊರಟು ಹೋದರು. ಸಿದ್ದೇಗೌಡನ ಮುಖದಲ್ಲಿ ಏನೊ ಒಂದಿಷ್ಟು ಕಳೆ ಮೂಡಿತು.

ನೀವು ನನ್ನನ್ನು ಹುಡುಕಿಕೊಂಡು ಯಾಕೆ ಬಂದಿರಿ ಎಂದು ಕೇಳಿದೆ. ತಕ್ಷಣ ಆತ ಪ್ರತಿಕ್ರಿಯಿಸಲಿಲ್ಲ. ’ಇಲ್ಲಿ ಟಾಯ್ಲೆಟ್ ರೂಮು ಯಾವ ಕಡೆಗಿದೆ ಸಾರ್’ ಎಂದ. ಫೀವನ್ ಕರೆಸಿ ’ಇವರಿಗೆ ಟಾಯ್ಲೆಟ್ ದಾರಿ ತೋರ‍್ಸು’ ಎಂದೆ. ಅತ್ತ ಹೋದವನ್ನು ಬರುವುದು ತಡವಾಯಿತು. ಆತ ಅತ್ತ ಹೋದ ಕೂಡಲೇ ಕಥೆಯಲ್ಲಿ ಬಂದಿದ್ದ ಪಾತ್ರಗಳೆಲ್ಲ ನನ್ನ ಬಗ್ಗೆ ಅಸಮಾಧಾನ ತೋರುತ್ತಿದ್ದವು. ’ಅವರಪ್ಪ ಮಾರಿ ಗುಡಿ ಮುಂದೆ ನನಗೆ ನೂರು ಬಾರಿ ಮೆಟ್ಟಿನಿಂದ ಹೊಡೆದು ಮೂರು ವರ್ಷ ಊರ ಆಚೆಯೇ ಎಲ್ಲೋ ಮರೆಯಾಗಿ ಇರಬೇಕು ಎಂದು ಶಿಕ್ಷೆ ವಿಧಿಸಿದ್ದ. ಆಗ ನನ್ನ ತಾಯಿ ನನ್ನ ಕೊರಗಿನಲ್ಲೇ ನೇಣು ಬಿಗಿದುಕೊಂಡು ಸತ್ತು ಹೋದಳು... ಎಂದು ಅಮಾಯಕ ಪಾತ್ರವೊಂದು ಸಂಕಟವನ್ನು ತೋಡಿಕೊಂಡಿತು. ಈ ಊರಾಳದ ದೊಡ್ಡ ಗೌಡರ ಪರವಾಗಿ ಯಾರು ಇಲ್ಲವೆ ಎಂದು ಒಂದು ಕ್ಷಣ ಯೋಚಿಸಿದೆ. ಅವರ ಚೆಂದುಳ್ಳಿ ಹೆಣ್ಣುಮಗಳು ಮನದಲ್ಲಿ ತಾವರೆ ಹೂವಿನಂತೆ ಮೂಡಿಬಂದಳು. ಅವಳು ಶಾಲೆಯಲ್ಲಿ ನನ್ನ ಬಾರಿಗೆಯವಳೇ... ಮುಟ್ಟಿಸಿಕೊಲ್ಳುವುದಿರಲೀ... ಕಣ್ಣೆತ್ತಿ ನೋಡುವುದಾಗಲಿ, ಮಾತನಾಡಿಸುವುದಾಗಲಿ ಆಗ ಸಾಧ್ಯವೇ ಇರಲಿಲ್ಲ. ಆಗ ನಾನು ತುಂಬ ಚೆಂದದ ಚಿತ್ರಗಳ ಬಿಡಿಸಿ ಬೇಕಾದವರಿಗೆಲ್ಲ ಕೊಡುತ್ತಿದ್ದೆ. ನನಗೊಂದು ನವಿಲು ಬಿಡಿಸಿಕೊಂಡು ಎಂದು ಆಕೆ ಕೇಳಿದ್ದಕ್ಕೆ ಹತ್ತಾರು ಬಾರಿ ಯತ್ನಿಸಿ ಒಂದು ರಮ್ಯ ಯಾಂತ್ರಿಕವೇ ಆದ ನವಿಲನ್ನು ಬಿಡಿಸಿಕೊಟ್ಟಿದ್ದೆ. ಅದನ್ನವಳು ಎದೆಗಪ್ಪಿಕೊಂಡು ತಿನ್ನಲು ತೆಂಬಿಟ್ಟುಕೊಂಡಳು. ಯಾರೂ ಇಲ್ಲದ್ದನ್ನು ಗಮನಿಸಿ ನನಗೂ ನವಿಲು ಬಿಡಿಸಿಕೊಡುವುದನ್ನು ಕಲಿಸಿಕೊಡು ಎಂದು ಕೈ ಹಿಡಿದು ಕೋರಿದ್ದಳು. ನಿಮ್ಮಪ್ಪನಿಗೆ ಗೊತ್ತಾದರೆ ನನ್ನನ್ನು ಸ್ಕೂಲಿಂದಲೇ ಮಾಯಾಮಾಡಿಸಿಬಿಡುತ್ತಾನೆ ಎಂದು ಹಿಂಜರಿದಿದ್ದೆ. ಆದರೂ ಅವಳು ಹಠಬಿಟ್ಟಿರಲಿಲ್ಲ. ಒಂದು ಹಬ್ಬದ ಮರುದಿನ ಅವಳು ತನ್ನ ರುದ್ರಾವತಾರದ ಕರೆತಂದು; ಮಾಸ್ತರ ಮುಂದೆ ನನಗೆ ಆದೇಶಿಸಿದ್ದಳು. ನೀನು ಯಾವ್ಯಾವ ನವಿಲಿವೆಯೊ... ನನ್ನ ಮಗಳು ಏನೇನು ಕೇಳುವಳೊ... ಅವಳಿಗೆ ಏನೇನು ಆಸೆಯೊ ಅದರಂತೆ ನಡೆದುಕೊಂಡೆಯಾ ಸರಿ... ಇಲ್ಲ ಅಂದರೆ ನವಿಲು ಚಿತ್ರ ಬಿಡಿಸುವ ನಿನ್ನ ಬೆರಳುಗಳ ಕತ್ತರಿಸಿ ಬಿಡುವೆ ಎಂದು ತಾಕೀತು ಮಾಡಿ ಅವರಪ್ಪ ಹೊರಟುಹೋಗಿದ್ದ.

ಅತ್ತೆ ಮನದಲ್ಲಿ ತನ್ನ ಯಾವತ್ತಿನ ಹಾಡು ಹೇಳುತ್ತಿದ್ದಳು... ’ಬಿಡಬೇಡ ಬಿಡ ಬೇಡಣ್ಣೋ ಕಬ್ಬಿಣದಾ ಸರಪಳಿಯಾ... ನನ್ನ ಹೊಟ್ಟೆವೊಳಗೇ ಕಂದನಿರುವಾನೂ’ ಎಂದು ಯಾತನೆಯ ದನಿಯಲ್ಲಿ ಒರಲುತ್ತಿದ್ದಳು. ಅದು ಯಾವ ಮುಂಗಾಣ್ಕೆಯ ದುರಂತದ ಅರಿವಿತ್ತೊ... ಅವಳಿಗೆ ಎಷ್ಟು ಸಲ ಬೇಡ ಎಂದು ಗದರಿಸಿದರೂ ತಾನೊಬ್ಬ ಗರ್ಭಿಣಿಯಾಗಿ ಆಕೆ ಅದೇ ಹಾಡನ್ನು ಹಾಡುತ್ತಿದ್ದಳು. ಮುಗ್ಧವಾದ ಮೃದು ಮೊಲ ಒಂದು ಗರ್ಭಿಣಿಯಾಗಿಓಡಾಡಲು ಕಷ್ಟವಾಗಿ ನಿಧಾನವಾಗಿ ಚಿಗುರು ಹುಲ್ಲನ್ನು ಮಂಜು ಹನಿಯ ಜೊತೆ ಮೇಯುವಾಗ ಎಲೆ ಬೇಟೆಗಾರಣ್ಣಾ ನಿನ್ನ ಬೇಟೆನಾಯಿಗಳ ಕಬ್ಬಿಣದ ಸರಪಳಿಯ ಬಿಡಬೇಡ... ನಾಳಿಯೊ ರಾತ್ರಿಯೋ ನನ್ನ ಮರಿಗಳು ಹೊಟ್ಟೆಯಿಂದ ಹೊರಬರಲಿವೆ ಎಂದು ಆರ್ದ್ರವಾಗಿ ಕೇಳಿಕೊಳ್ಳುವ ಭಾವವನ್ನೇ ಅತ್ತೆ ಯಾವಗಲೂ ಹಾಡಿಕೊಳ್ಳುತ್ತಿದ್ದಳು. ಗಂಡ ಅವಳನ್ನು ಹೊರ ಹಾಕಿ ತಿಂಗಳುಗಳೇ ಕಳೆದಿದ್ದವು. ಅವನಾದರೊ ಅದೇ ಕರಿಗೌಡನ ನಿಯತ್ತಿನ ಭಂಟನಾಗಿದ್ದ. ಆತ ಏನು ಬಯಸಿದರೂ ಅವನಂತೆಯೇ ನಡೆದುಕೊಳ್ಳುವವನಾಗಿದ್ದ. ಬೇಕಾದರೆ ತನ್ನ ಹೆಂಡತಿಯನ್ನೇ ತನ್ನ ದಣಿಗೆ ಧಾರಳವಾಗಿ ದಾನ ಮಾಡಿಬಿಡಬಹುದಾಗಿದ್ದ. ಆ ಊರು, ಆ ಕೇರಿ, ಆ ಉಳ್ಳವರು... ಆ ಹಳ್ಳಿಯ ಗಾಯಗಳನ್ನೆಲ್ಲ ಕಣ್ಣ ಮುಂದೆ ಜೋಡಿಸಿಕೊಳ್ಳುತ್ತಿರುವಂತೆಯೇ ಸಿದ್ದೇಗೌಡ ಬಂದ. ಈತ ಮತ್ತೆ ಟಾಯ್ಲೆಟ್ ರೂಮಲ್ಲಿ ಕುಡಿದು ಬಂದ ಎಂಬ ಸೂಚನೆಯನ್ನ ಆತನ ಬ್ಯಾಗಿನಲ್ಲಿದ್ದ ಬಾಟಲಿಯ ಸದ್ದು ನೀಡಿತು.

’ನಿಮ್ಮ ತಂಗಿ ಒಬ್ಬಳಿದ್ದಳಲ್ಲಾ ಲೋಲಾಕ್ಷಿ ಅಂತಾ... ಆಕೆ ಈಗ ಎಲ್ಲಿದ್ದಾಳೆ... ಅದೇನೂ ನಿಮಗೆ ಗೊತ್ತಿಲ್ಲವಾ ಸಾರ್... ನಮ್ಮಪ್ಪ ನಾಲ್ಕು ಕೇಜಿ ಚಿನ್ನ ಕೊಟ್ಟು ಬೇಕಾದಷ್ಟು ದುಡ್ಡು ಕೊಟ್ಟು ಹತ್ತೆಕರೆ ಜಮೀನ್ನೂ ಬರಕೊಟ್ಟು ಇಡೀ ಸೀಮೆನೇ ಕರೆದು ಮದುವೆ ಮಾಡ್ಕೊಟ್ರೇ.... ಏನಾಯ್ತು ಗೊತ್ತಾ ಸಾರ್... ನಂತಂಗಿ ದೇವ್ತೆ ತರ ಇದ್ಲು ಸಾರ್... ಮುತ್ತಿನ ಮಣಿಯಂಗೆ ಸಾಕಿದ್ದೋ ಸಾರ್.... ಆ ಪಾಪಿ ಅವಳ ಗಂಡ ಕಾವೇರಿ ನದೀಲಿ ಮುಳುಗಿಸಿಬಿಟ್ಟ ಸಾರ್... ’ಯಾಕೆ... ಯಾಕೆ... ಅಷ್ಟೆಲ್ಲಾ ಕೊಟ್ರೂ... ಏನೂ ಕಡಿಮೆ ಆಗಿತ್ತು....’ ’ಅದೇ ಸಾರ್ ಗಾಚಾರಾ... ನೀನಿಂತಾ ಸ್ಪುರದ್ರೂಪಿ... ನಾನ್ನೋಡಿದ್ರೇ ಕಾಗೆ ಬಂಗಾರ... ನನ್ ಜೊತೆ ನೀನು ನಿಯತ್ತಾಗಿ ಇರುದು ದಿಟವೇ... ಅಂತಾ ಅನುಮಾನ ಮಾಡಿ ಮಾಡಿ ನೀನು ಯಾರ‍್ನೊ ಗುಟ್ಟಾಗಿ ಇಟ್ಕಂದಿದ್ದೀಯೇ... ನನಗೆ ಮೋಸಾ ಮಾಡ್ತಿದ್ದೀಯೇ... ಅವುನ್ಯಾರ‍್ನ ಇಟ್ಕಂದಿದ್ದೆಯೆ ಹೇಳು... ಅವನ ಕೊಂದಾಕ್ದೆ ಬಿಡೋದಿಲ್ಲಾ ಅಂತ ನಾನಾ ತರದ ಹಿಂಸೆ ಕೊಟ್ಟು ಬಲಮುರಿಗೆ ಕಕ್ಕಂದೋಗಿ ಈಜಾಡ್ವ ಅಂತ ಸುಳಿ ಇರೋ ಜಾಗದಲ್ಲಿ ತಳ್ಳಿ ಅವಳು ಸುಳಿಗೆ ಸಿಲುಕಿ ಸತ್ತಮೇಲೆ.... ಅಯ್ಯೊಯ್ಯೊ ನನ್ನೆಡ್ತಿ ಕಾಣ್ತಿಲ್ಲ ಇಲ್ಲೇ ನೀರೆಲಿ ಸ್ನಾನ ಮಾಡ್ತಿದ್ಲು ಅಂತಗಾ ಪುಕಾರು ಮಾಡಿ ನಾಮ ಹಾಕ್ಬುಟ್ಟ ಸಾರ್.... ನೋಡುದ್ರಾ... ಕಾಲ ಹೆಂಗೆ ಬದ್ಲಾಯ್ತಾ ಇದೆ... ಎಂದು ಮೌನ ವಹಿಸಿದ.

ಯಾರ ತಪ್ಪನ್ನು ಯಾರ ಮೇಲೆ ಹೊರಿಸುವುದು... ಅವಳಿಗೆ ಎಷ್ಟೊಂದು ನವಿಲು ಚಿತ್ರಗಳ ಬಿಡಿಸಿಕೊಟ್ಟಿದ್ದೆ... ತಾವರೆ ಕೊಳಗಳ ಚಿತ್ರಿಸಿಕೊಟ್ಟಿದ್ದೆ... ಕಾಮನಬಿಲ್ಲಿನ ಸಂಜೆ ದಿಗಂತದಲ್ಲಿ ಅವಳಿಗೆ ರೆಕ್ಕೆ ಬಿಡಿಸಿ ಹಾರಾಡುವ ಚಿತ್ರ ಬರೆದುಕೊಟ್ಟಿದ್ದೆ... ’ಮಗಳನ್ನು ಅಷ್ಟು ಪ್ರೀತಿಸುತ್ತಿದ್ದ ನಿಮ್ಮ ತಂದೆ ಮದುವೆಗೆ ಮುನ್ನ ಯೋಚಿಸಬೇಕಿತ್ತಲ್ಲವೇ’ ಎಂದು ಕೇಳಿದೆ. ’ತನ್ನ ಅಳಿಯನಾಗುವವನು ಕೋಟ್ಯಾಧಿಪತಿ ಎಂದು ಭ್ರಮೆ ಪಟ್ಟು ನಮ್ಮಪ್ಪನೇ ಮಗಳ ಬಾಳು ಹಾಳುಮಾಡಿ ಬಿಟ್ಟಾ ಸಾರ್... ಈಗ ನಾವು ನಿಜವಾಗಿಯೂ ದಿಕ್ಕಾಪಾಲಾಗಿದ್ದೀವಿ ಸಾರ್... ನಮ್ಮಪ್ನ ಜೊತೆಗೆ ಹುಟ್ಟಿದ್ದವರೂ ಮೋಸ ಮಾಡಿ ಕೈ ಎತ್ತುಬಿಟ್ರು’ ’ಒಷ್ಟೆಲ್ಲ ಕಷ್ಟದಲ್ಲಿರೋ ನೀವು ಹೀಗೆ ಹಾಡ ಹಗಲೇ ಕುಡಿದು ತೂರಾಡ್ತಿರಲ್ಲಾ... ಇದು ಸರಿಯೇ’ ಡ್ರಿಂಕ್ಸ್ ಮಾಡ್ದೆ ಇದ್ರೆ ಸತ್ತೋಯ್ತಿನಿ ಸಾರ್... ಅದೇ ಈಗ ಬಲ, ಅದೇ ಈಗ ಕೊನೆ ಜೀವ. ನಿಮ್ಮೊಂತೋರ ಬಳಿ ಬಂದು ನಿಲ್ಲೋ ಧೈರ್ಯನಾದ್ರೂ ನಮಗೀಗ ಎಲ್ಲಿದ್ದಾದು ಸಾರ್...’.... ’ಹೋಗ್ಲಿ ನಿಮ್ಮ ಮಕ್ಕಳಾದ್ರೂ...’ ಸಿದ್ದೇಗೌಡ ಬಿಕ್ಕತೊಡಗಿದ. ’ಇವೊಂದೆಲ್ಲ ಕಳ್ಳಳಾ... ಇವನೇನು ಸದರವಾದವನೆ... ಕೊಲೆ ಮಾಡಿ ಜೈಸ್ಕಂದಿರುನು ಇವನೂ... ಮೊಗಾ... ಯುಗಾದಿ ಹಬ್ದೆಲೇ ಆಚೆ ಕೇರಿ ಸಣ್ಣಕ್ಕನ ಮೈನೆರ‍್ದ ಹರೀದೈದ್ಲ ಕದ್ಕಂದೋಗಿ ಕೆಡ್ಸಿ ಕತ್ತ ಮುರ‍್ದು ಬೇಲಿ ಮರೆಗೆ ಆಕುಬುಟ್ಟು ಯಾರೂ ಅನ್ನಾಯಕಾರ್ರು ಇಂಗೆ ಮಾಡವರಲ್ಲಾ ಅಂತಾ ಇವ್ನೇ ಮುಂದೆ ನಿಂತು ಹೆಣವಾ ಸುಡ್ಸಿ ಬೂದಿ ಮಾಡಿದ್ದ ನಾವು ಕಣ್ಣಾರೆ ಕಂಡಿವಿ. ಆದ್ರೆ ನಾವು ಯಾರ‍್ಗೆ ಏನಂತ ಹೇಳುವಾ.... ಇವ್ನ ಕಳುಸ್ಬುಟ್ಟು, ಅದೇನು ನಿನ್ನ ಹೆಡ್ತಿ ಮಕ್ಕಳು ಸಂಸಾರ ಬಂದುಬಳಗ ಅದೇನೊ ಬರಿಯುದು ಓದುದು ಅಂತಾ ಮಾಡು’ ಎಂದು ಅಜ್ಜಿಯೊಬ್ಬಳು ಒಳಗಿವಿಯಲ್ಲಿ ಪಿಸುಗುಟ್ಟಿದಳು.

ಆಗ ಒಂದು ಕಾಲಕ್ಕೆ ಮೆರೆದವರು ಈಗ ಹೀಗೆ ಪರಿತಪಿಸುವಾಗ ಅದರೊಳಗೆ ಅವತ್ತು ಅವರು ಮಾಡಿದ ದಬ್ಬಾಳಿಕೆ ನೆನಪಿಗೆ ಬರುವುದೇ ಎಂದುಕೊಳ್ಳುತ್ತಾ... ’ಆಗೆಲ್ಲ ನಿಮ್ಮ ಕಂಡ್ರೆ ಇಡೀ ಊರಾದ ಊರೇ ಹೆದುರ‍್ತಿತ್ತು. ಎಲ್ಲಾ ನಿಮ್ದೆ ದರ‍್ಬಾರಿಗತ್ತು. ನೀವು ಹೇಳಿದ್ದೆ ಖಾನೂನಾಗಿತ್ತು. ನಮ್ಮವರೆಲ್ಲ ನಿಮ್ಮ ಜೀತದವರಾಗಿದ್ದರು. ನಾವು ನಿಮ್ಮ ವಿರುದ್ಧ ಉಸಿರಾಡುವಂತೆಯೂ ಇರಲಿಲ್ಲ. ಈಗ ನೋಡುದ್ರೆ...’ ಮಧ್ಯೆ ತಡೆದ ಸಿದ್ದೇಗೌಡ...’ ಅಯ್ಯೊಯ್ಯೊ ನಿಮ್ಮವರ ಮಾತಾಡ್ಸೋ ದುಂಟಾ ಸಾರ್... ಮಾತೆತ್ತಿದ್ರೆ ಯು.ಟಿ. ಕೇಸಾಕ್ತರೆ. ಬಹಿಷ್ಕಾರ ಹಾಕವರೆ ಅಂತಾ ಕಂಪ್ಲೆಂಟ್ ಕೊಡ್ತರೆ. ಯಾವಳ್ನಾರ ಏನಮ್ಮಾ ಎಲ್ಲಿಗೊಂಟೆ ಅಂತಾ ಕೇಳುದ್ರೆ ನನ್ನ ಬಲವಂತ ಮಾಡ್ದ ಅಂತಾ ಅರೆಸ್ಟ್ ಮಾಡಿಸ್ತಾರ್... ಕೂಲಿಗೆ ಬಾರಪ್ಪಾ ಅಂದ್ರೆ ಅಯ್ಯೊ ವೋಗಯ್ಯ ನಿನ್ ಕೂಲಿ ಯಾವನಿಗೆ ಬೇಕಂತ ಪ್ಯಾಟೆ ಬಸ್ಸತ್ತೆ ಸೊಯ್ಯಂತೆ ವಂಟೋಯ್ತರೆ... ಸಂಜೆಗೆ ಬಂದು ವೈವೈನೂರ ನೋಟ್ನೆ ಜೇಬಿಂದ ತಗದು ಏನೇನ್ ದರ‍್ಬಾರ್ ಮಾಡ್ತಾರೆ ಅಂತಾ ಬಂದು ನೋಡಿದ್ದೀರಾ ಸಾರ್...’ ’ನೀವು ಇದನ್ನಷ್ಟೇ ಬಂದಿರೊ... ಇಲ್ಲಾ ಇನ್ನೇನಾದರೂ ಸಮಸ್ಯೆ ಇದೆಯೊ...’ ಎಂದು ದಿಟ್ಟಿಸಿ ನೋಡಿದೆ. ’ಅಷ್ಟೇ ಬಂದೇ ಸಾರ್. ನೀವೊಬ್ರೇ ನಮಗೀಗ ದಿಕ್ಕು ಸಾರ್... ನಮಗೆ ಯಾರೂ ಇಲ್ಲಾ ಸಾರ್...’ ಎಂದು ಸಿದ್ಧೇಗೌಡ ಎದ್ದು ನಿಂತು ಕೈಮುಗಿದ. ’ಇದೆಲ್ಲ ಬೇಡ... ನಾವೆಲ್ಲ ಮನುಷ್ಯರೇ... ಕಷ್ಟ ಸುಖ ನಮಗಲ್ಲದೆ ಇನ್ನಾರಿಗೆ ಬರ‍್ತವೆ ಹೇಳಿ... ತಾಳಿಕೊಳ್ಳಿ... ಎಲ್ಲಾದ್ಕೂ ಒಂದು ಪರಿಹಾರ ಇದ್ದೇ ಇರ‍್ತರೆ’ ಎಂದೆ.

ಮನದೊಳಗಿದ್ದ ಹಳ್ಳಿಯ ಆ ಪಾತ್ರಗಳಲ್ಲಿ ವಿರುದ್ಧವೇ ದಿಕ್ಕಾರ ಕೂಗಿದವು. ’ನೀನೇನೊ ಯೇಸುವೋ ಗಾಂಧಿಯೋ ಆಗಬೇಕಾದಿಲ್ಲ. ಜೀವಂತವಾಗಿ ಸುಡುವಾಗ ನಾನು ಆಕಾಶಕ್ಕೆಲ್ಲ ಕೇಳಿಸಿಕೊಳ್ಳುವಷ್ಟು ಕಿಚ್ಚಿಂದ ಕೂಗಿಕೊಂಡೇ... ಯಾರೊಬ್ಬರ  ಅಂತಃಕರಣದ ಜಲವೂ ನನ್ನ ಮೈಮೇಲಿನ ಬೆಂಕಿಯ ಆರಸಲಿಲ್ಲ. ಮೊದಲು ನ್ನ ದುಃಖಕ್ಕೆ ಮಿಡಿ ಆ ಮೇಲೆ ಬೇರೆ ಯಾರಾದರೂ ದುಃಖಕ್ಕೂ ಮೆರುಗುವಂತೆ’ ಎಂದು ಅರೆಬರೆಯಾಗಿ ಬೆಂದು ಒಂದು ವಾರವೆಲ್ಲ ನರಳಾಡಿ ಸತ್ತಿದ್ದ ಕೇರಿಯ ಬಂಧುವೊಬ್ಬರು ಹೊಕ್ಕುಳ ಬಳ್ಳಿಯನ್ನು ಜಗ್ಗಿ ಕೂಗಿ ಹೇಳಿದರು. ಆ ಘೋರ ಚಿತ್ರವನ್ನು ಕಣ್ಣಿಗೆ ತಂದುಕೊಳ್ಳಲಾಗದೇ ಸಿದ್ದೆಗೌಡನ ಮುಖ ನೋಡಿದೆ. ಅವನ ಉರಿ ಮೀಸೆಯ ಒಳಗೆ ಈಗಲೂ ಅವತ್ತಿನ ಕ್ರೌರ್ಯ ಮರೆಯಾಗಿ ಕೂತಿರುವಂತೆ ಬಾಸವಾಯಿತು. ಅತ್ತೆ ದೃಷ್ಟಿಯ ಮುಂದೆ ಬಂದು ಇವನು ಕೂಡ ನನ್ನ ಕೆಡಿಸಲು ಒಂದು ಸಂಜೆ ಸಂಚು ಮಾಡಿದ್ದ... ನಾನವತ್ತು ಇವನನ್ನು ಕುಡುಗೋಲಿಂದ ಕತ್ತರಿಸಲು ಯತ್ನಿಸಿದ್ದೇ. ಇವನು ಇವನಾಗಿಯೇ ನಾಶವಾಗಲಿ... ಕಳಿಸಿಬಿಡು ಎಂದು ಆದೇಶಿಸಿದಳು.

’ಇನ್ನೇನು ಸಿದ್ದೇಗೌಡ್ರೇ... ಇವತ್ತೆ ಊರಿಗೆ ಹೋಗ್ತಿರೋ...ಹೇಗೇ... ಇವತ್ತು ಇದ್ದು ಹಂಪೆಯನ್ನೆಲ್ಲ ನೋಡಿಕೊಂಡು ನಾಳೆ ರಾತ್ರಿ ಬಸ್ಸು ಹತ್ತಬಹುದು... ನಮ್ಮ ಕಡೆ ಇಂತಹ ಒಂದ ಘನ ಸಾಮ್ರಾಜ್ಯವೇ ಇರಲಿಲ್ಲ. ಈ ವಿಜಯನಗರ ಸಾಮ್ರಾಜ್ಯದ ಮುಂದೆ ಆ ನಮ್ಮ ಮೈಸೂರು ಅರಸರು ಬಹಳ ಚಿಕ್ಕವರು’ ಎಂದು ವಿಷಯ ಬದಲಿಸಿದೆ. ’ಅದೇನ್ ನೋಡ್ತಿರಿ ಬಿಡೀ ಸಾರ್.... ನಮ್ಮ ಪುನ ಹದಿನೆಂಟಂಕಣದ ಮನೆಯ ಕಂಬಗಳೇ ಮುರ‍್ದೋಯ್ತಾವೆ. ನಾಳೆ ಅದೇ ಕತೆ ತಾನೇ...’ ಎಂದು ವಿಕ್ಷಿಪ್ತನಾಗಿ ತಲೆ ಆಡಿಸಿದ. ’ಏನಂತಾ ವಿಷ್ಯಾನೇ ಹೇಳ್ಲಿಲ್ಲಾ....’ ಎಂದೆ. ಆತ ಆಲೋಚಿಸಿ ಬಾಯಿ ತೆರೆದ. ’ನಮ್ಮೂರಿಗೆ ನೀವು ಬರಬೇಕು ಸಾರ್...’ ಎಂದ. ’ಯಾಕೆ?’ ತುಂಬ ಮುಖ್ಯವಾದ ಒಂದು ಸಮಾಚಾರ ಅದೇ ಸಾರ್... ಅದಾ ನಮ್ಮಪ್ಪ ಅವರೇ ನಿಮ್ಮ ಜೊತೆ ಮಾತಾಡಬೇಕಂತೇ...’ ’ಅಲ್ಲಾ ಸಿದ್ದೇಗೌಡ... ನಾನು ಊರು ಬಿಟ್ಟೇ ಮುವತ್ತು ವರ್ಷ ಆದವು. ಅಲ್ಲಿ ನನ್ನದೇನೂ ಇಲ್ಲ. ಬೇರುಗಳೂ ಭಾಗಶಃ ತುಂಡಾಗಿವೆ. ಏನಾದರೂ ಸಣ್ಣಪುಟ್ಟ ಕೆಲಸ ನನ್ನಿಂದಾಗುವುದಿದ್ದರೆ ಹೇಳಿ... ಅಧಿಕಾರಿಗಳಿಗೊ ಮಂತ್ರಿಗಳಿಗೋ ಹೇಳಿ ಮಾಡಿಸುವ.’ ’ನಮ್ಮಪ್ಪ ಅವರು ಇನ್ನೇನೋ ಕಾಲ ಮುಗೀಸ್ತಾರೆ ಸಾರ್.... ನಿಮ್ಮನ್ನವರು ನೋಡಿ ಪ್ರಾಣ ಬಿಡ್ತೀನಿ ಅಂತಾನೆ ಸಾರ್... ಮುಖ್ಯವಾದೊಂದು ಮಾತ ಕೇಳಿ ಕಣ್ಣು ಮುಚ್ತೀನಿ ಅಂತಾರೆ ಸಾರ್ ನೀವು ಬರ‍್ಲೇಬೇಕು’ ಎಂದು ಸಿದ್ದೇಗೌಡ ಹಠ ಹಿಡಿದ.

ಮತ್ತೆ ನನ್ನೊಳಗಿದ್ದ ಪಾತ್ರಗಳೆಲ್ಲ ಅಡ್ಡ ಬಂದವು... ’ಆ ಕರೀಗೌಡ ಮೋಸಗಾರ... ಅವನು ಅದೇನು ಭಾಷೆ ತೆಗೆದುಕೊಂಡು ಅದೇನು ಕೇಳುವನೊ... ಅವನ ತಂಟೆಯೇ ಬೇಡ. ನಮ್ಮ ಮಾತು ಮೀರಬೇಡ’ ಎಂದು ಸಂಪು ಹೂಡಿದವು. ’ಇದು ಅತಿ ಆಯಿತು. ಅವತ್ತು ಅವತ್ತಿಗೆ, ಇವತ್ತು ಇವತ್ತಿಗೆ, ನಾಳೆ ನಾಳೆಗೆ... ಎಲ್ಲ ಕಾಲವೂ ಕೆಟ್ಟದಲ್ಲ ಎಲ್ಲ ಕಾಲವೂ ಒಳ್ಳೆಯದಲ್ಲ... ಪರಿವರ್ತನೆಯೇ ಬಾಳಿನ ಒಳ್ಳೇಯ ಚಲನೆ... ಅದೇ ಬೆಳಗಿನ ಸುಖ... ಸುಮ್ಮನಿರಿ.. ನಾನೇನೋ ಅಲ್ಲಿ ಹೋಗಿ ನಿಮ್ಮನ್ನೆಲ್ಲ ಮಾರಿಬಿಡುವುದಿಲ್ಲ. ನಿಮ್ಮ ಆತ್ಮ ಸಾಕ್ಷಿಯ ಕೊಂದು ಬಿಡುವುದಿಲ್ಲ’ ಎಂದು ಮನದೊಳಗಿದ್ದವರನ್ನೆಲ್ಲ ಸುಪ್ತ ಪ್ರಜ್ಞೆಯ ಅಂಗಳಕ್ಕೆ ಬಿಟ್ಟು; ’ಆಯ್ತು ಸಿದ್ದೇಗೌಡಾ ನೀನು ಹೇಳಿದಂತೆಯೇ ಮುಂದಿನ ವಾರವೇ ನಿಮ್ಮೂರಿಗೆ ಬರುವೆ; ಸಿದ್ಧವಾಗಿರು’ ಎಂದು ಆತನನ್ನು ಕಳುಹಿಸಿಬಿಟ್ಟೆ. ಅವನು ಅತ್ತ ಹೋದ ಮೇಲೆ ಇದೆಲ್ಲ ನಿಜವಾ... ಇದೇನಾದರೂ ಕಥೆಯ ಭ್ರಮೆಯೇ... ನನ್ನೂರು ಬಿಟ್ಟು ಬಂದ ಮೇಲೆ ನನ್ನ ಕೇರಿಯ ಒಂದು ಬಳಗವೆ ನನ್ನನ್ನು ಬಿಟ್ಟು ಬಿಟ್ಟಿರುವಾಗ ಈ ಗೌಡನಿಗೆ ನನ್ನ ಸಂಬಂಧ ಏನೆಂದು ವಿಪರೀತ ಕುತೂಹಲವಾಯಿತು. ಪತ್ರಿಕೆಗೆ ಕಥೆ ಬರೆಯಲು ಮತ್ತೆರಡು ದಿನ ಗಡುವು ತೆಗೆದುಕೊಂಡು ಊರಿನತ್ತ ಪಯಣ ಮಾಡಿದೆ. ನನ್ನ ಊರು ನನಗೇ ಅಪರಿಚಿತ ಎನಿಸಿತು. ಬಾಲ್ಯದಲ್ಲೇ ತಂದೆ ತಾಯಿ ಕಳೆದುಕೊಂಡಿದ್ದ ನನಗೆ ಅಲ್ಲಿ ಯಾರೂ ಇರಲಿಲ್ಲ. ಇದ್ದ ಬಂಧು ಬಳಗ ನನ್ನನ್ನು ನಿರಾಕರಿಸಿ ಬಹಳ ಕಾಲವೇ ಆಗಿತ್ತು. ನರಕದಿಂದ ತಪ್ಪಿಸಿಕೊಂಡು ದೂರ ಹೋಗಿ ಸ್ವರ್ಗದಲ್ಲಿದ್ದಾನೆಂದು ಅವರು ಮುಗಿಸಿಕೊಂಡಿದ್ದರು. ನಾನು ನೇರ ಸಿದ್ಧೇಗೌಡನ ಮನೆಯ ಮುಂದೆ ನನ್ನ ಕಾರು ನಿಲ್ಲಿಸಿದೆ. ವಕ್ಕಲುಗೇರಿಯೇ ಸುಸ್ತಾಗಿ ಹೋಗಿತ್ತು. ಒಂದು ಕಾಲಕ್ಕೆ ಅಲ್ಲಿ ಕಾಲಿಡುವುದೇ ಮಹಾ ಸಾಹಸವಾಗಿತ್ತು. ಅಂತಾದ್ದರಲ್ಲಿ ನಾನು ದುಬಾರಿ ಕಾರಿಂದ ಇಳಿದು ಕರೀಗೌಡರನ್ನು ಕಾಣಲು ಒಳನಡೆದೆ. ಆ ಹದಿನೆಂಟು ಅಂಕಣದ ಮನೆಯು ಇನ್ನೇನೋ ಮುರಿದು ನೆಲ ಸಮವಾಗುವಂತಿತ್ತು. ಸಿದ್ದೇಗೌಡ ನಿಂಬೆ ಹಣ್ಣಿನ ಪಾನಕ ಮಾಡಿ ತಂದುಕೊಟ್ಟ. ಆ ದೊಡ್ಡ ಮನೆ ಬಿಕೋ ಎನ್ನುತ್ತಿತ್ತು. ಅನೇಕರು ಆ ಮನೆಯ ಸಹವಾಸದಿಂದ ದೂರವಾಗಿದ್ದರು. ಕರೀಗೌಡರ ಹೆಂಡತಿ ಒಂದು ಕಾಲಕ್ಕೆ ಮಹಾಗೌಡತಿ. ಅವಳು ಯಾವುದೊ ಪಸೆದ ಹಳೆ ಸೀರೆಯನ್ನು ಉಟ್ಟುಕೊಂಡು ಕೈ ಮುಗಿದಳು. ನಾನು ಯಾರೆಂಬುದು ಅವರಿಗೆಲ್ಲ ಚೆನ್ನಾಗಿ ಗೊತ್ತಿತ್ತು. ಒಂದು ಕಾಲಕ್ಕೆ ಇದೇ ಕರೀಗೌಡರ ಮನೆಗೆ ನನ್ನ ಅಪ್ಪ ನನ್ನನ್ನು ಜೀತಕ್ಕೆ ಸೇರಿಸಲು ಮುಂದಾಗಿದ್ದ.

’ಹೇಗಿದ್ದೀರಿ ಗೌಡರೇ’ ಎಂದು ಕರೀಗೌಡರನ್ನು ವಿಚಾರಿಸಿದೆ. ಯಾವುದೂ ಮುರುರ ಛೇರಿನಲ್ಲಿ ನನ್ನನ್ನು ಸಿದ್ಧೇಗೌಡನೇ  ಕೂರಿಸಿದ್ದ. ನನ್ನೊಳಗಿದ್ದ ಪಾತ್ರಗಳೆಲ್ಲ ಗೌಡರ ಆ ವಿಶಾಲವಾದ ಆದರೆ ಪಾಳು ಬಿದ್ದಂತಹ ಮನೆಯ ಒಳಕ್ಕೆ ಓಡಿ ಹೋಗಿ ಅವರು ಆ ಕಾಲದಲ್ಲಿ ಕಂಡಿದ್ದ ಗೌಡರ ಗತವೈಭವವನ್ನೆಲ್ಲ ಮೈ ದುಂಬಿದಂತೆ ಅಡ್ಡಾಡುತಿದ್ದರು. ಕಿಲುಬುಗಟ್ಟಿದ ಪೆಟ್ಟಿಗೆಯ ಬಾಗಿಲು ತೆಗೆಯಲಾಗದೆ ಪಾತ್ರವೊಂದು ಶ್ರಮಪಡುತ್ತಿತ್ತು. ನನ್ನ ಅತ್ತೆ ಹಳೆಯ ಪಲ್ಲಂಗದ ಮೇಲೆ ಕೂತು ’ಜಾಜೀಯ ಮರವೂ ನೆರಳಲ್ಲಾ ಮಗಳೇ’ ಎಂದು ಹಾಡುತ್ತಿದ್ದಳು. ಗೌಡರ ಮಗಳು ಎಂದೊ ಬರೆಸಿಕೊಂಡಿದ್ದ ಆ ನವಿಲಿನ ಚಿತ್ರಗಳೆರಡು ಮಾಸಲು ಬಣ್ಣ ಹಿಡಿದು ಹಜಾರದ ಸಾಲು ಪಟಗಳ ಆಚೀಚೆಯ ಗೋಡೆಗೆ ಅಂಟಿಕೊಂಡಿದ್ದವು. ನನ್ನ ಮನಸ್ಸು ಒಂದು ಕ್ಷಣ ದಂಗಾಯಿತು... ನಾನೇ ಬರೆದ ಚಿತ್ರಗಳೇ ಎಂದು ಹತ್ತಿರ ಹೋಗಿ ದಿಟ್ಟಿಸಿ ಒಂದು ಕ್ಷಣ ಬಾಲ್ಯದ ಭಾವದ ತೊಟ್ಟಿಲ್ಲಲ್ಲಿ ಮುಳುಗಿದೆ. ಆ ಹೆಣ್ಣು ಗಂಡಿನ ಎರಡೂ ನವಿಲುಗಳು ಗೋಡೆಯಿಂದ ಹಾರಿ ಬಂದು ದೊಡ್ಡ ಪ್ರಾಂಗಣದಂತಿದ್ದ ಹಜಾರದಲ್ಲಿ ನರ್ತಿಸತೊಡಗಿದವು. ’ನೋಡಿದೆಯಾ... ಈ ಗೌಡರ ಮನೆಗೆ ಒಂದು ದಿನವಾದರೂ ನಾವು ಒಳ ಪ್ರವೇಶಿಸುವಂತಿರಲಿಲ್ಲ... ನಿನ್ನಿಂದ ನಾವೂ ಒಳಗೆ ಬಂದುಬಿಟ್ಟೆವು. ಎಂದು ಪಾತ್ರಗಳು ಖುಷಿಯಾಗಿ ನಲಿಯುತ್ತಿದ್ದವು. ಗತಿಸಿದ್ದ ಲೋಲಾಕ್ಷಿಯ ಪೋಟೋದ ಮುಂದೆ ನಿಲ್ಲಲಾಗದೆ ಸುತ್ತೆಲ್ಲ ಕಣ್ಣಾಡಿಸಿದೆ.

’ನಿಮ್ಮನ್ನ ಉಪಚರಿಸೋ ಭಾಗ್ಯ ನಮಗಿಲ್ಲಾ ಸಾರ್... ದೆವ್ವದಂತೆ ಈ ದೊಡ್ಡ ಮನೆಯಲ್ಲಿ ನಾನೊ, ನಮ್ಮಪ್ಪ, ನಮ್ಮವ್ವ, ಮೂರೇ ಜನ ಇರೋದು... ನೀವು ದೊಡ್ಡ ಸ್ಥಾನದಲ್ಲಿದ್ದೀರಿ.... ನಿಮ್ಮವರೆಲ್ಲ ಆಗಲೇ ಸ್ವಾಗತ ಮಾಡಲು ತಯಾರು ಮಾಡ್ಯಡವರೇ... ನಮ್ಮಪ್ಪ ಏನು ಹೇಳುವನೊ... ಬಾಯೇ ಬರೋದಿಲ್ಲ...’ ಎಂದು ನಿಶೆಯಲ್ಲಿ ತೂರಾಡುತ್ತಿದ್ದ. ಮುಪ್ಪಾದ ಗೌಡತಿ ಅನಾರೋಗ್ಯದಿಂದ ಕಷ್ಟಪಟ್ಟು ಉಸಿರಾಡುತ್ತಿದ್ದಳು. ಅತ್ತ ನನ್ನ ಹೊಲಗೇರಿಯವರು ನಾನು ಬಂದ ಸುದ್ದಿ ತಿಳಿದು ಮೆರವಣಿಗೆಯಲ್ಲಿ ಕೇರಿಗೆ ಕರೆದೊಯ್ಯಲು ತಮಟೆ ನಗಾರಿಗಳು ಆಗಲೇ ಮೊಳಗಿಸುತ್ತಿರುವ ಸದ್ದು ಆ ಇಡೀ ಹದಿನೆಂಟಂಕಣದ ಹಳೇ ಕಂಬಗಳೇ ಕಂಪಿಸಿ ನಡುಗುವಂತೆ ಮೊಳಗುತ್ತಿದ್ದವು. ’ಏನು ಹೇಳಿ ಗೌಡರೇ’ ಎಂದೆ. ಗೌಡರು ನಾಲಿಗೆ ಎಳೆದೆಳೆದು ಎಡಗೈ ಎಡಗಾಲನ್ನು ಬಿಗಿದೆಳೆದು ಏನೋ ಹೇಳಲು ಸಾಧ್ಯಂತ ಪ್ರಯತ್ನಿಸಿದರು. ಕರೀಗೌಡರಿಗೆ ಲಕ್ವ ಹೊಡೆದು ಯಾವುದೇ ಒಂದು ಸ್ಪಷ್ಟ ದನಿಯನ್ನೂ ಹೊರಡಿಸಲು ಸಾಧ್ಯವಾಗುತ್ತಿರಲಿಲ್ಲ. ’ಏನು ಸಿದ್ಧೇಗೌಡಾ, ನಿಮ್ಮ ತಂದೆಯವರು ಏನು ಹೇಳುತ್ತಿದ್ದಾರೆ’ ಎಂದು ಆತನತ್ತ ನೋಡಿದೆ. ಕರೀಗೌಡರ ಮಗನ ಕಡೆ ಬೀರಿದ ಕಣ್ಣುಗಳ ಮಳ್ಳಿಸಿ; ನೀವೇನೂ ಹೇಳಬೇಡ ತಾಳು ಎಂಬಂತೆ ಕೈ ಸನ್ನೆ ಮಾಡುತ್ತ ತಾವೇ ಏನೋ ಹೇಳಲು ಮುಂದಾದರು. ಅವರನ್ನು ಸಿದ್ದೇಗೌಡ ಎತ್ತಿ ಕೂರಿಸಿ ದಿಂಬಿಗೆ ಒರಗಿಸಿದ. ಗೌಡರು ಜೀವವನ್ನೇ ಪಣಕ್ಕಿಟ್ಟಂತೆ ಆವಭಾವಗಳ ಬಳಸಿ ದೀನವಾಗಿ ಮುಖವ ಎಳೆದು ವಕ್ರವಾಗಿ ಬಾಯಿ ತೆರೆದು ದರದರ ಸದ್ದುಮಾಡಿ ಹೊಡಿಸಿ ಗಂಟಲ ನರಗಳೆಲ್ಲ ಬಿಗಿದಂತಾಗಿ ಕಣ್ಣಲ್ಲಿ ಏನನ್ನೋ ಹೇಳಲು ಕಂಬನಿ ತುಳುಕಿಸಿದರು. ಸೀಮೆಯನ್ನೆಲ್ಲ ನಡುಗಿಸಿದ್ದ ಅಂತಹ ಕರೀಗೌಡ ಈಗ ಹೀಗೆ ಗಾಯಗೊಂಡು ಮುದುರಿಕೊಂಡು ಬಿದ್ದಿರುವಂತಹ ಯಾವುದೊ ಒಂದು ನತದೃಷ್ಟ ಹುಳದಂತೆ ಹೊರಳಾಡುತ್ತಿರುವುದನ್ನು ಕಂಡು ಕನಿಕರ ಎನಿಸಿತು. ನನ್ನೊಳಗಿದ್ದ ಪಾತ್ರಗಳಲ್ಲಿ ಕೆಲವು ರಾಗ ತೆಗೆದು...’ ನಿನಗೆ ನಾವು ಮುಖ್ಯವೋ.... ಈ ಗೌಡ ಮುಖ್ಯವೋ... ನಿನಗೆ ಯಾರು ಬೇಕು ಎಂದು ಹೇಳಿಬಿಡು’... ಎಂದು ಕೂಗುತ್ತಿದ್ದವು. ’ಹೇಳಿ ಗೌಡರೇ... ನಿಮಗೆ ಸಾಧ್ಯ.. ನೀವು ಮಾತನಾಡಿ... ನಿಮ್ಮ ದನಿಗೆ ಊರಾದ ಊರೇ ಬೆದರಿ ಎಚ್ಚೆತ್ತು ಕೂರುತ್ತಿತ್ತು.’ ಎಂದು ಉತ್ಸಾಹ ತುಂಬಿದೆ.

’ನಮ್ಮ ತಂದೆ ಹೇಳ್ತಿರೋದೂ... ಈ ತೋಟದ ಮನೆಯನ್ನು ನೀವು ಖರೀದಿಸಿ ನನ್ನ ಮಗನಿಗೆ ದುಡ್ಡು ಕೊಡಿ ಎಂದು ಹೇಳ್ತಿದ್ದಾರೆ. ನೀವು ಈ ತೋಟ, ಈ ಮನೆ... ಇದಕ್ಕೆಲ್ಲಾ ಎಷ್ಟು ಕೋಡ್ತಿರಿ ಹೇಳಿ... ಅಂತಾ ನಮ್ಮ ತಂದೆಯ ಮಾತು...’ ಎಂದು ಸಿದ್ದೇಗೌಡ ಹೇಳಿದ. ನಿಜವೇ... ಇದೇನಾ... ನೀವು ನನ್ನ ಜೊತೆ ಹೇಳಬಹುದಾದ ಕೊನೆಯ ಮಾತು... ಇಲ್ಲ ಇಲ್ಲ ಅಲ್ಲವೇ ಎಂಬಂತೆ ಅವರನ್ನೇ ದಿಟ್ಟಿಸಿದೆ. ಇಲ್ಲ ಇಲ್ಲಾ... ಮಗ ಹೇಳೋದು ತಪ್ಪು.. ಅದಲ್ಲಾ... ಎಂದು ಮಗನ ಬಾಯಿ ಮುಚ್ಚಿಕೊಂಡು ಸುಮ್ಮನಿರು ಎಂಬಂತೆ ಸೂಚಿಸಿ; ಇಡೀ ನರನಾಡಿಗಳನ್ನೆಲ್ಲ ಎಳೆದು ತಂದು ನಾಲಿಗೆಗೆ ಒಂದು ಮಾತಾಗಿ ಹರಿದುಬನ್ನಿ ಎಂದು ಬೇಡುವಂತೆ ಮತ್ತೆ ಯತ್ನಿಸಿದರು. ನನ್ನೊಳಗಿದ್ದ ಪಾತ್ರಗಳೆಲ್ಲ ತೆಪ್ಪಗೆ ಒಳಗೇ ಕಿವಿಗೊಟ್ಟಿದ್ದವು. ನನ್ನತ್ತೇ ಲೋಲಾಕ್ಷಿಯ ಜೊತೆ ಏನೊ ಕಷ್ಟ ಸುಖ ಮಾತನಾಡುತ್ತಿದ್ದಳು. ಮನುಷ್ಯರಿಗೆ ಎಷ್ಟೊಂದು ರೂಪಗಳು, ನರಗಳು, ರೂಪ ವಿರೂಪಗಳ ಅಲೆ ಅಲೆಯ ಜೀವನ ಧಾರೆಗಳು... ’ಗೌಡರೇ ನೀವು ಏನು ಹೇಳುತ್ತಿರುವಿರೋ ನನಗೆ ತಿಳಿಯುತ್ತಿಲ್ಲ. ನಾವಿಬ್ಬರೂ ಮಾತನಾಡಬಹುದಾದ ಒಂದು ಭಾಷೆಗೆ ಕಾಲ ಕೂಡಿ ಬಂದಿಲ್ಲ ಅನಿಸುತ್ತೇ...’ ಎಂದು ಎದ್ದು ಹೊರಡಲು ಮುಂದಾದೆ. ಸಿದ್ದೇಗೌಡ ಏನೇನೊ ಹೇಳುತ್ತಿದ್ದ. ಅವರಪ್ಪ ಕರೀಗೌಡ ನರನರವ ಎಳೆದೆಳೆದು ಇನ್ನೊಂದು ಬಾರಿ ಅವಕಾಶ ಕೊಡು... ಬಾಯಿಗೆ ಮಾತು ಬಂದುಬಿಡುವುದೂ... ಮಮಮ...ಳುಳು... ಎಂದು ಏನೋ ಎಳೆಎಳೆದು ನರ ತುಂಡಾದಂತೆ ಬಾಯಿ ಮುಚ್ಚಿಕೊಂಡರು. ಮ.. ಮ... ಮ... ಳುಳು. ಅಂದರೆ... ಮಗಳು ಎಂತಲೆ... ಅದೇನು ಮಮಕಾರದ ದನಿಯೋ... ಕರೀಗೌಡರ ಎದೆಯೇ ಬಿಗಿದಂತೆ ವಾಲಿಕೊಂಡರು. ಸಿದ್ದೇಗೌಡ ಕುಡಿದ ಅಮಲಲ್ಲಿ ತಂದೆಯ ಬಾಯಿ ತೆರೆದು; ಹೇಳು... ಅದೇನೆಂದು ಹೇಳಿ ಸಾಯುವೇಯೋ... ಹೇಳಿಬಿಡು.... ಅವರು ಮನಸು ಮಾಡಿದರೆ ನಮ್ಮೆಲ್ಲ ಕಷ್ಟ ಕಳೆದು ಹೋಗುತ್ತವೆ ಹೇಳು’ ಎಂದು ನಿತ್ರಾಣನಾಗಿ ಮಾತು ನಿಂತುಹೋದ ತಂದೆಯನ್ನು ಬಲವಂತವಾಗಿ ಭುಜ ಅಲುಗಿಸುತ್ತಿದ್ದ.

ನನ್ನೊಳಗಿನ ಪಾತ್ರಗಳು ಗೌಡರ ಆ ಮಾತು ಏನೆಂದು ಭಾವಿಸಿ ತಮಗೆ ಬೇಕಾದಂತೆಲ್ಲ ಚರ್ಚಿಸುತ್ತಿದ್ದವು. ನನಗೆ ಏನೋ ಸಂಕಟ ಹಿಂಡುತ್ತಿತ್ತು. ಒಬ್ಬ ಮನುಷ್ಯ ಅವನು ಎಂತದೇ ಕ್ರೂರಿ ಆಗಿರಲಿ... ಅವನ ಕೊನೆ ಮಾತ ಕೇಳಲು ಸಾಧ್ಯವಾಗದೇ ಭಾಷೆಗೊಂದು ಮಾತು ಸಿಕ್ಕದೇ ಹಾಗೆ ಕರಗಿಹೋಯಿತಲ್ಲಾ ಎಂದು ವಿಷಾದದಿಂದ ನನ್ನ ಕೇರಿಯ ಜನಗಳ ಕಡೆ ನಡೆದೆ. ಅವರಾಗಲೇ ಹುಲಿವೇಷ ಹಾಕಿ ಕುಣಿಯುತ್ತ ಮೆರೆಯುತ್ತ ಕುಪ್ಪಳಿಸಿ ಕೇಕೆ ಹಾಕುತ್ತ ತಮಟೆ ನಗಾರಿಗಳ ಬೊಬ್ಬರಿಸುತ್ತ ನನ್ನನ್ನು ಮೆರವಣಿಗೆಯ ಮುಂದು ಬಿಟ್ಟುಕೊಂಡು ಸಂಭ್ರಮಿಸುತ್ತಿದ್ದರು. ಮೇರೆ ಮೀರಿದ ಗದ್ದಲ, ಜನರ ನೂಕು ನುಗ್ಗಲು ಬಂಧುಬಳಗ, ಹಳಬರು, ಹೊಸಬರು... ಇಡೀ ಹೊಲಗೇರಿ ಏನೊ ಗೆದ್ದಂತೆ... ತಮ್ಮ ಜನಾಂಗಕ್ಕೆ ಏನೋ ದಕ್ಕಿದಂತೆ ಸಡಗರದಲ್ಲಿದ್ದರು. ಅಂತಹ ಸ್ಥಿತಿಯಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ನೆರೆದವರಿಗೆ ನಾಲ್ಕು ಮಾತು ಹೇಳಿ... ಆ ಗಡಿಬಿಡಿ ಗಲಾಟೆಯಲ್ಲಿ ಅದು ಏನು ಹೇಳಿದೆನೊ... ಬಂದ ದಾರಿಯಲ್ಲಿ ಹಾಗೇ... ಮುಂದೊಂದು ದಿನ ಬರುವೆ ಎಂದು ಹೇಳಿ ಬಳ್ಳಾರಿಗೆ ಹಿಂತಿರುಗಿದೆ. ಮತ್ತದೆ ಏಕಾಂತ ಕೊಠಡಿಯಲ್ಲಿ ಕೂತೆ. ಪತ್ರಿಕೆಗೆ ಕಥೆ ಬರೆಯುವುದೋ ಬೇಡವೋ ಎನಿಸಿ; ದಯಮಾಡಿ ಕ್ಷಮಿಸಿ. ನಿಮ್ಮ ಈ ಕಾಲಮಾನದ ಓದುಗರ ನಿರೀಕ್ಷೆಗೆ ತಕ್ಕಂತೆ, ನೀವೆಲ್ಲ ಬಯಸುವ ಶಾಕಿಂಗ್, ಬ್ರೇಕಿಂಗ್ ಥ್ರಿಲಿಂಗ್ ಕಥೆ ಬರೆದು ಕಳುಹಿಸಲು ನನ್ನಿಂದಾಗದು ಎಂದು ಪತ್ರ ಬರೆದು ಸ್ವಿಚ್ ಆಫ್ ಮಾಡಿಕೊಂಡೆ. ನನ್ನೊಳಗಿನ ಪಾತ್ರಗಳು ಮತ್ತೆ ನನ್ನೊಳಗೆ ಎಂದೆಂದೂ ಮುಗಿಯದ ಪಾಡಿನ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದವು. ಕಾಲ ಬದಲಾಗುತ್ತಲೇ ಇತ್ತು.

ಪುಟದ ಮೊದಲಿಗೆ
 
Votes:  10     Rating: 2.4    
 
 
ಸಂಬಂಧಿಸಿದ ಲೇಖನಗಳು
  ನಕ್ಷತ್ರ ಬರೆದ ಆತ್ಮಕ್ಕೆ ಕೊಡಿಸಿಕೊಂಡ ಮುತ್ತುಗಳ ಕವಿತೆ
  ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು
  ವಿಜಯರಾಘವನ್ ಅನುವಾದಿಸಿದ ಇಟಾಲಿಯನ್ ಕವಿತೆ
  ಕೃಷ್ಣಮೂರ್ತಿ ಹನೂರರ ಕಾದಂಬರಿಯ ಒಂದು ಅಧ್ಯಾಯ
  ನಿತ೦ಬಗಳಿಗೊ೦ದು ಕವಿತೆಯ ಅಂಜಲಿ:ಸುಮತಿ ಮುದ್ದೇನಹಳ್ಳಿ ಬರಹ
  ಪ್ರತಿಭಾ ನಂದಕುಮಾರ್ ಬರೆದ ದೇವಿ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಎರಡು ಕವಿತೆಗಳು
  ರಾಬಿಯಾಶೇಖ್ ಬರೆದ ಹೀಗೊಂದು ಸಾನೆಟ್
  ಭಾನುವಾರದ ವಿಶೇಷ: ನಾಗರಾಜ ವಸ್ತಾರೆ ಬರೆದ ಕಥೆ ‘ಹತೋಟಿ’
  ಸ್ಮಿತಾ ಅಮೃತರಾಜ್ ಬರೆದ ಎರಡು ಕವಿತೆಗಳು
  ಗಣನಾಥ ಅನುವಾದಿಸಿದ ಇನ್ನಷ್ಟು ಜಪಾನೀ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಕತೆ ‘ಅಂತರಂಗದ ಆಯಾಮ’
  ಒಂಟಿ ದೇವನಿಗೆ ನಕ್ಷತ್ರ ಬರೆದ ಕವಿತೆ
  ಅನಿಲ್ ತಾಳಿಕೋಟಿ ಅನುವಾದಿಸಿದ ನೆರೂದಾ ಕವಿತೆ
  ಕಾಲವಾದ ವಿನಯಚಂದ್ರನ್ ಕವಿತೆ
  ಕುಸುಮಾ ಶಾನಭಾಗ ಬರೆದ ಕತೆ ‘ಕುಂದ ಬೆಟ್ಟದ ಪಿಸುಮಾತು’
  ಎಸ್. ಎನ್ ಗಣನಾಥ ಅನುವಾದಿಸಿದ ಜಪಾನೀ ಕವಿತೆಗಳು
  ಪ್ರಜ್ಞಾ ಮತ್ತಿಹಳ್ಳಿ ಬರೆದ ವೇಷದ ಪದ್ಯಗಳು
  ಕಮಲಾಕರ ಕಡವೆ ಅನುವಾದಿಸಿದ ಇಟಾಲೋ ಕ್ಯಾಲ್ವಿನೋ ಕತೆಗಳು
  ಸ್ಮಿತಾ ಮಾಕಳ್ಳಿ ಮೊದಲ ಪುಸ್ತಕ ಇಂದು ಬಿಡುಗಡೆ
  ರಾಬಿಯಾಶೇಖ್ ಬರೆದ ದಿನದ ಕವಿತೆ
  ಅಗಲಿದ ಗೆಳೆಯನ ಕುರಿತು ರಾಜು ಹೆಗಡೆ ಕವಿತೆ
  `ಒಂದು ಇಂಡಿಯನ್ ಇಂಗ್ಲೀಷ್ ಕಥೆ’
  ಕಾವ್ಯಾ ಕಡಮೆ ಬರೆದ ದಿನದ ಕವಿತೆ
  ಮೈಶ್ರೀ.ನಟರಾಜ ಅನುವಾದಿಸಿದ ರಿಚರ್ಡ್ ಬ್ಲಾಂಕೋ ಕವಿತೆ
  ಭಾನುವಾರದ ವಿಶೇಷ: ವಿಕ್ರಂ ಹತ್ವಾರ್ ಬರೆದ ಕಥೆ ‘ಪೇಣಿ’
  ನಾಗರಾಜ ವಸ್ತಾರೆ ಬರೆದ ದಿನದ ಕವಿತೆ
  ವಾರದ ವಿಶೇಷ: ಪ್ರೇಮಶೇಖರ ಬರೆದ ‘ಬಾಳಿಗೊಂದಿಷ್ಟು ಗಾಳಿ’
  ಒಂದು ಮಲಯಾಳಂ ಕವಿತಾ ಸಂಕಲನದ ಕುರಿತು ಎಲ್.ಸಿ. ಸುಮಿತ್ರಾ