ಮೇ ೨೫, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಜಾತಿ ವ್ಯವಸ್ಥೆಯ ಕೊಳೆತ ಮನಸ್ಥಿತಿ ಮತ್ತು ಹೊರಬರುವ ಅನಿವಾರ್ಯ ಪರಿಸ್ಥಿತಿ    
ಡಾ. ಮ.ಪು. ಪೂರ್ಣಾನಂದ
ಶನಿವಾರ, 30 ಜೂನ್ 2012 (00:00 IST)

ಇತ್ತೀಚೆಗೆ ಕುಂಚಟಿಗ ಮತ್ತು ಒಕ್ಕಲಿಗ ಜಾತಿಗಳ ಬಹಿರಂಗ ಕಿತ್ತಾಟದಿಂದ ಈ ದೇಶದ ಜಾತಿ ವ್ಯವಸ್ಥೆಯ ಕೊಳೆತ ಮನಸ್ಥಿತಿಗಳ ಅನಾವರಣವಾಗಿದೆ. ಇದು ಕೇವಲ ಕುಂಚಟಿಗ ಮತ್ತು ಒಕ್ಕಲಿಗ ಜಾತಿಗಳ ಕತೆಯಷ್ಟೇ ಅಲ್ಲ ದೇಶದ ಪ್ರತಿಯೊಂದು ಜಾತಿಗಳ ಉಪಜಾತಿ, ಪರ‍್ಯಾಯ ಜಾತಿ, ಸಮಾನಾಂತರ ಜಾತಿಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನು ಇಲ್ಲ.

ಇತ್ತೀಚೆಗೆ ಶಿವಮೊಗ್ಗದಲ್ಲಿ ತ್ರಿಮತಸ್ಥ ಬ್ರಾಹ್ಮಣರ ಸಮಾವೇಶ ಜರುಗಿತು. ಅಲ್ಲಿ ಬ್ರಾಹ್ಮಣ ಯತಿಗಳು ಬ್ರಾಹ್ಮಣರ ಒಳ ಜಾತಿಗಳು ಒಂದಾಗಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಲು ಕರೆಯಿತ್ತರು. ಇದು ಜಾತಿಗಳ ಧೃವೀಕರಣವೆಂದು ಗೋಚರಿಸಿತ್ತು. ಆದರೆ ಬೆಂಗಳೂರಲ್ಲಿ ಜರುಗಿದ ಕುಂಚಟಿಗರ ಸಮಾವೇಶದಲ್ಲಿ ಜಾತಿಗಳ ಛಿದ್ರೀಕರಣ ಅನಾವರಣವಾಯಿತು. ಒಂದು ಕಡೆ ಒಳಜಾತಿಗಳ ಧೃವೀಕರಣ ಮತ್ತೊಂದೆಡೆ ಛಿದ್ರೀಕರಣ. ಸಾವಿರಾರು ವರ್ಷಗಳ ಇತಿಹಾಸವಿರುವ ಜಾತಿ ವ್ಯವಸ್ಥೆಯಲ್ಲಿ ಈ ವಿರೋಧಾಭಾಸಗಳು ಏಕಕಾಲಕ್ಕೆ ಘಟಿಸಿವೆ. ಇವುಗಳ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಜಾತಿಗಳ ಸ್ವಾರ್ಥದ ಪರಾಕಾಷ್ಠೆ ಎದ್ದು ಕಾಣುತ್ತದೆ. 

ಹಲವಾರು ಸಾವಿರ ವರ್ಷಗಳಿಂದ ಶಿಕ್ಷಣ, ಅಧಿಕಾರ, ಸಂಪತ್ತುಗಳನ್ನು ತಮ್ಮ ಕೈವಶ ಮಾಡಿಕೊಂಡಿದ್ದ ಬ್ರಾಹಣ್ಮ ಒಳ ಜಾತಿಗಳು ಒಂದಾಗುತ್ತವೆ. ಆದರೆ ಕೇವಲ ನೂರು ವರ್ಷಗಳಿಂದೀಚೆಗೆ ಶಿಕ್ಷಣ, ಅಧಿಕಾರ, ಸಂಪತ್ತುಗಳ ಕಡೆ ಮುಖ ಮಾಡಿ ನಡೆಯುತ್ತಿರುವ ಶೂದ್ರ ಜಾತಿಗಳಾದ ಕುಂಚಟಿಗ ಮತ್ತು ಒಕ್ಕಲಿಗ ಜಾತಿಗಳು ಬೇರೆಯಾಗುತ್ತವೆ. ಈ ಎರಡೂ ಘಟನೆಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದಾಗ ಸ್ವಾರ್ಥಕ್ಕಾಗಿ ನಡೆದ ಜಾತಿ ವ್ಯವಸ್ಥೆಯ ಕ್ರೂರ ಆದರೆ ಸಹಜ ಕ್ರಿಯೆಗಳಾಗಿ ಕಾಣುತ್ತವೆ.

ದೇಶಕ್ಕೆ ಸ್ವತಂತ್ರ ಬಂದ ನಂತರ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಕಾನೂನಿನಿಂದ ಶಿಕ್ಷಣ, ಅಧಿಕಾರ, ಸಂಪತ್ತುಗಳ ಮೇಲಿನ ಹಿಡಿತ ಸಡಿಲಗೊಂಡು ಅಸ್ತಿತ್ವ ಮತ್ತು ಅಪಾಯದ ಭೀತಿಯಿಂದ ಬ್ರಾಹ್ಮಣ ಜಾತಿಗಳು ಒಂದಾದರೆ, ಮೀಸಲಾತಿಯಿಂದ ಸಿಗುವ ಶಿಕ್ಷಣ, ಅಧಿಕಾರ, ಸಂಪತ್ತುಗಳ ಮೇಲಿನ ಹಿಡಿತ ನಮ್ಮೊಳಗೇ ಉಳಿಯಲಿ ಎಂದು ಒಕ್ಕಲಿಗ ಮತ್ತು ಕುಂಚಟಿಗ ಜಾತಿಗಳು ಬೇರೆಯಾಗುತ್ತವೆ. ಈ ಎರಡೂ ಪ್ರಕ್ರಿಯೆಗಳು ತಮ್ಮ ಗುಂಪುಗಳ ಮೂಲಕ ಶಿಕ್ಷಣ, ಅಧಿಕಾರ, ಸಂಪತ್ತಿನ ಮೇಲೆ ಹಿಡಿತ ಸಾಧಿಸಿ ಅತ್ಯಂತ ಸ್ವಾರ್ಥದಿಂದ ಬದುಕುವ ಕ್ರಿಯೆಯಾಗಿ ಕಂಡು ಬರುತ್ತದೆ. ಎಲ್ಲಾ ಜಾತಿಗಳ ಪರಿಸ್ಥಿತಿಯೂ ಇದೇ ಆಗಿದೆ. ಶೋಷಿತ ಮತ್ತು ಅಸ್ಪೃಶ್ಯ ಜಾತಿಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿರಬಹುದು ಅಷ್ಟೆ.

ಜಾತಿ ವ್ಯವಸ್ಥೆಯೇ ಸಮಷ್ಟಿ ಪ್ರಜ್ಞೆಗೆ ದೂರವಾದ ವ್ಯವಸ್ಥೆ. ಆದರೆ ಇಂದು ಜಾತಿ, ವಾಸ್ತವ ಮತ್ತು ಸತ್ಯವಾಗಿದೆ. ಇವುಗಳ ಮಧ್ಯೆ ಸಮ ಸಮಾಜ ನಿರ್ಮಾಣಕ್ಕಾಗಿ ಕಂಡುಕೊಂಡ ಹಲವಾರು ಮಾರ್ಗಗಳಲ್ಲಿ ಮೀಸಲಾತಿಯೂ ಕೂಡ ಒಂದು. ಇದು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಚಿಂತಿಸಿದ ಸಾಮಾಜಿಕ ನ್ಯಾಯದ ಒಂದು ತುಣುಕು. ಮೀಸಲಾತಿಯಿಂದ ದೊರಕುತ್ತಿರುವ ಸವಲತ್ತುಗಳಿಗಾಗಿ ಜಾತಿ ವಿಜಾತಿಗಳ ಪ್ರತಿಪಾದನೆ ಹೆಚ್ಚಾಗುತ್ತಿರುವುದು ಕಂಡು ಬರುತ್ತದೆ. ಈ ಕಾರಣಕ್ಕಾಗಿ ದೂರದರ್ಶಿತ್ವ ಹೊಂದಿದ್ದ ಬಾಬಾ ಸಾಹೇಬರು ಸಮಗ್ರ ಮತ್ತು ಸಮರ್ಪಕವಾದ ಮೀಸಲಾತಿ ಜಾರಿಯಾದ ೧೦ ವರ್ಷಗಳ ನಂತರ ಮೀಸಲಾತಿ ತೆಗೆಯಲು ಕಾನೂನು ಮಾಡಿದ್ದರು. ಆದರೆ ಮತ್ತೆ ಜಾತಿಗಳ ಸ್ವಾರ್ಥದಿಂದ ಇಂದಿಗೂ ಮೀಸಲಾತಿ ಮುಂದುವರೆದಿದೆ. ಇಷ್ಟು ದೂರ ಕ್ರಮಿಸಿದ್ದರೂ ಸಾಮಾಜಿಕ ನ್ಯಾಯ ಮತ್ತು ಸಮ ಸಮಾಜದ ಕನಸು ಮರೀಚಿಕೆಯಾಗೇ ಉಳಿದಿದೆ. ಇದು ವಿಪರ‍್ಯಾಸ.

ದೇಶದ ಮೂರು ಸಾವಿರಕ್ಕೂ ಮಿಗಿಲಾದ ಜಾತಿಗಳಿಗೆ ಸಮಾನವಾಗಿ ಜಾತಿ ಸಂಖ್ಯೆಗನುಗುಣವಾಗಿ ಶಿಕ್ಷಣ, ಅಧಿಕಾರ, ಸಂಪತ್ತುಗಳನ್ನು ಹಂಚಲು ಈಗಿರುವ ಮೀಸಲಾತಿ ವ್ಯವಸ್ಥೆಯಿಂದ ಸಾಧ್ಯವಾಗಿಲ್ಲ. ಹೀಗಾಗಿ ಸದ್ಯ ದೇಶದಲ್ಲಿರುವ ಮೀಸಲಾತಿ ವ್ಯವಸ್ಥೆಯ ವರ್ಗೀಕರಣವಾದ ಪರಿಶಿಷ್ಟ ಜಾತಿ (ಎಸ್.ಸಿ) ಪರಿಶಿಷ್ಟ ಬುಡಕಟ್ಟು (ಎಸ್.ಟಿ) ಮತ್ತು ಇತರೆ ಹಿಂದುಳಿದ ಜಾತಿಗಳೆಂಬ (ಓ.ಬಿ.ಸಿ) ಮೂರು ವರ್ಗಗಳಿವೆ. ಆದರೆ ಬೆರಳಣಿಕೆ ರಾಜ್ಯಗಳಲ್ಲಿ ಓಬಿಸಿಗಳಲ್ಲೂ ವರ್ಗೀಕರಣ ಮಾಡಿದ್ದಾರೆ. ಇಂದಿನವರೆಗೂ ಮೀಸಲಾತಿಗಾಗಿ ವ್ಶೆಜ್ಞಾನಿಕವಾದ ಜಾತಿ ವರ್ಗೀಕರಣ ಸಾಧ್ಯವಾಗಿಲ್ಲ. ಇದಕ್ಕೆ ಮೂಲ ಕಾರಣ ಜಾತಿ ಆಧಾರಿತ ಜನಗಣತಿ ಆಗದೇ ಇರುವುದು ಹಾಗು ಪ್ರತಿಯೊಂದು ಜಾತಿಯ ಬಗ್ಗೆ ಕುಲ ಶಾಸ್ತ್ರೀಯ ಅಧ್ಯಯನ (Ethnographic Study) ಸಮಗ್ರವಾಗಿ ನಡೆಯದಿರುವುದು. ಈ ಕಾರಣಕ್ಕಾಗಿಯೇ ಹಲವಾರು ಮೀಸಲಾತಿ ವಿವಾದಗಳು ಉಚ್ಚ ಮತ್ತು ಸವೋಚ್ಚ ನ್ಯಾಯಾಲಯದಲ್ಲಿ ಮೀಸಲಾತಿ ವಿರುದ್ಧವಾಗಿ ತೀರ್ಪುಗಳು ಬಂದಿವೆ.

ಆಶ್ಚರ‍್ಯವೆಂದರೆ ಜಾತಿ ವಾಸ್ತವ ಮತ್ತು ಸತ್ಯವೆಂದು ಸಂವಿಧಾನ ಬದ್ಧವಾಗಿ ಒಪ್ಪಿಕೊಂಡಿದ್ದರೂ ಕೂಡ ಜಾತಿ ಜನಗಣತಿ ೧೯೩೧ ರ ನಂತರ ನಡೆಯದೇ ಇರುವುದು ಮತ್ತು ಇದಕ್ಕಾಗಿ ಶೋಷಿತ ಜಾತಿಗಳು ಹಪಹಪಿಸುತ್ತಿರುವುದು. ಈ ಜಾತಿ ಜನಗಣತಿ ನಡೆಯದೆ ಇರಲು ಬ್ರಾಹ್ಮಣರ ಮೇಲೆ ಸಾರಸಗಟಾಗಿ ಆರೋಪ ಹೊರಿಸುವುದು ಶೋಷಿತ ಜಾತಿಗಳ ಪರಿಪಾಠವಾಗಿದೆ. ಆದರೆ ಇದೇ ಅಂತಿಮ ಸತ್ಯವಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಮತ್ತು ಇತರೆ ಹಿಂದುಳಿದ ಜಾತಿಗಳಲ್ಲಿರುವ ಪ್ರಬಲ ಮತ್ತು ದೊಡ್ಡ ಜಾತಿಗಳೂ ಪ್ರಮುಖ ಕಾರಣವಾಗಿವೆ. ಏಕೆಂದರೆ ಈಗಿರುವ ಮೀಸಲಾತಿ ವ್ಯವಸ್ಥೆಯಲ್ಲಿ ದುರ್ಬಲ ಮತ್ತು ಸಣ್ಣ ಜಾತಿಗಳ ಅವಕಾಶಗಳನ್ನು ದೊಡ್ಡ ಜಾತಿಗಳು ಕಬಳಿಸುತ್ತಿವೆ. ಈ ವ್ಯವಸ್ಥೆ ಹೀಗೆ ಇರಲು ಹವಣಿಸುತ್ತಿವೆ. ಇದು ಸ್ವಾರ್ಥದ ಫಲ ಮತ್ತು ಸಮಷ್ಟಿ ಪ್ರಜ್ಞೆಯ ಜಾಣ ಮರೆವು.

ಜಾತಿ ವರ್ಗೀಕರಣ ಸಮರ್ಪಕವಾಗಿಲ್ಲದಿರುವುದರಿಂದ ಮೀಸಲಾತಿಯ ಒಂದು ವರ್ಗದಲ್ಲಿ ಸೇರ್ಪಡೆಯಾಗುವ ನೂರಾರು ಜಾತಿಗಳಲ್ಲಿ ಸಣ್ಣ ಜಾತಿಗಳ ಅವಕಾಶಗಳನ್ನು ದೊಡ್ಡಜಾತಿಗಳು ನುಂಗಿ ನೊಣೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಒಳ ಮೀಸಲಾತಿ ಪ್ರಜ್ಞೆ ಹೆಚ್ಚಾಗಿದೆ, ಆದರೆ ದುರ್ಬಲ ಜಾತಿಗಳ ಕೂಗು ಅರಣ್ಯರೋದನವಾಗಿದೆ. ಇದು ಕರ್ನಾಟಕ ರಾಜ್ಯದ ಹೊಲೆಯ-ಮಾದಿಗ, ಬೋವಿ-ಬೋಯಿ, ಬೇಡಜಂಗಮ-ಬುಡ್ಗಜಂಗಮ, ಮೊಗವೀರ-ಮೋಗೇರ, ಬೇಡ-ಪರಿವಾರ,          ಗೊಲ್ಲ-ಕಾಡುಗೊಲ್ಲ, ಕುರುಬ-ಜೇನುಕುರುಬ, ಒಕ್ಕಲಿಗ-ಕುಂಚಟಿಗ ವಿವಾದಗಳು ಹಾಗೆ ರಾಜಸ್ಥಾನದ ಮೀನಾ-ಗುಜ್ಜಾರ ವಿವಾದ ಆಂಧ್ರಪ್ರದೇಶದ ಮಾಲ-ಮಾದಿಗ ವಿವಾದ ಇನ್ನೂ ಮುಂತಾದ ಜಾತಿ ಜಗಳಗಳು ಮೀಸಲಾತಿಯ ಸವಲತ್ತಿಗಾಗೇ ನಡೆಯುತ್ತಿರುವುದನ್ನು ಗಮನಿಸಬೇಕಾದ ಮುಖ್ಯಾಂಶ.

ಕುಂಚಟಿಗ ಮತ್ತು ಒಕ್ಕಲಿಗೆ ಜಾತಿ ವಿವಾದಕ್ಕೆ ಸೀಮಿತವಾಗಿ ವಿಶ್ಲೇಷಿಸಿದರೆ ಕುಂಚಟಿಗ ಜಾತಿಯು ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುವ ಜಾತಿ. ಒಕ್ಕಲಿಗರ ದೊಡ್ಡ ಬ್ಯಾನರಡಿಯಲ್ಲಿ ಕುಂಚಟಿಗರ ಹಕ್ಕುಗಳನ್ನು ಕಸಿಯುವ ಹುನ್ನಾರವೆಂದು ಕುಂಚಟಿಗರ ವಾದ, ಉದಾಹರಣೆಗೆ ಮಧುಗಿರಿಯಲ್ಲಿ ಅನಿತಾಕುಮಾರಸ್ವಾಮಿ ರವರು ಶಾಸಕರಾಗಿ ಹೊರ ಜಿಲ್ಲೆಯಿಂದ ಬಂದು, ಒಕ್ಕಲಿಗರ ಹೆಸರಿನಲ್ಲಿ ಗೆದ್ದು ಬರುತ್ತಾರೆ. ಆದರೆ ಆ ಭಾಗದಲ್ಲಿ ಕುಂಚಟಿಗರೇ ಬಹುಸಂಖ್ಯಾತರಾಗಿರುವಾಗ ನಮ್ಮವರೆ ಒಬ್ಬರು ಏಕೆ ಶಾಸಕರಾಗಬಾರದಿತ್ತು? ಎಂಬುದು ಕುಂಚಟಿಗರ ಪ್ರಶ್ನೆ. ಕೇಂದ್ರ ಸರ್ಕಾರದ ಮೀಸಲಾತಿ ವರ್ಗವಾದ ಇತರೆ ಹಿಂದುಳಿದ ಜಾತಿಗಳ ಓ.ಬಿ.ಸಿ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಆದರೆ ಕುಂಚಟಿಗರಿಗೆ ಹೋಲಿಸಿದರೆ ಮುಂದುವರಿದ ಗ್ರಾಮೀಣ ಒಕ್ಕಲಿಗರು ಓ.ಬಿ.ಸಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದು ಒಕ್ಕಲಿಗರ ಹೆಸರಲ್ಲಿ ಕುಂಚಟಿಗರಾದ ಅನ್ಯಾಯವೆಂದು ಭಾವಿಸಿದ್ದಾರೆ. ಇಂತಹ ಪರಿಸ್ಥಿತಿ ಎಲ್ಲಾ ಉಪಜಾತಿ ಅಥವ ಪರ‍್ಯಾಯ ಜಾತಿ ಅಥವ ಸಮಾನಾಂತರ ಜಾತಿಗಳಲ್ಲಿ ಕಂಡು ಬರುತ್ತದೆ. ಈ ರೀತಿಯ ಜಾತಿಗಳು ಕಸುಬು, ವೈವಾಹಿಕ ಸಂಬಂಧ, ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಸಾಮ್ಯತೆಯಿರುವ ಕಾರಣಕ್ಕೆ ಒಂದಾಗುವ ಪ್ರಕ್ರಿಯೆ ಕಳೆದ ಹಲವಾರು ವರ್ಷಗಳಿಂದ ಹೆಚ್ಚಾಗಿ ನಡೆದುಕೊಂಡು ಬಂದಿದೆ ಇದು ಆರಂಭದ ಉತ್ಸಾಹದಲ್ಲಿ ಸಮೀಕರಣದ ಸಂದಿಗ್ಧವಾಗಿ ಕಂಡು ಬಂದರೆ, ಜಾಗೃತಗೊಂಡ ನಂತರ ಸಮಪಾಲಿನ ವಿಚಾರವಾಗಿ ಜಾತಿಗಳು ಬೇರೆಯಾಗುವುದು ಸಹಜವಾಗಿ ಕಂಡುಬರುತ್ತದೆ.

ಇದು ಜಾತಿ ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಉಪಜಾತಿ ಅಥವ ಪರ‍್ಯಾಯ ಜಾತಿ ಅಥವ ಸಮಾನಾಂತರ ಜಾತಿಗಳನ್ನು ಒಟ್ಟಾಗಿಸಿಕೊಳ್ಳುವ ಮೂಲಕ ಪ್ರಬಲ ಮತ್ತು ದೊಡ್ಡ ಜಾತಿಯಾಗಿ ಹೊರ ಹೊಮ್ಮಿ ಶಿಕ್ಷಣ, ಅಧಿಕಾರ, ಸಂಪತ್ತನ್ನು ವೃದ್ಧಿಸಿಕೊಳ್ಳುವ ಹಾಗು ಸಂಖ್ಯಾಬಲದ ಮೇಲೆ ರಕ್ಷಣೆ ಮಾಡಿಕೊಳ್ಳುವ ತಂತ್ರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ, ದುರ್ಬಲ ಮತ್ತು ಅಲ್ಪಸಂಖ್ಯಾತ ಜಾತಿಗಳು ಕೂಡ ಜಾಗೃತಿಗೊಂಡು ತಮಗೆ ಸಮಪಾಲು ಸಿಗದೇ ಇರುವುದನ್ನು ಮನಗಂಡು ತಮ್ಮದೇ ಜಾತಿಯ ಪ್ರತ್ಯೇಕ ಅಸ್ತಿತ್ವಕ್ಕಾಗಿ ಹೋರಾಡುವ ಮೂಲಕ ಪಾಲು ಪಡೆಯುವ ಸಹಜ ವರ್ತನೆಯಾಗಿದೆ.

ಇನ್ನು ಬ್ರಾಹ್ಮಣರ ಒಳ ಜಾತಿಗಳ ಧೃವೀಕರಣವನ್ನು ನೋಡಿದರೆ, ಮೀಸಲಾತಿ ಸವಲತ್ತು ಇಲ್ಲದೆ ಇರುವುದರಿಂದ ಇವರಿಗೆ ಒಂದಾಗುವುದು ಅನಿವಾರ‍್ಯವಾಗಿದೆ. ಇದು ಬ್ರಾಹ್ಮಣರ ಅಸ್ತಿತ್ವದ ಪ್ರಶ್ನೆಯಾಗಿದೆ. ಬಹುಶಃ ಬ್ರಾಹ್ಮಣರಿಗೂ ಮೀಸಲಾತಿ ವಿಸ್ತರಿಸಿದರೆ ಅವರಲ್ಲೂ ವಿಜಾತಿ ವಿವಾದ ಉಂಟಾಗಬಹುದು. ಆದರೆ ಸ್ವಾರ್ಥದ ಅಳತೆಗೋಲಿಟ್ಟು ನೋಡಿದರೆ ಬ್ರಾಹ್ಮಣರಲ್ಲೂ ವಿಜಾತಿ ವಿವಾದಗಳು ಉಂಟಾಗಿವೆ. ಮೈಸೂರು ಅರಸರ ಸಂಸ್ಥಾನದಲ್ಲಿ ಪ್ರಮುಖ ಹುದ್ದೆ ಹಿಡಿಯಲು ಐಯ್ಯಾಂಗಾರ್-ಹೆಬ್ಬಾರ ವಿವಾದವಾಗಿತ್ತು. ಹೆಬ್ಬಾರ ಬ್ರಾಹ್ಮಣರು ಮೀಸಲಾತಿಗಾಗಿ ಆಗ್ರಹಿಸಿದ್ದರು. ಮೇಲುಕೋಟೆಯಲ್ಲಿ V ನಾಮ ಮತ್ತು U ನಾಮ ವಿವಾದ ಕೂಡ ಐಯ್ಯಾಂಗಾರರೊಳಗೇ ಇರುವ ತೆಂಕಣ ಮತ್ತು ಬಡಗಣ ಗುಂಪುಗಳ ವಿವಾದ. ಮೇಲ್ನೋಟಕ್ಕೆ ನಾಮಗಳ ಆಕಾರಕ್ಕಾಗಿ ನಡೆಯುತ್ತಿರುವ ವಿವಾದವೆನಿಸಿದರೂ ಒಳಗಿನ ಸತ್ಯವಾಗಿ ನಾಮಗಳ ಗುಂಪಿನ ಪ್ರಾಬಲ್ಯ ಮೆರೆಯುವ ಮೂಲಕ ಸ್ವಾರ್ಥ ಕಾಪಿಟ್ಟುಕೊಳ್ಳುವುದಾಗಿದೆ. ಬ್ರಾಹ್ಮಣರಲ್ಲೆ ಸಂಕೇತಿ ಬ್ರಾಹ್ಮಣರನ್ನು ಕೀಳಾಗಿ ಕಾಣುವ ಮನಸ್ಥಿತಿ ಇಂದಿಗೂ ಬ್ರಾಹ್ಮಣ ಜಾತಿಯೊಳಗಿದೆ. ಸಂಕೇತಿ ಬ್ರಾಹ್ಮಣರು ಕೃಷಿ ಆಶ್ರಯಿಸಿದ ಜಾತಿಯಾಗಿದೆ. ಹಾಗೆ ಲಿಂಗಾಯಿತರಲ್ಲಿ ಎಸ್.ಬ್ರ್ಯಾಂಡ್, ಬಿ.ಬ್ರ್ಯಾಂಡ್, ಪಿ.ಬ್ರ್ಯಾಂಡ್ ಎಂದು ಸಾದರ, ಬಣಜಿಗ, ಪಂಚಮಸಾಲಿ ಲಿಂಗಾಯಿತರಲ್ಲಿ ಶಿಕ್ಷಣ, ಅಧಿಕಾರ, ಸಂಪತ್ತಿನ ಹಂಚಿಕೆ ವಿಚಾರ ಬಂದಾಗ ವಿಜಾತಿ ವಿವಾದಗಳಾಗಿ ಮುಂದುವರಿದಿವೆ. ಇದು ಮಠಗಳ ಸ್ಥಾಪನೆ, ಪ್ರಾಬಲ್ಯದ ಮೂಲಕ ವ್ಯಕ್ತವಾಗುತ್ತಿದೆ. ಇವರಲ್ಲೇ ಜಂಗಮರು ಶ್ರೇಷ್ಠರೆನಿಸಿಕೊಳ್ಳುತ್ತಾರೆ. ಇವರಿಗೆ ಮಠಾಧಿಪತಿಗಳಾಗುವ ಆದ್ಯತೆ ಹೆಚ್ಚಿರುತ್ತದೆ. ಆದರೆ ಲಿಂಗಾಯಿತರಲ್ಲೆ ಕೆಳ ಜಾತಿಗಳಾದ ಮಡಿವಾಳಲಿಂಗಾಯಿತರು, ಗಾಣಿಗಲಿಂಗಾಯಿತರು, ಅಂಬಿಗಲಿಂಗಾಯಿತರು, ಮುಂತಾದವರಿಗೆ ಮೇಲು ಜಾತಿಯ ಲಿಂಗಾಯಿತರೊಳಗೆ ವೈವಾಹಿಕ ಸಂಬಂಧ ನಿಷಿದ್ಧವಾಗಿದೆ. ಹಾಗೆ ಜಾತಿಯೊಳಗೇ ಬೇರೆ ಬೇರೆ ಮಠಗಳಿವೆ. ಇದು ಜಾತಿವ್ಯವಸ್ಥೆಯ ಕರಾಳ ಮುಖ.

ಸ್ವತಂತ್ರ ಪೂರ್ವ ಮತ್ತು ನಂತರದ ದಿನಗಳಲ್ಲಿ ಜಾತಿಗಳು ಶ್ರೇಷ್ಠತೆಯ ವ್ಯಸನದಲ್ಲಿ ಸಿಲುಕಿ ತಮ್ಮ ಜಾತಿ ಹೆಸರನ್ನು ಉನ್ನತೀಕರಿಸುವ ಅಥವ ಸಂಸ್ಕೃತೀಕರಿಸುವ ಘಟನೆಗಳು ಕಂಡು ಬರುತ್ತವೆ. ಮೈಸೂರು ಅರಸರ ಸಂಸ್ಥಾನದ ವ್ಯಾಪ್ತಿಯಲ್ಲಿ ಜಾತಿಯಲ್ಲಿ ಬೆಸ್ತರಾಗಿದ್ದವರು ಮೈಸೂರು ಅರಸರಿಗೆ ಮನವಿ ಸಲ್ಲಿಸಿ ನಮ್ಮ ಜಾತಿ ಹೆಸರು ಕೀಳಾಗಿ ಕಾಣುತ್ತಿರುವುದರಿಂದ ಗಂಗಾಕುಲ ಅಥವ ಗಂಗಾಮತಸ್ಥರೆಂದು ಕರೆಯಬೇಕೆಂದು ಕೋರಿಕೊಳ್ಳುತ್ತಾರೆ. ಮೈಸೂರು ಅರಸರು ಅದನ್ನು ಮಾನ್ಯ ಮಾಡಿ ಆದೇಶ ಹೊರಡಿಸುತ್ತಾರೆ. ಹಾಗೆ ಕ್ಷೌರಿಕ, ಹಜಾಮ, ಹಡಪದ ಎನ್ನುವ ಜಾತಿ ಹೆಸರು ಸಂಸ್ಕೃತೀಕರಣಗೊಂಡು ಸವಿತಾ ಸಮಾಜವಾಗುತ್ತದೆ. ಆಚಾರಿಗಳು, ಬಡಗಿಗಳು ಎಲ್ಲಾ ಸೇರಿಕೊಂಡು ವಿಶ್ವಕರ್ಮ ಬ್ರಾಹ್ಮಣರಾಗುತ್ತಾರೆ. ಈಡಿಗರು ಆರ‍್ಯ ಈಡಿಗರೆಂದು, ಕುಂಬಾರರು ಕುಲಾಲಗುಂಡ ಬ್ರಹ್ಮಾರ‍್ಯ ಕುಂಬಾರರೆಂದು, ತಿಗಳರು ವಹ್ನಿಕುಲ ಕ್ಷತ್ರಿಯರೆಂದು, ಹೊಲೆಯರು ಛಲವಾದಿ ಜನಾಂಗವೆಂದು, ಮಾದಿಗರು ಅರುಂಧತಿ ಜನಾಂಗವೆಂದು ಕರೆದುಕೊಳ್ಳುತ್ತಾರೆ. ಹೀಗೆ ಹಲವಾರು ಜಾತಿಗಳು ತಮ್ಮ ಹೆಸರನ್ನು ಸಂಸ್ಕೃತೀಕರಣಗೊಳಿಸಿಕೊಂಡಿರುವುದನ್ನು ಕಾಣಬಹುದು.

ಗಾಣಿಗರು, ಉಪ್ಪಾರರು, ಬಣಜಿಗರು, ಕಮ್ಮಾರರು, ಗೆಜ್ಜಗಾರರು, ತಮ್ಮ ಜಾತಿಯ ಮುಂದೆ ಗಾಣಿಗಶೆಟ್ಟರು, ಉಪ್ಪಾರಶೆಟ್ಟರು, ಬಣಜಿಗಶೆಟ್ಟರು, ಗೆಜ್ಜಗಾರಶೆಟ್ಟರು ಎಂದು ಕರೆದುಕೊಳ್ಳುವುದು ಮತ್ತು ವ್ಯಕ್ತಿಯ ಹೆಸರಿನೊಂದಿಗೆ ಶೆಟ್ಟಿಯೆಂದು ಕರೆದುಕೊಳ್ಳುವುದು. ಅಂದರೆ ಮಹಾದೇವ-ಮಹಾದೇವ ಶೆಟ್ಟಿಯಾಗುತ್ತಾರೆ. ಇಲ್ಲಿ ದೊಡ್ಡ ವ್ಯಾಪಾರಿಗಳಾದ ವೈಶ್ಯಕೊಮಟಿ ಜನಾಂಗದ ಶ್ರೇಷ್ಠಿ ಪದ ಸಣ್ಣ ಸಣ್ಣ ವ್ಯಾಪಾರಿಗಳಾಗಿ ಎಣ್ಣೆ, ಉಪ್ಪು, ಬಳೆ, ಕಬ್ಬಿಣ ಮಾರುವವರಿಗೆ ಶ್ರೇಷ್ಠಿ ಪದ ಅಪಭ್ರಂಶವಾಗಿ ಶೆಟ್ಟಿ ಪದಗಳಾಗಿ ಬಳಕೆಯಾಗಿದೆ. ಹಾಗೆ ಕುರುಬರು, ಗೊಲ್ಲರು, ಕುರುಬಗೌಡ, ಗೊಲ್ಲಗೌಡರೆಂದು ಕೊಳ್ಳುವುದು ಜೊತೆಗೆ ವ್ಯಕ್ತಿಗಳ ಹೆಸರಿನೊಂದಿಗೆ ಗೌಡ ಪದವನ್ನು ಸೇರಿಸಿಕೊಳ್ಳುವ ಮೂಲಕ ಜಾತಿಗಳನ್ನ ಉನ್ನತೀಕರಿಸಿಗೊಳ್ಳುವ ಅಥವ ಸಂಸ್ಕೃತಿಕರಣಗೊಳ್ಳುವ ಕ್ರಿಯೆಯಾಗಿರುತ್ತದೆ. ಈ ಎಲ್ಲಾ ಕ್ರಿಯೆಗಳು ಸಮಸ್ತ ಜಾತಿಗಳ ಶ್ರೇಷ್ಠತೆಯ ವ್ಯಸನವಾಗಿ ಕಂಡು ಬರುತ್ತದೆ. ಇದರಿಂದ ಈ ಶೋಷಿತ ಜಾತಿಗಳ ಸಾಮಾಜಿಕ ಸ್ಥಾನಮಾನ ಯಾವುದೇ ಬದಲಾವಣೆಗೆ ಒಳಗಾಗದಿದ್ದರು, ಜಾತಿಯ ಹೆಸರನ್ನು ಸಂಸ್ಕೃತಿಕರಣಗೊಳಿಸಿಕೊಂಡು ಸಮಾಧಾನ ಪಟ್ಟಿಕೊಳ್ಳುವುದಾಗಿರುತ್ತದೆ. ಇತ್ತೀಚೆಗೆ ಸುಶಿಕ್ಷಿತ ವರ್ಗಗಳು ಜಾತಿಯಾಗಿ ಗುರುತಿಸಲ್ಪಡುತ್ತಿದ್ದ ವ್ಯಕ್ತಿ ಹೆಸರುಗಳಾದ ಗೌಡ, ನಾಯಕ, ಶೆಟ್ಟಿ, ಭಟ್ಟ, ಮುಂತಾದ ಹೆಸರುಗಳನ್ನು ಸಾಮಾಜಿಕ ಸ್ಥಾನಮಾನಕ್ಕಾಗಿ ನಿರಾಕರಿಸಿ ಸಂಸ್ಕೃತೀಕರಣಗೊಂಡ ಹೆಸರುಗಳನ್ನು ಇತ್ತೀಚಿನ ಶಾಲಾ ದಾಖಲಾತಿಗಳಲ್ಲಿ ಕಾಣಬಹುದು. ಇದು ಜಾತಿ ವ್ಯವಸ್ಥೆಯ ಮಾನಸಿಕ ಸ್ಥಿತಿ.

ಜಾತಿಯನ್ನು ಉನ್ನತೀಕರಿಸಿಗೊಳ್ಳುವುದು ಅಥವ ಸಂಸ್ಕೃತೀಕರಿಸಿಗೊಳ್ಳುವುದು ಉನ್ನತ ಸಾಮಾಜಿಕ ಸ್ಥಾನಮಾನಕ್ಕಾಗಿ ಹಂಬಲಿಸುವ ಮೇಲ್ಮುಖ ಚಲನೆಯಾಗಿತ್ತು. ಆದರೆ ಮೀಸಲಾತಿಯ ಸವಲತ್ತುಗಳಿಗಾಗಿ ಇತ್ತೀಚೆಗೆ ಹಲವಾರು ಜಾತಿಗಳ ಕುಲ ಶಾಸ್ತ್ರೀಯ ಅಧ್ಯಯನದಲ್ಲಿ ಕೀಳು, ಕೆಳಜಾತಿಯ ಹೆಸರುಗಳನ್ನು, ಸಂಸ್ಕೃತಿಗಳನ್ನು ವ್ಯಕ್ತಪಡಿಸುವ ಮೂಲಕ ಕೆಳಮುಖ ಚಲನೆ ಕಂಡು ಬಂದಿದೆ.

ಇನ್ನೂ ನೋವಿನ ವಿಚಾರವೆಂದರೆ, ಇಂದಿಗೂ ಗುರುತಿಸದೇ ಇರುವ ಎಷ್ಟೋ ಜಾತಿಗಳು ಈ ದೇಶದಲ್ಲಿವೆ. ದಕ್ಷಿಣಕನ್ನಡ ಜಿಲ್ಲೆಯ ಮನ್ಸ ಎಂಬ ಜಾತಿಯಿದೆ. ಇದು ಅಸ್ಪೃಶ್ಯ ಜನಾಂಗವಾಗಿದೆ. ಆದರೆ ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಈ ಜಾತಿಯ ಹೆಸರು ಇಲ್ಲವಾಗಿದೆ. ಹಾಗಾಗಿ ಮನ್ಸ ಜಾತಿಯ ಜನರು ಆದಿದ್ರಾವಿಡ ಅಥವ ಆದಿಕರ್ನಾಟಕ ಎನ್ನುವ ತಮ್ಮದಲ್ಲದ ಜಾತಿ ಹೆಸರಿನಲ್ಲಿ ಪರಿಶಿಷ್ಟಜಾತಿಯ ಮೀಸಲಾತಿ ಸವಲತ್ತು ಪಡೆಯುವ ದುರ್ಗತಿ ಮನ್ಸ ಜಾತಿಯದಾಗಿದೆ. ಹಾಗೆ ಅಲೆಮಾರಿ ಜನಾಂಗಗಳಲ್ಲಂತೂ ಜಾತಿ ಹೆಸರೆ ಹೇಳಿಕೊಳ್ಳಲಾಗದೆ ಬದುಕುತ್ತಿರುವ ದುಸ್ಥಿತಿಯಿದೆ. ಮೈಸೂರು ಜಿಲ್ಲೆಯ ಏಕಲವ್ಯ ನಗರವೆಂಬ ಕುಗ್ರಾಮದಲ್ಲಿ ಮರಾಠಿಶಿವಾಜಿ ಎನ್ನುವ ಜಾತಿ ಜನರಿದ್ದಾರೆ, ಅವರ ಕಸುಬು ತೊಗಲುಬೊಂಬೆ ಆಡಿಸುವುದು. ಇದು ಕರ್ನಾಟಕದ ಪರಿಶಿಷ್ಟಜಾತಿ ಪಟ್ಟಿಯಲ್ಲಿ ಇಲ್ಲ. ಆದರೆ  ತೊಗಲುಬೊಂಬೆ ಆಡಿಸುವ ಸಮಾನಾಂತರ ಅಥವಾ ಪರ‍್ಯಾಯ ಜಾತಿಯಾಗಿರುವ ಶಿಳ್ಳೆಕ್ಯಾತರ ಹೆಸರಲ್ಲಿ ಮೀಸಲಾತಿಯ ಸವಲತ್ತು ಪಡೆಯಬೇಕಾಗಿದೆ. ಹೀಗೇ ಗುರುತಿಸದೇ ಇರುವ ಜಾತಿಗಳು ಅನಾಥ ಪ್ರಜ್ಞೆಯಿಂದ ನರಳುತ್ತಾ ತಮ್ಮ ಜಾತಿಗಳ ಅಸ್ತಿತ್ವ ಮರೆತು ಸವಲತ್ತುಗಳಿಗಾಗಿ ಜಾತಿಯಾಂತರವಾಗಿದ್ದಾರೆ. ಸಮಗ್ರ ಮತ್ತು ಸಮರ್ಪಕ ಜಾತಿ ಜನಗಣತಿ ನಡೆದರೆ ಇಂತಹ ನೂರಾರು ಜಾತಿಗಳು ಸಿಗಬಹುದು. ಇತ್ತೀಚೆಗೆ ಕೇಂದ್ರ ಸರ್ಕಾರ ಆರ್ಥಿಕ, ಸಾಮಾಜಿಕ ಜಾತಿ ಜನಗಣತಿ ಸರ್ವೆ ಮಾಡುತ್ತಿದೆ. ಇದು ಸಂಪೂರ್ಣವಾಗಿ ಮುಗಿದು, ವರದಿ ತಯಾರಾಗಿ, ಸರ್ಕಾರ ಪರಿಶೀಲಿಸಿ, ಅಂಗೀಕರಿಸಿ, ಜಾರಿಗೆ ಬರಲು ಇನ್ನೆಷ್ಟು ದಶಕಗಳು ಬೇಕಾಗಬಹುದೊ, ಗೊತ್ತಿಲ್ಲ.

ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸರ ಮೌನಕ್ರಾಂತಿಯ ಫಲವಾಗಿ ದೇಶದಲ್ಲೆ ಪ್ರಪ್ರಥಮ ಹಿಂದುಳಿದ ಜಾತಿಗಳ ವರದಿ ಮತ್ತು ಶೋಷಿತ ಜಾತಿಗಳ ಬೈಬಲ್ ಎಂದೇ ಪರಿಗಣಿಸಿರುವ ಎಲ್.ಜಿ.ಹಾವನೂರ ವರದಿ ಜಾರಿಯಾದರೂ ಕೂಡ ಪರಿಪೂರ್ಣವಾಗಿರಲಿಲ್ಲ. ಅಂದಿನ ವರದಿಯಲ್ಲಿ ಹಿಂದುಳಿದ ಬುಡಕಟ್ಟು (Back ward tribe), ಹಿಂದುಳಿದ ಜಾತಿ (Backward caste), ಹಿಂದುಳಿದ ಸಮಾಜ (Backward Community), ವಿಶೇಷ ವರ್ಗ (Special Group) ಎಂದು ನಾಲ್ಕು ವರ್ಗೀಕರಣ ಮಾಡಿರುತ್ತಾರೆ.

ಒಂದೇ ಜಾತಿಯ ಉಪಜಾತಿ ಅಥವ ಪರ‍್ಯಾಯ ಜಾತಿ ಅಥವ ಸಮಾನಾಂತರ ಜಾತಿಗಳು ಕೆಲವು ಬಿ.ಟಿ ಪಟ್ಟಿಯಲ್ಲಿದ್ದರೆ, ಕೆಲವು ಬಿ.ಸಿ.ಟಿ ಪಟಿಯಲ್ಲಿದ್ದಾರೆ, ಉದಾಹರಣೆ: ಬೆಸ್ತ, ಗಂಗಾಕುಲ, ಗಂಗಾಮತಸ್ಥ, ಪರಿವಾರ ಮುಂತಾದ ಜಾತಿಗಳು ಬಿ.ಸಿ.ಟಿ. ಪಟ್ಟಿಯಲ್ಲಿದ್ದರೆ, ಬೆಸ್ತರ್, ಬುಂಡೆಬೆಸ್ತ, ಪರಿವಾರನಾಯಕ ಜಾತಿಗಳು ಬಿ.ಟಿ.ಪಟ್ಟಿಯಲ್ಲಿ ಗುರುತಿಸಲಾಗಿತ್ತು. ಜಾತಿ ಸರ್ವೆ ಮಾಡುವಾಗ ಯಾವುದೇ ಜಾತಿಗಳನ್ನು ತಮ್ಮ ಜಾತಿಯ ಹೆಸರೇನೆಂದು ಪ್ರಶ್ನಿಸಿದರೆ ಪ್ರತಿಯೊಬ್ಬರೂ ತಮ್ಮ ಜಾತಿಯನ್ನು ಬಹುವಚನದಲ್ಲಿ ಕರೆದುಕೊಳ್ಳುವುದು ವಾಡಿಕೆ. ಬ್ರಾಹ್ಮಣ-ಬ್ರಾಹ್ಮಣರು, ಲಿಂಗಾಯಿತ-ಲಿಂಗಾಯಿತರು, ಒಕ್ಕಲಿಗ-ಒಕ್ಕಲಿಗರು, ಗಾಣಿಗ-ಗಾಣಿಗರು, ಕುರುಬ-ಕುರುಬರು ಹೀಗೆ ಕರೆದುಕೊಳ್ಳುತ್ತಾರೆ. ಆದರೆ ಜಾತಿಯಾಗಿ, ವ್ಯಕ್ತಿಯಾಗಿ ಗುರುತಿಸುವಾಗ ಏಕವಚನ ಬಳಸಬೇಕಾಗುತ್ತದೆ. ಇದು ಸಾಮಾನ್ಯ ಜ್ಞಾನ. ಬ್ರಾಹ್ಮಣರು-ಬ್ರಾಹ್ಮಣ, ಲಿಂಗಾಯಿತರು-ಲಿಂಗಾಯಿತ, ಒಕ್ಕಲಿಗರು-ಒಕ್ಕಲಿಗ, ಗಾಣಿಗರು-ಗಾಣಿಗ, ಕರುಬರು-ಕುರಬ, ಆಗುತ್ತಾರೆ. ಆದರೆ ಬೆಸ್ತರು-ಬೆಸ್ತ ಆಗುವ ಬದಲು ಬೆಸ್ತರ್ ಎಂದು ಗುರುತಿಸಿ ಬಹುದೊಡ್ಡ ಲೋಪವಾಗಿ ಹಾವನೂರು ವರದಿಯಲ್ಲಿ ಕಾಣುತ್ತದೆ.

ಹೀಗೆ ಹಲವಾರು ಪ್ರಮಾದಗಳನ್ನು ಪಟ್ಟಿ ಮಾಡಬಹುದು. ನಂತರದ ದಿನಗಳಲ್ಲಿ ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ, ವರದಿಗಳಲ್ಲಿ ವೈಜ್ಞಾನಿಕ ಅಂಶಗಳಿಗೆ ಒತ್ತುಕೊಟ್ಟು, ವರದಿ ನೀಡಿದ್ದರು. ದುರಂತವೆಂದರೆ ಅವುಗಳು ಜಾರಿಯಾಗಲೇ ಇಲ್ಲ. ಕಾರಣ ಹಾವನೂರು ವರದಿಯಲ್ಲಿದ್ದ ಕೆಲವು ಮುಂದುವರಿದ ಜಾತಿಗಳನ್ನು ಕೈಬಿಡಲಾಗಿತ್ತು. ಆದರೆ ದೊಡ್ಡ, ಪ್ರಬಲ ಜಾತಿಗಳ ವಿರೋಧ ವ್ಯಕ್ತವಾಗಿತ್ತು. ಅಶಕ್ತ, ಸಣ್ಣ ಜಾತಿಗಳು ದನಿಯೆತ್ತಿದರೂ ಅವರ ಕೂಗು ಅರಣ್ಯರೋದನವಾಯಿತು. ಈಗ ಕಲಸು ಮೇಲೋಗರವಾಗಿರುವ ಹಿಂದುಳಿದ ಜಾತಿಗಳ ವರ್ಗೀಕರಣವಾಗಿದೆ. ಇದು ವೀರಪ್ಪಮೊಯ್ಲಿ ಸರ್ಕಾರದ ಸಂದರ್ಭದಲ್ಲಿ ಜಾರಿಯಾಗಿ ಈಗಲೂ ಜಾಲ್ತಿಯಲ್ಲಿದೆ. ತದನಂತರ ರವಿವರ್ಮಕುಮಾರ ವರದಿಯಾಗಲಿ, ದ್ವಾರಕನಾಥ ವರದಿಯಾಗಲಿ ಜಾರಿಗೆ ಬರುವ ಯಾವ ಲಕ್ಷಣಗಳೂ ಕಂಡು ಬಂದಿಲ್ಲ.

ಈ ಜಾತಿ ವ್ಯವಸ್ಥೆಯ ಕುತೂಹಲಕರ ಅಂಶಗಳೆಂದರೆ ಶೋಷಣೆ ವಿರುದ್ಧ ಹೋರಾಡುತ್ತಿರುವ ಶೋಷಿತರೆ ಕೊನೆ ಕೊನೆಗೆ ಶೋಷಕರಾಗಿ ಪರಿವರ್ತಿತರಾಗಿ ಬದಲಾಗುತ್ತಾರೆ. ಇದು ಜಾತಿ ವ್ಯವಸ್ಥೆಯಿಂದಾದ ಮನೊಸ್ಥಿತಿ. ಈ ಮಾನಸಿಕ ರೋಗಕ್ಕೆ ಮದ್ದನ್ನು ಕಂಡು ಹಿಡಿಯುವ ಕೆಲಸ ಸಾಮಾರ್ಜಿಕ ವಿಜ್ಞಾನಿಗಳಿಂದ ತುರ್ತಾಗಿ ಆಗಬೇಕಿದೆ. ಈ ತಳಸಮುದಾಯಗಳ ವಿಶೇಷ ಗುಣವೆಂದರೆ ಹಂಚಿ ತಿನ್ನುವ ಗುಣ ಲಕ್ಷಣ. ಆದರೆ ಇದು ಶಿಕ್ಷಣ, ಅಧಿಕಾರ, ಸಂಪತ್ತು ಗಳಿಸುವವರೆಗೂ ಇರುತ್ತದೆ. ಗಳಿಸಿದ ನಂತರ ಕಿತ್ತು ತಿನ್ನುವ ಸ್ವಾರ್ಥ ಗುಣ ಹೆಚ್ಚಾಗಿ ಕಂಡು ಬರುತ್ತದೆ. ಈ ಮಾನಸಿಕ ಸ್ಥಿತಿಯ ಪಲ್ಲಟದ ಬಗ್ಗೆಯೂ ಮನೊವೈಜ್ಞಾನಿಕ ವಿಶ್ಲೇಷಣೆಯಾಗಬೇಕಿದೆ. ಉದಾಹರಣೆಗೆ ಪರಿಶಿಷ್ಟ ಜಾತಿ ಪಟ್ಟಿಗೆ ದಲಿತಬೌದ್ಧರನ್ನು ಸೇರ್ಪಡೆ ಮಾಡಲು ಹೋದಾಗ ತೀವ್ರವಾದ ವಿರೋಧ ದಲಿತ ಹಿಂದೂಗಳಿಂದ ವ್ಯಕ್ತವಾಯಿತು. ಕೊನೆಗೆ ಹಲವಾರು ವರ್ಷಗಳ ಹೋರಾಟದ ನಂತರ ಸೇರ್ಪಡೆಯಾಯಿತು. ಇತ್ತೀಚೆಗೆ ದಲಿತ ಕ್ರಿಶ್ಚಿಯನ್‌ರು, ದಲಿತ ಮುಸ್ಲಿಂರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡಲು ಪ್ರಯತ್ನ ನಡೆದಾಗ ದಲಿತ ಹಿಂದೂಗಳಿಂದ ತೀವ್ರ ತರವಾದ ವಿರೋಧ ವ್ಯಕ್ತವಾಗಿ, ಅದು ನೆನೆಗುದಿಗೆ ಬಿದ್ದಿದೆ. ಹಾಗೆ ಪರಿಶಿಷ್ಟ ಬುಡಕಟ್ಟಿಗೆ ಗುಜ್ಜಾರ ಜಾತಿಯನ್ನು ಸೇರ್ಪಡೆ ಮಾಡಲು ಮೀನಾ ಜನಾಂಗ ವಿರೋಧ ಮಾಡುವುದು, ಪರಿವಾರ ಜಾತಿ ಸೇರ್ಪಡೆಗೆ ಬೇಡ ಜನಾಂಗ ವಿರೋಧ ಮಾಡುವುದು, ಹೀಗೆ ಮೀಸಲಾತಿಯ ಎಲ್ಲಾ ವರ್ಗೀಕರಣ ಪಟ್ಟಿಯಲ್ಲಿ ಈಗಾಗಲೇ ಸ್ಥಾನ ಪಡೆದ ಜಾತಿಗಳು, ಅದೇ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದ ಅರ್ಹ ಜಾತಿಗಳ ಸೇರ್ಪಡೆ ಬಂದಾಗ ವಿರೋಧಿಸುವುದು. ಇಲ್ಲಿ ಹಂಚಿ ತಿನ್ನುವ ಗುಣ ಮಾಯವಾಗಿ ಕಿತ್ತು ತಿನ್ನುವ ಲಕ್ಷಣ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ಕಾಲ ಘಟ್ಟದ ಕಳ್ಳು-ಬಳ್ಳಿಗಳಾಗಿದ್ದ ಜಾತಿಗಳೇ ಪರಸ್ಪರ ವಿರುದ್ಧ ಕಿತ್ತಾಡುವುದು ಮನೋವಿಶ್ಲೇಷಣೆಗೆ ಒಳಗಾಗಬೇಕಾದ ಅಂಶವಾಗಿದೆ. ಸ್ವಾರ್ಥ ಬಂದಾಗ ಜಾತಿ, ರಕ್ತ ಸಂಬಂಧ ಎಲ್ಲವೂ ಗೌಣವಾಗಿ, ತೃಣ ಸಮಾನವಾಗಿ ಸ್ವಾರ್ಥ ಲಾಲಸೆಯ ಪರಾಕಾಷ್ಠೆ ಮೆರೆಯುತ್ತದೆ. ಹಾಗಾದರೆ ಬದಲಾಗಬೇಕಿರುವುದು ವ್ಯಕ್ತಿಯಾಗಿ ಜಾತಿ, ಸಮಾಜದ ಮನಸ್ಥಿತಿ. ಇದು ಅತ್ಯಗತ್ಯವಾಗಿದ್ದು ಸಮಷ್ಟಿ ಪ್ರಜ್ಞೆ ಬಿತ್ತುವ ಆಧ್ಯಾತ್ಮಿಕ ಆಂದೋಲನ ಬೇಕಾಗಿದೆ. ಕೇವಲ ಸಾಮಾಜಿಕ ನ್ಯಾಯದ ಪರಿಕರಗಳು, ಕಾನೂನು, ಕಾಯಿದೆಗಳಿಂದ ಸಮ ಸಮಾಜ, ಸಮಪಾಲು, ಸಮಬಾಳು ಸಾಧ್ಯವಿಲ್ಲವೆಂದು ಅರ್ಥೈಸಬಹುದು.

ಇಡೀ ಈ ಲೇಖನದ ಸಾರಾಂಶವಾಗಿ ಮೀಸಲಾತಿಯಿಂದ ಜಾತಿ ವ್ಯವಸ್ಥೆ ಮತ್ತಷ್ಟು ಗಟ್ಟಿ ಮತ್ತು ಬಲಗೊಳ್ಳುತ್ತಿದೆ ಎಂದು ಭಾವಿಸುವ ಎಲ್ಲಾ ಲಕ್ಷಣಗಳು ಇವೆ. ಆದರೆ ಮುಳ್ಳಿನಿಂದ ಮುಳ್ಳನ್ನು ತೆಗೆಯುವ ತಂತ್ರವಾಗಿಟ್ಟುಕೊಂಡು ಶೋಷಿತ ಜಾತಿಗಳ ಸಂಘಟನೆಯ ಮೂಲಕವೇ ಜಾತಿ ವಿನಾಶಕ್ಕೆ ದಾರಿಯಾಗುತ್ತದೆ. ಇದು ವಿತಂಡವಾದವೆನಿಸಬಹುದು. ಜಾತಿ ಹೆಸರಿನಲ್ಲಿ ಅದರ ಫಲ ಪಡೆಯುವವರು ಕೇವಲ ಆ ಜಾತಿಯೊಳಗಿನ ಕೆನೆ ಪದರದ ಜನ ಮಾತ್ರ. ಇದೇ ಜಾತಿಯ ಬಡಜನಗಳಿಗೆ ಅದರ ಫಲ ಸಿಗುವುದು ಬಹಳ ಕಡಿಮೆ. ಇವರು ಬಹುಸಂಖ್ಯಾತರಾಗಿರುತ್ತಾರೆ. ಇದು ನಮ್ಮ ಮುಂದಿರುವ ಕಹಿ ಸತ್ಯ. ಆಗ ಉಳಿದ ಫಲ ಸಿಗದ ಜಾತಿ ಬಡಜನಗಳು ಜಾತಿ ಹೆಸರಿನಿಂದ ಪ್ರಯೋಜನವಿಲ್ಲವೆಂದು ಅರಿವಾದಾಗ ಜಾತಿ ಹೆಸರಿನಿಂದ ದೂರ ಸರಿಯಲು ಅಥವ ತಿರಸ್ಕರಿಸಲು ಪ್ರಾರಂಭಿಸುತ್ತಾರೆ. ಇದು ಜಾತಿಗಳು ವರ್ಗಗಳಾಗಿ ಪರಿವರ್ತನೆಯಾಗುವ ಸಂಕ್ರಮಣ ಘಟ್ಟವಾಗಿರುತ್ತದೆ. ಹಾಗೆ ಜಾತಿ-ವಿಜಾತಿ ವಿವಾದ ಹೆಚ್ಚಾದಷ್ಟೂ ಮಾನವ ಸಹಜಗುಣವಾಗಿ ಜಾತಿಗಳ ಬಗ್ಗೆಯೇ ಹೇಸಿಗೆ, ರೇಜಿಗೆ ಹುಟ್ಟಿಸಿ ಜಾತಿ ವಿನಾಶದ ಮನಸ್ಸು ಜೊತೆಜೊತೆಗೇ ಒಡಮೂಡಬಹುದು. ಅಂತಿಮವಾಗಿ ಜಾತಿ ವಿನಾಶಕ್ಕೆ ದಾರಿಯಾಗಬಹುದು.

ಪುಟದ ಮೊದಲಿಗೆ
 
Votes:  0     Rating: 0    
 
 
ಸಂಬಂಧಿಸಿದ ಲೇಖನಗಳು
  ಕನ್ನಡಕ್ಕೆ ಇದಕ್ಕಿಂತ ಖುಷಿಯ ವಿಷಯವೇನಿದೆ:ಶ್ರೀರಾಂ ಆಶಯ
  ಏಳುಸುತ್ತಿನ ಹಿತ್ತಲ ಮಲ್ಲಿಗೆ:ವೆಂಕಟೇಶ್ ಮುಂಬೈ ಬರಹ
  ಜೀತಕ್ಕಿರುವವರ ಜೀವಿತ ಕಥೆಗಳು:ನಾಗರಾಜ ಹೆತ್ತೂರ್ ಬರಹ
  ಅಕ್ಕ ಎಂಬ ಅಕ್ಕರೆ ಅಕ್ಕ ಎಂಬ ಅಚ್ಚರಿ!:ಮಧುಸೂದನ ಬರಹ
  ಆಪಲ್ ಎಂಬ ಮೊಬೈಲ್ ಮಾಯಾವಿ:ಸುದರ್ಶನ ಗುರುರಾಜ ಬರಹ
  ಕೈಗಂಟಿದ ಮಸಿಯನ್ನು ಮುಖಕ್ಕೆ ಬಳಿದುಕೊಂಡರೆ? ಸುಧೀಂದ್ರ ಬರಹ
  ಕಮಲ ತನ್ನನ್ನು ತಾನೇ ಹೊಸಕಿತೇ?:ನರಸಿಂಹ ರಾಯಚೂರ್ ಪ್ರಶ್ನೆ
  ಎಸ್.ಮಂಜುನಾಥ್ ಮಾಡಿರುವ ಖಡ್ಗ ಮೀಮಾಂಸೆ
  ಓಟೇ ಹಾಕದ ಒಂಟಿ ಓಲೆಯ ಬೀರಯ್ಯ:ಗಂಗಾಧರಯ್ಯ ಬರಹ
  ಮಲೆಗಳಲ್ಲಿ ಮದುಮಗಳು ಎಲ್ಲಿ? ದಿಲಾವರ್ ರಾಮದುರ್ಗ ಬ್ಲಾಗ್
  ಅಮ್ಮನ ಕೂಡೆ ವೋಟ್ ಮಾಡಿದ್ದು:ಸ್ಮಿತಾ ಮಾಕಳ್ಳಿ ಬರಹ
  ವೋಟು ಹಾಕಿ ಸೋತ ಮುಖಗಳು:ಉಮಾರಾವ್ ಬರಹ
  ಸಚಿನ್ ಕೊಳಿಗೆ ಕಂಡ ಮಲೆಗಳಲ್ಲಿ ಮದುಮಗಳು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್’:ಮತ್ತೊಂದು ಕಥಾಪ್ರಸಂಗ
  ದೆವ್ವವಾದ ನರಭಕ್ಷಕ:ಕಾರ್ಲೋ ಅನುವಾದಿಸಿದ ಕಾರ್ಬೆಟ್ ಕಥನ
  ಪೈ ಎಂಬ ಮಾಯೆಯ ಸಿನೆಮಾ ಗಣಿತ:ದಿಲಾವರ್ ರಾಮದುರ್ಗ ಬರಹ
  ಆನ್ ಲೈನ್ ಆರಂಭಶೂರರ ಕುರಿತು ದತ್ತರಾಜ್ ಅನಿಸಿಕೆಗಳು
  ಮಲೆಗಳಲ್ಲಿ ಮದುಮಗಳಿಗೆ ರೂಪಲಕ್ಷ್ಮಿ ಮರುಳಾಗಿ ಬರೆದದ್ದು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್:ಒಂದು ಕಥಾಪ್ರಸಂಗ
  ಎವರೆಸ್ಟ್ ಏರಿದ್ದು ಮೊದಲು ಯಾರು?:ಎಂ.ವೆಂಕಟಸ್ವಾಮಿ ಬರಹ
  ಮಾಂಕ್ಷಾವಲಿ ನಾಮಾಂಕಿತ ಮಂಟೇಸ್ವಾಮಿ:ಬಾಬು ಕೌದೇನಹಳ್ಳಿ ಬರಹ
  ಕರ್ನಾಟಕ ಜನಸಾಹಿತ್ಯ ಸಮಾವೇಶ:ಅರುಣ ಜೋಳದ ಸಮೀಕ್ಷೆ
  ಚಾರ್ಲ್ಸ್ ಡಾರ್ವಿನರ ಆಮೆಗಳು:ಪಾಲಹಳ್ಳಿ ವಿಶ್ವನಾಥ್ ಬರಹ
  ತಗಾದೆಯಿಲ್ಲದ ಯುಗಾದಿ ಇರಲಿ:ಅನಸೂಯಾದೇವಿ ಹಾರೈಕೆ
  ಯುಗಾದಿಯ ಬಿಸಿಲಲ್ಲಿ ರತ್ನಪಕ್ಷಿಯ ಅರಸುತ್ತಾ:ಗೊರವರ ಬರಹ
  ಮುದುಕಿಯೊಬ್ಬಳ ಒಳ್ಳೆಯ ಶಾಪ:ಪ್ರೀತಂ ರಾವ್ ಲಂಡನ್ ಡೈರಿ
  ಜಗತ್ತಿನೆದುರು ನಿರುತ್ತರ ಕೊರಿಯ:ರೋಹಿತ ಬರಹ
  ಪರಿಮಳ ಹೊತ್ತು ಬರುತ್ತಿದ್ದವರು:ಎಲ್.ಸಿ.ಸುಮಿತ್ರ ನೆನಪುಗಳು
  ದೇವದೂತರಂತೆ ಬಂದಿದ್ದವರು:ಮಿಂಚುಳ್ಳಿ ಲಹರಿ
  ಬಿಗ್ ಬಾಸ್ ಎಂಬ ಮನೆ ಮುರುಕ ಆಟದ ಕುರಿತು ಭಾವನಾ ರಾವ್ ಮರುಕ
  ಹೃಷಿಕೇಶ್ ಬಡಪಾಯಿಗಳಿಗಾಗಿ ಬರೆದ ೩೭೧ನೇ ವಿಧಿಯ ಪಾಠ
  ರೈಲುಗಾಡಿಯ ರೀಲುಗಳು:ಸುಮನ್ ದೇಸಾಯಿ ಪ್ರಹಸನ
  ‘ಲೈಫ್ ಆಫ್ ಪೈ'ಕುರಿತು ಎ.ಎನ್.ಪ್ರಸನ್ನ
  ಬೆಳ್ಳೂರು ವೆಂಕಟಪ್ಪ ಬರೆದ ಮಂಟೇಸ್ವಾಮಿ ಕಥನ
  ಜೋ ಜೋ ಜೋ ಜೋ ಮಲಗಿದ್ದ ಕಂದಾ:ಪ್ರಶಾಂತ್ ಬರಹ
  ವಿಕ್ರಮನ ಕಥೆಗಳ ಕುರಿತು ಭಾವನಾ ಬರೆದ ವಿಮರ್ಶೆಯ ಸಾಲುಗಳು
  ಕೊಕ್ಕರೆಯಂಥ ಮನುಷ್ಯರು:ಎಸ್.ಮಂಜುನಾಥ್ ಗದ್ಯಚಿತ್ರ
  ಒಂದಿಷ್ಟು ಪ್ರೀತಿ ಕೇಳುವ ‘ಗೊಂಬೆಗಳ ಲವ್’:ರೂಪಲಕ್ಷ್ಮಿ ಬರಹ
  ಇಂಗಿಹೋದ ಬಾವಿಯಲ್ಲಿ:ರೋಹಿತ ಚಕ್ರತೀರ್ಥ ಬರಹ
  ಮಾಹಿತಿ ಹಕ್ಕಿನ ಮಾವಿನಕಾಯಿಯ ಕುರಿತು ಹೃಷಿಕೇಶ್ ದೇಸಾಯಿ
  ಅಜ್ಜಿಯ ಜೊತೆಗೆ ಗೌರಿಯ ನಡಿಗೆ:ನಾಗ ಐತಾಳರ ಬರಹ
  ಹೀಗೆ ನಮ್ಮೊಳಗೊಬ್ಬ ಪಾಂಡು ಪ್ರತಿಬಿಂಬ:ವಸಂತ ಬರಹ
  ಅರವಿಂದರ ದಾರ್ಶನಿಕ ಚಿಂತನೆ:ವಾಸುದೇವಮೂರ್ತಿ ಮರುಪರಿಶೀಲನೆ
  ಕಾಲುವೆಗಳ ಊರಿನ ಕಾಮನೆಗಳು:ನಿಹಾರಿಕಾ ಡೈರಿಯ ಪುಟಗಳು
  ಆಧ್ಯಾತ್ಮಿಕತೆ ಎಂಬ ಹೊಸ ಆಕರ್ಷಣೆ:ದತ್ತರಾಜ್ ಬರಹ
  ‘ಸ್ವಚ್ಛತೆ’ಯ ಅತಿ ಹುಚ್ಚು ಹೆಚ್ಚಾದೊಡೆ:ತ್ರಿವೇಣಿ ಬರಹ
  ಭುವನೇಶ್ವರಿ ಹೆಗಡೆ ಬರೆದ ನಾಮದ ಬಲವೊಂದಿದ್ದರೆ ಸಾಕೋ..
  ಕೂಡ್ಲಿಗಿಯ ಕಾಡು ಪಾಡು: ಸ್ವರೂಪ್ ಕೊಟ್ಟೂರು ಬರೆದಿದ್ದು
  ಶಾಂತಲ ಎಂಬ ಸರ್ವಮಾನ್ಯಳ ಕುರಿತು ವೆಂಕಟೇಶ್.ಕೆ
  ಗೊಂದಲಿಗರ ಕಥನಕಲೆ:ಅರುಣ್ ಜೋಳದ ಬರಹ
  ಮಣಿಕಾಂತ್ ಹೊಸ ಪುಸ್ತಕದ ಒಂದು ಅಧ್ಯಾಯ
  ಅರವತ್ತಾರರ ಹೆದರಿಕೆ ಮುಗಿಯಿತು:ಭಾರತಿ ಬರಹ
  ಟಿ.ಪಿ ವ್ಯಾಸಮುದ್ರಿ ವಿರಚಿತ ಎರಡು ಹಳ್ಳಿ ಪ್ರಸಂಗಗಳು
  ಪ್ರಜ್ಞಾವಂತರು ಸ್ವಲ್ಪ ಬುದ್ಧಿ ಹೇಳಿ ಪ್ಲೀಸ್
  ಕ್ಯಾರೆಟ್ ಮೂಗಿನ ಸ್ನೋ ಮ್ಯಾನ್:ಯೋಗೀಂದ್ರ ಕಾಲಂ